ನನ್ನ ಮುಂದೆ ಈಗ ಎರಡು ಪಠ್ಯಗಳಿವೆ. ಮೊದಲನೆಯದು, ಡಾ.ಎಂ ಚಿದಾನಂದಮೂರ್ತಿಯವರ “ಕನ್ನಡ ಸಂಸ್ಕೃತಿ : ನಮ್ಮ ಹೆಮ್ಮೆ” ಎಂಬ ಕೃತಿ. ಇದರ ಮೊದಲ ಮುದ್ರಣ ೧೯೮೭ರಲ್ಲಿ ಎರಡನೆಯದು, ಅಲೂರ ವೆಂಕಟರಾಯರ “ಕರ್ನಾಟಕತ್ವದ ವಿಕಾಸ” ಎಂಬ ಕೃತಿ. ಇದರ ಮೊದಲ ಮುದ್ರಣ ೧೯೫೭ರಲ್ಲಿ. ಈ ಎರಡು ಕೃತಿಗಳನ್ನು ಕೇಂದ್ರ ಪಠ್ಯವನ್ನಾಗಿ ಸ್ವೀಕರಿಸಿ ಕನ್ನಡ ಸಂಸ್ಕೃತಿಯ ಮುಖ್ಯ ವಾಗ್ವಾದವೊಂದರ ಸ್ವರೂಪವನ್ನು ವಿವೇಚಿಸುವುದು ಈ ಪ್ರಬಂಧದ ಉದ್ದೇಶ. ಚರ್ಚೆಯನ್ನು ನೇರವಾಗಿ ಪ್ರಾರಂಭಿಸುವ ಕಾರಣಕ್ಕಾಗಿ ಪ್ರಾತಿನಿಧಿಕ ಭಾಗಗಳನ್ನು ಈ ಕೃತಿಗಳಿಂದ ಉದಾಹರಿಸುತ್ತಿದ್ದೇನೆ.

.ಅ. “ಕನ್ನಡ ಜನರೆ ಏಳಿ! ಎದ್ದೇಳಿ! ಬೌದ್ಧಕರೆಂದು ಕರೆದುಕೊಳ್ಳುವ ಜನರೂ ರಾಜಕಾರಣಿಗಳೂ ವಿಶ್ವಭ್ರಾತೃತ್ವ, ಭಾರತದ ಅಖಂಡತೆ, ಭಾಷಾಂಧತೆ ಇತ್ಯಾಧಿ ಮಾತುಗಳಿಂದ ನಮ್ಮನ್ನು ವಂಚಿಸಲು ಯತ್ನಿಸುತ್ತಿರುವ ಬಗ್ಗೆ ಜಾಗರೂಕರಾಗಿರಿ. ಕನ್ನಡಿಗ ಎಂದೂ ಭಾಷಾಂಧನಲ್ಲ. ಅವನು ಎಂದೂ ದೇಶದ್ರೋಹಿಯಲ್ಲ. ನಿಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಇರಲಿ. ತನ್ನತನವನ್ನು ಉಳಿಸಿಕೊಳ್ಳದ ಪ್ರಾಂತ್ಯಕ್ಕೆ ಉಳಿಗಾಲವಿಲ್ಲ. ಅನ್ಯಭಾಷೀಯ ಸೋದರರ ಬಂದು ಕರ್ನಾಟಕವು ತಮ್ಮ ವಸಾಹುತಗಳಾಗುವಂತೆ ಮಾಡುತ್ತಿದ್ದಾರೆ. ಇದನ್ನು ತಡೆಯದಿದ್ದರೆ ಕರ್ನಾಟಕವು ಸರ್ವನಾಶವಾಗುತ್ತದೆ. ದೀರರಾದ ಅಸ್ಸಾಮ್ ಯುವಕರು ತಮ್ಮ ಪ್ರಾಂತವನ್ನು ವಿನಾಶದಿಂದ ತಪ್ಪಿಸಿದರು. ಅಂತಹ ಹೋರಾಟಕ್ಕೆ ಕನ್ನಡದ ಜನ ಸಿದ್ದರಾಗಬೇಕಾಗಿದೆ. (ಡಾ. ಎಂ. ಚಿದಾನಂದಮೂರ್ತಿ, ಕನ್ನಡ ಸಂಸ್ಕೃತಿ : ನಮ್ಮ ಹೆಮ್ಮೆ, ೧೯೮೯ ಪು. ೨೫)

. “ಸ್ವಾಭಿಮಾನಿಯ ಒಳ್ಳೆಯತನ ಬೇರೆ. ದುರ್ಬಲನ ಒಳ್ಳೆಯತನ ಬೇರೆ ಕರ್ನಾಟಕವು ಇತರೆ ಸಂಸ್ಕೃತಿಗಳ ಒಳ್ಳೆಯ ಅಂಶಗಳನ್ನು ಬಳಸಿಕೊಂಡು, ಅರಗಿಸಿಕೊಂಡು, ತಾನು ತಾನಾಗಿ ಉಳಿದು ಬೆಳೆಯಬೇಕು. ಅದು ಬಿಟ್ಟು ತನ್ನ ಭಾಷೆ, ಕಲೆ, ಜೀವನ ರೀತಿ, ಉದ್ಯೋಗಗಳನ್ನು ಅನ್ಯರ ಭಾಷೆ, ಕಲೆಗಳು, ಅನ್ಯ ಜನ ಬಂದು ಆಕ್ರಮಿಸಿ ಅವನನ್ನು ಹಿನ್ನಲೆಗೆ ತಳ್ಳಿದರೆ ಔದಾರ್ಯವನ್ನು ಹೊಗಳಿ ಉಬ್ಬಿಸಿದಾಗ ಉಬ್ಬಿಹೋದ ಕನ್ನಡಿಗ ತನಗೆ ತಾನೇ ಮಾಡಿಕೊಂಡಿರುವ ಅನ್ಯಾಯ ಅನೂಹ್ಯ. (ಕನ್ನಡ ಸಂಸ್ಕರತಿ : ನಮ್ಮ ಹೆಮ್ಮೆ, ಪು.೨೫)

೨.ಅ. “ಸಾರಾಂಶ, ಕರ್ನಾಟಕವು ಕನ್ನಡಕ್ಕಿಂತ ವ್ಯಾಪಕವಾಗಿರುವುದು ಎಂಬುದನ್ನು ನಾವು ಮರೆಯಬಾರದು ಮತ್ತು ಉಪಭಾಷಿಗರನ್ನು ಮಾತ್ರವೇ ಅಲ್ಲ. ನೆರೆ ಭಾಷೆಗಳ ಅಲ್ಪಸಂಖ್ಯಾತರನ್ನು ಮರೆಯಕೂಡದು – ಎಂಬುದು ಅಖಂಡ ಕರ್ನಾಟಕ ರಚನೆಯಲ್ಲಿ ನಾವು ಅವಶ್ಯಕವಾಗಿ ನೆನಪಿನಲ್ಲಿಡತಕ್ಕ ಮಾತು. ಅರ್ಥಾತ್ ಕನ್ನಡಕ್ಕೆ ಪ್ರಧಾನ ಸ್ಥಾನವಿದೆ. ಆದರೆ ಜ್ಞಾನಕ್ಕೆ ಸರ್ವದಿಶೆಯಿಂದಲೂ ಸ್ವಾಗತವಿದೆ. ಕರ್ನಾಟಕ ಚಳವಳಿಯಲ್ಲಿ ಉತ್ಕಟವಾಗಿ ನಡೆಸಿದ ನಾನು ಅದನ್ನು ಮರೆಯಹೋಗಲಿಲ್ಲ. ಅಂತೇ ಧಾರವಾಡದಲ್ಲಿ ಮರಾಠಿ ಲೈಬ್ರರಿಯ ನಿಂತು ಹೋಗುವ ಸಂದರ್ಭದಲ್ಲಿ ನಾನು ಅದನ್ನು ತಕ್ಕೊಂಡು ನನ್ನ ಸ್ವಂತ ಭಾರತ ಪುಸ್ತಕಾಲಯಕ್ಕೆ ಜೋಡಿಸಿ, ಕೆಲ ವರ್ಷ ನಡೆಯಿಸಿ ಮುಂದೆ ಇಲ್ಲಿಯ ಮರಾಠಿಗರು ಅದನ್ನು ನಡೆಸಲು ಬಂದಾಗ ಅದನ್ನು ಅವರಿಗೆ ಒಪ್ಪಿಸಿದೆನು. (ಆಲೂರು ವೆಂಕಟರಾಯರು, ಕನಾಟಕತ್ವದ ವಿಕಾಸ, ೧೯೮೦, ಪು ೧೪೮)

. “ರಾಜ್ಯವು ಸುಪ್ರಜಾ ರಾಜ್ಯವೆನಿಸುವುದಕ್ಕೆ ಬಹುಸಂಖ್ಯಾತರ ತುಷ್ಟಿ ಪುಷ್ಟಿಗಳಿಗಿಂತಲೂ ಅಲ್ಪಸಂಖ್ಯಾತರ ತುಷ್ಟಿ ಪುಷ್ಟಿಗಳೇ ಹೆಚ್ಚಿನ ಮಾಪಕಗಳು.” (೧೯೫೬ರ ಕರ್ನಾಟಕ ಏಕೀಕರಣದಂದು ಕರ್ನಾಟಕ ಕುಲ ಪುರೋಹಿತ ಅಲೂರ ವೆಂಕಟರಾಯರು ಕೊಟ್ಟ ಸಂದೇಶ, ಕರ್ನಾಟಕತ್ವದ ವಿಕಾಸ, ಪು.XVIII)

. “ಕರ್ನಾಟಕತ್ವವೆಂದರೆ ಕಿರಣಕೇಂದ್ರದ ಕಾಜು (Focusing lense). ಅದರೊಳಗಿಂದ ಭಾರತ ಭೂಮಿ ಮಾತ್ರವೇ ಏಕೆ. ವಿಶ್ವವೇ ನಿಮಗೆ ಗೋಚರವಾಗುತ್ತದೆ. ವಿಶ್ವದ ಕಿರಣಗಳೂ, ಭಾರತದ ಕಿರಣಗಳೂ ನಮ್ಮ ಕರ್ನಾಟಕತ್ವದ ಕಾಜಿನಲ್ಲಿ ಅಂತರ್ಯಾಮಿಯಾಗಿವೆ.” (ಕರ್ನಾಟಕತ್ವದ ವಿಕಾಸ ಪು. ೧೯೯)

.

