ಇದನ್ನು ನಾನು ೧೯೮೬ರಲ್ಲಿ ಇಂಗ್ಲಿಷಿನಲ್ಲಿ ಬರೆದು ಚಿಕಾಗೋನಲ್ಲಿ ನಡೆದ ಒಂದು ಸೆಮಿನಾರಿನಲ್ಲಿ ಓದಿದ್ದು. ಈಗ ಕನ್ನಡಕ್ಕೆ ಇದನ್ನು ಭಾಷಾಂತರಿಸುತ್ತಿದ್ದಂತೆ ಕೆಲವು ಸಮಸ್ಯೆಗಳು ಎದುರಾದವು. ಕನ್ನಡ ತಿಳಿಯದವರಿಗೆಂದು ಕನ್ನಡ ಲೇಖಕರ ಬಗ್ಗೆ ಬರೆದ ಮಾತುಗಳು ತೀರಾ ಸರಳವಾಗಿ ಪರಿಚಯ ಮಾಡಿಕೊಡುವ ಮಾತುಗಳಾಗಿ ಕಂಡವು. ಆದರೂ ಇದೇ ಪ್ರಬಂಧದ ಧಾಟಿ ಧೋರಣೆಗಳ ದೃಷ್ಟಿಯಿಂದ ಈ ಮಾತುಗಳನ್ನು ಹಾಗೇ ಉಳಿಸಿಕೊಂಡಿದ್ದೆನೆ. ಓದುವಾಗ ಇದೊಂದು ಕೊಂಚ ಮುಜುಗರದ ವಿಷಯವಾಗಿ ಕಂಡರೆ ಓದುಗರು ನನ್ನನ್ನು ಮನ್ನಿಸಬೆಕು.

ಸುಮಾರು ಒಂದು ದಶಕದ ಹಿಂದೆ ಇದನ್ನು ಬರೆದಾಗ ಹಿರಿಯರಾದ ಮಾಸ್ತಿ ಕುವೆಂಪುರವರು ಬದುಕಿದ್ದರು. ನನ್ನ ತರುಣ ಮಿತ್ರರಾದ ಶ್ರೀಕೃಷ್ಣ ಆಲನಹಳ್ಳಿಯೂ ಬದುಕಿದ್ದರು. ಓದುಗರು ಇದನ್ನು ಗಮನಿಸಬೇಕು.

ನಾನು ಚಿಕಾಗೋನಲ್ಲಿ ಓದಿದ ಪಾಠ ಇಂಗ್ಲಿಶಿನಲ್ಲಿ ‘ಬಹುವಚನ’ ಎಂಬ ಭೋಪಾಲಿನ ಜರ್ನಲ್‌ನಲ್ಲಿ ಅಚ್ಚಾಗಿತ್ತು. ಹೀಗಾಗಿ ಇಂಗ್ಲಿಶಿನ ಈ ಲೇಖನ ಜರ್ಮನ್ ಭಾಷೆಗೆ ಅನುವಾದವಾಗಿ ಎಲ್ಲೋ ಪ್ರಕಟವಾಗಿದೆಯೆಂದು ಕೇಳಿದ್ದೇನೆ. ಇಂಗ್ಲಿಶಿನಲ್ಲೂ ಈ ಲೇಖನ ಭಾರತದ ಬಗ್ಗೆ ಬಂದಿರುವ ಸಂಕಲನವೊಂದರಲ್ಲಿ ಈಗಾಗಲೇ ಅಚ್ಚಾಗಿದೆಯೆಂದೂ ಕೇಳಿದ್ದೇನೆ.

ಈ ಲೇಖನವನ್ನು ಓದದೆಯೂ ಊಹಾಪೋಹದ ಮೇಲೆ ನನ್ನ ಹಲವು ‘ಕ್ರಾಂತಿಕಾರೀ’ ಸಹಲೇಖಕರು ನನ್ನನ್ನು ಟೀಕಿಸಿದ್ದಿದೆ. ಆದರೆ ನನ್ನ ಆಲಸ್ಯದಿಂದಾಗಿ ಈ ಲೇಖನವನ್ನು ಕನ್ನಡಕ್ಕೆ ಅನುವಾದ ಮಾಡಲು ಇಷ್ಟು ಕಾಲ ಬೇಕಾದ್ದರಿಂದ ನಾನು ಅವರಿಗೆ ಉತ್ತರಿಸಿಲ್ಲ.

ಈ ಲೇಖನವನ್ನು ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಓದಿದಾಗ ಮಿಲ್ಟನ್ ಸಿಂಗರ್‌ ಸಭೆಯಲ್ಲಿದ್ದರು. ಈಚೆಗೆ ತೀರಿಕೊಂಡ ಈ ಮಹಾನುಭಾವರು ಖ್ಯಾತ ಮಾನವಶಾಸ್ತ್ರಜ್ಞರು. ದಿವಂಗತ ಎ.ಎಕ. ರಾಮಾನುಜನ್ನರ ಗುರುಗಳು. ಅವರು ನನ್ನ ಮಾತುಗಳಿಗೆ ಅರ್ಥಪೂರ್ಣವಾಗಿ ಪ್ರತಿಕ್ರಿಯಿಸಿದ್ದರು ಎಂಬುದು ನನಗೆ ಈ ಲೇಖನವನ್ನು ಕನ್ನಡಕ್ಕೆ ಮಾಡಲು ಇರುವ ಪ್ರೇರಣೆಗಳಲ್ಲಿ ಒಂದಾಗಿದೆ.

ಕನ್ನಡದ ಒಬ್ಬ ಲೇಖಕನಾಗಿ, ಕಥೆ ಕಾದಂಬರಿಗಳಲ್ಲಿ ತನ್ನ ಲೋಕವನ್ನು ಗ್ರಹಿಸಲು ಕಲಿತ ಒಬ್ಬ ಲೇಖಕನಾಗಿ, ನಾನು ಮಾತಾಡಲಿದ್ದೇನೆ. ಯಾವ ಕಾದಂಬರಿಕಾರನಿಗೂ, ಭಾರತದಲ್ಲಿದ್ದು ಬರೆಯುವವನಿಗಂತೂ, ತನ್ನ ಸಂಸ್ಕೃತಿಯ ಬಗ್ಗೆ ನಿರ್ಣಾಯಕವಾಗಿ ಮಾತಾಡುವುದು ಸಾಧ್ಯವಿಲ್ಲ. ಓದುಗರಿಗೆ ಹಿತವಾಗುವಂತೆ ಆಶಾದಾಯಕವಾಗಿ ಅವನು ಬರೆದರೂ ಸುಳ್ಳಾಗುತ್ತಾನೆ; ನನ್ನ ಸಂಸ್ಕೃತಿ ನಾಶವಾಗಲು ಯೋಗ್ಯ ಎಂಬ ತಿರಸ್ಕಾರದಲ್ಲಿ ಬರೆದರೂ ಲೇಖಕ ಸುಳ್ಳಾಗುತ್ತಾನೆ. ಆರ್.ಕೆ.ನಾರಾಯಣರು “ಇಂಡಿಯಾ ಹೇಗೋ ಸಾಗುತ್ತದೆ” ಎಂದಿದ್ದಾರಂತೆ. ಯಾವುದರಿಂದಲೂ ದುಮ್ಮಾನಗೊಳ್ಳದಂತೆ, ತನ್ನ ಸಮಾಧಾನ ಕೆಡಿಸಿಕೊಳ್ಳದಂತೆ, ಹಿತವಾಗಿ, ಆದರೆ ಸುಳ್ಳಾಗದಂತೆ, ಬರೆಯುವ ಲೇಖಕ ನಾರಾಯಣರು. ಇಂಡಿಯಾ ಒಟ್ಟಿನಲ್ಲಿ ಚೆನ್ನಾಗಿಯೇ ಇದೆ ಎಂಬ ಧ್ವನಿ ನಾರಾಯಣರ ಮಾತಿನಿಂದ ಹುಟ್ಟಿದಾಗ ಮೃದು ಹಾಸ್ಯದಲ್ಲಿ ಎಲ್ಲವನ್ನೂ ಗ್ರಹಿಸಬಲ್ಲ ಅನುದ್ರಿಕ್ತವಾದ ಅದರ ಧೋರಣೆ ನಮಗೆ ಎದುರಾಗುತ್ತದೆ. ಅವರ ಬರವಣಿಗೆಯ ಕಾಮಿಕ್‌ ಲೋಕದಲ್ಲಿ ತನ್ಮಯವಾಗಿದ್ದಾಗ ಮಾತ್ರ ನಾವು ನಾರಾಯಣರನ್ನು ಒಪ್ಪಬಹುದು. ಆದರೆ ಮರುಕ್ಷಣವೇ ಅವರ ಮಾತು ನಾವು ನಿತ್ಯ ಎದುರಾಗುವ ನಿಜ ಲೋಕದಲ್ಲಿ ವಾದಗ್ರಸ್ತವೆನ್ನಿಸಿ ಬಿಡುತ್ತದೆ. ತಾನು ಕಟ್ಟಿಕೊಡುವ ಲೋಕದಲ್ಲಿ ಮಾತ್ರ ಅಂಥ ಮಾತನ್ನಾಡುವ ಅಧಿಕಾರ ಪಡೆದ ಲೇಖಕ ತನ್ನ ಕಾಣ್ಕೆಯನ್ನು ವಾದಕ್ಕೆ ಒಡ್ಡಲು ಇಚ್ಚಿಸುವುದಿಲ್ಲ – ನಾರಾಯಣರಂತೂ ಖಂಡಿತ ಇಚ್ಛಿಸುವುದಿಲ್ಲ.

ಅದೇ ವಾದಕ್ಕೆ ನಿಲ್ಲುವ ನೈಪಾಲರಂತಹ ಲೇಖಕರು ನಾರಾಯಣರಿಗೆ ತದ್ವಿರುದ್ಧವಾಗಿ ಭಾರತದ ಸ್ಥಿತಿಯನ್ನು ಗ್ರಹಿಸುತ್ತಾರೆ. (ವಾದದ ಭೂಮಿಕೆಯಾಗದಂತೆ ಸರ್ವಗ್ರಾಹಿಯಾಗಿ ನೋಡಿ ಬರೆಯುವ ನೈಪಾಲರ ಈಚಿನ ಮಿಲಿಯನ್ ಮ್ಯೂಟಿನೀಸ್ ಇದಕ್ಕೆ ಅಪವಾದ.) ತಮ್ಮ ಹಿಂದಿನ ಕೃತಿಗಳಾದ Area of Darkness ಮತ್ತು Wounded Civilizationಗಳಲ್ಲಿ ನಾರಾಯಣರು ಹಾಸ್ಯದಲ್ಲಿ ಗ್ರಹಿಸುವ ಭಾರತವನ್ನು ನೈಪಾಲರು ಅಸಹನೀಯ ನರಕವೆಂದು ಭಾವಿಸುತ್ತಾರೆ. ಯಾವತ್ತು ಭಾರತ ಯುರೋಪಿನಂತೆ ಆಧುನಿಕವಾಗುತ್ತದೆಂದು ಕ್ರೋಧದಲ್ಲಿ ಕೇಳುತ್ತಾರೆ. ಭಾರತ ಸಭ್ಯ ನಾಗರಿಕತೆಯಾಗಿ ಉಳಿದಿಲ್ಲ; ತನ್ನ ಭೂತಕಾಲದಲ್ಲಿ ರಮಿಸುತ್ತ ಕೊಳೆಯುತ್ತಿದೆ. ನಿರಾದ್ ಚೌಧುರಿಯವರ ವಾದವೂ ಈ ಬಗೆಯದೇ.

