ನನ್ನ ಬಾಲ್ಯದ ದಿನಗಳ ಹಿಂದಕ್ಕೆ ಹೋದ್ರೆ ನನ್ನ ಕಿವಿಯಲ್ಲಿ ಮತ್ತೆ ಮತ್ತೆ ಪ್ರತಿಧ್ವನಿತವಾಗುವ ಎರಡು ಮಾತುಗಳು ಸುಮ್ಮನಾಗು, ಬಾಯಿಮುಚ್ಚು, ಮಾತಾಡ್ಬೇಡ ಇವು. ಸುಮ್ಮನೆ ಇರು, ಮಾತಾಡ್ಬೇಡ, ಬಾಯಿಮುಚ್ಚು ನಿನಗೆ ಗೊತ್ತಾಗಲ್ಲ, ನಿನಗೆ ಅರ್ಥ ಆಗಲ್ಲ ಇವು. ನಮ್ಮ ಸಂದರ್ಭದಲ್ಲಿ ಇದನ್ನ ಗಂಡ ಹೆಂಡತೀಗೆ ಹೇಳ್ತಾ ಇರಬಹುದು. ತಂದೆ – ತಾಯಿ ಕೂಡ ಮಕ್ಕಳಿಗೆ ಹೇಳ್ತ ಇರಬಹುದು. ನನಗೆ ಇದು ಅಧಿಕಾರದ ಸಂಕೇತವಾಗಿ ಮತ್ತೆ ಮತ್ತೆ ಕೇಳಿಸ್ತಾ ಇರುತ್ತೆ. ಈ ಬಾಯಿ ಮುಚ್ಚಿಸುವ ಕ್ರಿಯೆ ಎಲ್ಲ ಬಗೆಯ ಸೃಜನಶೀಲತೆಯನ್ನ ಹತ್ತಿಕ್ಕಬೇಕು. ಅದಕ್ಕೆ ಅವಕಾಶ ಕೊಡಬಾರದು ಅನ್ನುವ ಒತ್ತಡಗಳೀಗೆ ಅದೊಂದು ಸಂಕೇತ ಅಂತ ನಾನು ಅಂದ್ಕೊಡಿದೀನಿ. ಇಂಥ ನಡೆಸಿಕೊಳ್ಳುವಿಕೆಗೆ ಒಂದು ಇಡೀ ಸಮುದಾಯ ಪಕ್ಕಾದಾಗ ೧೯೭೦ನೇ ಇಸವಿಯಲ್ಲಿ ಎಡ್ರಿಯನ್ ರಿಚ್ ಎನ್ನುವ ವಿದ್ವಾಂಸೆ ಒಂದು ಭಾಷಾಣ ಮಾಡ್ಬೇಕಾದ್ರೆ ನನ್ನ ಭಾಷಣಕ್ಕೆ ಈ ರೀತಿಯ ಹೆಸರನ್ನ ಕೊಡ್ತಾರೆ. ವೆಸ್ ವೀ ದ ಡೆಡ್ ಅವೇಕಾನ್ ಅಂಥ. ಶತಮಾನಗಳಿಂದ ಸತ್ತು ಹೋಗಿರುವ ಬದುಕಿದ್ದರೂ ಸತ್ತಂತೆ ಬದುಕಿರುವ ನಾವು ಎಚ್ಚೆತ್ತಾಗ ಏನಾಗಬಹುದು. ನಮ್ಮ ಒಳಗೆ ಏನಾಗುತ್ತೆ ಮತ್ತೆ ಇದ್ರ ಪರಿಣಾಮವಾಗಿ ಇದರ ಹೊರಗೆ ಅನ್ನೋ ಪ್ರಶ್ನೆಯನ್ನ ಅವರು ಕೇಳಿದ್ರು. ನನಗೆ ತಕ್ಷಣ ಈ ಮಾತನ್ನ ಓದಿದಾಗ ನೆನಪಾಗಿದ್ದು ಬಂಡಾಯ ಸಾಹಿತ್ಯ ಸಂಘಟನೆಯನ್ನು ಉದ್ಘಾಟನೆ ಮಾಡ್ಬೇಕಾದ್ರೆ ದೇವನೂರು ಮಹಾದೇವ ಅವರು ಮಾಡಿದ ಭಾಷಣದ ಒಂದು ಭಾಗ. ಅವರು ಅಲ್ಲಿ ಹೇಳಿದ್ರು ದಲಿತ ಲೋಕದ ಅನುಭವದ, ದಲಿತ ದೇಹದ ಒಂದು ಕಿರುಬೆರಳು ಸಾಹಿತ್ಯದಲ್ಲಿ ಪ್ರತ್ಯಕ್ಷವಾದಾಗ ಅದು ಇಷ್ಟೆಲ್ಲ ಪರಿಣಾಮ ಬೀರಿದೆ. ಇಷ್ಟೆಲ್ಲವನ್ನ ಅಲ್ಲಾಡಿಸಿದೆ, ಇಷ್ಟು, ಜನ ಇಂತಹ ಪ್ರಶ್ನೆಗಳನ್ನ ಕೇಳಿಕೊಳ್ಳುವ ಹಾಗೆ ಮಾಡಿದೆ ಅಂಥ. ಹೇಗೆ ದಲಿತ ದೇಹ, ದಲಿತ ಲೋಕ ಬಾಯಿಬಿಟ್ಟಾಗ ಹಲವಾರು ತಿಳುವಳಿಕೆಗಳು ಒಟ್ಟು ಲೋಕಕ್ಕೆ ಬರುತ್ತೆ, ಹಾಗೇನೇ ಮಹಿಳಾ ಲೋಕ ಕೂಡ ಬಾಯಿಬಿಟ್ಟಾಗ, ತನ್ನನ್ನು ತಾನು ತೋಡಿಕೊಂಡಾಗ ಈ ರೀತಿಯ ಹಲವು ಸಾಧ್ಯತೆಗಳು ಮುಕ್ತವಾಗುತ್ತೆ ಅಂಥ ನಾನು ಅಂದ್ಕೋಡಿದ್ದೇನೆ. ಅದಕ್ಕೆ ಆಕೆ ಹೇಳಿದ್ದು ವೆನ್ ವಿ ದ ಡೆಡ್ ಅವೇಕನ್ ಅಂಥ. ಈ ಕೆಲವು ಮಾತುಗಳ ಪೀಠಿಕೆಯೊಂದಿಗೆ ನಾನು ನನ್ನ ಉಪನ್ಯಾಸವನ್ನು ಶುರು ಮಾಡ್ತಾ ಇದ್ದೀನಿ.

ಮೊದಲ್ನೇದಾಗಿ ನಾನು, ಸಾಹಿತ್ಯ ವಿಮರ್ಶಕ ಒಬ್ಬ ಮಾಡಬಹುದಾದ ತಪ್ಪಿನ ಬಗ್ಗೆ ಎಚ್ಚರಿಕೆ ವಹಿಸ್ತಾ ಇದ್ದೀನಿ. ಸೃಜನಶೀಲೆ ಅಂತಂದ್ರೆ ಇದು ಸಾಹಿತ್ಯಕ್ಕೆ ಸಂಬಂಧಪಟ್ಟಂತಹ ಸೃಜನಶೀಲೆ. ಕಥೆ ಬರೆಯೋದು, ಪದ್ಯ ಬರೆಯೋದು, ನಾಟಕ ಬರೆಯೋದು ಕಾವ್ಯರಚನೆ ಮಾಡೋದು, ಅದ್ರ ಬಗ್ಗೆ ಮಾತಾಡ್ಬೇಕು ಅಂಥ ನಾನು ಅಂದುಕೊಂಡಿಲ್ಲ. ಕೇವಲ ಸಾಹಿತ್ಯ ಮಾತ್ರವಲ್ಲ ಇತರ ಕಲೆಗಳಿಗೆ ಸಂಬಂಧಪಟ್ಟ ಸೃಜನಶೀಲತೆಯನ್ನ ಕುರಿತ ಚರ್ಚೆ ಕೂಡ ಇವತ್ತಿನ ನನ್ನ ಉದ್ದೇಶ ಅಲ್ಲ. ಹಾಗೆ ನೋಡೋಕೆ ಹೋದ್ರೆ, ಮಹಿಳೆ ತನ್ನ ದುಡಿಮೆಯ ಕ್ಷಣಗಳಲ್ಲಿ ಹಾಗೂ ಬಿಡುವಿನ ಕ್ಷಣಗಳಲ್ಲಿ ತೋರಿಸಬಹುದಾದ, ತೋರಿಸಬೇಕಾದ ಸೃಜನಶೀಲತೆಯ ಸ್ವರೂಪ ಯಾವುದು, ಮತ್ತೆ ಅಂಥ ಸೃಜನಶೀಲತೆಯನ್ನ ತೋರಿಸಬೇಕೂಂತ ಪ್ರಯತ್ನ ಪಟ್ಟಾಗ ಆಕೆ ಎದುರಿಸಬಹುದಾದ ಸವಾಲುಗಳು, ಅದನ್ನ ಮೀರಬಹುದಾದ ಮಾರ್ಗಗಳು ಯಾವುದು ಅನ್ನೋ ಪ್ರಶ್ನೇನ ನಾನು ನನ್ನ ಮಟ್ಟಿಗೆ ಕೇಳಿಕೊಳ್ಳೋಕೆ ಪ್ರಯತ್ನ ಪಡ್ತೀನಿ. ದುಡಿಮೆ ಮತ್ತೆ ಬಿಡುವು ಹಾಗೂ ಮಹಿಳೆ ಈ ಒಟ್ಟಿನ ಸಂಕಿರಣದ ವಸ್ತುಗಳು – ಸೃಜನಶೀಲತೆ ಅನ್ನುವ ಒಂದು ಪರಿಕಲ್ಪನೆಯನ್ನು ಕೂಡ ನಾನು ಆ ಚೌಕಟ್ಟಿನಲ್ಲಿಟ್ಟು ನೋಡೋದಕ್ಕೆ ಪ್ರಯತ್ನ ಪಡ್ತಾ ಇದ್ದೀನಿ. ಕೇವಲ ಸಾಹಿತ್ಯಿಕ ಸೃಜನಶೀಲತೆ ಅಲ್ಲ, ಕೇವಲ ಕಲಾತ್ಮಕವಾದ ಸೃಜನಶೀಲತೆ ಅಲ್ಲ.

ನಮ್ಮ ಇವತ್ತಿನ ಒಟ್ಟು ಸಮಾಜದ ಅಥವಾ ವ್ಯವಸ್ಥೆಯ ಒಂದು ಲಕ್ಷಣ ಅಂತಂದ್ರೆ ದುಡಿಮೆ ಹಾಗೂ ಬಿಡುವು ಎರಡೂ ಕೂಡ ನಿಯಂತ್ರಿತವಾಗಿದೆ ಮತ್ತು ನಿರ್ದೇಶಿತವಾಗಿದೆ. ಇದನ್ನ ನಾನು ಕೇವಲ ಮಹಿಳೆಯರ ದುಡಿಮೆಗೆ ಮಾತ್ರ ಅನ್ವಯಿಸ್ತಾ ಇದ್ದೀನಿ ಅಂತಲ್ಲ. ಒಟ್ಟು ಸಮಾಜಾನೇ, ಒಟ್ಟು ವ್ಯವಸ್ಥೇನೇ ಮನುಷ್ಯನ ದುಡಿಮೆಯನ್ನು ಹಲವು ಬಗೆಗಳಲ್ಲಿ ನಿಯಂತ್ರಿಸುವ, ನಿರ್ದೇಶಿಸುವ, ಇದು ಹೀಗೆ ಇರಬೇಕು, ಇದು ಇಷ್ಟೇ ಇರಬೇಕು ಎನ್ನುವ ಒತ್ತಡಗಳನ್ನು ಹೇರುವ ಕೆಲಸದಲ್ಲಿ ಸದಾ ತೊಡಗಿಕೊಂಡಿರುತ್ತೆ. ಆದ್ರೆ ಮಹಿಳೆಯರ ಪ್ರಶ್ನೆ ಬಂದಾಗ ಈ ನಿಯಂತ್ರಣ ಮತ್ತೆ ಈ ನಿರ್ದೇಶನ ಇನ್ನಷ್ಟು ಜಾಸ್ತಿಯಾಗುತ್ತೆ ಅಂತ ಕಾಣುತ್ತೆ. ನಾವು ದುಡಿಮೇಂತ ಯಾವುದನ್ನ ಕರಿತಾ ಇದ್ದೀವಿ, ಅದರಲ್ಲಿ ತೊಡಗಿಕೊಳ್ಳೋದ್ರಲ್ಲಿ ನಮಗಿರುವ ಅವಕಾಶಗಳು, ನಮ್ಮ ಸೃಜನಶೀಲತೆಗೆ ಅಲ್ಲಿ ಸಿಗ್ತಾ ಇರುವಂತಹ ಸ್ಥಾನಗಳು ಯಾವ ಬಗೆಯವು? ನಾವು ಬಿಡುವನ್ನ ಉಪಯೋಗ ಮಾಡಿಕೊಳ್ಳುವ ರೀತಿಯ ಮೇಲೆ ಕೂಡ ನಮಗೆ ಎಷ್ಟರ ಮಟ್ಟಿನ ಸ್ವಾತಂತ್ರ್ಯ ಇದೆ ಅನ್ನೋ ಪ್ರಶ್ನೆಯನ್ನ ಕೇಳಿಕೋ ಬೇಕು.