ಈ ಎರಡೂ ಪಠ್ಯಗಳು ಮೇಲು ನೋಟಕ್ಕೆ ಒಂದೇ ಆಶಯದ ಬಗ್ಗೆ ಮಾತಾನಾಡುವ ಹಾಗೆ ಕಂಡರೂ ಮೂಲ ದರ್ಶನದಲ್ಲಿ ಎರಡು ಪ್ರತ್ಯೇಕ ಜಗತ್ತುಗಳಷ್ಟು ವ್ಯತ್ಯಾಸವಿದೆ. ಒಂದೇ ನಿರ್ದಿಷ್ಟ ರೀತಿಯ ಸಮಸ್ಯೆಗಳಿಗೆ ಎದುರಾಗಿ ಕನ್ನಡ ಸಂಸ್ಕೃತಿ, ಕರ್ನಾಟಕತ್ವವನ್ನು ನಿರ್ವಚಿಸುತ್ತಿದ್ದರೂ ಎರಡೂ ಅಂತಿಮವಾಗಿ ಬೇರೆಯೇ ಎನ್ನುವುದು ಸ್ವಷ್ಟ. ಎರಡೂ ಒಂದೇ ಪರಿಭಾಷೆಯನ್ನಾಡುವ ಹಾಗೆ ಕಂಡರೂ ಅವುಗಳ ಸಮಾಜದರ್ಶನ ಸಂಪೂರ್ಣವಾಗಿ ಬೇರೆ ಬೇರೆ ರೀತಿಯದು. ಚರ್ಚೆಯ ಅನುಕೂಲಕ್ಕಾಗಿ ಚಿದಾನಂದಮೂರ್ತಿಯವರ ರಾಷ್ಟ್ರೀಯತೆಯ ಪರಿಕಲ್ಪನೆಯನ್ನು “ಆತಂಕಕೇಂದ್ರತ ರಾಷ್ಟ್ರೀಯತೆ” ಎಂದು ಕರೆಯಬಹುದು. ಅವರ ಇಡೀ ಕೃತಿಯ ಒಳಗೆ ಮತ್ತು ಹೊರಗೆ ಎರಡೂ ಕಡೆಗೆ ದಟ್ಟವಾಗಿ ಹರಿದಿರುವುದು ಆತಂಕ, ಅನ್ಯರಿಂದ ಕನ್ನಡಿಗ ನಾಶವಾಗುತ್ತಿದ್ದಾನೆ. ಅನ್ಯರಿಂದ ಕನ್ನಡ ಭಾಷೆ ನಿರ್ನಾಮವಾಗುತ್ತಿದೆ ಎಂಬ ಆತಂಕವೇ ಚಿದಾನಂದಮೂರ್ತಿಯವರ ದರ್ಶನದ ಪ್ರಾಣ. ಈ ಪುಸ್ತಕದ ಒಳಗಡೆಗಷ್ಟೇ ಗಮನ ಕೊಟ್ಟರೂ ಈ ಮಾತು ಮತ್ತೆ ಮತ್ತೆ ಸಾಬೀತಾಗುತ್ತದೆ. ಆತಂಕಕೇಂದ್ರಿತ ರಾಷ್ಟ್ರೀಯತೆಯ ತಾರ್ಕಿಕ ಕೊನೆಯೇ ಆಕ್ರಮಣಶೀಲತೆ ಅನ್ಯದ ಬಗೆಗೆ ಅಸಹನೆ ತೀವ್ರವಾಗುತ್ತ. ಹೋಗಿ ಅದನ್ನು ಅಚೆಗಟ್ಟುವುದೇ ಸಮಸ್ಯೆಯ ಪರಿಹಾರ ಎಂಬ ನಿಲುವು ಈ ಬಗೆಯ ಚಿಂತನೆಯದು.

ಆಲೂರು ವೆಂಕಟರಾಯರ ಕನ್ನಡ ರಾಷ್ಟ್ರೀಯತೆ ಇದಕ್ಕಿಂತ ಭಿನ್ನನೆಲೆಗಳಿಂದ ಹುಟ್ಟಿರುವಂಥದು. “ಕರ್ನಾಟಕತ್ವದ ವಿಕಾಸ” ಕೃತಿಯ ಇನ್ನಿತರ ವೈಚಾರಿಕ ಹೆಣಿಗೆಗಳನ್ನು ಗಮನದಲ್ಲಿರಿಸಿ ಹೇಳುವುದಾದರೆ ಇದನ್ನು “ಆಧ್ಯಾತ್ಮಿಕ ರಾಷ್ಟೀಯತೆ” ಎಂದು ಕರೆಯಬಹುದು. ಕನ್ನಡ ಮತ್ತು ಕರ್ನಾಟಕ ಎರಡೂ ಗಂಡಾಂತರದಲ್ಲಿವೆ ಎಂಬ ನಿಲುವಿನಿಂದಲೇ ಹೊರಟರೂ ಇದು ಬೇರೆಯೇ ಆದ ರೀತಿಯ ಹೋರಾಟದ ನೆಲೆಗಟ್ಟನ್ನು ಸೃಷ್ಟಿಸಿಕೊಳ್ಳುತ್ತದೆ. ತಮಿಳು ಮುಂತಾದ ಅನ್ಯಭಾಷಿಕರು ಕನ್ನಡಕ್ಕೆ ಹೇಗೆ ಕುತ್ತು ತಂದಿದ್ದಾರೆ ಎಂದು ಚಿದಾನಂದಮೂರ್ತಿ ಭಾವಿಸಿದ್ದಾರೋ. ಮರಾಠಿಯ ಬಗೆಗೆ ಅಂಥದೇ ನಿಲುವನ್ನು ಆಲೂರ ವೆಂಕಟರಾಯರು ತಳೆದಿದ್ದರು ಮತ್ತು ಚಾರಿತ್ರಿಕವಾಗಿ ತಮಿಳು ಈಗ ಕನ್ನಡಕ್ಕೆ ತಂದಿರುವ “ಅಪಾಯ”ಕ್ಕಿಂತ ಇನ್ನಷ್ಟು ಆಳವಾದ ರೀತಿಯ ಬೆದರಿಕೆಯನ್ನು ಮರಾಠಿ ತಂದೊಡ್ಡಿತ್ತು. ಕನ್ನಡ ನವೋದಯದ ಚರಿತ್ರೆ ಬಲ್ಲವರಿಗೆ ಇದನ್ನು ಬಿಡಿಸಿ ಹೇಳಬೇಕಿಲ್ಲ. ತಾತ್ವಿಕವಾಗಿ ಇದನ್ನು ಸಂಗ್ರಹಿಸಿ ಹೇಳೂವುದಾದರೆ “ಅನ್ಯ”ದ ಬೆದರಿಕೆ ಕನ್ನಡಕ್ಕೆ ಇದೆ ಎಂಬ ನಿಲುವು ಇದು. ಕನ್ನಡತನವನ್ನು, ಕರ್ನಾಟಕತ್ವವನ್ನು ಎಚ್ಚರಿಸುವ ತೀವ್ರ ಸನ್ನಿವೇಶದಲ್ಲೂ ಮರಾಠಿ ಗ್ರಂಥಭಂಡಾರವನ್ನು ಕಾಪಾಡುವ ನಿಲುವು ಅಲೂರರದು. ಮೇಲೆ ಉದ್ದರಿಸಿದ ಚಿ.ಮೂ.ರ ಹೇಳಿಕೆಯಲ್ಲಿ ಅನ್ಯರ ಭಾಷೆ, ಕಲೆಗಳ ಬಗೆಗೂ ಅಳವಾದ ಹೆದರಿಕೆ ಇದೆ. ಇದನ್ನೆ ಬೇರೆ ರೀತಿಯಲ್ಲಿ ಹೇಳುವುದಾದರೆ ಆಲೂರ ವೆಂಕಟರಾಯರ ಆಧ್ಯಾತ್ಮಿಕ ರಾಷ್ಟ್ರೀಯತೆ ಆತ್ಮ ವಿಶ್ವಾಸದಲ್ಲಿ ಕೊನೆಯಾಗುತ್ತದೆ.

ಎರಡೂ ಕನ್ನಡದ ಬಗ್ಗೆ ತ್ರೀವ್ರವಾಗಿ ಮಾತನಾಡುತ್ತವೆ. ಎರಡಕ್ಕೂ ಬೇರೆ ಬೇರೆ ಬಗೆಯ ಅವೇಶಗಳಿವೆ. ಹಾಗೆ ನೋಡಿದರೆ, ಆಲೂರ ವೆಂಕಟರಾಯರನ್ನು ಚಿ.ಮೂ. ತುಂಬ ಗೌರವದಿಂದ ಸ್ಮರಿಸುತ್ತಾರೆ. ೧೯೧೭ರಲ್ಲಿ ಪ್ರಕಟವಾದ “ಕರ್ನಾಟಕದ ಗತ ವೈಭವ”ದಿಂದ ಕೆಲವು ವಾಕ್ಯಗಳನ್ನು ಉದ್ಧರಿಸುತ್ತಾರೆ ಕೂಡಾ. ಆದರೆ ನಿಜವಾಗಿಯೂ ಕನ್ನಡ ಕುಲಪುರೋಹಿತ ಆಲೂರ ವೆಂಕಟರಾಯರ ಸಮಗ್ರದರ್ಶನದಿಂದ ಸ್ಪೂರ್ತಿಗೊಂಡದ್ದೆ ಚಿದಾನಂದ ಮೂರ್ತಿಗಳ ಸಂಸ್ಕೃತಿ ದರ್ಶನ ಎಂಬ ಪ್ರಶ್ನೆ ಮುಖ್ಯ.

ಚರಿತ್ರೆಯ ಚಲನೆಯೇ ಹಾಗೆ. ವೈಚಾರಿಕ ಆಕೃತಿಯೊಂದರ ಅಪಗ್ರಹಿಕೆ ಚರಿತ್ರೆಯ ಮುನ್ನಡೆಗೆ ಅಥವಾ ವಿಕೃತಿಗೆ ಕಾರಣವಾಗುತ್ತದೆ. ಆದ್ದರಿಂದಲೇ, ಒಟ್ಟು ಚರಿತ್ರೆಯೇ ಅನೇಕ ಬಗೆಯ ಅಪಗ್ರಹಿಕೆಗಳ ಕಥೆ, ಚರಿತ್ರೆಯ ನಿರ್ಮಾಣದಲ್ಲಿ ಯಾವುದೂ ಕೆಲಸವನ್ನು ಆಯ್ಕೆ ಮಾಡಲಾಗುತ್ತದೆ. ಕೆಲಸವನ್ನು ಬಿಡಲಾಗುತ್ತದೆ. ಈ ಸೇರ್ಪಡೆ – ಬೇರ್ಪಡೆಗಳ ಸೂಕ್ಷ್ಮ ಅಧ್ಯಯನದಿಂದ ಮಾತ್ರ ಚರಿತ್ರೆಯ ರಹಸ್ಯ ತಿಳಿಯುತ್ತದೆ.