ವಾಗ್ವಾದದ ಸಂದರ್ಭದಲ್ಲಿ ಮಾತ್ರ ನೈಪಾಲರು ಹೀಗೆ ಮೊಂಡು ಹಠ ಮಾಡಿಯಾರು. ಆದರೆ ಕಾಲ್ಪನಿಕ ಶಕ್ತಿ ಪಡೆದ ತಮ್ಮ ಅಂತಃಕರಣವನ್ನು ತೊಡಗಿಸಿಕೊಂಡು ನೈಪಾಲರು ಬರೆಯುವುದಾದರೆ ಅವರಿಗೆ ಈ ಅತಿರೇಕದ ನಿಲುವು ಸಾಧ್ಯವಾಗಲಾರದು. ಆದ್ದರಿಂದಲೇ ಅವರ ಮಿಲಿಯನ್ ಮ್ಯೂಟಿನೀಸ್ ಕಾದಂಬರಿಯಲ್ಲವಾದರೂ, ಕಾದಂಬರಿಕಾರ ಬರೆಯಬಹುದಾದ ಪುಸ್ತಕ.

ನಮಗೆಲ್ಲರಿಗೂ ಇರುವ ಸಮಸ್ಯೆ ಇದು : ನಾವು ಹೇಗೆ ಭಾವಿಸುತ್ತೇವೆ, ಹೇಗೆ ವಿಚಾರ ಮಾಡುತ್ತೇವೆ ಎಂಬುದರಲ್ಲಿ ವ್ಯತ್ಯಾಸ ಇರಬಾರದು – ಆದರೆ ಇರುತ್ತದೆ. ಈಗಿನ ನನ್ನ ಮನಸ್ಥಿತಿಯನ್ನೇ ಇದಕ್ಕೆ ಉದಾಹರಣೆಯಾಗಿ ನಿಮ್ಮೆದುರು ಒಡ್ಡಿಕೊಳ್ಳಲಿದ್ದೇನೆ. ನಾನು ಈ ಲೇಖನ ಬರೆಯುತ್ತಿದ್ದಂತೆ ನನ್ನ ಕ್ರಾಂತಿಕಾರಿ ಸ್ನೇಹಿತರ ಜೊತೆ ಒಂದು ಗೊಂದಲಮಯ ವಾಗ್ವಾದದಲ್ಲಿ ಪಾಲುಗೊಂಡಿದ್ದೇನೆ. ನಾನು ಕಾಲೇಜು ಓದಿದ ಶಿವಮೊಗ್ಗೆಯಿಂದ ಎಂಬತ್ತೈದು ಕಿಲೋಮೀಟರ್ ದೂರವಿರುವ “ಚಂದ್ರಗುತ್ತಿ” ಎಂಬ ಹಳ್ಳಿಯಲ್ಲಿ ನಡೆದೊಂದು ಘಟನೆ ಈ ವಾಗ್ವಾದಕ್ಕೆ ಕಾರಣ. ಪ್ರತಿ ವರ್ಷ ಮಾರ್ಚ್‌ತಿಂಗಳಲ್ಲಿ ಎಲ್ಲಾ ವಯಸ್ಸಿನ ಹೆಂಗಸರೂ, ಗಂಡಸರೂ ತಾವೂ ಹೊತ್ತ ಹರಕೆಯನ್ನು ಸಲ್ಲಿಸಲು ದೇವತೆಗೆ ಬೆತ್ತಲೆಯಲ್ಲಿ ಪೂಜೆ ಮಾಡುತ್ತಾರೆ. ವರದಾ ನದಿಯಲ್ಲಿ ಮೊದಲು ಪ್ರಾತಃಕಾಲ ಮುಳುಗಿ ಎದ್ದು, ಮೈ ಮೇಲೆ ದೇವತೆಯ ಆಹ್ವಾನ ಆಗಲು ಕಾದು, ಸುಮಾರು ಐದು ಕಿಲೋಮೀಟರ್ ದೂರ ಓಡುತ್ತಲೇ ಎಂಟುನೂರು ಮೀಟರ್ ಎತ್ತರದ ಒಂದು ಗುಡ್ಡವನ್ನು ಹತ್ತಿ ಅಲ್ಲಿರುವ ರೇಣುಕಾಂಬೆಯನ್ನು ಬೆತ್ತಲೆಯಲ್ಲಿ ಪೂಜಿಸುತ್ತಾರೆ. ಹೋದ ತಿಂಗಳು ವಿಚಾರವಾದಿಗಳಾದ ಹಲವು ಗಂಡಸರು ಮತ್ತು ಹೆಂಗಸರು ಈ ‘ಹಿಂದುಳಿದ ಜಾತಿಯ’ ಜನರನ್ನು ಬೆತ್ತಲೆಪೂಜೆ ತಪ್ಪೆಂದೂ, ಅಮಾನವೀಯವೆಂದೂ ಒಲಿಸಿ ಬದಲಾಯಿಸಲು ಹೋಗಿದ್ದರು. ಸರಕಾರದ ಸಮಾಜ ಕಲ್ಯಾಣ ಇಲಾಖೆಯ ಪ್ರೋತ್ಸಾಹ ಮತ್ತು ಬೆಂಬಲ ಇವರಿಗಿತ್ತು. ಈ ಘಟನೆ ದೇಶಾದ್ಯಂತ ಪತ್ರಿಕಾ ಮಾಧ್ಯಮಗಳ ಗಮನವನ್ನು ಸೆಳೆದಿದ್ದರಿಂದ, ಹಲವು ಪತ್ರಕರ್ತರು ಅಲ್ಲಿಗೆ ಹೋಗಿದ್ದರು. ಕೆಲವರು ತಮ್ಮ ಕ್ಯಾಮರಾಗಳನ್ನೂ ತೆಗೆದುಕೊಂಡು ಹೋಗಿದ್ದರು. ಇದಕ್ಕೆ ಮೊದಲೇ ವಿಚಾರವಾದಿಗಳು ಮತ್ತು ದಲಿತರ ಸಂಘರ್ಷದ ಕ್ರಿಯಾಶೀಲರು ನಡೆಸುತ್ತಿದ್ದ ಎರಡು ವಾರಪತ್ರಿಕೆಗಳು ತಮ್ಮ ವರ್ಣರಂಜಿತ ಮುಖಪುಟಗಳ ಮೇಲೆ ಹಿಂದಿನ ವರ್ಷ ಬೆತ್ತಲೆಪೂಜೆ ಸಲ್ಲಿಸುತ್ತಿದ್ದವರ ಚಿತ್ರವನ್ನು ಪ್ರಕಟಿಸಿದ್ದವು. ಈ ಪತ್ರಿಕೆಗಳ ಒಳಪುಟಗಳಲ್ಲಿ ಬೆತ್ತಲೆ ಪೂಜೆ ನಡೆಸುವವರ ಅಮಾನವೀಯ ಮೂಢನಂಬಿಕೆಗಳನ್ನು ಖಂಡಿಸಿ ಬರೆದ ಲೇಖನಗಳು ಇದ್ದವು. ಈ ಲೇಖನಗಳನ್ನು ಬೆತ್ತಲೆಪೂಜೆ ಮಾಡುವವರಂತೂ ಓದುವುದು ಸಾಧ್ಯವಿರಲಿಲ್ಲ. ಅವರು ಅನಕ್ಷರಸ್ಥರು ಎಂಬುದೇನೂ ಈ ಲೇಖಕರಿಗೆ ಸಮಸ್ಯೆಯಾಗಿ ತೋರಿರಲಾರದು. ಯಾಕೆಂದರೆ ಸಮಾಜೋದ್ಧಾರದ ಅವರ ಕ್ರಾಂತಿಕಾರಕ ಘನೋದ್ದೇಶದ ಜೊತೆ ಜೊತೆಯಲ್ಲೇ, ಬೆತ್ತಲೆ ದೇಹಗಳನ್ನು ಮುಖಪುಟದ ಮೇಲೆ ವರ್ಣರಂಜಿತವಾಗಿ ಅಚ್ಚು ಹಾಕಿ ತಮ್ಮ ಪತ್ರಿಕೆಗಳ ಪ್ರಚಾರವನ್ನು ಬೆಳೆಸಿಕೊಳ್ಳುವುದೇ ಅವರ ಉದ್ದೇಶವಾಗಿರಬಹುದು ಎಂದು ನನಗೆ ಗುಮಾನಿ. ಇರಲಿ.

