ಮಾತುಗಾರಿಕೆ, ಕೇಳುವಿಕೆ, ಓದುವಿಕೆ ಮತ್ತು ಬರಹ – ಈ ನಾಲ್ಕು ಭಾಷಾ ಕೌಶಲಗಳ ಪೈಕಿ ಮೊದಲ ಎರಡರ ಕಲಿಕೆಗೆ ಔಪಚಾರಿಕ ಬೋಧನೆ ಅಥವಾ ತರಬೇತಿ ಅಗತ್ಯವಿಲ್ಲ. ಆದರೆ ಓದುವಿಕೆ ಮತ್ತು ಬರಹಕ್ಕೆ ಔಪಚಾರಿಕ ಶಿಕ್ಷಣ ಅತ್ಯಗತ್ಯ. ಮಾತುಗಾರಿಕೆ ಮತ್ತು ಕೇಳುವಿಕೆಗಳನ್ನು ಪರಿಸರದ ಪ್ರಭಾವದಿಂದ, ಅನುಕರಣೆಯಿಂದ ಹೆಚ್ಚು ಹೆಚ್ಚು ಅಭ್ಯಾಸದಿಂದ ಸ್ವಂತವಾಗಿ ಕಲಿಯಲು ಸಾಧ್ಯ. ಆದರೆ ಮಿಕ್ಕೆರಡು ಕೌಶಲಗಳಿಗೆ ಅಕ್ಷರದ ಆಕೃತಿ ಅದು ಪ್ರತಿನಿಧಿಸುವ ಧ್ವನಿ ಮತ್ತು ಅಕ್ಷರಗುಚ್ಛಗಳನ್ನು ಓದುವ ಬಗೆ, ಓದುವ ವೇಗ, ವಿವಿಧ ಬಗೆಯ ಓದು ಸಾಮಗ್ರಿಗಳನ್ನು ಆಯಾ ವಿಷಯದ ಅಭಿವ್ಯಕ್ತಿಯ ಸ್ವರೂಪಕ್ಕೆ ತಕ್ಕಂತೆ ಓದುವುದು, ಅಂತೆಯೇ ಬರೆಯುವಾಗ ಬಳಸಬೇಕಾದ ಕೈ ಓಟ, ಬರಹಕ್ಕೆ ಮೂಲ ಸಾಮಗ್ರಿಯಾದ ಚಿಂತನೆ ಮುಂತಾದವುಗಳ ಬಗ್ಗೆ ಪರಿಣತರಿಂದ ಸರಿಯಾದ ಮಾರ್ಗದರ್ಶನ ಅತ್ಯಗತ್ಯ.

ಓದು ಮತ್ತು ಬರಹ ಒಂದಕ್ಕೊಂದು ಪೂರಕ ಕ್ರಿಯೆಗಳು. ಏಕೆಂದರೆ ಓದು ಬರಹದಲ್ಲಿ ಮೂಡಿಸಿರುವ ಸಂಕೇತಗಳನ್ನು ಓದಿ ಅರ್ಥಮಾಡಿಕೊಳ್ಳುವ ಕ್ರಿಯೆಯಾದರೆ, ಬರಹ ಚಿಂತಿಸಿ ಭಾಷೆಯನ್ನು ಸಂಕೇತಗಳ ಮೂಲಕ ಮೂಡಿಸುವ ಕ್ರಿಯೆಯಾಗಿದೆ. ಆದುದರಿಂದ ಓದು, ಬರಹ ಇವೆರಡನ್ನೂ ಅಕ್ಷರಸ್ಥ ವ್ಯಕ್ತಿಯ ಅಭಿವ್ಯಕ್ತಿ ಸಾಧನಗಳೆಂದು ಪರಿಗಣಿಸಲಾಗಿದೆ. ತಾಂತ್ರಿಕತೆಯ ದೃಷ್ಟಿಯಿಂದ ಓದು, ಬರಹ ನಿಕಟ ಸಂಬಂಧವನ್ನು ಹೊಂದಿಲ್ಲ. ಏಕೆಂದರೆ ಉತ್ತಮ ಓದುಗಾರರೆಲ್ಲರೂ ಉತ್ತಮ ಬರಹಗಾರರಾಗಬೇಕಿಲ್ಲ. ಅಂತೆಯೇ ಉತ್ತಮ ಬರಹಗಾರರೆಲ್ಲ ವ್ಯಾಪಕ ಓದುಗಾರರೂ ಆಗಬೇಕಿಲ್ಲ.

ಓದುವ ಕ್ರಿಯೆ

ಓದುವಿಕೆ ವಿಷಯಗ್ರಹಣವನ್ನು ಸಹಜವಾಗಿಯೇ ಒಳಗೊಂಡಿರುತ್ತದೆ. ಓದುವುದೆಂದರೆ ಕೈಬರಹದ ಮುದ್ರಿತ ಅಥವಾ ಬೆರಳಚ್ಚು ಮಾಡಿದ ಸಂಕೇತಗಳನ್ನು ಓದಿ ಅದನ್ನು ಅರ್ಥ ಮಾಡಿಕೊಳ್ಳುವುದು ಎಂದೇ ಅರ್ಥ. ಈ ಕ್ರಿಯೆಯಲ್ಲಿ ಮೇಲ್ನೋಟಕ್ಕೆ ಕಾಣುವ ಕಣ್ ಚಲನೆ ಅನಂತರ ವಿಷಯದ ಅರ್ಥಗ್ರಹಣಕ್ಕೆ ಸಂಬಂಧಿಸಿದಂತೆ ಅಭಿವ್ಯಕ್ತಿಯ ಮುಖಭಾವ ಇತ್ಯಾದಿಗಳನ್ನು ಗಮನಿಸಬಹುದೇ ಹೊರತು ಇದುವರೆಗೆ ಓದುವ ಕ್ರಿಯೆಯಲ್ಲಿ ಮೆದುಳಿನಲ್ಲಿ ಆಂತರಿಕವಾಗಿ ಏನಾಗುತ್ತದೆ ಎಂಬುದು ಇನ್ನೂ ಸಂಶೋಧನೆಯ ವಿಷಯ ವಾಗಿಯೇ ಉಳಿದಿದೆ. ನೀವು ಯಾರನ್ನಾದರೂ ಏನು ಓದಿದಿರಿ ಎಂದರೆ ಉತ್ತರ ಸ್ಪಷ್ಟವಾಗಿ ಸಿಗುತ್ತದೆ. ಆದರೆ ಹೇಗೆ ಓದಿದಿರಿ ಎಂದು ಕೇಳಿದರೆ ಉತ್ತರಿಸುವಲ್ಲಿ ಗೊಂದಲವುಂಟಾಗುತ್ತದೆ.

ಯಾವುದೇ ವಿಷಯವನ್ನು ಓದುವಾಗ ಪ್ರಮುಖವಾಗಿ ಕಾಣುವ ಕಣ್ಣಿನ ಚಲನೆಯನ್ನು ಗಮನಿಸಬಹುದು. ಕಣ್ಣೋಟ ಎಡದಿಂದ ಬಲಕ್ಕೆ ಇಲ್ಲವೇ ಬಲದಿಂದ ಎಡಕ್ಕೆ ಆಯಾ ಭಾಷೆಯ ಬರವಣಿಗೆಯ ರೂಢಿಯನ್ನು ಅನುಸರಿಸಿ ಸಾಗುತ್ತದೆ. ಅನಂತರ ಕಣ್ಣು ಅಲ್ಲಲ್ಲಿ ನಿಂತು ವಿವಿಧ ವೇಗಗಳಲ್ಲಿ ಸಾಗುತ್ತದೆ. ಆಗ ಕಣ್ಣಿನ ದೃಷ್ಟಿ ಪದಪುಂಜಗಳಷ್ಟೇ, ವಾಕ್ಯಾಂಶಗಳನ್ನೋ ಇಡೀ ಒಂದು ಸಾಲನ್ನೋ ನಿರ್ದಿಷ್ಟವಾಗಿ ಗಮನಿಸಿ ಮುಂದೆ ಸಾಗುತ್ತದೆ. ಇದಕ್ಕೆ ಕಣ್ಣಿನ ಅಳತೆ (ಐ ಸ್ಪೇಸ್) ಎಂದು ಹೇಳಬಹುದು. ಹೀಗೆ ಓದುವಾಗ ದೃಷ್ಟಿಯ ವೇಗ ಹೆಚ್ಚು ಕಡಿಮೆ ಆಗುತ್ತದೆ. ಕೆಲವೆಡೆ ಹೆಚ್ಚು ಹೊತ್ತು ನಿಲ್ಲಬಹುದು. ಕೆಲವೆಡೆ ಕಡಿಮೆ ಅವಧಿಯಲ್ಲಿ ಹೆಚ್ಚು ಘಟಕಾಂಶಗಳನ್ನು ಗ್ರಹಿಸಿ ಓದಬಹುದು. ಅಲ್ಲದೆ ಈ ವೇಗ ಓದುವ ವಿಷಯವನ್ನು ಅವಲಂಬಿಸಿರುತ್ತದೆ. ಇವೇ ಸ್ಥಿರೀಕರಣ (ಫಿಕ್ಸೇಷನ್). ಓದು ಕ್ರಿಯೆಯಲ್ಲಿ ಸ್ಥಿರೀಕರಣದ ಪಾತ್ರ ಬಹುಮುಖ್ಯ. ಸ್ಥಿರೀಕರಣ ಕಾಲದಲ್ಲಿ ಆಗುವ ಕ್ರಿಯೆಯೇನು ಎಂಬುದೇ ಜಿಜ್ಞಾಸೆಯ ವಿಷಯವಾಗಿದೆ. ಸ್ಥೂಲವಾಗಿ ಈ ಕ್ರಿಯೆಯನ್ನು ಹೀಗೆ ಊಹಿಸಲಾಗಿದೆ. ಅಕ್ಷಿಪಟಲದಲ್ಲಿರುವ ನರಕೋಶಗಳು ಬೆಳಕಿನ ಸ್ಪಂದನಗಳನ್ನು ವಿದ್ಯುತ್ತಿನ ಸ್ಪಂದನಗಳನ್ನಾಗಿ ಪರಿವರ್ತಿಸುತ್ತವೆ. ಅಕ್ಷಿಪಟಲದ ಮಧ್ಯಭಾಗ ದಲ್ಲಿ ಹೆಚ್ಚು ನರಕೋಶಗಳಿರುವುದರಿಂದ ಈ ಭಾಗ ಹೆಚ್ಚು ಪ್ರಭಾವಶಾಲಿ ಯಾಗಿರುತ್ತದೆ. ಆದುದರಿಂದ ಓದುವಾಗ ಕಣ್ಣೋಟ ನೇರವಿರಬೇಕು. ಓದಳತೆ (ರೀಡಿಂಗ್ ಸ್ಪೇಸ್)ಯನ್ನು ಅಳೆಯಲು ಥ್ಯಾಚಿಸ್ಟೋಸ್ಕೋ ಎಂಬ ಯಂತ್ರವನ್ನು ಬಳಸುತ್ತಾರೆ. ಒಂದು ಸೆಕೆಂಡಿನ ನೂರನೇ ಒಂದರಷ್ಟು ಅವಧಿಯಲ್ಲಿ ಮೂರು-ನಾಲ್ಕು ಬಿಡಿ ಅಕ್ಷರಗಳು ಅಥವಾ ಎರಡರಿಂದ ನಾಲ್ಕು ಪದಗಳನ್ನು ಓದಿ ನೆನಪಿನಲ್ಲಿಡಬಹುದು. ಹೀಗೆ ಓದುವಾಗ ಓದಿದ ಅಂಶವನ್ನು ಅಕ್ಷಿಪಟ ಸ್ಪಂದನಗಳಾಗಿಸಿ ಮೆದುಳಿಗೆ ಕಳಿಸುತ್ತದೆ. ಈ ಸ್ಪಂದನಗಳನ್ನು ಆಪ್ಟಿಕ್ ನರಗಳು ಮೆದುಳಿಗೆ ಒಯ್ಯುತ್ತದೆ. ಮೆದುಳಿನಲ್ಲಿ ಈ ಸ್ಪಂದನಗಳು ಭಾಷೆಯ ಅರ್ಥಪೂರ್ಣ ಘಟಕಗಳಾಗಿ ರೂಪುಗೊಳ್ಳುತ್ತವೆ. ಈ ಹಂತದಲ್ಲಿ ಮೆದುಳಿನಲ್ಲಿ ಆಗುವ ಕ್ರಿಯೆ ಏನು ಎಂಬುದು ಸ್ಪಷ್ಟವಾಗಿಲ್ಲ. ಅರ್ಥಗ್ರಹಿಕೆ ಮೆದುಳಿನಲ್ಲಿ ಆಗುವ ಕ್ರಿಯೆ.