ಯಾಕೆ ಈ ವೈರುಧ್ಯ? “ಬೌದ್ಧಿಕರೆಂದು ಕರೆದುಕೊಳ್ಳುವ ಜನರು ವಿಶ್ವಭ್ರಾತೃತ್ವ ಭಾರತದ ಅಖಂಡತೆ ಇತ್ಯಾದಿ ಮಾತುಗಳಿಂದ ವಂಚಿಸುತ್ತಿದ್ದಾರೆ” ಎಂಬ ಚಿದಾನಂದಮೂರ್ತಿಯವರ ಮಾತಿನ ಮೊದಲ ಬಲಿ ಆಲೂರ ವೆಂಕಟರಾಯರೇ ಆಗುತ್ತಾರಲ್ಲ?

ಹೀಗೆ ಚಾರಿತ್ರಿಕ ಕಾಲದ ಬೇರೆ ಬೇರೆ ಘಟ್ಟಗಳಲ್ಲಿ ಕರೆಯದೆ ತಾವಾಗಿ ಬಂದು ವೈಚಾರಿಕ ಆಕೃತಿಗಳು ಘರ್ಷಿಸುತ್ತವೆ ಎಂಬುದು ಜಗತ್ತಿನ ಜ್ಞಾನದ ದೊಡ್ಡ ಕುತೂಹಲಗಳಲ್ಲಿ ಒಂದು “ಕನ್ನಡ ಸಂಸ್ಕೃತಿ : ನಮ್ಮ ಹೆಮ್ಮೆ” ಕೃತಿಯ ಹಿಂದಿನ ಅಲೋಚನಾ ಕ್ರಮಕ್ಕೆ ಬಹುಶಃ “ಕರ್ನಾಟಕತ್ವದ ವಿಕಾಸ” ಕೃತಿಯ ತಾತ್ವಿಕ ನೆಲೆಗಳನ್ನು ಸಂಪೂರ್ಣವಾಗಿ ಹಾಗೂ ಸೂಕ್ಷ್ಮವಾಗಿ ಗ್ರಹಿಸುವುದು ಕಷ್ಟ, ಆಕ್ರಮಣದ ಆತಂಕದಲ್ಲಿರುವ ಮನಃಸ್ಥಿತಿ ಅದು. ಆದರೆ “ಕರ್ನಾಟಕತ್ವದ ವಿಕಾಸ” ಕೃತಿಗೆ ತಾನು ಮಂಡಿಸುತ್ತಿರುವ ಕನ್ನಡ ರಾಷ್ಟ್ರೀಯತೆ ಒಂದು ಘಟ್ಟದಲ್ಲಿ ವಿಕೃತವಾಗಬಲ್ಲುದು ಎಂಬ ಕಾಲಜ್ಞಾನ ಗುಣವಿದೆ. ತಾನು ಕಂಡ ದರ್ಶನವೆಲ್ಲವೂ ದುಃಸ್ವಪ್ನವಾಗಬಲ್ಲುದು ಎಂಬ ಅರಿವು ಇದೆ. ಅಂದರೆ “ಕರ್ನಾಟಕತ್ವದ ವಿಕಾಸ”ದ ಗರ್ಭದಿಂದಲೇ “ಕನ್ನಡ ಸಂಸ್ಕೃತಿ : ನಮ್ಮ ಹೆಮ್ಮೆ” ರೀತಿಯ ಚಿಂತನೆ ಹುಟ್ಟಬಲ್ಲದು ಎಂಬ ತಿಳುವಳಿಕೆ ಇದೆ. ವಿಘಟನೆಗೊಳ್ಳುವುದು, ವಿಪರೀತವಾಗುವುದು ಕಾಲದ ಧರ್ಮ ಎಂಬ ಶ್ರದ್ಧೆಯ ನೆಲೆ ಆಲೂರರಿಗೆ ಇದೆ. ಈ ಮಾತುಗಳನ್ನು ಗಮನಿಸಿ “ಉತ್ಕಟವಾದ ಕರ್ನಾಟಕದ ಅಭಿಮಾನವು ತಾಮಸ ಜನರಲ್ಲಿ ಪರಪ್ರಾಂತಗಳ ವಿಷಯಕವಾದ ದ್ವೇಷ ಬುದ್ಧಿಯನ್ನು ತಾಳುವ ಸಂಭವವುಂಟು……. ಸಾತ್ವಿಕ ಬಹಿಷ್ಕಾರವು ತಾಮಸ ಬಹಿಷ್ಕಾರವಾಗುವುದು” (ಪು೧೭೬)

ಈ ವಾಗ್ವಾದದ ಮೂಲರೂಪವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಇಲ್ಲಿಂದಾಚೆಗೆ ಇನ್ನಷ್ಟು ಸೂಕ್ಷ್ಮವೂ, ಜಟಿಲವೂ ಆಗಬೇಕಾಗುತ್ತದೆ. ರಾಷ್ಟ್ರೀಯತೆ ಎನ್ನುವ ಆಧುನಿಕ ಪಾಶ್ಚಾತ್ಯ ಪರಿಕಲ್ಪನೆ ಭಾರತ ಮತ್ತು ಕರ್ನಾಟಕಗಳಲ್ಲಿ ಸೃಷ್ಟಿಸಿದ ವಿವಿಧ ಭಾವನಾ ಲೋಕಗಳು ಹಾಗೂ ಬೌದ್ಧಿಕ ಲೋಕಗಳ ಸಮೀಕ್ಷೆಯೂ ಆಗುತ್ತದೆ ಈ ಪ್ರಯತ್ನ ಒಟ್ಟು ರಾಷ್ಟ್ರೀಯತೆಯ ಸ್ವರೂಪವನ್ನು ಕುರಿತ ಚರ್ಚೆಯಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ ಈ ಎರಡು ಪಠ್ಯಗಳು ತುಂಬ ದೊಡ್ಡ ಪ್ರಸ್ತುತತೆಯನ್ನು, ಮಹತ್ವವನ್ನು ಹೊಂದಿವೆ ಎಂಬ ನಂಬಿಕೆಯಿಂದ ಮುಂದಿನ ಚರ್ಚೆ ಹೊರಟಿದೆ.

.

ರಾಷ್ಟ್ರೀಯತೆ ಎನ್ನುವುದು ನೆನಪುಗಳ ನಿರ್ಮಿತಿ, ಆಧುನಿಕ ರಾಷ್ಟ್ರೀಯ ಪ್ರಭುತ್ವ (ನೇಷನ್ ಸ್ಟೇಟ್) ಎನ್ನುವುದು ಕಳೆದ ೨೦೦ – ೩೦೦ ವರ್ಷಗಳಿಂದ ಯುರೋಪು ಹಠ ಹಿಡಿದು ಸೃಷ್ಟಿಸಿದ್ದು. ಈ ರಾಷ್ಟ್ರೀಯತಾ ಸಿದ್ಧಾಂತದ ಹಿಂದಿನ ಪ್ರೇರಣೆ ಮತ್ತು ರಚನೆಗಳನ್ನು ಮಾರ್ಕ್ಸ್‌ವಾದ ಪ್ರಧಾನವಾಗಿ ಗುರ್ತಿಸುವುದು ಆರ್ಥಿಕ, ಸಾಮಾಜಿಕ ವರ್ಗಗಳ ಸಂಕಲ್ಪದ ಅಭಿವ್ಯಕ್ತಿಯಾಗಿ, ಹೀಗಾಗಿ ಉಳಿದ ಆಯಾಮಗಳನ್ನು ಗಮನಕ್ಕೆ ತೆಗೆದುಕೊಂಡರೂ ಮಾರ್ಕ್ಸ್‌ವಾದಿಗಳು ಮೂಲತಃ ರಾಷ್ಟ್ರೀಯ ಆರ್ಥಿಕ ವರ್ಗಗಳ ಆಶೋತ್ತರಗಳನ್ನೇ ತಮ್ಮ ವಿಶ್ಲೇಷಣೆಯ ಕೇಂದ್ರದಲ್ಲಿರಿಸಿಕೊಳ್ಳುವುದು ರೂಢಿ. ಉಳಿದ ಸಮಾಜಶಾಸ್ತ್ರಜ್ಞರು ಈಚೆಗೆ ಧರ್ಮ ಮತ್ತು ಭಾಷೆಗಳನ್ನು ಪ್ರಧಾನ ಪರಿಕಲ್ಪನೆಗಳನ್ನಾಗಿ ಬಳಸಿಕೊಳ್ಳುತ್ತಿದ್ದರೆ. ಇಲ್ಲೂ ಕೂಡಾ ನಿಜವಾದ ನೆನಪುಗಳು ಮತ್ತು ಕಲ್ಪಿತ ನೆನಪುಗಳು ಎಂಬೆರಡು ವರ್ಗಗಳಿವೆ, ಪ್ಯಾಲೆಸ್ತೀನಿಯರಲ್ಲಿ ಇವೆರಡೂ ಇರುವುದನ್ನು ಕಾಣಬಹುದು,

