ಕರ್ನಾಟಕದ ವಿಧಾನಸಭೆಯ ಚುನಾವಣೆ ಮುಗಿದಿದೆ. ಪ್ರಜಾಸತ್ತಾತ್ಮಕ ಸರ್ಕಾರವೂ ರಚನೆಯಾಗಿದೆ. ಅಂದ ಮೇಲೆ ಕರ್ನಾಟಕಸ್ಥರಿಗೆ ಇನ್ನು ಸಮಸ್ಯೆಗಳಿರಲು ಸಾಧ್ಯವಿಲ್ಲ. ಇಲ್ಲಿ ನಾವು ಗಮನಿಸಬೇಕಾಗಿರುವ ಸಂಗತಿಯೆಂದರೆ ವಿಧಾನಸಭೆಯ ೨೨೪ ಸ್ಥಾನಗಳಲ್ಲಿ ಮಹಿಳೆಯರು ಕೇವಲ ಮೂರು ಸ್ಥಾನಗಳಲ್ಲಿ ಮಾತ್ರ ಆಯ್ಕೆಯಾಗಿದ್ದಾರೆ. (ಶೇ.೧.೩೩) ರಾಜ್ಯದಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಮಹಿಳೆಯರ ಪಾಲು ಶೇ.೪೯.೧೦ರಷ್ಟಿದೆ. ರಾಜ್ಯದ ಒಟ್ಟು ದುಡಿಮೆಗಾರರಲ್ಲಿ ಅವರ ಪಾಲು ಶೇ. ೩.೫.೨೬ರಷ್ಟಿದೆ. (ಇದು ಅವರ ಸಂಪಾದನಾ ದುಡಿಮೆಯನ್ನು ಮಾತ್ರ ಪರಿಗಣಿಸಿದಾಗ ಕಂಡುಬರುವ ಚಿತ್ರ. ಅವರ ಸಂಪಾದನಾ ದುಡಿಮೆಯ ಜೊತೆಗೆ ಅವರ ಸಂಗೋಪನಾ ದುಡಿಮೆಯನ್ನು (ಮನವಾರ್ತೆ, ಮಕ್ಕಳ ಮತ್ತು ವಯೋವೃದ್ಧರ ಪಾಲನೆ – ಲಾಲನೆ, ಸೇವೆ, ಶುಶ್ರೂಷೆ)ಪರಿಗಣಿಸಿದರೆ ಅವರ ದುಡಿಮೆ ಸಹಭಾಗಿತ್ವದ ಪ್ರಮಾಣ ಶೇ. ೫೦ಕ್ಕಿಂತ ಅಧಿಕವಾಗುತ್ತದೆ). ಆದರೆ ಶಾಸನಸಭೆಯಲ್ಲಿ ಮಾತ್ರ ಅವರ ಪ್ರಮಾಣ ಶೇ.೧.೩೩. ನಮ್ಮ ರಾಜಕೀಯ ಪಕ್ಷಗಳ ಸಾಮಾಜಿಕ ದಿವಾಳಿತನಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕಾಗಿಲ್ಲವೆಂದು ಕಾಣುತ್ತದೆ. ಚುನಾವಣೆ ಪೂರ್ವದಲ್ಲಿ ಮಹಿಳೆಯರ ಆಜಕೀಯ ಪ್ರಾತಿನಿಧ್ಯದ ಬಗ್ಗೆ ಅವುಗಳ ನೀಡಿದ ಆಶ್ವಾಸನೆಗಳಿಗೇನು ಕಡಿಮೆಯಿರಲಿಲ್ಲ. ಆದರೆ ಚುನಾವಣೆ ನಂತರ ಅವು ಅವರಿಗೆ ಜ್ಞಾಪಕ್ಕೆ ಬರುವುದು ಕಡಿಮೆ. ಆದರೆ ಪಟ್ಟಭದ್ರರಿಗೆ ಮಣೆಹಾಕುವುದನ್ನು ಮಾತ್ರ ಅವು ಸುತರಾಂ ಮರೆಯುವುದಿಲ್ಲ. ಈ ಚುನಾವಣೆಯಲ್ಲಿ ಅತ್ಯಂತ ನಿರ್ಣಾಯಕ ಪಾತ್ರವಹಿಸಿದ್ದರೆನ್ನಲಾದ ಮೂವರೂ ‘ಗಣಿ’ ದಣಿಗಳಿಗೆ ಮಂತ್ರ ಸ್ಥಾನ ನೀಡಲಾಗಿದೆ. ಆದರೆ ೨೫೯.೨೬ಲಕ್ಷ ಮಹಿಳೆಯರಿಗೆ ವಿಧಾನ ಸಭೆಯಲ್ಲಿ ಪ್ರಾತಿನಿಧ್ಯ ಕೇವಲ ಶೇ.೧.೩೩ ಮತ್ತು ಮಂತ್ರಿಮಂಡಲದಲ್ಲಿ ಅವರಿಗೆ ಕೆಲವು ಒಂದು ಸ್ಥಾನವನ್ನು ನೀಡಲಾಗಿದೆ. ಈಗ ಸರ್ಕಾರ ರಚಿಸಿರುವ ಪಕ್ಷಕ್ಕೆ ಇದೇನು ದೊಡ್ಡ ಮಿತಿಯೆಂದೆನಿಸುವುದಿಲ್ಲ. ಏಕೆಂದರೆ ಇಂದಿನ ಆಡಳಿತ ಪಕ್ಷವು ಭಾರತೀಯ ಸಂಸ್ಕೃತಿಯನ್ನು ಅದರ ಉತ್ಪನ್ನವಾಗಿ ರಾಜಕಾರಣವನ್ನು ಹೇಗೆ ಪರಿಭಾವಿಸಿಕೊಂಡಿದೆಯೊ ಅದಕ್ಕೆ ತಕ್ಕಂತೆ ಮಂತ್ರಿಮಂಡಲದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಲಾಗಿದೆ.

ನಮಗೆಲ್ಲರಿಗೂ ತಿಳಿದಿರುವಂತೆ ಕಳೆದ ಏಳೆಂಟು ವರ್ಷಗಳಿಂದ ದೆಹಲಿಯ ಶ್ರೀಮತಿ ಸುಷ್ಮಾ ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಬಳ್ಳಾರಿಗೆ ಭೇಟಿ ಕೊಡುತ್ತಿದ್ದಾರೆ. ಅವರು ಭೇಟಿಕೊಡುವುದು ಮಹಿಳೆಯರ ಬಗೆಗಿನ ಯಾವುದೇ ಕಾಳಜಿಯಿಂದಲ್ಲ. ಅದರಲ್ಲೂ ಅವರು ಯಾವತ್ತು ದುಡಿಯುವ ಮಹಿಳೆಯರ ಬಗ್ಗೆ ಮಾತನಾಡಿದವರಲ್ಲ. ಅವರ ಕೇರಿಗಳಿಗೆ ಪ್ರವೇಶಿಸಿದವರಲ್ಲ. ಅವರಿಗೆ ದುಡಿಯುವ ಮಹಿಳೆಯರು ಹರಿಸುವ ಬೆವರಿನ, ಕಣ್ಣೀರಿನ ಮತ್ತು ರಕ್ತದ ಘಾಟು ಕುಡಿದ ಅನುಭವವಿಲ್ಲ. ಅವರು ಬಳ್ಳಾರಿಗೆ ಪ್ರತಿ ವರ್ಷ ಬರುವುಸು ‘ವರಮಹಾಲಕ್ಷ್ಮಿ’ ಪೂಜೆಗಾಗಿ ವಿನಾ ಬಡ ದುಯುವ ಮಹಿಳೆಯರ ಅಳಲನ್ನು ವರ್ಗದ ಮಹಿಳೆಯರ ಹಿತಾಸಕ್ತಿಗಳೆಂಬುದು ಇದರಿಂದ ತಿಳಿಯುತ್ತದೆ. ಇಂತಹ ಮಹಿಳಾ ಪ್ರಾತಿನಿಧ್ಯ ಹೊಂದಿರುವ ಪಕ್ಷವು ಮಹಿಳೆಯರಿಗೆ ಯಾವ ಬಗೆಯ ನ್ಯಾಯ ಒದಗಿಸಬಲ್ಲದೆಂಬುದನ್ನು ಮತ್ತು ಯಾವ ಬಗೆಯ ಲಿಂಗ ಸಂಬಂಧಿ ಅಭಿವೃದ್ಧಿಯನ್ನು ನೀಡಬಹುದೆಂಬುದನ್ನು ಊಹಿಸಿಕೊಳ್ಳಬಹುದಾಗಿದೆ.

