ಉಡುಪಿಯಿಂದ ಮಣಿಪಾಲಕ್ಕೆ ನಾನು ಖಾಸಗಿ ಬಸ್ಸೊಂದರಲ್ಲಿ ಪ್ರಮಾಣಿಸುತ್ತಿದ್ದೆ ಬಸ್ಸು ತುಂಬಿತ್ತು. ಒಂದು ಸೀಟಿನಲ್ಲಿ ಬಿಜಾಪುರದ ಕೂಲಿ ಮಹಿಳೆ ಕೂತಿದ್ದಳು. ಆಕೆಯ ಪಕ್ಕದಲ್ಲಿ ಒಂದು ಸೀಟು ಖಾಲಿ ಇತ್ತು. ಆಕೆಯ ಬಳಿಯಲ್ಲೇ ಒಬ್ಬ ‘ಜಂಟಲ್ ಮ್ಯಾನ್’ ಆ ಖಾಲಿ ಸೀಟನ್ನೂ ಕಂಡೂ ನಿಂತೇ ಇದ್ದ. ಉಳಿದೆಲ್ಲಾ ಸೀಟುಗಳು ಭರ್ತಿಯಾಗಿದ್ದನ್ನು ಕಂಡ ಕಂಡಕ್ಟರ್, ಆತನನ್ನು ಆ ಮಹಿಳೆಯ ಪಕ್ಕದ ಸೀಟಲ್ಲಿ ಕೂತುಕೊಳ್ಳಲು ಹೇಳಿದ. ಆದರೆ ಆ ವ್ಯಕ್ತಿ ಕೂತುಕೊಳ್ಳಲಿಲ್ಲ, ಕೆಲವು ನಿಮಿಷಗಳ ನಂತರ, ಮುಂದಿನ ಸೀಟಿನಲ್ಲಿ ಕೂತಿದ್ದ ಪ್ರಯಾಣಿಕನ ಪಕ್ಕದ ಸೀಟು ಖಾಲಿಯಾಯಿತು. ಆತ ಗಬಕ್ಕನೆ ಆ ಸೀಟನ್ನು ಹಿಡಿದು ಕೂತ, ದಕ್ಷಿಣ ಕನ್ನಡಿಗನ (ಉಡುಪಿ ಜಿಲ್ಲೆಯೂ ಸೇರಿ) ಮನೋಭಾವಕ್ಕೆ ಇದೊಂದು ಸಾಂಕೇತಿಕ ನಿದರ್ಶನ.

ಬಿಜಾಪುರದ ಕುಲಿ ಮಹಿಳೆ ಹರಕು – ಕೊಳಕುಬಟ್ಟೆ ತೊಟ್ಟು ಹೇಸಿಕೆ ಕಾಣುತ್ತಾಳೆ. ವಾಸನೆ ಬರುತ್ತಾಳೆ. ಈ ‘ಜಂಟಲ್ ಮ್ಯಾನ್’ ಆಕೆಯ ಬಳಿ ಹೇಗೆ ಕೂತಾನು. ಈ ಕೂಲಿ ಮಹಿಳೆಯಂತಿರುವ ಬಡಜನರಿಂದಲೇ ೭೫ ಶೇಕಡಾ ತುಂಬಿರುವ ಭಾರತದ ಈ ಮುಕ್ಕಾಲು ಭಾಗದ ಜನರ ಪರಿಚಯವೇ ಈತನಿಗಿಲ್ಲ. ಈ ಜನ ಆತನ ಭಾರತದಲ್ಲಿ ‘ಅವರು’ ಆಗಿಬಿಡುತ್ತಾರೆ. ತನ್ನ ಭಾರತದಲ್ಲಿ ಇಂಥ ಮಂದಿಗೆ ಬದುಕುವ ಹಕ್ಕು ಕೂಡ ಇಲ್ಲ ಎಂಬ ಪ್ರತಿಷ್ಠಿತರನ್ನು ಬೇರೆ ಜಿಲ್ಲೆಗಳಿಗಿಂತ ಹೆಚ್ಚು ಈ ಜಿಲ್ಲೆಯಲ್ಲಿ ಕಾಣಬಹುದು. “ಗಟ್ಟದ ಮೇಲಿನ ಜನರು” ಎಂದು ತಾತ್ಸಾರದಿಂದ ಕಾಣುವ ದಕ್ಷಿಣ ಕನ್ನಡಿಗ “ನಿನಗಿಂತ ನಾನು ಪವಿತ್ರ” (Holier then thou) ಎಂಬ ದುರಹಂಕಾರ ಪೀಡಿತನಾಗಿದ್ದಾನೆ. ಪ್ರದರ್ಶನಶೀಲತೆ, ಒಣಜಂಬ, ಆಡಂಬರಗಳು ದಕ್ಷಿಣ ಕನ್ನಡಿಗನನ್ನು ಎಲ್ಲಿದ್ದರೂ ಪ್ರತ್ಯೇಕವಾಗಿ ಪರಿಚಯಿಸಿಬಿಡುವುದು. ಇಂದಿನ ದಕ್ಷಿಣ ಕನ್ನಡದ ಪ್ರಮುಖ ವೈಶಿಷ್ಟ ಎನ್ನಬಹುದು.

ಆಹಾರ ಸಾಮಗ್ರಿ ಆಕ್ರಮ ದಾಸ್ತಾನು ಮಾಡಿದ ಅಂಗಡಿಗೆ ಸರ್ಕಾರೀ ಅಧಿಕಾರಿಗಳು ಧಾಳಿಮಾಡಿ, ಆ ವ್ಯಾಪಾರಿಯನ್ನು ಬಂಧಿಸುತ್ತಾರೆ. ಮರುದಿನ ಆ ವ್ಯಾಪಾರಿಯ ಪರವಾಗಿ ದಕ್ಷಿಣ ಕನ್ನಡದ ಆ ಪೇಟೆ ಹರತಾಳ ಆಚರಿಸುತ್ತದೆ. ಚಿನ್ನದ ಗಟ್ಟಿಗಳ ಕಾಳಸಂತೆ ಕೋರನನ್ನು ಮಾಲುಸಹಿತ ಹಿಡಿದಾಗಲೂ ಪೇಟೆ ಆತನ ಪರವಾಗಿ ಪ್ರತಿಭಟನೆ ಸಲ್ಲಿಸುತ್ತದೆ. ಆದರೆ ವಿಪರ್ಯಾಸವೆಂದರೆ, ಬಡಜನರ ಹಿತಕ್ಕಾಗಿ ಸಾಮಾಜಿಕ ನ್ಯಾಯಕ್ಕಾಗಿ, ಮಹಿಳೆ – ದುರ್ಬಲರ ಶೋಷಣೆಯ ವಿರುದ್ಧ ಹೋರಾಟ ನಡೆಸಿದ ದಾಖಲೆಯೇ ಪ್ರಾಯಃ ಈ ಜಿಲ್ಲೆಯಲ್ಲಿ ಎಲ್ಲ, ೧೮೭೦ನೇ ಇಸವಿಯಿಂದೀಚೆ ಮಂಗಳೂರಿನ ಕುದಮಲ್ ರಂಗರಾಯರ ಹರಿಜನೋದ್ಧಾರ ಚಳವಳಿಯನ್ನು ಮತ್ತು ಅಲ್ಲೊಬ್ಬ ಇನ್ನೊಬ್ಬ ಶಿವರಾಮ ಕಾರಂತರಂಥ ವ್ಯಕ್ತಿಗಳು ಸಾಮಾಜಿಕ ನ್ಯಾಯಕ್ಕಾಗಿ ವ್ಯಕ್ತಿಗತವಾಗಿ ಪ್ರತಿಭಟಿಸಿದ್ದನ್ನು ಬಿಟ್ಟರೆ, ದಕ್ಷಿಣ ಕನ್ನಡದ ಒಟ್ಟೂ ಸಮುದಾಯ ಸಾಮಾಜಿಕ ಹೋರಾಟ ನಡೆಸಿದ್ದೇನಾದರೂ ಇದೆಯೇ ಎಂಬುದನ್ನು ನಾವು ಮತ್ತೆ ವಿಮರ್ಶಿಸಬೇಕಾಗಿದೆ.