ಓದುವ ಬಗೆಗಳು: ಮಕ್ಕಳು ಓದುವಾಗ ಪ್ರತಿ ಅಕ್ಷರವನ್ನೂ ನಂತರ ಪದವನ್ನು ಜೋರಾಗಿ ಉಚ್ಚರಿಸಿ ಓದುವುದನ್ನು ನಾವು ಕಂಡಿದ್ದೇವೆ. ಈ ಕ್ರಿಯೆಯಲ್ಲಿ ಓದಿದ ಅಂಶ ಕಿವಿಯಿಂದ ಕೇಳಿ ಅರ್ಥಗ್ರಹಣ ಉಂಟಾಗುತ್ತದೆ. ಇದೇ ಕಿವಿಯೋದು ಅಥವಾ ಬಾಯ್ದೆರೆ ಓದು. ಇಂತಹ ಓದಿನಲ್ಲಿ ಅಕ್ಷರದಿಂದ ಹಿಡಿದು ಹಂತಹಂತವಾಗಿ ಬಿಡಿ ಘಟಕಗಳ ಗುರುತಿಸುವಿಕೆಯನ್ನು ಕಾಣಬಹುದು. ಅಂದರೆ ಓದುವ ಕ್ರಿಯೆ ಮೂಲ ಘಟಕವಾದ ಅಕ್ಷರದಿಂದ ಆರಂಭಗೊಂಡು ಪದ ವಾಕ್ಯಗಳನ್ನು ದಾಟಿ ಸಂಕಥನ (ಡಿಸ್‌ಕೋರ್ಸ್) ದವರೆಗೂ ಸಾಗುತ್ತದೆ. ಇದರ ಮುಖ್ಯ ಉದ್ದೇಶ ಉಚ್ಚಾರಣೆಯ ಸ್ಪಷ್ಟತೆ ಹಾಗೂ ಮನಸ್ಸನ್ನು ಓದುವ ವಸ್ತುವಿನ ಕಡೆ ಕೇಂದ್ರೀಕರಿಸುವುದೇ ಆಗಿದೆ. ಭಾಷಾಕಲಿಕೆಯ ಪ್ರಾರಂಭದ ಹಂತದಲ್ಲಿ ಕಿವಿಯೋದು ಹೆಚ್ಚು ಉಪಯುಕ್ತ. ಏಕೆಂದರೆ ಧ್ವನಿ ಮತ್ತು ಅಕ್ಷರ ಇವುಗಳ ಸಮನ್ವಯ, ಧ್ವನಿ ಉಚ್ಚಾರಣೆ ಸ್ಪಷ್ಟತೆ, ಪದಗಳ ಗುರುತಿಸುವಿಕೆ, ಧ್ವನಿಯ ಏರಿಳಿತ, ಓದುವಾಗ ಲೇಖನ ಚಿಹ್ನೆಗಳ ಸೂಕ್ತ ಬಳಕೆ ಮುಂತಾದ ಅಂಶಗಳನ್ನು ಮಕ್ಕಳು ಜೋರಾಗಿ ಓದಿದಾಗ ಮಾತ್ರ ಪೋಷಕರಾಗಲಿ, ಶಿಕ್ಷಕರಾಗಲಿ ಗಮನಿಸಬಹುದು. ಸಾಮಾನ್ಯವಾಗಿ ಮನಸ್ಸನ್ನು ಒಂದೆಡೆ ಕೇಂದ್ರೀಕರಿಸಿ ಓದುವ ಪ್ರವೃತ್ತಿ ಸ್ವಲ್ಪ ತಡವಾಗಿಯೇ ಪ್ರಾರಂಭವಾಗುತ್ತದೆ. ಮಕ್ಕಳು ಆ ಸ್ಥಿತಿಯನ್ನು ತಲುಪುವವರೆಗೆ ಬಾಯ್ದೆರೆ ಓದು ಹೆಚ್ಚು ಸೂಕ್ತ. ಹಿರಿಯರಲ್ಲಿ ಈ ಬಗೆಯ ಓದಿನಿಂದ ಅವರ ಭಾಷಿಕ ತಪ್ಪುಗಳನ್ನು ಮಾತೃಭಾಷೆಯ ಪ್ರಭಾವದಿಂದ ಉಂಟಾಗುವ ದೋಷಗಳನ್ನು ಪರಿಹರಿಸಬಹುದು.

ಬರಹದಲ್ಲಿರುವ ಸಂಕೇತಗಳನ್ನು ಧ್ವನಿಯ ಮೂಲಕ ಜೋರಾಗಿ ಉಚ್ಚರಿಸದೆ ಕೇವಲ ಕಣ್ಣಿನಿಂದ ಅಕ್ಷರಗಳನ್ನಾಗಲಿ, ಪದಗಳನ್ನಾಗಲಿ ಗಮನಿಸುತ್ತ ಓದುವುದೇ ಕಣ್ಣೋದು. ಇದನ್ನೆ ಮೌನ ಓದು ಎಂದು ಕರೆಯಲಾಗಿದೆ. ಈ ಬಗೆಯ ಓದಿನಲ್ಲಿ ಸಾಮಾನ್ಯವಾಗಿ ಪದ, ಪದಪುಂಜ ಗಳನ್ನು ಒಟ್ಟೊಟ್ಟಾಗಿ ಅಥವಾ ವಾಕ್ಯಾಂಶಗಳನ್ನು, ಕಂಡಿಕೆಗಳನ್ನು ಇಡಿಯಾಗಿ ಗುರುತಿಸಿ, ಓದುವ ಕ್ರಿಯೆ ನಡೆಯುತ್ತದೆ. ಅಂದರೆ ಭಾಷಾ ಘಟಕ ಅಕ್ಷರದಿಂದ ಬಿಟ್ಟು ಅದಕ್ಕಿಂತ ಮೇಲ್ಮಟ್ಟದ ಘಟಕಗಳನ್ನು ಇಡಿಯಾಗಿ ಅರ್ಥೈಸಿ ಓದುವುದೇ ಕಣ್ಣೋದು. ಅಲ್ಲದೆ ಇದು ಉನ್ನತಮಟ್ಟದ ಭಾಷಾಕೌಶಲದ ಸೂಚಕವಾಗಿರುತ್ತದೆ. ಕೆಲವೊಮ್ಮೆ ಒಟ್ಟಾರೆ ಪುಟವನ್ನು ಅಥವಾ ಪುಟಗಳನ್ನು ಕೇವಲ ಕೆಲವೇ ನಿಮಿಷಗಳಲ್ಲಿ ಓದಿ ಅಗತ್ಯ ವಿಷಯವನ್ನು ಹೆಕ್ಕಿ ಗುರುತಿಸಿ ಕೊಳ್ಳುವುದು ಈ ಬಗೆಯ ಓದಿನಲ್ಲಿ ಸಾಧ್ಯ. ಆದರೆ ಇದು ಮನಸ್ಸನ್ನು ಕೇಂದ್ರೀಕರಿಸಿ, ಏಕಾಗ್ರಚಿತ್ತತೆಯನ್ನು ಸಾಧಿಸಿ ಓದುವ ಪ್ರೌಢಿಮೆಯನ್ನು ಬೆಳೆಸಿಕೊಂಡ ನಂತರವೇ ಸಾಧ್ಯ. ಇಲ್ಲದಿದ್ದರೆ ಓದು ಯಾಂತ್ರಿಕವಾಗುವ ಅಪಾಯವಿರುತ್ತದೆ.

ಬರಹದ ಸಂಕೇತಗಳನ್ನು ಯಾವ ಉದ್ದೇಶವನ್ನಿಟ್ಟುಕೊಂಡು ಓದುತ್ತೇವೆಯೊ ಅದನ್ನು ಆಧರಿಸಿ ಎರಡು ಬಗೆಯ ಮುಖ್ಯ ಓದುವ ಕ್ರಿಯೆಗಳನ್ನು ಗುರುತಿಸಬಹುದು.