ದುಡಿಮೆಯ ಮಾತನ್ನ ಎತ್ತಿದಾಗ ಎರಡು ನೆಲೆಗಳು ನನ್ನ ಕಣ್ಣೆದುರುಗಡೆ ಬರುತ್ತೆ. ಒಂದು ಕಾಲದಲ್ಲಿ ಯಾವುದಾದರೂ ಒಂದು ವಸ್ತುವನ್ನ ತಯಾರಿಸಬೇಕಾದ್ರೆ ಆರ್ಟಿಜನ್, ನಾನು ಕಲಾವಿದ ಅನ್ನೋ ಮಾತನ್ನ ಬಳಸ್ತಾ ಇಲ್ಲ, ಕಲಾಕುಶಲ ಕೆಲಸಗಾರ ಅನ್ನೋ ಮಾತನ್ನ ಬಳಸ್ತಾ ಇದ್ದೀನಿ. ಆತನಿಗೆ ದುಡಿಮೆಯ ಅಥವಾ ತಾನು ಮಾಡ್ತಾ ಇರುವ ಕೆಲಸದ ಮೊದಲ ಹಂತದಿಂದ, ಕೊನೆಯ ಹಂತದ ತನಕ ಎಲ್ಲ ಹಂತಗಳ ಮೇಲು ಅವನಿಗೆ ನಿಯಂತ್ರಣ ಇರ್ತಾ ಇತ್ತು. ಮಣ್ಣು ತಗೊಳ್ಳೋದ್ರಿಂದ ಶುರು ಮಾಡ್ಕೊಂಡು ಬಣ್ಣ ಹಚ್ಚೋದ್ರವರೆಗೆ ಒಬ್ಬ ಕುಂಬಾರ ತನ್ನ ಕೆಲಸದ ಮೇಲೆ ಹಿಡಿತವನ್ನ ಪಡಕೊಂಡಿರ್ತಾ ಇದ್ದ. ಹಾಗಂದ ಮಾತ್ರಕ್ಕೆ ಆ ಕೆಲಸದ ಹಿಂದೆ ಆರ್ಥಿಕವಾಗಿ ಒತ್ತಡ ಇರ್ತಾ ಇರ್ಲಿಲ್ಲ ಅಂಥ ನಾನು ಹೇಳ್ತಾ ಇಲ್ಲ. ಸಾಮಾಜಿಕ ಒತ್ತಡಗಳು ಇರ್ತಾ ಇರ್ಲಿಲ್ಲಾಂಥ ನಾನು ಹೇಳ್ತಾ ಇಲ್ಲ. ಅದನ್ನ ನಾನು ಅಲ್ಲಗೆಳಿತಾ ಇಲ್ಲಿ ಆದ್ರೆ ಆ ಒಂದು ಕೆಲಸದಲ್ಲೆ ಇರುವಂತಹ ಬೇರೆ ಬೇರೆ ಹಂತಗಳು ಇರ್ತಾ ಇತ್ತಲ್ಲ ಆ ಎಲ್ಲ ಹಂತಗಳ ಮೇಲೆ ಅವನಿಗೆ ಒಂದು ಸ್ವಾತಂತ್ರ ಇದ್ದಾಗ, ಆತ ಈ ಮಣ್ಣಿನ ವಿಗ್ರಹವನ್ನು ಹೀಗೆ ಮಾಡಬಹುದು, ಇಲ್ಲಿ ಈ ರೀತಿಯ ಇನೋವೇಷನ್‌ಗಳನ್ನ ತರಬಹುದು, ಅಂದುಕೊಂಡಾಗ ಅವನ ಸೃಜನಶೀಲತೆಗೆ ಆ ರೀತಿಯ ಕೆಲಸದಲ್ಲಿ ಹೆಚ್ಚಿನ ಅವಕಾಶ ಸಿಕ್ಕುತ್ತೆ. ಆದ್ರೆ ನಮ್ಮ ಸಾಮಾಜಿಕ, ಆರ್ಥಿಕ ಸಂದರ್ಭ ಕೈಗಾರಿಕೆಗಳಿಂದ ನಿರ್ದೇಶಿತವಾದ ಒಂದು ಸಮಾಜ ಬಂದ್ಮೇಲೆ ಒಬ್ಬ ಕೆಲಸಗಾರನಿಗೆ ಅದು ಆ ಕೆಲಸಕ್ಕೆ ಸಂಬಂಧಪಟ್ಟ ಬೇರೆ ಬೇರೆ ಕ್ರಿಯೆಗಳ ಸರಣಿಯಲ್ಲಿ ಒಂದು ಕೊಂಡಿ ಮಾತ್ರ ಆಗಿರ್ತಾ ಇದ್ದ. ತಾನು ಮಾಡ್ತಾ ಇರುವ ಕೆಲಸ ಅದರ ಒಟ್ಟು ಸಮಗ್ರವಾದ ಪರಿಣಾಮ ಅನ್ನೋದಾದ್ರೂ ಆಗ್ಲಿ ಸಮಗ್ರವಾದ ಸ್ವರೂಪ ಅನ್ನೋದಾಗ್ಲಿ ಅವನಿಗೆ ಅದು ಗೊತ್ತಿರೋದೂ ಇಲ್ಲ. ಗೊತ್ತಿದ್ರೂ ಕೂಡ ಅದರ ಬೇರೆ ಬೇರೆ ಭಾಗಗಳ ಮೇಲೆ ಅವನಿಗೆ ಯಾವ ನಿಯಂತ್ರಣ ಕೂಡ ಇರ್ತಾ ಇರ್ಲ್ಲಿಲ್ಲ. ಮೂವತ್ತು ವರ್ಷಗಳ, ನಲವತ್ತು ವರ್ಷಗಳ ದುಡಿಮೆಯ ಬದುಕನ್ನ ಹೀಗೆ ಮುಗಿಸ್ಬೇಕಾಗಿ ಬಂದಾಗ ಆತನ ಸೃಜನಶೀಲತೆ ಅನ್ನೋದು ಖಂಡಿತವಾಗಿ ಸಾಯುತ್ತೆ ಅಂತ ನಾನು ಅಂದುಕೊಂಡಿದ್ದೇನೆ. ಈ ಎರಡನೆಯ ಗುಂಪಿನ ನಾನ್ ಕ್ರಿಯೇಟಿವಿಟಿ ಇದೆಯಲ್ಲ. ಸೃಜನಶೀಲತೆಗೆ ಅವಕಾಶವನ್ನು ಕೊಡ್ದೇ ಇರ್ತಕ್ಕಂತ ಒಂದು ಸಂಗತಿ. ಅದು ಮಹಿಳೆಯರ ದುಡಿಮೆಯನ್ನ ಕೂಡ ನಿಯಂತ್ರಿಸ್ತಾ ಇರ್ತಕ್ಕಂಥ ಒಂದು ಸಂಗತಿ ಅಂಥ ನಾನು ಅಂದ್ಕೊಂಡಿದ್ದೇನೆ. ಎರಡ್ನೇದು ಮಹಿಳೆಯರ ಸಂದರ್ಭದಲ್ಲಿ ಇನ್ನಷ್ಟು ಮುಖ್ಯವಾದದ್ದು. ದುಡಿಮೆ ಅನ್ನೋದು ಅದ್ರಲ್ಲಿ ಜವಾಬ್ದಾರಿ ಮತ್ತೆ ಅಧಿಕಾರಿಗಳ ಶ್ರೇಣೀಕರಣ ಅಂಥ ನಾನು ಅದನ್ನ ಕರೆಯೋದಕ್ಕೆ ಇಷ್ಟಪಡ್ತೀನಿ.

ಯಾವುದಾದ್ರೂ ಒಂದು ಕೆಲಸದಲ್ಲಿ ಬೇರೆ ಬೇರೆ ಹಂತಗಳಿರುತ್ತೆ. ಈ ಇಡೀ ಕೆಲ್ಸ ಇಲ್ಲಿಂದ ಇಲ್ಲೀತನಕ ಆಗ್ಬೇಕು ಅಂತ ನಿಯಂತ್ರಣ ಮಾಡ್ತಾ ಇರುವಂಥ ವ್ಯಕ್ತಿ ಮಹಿಳೆ ಅಲ್ಲದಾಗ. ಮಹಿಳೆಗೆ ಸಿಗ್ತಕ್ಕಂಥ ಕೆಲಸದ ಸ್ವರೂಪವೇ ಆ ರೀತಿಯ ಜವಾಬ್ದಾರಿಗಳನ್ನ ಪಡೆಯದ, ಅಧಿಕಾರ ಇಲ್ಲದ ಕೆಲ್ಸ ಆದಾಗ, ಆಕೆಗೆ ಅಲ್ಲಿ ತನ್ನ ಸೃಜನಶೀಲತೆಗಳನ್ನ ಬಳಸಿಕೊಳ್ಳುವ ಅವಕಾಶ ಖಂಡಿತವಾಗಿ ಸಿಕ್ಕೋದಿಲ್ಲಾಂತ ಕಾಣುತ್ತೆ. ಅಂದ್ರೆ ಇಲ್ಲೂ ಕೂಡ ಅಷ್ಟೆ, ನಾನು ದುಡಿಮೆಯನ್ನ ಮಾಡ್ತಾ ಇದ್ದೇನೆ. ಈ ದುಡಿಮೆ ಹೇಗಿರಬೇಕು ಅನ್ನೋದು ನಾನು ಆ ಒಟ್ಟು ಶ್ರೇಣಿಯಲ್ಲಿ ಅತ್ಯಂತ ಕೆಳಗಿರೋದ್ರಿಂದ ಗುಮಾಸ್ತಳಾಗಿರಬಹುದು, ಒಂದು ನರ್ಸರಿ ಶಾಲೆಯಲ್ಲಿ ಅಧ್ಯಾಪಕಿಯಾಗಿರಬಹುದು ಮತ್ಯಾವುದೋ ಒಂದು ಕೆಲ್ಸ ಮಾಡ್ತಾ ಇರ್ಬಹುದು. ಹಾಗಾದಾಗ ಅಂಥ ಕೆಲಸಗಳಲ್ಲಿ ಸೃಜನಶೀಲತೆಯ ಬಳಸುವಿಕೆಗೆ ಇರುವಂತಹ ಅವಕಾಶ ಅತ್ಯಂತ ಸೀಮಿತವಾದದ್ದಾಗಿರುತ್ತೇಂಥ ಕಾಣುತ್ತೆ, ಯಾಕೆಂದ್ರೆ ಅಧಿಕಾರ ಶ್ರೇಣಿಯ ಮೇಲಿನ ಹಂತಗಳು ಅದನ್ನ ತಮ್ಮ ಇಷ್ಟಕ್ಕೆ ತಕ್ಕಾಗೆ ತಿದ್ದುತ್ತಾ ಇರುತ್ತೆ. ತಮ್ಮದೇ ಆದ ಅಪೇಕ್ಷೆಗಳನ್ನ ಪಡೆದಿರುತ್ತೆ.

ಮಹಿಳೆಯಾದವಳಿಗೆ ತನ್ನ ನಿಜವಾದ ಚೈತನ್ಯದ ಮೂಲಗಳಿದೆಯಲ್ಲ ಅದನ್ನ ನಾವು ಬೇಕಾದ್ರೆ ಲಿಬಿಡಿನಸ್ ಎನರ್ಜಿ ಅಥವಾ ಲಿಬಿಡೋಗಳ ಬಿಡುಗಡೆ ಮಾಡುವಿಕೆ ಅಂಥ ಕರೀಬಹುದು. ಆ ತನ್ನ ಚೈತನ್ಯ ಅನ್ನೋದನ್ನ, ತನ್ನ ಇಷ್ಟಕ್ಕೆ ತಕ್ಕ ಹಾಗೆ ಅಭಿವ್ಯಕ್ತಿ ಕೊಡೋದಕ್ಕೆ ಅವಕಾಶ ಸಿಕ್ಕದೇ ಹೋದ್ರೆ, ಅಂದ್ರೆ ದುಡಿಮೆಯಲ್ಲಿ ಅವಳನ್ನ ತೊಡಗಿಸಿಕೊಳ್ತಾಕ್ಕಂಥ ವ್ಯವಸ್ಥೆ, ಅವಳಿಂದ ಮಾಡುವಂತಹ ಅಪೇಕ್ಷೆಗಳಿಗೂ, ಅವಳಿಗೆ ಇರ್ತಾಕ್ಕಂಥ ಸಾಧ್ಯತೆಗಳಿಗೂ ನಡುವೆ ತಾಳ ಮೇಳ ಇಲ್ದೆ ಹೋದಾಗ ಒಂದು ಸಮಸ್ಯೆ ಉಂಟಾಗುತ್ತೆ. ಅಷ್ಟೆ ಅಲ್ಲ ದುಡಿಮೆ ಮಾಡೋ ಕ್ಷಣಗಳನ್ನ ಬಿಟ್ಟು ಮಿಕ್ಕ ಕ್ಷಣಗಳಲ್ಲಿ ಆಕೆಯ ಯಾವ ರೀತಿಯ ಬದುಕನ್ನ ಬದುಕ್ತಾ ಇದ್ದಾಳೆ? ಬಿಡುವು ಅಂಥ ಮಾತ್ರ ಅಲ್ಲ, ಕುಟುಂಬದಲ್ಲಿ ಕಳಿಯೋ ಕಾಲ ಇರ್ಬಹುದು, ತಂದೆ – ತಾಯಿಗಳೊಂದಿಗೆ, ಅಣ್ಣ – ತಮ್ಮ, ಅವಳ ಸೆಲ್ಫ್ ಎಕ್ಸ್ ಪ್ರೆಷನ್ ಅಥವಾ ಅವಳ ಚೈತನ್ಯದ ಅಭಿವ್ಯಕ್ತಿಗೆ ಸಿಕ್ತಾಕ್ಕಂಥ ಅವಕಾಶ ಎಂಥದ್ದು? ಅವಕಾಶ ಸಿಕ್ಕದೇ ಇದ್ದಾಗ ಅದು ಅವಳ ದುಡಿಮೆಯ ಮೇಲೆ ಬೀರುವ ಪರಿಣಾಮ ಎಂಥದು? ಅದಕ್ಕಿಂತ ಹೆಚ್ಚಾಗಿ ನನಗೆ ಆತಂಕ ಅಂಥ ಅನ್ನಿಸೋದು ಅದು ಒಂದು ನಿರ್ದಿಷ್ಟವಾದ ಮಾನಸಿಕ ಸ್ಥಿತಿ ನನಗೆ ಆತಂಕ ಅಂಥ ಅನ್ನಿಸೋದು ಅದು ಒಂದು ನಿರ್ದಿಷ್ಟವಾದ ಮಾನಸಿಕ ಸ್ಥಿತಿ ಅಂತ ಯಾವುದನ್ನ ಕರೀತೀವಿ ಅದನ್ನ ಕ್ರಿಯೇಟ್ ಮಾಡುತ್ತೆ, ಅದನ್ನ ಉಂಟು ಮಾಡುತ್ತೆ ಅನ್ನೋದು. ಈ ಮೈಂಡ್ ಸೆಟ್ ನಾ ನಿಜವಾದ ಸಮಸ್ಯೆಯಂದ್ರೆ ಅದು ಸದಾ ಆತಂಕ (ಎಂಗ್ಸೈಟಿ)ಗಳಿಂದ ಕೂಡಿರುತ್ತೆ. ಮತ್ತು ಅದು ಅನೇಕ ಸಂದರ್ಭಗಳಲ್ಲಿ ಭದ್ರತೆಗಳಲ್ಲಿ ಭದ್ರತೆ (ಸೆಕ್ಯೂರಿಟಿ) ಮತ್ತು ಸ್ವಾತಂತ್ರ್ಯ (ಫ್ರೀಡಂ) ಇವುಗಳ ನಡುವೆ ಆಯ್ಕೆಯ ಪ್ರಶ್ನೆ ಬಂದಾಗ ಅದು ಭದ್ರತೆಯನ್ನಾರಿಸ್ಕೊಂಡು ಸ್ವಾತಂತ್ರ್ಯವನ್ನ ಸ್ವಲ್ಪ ಮಟ್ಟಿಗೆ ಬಿಟ್ಟು ಕೊಡುವ ಸಾಧ್ಯತೆ ಇರುತ್ತೆ. ಸ್ವತಂತ್ರ್ಯಾನ ಕೊಟ್ಟಿರೋದೇ ಕಡಿಮೆ. ಆದ್ರೆ ಆ ಸ್ವಾತಂತ್ರ್ಯವನ್ನ ಎಕ್ಸಸೈಜ್ ಮಾಡೋಬಹುದಾದ ಚಿಕ್ಕಪುಟ್ಟ ಸಂದರ್ಭಗಳಲ್ಲೂ ಕೂಡ ಅದನ್ನ ಬಿಟ್ಟು ಕೊಡೋದು ಭದ್ರತೆಯ ಫಲವತ್ತಾಗುತ್ತೆ. ಜೊತೆಗೇನೆ ಆ ಮೈಂಡ್ ಸೆಟ್‌ನ ಇನ್ನೊಂದು ಲಕ್ಷಣಾಂತಂದ್ರೆ ಅದು ತನಗೆ ಸ್ವಾಭಿವ್ಯಕ್ತಿ ಸಿಕ್ತ ಇಲ್ಲ ಅನ್ನೋದ್ರಿಂದ ಉಂಟಾಗುವ ನಿರಾಶೆ ಇದೆಯಲ್ಲ, ಹತಾಶೆ ಇದೆಯಲ್ಲ, ಅದು ಬೇರೆ ಯಾರ್ಕಡೆನೋ ಬಿಟ್ಟ ಬಾಣ ಆಗೋದಿಲ್ಲ. ಅದು ತನ್ನ ಕಡೆಗೆ ತಾನೇ ಬಿಟ್ಟುಕೊಂಡಂಥ ಬಾಣ ಆಗಿರುತ್ತೇಂಥ ಕಾಣುತ್ತೆ. ಇಂಗ್ಲಿಶ್‌ನಲ್ಲಿ ಯಾವುದನ್ನ ಸೆಲ್ಫ್‌ ಡಿಸ್ಟ್ರಕ್ಟ್‌ ಬಟನ್ ಅನ್ನೋಂಥ ಮಾತನ್ನ ಬಳಸ್ತೀವಿ ನಾವು. ಅದು ಆತ್ಮನಾಶಕ್ಕೆ ಕಾರಣ ಆಗ್ತಾಕ್ಕಂಥ ಪ್ರತಿಕ್ರಿಯೆಗಳಿಗೆ, ತನ್ನ ಬಗ್ಗೆ ತನಗೇ ಉಂಟಾಗುವಂತಹ ಒಂದು ಅತೃಪ್ತಿಗೆ ಕಾರಣವಾಗುತ್ತಲ್ಲ. ಇದು ಆ ಮೈಂಡ್ ಸೆಡ್‌ನಾ ಮತ್ತೊಂದು ಲಕ್ಷಣಾಂಥ ಕಾಣುತ್ತೆ.

ನನಗೆ ಅನೇಕ ಸಲ ಅನ್ಸೋ ಹಾಗೇ ಭಯ ಮತ್ತು ಸೃಜನಶೀಲತೆ ಇವೆರಡೂ ಒಟ್ಟಿಗೆ ಇರೋಕೆ ಸಾಧ್ಯ ಇಲ್ಲ ಅಂತ ಕಾಣುತ್ತೆ. ಯಾವಾಗ ಭಯ ಇರುತ್ತೆ, ತನ್ನನ್ನ ಒಪ್ಪಿಕೊಳ್ಳಬಹುದು, ಒಪ್ಪಿಕೊಳ್ಳದೇ ಇರ್ಬಹುದು ಅನ್ನೋ ಭಯ, ನಮ್ಮ ಎಲ್ಲ ಕ್ರಿಯೆಗಳನ್ನ ನಿಯಂತ್ರಿಸ್ತಾ ಇರುತ್ತೆ. ಆಗ ಮಾಮೂಲಾಗಿ ಏನಿದೆ ಅದಕ್ಕಿಂತ ಭಿನ್ನವಾಗೋದಿಕ್ಕೆ ತನ್ನದೇ ಆದ ಸ್ವಂತಕೆಯನ್ನ ಮಾಡ್ತಾ ಇರುವ ಕೆಲಸದಲ್ಲಿ ತೊಡಗಿಸ್ಕೊಳ್ಳೋದಕ್ಕೆ ಸಾಧ್ಯ ಆಗೋದಿಲ್ಲ. ಅದು ಮತ್ತೊಂದು ಅಪಾಯ. ಹೀಗೆ ಯಾಕಾಗುತ್ತೆ ಅನ್ನೋ ಪ್ರಶ್ನೆಗೆ ಹೆಣ್ಣು ತನ್ನ ಜೀವನದಲ್ಲಿ ಲೈಂಗಿಕ ಅಧೀನತೆಗೆ ಒಳಪಟ್ಟಿರೋದು ಅಥವಾ ತನ್ನ ಲೈಂಗಿಕವಾದ ಕಾಮನೆಗಳ ಅಭಿವ್ಯಕ್ತಿಗೆ ಯಾವುದೇ ರೀತಿಯ ಅವಕಾಶವನ್ನಾಗಲಿ, ಸ್ವಾತಂತ್ರ್ಯವನ್ನಾಗಲಿ ಪಡೆಯದೇ ಇರೋದು, ಪುರುಷ ಪ್ರಧಾನ ಲೈಂಗಿಕತೆಯ ಒತ್ತಡಗಳನ್ನ ಪ್ರಶ್ನೆ ಕೇಳದಂತೆ ಒಪ್ಪಿಕೊಳ್ಳಬೇಕಾಗಿರುವುದು, ಇವೆಲ್ಲವೂ ಕೂಡ ಅಂಥ ಒಂದು ಮನಸ್ಥಿತಿಯನ್ನ ಉಂಟು ಮಾಡೋದ್ರಲ್ಲಿ ಎಷ್ಟರಮಟ್ಟಿಗೆ ಜವಾಬ್ದಾರಿಯಾಗಿರಬಹುದು ಅನ್ನೋ ಪ್ರಶ್ನೆಯನ್ನೂ ಕೂಡ ಕೇಳಿಕೋಬಹುದೂಂಥ ಕಾಣುತ್ತೆ.