ಈ ನಿರಕ್ಷರರಾದ ದೈವನಿಷ್ಠರಿಗೂ ಮಧ್ಯಮ ವರ್ಗದ ವಿದ್ಯಾವಂತ ವಿಚಾರವಾದಿಗಳಿಗೂ ನಡುವೆ ಚಂದ್ರಗುತ್ತಿಯಲ್ಲಿ ನಡೆದ ಸಂಘರ್ಷ ಅನಿರೀಕ್ಷಿತವಾಗಿತ್ತು ಮಾತ್ರವಲ್ಲ; ಕ್ರೂರವೂ ಆಗಿತ್ತು. ‘ದಯಮಾಡಿ ಬಟ್ಟೆಗಳನ್ನು ತೊಡಿ’ ಎಂದು ಓಲೈಸುತ್ತಾ ನದಿಯ ದಂಡೆಯ ಮೇಲೆ ಕೋಟೆಯಂತೆ ಅಡ್ಡ ನಿಂತ ವಿಚಾರವಾದಿಗಳನ್ನು ನೂಕಿ, ಸೀಳಿ, ‘ಬ್ಯಾಕ್ವರ್ಡ್‌ಕಾಸ್ಟ್’ ಜನರು ಆವೇಶದಲ್ಲಿ ಬೆತ್ತಲೆಯಾಗಿಯೇ ಓಡಿಬಿಟ್ಟರು. ಹುಚ್ಚು ಹಿಡಿದವರಂತೆ ತನ್ಮಯರಾಗಿ ಬೆಟ್ಟವನ್ನು ಇವರು ಏರಿಯಾ ಬಿಟ್ಟರು. ಇವರಲ್ಲಿ ಕೆಲವು ಉಗ್ರ ವ್ರತಿಗಳು ಕ್ರೌರ್ಯಕ್ಕೂ ಹಿಂದೆಗೆಯಲಿಲ್ಲ. ಪೊಲೀಸ್ ಇಲಾಖೆಯ ಒಬ್ಬ ಡಿ. ಎಸ್ಪಿಯವರ ಖಾಕಿ ಸಮವಸ್ತ್ರವನ್ನು ಒತ್ತಾಯಪೂರ್ವಕವಾಗಿ ಕಿತ್ತೆಸೆದು, ಉಳಿದ ಬೆತ್ತಲೆ ಹರಕೆ ಹೊತ್ತವರ ಜೊತೆ ಮೆರವಣಿಗೆಯಲ್ಲಿ ಬೆತ್ತಲೆಯಾಗಿ ನಡೆಸಿಕೊಂಡು ಹೋದರು. ಸ್ತ್ರೀ ಪೊಲೀಸರನ್ನೂ ಅವರು ಬಿಡಲಿಲ್ಲ. ಜೋಗಿತಿಗಳೆಂದು ಕರೆಸಿಕೊಳ್ಳುವ ಪೂಜಾರಿಣಿಯರು ಸ್ತ್ರೀಪೋಲಿಸರ ಸಮವಸ್ತ್ರಗಳನ್ನು ಕಿತ್ತೆಸೆದರು. ಕುಂಕುಮ ಅರಿಸಿನಗಳನ್ನು ಬಳಿದುಕೊಂಡು ಮುಖದ, ಜಡೆಗಟ್ಟಿದ ಕೂದಲಿನ ಈ ಜೋಗಿತಿಯರು ಪೊಲೀಸ್ ಪ್ಯಾಂಟುಗಳನ್ನೂ ಅವರ ಹೆಲ್ಮೆಟುಗಳನ್ನೂ ಬಾವುಟದಂತೆ ಬೀಸುತ್ತ, ಕಬ್ಬಿಣದ ತ್ರಿಶೂಲಗಳನ್ನು ಗಾಳಿಯಲ್ಲಿ ತಿವಿಯುತ್ತ ಉನ್ಮಾದದಲ್ಲಿ ಕುಣಿದಾಡಿದರು. ಒಬ್ಬ ಪೊಲೀಸಿನಿ ಎಷ್ಟು ಅವಮಾನಿತಳಾದಳೆಂದರೆ ವರದಿಯ ಪ್ರಕಾರ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಅವಳಿಗೆ ಅನ್ನಿಸಿತಂತೆ. ಹತ್ತಿರದ ಊರುಗಳಿಂದಲೂ ದೂರದ ಊರುಗಳಿಂದಲೂ ಬಸ್ಸುಗಳಲ್ಲೂ ಲಾರಿಗಳಲ್ಲೂ ಬಟ್ಟೆಗಳನ್ನು ತೊಟ್ಟು ಬಂದಿದ್ದ ಭಕ್ತಾದಿಗಳು ಇಂಥಹ ಸಮೂಹ ಸನ್ನಿಯನ್ನು ರೇಣುಕಾಂಬಾ ದೇವತೆಯ ಕೋಪದಿಂದ ಉತ್ಪನ್ನವಾದದ್ದೆಂದೇ ಬಗೆದರು. ಜೊತೆಗೆ ಹಿಂಸೆಗೆ ಒಳಪಟ್ಟವರ ಬಗ್ಗೆ ಕನಿಕರಪಟ್ಟರು. ಆದರೆ ನೈವೇದ್ಯಕ್ಕೆ ತಂದ ತೆಂಗಿನಕಾಯಿಯನ್ನು ದೇವರ ಎದುರು ಚಚ್ಚುವಂತೆ ತಮ್ಮ ಬೆಲೆಯುಳ್ಳ ಕ್ಯಾಮರಾವನ್ನು ಚೂರು ಚೂರಾಗುವಂತೆ ಚಚ್ಚಿಸಿಕೊಂಡ ಪೋಟೋಗ್ರಾಫರರ ಬಗ್ಗೆ ಯಾರಿಗೂ ಕರುಣೆ ಹುಟ್ಟಲಿಲ್ಲ.

ಈ ಘಟನೆಗಳ ಬಗ್ಗೆ ನನ್ನ ವೈಯಕ್ತಿಕ ಪ್ರತಿಕ್ರಿಯೆಯನ್ನು ಪ್ರಾತಿನಿಧಿಕವೆಂದು ತಿಳಿಯಬಾರದು. ಯಾಕೆಂದರೆ ಕಥೆಗಾರನಾಗಿಯೂ, ಒಬ್ಬ ನಾಗರಿಕನಾಗಿಯೂ ನಮ್ಮ ಸಂಸ್ಕೃತಿಯಲ್ಲಿ ಹುಟ್ಟಿಕೊಳ್ಳುವ ಈ ಬಗೆಯ ತಿಕ್ಕಾಟಗಳಿಗೆ ನನ್ನ ಪ್ರತಿಕ್ರಿಯೆ ಸಮಸ್ಯಾತ್ಮಕವಾದದ್ದಾಗಿರುತ್ತದೆ. ಇಪ್ಪತ್ತು ವರ್ಷಗಳ ಕೆಳಗೆ ನನ್ನ ಮೊದಲ ಕಾದಂಬರಿ ಸಂಸ್ಕಾರ ಬರೆದಾಗ ನನ್ನ ನಿಲುವುಗಳು ಇವತ್ತಿನ ನನ್ನ ಭಾವನೆಗಿಂತ ಹೆಚ್ಚು ‘ವಿಚಾರವಾದಿ’ ಆಗಿದ್ದಿರಬಹುದು. ಆ ದಿನಗಳಲ್ಲಿ ‘ವಿಚಾರವಾದಿ’ ನಿಲುವಿನಿಂದಲೇ ನಾನು ಸಾಂಸ್ಕೃತಿಕವಾಗಿಯೂ, ರಾಜಕೀಯವಾಗಿಯೂ ಪ್ರತಿಭಟಿಸಲು ಮುಂದಾಗುತ್ತಿದ್ದೆ. ಆದರೆ ಆ ದಿನಗಳಲ್ಲೂ ಧಾರ್ಮಿಕ ಜಗತ್ತಿನ ಅನುಭಾವೀ ಪರಂಪರೆಯಿಂದ ಭಾವವಶವಾಗಿ ಬಿಡಬಲ್ಲವನೂ ಆಗಿ ನಾನು ಉಳಿದಿದ್ದೆ. ಆದ್ದರಿಂದ ನನ್ನ ಜಾಗೃತ ಇಚ್ಛೆಯನ್ನು ಮೀರಿ ಆ ದಿನಗಳಲ್ಲೂ ನನ್ನ ಬರವಣಿಗೆಯಲ್ಲಿ ಈ ಭಾವುಕತೆ ಇಣುಕಿದ್ದಿದೆ ಎಂದು ಈಗ ನನಗೆ ಅನ್ನಿಸುವುದಿದೆ. ಆ ಬಗ್ಗೆ ನನಗೆ ವಿಷಾದವಿಲ್ಲ.

ನನ್ನ ಎರಡನೆಯ ಕಾದಂಬರಿ ಭಾರತೀಪುರದಲ್ಲಾದರೋ ಪ್ರಜ್ಞಾಪೂರ್ವಕವಾದ ‘ವಿಚಾರವಾದಿ’ ನಿಲುವಿನಿಂದಲೇ ಬರೆಯುವದೆದು ನಿಶ್ಚಯಿಸಿ ಹೊರಟಿದ್ದೆ. ಪಾಶ್ಚಾತ್ಯ ವಿದ್ಯಾಭ್ಯಾಸ ಪಡೆದ ನನ್ನ ಕಾದಂಬರಿಯ ನಾಯಕ ಜಗನ್ನಾಥ ತನ್ನ ದೇವಸ್ಥಾನದ ಕಿರುಪಟ್ಟಣವಾದ ಭಾರತೀಪುರಕ್ಕೆ ಹಿಂದಿರುಗುತ್ತಾನೆ. ಅಂತಹ ಜಗತ್ತಿನಲ್ಲಿ ತನ್ನ ವ್ಯಕ್ತಿತ್ವಕ್ಕೆ ಸ್ಪಷ್ಟ ರೂಪ ಕೊಡಲು ಯತ್ನಿಸುತ್ತಾನೆ. ತನ್ನ ಬಾಲ್ಯದ ಸ್ಮೃತಿಗಳನ್ನು ಹೊತ್ತ ಈ ಪಟ್ಟಣದಲ್ಲಿ ತನ್ನನ್ನು ಸಂಪೂರ್ಣ ತೊಡಗಿಸಿಕೊಂಡು ಒಬ್ಬ ನೈಜ ಮನುಷ್ಯನಾಗಲು ಬಯಸುತ್ತಾನೆ. ಅಂದರೆ ಈ ಪಟ್ಟಣದ ನಿವಾಸಿಗಳ ಆರ್ಥಿಕ ಜೀವನವನ್ನೂ ಭಾವಜೀವನವನ್ನೂ ಕಟ್ಟುವ ಸ್ಥಳದ ದೇವರ ಪ್ರಭೆಯನ್ನು ನಾಶಮಾಡದ ಹೊರತು ಹೀಗೆ ಎಲ್ಲರೂ ಗಟ್ಟಿಯಾಗಿ ಅವರವರ ಅದೃಷ್ಟಕ್ಕೆ ಎದುರಾಗುವುದು ಅಸಾಧ್ಯವೆಂದು ಮನಗಾಣುತ್ತಾನೆ.

ಕೆಲವು ಶತಮಾನಗಳ ಕೆಳಗೆ ಈ ಮಂಜುನಾಥ ದೇವರನ್ನು ‘ಭೂತರಾಯ’ ಎಂಬ ದೆವ್ವದ ಅಧಿಪತಿಯಾಗಿ ಪ್ರತಿಷ್ಠಾಪಿಸಲಾಗಿತ್ತು. ಸ್ಥಳೀಯ ದೇವತೆಯಾದ ಭೂತರಾಯ ಈಗ ಅಸ್ಪೃಶ್ಯರೆನಿಸಿಕೊಂಡ ಸ್ಥಳದ ಪೂರ್ವ ನಿವಾಸಿಗಳ ದೈವವಾಗಿದ್ದ. ಈ ಸಾಂಸ್ಕೃತಿಕ ವಸಾಹತುಶಾಹಿಯನ್ನು ಕೊನೆಗಾಣಿಸಲೆಂದು ಜಗನ್ನಾಥ ಮೊದಲು ಈ ದೇವಸ್ಥಾನದ ಪುರಾಣಪ್ರಭೆಯನ್ನು ಭಗ್ನಗೊಳಿಸಲು ಯತ್ನಿಸುತ್ತಾನೆ. ಜಾತ್ರೆಯ ದಿವಸ ಅಸ್ಪೃಶ್ಯರನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗುವುದರ ಮುಖಾಂತರ ಸ್ಥಳೀಯ ದೇವತೆಯಾದ ಭೂತರಾಯನನ್ನು ಮಂಜುನಾಥನ ಯಜಮಾನಿಕೆಯಿಂದ ಬಿಡುಗಡೆ ಮಾಡುವುದು ಅವನ ಉದ್ದೇಶ. ಹೀಗೆ ಅಸ್ಪೃಶ್ಯರು ದೇವಸ್ಥಾನ ಪ್ರವೇಶಿಸಿದರೆ ರಕ್ತಕಾರಿ ಸಾಯುವರೆಂಬ ನಂಬಿಕೆಯನ್ನು ಜಾತ್ರೆಯಲ್ಲಿ ಎಲ್ಲಾ ಜನರೆದುರು ನಾಶಮಾಡುವುದೂ ಈ ಉದ್ದೇಶದ ಇನ್ನೊಂದು ಮುಖ್ಯ ಅಂಶ.