1. ಸ್ಥೂಲ ಓದು, 2. ಸೂಕ್ಷ್ಮ ಓದು. ಉದಾಹರಣೆಗೆ ನಿಮ್ಮ ಕೈಯಲ್ಲಿ ಲಾಟರಿ ಟಿಕೆಟ್ ಒಂದಿದ್ದರೆ ಅದಕ್ಕೆ ಬಹುಮಾನ ಬಂದಿದೆಯೇ ಇಲ್ಲವೆ, ಹಾಗೆ ಬಂದಿದ್ದರೆ ಎಷ್ಟು ರೂಪಾಯಿಗಳ ಬಹುಮಾನ ಬಂದಿದೆ ಎಂದು ತಿಳಿಯುವ ಕುತೂಹಲ ನಮಗಿರುತ್ತದೆ. ಆಗ ದಿನಪತ್ರಿಕೆಯನ್ನು ತೆಗೆದುಕೊಂಡ ಕೂಡಲೆ ನಿಮ್ಮ ದೃಷ್ಟಿ ನೇರವಾಗಿ ಫಲಿತಾಂಶ ಇರುವ ಭಾಗವನ್ನು ತಲುಪುತ್ತದೆ. ತತ್‌ಕ್ಷಣ ನಿಮ್ಮ ಲಾಟರಿ ಟಿಕೆಟ್ ನಂಬರ್ ಇದೆಯೇ ಇಲ್ಲವೇ ಎಂಬುದನ್ನು ಹುಡುಕುತ್ತದೆ. ಈ ಬಗೆಯ ನಿರ್ದಿಷ್ಟ ಉದ್ದೇಶದ ಹಿನ್ನೆಲೆಯಲ್ಲಿ ನಡೆಯುವ ಕ್ರಿಯೆಯೇ ಸ್ಥೂಲ ಓದು. ಹಣದುಬ್ಬರದ ಸೂಚ್ಯಾಂಕ, ದುರಂತದಲ್ಲಿ ಸಂಖ್ಯೆ, ತುಟ್ಟಿ ಭತ್ಯೆ ಪ್ರಮಾಣ, ಕ್ರಿಕೆಟ್ ಸ್ಕೋರಿನ ವಿವರ, ಗೋಲುಗಳ ವಿವರ, ಗೋಲು ಗಳಿಸಿದವರ ಹೆಸರು, ಶೇರುಪೇಟೆ ಧಾರಣೆ ಇತ್ಯಾದಿ ಉದ್ದೇಶಗಳನ್ನು ಒಳಗೊಂಡ ಓದು ಈ ಬಗೆಯ ಓದಿಗೆ ಉದಾಹರಣೆ.

ಒಂದು ವೈಜ್ಞಾನಿಕ ಓದಿಗೆ ಉದಾಹರಣೆ: ಪುಸ್ತಕವನ್ನಾಗಲಿ, ಲೇಖನ ವನ್ನಾಗಲಿ, ದಿನಪತ್ರಿಕೆಯ ಸಂಪಾದಕೀಯ, ಶಾಸ್ತ್ರಗಂಥ, ವೈಚಾರಿಕ ಲೇಖನ ಮುಂತಾದವುಗಳನ್ನು ಓದುವಾಗ ಪ್ರತಿಪದವನ್ನು ವಾಕ್ಯವನ್ನು ಬಿಡದೆ ಒಮ್ಮೆ ಅರ್ಥವಾಗದಿದ್ದರೆ ಎರಡನೇ ಬಾರಿ ಅಥವಾ ಮತ್ತೆಮತ್ತೆ ಓದುವ ಕ್ರಿಯೆಗೆ ಸೂಕ್ಷ್ಮ ಓದು ಎನ್ನುತ್ತೇವೆ. ಅಂದರೆ ಬರಹದ ಒಟ್ಟಾರೆ ವಿಷಯವನ್ನು ಅರ್ಥಮಾಡಿಕೊಳ್ಳಲು ಪ್ರತಿ ಅರ್ಥಪೂರ್ಣ ಘಟಕವನ್ನು ಸರಿಯಾಗಿ ಓದಿ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಇದೂ ಉದ್ದೇಶಿತ ಓದು ಕ್ರಿಯೆ. ಆದರೂ ಸ್ಥೂಲ ಓದಿನಂತೆ ಅಲ್ಪಕಾಲಿಕವಲ್ಲ.

ಓದು ಮತ್ತು ಅಕ್ಷರ ಸಂಯೋಜನೆ (ಕಾಗುಣಿತ)

ಭಾಷೆಯೊಂದರಲ್ಲಿ ಬಳಕೆಯಾಗುವ ಧ್ವನಿಮಾಗಳನ್ನು ಬರಹದಲ್ಲಿ ವಿವಿಧ ಸಂಕೇತಗಳ ಮೂಲಕ ಲಿಪಿಯಾಗಿ ಅಳವಡಿಸಲಾಗಿದೆ. ಆದರೆ ಧ್ವನಿಗೂ, ಸಂಕೇತಕ್ಕೂ ಇರುವ ಸಂಬಂಧ ಕೇವಲ ಯಾದೃಚ್ಛಿಕವಾದುದು ಮತ್ತು ರೂಢಿಗತವಾದುದು. ಅಂದರೆ ‘ಅ’ ಧ್ವನಿಗೂ ಅದನ್ನು ಸೂಚಿಸುವ ‘ಅ’ ಲಿಪಿ ಸಂಕೇತಕ್ಕೂ ಇರುವ ಸಂಬಂಧ ಕನ್ನಡವನ್ನು ಬಳಸುವ ಸಮುದಾಯವು ಏರ್ಪಡಿಸಿಕೊಂಡ ಒಂದು ವ್ಯವಸ್ಥೆ. ಹೀಗೆಯೇ ಎಲ್ಲ ಭಾಷೆಗಳಲ್ಲೂ ಇಂತಹ ವ್ಯವಸ್ಥೆ ಇರುತ್ತದೆ. ಮೂಲತಃ ಈ ಲಿಪಿ ನಿರ್ದಿಷ್ಟ ಪದವೊಂದನ್ನು ಸೂಚಿಸಲು ಬಳಕೆಯಾಗಿ ಕ್ರಮೇಣ ನಾಗರಿಕತೆಯ ಜೊತೆಗೆ ಭಾಷೆ ವಿಕಸನಗೊಂಡಂತೆ ಆಕೃತಿಯಲ್ಲೂ ಬದಲಾವಣೆಗಳು ಉಂಟಾಗಿ ಪ್ರಸ್ತುತ ಹಂತವನ್ನು ತಲುಪಿದೆ. ಧ್ವನಿ ಹಾಗೂ ಅದರ ಲಿಪಿಸಂಕೇತದ ಸಂಬಂಧವನ್ನು ಅರಿತು ಕಲಿಕೆಯ ಪ್ರಾರಂಭದ ಹಂತದಲ್ಲಿ ಈ ಸಂಬಂಧವನ್ನು ಅರಿಯುವುದು ಅತಿ ಮುಖ್ಯ. ಧ್ವನ್ಯಾತ್ಮಕ ಭಾಷೆಗಳಲ್ಲಿ ಧ್ವನಿಗೊಂದು ಅಕ್ಷರದಂತೆ ವ್ಯವಸ್ಥೆ ಇರುತ್ತದೆ. ಆದರೆ ಅಕ್ಷರಾತ್ಮಕ ಭಾಷೆಗಳಲ್ಲಿ (ಆಲ್ಫಾಬೆಟಿಕಲ್) ಧ್ವನಿಯೊಂದನ್ನು ಅಕ್ಷರಗುಚ್ಛಗಳು ಪ್ರತಿನಿಧಿಸಬಹುದು. ಉದಾಹರಣೆಗೆ ಕನ್ನಡದಲ್ಲಿ ಅನೇಕ ವೇಳೆ ನಾವು ನುಡಿದಂತೆ ಬರೆಯುತ್ತೇವೆ. ಆದರೆ ಇಂಗ್ಲೀಷಿನಲ್ಲಿ ಈ ವ್ಯವಸ್ಥೆ ಎಲ್ಲ ಪದಗಳಲ್ಲಿಯೂ ಕಂಡುಬರುವುದಿಲ್ಲ. ಉದಾಹರಣೆಗೆ ‘ಟೂ’ ಎನ್ನುವುದು. Too, Two – ಎಂದು ಎರಡು ರೀತಿಯಲ್ಲೂ ಸೂಚಿಸಬಹುದು. ಅಂತೆಯೇ ‘ಫ’ ಧ್ವನಿಯನ್ನು ಕೆಲವೊಮ್ಮೆ ‘f’ ಮೂಲಕವೂ  ಕೆಲವೊಮ್ಮೆ ‘gh’ ಮೂಲಕವೂ ಸೂಚಿಸುವ ರೂಢಿಯಿದೆ. ಕೆಲವು ಭಾಷೆಗಳಲ್ಲಿ ಓದುವ ಕಾಗುಣಿತಕ್ಕೂ ಬರೆಯುವ ಕಾಗುಣಿತಕ್ಕೂ ವ್ಯತ್ಯಾಸ ಕಂಡುಬರುತ್ತದೆ. ಉದಾಹರಣೆಗೆ ಕನ್ನಡದಲ್ಲಿ ‘ಬ್ರಮ್ಹ’ ಎಂದು ಹೇಳಿದರೂ. ಬರೆಯುವುದು ‘ಬ್ರಹ್ಮ’. ಅಂತೆಯೇ ‘ಮಧ್ಯಾಹ್ನ’ ಕೂಡ. ಮತ್ತೊಂದು ವೈಶಿಷ್ಟ್ಯವೆಂದರೆ ಕನ್ನಡದ ಒತ್ತಕ್ಷರಗಳಲ್ಲಿ ಸಜಾತೀಯವಾಗಲಿ, ವಿಜಾತೀಯವಾಗಲಿ ಉಚ್ಚಾರಣೆ ಯಲ್ಲಿ ಒತ್ತಕ್ಷರ ಪೂರ್ಣವಾಗಿ ಉಚ್ಚಾರಣೆಗೊಂಡರೆ ಬರೆಯುವಾಗ ಮೂಲಾಕ್ಷರ ಪೂರ್ಣವಾಗಿ ಬರೆಯಲ್ಪಡುತ್ತದೆ.

ಉದಾ: ವ್+ಅ+ಸ್+ತ್+ರ್+ಅ = ವಸ್ತ್ರ

ಈ ಉದಾಹರಣೆಯಲ್ಲಿ ಕೊನೆಯ ‘ಅ’ ಕಾರ ‘ಸ’ಕ್ಕೆ ಸೇರಿಕೊಳ್ಳುತ್ತದೆ. ತಮಿಳಿನಲ್ಲಿ ‘ತಂಕೈ’ ಎಂದು ಬರೆದುದನ್ನು ‘ತಂಗೈ’ ಎಂದು ಓದಲಾಗುತ್ತದೆ. ಇದರಿಂದ ಓದುವ ರೂಢಿಗೂ ಬರೆಯುವ ರೂಢಿಗೂ ವ್ಯತ್ಯಾಸವಿರುತ್ತದೆ. ಹಿಂದಿಯಲ್ಲಿ ಬಹುಶಃ ಎಂದು ಬರೆದರೂ, ಉಚ್ಚಾರಣೆಯಲ್ಲಿ ‘ಹು’ ಹ್ರಸ್ವವಾಗಿ ಬಹ್‌ಶಃ ಎಂದು ಉಚ್ಚಾರಗೊಳ್ಳುತ್ತದೆ. ಆದುದರಿಂದಲೇ ಓದು ಮತ್ತು ಬರಹ ಕೌಶಲಗಳಿಗೆ ಔಪಚಾರಿಕ ಶಿಕ್ಷಣ ಅತ್ಯಗತ್ಯ.