೨೦ನೆಯ ಶತಮಾನದ ಮಧ್ಯಭಾಗದಿಂದ ವ್ಯಾಪಾರ – ವಾಣೀಜ್ಯ ಆಸಕ್ತಿಗಳು ಹೆಚ್ಚಾದಂತೆ, ದಕ್ಷಿಣ ಕನ್ನಡಕ್ಕೆ ದಿಢೀರ್ ಮೇಲೇರುವ ಹವಣಿಕೆ ಆರಂಭವಾಯಿತು. ಅಂದು ಬಡಿದ ವಿವೇಚನಾಶೂನ್ಯ ‘ಡೆವಲಪ್ ಮೆಂಟ್’ ಜ್ವರ ಜನರ ಬದುಕಿನ ವೇಗವನ್ನು ತೀವ್ರವಾಗಿ ಹೆಚ್ಚಿಸಿ, ಇಂದು ಇಡೀ ಜಿಲ್ಲೆಯ ಸಾಮಾಜಿಕ – ಸಾಂಸ್ಕೃತಿಕ ವೈಶಿಷ್ಟ್ಯವನ್ನೇ ಕುರೂಪಗೊಳಿಸುವಷ್ಟು ಮುಂದುವರಿದುಬಿಟ್ಟಿದೆ. ನಾವು ಮೈಮೇಲೆ ಎಳೆದುಕೊಳ್ಳುತ್ತಿರುವ ಆಧುನೀಕರಣ, ಕೈಗಾರಿಕೀಕರಣದ ರಭಸ ಮತ್ತು ಇದರಿಂದ ಸಂಭವಿಸುತ್ತಿರುವ ನಗರೀಕರಣದ ಭೂತ, ಸಮಗ್ರ ಜಿಲ್ಲೆಯನ್ನೇ ಆತ್ಮವಿಹೀನವನ್ನಾಗಿ ಮಾಡುತ್ತಿದೆ. ಗೊತ್ತುಗುರಿಯಿಲ್ಲದ ಮೇಲ್ಮುಖದ ಚಲನೆಯ ಪೈಪೋಟಿಯ ಸನ್ನಿಗೆ ಒಳಗಾದ ನಮ್ಮ ಜನರು ಮುಂಬಯಿ ಅಥವಾ ಸಾಧ್ಯವಾದರೆ ನ್ಯೂಯಾರ್ಕಿನ ಜೀವನಶೈಲಿಯನ್ನೇ ಇಲ್ಲಿ ಸಾಕ್ಷಾತ್ಕರಿಸಿಕೊಳ್ಳುವ ತರಾತುರಿಯಲ್ಲಿದ್ದಾರೆ. ಈ ದುರಾಸೆಯಿಂದಾಗಿ ‘ಸೋಷಿಯಲ್ ಟೆನ್‌ಶನ್’ ಸಾಮಾಜಿಕ ಅಸಮಾನತೆ, ಭೂಗತ ಚಟುವಟಿಕೆ, ಸಾಮಾಜಿಕ ಜೀವನದ ಪಾತಕೀಕರಣ ದಿನೇ ದಿನೇ ಹೆಚ್ಚುತ್ತಿದೆ….. ವೈಶಿಷ್ಟ್ಯ ಪೂರ್ಣ ಜೀವನಕ್ರಮ, ಸಾಮಾಜಿಕ ಪ್ರಕ್ರಿಯೆಗಳು, ಸಾಂಸ್ಕೃತಿಕ ನಡವಳಿಕೆಗಳು ತೀವ್ರ ವ್ಯಾಪಾರೀಕರಣಕ್ಕೆ ತುತ್ತಾಗುತ್ತಿವೆ. ಪರಂಪರಾಗತ ಜ್ಞಾನಸಂಪನ್ಮೂಲವೇ ತಮ್ಮ ಬದುಕಿನ ಆರ್ಥಿಕ ಶಕ್ತಿಯಾಗಿದ್ದ ಲಕ್ಷಾಂತರ ಮಂದಿಯ ಬದುಕು ದುರ್ಬಲವಾಗುತ್ತಿದೆ. ಕೇವಲ ದಕ್ಷತೆ – ಲಾಭಗಳ ಉಪಾಸನೆಯ ಮೇಲೆಯೇ ನಿಂತಿರುವ ಖಾಸಗೀಕರಣವನ್ನು ಹಾಡಿಹೊಗಳುವವರ ಮುಂದೆ, ಕೃಷಿಕನ ರಕ್ಷಣೆ, ಹಳ್ಳಿಯ ರಕ್ಷಣೆ, ದುರ್ಬಲರ ರಕ್ಷಣೆ, ಸಾಮಾಜಿಕ ನ್ಯಾಯ ಸಾರ್ವಜನಿಕ ಸೇವೆಯಲ್ಲಿ ಸಮಾನತೆ, ಬಹುಜನರ ಹಿತಕಾರೀ ಅಭಿವೃದ್ಧಿ, ಎಂದೆಲ್ಲಾ ಮಾತಾಡುವವರು ಹಾಸ್ಯಾಸ್ಪದರಾಗಿ ಕಾಣುತ್ತಿದ್ದಾರೆ, “ಬಲವಿದ್ಧವನ ಉಳಿವು” ಸಿದ್ಧಾಂತದ ಮೇಲೆ ನಿಂತಿರುವ ಬಂಡವಾಳಶಾಹಿ ‘ಕಾಡಿನ ನ್ಯಾಯ’ ಮೇಲ್ಗೈ ಪಡೆಯುತ್ತಿದೆ. ಪ್ರಬಲ ವ್ಯಾಪಾರಿಗಳ ಲಾಬಿ, ಖಾಸಗೀಕರಣ ಪರ ಲಾಬಿ, ಉದ್ಯಮಪತಿಗಳ ಲಾಬಿ ಮತ್ತು ‘ಬಿಲ್ಡರ್ಸ್’ ಲಾಬಿ ಈ ಜಿಲ್ಲೆಯನ್ನು ಎಂಥ ಬಲಿಷ್ಠ ಕಪಿಮುಷ್ಠಿಯಲ್ಲಿಟ್ಟುಕೊಂಡಿವೆಯೆಂದರೆ, ಈ ಶಕ್ತಿಗಳ ವಿರುದ್ಧ ಸರ್ಕಾರವೇ ತನ್ನ ಕಾನೂನನ್ನು ರಕ್ಷಿಸಿಕೊಳ್ಳಲಾರದಷ್ಟು ದುರ್ಬಲವಾಗುತ್ತ ಹೋಗುತ್ತಿದೆ. ಇದೇ ರೀತಿ ಮುಂದುವರಿದರೆ ಪ್ರಾಯಃ ಇನ್ನು ಹತ್ತು ವರ್ಷಗಳಲ್ಲಿ ಈ ಜಿಲ್ಲೆಯ ಸ್ವರೂಪವೇ ಬದಲಾಗಿ ದಕ್ಷಿಣ ಕನ್ನಡವು ಬದುಕಲು ಅಸಾಧ್ಯವಾದ ತಿಪ್ಪೇಗುಂಡಿಯಾದೀತು ಮಾತ್ರವಲ್ಲ, ರಭಸದ ಈ ಅಭಿವೃದ್ಧಿ ಪಥ ಒಟ್ಟು ಜೀವನಸಂಕುಲದ ಮೇಲೆ ತಂದೊಡ್ಡಬಹುದಾದ ಕ್ರೌರ್ಯದ ಅಧ್ಯಯನಕ್ಕೆ ಪ್ರಾಯಃ ಭಾರತದಲ್ಲೇ ಈ ಜಿಲ್ಲೆ ಅತ್ಯಂತ ಉತ್ತಮ ನಿದರ್ಶನವಾದೀತು.