ಇದಕ್ಕಾಗಿ ಅಸ್ಪೃಶ್ಯರನ್ನು ತಯಾರು ಮಾಡಲು ಅವನು ಕೈಗೊಳ್ಳುವ ಕ್ರಿಯೆಗಳೆಲ್ಲವೂ ತಾನು ಸ್ವಂತ ಜೀವನದಲ್ಲಿ ಜಾತಿರಹಿತನಾಗುವ ದಾರುಣವಾದ ಸಂಕಷ್ಟಗಳ ಕ್ರಿಯೆಯೂ ಆಗುತ್ತದೆ. ಅವನನ್ನು ದೇವಾಲಯದ ಒಳಗೆ ಒಯ್ಯುವ ಮುಂಚೆ – ಅಂದರೆ ಸಮುದಾಯಕ್ಕೆ ಸಂಕೇತವಾದ ದೇವಸ್ಥಾನದ ಪ್ರಭೆಯನ್ನು ನಾಶಮಾಡುವುದಕ್ಕಿಂತ ಮುಂಚೆ – ತನ್ನ ಕುಟುಂಬದ ಪಾವಿತ್ರ್ಯದ ಸಂಕೇತವಾದ ಸಾಲಿಗ್ರಾಮದ ಪ್ರಭೆಯನ್ನು ಕಳೆದುಕೊಳ್ಳಲು ಜಗನ್ನಾಥ ಹವಣಿಸುತ್ತಾನೆ. ಈ ಸಾಲಿಗ್ರಾಮಕ್ಕೆ ತನ್ನ ಕುಟುಂಬದ ಹಲವು ತಲೆಮಾರುಗಳ ಶ್ರದ್ಧೆ ಯಾವತ್ತೂ ಆರದ ನಂದಾದೀಪವಾಗಿ ಉರಿದಿದೆ. ಈ ಸಾಲಿಗ್ರಾಮವನ್ನು ಅವನು ತನ್ನ ಅಂಗೈಯಲ್ಲಿಟ್ಟು ಮನೆಯಿಂದ ಹೊರಗೆ ಬರುತ್ತಾನೆ. ಕಂಪೌಂಡಿನಿಂದ ಹೊರಗೆ ನಿಂತ ಅಸ್ಪೃಶ್ಯರತ್ತ ನಡೆಯಲು ತೊಡಗುತ್ತಾನೆ. ಇದನ್ನು ಅವನ ರಕ್ತಸಂಬಂಧಿಗಳು, ಮನೆಯಾಳುಗಳು ಭಯಚಕಿತರಾಗಿ ನೋಡುತ್ತಾರೆ; ಯಾಕೆಂದರೆ ಈ ಸಾಲಿಗ್ರಾಮವನ್ನು ಯಾರೂ ಹೊಸಲುದಾಟಿಸಿ ಮನೆಯಿಂದ ಹೊರಗೆ ಒಯ್ದದ್ದಿಲ್ಲ; ಹೀಗೆ ಮೈಲಿಗೆ ಮಾಡಿದ್ದಿಲ್ಲ. ಇಡೀ ಸನ್ನಿವೇಶ ಕ್ಷುಬ್ಧಗೊಳ್ಳುತ್ತದೆ.

ಜಗನ್ನಾಥನಿಗೆ ಅಲ್ಲಿ ನೆರೆದ ಎಲ್ಲ ಜನರ ಕಣ್ಣಲ್ಲಿ ಇದನ್ನು ಸ್ಥಾಪಿಸಬೇಕಾಗಿದೆ: ಈ ದುಂಡಗಿನ ವಸ್ತು ಒಂದು ಶಿಲೆ ಮಾತ್ರ, ಪವಿತ್ರ ವಸ್ತುವಲ್ಲ. ಆದರೆ ವಿಪರ್ಯಾಸವೆಂದರೆ, ಹಲವು ಜಾತಿಗಳಿಗೆ ಸೇರಿದ ತನ್ನ ಆಳುಗಳೂ ಮತ್ತು ತನ್ನ ಸಂಬಂಧಿಗಳೂ ಭಯಚಕಿತರಾಗಿ ಈ ತನ್ನ ಕ್ರಿಯೆಯನ್ನು ದಿಟ್ಟಿಸುವ ಪರಿಯೇ ತಾನು ಕೇವಲ ಕಲ್ಲೆಂದು ಸ್ಥಾಪಿಸಲು ಹೊರಟಿದ್ದನ್ನು ಸಾಲಿಗ್ರಾಮವನ್ನಾಗಿ ಮಾಡಿಬಿಡುತ್ತದೆ. ಅಂದರೆ ಪುರಾಣ ಭಂಜನೆಯ ಕ್ರಿಯೆಯೇ ಶಿಲೆಯ ಪಾವಿತ್ರ್ಯವನ್ನು ಜನರಿಗೆ ಹೆಚ್ಚಿಸುತ್ತದೆ.

ಇನ್ನೂ ಎಚ್ಚರಾಗದ ಅಸ್ಪೃಶ್ಯರು ಇಡೀ ಈ ಸನ್ನಿವೇಶದಿಂದ ವಿಹ್ವಲರಾಗುತ್ತಾರೆ. ಜಗನ್ನಾಥ ತನ್ನ ಕೈಯನ್ನು ಅವರಿಗೆ ಒಡ್ಡಿ ಇದನ್ನು ಮುಟ್ಟುವ ಮೂಲಕ ಕೇವಲ ಶಿಲೆಯನ್ನಾಗಿ ಮಾಡಿ ಎನ್ನುತ್ತಾನೆ. ಆದರೆ ಅವರು ಅದನ್ನು ಮುಟ್ಟಲು ಹೆದರುವುದರಿಂದ, ಕಲ್ಲೇ ಜನರ ಕಣ್ಣಲ್ಲಿ ಸಾಲಿಗ್ರಾಮವಾಗಿ ಬಿಡುತ್ತದೆ. ಮೊದಲಿಗಿಂತ ಹೆಚ್ಚು ಕಾರ್ಣಿಕವೂ ಆಗಿಬಿಡುತ್ತದೆ. ಜಗನ್ನಾಥ ಇದರಿಂದ ಹೇಸಿ ಎಷ್ಟು ಕೋಪಗ್ರಸ್ತನಾಗಿ ಬಿಡುತ್ತಾನೆಂದರೆ, ಅಸ್ಪೃಶ್ಯರು ಅವನ ದೃಷ್ಟಿಯಲ್ಲಿ ಅನಾಗರಿಕ ಮೃಗಗಳಾಗಿ ಕಂಡುಬಿಡುತ್ತಾರೆ. ಎಷ್ಟಾದರೂ ಜಗನ್ನಾಥ ಊರಿನ ದೊಡ್ಡ ಜಮೀನ್ದಾರನಾಗಿದ್ದರಿಂದ, ತಮ್ಮ ಆರ್ಥಿಕ ದಾಸ್ಯದಿಂದಾಗಿ ಕುಗ್ಗಿ, ಸಾಲಿಗ್ರಮವನ್ನು ಅಸ್ಪೃಶ್ಯರು ಮುಟ್ಟಿಬಿಡುತ್ತಾರೆ. ಜಗನ್ನಾಥನಿಗೆ ಕೂಡಲೇ ಅರಿವಾಗುತ್ತದೆ: ಅವನು ಪ್ರೀತಿಸುವ ವೃದ್ಧೆ ಚಿಕ್ಕಿ ಮೂಢನಂಬಿಕೆಯವಳು; ಅಸ್ಪೃಶ್ಯರನ್ನು ಮುಟ್ಟುವವಳಲ್ಲ. ಆದರೆ ಅಸ್ಪೃಶ್ಯರನ್ನು ಕನಿಕರದಿಂದ ನೋಡಬಲ್ಲ ಮಾನವೀಯಳು. ಅಸಹನೆಯಿಂದ ಕುದಿಯುತ್ತಿರುವ ಈಗಿನ ತನ್ನ ಹಾಗಲ್ಲ.

ಕಾದಂಬರಿಯಲ್ಲಿ ಇನ್ನೂ ಏನೇನು ಆಗುತ್ತದೆಂಬ ವಿವರಕ್ಕೆ ನಾನು ಹೋಗುವುದಿಲ್ಲ. ಪೌರಾಣಿಕ ಶ್ರದ್ಧೆಯೇ ಕೊನೆಯಲ್ಲಿ ಗೆಲ್ಲುವಂತೆ ಕಾಣುತ್ತದೆ. ಆದರೆ ಕಾದಂಬರಿಯಲ್ಲಿ ಒಂದು ಸೂಚನೆಯೂ ಇದೆಯೆಂದು ನಾನು ತಿಳಿದಿದ್ದೇನೆ. ಯಾರಿಗೂ ತಡೆಯಲು ಸಾಧ್ಯವಿಲ್ಲದ ಸಾಮಾಜಿಕ ಬದಲಾವಣೆಗಳಿಂದಾಗಿಯೂ, ವಿದ್ಯಾಭ್ಯಾಸದಿಂದಾಗಿಯೂ ಮುಂದೊಂದು ಕಾಲದಲ್ಲಿ ಅಸ್ಪೃಶ್ಯತೆ ಮಾಯವಾಗಿ ಈ ಜನರೂ ಎಲ್ಲ ಮಧ್ಯಮ ವರ್ಗದವರಂತೆ ಮರ್ಯಾದಸ್ಥರೇ ಆಗುತ್ತಾರೆ. ಮಂಜುನಾಥ ದೇವರಾಗಿ ಸದ್ಯದಲ್ಲಿ ಪ್ರತಿಷ್ಠಿತನಾದರೂ ಈ ಪ್ರಕ್ರಿಯೆ ಮುಂದುವರಿಯುತ್ತದೆ ಜೊತೆಗೇ ತಂದೆಯ ಮೇಲಿನ ರೋಷಕ್ಕಾಗಿ ಅಂದರೆ ಕೇವಲ ವೈಯಕ್ತಿಕ ಕಾರಣಕ್ಕಾಗಿ – ದೇವರನ್ನು ಕಿತ್ತೆಸೆದಿದ್ದ ಪುರೋಹಿತರ ಮಗ ಹಲವು ಅಸಂಬದ್ಧ ಘಟನೆಗಳ ಸುಳಿಯಲ್ಲಿ ತಾನೇ ಒಬ್ಬ ದೈವಿಕ ವ್ಯಕ್ತಿಯಾಗಿ ಬಿಡುತ್ತಾನೆ.