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದದ್ದು ರಾಷ್ಟ್ರೀಯತೆಯ ನೆನಪುಗಳ ಪುನರ್ ಸಂಘಟನೆಯಿಂದಾಗಿ ಹುಟ್ಟುವ ಕ್ರಮಗಳನ್ನು ಆಧುನಿಕತಾ ಪೂರ್ವಸಮಾಜಗಳಲ್ಲಿ ಮನುಷ್ಯರಿಗೆ ಬಹುಮುಖೀ ವ್ಯಕ್ತಿತ್ವಗಳು ಇರುತ್ತವೆ. ಜಾತಿ, ಪ್ರದೇಶ, ಧಾರ್ಮಿಕ ಪರಂಪರೆ, ಕಲಾ ಪರಂಪರೆ, ಭೌಗೋಳಿಕ ಸಂಸ್ಕೃತಿ, ನಿಸರ್ಗದ ಜತೆ ಸಂಬಂಧ ಹೀಗೆ ಈ ಎಲ್ಲ ಬಹುಮುಖೀ ವ್ಯಕ್ತಿತ್ವಗಳೂ ಸೇರಿ ಆಧುನಿಕತಾ ಪೂರ್ವ ಸಮಾಜದ ವ್ಯಕ್ತಿ ರೂಪುಗೊಂಡಿರುತ್ತಾನೆ, ಆದರೆ, ರಾಷ್ಟ್ರೀಯತೆಯ ಉಗಮವೆಂದರೆ ಈ ಬಹುಮುಖೀ ವ್ಯಕ್ತಿತ್ವಗಳಲ್ಲಿ ಮೊದಲ ಬಾರಿಗೆ ಮುಖ್ಯ ಹಾಗೂ ದ್ವಿತೀಯಗಳೆಂಬ ತಾರತಮ್ಯ ಹುಟ್ಟಿ ಏಕಮುಖಿ ವ್ಯಕ್ತಿತ್ವದ ನಿರ್ಮಾಣವಾಗುತ್ತದೆ, ಭಾಷೆ, ಧರ್ಮ, ಸಂಸ್ಕೃತಿಗಳ ನೆಲೆಗಳಲ್ಲಿ ಜನಾಂಗವೊಂದರ ನೆನಪುಗಳಿಗೆ ಆಯುವ ಮತ್ತು ಪುನರ್ ಸಂಘಟಿಸುವ ಒಂದು ಮಹಾನ್ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಎಲ್ಲೊ ಬಿಡಿಬಿಡಿಯಾಗಿ ಬೇರೆ ಬೇರೆ ಚೌಕಟ್ಟು ಮತ್ತು ಹಂದರಗಳಲ್ಲಿ ಮತ್ತು ವ್ಯವಸ್ಥೆಗಳಲ್ಲಿ ಅಡಕವಾಗಿದ್ದ ಹಾಗೂ ಚದುರಿಹೋಗಿದ್ದ ನೆನಪುಗಳನ್ನು ಒಂದು ನಿರ್ದಿಷ್ಟ ಸೂತ್ರಕ್ಕೆ ಪೋಣಿಸಲಾಗುತ್ತದೆ. ಹಳೆಯ ಸಂಗತಿಗಳನ್ನು ಹೊಸ ಅರ್ಥ ಮತ್ತು ಆಶಯಗಳಿಗೆ ತಕ್ಕಂತೆ ಜೋಡಿಸಿದಾಗ ಹೊಸ ಆಕಾರಗಳು ಹುಟ್ಟುತ್ತವೆ. ಹಳೆಯ ಸಾಂಸ್ಕೃತಿಕ, ಧಾರ್ಮಿಕ ನೆನಪುಗಳು ಹೊಸ ರಾಜಕೀಯ ಉದ್ದೇಶಗಳಿಗೆ ಅನುಗುಣವಾಗಿ ದುಡಿಯುತ್ತವೆ. ಹೀಗಾಗಿ ಆಧುನಿಕ ಸಮಾಜಗಳ ಎಲ್ಲ ಸಾಂಸ್ಕೃತಿಕ ಐಡೆಂಟಿಟಿಗಳೂ ನೆನಪುಗಳ ಪುನರ್ ಸಂಘಟನೆಯೇ. ಭಾರತ ರಾಷ್ಟ್ರೀಯತೆಯ ಉಗಮವೂ ಹೀಗೇಯೇ. ಕನ್ನಡ ರಾಷ್ಟ್ರೀಯತೆಯ ಉಗಮವೂ ಹೀಗೆಯೇ, ವರ್ತಮಾನದ ಹೋರಾಟಕ್ಕೆ ಗತಕಾಲದ ನೆನಪುಗಳಿಂದ ಸೃಷ್ಟಿಯಾದ ವ್ಯಕ್ತಿತ್ವ ಬೇಕು. ಇಲ್ಲಿ ಭಾರತ ರಾಷ್ಟ್ರೀಯತೆ ಮತ್ತು ಕನ್ನಡ ಉಪರಾಷ್ಟ್ರೀಯತೆಗಳ ವ್ಯತ್ಯಾಸದ ಬಗೆಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಏಕೆಂದರೆ ಎಲ್ಲ ಉಪರಾಷ್ಟ್ರೀಯತೆಗಳೂ ಸಂಬಂಧವನ್ನು ಅನುಸರಿಸಿ ಉಪರಾಷ್ಟ್ರೀಯತೆಯ ಭ್ರೂಣರೂಪ, ಸಮಗ್ರ ರಾಷ್ಟ್ರೀಯತೆಯ ಜತೆಗಿನ ಸಂಬಂಧವನ್ನು ಅನುಸರಿಸಿ ಉಪರಾಷ್ಟ್ರೀಯತೆ ಯಾವಾಗ ಬೇಕಾದರೂ ತನ್ನ ‘ಉಪ’ ಸ್ಥಿತಿಯನ್ನು ಬಿಸಾಡಿ ಮುನ್ನಡೆಯಬಹುದು. ೨೦ನೆ ಶತಮಾನದ ಕಡೆಯ ದಶಕಗಳ ಚರಿತೆಯೇ ಉಪರಾಷ್ಟ್ರೀಯತೆಗಳ ಪೂರ್ಣ ರಾಷ್ಟ್ರೀಯತೆಗಳಾದದ್ದು. ಪೂರ್ವ ಯುರೋಪು ಮತ್ತು ಸೋವಿಯತ್ ರಷ್ಯಗಳು ಮಾತ್ರ ಇದಕ್ಕೆ ಉದಾಹರಣೆಗಳಲ್ಲ ಭಾರತ ಉಪಖಂಡವೂ ಸೇರಿದಂತೆ ಏಷ್ಯಾದ ಅನೇಕ ದೇಶಗಳೂ ಇದೇ ಬಗೆಯ ಬದಲಾವಣೆಯ ಪ್ರಕ್ರಿಯೆಯಲ್ಲಿವೆ.

ಈ ಹಿನ್ನಲೆಯಿಂದ ಹೇಳುವುದಾದರೆ ಎಲ್ಲ ರಾಷ್ಟ್ರೀಯತೆಯ ಉಗಮಕ್ಕೆ ಒಂದು ಪ್ರಜ್ಞಾಪೂರ್ವಕ ಪ್ರಯತ್ನ ಕಾರಣ, ಅದೊಂದು ನಿರ್ದಿಷ್ಟ ಪ್ರತಿಭಾ ಸೃಷ್ಟಿ. ಆಯ್ದು ಆಯ್ದು ನೆನಪುಗಳನ್ನು ಕಟ್ಟಿಕೊಡಬೇಕು. ಈ ಆಧುನಿಕ ಪಾಶ್ಚಾತ್ಯ ಪ್ರೇರಿತ ಅಭ್ಯಾಸದ ಅರಿವು ಆಲೂರರಿಗೆ ಸೃಷ್ಟವಾಗಿಯೇ ಇದೆ. ಈ ಕೆಳಗಿನ ಅವರ ಮಾತುಗಳಿಗೆ ದೊಡ್ಡ ಕಾವ್ಯದಲ್ಲಿ ಬರುವ ರೂಪಕದ ಶಕ್ತಿ ಮತ್ತು ನಿಗೂಢತೆಗಳಿವೆ. ಚಾರಿತ್ರಿಕ ಸತ್ಯವೊಂದನ್ನು ಧಿಗ್ಗನೆ ಹೊಳೆಯಿಸುವ ಶಕ್ತಿ ಈ ಮಾತುಗಳಿಗೆ ಇದೆ – “ಕೋಲಂಬಸನು ಅಮೇರಿಕಯನ್ನು ಹುಡುಕಿ ತೆಗೆದಂತೆ, ತಾನು “ಕರ್ನಾಟಕ”ವನ್ನು ಹೊಸದಾಗಿ ಹುಡುಕಿ ತೆಗೆಯಬೇಕಾಯಿತು. ದೀರ್ಘ ವಿಚಾರ ಮಾಡಿ ಮತ್ತು ಅಭ್ಯಾಸ ಮಾಡಿ ಹುಡುಕಿ ತೆಗೆದ.” (ಪು. ೫೫)

ರಾಷ್ಟ್ರೀಯತೆಯಂತಹ ಪಾಶ್ಚಿಮಾತ್ಯ ಪರಿಕಲ್ಪನೆಯನ್ನು ಆಲೂರರು ಪರಿವರ್ತಿಸುವ ರೀತಿಗೆ ತುಂಬ ಸೂಕ್ಷ್ಮವಾದ ಆಯಾಮಗಳಿವೆ. ವಸಾಹತುಶಾಹಿಯ ಇತಿಹಾಸದಲ್ಲಿ ಈ ರೀತಿಯ ಮುಖಾಮುಖಿ ಮತ್ತು ಪರಿವರ್ತನೆಯ ಪ್ರಕ್ರಿಯೆಗೆ ತುಂಬ ಮುಖ್ಯಸ್ಥಾನವಿದೆ. ಎಂದು ಬಿಡಿಸಿ ಹೇಳಬೇಕಿಲ್ಲ. ಈ ಬಗೆಗೆ ತುಂಬ ಮಹತ್ವದ ಒಳನೋಟಗಳನ್ನು “ರಾಷ್ಟ್ರೀಯತ್ವದ ಮೀಮಾಂಸೆ” ಎಂಬ ಅಧ್ಯಯದಲ್ಲಿ ಕಾಣಬಹುದು. ಇದನ್ನು ಆಲೂರರು ಬರೆದದ್ದು ೧೯೨೬ – ೨೭ರಲ್ಲಿ. “ರಾಷ್ಟ್ರೀಯತೆ” ಎಂದರೆ “ಸಾತ್ವಿಕ ಅಹಂಕಾರ”ದ ಒಂದು ರೂಪ ಎನ್ನುತ್ತಾರೆ ಆಲೂರರು ಇದಕ್ಕೆ ನದಿಯ ಉಪಮೆ ಕೂಡಾ ಕೊಡುತ್ತಾರೆ ಅದು ಮೊದಲು ಚಿಕ್ಕದಿದ್ದು, ನಾನು ನನ್ನ ಹೆಂಡತಿ, ಮಕ್ಕಳು, ನನ್ನ ಊರು, ನನ್ನ ಪ್ರಾಂತ, ನನ್ನ ರಾಷ್ಟ್ರ ಎಂಬುದಾಗಿ ವಿಸ್ತಾರವನ್ನು ಹೊಂದಿ ಕಡೆಗೆ “ಸರ್ವಭೂತಹಿತ”ವೆಂಬ ಸಮುದ್ರಕ್ಕೆ ಒಯ್ದು ಕೂಡಿಸಬೇಕು. ಆದರೆ, ಭಾರತೀಯ ರಾಷ್ಟ್ರೀಯತೆಗೂ ಪಾಶ್ಚಾತ್ಯ ರಾಷ್ಟ್ರೀಯತೆಗೂ ವ್ಯತ್ಯಾಸವಿದೆ. ಪಾಶ್ಚಾತ್ಯ ದೇಶದಲ್ಲಿಯ ರಾಷ್ಟ್ರೀಯತ್ವದ ಸೆಲೆಯು ಸ್ವಾರ್ಥಹಿತದಲ್ಲಿ ಅವಸಾನ ಹೊಂದುತ್ತದೆ. ಅದು ‘ಸರ್ವಭೂತ ಹಿತ’ಕ್ಕೆ ಹೋಗಿ ಕೂಡುವುದಿಲ್ಲ. ಇದಿಷ್ಟು ಆಲೂರರ ವಿಚಾರಸಾರ.

