ಮನೆಯ ಬಾಗಿಲ ಹೊರಗೆ ಸುಡುವ ಬೇಸಗೆ ಬಿಸಿಲು,
ಮನ ಚಿಂತೆಗಳ ಹುತ್ತ ; ಮೇಲೆ ಬೆವರಿನ ಜಳಕ.
ಇಂಥ ಹೊರ ಜಗದಿಂದ ಮನೆಯ ಹೊಸಿಲಿಗೆ ಬಂದ-
ರಿದೆ ಒಳಗೆ ಸಂಸಾರ ವೃಕ್ಷದ ನೆಳಲು ! ಮಡದಿ-
ಯಕ್ಕರೆಯ ಹೂಗಂಪು ಹರಡಿಹುದು, ದೇವರೆದು-
ರಿಗೆ ಉರಿದು ಗೆರೆಗೆರೆಯ ಲಾಸ್ಯದಲಿ ಕೋಣೆಯನು
ತುಂಬುವ ಊದುಬತ್ತಿಯ ನವುರು ಗಂಧದಂತೆ !
ಬಂದೊಡನೆ ಬಾಗಿಲಲಿ ತಬ್ಬುವುದು ಮಗುವಿನೆಳ-
ನಗೆಯ ತಿಂಗಳಿನ ಬಳ್ಳಿ ತೋಳಿನ ಬಳಸು ! ಆ
ಜೊಲ್ಲುಗುವ ಜೇನ್‌ದುಟಿಯ ತೊದಲು ಮುತ್ತಿನಮಾತು
ಮನದ ಬವಣೆಗೆ ಮದ್ದು. ಬೇಸಗೆಯ ನಡು ಹಗಲು
ತಿಳಿನೀರ ತೊರೆಯೊಳಗೆ ಮಲಗಿ ಮಿನುಗುವ ಹರಳು-
ಗಲ್ಲುಗಳ ರೀತಿಯಲಿ ತೋರುತಿದೆ ಈ ಬಾಳು
ಇಂಥ ಒಲವಿನ ತೊರೆಯೊಳದ್ದಿರಲು ನಾವುಗಳು !