ನಾನು ನನ್ನ ಪಾಡಿಗೆ ಇದ್ದವಳು. ಈ ಮಹಿಳೆ ಲಿಂಗಪ್ರಜ್ಞೆ ಹೋರಾಟ ಎಲ್ಲ ಮುಗಿಸಿ ಬೆಚ್ಚಗಿದ್ದವಳು. ಹಂಪಿಯ ಮಹಿಳಾ ಅಧ್ಯಯನ ವಿಭಾಗದವರು ನನ್ನನ್ನು ಮಾತಿಗೆ ಎಳೆದರು. ಅವರು ಹೇಳಿದ ವಿಷಯ ‘ಮಹಿಳೆಯರ ಅಸಾಂಪ್ರದಾಯಿಕ ಸಾಹಸ’ ನನ್ನನ್ನು ತುಂಬ ಆಕರ್ಷಿಸಿತು. ಆ ಕಾರಣದಿಂದಲೇ ನಾನು ಮಾತಾಡಲು ಒಪ್ಪಿದೆ. ಈ ವಿಷಯ ನನ್ನನ್ನು ಆತ್ಮವಿಮರ್ಶೆಗೆ ಒಳಪಡಿಸಿತು. ಹಳೆಯ ಮಾರ್ಗದ ಕಡೆ ಹೊರಳು ನೋಡುವಂತೆ ಮಾಡಿತು. ಅದಕ್ಕಾಗಿ ಋಣಿ.

ನನ್ನ ಇಡೀ ಪ್ರಬಂಧದಲ್ಲಿ ನಾನು ಅಸಾಂಪ್ರದಾಯಿಕ ಸಾಹಸದ ಕುರಿತು ಮಾತಾಡಿಲ್ಲ. ಅದಕ್ಕೆ ಕಾರಣ ನನ್ನ ಪ್ರಬಂಧದ ಮುಕ್ತಾಯದ ವೇಳೆಗೆ ನಿಮಗೆ ತಿಳಿಯುತ್ತದೆ. ನನ್ನ ಮಾತು ನೀರಸವೆನಿಸಿ ನಿಮಗೆ ನಿರಾಶೆಯಾದರೆ ಕ್ಷಮೆಯಿರಲಿ.

ಮೂರನೆಯದಾಗಿ ನನ್ನ ಪ್ರಬಂಧ ತೀರ ಸಾಂಪ್ರದಾಯಿಕ ಅನಿಸಿದರೆ ಸಂತೋಷ. ಅಸಾಂಪ್ರದಾಯಿಕ ದಾರಿ ಎನಿಸಿದರೆ ಹಿಗ್ಗು, ನಾನು ನನ್ನ ನಡೆಯನ್ನ ಬರೆದಿದ್ದೇನೆ. ಇಲ್ಲಿಯ ಯಾವ ಮಾತುಗಳೂ ನಿರ್ಣಯಗಳಲ್ಲ. ಹೊಸದಾರಿಯಲ್ಲಿ ನಡೆಯುವವಳು ಹೀಗೊಂದು ದಾರಿ ಇದೆ ಎಂಬುದನ್ನು ಸೂಚಿಸುವ ಪ್ರಯತ್ನ. ನನ್ನ ದಾರಿ, ನಡೆ ಹಿಡಿಸದಿದ್ದರೆ ಬಿಟ್ಟು ಬಿಡಿ. ನನ್ನ ನಡೆಯೊಂದಿಗೆ ಹೆಜ್ಜೆ ಹಾಕಿದರೆ ಕೂಡಿ ನಡೆಯೋಣ. ಪ್ರೀತಿಯಿಂದ, ಸಮಾನ ಮನಸ್ಕರೊಂದಿಗೆ ಜತೆಯಾಗಿ ಹೆಜ್ಜೆಹಾಕುವ ಹಂಬಲದಿಂದ ಇದನ್ನು ಬರೆದಿದ್ದೇನೆ. ಇದು ಹಸಿವಿನ ಪ್ರಶ್ನೆ. ನನ್ನ ಹಸಿವು, ನಿಮ್ಮ ಹಸಿವೂ ಒಂದಾದರೆ ಕೂಡಿ ನಡೆಯೋಣ. ಹಸಿವು ಬೇರೆಯಾದರೆ ದಾರಿ ಬೇರೆ. ನಿಮಗೆ ನಾನು ಊಟ ಕೊಡುವವಳಲ್ಲದಿರಬಹುದು, ನನ್ನ ಹಸಿವನ್ನು ನೀವು ಅರ್ಥಮಾಡಿಕೊಂಡರೆ ಕೃತಾರ್ಥಳು.

ಮಹಿಳೆಯರ ಅಸಾಂಪ್ರದಾಯಿಕ ಸಾಹಸಗಳು

ಒಮ್ಮೆ ಶ್ರೀ ಬನ್ನಂಜೆ ಗೋವಿಂದಾಚಾರ್ಯರು ಚಾಣಕ್ಯನ ಅರ್ಥಶಾಸ್ತ್ರದ ಉಪನ್ಯಾಸ ನಡೆಸಿದ್ದರು. ಹಲವು ಸಭಿಕರಲ್ಲಿ ನಾನು ಒಬ್ಬಳು. ಅವರ ಮಾತು ಜೀವ ಬೆಳವಣಿಗೆಯ ಕುರಿತು ಇತ್ತು. ಪ್ರತೀ ತಂದೆ ತನ್ನ ಮಗನಲ್ಲಿ, ಮಗ ಅವನ ಮಗನಲ್ಲಿ ಹೀಗೆ ತನ್ನ ಕಂಟಿನ್ಯೂಟಿಯನ್ನು ಕಾಣುತ್ತಿರುತ್ತಾರೆ. ಅಥವಾ ಪ್ರತೀಗಂಡು ತನ್ನ ಗಂಡು ಸೃಷ್ಟಿಯಲ್ಲಿ ಜೀವ ಬೆಳವಣಿಗೆಯನ್ನು ಕಾಣುತ್ತಿರುತ್ತಾರೆ. ಹೀಗೆ ಅವರ ಮಾತು ಮುಗಿದಿತ್ತು. ಮುಂದೆ ಚರ್ಚೆಯ ಸಂದರ್ಭ. ನಾನು ಎದ್ದು ನಿಂತು ಪ್ರಶ್ನಿಸಿದೆ. “ಪ್ರತಿ ಹೆಣ್ಣು ಯಾರಲ್ಲಿ ಕಂಟಿನ್ಯೂಟಿ ಕಾಣಬೇಕು? ತಾಯಿಯ ಜೀವ ಪರಂಪರೆಯನ್ನು ಮುಂದುವರೆಸುವ ಅಪೇಕ್ಷೆ ಅವಳಿಗಿಲ್ಲವೆ? ಇದ್ದರೆ ಇದು ಯಾರ ಮುಖಾಂತರ? ಮಗಳು ಸಾಧುವಲ್ಲವೆ? ನಮ್ಮ ತಂದೆ “ಗಂಡು ಜೀವ ತನ್ನನ್ನು ಬೆಳೆಸುವ ಕಡೆಗೆ ಹೆಚ್ಚು ಪಾತ್ರವಾಗಿ ಕ್ಷೇತ್ರವಾಗಿ ಸಹಕರಿಸುತ್ತಾಳೆ. ಅದೇ ಅವಳ ಸಾರ್ಥಕತೆ. ಅವಳಿಗೆ ಕಂಟಿನ್ಯೂಟಿಯ ಮಾತು ಬರುವುದಿಲ್ಲ.” ಎಂಬರ್ಥದ ಉತ್ತರ ನೀಡಿದ್ದರು. ನಾನು ಆಗಿನ್ನು ೧೮ರ ಹುಡುಗಿ. ತಂದೆಯನ್ನು ಹಾಗೆ ಪ್ರಶ್ನಿಸಬಾರದೆಂದು ಅಲ್ಲಿರುವ “ಹಿರಿಯರು” ನನ್ನನ್ನು ತಿದ್ದಿ ನುಡಿದಿದ್ದರು. ನನ್ನ ಪ್ರಶ್ನೆ ತಂದೆಯಾಚೆಗೂ ಚಾಚಿಯೇ ಇತ್ತು.