ಇಷ್ಟಾದರೂ ಆಲೂರರ ಕನ್ನಡ ರಾಷ್ಟ್ರೀಯತೆಗೆ ಕೂಡಾ ಮೂಲ ಪ್ರೇರಾಣೆಗಳ ಹಂತದಲ್ಲಿ ಪಾಶ್ಚಿಮಾತ್ಯ ರೀತಿಯ ರಾಷ್ಟ್ರೀಯವಾದದ ಹಂಗು ಇದ್ದೇ ಇತ್ತು. ಮೂಲ ಆಕೃತಿಯೊಂದನ್ನು ಅಲ್ಲಿಂದ ಸ್ವೀಕರಿಸಿ ಅದನ್ನು ಪರಿವರ್ತಿಸುವ ಬಗೆಗೆ ಈ ಹಿಂದೆ ಪ್ರಸ್ತಾಪ ಮಾಡಿದ ಪ್ರಕ್ರಿಯೆಯೇ ಇಲ್ಲೂ ಮುಂದುವರಿಯುತ್ತದೆ. ಆದರೆ ಆಲೂರರ ವಿಶೇಷತೆ ಎಂದರೆ ರಾಷ್ಟ್ರೀಯತೆಗೆ ‘ಸ್ವ’ ಮತ್ತು ವಿಶ್ವಗಳೆರಡನ್ನೂ ಸಾವಯವ ರೀತಿಯಲ್ಲಿ ಅವರು ಹೊಂದಿಸಿದರು ಆದರೆ ಪಶ್ಚಿಮದ ಅಂಟು ಬಂದದ್ದು “ಸಾಮ್ರಾಜ್ಯ”ದ ಬಗೆಗಿನ ವ್ಯಾಮೋಹದಿಂದ ಪರಕೀಯ ಸಾಮ್ರಾಜ್ಯ ಗರ್ಭದಲ್ಲಿದ್ದವರಿಗೆ ತಮ್ಮ ಗತಕಾಲದ “ಸಾಮ್ರಾಜ್ಯ”ದ ಬಗೆಗೆ ತೀವ್ರ ಹಂಬಲ ಭಾರತೀಯ ರಾಷ್ಟ್ರೀಯವಾದಿಗಳಲ್ಲಿ ಗಾಂಧಿ ಒಬ್ಬರಿಗೆ ಬಿಟ್ಟರೆ ಇನ್ನುಳಿದವರಿಗೆ ಬಲಿಷ್ಠ ಸಾಮ್ರಾಜ್ಯ ರಾಷ್ಟ್ರೀಯತೆಯ ಹುಚ್ಚು. ಕನ್ನಡ ರಾಷ್ಟ್ರೀಯತೆಗೆ ಕೂಡಾ ಈ “ಸಾಮ್ರಾಜ್ಯ”ದ ಪರಿಕಲ್ಪನೆಯೇ ಮೂಲ ಚಿಲುಮೆ. ಜತೆಗೆ ಕನ್ನಡಿಗರು ಈ ಸಾಮ್ರಾಜ್ಯಕ್ಕಾಗಿ ಬಹುದೂರ ಹೋಗಬೇಕಾಗೂ ಇರಲಿಲ್ಲ. ಹತ್ತಿರದಲ್ಲೇ ಹಂಪೆ ಇತ್ತು. ಹಾಳಾಗಿದ್ದರೇನಂತೆ? ಅದೇ ಗತವೈಭವದ ಕನಸು ಹೊಸ ಸಾಹಸಕ್ಕೇ ವಿಷಾದದ ಮೆರುಗು ನೀಡಬಲ್ಲದಾಗಿತ್ತು.

ಆಲೂರರ “ಕರ್ನಾಟಕತ್ವದ ವಿಕಾಸ”ಕ್ಕೆ ಒಂದು ದೊಡ್ಡ ರೊಮ್ಯಾಂಟಿಕ್ ಕಾದಂಬರಿಯ ಶರೀರವಿದೆ ಎನ್ನುವುದು ಹೊಳೆಯುವುದು ಈ ಸಾಮ್ರಾಜ್ಯ ದರ್ಶನಕ್ಕೆ ಬಂದಾಗಲೇ “೧೯೦೫ನೇ ಇಸವಿಯ ಮೇ ತಿಂಗಳ ೬ನೇ ತಾರೀಕಿನ ದಿವಸ ತಮ್ಮ ಆಯುಷ್ಯದಲ್ಲಿ ಕ್ರಾಂತಿಬಿಂದು” ಎಂದು ಆಲೂರರು ಬರೆಯುತ್ತಾರೆ. ಆ ದಿನ ವಿಜಯನಗರ ಅಲ್ಲಿ ಪ್ರತ್ಯಕ್ಷವಾಗಿಯೂ, ವಿಸ್ತಾರವಾಗಿಯೂ ಆಲೂರರ ಮುಂದೆ ಬಿದ್ದಿತ್ತು. ಆ ದಿವಸದ ದರ್ಶನ ಮನದಲ್ಲಿ ವಿದ್ಯುದ್ದೀಪದ ಸಂಚಾರ ಮಾಡಿಸಿತು. “ಚಲನಚಿತ್ರ ಪಟದಲ್ಲಿ ವಿದ್ಯುದ್ದೀಪದ ಬಲದಿಂದ ಮೂರ್ತಿಗಳು ಮಾಡುವಂತೆ, ನನ್ನ ಹೃದಯದಲ್ಲಿ ಕರ್ನಾಟಕ ದೇವಿಯ ಸುಂದರವಾದ ಮೂರ್ತಿಯು ಒಡಮೂಡಿತು.” ಇಲ್ಲಿ ಬಳಸಲಾಗಿರುವ ಪ್ರತಿಮಾವಳಿ ಪೂರ್ಣವಾಗಿ ಆಧುನಿಕ ನಾಗರಿಕತೆಯದು ಎನ್ನುವುದು ಕೂಡಾ ಸಂಕೇತಶಾಸ್ತ್ರದ ದೃಷ್ಟಿಯಿಂದ ತುಂಬ ಮುಖ್ಯ.

ಆ ದಿನ ಹುಟ್ಟಿದ ದರ್ಶನ ಮುಂದೆ ರಾಜಕೀಯ ಸಂಕಲ್ಪದ ರೂಪ ಪಡೆಯುತ್ತ ಹೋಯಿತು. ಆದರೆ ಆಲೂರರಲ್ಲಿ ಅದು ವೈಯಕ್ತಿಕವಾಗಿ ಅಧಿಕೃತಗೊಂಡಿದ್ದು ಆ ಇಡೀ ಚಾರಿತ್ರಿಕ ದರ್ಶನವನ್ನು ಆಧ್ಯಾತ್ಮೀಕರಿಸಿದ ಕಾರಣಕ್ಕಾಗಿ ಅವರು ಪಶ್ಚಿಮದ ಪರಕಲ್ಪನೆಗಳು ಮಲಿನ ಎಂದು ದೂರ ಉಳಿಯಲಿಲ್ಲ. ಮಲಿನವಾದದ್ದನ್ನು ಪವಿತ್ರೀಕರಿಸುವ ಶ್ರದ್ಧೆ ಚರಿತ್ರೆಯೊಳಗೆ ತೊಡಗಿಕೊಂಡ ರಾಷ್ಟ್ರೀಯವಾದಿಗಳದು. ಗಾಂಧಿ ಈ ಬಗೆಯವರು ಚರಿತ್ರೆಯೇ ಮಲಿನ ಎಂದು ಭಾವಿಸಿದ ರಮಣ. ಉತ್ತರಾರ್ಧದ ಅರವಿಂದ ಈ ಬಗೆಯ ಕ್ರಿಯಾಶೀಲತೆಯಿಂದ ದೂರ ಉಳಿದರು. ಅದು ಬೇರೆಯೇ ಕಥೆ. ಮುಂದೆ ಸ್ವತಃ ಆಲೂರರು ರಾಜಕಾರಣದಿಂದ ದೂರವಾದರು.

ಆದರೆ ಆಲೂರರಲ್ಲಿ ಅಧಿಕೃತವಾಗಿ ಕಂಡದ್ದು ಅನೇಕ ಕಾರಣಗಳಿಗಾಗಿ ಚಿದಾನಂದಮೂರ್ತಿ ಅವರಲ್ಲಿ ಅಸಹನೆಯ ಹಠವಾಗಿ ಕಾಣತೊಡಗಿದೆ. ಇಲ್ಲೂ ಕೂಡ ದೊಡ್ಡ ವ್ಯಂಗ್ಯ ಎಂಬಂತೆ “ಸಾಮ್ರಾಜ್ಯ ದರ್ಶನ”ವೇ ತುಂಬಿದೆ. ಆದರೆ. ಇಲ್ಲಿಯ ಬೌದ್ಧಿಕ ಪ್ರಮಾಣ ಕನ್ನಡ ಸಂಸ್ಕೃತಿಯನ್ನು ತೀರಾ ಕುಗ್ಗಿಸಿ ಹೀನೋಪಮೆಯ ಮಟ್ಟಕ್ಕೆ ಇಳಿಸಿಬಿಟ್ಟಿದೆ “ಕರ್ನಾಟಕ ಸಂಸ್ಕೃತಿ ತನ್ನೆಲ್ಲ ವೈಶಿಷ್ಟಗಳೊಡನೆ ರೂಪುಗೊಳ್ಳಲು ಆರಂಭವಾದದ್ದು ಒಂದು ಬಹು ಚಿಕ್ಕ. ಆದರೆ ಮುಂದಿನ ಪರಿಣಾಮಗಳ ದೃಷ್ಟಿಯಿಂದ ಅತ್ಯಂತ ಮಹತ್ವದ ಘಟನೆಯಿಂದ” ಎನ್ನುತ್ತ ಕನ್ನಡ ಸಂಸ್ಕೃತಿಯ ಉಗಮವನ್ನು ನಿರ್ದಿಷ್ಟಗೊಳಿಸುತ್ತಾರೆ ಚಿ.ಮೂ. ಅದೂ ಕೂಡಾ ಎಲ್ಲಿಗೆ?