ದಕ್ಷಿಣ ಕನ್ನಡವನ್ನು ಕರ್ನಾಟಕದ ಇತರ ಜಿಲ್ಲೆಗಳು ‘ಬುದ್ಧಿವಂತ ಜಿಲ್ಲೆ’ ಎಂದು ಕರೆದಾಗ ನನಗೆ ನಿಜಕ್ಕೂ ತಮಾಷೆಯೆನಿಸುತ್ತದೆ. ಹೊರಗಿನ ಆಕರ್ಷಣೆಗಳನ್ನು ಆಮದು ಮಾಡಿಕೊಳ್ಳುವಲ್ಲಿ ತಮ್ಮ ಸ್ವಂತಿಕೆ, ವಿವೇಚನೆಗಳನ್ನು ಸಂಪೂರ್ಣ ಒತ್ತೆಯಿಡಲು ತಯಾರಿಸುವ ಇಂಥ ಸಮುದಾಯವನ್ನು ನಾನು ಬೇರೆಲ್ಲೂ ಕಂಡಿಲ್ಲ. ದಕ್ಷಿಣ ಕನ್ನಡ ಕರ್ನಾಟಕದಲ್ಲೇ ಅತ್ಯಂತ ಅಕ್ಷರಸ್ಥರಿರುವ ಜಿಲ್ಲೆ, ಆದರೆ ಈ ‘ಫಾರ್ಮುಲ್’ ಶಿಕ್ಷಣ ಸ್ಥಳೀಯ ಸಂಸ್ಕೃತಿಯ ಒಡಲಲ್ಲಿ ಅಂತರ್ಘತವಾಗಿರುವ ಪ್ರಾದೇಶಿಕ ತಿಳುವಳಿಕೆಯನ್ನು ಒಟ್ಟೂ ಜನಸಮುದಾಯದ ಅನುಭವ ಜನ್ಯ ಜ್ಞಾನ ಸಂಪನ್ಮೂಲವನ್ನು ಸಂಪೂರ್ಣ ಕಳಕೊಳ್ಳುವ ಹಂತಕ್ಕೆ ಕೊಂಡೊಯ್ದು, ನಮ್ಮನ್ನು ಕೇವಲ ಬ್ಯಾಂಕು ಕ್ಲಾರ್ಕುಗಳಾಗಲಿಕ್ಕೆ ಲಾಯಕ್ಕು ಎಂಬ ಆಘಾತಕರ ‘ಮಿಡಿಯೋಕರ್’ ಸಮಾಜವನ್ನಾಗಿ ರೂಪಾಂತರಿಸುತ್ತಿರುವುದೂ ಸುಳ್ಳಲ್ಲ. (ಈ ಮಾತು ಆಧುನಿಕ ಶಿಕ್ಷಣದ ವಿರೋಧವಲ್ಲ, ಅದರ ಇನ್ನೊಂದು ಮಗ್ಗುಲಿನ ಪರಿಚಯ ಅಷ್ಟೆ) “ಆಧುನಿಕ ಶಿಕ್ಷಣವು ಮನುಷ್ಯನನ್ನು ಅಜ್ಞಾನಿಯನ್ನಾಗಿ ಮಾಡುತ್ತದೆ” (Modern education makes man illiteratel) ನಿಂದ ಈ ಕಾಲದ ಪ್ರಸಿದ್ಧ ತತ್ವಜ್ಞಾನಿ ಆನಂದಕುಮಾರ ಸ್ವಾಮಿಯ ಮಾತಿಗೆ ದಕ್ಷಿಣ ಕನ್ನಡದ ಶಿಕ್ಷಿತ ಸಮುದಾಯ ಒಂದು ಜೀವಂತ ನಿದರ್ಶನವೆನ್ನಬಹುದು. ಜ್ಞಾನ ತಿಳುವಳಿಕೆಗಳ ಬಗ್ಗೆ ಇಲ್ಲಿನ ಜನ ಕುತೂಹಲವನ್ನೇ ಕಳಕೊಳ್ಳುತ್ತಿರುವುದನ್ನು ನಾವು ಸಾಹಿತ್ಯಾಲೋಕವನ್ನು ಒಮ್ಮೆ ಅವಲೋಕಿಸಿದರೆ ತಿಳಿಯುತ್ತದೆ. ಸಾಹಿತ್ಯ ಕ್ಷೇತ್ರದಲ್ಲಿ ಇಂದು ಆವರಿಸಿದ “ಮೀಡಿಯೋಕ್ರಿಟಿ”ಯಿಂದಾಗಿ ಸಾಹಿತ್ತ್ಯಿಕವಾಗಿ ಈ ಜಿಲ್ಲೆಗೆ ಮಬ್ಬು ಕವಿದಿದೆ. ಅಭಿವೃದ್ಧಿ ಹೊಂದಿದ ಶ್ರೀಮಂತ ರಾಷ್ಟ್ರಗಳ ಮುಂಚೂಣಿಯಲ್ಲಿರುವ ಅಮೇರಿಕಾ – ಇಂಗ್ಲೆಂಡ್ ಗಳಂತಹ ರಾಷ್ಟ್ರಗಳಿಂದ ಇಂದು ಹೇಳಿಕೊಳ್ಳುವಂತಹ ಪ್ರಮುಖ ಸಾಹಿತ್ಯ ಕೃತಿ ಬರುತ್ತಿಲ್ಲ. ಬದಲಿಗೆ, ಲ್ಯಾಟಿನ್ ಅಮೆರಿಕಾ, ಆಪ್ರಿಕಾ ಅಥವಾ ಇತರೆ ತೃತೀಯ ಜಗತ್ತಿನ ರಾಷ್ಟ್ರಗಳಿಂದ ಇಂಗ್ಲಿಷೇತರ ಭಾಷೆಗಳಲ್ಲಿ ಇಂದು ಉತ್ತಮ ಕೃತಿಗಳು ಬರುತ್ತಿವೆ. ದಕ್ಷಿಣ ಕನ್ನಡದಲ್ಲೂ ಕಾರಂತ ಅಡಿಗರಂಥ ಸೃಜನಶೀಲ ಸಾಹಿತಿಗಳ ಮಟ್ಟಕ್ಕೆ, ಪಂಚೆ, ಸೇಡಿಯಾಪು, ಗೋವಿಂದ ಪೈಯವರಂಥ ಸಾಹಿತ್ವಿಕ ವಿದ್ವಾಮಸರ ಹತ್ತಿರ ಹತ್ತಿರಕ್ಕೆ ಸುಳಿಯುವ ಸಾಹಿತಿಗಳನ್ನೇ ಇಂದು ನಾವು ಕಾಣುತ್ತಿಲ್ಲ. ಮನುಷ್ಯ – ಮನುಷ್ಯ, ಮನುಷ್ಯ – ಪ್ರಾಣಿ – ನಿಸರ್ಗ ಸಂಬಂಧಗಳ ಪಾವಿತ್ರ್ಯತೆಯನ್ನೆ ಕಡೆಗಣಿಸಿ ಹೃದಯ ಭಾಷೆಯನ್ನೇ ಕಳಕೊಂಡು ಕೇವಲ ಲೆಕ್ಕಾಚಾರದ ಮಿದುಳಿನ ಪ್ರಾಣಿಗಳಾಗುತ್ತಿರುವ (cerebral) ದಕ್ಷಿಣ ಕನ್ನಡದ ಜನರನ್ನು “ಮಹಾ ಬುದ್ಧಿವಂತ ಜನ” ಎಂದಾಗ ಅದನ್ನು ಯಾವ ರೀತಿಯಲ್ಲಿ ಅರ್ಥೈಸಿಕೊಳ್ಳಬೇಕೆಂದೇ ತಿಳಿಯದಾಗಿದೆ. ದಕ್ಷಿಣ ಕನ್ನಡದ ಈ ಸ್ಥಿತೆಗೆ ಕಾರಣವೇನು?