ಮುಂದಿನ ಹಂತಕ್ಕೆ ಹೋಗೋದಾದ್ರೆ, ಮಹಿಳೆಯರದು ಬಹುಪಾಲು ಸಂದರ್ಭಗಳಲ್ಲಿ ಗಳಿಕೆ ಇಲ್ಲದ ದುಡಿಮೆ. ಎರಡ್ನೇದು ತನ್ನ ಗಳಿಕೆ ಇದ್ದರೆ, ಅದನ್ನ ಉಳಿಸಿಕೊಳ್ಳದ ಅವಕಾಶ ಇಲ್ಲದ ದುಡಿಮೆ. ಇನ್ನಷ್ಟು ಸಂದರ್ಭಗಳಲ್ಲಿ ಅದು ದುಡಿಮೆ ಆಗಿರುತ್ತೆ, ಆದ್ರೆ ಅದನ್ನ ದುಡಿಮೆ ಅಂಥ ಕರೆದು ಅಕ್ನಾಲೆಜ್ ಮಾಡ್ತಾಕ್ಕಂಥ ಸಂದರ್ಭಗಳು ಕಡಿಮೆ. ಅದನ್ನೆ ಅದೃಶ್ಯ ದುಡಿಮೆ ಅನ್ನೋ ಮಾತಲ್ಲಿ ಬಹಳ ಸರಿಯಾಗಿ ಬಳಸಿದ್ದಾರೆ. ಅಷ್ಟಲ್ದೆ ಇನ್ನೂ ಕೆಲವು ಸಲ ಆ ದುಡಿಮೆ ತ್ಯಾಗ ಅನ್ನೋ ಹೆಸರಲ್ಲಿ ವೈಭವೀಕರಿಸ್ಕೊಂಡಿರುತ್ತೆ. ಇದನ್ನ ನಾನು ನನ್ನ ಸಂತೋಷಕ್ಕೋಸ್ಕರನೇ ಮಾಡ್ತಾ ಇದ್ದೀನಿ ಅನ್ನುವ ಒಂದು ತಿಳುವಳಿಕೆ ಕೂಡ ಒಂದು ಭ್ರಮೆಯನ್ನೂ ಅವಳಲ್ಲಿ ಗುರುತಿಸಿರುತ್ತೇಂಥ ಕಾಣುತ್ತೆ. ನಾನು ಇದ್ರ ಬಗ್ಗೆ ಮತ್ತೆ ಮಾತಾಡ್ತೀನಿ.

ಈ ರೀತಿಯ ಗಳಿಕೆ ಇಲ್ಲದ ದುಡಿಮೆಯೆಂದು ಕರೆಸಿಕೊಳ್ಳದ, ತ್ಯಾಗವೆಂದು ಕರೆಸಿಕೊಳ್ಳುವ ದುಡಿಮೆ ಇದೆಯಲ್ಲ ಅಂಥ ದುಡಿಮೆಗೆ ಆದೀನು ಇಲ್ಲ, ಅಂತ್ಯಾನೂ ಇಲ್ಲ. ಅದು ಸತತವಾಗಿ ಒಂದೇ ಸಮನೆ ತೊಡಗಿಸಿಕೊಳ್ಳಬೇಕಾದ ದುಡಿಮೆ ಆಗುತ್ತೆ. ಮಕ್ಕಳಾಗ್ಬಹುದು, ಮಮ್ಮಕ್ಕಳಾಗಬಹುದು, ಪಕ್ಕದ ಮನೆಯವರ ಮಕ್ಕಳಾಗ್ಬಹುದು, ಎದುರು ಮನೆಯ ಮಕ್ಕಳಾಗ್ಬಹುದು. ಇದು ನಾನು ಸರಿಯಾಗೇ ಒಳ್ಳೆದನ್ನೇ ಮಾಡ್ತಾ ಇದ್ದೀನಿ ಅಂಥ ಅಂದಕೊಂಡು ತನ್ನ ಸ್ವಂತ ಸಾಧ್ಯತೆಗಳನ್ನು ಮೊಟಕು ಮಾಡಿಕೊಳ್ತಾಕ್ಕಂಥ ಒಂದು ಪ್ರಕ್ರಿಯೆ ಅಲ್ಲಿ ನಡಿತಾ ಇರುತ್ತಾ. ಇಂಥ ಸಂದರ್ಭಗದಲ್ಲಿ ಬಿಡುವು ಅನ್ನೋದನ್ನ ಹಿಂದಿ ಮಾತ್ನ ಬಳಸೋದಾದ್ರೆ ಈ ಬಿಡುವುದು ಇಸ್ ಕೋತ್ ಕೀ ಮಾಲಿ? ಅಂಥ ನಾವು ಹುಡುಕಬೇಕಾಗುತ್ತೆ. ಯಾವ ಹೊಲದ ಬೆಳಿಯೋ ಮೂಲಂಗಿನೋ ಅದು ಗೊತ್ತಿಲ್ಲ. ಬಿಡುವು ಅನ್ನೋದು ಬೇರೆ ಬೇರೆ ಕಾರಣಗಳಿಂದ ಸಿಗೋ ಬಿಡುವು. ಆ ಬಿಡುವು ಏನಾಗಿದೆ? ಅದು ಒಂದು ನಿಷ್ಕ್ರಿಯವಾದ, ಅಂದ್ರೆ ನಾನು ಪ್ಯಾಸೀವ್ ಅಂಥ ಯಾವುದನ್ನ ನಿರ್ವಚನ ಮಾಡ್ಬಹುದೋ ಅಂತಹ ಮನರಂಜನೆಯಲ್ಲಿ ಅದು ಕಳೆಯಲ್ಪಡುತ್ತದೆ. ಗಂಡಸ್ರೂ ಆಗ್ಬಹುದು, ಹೆಂಗಸ್ರೂ ಆಗ್ಬಹುದು. ಹಾಗೇ ಅಂಥಹ ಮನರಂಜನೆಯೇ ಬಿಡುವನ್ನ ಕಳೆಯುವ ದಾರಿಯಾಗೋದಕ್ಕೆ ಕಾರಣ. ಮನರಂಜನೆಯ ಒಂದು ಕೈಗಾರಿಕೆ ಲೆಜರ್ ಇಂಡಸ್ಟ್ರೀ ಅಂತ ನಾವು ಯಾವುದನ್ನ ಕರೀಬಹುದೋ ಅದು ಸಂಪೂರ್ಣವಾಗಿ ವಾಣಿಜ್ಜೀಕರಣಗೊಂಡ ಹಣಕಾಸಿನ ಒತ್ತಾಸೆಗಳಿಂದ, ಹಣಕಾಸಿನ ಆಶಯಗಳಿಂದ ಕೆಲ್ಸ ಮಾಡ್ತಾ ಇರುತ್ತೆ. ಇದನ್ನ ತಪ್ಪಿಸ್ಕೊಳ್ಳೋದಕ್ಕೆ ಗಂಡಸರಿಗಾಗಲಿ, ಹೆಂಗಸರಿಗಾಗಲೀ ಬಹಳ ಕಷ್ಟವಾದ ಪ್ರಶ್ನೆ ಅಂಥ ಕಾಣುತ್ತೆ. ಹಾಗೆ ಬಿಡುವು ಸಿಕ್ಕಾಗ್ಲೂ ಕೂಡ ಹೆಣ್ಣು ಮಕ್ಕಳು ತಮ್ಮದೇ ಆದ ಈ ಮನರಂಜನೆಯ ಇಂಡಸ್ಟ್ರಿಯಿಂದ ದೂರ ಇರ್ತಕ್ಕಂಥ ಬೇರೆ ಕೆಲವು ಚಟುವಟಿಕೆಗಳನ್ನ ಕಂಡು ಕೊಂಡ್ರೆ, ಆ ಚಟುವಟಿಕೆಗಳನ್ನ ಇವು ಎಷ್ಟ್ರಮಟ್ಟಿಗೆ ಸರಿ ಅಂಥ ತೀರ್ಮಾನ ಮಾಡ್ಬೇಕಾಗುತ್ತೆ. ಇವು ಎಷ್ಟರಮಟ್ಟಿಗೆ ಪ್ರಸ್ತುತ ಅಂಥ ತೀರ್ಮಾನ ಮಾಡ್ಬೇಕಾಗುತ್ತದೆ.

ಹೊರಗಿರುವ ಪುರುಷ ಪ್ರಧಾನ ಸಮಾಜ ಆದಾಗ ಆಕೆಯ ಇದ್ದ ಬಿದ್ದ ಅಲ್ಪಸ್ವಲ್ಪ ಕ್ರಿಯೇಟಿವಿಟಿ ಕೂಡ ಅದು ಪಕ್ಕಕ್ಕೆ ತಳ್ಳಲ್ಪಡುತ್ತೆ. ಓ ಇದಾ, ಓ ಈ ಕೆಲ್ಸಾನಾ, ಇದು ಮಾಡ್ತಾ ಇರ್ಬಹುದು. ಆದ್ರೆ ಇದೇನು ಅಷ್ಟು ಮುಖ್ಯ ಅಲ್ಲ ಅನ್ನುವ ರೀತಿಯಲ್ಲಿ ಅದನ್ನ, ಮಾರ್ಜಿನೈಜ್‌ ಮಾಡುವ ಪ್ರಯತ್ನಗಳು ನಡಿತಾ ಇರುತ್ತೆ. ಇದರ ಜೊತೇಲೇ ನನಗೆ ಪ್ರಶ್ನೆ ಮತ್ತೆ ಮತ್ತೆ ಕಾಡೋದು. ಒಬ್ಬ ಹೆಣ್ಣು ಮಗಳು ಮೂವತ್ತೈದು ವರ್ಷ ಆದಾಗ, ನಲವತ್ತು ವರ್ಷ ಆದಾಗ ತಾನು ಹೊಸದಾಗಿ ಏನನ್ನಾದ್ರೂ ಕಲಿಬೇಕೂಂತ ಅಪೇಕ್ಷೆಪಟ್ರೆ, ಅದೊಂದು ಅಧ್ಯಯನ ಶಿಸ್ತಾಗ್ಬಹುದು, ಒಂದು ಕಸುಬಾಗ್ಬಹುದು. ಈಗ ನನಗೆ ಅವಕಾಶ ಇದೆ. ಕಲಿಬೇಕು ಅನ್ನೋ ಆಸೆ ಇದೆ. ಕಲಿಯೋದಕ್ಕೆ ಸಾಧ್ಯ ಇದೆ. ಕಲಿಬಹುದಾ ಅಂಥ ಪ್ರಯತ್ನಪಟ್ಟರೇ, ಆ ಕಲಿಯೋ ಅವಕಾಶಗಳನ್ನ ಸತತವಾಗಿ ಭಾರತೀಯ ಸಮಾಜದಲ್ಲಂಥೂ ಕೂಡ ನಿರಾಕರಣೆ ಮಾಡ್ಲಾಗುತ್ತೇಂಥ ಕಾಣುತ್ತೆ. ನಾವು ಯಾವುದೇ ಒಂದು ಕಾಲೇಜಿನ ತರಗತೀಲಿ ನಲವತ್ತೈದು ವರ್ಷದ ಒಬ್ಬ ವಿದ್ಯಾರ್ಥಿನಿ ಕುಳಿತ್ಕೊಂಡು ಪಾಠ ಕೇಳೋದುನ್ನ ನಾವು ಕಲ್ಪಿಸ್ಕೊಳ್ಳೋಕೂ ಆಗಲ್ಲ ಅನ್ನೋ ವಾತಾವರಣ ಇದೆ. ಬೇರೆ ಬೇರೆ ದೇಶಗಳಲ್ಲಿ, ಬೇರೆ ಬೇರೆ ಸಂದರ್ಭಗಳಲ್ಲಿ ಈ ರೀತಿಯ ಅವಕಾಶಗಳು ಮುಕ್ತವಾಗಿ ಇರೋದ್ರಿಂದಾನೇ ಅನೇಕ ಮಹಿಳೆಯರು ಸೃಜನಶೀಲತೆಯ ಹೊಸ ಬಾಳನ್ನ ಕಂಡುಕೊಂಡದ್ದಕ್ಕೆ ಕೆಲವಾದ್ರೂ ನಿದರ್ಶನಗಳನ್ನ ನಾವು ಕೇಳಿದ್ದೀವಿ.