ತಮಿಳುನಾಡಿನ ಕಂಚಿಗೆ ಹೋದ ಕದಂಬರ ಮಯೂರಶರ್ಮ ಅಲ್ಲಿ ಪಲ್ಲವರಿಂದ ಅವಮಾನಿತನಾಗುತ್ತಾನೆ. ಒಂದು ಚಿಕ್ಕ ಕುಸ್ತಿ ಎನ್ನಬಹುದಾದ ಘಟನೆಯನ್ನು ಚಿ.ಮೂ. ಚಾರಿತ್ರಿಕ ರೂಪಕದ ಮಟ್ಟಕ್ಕೆ ಏರಿಸುತ್ತಾರೆ. ಜಗತ್ತಿನ ಯಾವುದೇ ಸಂಸ್ಕೃತಿಗಳ ಜತೆ ಎಲ್ಲ ದೃಷ್ಟಿಗಳಿಂದ ಸಮನಾಗಿ ನಿಲ್ಲಬಲ್ಲ ಕನ್ನಡ ಸಂಸ್ಕೃತಿಯ ಪ್ರಾರಂಭ ಇಂಥ ಕ್ಷುದ್ರ ಘಟನೆಯಿಂದಲೆ ಎನ್ನಿಸಿ ಮನಸ್ಸು ಪೆಚ್ಚಾಗಿ ಬಿಡುತ್ತದೆ. ಸಂಸ್ಕೃತಿಯೊಂದರ ಈ ರೀತಿಯ ಉಗಮದ ವಿವರಣೆ ಶೈಕ್ಷಣಿಕವಾಗಿ ಕೂಡಾ ಅಸಂಬದ ಎನ್ನುವುದನ್ನು ಬೇರೆ ವಿವರಿಸಬೇಕಿಲ್ಲ. ಸಂಸ್ಕೃತಿ ಎನ್ನುವುದು ದೈನಂದಿನ ಕ್ರಿಯೆಗಳ ಸಾಧಾರಣ ಲಯಗಳು ಅಸಾಧಾರಣ ಕ್ರಿಯೆಗಳ ಜತೆಗೆ ಬೇರ್ಪಡಿಸಲಾಗದಂತೆ ಬೆರೆತಾಗ ಹುಟ್ಟುವ ವ್ಯವಸ್ಥೆ ಅದಕ್ಕೇ ಸಂಸ್ಕೃತಿಯೊಂದರಲ್ಲಿ ಪ್ರತಿದಿನದ ಹಿಟ್ಟು, ಹಬ್ಬದ ಹೋಳಿಗೆ, ಸಂಜೆಯ ಕಬಡ್ಡಿ ಆಟ, ಸಕ್ರಾಂತಿಯ ಸಾಂಕೇತಿಕತೆ, ಬಯಲಾಟಗಳು ಮತ್ತು ವೃಕ್ಷಪೂಜೆಗಳೆಲ್ಲ ಸೇರಿರುತ್ತವೆ. ಆದರೆ ನಮ್ಮ ಶ್ರೇಷ್ಠ ವಿದ್ವಾಂಸರಲ್ಲಿ ಒಬ್ಬರಾದ ಚಿದಾನಂಧಮೂರ್ತಿಯವರಿಗೆ ಇವೆಲ್ಲ ಮರೆತುಹೋಗುವಷ್ಟು ಅನ್ಯದಾಕ್ರಮಣದ ಭಯದ ಮಂಜು ಕವಿದಿದೆ. ಮುಂದೆ ಇದೇ ಕೃತಿಯಲ್ಲಿ ಸಣ್ಣದಾಗಿ “ಒಂದು ಸಂಸ್ಕೃತಿಯೆಂದರೆ ಆ ಜನಾಂಗದ ಜೀವನವಿಧಾನ” ಎಂಬ ವಾಕ್ಯ ಬಂದರೂ, ನಿರ್ಣಾಯಕ ಭಾಗಗಳಲ್ಲಿ ಈ ವಾಕ್ಯ ಪೂರ್ಣವಾಗಿ ಲೇಖಕರಿಗೆ ಮರೆತುಹೋಗಿದೆ.

“ಕನ್ನಡ ಸಂಸ್ಕೃತಿ : ನಮ್ಮ ಹೆಮ್ಮೆ” ಕ್ಷತ್ರಿಯ ನಿಯಂತ್ರಕ ಪರಿಕಲ್ಪನೆಗಳೆಂದರೆ ಕ್ಷಾತ್ರ ನತ್ತು ಸ್ವಾಭಿಮಾನ. ಪಂಪ ಮತ್ತು ವಚನ ಚಳವಳಿಗಳನ್ನು ಕೂಡಾ ಈ ನೆಲೆಗಟ್ಟಿನಿಂದಲೇ ವಿಶ್ಲೇಷಿಸಲಾಗಿದೆ. ಗಾಂಧೀವಾದಿ ರಾಷ್ಟ್ರೀಯತೆಯಲ್ಲಿ ಕ್ಷಾತ್ರ ಎಂಬ ಪದದ ಬಳಕೆಯೇ ಪರಕೀಯ. ಈ ಕ್ಷಾತ್ರ ಹಾಗೂ ಸ್ವಾಭಿಮಾನ ಎಂಬೆರಡು ಪದಗಳು ಏನಿದ್ದರೂ ಗಾಂಧಿವಿರೋಧಿ, ಹಿಂದೂ ರಾಷ್ಟ್ರೀಯವಾದಿಗಳಿಗೆ ವ್ಯಕ್ತಿತ್ವವೊಂದರ ಪರಮೋಚ್ಚ ಆದರ್ಶವೆಂದರೆ ಕ್ಷಾತ್ರ ಯುರೋಪಿನ “ಸಮರಶೀಲ ಜನಾಂಗಗಳ, ಗಂಡು ಮೆಟ್ಟಿನ ಭೂಮಿ”ಯ ಪರಿಕಲ್ಪನೆಗಳ ನೇರ ಅನುಕರಣೆ ಇದು. ಗಾಂಧಿ ಎಂದೂ ವೀರ್ಯವತ್ತಾದ ರಾಜಕಾರಣದ ಪರಿಭಾಷೆಯಲ್ಲಿ ಮಾತನಾಡಲಿಲ್ಲ. ಗಾಂಧಿ ಯಾವತ್ತೂ ಅರ್ಧನಾರೀಶ್ವರ ಪ್ರತಿಮೆಯಲ್ಲಿ ಬೆಳೆದವರು.

ಈ ಘಟ್ಟದಲ್ಲಿ ಪ್ರಸ್ತುತ ವಿಷಯದ ಅಜ್ಞಾತ ಸಂಬಂಧಗಳ ನೆಲೆಯೊಂದಕ್ಕೆ ಬರುತ್ತೇವೆ : ಕನ್ನಡ ರಾಷ್ಟ್ರೀಯತೆಯ ಪರಿಕಲ್ಪನೆಗೆ ಮೊದಲಿನಿಂದಲೂ ಹಿಂದುತ್ವ ಅಥವಾ ಹಿಂದೂ ರಾಷ್ಟ್ರೀಯತೆಯ ಜೊತೆಗೆ ಸಾವಯವ ಸಂಬಂಧ ಇದ್ದೇ ಇದೆ. ಭಾರತದಲ್ಲಿ ರಾಷ್ಟ್ರೀಯತೆ ಎಂದರೇನೇ ಹಿಂದೂ ರಾಷ್ಟ್ರೀಯತೆ ಎಂಬ ನಂಬಿಕೆ ಒಂದು ಘಟ್ಟದಲ್ಲಿ ತುಂಬ ಪ್ರಬಲವಾಗೇ ಬೆಳೆದು ಬಂದಿತ್ತು. ಆಲೂರರಲ್ಲೂ ಕೂಡ ಈ ಹಿಂದುತ್ವ ಮತ್ತು ಕನ್ನಡ ರಾಷ್ಟ್ರೀಯತೆಗಳ ಸಾವಯವ ಸಂಬಂಧದ ಪ್ರಸ್ತಾಪವಿದೆ. ಆದರೆ, ಆಲೂರರ ಮುಖ್ಯ ಗುಣವೆಂದರೆ ತಮ್ಮ ಉಳಿದ ವಿಶಾಲ ಹಾಗೂ ಸೂಕ್ಷ್ಮ ಪರಿಕಲ್ಪನೆಗಳ ಮೂಲಕ ಈ ಹಿಂದೂತ್ವವನ್ನು ಮುಚ್ಚಲು ಪ್ರಯತ್ನಿಸುತ್ತಾರೆ. ಅವರಲ್ಲಿ ಹಿಂದುತ್ವ ಎಂಬುದು ವಿಶಿಷ್ಟ ಅಸ್ತಿತ್ವದ ಒಂದು ರೂಪವೇ ಹೊರತು, ಏಕಮಾತ್ರ ರೂಪವಲ್ಲ, ಇಷ್ಟಾದರೂ ಕನ್ನಡ ರಾಷ್ಟ್ರೀಯತೆ ಮತ್ತು ಹಿಂದುತ್ವಗಳ ನಡುವಿನ ಸಂಬಂಧ ಅಪಾಯಕಾರಿ ನೆಲೆಗಳಿಗೆ ತಿರುಗುವುದನ್ನು ಆಲೂರರಲ್ಲೇ ಗುರುತಿಸಲು ಸಾಧ್ಯ.