ಮಹಿಳೆಯರ ಅಭಿವೃದ್ಧಿ ಕುರಿತಂತೆ ಅನೇಕ ಕಾರ್ಯಕ್ರಮಗಳು ಇಂದು ಆಚರಣೆಯಲ್ಲಿವೆ. ಅವುಗಳಿಗೇನು ಬರಲಿಲ್ಲ. ಆದರೆ ಅವು ಮಹಿಳೆಯರನ್ನು ಹೇಗೆ ಪರಿಭಾವಿಸಿಕೊಂಡಿವೆ. ಅವು ಸಮಾಜದ ಯಾವ ವರ್ಗದ ಮಹಿಳೆಯರನ್ನು ಗುರಿಯಾಗಿಟ್ಟುಕೊಂಡಿವೆ ಮತ್ತು ಮಹಿಳೆಯರ ಯಾವ ಬಗೆಯ ಹಿತಾಸಕ್ತಿಯನ್ನು ಅವು ಇಡೇರಿಸುತ್ತವೆ ಎಂಬುದು ಮುಖ್ಯವಾಗುತ್ತದೆ. ಪ್ರಸಿದ್ಧ ಸ್ತ್ರೀವಾದಿಯೊಬ್ಬಳು ಸರ್ಕಾರದ ಮಹಿಳಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ಎರಡು ಗುಂಪುಗಳಾಗಿ ವರ್ಗೀಕರಿಸುತ್ತಾಳೆ. ಮೊದಲನೆ ಗುಂಪಿನವುಗಳನ್ನು ಆಕೆ ಮಹಿಳೆಯರ ದೈನಂದಿನ ಅಗತ್ಯಗಳನ್ನು ಪೂರೈಸುವ ಕಾರ್ಯಕ್ರಮಗಳೆಂದು ಕರೆದರೆ ಎರಡನೆಯ ಗುಂಪಿನವುಗಳನ್ನು ಮಹಿಳೆಯರ ಅಗತ್ಯಗಳನ್ನು ಪೂರೈಸುವ ಕಾರ್ಯಕ್ರಮಗಳೆಂದು ಕರೆದಿದ್ದಾಳೆ. ಕರ್ನಾಟಕದಲ್ಲಿ ಇಂದು ಅನುಷ್ಠಾನದಲ್ಲಿರುವ ಸಂಘರ್ಷಣಾತ್ಮಕ ಕಾರ್ಯಕ್ರಮಗಳನ್ನು ಅಂದರೆ ಭಾಗ್ಯಲಕ್ಷ್ಮಿ, ಬಾಲಕಿಯರಿಗೆ ಬೈಸಿಕಲ್ಲು, ಸ್ತ್ರೀಶಕ್ತಿ, ಯಶಸ್ವಿನಿ, ಮಡಿಲು, ಜನನಿ ಸುರಕ್ಷಾ ಮುಂತಾದವು ಮಹಿಳೆಯರ ದೈನಂದಿನ ಅಗತ್ಯಗಳನ್ನು ಮಾತ್ರ ಪೂರೈಸಬಲ್ಲವು. ಇಂತಹ ಅಗತ್ಯಗಳನ್ನು ಈಡೇರಿಸುವುದು ಮುಖ್ಯ. ಆದರೆ ಈ ಬಗೆಯ ಅಗತ್ಯಗಳನ್ನು ಒದಗಿಸಲು ಸಮಾಜದಲ್ಲಿನ ಅಧಿಕಾರ ಸಂಬಂಧಗಳಲ್ಲಿ ಯಾವ ಬಗೆಯ ಬದಲಾವಣೆಯೂ ಬೇಕಾಗಿಲ್ಲ. ಕುಟುಂಬ ಮಟ್ಟದಲ್ಲೂ ಯಾರ ಅಧಿಕಾರವೂ ಮುಕ್ಕಾಗಬೇಕಾಗಿಲ್ಲ. ಸರ್ಕಾರವು ಇಂತಹ ಅಗತ್ಯಗಳನ್ನು ಈಡೇರಿಸಿಕೊಡಲು ಹಿಂದೆ ಮುಂದೆ ನೋಡುವುದಿಲ್ಲ. ಏಕೆಂದರೆ ಇಲ್ಲಿ ಅದು ಕಳೆದುಕೊಳ್ಳುವುದೇನಿಲ್ಲ. ನಿಜವಾಗಿ ಮಹಿಳೆಯರಿಗೆ ಬೇಕಾಗಿರುವುದು ಆಸ್ತಿಯ ಮೇಲಿನ ಹಕ್ಕು, ಕೌಟುಂಬಿಕ ದುಡಿಮೆಯನ್ನು ಕುಟುಂಬದ ಪುರುಷ ಸದಸ್ಯರು ಹಂಚಿಕೊಳ್ಳುವುದು, ಲಿಂಗ ಸಂಬಂಧಿ ಶ್ರಮ ವಿಭಜನೆಯನ್ನು ತಿರಸ್ಕರಿಸುವುದು. ಮಹಿಳೆಯರು ತಾವೇನಾಗಬೇಕೆಂದಿದ್ದಾರೊ ಅದರಂತಾಗಲು ಅಗತ್ಯವಾದ ಅವಕಾಶಗಳನ್ನು ಮತ್ತು ಅವುಗಳನ್ನು ದಕ್ಕಿಸಿಕೊಳ್ಳಲು ಬೇಕಾದ ಸಾಮರ್ಥ್ಯವನ್ನು ಒದಗಿಸುವುದು. ಮಹಿಳೆಯನ್ನು ಕೇವಲ ತಾಯಿಯಾಗಿ ಮಾv ಪರಿಭಾವಿಸಿಕೊಳ್ಳದೆ ಅವಳನ್ನು ವ್ಯಕ್ತಿಯಾಗಿ ನೋಡುವುದು. ತನ್ನ ವ್ಯಕ್ತಿತ್ವವನ್ನು ತಾನು ಮತ್ತು ತಾನು ಬಯಸಿದಂತೆ ಕಟ್ಟಿಕೊಳ್ಳಲು ಅಗತ್ಯವಾದ ಸ್ವಾತಂತ್ರ್ಯವನ್ನು ಒದಗಿಸುವುದು, ಮಹಿಳೆಯ ದೈಹಿಕ ಸಮಗ್ರತೆ ಮುಂತಾದವು. ಇಂತಹ ಹಿತಾಸಕ್ತಿಗಳನ್ನು ಗುರುತಿಸುವ – ಪೂರೈಸುವ ಮತ್ತು ಒದಗಿಸುವ ಬಗ್ಗೆ ಸರ್ಕಾರಗಳು ಯಾವತ್ತೂ ಯೋಚಿಸುವುದಿಲ್ಲ. ಈ ದೈನಂದಿನ ಅಗತ್ಯಗಳನ್ನು ಪೂರೈಸುವ ಕಾರ್ಯಕ್ರಮಗಳನ್ನು ಕೇವಲ ಮಹಿಳೆಯರ ಬದುಕನ್ನು ‘ಸಹ್ಯ’ವನ್ನಾಗಿ ಮಾಡಬಲ್ಲವೆ ವಿನಾ ಅವು ಅವಳ ಬದುಕನ್ನು ‘ಸಮೃದ್ಧ’ಗೊಳಿಸುವುದು ಸಾಧ್ಯವಿಲ್ಲ’ ಇಂತಹ ಕಾರ್ಯಕ್ರಮಗಳಲ್ಲಿ ‘ಪರಿವರ್ತನೆ’ಗೆ ಅವಕಾಶವಿರುವುದಿಲ್ಲ. ಮಹಿಳೆಯರ ಬದುಕು ಸಹನೀಯವಾಗುವುದರಿಂದ ಏನೂ ಪ್ರಯೋಜನವಿಲ್ಲ. ಮಹಿಳೆಯರ ಬದುಕು ಘನತೆಯ ಮತ್ತು ಗೌರವದ ಸಂಗತಿಯಾಗಬೇಕು. ಮಹಿಳೆಯರು ವ್ಯಕ್ತಿಗಳಾಗಿ ತಮ್ಮ ಬದುಕನ್ನು ತಾವು ಪರಿಭಾವಿಸಿಕೊಂಡಂತೆ ರೂಪಿಸಿಕೊಳ್ಳಲು, ಕಟ್ಟಿಕೊಳ್ಳಲು ಅಗತ್ಯವಾದ ಸ್ವಾತಂತ್ರ್ಯ ಮತ್ತು ಸಾಮರ್ಥ್ಯವನ್ನು ಒದಗಿಸುವುದು ಇಲ್ಲಿ ಬಹಳ ಮುಖ್ಯವಾಗುತ್ತದೆ. ಕರ್ನಾಟಕದಲ್ಲಿ ಇಂದು ಅಧಿಕಾರಕ್ಕೆ ಬಂದಿರುವ ಸರ್ಕಾರದಿಂದ ಮಹಿಳೆಯರ ಬದುಕು ಸಮೃದ್ಧಗೊಳ್ಳುವಂತಹ ಅಭಿವೃದ್ಧಿ ಕಾರ್ಯಕ್ರಮಗಳನ್ನು ಬಯಸುವುದು ಸಾಧ್ಯವೇ ಇಲ್ಲ. ಏಕೆಂದರೆ ಅದು ನಂಬಿಕೊಂಡಿರುವ ‘ಭಾರತೀಯ ನಾರಿ’ ಪರಿಭಾವನೆಯಲ್ಲಿ ಸಂಘರ್ಷಣಾತ್ಮಕ ಸಂಗತಿಗಳಿಗೆ ಅವಕಾಶವಿಲ್ಲ. ಈ ಪಕ್ಷವು ನಮ್ಮ ಪ್ರಾಚೀನ ಪರಂಪರೆಯ ಬಗ್ಗೆ ತೀವ್ರ ಅಭಿಮಾನವನ್ನಿಟ್ಟುಕೊಂಡಿದೆ. ಅದನ್ನು ಸಾರಸಗಟಾಗಿ ಉಳಿಸಿಕೊಳ್ಳುವುದರ ಬಗ್ಗೆ ಮತ್ತು ಅದನ್ನು ಊರ್ಜಿತಗೊಳಿಸುವುದರ ಬಗ್ಗೆ ಅದು ಕಟಿಬದ್ಧವಾಗಿದೆ. ‘ಸಂಸ್ಕೃತಿಯ ಹೆಮ್ಮೆ’ ಅದರ ಧಾತು ಸದೃಶ ಮಂತ್ರವಾಗಿದೆ. ಅವರಿಗೆ ‘ವರಮಹಾಲಕ್ಷ್ಮಿ’ ಪೂಜೆ ಮುಖ್ಯವಾಗುತ್ತದೆ ವಿನಾ ದುಡಿಯುವ ಮಹಿಳೆಯರ ದಿನಗೂಲಿಯಾಗಲಿ ಅಥವಾ ಅವರ ಉದ್ಯೋಗದ ಅವಕಾಶಗಳ ವರ್ಧನೆಯ ಪ್ರಶ್ನೆಯಾಗಲಿ ಮುಖ್ಯವಾಗುವುದಿಲ್ಲ. ಸಾಮಾಜಿಕ ಬದಲಾವಣೆಯಲ್ಲಿ ಅಥವಾ ಸಾಮಾಜಿಕ ಪರಿವರ್ತನೆಯಲ್ಲಿ ಅದಕ್ಕೆ ಆಸಕ್ತಿಯಿಲ್ಲ. ಪರಂಪರೆಯ ಸಂರಕ್ಷಣೆಯಲ್ಲಿ ಅದು ತನ್ನ ಪ್ರಸ್ತುತತೆಯನ್ನು ಕಂಡುಕೊಳ್ಳಲು ಬಯಸುತ್ತದೆ.

ಪರಂಪರೆಯ ವೈಭವೀಕರಣ

ಇತ್ತೀಚಿಗೆ ಮಾಧ್ಯಮಗಳಲ್ಲಿ, ಅದರಲ್ಲೂ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಪರಂಪರೆಯ ಗುಣಗಾನ ಮಾಡುವುದು ಅತಿಯಾಗಿಬಿಟ್ಟಿದೆ. ಕೆಲವು ಪತ್ರಿಕೆಗಳಂತೂ ಅದನ್ನು ತಮ್ಮ ಅಘೋಷಿತ ಧೋರಣೆಯನ್ನಾಗಿ ಮಾಡಿಕೊಂಡುಬಿಟ್ಟಿವೆ. ರಾಜ್ಯದ ಮುಖ್ಯಮಂತ್ರಿಯೊಬ್ಬರು ಅಧಿಕಾರ ಸ್ವೀಕರಿಸಿದ ಮೇಲೆ ತಮ್ಮ ಕಛೇರಿಯಲ್ಲಿ ವೈದಿಕಾಗಮ ಪ್ರಣೀತ ಯಜ್ಞ, ಯಾಗ, ಹೋಮ, ಹವನ ಮಾಡುತ್ತಾರೆಂದರೆ ಅವರು ಸಮಾಜಕ್ಕೆ ಯಾವ ಬಗೆಯ ಸಂದೇಶ ನೀಡುತ್ತಾರೆಂಬುದನ್ನು ನಾವು ಯೋಚಿಸಬೇಕಾಗಿದೆ. ಮುಖ್ಯಮಂತ್ರಿಗಳನ್ನು ಅನುಸರಿಸಿ ಇತರೆ ಮಂತ್ರಿಗಳೂ ವಿಧಾನಸಭೆಯನ್ನು ಪುರೋಹಿತ್ಯ ನಡೆಸುವ ಯಜ್ಞಶಾಲೆ – ಪಾಕಶಾಲೆಯನ್ನಾಗಿ ಪರಿವರ್ತಿಸುವಲ್ಲಿ ನಿರತರಾಗಿದ್ದಾರೆ. ಅದನ್ನು ತಮ್ಮ ಸ್ವಂತ ಆಸ್ತಿಯೆಂಬಂತೆ, ತಮ್ಮ ಕೌಟುಂಬಿಕ ಸಾಮ್ರಾಜ್ಯದಂತೆ ಮಾಡಿಕೊಳ್ಳುತ್ತಿದ್ದಾರೆ. ಇನ್ನೊಬ್ಬ ಸಚಿವರು ಇನ್ನೂ ಮುಂದೆ ಹೋಗಿ ರಾಜ್ಯದ ಮೂವತ್ತೊ ಅಥವಾ ಮುವತ್ತೈದು ಸಾವಿರ ಗುಡಿಗುಡಾರಗಳಲ್ಲಿ ಮುಖ್ಯಮಂತ್ರಿಯವರ ಹೆಸರಿನಲ್ಲಿ ಪೂಜೆ ನಡೆಸಬೇಕೆಂಬ ಆದೇಶ ನೀಡಿಬಿಟ್ಟಿದ್ದರು. ಅವೆಲ್ಲವೂ ತಮ್ಮ ಸ್ವಂತ ಆಸ್ತಿಯೆನ್ನುವಂತೆ ಅವರೆಲ್ಲ ವರ್ತಿಸುತ್ತಾರೆ. ಮುಂದೆ ಈ ಸರ್ಕಾರದ ಆಳ್ವಿಕೆಯಲ್ಲಿ ಏನೆಲ್ಲ ನಡೆಯಬಹುದೆಂಬುದಕ್ಕೆ ಇದೊಂದು ಸಣ್ಣ ನಮೂನೆಯಾಗಿದೆ. ಈ ಬಗ್ಗೆ ಜನರ ಮನೋಭಾವ ಏನಿರಬಹುದೆಂಬುದನ್ನು ಪರೀಕ್ಷಿಸುವ ಸಂಘ ಪರಿವಾರದ ಒಂದು ಹುನ್ನಾರವು ಇದಾಗಿರಬಹುದು. ಇಲ್ಲಿ ನಾವು ಒಂದು ಸೂಕ್ಷ್ಮವನ್ನು ಅಗತ್ಯವಾಗಿ ಪರಿಗಣಿಸಬೇಕು. ಅದೇನೆಂದರೆ ಮುಜರಾಯಿ ಗುಡಿಗಳಲ್ಲಿ ಮಾತ್ರ ಪೂಜೆಗೆ ಸಚಿವರು ಆಜ್ಞೆ ಹೊರಡಿಸಿದಂತೆ ಕಾಣುತ್ತದೆ. ಆದರೆ ತಮ್ಮ ಗ್ರಾಮೀಣ ಪ್ರದೇಶಗಳಲ್ಲಿರುವ ಲಕ್ಷಾಂತರ ಅವೈದಿಕ ಗುಡಿಗಳಲ್ಲಿ ಪೂಜೆ ನಡೆಸಬೇಕೆಂಬುದು ಇವರಿಗೆ ಹೊಳೆಯುವುದು ಸಾಧ್ಯವಿಲ್ಲ. ಹಾಗೆ ನೋಡಿದರೆ ಮುಖ್ಯಮಂತ್ರಿಗಳು ತಮ್ಮ ವಿಧಾನಸಭೆ ಕಚೇರಿಯಲ್ಲಿ ನಡೆಸಿದಂತೆ ಉಳಿದ ಕೆಲವು ಸಚಿವರು ತಮ್ಮ ತಮ್ಮ ಕಚೇರಿಗಳಲ್ಲಿ ನಡೆಸುತ್ತಿರುವ – ನಡೆಸಲಿರುವ ಉಜ್ಞ – ಯಾಗ, ಹೋಮ – ಹವನಗಳೆಲ್ಲವನ್ನು ನಡೆಸಿದವರು ಒಂದು ಕೋಮಿಗೆ ಸೇರಿದ್ದರೆಂಬುದು ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಸಂಗತಿಯಾಗಿದೆ. ಈ ರಾಜ್ಯದ ಬಹುಸಂಖ್ಯಾತ ಜನರ ನಂಬಿಕೆ – ಆಚರಣೆಗಳನ್ನು ಕಡೆಗಣಿಸಿ – ಅವುಗಳನ್ನು ತುಚ್ಚೀಕರಿಸಿ ಸರ್ಕಾರ ನಡೆಸುವವರು ವೈದಿಕರನ್ನು, ವೈದಿಕ ದೇವತೆಗಳನ್ನು ಹಾಗೂ ಪುರೋಹಿತರನ್ನು ಓಲೈಸುವ ಕಾರ್ಯದಲ್ಲಿ ನಿರತರಾಗಿರುವಂತೆ ಕಾಣುತ್ತದೆ. ಏಕೆಂದರೆ ಅವರಿಗೆ ಗುಡಿಗಳೆಂದರೆ, ನಂಬಿಕೆಗಳೆಂದರೆ ಕೇವಲ ಪುರೋಹಿತರಿಂದ ಕೂಡಿರುವ ಮತ್ತು ಪ್ರಧಾನಧಾರೆಯ ದೇವರುಗಳನ್ನೊಳಗೊಂಡ ಆಗಮ ಪ್ರಣೀತ ಯಜ್ಞ, ಯಾಗ, ಹವನ, ಹೋಮಗಳನ್ನು ನಡೆಸುವ ಗುಡಿಗಳು ಮತ್ತು ಪುರೋಹಿತರು ಮಾತ್ರವೆಂಬುದನ್ನು ಮತ್ತೆ ಹೇಳುವ ಅಗತ್ಯವಿಲ್ಲ. ಈಗ ಅಧಿಕಾರ ಹಿಡಿದಿರುವ ಸರ್ಕಾರಕ್ಕೆ ಗುಡಿ ಗುಡಾರಗಳಿಗೆ ಸಂಬಂಧಿಸಿದಂತೆ ಕೂಡ ಅನೂಚಾನವಾಗಿ ಹರಿದುಕೊಂಡು ಬರುತ್ತಿರುವ ಮತ್ತು ಸಂಘ ಪರಿವಾರದ ಶಕ್ತಿಗಳು ಅತ್ಯಂತ ಜತನದಿಂದ ಕಾಯ್ದುಕೊಂಡು ಬರುತ್ತಿರುವ ಹಾಗೂ ಊರ್ಜಿತಗೊಳಿಸುವ ಪ್ರಯತ್ನಿಸುತ್ತಿರುವ ‘ಸಾಮಾಜಿಕ ಅಸಮಾನತೆ’ಯನ್ನು ಜಾಗೃತವಾಗಿಟ್ಟುಕೊಳ್ಳಬೇಕೆಂಬ ಪ್ರಜ್ಞೆಯಿದೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿಯಾಗಿದೆ. ನಮ್ಮ ದೂರದರ್ಶನದಲ್ಲಿಯಂತೂ ವೈದಿಕರ ಪ್ರವಚನಗಳಿಗೆ ಕೊರತೆ ಕಂಡುಬರುವುದಿಲ್ಲ. ಬೆಳಿಗ್ಗೆಯಿಂದ ರಾತ್ರಿಯವರಿಗೆ ಎಡೆಬಿಡದೆ ಪರಂಪರೆಯ ಗುಣಗಾನವನ್ನೊಳಗೊಂಡ ಪ್ರವಚನ, ಉಪನ್ಯಾಸ, ಹರಿಕತೆ, ಚರ್ಚೆ, ಸಂವಾದ, ಕಾವ್ಯವಾಚನ ಮುಂತಾದವು ನಡದೇ ನಡೆಯುತ್ತಿರುತ್ತವೆ. ನಮ್ಮ ದೂರದರ್ಶನದವರು ಪುರೋಹಿತರುಗಳಿಗೆ ಅದನ್ನು ಗುತ್ತಿಗೆ ಕೊಟ್ಟುಬಿಟ್ಟಂತೆ ಕಾಣುತ್ತದೆ. ನಮ್ಮ ಪರಂಪರೆಗೆ ಸಂಬಂಧಿಸಿದ ಅದರಲ್ಲೂ ಪ್ರಧಾನಧಾರೆಯ ಪರಂಪರೆಯ ಅನೇಕ ಸಂಗತಿಗಳ ಬಗ್ಗೆ ಇವರೆಲ್ಲ ಮಾತನಾಡುತ್ತಿರುತ್ತಾರೆ. ಅದರಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ ಬಗ್ಗೆ ಮಾತು ಬಂದಾಗಲೆಲ್ಲ ಇವರೆಲ್ಲ ಸಾಮಾನ್ಯವಾಗಿ ನಮ್ಮ ಪರಂಪರೆಯ ‘ಗುರುಕುಲ’ ಪದ್ಧತಿಯ ಬಗ್ಗೆ ಅತ್ಯಂತ ಹೆಮ್ಮೆಯಿಂದ ಮಾತನಾಡುತ್ತಾರೆ. ಅಲ್ಲಿನ ಗುರು ಶಿಷ್ಯ ಸಂಬಂಧ, ಸೇವಾ ಮನೋಭಾವ, ಶ್ರಮಕ್ಕೆ ಸಂಬಂಧಿಸಿದಂತೆ ತರಭೇತಿ, ಪ್ರಕೃತಿಯೊಂದಿಗಿನ ಸೌಹಾರ್ದಯುತ ಸಾಹವರ್ಯ ಮುಂತಾದವುಗಳ ಗುಣಗಾನ ಎಲ್ಲ ವೇದಕೆಗಳಿಂದಲೂ ಕೇಳಿಬರುತ್ತದೆ. ವಿಶ್ವಕ್ಕೆ ಭಾರತವು ನೀಡಿದ ಮಹಾನ್ ಕೊಡುಗೆಯಿದೆಂದು ಹೇಳಲಾಗುತ್ತದೆ. ಇವೆಲ್ಲ ಒಂದು ಮಟ್ಟದವರೆಗೆ ಸರಿಯಿರಬಹುದು. ಆದರೆ ಇಲ್ಲಿ ನಾವು ಕೇಳಿಕೊಳ್ಳಬೇಕಾದ ಆದರೆ ಪರಂಪರೆಯನ್ನು ಗುತ್ತಿಗೆ ಹಿಡಿದುಕೊಂಡ ವೈದಿಕೋತ್ತಮರು ‘ಕೇಳಿಕೊಳ್ಳದ’ ಪ್ರಶ್ನೆ ಬೇರೆಯಿದೆ. ಇವರೆಲ್ಲ ಹಾಡಿಹೊಗಳುವ ಗುರುಕುಲದಲ್ಲಿ ಸಮಾಜದ ಯಾವ ವರ್ಗಕ್ಕೆ ಮತ್ತು ಯಾವ ಲಿಂಗಕ್ಕೆ ಪ್ರವೇಶವಿತ್ತೆಂಬುದರ ಬಗ್ಗೆ ಯಾಕೆ ಇವರೆಲ್ಲ ಪ್ರಶ್ನೆ ಕೇಳಿಕೊಳ್ಳೂವುದಿಲ್ಲವೆಂಬುದೆ ಅಚ್ಚರಿಯ ಸಂಗತಿಯಾಗಿದೆ. ಅದು ಸಮಾಜದಲ್ಲಿ ‘ಎಲ್ಲರನ್ನು ಒಳಗೊಳ್ಳುವ’ ಬಗೆಯದ್ದಾಗಿರಲಿಲ್ಲವೆಂಬುದು ಯಾಕೆ ಪರಂಪರೆಯ ಗುಣಗಾನದ ಗುತ್ತಿಗೆ ಹಿಡಿದವವವರಿಗೆ ಹೊಳೆಯುವುದಿಲ್ಲವೆಂಬುದು ಬಿಡಿಸಲಾರದ ಒಗಟಾಗಿಬಿಟ್ಟಿದೆ. ದೊಡ್ಡ ದೊಡ್ಡ ವಿದ್ವಾಂಶರೆಂದೆನಿಸಿಕೊಂಡವರೂ ಕೂಡ ಪರಂಪರೆಯನ್ನು ಪ್ರಶ್ನಾತೀತವನ್ನಾಗಿ ಪರಿಭಾವಿಸಿಕೊಂಡಿರುವುದು ಕಂಡುಬರುತ್ತದೆ. ಗುರುಕುಲದ ಬಗ್ಗೆ ಮಾತನಾಡುವ ಜನರು ಯಾಕೆ ಅಲ್ಲಿ ಮಹಿಳೆಯರಿಗೆ ಪ್ರವೇಶ ಮತ್ತು ಅವಕಾಶವಿರಲಿಲ್ಲವೆಂಬುದನ್ನು ಮರೆಮಾಚುತ್ತಾರೆಂಬುದು ಯೋಚಿಸಬೇಕಾದ ಸಂಗತಿಯಾಗಿದೆ/ ಅಲ್ಲಿ ಶೂದ್ರರಿಗೆ ಮತ್ತು ಪರಿಶಿಷ್ಟರಿಗೆ ಶಿಕ್ಷಣದ ಹಕ್ಕೇ ಇರಲಿಲ್ಲವೆಂಬುದರ ಬಗ್ಗೆ ಯಾಕೆ ಅವರು ಮೌನವಹಿಸುತ್ತಾರೆ? ಅಲ್ಲಿ ಯಾವ ವಿಷಯಗಳನ್ನು ಬೋಧಿಸುತ್ತಿದ್ದರೆಂಬುದು ಅದು ಯಾವ ವರ್ಗದ ಹಿತಗಳನ್ನು ಪೂರೈಸುತ್ತಿತ್ತು ಎಂಬುದೂ ಕೂಡ ಇವರನ್ನು ಪ್ರಶ್ನೆಯಾಗಿ ಕಾಡುವುದಿಲ್ಲ. ಪ್ರಜಾಸತ್ತಾತ್ಮಕ ಶಿಕ್ಷಣ ವ್ಯವಸ್ಥೆಯಲ್ಲಿ ನಾಡಿನ ಶೂದ್ರರಿಗೆ, ಮಹಿಳೆಯರಿಗೆ ಮತ್ತು ಮುಖ್ಯವಾಗಿ ಪರಿಶಿಷ್ಟರಿಗೆ ಅವಕಾಶ ಕೊಟ್ಟಿರುವುದು ಅವರಿಗೆ ನುಂಗಲಾರದ ತುತ್ತಾಗಿಬಿಟ್ಟರುವಂತೆ ಕಾಣುತ್ತದೆ. ಅದಕ್ಕಾಗಿಯೆ ಅದರ ವಿಷಯದ ಚರ್ಚೆ ಬಂದಾಗಲೆಲ್ಲ ಅವರು ತಮ್ಮ ಪರಂಪರೆಯ ಗುಣಗಾನ ಶುರು ಮಾಡಿಬಿಡುತ್ತಾರೆ ಮತ್ತು ಆ ತಕ್ಷಣ ಅವರಿಗೆ ತಮ್ಮ ಗುರುಕುಲಗಳು ಜ್ಞಾಪಕಕ್ಕೆ ಬಂದುಬಿಡುತ್ತವೆ. ಅವು ಸಾಮಾಜಿಕವಾಗಿ ತಾರತಮ್ಯದ, ಅಸಮಾನತೆಯ ಮತ್ತು ಸಮಾಜದಲ್ಲಿ ಕೆಲವರನ್ನು ಮಾತ್ರ ‘ಒಳಗೊಳ್ಳುವ’ ಸಂಸ್ಥೆಗಳೆಂಬುದು ಅವರಿಗೆ ಕಾಣಿಸುವುದಿಲ್ಲ. ಈ ಪರಂಪರೆಯ ಕೊಡುಗೆಯನ್ನು ಗುರುಕುಲಗಳ ಬಗ್ಗೆ ಮಾತಮಾಡುವ ಇವರೆಲ್ಲ ಮಹಿಳೆಯರಿಗೆ ಶೂದ್ರರಿಗೆ ಮತ್ತು ಪರಿಶಿಷ್ಟರಿಗೆ ಶಿಕ್ಷಣವನ್ನು ನಿಷೇಧಿಸಬೇಕೆಂದು ಬಯಸುತ್ತಾರೇನು?

ಕುಟುಂಬ : ಅಕ್ಕರೆ ಆಕರವೂ ಹೌದು ಮತ್ತು ಹಿಂಸೆಯ ಕೇಂದ್ರವೂ ಹೌದು!