ಹಾಗಾದರೆ ‘ಭಾರತೀಪುರ’ ಎಂಬ ಊರಿನಲ್ಲಿ ಆಗುವ ಬದಲಾವಣೆ, ನಿಜವಾಗಿ ಬಯಸಿದಂತೆ ಆದದ್ದೆ? ಬದಲಾವಣೆ ಆಗುತ್ತದೆ ಎಂದೂ ಕಾದಂಬರಿ ಸೂಚಿಸುತ್ತದೆ; ಆಗುವುದಿಲ್ಲ ಎಂದೂ ಹೇಳುತ್ತದೆ. ಈ ಕಾದಂಬರಿ ಹೀಗಾಗಿ ಯಾರಿಗೂ ಪ್ರಿಯವಾಗಲಿಲ್ಲ. ನನ್ನ ಕ್ರಾಂತಿಕಾರಿ ಗೆಳೆಯರೂ ಕಾದಂಬರಿಯನ್ನೂ ಒಪ್ಪಲಿಲ್ಲ; ಸನಾತನಿಗಳೂ ಒಪ್ಪಲಿಲ್ಲ; ನನ್ನ ವಿಚಾರವಾದಿತ್ವವನ್ನೂ, ರಾಜಕೀಯ ಕ್ರಾಂತಿಕಾರಕತೆಯನ್ನೂ ಈ ಕಾದಂಬರಿಯಲ್ಲಿ ನಾನು ಪರೀಕ್ಷೆಗೆ ಒಡ್ಡಿಕೊಂಡಿದ್ದೇನೆ ಎಂದು ನನ್ನ ನಮ್ರ ಭಾವನೆ – ಇವತ್ತಿಗೂ ಪ್ರಾಯಶ, ಕಲಾತ್ಮಕವಾಗಿ ಹೇಳುವುದಾದರೆ, ಸಂಸ್ಕಾರದಲ್ಲಿ ವಾಸ್ತವತೆಯನ್ನೂ ಸಾಂಕೇತಿಕತೆಯನ್ನೂ ಬೆಸೆಯಲು ನಾನು ಮಾಡಿದ ಪ್ರಯತ್ನ ಇಲ್ಲಿ ಸಾರ್ಥಕವಾಗದೇ ಹೋಯಿತೇನೋ? ಕಾದಂಬರಿ ಹೀಗೆ ಸೋತಿದೆಯೆಂದು ನನಗೆ ವ್ಯಥೆ ಇಲ್ಲ. ಅದು ನಾನು ಬರೆಯಲೇ ಬೇಕಾಗಿದ್ದ ಕಾದಂಬರಿ; ಮತ್ತು ಆ ಕಾಲಕ್ಕೆ ನನ್ನ ಪ್ರತಿಕ್ರಿಯೆಯಾಗಿ ಅಗತ್ಯವಾಗಿದ್ದ ಕೃತಿ.

ಪೂರ್ಣಾವಧಿಯ ಅಧ್ಯಾಪಕನಾಗಿ ಕೆಲಸ ಮಾಡುವ ನಾನು ನನ್ನ ಶಕ್ತ್ಯಾನುಸಾರ ತೊಡಗಿಕೊಳ್ಳುವ ರಾಜಕೀಯ ಕ್ರಿಯೆಗಳಲ್ಲಿ ಒಂದು ವಿಷಯದಲ್ಲಿ ಮಾತ್ರ ಯಾವತ್ತೂ ನಿಶ್ಚಲವಾಗಿದ್ದೇನೆ ಎಂದು ನಂಬಿದ್ದೇನೆ. ಮೊದಲಿನಿಂದಲೂ ನಾನು ಪ್ರಜಾಸತ್ತಾತ್ಮಕ ಸಮಾಜವಾದಿಯಾಗಿ ಉಳಿದಿದ್ದೇನೆ. ಸಾಂಸ್ಕೃತಿಕ ಪ್ರಶ್ನೆಗಳಿಗೆ ಬಂದಾಗ ನಾನು ಸಂದಿಗ್ಧಗೊಳ್ಳುವುದೂ ಈ ಕಾರಣದಿಂದೆಯೇ ಎಂದು ತಿಳಿದಿದ್ದೇನೆ.

ಸುಮಾರು ಒಂದು ದಶಕಕ್ಕೂ ಹಿಂದೆ ನಾನು ಭಾರತೀಪುರ ಬರೆದೆ. ಆ ಹೊತ್ತಿನಲ್ಲೇ ಕರ್ನಾಟಕದಲ್ಲಿ ದಲಿತಪರ ಚಳುವಳಿ ಪ್ರಾರಂಭವಾದದ್ದು. ನನ್ನ ಕೆಲವು ಆಪ್ತ ಸ್ನೇಹಿತರು ಈ ಚಳುವಳಿಯಲ್ಲಿ ತೊಡಗಿದವರು. ಇವರ ನಡುವೆ ನನ್ನ ಸಂದಿಗ್ಧಗಳು ಹಲವು ಬಾರಿ ತೊಡಕುಗಳನ್ನೂ, ಅಪಾರ್ಥಗಳನ್ನೂ ಕೆಲವೊಮ್ಮೆ ಸಿಟ್ಟನ್ನೂ ಉಂಟುಮಾಡಿದ್ದಿದೆ. ದಲಿತರ ನಡುವೆ ಕ್ರಿಯಾಶೀಲರಾದವರಿಗೆ ನನ್ನ ಇಂಥ ಸಂದಿಗ್ಧಗಳು ಕ್ಷುಲ್ಲಕವಾಗಿ ಕಾಣಬಹುದೆಂಬುದು ಅನಿವಾರ್ಯವೆಂದು ನಾನು ವಿನಯದಲ್ಲಿ ಒಪ್ಪಿಕೊಳ್ಳುತ್ತೇನೆ.

ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರದ ಒಂದು ಕೊಠಡಿಯಲ್ಲಿ ನಾವು ಸೇರಿದ್ದೇವೆ. ಎಲ್ಲಾ ಪತ್ರಿಕೆಗಳಲ್ಲೂ ವರದಿಯಾದ ಚಂದ್ರಗುತ್ತಿಯಲ್ಲಿ ನಡೆದ ಘಟನೆಗಳನ್ನು ಚರ್ಚಿಸಲು ನನ್ನ ಸಂಪಾದಕತ್ವದ ‘ರುಜುವಾತು’ ಪತ್ರಿಕೆಯ ವೇದಿಕೆ ಈ ಸಭೆಯನ್ನು ಕರೆದಿದೆ. ನಮ್ಮ ಗುಂಪಿನಲ್ಲಿ ಇಬ್ಬರು ಮಾನವಶಾಸ್ತ್ರಿಗಳು ಇದ್ದಾರೆ, ವಿಭಿನ್ನ ದೃಷ್ಟಿಯ ಉದಾರವಾದಿಗಳು ಇದ್ದಾರೆ, ಚಂದ್ರಗುತ್ತಿಯಿಂದ ಪೆಟ್ಟನ್ನು ತಿನ್ನದಂತೆ ಪಾರಾಗಿ ಹಿಂದಕ್ಕೆ ಬಂದ ಅದೃಷ್ಟಶಾಲಿಯಾದ ಒಬ್ಬ ಸ್ತ್ರೀವಾದೀ ಚಳುವಳಿಯ ಬುದ್ಧಿಜೀವಿಯೊಬ್ಬರೂ ಇದ್ದಾರೆ. ನಮಗೆಲ್ಲರಿಗೂ ಮಾನವ ಶಾಸ್ತ್ರಜ್ಞಾನ ಮತ್ತು ಈ ಸ್ತ್ರೀವಾದಿ ಕಾರ್ಯಕರ್ತೆಯ ಅನುಭವವನ್ನು ಕೇಳಲು ಕುತೂಹಲ.

ಚಂದ್ರಗುತ್ತಿ ಪೂಜೆಯ ಬಗ್ಗೆ ಹಲವು ಮಾನವಶಾಸ್ತ್ರೀಯ ವಿವರಗಳು ನಮ್ಮ ಬಳಿ ಇವೆ. ‘ಹಿಂದೂ’ ಪತ್ರಿಕೆ (ಸೋಮವಾರ, ಮಾರ್ಚ್‌೨೪, ೧೯೮೬) ಹೀಗೊಂದು ಶೀರ್ಷಿಕೆಯಲ್ಲಿ ತನ್ನ ವರದಿಯನ್ನು ಪ್ರಕಟಿಸಿದೆ: “ಸ್ವಯಂ ಸೇವಕರು ಅತ್ಯುತ್ಸಾಹಿಗಳಾಗಿ ಬಿಟ್ಟರೆ?” ಈ ‘ಹಿಂದೂ’ ಪತ್ರಿಕೆ ದಕ್ಷಿಣ ಭಾರತದ ಒಂದು ಕಟ್ಟುನಿಟ್ಟಾದ ನಿಷ್ಠೆಯ ಮಧ್ಯಮವರ್ಗದ ಪತ್ರಿಕೆ. ಇದರ ಸಂಪಾದಕ ವರ್ಗದಲ್ಲಿ ಒಬ್ಬ ಮಾರ್ಕ್ಸ್‌‌ವಾದಿಯೂ ಇದ್ದರೆಂಬುದು ಗಮನಿಸಬೇಕಾದ್ದು. ವರದಿ ಹೇಳುತ್ತದೆ: ಕ್ರಿ.ಶ. ೧೩೯೬ನೆಯ ಇಸವಿಯಿಂದ ಚಂದ್ರಗುತ್ತಿಯ ಬಗ್ಗೆ ನಮಗೆ ರೆಕಾರ್ಡ್‌ ದೊರೆಯುತ್ತದೆ. ಬನವಾಸಿಯ ಕದಂಬರಾಜರ ಆಳ್ವಿಕೆಗೆ ಅದು ಒಳಪಟ್ಟಿತ್ತು. ಪುರಾಣಗಳಲ್ಲಾದರೋ ಚಂದ್ರಗುತ್ತಿ ಕೃತಯುಗಪೂರ್ವದ್ದು. ಜಮದಗ್ನಿಯ ಆಶ್ರಮ ಇಲ್ಲಿತ್ತು. ಅವನ ಪತ್ನಿ ರೇಣುಕಾ ಪ್ರತೀನಿತ್ಯ ಹೊಳೆಯಿಂದ ಬುಟ್ಟಿಯಲ್ಲಿ ನೀರನ್ನು ತರುತ್ತಿದ್ದಳು. ಆದರೆ ಒಂದು ದಿನ ಅವಳು ತನ್ನ ಪತಿವ್ರತಾ ಪಾವಿತ್ರ್ಯವನ್ನು ಕಳೆದುಕೊಂಡದ್ದರಿಂದ ಬುಟ್ಟಿಯಲ್ಲಿ ನೀರನ್ನು ತರಲಾಗಲಿಲ್ಲ. ಹೊಳೆಯಲ್ಲಿ ಅವಳು ಕ್ಷತ್ರಿಯನೊಬ್ಬ ಮೀಯುವುದನ್ನು ಕಂಡು ಒಂದು ಕ್ಷಣ ಚಂಚಲಗೊಂಡಿದ್ದಳು. ಅವಳ ಗಂಡ ಜಮದಗ್ನಿ ಇದನ್ನರಿತು ತಾಯಿಯನ್ನು ಕೊಲ್ಲುವಂತೆ ಪರಶುರಾಮನಿಗೆ ಹೇಳಿದ. ಈ ಬಗ್ಗೆ ಹಲವು ಕಥೆಗಳಿವೆ. ಅವನು ತಂದೆಗೆ ವಿಧೇಯನಾಗಿದ್ದುಕೊಂಡು ತಾಯಿಯನ್ನು ಕೊಂದ ಪ್ರಾಯಶ್ಚಿತ್ತಕ್ಕಾಗಿ ಇಡೀ ಪ್ರಪಂಚವನ್ನು ಅವನು ಸುತ್ತಾಡಿದರೂ ಅವನ ಕೊಡಲಿಗೆ ಹತ್ತಿದ ರಕ್ತದ ಕಲೆ ಆರಲೇ ಇಲ್ಲ. ಅವನ ಪರ್ಯಾಟನ ಕಾಲದಲ್ಲಿ ಎಲ್ಲಾ ಕ್ಷತ್ರಿಯರನ್ನು ಕೊಂದರೂ ರಾಮನನ್ನು ಮಾತ್ರ ಕೊಲ್ಲಲಾಗಲಿಲ್ಲ. ಯಾಕೆಂದರೆ ರಾಮನೂ ಅವನ ಹಾಗೆ ವಿಷ್ಣುವಿನ ಅವತಾರವಾಗಿದ್ದುದು. ಇದೆಲ್ಲಕ್ಕಿಂತಲೂ ಚಂದ್ರಗುತ್ತಿಯ ಸ್ಥಳಪುರಾಣವಾಗಿ ಮುಂದಿನ ಕಥೆ ಹೆಚ್ಚು ನಾಟಕೀಯವಾಗಿದೆ.

