ಸೈನ್ಯದಲ್ಲಿ ಸಣ್ಣ ಕೆಲಸಕ್ಕೆ ಸೇರಿ, ಕಡೆಗೆ ರಾಜರನ್ನೆ ಮೂಲೆಯಲ್ಲಿ ಕೂಡಿಸಿ, ಸರ್ವಾಧಿಕಾರಿಯಾಗಿ ರಾಜ್ಯವನ್ನಾಳಿದ ಬುದ್ಧಿವಂತ; ಸೈನ್ಯದ ಬಲದಿಂದ, ಬುದ್ಧಿಯ ಬಲದಿಂದ ಹಲವಾರು ರಾಜರನ್ನು ಸೋಲಿಸಿ ಮೆರೆದ ಅಸಾಧಾರಣ ರಾಜಕಾರಣಿ, ಕಪಟಿ.

ಇಂತಹ ಒಬ್ಬ ಸಾಧ್ವಿ ಹೆಣ್ಣಿನ ಮುಂದೆ ಸೋಲನ್ನೊಪ್ಪಬೇಕಾಯಿತು.

ಈ ಬುದ್ಧಿವಂತ ಹೈದರಾಲಿ, ಅವನ ಸೈನ್ಯವನ್ನು ತಡೆದು ನಿಲ್ಲಿಸದ ಧೀರ ಮಹಿಳೆ ಓಬವ್ವ.

ಇದು ನಡೆದದ್ದು ಸುಮಾರು ಇನ್ನೂರು ವರ್ಷಗಳ ಹಿಂದೆ, ವೀರ ಮದಕರಿನಾಯಕ ಚಿತ್ರದುರ್ಗದ ಪಾಳೆಗಾರನಾಗಿದ್ದಾಗ (೧೭೫೩-೧೭೭೮)

ಚಿತ್ರದುರ್ಗದ ಹೆಸರನ್ನು ಕೇಳಿದ ಕೂಡಲೆ ಅಲ್ಲಿರುವ ಏಳುಸುತ್ತಿನ ಕೋಟೆ ಕಣ್ಣೆದುರ ಬಂದು ನಿಲ್ಲುವುದು! ಈಗಾಗಲೆ ಎಷ್ಟೋ ವರ್ಷಗಳು ಕಳೆದು ಹೋಗಿದ್ದರೂ, ಪಾಳು ಬಿದ್ದಿರುವ ಅಲ್ಲಿನ ಕೋಟೆ ಕೊತ್ತಳಗಳನ್ನು ಕಂಡರೆ, ಹತ್ತಿರ ಹತ್ತಿರ ಇನ್ನೂರು ವರ್ಷಗಳವರೆಗೆ ಅಲ್ಲಿ ರಾಜ್ಯವಾಳಿದ ಪಾಳೆಯಗಾರರ ಪರಾಕ್ರಮ ಪ್ರತಾಪಗಳು ಸುರುಳಿ ಸುರಳಿಯಾಗಿ ಮನಸ್ಸಿನಲ್ಲಿ ಸುಳಿಯುವುವು. ಸುತ್ತಲಿನ ಜಗತ್ತು ಮಾಯವಾದಂತೆನಿಸಿ, ವೀರ ಪಾಳೆಯಗಾರರ ಆಸ್ಥಾನದಲ್ಲಿರುವೆವೋ ಎನ್ನಿಸುವುದು. ಇಲ್ಲಿ ಪ್ರತಿಯೊಂದು ಕಲ್ಲೂ ಒಬ್ಬ ವೀರನ ಕಥೆಯನ್ನು ಹೇಳಬಲ್ಲದು. ಕಾಮಗೇತಿ ವಂಶಕ್ಕೆ ಸೇರಿದ ಒಬ್ಬೊಬ್ಬ ಪಾಳೆಯಗಾರನೂ ಈ ಕೋಟೆಯ ನಿರ್ಮಾಣಕ್ಕೆ ತನ್ನ ಶಕ್ತಿ ಮೀರಿ ಶ್ರಮಿಸಿರುತ್ತಾನೆ. ಒಂದೊಂದು ಸುತ್ತಿನ ಕೋಟೆಯೂ ಒಂದೊಂದು ತೆರನಾಗಿ ಭವ್ಯವಾಗಿದೆ.

ವೀರರ ಕಥೆ ಹೇಳುವ ಕಲ್ಲುಗಳ ಕೋಟೆ

ಚಿತ್ರದುರ್ಗ ಇರುವುದ ಕರ್ನಾಟಕದ ಒಂದು ಕೊನೆಯಲ್ಲಿ. ಇಲ್ಲಿನ ಕೋಟೆಗೆ ಹೊರಸುತ್ತಿನ ರಂಗಯ್ಯನ ಬಾಗಿಲು, ಸಂತೇಬಾಗಿಲು ಎಂಬವು ಇಂದಿಗೂ ಮಹಾದ್ವಾರಗಳಾಗಿವೆ. ಸಿಹಿನೀರಿನ ಹೊಂಡದ ಬಳಿಯಲ್ಲಿರುವ ಮತ್ತೊಂದು ಬಾಗಿಲಿಗೆ ಸಿಹಿನೀರು ಹೊಂಡದ ಬಾಗಿಲೆಂದೂ, ದುರ್ಗಮವಾದ ಬೆಟ್ಟಗುಡ್ಡಗಳ ಮಧ್ಯೆ ನಿರ್ಮಿತವಾಗಿರುವ ಇನ್ನೊಂದು ಬಾಗಿಲಿಗೆ ಲಾಲ್ ಬತೇರಿಯ ಬಾಗಿಲೆಂದೂ ಹೆಸರು. ರಂಗಯ್ಯನ ಬಾಗಿಲನ್ನು ಹಾದು ಬಂದರೆ ಊರಿನ ಪ್ರಮುಖ ರಸ್ತೆಯೊಂದು ಕಂಡುಬರುತ್ತದೆ. ಆ ರಸ್ತೆಗೆ ಎದುರಾಗಿಯೇ ಪಾಳೆಯಗಾರರ ಆರಾಧ್ಯ ದೇವತೆಯಾದ ಉತ್ಸವಾಂಬಾ ದೇವಾಲಯವಿದೆ. ದೇವಾಲಯದ ಎದುರಿನಲ್ಲಿರುವ ಎತ್ತರವಾದ ಉಯ್ಯಾಲೆಯ ಕಂಬಗಳನ್ನಾಗಲಿ, ಉನ್ನತವಾಗಿರುವ ದೇವಾಲಯದ ಗೋಪುರ ಮತ್ತು ಪ್ರಕಾರವನ್ನಾಗಲಿ ನಿಂತು ನೋಡಿದಾಗ ಅದರ ಪ್ರಾಚೀನ ವೈಭವವು ಹೇಗಿತ್ತೆಂಬುದನ್ನು ಊಹಿಸದಿರಲು ಸಾಧ್ಯವಿಲ್ಲ. ಆ ದೇವತೆಗೆ ಕೈ ಮುಗಿದು ಎಡಭಾಗದತ್ತ ಸಾಗಿದರೆ ಆ ದಾರಿಯ ಕೋಟೆಯ ಎರಡನೇಯ ಸುತ್ತಿನ ಬಳಿಗೆ ನಮ್ಮನ್ನು ಕರೆದೊಯ್ಯುತ್ತದೆ. ಅಲ್ಲಿ ಎದುರಾಗುವ ಬಾಗಿಲೊಂದಕ್ಕೆ ಗಾರೆಯ ಬಾಗಿಲು ಎಂದು ಕರೆಯುವರು. ಅದರ ಅಕ್ಕ ಪಕ್ಕಗಳಲ್ಲಿರುವ ಈಶ್ವರನ ದೇವಾಲಯ, ಒಂಟಿಕಾಲು ಬಸವಣ್ಣನ ಗುಡಿ ಮೊದಲಾದವುಗಳು ನಮ್ಮ ಮನಸ್ಸನ್ನು ಸೆಳೆಯುವಂತೆಯೇ, ಅಲ್ಲಿ ಕಟ್ಟಿರುವ ಬಸವನ ಬುರುಜೂ ಬೆರಗಾಗುವಂತಿದೆ. ಇದಕ್ಕೆ ಸುಲ್ತಾನ್ ಬತೇರಿಯೆಂದೂ ಹೆಸರುಂಟು. ಗಾರೆ ಬಾಗಿಲಿನ ತರುವಾಯ ತೋರಿಬರುವ ಮತ್ತೊಂದು ದ್ವಾರಕ್ಕೆ ಕಾಮನ ಬಾಗಿಲು ಎಂದು ಹೆಸರು. ಅದರ ಸಮೀಪದಲ್ಲಿರುವ ಜಲಾಶಯಕ್ಕೆ ಕಾಮನ ಬಾವಿ ಎಂಬ ಹೆಸರು ಬಹು ಅರ್ಥವತ್ತಾಗಿದೆ. ಕಾಮನ ಬಾಗಿಲಿನ ಅಕ್ಕಪಕ್ಕದ ಒಂದೊಂದು ಕಲ್ಲು ಗೋಡೆಯೂ ನೋಡಿದವರ ಎದೆ ತಲ್ಲಣಿಸುವಂತಿದೆ. ಅದರ ಎತ್ತರ ಹಾಗಿರಲಿ, ಒಂದೊಂದು ಹೆಬ್ಬಂಡೆಯನ್ನೇ ತಂದು ಅಲ್ಲಿ ಅಚ್ಚುಕಟ್ಟಾಗಿ ಜೋಡಿಸಿರುವ ಅಂದಿನವರ ಸಾಹಸವನ್ನು ಎಷ್ಟು ಹೊಗಳಿದರೂ ಸಾಲದು. ಹಲವಾರು ಯುದ್ಧಗಳಿಗೆ ಸಿಕ್ಕಿ ಗುಂಡೇಟಿಗೆ ಗುರಿಯಾಗಿದ್ದರೂ ಇಂದಿಗೂ ಜಗ್ಗದಂತಿರುವ ಆ ಕಲ್ಲುಗೋಡೆಯ ಕೆಚ್ಚನ್ನು ಹೇಳತೀರದು. ಇಂದಿನ ತಂತ್ರಜ್ಞಾನ, ಸೌಕರ್ಯಗಳು ಇಲ್ಲದಿದ್ದ ಕಾಲದಲ್ಲಿ ಇಂತಹ ದೈತ್ಯ ಬಂಡೆಗಳನ್ನು ಸೇರಿಸಿದುದು ಹೇಗೆ, ಉಕ್ಕಿನ ಗೋಡೆಯಂತಹ ಕಲ್ಲುಗೋಡೆಯನ್ನು ಕಟ್ಟಿದುದು ಹೇಗೆ ಎಂದು ಬೆರಗಾಗುತ್ತೇವೆ.