ಕನ್ನಡ ರಾಷ್ಟ್ರೀಯತೆ ಮತ್ತು ಹಿಂದುತ್ವದ ನಡುವಿನ ಸಂಬಂಧದ ಸ್ವಷ್ಟ ಉದ್ದೇಶವನ್ನು ಆಲೂರರಲ್ಲಿ ಕಂಡರೆ, ಚಿದಾನಂದಮೂರ್ತಿಯವರಲ್ಲಿ ಅದು ಸುಪ್ರ ಪ್ರಜ್ಞೆಯ ಸತ್ಯವಾಗಿಬಿಟ್ಟಿದೆ. ಕನ್ನಡ ಸಂಸ್ಕೃತಿಗೆ ಹಿಂದುವೇತರ ಜನಾಂಗಗಳ ಕೊಡುಗೆಯ ಸ್ವಷ್ಟ ಪ್ರಸ್ತಾಪ ಆಲೂರರಲ್ಲೂ ಇಲ್ಲ. ಚಿ.ಮೂ. ಅವರಲ್ಲೂ ಇಲ್ಲ. ಕನ್ನಡತನವನ್ನು ತನ್ನ ಮಧ್ವ ಸಿದ್ಧಾಂತ ಪಥದಲ್ಲಿಯ ಆಧ್ಯಾತ್ಮಿಕ ಪ್ರಯಾಣ ಎಂದು ಆಲೂರರು ಭಾವಿಸುವುದರಿಂದ ಅಲ್ಲಿ ಈ ಬಗೆಯ ಮೌನವನ್ನು ಅರ್ಥಮಾಡಿಕೊಳ್ಳಬಹುದು. ಆದರೆ, ಸಂಸ್ಕೃತಿಯನ್ನು ವಿವರಿಸುವಾಗ ಅನೇಕ ಆಧುನಿಕ ಸಾಂಸ್ಕೃತಿಕ ಮಾನವಶಾಸ್ತ್ರದ ಪರಿಕಲ್ಪನೆಗಳನ್ನು ಬಳಸಿಕೊಳ್ಳುವ ಚಿ.ಮೂರ. ಮೌನ ಅನೇಕ ಗಂಭೀರವಾದ ಪ್ರಶ್ನೆಗಳನ್ನು ಎತ್ತುತ್ತದೆ. ಆಧುನಿಕ ಪೂರ್ವಯುಗದಾಚೆಗೆ ಕರ್ನಾಟಕ ರೂಪುಗೊಂಡದ್ದೇ ಮುಸ್ಲಿಂ ಹಾಗೂ ಕ್ರೈಸ್ರಧಾರೆಗಳಿಂದ ೨೦ನೇ ಶತಮಾನದ ಹಿಂದಿನ ಕನ್ನಡ ಸಂಸ್ಕೃತಿಯ ಸಮೃದ್ಧತೆಗೆ, ಶಕ್ತಿಗೆ, ವೈವಿಧ್ಯತೆಗೆ ನಿಸ್ಸಂದೇಹವಾಗಿ ಇಸ್ಲಾಂ ಹಾಗೂ ಕ್ರೈಸ್ತ ಸಂವೇದನೆ, ಆಶಯಗಳ ಕೊಡುಗೆಯೇ ಅತ್ಯಂತ ಮಹತ್ವದ್ದು. ಒಂದು ಸಣ್ಣ ಆದರೂ ತುಂಬ ಮುಖ್ಯವಾದ ಮಾಹಿತಿಯನ್ನು ಈ ಸಂದರ್ಭದಲ್ಲಿ ಪ್ರಸ್ತಾಪಿಸಬಹುದು. ಉತ್ತರ ಕರ್ನಾಟಕದ ಏಳು ಜಿಲ್ಲೆಗೆ ಸೇರಿದ ಜನಪದ ಕವಿಗಳ ತುಂಬ ಸ್ವಾರಸ್ಯಕರವಾದ ಚರಿತ್ರೆಯೊಂದನ್ನು ಡಾ. ಎಂ.ಎಸ್. ಲಠ್ಠೆಯವರು ಬರೆದಿದ್ದಾರೆ. ಅವರ ಪ್ರಕಾರ ೧೯ – ೨೦ನೇ ಶತಮಾನದ ೨೪೦ ಜನಪದ ಕವಿಗಳಲ್ಲಿ ಮಸ್ಲಿಮರ ಸಂಖ್ಯೆ ೨೪. ನೂರಾ ಹದಿನಾರರಷ್ಟಿರುವ ಲಿಂಗವಂತರು ಬಿಟ್ಟರೆ ಒಂದು ಜಾತಿಯಾಗಿ ಮುಸ್ಲಿಮರ ಸಂಖ್ಯೆಯೇ ಅತಿ ದೊಡ್ಡದ್ದು. ಇದು ಬರೀ ಜಾತಿಯ ಪ್ರಶ್ನೆಯಲ್ಲ. ಇಸ್ಮಾಮಿಕ್ ಸಂವೇದನೆ ಮತ್ತು ಕನ್ನಡ ಭಾಷೆಗಳ ನಡುವಣ ತುಂಬ ಗಾಢ ಮುಖಾಮುಖಿ ಇದು. ಇನ್ನು ೧೯ನೇ ಶತಮಾನದಾಚೆಗೆ ಶೈಕ್ಷಣಿಕವಾಗಿ ಕನ್ನಡ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಿದವರೇ ಕ್ರೈಸ್ತರು. ೨೦ನೆ ಶತಮಾನಕ್ಕೆ ನಮ್ಮನ್ನು ಸಿದ್ದಮಾಡಿದ್ದೇ ಈ ಎರಡು ಸಂವೇದನೆಗಳು. ಭಾಷೆ ಮತ್ತು ಸಾಹಿತ್ಯದ ಹಂತದಲ್ಲಿ ಬಿಡಿ, ಬಿಜಾಪುರ, ಗುಲ್ಬರ್ಗಾ, ರಾಯಚೂರು, ಬೀದರ್‌ಗಳ ಇಸ್ಲಾಮಿಕ್ ವಾಸ್ತುಶಿಲ್ಪಗಳಿಲ್ಲದ ಕರ್ನಾಟಕ ಕರ್ನಾಟಕವೇ ಅಲ್ಲ. ಅದರ ಹಿಂದೂ ಪ್ರೇತ ರೂಪ. ಹಾಗೆಯೇ ಉತ್ತರ ಕನ್ನಡ – ದಕ್ಷಿಣ ಕನ್ನಡಗಳ ಕ್ರೈಸ್ತ ಚರ್ಚುಗಳಿಲ್ಲದ, ಆ ವಿಶಿಷ್ಟ ಸಂಗೀತಗಳಿಲ್ಲದ ಕರ್ನಾಟಕ ಹಿಂದುತ್ವದ ದುರ್ಬಲ ರೂಪ.

ಈ ನಿರ್ದಿಷ್ಟ ಸಂಗಮಗಳ ಪ್ರಸ್ತಾಪ ಚಿ.ಮೂ.ರಲ್ಲಿ ಇರದೇ ಇರುವುದಕ್ಕೆ ಸೈದ್ದಾಂತಿಕ ಕಾರಣಗಳಿವೆ. ಅವರಲ್ಲಿ ಕರ್ನಾಟಕ ಮಧ್ಯಯುಗದಲ್ಲಿ ನಿಂತು ಹೋಗಿದೆ. ಅವರು ಕನಸುಕಾಣುತ್ತಿರುವ ಕರ್ನಾಟಕ ಕದಂಬರ, ಹೊಯ್ಸಳರ ಚಾಲುಕ್ಯರ ಕಾಲದ್ದು. ಅದು ವಿಜಯನಗರ ಸಾಮ್ರಾಜ್ಯವನ್ನು ಹಿಂದೂ ಸಾಮ್ರಾಜ್ಯ ಪರಿಬಾಷೆಯಲ್ಲಿ ವಿಶ್ಲೇಷಿಸುವ ಸೈದಾಂತಿಕ ಅಭ್ಯಾಸದ್ದು. ಆ ಸಾಮ್ರಾಜ್ಯದ ಅವನತಿ ಹಿಂದುತ್ವದ ಹಾಗೂ ಕನ್ನಡತ್ವದ ಜೋಡಿ ನಿರ್ನಾಮ ಎಂಬ ನಿಲುವಿನಿಂದ ಹೊರಟದ್ದು. ಹೀಗಾಗಿ ಕರ್ನಾಟಕ ಆಧುನಿಕ ಯುಗಕ್ಕೆ ಕಾಲಿಟ್ಟು ಪರಿವರ್ತನೆಯಾದ ಕ್ರಮಗಳ ಪ್ರಸ್ತಾಪಕ್ಕೆ “ ಕನ್ನಡ ಸಂಸ್ಕೃತಿ : ನಮ್ಮ ಹೆಮ್ಮೆ” ಕೃತಿಯಲ್ಲಿ ಜಾಗವೇ ಇಲ್ಲ.

ಈ ಪ್ರಕ್ರಿಯೆಯ ಗ್ರಹಿಕೆ ಸಮಕಾಲೀನ ಕರ್ನಾಟಕ ದೃಷ್ಟಿಯಿಂದ ತುಂಬ ಮುಖ್ಯವಾದದ್ದು. ಮತ್ತು ಕನ್ನಡ ಸಂಸ್ಕೃತಿಯ ಮೂಲ ಶಕ್ತಿರೂಪ ಇದು. ಇದನ್ನೆ ಡಾ. ಯು.ಆರ್. ಅನಂತಮೂರ್ತಿ ತಮ್ಮ ಮಹತ್ವದ ಪರಿಕಲ್ಪನೆಯಾದ “ಜೀರ್ಣಾಗ್ನಿ”ಯ ಮೂಲಕ ವಿವರಿಸುತ್ತಾರೆ. ಈ ಪರಿಕಲ್ಪನೆ ಸೂಚಿಸುತ್ತಿರುವ ವಿದ್ಯಮಾನಗಳ ಬಗೆಗೆ ನನಗೆ ಸಂಪೂರ್ಣ ಸಮ್ಮತವಿದೆಯಾದರೂ ಆ ಪದದ ಅರ್ಥ ವ್ಯಾಪ್ತಿಯ ಬಗೆಗೆ ಕೊಂಚ ಆತಂಕವಿದೆ. ಹೊರಗಿನವು ಜೀರ್ಣವಾಗಿ ಪೂರಾ ಇಲ್ಲವಾಗುತ್ತವೆಯೊ. ಇಲ್ಲ ತಮ್ಮ ಸಹ ಅಸ್ತಿತ್ವವನ್ನು ಮುಂದುವರೆಸುತ್ತವೆಯೊ ಎಂಬ ಪ್ರಶ್ನೆ ಅದು ಆದರೆ. ಹೊರಗಿನವು ವಿಲೀನವಾಗುವ ಒಂದು ವ್ಯವಸ್ಥೆ ಎಂಬರ್ಥದಲ್ಲಿ ಈ ಪರಿಕಲ್ಪನೆ ಪೂರ್ಣವಾಗಿ ಗ್ರಾಹ್ಯ. ಈ ದೃಷ್ಟಿಯಿಂದ ಬಹುಮುಖೀ ವಲಯಗಳ ಕರ್ನಾಟಕದ ಪರಿಕಲ್ಪನೆಯನ್ನು ಅನಂತಮೂರ್ತಿ ತಮ್ಮ ಚಿಂತನೆಯಲ್ಲಿ ತುಂಬ ಖಚಿತವಾಗಿ ವಿವರಿಸುವುದು ಕನ್ನಡ ರಾಷ್ಟ್ರೀಯತೆಯ ಮುಖ್ಯ ದಾಖಲೆಗಳಲ್ಲಿ ಒಂದು. ಕನ್ನಡ ರಾಷ್ಟ್ರೀಯತೆಯ ವಾಗ್ವಾದ ಇದುವರೆಗೆ ನಡೆದಿರುವುದೇ ಸಾಂಸ್ಕೃತಿಕ ರಾಷ್ಟ್ರೀಯತೆಯ ಪರಿಭಾಷೆಯಲ್ಲಿ. ಸಂಸ್ಕೃತಿಯ ಮೂಲ ರೂಪಗಳನ್ನು ಅರ್ಥೈಸುವ ಪ್ರಯತ್ನದಲ್ಲಿ ಈ ವಾಗ್ವಾದ ಮುನ್ನಡೆದಿದೆ. ಸಾಂಸ್ಕೃತಿಕ ರಾಷ್ಟ್ರೀಯತೆಯ ವಾಗ್ವಾದ ಮುನ್ನಡೆದಿದೆ. ಸಾಂಸ್ಕೃತಿಕ ರಾಷ್ಟ್ರೀಯತೆಯ ವಾಗ್ವಾದ, ಡಾ. ಅನಂತಮೂರ್ತಿಯವರದೂ ಸೇರಿದಂತೆ. ನೆನಪುಗಳ ಪುನರ್ ವಿಂಗಡಣೆಯಾದ್ದರಿಂದ ಅದಕ್ಕೊಂದು ಅಮೂರ್ತ ಗುಣ ಬಂದುಬಿಡುತ್ತದೆ.