ತಾಯಿ ರೇಣುಕೆಯನ್ನು ಕೊಲ್ಲಲೆಂದು ಪರಶುರಾಮ ಬೆನ್ನಟ್ಟಿಕೊಂಡು ಓಡುವಾಗ ಅವಳೂ ಓಡುತ್ತೋಡುತ್ತಾ ತನ್ನೆಲ್ಲಾ ಬಟ್ಟೆಗಳನ್ನು ಕಳೆದುಕೊಂಡು ಶಿವನ ಗುಡಿಯಲ್ಲಿ ಬೆತ್ತಲೆಯಲ್ಲಿ ಮುಚ್ಚಿಕೂರುತ್ತಾಳೆ. ಈಗಲೂ ಚಂದ್ರಗುತಿಯಲ್ಲಿ ಗುಹೆಯೊಂದು ಇದೆ. ಅದರ ಕೆಳಗೊಂದು ಬಂಡೆ ಇದೆ. ಈ ಬಂಡೆ ಮುಚ್ಚಿಕೂತ ರೇಣುಕಾಳ ನಿತಂಬದಂತೆ ಕಾಣುತ್ತದೆ. ಇನ್ನೊಂದು ಕತೆಯೂ ಇದೆ. ಇದು ರೇಣುಕೆಗೂ ಅವಳ ಸೇವಕಿ ಮಾತಂಗಿಗೂ ಇರುವ ಸಂಬಂಧವನ್ನು ಕುರಿತದ್ದು. ಪರಶುರಾಮನು ಕ್ಷತ್ರಿಯ ಸಂಹಾರಕ್ಕೆ ಹೊರಡುವ ಮುಂಚೆ ತನ್ನ ತಾಯಿಯನ್ನು ಮಾತಂಗಿಯ ಮಗ ಬೀರಪ್ಪನ ಆಶ್ರಯದಲ್ಲಿ ಬಿಡುತ್ತಾನೆ. ಆದರೆ ಬೀರಪ್ಪ ಒಬ್ಬ ಕಾಮುಕ ರಾಕ್ಷಸನಾಗಿ ಬಿಡುತ್ತಾನೆ. ಅವನ ತಾಯಿ ಮಾತಂಗಿ ಕರುಣೆಯಿಂದ ವಸ್ತ್ರಾಪಹರಣಗೊಂಡ ಎಲ್ಲಾ ಸ್ತ್ರೀಯರಿಗೂ ಬಟ್ಟೆಯನ್ನು ಕೊಡುತ್ತಾಳೆ. ಇವತ್ತಿಗೂ ಮಾತಂಗಿಯ ದೇವಾಲಯಕ್ಕೆ ಬರುವ ಬೆತ್ತಲೆ ಹೆಂಗಸರಿಗೆ ಹೊಸ ಬಟ್ಟೆಗಳನ್ನು ಕೊಡಲಾಗುತ್ತದೆ.

ಬೆಳಗಾಂ ಜಿಲ್ಲೆಯಲ್ಲಿರುವ ಸವದತ್ತಿಯ ಎಲ್ಲಮ್ಮನಿಗೂ ಇಲ್ಲಿನ ಭಕ್ತರು ನಡೆದುಕೊಳ್ಳುತ್ತಾರೆ. ಎಲ್ಲಮ್ಮನೂ ಮಾತಂಗಿಯೂ ಸೋದರಿಯರು; ಕೃತಯುಗದ ರೇಣುಕೆ ಕಲಿಯುಗದ ಎಲ್ಲಮ್ಮ ಆದಳು – ಎಂಬ ನಂಬಿಕೆ ಕೂಡಾ ಇದೆ. ಸವದತ್ತಿಯ ಎಲ್ಲಮ್ಮನಿಗೆ ಹರಕೆ ಹೊತ್ತು ಹೆಣ್ಣು ಮಕ್ಕಳನ್ನು ದೇವದಾಸಿಯರನ್ನಾಗಿ ಮಾಡುವ ಸಂಪ್ರದಾಯದ ವಿರುದ್ಧವೂ ವಿಚಾರವಾದಿಗಳಾದ ಕೆಲವು ಕ್ರಾಂತಿಕಾರರು ಹೋರಾಡುತ್ತಿದ್ದಾರೆ. ಪವಿತ್ರವಾದ ಕಾರಣಕ್ಕೆಂದು ಹರಕೆತೊಟ್ಟು ಹೀಗೆ ದೇವದಾಸಿಯರಾಗುವ ಹೆಣ್ಣು ಮಕ್ಕಳಲ್ಲಿ ಕೆಲವರು ಕೊನೆಗೆ ಮುಂಬೈಯ ವೇಶ್ಯಾವಾಟಿಕೆಯಲ್ಲಿ ತಮ್ಮ ವೃತ್ತಿ ನಡೆಸುತ್ತಾರೆ. ಅವರನ್ನು ಅಲ್ಲಿಗೆ ಮಾರಲಾಗುತ್ತದೆ. ಎಲ್ಲಮ್ಮ ದೇವಾಲಯದಲ್ಲೂ ಜೋಗಿತಿಯರು ಇದ್ದಾರೆ. ಇಂತಹ ಆಚರಣೆಗಳ ವಿರುದ್ಧ ಹೋರಾಡುವವರು ಬೆತ್ತಲೆಪೂಜೆಗೂ ಮುಂಬೈಯ ವೇಶ್ಯಾ ವ್ಯವಹಾರಕ್ಕೂ ಸಂಬಂಧ ಇದೆ ಎಂದು ನಂಬುತ್ತಾರೆ.

ನಮ್ಮ ಈ ಸಭೆಯಲ್ಲಿ ಮಾನವಶಾಸ್ತ್ರಜ್ಞರು ತಮ್ಮ ಶಾಸ್ತ್ರಕ್ಕೆ ಸಂಬಂಧಪಟ್ಟ ವಿವರಗಳೆಲ್ಲವನ್ನೂ ಕೊಡುತ್ತಾರೆ. ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಇನ್ನೂ ಸಂಪರ್ಕಗಳು ದುರ್ಲಭವಾದ್ದರಿಂದ ಗೂಢವಾದ ಆಚರಣೆಗಳು ಉಳಿಯುವುದು ಸಾಧ್ಯವಾಗಿದೆ; ದ್ರಾವಿಡ ಸಂಸ್ಕೃತಿ – ಆರ್ಯ ಸಂಸ್ಕೃತಿ ನಡುವೆ ನಡೆದ ಸಂಬಂಧದ ಕುರುಹಾಗಿ ಚಂದ್ರಗುತ್ತಿಯ ಸ್ಥಳಪುರಾಣ ಬೆಳೆದಿದೆ ಇತ್ಯಾದಿ. ಇದಕ್ಕೆ ಸಂಬಂಧಪಟ್ಟಂತೆ ಇನ್ನೂ ಹಲವು ಪ್ರಶ್ನೆಗಳು ಅವರ ಕುತೂಹಲವನ್ನು ಕೆರಳಿಸುತ್ತವೆ. ಮಾತೃಪೂಜೆಯ ಸಾಂಸ್ಕೃತಿಕ ಮಹತ್ವವೇನು? ಇಲ್ಲಿನ ಹೆಣ್ಣುಮಕ್ಕಳ ಮಾನಸಿಕ ಸಮಸ್ಯೆಗಳು ಏನಿರಬಹುದು? ಬೆತ್ತಲೆಪೂಜೆಯಿಂದ ಯಾವ ಬಗೆಯ ಮಾನಸಿಕ ಚಿಕಿತ್ಸೆಯನ್ನು ಇವರು ಪಡೆಯುತ್ತಾರೆ? ತಮಗೆ ಅತ್ಯಂತ ಮಹತ್ವವಾದ್ದನ್ನು ದೇವತೆಗೆ ಇವರು ಸಲ್ಲಿಸುವುದಲ್ಲವೆ? ಆದ್ದರಿಂದ ಕೆಲವರು ತಮ್ಮ ಕೂದಲನ್ನಾದರೆ ಇನ್ನು ಕೆಲವು ತಮ್ಮ ಬೆತ್ತಲೆಯನ್ನು… ಇತ್ಯಾದಿ ಇತ್ಯಾದಿ.

ಕೊನೆಯಲ್ಲಿ ಮಾನವಶಾಸ್ತ್ರಜ್ಞರು ಒಂದು ತೀರ್ಮಾನಕ್ಕೆ ಬರುತ್ತಾರೆ. ಇಂತಹ ಆಚರಣೆಗಳನ್ನು ನಂಬಿದವರ ಮನಸ್ಥಿತಿಯನ್ನು ಆಳವಾಗಿ ಅರ್ಥಮಾಡಿಕೊಳ್ಳದ ಹೊರತು ಅಂತಹ ಆಚರಣೆಗಳನ್ನು ನಿಲ್ಲಿಸುವುದು ಸಾಧ್ಯವಾಗದು. ಈ ಜನಗಳು ಯಾವತ್ತೋ ಒಂದು ದಿನ ಬದಲಾಗುವುದಂತೂ ಖಂಡಿತವೇ. ಆದರೆ ಮಾನವಶಾಸ್ತ್ರಜ್ಞರು ಟೀಕಿಸುವುದು ಈ ಅತ್ಯುತ್ಸಾಹಿ ವಿಚಾರವಾದಿಗಳು ಬಳಸುವ ಟ್ಯಾಕ್ಟಿಕ್ಸನ್ನು – ಅಂದರೆ ಉಪಾಯವನ್ನು ಮಾತ್ರ. ‘ಹಿಂದೂ’ ಪತ್ರಿಕೆಯ ಒಂದು ವಾಕ್ಯವನ್ನು ಅವರು ಮನಸಾರೆ ಒಪ್ಪುತ್ತಾರೆ. “ಹಲವು ಶತಮಾನಗಳಿಂದ ಬೇರೂರಿದ ಗಾಢವಾದ ಮೂಢನಂಬಿಕೆಗಳನ್ನು ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಿತ್ತೆಸೆಯುವುದು ಸಾಧ್ಯವೇ?”