ಕಾಮನ ಬಾಗಿಲಿನ ಪ್ರವೇಶವೂ ಕಷ್ಟಮವಾದದ್ದು. ಅತ್ತ ಇತ್ತ ಅಂಕುಡೊಂಕಾಗಿ ಸುತ್ತಿ ಬಳಸಿಕೊಂಡಿರುವ ಈ ದಾರಿಗೆ ಹುಲಿಮುಖವೆಂದು ಹೆಸರು. ಕೋಟೆಯ ತೆನೆಗಳು ತೋರಣದಂತೆ ಓರಣವಾಗಿ ಕಂಡುಬಂದರೆ, ಅವುಗಳ ಮಧ್ಯೆಮಧ್ಯೆ ಇರುವ ಕಂಡಿಗಳು ತೋಪು ಹಾರಿಸಲು ತಕ್ಕಂತಿವೆ. ಹುಲಿಮುಖದ ದ್ವಾರಕ್ಕೆ ಬಂದ ಎಂಥ ಶತ್ರುವಿಗಾಗಲಿ ಎತ್ತ ಕಡೆ ಹೋಗಬೇಕೆಂಬುದೇ ತಟ್ಟನೆ ಹೊಳೆಯುವುದಿಲ್ಲ. ಕತ್ತೆತ್ತುವ ಹೊತ್ತಿಗೆ ಸರಿಯಾಗಿ ಮೇಲಿನ ತೋಪುಕಂಡಿಗಳಿಂದ ಗುಂಡಿನ ಮಲೆ ತಪ್ಪಿದ್ದಲ್ಲ. ಇಂಥ ಗಂಡುದಾರಿಯನ್ನು ಹಾದು ಒಳಗಡೆ ಬಂದರೆ ವಿಸ್ತಾರವಾದ ಪ್ರದೇಶ ಕಾಣುತ್ತದೆ. ಅಲ್ಲಿ ಒಂದು ಕಡೆ ಬೃಹದಾಕಾರದ ನಾಲ್ಕು ಬೀಸುವ ಕಲ್ಲುಗಳು ಒಂದಕ್ಕೊಂದು ಹೊಂದಿಕೊಂಡು ಒಟ್ಟಿಗೆ ಇರುವುದನ್ನು ಕಂಡಾಗ ಆಶ್ಚರ್ಯವಾಗುತ್ತದೆ. ಪಾಳುಬಿದ್ದಿರುವ ಶಸ್ತ್ರಾಗಾರವನ್ನಾಗಲಿ, ಗುಹೆಯಲ್ಲಿ ಗುಪ್ತವಾಗಿರುವ ಬನಶಂಕರಿಯ ದೇವತೆಯನ್ನಾಗಲಿ ನೋಡಿದರೆ ಕುತೊಹಲ ಮಿಡಿಯದಿರುವುದಿಲ್ಲ. ಒಂದೊಂದು ಹೆಜ್ಜೆಯಾಗಿ ಮುಂದೆ ಮುಂದೆ ಬಂದಂತೆಲ್ಲ ನಾಲ್ಕನೆಯ ಬಾಗಿಲು ಸಿಕ್ಕುವುದು. ಹುಟುಬಂಡೆಯನ್ನೇ ಕಡಿದು ಮಾಡಿರುವ ಹಲವಾರು ಕೊಳಗಳಲ್ಲಿ ಒಂದಾದ ಎಣ್ಣೆಯ ಕೊಳ ಇಲ್ಲಿಯೇ ಇರುವುದು. ಐದನೆಯ ಬಾಗಿಲಿನ ಬಲಭಾಗಕ್ಕೆ ಬಳಸುದಾರಿಯಲ್ಲಿ ಸಾಗಿದರೆ ಬೊಂಬೆಯ ಚಾವಡಿ ಸಿಕ್ಕುತ್ತದೆ. ಪಾಳೆಯಗಾರರಿಗೆ ಪ್ರಿಯವಾದ ಆನೆ ಕುದುರೆಗಳು ಸತ್ತಾಗ ಅವುಗಳ ಗೊಂಬೆಗಳನ್ನು ಮಾಡಿಸಿ ಇಲ್ಲಿ ಇಡುವ ಪದ್ಧತಿಯಿತ್ತಂತೆ. ಆರನೆಯ ಬಾಗಿಲು ನೋಡಲು ಸುಂದರವಾಗಿರುವುದು. ಅತ್ತ ಇತ್ತ ಕೆತ್ತನೆಯ ಕೆಲಸವೂ ಕಾಣುವುದು. ಆ ಬಾಗಿಲಿಗೆ ಎದುರಾಗಿ ಗಣೇಶನ ಗುಡಿಯೂ, ಬಲಭಾಗದಲ್ಲಿ ಗರಡಿಯ ಮನೆಯೂ ಇರುತ್ತವೆ. ಮುಂದೆ ಬಂದರೆ ಏಳನೆಯ ಸುತ್ತಿನ ಬಾಗಿಲು ನಮ್ಮನ್ನು ಕೋಟೆಯ ಹೃದಯಕ್ಕೇ ಕರೆದೊಯ್ಯುವುದು. ಯವ ಕಡೆ ತಿರುಗಿ ನೋಡಿದರೂ ಬಹು ವಿಸ್ತಾರವಾದ ನೆಲೆ. ಬಲಭಾಗದ ಗುಡ್ಡದ ಮೇಲಿರುವ ಏಕನಾಥೇಶ್ವರಿಯ ದೇವಸ್ಥಾನ ಪ್ರಶಸ್ತವಾದದ್ದು. ಅದರ ಮುಂಭಾಗದಲ್ಲಿರುವ ದೀಪಸ್ತಂಭವನ್ನು ಎಷ್ಟು ಕತ್ತೆತ್ತಿ ನೋಡಿದರೂ ಅದರ ತುತ್ತತುದಿಗೆ ಕಣ್ಣಿನ ನೋಟವೂ ತಾಕುವುದು ಕಷ್ಟ! ಆ ಎತ್ತರದ ಕಲ್ಲುಕಂಬವನ್ನು ನಿಲ್ಲಿಸಲು ತನ್ನ ಪ್ರಾಣವನ್ನೇ ಅರ್ಪಿಸಿದ ಹೆಣ್ಣುಮಗಳೊಬ್ಬಳ ಚಿತ್ರ ಅಲ್ಲಿ ಕೊರೆದಿದೆ. ಆಕೆಯನ್ನು ಕಂಬದಮ್ಮ ಎಂದು ಕರೆದು ಕೈಮುಗಿಯುತ್ತಾರೆ.

ಈ ಕಂಬದಮ್ಮನ ತ್ಯಾಗ ಹೇಳತೀರದು. ಆಕೆಯ ನಿಜವಾದ ಹೆಸರು ಕನಕಮ್ಮ ನಾಗತಿಯಂತೆ! ಆಕೆ ರಾಜನ ಪ್ರೀತಿ ಪಾತ್ರರಾದವರಲ್ಲಿ ಒಬ್ಬಳಾಗಿದ್ದಳಂತೆ! ಏಕನಾಥೇಶ್ವರಿಯ ದೀಪಾರಾಧನೆಗಾಗಿ ರಾಜನು ಈ ಏಕಶಿಲಾಸ್ತಂಭವನ್ನು ಬಹಳ ಭಕ್ತಿಯಿಂದ ಮಾಡಿಸಿದನು. ಅದನ್ನು ನಿಲ್ಲಸಲು ನಾನಾ ತೆರನಾದ ಬಲಿಗಳನ್ನು ಕೊಟ್ಟು ಪೂಜೆ ಮಾಡಿದರು. ಎಷ್ಟು ಬಾರಿ ನಿಲ್ಲಿಸಿದರೂ ಅದು ಭದ್ರವಾಗಿ ನಿಲಲಿಲ್ಲ. ರಾಜನಿಗೆ ತುಂಬ ಆತಂಕವಾಯಿತು. ಜೋಯಿಸರನ್ನು ಕರೆಸಿ ಕೇಳಿದನು. ಅವರು ಸಲಹೆ ಮಾಡಿದಂತೆಯೇ ಬಗೆಬಗೆಯಾದ ಇತರ ಆರಾಧನೆಗಳನ್ನು ನಡೆಸಿದನು. ಆಗಲೂ ಕಂಬ ಸ್ಥಿರವಾಗಿ ನಿಲ್ಲಲಿಲ್ಲ. ಆಕಾಶವನ್ನೇ ಮುಟ್ಟುವಂತಿದ್ದ ಅಂಥ ಕಲ್ಲಕಂಬ ಸಿದ್ಧವಾಗಿದ್ದರೂ, ಅದನ್ನು ನಿಲ್ಲಿಸುವ ಬಗೆ ಕಾಣದೆ ರಾಜನು ಖಿನ್ನನಾದನು. ಹೀಗೆಯೇ ದಿನಗಳು ಕಳೆಯಲು, ಒಂದು ದಿನ ಒಬ್ಬ ಮುಗ್ಧ ಬಾಲಕನು ರಾಜನ ಬಳಿಗೆ ಓಡಿಬಂದು “ಮಹಾಸ್ವಾಮಿಗಳೆ! ಈ ದಿನ ಬೆಳಗ್ಗೆ ನನಗೊಂದು ಕನಸಾಯಿತು. ಏಕನಾಥೇಶ್ವರಿ ಬಂದು ಈ ಕಂಬವನ್ನು ನಿಲ್ಲಿಸುವ ಉಪಾಯವನ್ನು ನನಗೆ ಹೇಳಿದಳು” ಎಂದು  ತಿಳಿಸಿದನು. ಬಾಲಕನ ಮಾತುಗಳನ್ನು ಕೇಳಿ ರಾಜನಿಗೆ ಬಹಳ ಆಶ್ಚರ್ಯವಾಯಿತು. “ಮಗೂ! ನೀನೇ ನನ್ನ ಭಾಗದ ದೇವತೆ! ಆ ದೇವಿ ಏನು ಹೇಳಿದಳು? ಬೇಗನೆ ತಿಳಿಸು” ಎಂದು ಕೇಳಿಕೊಂಡನು. “ದಿನ ತುಂಬಿದ ಬಸುರಿಯಬ್ಬಳನ್ನು ಬಲಿಕೊಟ್ಟರೆ ಈ ಕಂಬ ಭದ್ರವಾಗಿ ನಿಲ್ಲುವುದಂತೆ” ಎಂದು ಬಾಲಕನು ತಿಳಿಸಿದನು. (ಹಿಂದಿನ ಕಾಲದಲ್ಲಿ ಈ ರೀತಿಯ ನಂಬಿಕೆಗಳು ಬಲವಾಗಿದ್ದವು. ಒಂದು ಕೆರೆ, ಒಂದು ಬಾವಿ, ಒಂದು ಕಂಬ ಇಂತಹವನ್ನು ನಿರ್ಮಿಸಿದಾಗ ಒಂದೊಂದು ಸಲ ಮನುಷ್ಯರನ್ನು ಬಲಿಕೊಡಬೇಕಾಗುತ್ತದೆ, ಆಗ ದೇವತೆಗಳಿಗೆ ತೃಪ್ತಿಯಾಗುತ್ತದೆ ಎಂಬುದು ಆಗಿನ ಕಾಲದ ನಂಬಿಕೆ. ಕನಕಮ್ಮ ನಾಗತಿಯ ಹಿರಿಮೆ ನಮಗೆ ಮುಖ್ಯ). ಹುಡುಗನ ಮಾತುಗಳನ್ನು ಕೇಳಿದೊಡನೆಯೇ ರಾಜನು ತಬ್ಬಿಬ್ಬಾದನು. “ಆ ದೇವತೆಯೇ ನನ್ನ ಸಲಹಬೇಕು” ಎಂದುಕೊಂಡು, ಮಾರನೆಯ ದಿನವೇ ಆ ಸುದ್ಧಿಯನ್ನು ಊರಿನಲ್ಲೆಲ್ಲ ಡಂಗುರ ಹಾಕಿಸಿದನು. ಯಾವ ಗರ್ಭಿಣಿ ತಾನೆ ತ್ಯಾಗಕ್ಕೆ ಮುಂದೆ ಬಂದಾಳು? ಯಾರೂ ಅತ್ತ ಸುಳಿಯಲಿಲ್ಲ. ರಾಜನ ಮುಖ ಮತ್ತೆ ಕಳೆಗುಂದಿತು. ಈ ವೇಳೆಗೆ, ತುಂಬಿದ ಬಸುರಿಯಾಗಿದ್ದ ಕನಕಮ್ಮ ನಾಗತಿ ತಾನಾಗಿಯೇ ಮುಂದೆ ಬಂದು ಈ ಮಹಾತ್ಯಾಗಕ್ಕೆ ತಾನು ಸಿದ್ಧವಾಗಿರುವುದಾಗಿ ರಾಜನಿಗೆ ತಿಳಿಸಿದಳು. ಆಕೆಯ ಮಾತುಗಳನ್ನು ಕೇಳಿ ಎಲ್ಲರೂ ಚಕಿತರಾದರು! ಆದರೇನು ? ಆಕೆಯ ಧೃಢಸಂಕಲ್ಪವನ್ನು ಬದಲಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ. ರಾಜನೂ ಸಹ ಪೂಜಾವಿಧಾನಗಳನ್ನು ಮಾಡಿ, ಶೃಂಗರಿಸಿಕೊಂಡು, ಎಲ್ಲರ ಸಮ್ಮುಖದಲ್ಲಿ ನಗುನಗುತ್ತ ತನ್ನನ್ನು ಆ ಶಿಲಾಸ್ತಂಭಕ್ಕೆ ಸಮರ್ಪಿಸಿಕೊಂಡಳು. ಆಕೆಯ ಬಲಿದಾನವಾದ ಬಳಿಕ ಆ ದೊಡ್ಡಕಂಬ ಭದ್ರವಾಗಿ ನಿಂತಿತು. ಅಂದಿನಿಂದ ಕನಕಮ್ಮ ನಾಗತಿಯ ಹೆಸರು ಕಂಬದಮ್ಮ ಎಂಬುದಾಗಿ ಮಾರ್ಪಟ್ಟು ಅಮರವಾಯಿತು. ಆಪ್ತಳಾದವಳ ಅಸೀಮವಾದ ಪ್ರಾಣತ್ಯಾಗವನ್ನು ಕಂಡು ರಾಜನು ಮನಸಾರೆ ಮೆಚ್ಚಿದನು. ಆ ಕಂಬದ ಮೇಲೆ ಆಕೆಯ ಚಿತ್ರವನ್ನೂ ಕೊರೆಸಿದನು. ಚಿತ್ರದುರ್ಗದ ಕೋಟೆ ಕೊತ್ತಲುಗಳಲ್ಲಿನ ಕಲ್ಲುಗಳನ್ನು ಕೆಣಕಿದರೆ ಇಂಥ ಕಥೆಗಳು ಕಂತೆ ಕಂತೆಯಾಗಿ ದೊರೆಯುತ್ತವೆಯೋ ಏನೋ!!

ಈ ಕಲ್ಲುಕಂಬದ ನಿರ್ಮಾಣಕ್ಕೆ ಕಾರಣನಾದ ಪಾಳೆಯಗಾರನ ಚಿತ್ರವೂ ಮತ್ತೊಂದು ಪಾರ್ಶ್ವದಲ್ಲಿದೆ. ಒಂದೇ ಒಂದು ಕಲ್ಲಿನ ದೀಪ ಸ್ತಂಭವನ್ನು ಕಂಡು ದಿಗ್ಭ್ರಮೆಯಾಗುವಂತೆಯೇ, ಅಲ್ಲಿಯೇ ಇರುವ ನವಿಲುಯ್ಯಾಲೆಯ ಕಂಬಗಳೂ ನಮ್ಮನ್ನು ಮೈಮರೆಯುವಂತೆ ಮಾಡುತ್ತವೆ. ಇಲ್ಲಿನ ಎತ್ತರ, ಗಾತ್ರಗಳಿಗೆ ಅಳತೆಯ ಹಂಗೇ ಇದ್ದಂತಿಲ್ಲ! ಓಕುಳಿಯ ಕೊಳ ಹೆಸರೆಗೆ ತಕ್ಕಂತೆ ರಮ್ಯವಾಗಿದೆ.

