ಉತ್ತರ ಭಾರತದಲ್ಲಿ ’ರಾಮಲೀಲಾ’ ಎಂಬ ಬಯಲು ನಾಟಕಗಳನ್ನು ಇಡೀ ರಾತ್ರಿ ಆಡುತ್ತಾರೆ.  ಸುಮಾರಾಗಿ ನಮ್ಮ ಯಕ್ಷಗಾನ ಬಯಲಾಟಗಳನ್ನು ಇವು ಹೋಲುತ್ತವೆ. ಶ್ರೀರಾಮ ದಿವ್ಯ ಕಥೆಯನ್ನು ಇದರಲ್ಲಿ ಸೊಗಸಾಗಿ ಅಭಿನಯಿಸಿ ತೋರಿಸುತ್ತಾರೆ.

ಹಿಂದಿ ಭಾಷೆಯ ಆದಿಕವಿ ಸಂತ ತುಳಸೀದಾಸರು ರಚಿಸಿದ ’ಶ್ರೀ ರಾಮ ಚರಿತ ಮಾನಸ’ ದ ದೋಹಾ ಎಂಬ ಕವಿತೆಗಳನ್ನು ಹಾಡುತ್ತ ವೇಷಧಾರಿಗಳು ಕುಣಿಯುತ್ತಾರೆ. ಇದರಲ್ಲಿ ಮಕ್ಕಳಿಂದ ಮುದುಕರೂ ಭಾಗವಹಿಸುತ್ತಾರೆ. ವಿಜಯದಶಮಿಯಂದು ತಾಳೆಮರದಷ್ಟು ಎತ್ತರದ ರಾವಣನ ಪ್ರತಿಮೆಯನ್ನು ಮಾಡಿ ಅದನ್ನು ಸುಡುತ್ತಾರೆ.

ಮಾತೃಭಕ್ತಿ

ಬಾಲಕ ಓಂಕಾರನಾಥ ಠಾಕುರ್ ಅಂಥ ರಾಮಲೀಲೆಯಲ್ಲಿ ಲಕ್ಷ್ಮಣನ ಪಾತ್ರ ಧರಿಸಿ ಜನಪ್ರಿಯನಾಗಿದ್ದನು. ನಾಲ್ಕು ತಿಂಗಳ ಕಾಲ ರಾಮಲೀಲಾದಲ್ಲಿ ಕೆಲಸ ಮಾಡಿ ಆತ ಒಮ್ಮೆ ಮೂವತ್ತು ರೂಪಾಯಿ ಗಳಿಸಿದ್ದ. ಅಲ್ಲಿಂದ ಸುಮಾರು ೩೫ ಮೈಲು ಹಗಲು ರಾತ್ರಿ ಕಾಲು  ನಡಿಗೆಯಲ್ಲಿ ಊರಿಗೆ ಬಂದು ಆ ಹಣವನ್ನು ತನ್ನ ತಾಯಿಯ ಪಾದಗಳ ಮೇಲಿಟ್ಟು ಭಕ್ತಿಯಂದ ನಮಸ್ಕರಿಸಿದನು. ಓಂಕಾರನಾಥನಿಗೆ ಆಗ ಇನ್ನೂ ಎಂಟೋ ಒಂಬತ್ತೋ ವರ್ಷ ವಯಸ್ಸು,.

ಹಣವನ್ನು ತಾಯಿಯ ಪಾದಗಳ ಮೇಲಿಟ್ಟು ನಮಸ್ಕರಿಸಿದರು

ಸುಮಧುರ ಕಂಠ, ತೇಜಸ್ವಿಯಾಗಿ, ವರ್ಚಸ್ವಿಯಾದ ವ್ಯಕ್ತಿತ್ವ. ಸಂಗೀತದಲ್ಲಿ ತನ್ನನ್ನೂ, ಸುತ್ತಮುತ್ತ. ಜಗತ್ತನ್ನು ಮರೆತು ತಲ್ಲೀನನಾಗಿ ಹಾಡುವ ಪ್ರತಿಭೆಯಿಂದ ಈ ಪೋರ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದನು.

ಚಿಕ್ಕಂದಿನಿಂದಲೂ ಬೆಳೆದು ಬಂದ ಭಕ್ತಿ, ಭಾವಪರವಶತೆ, ಶ್ರದ್ಧೆಗಳೇ ಸಂಗೀತದಲ್ಲಿ ಹರಿದು ಬಂದು ಮುಂದೆ ಭಾರತದ ಪ್ರಖ್ಯಾತ ಸಂಗೀತಕಾರರಲ್ಲಿ ಅವರೂ ಒಬ್ಬರೆಂದು ಎಲ್ಲರೂ ಮಾನ್ಯ ಮಾಡುವಂತಾಯಿತು. ಆಳವಾದ ಸಂಗೀತ ಸಾಧನೆ, ಸಂಶೋಧನೆ, ಪ್ರಚಾರ, ಶಿಕ್ಷಣಗಳಿಗೆ ಆಯುಷ್ಯವನ್ನು ಅವರು ಧಾರೆಯೆರೆದರು.

ಓಂಕಾರನಾಥ ಠಾಕುರರು ಗುಜರಾತದವರು. ಬರೋಡ ಎಂಬ ಪಟ್ಣದ ಬಳಿ ಇರುವ ಜಹಾಜ್ ಗ್ರಾಮದಲ್ಲಿ ೧೮೯೭ರ ಜೂನ್ ೨೪ ರಂದು ಹುಟ್ಟಿದರು. ಓಂಕಾರನಾಥರ ಮನೆತನದವರು. ಅಷ್ಟೊಂದು ಅನುಕೂಲವಂತರಿರಲಿಲ್ಲ. ತಂದೆ ಗೌರೀಶಂಕರ ಠಾಕುರ್ ಸರಕಾರಿ ನೌಕರರು. ತಾಯಿ ಭವೇರಬಾ ಬಹಳ ಭಾವಿಕ ಹೆಣ್ಣು. ಅಜ್ಜ ಮಹಾಶಂಕರ ೧೮೫೭ರ ಪ್ರಥಮ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದರು. ಆ ಹೋರಾಟದ ಧೀರ ನಾಯಕ ತಾತ್ಯಾಟೋಪೆಯೊಂದಿಗೆ ಭುಜಕ್ಕೆ ಭುಜಕೊಟ್ಟು ಹೋರಾಡಿದ್ದರು. ಢಕಾಯಿತರನ್ನು ಪ್ರೀತಿ, ಅಹಿಂಸೆಗಳಿಂದ ಸರಿದಾರಿಗೆ ತಂದು ಬಾಳನ್ನು ನೇರವಾಗಿಸುವ ಸಮಾಜ ಸೇವೆಯಲ್ಲಿ ಗೌರೀಶಂಕರ್ ನಿರತರಾಗಿದ್ದರು. ಯೋಗಾಭ್ಯಾಸ ಮತ್ತು ಭಜನೆಗಳಲ್ಲಿ ಅವರು ಉಳಿದ ಸಮಯವನ್ನು ವಿನಿಯೋಗಿಸುತ್ತಿದ್ದರು. ಸಾತ್ವಿಕ ಗುಣಗಳಿಂದ ಕೂಡಿದ್ದರು.

ದೈವಿಕ ಚೈತನ್ಯ

ಗೌರೀಶಂಕರ ಮತ್ತು ಭವೇರಬಾ ದಂಪತಿಗಳಿಗೆ ಐವರು ಮಕ್ಕಳು ಬಾಲಕೃಷ್ಣ, ಪಾವ್ಥಿ, ರವಿಶಂಕರ, ಓಂಕಾರನಾಥ ಮತ್ತು ರಮೇಶಚಂದ್ರ ಕ್ರಮೇಣ ಗೌರೀಶಂಕರರಿಗೆ ಜೀವನದಲ್ಲಿ ವಿರಕ್ತಿ ಉಂಟಾಯಿತು. ನರ್ಮದಾ ನದೀ ತೀರದಲ್ಲಿ ಪರ್ಣಕುಟೀರ ಕಟ್ಟಿಕೊಂಡು ಅವರು ಯೋಗಾಭ್ಯಾಸ, ಭಗವಂತನ ನಾಮಸ್ಮರಣೆಗಳಲ್ಲಿ ಕಾಲಕಳೆದರು.

ತಂದೆ ತಾಯಿಯರ ಗುಣಗಳು, ದೈವಿಕ ಚೈತನ್ಯ ಬಾಲಕ ಓಂಕಾರನಾಥರ ಮೇಲೆ ಅದ್ಭುತ ಪರಿಣಾಮ ಮಾಡಿದುವು. ಅವರು ತನ್ನ ಕೋಮಲ ಸ್ವರದಿಂದ ಹಾಡುತ್ತ ಎಲ್ಲರಿಗೂ ಖುಷಿ ಮಾಡುತ್ತಿದ್ದರು. ಏಕಾಂಗಿಯಾಗಿ ಆಶ್ರಮದಲ್ಲಿ ಇರುತ್ತಿದ್ದ ಗೌರೀಶಂಕರರು ಓಂಕಾರನಾಥರನ್ನು ತನ್ನ ಬಳಿಯೇ ನಿಲ್ಲಿಸಿಕೊಂಡರು.

ತಾಯಿಯ ಮೇಲೆ ಓಂಕಾರನಾಥರಿಗೆ ಗಾಢವಾದ ಪ್ರೀತಿ. ಮನೆ ನೋಡಿಕೊಳ್ಳುವ ಜವಾಬ್ದಾರಿಯೆಲ್ಲ ಅವಳ ಮೇಲೆ ಬಿದ್ದಿತು. ಓಂಕಾರನಾಥ ತಾಯಿಗೂ ತುಂಬಾ ಸಹಾಯ ಮಾಡುತ್ತಿದ್ದರು. ಊರಲ್ಲಿ  ನೀರಿನ ತೊಂದರೆ. ದೂರದಿಂದ ನೀರು ಹೊತ್ತು ತರಬೇಕಾಗುತ್ತಿತ್ತು. ಬಾವಿಗಳೂ ಬಹಳ ಆಳವಾಗಿದ್ದವು. ಆ ಕೆಲಸವನ್ನು ಓಂಕಾರನಾಥ ವಹಿಸಿಕೊಂಡರು. ಇತರರ ಮನೆಗಳಿಗೆ ನೀರು ಸರಬರಾಜು ಮಾಡುವುದು, ಪರಿಚಾರಿಕೆ ಕೆಲಸ ಮಾಡುವುದು. ದಿನಚರಿಯಾಯಿತು. ಸಿಕ್ಕಿದ ಪುಡಿಗಾಸನ್ನು ತಪ್ಪದೆ ತಾಯಿಯ ಬಳಿ ತಂದು ಕೊಡುವರು. ಕೆಲವು ಕಾಲ ಚಿಕ್ಕ ಕಾರ್ಖಾನೆಯಲ್ಲೂ ಕೆಲಸ ಮಾಡಿ ಮನೆಗೆ ಸಹಾಯ ಮಾಡಿದರು.

ಸೇವೆ

ತನ್ನ ಭಜನೆ ಹಾಡುಗಾರಿಕೆಯನ್ನು ಮಾತ್ರ ಓಂಕಾರನಾಥ ಎಂದೂ ಮರೆಯಲಿಲ್ಲ. ತಾಯಿತಂದೆಯರ ಸೇವೆಯಲ್ಲಿ ಅವರಿಗೆ ಆನಂದ ಸಿಗುತ್ತಿತ್ತು. ತಂದೆಯ ಆಶ್ರಮದಲ್ಲಿ ಅನೇಕ ಸನ್ಯಾಸಿಗಳು, ವಿದ್ವಾಂಸರು ಬಂದು ವಿಚಾರ ವಿನಿಮಯ ಮಾಡುತ್ತಿದ್ದರು. ಅದನ್ನು ಮನಸ್ಸು ಕೊಟ್ಟು ಓಂಕಾರನಾಥ ಕೇಳುವರು. ಅವರಿಗೆ ಅದೇ ಒಳ್ಳೆಯ ಶಿಕ್ಷಣವಾಯಿತು.