ಅದಾಗಿ ೬ ವರುಷಗಳ ಬಳಿಕ ಬಸ್ಸಿನಲ್ಲಿ ಪ್ರತ್ಯೇಕತೆ ಬೇಕೆ ಬೇಡವೆ ಎಂಬ ಚರ್ಚೆಯ ಬಿಸಿಯಿದ್ದ ಕಾಲ. ನಮ್ಮಲ್ಲಿಗೆ ತೇಜಸ್ವಿನಿ ನಿರಂಜನ ಬಂದಿದ್ದರು. ಅವರು ಪ್ರತ್ಯೇಕತೆಯನ್ನು ಮೀಸಲಾತಿಯನ್ನು ಅನುಮೋದಿಸಿ ಮಾತಿಗೆ ತೊಡಗಿದ್ದರು. ನಾನು “ಮೀಸಲಾತಿ ಬೇಡ, ಲಿಂಗಾಧಾರಿತವಿರಲಿ, ಜಾತ್ಯಾಧಾರಿತವಿರಲಿ, ಬೇಡ. ಅದು ನಮ್ಮ ಬೆಳವಣಿಗೆಯನ್ನು ತಡೆಯುತ್ತದೆ. ಬಸ್ಸಿನಲ್ಲಿ ಸೀಟು ಕಾಯುವ ಪ್ರತ್ಯೇಕತೆಯಂತೂ ಬೇಡವೇ ಬೇಡ. ಅದು ನಮ್ಮನ್ನು ನಾವು ಸೀಟಿಗಾಗಿಯೂ ಹೋರಾಡದಷ್ಟು ದುರ್ಬಲರನ್ನಾಗಿಸುತ್ತದೆ. ನಾವೇನೂ ಅಷ್ಟು ಬಲಹೀನರಲ್ಲ” ಎಂದು ವಾದಿಸಿದೆ. ನನಗೆ ಅವರಿಗೆ ಮಾತು ಕೊಡಲಿಲ್ಲ. ಅಲ್ಲಿಯೂ ಹಲವು ಮಂದಿ ನನಗೆ “ಸೌಮ್ಯವಾಗಿ” ಮಾತಾಡುವಂತೆ ಸೂಚನೆ ಕೊಟ್ಟಿದ್ದರು. ನಾನು ಬಲಕಳೆದುಕೊಳ್ಳಬಾರದೆಂದೇ ನಡೆಯುತ್ತಿದ್ದೆ.

ಅಂದಿನಿಂದ ಇಂದಿನವರೆಗೂ ನನ್ನನ್ನು ಎರಡು ಮಖ್ಯ ಸಂಗತಿಗಳು ನಡೆಸುತ್ತಿವೆ.

೧. ಜೀವ ಬೆಳವಣಿಗೆಗೆ ಕಾತರಿಸುತ್ತದೆ.

೨. ಅದಕ್ಕೆ ಲಿಂಗ ಮಿತಿ ಇದೆ.

ಇವೆರಡನ್ನು ನಾನು ತೆರೆದ ಕಣ್ಣುಗಳಿಂದ ನೋಡುತ್ತಲೇ ಇದ್ದೆ. ನನಗೆ ಪ್ರತಿ ನಿಮಿಷಕ್ಕೂ ಭೇದ ಸೇರುತ್ತಿರಲಿಲ್ಲ. ನನ್ನ ವೃತ್ತಿಯನ್ನು ಗೌರವ, ಆದರಗಳಿಂದ ನೋಡುವ, ಆಡುವ ಜನ ನನ್ನ ತಾಯಿಯ ಕೆಲಸಕ್ಕೆ ಕಿಮ್ಮತ್ತು ಕೊಡುವುದಿಲ್ಲ ಎಂಬ ಅಸಮಾಧಾನವಿತ್ತು. ಅವುಗಳ ಜತೆಗೆ ಸ್ತ್ರೀಯೆಂಬ ಕಾರಣಕ್ಕೆ ನನ್ನನ್ನು, ನನ್ನಂಥ ಎಲ್ಲರನ್ನು ಸಮಾಜದ ಸಾಮೂಹಿಕ ಸಂದರ್ಭಗಳು, ಆಚರಣೆಗಳು ಬೇರ್ಪಡಿಸುವ ಸಂಗತಿಯನ್ನು ಕಾಣುತ್ತಿದೆ. ಆಗೆಲ್ಲ ಇದನ್ನು ಹರಿದು ಬರುವ ಒಂದು ದಾರಿಯ ಹುಡುಕಾಟವೂ ನನ್ನೊಳಗೆ ನಡೆಯುತ್ತಿತ್ತು.

ನಾನು ಆಗ ತೆರೆದ ಕಣ್ಣುಗಳನ್ನು ಈಗ ಇನ್ನಷ್ಟು ಅಗಲಿಸಿ ನೋಡುತ್ತಿದ್ದೇನೆ. ನನ್ನ ಸುತ್ತಲಿನ ಜನರ ದೇಹಪ್ರಜ್ಞೆ, ಲಿಂಗಪ್ರಜ್ಞೆ, ಲಿಂಗ ಅಸಮಾನತೆಯ ಎಲ್ಲ ಭೇದಗಳನ್ನು ನಾನು ಓದತೊಡಗಿದೆ. ಅದರೊಳಗೆ ನನ್ನ ಕುರಿತ ಒಂದು ಓದೂ ತೀವ್ರವಾಗಿ ನಡೆಯುತ್ತಿತ್ತು. ಕೆಲಸದ ಕುರಿತ, ದುಡಿಮೆಯ ಕುರಿತ ಹಳೆಯ ಚರ್ಚೆಯನ್ನು ನೀವೂ ಇನ್ನೂ ನಡೆಸುತ್ತಿದ್ದೀರಿ ಹೌದು. ಸಂಬಳ ಪಡೆವ ಕೆಲಸ ಆತ್ರ ದುಡಿಮೆಯಾಗಿ, ಮನೆಯಲ್ಲಿ ದುಡಿಯುವ ಅಮ್ಮನ ಕೆಲಸ ದುಡಿಮೆಯಿಲ್ಲದ ವಿಶ್ರಾಂತಿಯಾಗುವ ಪ್ರಶ್ನೆಯೂ ಮೇಲಿನ ಸಂಗತಿಯಷ್ಟೇ ಹಳೆಯದು. ಅದರೊಂದಿಗೆ ಮೈಮುಟ್ಟಿದರೆ ಬಸ್ಸಿನಲ್ಲಿ ತೊಂದರೆಯಾಗುತ್ತದೆ ಎಂದು ಪ್ರತ್ಯೇಕತೆ ಕಾಯ್ದುಕೊಳ್ಳುವ ಸಂಗತಿಯೂ. (ಇಂದು ಪುರುಷರಿರುವ ಬಸ್ಸಿಗೂ ಸ್ತ್ರೀ ಕಂಡಕ್ಟರೂ ಇದ್ದಾರೆ ಎಂಬುದು ಬೆಳವಣಿಗೆಯಲ್ಲವೇ?) ಇವು ಯಾವುವು ಪರಿಹಾರಗಳಲ್ಲ. ಒಂದು ವಸ್ತುಸ್ಥಿತಿಯನ್ನು ಎದುರಿಸಲಾಗದೆ ಆ ಕ್ಷಣಕ್ಕೆ ಅದನ್ನು ದೂರ ಮಾಡುವ ಅಥವಾ Postpone ಮಾಡುವುದು ಹೆಣ್ಣಿಗೆ ಅನಿವಾರ್ಯವಾಗಿ ಒಪ್ಪಿಕೊಂಡದ್ದು. ಆದರೆ ನಾಳೆ ಒಂದು ಏಕಾಂತದಲ್ಲಿ ಸ್ತ್ರೀ ತಾನೊಬ್ಬಳೇ ಬದುಕುವ ಪ್ರಸಂಗ ಬಂದಾಗ ಇಂಥ ಘಟನೆಗಳಿಗೆ ಹೇಗೆ ಮುಖಾಮುಖಿಯಾಗಿ ನಿಭಾಯಿಸಬೇಕು ಎಂಬ ತಯಾರಿಯಿಲ್ಲ. ಮಾನಭಂಗವಾಯಿತೆಂದು ಕಿರುಚಿ ಏನೋ ಕಳಕೊಂಡ ಹಾಗೆ ಅಳುತ್ತಾ ಮನೆಗೆ ಮರಳುವುದು. ಅದನ್ನು ಮೀರಿದರೆ ಆತ್ಮಹತ್ಯೆ ಮಾಡಿಕೊಂಡು ಭಂಗವಾದ ಮಾನವನ್ನು ಕಾಪಾಡುವುದು ಸರಿಯಲ್ಲ. ಆದರೆ ಇನ್ನೂ ಕೂಡ ನಾವು ಸಮಸ್ಯೆಗಳಿಗೆ ಮುಖಾಮುಖಿಯಾಗುತ್ತಿಲ್ಲ.