* * *

ಈ ಶತಮಾನದ ಆದಿಭಾಗದಲ್ಲಿ ಮದ್ರಾಸು ಪ್ರೆಸಿಡೆನ್ಸಿಗೆ ಸೇರಿದ್ಧ ದಕ್ಷಿಣ ಕನ್ನಡ ಅಂದಿನ ಮುಖ್ಯ ಮಟ್ಟಣದಿಂದ ಬಹಳ ದೂರವಿದ್ದು ಸಾಕಷ್ಟು ಅವಗಣನೆಗೆ ಒಳಗಾಗಿ, ಹೇಳಿಕೊಳ್ಳುವ ಯಾವುದೇ ಅಭಿವೃದ್ಧಿ ಕಾಣದ ಹಿಂದುಳಿದ ಜಿಲ್ಲೆಯಾಗಿತ್ತು. ಏರುಪೇರಿನ ಭೂಪ್ರದೇಶ, ಅಷ್ಟೇನು ಫಲವತ್ತಲ್ಲದ ಭೂಮಿಯ ಗುಣದಿಂದಾಗಿ ಕೃಷಿಯಲ್ಲೂ ಜಿಲ್ಲೆ ಸ್ವಾಲಂಬಿಯಾಗಿರಲಿಲ್ಲ. ಅಂದಿನ ಸರ್ಕಾರದಿಂದ ಕಡೆಗಣಿಸಲ್ಪಟ್ಟಿದ್ದ ಈ ಜಿಲ್ಲೆ ತನಗೆ ಬೇಕಾದ ಸೌರ್ಕೈಗಳನ್ನು, ಅಭಿವೃದ್ಧಿ ಕಾರ್ಯಗಳನ್ನು ಖಾಸಗಿಯಾಗಿಯೇ ನಿರ್ವಹಿಸಿ ಕೊಳ್ಳುವುದು ಅನಿವಾರ್ಯವಾಯಿತು. ಶಿಕ್ಷಣ, ವೈದ್ಯಕೀಯ, ಸಾರಿಗೆ ಮುಂತಾದ ಎಲ್ಲಾ ಕ್ಷೇತ್ರಗಳಲ್ಲೂ ಖಾಸಗಿ ಚಟುವಟಿಕೆ ಬಿರುಸಿನಿಂದ ನಡೆಯಿತು. ಅನೇಕ ಮೇಲ್ಜಾತಿಗಳು ತಮ್ಮ ತಮ್ಮ ಜಾತಿಯ ವಾಣಿಜ್ಯ – ವ್ಯಾಪಾರೀ ಆಸಕ್ತಿಗಳನ್ನು ರಕ್ಷಿಸಿಕೊಳ್ಳಲು ಬ್ಯಾಂಕುಗಳನ್ನು ಆರಂಭಿಸಿದವು. ಹತ್ತಾರು ಬ್ಯಾಂಕು – ಹಣಕಾಸು ಸಂಸ್ಥೆಗಳ ಉದಯದಿಂದ ಒಂದೇ ಸಮನೆ ಜಿಲ್ಲೆಯ ವಾಣಿಜ್ಯ ವ್ಯಾಪಾರಿಗಳು ಕುದುರಿಕೊಂಡವು, ಜತೆಗೆ ಬಾಸೆಲ್ ಮಿಶನ್ ನಂತಹ ಪರದೇಶದ ಕ್ರೈಸ್ತ ಮಿಶನರಿಗಳ ಪ್ರಯತ್ನದಿಂದಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ದಕ್ಷಿಣ ಕನ್ನಡ ಪ್ರಗತಿ ಕಂಡಿತು, ಜತೆ ಜತೆಗೇ, ಆಧುನಿಕ ವಿದ್ಯೆಗೆ ಮೊದಲು ಆಕರ್ಷಿತರಾದ ಬ್ರಾಹ್ಮಣರು ವಿದ್ಯೆ ಕಲಿತು ದೂರದ ನಗರಗಳಿಗೆ ವಲಸೆ ಹೋಗಲು ಆರಂಭಿಸಿದರು. ಇವರ ಜತೆ ಬಡೆತನದ ಒತ್ತಡದಿಂದಾಗಿ ಉದ್ಯಮಶೀಲ ಬಂಟರು. ಬಿಲ್ಲವರೂ ಬೊಂಬಾಯಿಯಂಥ ಮಹಾನಗರಗಳಿಗೆ ವಲಸೆ ಹೋಗಿ ನೆಲೆಸಲು ಆರಂಭಿಸಿದರು ಮತ್ತು ಅಲ್ಲಿಂದ ಊರಿಗೆ ಹಣ ಕಳಿಸಲು ಆರಂಭಿಸಿದರು, ಇತ್ತೀಚೆಗಿಂತೂ ಮುಸ್ಲಿಮರು, ಕ್ರಿಶ್ಚಿಯನರು ಮತ್ತು ಹಿಂದೂಗಳೂ ಕೂಡ ಮುಖ್ಯವಾಗಿ ಮಧ್ಯಪ್ರಾಚ್ಯ ದೇಶಗಳಿಗೆ ಉದ್ಯೋಗಕ್ಕಾಗಿ ತೆರಳಿ ಅಲ್ಲಿಂದ ಭಾರೀ ಹಣ ಹರಿಸಲು ಆರಂಭಿಸಿದ್ದಾರೆ. ಭಾರೀ ಮೊತ್ತದ ಹಣದ ಈ ಒಳಹರಿವನ್ನು ಗಮನಿಸಿದ ಅನೇಕ ಪ್ರಸಿದ್ಧ ಅರ್ಥಶಾಸ್ತ್ರಜ್ಞರು ದಕ್ಷಿಣ ಕನ್ನಡದ ಆರ್ಥಿಕತೆಯನ್ನು ‘ಮನಿಆರ್ಡರ್ ಇಕಾನಮಿ’ ಎಂದು ಕರೆದದ್ದುಂಟು. ಈ ಹಣದ ಜತೆ ಹೊರಗೆ ವಲಸೆ ಹೋದವರು ಮತ್ತು ಸ್ಥಳೀಯರು ಪರಸ್ಪರ ಪ್ರಭಾವದಿಂದಾಗಿ, ಇಲ್ಲಿನ ಸಮಾಜವು ರಭಸದಿಂದ ಆಧುನಿಕವಾಗುತ್ತ ಸಂಕೀರ್ಣಗೊಳ್ಳುತ್ತ ಹೋಯಿತು ಮಾತ್ರವಲ್ಲ. ಆ ನಗರಗಳ ಸಾಮಾಜಿಕ ರೀತಿ – ನೀತಿಗಳೂ, ತೀವ್ರವಾದ ಪಾಶ್ಚಾತ್ಯ ಪ್ರಭಾವವೂ ಜಿಲ್ಲೆಗೆ ಆಮದಾಗಲು ಆರಂಭವಾಯಿತು. ಮುಖ್ಯವಾಗಿ ಪಶ್ಚಿಮದ ಹೆಬ್ಬಾಗಿಲಾದ ಬೊಂಬಾಯಿಯ ಸಂಸ್ಕೃತಿಯ ಒಳಹರಿವು ದಕ್ಷಿಣ ಕನ್ನಡತನವನ್ನು ಕ್ರಮೇಣ ಸಡಿಲು ಮಾಡಲಾರಂಭಿಸಿತು.

ಈ ಭಾರೀ ಮೊತ್ತದ ಹಣದ ಒಳಹರಿವಿನ ಜತೆ, ಇಂದು ತೀವ್ರವಾಗುತ್ತಿರುವ ವ್ಯಾಪಾರೀಕರಣ, ಬಿರುಸಿನ ಕಟ್ಟೋಣ ನಿರ್ಮಾಣ, ದುಬಾರಿಯಾಗುತ್ತಾ, ಆಕರ್ಷಣೆ ಕಳಕೊಳ್ಳುತ್ತಿರುವ ಬೇಸಾಯದಿಂದಾಗಿ ದಕ್ಷಿಣ ಕನ್ನಡವು ತನ್ನ ಗ್ರಾಮೀಣ ಸಂಸ್ಕೃತಿಯ ಆರ್ಥಿಕ – ಸಾಮಾಜಿಕ ವೈಶಿಷ್ಟ್ಯತೆಯನ್ನೇ ಕಳಕೊಂಡು ಇಡಿಯ ಜಿಲ್ಲೆಗೆ ಜಿಲ್ಲೆಯೇ, ಅಂದರೆ ಮೂಲೆಮೂಲೆಯ ಹಳ್ಳಿಗಳೂ ಪೇಟೆಗಳಾಗುತ್ತಿವೆ; ಮಾತ್ರವಲ್ಲ, ಪೇಟೆಯ ಎಲ್ಲ ರೀತಿಯ ಬಿಕ್ಕಟ್ಟನ್ನು ತಮ್ಮ ಮೇಲೆ ಎಳೆದುಕೊಳ್ಳುತ್ತಿವೆ; ಹಳ್ಳಿಯ ತನ್ನ ಬಸಿರಲ್ಲಿಟ್ಟು ಕೊಂಡಿರುವ ಜೀವ ಸಂರಕ್ಷಕ ವೈಶಿಷ್ಟ್ಯಗಳು, ಸೃಜನಶೀಲ ಕೌಶಲ್ಯಗಳು ಅಲ್ಲಲ್ಲೇ ಅರಳುವಂತೆ ಹಳ್ಳಿಗಳನ್ನು ಊರ್ಜಿತಗೊಳಿಸಿ, ಗ್ರಾಮೀಣ ಜನರ ಬದುಕನ್ನು ಹಿತವಾಗಿ ಮಾಡುವ ಬದಲು, ಪೇಟೆಸೌರ್ಕೈಗಳನ್ನು ಹೇರುತ್ತಾ, ಹಳ್ಳಿಗಳನ್ನು ಪೇಟೆ ಮಾಡಿ ಆ ಹಳ್ಳಿ ಜನರ ಅಮೂಲ್ಯ ಜ್ಞಾನ ಸಂಪತ್ತನ್ನು ಸಂಪೂರ್ಣ ಕಡೆಗಣಿಸಿ ಅವರನ್ನು ತ್ರಿಶಂಕು ಸ್ಥಿತಿಗೆ ತಂದಿಡುವ ‘ಹೈ – ಟೆಕ್’ ಗ್ರಾಮಾಭಿವೃದ್ಧಿಯನ್ನು ಅಳವಡಿಸಿಕೊಳ್ಳುತ್ತಿದೆ. ನಿದರ್ಗಕ್ಕೆ ಹೊಂದುವ (Eco – friendly) ಜನರಹಿತ ಸೂಕ್ತ ತಂತ್ರಜ್ಞಾನ (appropriate technology) ಸಂಪೂರ್ಣವಾಗಿ ಕಡೆಗಣಿಸಿಲ್ಪಟುತ್ತಿದೆ. ಹಳ್ಳಿಯನ್ನು ದಿಢೀರ್ ಪೇಟೆ ಮಾಡುವಾಗ ಅದರ ಜತೆ ಆ ಜನರ ಆರ್ಥಿಕ ಚಟುವಟಿಕೆಗಳಿಗೆ ಅಗತ್ಯವಾದ ಸಂಪನ್ಮೂಲಗಳ ಒಡೆತನ ಅವರ ಕೈ ತಪ್ಪಿ ಅವರು ಇನ್ನೂ ದುರ್ಬಲರಾಗಿ, ಪೇಟೆಯ ಅರ್ಥವಾಗದ ಸಂಕೀರ್ಣ ಅರ್ಥವ್ಯವಸ್ಥೆ ಮಾರುಕಟ್ಟೆಯ ಜಾಲದಲ್ಲಿ ಶೋಷಿಸಲ್ಪಡುತ್ತಾರೆ. ಒಂದು ಜಿಲ್ಲೆ ಸಂಪೂರ್ಣವಾಗಿ ಪೇಟೆಯಾಗಿ, ಹಳ್ಳಿಯ ತಳಗಟ್ಟೇ ಮಾಯವಾದರೆ ಆ ಜಿಲ್ಲೆ ಉಸಿರುಗಟ್ಟಿ ಸಾಯುತ್ತದೆ ಎಂಬುದು ಈ ಜಿಲ್ಲೆಯ ಜನ ತಿಳಿದಂತಿಲ್ಲ.