ನಮ್ಮ ನಡುವಿನ ಸ್ತ್ರೀವಾದಿ ಕಾರ್ಯಕರ್ತೆ ರೇಗುತ್ತಾಳೆ. ನಾವು ಎಲ್ಲೋ ಪ್ರಾರಂಭಿಸಲೇ ಬೇಕಲ್ಲವೇ? ಸಂಸ್ಕೃತಿಯ ನೆವದಲ್ಲಿ ಅವರವರ ನಂಬಿಕೆ ಅವರವರಿಗೆಂದು ನಾವು ‘ಸತಿ’ಯನ್ನೂ, ಅಸ್ಪೃಶ್ಯತೆಯನ್ನೂ ಸಹಿಸುತ್ತೇವೆಯೆ? ಇದರ ವಿರುದ್ಧ ನಾವು ಕಾನೂನು ಮಾಡಿಲ್ಲವೇ? ಈ ಕಾರ್ಯಕರ್ತೆಗೆ ಸರಕಾರದ ಬಗ್ಗೆಯೂ ಕೋಪವಿದೆ. ಅವರು ಮುಂಜಾಗ್ರತೆಯಾಗಿ ಯಾಕೆ ಸಾಕಷ್ಟು ಪೊಲೀಸರನ್ನು ಕಳಿಸಲಿಲ್ಲ? ಅಹಿಂಸಾತ್ಮಕ ಪ್ರತಿಭಟನೆಯನ್ನು ನಂಬುವ ಆಕೆ ಹೇಳದಿದ್ದರೂ ಹಲವು ವಿಚಾರವಾದಿ ಕಾರ್ಯಕರ್ತರು ಮಾತ್ರ ಯಾಕೆ ಟಯರ್‌ಗ್ಯಾಸ್ ಶೆಲ್ಗಳನ್ನು ಪೊಲೀಸರು ಬಳಸಲಿಲ್ಲವೆಂದು ಸರ್ಕಾರವನ್ನು ಟೀಕಿಸುವುದನ್ನು ನಾನು ಕೇಳಿದ್ದೇನೆ. ಪೋಲೀಸರು ಕೇವಲ ಅಲಂಕಾರಕ್ಕಾಗಿ ರೈಫಲ್‌ನ್ನು ಹಿಡಿದಿದ್ದರೇ? ಕೆಲವು ವಿಚಾರವಾದಿಗಳು ಹಿಂದುತ್ವವಾದಿಗಳ ಕೈವಾಡ ಚಂದ್ರಗುತ್ತಿಯ ಹಿಂಸೆಯಲ್ಲಿತ್ತೆಂದು ನಂಬಿದರೆ, ನಮ್ಮಲ್ಲಿ ಒಬ್ಬರು ವಿಶ್ವಹಿಂದೂ ಪರಿಷತ್‌ನವರು ಬೆತ್ತಲೆಸೇವೆಯನ್ನು ಟೀಕಿಸಿ ಅದನ್ನು ಕೈಬಿಡುವಂತೆ ಜನರಲ್ಲಿ ಮನವಿ ಮಾಡಿಕೊಂಡ ಕರಪತ್ರವನ್ನು ತೋರಿಸುತ್ತಾರೆ.

ಸ್ತ್ರೀವಾದಿ ಕಾರ್ಯಕರ್ತೆ ಇನ್ನೂ ತನ್ನ ತಲ್ಲಣದಿಂದ ಪಾರಾಗಿಲ್ಲ. ಒಬ್ಬ ಮಾನವಶಾಶ್ತ್ರಜ್ಞ ಬೆತ್ತಲೆ ಸೇವೆಯನ್ನೂ ಅಸ್ಪೃಶ್ಯತೆಯ ಆಚರಣೆಯನ್ನೂ ಸಮಸಮವೆಂದು ಭಾವಿಸಬಾರದೆಂದು ಅವಳ ಜೊತೆ ವಾದಿಸುತ್ತಾನೆ. ಬೆತ್ತಲೆಸೇವೆ ನಿಲ್ಲಬೇಕಾದ್ದದ್ದೇ ಎಂಬುದರಲ್ಲಿ ಅವನಿಗೆ ಸಂಶಯವಿಲ್ಲ. ನಾಗರಿಕತೆ ಬೆಳೆದಂತೆ, ವಿದ್ಯಾಭ್ಯಾಸ ಹರಡಿದಂತೆ ಇದು ನಿಂತೇ ನಿಲ್ಲುತ್ತದೆಂದು ಅವನ ವಾದ. ಇನ್ನೊಬ್ಬ ಮಾನವಶಾಸ್ತ್ರಜ್ಞ ಇನ್ನೂ ಭೀಕರವಾದ ಆಚರಣೆಯೊಂದನ್ನು ನೆನಪು ಮಾಡಿಕೊಡುತ್ತಾನೆ. ಬೆನ್ನಿಗೆ ಕಬ್ಬಿಣದ ಕೊಕ್ಕೆಯನ್ನು ಸಿಕ್ಕಿಸಿಕೊಂಡು ಎತ್ತರದ ಮರದಿಂದ ಜೋಲಾಡುವ ಆಚರಣೆಯೂ ಇದೆ. ಆಗ ವ್ಯಕ್ತಿ ರಕ್ತವನ್ನೂ ಸುರಿಸದಷ್ಟು ಪರವಶನಾಗಿರುವುದು ಇದೆಯಂತೆ. ಕೆಳಜಾತಿಯಲ್ಲಿರುವ ನಂಬಿಕೆ ಅಷ್ಟು ಗಾಢವಾದದ್ದು ನೋಡಿ, ಇತ್ಯಾದಿ.

ಆನಂದರು ಬರೆದ ಒಂದು ಸಣ್ಣ ಕಥೆಯನ್ನು ಅವರು ನಿರೂಪಿಸುತ್ತಿದ್ದಂತೆ ಮಹಿಳಾ ಕಾರ್ಯಕರ್ತೆ ತಬ್ಬಿಬ್ಬಾಗುತ್ತಾಳೆ. ಈ ಕಥೆ. ಹೆಸರು “ನಾನು ಕೊಂದ ಹುಡುಗಿ”. ಇದರಲ್ಲಿ ಬರುವ ಹುಡುಗಿ ಒಬ್ಬ ದೇವದಾಸಿ. ಶ್ರೀಮಂತ ಜಮೀನ್ದಾರರ ಕುಟುಂಬದಿಂದ ಬಂದವಳು. ಒಬ್ಬ ಪಯಣಿಗ ಅವಳ ಕಥೆಯನ್ನು ಹೇಳುವುದು.

ಈ ಪಯಣಿಗ ಮೇಲುವರ್ಗಕ್ಕೆ ಸೇರಿದವನೆಂಬುದೂ, ಆ ಊರಿಗೆ ಹೊರಗಿನವನೆಂಬುದೂ, ಪಟ್ಟಣಿಗನೆಂಬುದೂ ಇಲ್ಲಿ ಮುಖ್ಯ. ಇನ್ನೂ ಮುಖ್ಯವಾದ ವಿಷಯವೆಂದರೆ ಅವನು ಸುತ್ತಮುತ್ತಲಿನ ದೇವಸ್ಥಾನದ ಬಗ್ಗೆ ಚಾರಿತ್ರಿಕ ಮಾಹಿತಿಯನ್ನು ಹುಡುಕುತ್ತಾ ಹೊರಟವನು ಎಂಬುದು. ಅವನಿಗಿರುವ ದೇವಾಲಯದ ಬಗೆಗಿನ ಆಸಕ್ತಿ ಕಲಾತ್ಮಕವಾದದ್ದೆಂದೂ, ಚಾರಿತ್ರಿಕವಾದದ್ದೆಂದೂ, ಮತನಿಷ್ಠೆಯಿಂದ ಹುಟ್ಟಿದ್ದು ಅಲ್ಲವೆಂಬುದನ್ನೂ ನಾವು ಗಮನಿಸಬೇಕು. ಈ ದೇವದಾಸಿಯ ತಂದೆ ಮನೆಯಲ್ಲಿ ಅವನು ಇಳಿದುಕೊಳ್ಳುತ್ತಾನೆ. ತನ್ನ ಬಗ್ಗೆ ಆಸಕ್ತಿಯನ್ನು ತೋರಿದ ಅತಿಥಿಗೆ ತನ್ನ ಮುಗ್ಧತೆಯಲ್ಲಿ ಕೃತಜ್ಞತೆಯಲ್ಲಿ ಈ ಹುಡುಗಿ ತನ್ನನ್ನು ಒಪ್ಪಿಸಿಕೊಳ್ಳುತ್ತಾಳೆ. ಈ ಬಗೆಯ ಆಚರಣೆಗಳಿಗೆ ಬಾಹ್ಯನಾದ ವಿಚಾರವಂತನೂ, ನೀತಿವಂತನೂ ಆದ ಈ ಪಟ್ಟಣಿಗ ಇಂತಹ ಆಚರಣೆಗಳ ಹಿಂದಿರುವ ಅಮಾನವೀಯತೆಯಿಂದ ಶಾಕ್ ಆಗುತ್ತಾನೆ. ಇಂತಹ ಮೂಢನಂಬಿಕೆಯ ಆಚರಣೆಗಳು ಎಷ್ಟು ಹೀನಾಯವೆಂದು ಅವಳಿಗೆ ಮನದಟ್ಟಾಗುವಂತೆ ಅವನು ತಿಳಿಹೇಳುತ್ತಾನೆ. ಇದರ ಪರಿಣಾಮವಾಗಿ ಅವಳು ಆ ರಾತ್ರಿ ತನ್ನ ಮನೆಯ ಹಿಂದಿನ ಬಾವಿಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡು ಪ್ರಾಣಬಿಟ್ಟಿರುತ್ತಾಳೆ.

ಬೇರೆಯವರ ನಂಬಿಕೆಯಲ್ಲಿ ನಾವು ತಲೆ ಹಾಕಬಾರದು ಎಂಬ ತನ್ನ ವಿಚಾರವನ್ನು ಸ್ಪಷ್ಟಪಡಿಸಲು ಮಾನವಶಾಸ್ತ್ರಜ್ಞ ಈ ಕಥೆ ಹೇಳುತ್ತಾನೆ. ಅಂದರೆ ಆನಂದರ ಕಥೆಯಲ್ಲಿ ಮುಖ್ಯವಾಗಿರುವ ಒಂದು ಅಂಶ ಈ ಮಾನವಶಾಸ್ತ್ರಜ್ಞನಿಗೆ ತೋಚಲಿಲ್ಲವೆಂದು ನನಗನ್ನಿಸುತ್ತದೆ. ಇಂತಹ ಸಂದರ್ಭಗಳಲ್ಲಿ ಕೇವಲ ಸಾಕ್ಷಿಯಾಗಿ ತನಗೆ ಎದುರಾದ ಸನ್ನಿವೇಶದಲ್ಲಿ ತೊಡಗದಂತೆ ಸುಮ್ಮನಿರುವುದು, ಪರಿಣಾಮದಲ್ಲಿ ಅದು ಎಷ್ಟೇ ದುರಂತವಾದರೂ ಅಸಾಧ್ಯವೆಂದು ಕಥೆ ಹೇಳುತ್ತದೆ ಎಂಬುದನ್ನು ಅವನು ನಿರ್ಲಕ್ಷಿಸುತ್ತಾನೆ.

