ಪ್ರಕೃತಿಯ ವೇಳಾಪಟ್ಟಿಯಂತೆ ರೈತನ ಕೃಷಿ ಚಟುವಟಿಕೆಗಳು ಸಾಗುತ್ತವೆ. ಒಂದು  ನಿಗದಿತ ವೇಳೆಗೆ ಆರಂಭವಾಗುತ್ತವೆ ಮತ್ತು ಅಂತಿಮಗೊಳ್ಳುತ್ತವೆ.  ಸಾಮಾನ್ಯವಾಗಿ ಏಪ್ರಿಲ್ ತಿಂಗಳ ಎರಡನೇ ವಾರ ಬೀಳುವ ಅಶ್ವಿನಿ ಮಳೆಯಿಂದ ಕೃಷಿ ಚಟುವಟಿಕೆಗಳಿಗೆ ಚಾಲನೆ ದೊರೆತು ಅದೇ ತಿಂಗಳ ಕೊನೆಯ ವಾರ ಬೀಳುವ ಭರಣಿ ಮಳೆಯಿಂದ ಸಂಪೂರ್ಣವಾಗಿ ಬೇಸಾಯದ ಪ್ರಕ್ರಿಯೆಗಳು ಪ್ರಾರಂಭ. 

`ಭರಣಿ ಮಳೆಯಲ್ಲಿ ಬಡವ ಏರು ಕಟ್ಟು’ ಎಂಬ ವಾಡಿಕೆ ಮಾತಿದೆ.  ಯುಗಾದಿ ಹಬ್ಬದ ಏಳು ದಿನಗಳ ಅಂತರದ ಹಿಂದು-ಮುಂದು ಮುಂಗಾರು ಮಳೆ ಬೀಳುತ್ತದೆ.  ಮುಂಗಾರು ಮಳೆ ಬಿದ್ದ ಮಾತ್ರದಿಂದಲೇ ರೈತರು ಕೃಷಿ ಚಟುವಟಿಕೆಯನ್ನು ಆರಂಭಿಸುವುದಿಲ್ಲ.  ಆ ಸಂದರ್ಭದಲ್ಲಿ ನೆಲ ನೆನೆಯಲು ಬಿಡುತ್ತಾರೆ.  ಈ ನೆಲ ನೆನೆಯುವ ಕ್ರಿಯೆಯಲ್ಲಿ  ಕೆಲ ಸೂಕ್ಷ್ಮ ಜೀವಿಗಳು ಉತ್ಪತ್ತಿಯಾಗಿ ಬೆಳವಣಿಗೆ ಹೊಂದುತ್ತವೆ.  ಅವುಗಳು ಭೂಮಿಯ ಫಲವತ್ತತೆ ಹೆಚ್ಚಿಸುವಲ್ಲಿ ಸಹಕರಿಸುತ್ತವೆ. ಇಷ್ಟು ಹೊತ್ತಿಗೆ ಹೊಲಕ್ಕೆ ಗೊಬ್ಬರ-ಗೋಡು ಹಾಕುವುದು, ಉದಿ-ಬದು ಭದ್ರಪಡಿಸುವುದು, ಬೇಲಿ ಸವರುವುದು ಮುಂತಾದ ಕೆಲಸಗಳು ಮುಗಿದಿರುತ್ತವೆ. ಇದಾದ ನಂತರ ಬೀಳುವ ಮಳೆಯ ನಂತರ     ಸಾಂಪ್ರದಾಯಿಕ ಹೊನ್ನೇರು ಪೂಜೆಯೊಂದಿಗೆ ರೈತರು ಉಳುಮೆ ಕಾರ್ಯವನ್ನು ಆರಂಭಿಸುತ್ತಾರೆ.

ಮೇ, ಜೂನ್, ಜುಲೈ, ಆಗಸ್ಟ್, ತಿಂಗಳುಗಳಲ್ಲಿ ಬಿತ್ತಿದ ಬೀಜ ಮೊಳೆತು, ಎರಡೆಲೆ ಇಟ್ಟು, ನೋಡ-ನೋಡುತ್ತಲೆ ನೆಲ ಕಾಣದಂತೆ ಬೆಳೆದು, ಹೊಟ್ಟೆಯೊಡೆದು, ಹೂಕಾಯ್ದು, ತೆನೆಯಾಗಿ, ಆ ತೆನೆ ಬಲಿತು ಹಣ್ಣಾಗಿ ಕಟಾವಿಗೆ ಸಿದ್ಧವಾಗುತ್ತದೆ. ಬೆಳೆ ಕಟಾವಾಗಿ ಕಣಕ್ಕೆ ಸಾಗಿದರೆ ರೈತನಿಗೆ ನಿಸೂರು. ಆ ನಿಸೂರಾದ ಭಾವದಲ್ಲಿ ಸುಗ್ಗಿ ಮಾಡಲು ಸಕಲ ತಯಾರಿ ನಡೆಯುತ್ತದೆ. ನಾಡಿನಾದ್ಯಂತ ಹತ್ತು-ಹಲವು ತೆರನಾದ ಸುಗ್ಗಿ ಆಚರಣೆಗಳನ್ನು ಕಾಣಬಹುದು. ರಾಗಿ ಕಣದಲ್ಲಿ ನಡೆಯುವ ಸುಗಿಯ ಖದರು ಒಂದು ತೆರನಾದರೆ, ಉತ್ತರ ಕರ್ನಾಟಕದ ಜೋಳದ ಹೊಲದಲ್ಲಿ ನಡೆಯುವ ಸುಗ್ಗಿಯ ಸಿರಿ ಮತ್ತೊಂದು ತೆರನಾದದ್ದು. ಮಲೆನಾದಿUರ ಭತ್ತದ, ಅಡಿಕೆಯ ಸುಗ್ಗಿಯ ಸೊಗಸೇ ಬೇರೆ. 

ಸಂಕ್ರಾಂತಿ- ಸುಗ್ಗಿಯ ಸಂಭ್ರಮ

ಸಂಕ್ರಾಂತಿಗೆ  ವಾರದ ಮುಂಚಿನಿಂದಲೇ ಅದಕ್ಕಾಗಿ ಸಿದ್ಧತೆ.  ಹದವಾಗಿ ಹುರಿದ ಎಳ್ಳು, ಸಮನಾಗಿ ಸಣ್ಣಗೆ ಹೆಚ್ಚಿದ ಕೊಬ್ಬರಿ-ಬೆಲ್ಲ, ಹುರಗಡಲೆ, ಕಂದು ಬಣ್ಣಕ್ಕೆ ಬಾರದಂತೆ ಜೋಪಾನವಾಗಿ ಹುರಿದ ಕಡಲೆ ಬೀಜದ ಮಿಶ್ರಣ.  `ಎಳ್ಳು-ಬೆಲ್ಲದ’ ಜೊತೆಗೆ ಮಕ್ಕಳಿಗೆ ಪ್ರಿಯವಾದ ಸಕ್ಕರೆ ಅಚ್ಚು ಹಾಗೂ ಕಬ್ಬನ್ನು ತಮಗೆ ಪ್ರಿಯವಾದವರೆಲ್ಲರಿಗೆ ನೀಡುತ್ತಾ ಅಂದರೆ ಬೀರುತ್ತಾ, `ಎಳ್ಳು-ಬೆಲ್ಲ ತಿಂದು ಒಳ್ಳೆಯ  ಮಾತನ್ನಾಡೋಣ’ ಎಂದೋ `ತೀಳ್‌ಗುಳ್ ಘ್ಯಾ ಗೂಡಗೂಡ ಬೋಲ್’ ಎಂದೋ  ಕುಸುರಿ ಎಳ್ಳನ್ನು ಕೈಗಿಟ್ಟು  ಸ್ನೇಹಭಾವ ಪ್ರದರ್ಶಿಸಲಾಗುತ್ತದೆ. ತನ್ನ ಬಳಿ ಇರುವುದನ್ನು ಇತರರಿಗೂ ಕೊಟ್ಟು ಎಲ್ಲರೂ ಸಮರಸದಿಂದ ಬಾಳುವೆ ಬಾಳೋಣ ಎಂಬ ಸದ್ಭಾವನೆಯೂ ಇದರಲ್ಲಡಗಿದೆ.  ಸಂಕ್ರಾಂತಿಯೆಂದರೆ ಸಮೃದ್ಧಿಯ ಸಂಕೇತ.

ನಮ್ಮ ಎಲ್ಲ ಹಬ್ಬಗಳಿರುವಂತೆಯೇ ಸಂಕ್ರಾಂತಿಗೂ ಒಂದು ಪೌರಾಣಿಕ ಹಿನ್ನೆಲೆಯಿದೆ.  ತಿಲಾಸುರನ ವಧೆ ಈ ಹಬ್ಬದಾಚರಣೆಗೆ ಮೂಲ ಕಾರಣ.  ಅದರ ವಿವರ ಹೀಗಿದೆ.

ತಿಲಾಸುರನೆಂಬ ರಾಕ್ಷಸನೊಬ್ಬ ಬ್ರಹ್ಮನಿಂದ ವರ ಪಡೆಯುತ್ತಾನೆ. ಆ ವರದ ಬಲದಿಂದ ಉನ್ಮತ್ತನಾಗಿ ಲೋಕ ಪೀಡಕನಾಗುತ್ತಾನೆ. ಆಗ ಸೂರ್ಯ ದೇವ `ಮಕರ’ ಮತ್ತು `ಕರ್ಕ’ ಎಂಬಿಬ್ಬರು ಮಹಿಳೆಯರ ಸಹಾಯದಿಂದ ಆ ತಿಲಾಸುರನನ್ನು ನಿವಾರಿಸಲು ಮುಂದಾಗುತ್ತಾರೆ.  `ಮಕರ’ನು ತಿಲಾಸುರನ ಸಂಹಾರಕ್ಕಾಗಿ ಆತನ ಹೊಟ್ಟೆಯನ್ನು ತನ್ನ ಭಲ್ಲೆಯಿಂದ ತಿವಿದಾಗ ಅಲ್ಲಿಂದ ರಾಶಿ ರಾಶಿ ಎಳ್ಳು ಹೊರಬರುತ್ತವೆ. ಕೊನೆಗೆ ಅಸುರ ಮೃತಪಡುತ್ತಾನೆ. ಈ ಕಾರಣಕ್ಕಾಗಿ ಭೂಮಿಗೆ ಎಳ್ಳಿನ ಪ್ರವೇಶವಾಗುತ್ತದೆ. ಆಗ  ಸೂರ್ಯದೇವನು ಮಕರನನ್ನು ಆತನ ಸಾಹಸಕ್ಕಾಗಿ ಹೊಗಳಿ  `ನಿನ್ನನ್ನು ಮತ್ತು ನೀನು ಶೋಧಿಸಿದ ಎಳ್ಳನ್ನು ಪೂಜಿಸಿದವರಿಗೆ ಒಳಿತಾಗಲಿ’ ಎಂದು ಹಾರೈಸುತ್ತಾನೆ. ಈ ರೀತಿ ಎಳ್ಳು ಬೀರುವ ಸಂಪ್ರದಾಯ ಬಂದಿದೆ ಎನ್ನಲಾಗಿದೆ. ಅದಕ್ಕಾಗಿಯೇ ಈ ಹಬ್ಬಕ್ಕೆ ಮಕರ ಸಂಕ್ರಾಂತಿ ಎಂತಲೂ ಕರೆಯುತ್ತಾರೆ.

ಈ ಹಬ್ಬಕ್ಕೆ ವೈಜ್ಞಾನಿಕ ಮಹತ್ವವೂ ಇದೆ.  ಜೀವರಾಶಿಯ ಚೇತನ `ಸೂರ್ಯ’ ಕರ್ಕಾಟಕ ರಾಶಿಯಿಂದ ಉತ್ತರಾಯಣ `ಮಕರ’ ರಾಶಿಯತ್ತ ತನ್ನ ದಿಕ್ಕು ಬದಲಿಸುವ, ಹಾಗೆಯೇ ತನ್ನ ಪರಧಿಯಲ್ಲಿ ತಿರುವು ಪಡೆದು ಸೂರ್ಯನ ಸಮೀಪಕ್ಕೆ ಸಾಗುವ- ಅಂದರೆ ಬೇಸಿಗೆಯತ್ತ ಭೂಮಿ ಸಾಗಲಾರಂಭಿಸುವ ಶುಭ ಕಾಲ ಜನವರಿ ೧೪. `ಸಂಕ್ರಮಣ’ ಎಂದರೆ ಪರಿವರ್ತನೆ ಎಂದೂ ಆಗಬಹುದಾದ್ದರಿಂದ ನಕ್ಷತ್ರ-ಗ್ರಹಗಳ ಚಲನೆಯಲ್ಲಿನ ಪರಿವರ್ತನಾ ಕಾಲವನ್ನು ಶುಭವೆಂದು ಪರಿಗಣಿಸಿ ಅದಕ್ಕೆ ಹಬ್ಬದ ಮಹತ್ವ ಕೊಡಬಹುದಾಗಿದೆ. 