ಪರಂಪರೆಯನ್ನು ವೈಭವೀಕರಿಸುವವರು ಮತ್ತು ಅದರ ಬಗ್ಗೆ ಅತ್ಯಂತ ಹೆಮ್ಮೆಯಿಂದ ಬೀಗುವವರು ಮತ್ತೆ ಮತ್ತೆ ಅಂತಕಗೊಂಡವರಂತೆ ಮಾತನಾಡುವ ಸಂಗತಿಯೆಂದರೆ ನಮ್ಮ ಕುಟುಂಬ ವ್ಯವಸ್ಥೆಯು ಮುರಿದುಬೀಳುತ್ತಿದೆ ಎಂಬುದಾಗಿದೆ. ಇದಕ್ಕೆ ಸಾಮಾನ್ಯವಾಗಿ ಇವರೆಲ್ಲ ನೀಡುವ ಕಾರಣವೆಂದರೆ ಮಹಿಳೆಯರು ‘ಮಹಿಳೆ’ಯರಾಗುತ್ತಿದ್ದಾರೆ ಮತ್ತು ಪಶ್ಚಿಮದ ಪ್ರಭಾವದಿಂದಾಗಿ, ಸ್ತ್ರೀವಾದಿಗಳಿಂದಾಗಿ, ಮಹಿಳೆಯರ ಸ್ವಾತಂತ್ರ್ಯದ ಬಗ್ಗೆ ಮಾತನಾಡುವವರಿಂದಾಗಿ ನಮ್ಮ ಹೆಮ್ಮೆಯ ಕುಟುಂಬ ವ್ಯವಸ್ಥೆಯು ನಾಶವಾಗುತ್ತಿದೆಯೆಂದು ಕಿಡಿಕಾರುತ್ತಿರುತ್ತಾರೆ. ಅಂದರೆ ಇವರ ಪ್ರಕಾರ ಕುಟುಂಬವನ್ನು ಸಂರಕ್ಷಿಸುವ ಜವಾಬ್ದಾರಿ ಮಹಿಳೆಯರದ್ದಾಗಿದೆ. ಹಾಗಾದರೆ ಇದರಲ್ಲಿ ಪುರುಷರ ಜವಾಬ್ದಾರಿ ಏನೂ ಇಲ್ಲವೇ? ಮಹಿಳೆಯರನ್ನು ಯಾಕೆ ಕುಟುಂಬರೊಂದಿಗೆ ಸಮೀಕರಿಸಲಾಗುತ್ತದೆ? ಒಂದು ಕಾಲದಲ್ಲಿ ಅಧಿಕಾರಿಗಳು ಮತ್ತು ಊರಲ್ಲಿ ದೊಡ್ಡವರೆನಿಸಿಕೊಂಡವರೆಲ್ಲ ತಮ್ಮ ಹೆಂಡತಿಯರನ್ನು ‘ನನ್ನ ಕುಟುಂಬ’ವೆಂದೆ ಪರಿಚಯಿಸುತ್ತಿದ್ದರೆಂಬುದು ಇಲ್ಲಿ ನೆನಪಿಸಿಕೊಳ್ಳಬೇಕಾದ ಸಂಗತಿಯಾಗಿದೆ. ನಮ್ಮ ಪರಂಪರೆಯಲ್ಲಿ ಮಹಿಳೆಯರಿಗೆ ಮಹಿಳೆರಾಗಿ ಅಸ್ತಿತ್ವವಿರಲಿಲ್ಲ. ಅವರಿಗೆ ‘ತಾಯಿ’ಯಾಗಿ, ‘ಗೃಹಿಣಿ’ಯಾಗಿ ಮತ್ತು ‘ಹೆಂಡತಿ’ಯಾಗಿ ಮತ್ರ ಅಸ್ತಿತ್ವವಿತ್ತು. ಅವಳ ಬದುಕು ಸಾರ್ಥಕವಾಗುತ್ತಿದ್ದುದೆ ಅವಳ ‘ಸಂತಾನೋತ್ಪತ್ತಿ’ ಜವಾಬ್ದಾತಿಯ ನಿರ್ವಹಣೆಯಿಂದ ಎಂಬುದು ಬಹಳ ಮುಖ್ಯವಾದ ಸಂಗತಿಯಾಗಿದೆ. ಈ ಸಂತಾನೋತ್ಪತ್ತಿ ಜವಾಬ್ದಾರಿಯು ಜೈವಿಕವಾಗಿ ಮಹಿಳೆಯರಿಗೆ ಮೀಸಲಾದುದು ಎಂಬ ನಂಬಿಕೆ ಇಂದಿಗೂ ಗಟ್ಟಿಯಾಗಿ ಮುಂದುವರಿದಿರುವುದನ್ನು ನೋಡಬಹುದಾಗಿದೆ. ಆದರೆ ಇದರಲ್ಲಿ ಎರಡು ಸಂಗತಿಗಳಿವೆ. ಮೊದಲನೆಯ ಜೀವವೊಂದಕ್ಕೆ ಉಸಿರು ನೀಡುವುದು. ಇದು ಜೈವಿಕವಾಗಿ ಮಹಿಳೆಯರಿಗೆ ಮೀಸಲಾದ ಸಂಗತಿಯಾಗಿದೆ. ಆದರೆ ಮಗುವಿನ ಲಾಲನೆ ಪಾಲನೆ, ಶುಶ್ರೂಷೆ, ಅದರ ಊಟ ಉಪಚಾರ ಮುಂತಾದವುಗಳೆಲ್ಲ ಜೈವಿಕವಾದವುಗಳೇನಲ್ಲ. ಅವುಗಳನ್ನು ಪುರುಷರು ನಿರ್ವಹಿಸಲಾಗಬಹುದಾಗಿದೆ. ಸಂಗೋಪನಾ ದುಡಿಮೆಯೆಂಬುದು ಮಹಿಳೆಯರಿಗೆ ಮಾತ್ರ ಸಂಬಂಧಿಸಿದುದಲ್ಲ. ಈ ಸಂಗೋಪನಾ ದುಡಿಮೆಯ ಗುಣಗಳನ್ನು ಮಹಿಳೆಯರಾಗಲಿ ಅಥವಾ ಪುರುಷರಾಗಲಿ ಪ್ರಜ್ಞಾಪೂರ್ವಕವಾಗಿ ರೂಢಿಸಿಕೊಳ್ಳಬೇಕಾಗುತ್ತದೆ. ಅದು ಮಹಿಳೆಯರಿಗೆ ನೈಸರ್ಗಿಕವಾಗಿ ದತ್ತವಾದ ಸಂಗತಿಯೇನಲ್ಲ. ಜೆ.ಎಸ್. ಮಿಲ್ ಹೇಳುವಂತೆ ಅದೊಂದು ‘ಕೃತಕವಾದ ಆದರೆ ಉತ್ಕೃಷ್ಟವಾದ ಗುಣ’ವಾಗಿದೆ. ಈ ಗುಣವು ಕೇವಲ ಮಹಿಳೆಯರಿಗೆ ಮೀಸಲಾದ ಖಾಸಗಿಯಾದ ಸಂಗತಿಯೇನಲ್ಲ. ಅದು ಸಾಮಾಜಿಕವಾದ ಜವಾಬ್ದಾರಿಯಾಗಿದೆ. ಹಸುಗೂಸೊಂದಕ್ಕೆ ರಾತ್ರಿಯೆಲ್ಲ ಮತ್ತೆ ಮತ್ತೆ ಎದ್ದು ಹಾಲೂಡಿಸುವ, ಒದ್ದೆ ಬಟ್ಟೆ ಬದಲಾಯಿಸುವ ತಾಯಿಯ ಕೆಲಸ ಕೇವಲ ವೈಯಕ್ತಿಕವಾದುದಲ್ಲ. ಅದರಿಂದ ಅಕೇಗೇನು ಬರಿ ಸಂತೋಷ ದೊರೆಯುವುದಿಲ್ಲ. ಅದು ಅವಳಿಗೆ ಕಿರಿಕಿರಿಯುಂಟು ಮಾಡಬಹುದು. ಆದರೆ ಅವಳು ಅದನ್ನು ಸಾಮಾಜಿಕ ಜವಾಬ್ದಾರಿಯೆಂದು ತಿಳಿದು ನಿರ್ವಹಿಸುತ್ತಾಳೆ. ಈ ಗುಣವನ್ನು ಪುರುಷರು ಮೈಗೂಡಿಸಿಕೊಳ್ಳಬಹುದು. ಸಂಗೋಪನಾ ದುಡಿಮೆಯು (ಅಂದರೆ ಮನೆವಾರ್ತೆ, ಸಂತಾನೋತ್ಪತ್ತಿ ದುಡಿಮೆ, ಶುಶ್ರೂಷಾ ದುಡಿಮೆ ಇತ್ಯಾದಿ) ಸಂಪಾದನಾ ದುಡಿಮೆಯಷ್ಟೇ ಮಹತ್ವವಾದುದು. ಪುರುಷಶಾಹಿಯು ಇದನ್ನು ಅರ್ಥಮಾಡಿಕೊಳ್ಳಬೇಕು. ಸಂಪಾದನಾ ಆರ್ಥಿಕತೆಯ ಸಮೃದ್ಧಿಯು ಸಂಗೋಪನಾ ದುಡಿಮೆಯನ್ನು ಅವಲಂಬಿಸಿದೆ. ಸಂಗೋಪನಾ ದುಡಿಮೆಯನ್ನು ನಿರ್ಲಕ್ಷಿಸುವುದರಿಂದ ಹಾನಿ ಸಂಪಾದನಾ ಆರ್ಥಿಕತೆಯ ಮೇಲುಂಟಾಗುತ್ತದೆ.