ಅಲ್ಲೇನೇ ನಾನು ಇನ್ನೊಂದು ಹೇಳೋಕೆ ಇಷ್ಟಪಡೋದು. ನಮ್ಮೆಲ್ಲರ ಮನಸ್ಸಲ್ಲಿ, ಮಹಿಳೆಯರ ಮನಸ್ಸಲ್ಲಿ ಒಳಗಡೇನೇ ಇರೋ ಪೋಲೀಸ್ ಅಂಥ ಕರಿಯೋಕೆ ಇಷ್ಟಪಡ್ತೀನಿ. ಇದನ್ನು ಹುಸಿ ನೈತಿಕತೆ ಅಂಥ ಫಾಲ್ಸ್ ಮೆರಾಲಿಟಿ ಅಂಥ ಬೇಕಾದ್ರೆ ಕರೀಬಹುದು. ಆ ಒಳಗಡೇನೇ ಇರೋ ಪೊಲೀಸ್ ಏನ್ ಮಾಡುತ್ತೆ? ಎಲ್ಲ ವ್ಯಕ್ತಿಗಳಿಗೂ ಕೂಡ ಒಂದು ರೀತಿಯ ಅಪರಾಧಿ ಪ್ರಜ್ಞೆಯನ್ನು ತರುತ್ತೆ. ನಾನು ಮಾಡ್ತಾ ಇರೋದು ನೈತಿಕವಾಗಿ ಸರಿಯಲ್ಲ ಅನ್ನುವಂತಹ ತಪ್ಪು ತಿಳುವಳಿಕೆಯ ಸಂಕೋಲೆಗಳನ್ನ ಅದರ ಮೇಲೆ ಒಳಗಡೇನೇನೆ, ಆಳವಾಗಿ ಬೇರೆ ಬಿಡೋ ಹಾಗೆ ಮಾಡಿರ್ತಾದೇಂಥ ಕಾಣುತ್ತೆ. ಇಂಥ ಸಂದರ್ಭದಲ್ಲಂತೂ ಕೂಡ ಗಂಡಸರು ತೋರಿಸ್ತಕ್ಕಂಥ ಸಹಾನುಭೂತಿ ಕೂಡ ಆ ಹುಸಿ ನೈತಿಕ ಪ್ರಜ್ಞೆ ಇದೆಯಲ್ಲ, ಆ ಒಳಗಿನ ಪೊಲೀಸ್ ತಲೆ ಮೇಲೆ ಮೊಟುಕೋದಿದೆಯಲ್ಲ ಅದು ಮತ್ತಷ್ಟು ಜಾಸ್ತಿಯಾಗೋ ಹಾಗೆ ಮಾಡುತ್ತೆ. ನಾನು ಇದನ್ನ ಮಾಡ್ಬೇಕು. ತಂದೆ – ತಾಯಿಗಳನ್ನ, ಮುದುಕರನ್ನ ನೋಡ್ಬೇಕಾದದ್ದು ನನ್ನ ಕರ್ತವ್ಯ. ಮಕ್ಕಳನ್ನ ನೋಡ್ಕೋಬೇಕಾದದ್ದು ನನ್ನ ಕರ್ತವ್ಯ. ನೋಡಿಕೊಳ್ಳೋದೂ ಅಂದ್ರೆ ಏನು? ಅದರ ಎಲ್ಲ ಅವಶ್ಯಕತೆಗಳನ್ನೂ ಅವರ ಅಪೇಕ್ಷೆಗೆ ತಕ್ಕಂತೆ ಸ್ವಲ್ಪವೂ ಬಿಡದಂತೆ ಪೂರೈಸ್ಕೊಳ್ಳೋದು. ಅದು ನಿಮ್ಮ ಕರ್ತವ್ಯಂಥ ನಾವು ಹೇಳೋದು ಬೇರೆ. ನಿಮ್ಮ ಕರ್ತವ್ಯ ಅಂಥ ನಿಮ್ಮ ಮನಸ್ಸಿನ ಆಳದಲ್ಲಿ ಬೇರು ಬಿಡೋ ಹಾಗೆ ಒಂದು ಸಾಮಾಜೀಕರಣ ಆಗಿದ್ರೆ; ಆ ಅಪರಾಧಿ ಪ್ರಜ್ಞೆ ಅನ್ನೋದೇ ಪ್ರಾಯಶಃ ಸೃಜನಶೀಲತೆಯ ಶತೃ ಆಗುತ್ತೆ ಅಂಥ ನಾನು ಅಂದ್ಕೊಂಡಿದ್ದೇನೆ. ನನ್ನ ಸುತ್ತಲಿನ ಅನೇಕ ಹೆಣ್ಣು ಮಕ್ಕಳು ಇದನ್ನ ಮಾಡ್ಬೇಕಾ, ಅದನ್ನ ಮಾಡ್ಬೇಕಾ, ಮತ್ತೊಂದನ್ನ ಮಾಡ್ಬೇಕಾ ಅನ್ನೊ ಪ್ರಶ್ನೆ ಕೇಳಿಕೊಂಡಾಗ ಅವರ್ನ ಮತ್ತೆ ಮತ್ತೆ ಕೆಳಗಡೆ ಎಳಿತಾ ಇರ್ತಕ್ಕಂಥದ್ದು ಈ ಒಳಗಡೆ ಇರೋ ಪೊಲೀಸ್ ಆಗಿರುತ್ತೆ.

ಈ ಒಳಗಡೆ ಇರೊ ಪೋಲೀಸ್ ಪುರುಷ ಪ್ರಧಾನ ಸಮಾಜ ಪೊಲೀಸ್ ಆದಾಗ ನಾನು ಕೆಟ್ಟವಳೂಂಥ ಅನ್ನಿಸ್ಕೊಂಡ್ರೂ ಪರವಾಗಿಲ್ಲ, ಮಕ್ಕಳನ್ನ ನಿರ್ಲಕ್ಷ ಮಾಡ್ತಾ ಇದ್ದಾಳೇಂಥಾ ಅಂದ್ಕೊಂಡ್ರೂ ಪರವಾಗಿಲ್ಲ, ನನ್ನ ಕ್ರಿಯೇಟಿವ್‌ನ ಪಾಸಿಬಲ್ಸ್‌ನ ನಿಜ ಮಾಡ್ಕೊಳ್ತೀನಿ ಅನ್ನೋದಕ್ಕೆ ಬೇಕಾದಂತಹ ಒಂದು ಮನಸ್ಸು ಮಾಡೋದಿದೆಯಲ್ಲ ಅದು ಪ್ರಾಯಶಃ ಹೆಣ್ಣು ಮಕ್ಕಳಿಗೆ ಅತ್ಯಂತ ಕಷ್ಟವಾದ ತೀರ್ಮಾನ ಆಗಿದೆಯಂಥ ಕಾಣುತ್ತೆ. ಈ ಒಳಗಿನ ಪೊಲೀಸುಗಳನ್ನ ನಾಶ ಮಾಡೋದಿದೆಯಲ್ಲ ಅದು ಹೊರಗಿನ ಪೊಲೀಸುಗಳನ್ನ ನಾ ಮಾಡುವುದರಷ್ಟೇ ಕಷ್ಟದ ಕೆಲ್ಸಾಂಥ ಕಾಣುತ್ತೆ.

ಇದಾದ್ಮೇಲೆ ನಾನು ಸೃಜನಶೀಲತೆಯ ಪ್ರಶ್ನೆಗೆ ಬಂದು ಕೆಲವು ಸಂಗತಿಗಳನ್ನ ಅಲ್ಲಿ ಹೇಳೋದಿಕ್ಕೆ ಇಷ್ಟಪಡ್ತಾ ಇದ್ದೀನಿ. ಮೊದಲ್ನೆದಾಗಿ ಈ ಸೃಜನಶೀಲತೆಯಂದ್ರೆ ಏನು? ಇದನ್ನ ಯಾರು ಹೇಳ್ಬೇಕು. ಅಲ್ಲಿ ಮೊದಲು ಹುಟ್ಟುತ್ತಾಕ್ಕಂಥ ಬಳಸ್ತಕ್ಕಂಥ ಭಾಷೆ, ಚಿತ್ರಕ್ಕೋಸ್ಕರ ಬಳಸ್ತಾಕ್ಕಂಥ ಭಾಷೆ, ನೃತ್ಯಕ್ಕೋಸ್ಕರ ಬಳಸ್ತಾಕ್ಕಂಥ ಭಾಷೆ ಇವೆಲ್ಲವೂ ಕೂಡ ಪುರುಷ ಪ್ರಧಾನ ಸಮಾಜ ಹಾಕಿದ ತಾಳಕ್ಕೆ ಅನುಗುಣವಾಗಿ ಮೇಳ ಆದಾಗ ಸೃಜನಶೀಲತೆಯ ನಿರ್ವಚನ ಯಾವುದು? ಅಲ್ಲೂ ಏನಾಗುತ್ತೆ? ಕಲೆಯಲ್ಲಿ ಬೇರೆ ಬೇರೆ ಹಂತಗಳು ಬರ್ತಾ ಹೋದಾಗೆಲ್ಲ, ನಮ್ಮ ಸಾಹಿತ್ಯದಲ್ಲಿ ನವೋದಯ, ನವ್ಯ, ದಲಿತ, ಬಂಡಾಯ ಇನ್ನೊಂದು ಮತ್ತೊಂದೂಂಥ ಹೇಳಿದ್ಹಾಗೆ. ಅವರು ತಮ್ಮ ಡೆಫನೇಷನ್ಸ್‌ಗಳನ್ನೇ ಬದ್ಲಾವಣೆ ಮಾಡಿಕೊಳ್ತಾ ಇರ್ತಾರೆ. ಅಷ್ಟೇ ಎಲ್ಲ ಅವೆಲ್ಲನೂ ಒಟ್ಟಾಗಿ ಸೇರ್ಕೊಂಡು ಮಹಿಳೆಯರ ಸೃಷ್ಟಿಯನ್ನ ನೀವು ನಿಮ್ಮ ಆಟಗಳನ್ನ ನಮ್ಮ ನಿಯಮಗಳಿಗೆ ಅನುಗುಣವಾಗಿ ಆಡ್ಬೇಕು. ಅಷ್ಟೇ ಅಲ್ಲ ನೀವು ನಿಮ್ಮ ಆಟಗಳನ್ನ ನಮ್ಮ ನಿಯಮಗಳಿಗೆ ಅನುಗುಣವಾಗಿ ಆಡ್ಬೇಕು. ಅಷ್ಟೇ ಅಲ್ಲ ನೀವು ನಿಮ್ಮ ಆಟಗಳನ್ನು ಆಡ್ಬಾರದು. ನಮ್ಮ ಆಟಗಳನ್ನ ನಮ್ಮ ನಿಯಮಗಳಿಗೆ ಅನುಗುಣವಾಗಿ ನೀವು ಆಡ್ಬೇಕು. ಈ ಒತ್ತಡ ಇದೆಯಲ್ಲ ಇದನ್ನ ಎಷ್ಟು ದಿನ ಹೇಗೇಂಥ ಸಹಿಸ್ಕೊಳ್ಳಬೇಕಾಗುತ್ತೆ? ಈ ಪ್ರಶ್ನೆಗೆ ನಾನು ಮತ್ತೆ ಆ ಮೇಲೆ ಬರ್ತೀನಿ. ಕೊನೆಗೂ ನಾವೂ ಆಡೋ ಆಟಗಳನ್ನ ನೋಡ್ಬೇಕಾದೋರು ಯಾರು ಅನ್ನೋದೊಂದು ಪ್ರಶ್ನೆ.