ತನ್ನ ಹಾಡುಗಾರಿಕೆಯಿಂದ ಶಾಲೆಯಲ್ಲೂ ಓಂಕಾರನಾಥ ಎಲ್ಲರ ಮೆಚ್ಚುಗೆ ಪಾತ್ರವಾದರು. ಒಮ್ಮೆ ಓದಿದುದು, ಕೇಳಿದುದು ಅವರಿಗೆ ಬಾಯಿಪಾಠವಾಗಿ ಬಿಡುತ್ತಿತ್ತು. ಇಂಥ ಶಕ್ತಿಗೆ ಏಕಪಾಠಿ ಎನ್ನುತ್ತಾರೆ. ಊರಲ್ಲಿ ಎಲ್ಲಿ ಸಂಗೀತ ಕಾರ್ಯಕ್ರಮ ನಾಟಕ, ರಾಮಲೀಲೆಗಳಾದರೆ ಅಲ್ಲಿ ತಪ್ಪದೆ ಹಾಜರಾಗುತ್ತಿದ್ದರು. ಬಡತನದಿಂದ ಶಾಲಾ ಶಿಕ್ಷಣ ಮಾತ್ರ ಹೆಚ್ಚು ಮುಂದುವರಿಯಲಿಲ್ಲ.

ಚುರುಕಾಗಿ, ಲವಲವಿಕೆಯಿಂದ ಇರುತ್ತಿದ್ದ ಓಂಕಾರನಾಥರನ್ನು ಕಾರ್ಖಾನೆಯ ಮಾಲೀಕ ಸೇಠ ಶಾಪೂರಜಿ ಮಂಚೇರಜಿ ಡೂಂಗಾಜಿ ಸಾಕಲು ತೆಗೆದುಕೊಳ್ಳಬೇಕೆಂದು ಯೋಚಿಸಿದರು. ಆದರೆ ತಂದೆ ಇದಕ್ಕೆ ಒಪ್ಪಿಕೊಳ್ಳಲಿಲ್ಲ.

ಗೌರಿಶಂಕರರು ತೀರಿಕೊಂಡಾಗ ಓಂಕಾರನಾಥರಿಗೆ ಇನ್ನೂ ೧೩ ವರ್ಷ. ತನ್ನ ಸಾವಿನ ಬಗ್ಗೆ ಅವರು ಮೊದಲೇ ತಿಳಿದಿದ್ದರು. ದೀರ್ಘವಾಗಿ ಓಂಕಾರ ಹೇಳುತ್ತ ಶಾಂತಿಯಿಂದ ಅವರು ಪ್ರಾಣ ಬಿಟ್ಟಿದ್ದರು. ತಂದೆಯ ಸಾವು ಓಂಕಾರನಾಥರಿಗೆ ಮಾನಸಿಕ ಆಘಾತ ಮಾಡಿತ್ತು.

ಸೇಠ್ ಮಂಚೇರಜಿ ಸಹಾಯಕ್ಕೆ ಧಾವಿಸಿ ಬಂದರು. ಬಾಲಕನ ಹಾಡುವಿಕೆಗೆ ಮೊದಲೇ ಸೋತಿದ್ದರು. ಸಂಗೀತದಲ್ಲಿಯೇ ಈ ಹುಡುಗನ ಭವಿಷ್ಯವನ್ನು ಕಂಡುಕೊಂಡಿದ್ದರು. ಹುಟ್ಟು ಪ್ರತಿಭಾವಂತ ಓಂಕಾರನಾಥರಿಗೆ ಪ್ರೋತ್ಸಾಹ ಕೊಡಲು ಮುಂದೆ ಬಂದರು.

ಗುರುಕುಲ

ಗುರುವಿನ ಮನೆಯಲ್ಲಿ ಉಳಿದುಕೊಂಡು ಅವರ ಸೇವೆ ಹಾಗೂ ಮನೆಕೆಲಸಗಳನ್ನು ಮಾಡಿ ವಿದ್ಯೆ ಕಲಿಯುವ ಕ್ರಮಕ್ಕೆ ಗುರುಕುಲ ಶಿಕ್ಷಣವೆನ್ನುತ್ತಾರೆ. ವೇದ, ಉಪನಿಷತ್ತುಗಳ ಕಾಲದಿಂದ ಭಾರತದಲ್ಲಿ ಈ ಪರಂಪರೆ ನಡೆದು ಬಂದಿದೆ.

ಮುಂಬಯಿಯಲ್ಲಿ ಈ ಶತಮಾನದ ಆರಂಭದಲ್ಲಿ ಅಂಥ ಒಂದು ಗುರುಕುಲ ಸ್ಥಾಪನೆಯಾಗಿತ್ತು. ಋಷಿಗಳಂತೆ ದಿವ್ಯ ಜೀವನ ಮಾಡಿಕೊಂಡು ಸಂಗೀತ ವಿದ್ಯೆಯನ್ನು ತನ್ನ ಶಿಷ್ಯರಿಗೆ ಪಂಡಿತ ವಿಷ್ಣು ದಿಗಂಬರ ಪಲುಸ್ಕರ್ ಅವರು ಧಾರೆಯೆರೆಯುತ್ತಿದ್ದರು. ಅವರ ಗುರುಕುಲಕ್ಕೆ ’ಗಂಧರ್ವ ಮಹಾವಿದ್ಯಾಲಯ’ ಎಂಬ ಹೆಸರು. ಗಂಧರ್ವರೆಂದರೆ ದೈವಿಕ ಸಂಗೀತಗಾರರು.

ಗುರುಕುಲದಲ್ಲಿ ಊಟ, ವಸತಿ ಉಚಿತ. ವಿದ್ಯಾರ್ಥಿಯ ಬೌದ್ಧಿಕ, ಶಾರೀರಕ ಹಾಗೂ ಸಾಂಘಿಕ ವಿಕಾಸ ಮತ್ತು ಗುಣನಡತೆಗಳಿಗೆ ಇಲ್ಲಿ ಹೆಚ್ಚಿನ ಗಮನ ಕೊಡುತ್ತಿದ್ದರು. ಒಳ್ಳೆಯ ತರಬೇತಿ ಮಾಡುತ್ತಿದ್ದರು.

ಗಾಂಧರ್ವ ಮಹಾ ವಿದ್ಯಾಲಯದಲ್ಲಿ ಓಂಕಾರನಾಥರು ಸಂಗೀತ ಶಿಕ್ಷಣ ಕಲಿಯುವ ಏರ್ಪಾಡನ್ನು ಸೇಠ ಮಂಜೇರಜಿ ಮಾಡಿದರು. ಆ ಕಾಲದಲ್ಲಿ ಗುರುಕುಲ ಪದ್ಧತಿ ನಿಜಕ್ಕೂ ಕ್ರಾಂತಿಕಾರಿಯಾಗಿತ್ತು.

ಸಂಗೀತ ಕಲಿಯುವುದು, ನೃತ್ಯ ಮಾಡುವುದು, ನಾಟಕಗಳಲ್ಲಿ ಪಾತ್ರ ವಹಿಸುವುದು ಕೆಟ್ಟ ಚಾಳಿ ಎಂಬ ಕಲ್ಪನೆ ಮನೆ ಮಾಡಿಕೊಂಡಿದ್ದ ಕಾಲವದು. ಹೆಣ್ಣು ಮಕ್ಕಳಂತೂ ಸಂಗೀತ ಕಲಿಯುವುದದಕ್ಕೆ ಅವಕಾಶವೇ ಇರಲಿಲ್ಲ. ಈ ಲಲಿತಕಲೆಗಳಲ್ಲಿ ಮನಸ್ಸು ಹಾಕಿದರೆ ದಾರಿದ್ರ‍್ಯ ಬರುತ್ತದೆ ಎಂಬ ಮೂಢ ನಂಬಿಕೆಯೂ ಬಲವಾಗಿತ್ತು.

ಕಲಾವಿದರ ಪರಿಸ್ಥಿತಿ ಶೋಚನೀಯವಾಗಿತ್ತು. ಸಮಾಜದಲ್ಲಿ ಅವರಿಗೆ ಮರ್ಯಾದೆ ಇರಲಿಲ್ಲ. ಅವರು ಅಶಿಕ್ಷಿತರಾಗಿದ್ದರು. ಅವರಲ್ಲಿ ಎಲ್ಲ ಬಗೆಯ ಕೆಟ್ಟ ಹವ್ಯಾಸಗಳಿರುತ್ತವೆ ಎಂದು ಜನ ತಿಳಿದಿದ್ದರು. ಅವರ ಸ್ನೇಹವೆಂದರೆ ಜೀವನ ಹಾಳುಮಾಡಿಕೊಳ್ಳುವುದೇ ಎಂದು ಬಗೆದಿದ್ದರು.

ಈ ಬಗೆಯ ಸಾಮಾಜಿಕ ವಾತಾವರಣದಲ್ಲಿ ಸಂಗೀತ ಕಲೆಗೆ ಗೌರವ ಸ್ಥಾನ ತಂದುಕೊಡಲು ಪಂಡಿತ ಪಲುಸ್ಕರರು ಸತತ ಪ್ರಯತ್ನ ಮಾಡುತ್ತಿದ್ದರು.

ಗುರು ಪಲುಸ್ಕರ್

ಮಹಾರಾಷ್ಟ್ರದ ವಿಷ್ಣು ದಿಗಂಬರ ಪಲುಸ್ಕರ್ ಅವರಿಗೆ ಚಿಕ್ಕಂದಿನಲ್ಲಿ ದೀಪಾವಳಿಯಂದು ಪಟಾಕಿಯೊಂದು ಮುಖದ ಹತ್ತಿರ ಒಡೆದು ದೃಷ್ಟಿ ಮಂದವಾಗಿ ಬಿಟ್ಟಿತ್ತು. ಹಾಗಾಗಿ ಈ ಹುಡುಗ ಸಂಗೀತವನ್ನಾದರೂ ಕಲಿಯಲಿ ಎಂದು ತಂದೆ ಖ್ಯಾತ ಸಂಗೀತಗಾರ ಬಾಲಕೃಷ್ಣ ಬುವಾ ಇಚಲಕರಂಜಿಕರ್ ಬಳಿ ಬಿಟ್ಟಿದ್ದರು.

ಸಂಗೀತ ಶಿಕ್ಷಣ ನಡೆಯುತ್ತಿದ್ದಂತೆ ಪಲುಸ್ಕರರ ಮನಸ್ಸಿನಲ್ಲಿ ಚಳವಳಿ ನಡೆಯಿತು. ಮುಘಲರ ಕಾಲದಿಂದ ಭಾರತೀಯ ಸಂಗೀತದಲ್ಲಿ ಅನೇಕ ಬದಲಾವಣೆಗಳಾಗಿದ್ದವು. ದೈವಿಕವಾಗಿದ್ದ ಸಾತ್ವಿಕ ಸಂಗೀತ ಖುಷಿ ಪಡಲು ಒಂದು ಸಾಧನವಾಗಿ ಹೋಗಿತ್ತು.

ಸಂಗೀತ ಇರುವುದು ಖುಷಿ ಕೊಡುವುದಕ್ಕೆ ಮಾತ್ರ ಎಂಬ ಕಲ್ಪನೆಯನ್ನು ಹೇಗೆ ಹೋಗಲಾಡಿಸುವುದು? ಹಿಂದಿನಂತೆಯೇ ದೈವಿಕ ಚೈತನ್ಯ ತುಂಬಿಸಿದರೆ ಮಾತ್ರ ಭಾರತೀಯ ಸಂಗೀತದ ಉದ್ಧಾರವಾಗಿ ಅದಕ್ಕೂ ಗೌರವಸ್ಥಾನ ಸಿಕ್ಕುವುದು ಎಂದು ಅವರು ಕಂಡು ಕೊಂಡರು.

ಪಲುಸ್ಕರರು ಭಕ್ತಿ ಸಂಗೀತವನ್ನು ಪ್ರಚಾರಗೊಳಿಸಿದರು. ಅದರಿಂದಲೇ ಜನಪ್ರಿಯರಾದರು. ಅವರು ೧೯೦೧ರಲ್ಲಿ ಲಾಹೋರಿನಲ್ಲಿ ’ಗಾಂಧರ್ವ ಮಹಾ ವಿದ್ಯಾಲಯ’ ಆರಂಭಿಸಿದ ಉದ್ಧೇಶವೂ ಭಕ್ತಿ ಸಂಗೀತ ಪ್ರಚಾರವೇ ಆಗಿತ್ತು. ತನ್ನ ಆಯುಷ್ಯದ ಗಳಿಕೆಯನ್ನೆಲ್ಲ ಇದಕ್ಕಾಗಿಯೇ ಮುಡಿಪಾಗಿಟ್ಟರು. ನೂರಾರು ವಿದ್ಯಾರ್ಥಿಗಳು ಬಂದು ಅವರ ಕನಸು ನನಸಾಗುವಂತಾಯಿತು.