ಓದುವ ಕ್ರಿಯೆ ಓದುವ ಉದ್ದೇಶಕ್ಕೆ ಅನುಗುಣವಾಗಿ ಬದಲಾಗುತ್ತದೆ. ಓದುವ ವೇಗ, ಅರ್ಥಗ್ರಹಣ, ಚಿಂತನೆ, ಪುನರ್‌ಮನನ ಮುಂತಾದ ಅಂಶಗಳಿಗೆ ಅನುಗುಣವಾಗಿ ಓದುಕ್ರಿಯೆ ನಡೆಯುತ್ತದೆ.

ಇಂತಹ ಉದ್ದೇಶಗಳನ್ನು ಹೀಗೆ ಪಟ್ಟಿ ಮಾಡಬಹುದು.

1.  ಗಣಿತದ ಸಮಸ್ಯೆಗಳನ್ನು ಬಿಡಿಸುವಾಗ, ಅಡುಗೆಗೆ ಸಂಬಂಧಿಸಿದಂತೆ ಕ್ರಮ ಗಳನ್ನು ಅನುಸರಿಸುವಾಗ – ಇತ್ಯಾದಿ ಸಂದರ್ಭಗಳಲ್ಲಿ ಬರಹದಲ್ಲಿ ನೀಡಿರುವ ನಿರ್ದೇಶನಗಳಿಗನುಗುಣವಾಗಿ ಅದೇ ಕ್ರಮದಲ್ಲಿ ಓದಬೇಕಾಗುತ್ತದೆ.

2.  ಧಾರ್ಮಿಕ ಸ್ತೋತ್ರಗಳನ್ನು ಅಥವಾ ಶಾಸ್ತ್ರಗ್ರಂಥಗಳಿಂದ ಉದ್ಧರಿಸಿ ಓದು ವಾಗ ಅಕ್ಷರಶಃ ಓದಬೇಕಾಗುತ್ತದೆ. ತಾಂತ್ರಿಕ ವಿವರಣೆಗಳನ್ನು ಅರಿಯ ಬೇಕಾದಾಗ ಸೂಕ್ಷ್ಮವಾ ಓದು ಅಗತ್ಯ. ಅಂತೆಯೇ ನಾಟಕ ಮತ್ತು ಕವನಗಳನ್ನು ಓದುವಾಗ ಭಾವಪೂರ್ಣವಾಗಿ ಓದಬೇಕಾಗುತ್ತದೆ.

3.  ಭೂಪಟ ಮತ್ತು ಕೋಷ್ಟಕಗಳನ್ನು ಓದುವಾಗ ಚಿತ್ರರೂಪದ ಬರಹವನ್ನು ಅರ್ಥಪೂರ್ಣ ವಿವರಣೆಯಾಗಿ ಓದಬೇಕಾಗುತ್ತದೆ.

4.  ಪಠ್ಯಪುಸ್ತಕಗಳನ್ನು ಓದುವಾಗ ಅರ್ಥಗ್ರಹಣಕ್ಕೆ ಒತ್ತು ನೀಡಿ ಓದಬೇಕು.

5.  ವಿಶ್ವಕೋಶ, ಸಾಹಿತ್ಯಿಕ ಗ್ರಂಥಗಳು, ಸಂಪಾದಕೀಯ ಮುಂತಾದುವನ್ನು ಟಿಪ್ಪಣಿ ಮಾಡುವ ದೃಷ್ಟಿಯಿಂದ ಅಥವಾ ಮುಖ್ಯಾಂಶಗಳನ್ನು ಗ್ರಹಿಸುವ ದೃಷ್ಟಿಯಿಂದ ಓದಬೇಕು. ಕಾದಂಬರಿ ಮತ್ತು ಸಣ್ಣ ಕಥೆಗಳು ಮುಂತಾದು ವನ್ನು, ಮನೋರಂಜನೆಯ ದೃಷ್ಟಿಯಿಂದ ಓದಬೇಕು. ಆತ್ಮಕತೆಯನ್ನು, ಚಾರಿತ್ರಿಕ ಘಟನೆಗಳನ್ನು ಓದುವಾಗ ವ್ಯಕ್ತಿಯ ಸ್ವಭಾವ, ಪ್ರವೃತ್ತಿ ಆಸಕ್ತಿ ಮುಂತಾದ ವಿಷಯಗಳನ್ನು ತಿಳಿಯಲು ಓದಬೇಕು.

6.  ಘಟನಾವಳಿ, ನಿಯತಕಾಲಿಕೆಗಳ ಲೇಖನಗಳು, ರಾಜಕೀಯ ಇನ್ನಿತರೆ ಸುದ್ದಿ ಮುಂತಾದುವನ್ನು ಮೇಲ್ನೋಟದ ಅರ್ಥಗ್ರಹಣದ ದೃಷ್ಟಿಯಿಂ ಓದಬೇಕು.

7.  ಪರಾಮರ್ಶನ ಗ್ರಂಥಗಳು, ಆಕರಪಟ್ಟಿ ಮುಂತಾದುವನ್ನು ವಿಮರ್ಶಾದೃಷ್ಟಿ ಯಿಂದ ಓದುತ್ತೇವೆ.

ಉತ್ತಮ ಓದುಗರ ಕೆಲವು ಗುಣಲಕ್ಷಣಗಳನ್ನು ಹೀಗೆ ಪಟ್ಟಿ ಮಾಡಬಹುದು.

1.  ನಿರ್ದಿಷ್ಟ ಉದ್ದೇಶ ಹೊಂದಿರಬೇಕು.

2.  ಏಕಾಗ್ರಚಿತ್ತತೆ ಇರಬೇಕು.

3.  ಅರ್ಥವನ್ನು ಗ್ರಹಿಸಬೇಕು.

4.  ಓದಿದ ಅಂಶವನ್ನು ನೆನಪಿನಲ್ಲಿಡಬೇಕು.

5.  ಉತ್ತಮ ಪದಸಂಪತ್ತನ್ನು ಹೊಂದಿರಬೇಕು.

6.  ಅತ್ಯಲ್ಪ ಕಾಲದಲ್ಲಿ ಅತಿ ಹೆಚ್ಚು ಓದುವ ಸಾಮರ್ಥ್ಯ ಹೊಂದಿರಬೇಕು.

ಓದುವ ವೇಗ ಓದುವ ವಸ್ತುವನ್ನು ಅವಲಂಬಿಸಿರುತ್ತದೆ. ಇಷ್ಟೇ ಅಲ್ಲ; ವಿಷಯ ಹೆಚ್ಚು ಪರಿಚಿತವಾಗಿದ್ದಲ್ಲಿ ಓದಿನ ವೇಗ ಹೆಚ್ಚಾಗುತ್ತದೆ; ಅಪರಿಚಿತ ವಾದಲ್ಲಿ ನಿಧಾನವಾಗುತ್ತದೆ. ಸಾಮಾನ್ಯ ಓದುಗರು ಭಾಷೆಯ ಹಲವು ಕ್ಷೇತ್ರ ಗಳಲ್ಲಿ (ಡೊಮೈನ್) ಬಳಕೆಯಾಗುವ ಭಾಷೆಯ ಸಾಮಾನ್ಯ ಜ್ಞಾನ ಹೊಂದಿರು ತ್ತಾರೆ. ಇದರಿಂದಾಗಿ ಕೆಲವು ತಾಂತ್ರಿಕ ಅಥವಾ ಪಾರಿಭಾಷಿಕ ಶಬ್ದಗಳನ್ನು ಬಿಟ್ಟರೂ ಒಟ್ಟಾರೆ ಅರ್ಥವನ್ನು ಗ್ರಹಿಸಬಲ್ಲವನಾಗಿರುತ್ತಾರೆೆ. ಈ ಪ್ರೌಢಿಮೆ ಹೆಚ್ಚು ಹೆಚ್ಚು ಓದುವುದರಿಂದ ಹಾಗೂ ಹಲವು ವಿಷಯಗಳನ್ನು ಕುರಿತ ಲೇಖನಗಳು, ಪುಸ್ತಕಗಳನ್ನು ಓದುವುದರಿಂದ ಸಹಜವಾಗಿ ಲಭ್ಯವಾಗುತ್ತದೆ. ಆದುದರಿಂದ ಭಾಷಾಕಲಿಕೆಯ ಪ್ರಾರಂಭದ ಹಂತದಲ್ಲಿ ಪಠ್ಯಪುಸ್ತಕಗಳನ್ನಲ್ಲದೆ ಪೂರಕ ಗ್ರಂಥಗಳನ್ನು ಓದುವುದು ಉಪಯುಕ್ತ.