ಅನೇಕ ಅಭಿವೃದ್ಧಿ ಪರಿಕರಗಳು, ಮೊದಲಿಗೆ ಪುರೋಗಾಮಿಯಾಗಿದ್ದರೂ, ದೀರ್ಘಾವಧಿಯ ಕಾಲಪ್ರವಾಹದಲ್ಲಿ ಅನೇಕ ಬಾರಿ ತೀವ್ರ ಬಿಕ್ಕಟ್ಟನ್ನೇ ನಿರ್ಮಿಸಿ ಬಿಡುವುದಕ್ಕೆ ಅಸಂಖ್ಯ ನಿದರ್ಶನಗಳಿವೆ. ಉದಾಹರಣೆಗೆ ಮನುಷ್ಯನ ಮೋಹಕ ಆಸೆಗಳನ್ನು ಪೋಷಿಸುವ ಸಾವಿರಾರು ಹಣಕಾಸು ಕಂಪನಿಗಳು ಜನರಲ್ಲಿ ತೀರದ ಸುಖ ಭ್ರಮೆ ಹುಟ್ಟಿಸಿ, ಅವರು ನಿರಂತರ ಸಾಲ – ದುಃಖಗಳ ವರ್ತುಲದಲ್ಲಿ ತೊಳೆಯುವಂತೆ ಮಾಡುತ್ತಿದೆ. ದಕ್ಷಿಣ ಕನ್ನಡದ ಪ್ರಗತಿಗೆ ಬ್ಯಾಂಕುಗಳು ಆರಂಭದ ಹಂತದಲ್ಲಿ ಪೂರಕವಾಗಿಯೇ ಇದ್ದರೂ, ದೀರ್ಘಾವಧಿಯಲ್ಲಿ ಈ ವಿತ್ತ ಸಂಸ್ಥೆಗಳು ದಕ್ಷಿಣ ಕನ್ನಡಗರ ಕಲ್ಪನಾ ಸಾಮರ್ಥ್ಯ, ಬೌದ್ಧಿಕ ಕುತೂಹಲ, ಸೈಜನಶೀಲತೆ ಮತ್ತು ವಿಪುಲವಾದ ಸೃಜನಾತ್ಮಕ ಕಸುಬುಗಳನ್ನೇ ಹೊಸಕಿ ಹಾಕುವ ನಿಟ್ಟಿನಲ್ಲಿ ಜಿಲ್ಲೆಗೆ ಅಭಿಶಾಪವಾಗಿಯೂ ಪರಿಣಮಿಸಿದೆ ಎಂದು ನನ್ನ ನಂಬಿಕೆ, ಈ ಜಿಲ್ಲೆಯ ಪ್ರತಿಭಾನ್ವಿತ ಯುವಕರೂ ಕೂಡ ತಮ್ಮ ಶಿಕ್ಷಣದ ಅಂತಿಮ ಉದ್ದೇಶವು ಕೈಕೆಸರು ಮಾಡಿಕೊಳ್ಳದೆ, ಗರಿಗರಿ ಬಟ್ಟೆ ಹಾಕಿಕೊಳ್ಳಬಹುದಾದ ಬಿಳಿ ಕೊರಳಪಟ್ಟಿಯ ಬ್ಯಾಂಕು, ಎಲ್.ಐ.ಸಿ. ಮುಂತಾದ ಸಂಸ್ಥೆಗಳಲ್ಲಿ ಕೆಲಸಕ್ಕೆ ಸೇರುವಷ್ಟಕ್ಕೇ ಸೀಮಿತರಾಗಿದ್ದಾರೆ ಮತ್ತು ಈ ಪ್ರವೃತ್ತಿ ದಕ್ಷಿಣ ಕನ್ನಡದಲ್ಲಿ ನೌಕರರ ಒಂದು ಅಗಾಧ ಮಧ್ಯಮವರ್ಘವನ್ನು ಸೃಷ್ಟಿಸಿತು, ಈ ಮಧ್ಯಮವರ್ಘ ಯಾವ ಸಾಮುದಾಯಿಕ ಅಂಶಗಳನ್ನು ಒಳಗೊಳ್ಳುವ ಕೇವಲ ತಮ್ಮ ವೈಯಕ್ತಿಕ ಹಿತಾಸಕ್ತಿಯನ್ನಷ್ಟೇ ಕಾಯುವ ಅಭಿವೃದ್ಧಿಯ ಕಲ್ಪನೆಗೆ ಒತ್ತು ಕೊಡುತ್ತಾ ಬರಲು ಆರಂಭಿಸಿತು, ರಾಜಕೀಯ ಸಾಂಸ್ಕೃತಿಕ, ಸಾಮಾಜಿಕ ರಂಗಗಳಲ್ಲೆಲ್ಲಾ ಅವರದೇ ಮೇಲುಗೈಯಿದ್ದು, ಇವರಿಗೆ ಈ ಜಿಲ್ಲೆಯ ಅಸಂಖ್ಯ ಬೇಸಾಯಗಾರರು, ಬೆಸ್ತರು, ಕುಂಬಾರರು, ಕಮ್ಮಾರರು, ಬಡಗಿಗಳು, ಬುಟ್ಟಿ ಹೆಣೆಯುವವರು, ಲೋಹದ ಕರಕುಶಲಗಾರರ ಸಮುದಾಯಗಳ ಜತೆ ಸಂವಾದವೇ ಇಲ್ಲ. ಹಾಗಾಗಿ ಈ ಅಸಂಖ್ಯ ಸಾಮಾನ್ಯರು ಜಿಲ್ಲೆಯ ಪ್ರಗತಿಯ ಫಲದಿಂದಲೇ ವಂಚಿತರಾಗಿ ದುರ್ಬಲರಾಗಿಯೇ ಉಳಿದರು, ಈ ಇತಿಹಾಸ ತಿರುವು ಮುರುವಾದದ್ದು ಇಂದಿರಾ ಗಾಂಧಿಯವರ ಕಾಲದಲ್ಲಿ.

ಅಂದು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸರು ಜಾರಿಗೊಳಿಸಿದ ಅತ್ಯಂತ ಪುರೋಗಾಮಿಯಾದ ಭೂಸುಧಾರಣಾ ಕಾನೂನು ಈ ಜಿಲ್ಲೆಯ ಸುಮಾರು ೩ – ೪ ಲಕ್ಷ ಗೇಣಿದಾರರನ್ನು ಒಮ್ಮೆಲೆ ತಮ್ಮ ತಮ್ಮ ಭೂಮಿಯ ಒಡೆಯರನ್ನಾಗಿ ಮಾಡಿ ದುರ್ಬಲ ವರ್ಗಕ್ಕೆ ಮೊತ್ತ ಮೊದಲಬಾರಿಗೆ ಚೈತನು ನೀಡಿತು. ದುರ್ಬಲ ವರ್ಗಕ್ಕೆ ಈ ರೀತಿ ಶಕ್ತಿ ತುಂಬುವ ಕಾರ್ಯ ಪ್ರಾಯಃ ಜರುಗಿದ್ದೇ ಭಾರತದಲ್ಲಿ ಅಪರೂಪವನ್ನೆಬಹುದು. ಇದರಿಂದಾಗಿ ಮೊತ್ತಮೊದಲಬಾರಿಗೆ ಈ ವರ್ಗಕ್ಕೆ ಮಾತಾಡುವ ಪ್ರತಿಭಟಿಸುವ ಶಕ್ತಿ ಧೈರ್ಯ ಬಂತು.