ಗಾಂಧರ್ವ ಮಹಾವಿದ್ಯಾಲಯ

ಭಾರತದ ಬೇರೆ ಬೇರೆ ಕೇಂದ್ರಗಳಲ್ಲಿ ಗಾಂಧರ್ವ ಮಹಾವಿದ್ಯಾಲಯದ ಶಾಖೆಗಳನ್ನು ತೆಗೆಯುವುದೆಂದು ಯೋಚಿಸಿದರು. ಮುಂಬಯಿಯಲ್ಲಿ ೧೯೦೮ರಲ್ಲಿ ಒಂದು ಶಾಖೆ ಆರಂಭಗೊಂಡಿತು. ಲಾಹೋರಿಗಿಂತ ಇಲ್ಲಿ ಹೆಚ್ಚಿನ ಪ್ರೋತ್ಸಾಹ ದೊರೆಯಿತು.

ಭಕ್ತಿಪೂರ್ವಕವಾಗಿ ಪಲುಸ್ಕರರು ಹಾಡುತ್ತಿದ್ದ ’ರಘುಪತಿ ರಾಘವ ರಾಜಾರಾಮ್, ಪತಿತ ಪಾವನ ಸೀತಾರಾಮ್’ ಭಜನೆ ಮನೆಮನೆಗಳಲ್ಲೂ ಪ್ರತಿಧ್ವನಿಸಿತು.  ಸಮೂಹ ಗಾನದ ಅದ್ಭುತ ಶಕ್ತಿಯನ್ನು ಅವರು ತೋರಿಸಿಕೊಟ್ಟರು. ಮುಂದೆ ರಾಷ್ಟ್ರದ ಸ್ವಾತಂತ್ರ‍್ಯ ಚಳವಳಿಯಲ್ಲೂ ಅವರ ಹಾಡುಗಳು ಜನರನ್ನು ಒಂದುಗೂಡಿಸಿ ಹುರಿದುಂಬಿಸಿದವು.

ಪಲುಸ್ಕರರು ಸ್ವತಃ ಒಳ್ಳೆಯ ಹಾಡುಗಾರರು ಮಾತ್ರವಲ್ಲ, ಮಹಾ ಸಂಗೀತ ವಿದ್ವಾಂಸರೂ ಆಗಿದ್ದರು. ಅವರು ತಮ್ಮದೇ ಆದ ವಿನೂತನ ಸ್ವರಲಿಪಿಯನ್ನು ರಚಿಸಿದರು. ಸಂಗೀತದ ಬಗ್ಗೆ ಸುಮಾರು ೫೦ ಗ್ರಂಥ ಬರೆದರು. ಶಾ‌ಸ್ತ್ರೀಯ, ರಾಷ್ಟ್ರೀಯ, ಬಾಲಕ, ಮಹಿಳಾ ವ್ಯಾಯಾಮ ಮೊದಲಾಗಿ ಪ್ರತ್ಯೇಕ ಸಂಗೀತ ಪುಸ್ತಕ ಬರೆದರು. ಶಾಸ್ತ್ರೀಯ, ರಾಷ್ಟ್ರೀಯ, ಬಾಲಕ, ಮಹಿಳಾ, ವ್ಯಾಯಾಮ ಮೊದಲಾಗಿ ಪ್ರತ್ಯೇಕ ಸಂಗೀತ ಪುಸ್ತಕ ಬರೆದು ಈ ವಿದ್ಯೆ ಎಲ್ಲರಿಗಾಗಿಯೂ ಇದೆ ಎಂದು ತಿಳಿಯಪಡಿಸಿದರು. ’ಸಂಗೀತಾಮೃತ ಪ್ರವಾಹ’ ವೆಂಬ ಪತ್ರಿಕೆ ನಡೆಸಿದರು.

ಅವರಲ್ಲಿ ಕಲಿತವರು ಅನೇಕರು ಖ್ಯಾತ ಸಂಗೀತಗಾರರಾದರು. ಪಂಡಿತ ವಿನಾಯಕರಾವ್ ಪಟವರ್ಧನ್, ಪಂಡಿತ ವಾಮನ್ ರಾವ್ ಪಾಧ್ಯೆ, ನಾರಾಯಣರಾವ್ ವ್ಯಾಸ್, ದೇವಧರ್ ಮೊದಲಾದವರು ಅವರ ಶಿಷ್ಯರು.

ಪರೀಕ್ಷೆ

ಪಲುಸ್ಕರರು ತಮ್ಮ ವಿದ್ಯಾಲಯಕ್ಕೆ ಬರುವ ವಿದ್ಯಾರ್ಥಿಗಳ ಸತ್ವ ಪರೀಕ್ಷೆ ನಡೆಸಿಯೇ ಒಳ ಸೇರಿಸುತ್ತಿದ್ದರು. ಓಂಕಾರನಾಥರ ಸುಮಧುರ  ಶ್ರುತಿಬದ್ಧ ಕಂಠ, ಹಾಡುಗಾರಿಕೆಯಲ್ಲಿದ್ದ ಭಾವರಸ ತನ್ಮಯತೆಗಳನ್ನು ಕಂಡು ಅವರು ಮಾರು ಹೋದರು.

ಶಾಸ್ತ್ರೀಯ ಸಂಗೀತದ ಕುರಿತು ಓಂಕಾರನಾಥರ ಅಣ್ಣ ಬಾಲಕೃಷ್ಣನಿಗೆ ಹೆಚ್ಚಿನ ಆದರವಿರಲಿಲ್ಲ. ಹಣ ತರುವ ಯಾವುದಾದರೊಂದು ಉದ್ಯೋಗ ಒಳ್ಳೆಯದೆಂದು ಆತ ಭಾವಿಸಿದ್ದ. ಕಾಥೇವಾಡದ ನಾಟಕ ಕಂಪೆನಿಯೊಂದರಲ್ಲಿ ತಿಂಗಳಿಗೆ ನಾಲ್ಕನೂರು ರೂಪಾಯಿ ಸಂಬಳ ಸಿಕ್ಕುವಂತೆ ವ್ಯವಸ್ಥೆ ಮಾಡಿ ಬಂದ.

ಓಂಕಾರನಾಥರಿಗೆ ಧರ್ಮಸಂಕಟಕ್ಕಿಟ್ಟುಕೊಂಡಿತು. ಆಗಲೇ ಶಾಸ್ತ್ರೀಯ ಸಂಗೀತದ ರುಚಿ ಅವರಿಗೆ ಹಿಡಿದುಬಿಟ್ಟಿತು. ಆದರೆ ಅಣ್ಣನ ಹಟ ಮತ್ತು ಬಲವಂತಕ್ಕೇನು ಮಾಡುವುದು? ಈ ಸಮಸ್ಯೆಯಿಂದ ತನ್ನನ್ನು ಹೇಗಾದರೂ ತಪ್ಪಿಸಬೇಕೆಂದು ಗುರುಗಳಲ್ಲಿ ಮೊರೆಯಿಟ್ಟರು.

ಪಲುಸ್ಕರರು ಒಂದು ಉಪಾಯ ಹೂಡಿದರು. ಗುರುಕುಲಕ್ಕೆ ಸೇರುವಾಗ ಮಾಡಿಕೊಂಡ ಆರುವರ್ಷಗಳ ಕರಾರನ್ನು ಬಾಲಕೃಷ್ಣ ಮುರಿದರೆ ಮೂರು ವರ್ಷಗಳ ಖರ್ಚು ವೆಚ್ಚ ಕೊಡಬೇಕು ಎಂದು ಹೇಳಿದರು. ಅಷ್ಟು ಹಣ ಬಾಲಕೃಷ್ಣನಲ್ಲಿರಲಿಲ್ಲ. ಆತ ಪೆಚ್ಚಾಗಿ ಹಿಂದಿರುಗಿದ.

ಅಡೆತಡೆಯಿಲ್ಲದೆ ಓಂಕಾರನಾಥರ ಸಂಗೀತ ಶಿಕ್ಷಣ ಮುಂದುವರಿಯಿತು. ಐದು ವರ್ಷಗಳಲ್ಲಿ ಕಲಿಯುವುದನ್ನು ಮೂರೇ ವರ್ಷಗಳಲ್ಲಿ ಮುಗಿಸಿಬಿಟ್ಟರು. ದಿನಕ್ಕೆ ಸರಾಸರಿ ಆರೆಂಟು ಗಂಟೆ ಎಡೆಬಿಡದೆ ಅಭ್ಯಾಸ ಮಾಡುತ್ತಿದ್ದರು. ಅವರ ಕಂಠ ಇನ್ನೂ ದಿವ್ಯವಾಗಿ, ಶ್ರೀಮಂತವಾಯಿತು.

ಹಾಡುವಿಕೆಯ ಜತೆ ಅವರು ಪಖಾವಜವೆಂಬ ಪಕ್ಕವಾದ್ಯ ನುಡಿಸಲು ಕಲಿತರು. ಮೃದಂಗದಂತೆಯೇ ಇರುವ ತಾಲವಾದ್ಯವಿದು.

ಸಪ್ತಕ

ಭಾರತೀಯ ಸಂಗೀತ ನಿಸರ್ಗದಿಂದಲೇ ಹುಟ್ಟಿಕೊಂಡಿತು. ಸರಿಗಮಪದನಿ ಎಂಬ ಏಳು ಸ್ವರಗಳನ್ನು ಸಪ್ತಕವೆನ್ನುತ್ತಾರೆ. ಈ ಸ್ವರಗಳ ಉಗಮ ಸ್ವಾರಸ್ಯಕರವಾಗಿದೆ.

’ಸ’ (ಷಡ್ಜ) ನವಿಲಿನಿಂದ, ’ರಿ’ (ಋಷಭ) ಚಾತಕ ಪಕ್ಷಿಯಿಂದ, ’ಗ’ (ಗಂಧಾರ), ಮೇಕೆಯಿಂದ ’ಮ (ಮಧ್ಯಮ), ಕಾಗೆಯಿಂದ ’ಪ’ (ಪಂಚಮ) ಕೋಗಿಲೆಯಿಂದ ’ಧ’ (ಧೈವಕ) ಕಪ್ಪೆಯಿಂದ ಹಾಗೂ ’ನಿ’ ನಿಷಾದ ಆನೆಯಿಂದ ಬಂದುದು ಎಂಬುದು ಪ್ರತೀತಿ.

ಮಾನವನ ಸ್ವರವು ಇಂಥ ಸಪ್ತಕದ ಮೂರು ಸ್ತರಗಳ ಮಿತಿಯೊಳಗೆ ಸಂಚಾರ ಮಾಡಬಲ್ಲದು. ಕೆಳಗಿನ ಸಪ್ತಕಕ್ಕೆ ’ಮಂದ್ರ, ನಡುವಿನದಕ್ಕೆ ಮಧ್ಯ ಹಾಗೂ ಮೇಲಿನದಕ್ಕೆ ತಾರಾ ಸಪ್ತಕವೆಂದು ಹೆಸರು. ಈ ಮೂರೂ ಸಪ್ತಕಗಳಲ್ಲಿ ಸ್ವರ ಸಂಚಾರ ಮಾಡಬಲ್ಲವರು ವಿರಳ. ಓಂಕಾರನಾಥ ಠಾಕೂರರು ಮೂರು ಸಪ್ತಕಗಳಲ್ಲೂ ಅನಾಯಾಸವಾಗಿ ಹಾಡುವ ಸಿದ್ಧಿ ಮಾಡಿಕೊಂಡರು.

ಪ್ರಗತಿ

ಶಿಷ್ಯನ ಪ್ರಗತಿ ಕಂಡು ಗುರು ಪಲುಸ್ಕರರಿಗೆ ಅತೀವ ಅಭಿಮಾನವೆನಿಸಿತು. ಲಾಹೋರದಲ್ಲಿರುವ ತನ್ನ ಮೂಲ ಮಹಾವಿದ್ಯಾಲಯದಲ್ಲಿ ಓಂಕಾರನಾಥರನ್ನು ಪ್ರಾಚಾರ್ಯರನ್ನಾಗಿ ನೇಮಿಸಿದರು. ಓಂಕಾರನಾಥರಿಗೆ ಆಗ ೧೯  ವರ್ಷ ವಯಸ್ಸು ಅಷ್ಟೆ.