ಇನ್ನು ಸಾಮಾಜಿಕವಾಗಿ ಈ ಹಬ್ಬದ ಆಚರಣೆಯತ್ತ ನಾವು ಗಮನಹರಿಸುಬಹುದಾದರೆ, ಪ್ರಕೃತಿಯ ಮಡಿಲಲ್ಲಿ ಅದರ ಏರಿಳಿತಗಳಿಗೆ ಸ್ಪಂದಿಸುತ್ತಾ ಹಾಯಾಗಿರುವ ಮಾನವ ಚಳಿಗಾಲದ ಮೈ ಮರಗಟ್ಟಿಸುವ ಚಳಿಯಿಂದ ಹೊರ ಬಂದು, ಹೊಸ ಹುರುಪು, ಹೊಸ ಚೈತನ್ಯ ನೀಡುವ ಬೇಸಿಗೆಯತ್ತ ಸಾಗಲು ಇಲ್ಲಿಂದ ಮುಂದೆ ಉತ್ಸುಕನಾಗುತ್ತಾನೆ.  ಅದರಲ್ಲೂ ಜನವರಿ ತಿಂಗಳಲ್ಲಿ ತುಂಬಾ ಅನುಕೂಲಕರ ಹಿತ ವಾತಾವರಣವಿರುತ್ತದೆ. ಇದು ಶಿಶಿರ ಋತುವಿನ ಕಾಲ. ಬೇಸಿಗೆಯ ನಿರೀಕ್ಷೆಯಿರುತ್ತದಾದರೂ ಸಹ ಈ ತಿಂಗಳಲ್ಲಿ ವಿಪರೀತ ಛಳಿಯೂ ಇರುತ್ತದೆ. ಎಲ್ಲಿ ನೋಡಿದರೂ ಮರ ಗಿಡಗಳು ಎಲೆಯುದುರಿಸಿ ಬೋಳಾಗಿರುತ್ತವೆ. ಈ ಸಮಯದಲ್ಲಿ ಬರುವ ಸಂಕ್ರಾಂತಿ ಹಲವಾರು ಕಾರಣಗಳಿಂದ ಮಹತ್ವದ್ದು.

ತಮಿಳುನಾಡಿನಲ್ಲಿ `ಪೊಂಗಲ್’ ಎಂದು ಕರೆಸಿಕೊಳ್ಳುವ ಸಂಕ್ರಾಂತಿ ಮೇಲ್ನೋಟಕ್ಕೆ ದಕ್ಷಿಣ ಭಾರತದ ಹಬ್ಬದಂತೆ ಕಂಡು ಬಂದರೂ ಈ ಹಬ್ಬದಾಚರಣೆ ದೇಶದ ವಿವಿಧ ಭಾಗಗಳಲ್ಲಿ ಇದೆ.  ಬಂಗಾಳ, ಉತ್ತರ ಪ್ರದೇಶ, ರಾಜಾಸ್ತಾನ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಪಂಜಾಬ್ ಹೀಗೆ ಅನೇಕ ರಾಜ್ಯಗಳಲ್ಲಿ ಸೂರ್ಯ – ಭೂಮಿಯರ ಚಲನೆಯಲ್ಲಿನ ಬದಲಾವಣೆಯನ್ನು ಜನ ಗುರುತಿಸಿ ಆ ದಿನವನ್ನು ಸಂಭ್ರಮದಿಂದ ಆಚರಿಸುತ್ತಾರೆ.  ಉತ್ತರ ಭಾರತದ ಹಲವಾರು ರಾಜ್ಯಗಳಲ್ಲಿ ಜನರು ತ್ರಿವೇಣಿ ಸಂಗಮದ ಸ್ನಾನಕ್ಕಾಗಿ ಪ್ರಯಾಗ, ಕಾಶಿಯಂತಹ ಪವಿತ್ರ ಸ್ಥಳಗಳಿಗೆ ಧಾವಿಸಿ ನದಿಯಲ್ಲಿ ಮಿಂದು `ಸೂರ್ಯ’ನಿಗೆ ನಮಸ್ಕರಿಸಿದರೆ, ಕೇರಳದಲ್ಲಿ ಲಕ್ಷಾಂತರ ಯಾತ್ರಿಗಳು `ಮಕರವಿಳಕ್ಕು’ ಎಂಬ ಅಲೌಕಿಕ ಜ್ಯೋತಿಯ ದರ್ಶನಕ್ಕಾಗಿ ಶಬರಿಮಲೈಯತ್ತ ಧಾವಿಸುತ್ತಾರೆ. 

ಮಹಾರಾಷ್ಟ್ರದಲ್ಲಿ ಕುಸುರೆಳ್ಳನ್ನು ನೆಂಟರಿಷ್ಟರಿಗೆ ನೀಡಿ ಶುಭ ಹಾರೈಸಿದರೆ, ಪಂಜಾಬಿ ಮಹಿಳೆಯರು, ಸಂಕ್ರಾಂತಿಯ ಮುನ್ನಾದಿನ `ಲೋಡಿ’ ಆಚರಿಸಲು ಮನೆಯ ಮುಂದಿನ ಬಯಲಲ್ಲಿ ಬೆಂಕಿ ಹಾಕಿ ಅದರ ಸುತ್ತ ಪ್ರದಕ್ಷಿಣೆಯಲ್ಲಿ ಸಾಗುತ್ತಾ ಜೋಳ, ಕಡಲೆಕಾಯಿಗಳನ್ನು ಬೆಂಕಿಯಲ್ಲಿ ಹಾಕುತ್ತಾರೆ. ಪ್ರದಕ್ಷಣೆಯ ನಂತರ ದೇವರನ್ನು ಪ್ರಾರ್ಥಿಸಿ, ಸಂಭ್ರಮದಿಂದ ನರ್ತಿಸುತ್ತಾ ಎಲ್ಲರೂ ಸಹಭೋಜನ ಮಾಡುತ್ತಾರೆ.  ಮಾರ್ವಾಡಿಗಳ ಮನೆಯಲ್ಲಿ ಹೆಂಗಸರು ೧೩ ಜನ ಮುತ್ತೈದೆಯರಿಗೆ ತಮ್ಮ ಕೈಲಾದ -ಅಂದರೆ ಹಣೆಬೊಟ್ಟಿನಿಂದ ಹಿಡಿದು ಸೀರೆಯವರೆಗೂ ಯಾವುದಾದರೂ ಸರಿ ಎಳ್ಳುಂಡೆಗಳೊಡನೆ ಅವರ ಮನೆಗೆ ಹೋಗಿ ನೀಡಿ ನಮಸ್ಕರಿಸಿ ಬರುತ್ತಾರೆ. 

ನೆರೆಯ ರಾಜ್ಯ ತಮಿಳುನಾಡಿನ ಬಹುದೊಡ್ಡ ಹಬ್ಬ `ಪೊಂಗಲ್’.  ಮೂರು ದಿನಗಳ ಕಾಲ ಆಚರಿಸುವ ಈ ಹಬ್ಬದ ಮೊದಲ ದಿನ `ಬೋಗಿ’. ಅಂದು ಮನೆಯನ್ನೆಲ್ಲಾ ಶುಭ್ರಗೊಳಿಸಿ ಊರ ಹೊರಗೆ ಹಾಕಿದ ಬೆಂಕಿಯಲ್ಲಿ ಹಳೆಯ ಬಟ್ಟೆಗಳನ್ನೆಲ್ಲಾ ರಾತ್ರಿ ಹೊತ್ತು ಸುಟ್ಟು ಅದರ ಸುತ್ತ ಹಾಡಿ ಕುಣಿದು ಖುಷಿಪಡುತ್ತಾರೆ.  ಮರುದಿನ ಎಳ್ಳೆಣ್ಣೆ ಹಚ್ಚಿಕೊಂಡು ಸ್ನಾನ ಮಾಡಿ ಹೆಸರುಬೇಳೆ, ಅಕ್ಕಿ ಬೆಲ್ಲದ ಸ್ವಾದಿಷ್ಟ `ಪೊಂಗಲ್’ ಸಿದ್ಧ ಮಾಡಿ ಸಹ ಭೋಜನ ಮಾಡುತ್ತಾರೆ.  ಅಣ್ಣಂದಿರು ತಂಗಿಯರಿಗೆ ಉಡುಗೊರೆ ನೀಡಿ ಶುಭ ಹಾರೈಸುತ್ತಾರೆ.  ಹತ್ತಿರದವರೆಲ್ಲ ಒಂದೆಡೆ ಸೇರಿ ಹಬ್ಬವನ್ನಾಚರಿಸುವುದರಿಂದ ಅಲ್ಲಿ ನೂತನ ಸಂಬಂಧ ಬೆಳೆಯಲೂ ಅವಕಾಶವಿರುತ್ತದೆ.

ಕರ್ನಾಟಕದಲ್ಲಿ ಕೊಡಗಿನವರು ಸಂಕ್ರಾಂತಿ ಹಿಂದೆ-ಮುಂದೆ `ಹುತ್ತರಿ ಹಬ್ಬ’ ಆಚರಿಸಿ ತಮ್ಮನ್ನು ಕಾಪಾಡುವ `ಇಗ್ಗುತಪ್ಪಾ’ನಿಗೆ ಭಕ್ತಿಯಿಂದ ನಮಸ್ಕರಿಸುತ್ತಾರೆ.  ಉತ್ತರ ಕರ್ನಾಟಕದಲ್ಲಿ ಬಹುತೇಕವಾಗಿ ಮಹಾರಾಷ್ಟ್ರದ ಕುಸುರೆಳ್ಳು ಸಂಪ್ರದಾಯವಿದ್ದು, ಅಲ್ಲಿ ಮಕ್ಕಳಿಗೆ, ಹೊಸದಾಗಿ ಮದುವೆಯಾದವರಿಗೆ ಕುಸುರೆಳ್ಳಿನಿಂದ ಮಾಡಿದ ಆಭರಣಗಳನ್ನು ತೊಡಿಸಿ ಸಂಭ್ರಮಿಸುತ್ತಾರೆ.  ದಕ್ಷಿಣದ ಕರ್ನಾಟಕದಲ್ಲಿ ಎಳ್ಳು, ಕಡಲೆ, ಹುರಗಡಲೆ, ಕೊಬ್ಬರಿ, ಬೆಲ್ಲದ ಮಿಶ್ರಣದ ಎಳ್ಳು-ಬೆಲ್ಲ ಬೀರುವ ಸಂಪ್ರದಾಯ.  `ಪೊಂಗಲ್’ ಹುಗ್ಗಿ ಗೊಜ್ಜಿನ ಸಿದ್ಧತೆ ಕೂಡ ಇಲ್ಲಿ ಪ್ರಾಶಸ್ತ್ಯ ಪಡೆಯುತ್ತದೆ.  ಹಳ್ಳಿಗಳಲ್ಲಿನ ಕಣಜದ ಪೂಜೆ, ಭೂಮಿ ಪೂಜೆ, ಕುಣಿತಗಳು  ನಗರಗಳಲ್ಲಿ ಇಲ್ಲವಾದರೂ, ಸಂಕ್ರಾಂತಿಯ ಸಂದರ್ಭದಲ್ಲಿ ಎಲ್ಲೆಡೆ ಗೋಪೂಜೆ ಸಾಮಾನ್ಯ, ಹಳ್ಳಿಗಳಲ್ಲಿ ಹಸು, ಎತ್ತುಗಳನ್ನು ತೊಳೆದು ಕೊಂಬಿಗೆ ಬಣ್ಣ ಬಳಿದು `ಗೋವಿನ’ ಅಲಂಕಾರ ಮಾಡುತ್ತಾರೆ.  ಅವುಗಳ ಮೆರವಣಿಗೆಯೂ ಕೆಲವೆಡೆ ನಡೆಯುತ್ತದೆ.  ವರ್ಷವಿಡೀ ತಮಗಾಗಿ ದುಡಿದ ಪ್ರಾಣಿಗಳನ್ನು ಪೂಜಿಸಿ ಅವಕ್ಕೆ ದೃಷ್ಟಿ ತಾಗದಿರಲೆಂದು `ಕಿಚ್ಚು’ ಹಾರಿಸುತ್ತಾರೆ.

ದೇಶದ ನಾನಾ ಕಡೆ ಅತ್ಯುತ್ಸಾಹದಿಂದ ಆಚರಿಸುವ ಈ ಹಬ್ಬದ ಸಂದರ್ಭದಲ್ಲಿ ಅದರಲ್ಲೂ ನಮ್ಮ ರಾಜ್ಯದಲ್ಲಿ ಬಣ್ಣ ಬಣ್ಣದ ಉಡುಗೆ ತೊಟ್ಟು, ಅಲಂಕರಿಸಿಕೊಂಡು ಮನೆ ಮನೆಗೆ ಹೋಗಿ ಎಳ್ಳು ಬೆಲ್ಲ ಹಂಚಿ ಬರುವ ಹೆಣ್ಣು ಮಕ್ಕಳ ಸಡಗರ ಕಂಡು ಹಿರಿಯ ಕವಿ ಹೃದಯಗಳೂ ಸ್ಪಂದಿಸಿ `ಮನೆ-ಮನೆಯ ಸುಖವನ್ನೆಲ್ಲ ಬೀರಿ ಬನ್ನಿ…’ ಎಂದು ಹಾಡಿ ಸಂಭ್ರಮಿಸಿವೆ.  ಎಳ್ಳು ಬೀರುವುದರ ಜೊತೆಗೇ ಇವು ನಮ್ಮನೆ `ಎಳ್ಳು-ಅಚ್ಚು’ ಎಂದೆಲ್ಲಾ ಹೇಳಿಕೊಂಡು ಸಂಭ್ರಮಿಸುವ ಮಹಿಳೆಯರನ್ನು ಕಂಡಾಗ ಹಬ್ಬದಾಚರಣೆಯ ಖುಷಿ ಉಳಿದವರಲ್ಲೂ ಪಸರಿಸುತ್ತದೆ.