ಕುಟುಂಬವು ಮಹಿಳೆಯರ ದೃಷ್ಟಿಯಿಂದ ಕೇವಲ ಅಕ್ಕರೆಯ ಮಮತೆಯ ಕೇಂದ್ರ ಮಾತ್ರವಾಗಿಲ್ಲ. ಅದು ಮಹಿಳೆಯರಿಗೆ ಹಿಂಸೆಯ ಮೂಲವೂ ಆಗಿದೆ. ಮಹಿಳೆಯರ ಮೇಲಿನ ಹಿಂಸೆಯ ಬಹುತೇಕ ಸಂದರ್ಭಗಳಲ್ಲಿ ಕುಟುಂಬ ಸಂಬಂಧಿಗಳಿಂದಲೇ ನಡೆಯುತ್ತದೆಯೆಂಬುದು ಅನೇಕ ಅಧ್ಯಯನಗಳಿಂದ ಮತ್ತು ನಿದರ್ಶನಗಳಿಂದ ದೃಡಪಟ್ಟಿದೆ. ಕುಟುಂಬವೆಂಬುದೇನು ಸದ್ಗುಣಗಳ ಖನಿಯಲ್ಲ. ಅದರೊಳಗಿನ ಮಹಿಳೆಯರಿಗೆ ಸಂಬಂಧಿಸಿದ ಅಸಮಾನತೆಗಳನ್ನು ನಾವು ಗುರುತಿಸಬೇಕಾಗಿದೆ. ಅಮರ್ತ್ಯಸೆನ್ ಕುಟುಂಬವನ್ನು ‘ಸಹಕಾರ ಮತ್ತು ಸಂಘರ್ಷಗಳೆರಡನ್ನೂ ಏಕಕಾಲದಲ್ಲಿ ಹೊಂದಿರುವ ಸಂಸ್ಥೆತಾಗಿರುವುದನ್ನು ತೋರಿಸಿಕೊಟ್ಟಿದ್ದಾರೆ. ಇವೆರಡರ ನಡುವಿನ ಸಮತೋಲನವು ಮಹಿಳೆಯರ ಮೇಲಿನ ಹಿಂಸೆಯನ್ನು ನಿರ್ಧರಿಸುವ ಬಹುಮುಖ್ಯ ಸಂಗತಿಯಾಗಿದೆ. ಪರಂಪರೆಯ ವೈಭವೀಕರಣದಿಂದಾಗಿ ಸಂಘರ್ಷದ ಸಂಗತಿಗಳನ್ನು ಮಹಿಳೆಯರು ಅದುಮಿಟ್ಟುಕೊಂಡು ಕೇವಲ ಸಹಕಾರದ ಮುಖವಾಡ ತೊಟ್ಟುಕೊಂಡು ಬದುಕುತ್ತಿರುವುದು ಕಂಡುಬರುತ್ತದೆ. ಯಾಕೆ ಮಹಿಳೆಯರ ಹೀಗೆ ನಡೆದುಕೊಳ್ಳುತ್ತಾರೆ? ಸಂಘರ್ಷದ ಹಾದಿಯನ್ನೇಕೆ ತುಳಿಯುವುದಿಲ್ಲ? ಇದು ಬಹಳ ಕುತೂಹಲದ ಸಂಗತಿಯಾಗಿದೆ. ಇಲ್ಲಿನ ಸೂಕ್ಷ್ಮವೆಂದರೆ ಮಹಿಳೆಯರು ಒಂದು ವೇಲೆ ಸಂಘರ್ಷದ ಹಾದಿ ತುಳಿದರೆ ಅವರು ಎದುರಿಸಬೇಕಾದ ಅಪಾಯಗಳು ಮತ್ತು ಹಿಂಸೆ ಕುಟುಂಬದೊಳಗಿದ್ದು ಅಲ್ಲಿ ಸಹಕಾರದ ಮುಖವಾಡ ತೊಟ್ಟು ಎದುರಿಸುವ ಹಿಂಸೆಗಿಂತ ಭೀಕರವಾಗಿರುವ ಸಾಧ್ಯತೆಯಿದೆ. ಏಕೆಂದರೆ ನಮ್ಮ ಸರ್ಕಾರಗಳು ಹೀಗೆ ಸಂಘರ್ಷದ ಪರಿಣಾಮವಾಗಿ ಒಬ್ಬಂಟಿಗರಾದ ಮಹಿಳೆಯರ ನೆರವಿಗೆ ಯಾವುದೇ ವ್ಯವಸ್ಥೆ ಅಂದರೆ ಪುನರ್ವಸತಿಯ ಸೌಲಭ್ಯವನ್ನಾಗಲಿ ಅಥವಾ ಮತ್ತೇನಾದರು ಅವಕಾಶವನ್ನಾಗಲಿ ಮಾಡಲಿಲ್ಲ. ಸಂಕಷ್ಟದ ಸಂದರ್ಭದಲ್ಲಿ ಒಂಟಿ ಹೆಣ್ಣು ಯಾರನ್ನು ಅಥವಾ ಏನನ್ನು ಆಶ್ರಯಿಸಬೇಕು? ನಮ್ಮ ಪರಂಪರೆಯ ಭಾಗವಾದ ಕುಟುಂಬ ವ್ಯವಸ್ಥೆಯಲ್ಲಿ ಗಂಡನ ಮನೆಯಿಂದ ಹೊರಬಿದ್ದ ಮಹಿಳೆಯರಿಗೆ ತವರು ಮನೆಯಲ್ಲಿ ಆಶ್ರಯ ರಕ್ಷನೆ ದೊರೆಯುವುದಿಲ್ಲ. ಹಾಗಾದರೆ ಸಂಘರ್ಷದ ಹಾದಿ ತುಳಿದ ಮಹಿಳೆಯರು ಎಲ್ಲಿಗೆ ಹೋಗಬೇಕು? ಏನನ್ನು ಆಶ್ರಯಿಸಬೇಕು? ಈ ಅಗೋಚರ ಅಪಾಯವನ್ನು ಎದಿರಿಸುವುದಕ್ಕಿಂತ ಗೊತ್ತಿರುವ ಹಿಂಸೆಯನ್ನು ಅನುಭವಿಸುವುದು ಲೇಸೆಂದು ಅವರು ಹಿಂಸೆಯನ್ನು ಸಹಿಸಿಕೊಂಡೆ ಕುಟುಂಬದೊಳಗೆ ಬದುಕು ದೂಡುತ್ತಿದ್ದರೆ ಅದರಲ್ಲಿ ಅಶ್ಚರ್ಯಪಡಬೇಕಾದುದೇನಿಲ್ಲ. ಇದರಿಂದಾಗಿ ಮಹಿಳೆಯರು ಅನುಭವಿಸುವ ಮಾನಸಿಕ ಯಾತನೆ, ಒತ್ತಡ, ಖಿನ್ನತೆಗಳನ್ನು ನಾವು ಊಹಿಸಿಕೊಂಡೆ ತಿಳಿದುಕೊಳ್ಳಬೇಕು.