ಶಿಕ್ಷಕರಾಗಿಯೂ ಓಂಕಾರನಾಥರು ಬೇಗನೆ ಜನಪ್ರಿಯರಾದರು. ಅವರ ಇಂಪಾದ ಕಮಠ, ಸವಿಯಾದ ಮಾತುಗಳಿಗೆ ಯಾರೂ ಒಲಿದು ಬಿಡುತ್ತಿದ್ದರು. ಅವರು ವಿನಯಶಾಲಿಯಾಗಿದ್ದರು. ಶಿಕ್ಷಣದ ಕೆಲಸ ಮುಗಿದ ಬಳಿಕ ಸ್ವತಃ ತಾವೂ ಆರು ಎಂಟು ಗಂಟೆ ಸಂಗೀತಾಭ್ಯಾಸ ಮಾಡುವುದು ಓಂಕಾರನಾಥರ ನಿತ್ಯನಿಯಮವಾಗಿದ್ದಿತು. ಜೀವನವಿಡೀ ಕಲಿಯುತ್ತ ಇರಬೇಕು ಎಂಬುದು ಅವರ ನಂಬಿಕೆಯಾಗಿತ್ತು.

ಲಕ್ಷಾಂತರ ಮಂದಿಗಳಲ್ಲಿ ಒಬ್ಬನಿಗೆ ಸುಮಧುರ ಕಂಠವಿರುವುದು ದೈವದತ್ತ ವರ. ಆದರೆ ಆ ಕಂಠದ ಮಾಧುರ‍್ಯವನ್ನು ಕಾಪಾಡಿಕೊಂಡು ಅದನ್ನು ಇನ್ನೂ ಇಂಪಾಗಿ ಮಾಡುವುದು ಪುರುಷ ಪ್ರಯತ್ನ. ಶಿಕ್ಷಕನಾದೊಡನೆ ಕಲಿಯುವುದು ಮುಗಿಯಿತು ಎಂದು ಅವರು ತಿಳಿಯಲಿಲ್ಲ. ಸಾಧನೆ ಮುಂದುವರಿಸಿದರು.

ಲಾಹೋರಿನಲ್ಲಿದ್ದಾಗ ಅಲ್ಲಿಯ ಪಂಜಾಬಿ ಹೆಣ್ಣು ಮಕ್ಕಳೂ ಮುಂದೆ ಬಂದು ಸಂಗೀತ ಕಲಿಯುವಂತೆ ಓಂಕಾರನಾಥರು ಪ್ರೋತ್ಸಾಹಿಸಿದರು. ನಾಲ್ಕು ವರ್ಷ ಲಾಹೋರ್ ನಲ್ಲಿ ನಿಂತು ಹಲವು ಸುಧಾರಣೆಗಳನ್ನು ಮಾಡಿದರು. ಬಳಿಕ ಗುಜರಾತದ ಬ್ರೋಚ್ ಹಾಗೂ ಸೂರತ್ ಗಳಲ್ಲಿ ಗಾಂಧರ್ವ ನಿಕೇತನ ಆರಂಭಿಸಿದರು.

ವಂದೇ ಮಾತರಂ

ಸ್ವಾತಂತ್ರ‍್ಯ ಚಳುವಳಿಯ ಬಿಸಿ ಓಂಕಾರನಾಥರಿಗೂ ತಗುಲಿತು.  ತಮ್ಮ ಸಂಗೀತದಿಂದ ಜನರಲ್ಲಿ ಅಡಗಿದ್ದ ರಾಷ್ಟ್ರಭಕ್ತಿಯನ್ನು ಬಡಿದೆಬ್ಬಿಸಲು ಅವರು ಪ್ರಯತ್ನಿಸಿದರು. ಜನಜಾಗೃತಿಯಲ್ಲಿ ಅವರು ಸಮರ್ಥವಾಗಿ ಪ್ರಯೋಗಿಸಿದ ಅಸ್ತ್ರವೆಂದರೆ ಕವಿ ಬಂಕಿಮಚಂದ್ರ ಚಟರ್ಜಿ ಬರೆದು ಆಗಲೇ ರಾಷ್ಟ್ರಗೀತೆಯಾದ ’ವಂದೇ ಮಾತರಂ’ ಹಾಡು. ಎಲ್ಲರ ನಾಲಗೆಯಲ್ಲೂ ಅದು ನಲಿಯಿತು.

ಭಾವಪೂರ್ಣವಾಗಿ ಓಂಕಾರನಾಥರು ಹಾಡಿದ ’ವಂದೇ ಮಾತರಂ’ ಎಲ್ಲೆಲ್ಲೂ ವಿದ್ಯುತ್ ಸಂಚಾರ ಮಾಡಿತು. ಮಹಾತ್ಮಾಗಾಂಧಿ, ವಲ್ಲಭಾಯಿ ಪಟೇಲ್, ಜವಾಹರಲಾಲ ನೆಹರೂ ಮೊದಲಾದ ರಾಷ್ಟ್ರ ನಾಯಕರು ಅವರ ವಂದೇ ಮಾತರಂ ಕೇಳಿ ರೋಮಾಂಚಿತರಾದರು.

ವಲ್ಲಭಭಾಯಿ ಪಟೇಲರ ಅಪೇಕ್ಷೆಯಂತೆ ೧೯೪೭ರ ಆಗಸ್ಟ್ ೧೫ ರಂದು ಭಾರತ ಸ್ವತಂತ್ರವಾದಾಗ ದೆಹಲಿಯ ಕೆಂಪುಕೋಟೆಯಿಂದ ಅವರು ಹಾಡಿದ ವಂದೇ ಮಾತರಂ ರೇಡಿಯೋ ಮೂಲಕ ಇಡೀ ರಾಷ್ಟ್ರ ಕೇಳಿತು.

ರಾಜಕಾರಣದಲ್ಲಿ ಓಂಕಾರನಾಥರಿಗೆ ಆಸಕ್ತಿಯಿರಲಿಲ್ಲ. ಆದರೆ ದೇಶಭಕ್ತಿ ಕಡಿಮೆ ಇರಲಿಲ್ಲ. ಅವರು ಬ್ರೋಚ್ ಜಿಲ್ಲಾ ಕಾಂಗ್ರೆಸ್ ಸದಸ್ಯರಾದರು. ಗುಜರಾತ ಪ್ರಾಂತೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಗೊಂಡರು. ರಾಜಕಾರಣಕ್ಕೆ ಅವರು ಪ್ರವೇಶಿಸುವುದು ಬೇಡವೆಂದು ಮಹಾತ್ಮಾಗಾಂಧಿ ಹಿತ ನುಡಿದರು. ಇದು ಸಂಗೀತಕ್ಕಾದ ದೊಡ್ಡ  ಲಾಭ.

ಯೋಗಾಭ್ಯಾಸ

ಕುಸ್ತಿ ಆಡುವುದು, ಯೋಗಾಭ್ಯಾಸ ಮಾಡುವುದು ಓಂಕಾರನಾಥರಿಗೆ ತಂದೆಯಿಂದ ಬಳುವಳಿಯಾಗಿ ಬಂದ ಹವ್ಯಾಸಗಳಾಗಿದ್ದವು. ಅವರು ಪ್ರಾಣಾಯಾಮ ಮಾಡುತ್ತಿದ್ದರು. ಪ್ರತಿದಿನ ೨೫೦ ದಂಡ – ಬೈಠಕ್ ಗಳನ್ನು ತೆಗೆಯುತ್ತಿದ್ದರು. ರಾಜಕಾರಣಿ – ತತ್ವಜ್ಞಾನಿ ಅರವಿಂದ ಘೋಷರ ಜತೆ ಪತ್ರ ವ್ಯವಹಾರ ನಡೆಸಿದ್ದರು.

ಸೂರತ್ ನ ಸೇಠ್ ಪ್ರಹ್ಲಾದ ದಲ್ ಸುಖರಾಮ್ ಭಟ್ ರವರ ಪುತ್ರಿ ಇಂದಿರಾದೇವಿಯೊಂದಿಗೆ ಓಂಕಾರನಾಥರ ವಿವಾಹ ನಡೆಯಿತು. ಆಕೆ ಪತಿಪರಾಯಣೆ, ಪತಿಯ ಜೀವನ ಸಾಧನೆಗಳಲ್ಲಿ ಎಲ್ಲ ರೀತಿಗಳಲ್ಲಿ ಸಹಕರಿಸಿದಳು.

ಓಂಕಾರನಾಥರು ಗುರು ವಿಷ್ಣು ದಿಗಂಬರ ಪಲುಸ್ಕರರೊಡನೆ

ನೇಪಾಳದ ಆಗಿನ ಅರಸು ಚಂದ್ರಸಮೇರ ಜಗಬಹದ್ದೂರ್ ಸಂಗೀತ ಪ್ರೇಮಿ, ರಸಿಕರಾಗಿದ್ದರು. ಅವರಲ್ಲಿ ತನ್ನ ಅದೃಷ್ಟವನ್ನು ಅರಸಿಕೊಂಡು ಓಂಕಾರನಾಥರು ತಮ್ಮ ರಮೇಶಚಂದ್ರನ ಜೊತೆ ಹೊರಟರು. ನೂರಾರು ಮೈಲಿ ಕಾಲ್ನಡಿಗೆಯಲ್ಲಿ ಮಹಾಯಾತ್ರೆಯಾಯಿತು. ಅವರ ಜತೆಯವರು ಮಾಂಸಾಹಾರಿಗಳಾಗಿದ್ದುದರಿಂದ ಕಡಲೆ, ಬೆಲ್ಲ ತಿಂದು ಅವರು ದಿನ ಕಳೆಯಬೇಕಾಯಿತು.

ಬರೋಡದ ದಿವಾನ್ ಮನುಭಾಯಿ ಮೆಹತಾರವರಿಂದ ಪರಿಚಯ ಪತ್ರ ತಂದುದರಿಂದ ಓಂಕಾರನಾಥರಿಗೆ ನೇಪಾಳದಲ್ಲಿ ರಾಜಾತಿಥ್ಯವಾಯಿತು. ಕೆಲವು ಸಂಗೀತ ಕಾರ್ಯಕ್ರಮಗಳು ಆದವು. ರಾಜರೂ ಮೆಚ್ಚಿಕೊಂಡರು. ರಾಜಸನ್ಮಾನವಾಯಿತು. ಆಸ್ಥಾನ ಗಾಯಕರಾಗಿ ಇರಬೇಕೆಂದು ಅರಸರು ಆಗ್ರಹ ಪಡಿಸಿದರು. ಆದರೆ ಸ್ವತಂತ್ರ ಪ್ರವೃತ್ತಿಯ ಓಂಕಾರನಾಥ ಆಸೆಗೆ ಬಲಿ ಬೀಳಲಿಲ್ಲ. ಮನೆಗೆ ಮರಳಿದರು.

ನೇಪಾಳದಲ್ಲಿ ತನಗೆ ದೊರೆತ ಬಿರುದು, ಬಾವಲಿ ಪ್ರಶಸ್ತಿ, ಧನಕನಕವನ್ನೆಲ್ಲ ತಂದು ತಾಯಿಯ ಚರಣಗಳಲ್ಲಿ ಅರ್ಪಿಸಿದರು,

ವಿಜಯ ಮಾಲೆ

ಭಾರತದ ಹಲವು ಕೇಂದ್ರಗಳಲ್ಲಿ ಓಂಕಾರನಾಥರ ಕಾರ‍್ಯಕ್ರಮಗಳಾದವು. ಅವರು ಖ್ಯಾತಿ ದೇಶದಲ್ಲೆಲ್ಲ ಹಬ್ಬಿತು. ನೇಪಾಳದ ಅರಸರ ವಿವಾಹವು ೧೯೩೦ರಲ್ಲಿ ನಡೆದಾಗ ಅವರಿಗೆ ಆಮಂತ್ರಣ ಹೋಯಿತು.

ನೇಪಾಳದ ರಾಜಾಶ್ರಯದಲ್ಲಿದ್ದ ಸಂಗೀತಗಾರರೊಬ್ಬರು ಓಂಕಾರನಾಥರನ್ನು ಹಾಗೂ ಅವರ ಗುರುಗಳನ್ನು ಅವಮಾನಿಸುವಂತೆ ಮಾತನಾಡಿದರು. ಭಾರತೀಯ ಸಂಗೀತವನ್ನು ಅವರಿಬ್ಬರೂ ಕಲುಷಿತಗೊಳಿಸುತ್ತಾರೆಂದು ಸಿಕ್ಕಾಪಟ್ಟೆ ನಿಂದಿಸಿದರು.

ಈ ಉದ್ಧಟನಿಗೆ ಸಂಗೀತದ ಮೂಲಕವೇ ಉತ್ತರ ಕೊಡಬೇಕು ಎಂದು ಯೋಚಿಸುವುದರೊಳಗೆ ಆತ ಪಂಥ ಕಟ್ಟಿ ಬಿಟ್ಟಿದ್ದ. ಮುಖಾಮುಖಿ ನಡೆದ ಸಂಗೀತ ಸ್ಪರ್ಧೆಯಲ್ಲಿ ಓಂಕಾರನಾಥರು ಗೆದ್ದರು. ಅರಸರಿಗೆ ತುಂಬ ಸಂತೋಷವಾಗಿ ವಿಜಯಮಾಲೆ, ಪ್ರಶಸ್ತಿ ದಯಪಾಲಿಸಿದರು.