ಎಳ್ಳು-ಬೆಲ್ಲ ಅಥವಾ ಕುಸುರೆಳ್ಳು ಹಿಡಿದು ತಮಗೆ ಪಾಠ ಮಾಡುವ, ಮಾಡದಿರುವ ಎಲ್ಲ ಅಧ್ಯಾಪಕರಿಗೆ, ಹಿರಿಯರಿಗೆ, ನೆಂಟರಿಗೆ, ಮಿತ್ರರಿಗೆ ಅವರ ಮನೆಗೇ ಹೋಗಿ, ಇಲ್ಲವೇ ಎದುರಿಗೆ ಸಿಕ್ಕಾಗ ಎಳ್ಳು ನೀಡಿ ನಮಸ್ಕರಿಸಿ, ಆಶೀರ್ವಾದ ಪಡೆವ ಸಂಪ್ರದಾಯ, ಸಂಭ್ರಮ ಈಗ ಕಣ್ಮರೆಯಾಗುತ್ತಿದೆ.  `ಎಳ್ಳು ಬೆಲ್ಲ ಕೊಳ್ಳಿ, ಒಳ್ಳೊಳ್ಳೆ ಮಾತನಾಡಿ’ ಎಂದು ಉತ್ತಮ ಸಂವಹನದ ಹಾದಿಯನ್ನು ತೋರುವ ಹಬ್ಬ.  `ಹೂವಾಗಿ ಬಾಳೋಣ, ಜಳ್ಳನ್ನು ಗಾಳಿಗೆ ತೂರೋಣ’ ಎಂದು ಸಮರಸದ ಬದುಕಿಗೆ ಆಹ್ವಾನವಿರುವ ಈ ಹಬ್ಬ, ಒಡೆದ ಚರ್ಮಕ್ಕೆ ಕಾಂತಿ ನೀಡುವ ಎಳ್ಳು, ಕೊಬ್ಬರಿ, ಕಡಲೆಕಾಯಿ, ಬೆಲ್ಲ, ಕಬ್ಬು ಸವಿಯಿರಿಯೆನ್ನುವ ಈ ಹಬ್ಬ ಸಮೃದ್ಧಿಯ ಸಂಕೇತವೂ ಹೌದು.

ಜಾನುವಾರುಗಳ ಸಂಕ್ರಾಂತಿ

ಜನವರಿ ತಿಂಗಳ ಕೊರೆ ಬೀಳುವ ಕಾಲದಲ್ಲಿ ಆಚರಿಸಲ್ಪಡುವ ಸಂಕ್ರಾಂತಿ ಎಲ್ಲೆಡೆ ಬಳಕೆಯಲ್ಲಿರುವ ಸುಗ್ಗಿ ಹಬ್ಬ. ಸಂಕ್ರಾಂತಿ ಬರುವ ಕಾಲವಾದರೂ ಎಂತಹುದು? ಸಕಲೆಂಟು ಧಾನ್ಯಗಳೂ ಮನೆಯ ಮೂಲೆ-ಮೂಲೆಯಲಿರುವ ಚೀಲ, ಗುಡಾಣ, ಹರಿವಿ, ಮಡಕೆ ಸಾಲುಗಳು, ಕಣಜವೇ ಮುಂತಾದವುಗಳಲ್ಲಿ ತುಂಬಿ ಇಟ್ಟಾಡುವ ಕಾಲ. ಎಂತಹ ಬಡವರ ಮನೆಯಲ್ಲೂ ಕಾಳು-ಕಡಿಗಳು ತುಂಬಿ-ತುಳುಕುವ ಈ ಸಮಯದಲ್ಲಿ ಆ ಸಮೃಧ್ದಿಗೆ ಕಾರಣವಾದ ದನ-ಕರುಗಳನ್ನು ಗೌರವದಿಂದ ಕಾಣುವ ಸಲುವಾಗಿಯೇ ಬರುವುದು ಸಂಕ್ರಾಂತಿ. ಇಡೀ ವರ್ಷ ತಮ್ಮ ಜೊತೆ-ಜೊತೆಗೇ ದುಡಿದ ಬಸವನನ್ನು ನೆನೆವ ದಿನ.

ಇದು ರೈತನ ಆಧಾರವಾಗಿರುವ ದನಕರುಗಳ ಸಂಬಂಧದಲ್ಲಿ ಆಚರಿಸುವ ಹಬ್ಬ.  ಈ ಹಬ್ಬದ ಹೊತ್ತಿಗೆ ಹೊಲಗದ್ದೆಗಳ ಕೊಯ್ಲು ಮುಗಿದು ದನಕರುಗಳು ಕೂಡ ಕೊಂಚ ಬೇಸಾಯದ ಕೆಲಸದಿಂದ ವಿರಾಮ ಹೊಂದುತ್ತಿರುತ್ತವೆ. ಹಬ್ಬದಂದು ಕೊಟ್ಟಿಗೆ ಸಾರಿಸಿ, ದನ-ಕರುಗಳ ಮೈತೊಳೆದು ಸಿಂಗರಿಸಿ ಮೆರವಣಿಗೆ ಮಾಡಿ ಕಿಚ್ಚು ಹಾಯಿಸಿ, ಕಷ್ಟಗಳನ್ನು ಎದುರಿಸುವ ಶಕ್ತಿ ಅವುಗಳಿಗೆ ಸಿಗಲಿ ಎಂದು ಪ್ರಾರ್ಥಿಸುತ್ತಾರೆ.  ರೈತರು ದನಕರುಗಳನ್ನು ಪೂಜಿಸುವುದರೊಂದಿಗೆ ಅಂದು ಗೋವಿನ ಕಥೆಯನ್ನು ಓದಲಾಗುತ್ತದೆ.  ಈ ಕಥೆ ಒಂದು ಹಸುವಿನ ಸತ್ಯ ಸ್ವಭಾವವನ್ನು, ಸಾಧುತ್ವವನ್ನು ವಿವರಿಸುವಂಥದ್ದು.  ಹುಲಿ ನಮ್ಮ ಸಾಂಸ್ಕೃತಿಕ ಪರಂಪರೆಯಲ್ಲಿ ಆಯಾ ವ್ಯಕ್ತಿಯ ಶಕ್ತಿಯನ್ನು ಅಳೆಯುವ ಸಾಧನವಾಗಿದೆ ಎಂದರೆ ವೀರರೊಡನೆ ಅದು ಹೋರಾಡುವಂಥದ್ದು.  ಸಾಧು ಶರಣರಿಗೆ, ಋಷಿಗಳಿಗೆ ಅದು ಚರ್ಮದ ಹಾಸಿಗೆಯಾದರೆ, ದೇವತೆಗಳಿಗೆ ಹುಲಿ ವಾಹನವೇ ಆಗಿ ಬಿಡುತ್ತದೆ.  ಇಂಥ ಹುಲಿ ಜನಪದರು ಸೃಷ್ಟಿಸಿರುವ ಗೋವಿನ ಕಥೆಯಲ್ಲಿ, ಪುಣ್ಯಕೋಟಿಯ ಸತ್ಯಕ್ಕೆ ಮೆಚ್ಚಿ ಅದರ ಎದುರೇ ಆತ್ಮಹತ್ಯೆ ಮಾಡಿಕೊಳ್ಳುತ್ತದೆ.  ಹೀಗೆ ಗೋವು ಜನಪದರಿಗೆ ದೇವರು, ಸಾಧು-ಸಂತರು, ವೀರರಿಗಿಂತ ಪೂಜ್ಯ ಎಂದಾಯಿತು.  ಪ್ರಾಚೀನ ಕಾಲದಿಂದಲೂ ರೈತ ವರ್ಗಕ್ಕೆ ಜೀವನಾಡಿಯಾಗಿ ಬಂದಿರುವ ಪಶು ಸಮೂಹದ ಬಗ್ಗೆ ಕಾಲಕ್ರಮೇಣ ಇಂಥ ಮಹತ್ವದ ಕಥೆಯೊಂದು ಹುಟ್ಟಿಕೊಂಡು ಬಂದಿರುವುದರಲ್ಲಿ ಆಶ್ಚರ್ಯವಿಲ್ಲ.

ನಾಡೆಲ್ಲಾ ಸಂಕ್ರಾಂತಿ ಆಚರಿಸಿದರೂ ಅದಕ್ಕೊಂದು ವಿಶಿಷ್ಟತೆ ಬರುವುದು ಹಳ್ಳಿಗಾಡಿನಲ್ಲಿ. ನಗರದ ಜನತೆಗೆ ಸಂಕ್ರಾಂತಿ ಬರೀ ಎಳ್ಳು – ಬೆಲ್ಲ ತಿಂದು ಒಳ್ಳೆ ಮಾತಾಡುವ ದಿನವಾದರೆ ಹಳ್ಳಿಗರಿಗೆ ಇಡೀ ವರ್ಷದ ಸುಗ್ಗಿಯನ್ನು ಸಂಭ್ರಮಿಸುವ ದಿನ. ಈಗಾಗಲೇ ಹೇಳಿದಂತೆ ಎಂಥಾ ಬಡವರ ಮನೆಯಲ್ಲೂ ಮಡಿಕೆ – ಕುಡಿಕೆ, ಕಣಜಗಳು, ಕಾಳು-ಕಡ್ಡಿಯಿಂದ ತುಂಬಿರುವ ಕಾಲದಲ್ಲಿ ಬರುವ ಸಂಕ್ರಾಂತಿ ನೆಮ್ಮದಿಯ ಮನಸ್ಸಿನಿಂದ ಆಚರಿಸಿಕೊಳ್ಳುವ ಹಬ್ಬ.

ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶಗಳಲ್ಲಿ ಸರಿಸುಮಾರು ಒಂದೇ ಸಮಯಕ್ಕೆ ಆಚರಿಸಲ್ಪಡುವ ಸಂಕ್ರಾಂತಿ ಹಬ್ಬದ ಮೂಲ ಉದ್ದೇಶ ಒಂದೇ ಆದರೂ ಮಾಡುವ ವಿಧಾನದಲ್ಲಿ ತುಸು ಬದಲಾವಣೆಗಳಿವೆ.  ತಮಿಳುನಾಡಿನಲ್ಲಿ `ಪೊಂಗಲ್’ ಎಂದು ಕರೆಯಲ್ಪಡುವ ಮಕರ ಸಂಕ್ರಾಂತಿ ಬಹುದೊಡ್ಡ ಸಾರ್ವತ್ರಿಕ ಹಬ್ಬ. ಎರಡು ದಿನ ಆಚರಿಸಲ್ಪಡುವ ಹಬ್ಬದಲ್ಲಿ ಮೊದಲ ದಿನ  ಹೊಸದಾಗಿ ಒಕ್ಕಣೆಯಾದ ಅಕ್ಕಿಯನ್ನು ವಿಧಿವತ್ತಾಗಿ ಬೇಯಿಸಿ ಸೇವಿಸುತ್ತಾರೆ.  ಹಸು ಹಾಗೂ ಹೋರಿಗಳಿಗೆ ಕೃತಜ್ಞತೆ ಸಲ್ಲಿಸುವ ಮರುದಿನದ ಹಬ್ಬಕ್ಕೆ ಇದು ನಾಂದಿಯಾಗುತ್ತದೆ.

ಕರ್ನಾಟಕದಲ್ಲಿಯೂ ಸಹ ಬೇರೆ-ಬೇರೆ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಸಂಕ್ರಾಂತಿ ಆಚರಿಸಲ್ಪಡುತ್ತದೆ. ಮೇಲ್ನೋಟಕ್ಕೆ ಒಂದೇ ಎನಿಸಿದರೂ ಸೂಕ್ಷ್ಮವಾಗಿ, ವಿವರಗಳಲ್ಲಿ ನೋಡಿದರೆ ಈ ವೈವಿಧ್ಯತೆ ಸ್ಪಷ್ಟವಾಗಿ ಗೋಚರಿಸುತ್ತದೆ.  ತುಮಕೂರು, ಚಿತ್ರದುರ್ಗ ಮುಂತಾದ ಬಯಲುಸೀಮೆ ಪ್ರದೇಶದಲ್ಲಿ ಈ ಹಬ್ಬ ಒಂದು ರೀತಿ ಸೊಗಸಿದರೆ ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು ಪ್ರದೇಶದಲ್ಲಿನ ಐಸಿರಿಯೇ ಬೇರೆ ರೀತಿಯದು.  ಅಂದಿನ ದಿನ ನಡೆಯುವ ಬಹುಮುಖ್ಯ ಕಾರ್ಯಗಳೆಂದರೆ ದನಗಳ ಮೆರವಣಿಗೆ, ದನ ಓಡಿಸುವುದು, ಕಿಚ್ಚು ಹಾಯಿಸುವುದು ಮುಂತಾದುವು.  ಈ ಆಚರಣೆಗಳ ಮೂಲಕ ಯಶಸ್ವೀ ಸುಗ್ಗಿಗೆ ಕಾರಣೀಭೂತವಾದ ಜಾನುವಾರುಗಳಿಗೆ ಅರ್ಥಪೂರ್ಣ ಕೃತಜ್ಞತೆಗಳನ್ನು ಸಲ್ಲಿಸಲಾಗುತ್ತದೆ.  ಅಲ್ಲದೆ ಹಬ್ಬದ ವಿವಿಧ ಹಂತಗಳಲ್ಲಿ ತುಂಬೆ ಹೂ, ಅಣ್ಣೆ ಹೂ, ತಂಗಡಿ ಹೂ, ಹೊನ್ನೆ ಹೂ, ಉಗುನಿ ಹೂ ಮುಂತಾದುವುಗಳನ್ನು ಬಳಸಿ ಪ್ರಕೃತಿಗೂ ಗೌರವವನ್ನು ನೀಡಲಾಗುತ್ತದೆ.