ಅಂದಿನಿಂದ ದಕ್ಷಿಣ ಕನ್ನಡ ಆರ್ಥೀಕ – ರಾಜಕೀಯ – ಸಾಮಾಜಿಕ ಸ್ವರೂಪವೇ ಬದಲಾಯಿತು, ಅಂದಿನವರೆಗೆ ಈ ಜಿಲ್ಲೆಯ ಪ್ರತಿನಿಧಿಗಳಾಗಿ ಮೇಲ್ವರ್ಗದವರು ಮಾತ್ರ ಆರಿಸಿಬರುತ್ತಿದ್ದರೆ. ಈ ಮೌನಕ್ರಾಂತಿಯ ಬಳಿಕ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳೂ ಕೆಳವರ್ಗದಿಂದಲೇ ಏರಲು ಆರಂಭವಾಯಿತು. ಮೇಲ್ವರ್ಗದ ಒಬ್ಬ ಪ್ರತಿನಿಧಿಯೂ ಆರಿಸಿಬರುವುದು ಅಸಾಧ್ಯವೆನ್ನುವ ಹಂತಕ್ಕೆ ಬಂತು. ಸಾಮಾನ್ಯ ಜನರಿಗಂತೂ ಇಂದಿರಾಗಾಂಧಿ ತಮ್ಮನ್ನು ಉದ್ದಾರ ಮಾಡಬಲ್ಲ ದೇವತೆಯಾಗಿಬಿಟ್ಟಿದ್ದರು. ಅದೊಂದು ಉತ್ತಮ ಕಾಲ, ಮಸಾಂಧತೆ, ಕೋಮು ಘರ್ಷಣೆಗಳಿಗೆ ದಕ್ಷಿಣ ಕನ್ನಡಲದಲ್ಲಿ ಎಡೆಯೇ ಇರಲಿಲ್ಲ.

ಆದರೆ ನವಚೈತನ್ಯವನ್ನು ಪಡೆದ ಈ ಕೆಳವರ್ಗದ ಜನರು ಕ್ರಮೇಣ ಮೇಲ್ವರ್ಗದ ರೀತಿ, ರಿವಾಜು, ಶಿಕ್ಷಣ, ಉದ್ಯೋಗ, ಧಾರ್ಮಿಕ ನಂಬಿಕೆ, ಜೀವನಶೈಲಿಗಳ ಅಂಧಾನುಕರಣೆಗೆ ತೊಡಗಿ, ತಮಗೆ ದಕ್ಕಿದ್ದ ಶಕ್ತಿಯನ್ನು ಕ್ರಮೇಣ ಕಳಕೊಳ್ಳುತ್ತಾ ಪೈಪೋಟಿಯಲ್ಲಿ ಪುನಃ ಶಕ್ತಿಹೀನರಾಗುತ್ತಿರುವುದು ಇಂದಿನ ಚಾರಿತ್ರಿಕ ದುರಂತ, ತಮಗೆ ದೊರೆತ ಹೊಸಶಕ್ತಿಯನ್ನು, ತಮ್ಮ ವೃತ್ತಿ ಕೌಶಲ್ಯವನ್ನು ದಕ್ಷ ರೀತಿಯಲ್ಲಿ ಹೆಚ್ಚಿಸಿಕೊಳ್ಳಲು ಮತ್ತು ತಮ್ಮ ವಿಶಿಷ್ಟ ಉತ್ಪಾದನಾ ಪ್ರಕ್ರಿಯೆಯ ಹಿಂದೆ ಮತ್ತು ಮುಂದೆ ಇರುವ ತೊಡಕನ್ನು ನಿವಾರಿಸುವತ್ತ ಉಪಯೋಗಿಸಿಕೊಳ್ಳದೆ. ಕೇವಲ ಅನುಕರಣಶೀಲರಾಗುತ್ತಿರುವುದರಿಂದ. ಇವರು ತಮ್ಮ ವಿಶಿಷ್ಟ ಬಹುರೂಪೀ ಉತ್ಪಾದನಾ ಸಾಮರ್ಥ್ಯವನ್ನು ನಿಟ್ಟುಕೊಡುತ್ತಾ, ಅದರ ಜತೆ ಬೆಸೆದುಕೊಂಡಿರುವ ಸಾಮಾಜಿಕ – ಸಾಂಸ್ಕೃತಿಕ ವಿಶಿಷ್ಟತೆಯನ್ನು ಕಳೆದುಕೊಂಡು, ಎಲ್ಲ ಆಧುನಿಕರಂತೆ ಸ್ವಂತಿಕೆಯ ಮುಖ ಕಳಕೊಂಡ ಅಂದಗೇಡಿಗಳಾಗುತ್ತಿದ್ದಾರೆ. ಹಿಂದೆ ಭೂಮಿ ಕಳಕೊಂಡು ಅಧಿಕಾರದಿಂದ ಹಿಂದೆ ಸರಿದ ಬಲಿಷ್ಟರು ಇಂದು ಬೊಂಬಾಯಿಯಂಥ ನಗರಗಳಿಂದ ದುಡ್ಡಿನ ಶಕ್ತಿಯ ಜತೆ, ಸರ್ಕಾರದ ಪ್ರೋತ್ಸಾಹವನ್ನು ದುರುಪಯೋಗ ಗೊಳಿಸುತ್ತ ನಾನಾ ತರದ ಕೈಗಾರಿಕೆಗಳ ಮಾಲಿಕರಾಗಿ, ನಿರ್ದೇಶಕರಾಗಿ ಪುನಃ ಪ್ರಬಲ ಶೋಷಕ ಶಕ್ತಿಗಳಾಗಿ ತಲೆಯೆತ್ತುತ್ತಿದ್ದಾರೆ. ೨೫ ವರ್ಷಗಳ ಬಳಿಕ ಈ ಜಿಲ್ಲೆಯಲ್ಲಿ ಪುನಃ ಮೇಲ್ವರ್ಗದಿಂದಲೇ ಜನಪ್ರತಿನಿಧಿಗಳೂ ಅರಿಸಿಬರಲು ಆರಂಭವಾಗಿದೆ. ಇಂದು ಈ ಮಂದಿಯ ಶೋಷಣೆಯ ಕೊಂಡಿಗಳೂ ಬೊಂಬಾಯಿಯ ಕೆಳಜಗತ್ತಿನ ಶಕ್ತಿಯನ್ನೂ ಪಡಕೊಂಡು, ಸಮಾಜದ ಅತೀ ಅಳದವರೆಗೆ ಕಳವಳಕಾರಿಯಾಗಿ ಪಸರಿಸಿಕೊಳ್ಳುತ್ತಿದೆ ಹಾಗಾಗಿ ಇಂದು ದಕ್ಷಿಣ ಕನ್ನಡದಲ್ಲಿ ಯಾವುದೇ ಸಮಾಜಿಕ ನ್ಯಾಯಕ್ಕಾಗಿ ಹೋರಾಡುವುದು ಹಿಂದೆಂದಿಗಿಂತಲೂ ಅಪಾಯಕಾರಿಯಾಗಿದೆ.

ಈ ಪೇಟೆ ಸಂಸ್ಕೃತಿಯ ವ್ಯಾಪಕತೆ ಮತ್ತು ನಮ್ಮ ಏಕರೀತಿಯ ಶಿಕ್ಷಣದ ಸಾರ್ವತ್ರಿಕತೆ ದಕ್ಷಿಣ ಕನ್ನಡ ಇದುವರೆಗ ಕಂಡರಿಯದ ಕೋಮು ವಿಷವನ್ನು ಹೆಚ್ಚಿಸಿದೆ. ಒಂದೇ ರೀತಿಯಲ್ಲೇ ಯೋಚಿಸಲು, ಪ್ರತಿಕ್ರಿಯಿಸಲು ತರಭೇತಿ ಕೊಡುವ ಶಿಕ್ಷಣದಿಂದಾಗಿ ಜಿಲ್ಲೆಯಲ್ಲಿ ಕುರಿಮಂದೆ ಪ್ರವೃತ್ತಿ ಬೆಳೆಯುತ್ತಿದೆ. ಯಾವುದೇ ಸಮಸ್ಯೆ ನಿಕ್ಕಟ್ಟುಗಳಿರಲಿ, ಎಲ್ಲಾ ಶಿಕಿತರೂ ಏಕರೀತಿಯಲ್ಲಿ ಪ್ರತಿಕ್ರಿಯಿಸುತ್ತಾ, ಒಬ್ಬgನ್ನೊಬ್ಬರು ಅನುಕರಣೆ ಮಾಡುವುದರಲ್ಲಿ ನಿಸ್ಸೀಮರಾಗುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ನೋಡಿದರೆ, ಇತ್ತೀಚಿನ ಪರಿಸರ ಚಳವಳಿಯು ನಿಜಕ್ಕೂ ದಕ್ಷಿಣ ಕನ್ನಡದ ಈ ಶತಮಾನದ ಪ್ರಮುಖ ಜನಾಂದೋಲನವಾಗಿ ರೂಪುಗೊಳ್ಳುತ್ತಿರುವುದು ಒಂದು ಚೇತೋಹಾರಿಯಾದ ಸಂಗತಿ, ಮೀನುಗಾರರು, ಬೇಸಾಯಗಾರರು, ಹಳ್ಳಿಮಂದಿಯೇ ಅಸಂಖ್ಯವಾಗಿರುವ ಈ ಚಳುವಳಿಯನ್ನು ವಿರೋಧಿಸುವವರು ದುರಾದೃಷ್ಟವಶಾತ್ ಆಧುನಿಕ ಶಿಕ್ಷಣ ಪಡೆದ ಜನಾಂಗವಾಗಿದೆ. ಅವರು ತಮ್ಮ ಯೋಚನೆಗಳನ್ನೂ ಕಡೆ ಪಡಕೊಂಡವರಾದ್ದರಿಂದ, ಜನಪರ ಚಳವಳಿಯ ಸೂಕ್ಷ್ಮತೆಯನ್ನು ಅರಿಯಲು ಬೇಕಾಗುವ ಪರಕಾಯ ಪ್ರವೇಶ ಶಕ್ತಿಯನ್ನೇ ಕಳಕೊಂಡಿದ್ದಾರೆ.