ಇದೇ ಸಂದರ್ಭದಲ್ಲಿ ತೀರ್ಥಯಾತ್ರೆ ಮಾಡಿಕೊಂಡು ದೇಶ ಸುತ್ತುತ್ತಿದ್ದ ಗುರು ಪಲುಸ್ಕರರೂ ನೇಪಾಳಕ್ಕೆ ಬಂದಿದ್ದರು. ಅವರಲ್ಲಿ ಕೂಡಲೇ ಧಾವಿಸಿ ತನಗೆ ದೊರೆತ ಪ್ರಶಸ್ತಿ, ಗೌರವ ಹಾರ ತುರಾಯಿಗಳನ್ನೆಲ್ಲ ಅವರ ಚರಣಗಳಲ್ಲಿ ಇಟ್ಟುಬಿಟ್ಟರು. ತನ್ನ ಗುರುಕಾಣಿಕೆ ಸ್ವೀಕರಿಸಬೇಕೆಂದು ಓಂಕಾರನಾಥರು ಪ್ರಾರ್ಥಿಸಿದರು. ಶಿಷ್ಯನ ಸೌಜನ್ಯ, ವಿಜಯ ಕಂಡು ಗುರುಗಳು ಅಪ್ಪಿಕೊಂಡರು.

ಮುಂದಿನ ವರ್ಷವೇ ಗುರು ಪಲುಸ್ಕರ್ ತೀರಿಕೊಂಡರು. ನಷ್ಟಕ್ಕೊಳಗಾಗಿ ಅವರ ವಿದ್ಯಾಲಯಗಳೆಲ್ಲ ಮುಚ್ಚಿದರೂ ಸಂಗೀತವಾಹಿನಿ ಎಲ್ಲೆಲ್ಲೂ ಹರಿದಾಡುತ್ತಿತ್ತು. ಗುರುವಿನ ಜೀವನ ಉದ್ದೇಶವನ್ನೂ ಈಡೇರಿಸುವುದೇ ತನ್ನ ಬಾಳಿನ ಗುರಿ ಎಂದು ಓಂಕಾರನಾಥರು ನಿರ್ಧರಿಸಿದರು. ಶುದ್ಧ ಭಾರತೀಯ ಸಂಗೀತ ಪ್ರಚಾರಕ್ಕೆ ಕಂಕಣಬದ್ಧರಾಧರು.

ವಿಜಯ ಯಾತ್ರೆ

ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ನಮ್ಮ ಸಂಗೀತದ ಮಹತ್ವವನ್ನು ಪ್ರಚಾರಗೊಳಿಸಬೇಕೆಂಬ ಸಂಕಲ್ಪವನ್ನು ಮಾಡಿದರು ಓಂಕಾರನಾಥರು. ಅವರು ಮೊದಲು ಇಂಗ್ಲೀಷ್ ಕಲಿತರು.

ಇಟಲಿಯ ಫ್ಲಾರೆನ್ಸ್ ನಗರದಲ್ಲಿ ೧೯೩೩ರಲ್ಲಿ ನಡೆದ ಅಂತರರಾಷ್ಟ್ರೀಯ ಸಂಗೀತ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೋದ ಅವರ ಪ್ರವಾಸ ಒಂದು ವಿಜಯಯಾತ್ರೆಯೇ ಆಯಿತು.

ಅವರ ದೈವಿಕ ಸಂಗೀತ ಕೇಳಿ, ಕಲ್ಲು ಹೃದಯದವನೆಂದು ಖ್ಯಾತಿವೆತ್ತ ಇಟಲಿಯ ಸರ್ವಾಧಿಕಾರಿ ಬೆನಿಟೋ ಮುಸೋಲಿನಿ ಕೂಡ ಮಂತ್ರಮುಗ್ಧನಾಗಿ ಬಿಟ್ಟ. ಅಲ್ಲಿಯ ರಾಯಲ್ ಅಕಾಡೆಮಿ ಆಫ್ ಮ್ಯೂಸಿಕ್ ಸಂಸ್ಥೆ ಸ್ವರಲಿಪಿ ತಯಾರಿಸಿ ಕೊಡಲು ಓಂಕಾರನಾಥರನ್ನು ವಿನಂತಿಸುದುದೇ ಭಾರತೀಯ ಸಂಗೀತ ಜ್ಞಾನಕ್ಕೆ ಸಂದ ಮಹಾಗೌರವವಾಗಿತ್ತು.

ಜರ್ಮನಿ, ಹಾಲೆಂಡ್, ಬೆಲ್ಜಿಯಂ, ಫ್ರಾನ್ಸ್, ಸ್ವಿಟ್ಜರ್ ಲ್ಯಾಂಡ್, ಇಂಗ್ಲೆಂಡ್ ಮೊದಲಾದ ದೇಶಗಳಿಗೆ ಹೋಗಿ ಹಲವು ಸಂಗೀತ ಕಛೇರಿಗಳನ್ನು ಕೊಟ್ಟರು. ಭಾರತೀಯ ಸಂಗೀತದ ಕುರಿತು ಭಾಷಣ ಮಾಡಿದರು. ವಿದ್ವಾಂಸರ ಜತೆ ವಿಚಾರ ವಿನಿಮಯ ನಡೆಸಿದರು. ಭಾರತೀಯ ಸಂಗೀತ ಇಲ್ಲಿಯ ಜನ ಜೀವನದೊಂದಿಗೆ ಹೇಗೆ ಒಂದಾಗಿ ಬೆರೆತಿದೆ ಎಂಬುದನ್ನು ಅವರು ಸುಂದರ ಕತೆಗಳ ಉದಾಹರಣೆಯೊಂದಿಗೆ ವಿವರಿಸುತ್ತಿದ್ದರು.

ದೇಶಾಭಿಮಾನ

ನಮ್ಮ ಸಂಗೀತ ಎಷ್ಟೊಂದು ಸಮೃದ್ಧವಾಗಿದೆ ಎಂಬುದು ಪಾಶ್ಚಾತ್ಯ ವಿದ್ವಾಂಸರಿಗೂ ಸಂಗೀತಕಾರರಿಗೂ ಸ್ಪಷ್ಟವಾಗಿ ತಿಳಿದಿರಲಿಲ್ಲ. ಅವರಿಗೆ ಭಾರತೀಯ ಸಂಗೀತ ವೈಶಿಷ್ಟ್ಯ, ಮಹತ್ವ, ವ್ಯಾಪ್ತಿ, ಪ್ರಭಾವಗಳನ್ನು ಓಂಕಾರನಾಥರು ವಿಶದ ಪಡಿಸಿದರು. ಸ್ವರ, ಶ್ರುತಿ, ರಾಗ, ಭಾವ, ರಸ, ತಾಳಗಳ ವಿಚಾರ ವಿವರ ಮಾಹಿತಿ ಒದಗಿಸಿದರು. ಸಂಗೀತದಿಂದ ದೈವಿಕ ಸಾಕ್ಷಾತ್ಕಾರದ ತನ್ನ ಅನುಭವ ವರ್ಣಿಸಿದರು.

ಇಂಗ್ಲೆಂಡಿನಲ್ಲಿ ಜಗದ್ವಿಖ್ಯಾತ ಬಿ.ಬಿ.ಸಿ. ರೇಡಿಯೋದಲ್ಲಿ ಮುಖ್ಯ ಸಂಗೀತಗಾರರಾಗಿದ್ದ ಹೆನ್ರಿವುಡ್ ಅವರು ಓಂಕಾರನಾಥರ ವಿಚಾರಗಳಿಂದ ಬಹಳಷ್ಟು ಪ್ರಭಾವಿತರಾದರು. ಅಲ್ಲಿ ನಡೆದ ಅಂತರರಾಷ್ಟ್ರೀಯ ಸಂಗೀತ ಪರಿಷತ್ತಿನಲ್ಲಿ ಓಂಕಾರನಾಥರು ಭಾರತದ ಪ್ರತಿನಿಧಿಯೆಂದು ಗೌರವಿಸಲ್ಪಟ್ಟರು.

ಇಂಗ್ಲೆಂಡನ್ನು ಆಗ ಐದನೆಯ ಜಾರ್ಜ್ ಅರಸರು ಆಳುತ್ತಿದ್ದರು. ಅವರ ಮುಂದೆ ಹಾಡುವಂತೆ ಓಂಕಾರನಾಥರಿಗೆ ಆಹ್ವಾನ ಬಂದಿತ್ತು., ಅಲ್ಲಿ ಹಾಡಿದರೆ ’ರಾವ್ ಬಹದ್ದೂರ್’ ಪದವಿ ದೊರೆಯಬಹುದು ಎಂದೂ ಕೆಲವರು ಸಲಹೆಯಿತ್ತರು. ದೇಶಾಭಿಮಾನಿಯಾದ ಓಂಕಾರನಾಥರ ಮನಸ್ಸು ಇದಕ್ಕೆ ಒಪ್ಪಲಿಲ್ಲ.

ಇನ್ನೂ ಕೆಲವು ದೇಶಗಳನ್ನು ಸುತ್ತಿ ಭಾರತಕ್ಕೆ ಮರಳಿ ಬರಬೇಕೆಂದು ಓಂಕಾರನಾಥರು ಯೋಚಿಸಿದ್ದರು. ಅಷ್ಟರಲ್ಲಿ ಪತ್ನಿ ಹಾಗೂ ಮಗುವಿನ ಮರಣದ ವಾರ್ತೆ ತಿಳಿದು ಕಂಗಾಲಾದರು. ಎಲ್ಲ ಕಾರ‍್ಯಕ್ರಮಗಳನ್ನು ರದ್ದುಪಡಿಸಿ ಭಾರತಕ್ಕೆ ಹಿಂದಿರುಗಿದರು.

ಬರೋಡದಲ್ಲಿ ತನ್ನ ಪ್ರೀತಿಯ ಹೆಂಡತಿಯ ನೆನಪು ಅವರನ್ನು ಕಾಡುತ್ತಿತ್ತು. ಕೊನೆಗೆ ಬರೋಡವನ್ನೇ ಬಿಟ್ಟು ಮುಂಬಯಿಗೆ ಬಂದರು. ಗಾಂಧರ್ವ ಸಂಗೀತ ನಿಕೇತನ ಆರಂಭಿಸಿದರು. ಬಂಧು ಮಿತ್ರರು ಒತ್ತಾಯ ಮಾಡಿದರೂ ಅವರು ಎರಡನೆಯ ವಿವಾಹ ಮಾಡಿಕೊಳ್ಳಲಿಲ್ಲ.

ಬಿರುಗಾಳಿ

೧೯೪೨ರಲ್ಲಿ ಭಾರತೀಯರು ಬ್ರಿಟಿಷರಿಗೆ ”ಭಾರತ ಬಿಟ್ಟು ಹೋಗಿ’ ಎಂದು ಸ್ಪಷ್ಟವಾಗಿ ಹೇಳಿದರು. ಸ್ವಾತಂತ್ರ‍್ಯಕ್ಕಾಗಿ ಹೋರಾಟ ಪ್ರಾರಂಭಿಸಿದರು. ಭಾರತದಲ್ಲೆಲ್ಲ ಬೀಸಿದ ಚಳವಳಿಯ ಬಿಸಿ ಓಂಕಾರನಾಥರಿಗೂ ತಗುಲಿತು. ಜತೆಗೆ ವೈಯಕ್ತಿಕ ದುಃಖ ಬೇರೆ. ಒಂದರ ಹಿಂದೆ ಒಂದು ಸಮಸ್ಯೆ ತಲೆದೋರಿತು. ಅಣ್ಣ ರವಿಶಂಕರ್ ಮನೆಬಿಟ್ಟು ಹೇಳದೆ ಕೇಳದೆ ಹೋದವನು ಹಿಂದಿರುಗಲೇ ಇಲ್ಲ. ಇನ್ನೊಬ್ಬ ಅಣ್ಣ ಬಾಲಕೃಷ್ಣ ಹಾಗೂ ತಮ್ಮ ರಮೇಶಚಂದ್ರ ತೀರಿಕೊಂಡರು. ತಾಯಿ ೪೭ನೆಯ ವಯಸ್ಸಿನಲ್ಲಿ ಮರಣ ಹೊಂದಿದರು.