ನಾನು ಸಮಾಜದ ಒಳಗಿದ್ದು ನನ್ನವರಲ್ಲದವರನ್ನು, ನನ್ನವರನ್ನು ಕಣ್ಣು ತೆರೆದು ನೋಡುವ ಪ್ರಯತ್ನ ಮಾಡುತ್ತಿದ್ದೇನೆ. ಆಗೆಲ್ಲ ನನಗೆ ಕಾಣಿಸಿದ್ದು ಇಷ್ಟು. ಇಲ್ಲಿ ಎರಡು ಸಂಗತಿಗಳಿಗಾಗಿ ನಿತ್ಯ ಹೋರಾಟ ನಡೆದಿದೆ. ಒಂದು ನಾನು ಎಂಬುದನ್ನು ಸಾಬೀತುಪಡಿಸುವ ಅಹಂಕಾರ ಸ್ಥಾಪನೆ. ಇನ್ನೊಂದು ಅದನ್ನು ಸಾಬೀತುಪಡಿಸಿಕೊಳ್ಳುವುದಕ್ಕೆ ಇರುವ ದೇಹದ ಜತೆಗೆ ಅಥವಾ ಲಿಂಗದ ಜತೆಗಿನ ಸಂಬಂಧ. ಇವುಗಳನ್ನು

೧. ಅಹಂಪ್ರಜ್ಞೆ

೨. ಲಿಂಗಪ್ರಜ್ಞೆ

ಎಂದು ಗುರುತಿಸಬಹುದು.

ಕೆಳವರ್ಗದ ಹೆಣ್ಣು ಮಕ್ಕಳಿಂದ ತೊಡಗಿ ಮೇಲ್ವರ್ಗದವರೆಗಿನ ಮೂರು ಆಯಾಮಗಳಲ್ಲಿ ಇವುಗಳಿಗೆ ಬೇರೆ ಬೇರೆ ಅರ್ಥವ್ಯಾಪ್ತಿಯಿದೆ.

ಒಬ್ಬ ಕೆಳವರ್ಗದ ಹೆಣ್ಣು ಮಗಳು ಎಂದಿಗೂ ಕೂಡ ಬಸ್ಸಿನಲ್ಲಿ ಪ್ರತ್ಯೇಕ ಸೀಟು ಬೇಕು ಎಂದು ನಮ್ಮ ಹಳ್ಳಿಯಲ್ಲಿ ವಾದಿಸುವುದಿಲ್ಲ. ಅವಳಿಗೆ ಮೈಯ ಹತ್ತಿರ ಬಂದು ನಿಲ್ಲುವ ಗಂಡಸು ಯಾವ ರೋಮಾಂಚನವನ್ನು ಉಂಟು ಮಾಡಲಾರ. ಅವಳ ಪಕ್ಕಕ್ಕೆ ಬಂದು ನಿಂತ ಅಂಥದ್ದೇ ವರ್ಗದ ಗಂಡಸಿಗೂ ಅವರು ದಿನ ಬೆಳಗಾದರೆ ಕೂಲಿ ಸಂದರ್ಭದಲ್ಲಿ ಮುಟ್ಟಿ ಸವರಿ ಮಾಡುವ ಕೆಲಸಗಳೇ ಅಂಥವು. ಅವರ Sensitivity ಗೆ ಇನ್ನು ಅಂಥ ಸೂಕ್ಷ್ಮ ಸಂವೇದನೆಯ ಭಾಗ ಬಂದಿಲ್ಲ. ಅವಳು ಎಲ್ಲರ ಮುಂದೆ ಬಟಾಬಯಲಲ್ಲಿ ಸೊಂಟದ ಕೆಳಗೊಂದು ಅರಿವೆಬಿಟ್ಟರೆ ಉಳಿದಂತೆ ಅರೆಬೆತ್ತಲಾಗಿ ಸ್ನಾನ ಮಾಡುತ್ತಾಳೆ. ಮೇಲೆ ಮುಚ್ಚಬೇಕಾದ ಅಮಗವೇ ಅಲ್ಲ ಅವಳಿಗೆ. ಮಗು ಉಣ್ಣುವ ಪದಾರ್ಥ ಎಂಬುದಷ್ಟೇ ಅವಳ ಪ್ರಜ್ಞೆ. ಇದು ಅವಳ ದೇಹ ಪ್ರಜ್ಞೆಯ ಕುರಿತ ಅಸೂಕ್ಷ್ಮ ಸಂವೇದನೆ. ಅವಳಿಗಿನ್ನು ಲಿಂಗಪ್ರಜ್ಞೆ ಅನತಿ ದೂರ. ಕಾಮ ಎಂದರೆ ಅದು ಸಂಭೋಗವೇ. ಮುಟ್ಟುವುದು, ಮುಟ್ಟಿಸಿಕೊಂಡಾಗ ಪ್ರೀತಿ ಹುಟ್ಟುವ ಭಾಗ ಇನ್ನೂ ಕೇಳಿದ ಸಂಗತಿ. ಅವಳು ಬದುಕುವ ರೀತಿಗೆ ಅಜ್ಞಾನ ಮುಗ್ಧ ಇಂಥ ಹೆಸರುಗಳನ್ನಿತ್ತರೂ ಅದು ಲಿಂಗಪ್ರಜ್ಞೆಯ ಜಾಗ್ರತವಲ್ಲದ ಸ್ಥಿತಿ.