ನಾವು ಕಥೆ ಬರೀತಿರೋದು, ಕಾದಂಬರಿ ಬರಿತೀರೋದು, ಹಾಡ್ತಾ ಇರೋದು ನೃತ್ಯ ಮಾಡ್ತಾ ಇರೋದು ಅಥವಾ ಎಕನಾಮಿಕ್ಸ್‌ಬಗ್ಗೆ ಕೆಲವು ಸಿದ್ಧಾಂತಗಳನ್ನ ಮಂಡಿಸ್ತಾ ಇರೋದು ಇವೆಲ್ಲವೂ ಕೂಡ ಪುರುಷ ಪ್ರಧಾನ ಸಮಾಜವನ್ನ ಒಪ್ಪಿಸುವುದಕ್ಕಾಗಿಯೋ, ಮೆಚ್ಚಿಸುವುದಕ್ಕಾಗಿಯೋ ಅಥವಾ ನಮ್ಮ ಸ್ವಾಭಿವ್ಯಕ್ತಿಗಾಗಿಯೇ ಅಂಥ ಅಂದ್ರೆ ಅಡ್ರಸ್ ಮಾಡ್ತಾ ಇರೋದು ಯಾರ್ನ ಅನ್ನೋ ಪ್ರಶ್ನೆ. ಆ ವಿಳಾಸಗಳನ್ನ ತಲುಪದೆ ಯಾವುದೋ ವಿಳಾಸಗಳನ್ನ ಉದ್ದೇಶಿಸಿ ನೀವು ಬರೀತಾ ಇದ್ದೀರಲ್ಲ ಆ ವಿಳಾಸಕ್ಕೆ ಸಂಬಂಧಪಟ್ಟು ನೀವು ಹೋಗತಾನೇ ಇಲ್ಲ, ಓದದೇ ಇರ್ಬಹುದು. ನಿಮ್ಮ ಪತ್ರ, ಅವರಿಗೆ ಈಗ ತಲುಪದೆ ಇರಬಹುದು. ನೀಷೆ ತನ್ನ ಬರವಣಿಗೆ ಬಗ್ಗೆ ಮೈ ರೀಡರ್ಸ್‌ ಆರ್ ಪಾಶ್ಚೂಮಸ್ ಅಂಥ ಹೇಳ್ತಾ ಇದ್ದ. ನನ್ನ ಓದುಗರು ಈಗ ಒಬ್ಬನೇ ಒಬ್ಬ ಕೂಡ ಇಲ್ಲ. ನಾನು ಸತ್ತ ನಂತರ ನನ್ನ ಓದುಗರು ಬರ್ತಾರೆ ಅಂಥ. ಇವತ್ತು ಮಹಿಳೆಯರ ಹೋರಾಟದಲ್ಲಿ ಮುಂಚೂಣಿಯಲ್ಲಿರ್ತಾಕ್ಕಂಥವರ ಪ್ರಯತ್ನಗಳ ವಿಳಾಸದಾರರೂ ಕೂಡ ಅನೇಕ ಸಂದರ್ಭಗಳಲ್ಲಿ ಪಾಶ್ಚೂಮಸ್ ಆಗಿರ್ತಾರಂತ ನಾನು ಅಂದ್ಕೊಂಡಿದ್ದೆ. ಎಲ್ಲಿಯತನಕ ಪುರುಷ ಪ್ರಧಾನ ಸಮಾಜದ ಒತ್ತಡಗಳನ್ನ ಮೆಚ್ಚಿಸುವ ಅವರ ಅಪೇಕ್ಷೆಗಳನ್ನ, ನಿರೀಕ್ಷೆಗಳನ್ನು ಪೂರೈಸುವ ದಿಕ್ಕಿನಲ್ಲಿ ಹೊರಡ್ತೀನಿ ಅಲ್ಲಿಯತನಕ ನಾನು ಆಗ್ಲೆ ಹೇಳಿದ್ಹಾಗೆ ತಮ್ಮ ಆಟಗಳನ್ನ, ನಮ್ಮ ನಿಯಮಗಳಿಗೆ ತಕ್ಕಾಗೆ ನೀವು, ಆಡ್ಬೇಕು ಅನ್ನೋ ಒತ್ತಾಯ ಇರುತ್ತೆ. ಇದು ಮೊದಲನೇ ಹಂತ. ಅಲ್ಲಿ ಗಮನಿಸಬೇಕಾದ ಮೊದಲನೇ ಪ್ರಶ್ನೆ.

ಇದರ ಜೊತೆಗೆ ಇನ್ನೊಂದು ಈ ಸೃಜನಶೀಲತೆಯ ಫಲವಾದ ಸಂಗತಿಗಳನ್ನ ಹಂಚಿಕೊಳ್ಳುವ ಮಾಧ್ಯಮಗಳು ಎಲ್ಲಿವೆ ಅಂತ. ಆ ಮಾಧ್ಯಮ ನೃತ್ಯ ಇರ್ಬಹುದು. ಆ ಮಾಧ್ಯಮ ಸಂಗೀತವೇ ಇರ್ಬಹುದು. ಆದ್ರೆ ಅದರ ಗ್ರಾಹಕರು ಎಂಥವರಿದ್ದಾರೆ. ಆ ಗ್ರಾಹಕರ ಮತ್ತು ಮಾಧ್ಯಮಗಳ ಮೇಲಿನ ಹಿಡಿತ ಯಾರ ಕೈಲಿದೆ ಅನ್ನೋ ಪ್ರಶ್ನೆ ಕೇಳಿಕೊಂಡಾಗ ನಮ್ಮ ಮಾಧ್ಯಮಗಳನ್ನ ನಾವೇ ರೂಪಿಸಿಕೊಳ್ಳೋಕೆ, ನಮ್ಮ ಸಂವಹನಗಳನ್ನ ನಾವೇ ಮಾಡಿಕೊಳ್ಳೋಕೆ ಸಾಧ್ಯವಾ. ಈ ಸಂವಹನದ ಪ್ರಶ್ನೆ ಬಗ್ಗೆ ನಾನು ಮತ್ತೆ ಅನ್ನೋ ಮಾತನ್ನ ಈಗ್ಲೆ ಹೇಳ್ತಾ ಇದ್ದೀನಿ. ಮಹಿಳೆ ಪರವಾದ ಚಿಂತನೆಗಳನ್ನ ಮಾಡ್ತಾಕ್ಕಂಥವರು ತಮ್ಮ ಚಿಂತನೆಯ ನೆಲೆಗಳಿಗೆ ಅನುಗುಣವಾದ ಒಂದು ಶಾಲೆಗಳನ್ನ ಸ್ಥಾಪಿಸುವ ಸಾಧ್ಯತೆ ಹೇಗೆ ಕೆಲ್ಸ ಮಾಡ್ಬಹುದು? ಈ ಶಾಲೆ, ಈ ಸ್ಕೂಲ್ ಇದು ಕೊಡ್ತಾಕ್ಕಂಥ ಜ್ಞಾನ ಜ್ಞಾನವೇ ಇರ್ಬಹುದು. ಆದ್ರೆ ಅದು ಪೋಲಿಟಿಸೈಜ್ ಆಗಿರ್ತಾಕ್ಕಂಥ ರೀತಿ ಇರುತ್ತಲ್ಲ. ಯಾವುದೇ ಜ್ಞಾನ ಹಾಗೆ ನ್ಯೂಟ್ರಲ್ ಆಗಿರುತ್ತೆ, ತಟಸ್ಥವಾಗಿರುತ್ತೆ ಅಂಥ ಅಂದ್ಕೋಬೇಡಿ. ಫಿಜಿಕ್ಸ್‌ ಆಗ್ಬಹುದು. ಕೆಮಿಸ್ಟ್ರಿ ಆಗ್ಬಹುದು, ಸೋಶಿಯಾಲಜಿ ಆಗ್ಬಹುದು. ಎಕನಾಮಿಕ್ಸ್‌ಆಗ್ಬಹುದು. ಎಲ್ಲ ಜ್ಞಾನದ ಹಿಂದೆ ಒಂದು ರಾಜಕಾರಣ ಇರುತ್ತೆ.

ಹಾಗಿದ್ದಾಗ ಮಹಿಳೆಯರ ಆಲೋಚನೆಗಳ ಹಿನ್ನೆಲೆಯಿಂದ ಮೂಡಿಬಂದ ರಾಜಕಾರಣ, ಶಿಕ್ಷಣವನ್ನು ನಿಯಂತ್ರಿಸುವಂತಹ ಸಂದರ್ಭ ಬರಬಹುದಾ? ಬರ್ಬೇಕಾ? ಬರಬೇಕು ಅನ್ನೋದ್ರ ಬಗ್ಗೆ ನನಗೇನು ಹೆಚ್ಚಿನ ಅನುಮಾನ ಇಲ್ಲ. ಹೇಗೆ ದಲಿತ ಚಿಂತನೆಯ ಫಲವಾಗಿ ಪೊಲಿಟಿಸೈಜ್ ನಾವೆಲ್ ಒಂದಕ್ಕೆ ತನ್ನದೇ ಆದ ಅಸ್ತಿತ್ವ ಇರುತ್ತೆ. ಹಾಗೇನೇ ಸ್ತ್ರೀ ಚಿಂತನೆಯ ಫಲವಾಗಿ ರೂಪಿತವಾದಂತಹ ನಾವೆಲ್‌ಗೂ ಕೂಡ ತನ್ನದೇ ಆದ ಒಂದು ಪೊಲಿಟಿಸೈಜ್ ಆದ ಒಂದು ದೃಷ್ಟಿಕೋನ ಮತ್ತು ಅದ್ರದೇ ಆದ ಒಂದು ಪ್ರಸ್ತುತತೆ ಇರುತ್ತೆ ಅಂಥ ನಾನು ಅಂದುಕೊಂಡಿದ್ದೀನಿ. ಹಾಗಾದಾಗ ಇಲ್ಲಿ ಕೊನೆಗೂ ಬರೋದು ಏನೋಂದ್ರೆ ನಮ್ಮ ಮಾನದಂಡಗಳನ್ನ ಮುರಿಯುವುದು. ನಮ್ಮ ಮಾನದಂಡಗಳಿಗೆ ಇವ್ಯಾವು ಸಬ್ಬರ್ಷ್‌ ಅಂಥ ಕರೀತೀವಿ. ವಿದ್ರೋಹ ಅಂತ ಕರೀತೀವಿ, ಈ ಭಾಷೆ ಬಗ್ಗೆ ನೀವು ಹೇಳೋದು, ಕಲೆ ಬಗ್ಗೆ ನೀವು ಹೇಳೋದು, ಸಂಗೀತದ ಬಗ್ಗೆ ನೀವು ಹೇಳೋದು ಇದು ಯಾವುದನ್ನೂ ಕೂಡ ನಾವು ಒಪ್ಪಿಕೋಬೇಕಾಗಿಲ್ಲ, ಒಪ್ಪಿಕೊಳ್ಳೋದಿಲ್ಲಾಂಥ ಹೇಳೋದಿದೆಯಲ್ಲ – ಅದು ಬಹಳ ಮುಖ್ಯವಾದ ಒಂದು ನೆಲೆ ಅಂಥ ನಾನು ಅಂದ್ಕೊಂಡಿದ್ದೀನಿ.