ದನಗಳ ಮೆರವಣಿಗೆ : ಹಬ್ಬದ ದಿನ ಬೆಳಿಗ್ಗೆ ತಂತಮ್ಮ ಎತ್ತು – ಹಸು ಕರುಗಳಿಗೆಲ್ಲಾ ಮೈತೊಳೆದು ಶೃಂಗರಿಸಿ ಮೆರವಣಿಗೆ ಮಾಡುವ ಮೂಲಕ ಸಂಕ್ರಾಂತಿ ಪ್ರಾರಂಭ.  ಪಶುಪಾಲಕರು ಪೈಪೋಟಿಯ ಮೇಲೆ ಶಕ್ತ್ಯಾನುಸಾರ ತಮ್ಮ ರಾಸುಗಳನ್ನು ಅಲಂಕರಿಸುತ್ತಾರೆ.  ಕೊಂಬುಗಳಿಗೆ ನವಿಲುಗರಿ, ಕನ್ನಡಿ, ಬಣ್ಣದ ಪೇಪರಿನ ಪಟಾವಳಿ ಕಟ್ಟಿ, ಗೆಜ್ಜೆ ಸರ ಸುತ್ತಿ, ಹೂವಿನ ದಂಡೆ ಹಾಕಿ, ಕೊರಳಿಗೆ ಕರಿದಾರದ ಹುರಿಕಟ್ಟಿ ಅದಕ್ಕೆ ಗಂಟೆ, ಶಂಖಗಳನ್ನು ಪೋಣಿಸಿ, ಬೆನ್ನ ಮೇಲೆ ಹೊಳೆಯುವ ಗೌನನ್ನು ಹೊದಿಸಿದರೆ ಪ್ರತಿಯೊಂದು ರಾಸೂ ದೇವಲೋಕದ ಐರಾವತದಂತೆ ಮತ್ತು ಅವುಗಳನ್ನು ಹಿಡಿದ ಯಜಮಾನ ಸಾಕ್ಷಾತ್ ದೇವೇಂದ್ರನಂತೆ ಕಂಗೊಳಿಸುತ್ತಾರೆ.  ಮಂಗಳವಾದ್ಯದೊಂದಿಗೆ ಊರೆಲ್ಲಾ ಒಂದು ಸುತ್ತು ಹಾಕಿ ಮೆರವಣಿಗೆ ಮುಗಿಯುತ್ತದೆ.

ದನ ಬಿಡುವುದು : ಇದೊಂದು ಮೈನವಿರೇಳಿಸುವ ನೋಟ ಮತ್ತು  ಹಬ್ಬದ ಬಹುಮುಖ್ಯ ಆಕರ್ಷಣೆ.  ದನ ಬಿಡುವುದರಲ್ಲಿ ಪಾಲ್ಗೊಳ್ಳಲು ಅಕ್ಕಪಕ್ಕದ ಊರುಗಳಿಂದೆಲ್ಲಾ ಜನರು ಹಾಜರಾಗಿರುತ್ತಾರೆ.  ಮೆರವಣಿಗೆ ಆದ ನಂತರ ಮಧ್ಯಾಹ್ನದ ಊಟ ಮುಗಿಸಿ ದನ ಬಿಡಲು ಶುರು ಮಾಡಿದರೆ ಸೂರ್‍ಯ ಪಶ್ಚಿಮದಲ್ಲಿ ಕೆಂಪಾಗುವವರೆಗೂ ನಿಲ್ಲುವುದಿಲ್ಲ.  ಇದೊಂದು ರೀತಿ ದನಗಳ ಮತ್ತು ಜನಗಳ ನಡುವಿನ ಸ್ಪರ್ಧೆ.

ದನ ಬಿಡುವುದೆಂದರೆ ಎತ್ತು, ಹಸು, ಹೋರಿಗಳ ಒಡೆಯರು ಅವುಗಳ ಕೊಂಬುಗಳಿಗೆ ಹೊಸಬಟ್ಟೆ ಅಥವಾ ದುಡ್ಡನ್ನು ಕಟ್ಟಿ ಜೋರಾಗಿ ತಮಟೆ ಹೊಡೆಯುತ್ತಾ, ಕೂಗುತ್ತಾ ಹಿಂದಿನಿಂದ ಓಡಿಸುವುದು ಮತ್ತು ಅಡ್ಡ ನಿಂತ ಜನ ಅವುಗಳನ್ನು ಹಿಡಿಯುವುದು.  ಊರಿನ ಪ್ರಮುಖ ಬೀದಿಯಲ್ಲಿ ನಡೆಯುವ ಇದನ್ನು ನೋಡಲು ಜನರು ಮಾಳಿಗೆಗಳ ಮೇಲೆ, ಮರಗಳ ಮೇಲೆ ಜೇನು ಹುಳುಗಳಂತೆ ಮುತ್ತಿಕೊಂಡಿರುತ್ತಾರೆ.  ಒಬ್ಬರಾದ ನಂತರ ಒಬ್ಬರಂತೆ ಸರದಿ ಪ್ರಕಾರ ದನ ಬಿಡುತ್ತಿದ್ದರೆ ಅವು ದಿಢೀರ್ ತಮಟೆಯ ಸದ್ದಿಗೂ, `ಹೋ’ ಎನ್ನುವ ಜನಗಳ ಕೇಕೆಗೂ ಏಕಾಏಕಿ ಬೆದರಿ, ಕೊಂಬುಗಳನ್ನು ಮುಂದಕ್ಕೆ ಚಾಚಿ ಸಿರ್ ಸಿರ್ ಎಂದು ಉಸಿರುಬಿಡುತ್ತಾ ನಾಗಾಲೋಟದಿಂದ ಓಡುತ್ತವೆ.  ಹಸಿಮೇವು ತಿಂದು ಚೆನ್ನಾಗಿ ಕೊಬ್ಬಿರುವ ಅವುಗಳ ಆಕಾರ ಮತ್ತು ನುಗ್ಗುವ ರಭಸಕ್ಕಂಜಿ ಅರ್ಧಕ್ಕರ್ಧ ದನಗಳನ್ನು ಹಿಡಿಯದೇ ಬಿಟ್ಟು ಬಿಡುತ್ತಾರೆ.  ಆದರೂ ಕೆಲವರು ಕುಶಲತೆಯಿಂದ ಅವುಗಳ ಮೇಲೆ ಜಿಗಿದು, ಮೂಗುದಾರ ಎಳೆದು ಹಿಡಿದೇ ಬಿಡುತ್ತಾರೆ.  ಸಾಮಾನ್ಯವಾಗಿ ದನಗಳನ್ನು ಬಿಡುವವರು ಹಬ್ಬ ಮಾಡುವ ಅದೇ ಊರವರು ಮತ್ತು ದನಗಳನ್ನು ಹಿಡಿಯುವವರು ಅಕ್ಕ-ಪಕ್ಕದ ಊರವರಾದ್ದರಿಂದ ಇದು ಪ್ರತಿಷ್ಠೆಯ ವಿಷಯವಾಗಿಬಿಡುತ್ತದೆ.  ಈ ಸ್ಪರ್ಧೆಯನ್ನು ನೋಡುವುದೆಂದರೆ ಭಯ, ಕುತೂಹಲ, ರೋಮಾಂಚನ ಎಲ್ಲಾ ಒಟ್ಟೊಟ್ಟಿಗೇ ಆಗುತ್ತಿರುತ್ತದೆ.

ಕಾಟುಮ್ ರಾಯ : ಸಂಕ್ರಾಂತಿಯಲ್ಲಿ ಇದೊಂದು ಕುತೂಹಲಕರ ಅಂಶ.  ಹಬ್ಬದ ದಿನ ಊರ ಹೊರಭಾಗದಲ್ಲಿ ಒಂದು ಹಸಿ ಜೇಡಿ ಮಣ್ಣಿನ ಗುಡಿಯನ್ನು ಕಟ್ಟುತ್ತಾರೆ.  ಪಿರಮಿಡ್ಡಿನಾಕಾರದಲ್ಲಿರುವ ಅದನ್ನು ಕಾಟುಮ್ ರಾಯ, ಕಾಟ್ ಮೆಟ್ರಾಯ, ಸಂಕ್ರಾಂತೆಮ್ಮನ ಗುಡಿ ಮುಂತಾಗಿ ಕರೆಯುತ್ತಾರೆ.  ಅದನ್ನು ಸಿಂಗರಿಸುವ ರೀತಿ ತುಂಬ ಸುಂದರ, ಕಾರೆ ಗಿಡದ ಕೊಂಬೆಗಳನ್ನು ಮುಳ್ಳು ಸಮೇತ ಕಿತ್ತು ತಂದು ಮುಳ್ಳುಗಳ ತುದಿಗೆ ಉಗುನಿ ಹೂವುಗಳನ್ನು ಚುಚ್ಚಿ ಗುಡಿಯ ನಾಲ್ಕೂ ಕಡೆ ಸಿಕ್ಕಿಸುತ್ತಾರೆ.  ತಿಳಿ ಹಸಿರು ತೊಟ್ಟಿನಿಂದ ಕೂಡಿದ ಅಚ್ಚ ಬಿಳಿ ಬಣ್ಣದ ಉಗುನಿ ಹೂವು ಆಕರ್ಷಕ ರಚನೆ ಹೊಂದಿದ್ದು, ಮುಳ್ಳಿಗೆ ಜೋಡಿಸಿದ ಅವುಗಳನ್ನು ನೋಡುವುದೇ ಒಂದು ಚಂದ.  ಜೊತೆಗೆ ಗುಡಿಯ ಮೇಲೆ ಉತ್ತರಾಣಿ ಕಡ್ಡಿಗಳನ್ನು ಚುಚ್ಚಿ ಅರಿಶಿನ – ಕುಂಕುಮ ಬಳಿದು ಅದರ ಮಧ್ಯದಲ್ಲೊಂದು ತೂತು ಮಾಡಿ ದೀಪ ಹಚ್ಚಿಟ್ಟು ಎಡೆಹಾಕಿ ಸಿಂಗರಿಸಿದ ದನಗಳನ್ನು ತಂದು ಅಲ್ಲಿ ಪೂಜಿಸುತ್ತಾರೆ.

ಕಿಚ್ಚು ಹಾಯಿಸುವುದು : `ಸ್ವರ್ಗಕ್ಕೆ ಕಿಚ್ಚು ಹಚ್ಚುವುದೆಂದರೆ’ ಇದೇ ಇರಬಹುದೆನ್ನುವ ಭಾವನೆ ಉಂಟು ಮಾಡುವ ಕ್ರಿಯೆ. ಹಬ್ಬದ ದಿನ ಸಂಜೆ ನಡೆಯುವ ಈ ಆಚರಣೆ ಎಷ್ಟು ಮನಮೋಹಕವೋ ಅಷ್ಟೇ ಅರ್ಥಪೂರ್ಣ.  ಕಾಟುಮ ರಾಯನಿಗೆ ಪೂಜೆ ಸಲ್ಲಿಸಿದ ನಂತರ ಕಿಚ್ಚು ಹಾಯಿಸಲು ತಯಾರಿ ನಡೆಸಲಾಗುತ್ತದೆ.  ದೇವಸ್ಥಾನದ ಮುಂಭಾಗದಲ್ಲಿ ಅಥವಾ ಸ್ವಲ್ಪ ವಿಶಾಲವಾದ ಸ್ಥಳದಲ್ಲಿ ಸುತ್ತಲೂ ಜನ ನಿಂತು ಒಂದು ಕಡೆ ಮಾತ್ರ ದಾರಿ ಬಿಟ್ಟು ಆ ದಾರಿಗಡ್ಡಲಾಗಿ ಬೆಂಕಿ ಹಾಕಿ, ಉರಿಯುವ ಬೆಂಕಿಯ ಜ್ವಾಲೆಗಳ  ಮೇಲೆ ದನಗಳನ್ನು ಹಾರಿಸುತ್ತಾರೆ.  ಏಳೆಂಟು ಅಡಿ ಎತ್ತರದ ಬೆಂಕಿ ಜ್ವಾಲೆಯಲ್ಲಿ ಅಲಂಕೃತಗೊಂಡ ಎತ್ತುಗಳು ಮತ್ತು ಅವುಗಳ ಒಡೆಯ ನೆಗೆಯುವ ದೃಶ್ಯ ನಿಜಕ್ಕೂ ಅಪೂರ್ವವಾದುದು.  ಮಬ್ಬುಗತ್ತಲು ಅದಕ್ಕೊಂದು ವಿಶಿಷ್ಟ ಮೆರಗನ್ನು ನೀಡಿರುತ್ತದೆ.  ದೃಷ್ಟಿ ನಿವಾರಣೆಯಾಗಲಿ, ದನಗಳ ಮೈಮೇಲಿನ ಕ್ರಿಮಿ ಕೀಟಗಳು ನಾಶವಾಗಲಿ ಎಂಬುದು ಕಿಚ್ಚು ಹಾಯಿಸುವುದರ ಉದ್ದೇಶ.  ಕಿಚ್ಚು ಹಾದು ಗಾಬರಿಗೊಂಡ ದನಗಳನ್ನು ಹಿಡಿದು ಮೈದಡವಿ ಕೊಟ್ಟಿಗೆಗೆ ಕಟ್ಟಿ ಮನೆ ಹೆಣ್ಣು ಮಕ್ಕಳು ಎಡೆ ತಿನ್ನಿಸುವುದರೊಂದಿಗೆ ಸಂಕ್ರಾಂತಿಯ ಸಡಗರಕ್ಕೆ ತೆರೆ ಬೀಳುತ್ತದೆ.