ಓಂಕಾರನಾಥರು ಮನಸ್ಸಿಗಾದ ನೋವನ್ನು ಸಂಗೀತದಲ್ಲಿ ಮರೆಯಲು ಪ್ರಯತ್ನಿಸಿದರು. ಸಂಗೀತದಂಥ ಸಂಜೀವಿನಿ ಬೇರೊಂದಿಲ್ಲ. ಎಂಥ ದುಃಖ, ನೋವುಗಳನ್ನೂ ಮರೆಸಿಬಿಡುತ್ತದೆ. ಜೀವನದ ಅತ್ಯಂತ ಸಂಕಟದ ಕಾಲದಲ್ಲಿ ಸಂಗೀತವೇ ದೇವರೆಂದು ಶರಣಾಗತರಾದರು. ಅದರಿಂದ ಅವರ ಹಾಡುವಿಕೆಯಲ್ಲಿ ಹೊಸತೊಂದು ಬಗೆಯ ಕಳಕಳಿ, ಲಾವಣ್ಯ, ಭಕ್ತಿ ಕರುಣಾರಸಭರಿತ ನಿವೇದನಾಭಾವ ಪ್ರಕಟವಾದವು.

ಓಂಕಾರನಾಥರು ಸೂರತ್ ಗೆ ಹೋಗಿ ಷಡ್ಜ ಸಾಧನೆ ಮಾಡಲಾರಂಭಿಸಿದರು. ಷಡ್ಜ ಶ್ರುತಿಯ ಓಂಕಾರ ಗುಂಜಾರವದಲ್ಲಿ ಧ್ಯಾನಾಸಕ್ತರಾದರು. ಸ್ವರವೇ ಅವರ ಉಸಿರಾಯಿತು. ಶ್ರುತಿಯೇ ಜೀವನವಾಯಿತು.

ಸಂಗೀತ ಸಾರ್ವಭೌಮ

ವಿದೇಶಗಳಿಂದ ಓಂಕಾರನಾಥರಿಗೆ ಪುನಃ ಅನೇಕ ಆಮಂತ್ರಣಗಳು ಬರಲಾರಂಭಿಸಿದವು. ಆಫ್ಘಾನಿಸ್ಥಾನಕ್ಕೆ ೧೯೫೨ರಲ್ಲಿ ಭಾರತೀಯ ಸಾಂಸ್ಕೃತಿಕ ಮಂಡಲಿಯೊಂದಿಗೆ ಅವರು ಹೋದರು. ಮರುವರ್ಷ ಬುಡಾಪೆಸ್ಟ್ ನಲ್ಲಿ ವಿಶ್ವಶಾಂತಿ ಪರಿಷತ್ತು ನಡೆಯಿತು. ಭಾರತದ ಪ್ರತಿನಿಧಿಯಾಗಿ ಅಲ್ಲಿಗೆ ಹೋದರು. ಕಾರ್ಯಕ್ರಮದ ಆರಂಭದಲ್ಲಿ ಸ್ವರಬದ್ಧವಾಗಿ ವೇದಮಂತ್ರಗಳನ್ನು ಹಾಡಿ ಎಲ್ಲರನ್ನೂ ಚಕಿತಗೊಳಿಸಿದರು. ಸಂಸ್ಕೃತ ಭಾಷೆಯೇ ಸಂಗೀತವಾಗಿ ಕೇಳಿಸಿತು. ಅದರ ನಾದ ಲಹರಿಗೆ ಜನರು ಹರ್ಷ ಪುಳಕಿತರಾದರು.

ಭಾರತೀಯ ಸಂಗೀತದ ಬಗ್ಗೆ ಓಂಕಾರನಾಥರು ಅಲ್ಲಿ ಮಾಡಿದ ಭಾಷಣ ಸ್ಮರಣೀಯ. ಸಂಗೀತವೆಂದರೆ ಸಾರ್ವಭೌಮ ಭಾಷೆ, ದೇಶ ಕಾಲ, ಭಾಷೆ, ಭೌಗೋಳಿಕ ಮೇರೆಗಳನ್ನು ಮೀರಿ ಅದು ಎಲ್ಲರನ್ನೂ ತೃಪ್ತಿಗೊಳಿಸುತ್ತದೆ, ಎಲ್ಲರಿಗೂ ಸಂತೋಷ ಸಾಂತ್ವನ  ಕೊಡುತ್ತದೆ ಎಂದರು.

ಮುಂದಿನವರ್ಷ ಜರ್ಮನಿಯಲ್ಲೂ ಮತ್ತೆ  ಇದೇ ವಿಶ್ವಶಾಂತಿ ಪರಿಷತ್ತಿಗೆ ಓಂಕಾರನಾಥರನ್ನು ಆಮಂತ್ರಿಸಿದ್ದರು. ಸ್ಟಾಕ್ ಹೋಂನಲ್ಲಿ ನಡೆದ ಆಟಂ ಮತ್ತು ಹೈಡ್ರೋಜನ್ ಬಾಂಬ್ ವಿರೋಧಿ ಜಾಗತಿಕ ಪರಿಷತ್ತಿನಲ್ಲಿ ಅವರು ಉಪನ್ಯಾಸ ಕೊಟ್ಟರು. ಸಂಗೀತ ಶಾಂತಿದೂತ, ಮಹಾ ಚಿಕಿತ್ಸಕ ಎಂದರು.

ವಿಶ್ವಬಂಧು

ರಷ್ಯಾ, ಜೆಕೊಸ್ಲೋವಾಕಿಯಾ, ಹಂಗೇರಿ, ನಾರ್ವೆ, ಸ್ವೀಡನ್ ಗಳಿಗೂ ಹೋಗಿ ಅವರು ಹಲವು ಸಂಗೀತ ಕಾರ‍್ಯಕ್ರಮ ಕೊಟ್ಟರು. ಹೋದಲ್ಲೆಲ್ಲ ಭಾರತೀಯ ಸಂಗೀತದ ಹಿರಿಮೆ ಸಾರಿದರು. ಒಂದು ಸಾವಿರ ವರ್ಷಗಳ ಹಿಂದೆಯೇ ನಮ್ಮ ಸಂಗೀತ ಎಷ್ಟೊಂದು ಅಭಿವೃದ್ಧಿಯಾಗಿತ್ತು. ವೈಜ್ಞಾನಿಕವಾಗಿತ್ತು ಎಂದು ವಿವರಿಸಿದರು.

ಗಾಂಧಿ ಜಯಂತಿಗೆ ಸಾಂಸ್ಕೃತಿಕ ಮಂಡಳಿಯೊಂದಿಗೆ ನೇಪಾಳಕ್ಕೆ ೧೯೫೫ರಲ್ಲಿ ಹೋದರು. ರಷ್ಯಕ್ಕೆ ೧೯೬೨ರಲ್ಲಿ ಭೇಟಿಕೊಟ್ಟರು.  ಎಲ್ಲ ಕಡೆ ಒಲವನ್ನು, ಭಾರತಕ್ಕೆ ಗೆಳೆಯರನ್ನು ಸಂಪಾದಿಸಿದರು.

ಅವರ ಪ್ರವಾಸಗಳ ಉದ್ಧೇಶ ಮಹತ್ವದ್ದಾಗಿತ್ತು. ಸ್ವಾರ್ಥ, ಯುದ್ಧ, ರಾಜಕಾರಣಗಳಿಂದ ಮಾನವ ಮಾನವರೊಳಗೆ  ಕಟ್ಟಿಕೊಂಡ ಅಡ್ಡಗೋಡೆಗಳನ್ನು ಕೆಡಹುವುದು ಅವರ ಗುರಿ. ಇವರನ್ನೆಲ್ಲ ಭಕ್ತಿ ಪ್ರೀತಿಗಳಿಂದ ಒಂದಾಗಿಸಲು ಸಂಗೀತಕ್ಕಿಂತ ಉತ್ತಮವಾದುದು ಬೇರಿಲ್ಲ. ಈ  ಜ್ಞಾನವನ್ನೂ ಎಲ್ಲರಿಗೂ ಹಂಚುವುದು ಆನಂದ ಉಂಟು ಮಾಡುವುದು. ಮಾನವರೆಲ್ಲ ವಿಶ್ವದ ಬಂಧುಗಳು ಎಂದು ಸಾರುವುದು. ಅವರ ಈ ಪ್ರಯತ್ನದಲ್ಲಿ ಬಹಳಷ್ಟು ಯಶಸ್ಸು ದೊರೆಯಿತು.

ಸಾಧನೆ

ಬರೀ ಅದೃಷ್ಟ ನಂಬಿ ಕೂತಿರಲಿಲ್ಲ ಓಂಕಾರನಾಥರು. ಮನುಷ್ಯ ಪ್ರಯತ್ನದಲ್ಲೂ ಅವರಿಗೆ ನಂಬಿಕೆ. ಏಕಾಂತದಲ್ಲಿ ಕೂತು ಗಂಟೆಗಟ್ಟಲೆ ಅಭ್ಯಾಸ ಮಾಡುತ್ತಿದ್ದರು.

ವೇದಮಂತ್ರಗಳಿಂದ ಹಿಡಿದು ಅವರು ಮೀರಾಬಾಯಿ, ಕಬೀರ, ತುಳಸೀ, ದಾಸರ ಹಾಡುಗಳನ್ನು ಭಜನೆಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಮೊಗಲರು ಭಾರತಕ್ಕೆ ಬರುವುದಕ್ಕೂ ಒಂದೇ ಇಲ್ಲಿ ಜನಪ್ರಿಯವಾಗಿದ್ದ ಧ್ರುಪದ, ಢಮಾರ, ಶೈಲಿಗಳಲ್ಲೂ ಪರಿಶ್ರಮ ಮಾಡಿದರು. ಶಾಸ್ತ್ರೀಯ ಸಂಗೀತವೆಂದರೆ ಪಂಡಿತರು, ಬುದ್ಧಿವಂತರು ಮಾತ್ರ ತಿಳಿಯುವಂಥದ್ದು ಎಂಬ ತಪ್ಪು ಕಲ್ಪನೆ ಹೋಗಲಾಡಿಸಲು ಪ್ರಯತ್ನಿಸಿದರು. ಸಂಗೀತ ಎಲ್ಲರ ಆಸ್ತಿ ಎಂದರು.

ಶಾಸ್ತ್ರೀಯ ಸಂಗೀತವೆಂದರೆ ಬೇರೆ ಬೇರೆ ಸ್ವರಗಳ ಸರ್ಕಸ್ ಅಲ್ಲ. ಬರೀ ಬಾಯಿಂದ ಹಾಡುವುದಲ್ಲ. ಭಾವನೆಗಳ ಅಭಿವ್ಯಕ್ತಿ ಹೃದಯದಿಂದ ಸಹಜವಾಗಿ ಹೊರ ಹೊಮ್ಮಬೇಕು. ಅದರಲ್ಲಿ ಸೌಂದರ್ಯ ದೃಷ್ಟಿ ಕಾಣಬೇಕು. ಹಾಡುವವನಿಗೂ ಆನಂದದ ಅನುಭವ ಆಗಬೇಕು.

ಗಾಯನ ಗಂಗೆ

ಭಾರತೀಯ ಸಂಗೀತ ಹರಿಯುವ ಗಂಗೆಯಂತೆ. ಹೊರಗಿನ  ಪ್ರಭಾವಗಳನ್ನು ಅರಗಿಸಿಕೊಂಡು ಅದು ಅರಳುತ್ತಿದೆ. ನಮ್ಮ ಸಂಗೀತದಲ್ಲಿ ಅರಬ್ಬಿ ಫಾರಸಿ ಸಂಗೀತ ಪ್ರಭಾವವಿದ್ದರೂ ಮೂಲತಃ ನಮ್ಮದು ಭಕ್ತಿ ಪ್ರಧಾನ ಸಂಗೀತ. ಅದು ದೈವಿಕ.

ನಮ್ಮ ಸಂಗೀತವನ್ನು ಕುರಿತು ಮೊದಲಾಗಿ ವಿವರ, ಶಾಸ್ತ್ರ ಬರೆದವನು ಭರತಮುನಿ. ಅಲ್ಲಿಂದಲೇ ನಮ್ಮ ಸಂಗೀತವಾಹಿನಿ ಹರಿದು ಬಂದಿದೆ. ಇದು ಓಂಕಾರನಾಥರ ಅಖಂಡ ವಿಶ್ವಾಸ.