ಏಕನಾಥೇಶ್ವರಿಯ ದೇವಸ್ಥಾನಕ್ಕೆ ಎದುರಾಗಿ ಸಾಗಿದರೆ ಒಂದು ಬಹು ಕುತೂಹಲಕರವಾದ ದೇವಸ್ಥಾನ ಸಿಕ್ಕುತ್ತದೆ. ಇದು – ಹಿಡಿಂಬೇಶ್ವರನ ದೇವಸ್ಥಾನ! ಹಿಡಿಂಬೆಯ ಹೆಸರು ಕೇಳಿದ್ದೀರಲ್ಲವೇ! ಮಹಾಭಾರತದಲ್ಲಿ ಇವಳ ಕಥೆ ಬರುತ್ತದೆ. ಇವಳೊಬ್ಬ ರಾಕ್ಷಸಿ. ಇವಳ ಅಣ್ಣ ಹಿಡಿಂಬ. ಅಣ್ಣ-ತಂಗಿ ವಾಸವಾಗಿದ್ದ ಪ್ರದೇಶಕ್ಕೆ ಹಿಡಿಂಬವನ ಎಂದು ಹೆಸರು. ಕೌರವರು ಪಾಂಡವರನ್ನು ಅರಗಿನ ಮನೆಯಲ್ಲಿ ಸುಡಲು ಪ್ರಯತ್ನಿಸಿದರು. ಪಾಂಡವರು ತಪ್ಪಿಸಿಕೊಂಡರು. ಉಳಿದವರು ನಿದ್ರೆಮಾದುತ್ತಿದ್ದಾಗ ಭೀಮಸೇನ ಕಾವಲಿದ್ದ. ಹಿಡಂಬಾಸುರ ಬಹು ಶಕ್ತಿವಂತ, ಮನುಷ್ಯರನ್ನೇ ಕೊಂದು ತಿನ್ನುವವನು. ಅವನು ಪಾಂಡವರನ್ನು ತಿನ್ನುವದಕ್ಕೆ ಬಂದಾಗ, ಭೀಮಸೇನ ಅವನನ್ನು ಸೊಲಿಸಿ ಕೊಂದ. ಹಿಡಿಂಬೆ ಭೀವಸೇನನನ್ನು ಮದುವೆಯಾದಳು. ಹಿಡಿಂಬವನದಲ್ಲಿ ನೆಲೆಸಿದ ದೇವತೆ ಹಿಡೆಂಬೇಶ್ವರ; ಭೀಮ-ಹಿಡಿಂಬರ ಮಲ್ಲಯುದ್ಧ ಆದದ್ದು ಈ ಸ್ಥಳದಲ್ಲಿಯೇ ಎಂದು ಜನರ ನಂಬಿಕೆ.

ಈ ಗುಡ್ಡದ ತುದಿಯಿಂದ ನೋಡಿದರೆ ಸುತ್ತಮುತ್ತಲಿನ ಸೀವೆಯೆಲ್ಲ ಒಂದೇ ನಿಟ್ಟಿನಲ್ಲಿ ಕಾಣುವುದು. ಒಂದು ಕಾಲಕ್ಕೆ ಈ ಸ್ಥಳವು ಪಹರೆಯವರ ಸಂಕೇತಸ್ಥಳವಾಗಿದ್ದಿತೆಂದು ತಿಳಿದುಬರುತ್ತದೆ. ಹಿಡಿಂಬೇಶ್ವರನ ದೇವಾಲಯಕ್ಕೆ ಎದುರಾಬಗಿ ಕಟ್ಟಿರುವ ಗೋಪುರಾಕಾರದ ಕಲ್ಲಿನ ಮಂಟಪ ನೋಡಲು ಚೆನ್ನಾಗಿರುವುದು. ಇದಕ್ಕೆ ಗಾಳಿಮಂಟಪವೆಂದೂ ಹೆಸರುಂಟು. ಅಲ್ಲಿಂದ ಮುಂದೆ ಹೊರಟರೆ ಬಲಭಾಗಕ್ಕೆ ವಿಶಾಲವಾದ ಮುರುಘ ರಾಜೇಂದ್ರ ಮಠವೂ, ಎದುರಿನಲ್ಲಿ ಸಂಪಿಗೆಯ ಸಿದ್ದೇಶ್ವರನ ದೇವಾಲಯವೂ ಕಾಣುವುವು. ದೊಡ್ಡದಾದ ಸಂಪಿಗೆಯ ಮರವೊಂದು ಇಂದಿಗೂ ನಮ್ಮನ್ನು ಹೃತ್ಪೂರ್ವಕವಾಗಿ ಸ್ವಾಗತಿಸುವಂತೆ ತೋರಿಬರುವುದು. ಇಲ್ಲಿನ ಸಭಾಂಗಣದಲ್ಲಿಯೇ ಪಾಳೆಯಗಾರರಿಗೆ ಪಟ್ಟಾಭಿಷೇಕವಾಗುತ್ತಿತ್ತೆಂದು ಹೇಳುತ್ತಾರೆ. ಇಲ್ಲಿರುವ ಗವಿಗಳಲ್ಲಿ ರಸಸಿದ್ಧರು ವಾಸಿಸುತ್ತಿದ್ದರಂತೆ.

ದೇವರ ದರ್ಶನ ಮಾಡಿಕೊಂಡು ಮೆಟ್ಟಿಲುಗಳನ್ನು ಇಳಿದು ಬಂದರೆ ದಾರಿಯಲ್ಲಿಯೇ ಟಂಕಶಾಲೆಯು ಕಣ್ಣಿಗೆ ಬೀಳುತ್ತದೆ. ಅಲ್ಲಿರುವ ನೆಲಮಾಳಿಗೆಗಳಲ್ಲಿ ನಗ ನಾಣ್ಯಗಳನ್ನು ಸುರಕ್ಷಿತವಾಗಿ ಇಡುತ್ತಿದ್ದರೆಂದು ಊಹಿಸಬಹುದು. ಈ ಎಡೆಯಿಂದ ಎಡಗಡೆ ದಾರಿಯನ್ನು ಅನುಸರಿಸಿ ಹೊರಟರೆ ಈ ಗಿರಿದುರ್ಗದ ಮತ್ತೊಂದು ಶೃಂಗಕ್ಕೆ ನಾವು ಬರುತ್ತೇವೆ. ಆ ಹರವಿನಲ್ಲಿ ಶ್ರೀ ಗೋಪಾಲಕೃಷ್ಣದೇವರ ಗುಡಿಯಿದೆ. ವಿಗ್ರಹ ಸುಂದರವಾಗಿದೆ. ಈ ಎತ್ತರವಾದ ಸ್ಥಳದ ಸುತ್ತಮುತ್ತಲೂ ಪ್ರಕೃತಿಯ ನೋಟ ಬೆರಗಾಗುವಂತಿದೆ. ಮುಂಭಾಗದಲ್ಲಿರುವುದೇ ಗೋಪಾಲಕೃಷ್ಣದೇವರ ಹೊಂಡ, ಸರ್ವದಾ ಜಲವಿರುತ್ತದೆ. ಅದರ ಪಾರ್ಶ್ವದಲ್ಲಿರುವ ಒಂದು ಹಿರಿದಾದ ಬಂಡೆಯ ಮಂಡೆಯಲ್ಲಿ ತುಪ್ಪದ ಕೊಳವಿದೆ. ಅಲ್ಲಿಗೆ ಹೋಗಲು ಬೆಟ್ಟವನ್ನು ಹತ್ತದೆ ವಿಧಿಯಿಲ್ಲ. ಒಂದು ಪಾರ್ಶ್ವದಲ್ಲಿ ಚಿನ್ಮೂಲಾದ್ರಿಯ ಬೆಟ್ಟದ ರಾಶಿ ತಾನೇ ತಾನಾಗಿ ಕೂಡಿ ಸ್ವಾಭಾವಿಕವಾಗಿಯೇ ಈ ಗಿರಿದುರ್ಗವು ಹೇಗೆ ನಿರ್ಮಿತವಾಗಿವೆಯೆಂಬುದನ್ನು ತಿಳಿಯಬಹುದು. ಕೋಟೆಯ ಶಿಖರಗಳಲ್ಲಿರುವ ಲಾಲ್ ಬತೇರಿ, ಝಂಡಾ ಬತೇರಿ, ಕಹಳೆ ಬತೇರಿಗಳನ್ನು ನೋಡಿದರೆ ದುರ್ಗದ ರಚನೆಯ ಅರಿವಾಗುವುದು. ಅತ್ತ ಇತ್ತ ಹಬ್ಬಿರುವ ಈಹೆಬ್ಬಂಡೆಗಳ ಮಧ್ಯೆ ವಿಶಾಲವಾದ ಭೂಪ್ರದೇಶವಿರುವುದು. ಅಲ್ಲಿ ಶೃಂಗಾರವನವಿತ್ತೆಂದು ಹೇಳುತ್ತಾರೆ. ಈಗ ಆ ವನದ ಅವಶೇಷ ಕಾಣದದಿದ್ದರೂ, ಪಾಳೆಯಗಾರನ ಅರಮನೆ ಪಾಳು ಮಾತ್ರ ಧಾರಾಳವಾಗಿ ನಮಗೆ ಗೊಚರಿಸುತ್ತದೆ ಏಳುಸುತ್ತಿನ ಕೋಟೆಯ ಎದೆಯಾಳದಲ್ಲಿರುವ ಈ ಎಡೆಗೆ ಯಾವ ಕಡೆಯಿಂದ ನೋಡಿದರೂ ಭದ್ರತೆಗೆ ಆತಂಕವಿಲ್ಲ ದಂತಿದೆ.

ಏನಾದರೇನು? ಕಾಲನು ಮುನಿದಾಗ ಮಾನವನು ಅಸಹಾಯಕನಾಗುತ್ತಾನೆ. ದೈವಬಲ ಇಲ್ಲದಿರುವಾಗ ತೋಳಬಲ ಏನೂ ಸಾಗುವಂತಿಲ್ಲ.

ಈ ಪ್ರಾಚೀನ ಭಗ್ನಾವಶೇಷಗಳನ್ನು ಕಂಡು ನಿಟ್ಟುಸಿರಿನ ಕಾಣಿಕೆಯನ್ನು ಸಮರ್ಪಿಸಿ ಬೇರೊಂದು ಬದಿಗೆ ತೆರಳಿದರೆ ಅಲ್ಲಿ ಅಕ್ಕತಂಗಿಯರಂತೆ ಅನ್ಯೋನ್ಯವಾಗಿ ಹೊಂದಿ ಕೊಂಡಿರುವ ಎರಡು ಕೊಳಗಳನ್ನು ಕಾಣಬಹುದು. ಇದಕ್ಕೆ ಅಕ್ಕತಂಗಿ ಹೊಂಡ ಎಂದು ಹೆಸರು. ಅದರ ಸುತ್ತಮುತ್ತಲೂ ಸಣ್ಣಪುಟ್ಟ ದೇವಾಲಯಗಳು ಇವೆ. ಅವೆಲ್ಲವನ್ನೂ ಸಂದರ್ಶಿಸಿ ಪಶ್ಚಿಮಾಭಿಮುಖವಾಗಿ ಹೊರಟರೆ ಅಲ್ಲೊಂದು ಕಡಿದಾದ ಮಾರ್ಗ ಕಾಣುವುದು. ಅಭೇದ್ಯವಾದ ಈ ಏಳು ಸುತ್ತಿನ ಕೋಟೆಗೆ ಕಂಡೂ ಕಾಣದಂತೆ ಒಂದು ಕಳ್ಳದಾರಿಯಿರುವುದ ತಿಳಿಯುತ್ತದೆ. ತುಸು ಸಮೀಪದಲ್ಲಿಯೇ ಒಂದು ನೀರಿನ ಆಶ್ರಯವೂ ಇರುವುದು. ಈ ಇಕ್ಕಟ್ಟಾದ ಕಳ್ಳದಾರಿಯೇ ಸುಪ್ರಸಿದ್ಧವಾದ “ಓನಕೆಯ ಕಿಂಡಿ”! ಚಿತ್ರದುರ್ಗದ ಕೋಟೆಯ ಸಂರಕ್ಷಣೆಗಾಗಿ ತಮ್ಮ ಪ್ರಾಣಗಳನ್ನೇ ಅರ್ಪಿಸಿದ ಸಾವಿರಾರು ಗಂಡುಗಲಿಗಳ ಮಧ್ಯೆ ತನ್ನ ಹೆಸರನ್ನೂ ಊಳಿಸಿ ಹೋಗಿರುವ ಹೆಣ್ಣುಗಲಿ ಓಬವ್ವನ ಸಾಹಸವನ್ನು ಇಂದಿಗೂ ಬಂದ ಬಂದವರಿಗೆ ಸಾರಿ ಹೇಳುತ್ತಿರುವ “ಓನಕೆಯ ಕಿಂಡಿ”! ಈಗ್ಗೆ ಇನ್ನೂರು ವರ್ಷಗಳು ಉರಳಿಹೋಗಿದ್ದರೂ ಇಲ್ಲಿನ ಜನರಲ್ಲಿ ಇಂದಿಗೂ ಆಕೆಯ ಹೆಸರನ್ನು ಹಚ್ಚಹಸುರಾಗಿ ಜೀವಂತವಾಗಿ ಉಳಿಸಿರುವುದು “ಓನಕೆಯ ಕಿಂಡಿ”!

ಆಕೆಯ ಕೆಚ್ಚೆದೆಯ ಕಥೆಯನ್ನು ಕೇಳಿ!

ಚಿತ್ರದುರ್ಗಕ್ಕೆ ಮಾರಿ ಹೈದರಾಲಿ

ಚಿತ್ರದುರ್ಗಕ್ಕೆ ಪಾಳೆಯಗಾರರ ಪರಂಪರೆ ಮತ್ತಿ ತಿಮ್ಮಣ್ಣನಾಯಕನಿಂದ ಮೊದಲಾಗಿ, ಸುಮಾರು ಹತ್ತು ತಲೆಗಳಾದ ಬಳಿಕ ವೀರ ಮದಕರಿನಾಯಕನಿಂದ ಮುಕ್ತಾಯವಾಗುತ್ತದೆ. ಈ ಮಧ್ಯೆ ರಾಜ್ಯವಾಲಿದ ಪಾಳೆಯಗಾರರಲ್ಲಿ ಬಿಚ್ಚುಗತ್ತಿ ಭರಮಪ್ಪನಾಯಕನ ಹೆಸರೂ ತುಂಬ ಪ್ರಸಿದ್ಧವಾದ್ದು. ಈ ಪಾಳೆಯಗಾರರು ಬಲಿಷ್ಠರೇ. ಆದರೂ ಇವರು ನಿರಾತಂಕವಾಗಿರುವಂತಿರಲಿಲ್ಲ. ಅಕ್ಕಪಕ್ಕಗಳಲ್ಲಿದ್ದ ಇತರ ಪಾಳೆಯಗಾರರ ಕಿರುಕುಳ. ಆಗಿಂದಾಗ್ಗೆ ಉತ್ತರದ ಮರಾಠರ ಕಾಟ, ದಕ್ಷಿಣದ ಮೈಸೂರಿನ ಹೈದರಾಲಿಯ ಹಾವಳಿಯೂ ತಪ್ಪಲಿಲ್ಲ. ಕಡೆಯ ಮಕಕರಿನಾಯಕನು ಆದಷ್ಟು ಶಾಂತಿಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿದ. ಒಂದು ಕಡೆ ಮರಾಠರು ಮತ್ತೊಂದು ಕಡೆ ಹೈದರ್. ಈ ಪ್ರಬಲ ಶತ್ರುಗಳಿಬ್ಬರೊಂದಿಗೂ ಎಷ್ಟೇ ಸ್ನೇಹ ಸೌಹಾರ್ದಗಳಿಂದ ವರ್ತಿಸಿದರೂ, ಒಂದಲ್ಲ ಒಂದು ಕಾರಣದಿಂದ ವೈಮನಸ್ಯ ಉಂಟಾಗುತ್ತಲೆ ಇದ್ದಿತು.

ಆಗಿನ ಮೈಸೂರಿನ ಸಂಸ್ಥಾನದಲ್ಲಿ ಹೈದರ್ ಪ್ರಬಲನಾಗಿದ್ದ. ರಾಜರಿದ್ದರು-ಮುಮ್ಮಡಿ ಕೃಷ್ಣರಾಜ ಒಡೆಯರು; ಹೈದರಾಲಿ ಅವರ ಕೈಕೆಳಗಿನ ನೌಕರ. ಹೈದರ್ ಬಹು ಬುದ್ದಿವಂತ, ಉಪಾಯಗಾರ, ಮಾತಿನಲ್ಲಿ ಬಹುನಯ, ಕಾರ್ಯದಲ್ಲಿ ಬಹು ಎಚ್ಚರಿಕೆ. ಚಿಕ್ಕ ವಯಸ್ಸಿನ ರಾಜರನ್ನೂ ಅವರ ತಾಯಿಯನ್ನೂ ಮೂಲೆಯಲ್ಲಿ ಹಿಡೆದೆದ್ದ.

ಒಮ್ಮೆ ಇದ್ದಕ್ಕಿದ್ದ ಹಾಗೆ ಹೈದರಾಲಿ ಚಿತ್ರದುರ್ಗವನ್ನು ಮುತ್ತಿದ. ಮದಕರಿನಾಯಕ ಯುದ್ಧಕ್ಕೆ ಸಿದ್ಧನಾಗಿಯೇ ಇರಲಿಲ್ಲ. ಅದರಿಂದ ಯುದ್ಧಮಾಡದೆ, ಹೈದರಾಲಿಯೊಡನೆ ಸಂಧಾನ ಮಾಡಿಕೊಂಡ. ಅವನಿಗೆ ಒಂದಿಷ್ಟು ಹಣ ತೆತ್ತ. ಪ್ರತಿವರ್ಷ ಹಣಕೊಡಲು ಒಪ್ಪಿಕೊಂಡ. ಇದಾದ ಮೇಲೆ ಮರಾಠರಿಗೂ ಹೈದರಾಲಿಗೂ ಯುದ್ಧವಾಯಿತು. ಹೈದರಾಲಿ ಮದಕರಿ ನಾಯಕ ತನಗೆ ಸಹಾಯ ಮಾಡಬೇಕು ಎಂದು ಕೇಳಿದ. ನಾಯಕ ಮರಾಠರಿಗೆ ನೆರವಾದ. ಹೈದರಾಲಿಗೆ ತುಂಬ ಕೋಪ ಬಂತು. ಯುದ್ಧದಲ್ಲಿ ಮರಾಠರು ಸೋತರು. ಅನಂತರ ಹೈದರಾಲಿ ದೊಡ್ಡ ಸೈನ್ಯವನ್ನು ತೆಗೆದುಕೊಂಡು ಬಂದು ಚಿತ್ರದುರ್ಗಕ್ಕೆ ಮುತ್ತಿಗೆ ಹಾಕಿದನು. ರಾಜಾ ಮದಕರಿನಾಯಕನು ತನ್ನಲ್ಲಿಗೆ ಬಂದು ನಷ್ಟವನ್ನು ಕಟ್ಟಿಕೊಡಬೇಕೆಂದು ತನ್ನ ರಾಯಭಾರಿಗಳ ಮೂಲಕ ಹೇಳಿ ಕಳುಹಿಸಿದನು. ಮಕರಿನಾಯಕ ಇದಕ್ಕೆ ಒಪ್ಪಲಿಲ್ಲ. ಬಳಿಕ ರಾಜನ ತಮ್ಮನಾದ ಪರಶುರಾಮಪ್ಪ ನಾಯಕನನ್ನಾದರೂ ಕಳುಹಿಸಿಕೊಡಬೇಕೆಂದು ತಿಳಿಸಿದನು. ಅದಕ್ಕೂ ಮಕರಿನಾಯಕನು ಸಮ್ಮತಿಸಲಿಲ್ಲ. ಕಡೆಗೆ ಯುದ್ಧವೇ ನಿರ್ಧಾರವಾಯಿತು.

ಹೈದರನ ಅಸಂಖ್ಯಾತವಾದ ಸೇನೆ ಹಗಲಿರುಳೂ ಕೋಟೆಯನ್ನು ಸುತ್ತುಗಟ್ಟಿ ನಿಂತಿತು. ಅಸೂಯಾಪರರಾದ ಅಕ್ಕಪಕ್ಕದ ಕೆಲವು ಪಾಳೆಯಗಾರರೂ ಹೈದರನಿಗೆ ಬೆಂಬಲವಾಗಿ ನಿಂತರು.

ಸುತ್ತು ಸೈನ್ಯ ಕಾವಲು ನಿಂತಿರುವಾಗ ಕೋಟೆಯೊಳಗಿನ ಜನರಿಗೆ ಹೊರಗಡೆಯಿಂದ ಯಾವ ಸಹಾಯವೂ ಬರುವ ಹಾಗಿಲ್ಲ. ಆದುದರಿಂದ ಎಷ್ಟು ದಿನ ಒಳಗೆ ಕುಳಿತಾರು! ಮದಕರಿನಾಯಕ ಸೋಲನ್ನು ಒಪ್ಪಿಕೊಂಡು ಶರಣಾಗುತ್ತಾನೆ ಎಂದು ಹೈದರ್ ಲೆಕ್ಕ ಹಾಕಿದ.

ದಿನಗಳ ಮೇಲೆ ದಿನಗಳು ಕಳೆದವು. ತಿಂಗಳುಗಳ ಮೇಲೆ ತಿಂಗಳುಗಳು ಉರುಳಿಹೋದವು. ಹೈದರನ ಆಸೆ ನೆರವೇರಲಿಲ್ಲ. ಧಾಳಿ ಮಾಡಿ ಕೋಟೆಯನ್ನು ವಶಮಾಡಿಕೊಳ್ಳಲು ನೋಡಿದ. ಭರ್ಜರಿ ತೋಪುಗಳು ಅವನ ಬಳಿ ಇದ್ದವು. ಅವನ್ನು ಹಾರಿಸಿ ಕೋಟೆಯ ಗೋಡೆಯನ್ನೇ ಒಡೆದು ಉರುಳಿಸುತ್ತೇನೆ ಎಂದು ಸಾಹಸ ಪಟ್ಟ. ಅವನ ಸೈನ್ಯದಲ್ಲಿದ್ದ ವಿದೇಶೀಯ ಸೇನಾಧಿಪತಿಗಳು ಈ ಗಿರಿದುರ್ಗವು ಅಭೇದ್ಯವೆಂದು ಹೇಳಿ ಅಸಹಾಯಕರಾದರು. ದೂರದಿಂದ ಗುರಿಯಿಟ್ಟು ತೋಪನ್ನು ಹಾರಿಸಿದರೆ ಅದು ಕೋಟೆಯ ಗೋಡೆಗೆ ತಾಗುತ್ತಲೇ ಇರಲಿಲ್ಲ. ಒಮ್ಮೆ ಕಂದಕದಲ್ಲಿ ಹೋಗಿ ಬಿದ್ದರೆ ಮತ್ತೊಮ್ಮೆ ಕೋಟೆಯ ತೆನೆಯ ಮೇಲುಭಾಗದಲ್ಲಿ ಹಾಯ್ದು ಹೋಗುತ್ತಿತ್ತು. ದೂರದಿಂದ ತೋಪುಹಾರಿಸದೆ ಕೋಟೆಯ ಹತ್ತಿರಕ್ಕೆ ಹೋಗಿ ಗೋಡೆ ಹತ್ತಿ ವಶಮಾಡಿಕೊಳ್ಳುವ ಯೋಚನೆಯನ್ನೂ ಮಾಡಿದ ಹೈದರ್, ಆದರೆ ಕೋಡೆಯ ಹತ್ತಿರ ಸುಳಿದರೆ ಮೇಲಿನಿಂದ ಮದಕರಿನಾಯಕನ ಸೈನಿಕರು ಬಂಡೆಗಳನ್ನೆ ಉರುಳೆಸುವರು. ಅವರ ಆಯುಧಗಳ ಮಳೆಗೆ ಸಿಕ್ಕಿ ಹೈದರನ ಸೈನಿಕರು ಸತ್ತುರಳಬೇಕಾಯಿತು. ಮದಕರಿನಾಯಕನ ಸೇನೆಯಲ್ಲಿದ್ದ ಒಬ್ಬೊಬ್ಬರೂ ಪ್ರಾಣದ ಹಂಗನ್ನೇ ತೊರೆದು ಹೋರಾಡುತ್ತಿದ್ದರು.

ಬಂದವರೆಲ್ಲ ಓಬವ್ವನ ಒನಕೆಗೆ ಬಲಿಯಾದರು.

ಹಟ ತೊಟ್ಟ ಹೈದರನಿಗೆ ಕೋಪ ಕಾವೇರುತ್ತಿತ್ತು. ಆತನ ದಳಪತಿಗಳ ಮುಖವೆಲ್ಲ ನಿಸ್ತೇಜವಾಗಿತ್ತು.

ಈ ಮಧ್ಯೆ ಮರಾಠರು ಮದಕರಿನಾಯಕನಿಗೆ ಬೆಂಬಲ ನೀಡಲು ಬರುತ್ತಿರುವರೆಂಬ ಸುದ್ದಿ ನವಾಬನಿಗೆ ತಿಳಿಯಿತು. ವೇಷ ಮರೆಸಿಕೊಂಡ ಮರಾಠಾ ಬೇಹುಗಾರರು ತಮ್ಮ ಸೈನ್ಯ ಬರುತ್ತಿರುವ ಸುದ್ದಿಯನ್ನು ಮದಕರಿನಾಯಕನಿಗೆ ತಿಳಿಸಲು ಹೊರಟರು. ದುರದೃಷ್ಟವಶಾತ್ ಅವರು ಹೈದರನ ಸೇನೆಗೆ ಸಿಕ್ಕಿಬಿದ್ದಿದ್ದರಿಂದ ಈ ರಹಸ್ಯ ಮೊದಲೇ ಅವನಿಗೆ ತಿಳಿದುಬಂದಿತು. ಆ ಬೇಹುಗಾರರಿಗೆ ಹಣದಾಸೆ ತೋರಿಸಿ, ಮದಕರಿನಾಯಕನಿಗೆ ಮರಾಠರ ಸಹಾಯ ದೊರೆಯದಂತೆ ಭೇದೋಪಾಯ ಮಾಡಿದ.