ಮೇಲ್ವರ್ಗದವರಿದ್ದಾರೆ. ಅವರದು ಇನ್ನೊಂದು ಮುಖ. ಇಲ್ಲಿ ಅವರಿಗೆ ಅವಲಂಬನಕ್ಕಿಂತ ಸ್ವಾತಂತ್ರ್ಯ ಹೆಚ್ಚು. ತಮ್ಮದೇ ವಾಹನ, ತಮ್ಮದೇ ಗುಂಪು ಇದರ ಜತೆಗೆ ಹೆಚ್ಚು ಬದುಕುವವರು ಇವರು. ಇವರು ಕೆಳಗಿನ ಎರಡು ವರ್ಗದ ಸಮೀಕರಣಕ್ಕೆ ಬರಲಾರರು. ಅವರಿಗೆ ಲಿಂಗಪ್ರಜ್ಞೆ ಇದ್ದರೂ ಅದಕ್ಕೆ ಒಂದು ಸೀಮಿತ ಚೌಕಟ್ಟಿನೊಳಗೆ ಮುಕ್ತಿ. ಅದು ಸಾಮಾಜಿಕ ಸಂದರ್ಭಕ್ಕೆ ಮುಖಾಮುಖಿಯಾಗುವುದು ಕಡಿಮೆ.

ಎಲ್ಲ ಸಮಸ್ಯೆಗಳ ಮೂಲ ಮಧ್ಯಮವರ್ಗ. ಇವರಿಗೆ ದೇಹದ ಸುತ್ತ ಸಣ್ಣ ಸೆನ್ಸಿಟಿವಿಟಿ. ಮುಟ್ಟಿದರೆ ಮುನಿಯಿಂದ ಮತ್ತು ಮುಟ್ಟಿದ್ದು ಇಷ್ಟವಾದರೆ ಅರಳುವ ಎರಡು ಸಂಗತಿಗಳ ಮಟ್ಟಿಗೂ ಇವರು ಜಾಗ್ರತರು. ಆದ್ದರಿಂದಲೇ ಇವರದು ತೀರ ಜೆಸ್ವಿಸ್ ಸಮಸ್ಯೆ. ಆಯ್ಕೆ ಸ್ವಾತಂತ್ರ್ಯ ಮೇಲ್ವರ್ಗದವರಷ್ಟು ಸರಳವಿಲ್ಲ. ಮತ್ತೆ ಕೆಳವರ್ಗದವರಿಗಿಂತ ಉತ್ತಮರೆಂಬ ಭಾವದಿಂದಾಗಿ ಇವರದು ಅತಂತ್ರ ಸ್ವರ್ಗ. ಇವರದು ಲಿಂಗದ ಅರೆಪ್ರಜ್ಞಾವಸ್ಥೆ. ನಾನು ಎನ್ನುವುದನ್ನು establish ಮಾಡುವ ಅಹಂಪ್ರಜ್ಞೆಗೆ ಸಂಬಂಧಿಸಿಯೂ ಇದೇ ಮಾತು ಅನ್ವಯವಾಗುತ್ತದೆ.

ಕೆಳವರ್ಗದ ಮಹಿಳೆಗೆ ಇಂದು ದುಡಿದು ಅಂದಿನ ರೊಟ್ಟಿ ಸಂಪಾದನೆಯೇ ಅವಳ Target. ತನ್ನನ್ನು ಗುರುತಿಸಬೇಕು. ಗುರುತಿಸಿಕೊಳ್ಳಬೇಕು ಈ ಕಡೆಗೆ ಅವಳದು ತೀರ ಸಲ್ಲದ ನಡೆ. ಅವಳಿಗೆ ಅದು ಗೊತ್ತಿಲ್ಲ ಮತ್ತು ಬೇಕಿಲ್ಲ. ದುಡಿಮೆ ಅವಳ ಅಗತ್ಯ. ಮೇಲ್ವರ್ಗದವರಿಗೆ ಅವರ ಹಣ ತಂದುಕೊಟ್ಟ ಘನಸ್ತಿಕೆ ಸಾಕು. ಅವರಿಗೆ ತನ್ನನ್ನು ಗುರುತಿಸಿಕೊಳ್ಳುವುದಕ್ಕಿಂತಲೂ ಹಣದ ದೊಡ್ಡಸ್ತಿಕೆಯ ಬಲ. ಅದರಿಂದಲೇ ತೃಪ್ತರೆಂದೇ ಅವರು ಸಾಮಾಜಿಕ ಸಂದರ್ಭದ Identity Crisisನ ಕುರಿತು ಅಷ್ಟಾಗಿ ತಲೆಕೆಡಿಸಿ ಕೊಳ್ಳುವುದಿಲ್ಲ.

ಮಧ್ಯಮದ ವರ್ಗದ ಮಾತು ಪ್ರಚಲಿತ. ಅವರಿಗೆ ತನ್ನನ್ನು ಗುರುತಿಸಿಕೊಳ್ಳುವುದು ಮುಖ್ಯ. ಆ ದಾರಿಗೆ ಬರುವ ತೊಡಕುಗಳೆಲ್ಲ ಆಗ ನಿವಾರಣೆಯಾಗಬೇಕು. ಅದಕ್ಕಾಗಿ ಹೋರಾಟ. ಆಗ ಹೆಣ್ಣು ತನ್ನನ್ನು ಎಲ್ಲಿಯಾದರೂ Identity ಮಾಡುವ ದಾರಿಯಲ್ಲಿ ಮೊದಲು ಗೆಲ್ಲಬೇಕಾದದ್ದು ದೇಹ. ಅದರ ಅಸಮಾನತೆ. ಹೀಗಾಗಿ ಅಹಂಪ್ರಜ್ಞೆಯ ಕುರಿತು ಒಂದಷ್ಟು ಎಚ್ಚರ. ಅಲ್ಲಿಯ ನಡೆಗೆ ಬೇರೆ ಬೇರೆ ಹೋರಾಟ.

ಒಟ್ಟಿನಲ್ಲಿ ಅಜ್ಞಾನ, ಅರೆಜ್ಞಾನ ಮತ್ತು ಸುಜ್ಞಾನ
ಅಪ್ರಜ್ಞೆ, ಅರೆಪ್ರಜ್ಞೆ ಮತ್ತು ಪೂರ್ಣಪ್ರಜ್ಞೆ
ಮೊದಲಿನವರು ಹೋರಾಡುವುದಿಲ್ಲ
ಎರಡನೆಯವರು ಒದ್ದಾಡುತ್ತಾರೆ
ಮೂರನೆಯವರು ತಟಸ್ಥರಾಗಿರುತ್ತಾರೆ

ಒಟ್ಟು ಸಾಮಾಜಿಕ ಬೆಳವಣಿಗೆಗಳನ್ನು ಗಮನಿಸಿದರೆ ಒಂದು ವರ್ಗವು ಲಿಂಗ ಅಸಮಾನತೆಗಾಗಿ ಹೋರಾಡುತ್ತದೆ. ಮೀಸಲಾತಿ, ಪ್ರತ್ಯೇಕತೆ, ದುಡಿಮೆ, ಸಮಯ, ಮಹಿಳೆ ಎಲ್ಲ ಸಂಗಾತಿಗಳೂ ಲಿಂಗ ಅಸಮಾನತೆಯ productಗಳೇ. ಇದು ನಡೆದು ವರುಷ ಕಾಲವಾದರೂ ಸಮಾನತೆಯನ್ನು ನಾವು ಸಾಧಿಸಿಲ್ಲ.