ಈಗಾಗಲೇ ತಿಳಿಸಿರುವಂತೆ ಸಂಗೋಪನಾ ದುಡಿಮೆಯನ್ನು ಸಂಪೂರ್ಣವಾಗಿ ಮಹಿಳೆಯರು ನಿಭಾಯಿಸುತ್ತಿದ್ದಾರೆ. ಅವರು ಇಂದು ದೊಡ್ಡ ಪ್ರಮಾಣದಲ್ಲಿ ಸಂಪಾದನಾ ದುಡಿಮೆಯ ಕ್ಷೇತ್ರವನ್ನು ಪ್ರವೇಶಿಸುತ್ತಿದ್ದಾರೆ. ಜಾಗತೀಕರಣವು ಉಂಟು ಮಾಡಿರುವ ಬಹುದೊಡ್ಡ ಪರಿಣಾಮ ಇದಾಗಿದೆ. ಮನೆಯ ಹೊರಗಿನ ದುಡಿಮೆಯ ಇಂದು ಅವರಿಗೆ ಅನಿವಾರ್ಯವಾಗಿಬಿಟ್ಟಿದೆ. ಅಂದರೆ ಅವರು ಎರಡೂ ದುಡಿಮೆಯನ್ನು ನಿರ್ವಹಿಸಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಮನೆಯ ಹೊರಗೆ ಸಂಪಾದನಾ ದುಡಿಮೆಯನ್ನು ಅವರು ಪ್ರವೇಶಿಸಿದ ಮಾತ್ರಕ್ಕೆ ಅವರಿಗೆ ಸಂಗೋಪನಾ ದುಡಿಮೆಯಿಂದ ವಿನಾಯಿತಿಯೇನು ದೊರೆಯುವುದಿಲ್ಲ. ಈ ಇಬ್ಬಗೆಯ ಹೊಣೆಗಾರಿಕೆಯಿಂದಾಗಿ ಎರಡನ್ನೂ ಸಮರ್ಪಕವಾಗಿ ನಿರ್ವಹಿಸುವುದು ಅವರಿಗೆ ಸಾಧ್ಯವಿಲ್ಲವಾಗಿದೆ. ಇದು ಕೇವಲ ಮಹಿಳೆಯರಿಗೆ ಉಂಟಾದ ನಷ್ಟವಲ್ಲ. ಇದು ಅಭಿವೃದ್ಧಿಯ ಮೇಲೆ ಪರಿಣಾಮ ಬೀರಬಲ್ಲದು. ಕುಟುಂಬದಲ್ಲಿ ಮಹಿಳೆಯರು ನಿರ್ವಹಿಸುತ್ತಿರುವ ಸಂಗೋಪನಾ ದುಡಿಮೆಯನ್ನು ಪುರುಷರು ಹಂಚಿಕೊಳ್ಳುವ ಅವಶ್ಯಕತೆಯಿದೆ. ಸಂಗೋಪನಾ ದುಡಿಮೆಯಲ್ಲಿ ದೊರೆತ ಬಿಡುವನ್ನು ಅವರು ಸಂಪಾದನಾ ದುಡಿಮೆಯ ಕಡೆ ನೀಡಬಹುದು. ಕುಟುಂಬದಲ್ಲಿ ಹೀಗೆ ಇರ್ವರೂ ಅಂದರೆ ಗಂಡ – ಹೆಂಡತಿ ಜವಾಬ್ದಾರಿಯನ್ನು ಹಂಚಿಕೊಳ್ಳುವುದರಿಂದ ಕುಟುಂಬದ ವರಮಾನವನ್ನು ಗರಿಷ್ಟಗೊಳಿಸಿಕೊಳ್ಳಬಹುದು. ಪರಂಪರೆಯಿಂದ ಹರಿದು ಬಂದಿರುವ ಕುಟುಂಬಕ್ಕೆ ಸಂಬಂಧಿಸಿದ ಇತಿಮಿತಿಗಳನ್ನು ಸರಿಪಡಿಸಿಕೊಳ್ಳುವುದರಿಂದ ಮಹಿಳೆಯರು ಅನುಭವಿಸುವ ಅನೇಕ ಬಗೆಯ ತಾರತಮ್ಯ ಮತ್ತು ಹಿಂಸೆಯನ್ನು ಕಡಿಮೆ ಮಾಡಬಹುದು. ಕುಟುಂಬವನ್ನು ಕೇವಲ ವೈಭವೀಕರಿಸುವುದರಿಂದ ಪ್ರಯೋಜನವಿಲ್ಲ. ಮಹಿಳೆಯರನ್ನು ಕುಟುಂಬಕ್ಕೆ ಸಂವಾದಿಯಾಗಿ ಪರಿಭಾವಿಸಿಕೊಳ್ಳುವುದರಿಂದ ಅವರಿಗೆ ಅನ್ಯಾಯವಾಗುತ್ತದೆ. ಸಂಗೋಪನಾ ದುಡಿಮೆಯೆಂಬುದನ್ನು ಮಹಿಳೆಯರಾಗಲಿ ಪುರುಷರಾಗಲಿ ರೂಢಿಸಿಕೊಳ್ಳಬೇಕಾಗುತ್ತದೆ. ಅದು ಜೈವಿಕವಾಗಿ ಮಹಿಳೆಯರಿಗೆ ಹುಟ್ಟಿನಿಂದಲೆ ಪ್ರಾಪ್ತವಾಗುವ ಸಂಗತಿಯಲ್ಲ. ಈ ಬಗೆಯ ದುಡಿಮೆಯ ಭಾರವನ್ನು ಕಡಿಮೆಗೊಳಿಸುವುದರಿಂದ ಮಹಿಳೆಯರ ‘ಧಾರಣಾ ಸಾಮರ್ಥ್ಯ’ವು ಉತ್ತಮಗೊಳ್ಳುತ್ತದೆ. ಜನರ ಧಾರಣಾ ಸಾಮರ್ಥ್ಯವನ್ನು ವಿಸ್ತೃತಗೊಳಿಸುವುದು, ಅದನ್ನು ಸಂವರ್ಧಿಸುವದೇ ಅಭಿವೃದ್ಧಿಯೆಂದಾದರೆ ಸಂಗೋಪನಾ ದುಡಿಮೆಯನ್ನು ಮಹಿಳೆಯರ ಜೊತೆಯಲ್ಲಿ ಪುರುಷರು ಹಂಚಿಕೊಳ್ಳುವುದರಿಂದ ಆರ್ಥಿಕತೆಯಲ್ಲಿ ಒಟ್ಟಾರೆ ಜನರ ಧಾರಣಾ ಸಾಮರ್ಥ್ಯವು ಗರಿಷ್ಟಗೊಳ್ಳಬಹುದು. ಅಭಿವೃದ್ಧಿಯ ದೃಷ್ಟಿಯಿಂದ ಪುರುಷರು ಸಂಗೋಪನಾ ದುಡಿಮೆಯನ್ನು ಮಹಿಳೆಯರೊಂದಿಗೆ ಹಂಚಿಕೊಳ್ಳುವುದು ಅತ್ಯಂತ ಅಪೇಕ್ಷಣೀಯ ಸಂಗತಿಯಾಗಿದೆ. ಇದರಿಂದ ಕುಟುಂಬದೊಳಗೆ ಲಿಂಗ ಸಂಬಂಧಿ ಅಧಿಕಾರಕ್ಕೆ ಸಂಬಂಧಿಸಿದಂತೆ ಬದಲಾವಣೆ ಉಂಟಾಗುತ್ತದೆ.

ಮಹಿಳೆಯರ ಅಭಿವೃದ್ಧಿಯೆಂಬುದು ಹಂಗಿನ ಸಂಗತಿಯಲ್ಲ. ಅದು ಮಹಿಳೆಯರ ಹಕ್ಕಿನ ಸಂಗತಿಯಾಗಿದೆ. ಮೂಲಭೂತವಾಗಿ ಅಭಿವೃದ್ಧಯೆಂಬುದು ಜನರಿಗೆ ದತ್ತಿಯಾಗಿ ಪ್ರಾಪ್ತವಾಗುವ ಫಲವಲ್ಲ. ಅದು ದಕ್ಕಿಸಿಕೊಳ್ಳಬೇಕಾದ ಹಕ್ಕಾಗಿದೆ. ಸರ್ಕಾರವು ಮಹಿಳೆಯರನ್ನು ಹಂಗಿನ ಸಂಗತಿಯಾಗಿ ಪರಿಭಾವಿಸಿಕೊಳ್ಳುವುದನ್ನು ನಿಲ್ಲಿಸಬೇಕು. ಪರಂಪರೆಯನ್ನು ವಿಮರ್ಶಾತ್ಮಕವಾಗಿ ಪರಿಭಾವಿಸಿಕೊಳ್ಳುವ ಅಗತ್ಯವಿದೆ. ಈ ದಿಶೆಯಲ್ಲಿ ನಾವು ಯೋಚಿಸಬೇಕಾಗಿದೆ.

* * *