ಸುಗ್ಗಿಯ ಸಂಭ್ರಮದ ನಡುವೆ ಬರುವ ಸಂಕ್ರಾಂತಿ ಕೇವಲ ಒಂದು ದಿನಕ್ಕೆ ಮುಗಿಯುವ ಹಬ್ಬವಲ್ಲ.  ಇಂದು ಈ ಹಳ್ಳಿ ನಾಳೆ ಮತ್ತೊಂದು ಹಳ್ಳಿ… ಹೀಗೆ ತಿಂಗಳುದ್ದಕ್ಕೂ ಅದರ ಸಡಗರ ಚಾಚಿಕೊಂಡಿರುತ್ತದೆ.

ದೇಸಿ ಸಂಸ್ಕೃತಿಯ ಪ್ರತಿಬಿಂಬ ರಾಶಿಪೂಜೆ

ಕಣಜ ತುಂಬುವಷ್ಟು ಧಾನ್ಯ ಕೊಟ್ಟ ಮಣ್ಣು, ನೀರು, ಗಾಳಿ, ಪಶು-ಪಕ್ಷಿ ಮೊದಲಾದ ಜೀವ ಸಂಕುಲದ ಸಕಲೆಂಟು ಘಟಕಗಳಿಗೂ ಗೌರವದಿಂದ ನಮಿಸುವ ವಿಶಿಷ್ಟ ಆಚರಣೆ ರಾಶಿ ಪೂಜೆ. ಇಲ್ಲಿ ಮೊರ ನೀರಿನ ಸಂ ಕೇತವಾದರೆ, ಮರ-ಗಿಡ ಎಲೆಗಳು ಕ್ಭಿಟಗಳನ್ನು ಪ್ರತಿನಿಧಿಸುತ್ತವೆ. ನೆಲದ ಸಾರವನ್ನು ಪಿಳ್ಳೆರಾಯನ ಮೂಲಕ, ಕಳೆಯನ್ನು ಗರಿಕೆಯ ಮೂಲಕ ಸಮೀಕರಿಸಲಾಗುತ್ತದೆ. ಹೀಗೆ ಜೀವ ಸಂಕುಲದ ವಿವಿಧ ಘಟಕಗಳನ್ನು ಒಂದಾಗಿ ಕಾಣುವ, ರೈತ ತಾನು ಬೇಸಾಯ ಮಾಡಲು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಂದು ಜೀವಿ ಮತ್ತು ವಸ್ತುಗಳಿಗೂ ಗೌರವ ಸಲ್ಲಿಸುವ ರಾಶಿಪೂಜೆ ಬಯಲು ಸೀಮೆಯ ರಾಗಿ ಬೆಳೆವ ಪ್ರದೇಶಗಳಲ್ಲಿ ಇವತ್ತಿಗೂ ಸಾಮಾನ್ಯ. ಇಲ್ಲಿ ಅಡಂಬರವಿಲ್ಲ.  ರಾಶಿ ಪೂಜೆಗೆ ಹೆಚು ಮಡುವುದು ಎಂಬ ಮತ್ತೊಂದು ಹೆಸರೂ ಇದೆ. 

ರಾಶಿ ಪೂಜೆ ಎಂಬುದು ರೈತಬಾಂಧವರಿಗೆ ಸಂಭ್ರಮದ ಕೆಲಸ.  ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಆಯಾ ಕಾಲಕ್ಕೆ ತಕ್ಕ ಬೆಳೆಯನ್ನು ಬೆಳೆದ ರೈತರು ಹೊಲದಲ್ಲಿ ರಾಶಿಪೂಜೆ ಮಾಡುತ್ತಾರೆ.  ರಾಶಿಯ ಪ್ರತಿಯೊಂದು ಕಾಳೂ ಭೂತಾಯಿ ಕೊಟ್ಟ ವರವೆನ್ನುವಂತೆ ಸಂಭ್ರಮಿಸುತ್ತಾರೆ. ಅದರಲಿಯೂ ಹಳೆ ಮೈಸೂರು ಭಾಗದಲ್ಲಿ ಆಚರಿಸಲ್ಪಡುವ ರಾಗಿ ಕಣದ ರಾಶಿ ಪೂಜೆ ಮತ್ತು ಉತ್ತರ ಕರ್ನಾಟಕದ ಜೋಳದ ಗೂಡು ಪೂಜೆ ಅತ್ಯಂತ ವಿಶೇಷವಾದುವು.          

ದಕ್ಷಿಣ ಕರ್ನಾಟಕದಲ್ಲಿ ಅಕ್ಟೋಬರ್ ಕೊನೆಯ ವಾರದಿಂದ ಡಿಸೆಂಬರ್ ಮೊದಲನೆ ವಾರದವರೆಗೆ ವಿವಿಧ ಕಟಾವು ಕಾರ್ಯ ಆರಂಭವಾಗಿ ಅಂತಿನ ಹಂತಕ್ಕೆ ಬರುತ್ತದೆ.  ಕಟಾವು ಮಾಡಿದ ಬೆಳೆಯನ್ನು ಒಕ್ಕಣೆ ಮಾಡುವವರೆಗೂ ಸುರಕ್ಷಿತವಾಗಿ ಇರಲೆಂದು ಹೊಲದಲ್ಲೇ ವಿಶೇಷವಾಗಿ ತಯಾರಿಸಿದ ಕಣದಲ್ಲಿ ಪ್ರಧಾನ ಬೆಳೆಯಾದ ರಾಗಿ ಬೆಳೆಯನ್ನು ಬಣವೆ ರೂಪದಲ್ಲಿ ಸಂಗ್ರಹಿಸಲಾಗುತ್ತದೆ.  ಮೈಸೂರು ಸೀಮೆಯಲ್ಲಿ ಬಣವೆಯನ್ನು ಮೆದೆ ಎಂದೂ, ಉತ್ತರ ಕರ್ನಾಟಕದಲ್ಲಿ ಗೂಡು ಎಂದೂ ಕರೆಯುತ್ತಾರೆ.

ಕಣ ಸಂಸ್ಕೃತಿ: ಕಣ ಅಂದರೆ ಧಾನ್ಯವನ್ನು ಒಕ್ಕುವ ಸ್ಥಳ ರೈತರ ದೇವರ ಮನೆಯೆಂದೇ ಕರೆಸಿಕೊಳ್ಳುತ್ತದೆ. ಕಣಗಾಲದಲ್ಲಿ ತಿಂಗಳೊಪ್ಪತ್ತು ಕಾಲ ರೈತರು ಮನೆಯಲ್ಲಿ ಸಿಗುವುದಕ್ಕಿಂತಲೂ ಕಣದಲ್ಲಿ ಸಿಗುವುದೇ ಹೆಚ್ಚು. ಅವರಿಗೆ ಆ ಕಲದಲ್ಲಿ ಕಣವೇ ಮನೆ, ಕಣವೇ ಸರ್ವಸ್ವ.

ಕಣದ ವಿಧಗಳು: ರೈತರ ಸಾಮರ್ಥ್ಯಕ್ಕನುಗುಣವಾಗಿ ಇಪ್ಪತ್ತು ಎತ್ತುಗಳ ಕಣ, ಹತ್ತು ಎತ್ತುಗಳ ಕಣ ಮುಂತಾಗಿ ಬೇರೆ-ಬೇರೆ ವ್ಯಾಸದ Pಣಗಳಿರುತ್ತವೆ, ೧೦-೧೫ ಎಕರೆ ವ್ಯಾಪ್ತಿಯ ದೊಡ್ಡ ರೈತರು ಇಪ್ಪತ್ತು ಎತ್ತುಗಳ ಕಣ ಮಾಡಿದರೆ ಉಯ್ಳಿದವರು ಹತ್ತು ಎತ್ತುಗಳ ಕಣ ಮಾಡುವುದು ರೂಢಿ. ಹೊಲದಲ್ಲಿ ವಿಶಾಲವಾದ ಬಂಡೆ ಇದ್ದರೆ ಅದನ್ನೇ ಕಣದ ಉದ್ದೇಶಕ್ಕೆ  ಬಳಸಲಾಗುತ್ತದೆ. ಇಲ್ಲವಾದರೆ ನೆಲದಲಿಯೇ ಕಣ ಮಾಡುತ್ತಾರೆ.

ಮನೆ ಇಲ್ಲವೇ ಊರಿಗೆ ಸಮೀಪದಲ್ಲಿ ಕಣ ಮಾಡುತ್ತಾರೆ. ಕಣ ಮಾಡಲು ನಿರ್ದಿಷ್ಟ ಸ್ಥಳವನ್ನು ಗುರುತಿಸಿ ಅಲ್ಲಿ ಹುಲ್ಲು ಕೆತ್ತು ಹಸನು ಮಾಡುತ್ತಾರೆ, ಇದಕ್ಕೆ ಬ್ರೇಸ್ತವಾರ ಅಥವಾ ಗುರುವಾರ             ಶ್ರೇಷ್ಠ ಎಂಬ ನಂಬಿಕೆ ಇದೆ. ನಂತರ ಚೆನ್ನಾಗಿ ನೀರು ಚಿಮುಕಿಸಿ ಧಮಸ್ ಮಾಡಿ ಕಣದ ಮಧ್ಯ ಭಾಗದಲ್ಲಿ ಮೇಟಿ ಕಂಬ ನೆಡುತ್ತಾರೆ. ನೆಡುವ ಸಂದರ್ಭದಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಮೇಟಿ ಕಂಬ ಭದ್ರವಾಗಿರಬೇಕೆಂಬ ನಂಬಿಕೆಯಿಂದ ಆಯ್ದ  ಮರವನ್ನೇ ನಿಲ್ಲಿಸುತ್ತಾರೆ. ಸಾಮಾನ್ಯವಾಗಿ ಮೇಟಿ ಕಂಬಕ್ಕೆ ಬ್ಯಾಟೆ (ಕಕ್ಕೆ) ಗಿಡದ ಕೊಂಬೆ ನೆಟ್ಟರೆ ಅತ್ಯಂತ ಶ್ರೇಷ್ಠ ಎಂಬುದು ಹಿರಿಯರ ನಂಬಿಕೆ.

ಮೇಟಿ ಕಂಬ ನೆಟ್ಟ ಎರಡು ದಿನಗಳ ನಂತರ ಕಣಕ್ಕೆ ಮಂದವಾಗಿ ಸಗಣಿ ಬಗ್ಗಡವನ್ನು ಕದರಿ, ತೆಂಗು, ಅಡಕೆ ಗರಿ ಅಥವಾ ಇನ್ನಾವುದೇ ಸೊಪ್ಪಿನಿಂದ ಸರಿಸುತ್ತಾರೆ. ಎರಡು-ಮೊರು ದಿನ ಚೆನ್ನಾಗಿ ಒಣಗಿದ ನಂತರ ಒಕ್ಕಣೆಗೆ ಕಣ ಸಿದ್ಧ. ಒಂದೇ ಕಣವನ್ನು ನಾಲ್ಕೈದು ಕುಟುಂಬದವರು ಬಳಸುವುದೂ ಉಂಟು, ಅಂತಹ ಸಂದರ್ಭದಲ್ಲಿ ಒಬ್ಬರ ಒಕ್ಕಣೆ ಮುಗಿದ ನಂತರ ಮತ್ತೊಬ್ಬರು ಒಕ್ಕಣೆ ಶುರು ಮಾಡುತ್ತಾರೆ. ಕಣವನು ಬಳಸಿದ ಹಾಗೆಲ್ಲಾ ಕಿತ್ತು ಹೋಗುವುದರಿಂದ ಆಗಾಗ ಸಾರಿಸುತ್ತಾರೆ.

ಈಗಾಗಲೇ ಹೇಳಿದಂತೆ ಕಣ ರೈತರಿಗೆ ಅತ್ಯಂತ ಪವಿತ್ರವಾದುದು. ಚಪ್ಪಲಿ ಮೆಟ್ಟಿಕೊಂದು ಅಲ್ಲಿಗೆ ಬರುವಂತಿಲ್ಲ. ಕಣದಲ್ಲಿ ಕೆಲಸ ಮಾಡುವಾಗ ಎಲೆ-ಅಡಿಕೆ ಹಾಕುವಂತಿಲ್ಲ. ಉಶಿ ತೂರುವಾಗ ಮಾತನಾಡುವಂತಿಲ್ಲ, ಬಹುಶಃ ಕಣವು ತಿನ್ನುವ ಅನ್ನವನ್ನು ಒಕ್ಕುವ ಸ್ಥಳವಾದ್ದರಿಂದ ಅಲ್ಲಿ ಚಪ್ಪಲಿ ಮೆಟ್ಟಿ ಅಡ್ಡಾಡಿದರೆ, ಎಲೆಯಡಿಕೆ ಹಾಕಿದರೆ ಗಲೀಜಾಗುತ್ತದೆ, ಇನ್ನು ರಾಶಿ ತೂರುವಾಗ ಮಾತನಾಡಿದರೆ ಬಾಯೊಳಗೆ ಧೂಳು-ದುಂಬು ಹೋಗಿ ಉಸಿರಾಟಕ್ಕೆ ತೊಂದರೆಯಾಗುತ್ತದೆಂದು ಹೀಗೆ ನಿಯಮಗಳನ್ನು ಮಾಡಿರಬಹುದು.