ಕಾರಣ ಸೃಷ್ಟಿ ಲಿಂಗ ಅಸಮಾನತೆಯ ಮೂಲಬೀಜವಲ್ಲ. ಅದು ಲಿಂಗಭಯದ ಬೈಪ್ರಾಡಕ್ಟ್ ಅಷ್ಟೆ. ಎಲ್ಲಿಯವರೆಗೆ ಲಿಂಗಭೀತಿ ನಿರ್ಮೂಲವಾಗುವುದಿಲ್ಲವೋ ಅಲ್ಲಿಯವರೆಗೆ ಲಿಂಗ ಅಸಮಾನತೆ ಪರಿಹಾರವಾಗುವುದಿಲ್ಲ. ಸಮಾನತೆಯ ಕೆಲ ಉದಾಹರಣೆಗಳನ್ನು ಕೊಟ್ಟು ನಾವು. ಸಮಾಧಾನಿಸಿಕೊಂಡರು ಮೂಲದ ಕಳೆಯನ್ನು ನಾವಿನ್ನು ಚಿವುಟಿಲ್ಲ. ಅದಕ್ಕೆ ಲಿಂಗಭೀತಿಯನ್ನು ಕಳೆದುಕೊಳ್ಳುವ ಕಡೆ ಕಣ್ಣು ಹೊರಳಿಸಬೇಕು.

ಗಂಡು ಗಂಡಾದೊಡೆ ಹೆಣ್ಣಿನ ಸೂತಕ
ಹೆಣ್ಣು ಹೆಣ್ಣಾದೊಡೆ ಗಂಡಿನ ಸೂತಕ
ಮನದ ಸೂತಕ ಹಿಂಗಿದೊಡೆ
ತನುವಿನ ಸೂತಕಕ್ಕೆ ತರಹುಂಟೆ ಅಯ್ಯ
ಮೊದಲಿಲ್ಲದ ಸೂತಕಕ್ಕೆ ಮರುಳಾಯುತ್ತು ಜಗವೆಲ್ಲ.

ಎಂಬ ಅಕ್ಕಳ ಮಾತು ಇದನ್ನೇ ಧ್ವನಿಸುತ್ತಿದೆ.

ನಮ್ಮ ಎಲ್ಲ ಭೀತಿಯ ಮೂಲ ಈ ದೇಹ ಭಯ, ಅದು ಲಿಂಗಪ್ರಜ್ಞೆಯಿಂದಲೇ ಹುಟ್ಟಿದೆ. ಎಂದೊ ದೇಹದ ಕುರಿತು ಅಜ್ಞಾನವುಳ್ಳವರಿಗೆ ಲಿಂಗಪ್ರಜ್ಞೆಯ ಬಹಳವಿಲ್ಲದೆ ಅವರಿಗೆ ಅದು ಒಂದು ಸಮಸ್ಯೆಯಾಗದು. ಪೂರ್ಣ ತಿಳಿದು ದಾಟಿದ ಸಂತನು ನಿರಾಳವಾಗಿ ಬದುಕಬಲ್ಲ. ಎಡಬಿಡಂಗಿಗಳಿಗೆ ಬಿಡಲಾರದ ಕಗ್ಗಂಟು ಇದು.

ವಾಸ್ತವಿಕ ಲಿಂಗಪ್ರಜ್ಞೆಯ ಅರಿವುಳ್ಳ ಸಂತನ ಕಣ್ಣು ದೇಹದಿಂದ ಲಿಂಗಕ್ಕೆ, ಲಿಂಗದಿಂದ ಜೀವಕ್ಕೆ ನಡೆಯುತ್ತದೆ. ಅಲ್ಲಿ ಬದುಕು ತುಂಬ ಸುಖದಾಯಕ. ಕಾರಣ ಸ್ಪಷ್ಟ ಲಿಂಗಭಯ ದಾಟಿದವನಿಗೆ ಹಗಲು – ರಾತ್ರಿ ಭೇದವಿಲ್ಲ. ಗಂಡು – ಹೆಣ್ಣು ವ್ಯತ್ಯಾಸ ತಿಳಿಯುವುದಿಲ್ಲ. ಏಕಾಂಗಿ, ಸಾರ್ವಜನಿಕ ಬದುಕು ಎಂಬ ಎರಡು ಮುಖಗಳಿಲ್ಲ. ಇಲ್ಲಿ ಸ್ತ್ರೀಯ ಸ್ತ್ರೀತನ ಮುಳುವಾಗುವ ಭಯವಿಲ್ಲ. ಈ ನಿಟ್ಟಿನ ನಡೆ ಬೆಳವಣಿಗೆಯ ಸೋಪಾನ. ಆದರೆ ಅದು ಇನ್ನೂ ಸಾಧ್ಯವಾಗಿಲ್ಲ.

‘ಲಿಂಗಭೀತಿ’ ಕಳೆಯುವುದು ಹೇಗೆ’? “ಹೇಳಬಾರದಯ್ಯ” (Don’t tell and can’t tell ಎಂಬ ಅರ್ಥದಲ್ಲಿ) ಎಂಬುದೇ ಸರಿಯಾದ ಉತ್ತರ. ‘ಮಹಿಳೆಗೆ ತಾಯಿಯಾಗುವ ಗುಣವೈಶಿಷ್ಟ್ಯವಿದೆ. ತಾಯಿಯಾಗುವುದನ್ನೇ ಅವಳ ಲಿಮಿಟೇಶನ್ ಮಾಡಿತು ಸಮಾಜ. ಅದನ್ನು ಕರ್ತವ್ಯವೆಂದು ಘೋಷಿಸಿತು. ಮಹಿಳಾವಾದಿಗಳು ಹೋರಾಟಕ್ಕೆ ತೊಡಗಿದರು. ಅದು ಕರ್ತವ್ಯವಲ್ಲ ಅವಳ ಆಯ್ಕೆ ಎಂದಿತು. ಎಲ್ಲವೂ ಚಂದವೇ. ಮಹಿಳೆ ಕುಟುಂಬದ ಬಂಧನವಿಲ್ಲದೆ, ಮುಂದೆ ಚೌಕಟ್ಟಿನೊಳಗಲ್ಲದೆ ತಾಯಿಯಾಗುವುದನ್ನು ಕುರಿತು ಯೋಚಿಸಿದಳು. ಕೌಟುಂಬಿಕ ಬಂಧನದೊಳಗೆ ತಾಯಿಯಾಗುವುದು. ಬಂಧನವಿಲ್ಲದೆ ಪರಪುರಷ ಸಂಬಂಧದಿಂದ ತಾಯಿಯಾಗುವುದು ಎರಡು ಮಾರ್ಗಗಳು.

