ಹಾರದಿರು ಹಾರದಿರು, ಈಗಲೇ ಹಾರದಿರು
ಅನಂತ ವಿಸ್ತರದ ನೀಲ ನಭಕೆ.
ರೆಕ್ಕೆ ಬಲಿಯದ ಮುನ್ನ, ಪುಕ್ಕವೇಳದ ಮುನ್ನ,
ಮೈಯಲ್ಲಿ ಸಾಕಷ್ಟು ಬಲ ಬರದ ಮುನ್ನ,
ಹಾರಲೆಳಸುವೆಯೇಕೆ
ಈ ನೀಲ ನಭಕೆ ?

ಅವರು ಹಾರುವರೆಂದು, ನೀನು ಹಾರಲೆಬೇಕೆ
ರೆಕ್ಕೆ ಬಲಿಯದ ಮುನ್ನ ಈ ನೀಲ ನಭಕೆ ?
ಕೊಂಚ ತಡೆ, ಇದಕೀಗ ಆತುರವು ಸಲ್ಲ
ನೀನು ಹಾರುವ ಕಾಲ ಮುಂಬರುವುದೆಲ್ಲ.

ಆತುರದ ಹಾರಾಟಕಿಂದೆ ನೀ ಧುಮುಕಿದರೆ
ಬಲಹೀನರವನತಿಯ ಕಾಣಬಹುದು.
ಅನಂತ ವಿಸ್ತರದ ವೈಭವಕೆ ಬದಲಾಗಿ
ಯಾವುದೋ ಕೂಪದಲಿ ಕೊರಗಬಹುದು.

ದಿಟ್ಟಿಹೋಹನ್ನೆಗಂ ಬಿತ್ತರದ ಬಾನುಂಟು
ಎನಿತು ಎತ್ತರಕನಿತು ಏರಬಹುದು.
ಮೈಯ್ಯಲ್ಲಿ ಬಲ ಬರಲಿ, ಹಾರುವಾ ಕೆಚ್ಚಿರಲಿ
ದೂರವೆನಿತಾದರೂ ಸಾಗಬಹುದು.