ಇನ್ನು ಕಣದಲ್ಲಿ ಒಕ್ಕಣೆ ಕಾರ್ಯಕ್ಕೆ ಬಳಸು ವಸ್ತುಗಳನ್ನು ಅವುಗಳ ನಿಜ ಹೆಸರಿನ ಮೂಲಕ ಕರೆಯುವುದು ನಿಷಿದ್ಧ.  ಅವುಗಳ ಮೂಲ ಹೆಸರನ್ನು ಬಿಟ್ಟು ಬೇರೆ ಹೆಸರಿನಿಂದ ಕರೆಯಲಾಗುತ್ತದೆ. ಉದಹರಣೆಗೆ; ಹುಲ್ಲು ತುಳಿಸುವ ರೋಣುಗಲ್ಲಿಗೆ ರಥ (ಏಚಿii ರಥ ಸಚಿiiಗಿ ನಿಲ್ಸು) ರಾಗಿ ತೂರುವ ಉದ್ದಿಗೆಗೆ ಕುದುರೆ (ಕುದುರೆ ಎತ್ರ ಜಾಸ್ತಿ ಆಯ್ತು ರವಷ್ಟು ಕಮ್ಮಿ ಮಾಡಿ), ಊಟಕ್ಕೆ ಕವಳ (ಎಲ್ರೂ ಕವಳಕ್ಕೆ ಬರ್ರಿ), ಪೊರಕೆಗೆ ಬುದ್ಧಿವಂತ, (ಯತ್ತಾಗೋಯ್ತಲ ಬುದ್ವಂತ) ತೂರುವ  ಮೊರಕ್ಕೆ ಕೊಂಗ, (ಏ ಮಗ ಈ ಕೊಂಗ ಕಿತ್ತೋಗದೆ ಇನ್ನೊಂದ್ ಕೊಂಗ ತಕಬಾ) ಬೂದಿಗೆ ವಿಭೂತಿ, ಗುಡಿಸುವುದಕ್ಕೆ ಬೆಳಗು, ರಾಗಿಗೆ ಕೃಷ್ಣ ಸ್ವಾಮಿ ಅಥವಾ ಕೆಂಪು ಅಥವಾ ರಜ, ಗುಂಡುಕಲ್ಲುಗೆ ರಥ, ಉದ್ದಿಗೆಗೆ ಕುದುರೆ, ಮೆರೆಗೋಲಿಗೆ ಮೆರೆಬಸವ, ಎತ್ತುಗಳಿಗೆ ಬಸವ, ಕತ್ತೆಗಳಿಗೆ ಮುತ್ತಿನ ಶೆಟ್ಟಿ, ಕುಡಿಗೋಲಿಗೆ ಬಸವಣ್ಣ ಅಥವಾ ಆಯುಧ… ಹೀಗೆ ಒಂದೊಂದಕ್ಕೆ ಒಂದೊಂದು ಹೆಸರಿಟ್ಟು ಕರೆಯುತ್ತಾರೆ. ಕಣದ ಭಾಷೇಯೇ ವಿಶಿಷ್ಟ ಮತ್ತು ಕೇಳಲು ಚಂದ, ಆದರೆ ಹೊಸಬರು ಯಾರಾದರೂ ಕಣಕ್ಕೆ ಹೋದರೆ ತಬ್ಬಿಬ್ಬಾಗುವುದು ಖಚಿತ.

ಈ ರೀತಿ ನಿಯಮ ಬರಲು ಒಂದು ಪುಟ್ಟ ಕಥೆಯಿದೆ. ಏನೆಂದರೆ…

 ಒಮ್ಮೆ ರೈತ ಮಹಿಳೆಯೊಬ್ಬಳು ಕಣದಲ್ಲಿ ಆಳುದ್ದ ಬಿದ್ದಿದ್ದ  ರಾಗಿ ರಾಶಿಯನ್ನು ಕಂಡು ಬೆರಗಾಗಿ `ಇಷ್ಟೊಂದು ರಾಗಿ ರಾಶಿಯನ್ನು ಬೀಸಿ ಹಿಟ್ಟು ಮಾಡಿ ಮುದ್ದೆ ಕಟ್ಟುವುದು ನನ್ನಿಂದ ಸಾಧ್ಯವೇ?’ ಎಂದು ಉದ್ಗಾರ ತೆಗೆದಳಂತೆ.  ಆ ಕೂಡಲೇ ಕಣದಲ್ಲಿದ್ದ ರಾಗಿ ರಾಶಿಯು ಸೇರಿದಂತೆ ಒಕ್ಕಣೆ ಕಾರ್ಯಕ್ಕೆ ಬಳಸಿದ ಎಲ್ಲಾ ವಸ್ತುಗಳು ಕಲ್ಲಾಗಿ ಬಿಟ್ಟವಂತೆ! ಆಗಿನಿಂದ ಅವುಗಳ ನಿಜ ಹೆಸರುಗಳಿಂದ ಕರೆಯುವುದನ್ನು ನಿಲ್ಲಿಸಲಾಯಿತು ಎಂಬುದು ಪ್ರತೀತಿ.

ಒಂದು ವೇಳೆ ಯಾರಾದರೂ ಬಾಯಿತಪ್ಪಿ ಮೂಲ ಹೆಸರನ್ನು ಹೇಳಿಬಿಟ್ಟರೆ ತಕ್ಷಣವೇ `ಓಲಗ’ ಅಥವಾ `ಬಿಡ್ತು’ ಎಂದು ಕೂಗಲಾಗುತ್ತದೆ.  ಆ ರೀತಿ ಕೂಗುವುದು ಶಾಂತಿ ಸೂಚಕ ಎಂದು ಹಿರಿಯರು ಹೇಳುತ್ತಾರೆ.

ವಾರ, ಹದಿನೈದು ದಿವಸಗಳವರೆಗೂ ಈ ರೀತಿ ಒಕ್ಕುವ ಕೆಲಸ ನಡೆಯುತ್ತದೆ.  ಒಕ್ಕಣೆ ಪೂರ್ತಿ ಮುಗಿದ ದಿವಸ ರಾಶಿ ಪೂಜೆ ಮಾಡಿ ಒಂದು ರಾತ್ರಿ ಕಣದಲ್ಲೇ ರಾಶಿಯನ್ನು ಬಿಟ್ಟು ಮರುದಿನ ಮನೆಗೆ ಕೊಂಡೊಯ್ಯುತ್ತಾರೆ.

ಪೂಜೆಯ ದಿನ ರಾಗಿಯನ್ನು ಐದು ರಾಶಿಗಳನ್ನಾಗಿ ವಿಂಗಡಿಸಲಾಗುತ್ತದೆ.  ಅವುಗಳೆಂದರೆ ದೊಡ್ಡ ರಾಶಿ, ದೇವರ ರಾಶಿ, ಬುದ್ಧಿವಂತ ರಾಶಿ, ಗೌರಮ್ಮನ ಗುಡ್ಡೆರಾಶಿ, ಕಡ್ಡಿ ರಾಶಿ ಇತ್ಯಾದಿ. ಕಣದ ಸುತ್ತಲೂ ಬೂದಿಯಿಂದ ರಂಗೋಲಿ ಬಿಡಿಸುತ್ತಾರೆ. ಅಲ್ಲದೆ ರಾಶಿಯ ಸುತ್ತಲೂ ಹಸೆ ಬರೆಯುತ್ತಾರೆ, ನಂತರ ದೊಡ್ಡ ರಾಶಿಯ ಮೇಲೆ ಸೂರ್ಯ-ಚಂದ್ರ, ತ್ರಿಶೂಲ, ಸರ್ಪ ಮುಂತಾದವನ್ನು ಬಿಡಿಸಲಾಗುತ್ತದೆ. ಜೊತೆಗೆ ಕಣದಲ್ಲಿ ಹುಲಿ, ಹುದ್ದಿಗೆ, ಮೊರ, ಗುಂಡು ಮುಂತಾದ ಚಿತ್ರಗಳನ್ನೂ ಸಹ ಬಿಡಿಸಲಾಗುತ್ತದೆ. ಬಿಳಿ ಕಣಗಿಲೆ ಹೂವು, ಬನ್ನಿ ಪತ್ರೆ, ತುಂಬೆ ಹೂವು, ಮಾವಿನ ಪತ್ರೆ, ಚೆಂಡು ಹೂವು, ಲಕ್ಕಿ ಪತ್ರೆ, ಅಣ್ಣೆ ಹೂವು, ಜೋಳದ ಬೆಚಿಡು, ಬಾಳೆ ಎಲೆ, ಮೇಟು ಕುಳಿ ಅಂಬು ಮುಂತಾದವುಗಳಿಂದ ರಾಶಿಯನ್ನು ಅಲಂಕರಿಸಲಾಗುತ್ತದೆ. ಒಕ್ಕಣೆಯಲ್ಲಿ ತೊಡಗಿಸಿದ್ದ ಎಲ್ಲ ಕೃಷಿ ಉಪಕರಣಗಳನ್ನು ಅಲ್ಲಿ ಒಂದೆಡೆ ಇಡಲಾಗುತ್ತದೆ. ಅವುಗಳಿಗೂ ಸಹ ಅಲಂಕರಿಸಲಾಗುತ್ತದೆ.

ಇತ್ತ ಕಣದ ಅಲಂಕಾರ ನಡೆಯುತ್ತಿರಬೇಕಾದರೆ, ಹೊಲದ ಒಡೆಯರು ಊರವರನ್ನು ಕಳದಲ್ಲಿ ಹೆಚ್ ಮಾಡಿದ್ದೀವಿ ಊಟಕ್ ಬರ್ರಿ ಎಂದು ಕರೆದು ಬರುತ್ತಾರೆ. ನಂತರ, ಬಿದರಿನ ಕೊಳಗದಲ್ಲಿ ಪೂಜಾ ಸಾಮಗ್ರಿಗಳಾದ ಹಾಲು, ತುಪ್ಪ, ಊದ ಬತ್ತಿ, ಕರ್ಪೂರ, ಎಲೆ ಅಡಿಕೆ, ಹಣ್ಣುಗಳನ್ನು ಇಟ್ಟು ಅದನ್ನು ರಾಶಿಯ ಸುತ್ತಲೂ ಮೂರು ಬಾರಿ ಬಳಸಲಾಗುತ್ತದೆ. ಕೆಲವು ಕಡೆ ಎಡಗೈಯ ಬೆರಳುಗಳನ್ನು ಬಲ ಮೊಣಕೈಯ ಮೇಲಿಟ್ಟುಕೊಂಡು, ಬಲಗೈಯಲ್ಲಿ ಮೊರ ಹಿಡಿದುಕೊಂಡು ಅದರ ತುದಿಯಿಂದ ಬರೆಯುವ ರೀತಿಯಲ್ಲಿ ಮೂರು ಸುತ್ತು ಹಾಕುತ್ತಾರೆ. ಅಲ್ಲದೆ ಕಣದ ಸುತ್ತಲೂ ಒಬ್ಬರು ನೀರು ಚಿಮುಕಿಸುತ್ತಾ ಹೆಚ್ಚೆಚ್ಚೆಚ್ಚು ಓಲಗ ಎಂದು ಹೇಳಿಕೊಂಡು ಹೋದರೆ, ಅವರ ಹಿಂದೆ ಮತ್ತೊಬ್ಬರು ಬಲ್ ಬಲ್ ಬಲ್ ಓಲಗ ಎನ್ನುತ್ತಾ ಮೂರು ಸುತ್ತು ಹಾಕುತ್ತಾರೆ. ನಂತರ ಓಲಗನನ್ನು ಇಡುವುದು ಶುರುವಾಗುತ್ತದೆ,

ಓಲಗ ಹುಲಿ ದೇವ, ಓಲಗ ಶಂಕರ ದೇವ

ಕಾಡಕ್ಕಿ ಕುಣಿದಾಡಿದ ಕಣವೇ ಓಲಗ

ಉದ್ದಿಗೆ ಎದ್ದಾಡಿದ ಕಣವೇ ಓಲಗ

ರಾಗಳ್ಳಿ ಬೆಟ್ಟ ಬೆಳ್ದಂಗೆ ಬೆಳೆಯೋ ಓಲಗ

ಓಲಗ ಅಂದ್ರೆ ಹುಲುಸು ಕೊಡೋ ಓಲಗ ಓಲಗೋ

ಮುಂತಾಗಿ ಈ ಸಂದರ್ಭದಲ್ಲಿ ಹೇಳುವ ಪದ ತುಂಬಾ ಅರ್ಥ ಪೂರ್ಣವಾದುದು. ಒಬ್ಬರು ಓಲಗನನ್ನು ಇಟ್ಟರೆ ಉಳಿದವರು ಅವರು ಒಂದು ಸಾಲು ಹೇಳಿದ ಕೊನೆಗೆ ಓಲಗೋ ಎಂದು ಸೇರಿಸುತ್ತಾರೆ.

ಇದಲ್ಲದೆ ಕಣದಲ್ಲಿರುವ ವಸ್ತುಗಳ ಬಗೆಗೂ ಸಹ ಪದ ಕಟ್ಟಿ ಹಾಡುತ್ತಾರೆ,

ಹುದ್ದಿಗೆ ಎದ್ದಾಡಿದ ಕಣವೇ ಓಲಗ ಓಲಗೊ

ಮೇಟಿ ಮೆರೆದಾಡಿದ ಕಣವೇ ಓಲಗ ಓಲಗೊ

ಮೊರವೆ ಮೆರೆದಾಡಿದ ಕಣವೆ ಓಲಗ ಓಲಗೊ…

ಹೀಗೆ ಮುಂದುವರಿದು ಹಕ್ಕಿ-ಪಕ್ಷಿಗಳಿಗೂ ಓಲಗನನ್ನು ಇಡಲಾಗುತ್ತದೆ.