ಮೂರನೆಯದೊಂದಿ. ಮದುವೆಯೂ ಆಗದೆ, ಪುರುಷ ಸಂಪರ್ಕವೂ ಇಲ್ಲದೆ, ತಾಯಿಯಾಗುವುದು. ಅದಕ್ಕೆ ಲಿಂಗದೇಹವುಳ್ಳ ಗರ್ಭಪಾತ್ರೆ ಬೇಡ. ಹೃದಯ ಪಾತ್ರೆಯಲ್ಲಿ ಅದರ ಸೃಷ್ಟಿ, ಔರಸವೇ ಅದರ ಸಂತಾನ. ಈ ಮೂರನೆಯ ತಾಯಿಗೆ ಅನಂತ ಸಂಸಾರ. ಅವಳಿಗೆ ಲಿಂಗಪ್ರಜ್ಞೆ ಇಲ್ಲ. ಅವಳು ನಿತ್ಯ ಕನ್ಯಾಕುಮಾರಿ. ಮಗು ಯಾವ ಲಿಂಗ? ಗುರು, ಆತ್ಮ ಯಾವ ಲಿಂಗ? ಇದನ್ನು third gender ಅಂದರೆ ಸ್ತ್ರೀವಾದಿಗಳ ಶಿಖಂಡಿ ಸೃಷ್ಟಿಯಾಗಿ ಬಿಡುತ್ತದೆ. ಅದನ್ನಲ್ಲ ನಾನು ಹೇಳುವುದು. ಇದು ಪುಲ್ಲಿಂಗವಲ್ಲ. ಸ್ತ್ರೀ ಲಿಂಗವಲ್ಲ. ನಪುಂಸಕವೋ ನನಗೆ ಗೊತ್ತಿಲ್ಲ. ಈ ಮೂರನೆಯ (ಅಥವಾ ನಾಲ್ಕನೆಯ) ಲಿಂಗಪ್ರಜ್ಞೆ ಆಗಿಬಿಟ್ಟರೆ ಬೆಳವಣಿಗೆ ಒಂದೇ ನಡೆ. ಜತೆಗಿರುವವರನ್ನು ನಡೆಸುವುದೇ ಅದರ ಗುರಿ. ಹಸಿವುಳ್ಳವನನ್ನು ಎತ್ತಿಕೊಳ್ಳುವುದಷ್ಟೇ ಅವರ ಕಾಳಜಿ. ಎತ್ತಿದವನು ಗಂಡೋ ಹೆಣ್ಣೋ ನೋಡುವ ಕಣ್ಣು ಅಲ್ಲಿರುವುದಿಲ್ಲ. ಮಹಿಳಾವಾದ, ಪುರುಷವಾದ, ಅಥವಾ ಎಲ್ಲ ಪ್ರತ್ಯೇಕತೆಗಳ ದ್ವೀಪ ಕಟ್ಟಿಕಂಡ ಗುಡ್ಡಗಳು ಎತ್ತ ಹೊರಳಬೇಕು. ಈ ದಾರಿ ಬೆಳಕಿನದು.

ಇಷ್ಟು ದಾರಿ ನಡೆಯುವಾಗ ಕಾಣುವ ಸಂಗತಿ ಸ್ಪಷ್ಟ. ಪ್ರತಿ ಮನುಷ್ಯನೂ ಒಂದು ಸ್ವಾತಂತ್ರ್ಯದ ಹಸಿವಿನಲ್ಲಿ ನಡೆದಿದ್ದಾನೆ. ಸ್ವತಂತ್ರವಾಗವ ಅಪೇಕ್ಷೆಯೇ ಈ ಎಲ್ಲ ಹೋರಾಟಗಳ ಮೂಲ. ಸ್ವಾತಂತ್ರ್ಯಕ್ಕೆ ಹೆಚ್ಚು ಹೆಚ್ಚು ಅಡ್ಡಿಯಿರುವ ಕಡೆಗಳಲ್ಲೆಲ್ಲ ಹೆಚ್ಚು ಹೆಚ್ಚು ಹೋರಾಟ ನಡೆದಿದೆ.

ಸ್ತ್ರೀವಾದವೂ ಕಟ್ಟಕಡೆಗೆ ನೋಡಿದರೆ ಒಂದು ಬಂಧನದಿಂದ ಹರಿದುಕೊಂಡು ಬರಲು ಮಾಡುತ್ತಿರುವ ಪ್ರಯತ್ನವೇ. ಇದರೊಳಗೆ ಒಂದು ಕುತೂಹಲದ ಸಂಗತಿ ಹೇಳಬೇಕು. ನಾವೀಗ ಪುರುಷರಿಗೆ ಸ್ತ್ರೀಯರನ್ನು ಹೋಲಿಸಿ ಸ್ತ್ರೀ ಸ್ವತಂತ್ರಳಲ್ಲ, ಅವಳಿಗೆ ಪಾರತಂತ್ರ್ಯವಿದೆ, ಬಂಧವಿದೆ, ಅವಲಂಬಿತಳನ್ನಾಗಿ ಮಾಡಲಾಗಿದೆ ಎಂದು ವಾದಿಸುತ್ತಿದ್ದೇವೆ. ಈ ಕಂಪ್ಯಾರಿಸನ್‌ ಇಲ್ಲದ ಮುಕ್ತ ಸ್ಥಿತಿ. ಈ ಜಗದ ಕಡೆ ಕಣ್ಣು ಹೊರಳಿಸಿದರೆ ಇಲ್ಲಿ ಯಾರೂ ಸ್ವತಂತ್ರರಿಲ್ಲ. ಪುರುಷನೂ ಬಂಧಿತನೇ. ಸಂಪೂರ್ಣ ಸ್ವತಂತ್ರನೆಂಬ ಯಾವ ಪುರುಷನನ್ನು ಇದುವರೆಗೆ ನಾನು ನೋಡಿಲ್ಲ. ಅವನೂ ಒಂದಿಲ್ಲೊಂದು ಬಂಧನಕ್ಕೆ ಒಳಗಾದವನೇ. ಯಾವುದೋ ಭಯ ಅವನೊಳಗೂ ಇದೆ. ಅವನೂ ಯಾವುದೊ ಕುಟುಂಬಕ್ಕೆ ತನ್ನನ್ನು ಬಂಧಿಸಿಕೊಂಡವವನೇ. ಮಾನಸಿಕವಾಗಿ ಅವನೂ ಅವಲಂಬಿತನೆ. ನಿರ್ಭೀತ ಸ್ವಾತಂತ್ರ್ಯ ಇನ್ನು ಗಳಿಸಲಾಗದ ಸೊತ್ತು.

ನನಗೆ ಕಾಣಿಸುವುದಿಷ್ಟು.

ಇನ್ನೊಂದು ನಿರ್ಭೀತ ಸ್ವಾತಂತ್ರ್ಯದ ಹಸಿವಿದೆ. ಅದಕ್ಕೆ ದಿಕ್ಕು ದೆಶೆಗಳಲ್ಲದೆ ಹೋರಾಟ ನಡೆದಿದೆ. ಅಲ್ಲೊಮ್ಮೆ ಇಲ್ಲೊಮ್ಮೆ ಅತ್ತ ಸಣ್ಣಪುಟ್ಟ ಸುಖ ಸ್ವಾತಂತ್ರ್ಯಗಳನ್ನೇ enjoy ಮಾಡಿ ಮನುಷ್ಯ ಮತ್ತೆ ಅದೇ ವಿಶಿಯಸ್ ಸರ್ಕಲ್‌ನೊಳಗೆ ಗಿರಕಿ ಹೊಡೆಯುತ್ತಿದ್ದಾನೆ.