ಒಂದು ಭೇದೋಪಾಯ ಫಲಿಸುವುದೇ ತಡ, ಹೈದರನಿಗೆ ಹಾಗೆಯೇ ಮೋಸದಿಂದಲೇ ಈ ಕೋಟೆಯನ್ನು ಭೇದಿಸಬೇಕು ಎನ್ನಿಸಿತು.

ಆದರೇನು ಮಾಡುವುದು? ಕಾಲವೇನೋ ಮುಂದೆ ಮುಂದೆ ಸಾಗಿತು. ಹಗೆಯನ್ನು ಗೆಲ್ಲುವ ಭರವಸೆ ದಿನ ದಿನಕ್ಕೂ ಹಿಂದೆ ಹಿಂದೆ ಉಳಿಯಿತು. ಮದಕರಿನಾಯಕನ ಕಡೆಯವರಲ್ಲಿ ಯಾರಾದರೂ ಹಣದಾಸೆಗಾಗಿ ಅಥವಾ ಬೇರಾವುದಾದರೂ ಆಸೆಗಾಗಿ ತನ್ನ ಕಡೆ ಬರಬಹುದೋ ಎಂದು ಹೈದರನ ಎಣಿಕೆ. ಹಾಗೆ ಯಾರಾದರೂ ಆಸೆಗೆ ಬಲಿಯಾಗಿ ದ್ರೋಹಮಾಡಲು ಒಪ್ಪಿದರೆ ಹೈದರನ ಕೆಲಸ ಸುಲಭ. ಅವರು ದುರ್ಗವನ್ನು ಪ್ರವೇಶಿಸಲು ಒಂದು ಗುಟ್ಟಾದ ದಾರಿಯನ್ನು ತೋರಿಸಬಹುದು, ಇಲ್ಲವೇ ಗುಟ್ಟಾಗಿ ಕೋಟೆಯ ಬಾಗಿಲನ್ನು ತೆರೆದು ಹೈದರನ ಸೈನಿಕರು ಪ್ರವೇಶಿಸಲು ಅವಕಾಶ ಮಾಡಿ ಕೊಡಬಹುದು. ಹೀಗೆಲ್ಲ ಲೆಕ್ಕಾಚಾರ ಹೈದರನದು. ಆದರೆ ಕಾಸಿಗೆ ಕೈ ಒಡ್ಡಿ ನಾಯಕನ ಕತ್ತು ಕೊಯ್ಯುವ ದ್ರೋಹಿ ಯಾರೂ ಇರಲಿಲ್ಲ.

ತಿಂಗಳುಗಟ್ಟಲೆ ಶತ್ರುಗಳು ಮುತ್ತಿಗೆ ಹಾಕಿದ್ದರೂ ವೀರ ಮದಕರಿನಾಯಕನು ಸ್ವಲ್ಪವೂ ನಡುಗಲಿಲ್ಲ; ಉಡುಗಲಿಲ್ಲ. ಅವನ ಧೈರ್ಯ ಸ್ಥೈರ್ಯಗಳು ಎಷ್ಟರಮಟ್ಟಿಗೆ ಅಸದೃಶವಾಗಿದ್ದುವೂ ಅವನ ಸೇನೆಯವರು ಮತ್ತು ಪ್ರಜೆಗಳ ರಾಜನಿಷ್ಠೆಯೂ ಅಷ್ಟೇ ಅಚಲವಾಗಿದ್ದಿತು.

ಹೈದರನು ದಳಪತಿಗೆ ಕಾಲಹರಣ ಮಾಡಬಾರದೆಂದು ಮೇಲಿಂದ ಮೇಲೆ ಆಜ್ಞೆಮಾಡುತ್ತಿದ್ದನು. ಕಡೆಗೆ ಒಂದು ಯೋಚನೆ ಹೊಳೆಯಿತು. ಸಾಮಾನ್ಯವಾಗಿ ಕೋಟೆಗೆ ಹೆಬ್ಬಾಗಿಲಲ್ಲದೆ ಗುಟ್ಟಾಚ ದಾರಿಯೂ ಇರುತ್ತದೆ. ಹಣದಾಸೆಗೆ ಮದಕರಿನಾಯಕನ ಕಡೆಯ ಯಾರೂ ದಾರಿ ತೋರಿಸದೆ ಹೋಗಬಹುದು. ತಾನೇ ಕಂಡುಹಿಡೆದರೆ? ತಿಂಗಳುಗಟ್ಟಲೆ ಮುತ್ತಿಗೆಯಾದರು ಕೋಟೆ ಒಳಗಿನ ಜನ ಸೋತಿಲ್ಲ. ಆದುದರಿಂದ ಹೊರಗಡೆ ಜಗತ್ತಿನೊಂದೆಗೆ ಹೇಗೋ ಸಂಪರ್ಕ ಇರಬೇಕು. ಕೋಟೆಯೋಳಗಿಂದ ಹೋಗಲು, ಕೋಟೆಗೆ ಗುಟ್ಟಾದ ದಾರಿ ಇರಬೇಕು.

ಮೊಸರಿನ ಮಡಕೆ ತೋರಿಸಿದ ದಾರಿ

ಒಂದು ಸಂಜೆ. ಅಭೇದ್ಯವಾದ ದುರ್ಗವನ್ನು ನೋಡಿ ನೋಡಿ ಹತಾಶನಾಗಿದ್ದ ಹೈದರನ ದಳಪತಿಯೊಬ್ಬನು ಮುಳುಗುತ್ತಿದ್ದ ಸೂರ್ಯನನ್ನು ಕಂಡು, “ಉಸ್ಸಪ್ಪ, ಇನ್ನೊಂದು ದಿನವೂ ಕಳೆಯಿತು” ಎಂದು ನಿಟ್ಟುಸಿರು ಬಿಟ್ಟನು. “ಈ ಏಳು ಸುತ್ತಿನ ಕೋಟೆಯನ್ನು ವಶಪಡಿಸಿಕೊಳ್ಳಬೇಕಾದರೆ ಮತ್ತೆ ಏಳು ಬಾರಿ ಹುಟ್ಟಿಬರಬೇಕೋ ಏನೋ! ಕೋಟೆಗೆ ತಕ್ಕ ಪಾಳೆಯಗಾರ! ಅವನ ಹೆಸರೋ ಮದಕರಿನಾಯಕ! ಈ ವರೆಗೆ ನಮ್ಮ ನೇನೆ ಇಂಥ ಪೇಚಿಗೆ ಸಿಕ್ಕಿರಲಿಲ್ಲ. ನಮ್ಮ ನವಾಬರಾದರೋ ಹಿಡಿದ ಹಟ ಬಿಡುವವರಲ್ಲ. ನಮ್ಮ ಜಲದುರ್ಗವೆಲ್ಲಿ, ಈ ಗಿರಿದುರ್ಗವೆಲ್ಲಿ? ದೇವರೇ ಈ ಸಮಸ್ಯೆಯನ್ನು ಬಗೆಹರಿಸಬೇಕು” ಎಂದು ಚಿಂತಾವಗ್ನನಾಗಿ ಗಡ್ಡವನ್ನು ಸವರಿಕೊಂಡು ಕುಳಿತನು.

ಆ ವೇಳೆಗೆ ದೂರದಿಂದ ಸವಾರನೊಬ್ಬನು ಅತ್ತಧಾವಿಸಿ ಬಂದನು.

ನಿರಾಶನಾಗಿದ್ದ ದಳಪತಿ ಚಕಿತನಾಗಿ ಎದ್ದು ನಿಂತನು. ಹತ್ತಿರ ಬಂದ ಸವಾರನು ಕುದುರೆಯಿಂದಿಳಿದು ದಳಪತಿಗೆ ಸಲಾಮು ಮಾಡಿ, “ಹುಜೂರ್, ಇದೀಗ ತಮಗೆ ಸಂತೋಷದ ಸುದ್ದಿ ತಂದಿದ್ದೇನೆ, ಆಲಿಸಬೇಕು,” ಎಂದು ಮಾತು ಮೊದಲು ಮಾಡಿದನು.

ದಳಪತಿಗಾದರೋ ಸವಾರನಿಗಿಂತಲೂ ಆತುರ. “ಏನದು? ನಾಯಕರು ಶರಣಾದರೆ.” ಎಂದು ಪ್ರಶ್ನಿಸಿದನು.

ಇಲ್ಲ ಹುಜೂರ್, ಈ ಏಳು ಸುತ್ತಿನ ಕೋಟೆಗೆ ಒಂದು ಕಳ್ಳಗಂಡಿಯಿರುವುದು ಪತ್ತೆಯಾಯಿತು. ಇನ್ನು ನಮ್ಮ ನವಾಬರ ಕೆಲಸ ಸುಲಭವಾಯಿತು!”

“ಏನದು….. ಕಳ್ಳಗಂಡಿಯೆ? ಹೇಗೆ ತಿಳಿಯಿತು? ಅದು ಎಲ್ಲಿದೆ?”

“ಹುಜೂರ್, ಈ ದಿನ ಸಂಜೆ ನಮ್ಮ ಸಿಪಾಯಿಯೊಬ್ಬನು ಕೋಟೆಯ ಪಶ್ಚಿಮ ದಿಕ್ಕಿನಲ್ಲಿ ಹೊಂಚು ಹಾಕುತ್ತಿರಬೇಕಾದರೆ ಒಂದು ಸೋಜಿಗವನ್ನು ಕಂಡ.”

“ಏನದು? ಬೇಗ ಬೇಗ ಹೇಳಬಾರದೆ?”

“ಮೊಸರು ಮಾರುವ ಒಬ್ಬ ಮಹಿಳೆ ಹೊರಗಡೆಯಿಂದ ಆ ಮೂಲೆಯ ಕಡೆಗೆ ಮೆಲ್ಲಮೆಲ್ಲನೆ ಬಂದಳು. ಅತ್ತ ಇತ್ತ ತಿರುಗಿ ನೋಡಿದಳು. ಯಾರ ಸುಳಿವೂ ಇಲ್ಲವೆಂದು ದೃಢವಾದ ಮೇಲೆ ಅಲ್ಲಿದ್ದ ಬಂಡೆಗಳ ಮಧ್ಯೆ ನುಸುಳಿ ಕಣ್ಮರೆಯಾದಳು. ನಮ್ಮ ಸಿಪಾಯಿ ಎಲ್ಲವನ್ನೂ ನೋಡುತ್ತಿದ್ದ. ಆ ಎಡೆಯನ್ನು ಖುದ್ದಾಗಿ ಪರಿಶೀಲಿಸಿ ನವಾಬರಿಗೆ ಬಂದು ತಿಳಿಸಿದ. ಅದನ್ನು ಹೇಳಲೆಂದೇ ತಮ್ಮಲ್ಲಿಗೆ ಬಂದೆ.”

ಒಂದು ಕ್ಷಣದ ಹಿಂದೆ ನಿರಾಶನಾಗಿದ್ದ ದಳಪತಿಯ ಮುಖದಲ್ಲಿ ಈಗ ಗೆಲುವು ಮೂಡಿತು. ಸವಾರನ ಒಂದೊಂದು ಮಾತನ್ನು ಕೇಳುತ್ತಲೇ ಅವನು ಹಿಗ್ಗಿದನು. “ತಿಂಗಳುಗಟ್ಟಲೆ ನಮ್ಮನ್ನು ತಿಣುಕುವಂತೆ ಮಾಡಿದ ಈ ಕೋಟೆಗೆ ಇನ್ನು ಉಳಿಗಾಲವಿಲ್ಲ. ನಾಯಕನ ಗರ್ವಕ್ಕೆ ಇನ್ನು ತಕ್ಕ ಶಾಸ್ತಿಯಾದಂತೆಯೇ ಸರಿ” ಎಂದು ಅಂಕೊಂಡು, ಸವಾರನನ್ನು ಕೊಂಡಾಡಿ, ಬಹುಮಾನ ವಿತ್ತು ಕಳುಹಿಸಿದನು.

ಮರಾಠರ ಸಹಾಯವನ್ನು ಎದುರುನೋಡುತ್ತಿದ್ದ ಮದಕರಿನಾಯಕನಿಗೆ ಅದು ಆವರೆಗೆ ದೊರೆಯದೆ ಹೋಗಲು ಅತ್ತ ಆತಂಕ ಮೊದಲಾಗಿತ್ತು. ಆಗಲೇ ಎಷ್ಟೋ ತಿಂಗಳು ಕಳೆದುಹೋಗಿವೆ. ಹೊರಗಿನಿಂದ ಏನನ್ನೂ ತರಸುವಂತಿಲ್ಲ. ಹೈದರನ ಸೇನೆ ಹೊಂಚುಹಾಕಿ ಕುಳಿತಿದೆ ಶೇಖರಿಸಿಟ್ಟಿದ್ದ ಚವಸಧಾನ್ಯಗಳೂ, ಮದ್ದುಗುಂಡುಗಳೂ ಕಡಿವೆಯಾಗುತ್ತಾ ಬಂದಿದೆ. ದುರ್ಗದ ಮಡಿಲಿನಲ್ಲಿ ಸುರಕ್ಷಿತವಾಗಿದ್ದ ಎಲ್ಲರಿಗೂ ಸದ್ಯದಲ್ಲಿ ಅದೊಂದೇ ಬಲವಾದ ಆಶ್ರಯವಾಗಿತ್ತು.