ಸ್ವಾರಕ್ಕಿ ಸುಳಿದಾಡಿದ ಕಣವೆ ಓಲಗ ಓಲಗೊ

ಕಾಡಕ್ಕಿ ಕುಣಿದಾಡಿದ ಕಣವೆ ಓಲಗ ಓಲಗೊ… ಎಂಬ ಪದ ಹೇಳುವ ಕ್ರಿಯೆ ಬಹು ಕಾಲ ಮುಂದುವರಿಯುತ್ತದೆ.

ಈ ಸಂದರ್ಭದಲ್ಲಿ ನೀರಿನ ಕೊಡವೊಂದರಿಂದ ನೀರನ್ನು ಚಿಮುಕಿಸಲಾಗುತ್ತದೆ (ಚಳೇವು).  ನಂತರ ಅಲಂಕೃತಗೊಂಡ ರಾಶಿಗೆ  ಸಂಪ್ರದಾಯಬದ್ಧ ಪೂಜೆ ಸಲ್ಲಿಸಿ ನಂತರ ರಾಶಿಯಿಂದ ಕೆಲವರಿಗೆ ದಾನ ನೀಡಲಾಗುತ್ತದೆ.  ಇದೆಲ್ಲಾ ನಡೆಯುವುದು ಸಾಮಾನ್ಯವಾಗಿ ಸಂಜೆಯ ಹೊತ್ತು. ಹೀಗೆ ಪೂಜೆ, ಹಾಡು ಮುಗಿದ ನಂತರ ಎಲ್ಲರಿಗೂ ಕಣದಲ್ಲಿಯೇ ಊಟಕ್ಕೆ ಬಡಿಸಲಾಗುತ್ತದೆ. ದೊಡ್ಡ ಆರಂಬಗಾರರಾದರೆ ರಾಶಿ ಪೂಜೆಗೆ ಮರಿ ಹೊಡೆಯುತ್ತಾರೆ. ಕೆಲವರು ಕೋಳಿ ಸಾರು ಮಾಡುತ್ತಾರೆ, ಉಳಿದಂತೆ ಹಸಿ ಅವರೆ ಕಾಳಿನ ಸಾರು, ಬಿಸಿ-ಬಿಸಿ ಮುದ್ದೆ, ಕೊತ್ತಲಸಿನ ಕಾಯಿ ತಾಳದ, ಉಂಡಕ್ಕಿ ಪಾಯಸ ಮುಂತಾದ ಅಡುಗೆ ಮಾಡುವುದು ರೂಢಿ.

ಇವೆಲ್ಲಾ ಮುಗಿದ ಬಳಿಕ ರಾಶಿಯನ್ನು ಅಂದು ರಾತ್ರಿ ಅಲ್ಲಿಯೇ ಬಿಡುತ್ತಾರೆ, ಮರುದಿನ ಬೆಳಿಗ್ಗೆ ಮತ್ತೆ ಪೂಜೆ ಮಾಡಿ ರಾಗಿಯನ್ನು ಮನೆಗೆ ಸಾಗಿಸಲಾಗುತ್ತದೆ. ಪದ್ಧತಿಯಂತೆ ಬೆಳೆದ ಬೆಳೆಯಲ್ಲಿ ಒಂದಿಷ್ಟನ್ನು ಅಲ್ಲಿಯೇ ಬಿಡುತ್ತಾರೆ, ಅದು ಹಕ್ಕಿ-೦ಪqಗಳು ತಿನ್ನಲಿ ಎಂದು. ಈ ಎಲ್ಲಾ ಕ್ರಿಯೆಯಲ್ಲಿ ಹೊಲದ ವಾರಸುದಾರ ಮತ್ತು ಆತನ ಕುಟುಂಬ ವರ್ಗದವರೊಂದಿಗೆ ಅಕ್ಕಪಕ್ಕದ ರೈತಾಪಿ ಜನರು ಸಹ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. 

ಇದೆಲ್ಲಾ ಏಕೆ ಎಂದು ಹಿರಿಯರನ್ನು ಕೇಳಿದರೆ ಹೇಳುತ್ತಾರೆ, ಋಣ ತೀರಿಸಬೇಕಲ್ಲ ಭೂಮ್ ತಾಯಿದು, ವರ್ಷ್ರೆಂಭತ್ತು ಕಾಲ ಗೆಯ್ಕಂಡು ಕೊನಿಗೆ ಆ ತಾಯಿಗೆ ಏನೇನ್ ಬೇಕೊ ಅದುನ್ನೆಲ್ಲ ಮಾಡಿ ಹೋಗ್ಲಿಲ್ಲ ಅದ್ರೆ ಮುಂದಿನ ವರ್ಷ ಕೈ ಬಿಟ್ ಬಿಡ್ತಳೆ.

ರಾಶಿಪೂಜೆಯ ನಂತರ ರೈತರು ತಮ್ಮ ತಮ್ಮ ಹೊಲಗಳನ್ನು `ಅಕ್ಕಲು’ ಎಂದು ಘೋಷಿಸುತ್ತಾರೆ.  ಅಂದರೆ ಯಾವ ಜಾನುವಾರುಗಳಿಗೂ ನಿರ್ಬಂಧ ಇಲ್ಲದೆ ಅಳಿದುಳಿದಿರುವ ಬೆಳೆಯನ್ನು ಮೇಯಬಹುದು.  ಆ ಸಂದರ್ಭದಲ್ಲಿ ಹೊಲಗಳ ಉಸ್ತುವಾರಿಗೆ ಯಾವ ಕಾವಲುಗಾರರೂ ಇರುವುದಿಲ್ಲ.

ಕಣದಲ್ಲಿ ಬಳಸುವ ವಿವಿಧ ಹತಾರಗಳು ಮತ್ತು ಅವುಗಳ ಕೆಲಸ

ಕನಿಷ್ಟ ೧೫ ರಿಂದ ೨೦ ದಿವಸಗಳ ಕಾಲ ನಡೆಯುವ ಕಣದ ಕೆಲಸಕ್ಕೆ ಹತ್ತು ಹಲವಾರು ಬಳಸಲ್ಪಡುತ್ತವೆ. ದಕ್ಷಿಣ ಕರ್ನಾತಕದ ರಾಗಿ ಕಣದಲ್ಲಿ ಬಳಸುವ ವಸ್ತುಗಳ  ವೈವಿಧ್ಯತೆಯನ್ನೇ ನೋಡಿ.

೧.   ಮೆರೆಗೋಲು- ಆರೇಳು ಅಡಿ ಉದ್ದದ ಬಿದಿರಿನ ಕೋಳು, ತುದಿ ಬಾಗಿರುತ್ತದೆ. ಕಣಕ್ಕೆ ಹಾಸಿದ ಹುಲ್ಲನ್ನು ತಿರುವು ಹಾಕಲು ಬಳಸುತ್ತಾರೆ.

೨.   ಕಲ್ಲುಗುಂಡು/ರೋಣಗಲ್ಲು- ಕಲ್ಲಿನದು. ಚಕ್ರದಂತಿರುತ್ತದೆ. ಕಾಳು ಬೇರ್ಪಡಿಸುವ ಮುಖ್ಯ ಸಾಧನ.

೩.   ಮೊರ- ಕಾಳು ರಾಶಿ ಮಾಡಲು, ಏರು ಹಾಕಲು, ಗಾಬು ಹೊಡೆಯಲು, ತೂರುವೆದೇ ಮುಂತಾದ ಅನೇಕ ಕೆಲಸಗಳಿಗೆ ಉಪಯುಕ್ತ. ಕಣದಲ್ಲಿ ಒಂದಕ್ಕಿಂತ ಹೆಚ್ಚು ಮೊರಗಳಿರುತ್ತವೆ.

೪.   ಕಡ್ಡಿವಂದರಿ- ಕಾಳುಗಳಲ್ಲಿನ ಕಡ್ಡಿ ಬೇರ್ಪಡಿಸುವುದು.

೫.   ಸಣ್ಣವಂದರಿ- ಕಾಳುಗಳಲ್ಲಿನ ಸಣ್ಣ-ಸಣ್ಣ ಮಣ್ಣು ಧೂಳು ತೆಗೆಯಲು.

೬.   ದೊಡ್ಡವಂದರಿ-ಜರಡಿ ಮಾಡಲು

೭.   ಮುಳ್ಳುಗಡ್ಡಿ- ರಾಗಿ ಹುಲ್ಲು ತುಳಿಸಿದ ನಂತರ ದೊಡ್ಡ ಹುಲ್ಲನ್ನು ಕೈಯಿಂದ ತೆಗೆದು ಉಳಿದ ಸಣ್ಣ ಕಡ್ಡಿ, ಹುಬ್ಬಲು, ಗುಂಗು ಹ್ರೆಡೆಯಲು ಬಳಸುತ್ತಾರೆ. ಕಾರೆ ಗಿಡದ ಕೊಂಬೆಯನ್ನು ಮುಳ್ಮ್ಳಗಡ್ಡಿಯನ್ನಾಗಿ ಬಳಸುತ್ತಾರೆ.

೮.   ಕುಕ್ಕೆ- ಎತ್ತುಗಳು ಹುಲ್ಲಿಗೆ ಬಾಯಿ ಹಾಕದಂತೆ ಮೂತಿಗೆ ಕಟ್ಟುವ ಸಾಧನ. ಚಾಗಡಿ ಬಳ್ಳಿಯಿಂದ ಹೆಣೆದಿರುತ್ತಾರೆ.

೯.   ಬರಲು/ಸಾಣಿ/ಪೊರಕೆ- ಕಣ ಗುಡಿಸಲು. ಒಮ್ದು ಕಣದಲ್ಲಿ ಹಂಚಿ ಪೊರಕೆ, ತೆಂಗಿನ ಪೊರಕೆ, ಬಂದರೆ ಪೊರಕೆ ಹೀಗೆ ಹಲವಾರು ಪೊರಕೆಗಳಿರುತ್ತವೆ. ಪ್ರತಿಯೊಂದರ ಕೆಲಸವೂ ಭಿನ್ನ.

೧೦. ಉದ್ದಗೆ- ರಾಗಿಯನ್ನು ತೂರಲು ನಿಲ್ಲುವ ಸಾಧನ.

೧೧. ಕುಡುಗೋಲು- ಸಣ್ಣ-ಪುಟ್ಟ ಕೆಲಸಗಳಿಗೆ ಮತ್ತು ರಾಶಿ ಪೂಜೆಯಲ್ಲಿ ರಾಶಿತ ತುದಿಗೆ ಚುಚ್ಚಲು ಬಳಕೆ.

೧೨. ಗೂಡೆ- ಹುಬ್ಬಲನ್ನು ಎತ್ತಿ ಬೇರೆ ಕಡೆ ಹಾಕಲು.

೧೩. ಕೋಲುಗಳು- ರೋಣುಗಲ್ಲಿನಿಂದ ತಪ್ಪಿಸಿಕೊಂಡ ತೆನೆಗಳನ್ನು ಸಣ್ಣೇಟಿನಲ್ಲಿ ಬಡಿಯಲು ಬಳಸುತ್ತಾರೆ.

ಗೂಡು ಪೂಜೆ

ಇದು ಉತ್ತರ ಕರ್ನಾಟಕದವರ ರಾಶಿ ಪೂಜೆ. ನವಂಬರ್ ಡಿಸೆಂಬರ್ ತಿಂಗಳಿನಲ್ಲಿ ನಡೆಯುತ್ತದೆ. ಇಳ, ಸಜ್ಜೆ ಮುಂತಾದ ಬೆಳೆಗಳನ್ನು ತೆನೆ ಸಮೇತ ಕಟಾವು ಮಾಡಿ ಹೊಲದಲ್ಲಿಯೇ ಗೋಪುರಾಕೃತಿಯಲ್ಲಿ ಜೋಡಿಸಿರುತ್ತಾರೆ, ಇದನ್ನೇ ಗೂಡು ಎನ್ನುತ್ತಾರೆ.  ಒಂದು ಶುಭದಿನ ಬೆಳಿಗ್ಗೆ ಹೋರಿಗಳನ್ನು ಹೂಡಿದ ಬಂಡಿಯಲ್ಲಿ ಬುತ್ತಿ ಬಂಡಾರಗಳನ್ನು ತುಂಬಿಕೊಂಡು ಮನೆ- ಮಂದಿಯೆಲ್ಲಾ ಹೊಲಕ್ಕೆ ಹೋಗಿ ಗೂಡಿಗೆ ಶ್ರದ್ಧೆ ಭಕ್ತಿಗಳಿಂದ ಪೂಜಿಸುತ್ತಾರೆ.

ಮಿಂಚು ದೇವ ಪಂಚಕಲ್ಲುಗಳ

ಪಂಚ ಭೂಷಣದ ಮೆರುಗು

ಅವುಗಳೆಡೆಯಲಿ ಸಜ್ಜೆ ಕಡುಬಿನ ನೈವೇದ್ಯ

ಗಾಳಿ ದೇವಗ ಭೂದೇವಗ

ಭೂತಾಯಿ ಮಡಿಲೊಳಗೆ ಸಾಗೇತಿ ಗೂಡು ಪೂಜೆ

ಎಂದು ಪದ ಹಾಡುತ್ತಾ, ಹಿರಿಯರು ಹೊಲದ ಬದುವನ್ನು ಸುತ್ತುಹಾಕಿ, ಸಜ್ಜೆ ಕಡುಬಿನ ನೈವೇದ್ಯವನ್ನು ಗೂಡಿನ ಮುಂದಿಟ್ಟು ಬೀಜ ಹೊತ್ತು ಬೆಳೆಸಿದ ಭೂತಾಯಿಗೆ ನಮ್ಮ ಮೊದಲ ತುತ್ತು ಎನ್ನುತ್ತಾರೆ.