ಈಗಾಗಲೇ ಲಿಂಗಭಯವೇ ಲಿಂಗ ಅಸಮಾನತೆಯ ಮೂಲ ಕಾರಣ ಎಂದಂತೆ ನಮ್ಮ ಎಲ್ಲ ಸ್ವಾತಂತ್ರ್ಯ ಹೋರಾಟಗಳು ಜೀವ ಸ್ವಾತಂತ್ರ್ಯದ ಹಸಿವಿನಿಂದಲೇ ಹುಟ್ಟಿದೆ. ಜೀವ ಸ್ವಾತಂತ್ರ್ಯದ ಒಳ ಹಸಿವೇ ನಮ್ಮ ಬಂಧನಗಳನ್ನು ಬಿಡಿಸುವಂತೆ ಒತ್ತಾಯಿಸುತ್ತವೆ. ಈ ಜೀವ ಸ್ವಾತಂತ್ರ್ಯದ ಹಸಿವಿಗೆ ಪುರುಷ ಸ್ತ್ರೀ ಎಂಬ ಭೇದವಿಲ್ಲ. ಜೀವಕ್ಕೆ ಬೆಳವಣಿಗೆ ಗುಣ. ಬಿತ್ತದ ಬೀಜ, ಉಗುರು, ಕೂದಲು ಬೆಳೆಯುತ್ತವೆ. ಜೀವ ಬೆಳವಣಿಗೆಗೆ ಹಪಹಪಿಸುವುದು ಅಸಹಜವಲ್ಲ. ಜೀವ ಬೆಳವಣಿಗೆಯನ್ನು ಯಾರೂ ತಡೆಯಲಾರರು. ಇಂದಲ್ಲ ನಾಳೆ ಸ್ವಾತಂತ್ರ್ಯದ ಪರಮಾನುಭವದ ಕಡೆ ಜೀವ ತುಡಿದೇ ತುಡಿಯುತ್ತದೆ.

ಅದಕ್ಕೆಂದೇ ಅಲ್ಲಮ, ರಾಮಕೃಷ್ಣ ಪರಮಹಂಸರಂಥ ಒಂದೆರಡು ಜೀವಗಳು ಸ್ವಾತಂತ್ರ್ಯದ ಪರಮಾನುಭವ ಪಡೆದಿವೆ.

ಜೀವ ಸ್ವಾತಂತ್ರ್ಯ ಅನಿವಾರ್ಯ ಎಂಬ ಮಾತು ಬಂದಾಗ ಅಲ್ಲಿಯೂ ಮತ್ತೆ ಮಹಿಳೆ ಎಂಬ ವಿಭಾಗಕ್ಕೆ ತೊಡಕುಗಳನ್ನು ಹೇಗೆ ಸೃಷ್ಟಿಸಲಾಯಿತು ಎಂಬುದು ಮಾತ್ರ ತುಂಬ ಕುತೂಹಲದ ಸಂಗತಿ. ಜೀವ ಸ್ವಾತಂತ್ರ್ಯವನ್ನು ಸ್ತ್ರೀ ಅಪೇಕ್ಷಿಸಿದರೂ ಅವಳಿಗೆ ಮುಕ್ತಿಯಿಲ್ಲ ಎಂಬುದನ್ನು ವೇದದ ವಾಕ್ಯವೆಂಬಂತೆ ಶ್ರೀ ಕೃಷ್ಣನಿಂದ ಹೇಳಿಸಲಾಯಿತು. ಇದು ಕೃಷ್ಣನ ಮಾತು.

“ಸ್ತ್ರೀಯರಿಗೂ ಶೂದ್ರರಿಗೂ ಮೋಕ್ಷವಿಲ್ಲ” ಸ್ತ್ರೀಯರಿಂದಲೇ ಮುಕ್ತಿಕಂಡ ಕೃಷ್ಣ ಈ ಮಾತು ಆಡಿರಲಿಕ್ಕಿಲ್ಲ. ಆಡಿದ್ದರೂ ಅಕ್ಕ ಹೇಳುವ ‘ಮನದ ಸೂತಕ’ದ ಅರ್ಥವನ್ನು ಹಚ್ಚಿ ಓದಬೇಕು.

ಜೀವ ಸ್ವಾತಂತ್ರ್ಯದ ಸಾಧ್ಯತೆಗಳನ್ನು ಮಹಿಳೆಯಿಂದ ಕಸಿದುಕೊಳ್ಳಲಾಗಿದೆ. ಅವಳು ಪೂಜೆ ಮಾಡಬಾರದು. ನೋಡಬಹುದು ಅಷ್ಟೆ. ಅವಳು ತಪಸ್ವಿಯಾಗಲಾರಳು. ತಸಸ್ವಿಗಳ ಸೇವೆ ಮಾಡಬೇಕು. ಇನ್ನು ಕುತೂಹಲದ ಸಂಗತಿ ವಿಷ್ಣು ಅವಳನ್ನು ಪಾದಸೇವೆಗೆ ಇಟ್ಟ, ಬ್ರಹ್ಮ ಅವಳನ್ನು ಹುಟ್ಟಿಸಿ ಹೆಂಡತಿ ಎಂಬ ಪೀಠ ಕೊಟ್ಟ. ಈಶ್ವರ ಅವಳು ತನ್ನೊಳಗೇ ಇರುವುದನ್ನು ಕಂಡ. ಇದು ಸ್ತ್ರೀ ಬೆಳೆಯಬೇಕಾದ ಮೂರು ಹಂತವೂ ಹೌದು.

ಜೀವಸ್ವಾತಂತ್ರ್ಯಕಾಂಕ್ಷಿಗೆ ಇರಲೇಬೇಕಾದ ಎರಡು ಅರ್ಹತೆ ಅಥವಾ ಗುಣಗಳೆಂದರೆ ಸಮರ್ಪಣೆ ಮತ್ತು ಪ್ರೀತಿ. ಈ ಎರಡು ಗುಣಗಳು ಸ್ತ್ರೀ ಸಹಜವೇ. ಅದು ಅವನ ಫೆಮಿನಿನಿಟಿಗೆ ಸಂಬಂಧಿಸಿದ್ದು. ಹೆಚ್ಚು ಹೆಚ್ಚು ಅರ್ಪಿಸಿಕೊಂಡ ಜೀವಕ್ಕೆ ಸ್ವಾತಂತ್ರ‍್ಯಾನುಭವ ತನ್ನನ್ನು ವಿಸ್ತರಿಸಿಕೊಳ್ಳುವುದು ಕಾಣಿಸುತ್ತದೆ. ಕೊಟ್ಟು ಕೊಂಡವನಿಗೆ ಬೆಳೆಯುತ್ತಾ ಹೋಗುವ ಅನುಭವವಾಗುತ್ತದೆ. ಅದನ್ನೇ ನಾನು ಅಹಂ ಪ್ರಜ್ಞೆ ಎಂದದ್ದು. ತಾನು ಬೆಳೆಯಬೇಕು, ಹೆಸರಾಗಬೇಕು ಎಂಬ ಭಾವವಿಲ್ಲದೆ, ತಾನು ತನ್ನನ್ನು ಕೊಟ್ಟುಕೊಳ್ಳಬೇಕು, ಕಳೆದುಕೊಳ್ಳಬೇಕು ಎಂಬ ಸಮರ್ಪಣಾ ಭಾವ ಒಂದು ದೊಡ್ಡ ಬೆಳವಣಿಗೆಯನ್ನು ಅನುಭವಕ್ಕೆ ತರುತ್ತದೆ. ಆ ಬೆಳವಣಿಗೆಯ ಮುಖ ತುಂಬ ಅಂತರ್ಗವಾದದ್ದು. ಇದನು ತುಂಬ ದೊಡ್ಡವ ಎಂದು ಬೇರೆಯವರಿಗೆ ತಿಳಿಯುವುದು, ತಾನು ತುಂಬ ದೊಡ್ಡವ ಎಂದು ತನಗೆ ತಿಳಿಯುವುದು. ಇವೆರಡರಲ್ಲಿ ತುಂಬ ಅಂತರವಿದೆ. ಒಂದು ಸಮಾಜದಲ್ಲಿ ಹೆಸರುವಾಸಿಯಾಗುವ ಪ್ರತಿಷ್ಠೆಯ ದಾರಿ. ಇನ್ನೊಂದು ಉಳಿದವರ ಆಳ ಅಗಲ ಎತ್ತರ ಕಾಣುತ್ತಾ ತನ್ನ ಎತ್ತರವನ್ನು ಅರಿತುಕೊಳ್ಳುವ ಅರಿವು, ಮೊದಲನೆಯ ದಾರಿಯಲ್ಲಿ ವೀರಪ್ಪನ್ ಕೂಡ ಜಗತ್ಪಸಿದ್ಧನಾಗಲಿಕ್ಕೆ ಸಾಧ್ಯ. ಎರಡನೆಯ ದಾರಿಯಲ್ಲಿ ಅಲ್ಲಮನ ದೊಡ್ಡಿಸ್ತಿಕೆ.