ಪಠ್ಯಪುಸ್ತಕಗಳು ಮತ್ತು ಓದು

ಇತ್ತೀಚಿನ ದಿನಗಳಲ್ಲಿ ಕಲಿಕೆಯ ಹಂತಕ್ಕೆ ಓದು ಸಾಮಗ್ರಿಯನ್ನು ಸಿದ್ಧಪಡಿಸುವ ಕ್ರಿಯೆ ಅತ್ಯಂತ ವೈಜ್ಞಾನಿಕವಾಗಿ ನಡೆಯುತ್ತದೆ. ಕಲಿಯುವವರ ಓದು ಸಾಮರ್ಥ್ಯಕ್ಕೆ ಅನುಗುಣವಾಗಿ ಶ್ರೇಣೀಕರಿಸಿದ, ನಿಯಂತ್ರಿಸಿದ ಓದು ಸಾಮಗ್ರಿ ಬೇಕಾಗುತ್ತದೆ. ಉದಾಹರಣೆಗೆ ಅತ್ಯಂತ ಪ್ರಾರಂಭಿಕ ಹಂತದಲ್ಲಿ ಕಲಿಯುವವರಿಗಾಗಿ ಚಿತ್ರಸಹಿತ ಚಿಕ್ಕಚಿಕ್ಕ ಪದಗಳು, ಪದಪುಂಜಗಳು ಅಲ್ಲದೆ ಹೆಚ್ಚು ಪರಿಚಿತ ಪದಗಳನ್ನು ಬಳಸಿ ಕಲಿಕೆಯ ಸಾಮಗ್ರಿಯನ್ನು ರಚಿಸಬೇಕು. ಕಲಿಕೆ ಸಾಗಿದಂತೆಲ್ಲ ಮೂರ್ತರೂಪದ, ಪರಿಚಿತವಾದ, ಶಿಷ್ಟರೂಪದ ಪದ ಗಳನ್ನು ಆಯಾ ಹಂತಕ್ಕೆ ಬಳಸಿ, ವಾಕ್ಯರಚನೆಯನ್ನು ನಿಯಂತ್ರಿಸಿ ಪಾಠಗಳನ್ನು ಬರೆಯಬೇಕಾಗುತ್ತದೆ. ಅತಿ ಮಹತ್ವದ ಮತ್ತೊಂದು ಅಂಶವೆಂದರೆ ಹಲವು ಬಗೆಯ ಜಾತಿ ಭಾಷೆ, ಸಮುದಾಯ ಭಾಷೆ, ಉಪಭಾಷೆಗಳು ಮುಂತಾದ ಹಿನ್ನೆಲೆಯಿಂದ ಬಂದ ಮಕ್ಕಳಿಗೆ ಕ್ರಮೇಣ ಶಿಷ್ಟಭಾಷೆಯನ್ನು ಪರಿಚಯಿಸು ವುದು, ಅದರ ಬಳಕೆಗೆ ಪ್ರೋಭಾಷಾಶಿಕ್ಷಣದ ಮೂಲ ಉದ್ದೇಶಗಳಲ್ಲೊಂದು. ಈ ದೃಷ್ಟಿಯಿಂದ ಭಾಷೆಯೊಂದನ್ನು ಬಳಸುವ ಒಟ್ಟಾರೆ ಭೂಪ್ರದೇಶದಲ್ಲಿ ಪಠ್ಯಪುಸ್ತಕಗಳು ಪ್ರಮಾಣಿತ ಕಾಗುಣಿತ, ಪದ, ಬರಹದ ರೂಢಿ ಮುಂತಾದ ಅಂಶಗಳನ್ನು ಒಳಗೊಂಡಿರಬೇಕಾಗುತ್ತದೆ. ಏಕೆಂದರೆ ಕಲಿಕೆ ಇದರಿಂದ ಸಾಧ್ಯವಾಗುತ್ತದೆ. ಪಠ್ಯಪುಸ್ತಕ, ನಿಘಂಟು, ವಿವಿಧ ಬಗೆಯ ಕೋಶ ಗಳು ಮುಂತಾದುವನ್ನು ಸಿದ್ಧಪಡಿಸುವಾಗ ಭಾಷಾ ಬೆಳವಣಿಗೆಯ ಅಂಶಗಳನ್ನು ಕಾಲದಿಂದ ಕಾಲಕ್ಕೆ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿ ಓದು ಸಾಮಗ್ರಿಯನ್ನು ರೂಪಿಸಬೇಕು. ಉದಾಹರಣೆಗೆ ಉಚ್ಚಾರಣೆಯಲ್ಲಿ ಅರ್ಕಾರೊತ್ತು ಒಳಗೊಂಡ ಹಲವಾರು ಸಂಸ್ಕೃತ ಶಬ್ದಗಳನ್ನು ಎರಡು ರೀತಿಯಲ್ಲಿ ಬರೆಯಬಹುದು.

ಉದಾ. ಸೂರ‍್ಯ, ಸೂರ‍್ಯ. ‘ರ’ಗೆ ಯಕಾರದ ಒತ್ತು ಕನ್ನಡದ ಓದು ಮತ್ತು ಕಾಗುಣಿತಕ್ಕೆ ಹೆಚ್ಚು ಹತ್ತಿರವಾದುದು. ಅಂದರೆ ಭಾಷೆಯ ಜಾಯ ಮಾನಕ್ಕೆ, ಬಳಸುವ ರೂಢಿಗೆ ಸರಿಹೊಂದು ವಂತಹ ಬದಲಾವಣೆಗಳನ್ನು ಓದು ಸಾಮಗ್ರಿಯಲ್ಲಿ ಅಳವಡಿಸಬೇಕು.

ವೇಗವರ್ಧಕ ಓದು : (ರ‍್ಯಾಪಿಡ್ ರೀಡಿಂಗ್)

ಓದುವ ವೇಳೆಯಲ್ಲಿ ಬಹುಮಟ್ಟಿಗೆ ಒಂದು ನಿರ್ದಿಷ್ಟ ಅವಧಿಯಲ್ಲಿ ಕಣ್ಣಿನ ದೃಷ್ಟಿ ಎಷ್ಟು ಪದಗಳನ್ನಾಗಲಿ, ವಾಕ್ಯಾಂಶಗಳನ್ನಾಗಲಿ ಗಮನಿಸಿ ಓದುತ್ತದೆ ಎಂಬ ಅಂಶದ ಮೇಲೆ ನಿರ್ಧಾರವಾಗಿದೆ. ಮೊದಮೊದಲು ಕೆಲವೇ ಅಕ್ಷರಗಳನ್ನು, ಒಂದೆರಡು ಪದಗಳನ್ನು ಗಮನಿಸಿ ಓದುವ ಕಣ್ಣು, ಓದು ಸಾಮರ್ಥ್ಯ ಹೆಚ್ಚಿದಂತೆಲ್ಲ ಇಡೀ ಸಾಲನ್ನು ಇಲ್ಲವೆ ಕಂಡಿಕೆಯೊಂದರ ಮೇಲೆ ಸಮಗ್ರವಾಗಿ ದೃಷ್ಟಿಚೆಲ್ಲಿ ಓದುವಂತೆ ಆಗುತ್ತದೆ. ಜೊತೆ ಜೊತೆಗೆ ವ್ಯಕ್ತಿಯ ಪದಸಂಪತ್ತು ಹೆಚ್ಚಾದಂತೆಲ್ಲ ವೇಗ ಮತ್ತು ಅರ್ಥಗ್ರಹಣಶಕ್ತಿ ಹೆಚ್ಚಾಗುತ್ತದೆ. ಇತ್ತೀಚಿನ ಸಂಶೋಧನೆಗಳ ಪ್ರಭಾವದಿಂದ ಓದನ್ನು ಕ್ರಮೇಣ ಹೆಚ್ಚಿಸಲು ಸೂಕ್ತವಾಗುವಂತಹ ಅಭ್ಯಾಸಗಳನ್ನು, ತಂತ್ರಗಳನ್ನು ರೂಪಿಸಲಾಗಿದೆ.

ಓದುವರ್ಧಕ ಸಾಧನ (ರೀಡಿಂಗ್ ಆಕ್ಸಿಲರೇಟರ್)

ಈ ಸಂಶೋಧನೆಗಳ ಕೊಡುಗೆ ಪ್ರಾರಂಭಿಕ ಹಂತವನ್ನು ದಾಟಿದನಂತರ ಸಾಧ್ಯ. ವಿವಿಧ ಬಗೆ ಓದು ಸಾಮಗ್ರಿಯನ್ನು ವೇಗವಾಗಿ ಓದಲು ಅನುಕೂಲವಾಗುವಂತೆ ಈ ಯಂತ್ರವನ್ನು ರೂಪಿಸಿದೆ. ಇದು ಓದುವಾಗ ಕಣ್‌ಚಲನೆಯ ವೇಗ ಹಾಗೂ ದೃಷ್ಟಿಯನ್ನು ಅಲ್ಲಲ್ಲಿ ಸ್ಥಿರೀಕರಿಸುವ ಕ್ರಮವನ್ನು ಆಧರಿಸಿ ಯಂತ್ರದಲ್ಲಿ ಪದ, ವಾಕ್ಯಾಂಶ ಸಾಲು ಹೀಗೆ ಕ್ರಮೇಣ ಪುಟ್ಟ ಕಿಂಡಿಯೊಂದರ ಮೂಲಕ ಓದು ಸಾಧ್ಯವಾಗುವಂತಹ ವ್ಯವಸ್ಥೆಯಿರುತ್ತದೆ. ಮೊದಲು ಇದರ ವೇಗ ಕಡಿಮೆಯಿದ್ದು ಕ್ರಮೇಣ ಹೆಚ್ಚಾಗುವುದರಿಂದ ಓದಿನ ವೇಗ ಹೆಚ್ಚುತ್ತದೆ. ಹೆಚ್ಚುಹೆಚ್ಚು ಅಭ್ಯಾಸದಿಂದ ವೇಗದ ಮೇಲೆ ಹತೋಟಿ ಉಂಟಾಗುತ್ತದೆ.