ಈಗ ಇನ್ನೊಂದು ಮತ್ತೆ ಮತ್ತೆ ಚರ್ಚೆ ಆಗ್ತಕ್ಕಂಥ ಪ್ರಶ್ನೆಯನ್ನ ಕೇಳಿಕೋತಾ ಇದ್ದೀನಿ. ಅದು ಗಂಡಿಗೂ ಹೆಣ್ಣಿಗೂ ಇರಬಹುದಾದ ಈ ಜೈವಿಕ ಭಿನ್ನತೆಯ ಮಾತು ‘ದಿಸ್ ಬೈಲಾಜಿಕಲ್ ಡಿಫರೆನ್ಸ್’ ಅಂಥ. ಇದು ಕಣ್ಣಿಗೆ ಕಾಣುವ ಬೈಲಾಜಿಕಲ್ ಡಿಫರೆನ್ಸ್ ವಿಷಯ. ಮಾತಾಡ್ಬೇಕಾಗಿಲ್ಲ. ಇಲ್ಲಿ ವ್ಯತ್ಯಾಸ ಇದೆಯಾ, ಇಲ್ಲವಾ ಅ‌ನ್ನೋದು ಒಂದು ಪ್ರಶ್ನೆ. ಇರುವ ವ್ಯತ್ಯಾಸವನ್ನ ಮೇಲು ಮತ್ತು ಕೀಳು ಎನ್ನುವ ಶ್ರೇಣೀಕರಣಕ್ಕೆ ಬಳಸಿಕೊಳ್ಳಲಾಗ್ತಿದೆಯಾ ಅನ್ನೋದು ಎರಡನೇ ಪ್ರಶ್ನೆ. ಇಲ್ಲಿಯವರೆಗೆ ಶ್ರೇಣೀಕರಣಕ್ಕೆ ಮೇಲು – ಕೀಳು ಅಂಥ ಮಾಡೋದಕ್ಕೆ ಅದ್ನ ಬಳಸ್ಕೊಳ್ತಾ ಇದ್ದಾರೆ ಅನ್ನೋ ಅನುಮಾನಕ್ಕಾದ್ರೂ ಅವಕಾಶ ಇದೆ. ಅಲ್ಲಿಯತನಕ ವ್ಯತ್ಯಾಸದ ಪರವಾಗಿ ಮಾತಾಡೋದು ಅಪಾಯಕಾರೀನೇ ಆಗಿರುತ್ತೇಂಥ ಕಾಣುತ್ತೆ. ವ್ಯತ್ಯಾಸಗಳ ನಿರಾಕರಣೆ ಪ್ರಶ್ನೆ ಬಂದಾಗ್ಲೂನೂ ಅಲ್ಲಿ ಹುಟ್ಟಿಕೊಳ್ಳೋದು ಸೃಜನಶೀಲತೆ ಸ್ವರೂಪಕ್ಕೂ, ಈ ಜೈವಿಕ ಭಿನ್ನತೆಗೂ ಸಂಬಂಧ ಇದೆಯೋ? ಇದ್ದರೆ ಯಾವ ರೀತಿ ಸಂಬಂಧ. ಮಹಿಳೆಯರ ಸೃಜನಶೀಲತೆ ಬೇರೆ ಅನ್ನೋದಾದ್ರೆ, ಅದರ ರೂಪುರೇಷೆಗಳು ಯಾವುದು? ಆ ರೂಪುರೇಷೆಗಳನ್ನ ಬೇರೆ ಬೇರೆ ಮಾಧ್ಯಮಗಳಲ್ಲಿ ತೋಡಿಕೊಳ್ಳೋದಕ್ಕೆ ಹೋದಾಗ ಅದು ಪಡೀತಾಕ್ಕಂಥ ಫಲ ಯಾವ ರೀತಿಯದು? ಆಕಾರ ಯಾವ ರೀತಿಯದು? ಇಲ್ಲಿ ಬಹಳ ಮುಖ್ಯವಾಗಿ ಪ್ರಶ್ನೆ ಇರೋದು ಇದು. ಏನೂಂತಂದ್ರೆ ಕಲಾಕೃತಿಗಳ ಸ್ವರೂಪನ, ಕಲಾವಿದನೇ ತೀರ್ಮಾನ ಮಾಡ್ತಾನೇಂತ ಅಂದುಕೊಳ್ಳೋದು ಬಹಳ ಕಷ್ಟ. ಅನೇಕ ಸಲ ಕಲಾಕೃತಿಗಳ ಸ್ವರೂಪನ ಗ್ರಾಹಕ ಸಂಸ್ಕೃತಿ ತೀರ್ಮಾನ ಮಾಡ್ತಿರುತ್ತೆ. ಗ್ರಾಹಕ ಸಮುದಾಯ ತೀರ್ಮಾನ ಮಾಡ್ತಿರುತ್ತೆ. ಹಾಗಾದಾಗ ಮಹಿಳೆಯರ ಸೃಜನಶೀಲತೆಯ ಫಲವಾಗಿ ಕಲಾಕೃತಿಗಳನ್ನ, ಮಹಿಳೆಯರ ಸೃಜನಶೀಲತೆಯ ವಿಶಿಷ್ಟ ಲಕ್ಷಣಗಳನ್ನ ಒಳಗು ಮಾಡಿಕೊಂಡಂತಹ ಕಲಾಕೃತಿಗಳನ್ನ, ಸ್ವೀಕರಿಸ್ತಾಕ್ಕಂಥ ಸಮಾಜ, ಸಮುದಾಯ, ಮಹಿಳೆಯರ ಸಮುದಾಯವೇ ಆಗುವಂತಹ ಸಾಧ್ಯತೆಗೂ, ಪುರುಷ ಸಮಾಜ ಅದನ್ನ ಸ್ವೀಕರಿಸಿ ಅದನ್ನ ಬೆಲೆ ಕಟ್ತಾಕ್ಕಂಥ ಸಾಧ್ಯತೆಗೂ ವ್ಯತ್ಯಾಸ ಇದೆಂಥ ಕಾಣುತ್ತೆ. ಐಯಾಮ್‌ನಾಟ್‌ಪ್ರಿಪೇರಿಂಗ್ ಮೈ ಕಮಾಡಿಟಿಸ್. ಫರ್ ಯುವರ್ ಮಾರ್ಕೇಟ್, ಮೈ ಮಾರ್ಕೇಟ್‌ ಈಸ್ ಡಿಫರೆಂಟ್ ಅಂಥ ಹೇಳ್ತಾಕ್ಕಂಥ ನಿಲುವಿದೆಯಲ್ಲ, ಅದು ಸಾಧ್ಯವಾಗ್ಬಹುದಾ? ನಾನು ಬೆಳಿಗ್ಗೇನೂ ಕೂಡ ಯಾವುದೋ ಒಂದು ಕಡೆ ಓದತಾ ಇದ್ದೆ. ಈ ಎಕ್ಸ್‌ಚೇಂಜ್ ಅಂಥನ್ನೋದು, ಪುರುಷ ಸಮುದಾಯ, ಮತ್ತೆ ಸ್ತ್ರೀ ಸಮುದಾಯ ನಡುವೆ ನಡೆಯುವ ಕೊಳು – ಕೊಡೆ ಆಗಿರದೇನೇ. ಅದು ಏರ್ಪಾಡು ಮಾಡಿಕೊಂಡಿರ್ತಾಕ್ಕೊಂಥ ನಿಯಮಗಳನ್ನ ಬಿಟ್ಟು – ಸ್ತ್ರೀ ಸಮುದಾಯದ ಒಳಗಡೆ ನಡಿತಾ ಇರಬಹುದಾದ ಕೊಳು ಕೊಡೆ ಸಾಧ್ಯತೆಗಳು ಯಾವುದು? ಈ ಪ್ರಶ್ನೆಯನ್ನು ಕೇಳಿಕೊಳ್ಳಿ. ‘ವಿ ಎಕ್ಸೇಂಜಸ್ ಎ ಟೇಕಿಂಗ್ ಪ್ಲೇಸ್ ವಿಥಿನ್ ದ ಕಮ್ಯುನಿಟಿ ಆಫ್ ವಿಮೆನ್. ಆಗ ಅದಕ್ಕೆ ಸಿಕ್ಕಬಹುದಾದ ಐಡೆಂಟಿಟಿ ಬೇರೆ ತರಹದ್ದು ಇರ್ಬಹುದು. ಅಂಥ ಕಾಣುತ್ತೆ.

ಆ ಮೇಲೆ ನಾನು ಹೇಳಬಹುದಾದ ಇನ್ನೊಂದು ವಿಷಯ, ನಾ ಇದನ್ನ ಮನಾಪಲಿ ಆಫ್ ದ ಮಿಡ್ಲ ಕ್ಲಾಸ್ ಅಂಥ ಕರಿಯೋದಿಕ್ಕೆ ಇಷ್ಟಪಡ್ತಿನಿ. ಇದ್ರ ಬಗ್ಗೆ ಅನೇಕ ಸ್ತ್ರೀವಾದಿ ವಿದ್ವಾಂಸರೂ ಕೂಡ ಚರ್ಚೆ ಮಾಡಿದ್ದಾರೆ. ನಮ್ಮ ಆಲೋಚನೆಯ ಮಾನದಂಡಗಳನ್ನ ಯಾವುದು ಸೃಜನಶೀಲತೆ, ಯಾವುದು ಕಲೆ, ಯಾವುದು ಮುಕ್ತತೆ, ಯಾವುದು ಅಶ್ಲೀಲ, ಯಾವುದು ಶ್ಲೀಲ ಅಂಥ ತೀರ್ಮಾನ ಮಾಡ್ತಾಕ್ಕಂಥ ಹೊಣೆಗಾರಿಕೆಯನ್ನ ಪ್ರಾಯಶಃ ಈ ಶತಮಾನದ ಮೂರು ನಾಲ್ಕನೇ ದಶಕಗಳ ನಂತರ, ಬ್ರಿಟೀಷರ ಜಡವಾದ ದೃಷ್ಟಿಕೋನದ ಫಲವಾಗಿ ಮಧ್ಯಮವರ್ಗ ಇದನ್ನ ವಹಿಸಿಕೊಳ್ತು ಅಂಥ ಕಾಣುತ್ತೆ. ಮಧ್ಯಮ ವರ್ಗದ ನೀತಿ ಸಂಹಿತೆ, ಮಧ್ಯಮವರ್ಗದ ಶೀಲ – ಅಶ್ಲೀಲಗಳ ಪರಿಕಲ್ಪನೆ ಇದು ನನಗೆ ಅನ್ನಿಸೋ ಹಾಗೆ ಮಹಿಳೆಯರ ಮತ್ತು ದಲಿತರ ಅಭಿವ್ಯಕ್ತಿಗೆ ಅಪಾರವಾದ ಕಡಿವಾಣ ಹಾಕ್ತು ಅಂಥ ಕಾಣುತ್ತೆ. ಅದರಿಂದ ಇರ್ಬಹುದಾದ ಎಕ್ಸ್‌ಪೆಕ್ಟೇಷನ್ಸನ್ ಬದಲಾವಣೆ ಮಾಡ್ತಾ ಹೊಯ್ತು ಅಂಥ ಕಾಣುತ್ತೆ. ನೀವೇ ನೋಡಬಹುದಾದ್ಹಾಗೆ ಮಂಟೇಸ್ವಾಮಿ ಕಾವ್ಯ, ಮಲೆ ಮಾದೇಶ್ವರ ಕಾವ್ಯಗಳು ಅನುಭವಿಸಿದ ಅಜ್ಞಾತವಾಸ ಅಥವಾ ಪಾಡ್ದಾನ ಅನುಭವಿಸಿದ ಅಜ್ಞಾತವಾಸ ಇವನ್ನೆಲ್ಲಾ ನೋಡಬಹುದು. ಇದ್ರ ಪರಿಣಾಮ ಮತ್ತೊಂದು ಮುಖ್ಯವಾಗಿ ಯೋಚ್ನೆ ಮಾಡೋದಾದ್ರೆ, ಅಕ್ಷರಸ್ಥ ಸಮುದಾಯದ ಕಲಾತ್ಮಕತೆಗೂ, ಕಲೆಯ ಕಲ್ಪನೆಗೂ ವ್ಯತ್ಯಾಸ ಇದೆ ಅಂಥ ಕಾಣುತ್ತೆ. ನಾನು ಭಾರತೀಯ ಸಮಾಜದಂತಹ ಸಮಾಜದಲ್ಲಂತೂ ಕೂಡ ಕಲೆ ಅನ್ನೋದು ಅನಕ್ಷರಸ್ಥ ಸಮುದಾಯವೇ ಜಾಸ್ತಿ ಇರ್ಬೇಕಾದಾಗ, ಬಹುಸಂಖ್ಯಾತ ಕಲಾತ್ಮಕವಾದ ಅಭಿವ್ಯಕ್ತಿಯನ್ನ ಮಧ್ಯಮ ವರ್ಗದ ಮಾನದಂಡಗಳಿಂದ ಅಳೆದು ಪಕ್ಕಕ್ಕೆ ತಳ್ಳಿದ್ದರ ಪರಿಣಾಮ ಏನಾಯ್ತು. ಮಹಿಳೆಯರ ಕಲಾತ್ಮಕ ಅಭಿವ್ಯಕ್ತಿಯ ಮೇಲೆ, ಮಹಿಳೆಯರ ಸೃಜನಶೀಲತೆಯ ಮೇಲೆ ಕೂಡ ಇದ್ರ ಪರಿಣಾಮ ಏನಾಯ್ತು ಅಂಥಾ ಯೋಚ್ನೆ ಮಾಡ್ಬೇಕಾಗಿದೆ.