ಕಳ್ಳಗಂಡಿಯಿಂದ ಸ್ವಾತಂತ್ರ ಕದಿಯುವ ಕಳ್ಳರು

ಕಳ್ಳಗಂಡಿಯ ಸುದ್ದಿ ತಿಳಿದ ಕೂಡಲೆ ಹೈದರನ ಸರದಾರರು ಎಚ್ಚೆತ್ತು ಮುಂದಿನ ಸನ್ನಾಹಕ್ಕೆ ತೊಡಗಿದರು.

ಕೋಟೆಯ ಪಶ್ಚಿಮ ದಿಕ್ಕಿನ ಕಡೆಗೆ ಹಾದುಹೋಗಲು ಸಾಕಷ್ಟು ಬಲಿಷ್ಠರಾದ ಸೈನಿಕರನ್ನು ಆರಿಸಲಾಯಿತು. ನವಾಬನ ಅಪ್ಪಣೆ ಮೇರೆಗೆ ಕ್ಷಣಮಾತ್ರವೂ ತಡಮಾಡದಂತೆ ಆ ಸಂಜೆಯ ಮಬ್ಬಿನಲ್ಲಿಯೇ ಆ ಗಂಡಾಳುಗಳು ಹೊರಟು ಬಂದು ಅಲ್ಲಲ್ಲಿಯೇ ಅಡಗಿ ಕುಳಿತರು. ಅವರಲ್ಲಿ ಒಬ್ಬನು ಸ್ವಲ್ಪ ಮುಂದೆ ಸರಿದು ಅತ್ತಿತ್ತ ನೋಡಿದನು. ಬಂಡೆಗಳ ಇರುಕಿನಲ್ಲಿ ಒಂದು ಕಿರುದಾರಿ ಇರುವುದು ಖಂಡಿತವಾಯಿತು. ಆದರೆ ಹೊರಗಡೆ ಕವಿದಿದ್ದ ಮಬ್ಬಿಗಿಂತಲೂ ಅಧಿಕವಾಗಿ ಅಲ್ಲಿ ಕಗ್ಗತ್ತಲೆ ವ್ಯಾಪಿಸಿತ್ತು. ಹಾಗೇ ತಡವರಿಸಿಕೊಂಡು ಹೊರಟರೆ ಅಲ್ಲಿ ತೆವಳಿಕೊಂಡು ಹೋಗಬೇಕಾದ ಪ್ರಸಂಗವಿರುವುದು ಸ್ಪಷ್ಟವಾಯಿತು. ಒಂದು ಸಲಕ್ಕೆ ಒಬ್ಬರಿಗೆ ಮಾತ್ರ ಅಲ್ಲಿ ಅವಕಾಶ ವಿರುವಂತಿತ್ತು. ಹೈದರನ ಸರದಾರನು ಈ ಎಲ್ಲ ವಿಷಯಗಳನ್ನೂ ಖಚಿತಪಡಿಸಿಕೊಂಡ ಬಳಿಕ, ಆ ಕಟ್ಟಾಳುಗಳು ಒಬ್ಬೊಬ್ಬರಾಗಿ ಒಳಗೆ ನುಸುಳಿಹೋಗುವುದೆಂತಲೂ, ಒಳಗಡೆ ಎಚ್ಚರಿಕೆಯಿಂದ ಒಂದು ಕಡೆ ಒಟ್ಟುಗೂಡಿ ಮುಂದಿನ ಕಾರ್ಯ ಪರ್ಯಾಲೋಚಿಸುವುದೆಂತಲೂ, ನಿರ್ಧಾರ ಮಾಡಿದನು.

ಯದ್ಧಕಾಲದಲ್ಲಿ ಎಂಥ ಸಂದಿಗ್ಧ ಸಂದರ್ಭಗಳು ಒದಗಿಬಂದಾಗ ಮೊಟ್ಟಮೊದಲನೆಯವನ ಹೊಣೆ ಹೇಳತೀರದು. ಆತನಲ್ಲಿ ಎಷ್ಟು ದಿಟತನವಿದ್ದರೂ ಸಾಲದು.

ಇತ್ತ ಕಳ್ಳಗಂಡಿಯ ಒಳಭಾಗದಲ್ಲಿ ಸ್ವಲ್ಪ ದೂರದಲ್ಲಿಯೇ ಒಂದು ನೀರಿನ ದೊಣೆಯಿತ್ತ. ಅದಕ್ಕೆ ಸಮೀಪದಲ್ಲಿಯೇ ಕಹಳೆ ಬತೇರಿಯ ಕಾವಲುಗಾರನ ಹಟ್ಟಿ ಇದ್ದಿತು. ಹಗಲೂ ಇರುಳೂ ಕಹಳೆ ಬತೇರಿಯ ಮೇಲೆ ಬಲವಾದ ಕಾವಲು ಇರುತ್ತಿತ್ತು. ಅಲ್ಲೊಬ್ಬ ಕಾವಲುಗಾರ ಸದಾ ಕಾವಲು ಕಾಯುತ್ತಿರಬೇಕು. ಪಾಳೆಯಗಾರರು ಬಂದದ್ದು, ಹೋದದ್ದು, ತಮ್ಮ ಸೈನಿಕರ ಓಡಾಟ, ಶತ್ರುಗಳ ಸೈನಿಕರು ಏನು ಮಾಡುತ್ತಿದ್ದಾರೆ, ಯಾವಾಗ ಗುಂಪು ಸೇರುತ್ತಾರೆ, ಯಾವಾಗ ಶಿಬಿರಕ್ಕೆ ಹೋಗುತ್ತಾರೆ ಎಲ್ಲವನ್ನೂ ಕಣ್ಣಿನಲ್ಲಿ ಕಣ್ಣಿಟ್ಟು ನೋಡುತ್ತಿರಬೇಕು. ಅಗತ್ಯವಾದಾಗ ಕಹಳೆಯನ್ನು ಊದಿ, ಇತರರಿಗೆ ಸೂಚನೆಗಳನ್ನು ಕೊಡಬೇಕು. ಈ ಕಟ್ಟಪ್ಪಣೆಯನ್ನು ಅವನು ಬಹು ಶ್ರದ್ದೆಯಿಂದ ನಡೆಸಿಕೊಂಡು ಬಂದಿದ್ದ.

ಈ ಕಾವಲುಗಾರನು ಹೆಂಡತಿಯೇ ಓಬವ್ವ.

ದುರ್ಗಕ್ಕೆ ಶತ್ರು ಒಳಹೊಕ್ಕಾಗ, ಒಂದು ಕ್ಷಣದಲ್ಲಿ ಏನು ಮಾಡಬೇಕೆಂದು ತೀರ್ಮಾನಿಸಿ, ದುರ್ಗವನ್ನು ರಕ್ಷಿಸಿದ ವೀರ ವನಿತೆ ಓಬವ್ವ. ಇಂತಹ ವೀರರಮಣಿ ಯಾರ ಮಗಳು? ಎಲ್ಲಿ ಹುಟ್ಟಿದಳು? ಅವಳು ಬಾಲ್ಯವನ್ನು ಹೇಗೆ ಕಳೆದಳು? ಎಷ್ಟೆಲ್ಲ ಪ್ರಶ್ನೆಗಳು ನಮ್ಮ ಮನಸ್ಸನ್ನು ತುಂಬುತ್ತವೆ. ಎಷ್ಟು ಕುತೂಹಲ ಮನಸ್ಸನ್ನು ಮೀಟುತ್ತದೆ!

ಆದರೆ ಇವಳ ವಿಷಯ ತಿಳಿದಿರುವುದು ಬಹಳ ಸ್ವಲ್ಪ ಏನೂ ತಿಳಿದೇ ಇಲ್ಲ  ಎನ್ನಬೇಕು. ಪ್ರಾಯಶಃ ಬೇಡರ ಮನೆತನದಲ್ಲಿ ಹುಟ್ಟಿದವಳು. ಅವಳ ತಂದೆ ಯಾರು, ತಾಯಿ ಯಾರು, ಆ ಪುಣ್ಯವಂತರ ಹೆಸರುಗಳೂ ತಿಳಿಯದು. ಅವಳ ಗಂಡ, ದುರ್ಗವನ್ನು ಕಾಯುವ ಕಾವಲುಗಾರ, ಅವನ ಹೆಸರೂ ಸರಿಯಾಗಿ ಗೊತ್ತಿಲ್ಲ. ಅವನ ಹೆಸರು ಕಾಟನಾಯಕ ಎಂದು ಕೆಲವರು ಹೇಳುತ್ತಾರೆ, ಭರಮನಾಯಕ ಎಂದು ಕೆಲವರು ಹೇಳುತ್ತಾರೆ. ಇನ್ನೂರು ವರ್ಷಗಳ ಹಿಂದೆ ಬೇಡರ ಕುಲದಲ್ಲಿ ಹುಟ್ಟಿದ ಓಬವ್ವನಿಗೆ ಓದು, ಬರಹ ಬರುತ್ತಿರಲಿಲ್ಲ ಎಂದು ಕಾಣುತ್ತದೆ. ಆದರೆ, ಬೆಟ್ಟಗುಡ್ಡಗಳಲ್ಲಿ ವಾಸಿಸುವ ಬೇಡರ ಕುಲದ ಹೆಣ್ಣಿಗೆ ಅಪಾಯ ಹೊಸದಲ್ಲ. ಕ್ರೂರ ಮೃಗಗಳ ಯಾವಾಗ ಮೈಮೇಲೆ ಎರಗಿದರೂ ಎರಗಬಹುದು. ಸದಾ ಎಚ್ಚರ ಬೇಕು, ಧೈರ್ಯ ಬೇಕು.

ಇಲ್ಲಿ ಹೇಳುವ ಸಂಗತಿ ನಡೆದಾಗ ಓಬವ್ವನಿಗೆ ಇನ್ನೂ ಚಿಕ್ಕ ವಯಸ್ಸು. ಮದುವೆಯಾಗಿ ಹೆಚ್ಚು ದಿನ ಕಳೆದಿರಲಿಲ್ಲ.

ಕ್ರೂರ ಶತ್ರುಗಳು ಕಳ್ಳತನದಿಂದ ದುರ್ಗವನ್ನು ಹೊಕ್ಕಾಗ, ಎಚ್ಚರ, ಧೈರ್ಯ ತೋರಿಸಿ ದುರ್ಗವನ್ನು ಉಳಿಸಿದಳು, ನಾಡಿನ ಪ್ರಭುವನ್ನು ಉಳಿಸಿದಳು. ಒಂದು ಸಾಮಾನ್ಯ ಕುಟುಂಬದಿಂದ ಬಂದು ಆಗ ತಾನೆ ಸಂಸಾರ ಪ್ರಾರಂಭಿಸಿದ್ದಳು ಈ ತರುಣಿ.

ಒಂದು ಸಂಜೆ. ಕೃಷ್ಣಪಕ್ಷವಾದುದರಿಂದ ಚಂದ್ರನ ಬೆಳಕೂ ಇಲ್ಲ. ಗಳಿಗೆ ಗಳಿಗೆಗೆ ಕತ್ತಲೆ ಏರತೊಡಗಿದೆ. ಕಹಳೆ ಬತೇರಿಯ ಕಾವಲುಗಾರನು ಮತ್ತಷ್ಟು ಹೊತ್ತಾಗುವುದಕ್ಕೆ ಮುಂಚಿತವಾಗಿಯೇ ಊಟ ಮಾಡಿಕೊಂಡು ಬರಲು ತನ್ನ ಹಟ್ಟಿಗೆ ಬಂದನು. ಒಂದೇ ಸಮನೆ ಬತೇರಿಯನ್ನು ಕಾಯುತ್ತಿದ್ದ ಗಂಡನು ಬಳಲಿ ಊಟಕ್ಕೆ ಬರಲು ಓಬವ್ವ ಕೂಡಲೆ ಊಟಕ್ಕೆ ಸಿದ್ದಪಡಿಸಿದಳು. ಅನಂತರ ನೋಡಿದರೆ, ಮನೆಯಲ್ಲಿ ನೀರಿಲ್ಲ! ಅಲ್ಲಿಯೇ ಇದ್ದ ದೊಣೆಗೆ ಬೇಗನೆ ಹೋಗಿ ನೀರು ತರಬೇಕೆಂದು ಗಡಿಗೆಯನ್ನು ಹೊತ್ತು ಬಂದಳು. ಸುತ್ತಲೂ ನಿಶ್ಯಬ್ದ. ಅವಳು ಬೇಗಬೇಗನೆ ನಡೆದುಬಂದ ಹೆಜ್ಜೆಯ ಸಪ್ಪಳವೂ, ಗಡಿಗೆಯನ್ನು ನೀರಿನಲ್ಲಿ ಅದ್ದಿದಾಗ ಆದ ಬುಳುಬುಳು ಶಬ್ದವೂ ಆ ಮೌನವನ್ನು ಕಲಕಿತು.

ಓಬವ್ವ ಕೆಳಗಿಳಿದು ನೀರನ್ನು ತುಂಬಿಕೊಂಡದ್ದಾಯಿತು. ಮನೆಗೆ ಹೊರಟಳು. ನಾಲ್ಕು ಹೆಜ್ಜೆ ಇಟ್ಟಾಗ, ಏನೋ ಪಿಸುಪಿಸು ಮಾತು!