ಕಾಗುಣಿತ ಸುಧಾರಣೆ

ಭಾಷಾಬಳಕೆ ವಿವಿಧ ವರ್ಗಗಳಿಂದ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿದಂತೆಲ್ಲ ಆಗಾಗ ಭಾಷೆಯ ಧ್ವನಿ ವ್ಯವಸ್ಥೆ ಬಹುಮಟ್ಟಿಗೆ ಒಳಪಡುತ್ತದೆ. ಈ ಬದಲಾವಣೆಗೆ ಬೇರೆ ಬೇರೆ ಭಾಷೆಗಳ ಪ್ರಭಾವವೂ, ಭಾಷೆಯ ಆಂತರಿಕ ಸಂಪನ್ಮೂಲ ಕೊರತೆಯೂ ಕಾರಣವಾಗಬಹುದು. ಉದಾಹರಣೆಗೆ ಕನ್ನಡದಲ್ಲಿ ಇಂಗ್ಲೀಷ್, ಹಿಂದಿ, ಅರಬ್ಬಿ, ಪಾರ್ಸಿ, ಪೋರ್ಚುಗೀಸ್ ಮುಂತಾದ ಭಾಷೆಗಳ ಹಲವಾರು ಶಬ್ದಗಳು ಈಗ ಬಳಕೆಯಲ್ಲಿವೆ. ಅವುಗಳನ್ನು ಸಮರ್ಪಕವಾಗಿ ಬಳಸಬೇಕಾದಾಗ ಆ ಧ್ವನಿಗಳನ್ನು ಕನ್ನಡಕ್ಕೆ ಅಳವಡಿಸಬೇಕಾಗುವುದು ಅನಿವಾರ್ಯ. ಹೀಗಾದಾಗ ಕನ್ನಡದ ಧ್ವನಿಗಳಿಗೆ ಇರುವ ಲಿಪಿಸಂಕೇತಗಳನ್ನು ಹಾಗೂ ಉಚ್ಚಾರಣೆಯನ್ನು ಅಲ್ಪಸ್ವಲ್ಪ ಬದಲಾಯಿಸಬೇಕಾಗಬಹುದು. ಅಷ್ಟೇ ಅಲ್ಲದೆ ಭಾಷೆಯಲ್ಲಿ ಸಹಜವಾಗಿ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಉಂಟಾಗುವ ಬದಲಾವಣೆಗಳನ್ನು ಲಿಪಿಯಲ್ಲಿ ಅಳವಡಿಸಬೇಕು. ಇದಕ್ಕೆ ಕಾಗುಣಿತ ಸುಧಾರಣೆ ಮಾಡಬೇಕು. ಉದಾಹರಣೆಗೆ ‘-ಋೂ’ ಅಕ್ಷರ ಕನ್ನಡದಲ್ಲಿ ಬಳಕೆಯಲ್ಲಿಲ್ಲ. ಆದರೂ ಕನ್ನಡ ವರ್ಣಮಾಲೆ ಸಂಸ್ಕೃತ ಪ್ರಭಾವದಿಂದ ರೂಪಿತವಾದುದರಿಂದ ಅದನ್ನು ಹಾಗೆಯೇ ಉಳಿಸಿಕೊಂಡಿತ್ತು. ಈಗ ಅದನ್ನು ಕೈಬಿಡುವುದು ಸೂಕ್ತವೆನಿಸಿದೆ. ಅಂತೆಯೇ ಸಂಸ್ಕೃತದ… (ಕ್ಷ)…(ತ್ರ)…(ಜ್ಞ)ಗಳನ್ನು ಬರೆಯುವಾಗ ಲಿಪಿಯ ಆಕೃತಿ ಮೂಲಾಕ್ಷರಗಳಿಂದ ಸಂಪೂರ್ಣ ಬೇರೆಯಾದುದರಿಂದ ಅದನ್ನು ವರ್ಣಮಾಲೆಯಲ್ಲಿ ಅಳವಡಿಸಿಕೊಳ್ಳಲಾಗಿತ್ತು. ಆದರೆ ಕನ್ನಡದಲ್ಲಿ ‘ಕ್ಷ’ ‘ತ್ರ’ ‘ಜ್ಞ’ಗಳನ್ನು ಬರೆಯುವಾಗ ಈ ವ್ಯತ್ಯಾಸ ಕಂಡುಬರುವುದಿಲ್ಲ. ಆದುದರಿಂದ ಅವುಗಳನ್ನು ಕೈಬಿಟ್ಟಿದೆ. ‘ರ್ಯ’ ಸಂಯುಕ್ತಾ ಕ್ಷರವನ್ನು ‘ರ್ಯ’ ಎಂದೂ ‘ರ್ಯ’ ಎಂದೂ ಬರೆಯುವ ರೂಢಿ ಇದೆ. ಮೊದಲನೆಯದು ಕನ್ನಡದ ರೂಢಿಯಾದರೆ, ಎರಡನೆಯದು ಸಂಸ್ಕೃತದ ಪ್ರಭಾವದಿಂದ ರೂಪಿತಗೊಂಡ ರೂಢಿ. ಈಗ ಇವೆರಡನ್ನು ಸರಿ ಎಂದು ಒಪ್ಪಿಕೊಳ್ಳಲಾಗಿದೆ. ಆದರೆ ಏಕರೂಪತೆ ಮತ್ತು ಕಲಿಕೆಯ ಸಮಸ್ಯೆ ದೃಷ್ಟಿಯಿಂದ ಎರಡನೆಯದನ್ನು ಅಂದರೆ ‘ರ್ಯ’ವನ್ನು ಕೈಬಿಡಬಹುದು. ಅರ್ಕಾರೊತ್ತನ್ನೇ ಸಂಪೂರ್ಣವಾಗಿ ಕೈಬಿಡಲೂಬಹುದು. ಈ ಬಗೆಯ ಹಲವು ಸಮಸ್ಯೆಗಳಿಗೆ ಕಾಗುಣಿತ ಸುಧಾರಣೆ ಪರಿಹಾರ ಒದಗಿಸುತ್ತದೆ. ಈ ದಿಶೆಯಲ್ಲಿ ಹೆಚ್ಚು ಚಿಂತನೆ ನಡೆದಿಲ್ಲ.

ಓದು ಪರೀಕ್ಷೆ

ಭಾಷೆಯ ವಿವಿಧ ಕೌಶಲವನ್ನು ಪರೀಕ್ಷಿಸುವುದು ಭಾಷಾಕೌಶಲದ ಮೌಲ್ಯಮಾಪನದ ಒಂದು ಅಂಗ. ಅಂದರೆ ಯಾವ ಓದು ಸಾಮಗ್ರಿಯನ್ನಾ ದರೂ ಸುಲಲಿತವಾಗಿ ಓದುವುದು, ಸರಿಯಾದ ಉಚ್ಚಾರಣೆ, ಧ್ವನಿಯ ಏರಿಳಿತ, ಓದುವಾಗ ಅರ್ಥಪೂರ್ಣ ಘಟಕಗಳನ್ನು ಸರಿಯಾಗಿ ಗುರುತಿಸಿ ಓದುವುದು ಓದಿದ ಅಂಶವನ್ನು ಸರಿಯಾಗಿ ಗ್ರಹಿಸುವುದು ಮುಂತಾದ ಅಂಶಗಳನ್ನು ಪರೀಕ್ಷಿಸಲು ಪರೀಕ್ಷೆ ಅಗತ್ಯ. ಇದಕ್ಕಾಗಿ ನಿರ್ದಿಷ್ಟ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ಅಭ್ಯಾಸಗಳನ್ನು ರೂಪಿಸಬೇಕಾಗು ತ್ತದೆ. ಅರ್ಥಗ್ರಹಿಕೆಗೆ ಸಂಬಂಧಪಟ್ಟಂತೆ ಪಠ್ಯವಸ್ತುವನ್ನು ಆಧರಿಸಿದ ಪ್ರಶ್ನೆಗಳು, ಪದಗಳು, ಪದಪುಂಜಗಳನ್ನು ಪ್ರತ್ಯೇಕವಾಗಿ ಪ್ರಶ್ನೆಗಳ ರೂಪದಲ್ಲಿ ಕೊಡುತ್ತಾರೆ. ಅಂತೆಯೇ ಓದಿದ ವೇಗದ ವಸ್ತುನಿಷ್ಠ ಪರೀಕ್ಷೆ ಸಾಧ್ಯ. ಇಷ್ಟೇ ಅಲ್ಲದೆ ಓದಿದ ಪಠ್ಯವಸ್ತುವಿನ ಸಾರಸಂಗ್ರಹ ಕೂಡ ಇಂತಹ ಅಭ್ಯಾಸಗಳಲ್ಲಿ ಒಂದು.

ಬರಹ

ಬರಹ ಮಾತನಾಡುವಿಕೆಯಂತೆ ಉತ್ಪಾದಕ ಕೌಶಲ. ಅಂದರೆ ಮಾತನಾಡುವ ಕ್ರಿಯೆಗೆ ಹೇಗೋ ಹಾಗೆಯೇ ಬರೆಹಕ್ಕೆ ಪೂರ್ವಾಲೋಚನೆ, ಮಾನಸಿಕ ಸಿದ್ಧತೆ ಅತ್ಯಗತ್ಯ. ಮಾತನಾಡುವಿಕೆಯಲ್ಲಿ ಆಲೋಚನೆಗಳನ್ನು ಮಾತಿನ ರೂಪದಲ್ಲಿ ಅಭಿವ್ಯಕ್ತಿಸುತ್ತೇವೆ. ಆದರೆ ಬರಹದಲ್ಲಿ ಲಿಪಿ ಸಂಕೇತಗಳ ಮೂಲಕ ವ್ಯಕ್ತ ಪಡಿಸುತ್ತೇವೆ. ಇದಕ್ಕೆ ವಿರುದ್ಧವಾಗಿ ಓದು ಮತ್ತು ಕೇಳುವಿಕೆ, ಕೇವಲ ಧ್ವನಿ ಮಾಧ್ಯಮದಲ್ಲಿ ಇಲ್ಲವೆ, ಲಿಪಿ ಸಂಕೇತದ ಮಾಧ್ಯಮದ ಮೂಲಕ ಇರುವ ಭಾಷಾ ಸಾಮಗ್ರಿಯನ್ನು ಗ್ರಹಿಸುವ ಕ್ರಿಯೆಗಳಾಗಿವೆ. ಬರಹದಲ್ಲಿ ಎರಡು ಅಂಶಗಳಿವೆ.

1.  ಲೇಖನಪೂರ್ವ ಮಾನಸಿಕ ಚಿಂತನೆ

2.  ಬರೆಯುವ ವಿಧಾನವನ್ನೊಳಗೊಂಡ ತಾಂತ್ರಿಕತೆ

ಮೊದಲನೆಯದು ಏನನ್ನು ಬರೆಯಬೇಕು, ಹೇಗೆ ಬರೆಯಬೇಕು ಎಂಬುದನ್ನು ಕುರಿತ ಮಾನಸಿಕ ಚಿಂತನೆ. ಇದು ಮನಸ್ಸಿನಲ್ಲಿ ರೂಪಿತಗೊಂಡು ಸ್ಪಷ್ಟ ಕಲ್ಪನೆ ರೂಪ ತಳೆದು, ಭಾಷೆಯ ನಿಯಮಗಳನ್ನು ಅನುಸರಿಸಿ ಆಗುವಂತಹ ಕ್ರಿಯೆ. ಈ ಕ್ರಿಯೆ ಭಾಷಾಬಳಕೆಯ ಎಲ್ಲ ಸಮರ್ಪಕವಾದಂತೆ ಅಭಿವ್ಯಕ್ತಿಯಲ್ಲಿ ಅಚ್ಚುಕಟ್ಟು ಉಂಟಾಗುತ್ತದೆ. ಇಂತಹ ಆಲೋಚನೆಗಳನ್ನು ಬರಹದಲ್ಲಿ ಮೂಡಿಸಲು ಲಿಪಿಯ ಬಳಕೆ ಅನಿವಾರ್ಯ. ಮೊದಮೊದಲು ಅಕ್ಷರ ಆಕೃತಿಗಳನ್ನು ಸರಿಯಾಗಿ ಬರೆಯುವ ವಿಧಾನವನ್ನು ಅಭ್ಯಾಸ ಪೂರ್ವಕವಾಗಿ ಕಲಿಯಬೇಕು. ಅನಂತರ ಪದ, ಪದಪುಂಜ, ವಾಕ್ಯ, ಹೀಗೆ ಅರ್ಥಪೂರ್ಣ ಘಟಕಗಳನ್ನು ರೂಪಿಸುವ ಬಗೆಯನ್ನು ಕಲಿಯಬೇಕು. ಈ ಹಂತದಲ್ಲಿ ಅನುಸರಿಸುವ ಕೈ ಚಲನೆ ಬರಹಕ್ಕೆ ವೇಗವನ್ನೂ, ನಿರ್ದಿಷ್ಟತೆಯನ್ನು ತಂದು ಕೊಡುತ್ತದೆ. ಕೈಚಲನೆ ಸಮರ್ಪಕವಾಗಿಲ್ಲದಿದ್ದರೆ ಬರೆಯುವ ವೇಗ ಕುಂಠಿತವಾಗುತ್ತದೆ. ಸ್ಫುಟತೆಯಲ್ಲಿ ಕೊರತೆ ಉಂಟಾಗುತ್ತದೆ. ಆದುದರಿಂದ ಬರಹಕ್ಕೂ ಔಪಚಾರಿಕ ಶಿಕ್ಷಣ ಅತ್ಯಗತ್ಯ.