ಭಾರತೀಯ ಸಂಗೀತದ ಮೂಲ ಒಂದೇ. ಕ್ರಮೇಣ ಹಿಂದೂಸ್ತಾನಿ (ಉತ್ತರಾದಿ) ಮತ್ತು ಕರ್ನಾಟಕ (ದಕ್ಷಿಣಾದಿ) ಎಂಬ ಎರಡು ಪದ್ಧತಿಗಳಾದವು. ಒಂದು ರಾಗ ಪ್ರಧಾನ. ಇನ್ನೊಂದು ಕಾಲ ಪ್ರಧಾನ. ಇವುಗಳೆರಡರ ಒಳ್ಳೆಯ ಗುಣಗಳನ್ನು ಗ್ರಹಿಸಿ ಒಂದು ಮಾಡಲು ಓಂಕಾರನಾಥರು ಶ್ರಮಿಸಿದರು.

ಒಮ್ಮೆ ಓಂಕಾರನಾಥರು ಪ್ರಶ್ನಿಸಿದ್ದರು :

’ಪ್ರಯಾಗವನ್ನು ಅಲಹಾಬಾದ್ ಎಂದೊಡನೆ ಅದು ವಿದೇಶಿಯಾಗುವುದೇ?

ಅವರ ಅಭಿಮಾನ ಪರಿಪೂರ್ಣವಾಗಿ ಈ ಮಾತಿನಲ್ಲಿ ವ್ಯಕ್ತವಾಗುತ್ತಿತ್ತು. ಪ್ರಯಾಗಕ್ಕೆ ಅಲಹಾಬಾದ್ ಮತ್ತೊಂದು ಹೆಸರು.  ಹೆಸರು ಯಾವುದಾದರೂ ಸ್ಥಳ ಅದೇ ಅಲ್ಲವೆ, ಭಾರತಕ್ಕೆ ಸೇರಿದ್ದೇ ಅಲ್ಲವೆ? ಭಾರತೀಯ ಎನ್ನುವುದರ ಬಗ್ಗೆ  ನಮಗೆ ಗೌರವ ಬೆಳೆಯಬೇಕು. ವಿದೇಶಿಯರಿಗೂ ಆದರ ಹುಟ್ಟುವಂತೆ ಮಾಡಬೇಕು. ಇದು ಪ್ರತಿ ಭಾರತೀಯನ ಕರ್ತವ್ಯ. ಸಂಗೀತದ ಮೂಲಕ ಅದನ್ನು ತಾನು ಸಾಧಿಸುತ್ತೇನೆ ಎನ್ನುತ್ತಿದ್ದರು.

ಶಿಕ್ಷಕ

ಬಾಳಿನಲ್ಲಿ ನಿಜವಾದ ಬದಲಾವಣೆ ತರುವವನೇ ಶಿಕ್ಷಕ. ಓಡಾಡುತ್ತಿರುವ ಮನಸ್ಸಿಗೆ ಕಡಿವಾಣ ಹಾಕಿ ಸರಿಯಾದ ಮಾರ್ಗದರ್ಶನ ಮಾಡುವುದೇ ಅವನ ಕರ್ತವ್ಯ. ಓಂಕಾರನಾಥರು ಅಂಥ ಮಹಾನ್ ಶಿಕ್ಷಕರಾಗಿದ್ದರು. ತನ್ನ ಗುಣ ನಡತೆ, ನುಡಿಗಳಿಂದಲೂ ಶಿಷ್ಯರ ಮನಸ್ಸನ್ನು ಅರಳಿಸಿ, ರೂಪಿಸುವ ಕೆಲಸವನ್ನು ಅವರು ಮಾಡಿದರು.

ಲಾಹೋರ್, ಮುಂಬಯಿ, ಪುಣೆ, ಬರೋಡ, ಸೂರತ್, ಬ್ರೋಚ್ ಗಳಲ್ಲೆಲ್ಲ ಸಂಗೀತ ಗುರುವಾಗಿ ಅನುಭವ ಗಳಿಸಿದ್ದರು.

ಕಾಶಿಯಲ್ಲಿ ಪಂಡಿತ ಮದನಮೋಹನ ಮಾಳವೀಯರು ಕಾಶಿ ಹಿಂದೂ ವಿಶ್ವವಿದ್ಯಾಲಯ ಸ್ಥಾಪಿಸಿದ್ದರು. ಅಲ್ಲಿ ಸಂಗೀತ ಮಹಾವಿದ್ಯಾಲಯದ ಯೋಜನೆಯನ್ನು ಅವರು ಹಾಕಿಕೊಂಡಿದ್ದರು. ಅವರ ಕನಸನ್ನು ಕಾರ‍್ಯಗತ ಮಾಡಲು ೧೯೫೦ರಲ್ಲಿ ’ಸಂಗೀತ ಕಲಾ ಭಾರತಿ’ಗೆ ಓಂಕಾರನಾಥರನ್ನು ಪ್ರಿನ್ಸಿಪಲ್ ಹಾಗೂ ಮುಖ್ಯಾಧಿಕಾರಿಯನ್ನಾಗಿ ನೇಮಿಸಿದರು.

ಸಂಗೀತ ಪಠ್ಯಕ್ರಮದಲ್ಲಿ ಆಮೂಲಾಗ್ರ ಬದಲಾವಣೆ ತರಬೇಕು ಎಂಬ ಆಸೆ ಓಂಕಾರನಾಥರಿಗಿತ್ತು. ಈಗ ಅದಕ್ಕೆ ಒಳ್ಳೆಯ ಅವಕಾಶ ಬಂತು. ಸಂಗೀತಶಾಸ್ತ್ರ, ಕಲೆಗಳ ಕುರಿತಾಗಿ ಸರಳ ವಿವರಣೆ ಕೊಡುವ ’ಸಂಗೀತಾಂಜಲಿ’ ಎಂಬ ಹಿಂದಿ ಗ್ರಂಥವನ್ನು  ಮೂರು ಭಾಗಗಳನ್ನು ಬರೆದು ಪ್ರಕಟಿಸಿದರು.

ಶಿಷ್ಯವೃಂದ

ಓಂಕಾರನಾಥರ ಶಿಷ್ಯ ಪರಂಪರೆ ಬಹಳ ದೊಡ್ಡದು. ಅವರ ಗಾಯನ ಕೇಳಿ ಅವರ ಬಳಿಯೇ ಸಂಗೀತ ಕಲಿಯಲು ಬಂದವರು ಸಾವಿರಾರು ಮಂದಿ. ಅವರಲ್ಲಿ ಕೆಲವರು ಯಶಸ್ವಿ ಸಂಗೀತ ಪಟುಗಳಾದರು. ಮಾಸ್ಟರ್ ವಸಂತ್, ಯಶವಂತ್ ರಾವ್, ಪುರೀಹಿರತ್, ಬಲವಂತ ರಾಯ ಭಟ್,  ಪಿ.ಎನ್. ಬರ್ವೆ, ವಿಜನಬಾಲಾ ಘೋಷ್ ಮೊದಲಾದವರು ಹೆಸರುವಾಸಿಗಳಾದರು.

ಕನ್ನಡಿಗರಾದ ಮೂವರು ಸಂಗೀತಗಾರರು ಓಂಕಾರನಾಥರಿಂದ  ವಿದ್ಯೆ ಪಡೆದರು. ಖ್ಯಾತ ಗಾಯಕ ಬಸವರಾಜ ರಾಜಗುರು ಕುಮಾರ ಗಂಧರ್ವ ಇವರ ಹಾಡುಗಾರಿಕೆಯಲ್ಲಿ ಓಂಕಾರನಾಥರ ಪ್ರಭಾವವಿದೆ. ರಾಷ್ಟ್ರ ಪ್ರಶಸ್ತಿ  ಪಡೆದ ಬಿ.ವಿ. ಕಾರಂತರು ಓಂಕಾರನಾಥರ ಬಳಿ ಕಾಶಿ ಹಿಂದೂ ವಿಶ್ವವಿದ್ಯಾಲಯದಲ್ಲಿ ಐದು ವರ್ಷ ಶಾಸ್ತ್ರೀಯ ಹಾಡುಗಾರಿಕೆ ಕಲಿತಿದ್ದರು.

ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ ಎಂಬ ಭೇದ  ಓಂಕಾರನಾಥರಿಗಿರಲಿಲ್ಲ. ದಕ್ಷಿಣದಿಂದ ಎಂ.ಎಸ್. ಗೋಪಾಲಕೃಷ್ಣ ಮತ್ತು ಎನ್. ರಾಜಂ ಇವರಿಬ್ಬರು ಓಂಕಾರನಾಥರಲ್ಲಿ ಹೆಚ್ಚಿನ ತರಬೇತಿ ಪಡೆದು ತಮ್ಮ ಪಿಟೀಲು ವಾದನದಲ್ಲಿ ಹೊಸ ಮಾಧುರ್ಯ ಕೊಡುತ್ತಿದ್ದಾರೆ.

ಗುರುವಿನ  ಮಾರ್ಗದರ್ಶನದಲ್ಲಿ ಪ್ರೇಮಲತಾ ಶರ್ಮಾ ಎಂಬುವರು ೧೫ನೆಯ ಶತಮಾನದ ಮಹಾ ಸಂಗೀತ ಶಾಸ್ತ್ರಕಾರ ಮಹಾರಾಣಾ ಕುಂಭಕರ್ಣ ಅವರ ಸಂಗೀತ ರಾಜ ಗ್ರಂಥ ಸಂಶೋಧನೆ ಮಾಡಿ ಡಾಕ್ಟರೇಟ್ ಪಡೆದರು.

ಪ್ರಣವ

ಓಂ ಇದು ಭಾರತೀಯ ಸಂಗೀತಕ್ಕೆ ಮೂಲ. ಇದನ್ನು ಪ್ರಣವ ಅಕ್ಷರ ಎನ್ನುತ್ತಾರೆ. ಭರತ ಋಷಿ ಬರೆದ ’ನಾಟ್ಯಶಾಸ್ತ್ರ’ ಪ್ರಮಾಣ ಗ್ರಂಥ, ಅದರಿಂದಲೇ ನಮ್ಮ ಸಂಗೀತ, ನೃತ್ಯ, ನಾಟಕಗಳ ಬೆಳವಣಿಗೆ, ಇವುಗಳೆಲ್ಲ ಒಂದಕ್ಕೊಂದು ಪೂರಕ.

ಇದನ್ನು ಗಮನದಲ್ಲಿಟ್ಟುಕೊಂಡು ಓಂಕಾರನಾಥರು”ಪ್ರಣವ ಭಾರತಿ’ ಎಂಬ ಮಹಾಗ್ರಂಥ ಬರೆದರು. ಸಂಗೀತದ ಜಟಿಲ ಸಮಸ್ಯೆಗಳನ್ನು ಚರ್ಚಿಸಿ, ಆಧಾರಯುಕ್ತವಾಗಿ ಅದರಲ್ಲಿ ಬೆಳಕನ್ನು ಬೀರಿದ್ದಾರೆ. ಸಂಗೀತ ಪ್ರೇಮಿಗಳಿಗೆಲ್ಲ ಇದು ಉಪಯುಕ್ತ ಗ್ರಂಥ.

ಮಾತುಗಳಿಲ್ಲದೆ ಸಂಗೀತ ಹಾಡುವುದು ಇಲ್ಲವೆ ವಾದ್ಯಗಳಲ್ಲಿ ನುಡಿಸುವುದು. ಈ ಕುರಿತು ಅವರು ಆಳವಾದ ಸಂಶೋಧನೆ, ಅಧ್ಯಯನ ಮಾಡಿದರು. ಮಾತು ಇಲ್ಲದ ಸಂಗೀತದಿಂದ ಆತ್ಮಾನಂದ ಅನುಭವದ ಸತ್ಯವನ್ನು ಅವರು ಮನಗಂಡರು.

ಶೈಲಿ

ಹಿಂದೂಸ್ತಾನಿ ಸಂಗೀತದಲ್ಲಿ ಅನೇಕ ಶೈಲಿಗಳಿವೆ. ಇದನ್ನು ’ಘರಾನಾ’ ಮನೆತನ ಎನ್ನುತ್ತಾರೆ. ಒಂದೊಂದು ಶೈಲಿಯೂ ಒಂದೊಂದು ಕುಟುಂಬದ, ಅವರ ಶಿಷ್ಯ ಪರಿವಾರದವರ ಕಾದಿಟ್ಟ ಆಸ್ತಿಯಂತೆ. ಹಾಡುವ ರೀತಿ, ರಾಗಗಳ ಹಾಡುಗಳ ಆಯ್ಕೆಗಳನ್ನೆಲ್ಲ ಹೊಂದಿ ಶೈಲಿ ರೂಪುಗೊಳ್ಳುತ್ತದೆ.