ಈ ಎರಡನೆಯ ಸಮರ್ಪಣೆ ಮತ್ತು ಪ್ರೀತಿಯ ದಾರಿ ಸ್ತ್ರೀಗೆ ತುಂಬ ಸರಳ. ಅವಳ ಆ ಗುಣಗಳು ಅವಳನ್ನು ಬೆಳೆಸುತ್ತವೆಂದೇ, ಅವಳನ್ನು ಗಂಡನಿಗೆ ಸಮರ್ಪಿಸಿಕೊಳ್ಳುವಂತೆ, ಕುಟುಂಬವನ್ನು ಪ್ರೀತಿಸುವಂತೆ ಒತ್ತೆಯಿಡಲಾಯಿತು. ಆದರೆ ಪ್ರೀತಿ ಮತ್ತು ಸಮರ್ಪಣೆ ಎರಡೂ ಇಷ್ಟು ಸಣ್ಣ ವಸ್ತುಗಳಲ್ಲ. ಅವು ಒಬ್ಬನಿಗೆ ಸಮರ್ಪಿಸಿಕೊಳ್ಳುವುದರಲ್ಲಿ ತೃಪ್ತಿ ಕಾಣುವುದಿಲ್ಲ. ಕುಟುಂಬವನ್ನಷ್ಟೇ ಪ್ರೀತಿಸುವುದರಲ್ಲಿ ಮುಗಿದು ಹೋಗುವುದಿಲ್ಲ. ಎಂದೇ ಅವು ಹರಿಹಾಯ್ದಿವೆ, ಬೇಲಿದಾಟಿವೆ, ಕಾಲಪಕ್ವವಾದಾಗ ಹೊಸದು ಹುಟ್ಟುತ್ತದೆ.

ಕೊನೆಯಿಂದಾಗಿ ಒಂದು ಮಾತು ಹೇಳಬೇಕು.

ಈ ನಿಟ್ಟಿನಲ್ಲಿ ನೋಡಿದಾಗ ಮಹಿಳೆ ಇನ್ನು ಅಸಾಂಪ್ರದಾಯಿಕ ಸಾಹಸ ಮಾಡಿಲ್ಲ. ಇಂದಿರಾಗಾಂಧಿ, ಕಿರಣ್ ಬೇಡಿ (ನಾನು ಹೆಸರು ಸೂಚಿಸಲು ಹೋಗುವುದಿಲ್ಲ, ಇಂಥ ಹೆಸರು ಹಲವು ಹೇಳದೆ ಉಳಿಯುತ್ತವೆ. ಎಲ್ಲರ ಹೆಸರು ಹೇಳಿದರು ಅವರು ನಾನು ಹೇಳಬೇಕಾದದ್ದನ್ನು ಸೂಚಿಸಲಾರರು) ಇವರು ಒಂದೆರಡು ಗೆರೆದಾಟುವ ಪ್ರಯತ್ನ ಮಾಡಿದರು. ಅವು ಸಾಂಪ್ರದಾಯಿಕ ಚೌಕಟ್ಟನ್ನು ಒಪ್ಪಿಕೊಂಡೇ ಕೊಂಚ ಧೈರ್ಯ ಮಾಡಿ ಪುಟ್ಟ ಬೇಲಿದಾಟಿದ ಪ್ರಯತ್ನ ಅಷ್ಟೆ. ಅವು ಸಾಹಸವೆಂದೂ ನಾನು ಹೇಳಲಾರೆ. ಪುರುಷ ಪ್ರಧಾನಿಯಾಗುವುದು ಸಹಜವೇ. ಹೌದಾದರೆ ಇದು ಸಾಹಸ ಯಾಕಾಗಬೇಕು ನನಗೆ ತಿಳಿಯುವುದಿಲ್ಲ. ಸಾಂಪ್ರದಾಯಿಕ ಚೌಕಟ್ಟನ್ನು ಹೀಗೆ ಒಪ್ಪಿಕೊಂಡು, ಅಲ್ಲಿ ಇಲ್ಲಿ ಇಂಥ ಸಣ್ಣಪುಟ್ಟ ‘ಸಾಹಸ’ ಎಂಬ ಸಂಗತಿಗಳು ನಡೆದಿವೆ. ಹಳ್ಳಿಯಲ್ಲಿ ಎಲ್ಲ ಗಂಡಸರೂ ಸೇರಿ ನಾಗರ ಹಾವು ಬಡಿಯುವಾಗ, ನಾನೊಂದು ಬಡಿಗೆ ಹಿಡಿದು ನಾನು ಹಾವು ಬಡಿದ ಪ್ರಸಂಗ ಬಂದರೆ ಅದನ್ನು ಆ ಸಮಾಜ ಸಾಹಸ ಎನ್ನುತ್ತದೆ. ನಾನು ಇವೆರಡೂ ಅಲ್ಲದ ನಿಟ್ಟಿನಲ್ಲಿ ಬೆಳವಣಿಗೆಯನ್ನು ಸೂಚಿಸಿದ್ದೇನೆ.

ಆ ದೃಷ್ಟಿಯಲ್ಲಿ ಅಸಾಂಪ್ರದಾಯಿಕ ಸಾಹಸದ ಒಂದೇ ಒಂದು ಪ್ರಯತ್ನ ಅಕ್ಕಮಹಾದೇವಿ ಮಾತ್ರ. ಅವಳೂ ಮದುವೆಯ ಚೌಕಟ್ಟನ್ನು ಮೀರಲಾಗದ (ಮದುವೆಯಾದದ್ದು ಹೌದಾದರೆ) ಸಾಂಪ್ರದಾಯಿಕ ಸಂಗತಿಯಲ್ಲೆ ಇದ್ದರೂ ಕಡೆಗೆ ಅದನ್ನು ಮೀರಿ ಜೀವ ಸ್ವಾತಂತ್ರ್ಯದ ಕಡೆಗೆ ನಡೆದಳೆಂಬುದೇ ಅವಳದು ಅಸಾಂಪ್ರದಾಯಿಕ ಸಾಹಸ. ಅವಳನ್ನು ಬಿಟ್ಟರೆ ಇಲ್ಲಿಯವರೆಗೆ ಅಸಾಂಪ್ರದಾಯಿಕ ಸಾಹಸ ಇನ್ನು ನಡೆದಿಲ್ಲ ಎನ್ನುವ ನನ್ನ ಮಾತು ತೀರ ಉದ್ಧಟತನದ್ದೆನಿಸಿದರೆ ಕ್ಷಮೆಯಿರಲಿ. ನಮಸ್ಕಾರ.

* * *