* * *

ಅತ್ಯಂತ ಅವಸರದಲ್ಲಿರುವ ಇಂದಿನ ದಕ್ಷಿಣ ಕನ್ನಡಿಗರ ಆಕ್ರಮಣಕಾರಿ ಪ್ರವೃತ್ತಿಯಿಂದಾಗಿ ಆತನ ಮುಂದೆ ಚಾಚಿ ನಿಂತಿರುವ, ಈ ಭೂಮಿ, ನೀರು, ಕಲ್ಲು, ಬಂಡೆ, ಮರಮಟ್ಟುಗಳು, ಪ್ರಾಣಿಗಳು, ಮುಂತಾದ ನಿಸರ್ಗದ ಪ್ರತಿಯೊಂದು ಸಂಗತಿಯೂ ಅತನಿಗೆ ತನ್ನ ಉಪಯೋಗವಸ್ತುಗಳಾಗಿಯೇ ಕಾಣುತ್ತಿರುವುದರಿಂದ ನಿಸರ್ಗದ ವೈಭವದ ನೆಲೆಯಾದ ಈ ಪ್ರವೇಶದ ಶುರ್ಪವೇ ಕೆಡುತ್ತದೆ. ಇದರಿಂದಾಗಿ ವರ್ಷವೊಂದಕ್ಕೆ ೨೦೦ ಇಂಚು ಮಳೆ ಬೀಳುವ ಪ್ರಾಯಃ ಇಡೀ ಜಗತ್ತಲ್ಲೇ ಮಳೆಯ ಪ್ರಮಾಣದಲ್ಲಿ ಎರಡನೆಯ ಸ್ಥಾನದಲ್ಲಿರುವ ದಕ್ಷಿಣ ಕನ್ನಡವು ಇಂದು ಕುಡಿಯುವ ನೀರಿನ ತೀವ್ರ ಅಭಾವವನ್ನು ಎದುರಿಸುತ್ತಿದೆ. ದಕ್ಷಿಣ ಕನ್ನಡದ ಮಣ್ಣಲ್ಲಿ ಅಂಟಿಲ್ಲ, ಹಾಗಾಗಿ ಹಸಿರುರಾಶಿಯ ಬೇರುಗಳೇ ಈ ಭೂಪ್ರದೇಶದ ನೀರನ್ನು ಹಿಡಿದಿಟ್ಟು ಭೂಮಿಯಡಿ, ಶೇಖರಿಸಲು ಸಹಕಾರಿಯಾಗುವ ಜೀವನಾಡಿಗಳು ಕೂಡ, ಇಲ್ಲಿಯುರೋಪಿನಂತೆ ೮ ತಿಂಗಳೂ ಮಳೆ ಬೀಳದೆ. ಕೇವಲ ನಾಲ್ಕೇ ತಿಂಗಳಲ್ಲಿ ಸಂಪೂರ್ಣ ಮಳೆ ಸುರಿಯುವುದರಿಂದ, ಈ ಮಳೆ ನೀರನ್ನು ಹಿಡಿದಿಡುವುದೊಂದೇ ನಮಗುಳಿದಿರುವ ದಾರಿ, ಹಿಂದೆ ಮಳೆನೀರು ಶೇಖರಣೆಗಾಗಿಯೇ ಪ್ರತಿ ಊರಲ್ಲೂ ಎರಡು – ಮೂರು ನಿಸರ್ಗದತ್ತ ಮದಗಗಳಿದ್ದವು ಇವುಗಳಲ್ಲಿ ಶೇಖರಣೆಯಾದ ಮಳೆ ನೀರು ಜನವರಿ ತಿಂಗಳವರೆಗೆ ನೀರಾವರಿಗೆ ಒದಗುವುದಲ್ಲದೆ. ಭೂಮಿಯ ಅಡಿಯ ನೀರಿನ ಮಟ್ಟ ಕುಸಿಯದಂತೆ ಸುತ್ತಮುತ್ತಲ ಬವುಗಳ ನೀರು ಬತ್ತದಂತೆ ಅಂತರ್ಜಲವನ್ನು ಸ್ಪಂಜಿನಂತೆ ಹಿಡಿದಿಟ್ಟುಕೊಳ್ಳುತ್ತಿದ್ದವು. ಇಂದು ಮದಗಗಳ ಹೊಳೆತ್ತುವ ಪರಂಪರಾಗತ ವ್ಯವಸ್ಥೆ ಕುಸಿದು ಬಿದ್ದದ್ದರಿಂದ ಕೆಸರು ತುಂಬಿ ನಿರ್ಜೀವವಾಗಿವೆ ಮಾತ್ವಲ್ಲ. ಅವುಗಳನ್ನು ಮಣ್ಣಿನಿಂದ ಮುಚ್ಚಿ, ಅವುಗಳ ಮೇಲೆ ವಾಣಿಜ್ಯ ಸಂಕೀರ್ಣಗಳು, ಹೊಸ ಬಡವಾಣೆಗಳು ತಲೆಯೆತ್ತುತ್ತಿವೆ. ಇನ್ನು ಕೆಲವೇ ವರ್ಷಗಳಲ್ಲಿ ದಕ್ಷಿಣ ಕನ್ನಡದ ಪ್ರಮುಖ ಹೋರಾಟವಿರುವುದು ಕುಡಿಯುವ ನೀರಿಗಾಗಿ.