ಆದರೆ, ಈ ಚರ್ಚೆಗೆ ಇನ್ನೊಂದು ವಿಶಿಷ್ಟ ಆಯಾಮ ಬಂದಿರುವುದು ಕರ್ನಾಟಕದ ಬಗೆಗಿನ ಲಂಕೇಶರ ಅಲೋಚನೆಗಳಿಂದ. ಸಾಂಸ್ಕೃತಿಕ ರಾಷ್ಟ್ರೀಯತೆಯ ಪರಿಭಾಷೆಯಲ್ಲಿ ಮಾತನಾಡದೆ, ನೆನಪುಗಳ ವಿಂಗಡಣೆಗೆ, ವಿಶ್ಲೇಷಣೆಗೆ ಹೋಗದೆ ಆಧುನಿಕ ಜಗತ್ತಿನ ಸಾಮಾಜಿಕ ರಾಜಕಾರಣದ ಚೌಕಟ್ಟಿನಲ್ಲಿ ಅವರು ಮಾತನಾಡುತ್ತಾರೆ. ಇಲ್ಲಿ ಚರ್ಚೆಗೆ ತಕ್ಷಣದ ರಾಜಕೀಯ, ಸಾಮಾಜಿಕ ಉಪಯುಕ್ತತೆ ಮತ್ತು ಮೂರ್ತತೆ ಎರಡೂ ಒಟ್ಟಿಗೇ ಒದಗಿಬರುತ್ತವೆ. ಕರ್ನಾಟಕವೆಂದರೆ ಬೇರೆ ಬೇರೆ ಭಾಷೆಗಳನ್ನು ಮಾತನಾಡುವ ಅಲ್ಪಸಂಖ್ಯಾಂತರಿದ್ದಾರೆ, ಅವರ ಹಿತರಕ್ಷಣೆಯಲ್ಲೇ ಈ ರಾಜ್ಯದ ಹಿತವಿದೆ ಎಂಬ ತತ್ ಕ್ಷಣಿಕ ಸತ್ಯದ ಗ್ರಹಿಕೆಯಿಂದ ಅವರ ಚಿಂತನೆ ಹೊರಡುತ್ತದೆ. ನನ್ನ ಸದ್ಯದ ಚರ್ಚೆಯ ಪರಿಧಿಯಿಂದ ಅನಂತಮೂರ್ತಿ – ಲಂಕೇಶ್‌ರ ವಿಚಾರಗಳು ಅಷ್ಟು ವಿವರವಾದ ಚರ್ಚೆಗೆ ಒಳಗಾಗುವುದಿಲ್ಲ. ಇಲ್ಲಿ ನನ್ನ ಗಮನವೇನಿದ್ದರೂ ಆಲೂರರು ಮತ್ತು ಚಿದಾನಂದಮೂರ್ತಿಗಳ ಪಠ್ಯದ ಬಗ್ಗೆ ಮಾತ್ರ.

ಇಲ್ಲಿ ಏಳುವ ಮುಖ್ಯ ಪ್ರಶ್ನೆ ಎಂದರೆ ಕರ್ನಾಟಕವೆಂಬ ಸಾಂಸ್ಕರತಿಕ ರಾಷ್ಟ್ರೀಯತೆಯನ್ನು ಸ್ವೀಕರಿಸುವ ಕ್ರಮ ಹೇಗೆ ಎಂಬುದು. ಇಲ್ಲಿ ಮೂರು ಮಾದರಿಗಳನ್ನು ಕಾಣಬಹುದು. ಒಂದು, ಕರ್ನಾಟಕವನ್ನೆ ಅಲಾಯದವಾಗಿಟ್ಟು ಅದೇ ಏಕಮಾತ್ರ ವಾಸ್ತವ, ಭಾಷಾಕೇಂದ್ರಿತ ವಾಸ್ತವ ಎಂದು ನೋಡುವ ಆತಂಕ ಕೇಂದ್ರಿತ ರಾಷ್ಟ್ರೀಯತೆ, ಈವರೆಗೆ ಚರ್ಚಿಸಲಾಗಿರುವ ಕರ್ನಾಟಕವೆಂಬ ಸಾಂಸ್ಕೃತಿಕ ವಾಸ್ತವವನ್ನು ನಿರಾಕರಿಸಿ ಅಮೂತ್ವಾದ ಭಾಷೇತರ, ಸಂಸ್ಕೃತೇತರ ಆಧುನಿಕ ರಾಜಕೀಯ ಘಟಕಗಳಾದ ವರ್ಗವಾಸ್ತವವನ್ನೊ, ಇಲ್ಲವೇ ಆಡಳಿತಾತ್ಮಕವಾಗಿ ಅನುಕೂಲಕರವಾದ ಘಟನೆಗಳನ್ನೂ ಮಾತ್ರ ಒಪ್ಪುವ ನಿಲುವು, ಮೂರನೆಯದು, ಕರ್ನಾಟಕ ಬಹುಮುಖೀ ವಾಸ್ತವವೆಂಬ ನಿಲುವು. ಕರ್ನಾಟಕವೆಂಬುದು ಸಾಂಸ್ಕೃತಿಕ ರಾಷ್ಟ್ರೀಯತೆಯ ಅಪೇಕ್ಷಣೀಯ ಅಭಿವ್ಯಕ್ತಿ, ಕರ್ನಾಟಕವೆಂಬುದು ನಿಜ. ಇಡೀ ಜಗತ್ತು ಆಧುನಿಕ ಬಂಡವಾಳಶಾಹಿಯ ಶೈಲಿಯಿಂದಾಗಿ ವಿಕಾರ ರೀತಿಯ ಏಕರೂಪೀಕರಣಕ್ಕೆ ಒಳಗಾಗುತ್ತಿದೆ. ಅದರ ವಿರುದ್ಧದ ಅಧಿಕೃತ ಪ್ರತಿಭಟನೆಗಳಲ್ಲೊಂದು ಕರ್ನಾಟಕತ್ವ, ಪಶ್ಚಿಮದ ನಾಗರೀಕತೆಯ ವಿಕಟವಿಟಗಣದ ವಿರುದ್ಧದ ಪ್ರತಿಭಟನೆ ಇದು. ಆಲೂರರಲ್ಲಿ ಇದು ತನ್ನ ಆಧ್ಯಾತ್ಮಿಕ ಪರಿಭಾಷೆಯಲ್ಲಿ ಪ್ರಾರಂಭವಾಗಿದೆ. ಅನಂತಮೂರ್ತಿ ಅವರಲ್ಲಿ ಅದು ತನ್ನ ಸಾಂಸ್ಕೃತಿಕ ರಾಷ್ಟ್ರೀಯತೆಯ ರೂಪದಲ್ಲಿ ಮುಂದುವರೆದಿದ್ದರೆ, ಲಂಕೇಶರ ವಿಚಾರಗಳಲ್ಲಿ, ಆಧುನಿಕ ಸೆಕ್ಯುಲರ್ ಸಾಮಾಜಿಕ ರಾಜಕಾರಣದ ಪರಿಕಲ್ಪನೆಗಳಲ್ಲಿ ಬೆಳೆದಿದೆ.

ಈ ನಿಲುವು ಪೊಳ್ಳು ವಿಶ್ವವಾದವಲ್ಲ. ಮತ್ತೆ ಆಲೂರರದೇ ಒಂದು ವಿಚಾರದ ಉಲ್ಲೇಖ ಅಗತ್ಯ: “ಇಷ್ಟೊಂದು ಗಹನ ವಿಚಾರದಲ್ಲಿ ಬೀಳುವುದಕ್ಕಿಂತಲೂ ಸುಸೂತ್ರವಾಗಿ ‘ಜಯಭಾರತ, ಜಯ ಭೂದೇವಿ’ ಎಂಬಿವೇ ಮುಂತಾಗಿ ಸಹಜವಾಗಿ ಗೋಚರವಾಗುವ ವ್ಯಾಪಕವಾದ ಕಲ್ಪನೆಗಳನ್ನೇಕೆ ಇಟ್ಟುಕೊಳ್ಳಕೂಡದು ಎಂದು ಕೆಲವರು ಕೇಳಬಹುದು ಅದಕ್ಕೆ ನಮ್ಮ ಉತ್ತರವೇನೆಂದರೆ, ಹಾಗೆ ಇಟ್ಟು ಕೊಳ್ಳುವುದು ಅಧ್ಯಾತ್ಮ ದೃಷ್ಟಿಯಿಂದ ಸಂಕುಚಿತವಾದದು, ಸನಾತನ ಸಂಸ್ಕೃತಿಯ ಸಂಪ್ರದಾಯಕ್ಕೆ ವಿರುದ್ಧವಾದುದು” (ಪು ೧೭೪)

ವಿಶಿಷ್ಟವಾಗದೆ ವಿಶ್ವಾತ್ಮಕವಾಗುವುದು ಸುಳ್ಳಾಗುತ್ತದೆ. ಕರ್ನಾಟಕ ತನ್ನೆಲ್ಲ ಭಾಷಾ ಸಮೂಹ, ಸಂಸ್ಕೃತಿಗಳು, ಆರ್ಥಿಕ – ರಾಜಕೀಯ ವಲಯಗಳಲ್ಲಿ ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದೆ. ಆದರೆ, ಅದಕ್ಕೆ ಪರಿಹಾರ ಅನ್ಯದ್ವೇಷದಲ್ಲಿಲ್ಲ, ಕ್ಷಾತ್ರಸ ಪರಿಭಾಷೆ ಇಲ್ಲಿ ತಪ್ಪು.

ವಿಶಿಷ್ಟವಾಗುವ ಮೂಲಕವೇ ವಿಶ್ವಾತ್ಮಕವಾಗುವುದು ತುಂಬ ಕಷ್ಟದ ದಾರಿ, ಆದರೆ, ತಕ್ಷಣದ ಆರೋಗ್ಯಕಾರೀ ರಾಜಕಾರಣದ ದೃಷ್ಟಿಯಿಂದ ಮಾತ್ರವಲ್ಲ, ನಿಜವಾದ ಮಾನವೀಯ ವಿಕಾಸದ ದೃಷ್ಟಿಯಿಂದ ಕೂಡಾ ಇದು ಸರಿಯಾದ ದಾರಿ.

(೧೯೯೨)
(೧೫..೯೨ ರಂದು ಬೆಂಗಳೂರಿನ ಸೆನೆಟ್ ಹಾಲ್ ನಲ್ಲಿ ಮಂಡಿಸಿದ ಪ್ರಬಂಧದ ಸಂಕ್ಷಿಪ್ತ ಪಾಠ)

* * *