ಆ ಮೇಲೆ ಮತ್ತೊಂದು ಸಮಸ್ಯೆ, ಮಹಿಳೆಯರ ಸೃಜನಶೀಲತೆ ಎದುರುಸ್ತಾ ಇರೋದು ಪ್ರಾಯಶಃ ನಮ್ಮ ದಲಿತ ಲೇಖಕರು, ಬಂಡಾಯ ಲೇಖಕರು, ಕೆಳವರ್ಗದಿಂದ ಬಂದ ಇತರ ಲೇಖಕರೂ ಕೂಡ ಅನುಭವಿಸಿದ ಸಮಸ್ಯೆ ಕೂಡ ಇದೆ. ಅದು ವಿಚಾರಧಾರೆ ಮತ್ತು ಆರ್ಟಿಸ್ಟಿಕ್ ಕ್ವಾಲಿಟಿ ಇವೆರಡೂ ಕೂಡ ಭಿನ್ನವಾದದ್ದು. ವಿಚಾರಧಾರೆಗೆ ನೀನು ಒತ್ತು ಕೊಟ್ಟಾಗ, ಕಲಾತ್ಮಕತೆಗೆ ದಕ್ಕೆ ಬರುತ್ತೆ, ಕಲಾತ್ಮಕತೆಗೆ ಹೆಚ್ಚು ಬೆಲೆ ಕೊಟ್ಟಾಗ ವಿಚಾರಗಳಿಗೆ ದಕ್ಕೆ ಬರುತ್ತೆ, ಅನ್ನುವ ಒಂದು ಸೀಮಿತವಾದ ಕಲ್ಪನೆ ಇದೆಯಲ್ಲ ಅದು ಪ್ರಾಯಶಃ ಮಹಿಳೆಯ ಸೃಜನಶೀಲತೆಗೆ ಹಾಕಿದ ಒಂದು ಕಡಿವಾಣ ಆಗಿದೆ ಅಂಥ ನಾನು ಅಂದುಕೊಂಡಿದ್ದೇನೆ. ಇದು ಕನ್ನಡ ಸಮುದಾಯಕ್ಕೆ ಹೇಗಿದೆ? ಬಂಗಾಳಿ ಸಮುದಾಯಕ್ಕೆ ಹೇಗಿದೆ? ಉರ್ದು ಮಾತಾಡೋರ ಸಮುದಾಯಕ್ಕೆ ಹೇಗಿದೆ? ಈ ಪ್ರಶ್ನೆಯನ್ನು ಪ್ರಾಯಶಃ ಆಯಾ ಸಮುದಾಯಗಳ ಚರಿತ್ರೆಯ ಹಿನ್ನೆಲೆಯಲ್ಲಿ ನೋಡಿದಾಗ, ಈಗ ಮಹಶ್ವೇತಾದೇವಿಯಂತಹ ಲೇಖಕಿ ಬರೀಬಹುದಾದಂತಹ ಸಮುದಾಯ, ಅಮೃತ ಸೀತಾಮ್ಮ ಅಂಥವರು ಬರೀ ಬೇಕಾದಂತಹ ಸಮುದಾಯ ನಮ್ಮ ಕನ್ನಡ ಲೇಖಕಿಯರ ಸಮುದಾಯ ಇವುಗಳ ನಡುವೆ ವ್ಯತ್ಯಾಸ ಯಾಕುಟ್ಟುತ್ತೆ ಅನ್ನೋದನ್ನ ನಾವು ರಾಜಕೀಯ ಮತ್ತು ಸಾಮಾಜಿಕ ಚರಿತ್ರೆಗಳನ್ನು ನೋಡಿಯೇ ಹೇಳ್ಬೇಕಾಗುತ್ತೆ. ಆದ್ರೆ ನಾನು ಇಲ್ಲಿ ಹೇಳೋಕೆ ಇಷ್ಟ ಪಡ್ತಾ ಇರೋದು ಯಾವ ಕಲಾವಿದ ಪರಿವಾರ, ಮಧ್ಯಮ ವರ್ಗದ ನೈತಿಕತೆಯಿಂದ ಬದ್ಧವಾಗಿರೋದಿಲ್ಲ. ಅವರ ಸಾಧ್ಯತೆಗಳು, ಅವರ ಸೃಜನಶೀಲತೆ ಹೆಚ್ಚು ಮುಕ್ತವಾಗಿರುತ್ತೆ ಅಂಥ ಕಾಣುತ್ತೆ.

ಕೊನೆಯದಾಗಿ ನಾನು ಎತ್ತಿಕೊಳ್ಳೋಕೆ ಇಷ್ಟಪಡೋದು ಸಂವಹನದ ಸಮಸ್ಯೆಯನ್ನ. ಮಹಿಳೆಯರ ಸೃಜನಶೀಲತೆಯ ಫಲವಾದಂತಹ ಕಲಾಕೃತಿಗಳ ಸಂವಹನದ ಪ್ರಶ್ನೆ ಬಂದಾಗ ಯಾವ ರೀತಿಯ ಬಿಕ್ಕಟ್ಟುಗಳು ಬರುತ್ತೇಂಥ. ನಾನಿಲ್ಲಿ ಇರುವ ವಿಚಿತ್ರವಾದ ಸನ್ನಿವೇಶ ಯಾಕೂಂದ್ರೆ ಶತೃತ್ವ ಮತ್ತು ಸ್ನೇಹಗಳು ಒಂದರೊಡನೆ ಒಂದು ಹೆಣಕೊಂಡಿರ್ತಾಕ್ಕಂಥ ವೃತ್ತಗಳನ್ನ ನಾನು ಇಮ್ಯಾಜಿನ್ ಮಾಡ್ಕೋತೀನಿ. ಅದು ಗಂಡ, ಮಗ, ತಾಯಿ, ತಂದೆ ಅನ್ನುವ ಕುಟುಂಬ ವಲಯ ಆಗ್ಬಹುದು. ಜಾತಿ ಸಮುದಾಯ ಆಗ್ಬಹುದು. ಉದ್ಯೋಗದ ಸಮುದಾಯ ಆಗ್ಬಹುದು. ಈ ವಲಯಗಳಲ್ಲಿ ಜಾತಿಯನ್ನಾಧಾರವಾಗಿಟ್ಟುಕೊಂಡು ಹೋರಾಟ ಮಾಡೋರಿಗೆ ನಮ್ಮ ಶತೃ ಇಲ್ಲಿದ್ದಾನೆ, ಮಿತ್ರ ಇಲ್ಲಿದ್ದಾನೆ ಅಂಥ ಸಪರೇಟ್ ಮಾಡಿಕೊಳ್ಳೋಕೆ ಸಾಧ್ಯ ಆಗುತ್ತೆ. ಆದ್ರೆ ಪುರುಷರು ಮತ್ತು ಸ್ತ್ರೀಯರ ಪ್ರಶ್ನೆ ಬಂದಾಗ ಈ ವಲಯಗಳು ಹೇಗೆ ಕೆಲ್ಸ ಮಾಡುತ್ತಿರುತ್ತೆ. ಹೇಗೆ ಆಪ್‌ರೇಟ್ ಮಾಡ್ತಿರುತ್ತೆ ಅಂತಂದ್ರೆ, ಶತೃ ಎಲ್ಲಿದ್ದಾನೆ? ಅತ್ಯಂತ ಆತ್ಮೀಯವಾದ ವಲಯದಲ್ಲಿ, ನನ್ನ ಜೊತೆಯಲ್ಲೆ ಇರ್ತಾಕ್ಕಂಥ ಗಂಡನೋ ನನ್ನ ಹೊಟ್ಟೇಲೆ ಹುಟ್ಟಿದಂಥ ಮಗನೋ? ಅಥವಾ ಅಲ್ಲೆಲ್ಲೋ ಇರ್ತಾಕ್ಕಂಥ ಯಾರೋ ಒಬ್ಬ. ಕಣ್ಣಿಗೆ ಕಾಣದ ದೂರದಲ್ಲಿ ಇರ್ತಾಕ್ಕಂಥ ಬೇರೆ ಜಾತಿಗೆ ಸೇರಿದವನೋ? ಹಾಗಾಗಲ್ಲ ಅದು. ಶತ್ರುತ್ವದ ವರ್ತುಲ ಹಾಗೂ ಪ್ರಭಾವಗಳು ಅವಾಗೇನಾಗುತ್ತೇಂದ್ರೆ ಅಲ್ಲಿ ಸಂಘಟನೆಯ ಅವಕಾಶಗಳೂ ಕೂಡ ಕಡಿಮೆಯಾಗುತ್ತೆ. ಯಾರು ಶತೃ, ಯಾರು ಮಿತ್ರ ಅಂಥ ಗುರುತಿಸ್ತಕ್ಕಂಥ ಅವಕಾಶಗಳು ಕೂಡ ಕಡಿಮೆಯಾಗುತ್ತೆ. ಹಾಗಾದಾಗ ಸೃಜನಶೀಲತೆಗೆ ಎದುರಾಗುವ ಬಿಕ್ಕಟ್ಟುಗಳನ್ನ ತುಂಬ ವಿವರವಾಗಿ ನೋಡ್ಬೇಕು ಅಂಥ ಕಾಣುತ್ತೆ. ಕೊನೆಗೊಂದು ನನಗೆ ಅನ್ನಿಸುವ ನನ್ನ ತೀರ್ಮಾನದ ಮಾತಂದ್ರೆ ಮಹಿಳೆಯರ ಸೃಜನಶೀಲತೆ ಅದು ಯಾವಾಗ್ಲೂ ಕೂಡ ಹೋರಾಟ ಮತ್ತೆ ಸೃಜನಶೀಲತೆ ಯಾವಾಗ ಇವೆರಡೂ ಒಟ್ಟೊಟ್ಟಾಗಿ, ಪರಸ್ಪರ ಹೆಣೆದುಕೊಂಡು ಕೆಲ್ಸದಲ್ಲಿ ತೊಡಗುತ್ತೆ ಆವಾಗ ಒಂದು ಇನ್ನೊಂದ್ರಿಂದ ಶಕ್ತಿಯನ್ನ ಪಡೀತಾ ಹೋಗುತ್ತೇಂಥ ಕಾಣುತ್ತೆ. ಹಾಗಲ್ಲದೆ ಹೋರಾಟದಿಂದ ದೂರ ಸರಿದು ಸೃಜನಶೀಲತೆಯಾಗ್ಲಿ, ಸೃಜನಶೀಲತೆಯಿಂದ ದೂರ ಸರಿದ ಹೋರಾಟವಾಗ್ಲಿ, ಎರಡೂ ಕೂಡ ಪರಸ್ಪರ ಪೂರಕತೆಯನ್ನ ಕಳಕೊಳ್ತಾ ಇದೆ. ಅಂದ್ರೆ ಒಬ್ಬಳೇ ವ್ಯಕ್ತಿ. ಒಬ್ಬಳೇ ಲೇಖಕಿ ಎರಡೂ ಆಗ್ಬೇಕು ಅಂತೇನಲ್ಲ. ಅದೂ ಒಂದು ಸಾಧ್ಯತೆ. ಈ ಸೃಜನಶೀಲತೆಗಳ ನಡುವೆ ಇರಬಹುದಾದ ಪೂರಕ ಸಂಬಂಧಗಳು ಎಷ್ಟೆಷ್ಟು ಆತ್ಮೀಯವಾಗುತ್ತೊ ಅಷ್ಟಷ್ಟು ಸೃಜನಶೀಲತೆಗೆ ಇರ್ತಕ್ಕಂಥ ಬಿಕ್ಕಟ್ಟುಗಳ ಪರಿಹಾರ ಆಗುತ್ತೆ ಅಂತ ನಾನು ಅಂದುಕೊಂಡಿದ್ದೇನೆ.

* * *