ನ್ಯೂಯಾರ್ಕಿನ ವಾಸ್ತುಶಿಲ್ಪ ಕೈಪಿಡಿಯಲ್ಲಿ ಜಗತ್ತಿನ ವಾಸ್ತುಶಿಲ್ಪಕ್ಕೆ ಭಾರತದ ಎರಡು ಮಹತ್ವದ ಕೊಡುಗೆಗಳಲ್ಲಿ ಮಂಗಳೂರು ಹಂಚು ಒಂದು ಎಂದು ಉಲ್ಲೇಖಿಸಲ್ಪಟ್ಟಿದೆ. ಈ ಜಿಲ್ಲೆಯಲ್ಲೇ ಸಿಗುವ ಹೇರಳ ಆವೆಮಣ್ಣನ್ನು ಬಳಸಿ, ಈ ಪ್ರದೇಶದ ದೇಸೀ ಜನರ ಕರಕೌಶಲ್ಯವನ್ನೇ ಉಪಯೋಗಿಸಿಕೊಂಡು, ಇಲ್ಲಿನ ಹಸಿರುರಾಶಿಯ ಜತೆ ಲೀನವಾಗುವ, ಮತ್ತು ಇಲ್ಲಿನ ಬಿರುಸು ಮಳೆಯ ಹವೆಗೆ ಒಗ್ಗುವಂತೆ ಮೂಡಿಬಂದ ಮಂಗಳೂರು ಹಂಚಿನ ಶಿಲ್ಪ ಜಗತ್ಪ್ರಸಿದ್ಧವಾಗಿದೆ ಮತ್ತು ಕಟ್ಟಡದ ಶೈಲಿ, ವಿನ್ಯಾಸ ಕೌಶಲ್ಯಗಳಲ್ಲಿ ದಕ್ಷಿಣ ಕನ್ನಡದ ವ್ಯಕ್ತಿತ್ವಕ್ಕೆ ಮೆರುಗು ಕೊಟ್ಟಿದೆ. ಆದರೆ ದುರಾದೃಷ್ಟವಶಾತ್‌ ಮಂಗಳೂರು ಹಂಚಿನ ಮನೆಗಳೂ ತನ್ನ ಹುಟ್ಟೂರಲ್ಲೇ ಪರಕೀಯವಾಗುತ್ತಿವೆ. ಅದರ ಬದಲು ಹೊಸ ಮಾದರಿಯ ಬಳಕು ವಿನ್ಯಾಸಗಳೇ ಇಲ್ಲದ ಏಕರೀತಿಯ ಬೋಳುಬೋಳಾದ ಕಾಂಕ್ರೀಟು ಕಟ್ಟಡಗಳು ತಲೆಯೆತ್ತುತ್ತಿವೆ. ಇದರ ಜತೆ ಬೊಂಬಾಯಿಯ ಫ್ಲಾಟ್ ಸಂಸ್ಕೃತಿಯೂ ಜಿಲ್ಲೆಗೆ ಧಾಳಿಯಿಟ್ಟಿದೆ. ಇದರಿಂದಾಗಿ ಹಂಚಿನ ಮನೆಯ ವಿನ್ಯಾಸಗಳ ಕರಕುಶಲಗಾರರ ಮರದ – ಶಿಲೆಯ ಶಿಲ್ಪಿಗಳ ಪೀಳಿಗೆಯೇ ಅವನತಿಯ ಹಾದಿ ಹಿಡಿಯುತ್ತಿದೆ. ಇವೆಲ್ಲ ನಶಿಸುತ್ತಿರುವ ದಕ್ಷಿಣ ಕನ್ನಡದ ವೈಶಿಷ್ಟ್ಯತೆಗಳ ಕೆಲವು ನಿದರ್ಶನ ಮಾತ್ರ. ಅಂತ ನನ್ನ ಭಾವನೆ ತುಳುನಾಡಿನ ನಾಗರಿಕತೆ ಈ ದೇಶದ ಅತ್ಯಂತ ಪ್ರಾಚೀನ ಸಂಸ್ಕೃತಿಗಳಲ್ಲೊಂದು, ಇಷ್ಟು ದೀರ್ಘಕಾಲ ಉಳಿದು ಬೆಳೆದು ಬಂದಿರುವ ಒಂದು ಅಖಂಡ ಜೀವನ ವ್ಯವಸ್ಥೆಯನ್ನು ಒಟ್ಟಾರೆಯಾಗಿ ನಿರ್ಲಕ್ಷಿಸುವುದು ಮೂರ್ಖತನವಾದೀತು. ಆಧುನಿಕತೆಯ ಸೆಳೆತವು ಒಂದು ನಮ್ಮ ಕೆಳವರ್ಗದವರಿಗೆ ಬಿಡುಗಡೆಯ ಮಾರ್ಗವಾಗಿ ಕಂಡುಬರುವುದೂ ಸತ್ಯ. ಆದರೆ ಇನ್ನೊಂದೆಡೆ ಬೇರೆ ಕೆಲವರಿಗೆ ಮೋಹ ಪಾಶವಾಗಿಯೂ ಕಾಣುತ್ತಿದೆ. ಇದರ ಮಧ್ಯೆ ಎಲ್ಲೋ ಸತ್ಯ ಅಡಗಿದೆ. ಆಧುನಿಕತೆಯ ಮೂಲಕ ದೊರೆಯುವ ಬಿಡುಗಡೆ ಎಷ್ಟರಮಟ್ಟಿಗೆ ಅಧಿಕೃತವಾದದ್ದು. ಅತ್ಯಂತಿಕ ಸತ್ಯದ್ದು ಎಂಬ ಪ್ರಶ್ನೆ ಕೇಳಿಕೊಂಡು ನಾವು ಅದರ ಆಕರ್ಷಣೆಯನ್ನು ವಿಶ್ಲೇಷಿಸಲು ಪ್ರಯತ್ನಿಸಬೇಕು.

ಹಾಗೆಂದು ಇದರರ್ಥ, ಸ್ಥಳೀಯ ಪರಂಪರಾಗತ ತಿಳುವಳಿಕೆ ದರ್ಶನಗಳು ಆಧುನಿಕಗೊಳ್ಳಲೇಬಾರದೆಂದಲ್ಲ. ಪರಂಪರೆಯು ತನ್ನೊಳಗಿನಿಂದಲೇ ಹೊಸ ಸೃಷ್ಟಿ ಮಾಡುವ ಶಕ್ತಿಯನ್ನು ಪಡೆದಿದೆ ಮಾತ್ರವಲ್ಲ. ಹೊರಗಿನಿಂದಲೂ ಅನನ್ಯವಾದದ್ದನ್ನು ಪಡೆದು ಅದನ್ನು ಅಂತರ್ಗತಗೊಳಿಸಿ ತನ್ನದಾಗಿಸಿಕೊಳ್ಳುವ ಗುಣವನ್ನು ಪಡೆದಿದೆ ಎಂದು ಪ್ರಸಿದ್ಧ ಸಮಾಜಶಾಸ್ತ್ರ ಚಿಂತಕ ಆಶಿಸ್ ನಂದಿ ಹೇಳುತ್ತಾರೆ. ಅವರ ಅಭಿಪ್ರಾಯದಂತೆ “ಪರಂಪರೆಯ ಈ ರೂಪಾಂತರ ಪ್ರತಿಭೆಯೇ ಅದರ ಅಂತರ್ಯದ ಸತ್ವವಾಗಿದೆ. ಆಧುನಿಕ ತಂತ್ರಜ್ಞಾನಿಕ ವಸ್ತುಗಳಂತಹ ಅಸಾಮಾನ್ಯ ವಿಷಯಗಳಿಂದ ಹಿಡಿದು ನಿತ್ಯ ಬಳಕೆಯ ಅತಿಸಾಮಾನ್ಯ ‘ಕನ್ಸ್ಯೂಮರ್’ ವಿಷಯಗಳವರೆಗೂ ಒಂದು ಪರಂಪರಾಗತ ಸಮಾಜ ತನ್ನ ಆಂತರಿಕ ವಿಷಯವನ್ನಾಗಿ ರೂಪಾಂತರಿಸಿ ತನ್ನ ಪರಂಪರೆಯ ಚೌಕಟ್ಟಿನಲ್ಲಿ ಎಲ್ಲೋ ಒಂದು ಕಡೆ ಸರಿಕೂಡಲು ಪ್ರಯತ್ನಿಸುತ್ತದೆ. ಹಾಗೆ ಪರಿವರ್ತಿಸಲಾಗದಂತಹ ಅನ್ಯವಸ್ತು – ಸಂಸ್ಕೃತಿ ಆ ಸಮಾಜಕ್ಕೆ ಅಧೈರ್ಯ ತಂದು, ಆ ಸಮಾಜದ ಮನಸ್ಸನ್ನು ಛಿದ್ರ ಮಾಡೀತು. ಆಗ ಅಂಥ ಸಮಾಜ ಕುಸಿಯುತ್ತದೆ. : ದಕ್ಷಿಣ ಕನ್ನಡ ಇಂಥ ದುರಂತದ ಮಾರ್ಗದಲ್ಲಿ ಸಾಗುತ್ತಿದೆಯೇ ಎಂದು ಸಂದೇಹವಾಗುತ್ತದೆ. ಇಲ್ಲಿನ ಜನ ಸಮುದಾಯಗಳು ಹಲವು ಕಾಲದಿಂದ ಬದುಕುತ್ತ ಬಂದ ಕ್ರಮಗಳನ್ನು, ಬಳಸುತ್ತ ಬೆಳೆಸುತ್ತ ಬಂದ ಜ್ಞಾನ ಸಂಪನ್ಮೂಲಗಳನ್ನು ಸೃಜಿಸಿಕೊಳ್ಳುತ್ತಿರುವ ಜೀವನದರ್ಶನಗಳನ್ನು ಆಧುನಿಕತೆಯ ಅತಿಮೋಹದಿಂದ ಉಪೇಕ್ಷಿಸಿದಲ್ಲಿ, ಅವಮಾನಿಸಿದಲ್ಲಿ, ಏಕಾಏಕಿಯಾಗಿ, ಏಕಪಕ್ಷೀಯವಾಗಿ ಅವುಗಳನ್ನು ರಭಸದಿಂದ ಬದಲಾಯಿಸಲು ಹವಣಿಸಿದಲ್ಲಿ, ಇಂದಲ್ಲ ಇನ್ನೊಂದು ದಿನ ಅದಕ್ಕಾಗಿ ಘೋರ ಬೆಲೆಯನ್ನು ನಾವು ತೆರಬೇಕಾಗುತ್ತದೆ ಎಂದು ನಂದಿ ನುಡಿಯುತ್ತಾರೆ. ಈ ಎಲ್ಲ ಸೂಕ್ಷ್ಮಗಳನ್ನು ಅರಿಯಲು ಬೇಕಾದ ಮಾನಸಿಕ ಬಿಡುವು, ಸಮಾಧಾನದ ಸ್ಥಿತಿ, ತೀವ್ರ, ವೇಗ – ರಭಸಕ್ಕೊಳಪಟ್ಟ ದಕ್ಷಿಣ ಕನ್ನಡದವನಿಗೆ ಇಂದು ಇದ್ದಂತಿಲ್ಲ.

* * *