ಓಬವ್ವಳಿಗೆ ಆಶ್ಚರ್ಯವಾಯಿತು. ಇಲ್ಲಿ, ಇಷ್ಟು ಹೊತ್ತಿನಲ್ಲಿ ಯಾರಿರಬೇಕು? ಎಷ್ಟಾದರೂ ಆಕೆ ಕಾವಲುಗಾರನ ಹೆಂಡತಿಯಲ್ಲವೆ? ಕ್ಷಣಕಾಲ ನಿಂತು ಕಿವಿಕೊಟ್ಟು ಕೇಳಿದಳು. ಉರ್ದು ಮಾತುಗಳು ಅಸ್ಪಷ್ಟವಾಗಿ ಕೇಳಿ ಬಂದವು. ಕೋಟೆಯ ಬಳಿ ಕಳ್ಳ ಧ್ವನಿಯಲ್ಲಿ ಉರ್ದು ಮಾತುಗಳನ್ನು ಆಡುವವರು ಯಾರು?

ಮರುಕ್ಷಣವೇ ಆಕೆಗೆ ಶತ್ರುವಿನ ಒಳ ಸಂಚಿರಬೇಕೆಂದು ದೃಢವಾಯಿತು.

ಕೆಲಸ ಕೆಟ್ಟಿತೆಂದು ಕೂಡಲೆ ಹಟ್ಟಿಗೆ ಓಡಿಬಂದಳು.

ಗಂಡನು ಹಸಿದು, ಬಹು ತೃಪ್ತಿಯಿಂದ ಊಟ ಮಾಡುತ್ತಿದ್ದನು.

ಪತಿವ್ರತೆಯಾದ ಆಕೆಗೆ ಗಂಡನನ್ನು ಊಟದ ಮಧ್ಯದಲ್ಲಿ ಎಬ್ಬಿಸುವುದಕ್ಕೆ ಮನಸ್ಸಾಗಲಿಲ್ಲ! ಆದರೆ ಅವನ ಕರ್ತವ್ಯಕ್ಕೆ ಲೋಪ ಬಂದೀತೆಂಬ ಶಂಕೆ ಪೀಡಿಸಿತು. ಒಂದು ನಿಮಿಷ ಏನನ್ನೋ ಯೋಚಿಸಿದಳು. ಮುಖದಲ್ಲಿ ಏನೋ ಗೆಲುವು ಮೂಡಿತು. ಕೂಡಲೆ ಮೂಲೆಯಲ್ಲಿದ್ದ ಒನಕೆಯನ್ನು ತೆಗೆದುಕೊಂಡು, ಸ್ವಲ್ಪವೂ ತಡಮಾಡದೆ ಕಳ್ಳಗಂಡಿಯ ಬಳಿಗೆ ಬಂದಳು.

ವೀರ ಗಚ್ಚೆಯನ್ನು ಹಾಕಿ ಆ ಹೆಂಗಸು, ಒನಕೆಯನ್ನು ಹಿಡಿದು ಸಜ್ಜಾಗಿ ನಿಂತಳು!

ಸೌಮ್ಯ ಸಾಧ್ವಿಶತ್ರುಗಳಿಗೆ ಕಾಳಿ

ನಕ್ಷತ್ರಗಳ ಬೆಳಕು ಅಷ್ಟು ಇಷ್ಟು ಬೀಳುತ್ತಿತ್ತು.

 

ಕೋಟೆಯ ಹೊರಗಿದ್ದ ಹೈದರನ ಗಂಡಾಳುಗಳು ತಮ್ಮ ತಮ್ಮ ಸರದಿಯನ್ನು ನಿಶ್ಚಯಿಸಿಕೊಂಡರು. ಮೊದಲನೆಯ ಯೋಧನು ಆ ಕಳ್ಳದಾರಿಯಲ್ಲಿ ಹಾಗೂ ಹೀಗೂ ತಡವರಿಸುತ್ತ ತೆವಳುತ್ತ ಮುಂದೆ ಬಂದನು. ಓಳಗಡೆ ಬಂದವನೇ ತಲೆಯೆತ್ತಿ ನೋಡಲು ಪ್ರಯತ್ನಿಸಿದನು.

ಆ ಹೊತ್ತಿಗೆ ಸರಿಯಾಗಿ ಓಬವ್ವ ತನ್ನ ಕೈಯಲ್ಲಿದ್ದ ಒನಕೆಯಿಂದ ಆತನ ತಲೆಯನ್ನು ಬಲವಾಗಿ ಬಡಿದಳು.

ಸಿಪಾಯಿಯ ತಲೆಗೆ ಪೆಟ್ಟು ಬೀಳುವುದೇ ತಡ ಅವನು ರಕ್ತ ಕಾರಿ ಸತ್ತನು. ಅವನ ಹೆಣ ಅಲ್ಲಿಯೇ ಇದ್ದರೆ ಹಿಂದಿನವರಿಗೆ ಅನುಮಾನ ಬರುತ್ತದೆ ಆದರಿಂದ ಓಬವ್ವ-ಒಬ್ಬ ಹೆಂಗಸು – ಆ ದೃಢಕಾಯದ ಸೈನಿಕನ ಹೆಣವನ್ನು ಪಕ್ಕಕ್ಕೆ ಎಳೆದು ಹಾಕಿ, ಮತ್ತೆ ಅಣಿಯಾದಳು.

ಮತ್ತೊಬ್ಬ ಯೋಧನು ತಲೆಯಿಕ್ಕಿ ಬಂದನು.

ಓಬವ್ವನ ಒನಕೆ ಅವನನ್ನೂ ಕೂಡಲೆ ಆಹುತಿ ತೆಗೆದುಕೊಂಡಿತು. ಅವನ ಹೆಣವನ್ನೂ ಪಕ್ಕಕ್ಕೆ ಎಳೆದು ಹಾಕಿದಳು.

ಕಳ್ಳಗಂಡಿಯ ಒಳಭಾಗದಲ್ಲಿ ಏನಾಗುತ್ತಿದೆಯೆನ್ನುವುದನ್ನು ತಿಳಿಯದ ಹೈದರನ ಸೈನಿಕರು ಒಬ್ಬೊಬ್ಬರಾಗಿ ನುಸುಳಿ ಓಬವ್ವ ಒನಕೆಗೆ ಬಲಿಯಾದರು.

ಹೆಣಗಳ ರಾಶಿ ಬಣವೆಯಂತಿತ್ತು. ನೆತ್ತರಿನ ಓಕುಳಿಯಲ್ಲಿ ಒಬವ್ವ ಮೈಮರೆತಳು. ಆಕೆಯ ಒನಕೆಗೆ ಬಿಡುವೇ ಇರಲಿಲ್ಲ.

ವೀರ ವನಿತೆ ತನ್ನು ಕೆಲಸವನ್ನು ಮುಗಿಸಿ ಸಾವನ್ನಪ್ಪಿದಳು

ಓಬವ್ವನ ಗಂಡ ಊಟವನ್ನು ಮುಗಿಸಿದ. ಹೆಂಡತಿ ಹಟ್ಟಿಯಲ್ಲಿ ಕಾಣಲಿಲ್ಲ. ಹೊರಕ್ಕೆ ಹೋಗಿರಬಹುದು, ಅಕ್ಕ ಪಕ್ಕದ ಮನೆಗೆಲ್ಲಾದರೂ ಹೋಗಿರಬಹುದು, ಬರುತ್ತಾಳೆ ಎಂದು ಕಾದ. ಹೆಂಡತಿ ಬರಲಿಲ್ಲ. ಆಗ ಅವನಿಗೆ ತೋರಿತು – ನೀರು ತರಲು ದೊಣೆಯ ಬಳಿಗೆ ಹೋಗಿರಬಹುದು ಎಂದು. ತಾನು ತನ್ನ ಕಾವಲಿನ ಕೆಲಸಕ್ಕೆ ಮತ್ತೆ ಹೋಗಬೇಕು. ಕೈಯಲ್ಲಿ ಕಹಳೆಯನ್ನು ಹಿಡಿದುಕೊಂಡು ದೊಣೆಯ ಕಡೆಗೆ ಹೊರಟ.

ಆ ನಕ್ಷತ್ರಗಳ ಬೆಳಕಿನಲ್ಲಿ ನಾಲ್ಕು ಹೆಜ್ಜೆ ಇಡುವುದೇ ತಡ, ಓಬವ್ವವನ ಒನಕೆಯ ಪೆಟ್ಟಿನ ಶಬ್ದ ಕೇಳಿ ಬಂದಿತು. ಚಕಿತನಾದ ಕಾವಲುಗಾರ ಗಾಬರಿಗೊಂಡು ಮುಂದೆ ಬಂದಾಗ ಅಲ್ಲಿನ ದೃಶ್ಯವನ್ನು ಕಂಡು ಬೆಚ್ಚಿಬೆದ್ದನು!

ಓಬವ್ವ ಒನಕೆಯನ್ನು ಹಿಡಿದು ಮಹಾಕಾಳಿಯಂತೆ ನಿಂತಿದ್ದಾಳೆ. ಹೆಣಗಳು ರಾಶಿ ರಾಶಿಯಾಗಿ ಕಿಕ್ಕಿರಿದಿವೆ. ರಕ್ತದ ಮಡುವಿನಲ್ಲಿ ನಿಂತ ಆತನ ಮಡದಿ ಮೈಮರೆತಿದ್ದಾಳೆ. ತಲೆಗೂದಲೆಲ್ಲ ಕೆದರಿವೆ, ಸೀರೆಯಿಂದ ರಕ್ತದತೊಟ್ಟಿಕ್ಕುತ್ತಿದೆ. ಆಕೆಯ ಗಮನ ಗಂಡನ ಕಡೆ ಹರಿಯಲೇ ಇಲ್ಲ. ಕಳ್ಳಗಂಡಿಯಿಂದ ನುಗ್ಗಿಬಂದವರ ಬಲಿಕಾರ್ಯದಲ್ಲಿಯೇ ಆಕೆ ಮಗ್ನಳಾಗಿದ್ದಳು.

ಕಾವಲುಗಾರನಿಗೆ ಎಂಥ ಆಚಾತುರ್ಯವಾಯಿತು. ಎಂದು ಭಯವುಂಟಾಗಿ ಹೆಂಡತಿಯ ಕಡೆ ಮುನ್ನುಗ್ಗಿದನು.

ಓಬವ್ವ ದುರ್ಗದ ರಕ್ಷಣಯ ಕಾರ್ಯದಲ್ಲಿ ಮೈಮರೆತಿದ್ದಾಳೆ. ದುರ್ಗಕ್ಕೆ ಅಪಾಯ ಬಂದಿದೆ ಎಂಬುದೊಂದೇ ಅವಳಿಗೆ ತಿಳಿದೆದ್ದು ಯಾರು ಹತ್ತಿರ ಬಂದರೂ ಶತ್ರು ಎಂದೇ ಅವಳ ಭಾವನೆ ಕೂಡಲೆ ಒನಕೆಯನ್ನು ಎತ್ತಿದಳು.

ಕಂಗೆಟ್ಟ ಕಾವಲುಗಾರನು ಆ ವಿಪತ್ತಿನಂದ ಪಾರಾಗಿ, ತಕ್ಷಣವೇ ಕಹಳೆ ಊದಿದನು.

ಆ ರಾತ್ರಿಯಲ್ಲಿ ಕಹಳೆಯ ಶಬ್ದ ಕೋಟೆಯ ಮೂಲೆ ಮೂಲೆಗಳಲ್ಲೆಲ್ಲ ಕ್ಷಣ ಮಾತ್ರದಲ್ಲಿ ಅನುರಣಿತವಾಯಿತು. ಕೋಟೆಗೆ ಅಪಾಯ ಎಂದು ಮೂಲೆ ಮೂಲೆಯಲ್ಲಿ ಪ್ರತಿಧ್ವನಿತವಾಯಿತು. ಎದೆ ಮುಚ್ಚಿ ತೆರೆಯುವಷ್ಟರಲ್ಲಿಯೇ ಮದಕರಿನಾಯಕನ ಸೈನಿಕರು ಗುಂಪು ಗುಂಪಾಗಿ ಧಾವಿಸಿ ಬಂದರು.

ಅವರು ಕಂಡದ್ದೇನು ? ಪರಮ ಸಾಧ್ವಿ, ಸೌಮ್ಯ ಮೂರ್ತಿ ಓಬವ್ವ ಒನಕೆ ಹಿಡಿದು ನಿಂತಿದ್ದಾಳೆ. ಸುತ್ತ ಶತ್ರುಗಳ ಹೆಣಗಳು. ಒನಕೆ ರಕ್ತ, ಅವಳ ಮೈ ಕೈ, ಸೀರೆ ಎಲ್ಲ ರಕ್ತ. ನೆಲವೆಲ್ಲ ರಕ್ತದಲ್ಲಿ ತೊಯ್ದುಹೋಗಿದೆ. ಓಬವ್ವನ ದುರ್ಗವತಾರವನ್ನು ಕಂಡು ಎಲ್ಲರು ನಡು ನಡುಗಿಹೋದರು.