ಮಹಾನ್ ಕಲಾವಿದರು ಕೆಲವರು ತಮ್ಮದೇ ಶೈಲಿಯನ್ನು ಸೃಷ್ಟಿ ಮಾಡುತ್ತಾರೆ. ಓಂಕಾರನಾಥರು ಆ ಎತ್ತರಕ್ಕೇರಿದ ಗಾಯಕರು. ಅವರ ಗುರು ಪಲುಸ್ಕರರು ಗ್ವಾಲಿಯರ್ ಘರಾಣೆಯಲ್ಲಿ ಕಲಿತವರು. ಆದರೂ ತನ್ನ ಸ್ವಂತ ಶೈಲಿ ರೂಢಿಸಿಕೊಂಡರು. ಓಂಕಾರನಾಥರು ಇನ್ನೂ ಒಂದು ಹೆಜ್ಜೆ ಮುಂದಿಟ್ಟರು.

ಆಲಾಪ ಎಂದರೆ ಗಾಯನದಲ್ಲಿ ಹಾಡುವ ಮೊದಲಿನ ಭಾಗ. ತನ್ನ ಗುರುಗಳಲ್ಲಿ ಬರುತ್ತಿದ್ದ ಖಾನ್ ಸಾಹೇಬ್ ಹದ್ದೂ ಖಾನ್ ಮತ್ತು ರಹಮತ್ ಖಾನರ ಹಾಡುವಿಕೆಯ ಕೆಲವು ಒಳ್ಳೆಯ ಅಂಶಗಳನ್ನು ತಮ್ಮ ಆಲಾಪದಲ್ಲಿ ಓಂಕಾರನಾಥರು ಸೇರಿಸಿಕೊಂಡರು.

ಕೋಮಲವಾಗಿ ಮನಮುಟ್ಟಿ, ಹೃದಯ ಕರುಗುವಂತೆ ಹಾಡುವುದೇ ಓಂಕಾರನಾಥರ ಮಹಾಸಿದ್ಧಿ.

ಪ್ರಯೋಗ

ಸ್ವರ ಮತ್ತು ಶಬ್ದಗಳಿಂದ ರಸಪ್ರಾಪ್ತಿ. ಅದಕ್ಕಾಗಿ ಸತತ ಪ್ರಯೋಗ ಆಗುತ್ತಿರಬೇಕೆಂದು ಓಂಕಾರನಾಥರು ಒತ್ತಿ ಹೇಳುತ್ತಿದ್ದರು. ಅಪೂರ್ವ ರಾಗಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸಿದರು. ಅಪರಿಚಿತ ರಾಗಗಳನ್ನು ಪ್ರಚಾರ ಮಾಡಿದರು. ರಾಗ ರಾಗಿಣಿಯರ ಕುರಿತು ಶೋಧ ಮಾಡಿದರು. ಗುಜರಾತಿ ಭಾಷೆಯಲ್ಲಿ ’ರಾಗ ಆನೆ ರಸ’ ಎಂಬ ಶ್ರೇಷ್ಠ ಗ್ರಂಥ ಬರೆದರು.

ಅವರು ಹಾಡಿ ಜನಪ್ರಿಯಗೊಳಿಸಿದ ಒಂದು ಅಪೂರ್ವ ರಾಗವೇ ’ನೀಲಾಂಬರಿ’. ಇದೊಂದು ಕರ್ನಾಟಕ ಪದ್ಧತಿಯ ರಾಗ ವಿಶೇಷ. ಭೈರವಿ ಅವರ ಇನ್ನೊಂದು ಅಚ್ಚು ಮೆಚ್ಚಿನ ರಾಗ. ಅದರಲ್ಲಿ ತನ್ನ ಮನದ ಅಳಲನ್ನು ಅವರು ತೋಡಿಕೊಳ್ಳುತ್ತಿದ್ದರು.

ಹಿಂದಿಯ ಹಿರಿಯ ಹೆಸರಾಂತ ಕವಿ ಜಯಶಂಕರ ಪ್ರಸಾದರ ’ಕಾಮಾಯಿನಿ’ ಯ ನಾಟಕ ರೂಪಕಕ್ಕೆ ಸಂಗೀತ ಒದಗಿಸಿದರು. ಇದೇ ಕವಿಯ ’ಕಾಮನಾ’ ನಾಟಕಕ್ಕೂ ಸ್ವರ ಯೋಜನೆ ಮಾಡಿದರು. ಕಾಶಿ ಹಿಂದೂ ವಿಶ್ವ ವಿದ್ಯಾಲಯದಲ್ಲಿ ಈ ಕಾರ್ಯಕ್ರಮಗಳು ನಡೆದವು.

ಪ್ರಶಸ್ತಿಗಳು

ಜೀವನದುದ್ದಕ್ಕೂ ಓಂಕಾರನಾಥರಿಗೆ  ಹಲವು ಪ್ರಶಸ್ತಿಗಳು, ಗೌರವಗಳೂ ದೊರೆತವು.

ಪಂಡಿತ  ಮದನಮೋಹನ ಮಾಳವೀಯರು ಅವರಿಗೆ ’ಸಂಗೀತ ಪ್ರಭಾಕರ’ ಬಿರುದನ್ನು ಕೊಟ್ಟರು. ಕಲ್ಕತ್ತೆಯ ರಾಜಕೀಯ ಸಂಸ್ಕೃತ ವಿದ್ಯಾಲಯದವರು ’ಸಂಗೀತ ಮಾರ್ತಾಂಡ’ ಎಂದು ಗೌರವಿಸಿದರು. ನೇಪಾಳದ ರಾಜರು ಸಂಗೀತ ಸಾಮ್ರಾಟ ಎಂದು ಅಭಿನಂದಿಸಿದರು.

ಮುಂಬಯಿಯಲ್ಲಿ ೧೯೪೮ರಲ್ಲಿ ಅವರ ಐವತ್ತನೇ ಹುಟ್ಟಿದ ಹಬ್ಬದ ಸಮಾರಂಭ ನಡೆಯಿತು. ಹಲವು ಸಂಗೀತಗಾರರ ಕಛೇರಿಗಳು ಆದವು. ರಾಷ್ಟ್ರಪತಿಗಳು ೧೯೫೫ರಲ್ಲಿ ಅವರಿಗೆ ’ಪದ್ಮಶ್ರೀ’ ಬಿರುದನ್ನು ಕೊಟ್ಟರು. ಕಾಶಿಯಲ್ಲಿ ಅವರ ೬೦ನೆಯ ವರ್ಷದ ಹಬ್ಬವು ೧೯೫೬ರಲ್ಲಿ ವೈಭವದಿಂದ ಆಚರಿಸಲ್ಪಟ್ಟಿತು.

ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ೧೯೬೩ರಲ್ಲಿ ಅವರನ್ನು ಗೌರವಿಸಿತು. ಅದೇ ವರ್ಷ ಕಾಶಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಕೊಟ್ಟರು. ಮರುವರ್ಷ ರವೀಂದ್ರ ಭಾರತಿಯೂ ಗೌರವ ಡಾಕ್ಟರೇಟ್ ನೀಡಿತು.

ಆದರೆ ಓಂಕಾರನಾಥ ಠಾಕೂರರು ಈ ಎಲ್ಲ ಗೌರವ ಪ್ರಶಸ್ತಿಗಳಿಗಿಂತ ಶ್ರೇಷ್ಠರಾಗಿದ್ದರು. ಅವರ ವಿದ್ವತ್ತಿನಿಂದಲೇ ಈ ಸಂಸ್ಥೆಗಳಿಗೆ ಶೋಭೆ ಬಂದಿತು.

ಸಮನ್ವಯ

ಓಂಕಾರನಾಥರು ಚತುರ ಭಾಷಣಕಾರರೂ ಆಗಿದ್ದರು. ಹಿಂದಿ, ಮರಾಠಿ, ಮತ್ತು ಮಾತೃಭಾಷೆ ಗುಜರಾತಿಗಳಲ್ಲಿ ಸ್ವಾರಸ್ಯಕರವಾಗಿ ಮಾತನಾಡುತ್ತಿದ್ದರು. ಸ್ವಪ್ರಯತ್ನದಿಂದ ಇಂಗ್ಲಿಷ್, ಸಂಸ್ಕೃತ, ಬಂಗಾಳಿ, ನೇಪಾಳಿ, ಪಂಜಾಬಿ ಉರ್ದು ಭಾಷೆಗಳನ್ನು ಕಲಿತರು.

ಓಂಕಾರನಾಥರು ಮದನಮೋಹನ ಮಾಳವೀಯರೊಂದಿಗೆ

ಒಳ್ಳೆಯ ಜೀವನವೆಂದರೆ ಸಾಹಿತ್ಯ, ಸಂಗೀತ, ಸಂಸ್ಕೃತಿಗಳ ಸಮನ್ವಯ ಇವುಗಳ ಒಳ್ಳೆಯ ಅಂಶಗಳನ್ನು ತೆಗೆದುಕೊಂಡು ಬಾಳಿನಲ್ಲಿ ಅದನ್ನು ಉಪಯೋಗಿಸುವುದೇ ನಿಜವಾದ ಮಾನವ ಧರ್ಮ ಎಂಬುದು ಅವರ ಸ್ವಂತ ಅನುಭವ.

ಸಾರ್ಥಕ ಬದುಕು ಅವರದು. ಕೀರ್ತಿ, ಧನ, ಸನ್ಮಾನಗಳ ಬಯಕೆ ಅವರಿಗಿರಲಿಲ್ಲ. ಬಾಳಿನ ಕೊನೆಗಾಲದಲ್ಲಿ ವಿರಕ್ತನಂತಿದ್ದರು. ಸಾರ್ವಜನಿಕ ಕಾರ್ಯಕ್ರಮಗಳನ್ನು ಕೊಡುವುದನ್ನು ನಿಲ್ಲಿಸಿದರು. ತನ್ನ ತಂದೆಯಂತೆಯೇ ನರ್ಮದಾ ನದಿ ತೀರದಲ್ಲಿ ಪರ್ಣಕುಟಿ ಕಟ್ಟಿಕೊಂಡು ಭಗವಂತನ ಧ್ಯಾನದಲ್ಲಿ ಹೆಚ್ಚಿನ ಹೊತ್ತು ಕಳೆಯಲಾರಂಭಿಸಿದರು.

ಅವರ ಮನಸ್ಸಿಗೆ ಶಾಂತಿ, ತೃಪ್ತಿ ದೊರೆತವು. ಮುಖದಲ್ಲಿ ಅದರ ಕಾಂತಿ ಪಸರಿಸಿತ್ತು.

ಓಂಕಾರ ರೂಪಿ

ಅವರು ಅಂತ್ಯಕಾಲದ ಎರಡು ವರ್ಷಗಳಲ್ಲಿ ಪಕ್ಷಪಾತ ವ್ಯಾಧಿಯಿಂದ ನರಳಿದರು. ಚಟುವಟಿಕೆ ಸ್ತಬ್ಧವಾಯಿತು. ಹಾಡುವುದು ನಿಂತು ಹೋಯಿತು. ೧೯೬೭ರ ಡಿಸೆಂಬರ್ ೨೬ರಂದು ಮುಂಬಯಿಯಲ್ಲಿ ಅವರು ತೀರಿಕೊಂಡರು. ಆಗ ಅವರಿಗೆ ೭೦ ವರ್ಷ ವಯಸ್ಸಾಗಿತ್ತು.
ರಸ ಋಷಿಯಾಗಿ ತುಂಬು ಜೀವನ ಬಾಳಿದ ಓಂಕಾರನಾಥರು ಈ ಶತಮಾನದ ಭಾರತೀಯ ಅಗ್ರಗಣ್ಯ ಸಂಗೀತಗಾರರಲ್ಲಿ ಒಬ್ಬರು. ಸಂಗೀತವನ್ನು ಇನ್ನಷ್ಟು ಸವಿಯಾಗಿ ಇಂಪಾಗಿ ಮಾಡಿದರು. ತನ್ನ ಹೆಸರಿಗೆ ತಕ್ಕಂತೆ ಓಂಕಾರರೂಪಿಯಾಗಿ ಬಾಳಿದರು.

ಸಂಗೀತದ ಮೂಲಕ ಮಾನವನನ್ನು ಮೇಲಕ್ಕೆತ್ತುವ ಪ್ರಯತ್ನ ಮಾಡಿದ ಶ್ರೇಯಸ್ಸು ಅವರದು. ಸಂಗೀತದಲ್ಲೇ ಧನ್ಯತೆ ಪಡೆದರು. ಅದನ್ನು ಎಲ್ಲರೊಂದಿಗೆ ಹಂಚಿಕೊಂಡರು. ಆನಂದ ನಾದಲಹರಿಯಲ್ಲಿ ಅಮರರಾದರು.