ಓದಿದ ಅಂಶ ನಮಗೆ ಅರ್ಥವಾಗುವುದು ಹೇಗೆ ಎಂಬ ಪ್ರಶ್ನೆ ಹೇಗೆ ಸಂದಿಗ್ಧವೋ ಹಾಗೆ ಬರಹವು ಕೂಡ. ಏಕೆಂದರೆ ಬರಹದ ಹಿಂದಿನ ಮಾನಸಿಕ ಚಿಂತನೆ ಹೇಗಾಗುತ್ತದೆ, ಯಾವ ಯಾವ ಹಂತಗಳನ್ನು ದಾಟಿ ವಿಷಯದ ಕಲ್ಪನೆ ಪೂರ್ಣವಾಗುತ್ತದೆ ಎಂಬ ಪ್ರಶ್ನೆಯನ್ನು ಕುರಿತು ಇನ್ನೂ ಸಂಶೋಧನೆ ನಡೆಯುತ್ತಿದೆ. ಆದರೆ ಸಂಶೋಧಕರು ಹೇಳುವ ಮಹತ್ವದ ವಿಷಯವೇನೆಂದರೆ ಬರಹಗಾರನು ಈ ಬಗ್ಗೆ ಹೆಚ್ಚು ಚಿಂತಿಸಿದಷ್ಟೂ ಬರಹದ ಸಹಜತೆಗೆ ತೊಡಕಾಗುತ್ತದೆ ಎಂಬುದು. ಆದುದರಿಂದ ಬರಹವನ್ನು ಕುರಿತು ತಜ್ಞರು ಹೇಳುವುದೇನೆಂದರೆ ಒಮ್ಮೆ ಬರೆದ ಬರಹವನ್ನು ಸ್ವಲ್ಪ ಕಾಲಾನಂತರ ತಿದ್ದಲು ಪ್ರಯತ್ನಿಸಬೇಕು. ಹೀಗೆ ಮಾಡುವುದರಿಂದ ಮಾನಸಿಕ ಚಿಂತನೆ ಇನ್ನಷ್ಟು ಗಟ್ಟಿಗೊಂಡು ಪಕ್ವತೆ ಪಡೆಯುತ್ತದೆ. ಅನಂತರ ತಿದ್ದುವ ಕ್ರಿಯೆ ನಡೆದಲ್ಲಿ ಅದರ ಗುಣಮಟ್ಟ ಹೆಚ್ಚುತ್ತದೆ. ಇಲ್ಲದಿದ್ದಲ್ಲಿ ತಿದ್ದುವ ಕೆಲಸ ಹೆಚ್ಚು ಹೆಚ್ಚು ಆಗುತ್ತದೆಯೆ ಹೊರತು ವಿಷಯದ ಸ್ಪಷ್ಟ ಕಲ್ಪನೆ ಬರಹದಲ್ಲಿ ಮೂಡುವುದಿಲ್ಲ ಎಂಬುದು ಪರಿಣತರ ಅಭಿಪ್ರಾಯ.

ಬರಹದ ಕ್ರಿಯೆಯಲ್ಲಿ ಮೂರು ಪ್ರಮುಖ ಹಂತಗಳನ್ನು ಗುರುತಿಸ ಬಹುದು.

1.  ಆಲೋಚನೆ, ಬರಹದ ಚೌಕಟ್ಟು ರಚನೆ.

2.  ಉದ್ದೇಶಿತ ಓದುಗ ಯಾರು? ಅವರಿಗಾಗಿ ವಿಷಯಗಳನ್ನು ಹೇಗೆ ಹೇಳಬೇಕು, ಸಾಮಾಜಿಕ ಕಟ್ಟುಪಾಡುಗಳು, ಭಾಷಿಕ ರೂಢಿಗಳು ಇವುಗಳ ಚಿಂತನೆ.

3.  ಭಾಷಿಕ ರಚನೆ, ಪದಗಳ ಬಳಕೆ, ಲೇಖನ ಚಿಹ್ನೆಗಳ ರೂಢಿ, ಬರಹದ ಒಟ್ಟಾರೆ ಧಾಟಿ ಹಾಗೂ ಮಾಧ್ಯಮ.

ಮೇಲೆ ತಿಳಿಸಿದ ಹಂತಗಳು ಸಾಮಾನ್ಯವಾಗಿ ವಿಷಯದ ಚಿಂತನೆಯಿಂದ ಹಿಡಿದು ಬರಹದ ಹಸ್ತಪ್ರತಿ ತಯಾರಿಕೆಯವರೆಗೂ ಬಹುಪಾಲು ಅಂಶಗಳನ್ನು ಒಳಗೊಳ್ಳುತ್ತವೆ. ಬರಹವು ಸ್ಪಷ್ಟರೂಪ ತಳೆಯಲು ನಾಲ್ಕು ಪ್ರಮುಖ ಹಂತಗಳನ್ನು ದಾಟಬೇಕಾಗುತ್ತವೆ. ಅವು ಯಾವುವೆಂದರೆ ವಿಷಯದ ಟಿಪ್ಪಣಿ, ರಚನೆ, ಕರಡು ನಿರ್ಮಾಣ ಹಾಗೂ ಅಂತಿಮರೂಪ. ಇವು ಅನೇಕ ನುರಿತ ಬರಹಗಾರರು ಅನುಸರಿಸುವ ವಿಧಾನ. ಮಾತಿಗೆ ಇರುವಂತಹ ಅಭಿವ್ಯಕ್ತಿ ಬರಹಕ್ಕಿಲ್ಲ. ಏಕೆಂದರೆ ‘ಮಾತು  ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು’ ಎಂಬ ಗಾದೆ ಮಾತಿನಂತೆ ಮಾತನ್ನು ಆಡುವ ಮುಂಚಿನ ಮಾನಸಿಕ ಚಿಂತನೆ ಹಾಗೂ ಪರಿವೇಷ ಸ್ಪಷ್ಟವಾಗಿಲ್ಲದಿದ್ದರೆ ಅನಾಹುತ ಉಂಟಾಗ ಬಹುದು. ಆದರೆ ಬರಹಕ್ಕೆ ಇಂತಹ ಇತಿಮಿತಿಯಿಲ್ಲ. ಏಕೆಂದರೆ ಬರಹ ಬಹುಮಟ್ಟಿಗೆ ಪುನರ್‌ಸೃಷ್ಟಿಸಿದ ಅಭಿವ್ಯಕ್ತಿಯ ರೂಪ. ಎಲ್ಲ ಬರಹಗಳೂ ಬಹುಪಾಲು ತಿದ್ದಿ ತೀಡಿ ನಂತರ ಪುನರ್‌ಸೃಷ್ಟಿ ಹೊಂದಿ ರೂಪುಗೊಂಡ ಬರಹವೇ ಆಗಿರುತ್ತವೆ.

ಬರವಣಿಗೆ ಮೂಲತಃ ಅಭ್ಯಾಸ ಪೂರ್ವಕವಾದದ್ದು. ಅಭ್ಯಾಸ ಸಮರ್ಪಕ ವಾಗಿಲ್ಲದಿದ್ದರೆ ಹಾಗೂ ನಿರಂತರವಾಗಿಲ್ಲದಿದ್ದರೆ ಬರಹದ ವೇಗ ಚಿಂತನೆಯ ವೇಗಕ್ಕೆ ಹೊಂದಿಕೊಳ್ಳುವುದಿಲ್ಲ. ಈ ದೃಷ್ಟಿಯಿಂದ ಭಾಷೆಯ ಮೇಲಿನ ಹತೋಟಿ, ಬಳಕೆಯ ವ್ಯಾಪಕತೆ, ಮಾಧ್ಯಮಕ್ಕೆ ತಕ್ಕಂತೆ ಸೂಕ್ತವಾದ ಧಾಟಿ, ಅಭಿವ್ಯಕ್ತಿಯ ಸ್ಫುಟತೆ ಮುಂತಾದುವುಗಳು ಬರವಣಿಗೆಯನ್ನು ಹೆಚ್ಚು ನಿರ್ದಿಷ್ಟ ಗೊಳಿಸುತ್ತವೆ ಮತ್ತು ಪರಿಣಾಮಕಾರಿಯಾಗಿಸುತ್ತವೆ.

ಮಾತು ಮತ್ತು ಬರಹ – ಇವುಗಳ ಸಂಬಂಧ ಬಹುಪಾಲು ಸ್ಪಷ್ಟತೆ, ಕಾಗುಣಿತ, ಭಾಷಾರೂಢಿಗಳಿಗೆ ಸಂಬಂಧಿಸಿದ್ದು. ಏಕೆಂದರೆ ಉಚ್ಚಾರಣೆ ಸ್ಪಷ್ಟ ವಾಗಿರುತ್ತದೆ ಎಂಬುದು ಅನೇಕ ಭಾಷಾತಜ್ಞರ ಅಭಿಪ್ರಾಯ. ಆದರೆ ಈ ಮಾತು ಪ್ರಾರಂಭಿಕ ಕಲಿಕೆಗೆ ಹೆಚ್ಚು ಸೂಕ್ತ. ಉದಾಹರಣಗೆ ‘ಅ’ ಕಾರ ‘ಹ’ ಕಾರವನ್ನು ಸ್ಪಷ್ಟವಾಗಿ ಉಚ್ಚರಿಸದೇ ಅನೇಕರು ಬರಹದಲ್ಲಿ ಸರಿಯಾಗಿಯೇ ಬರೆಯುತ್ತಾರೆ. ಇದಕ್ಕೆ ಕಾರಣ ಬರಹದ ರೂಢಿ ಮತ್ತು ಮಾತಿನ ರೂಢಿ ಇವುಗಳ ನಡುವಿನ ಸಂಬಂಧವನ್ನು ಸರಿಯಾಗಿ ಸಮನ್ವಯಗೊಳಿಸದಿರುವುದೇ ಆಗಿದೆ.