ನಾಲ್ಕೂ ಮೂಲೆಗಳಿಂದ ಬಂದ ಸೈನಿಕರು ಶತ್ರು ಸಂಹಾರಕ್ಕಾಗಿ ಮುನ್ನುಗ್ಗಲಾರಂಭಿಸಿದರು. ಗಜಿಬಿಜಿಯಾಗಿ ಗೊಂದಲವಾಯಿತು. ಸುತ್ತ ಕೋಲಾಹಲವಾದುದರಿಂದ ಮೈಮರೆತು ಶತ್ರುಸಂಹಾರಮಾಡುತ್ತಿದ್ದ ಓಬವ್ವನಿಗೆ ಈ ಜಗತ್ತಿನ ಸ್ಮರಣೆ ಬಂದಿತು. ಒನಕೆಯನ್ನು ತಡೆದು, ಸುತ್ತ ಏನು ನಡೆಯುತ್ತಿದೆ ಎಂದು ನೋಡಿದಳು. ಆ ಕ್ಷಣದಲ್ಲಿಯೇ ಹಲವರು ಶತ್ರು ಸೈನಿಕರು ಕಳ್ಳಗಂಡಿಯಿಂದ ಹೊರಕ್ಕೆ ಬಂದರು. ಹಿಂದಿನಿಂದ ಹಾದು ಬಂದ ಶತ್ರು ಸೈನಿಕನೊಬ್ಬನು ಆಕೆಯ ತಲೆಗೆ ಬಲವಾಗಿ ಹೊಡೆದನು. ಒಂದೇ ಸಮನೇ ಒನಕೆಯಿಂದ ಶತ್ರುಗಳ ರುಂಡವನ್ನು ಚೆಂಡಾಡಿದ ಆಕೆ ಬಳಲಿ ಬೆಂಡಾಗಿದ್ದಳು. ಬಿದ್ದ ಪೆಟ್ಟಿನಿಂದ ನೆಕ್ಕೆ ಉರುಳಿದಳು. ಮತ್ತೆ ಮೇಲೇಳಲಿಲ್ಲ. ಆಕೆ ಪ್ರಾಣ ಪಕ್ಷಿ ಹಾರಿಹೋಗಿತ್ತು.

ಮದಕರಿನಾಯಕನ ಸೈನಿಕರು ಶತ್ರುಸೈನಿಕರನ್ನು ಸದೆಬಡಿದು ಹಿಮ್ಮಟ್ಟಿಸಿದರು.

ಆ ವೇಳೆಗೆ ಪಾಳೆಯಗಾರನೂ ಅಲ್ಲಿಗೆ ಬಂದು, ಅಲ್ಲಿನ ವೃತ್ತಾಂತವನ್ನೆಲ್ಲ ಕೇಳಿ ತಿಳಿದನು.

ದುರ್ಗವನ್ನು ಕಾಪಾಡಿದ ವೀರವನಿತೆ ತನ್ನ ಕೆಲಸ ಮುಗಿಯಿತೆಂದು ಸಾವನ್ನು ಸೇರಿದ್ದಳು.

ಓಬವ್ವನ ಹೆಣವನ್ನು ಕಂಡು ಅವನ ಕಂಬನಿ ಕೋಡಿಹರಿಯಿತು.

ಕಾವಲುಗಾರನ ಸಂಕಟವಂತೂ ಹೇಳುವಂತಿಲ್ಲ.

ವೀರಾಧಿವೀರರುಗಳೆಲ್ಲ ಆ ವೀರವನಿತೆಯ ಗುಣಗಾನ ಮಾಡತೊಡಗಿದರು.

“ಶೂರರಾದವರು ಮಡಿದರೆ ಅವರ ಹೆಂಡತಿಯರು ಕಿಚ್ಚಿನಲ್ಲಿ ಬೀಳುವುದನ್ನು ನಾವು ಬಲ್ಲೆವು. ಮಹಾಸತಿಯರು ನಾನಾ ಧ್ಯೇಯಗಳಿಗಾಗಿ ಪ್ರಾಣವನ್ನೇ ಅರ್ಪಿಸಿದ ಕಥೆಗಳನ್ನು ಮಾಸ್ತಿ ಕಲ್ಲುಗಳು ಇಂದಿಗೂ ಸಾರಿ ಹೇಳುತ್ತಿವೆ. ಆದರೆ ಈ ರೀತಿಯಾಗಿ ಅತ್ತ ಪಾತಿವ್ರತ್ಯ ಇತ್ತ ರಾಜಭಕ್ತಿಯನ್ನೂ ಮೆರೆಸಿದ ಮಹಿಳೆಯರು ವಿರಳ. ಓಬವ್ವನಂತಹ ಹೆಣ್ಣುಗಲಿಯನ್ನು ಪಡೆದ ನಾವು ಪುಣ್ಯಶಾಲಿಗಳೇ ಸರಿ” ಎಂದು ಮುಕ್ತಕಂಠದಿಂದ ಆ ಸಾಧ್ವಿಯನ್ನು ಕೊಂಡಾಡಿದರು.

ಮದಕರಿನಾಕನಾದರೋ ಓಬವ್ವನ ಸಮಯೋಚಿತವಾದ ಸಾಹಸಕ್ಕೆ ತಲೆದೂಗಿ, “ಈ ಕಳ್ಳದಾರಿಗೆ ಇಂದಿನಿಂದ “ಓನಕೆ ಕಂಡಿ” ಎಂಬ ಹೆಸರು ಆಕೆಯ ಸ್ಮರಣಾರ್ಥವಾಗಿ ಜಾರಿಗೆ ಬರಲಿ ನಮ್ಮ ಗಂಡುಗಲಿಗಳ ಸಂಖ್ಯೆ ಹೇಗೆ ಅಮಿತವಾಗಿದೆಯೋ ಹಾಗೆಯೇ ಓಬವ್ವನ ಈ ಮೇಲ್ಪಂಕ್ತಿಯನ್ನು ಅನುಸರಿಸಿ ಹೆಣ್ಣುಗಲಿಗಳ ಸಂಖ್ಯೆಯೂ ಬೆಳೆಯಲಿ” ಎಂದು ಉದ್ಘೋಷಿಸಿದನು.

ಪರಾಕ್ರಮ ಪಕ್ಷಪಾತಿಯಾದ ವೀರ ಮದಕರಿನಾಯಕನ ಈ ಪ್ರಶಂಸನೀಯವಾದ ಕಾರ್ಯವನ್ನು ಕಂಡು ಅವನನ್ನು ಎಲ್ಲರೂ ಶ್ಲಾಘಿಸಿದರು.

ಎಷ್ಟೋ ಮಂದಿ ಶತ್ರುಗಳನ್ನು ಸೋಲಿಸಿದ್ದ ಹೈದರಾಲಿ ಒಬ್ಬ ಸಾಹಸವಂತ ಹೆಂಗಸು ಈಗ ಅವನ ಸೈನ್ಯವನ್ನು ತಡೆದು ನಿಲ್ಲಿಸಿದ್ದಳು!

ಮೊದಲು ಏನಾಯಿತೆಂದು ತಿಳಿಯದೆ ಹೈದರಾಲಿ ಭರವಸೆ ತುಂಬಿದ ಹೃದಯದಿಂದ ಸುದ್ದಿಗಾಗಿ ಕಾಯುತ್ತಿದ್ದ. ತನ್ನ ಸೈನಿಕರು ಸುಳಿವು ಕೊಡದೆ ಕೋಟೆಯನ್ನು ಪ್ರವೇಶಿಸುತ್ತಾರೆ, ಅನಿರೀಕ್ಷಿತವಾಗಿ ಮೇಲೆರಗಿದ ಶತ್ರುಗಳನ್ನು ಎದುರಿಸಲಾರದೆ ಚಿತ್ರದುರ್ಗದವರು ಗೊಂದಲದಲ್ಲಿ ಬೀಳುತ್ತಾರೆ. ತನ್ನ ಸೈನಿಕರು ಕೋಟೆಯ ಬಾಗಿಲನ್ನು ತೆರೆದರೆ ಸಾಕು, ತಾನೂ ತನ್ನ ಸೈನ್ಯವೂ ದುರ್ಗವನ್ನು ಪ್ರವೇಶಿಸಬಹುದು, ಮದಕರಿನಾಯಕನನ್ನು ಸೆರೆ ಹಿಡಿಯಬಹುದು ಎಂದು ಲೆಕ್ಕ ಹಾಕಿ, ಸುದ್ದಿಗಾಗಿ ಕಾಯುತ್ತಿದ್ದ.

ಕಾಲ ಸಾಗಿತು. ಸುದ್ದಿಯೂ ಬರಲಿಲ್ಲ. ಕೋಟೆಯ ಬಾಗಿಲೂ ತೆರೆಯಲಿಲ್ಲ.

ತಾಳ್ಮೆಗೆಟ್ಟು, ಬೇಸರದಿಂದ ಸುದ್ದಿಗಾಗಿ ಕಾಯುತ್ತ ಕುಳಿತ ಹೈದರಾಲಿಗೆ, ಅವನ ಅಧಿಕಾರಿಗಳಿಗೆ ಓಬವ್ವನ ಗಂಡ ಊದಿದ ಕಹಳೆಯ ಶಬ್ದ ಕೇಳಿತು. “ಏನೂ ಆಯಿತು” ಎಂದಷ್ಟೆ ತಿಳಿಯಿತು. ಏನಾಯಿತು ತಿಳಿಯಲಿಲ್ಲ.

ಆ ಮೇಲೆ ಕೋಟೆಯ ಮೇಲೆ ದುರ್ಗದ ಸೈನಿಕರು ತುಂಬಿದುದು ಕಾಣಿಸಿತು.

ಹೈದರನಿಗೆ ತಡೆಯಲಾರದ ತವಕ.

ಕಡೆಗೆ ತಪ್ಪಿಸಿಕೊಂಡು ಬಂದ ಸೈನಿಕನೊಬ್ಬನಿಂದ ತಿಳಿಯಿತು. ಸಾಮಾನ್ಯ ಗೃಹಿಣಿ ಎನ್ನಿಸಿಕೊಂಡ ಹೆಂಗಸೊಬ್ಬಳು, ತನ್ನ ಸೈನ್ಯವನ್ನು ತಡೆದು ನಿಲ್ಲಿಸಿದ ರೋಮಾಂಚನಕಾರಿ ಕಥೆ.

ಹೈದರಾಲಿಗೆ ಉತ್ಸಾಹ ಅಡಗಿತು. ವಿಶ್ವಾಸ ಬಾಡಿತು. ಓಬವ್ವನ ಕೆಚ್ಚೆದೆಯ ಕಾರ್ಯದಿಂದ ಅಂದು ಕೋಟೆಯು ಉಳಿಯಿತು.

ಆಕೆ ಸತ್ತು ಸುಮಾರು ಇನ್ನೂರು ವರ್ಷಗಳು ಕಳೆದುಹೋಗಿವೆ. ಆ ಕೋಟೆಯೂ ಈಗ ಮೊದಲಿನಂತೆ ಉಳಿದಿಲ್ಲ. ಅಲ್ಲಿ ಕಾಣುವುದು ಬರಿಯ ಅವಶೇಷಗಳು. ಈಗ ಅಲ್ಲಿ ಪಾಳೆಗಾರರಿಲ್ಲ. ಆದರೆ ಆಕೆಯ ಸಾಹಸಕಾರ್ಯವು ನಿತ್ಯಜೀವಂತವಾಗಿದೆ. ಆಕೆಯ ಹೆಸರು ಅಮರವಾಗಿದೆ. ಚಿತ್ರದುರ್ಗದ ಜನರ ಮನದಲ್ಲಿ ಅವಳು ಅಚ್ಚಳಿಯದ ಸ್ಥಾನವನ್ನು ಪಡೆದಿದ್ದಾಳೆ. ಹೆಚ್ಚೇನು! ಚಿತ್ರದುರ್ಗದ ಓಬವ್ವ ಸತ್ತರೂ ಸಾಯದಂತೆ ಪುಣ್ಯ ಸ್ಮೃತಿಯಾಗಿ ಉಳಿದಿದ್ದಾಳೆ. ಏಳು ಸುತ್ತಿನ ಕೋಟೆಯನ್ನೆಲ್ಲ ಸುತ್ತಿ ಬಂದ ಯಾವ ಪ್ರವಾಸಿಯೂ “ಒನಕೆಯ ಕಂಡಿ”ಯನ್ನು ನೋಡದೆ ಹಿಂದಿರುಗುವುದಿಲ್ಲ. ಅಲ್ಲಿಗೆ ಬಂದವನೇ ಆ ಎಡೆಯಲ್ಲಿ ಕ್ಷಣಕಾಲ ನಿಂತು, ಓಬವ್ವನ ಕಥೆಯನ್ನು ಕೇಳಿ, ಆ ಕಳ್ಳದಾರಿಗೆ ಕೈಮುಗಿದೆ, ಆ ವೀರರಮಣಿಗಾಗಿ ತನ್ನ ಕಂಬನಿಯ ಕಾಣಿಕೆಯನ್ನು ಅರ್ಪಿಸಿ ಕೃತಾರ್ಥನಾಗುತ್ತಾನೆ!

ಸತ್ತರು ಬದುಕಿಹ ಓಬವ್ವ!
ಚಿತ್ರದುರ್ಗದ ಓಬವ್ವ!
ಎಂದೆಂದಿಗೂ ನೀ ಬಾಳವ್ವ!”