ಉದ್ವಿಗ್ನಳಾದ ಸ್ತ್ರೀವಾದಿಗೆ ಕಥೆಯ ಅಂತಹ ಸೂಕ್ಷ್ಮಗಳು ಬೇಕಾಗಿರಲಿಲ್ಲ. ಜೀವನದ ಬಗ್ಗೆ ವೈಚಾರಿಕ ದೃಷ್ಟಿಕೋನ ಅಗತ್ಯ ಎಂಬ ಭಾವನೆಯೇ ಅವಳನ್ನು ಆಳುತ್ತಾ ಅವಳನ್ನು ಕ್ರಿಯಾಶೀಲಳನ್ನಾಗಿ ಮಾಡಿದ್ದುದರಿಂದ ಅವಳಿಗೆ ಇಂತಹ ಸೂಕ್ಷ್ಮಗಳ ಕಡೆ ಗಮನಹರಿಸುವ ವ್ಯವಧಾನವಿರಲಿಲ್ಲ. ಅವಳ ಮನಸ್ಥಿತಿ ನನಗೆ ಅರ್ಥವಾಗುತ್ತದೆ. ತನ್ನ ಶಿಸ್ತಿನಿಂದಾಗಿ ತಣ್ಣಗೆ ದೂರನಿಂತು ಎಲ್ಲವನ್ನೂ ಅರ್ಥ ಮಾಡಿಕೊಳ್ಳಬಲ್ಲೆ ಎಂಬ ಮಾನವಶಾಸ್ತ್ರಜ್ಞನ ದೋರಣೆ ಅವಳಿಗೆ ಯಾಕೆ ಶುಷ್ಕವಾಗಿ ಕಾಣುತ್ತದೆ ಎಂದು ನನಗೆ ಅರಿವಾಗುತ್ತದೆ.

ನಮ್ಮ ನಡುವೆ ಒಬ್ಬ ಸಿಖ್ ಧರ್ಮದ ಅನುಯಾಯಿ, ಭಾಷಾಶಾಸ್ತ್ರಜ್ಞ ಇದ್ದಾನೆ. ಅಮೃತಸರದ ಸ್ವರ್ಣಮಂದಿರವನ್ನು ಸರಕಾರ ನಾಶ ಮಾಡಲು ಹೋಗಿ ಹೇಗೆ ಸಿಖ್ ಜನರು ಉದ್ರೇಕಗೊಳ್ಳುವಂತಾಗಿ ಮೂಲಭೂತವಾದಕ್ಕೆ ಎಡೆಯಾಯಿತೆಂದು ಕೇವಲ ಒಂದು ವಾರದ ಮೊದಲು ಮಾತ್ರ ಅವನು ಉದ್ವಿಗ್ನವಾಗಿ ವಾದಿಸಿದ್ದ. ಆದರೆ ಇವತ್ತು ಅವನ ವಾದಸರಣಿಯಿಂದ ನನಗೆ ಅಚ್ಚರಿಯಾಗುತ್ತದೆ. ಮಾನವಶಾಸ್ತ್ರಜ್ಞರ ವಸ್ತುನಿಷ್ಠ ದೃಷ್ಟಿ ಬದಲಾಗುತ್ತಿರುವ ಭಾರತಕ್ಕೆ ಹೇಗೆ ಸಾಧ್ಯ? ಉಗ್ರವಾದಿಗಳು ತಮ್ಮ ನಂಬಿಕೆಯಿಂದಾಗಿ ಪಂಜಾಬಿನಲ್ಲಿ ಹಿಂಸೆಗೆ ತೊಡಗಿದ್ದಾರೆ. ಇದನ್ನು ನಾವು ಸುಮ್ಮನೆ ನೋಡುತ್ತಾ ಅರ್ಥಮಾಡಿಕೊಳ್ಳುತ್ತೇವೆಯೇ? ಚಂದ್ರಗುತ್ತಿಯಲ್ಲಿ ಜೋಗಿತಿಯರು ತ್ರಿಶೂಲದಿಂದ ತಿವಿಯುತ್ತಾ ಬೆತ್ತಲೆಸೇವೆಯನ್ನು ಉಳಿಸಿಕೊಳ್ಳಲು ಹೊರಟಿದ್ದಾರೆ. ನಾವೇನು ಅದನ್ನು ಸುಮ್ಮನೆ ನೋಡಲು ಸಾಧ್ಯವೇ? ಮಾನವಶಾಸ್ತ್ರಜ್ಞ ಇವನಿಗೆ ನೇರ ಉತ್ತರಕೊಡದೆ ತರ್ಕ ಮಾಡುತ್ತಾನೆ. ದಿಗಂಬರ ಮುನಿಗಳನ್ನು ನಾವು ಸಹಿಸುವುದಿಲ್ಲವೇ? ಸಾವಿರಾರು ಇಂತಹ ಮುನಿಗಳು ಸೇರಿದ್ದಾಗ ನಮ್ಮ ಗತಿಸಿದ ಪ್ರಧಾನಿ ಇಂದಿರಾ ಗಾಂಧಿಯವರು ಅವರನ್ನು ನೋಡಿ ಅವರಿಂದ ಆಶೀರ್ವಾದವನ್ನು ಪಡೆಯಲಿಲ್ಲವೇ? ಹನ್ನೆರಡನೇ ಶತಮಾನದ ಅಕ್ಕಮಹಾದೇವಿಯ ಕಥೆಯಾದರೂ ಏನು? ಅವಳ ಬೆತ್ತಲೆಯನ್ನು ಟೀಕಿಸಿದ ಅಲ್ಲಮ ಪ್ರಭುವಿಗೆ ಅವಳು ನಿಮಗೆ ನೋವಾದೀತೆಂದು ಮಾತ್ರ ನನ್ನ ಕೂದಲಿನಿಂದ ಗುಪ್ತಾಂಗಗಳನ್ನು ಮುಚ್ಚಿಕೊಂಡಿರುವುದು ಎಂದು ಹೇಳಲಿಲ್ಲವೇ? ನಾನು ಯಾಕೆ ಅಖಿಲ ಭಾರತ ವ್ಯಾಪ್ತಿಯ ಮೇಲ್ಜಾತಿಯವರ ಆಚರಣೆಯನ್ನು ಮಾತ್ರ ಸಹಿಸಿಕೊಳ್ಳುತ್ತೇವೆ? ಆದರೆ ಕೆಳಜಾತಿಯವರ ಆಚರಣೆಯನ್ನು ಖಂಡಿಸುತ್ತೇವೆ? ನಾವು ಇವತ್ತು ಬೆತ್ತಲೆಯ ಚಿತ್ರವಿಲ್ಲದ ಜಾಹಿರಾತಿನಿಂದ ಏನನ್ನಾದರೂ ಮಾರುವುದುಂಟೆ? – ಒಂದು ಸೋಪ್‌, ಒಂದು ಟೂಥ್ ಭ್ರಷ್, ಸ್ಕ್ರೂ ಡ್ರೈವರ್‌, ಒಂದು ಶಾಂಪು, ಯಾಕೆ ಒಂದು ಪ್ಲಾಸ್ಟಿಕ್‌ಬಕೆಟ್‌ನ್ನು ಮಾರಲು ಕೂಡ ನಾವು ಬೆತ್ತಲೆ ದೇಹವನ್ನು ಬಳಸುವುದಿಲ್ಲವೆ? ಬೆತ್ತಲೆಸೇವೆಯನ್ನು ಖಂಡಿಸುವ ನಾವು ಯಾಕೆ ಸ್ಟ್ರಿಪ್ಪೀನ್ ಕ್ಲಬ್‌ಗಳನ್ನು ಮರೆಯುತ್ತೇವೆ? – ಇತ್ಯಾದಿ.

ನಾವು ಹೀಗೆ ಖಂಡನೆ ಮಂಡನೆಯಲ್ಲಿ ಬಿಸಿಯಾಗುತ್ತದ್ದಂತೆ ಸ್ತ್ರೀವಾದಿ ಕಾರ್ಯಕರ್ತೆ ವ್ಯಾಪಾರಕ್ಕಾಗಿ ಬೆತ್ತಲೆದೇಹವನ್ನು ಬಳಸಿಕೊಳ್ಳುವುದನ್ನು ತಮ್ಮ ಗುಂಪು ಪ್ರತಿಭಟಿಸುತ್ತದೆ ಎಂದು ಹೇಳುತ್ತಾಳೆ.

ಹೀಗೆ ಮಾನವಶಾಸ್ತ್ರಜ್ಞರು ನಮ್ಮ ಸಂಸ್ಕೃತಿಯಲ್ಲಿ ವಿಶಿಷ್ಟವಾದ್ದನ್ನು ಉಳಿಸಿಕೊಳ್ಳಬೇಕೆಂಬ ವಾದದಿಂದ ಪ್ರಾರಂಭಿಸಿದರೂ, ವಿದ್ಯಾಭ್ಯಾಸದ ಮೂಲಕ ಜನರ ವಿಶ್ವಾಸಗಳಿಸಿಕೊಂಡು ಅಂತಹ ಆಚರಣೆಗಳನ್ನು ಕೈಬಿಡುವಂತೆ ಪ್ರೇರೇಪಿಸಲೂಬೇಕೆಂಬ ಸುಧಾರಣಾವಾದಿ ದೃಷ್ಟಿಕೋನಕ್ಕೆ ಪತ್ತೆಯಾಗದಂತೆ ಚಲಿಸುತ್ತಿದ್ದಂತೆ; ಸಿಕ್ ಭಾಷಾ ಶಾಸ್ತ್ರಜ್ಞ ರಾಷ್ಟ್ರದ ಮುಖ್ಯ ಪರಂಪರೆಯಲ್ಲಿರುವ ನಾವು ಧೃತಿಗೆಡದಂತೆ ಕಟ್ಟುನಿಟ್ಟಾಗಿ ಬದಲಾವಣೆಗೆ ಪ್ರಯತ್ನಿಸಬೇಕೆಂದು ಕುಪಿತನಾಗಿ ವಾದಿಸುತ್ತಿದ್ದಂತೆ; ಪಂಜಾಬ್ ಇನ್ನಷ್ಟು ಹದಗೆಟ್ಟ ಮೇಲೂ ಇವನು ತನ್ನ ರಾಷ್ಟ್ರೀಯ ದೃಷ್ಟಿಗೆ ಬದ್ಧನಾಗಿ ಉಳಿಯುವನೇ? ಎಂದು ನಾನು ಅನುಮಾನಿಸುತ್ತಾ ಇದ್ದಂತೆ – ರಾಮಾನುಜನ್‌ರ ಒಂದು ಕಥೆ ನನಗೆ ನೆನಪಾಗುತ್ತದೆ.