ಸಾಮಾನ್ಯವಾಗಿ ಭಾಷೆಯ ಬಳಕೆಗೆ ಬಳಸುವವರೆಲ್ಲರೂ ಒಪ್ಪಿಕೊಂಡಂತಹ ಸಾರ್ವತ್ರಿಕವಾದ ಸರ್ವಮಾನ್ಯ ರೂಢಿ ಇದ್ದರೂ ಬರಹ ಹೆಚ್ಚು ವೈಯಕ್ತಿಕ ವಾದುದು ಎಂಬುದು ನಿರ್ವಿವಾದದ ಅಂಶ. ಏಕೆಂದರೆ ವ್ಯಕ್ತಿಗಳು ತಮ್ಮ ಭಾಷಾರೂಢಿಯನ್ನು ಹೇಗೆ ರೂಢಿಸಿಕೊಳ್ಳುತ್ತಾರೋ ಅದಕ್ಕೆ ತಕ್ಕಂತೆ ಅವರ ಬರಹ ಇರುತ್ತದೆ. ಉದಾಹರಣೆಗೆ ಕನ್ನಡದ ಅನೇಕ ಪದಗಳನ್ನು ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ಬರೆಯುತ್ತೇವೆ. ಉದಾಹರಣೆಗೆ ಕಡಿಮೆ, ಕಡಮೆ; ನಾಲಗೆ, ನಾಲಿಗೆ; ಬೆಳಿಗ್ಗೆ, ಬೆಳಗ್ಗೆ; ಅಡಕೆ, ಅಡಿಕೆ, – ಇತ್ಯಾದಿ ಪದಗಳನ್ನು ಅವರವರ ರೂಢಿಗೆ ತಕ್ಕಂತೆ ಬರೆಯುತ್ತಾರೆ. ವ್ಯಾಕರಣದ ದೃಷ್ಟಿಯಿಂದ ಒಂದನ್ನು ಸರಿ ಮತ್ತೊಂದನ್ನು ತಪ್ಪು ಎಂದು ವ್ಯಾಕರಣಕಾರರು, ಭಾಷಾತಜ್ಞರು ಸೂಚಿಸಿದರೂ ಬರೆಯುವ ರೂಢಿಯೇ ಹೆಚ್ಚು ಮಹತ್ವದ ಅಂಶವಾಗಿ ಪರಿಣಿಸುತ್ತದೆ. ಅಂತೆಯೇ ದೀರ್ಘ ಹಾಗೂ ‘9’ನ್ನು ಒಟ್ಟಿಗೆ ಬಳಸಿದಾಗ ದೀರ್ಘ ‘ೀ’ ಈ ಚಿಹ್ನೆಯನ್ನು ಮೊದಲು ಬರೆಯಬೇಕೋ, ಅನಂತರ ಬರೆಯಬೇಕೋ ಎಂಬುದು ವ್ಯಾಕರಣ ಜಿಜ್ಞಾಸೆಗಿಂತಲೂ ಬರೆಯುವ ರೂಢಿಯ ಪ್ರಶ್ನೆಯೂ ಆಗಿದೆ. (ಉದಾ: ಸೂರ್ಯೋದಯ, ಸೂರ್ಯೋದಯ) ಅಂಶ ಹೀಗಾಗಿ ಪದಗಳ ಬಳಕೆ, ಕಾಗುಣಿತ ಪದಗಳ ನಡುವಿನ ಅಂತರ, ಶೈಲಿ ಇವೆಲ್ಲ ವ್ಯಕ್ತಿಗತವಾದ ಬರಹದ ರೂಢಿ.

ವಿವಿಧ ಬಗೆಯ ಬರಹ

ಬರಹದ ಹಲವು ಬಗೆಗಳನ್ನು ಈಗಾಗಲೇ ಚರ್ಚಿಸಿದೆ. ಅವನ್ನು ಹೊರತು ಪಡಿಸಿ ಇನ್ನು ಕೆಲವು ವಿಶಿಷ್ಟ ಬಗೆಯ ತಾಂತ್ರಿಕ ಲಿಪಿಗಳ ಬಗ್ಗೆ ಚರ್ಚಿಸಬಹುದು. ಈ ಪೈಕಿ ಉಚ್ಚಾರಣೆಯನ್ನು ಆಧರಿಸಿದ ಶೀಘ್ರಲಿಪಿ ಸಂಕೇತಭಾಷೆ (ಮೋರ್ಸ್‌) ಸಂಕೇತ ಸಂಖ್ಯಾಸಂಕೇತ, ಒಂದು ಅಕ್ಷರಕ್ಕೆ ಬದಲಾಗಿ ಮತ್ತೊಂದು ಅಕ್ಷರವನ್ನು ಬಳಸಿ ರೂಪಿಸಿದ ಸಂಕೇತ, ಬ್ರೈಲ್ ಲಿಪಿ, ಸಂಗೀತ, ಚದುರಂಗ ಮುಂತಾದ ಕಡೆ ಬಳಸುವ ಸಂಕೇತಭಾಷೆ ಇವು ಕೆಲವು ಬಗೆಯ ಬರಹಗಳು. ಇಂತಹ ಬರಹಗಳಲ್ಲಿ ಮೂಲತಃ ಮಾತನ್ನು ಒಂದು ನಿರ್ದಿಷ್ಟ ರೂಢಿಗನುಗುಣವಾಗಿ ಬರಹಕ್ಕೆ ರೂಪಾಂತರಿಸಲಾಗಿದೆ. ಮಾತಿನಲ್ಲಿ ಬಳಸುವ ಧ್ವನಿ ಹಾಗೂ ಧ್ವನಿಗುಚ್ಚಗಳನ್ನು ಆಧರಿಸಿ ಇವಕ್ಕೆ ಸೂಕ್ತವಾದ ಆಕೃತಿಯೊಂದನ್ನು ಅಳವಡಿಸಿ ಶೀಘ್ರಲಿಪಿಯನ್ನು ರೂಪಿಸಿದೆ. ಶೀಘ್ರಲಿಪಿಯ ಬರಹಕ್ಕೆ ಅನುಕೂಲವಾಗುವಂತೆ ಅತಿ ಹೆಚ್ಚು ಆವರ್ತನವುಳ್ಳ ‘ಆದರೆ’, ‘ಎಂದೂ’ ‘ಆದುದರಿಂದ’ ಮುಂತಾದ ವ್ಯಾಕರಣ ಪದಗಳಿಗೆ ಒಂದೇ ಆಕೃತಿಯನ್ನು ಬಳಸಿದೆ. ಇದರಿಂದ ಅತಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಪ್ರಮಾಣದ ಮಾತನ್ನು ಬರಹದಲ್ಲಿ ಮೂಡಿಸ ಬಹುದು. ಅಂತೆಯೇ ಬ್ರೈಲ್ ಲಿಪಿಯಲ್ಲಿ ಆರು ಚುಕ್ಕೆಗಳನ್ನು ಆಧರಿಸಿ ಅವುಗಳನ್ನು ನಿರ್ದಿಷ್ಟ ಆಕೃತಿಯಲ್ಲಿ ಜೋಡಿಸಿ ಅಕ್ಷರಕ್ಕೊಂದು ಆಕೃತಿಯನ್ನು ರೂಪಿಸಿದೆ. ಈ ಚುಕ್ಕೆಗಳನ್ನು ಕಾಗದ, ರಟ್ಟು ಮುಂತಾದವುಗಳ ಮೇಲೆ ಒತ್ತಿದಾಗ ಉಂಟಾಗುವ ಉಬ್ಬು ಚುಕ್ಕೆಗಳನ್ನು ಕೈಯಿಂದ ಮುಟ್ಟಿ ಕುರುಡರು ನಿರ್ದಿಷ್ಟ ಅಕ್ಷರವನ್ನು ಗುರುತಿಸಬಹುದು. ಇದು ಓದು ಮತ್ತು ಬರಹ ಎರಡಕ್ಕೂ ಅನುಕೂಲಕರವಾಗಿದ್ದು ಈಗ ಭಾರತೀಯ ಭಾಷೆಗಳನ್ನು ಬ್ರೈಲ್ ಲಿಪಿಗೆ ಅಳವಡಿಸಿದೆ. ಇದೇ ರೀತಿಯಲ್ಲಿ ಸ್ವರ ಹಾಗೂ ಸ್ವರಗುಚ್ಛಗಳಿಗೆ ರೂಢಿಗತವಾಗಿ ರೂಪಿಸಿದ ಸಂಗೀತದ ಪ್ರಸ್ತಾರ, ಚದುರಂಗದ ಹಲಗೆಯಿರುವ 64 ಚೌಕುಗಳಿಗೆ ನೀಡಿರುವ ಸಂಕೇತಗಳನ್ನು ಆಧರಿಸಿ ರೂಪಿಸಿದ ಚಿಹ್ನೆಗಳು ಬರಹದ ವಿಶಿಷ್ಟ ಮಾದರಿಗಳನ್ನು ಸೂಚಿಸುತ್ತವೆ. ಆದರೆ ಮೇಲೆ ತಿಳಿಸಿದ ಎಲ್ಲ ಬಗೆಗಳು ಕೆಲವು ಸೀಮಿತ ಪರಿಸರಗಳಲ್ಲಿ ಮಾತ್ರ ಬಳಕೆಯಲ್ಲಿದ್ದು ಸಂಕೇತವನ್ನು ಅರಿತ ಕೆಲವೇ ಕೆಲವರಿಂದ ಬಳಸಲ್ಪಡುತ್ತವೆ.

ಇತ್ತೀಚೆಗೆ ಭಾಷಾ ಬಳಕೆಯ ಕ್ಷೇತ್ರ ಹೆಚ್ಚಿದಂತೆಲ್ಲ ಅದರ ಬಳಕೆಯ ಆಯಾಮಗಳು ಕೂಡ ಬದಲಾಗುತ್ತವೆ. ವಿಜ್ಞಾನ ಕ್ಷೇತ್ರದಲ್ಲಿ ಗಣಿತ ಹಾಗೂ ರಸಾಯನಶಾಸ್ತ್ರ ಮುಂತಾದ ಕಡೆ ಬಳಸುವ ಸೂತ್ರಗಳು ಗಣಕಯಂತ್ರಕ್ಕೆ ರೂಪಿಸಿದಂತೆ ಕಾರ್ಯವಿಧಾನ (ಪ್ರೋ) ಮುಂತಾದವು ಭಾಷೆಯ ಬಳಕೆಯ ಪರಿಧಿಯನ್ನು ಹಾಗೂ ಸ್ವರೂಪವನ್ನು ಹೆಚ್ಚಿಸಿವೆ. ಈಗ ಭಾಷೆ ಕೇವಲ ಕೈಬರಹಕ್ಕೆ ಮಾತ್ರ ಸೀಮಿತವಾಗಿರದೆ ಬೆರಳಚ್ಚು, ಗಣಕಯಂತ್ರ ಮುಂತಾದ ಕಡೆಯಲ್ಲೆಲ್ಲ ಬಳಕೆಯ ಹೊಸ ಹೊಸ ಆಯಾಮಗಳನ್ನು ಕಂಡುಕೊಂಡಿದೆ.