ಕೃಷಿಕರ ಯುಗಾದಿ

ಯುಗಾದಿ ರೈತರ ಸಂಪೂರ್ಣ ಬಿಡುವಿನ ಕಾಲದಲ್ಲಿ ಬರುವಂಥದ್ದು.  ಅಥವಾ ವಿರಾಮದ ಕೊನೆ ಮತ್ತು ದುಡಿಮೆಯ ಆರಂಭ ಇವೆರಡರ ನಡುವಣ ಹಬ್ಬ ಯುಗಾದಿ.  ಅದರಿಂದಲೇ ಈ ಹಬ್ಬದಲ್ಲಿ ಬೇವು ಬೆಲ್ಲದ ಮಿಶ್ರಣವಿರುತ್ತದೆ.  ಈ ಸಂದರ್ಭದಲ್ಲಿ ಭೂಮಿ ತಾಯಿ ಕೂಡ ಬಹಿಷ್ಠೆಯಾಗಿರುತ್ತಾಳೆಂದು ರೈತರ ನಂಬಿಕೆ.  ಯುಗಾದಿಯ ಮೂರನೇ ದಿನ ಸಾಮಾನ್ಯವಾಗಿ ಜನಪದರು ಮಾಂಸದೂಟ ಬಯಸುವುದುಂಟು.  ಈ ಮಾಂಸ ಕಾಡಿನಲ್ಲಿ ಬೇಟೆಯಾಡಿ ತಂದ ಪ್ರಾಣಿಯದೇ ಆಗಿರಬೇಕು.  ಆದ್ದರಿಂದ ಯುಗಾದಿಯ ಮರುದಿನ ಜನಪದರು ಬೇಟೆಗಾಗಿ ಕಾಡಿನ ಕಡೆ ಹೋಗಿ ಸಿಕ್ಕಿದ ಪ್ರಾಣಿಯನ್ನು ಬೇಟೆಯಾಡಿ ತರುವರು.  ತಂದ ಬೇಟೆಯನ್ನು ಎಲ್ಲರೂ ಹಂಚಿಕೊಳ್ಳಬೇಕು.  ಇದು ಪ್ರಾಚೀನ ಪದ್ಧತಿ.  ಈಗಲೂ ಕೆಲವು ಅರಣ್ಯವಾಸಿ ಬುಡಕಟ್ಟುಗಳಲ್ಲಿ ಈ ಪದ್ಧತಿ ಇದೆ. 

ಯುಗಾದಿ ಯಾವುದೇ ದೇವ-ದೇವತೆಗಳ ಸೋಕಿಲ್ಲದ ನಿಸರ್ಗದ ಹಬ್ಬ. ಜನಪದರಿಗೆ ಹೊಸ ವರ್ಷದ ಮೊದಲ ದಿನ. ಹೊಸ ಮಳೆಗಾಲಕ್ಕೆ ಶ್ರೀಕಾರ. ಒಳ್ಳೆಯದು – ಕೆಟ್ಟದ್ದನ್ನು ಸಮನಾಗಿ ಸ್ವೀಕರಿಸುವ  ಆಶಯದಿಂದ ಬೇವು-ಬೆಲ್ಲ ಬಾಯಿಗೆ ಹಾಕಿಕೊಳ್ಳುತ್ತಾರೆ. ಅಂದು ಹೊಸ ಬಟ್ಟೆ ತೊಟ್ಟು ಹೊಟ್ಟೆ ತುಂಬಾ ಒಬ್ಬಟ್ಟು ತಿಂದು ಆಗತಾನೇ ಎಳೆ ಚಿಗುರಿಡುತ್ತಿರುವ ಹೊಂಗೆ ಮರದ ನೆರಳಲ್ಲಿ ಹಳ್ಳಿಗರು ಮಲಗುವುದು ಸಾಮಾನ್ಯ. ಇಸ್ಪೀಟು ಈ ಹಬ್ಬಕ್ಕೆ ಹೇಗೆ ತಳುಕು ಹಾಕಿಕೊಂಡಿತೆಂಬುದು ತಿಳಿಯುತ್ತಿಲ್ಲ. ಯುಗಾದಿ ಮರುದಿನ ಹೊಸತಡುಕು, ಚಂದ್ರ ದರ್ಶನ. ಮಾಂಸಾಹಾರಿಗಳಿಗೆ ಸಡಗರ. ಕೆಲವೆಡೆ ಸಾಮೂಹಿಕ ಬೇಟೆಯೂ ಉಂಟು.

ಯುಗಾದಿ ಬರುವ ಸ್ವಲ್ಪ ದಿನ ಮುಂಚೆ ಕಾಮನ ಹಬ್ಬ ಬಂದಿರುತ್ತದೆ. ಕಾಮನ ಹಬ್ಬವನ್ನು ಹಳ್ಳಿಗರು ಕದಿರೆ ಹುಣ್ಣಿಮೆ ಎಂತಲೂ ಕರೆಯುತ್ತಾರೆ. ಕಾಮನ ಹಬ್ಬ ನಿಸರ್ಗದ ವರ್ಷದಲ್ಲಿ ಕೊನೆಯ ಹಬ್ಬ. ಹಳೆಯ ವಸ್ತುಗಳನ್ನು ಸುಟ್ಟು ಹೊಸ ವಸಂತದ ಆಗಮನಕ್ಕೆ ಸಿದ್ಧವಾಗುವ ಪರ್ವ ಕಾಲ. ಇದಾದ ಸ್ವಲ್ಪ ದಿನಕ್ಕೆ ಬರುವ ಯುಗಾದಿ ನಿಸರ್ಗ ವರ್ಷದ ಮೊದಲ ಹಬ್ಬ. ಯುಗದ ಆದಿ.  ಶಾಲಿವಾಹನ ಶಕೆಯ ಹೊಸ ಸಂವತ್ಸರದ  ಶುರು.

ಯುಗಾದಿಯ ನೈಜತೆ ಉಳಿದಿರುವುದೇ ರೈತಾಪಿಗಳಲ್ಲಿ. ನಗರವಾಸಿಗಳಿಗೆ ಯುಗಾದಿ ಕೇವಲ ಒಂದು ಹಬ್ಬ ಅಷ್ಟೇ. ಅವರು ಹೆಚ್ಚೆಂದರೆ ಎರಡು ದಿವಸ ಹಬ್ಬ ಮಾಡಿಯಾರು. ಆದರೆ ರೈತರ ಹಬ್ಬದ ಸಂಭ್ರಮ ಹದಿನೈದು ದಿನ ಮುಂಚೆಯೇ ಶುರು. ಆಗ ಯಾರು ಏನು ಕೇಳಿದರೂ ಅವರ ಉತ್ತರ ಒಂದೇ  ಹಬ್ಬ ಮುಗಿಲಿ ತಡಿರಿ. ಕೊಟ್ಟ ಸಾಲ ಕೇಳಲು ಬಂದವರಿಗೂ ಅಥವಾ ತಮ್ಮಿಂದ ಸಾಲ ಕೇಳುವವರಿಗೂ ಸಹ ಇದೇ ಉತ್ತರ. ಮನೆಂii ಹೆಣ್ಣು ಮಕ್ಕಳು ಎರಡು ವಾರ ಮುಂಚೆಯೇ ಮನೆ ಸ್ವಚ್ಚಗೊಳಿಸಲು ಶುರುಮಾಡುತ್ತಾರೆ. ಪ್ರತಿಯೊಂದು ವಸ್ತುವನ್ನು ತೊಳೆದು ಬೆಳಗಿ ಹಸನು ಮಾಡುತ್ತಾರೆ. ಅಟ್ಟ, ಗೋಡೆ, ಅಂಗಳ, ಮಾಡುಗಳ ಧೂಳೊಡೆಯುತ್ತಾರೆ. ಮನೆ ಮುಂಭಾಗದ ಗೋಡೆಗಳಿಗೆ  ಕೆಮ್ಮಣ್ಣು-ಸಗಣಿಯಿಂದ ಸಾರಿಸುತ್ತಾರೆ. ಇಡೀ ಮನೆ ಸುಣ್ಣ-ಬಣ್ಣ ಕಾಣುತ್ತದೆ.

ಗಂಡಸರು ಹೊಸ ಬಟ್ಟೆ-ಬರೆ ತೆಗೆಯುವುದು, ಬೇಸಾಯಕ್ಕೆ ಬೇಕಾದ ಹೊಸ ಸಲಕರಣೆಗಳಾದ ನೇಗಿಲು, ನೊಗ, ಮೇಣಿ, ದೊಡ್ಡಮಿಣಿ, ಹಗ್ಗ, ಚಿಲಕ್ಕಣ್ಣಿ, ಮಕಾಡ, ಕೊಳದಂಡೆ, ಕುಂಟೆ, ಕುಳ, ಅಲುಗು, ಕೂರಿಗೆ ಮುಂತಾದವುಗಳನ್ನು ಹೊಂಚುವ ಧಾವಂತದಲ್ಲಿರುತ್ತಾರೆ. ದನಗಳ ಪರಿಶೆಗಳೂ ಇದೇ ಸಂದರ್ಭದಲ್ಲಿ ಬರುವುದರಿಂದ ಮನೆಯ ದನಗಳನ್ನು ಮಾರುವುದು, ಹೊಸ ದನಗಳನ್ನು ಕೊಳ್ಳುವುದು ನಡೆಯುತ್ತಿರುತ್ತದೆ.

ಯುಗಾದಿ ಮೂರು ದಿನದ ಹಬ್ಬ. ಮೊದಲ ದಿನ ಮುಸುರೆ ಹಬ್ಬ. ಪಾತ್ರೆ-ಪಗಡಗಳನ್ನು ತೊಳೆದು ಹೊಸ ನೀರು ತಂದು ತುಂಬಿಸುತ್ತಾರೆ. ಹದಿನೈದು ದಿನಗಳ ಸ್ವಚ್ಚತಾ ಕಾರ್ಯಕ್ಕೆ ಅಂತಿಮ ರೂಪ. ಒಂದು ರೀತಿಯ ಫ಼ೈನಲ್ ಟಚ್ಚಿಂಗ್ ಎನ್ನಬಹುದು. ಎರಡನೇ ದಿನ ಸೀ ಹಬ್ಬ. ಮನೆ ಮಕ್ಕಳೆಲ್ಲಾ ಎಣ್ಣೆ ಸ್ನಾನ ಮಾಡಿ ಹೊಸ ಬಟ್ಟೆ ತೊಡುತ್ತಾರೆ. ಎಲ್ಲಾ ಬಾಗಿಲುಗಳ ಹೊಸ್ತಿಲಿಗೂ,  ದನಗಳ ಕೊಟ್ಟಿಗೆಗೂ ಮಾವಿನ ಎಲೆ ತೋರಣ ಕಟ್ಟಿ ಬೇವಿನ ಚಿಕ್ಕ-ಚಿಕ್ಕ ಕೊಂಬೆಗಳನ್ನು ಮನೆಯ ಎಲ್ಲಾ ಕಡೆಗೂ ಸಿಗಿಸಲಾಗುತ್ತದೆ.  ಮನೆ ಯಜಮಾನ ಎಲ್ಲರಿಗೂ ಬೇವು-ಬೆಲ್ಲ ಹಂಚುತ್ತಾರೆ. ಮನೆಗೆ ಯಾರೇ ಬಂದರೂ ಅವರಿಗೆ ಬೇವು-ಬೆಲ್ಲ ನೀಡಲಾಗುತ್ತದೆ.  ಹೋಳಿಗೆ, ಗಟ್ಟಕ್ಕಿ ಪಾಯಸ, ಅಕ್ಕಿ ಪಾಯಸ, ಕಡುಬು ವಿಶೇಷ ಅಡುಗೆಗಳು. ಅಂದು ಕೆಲವೆಡೆ ಎತ್ತುಗಳಿಗೆ ಗೌಸು ಹೊದಿಸಿ, ಚೆಂಡು ಹೂವಿನ ಹಾರ ಹಾಕಿ, ಬಂಡಿ ಕಟ್ಟಿ ದೇವಾಲಯಕ್ಕೆ ಮೂರು ಸುತ್ತು ಬರುತ್ತಾರೆ. ಅವಕ್ಕೆ ವಿಶೇಷ ಎಡೆ ಇರುತ್ತದೆ. ಹೊಸ ಬಟ್ಟೆ ತೊಡುವ ಮುಂಚೆ ದನಗಳ ಬೆನ್ನ ಮೇಲೆ ಹಾಕುವುದು ರೂಢಿ. ಮೈಸೂರು ಸೀಮೆಯಲ್ಲಿ ಧವಸ ಧಾನ್ಯಗಳನ್ನು ಕಣದಲ್ಲಿ ಒಟ್ಟಿ ಪೂಜಿಸುವುದು ಕಂಡು ಬರುತ್ತದೆ.

ಉತ್ತರ ಕರ್ನಾಟಕದ ಕೆಲವೆಡೆ ಚಕ್ಕಡಿ (ಗಾಡಿ)ಗೆ ತರಾತರ ಬಣ್ಣ ಹಚ್ಚಿ ಸಿಂಗರಿಸುತ್ತಾರೆ. ಚಕ್ಕಡಿಯ ಒಂದೊಂದು ಭಾಗಕ್ಕೆ ಒಂದೊಂದು ಬಣ್ಣ, ಗಾಲಿಗಳಿಗೆ ಕೆಮ್ಮಣ್ಣು, ಗಾಲಿ ಅಂಚಿಗೆ, ಗುಂಭಗಗೆ, ಗುಜ್ಜುಗಳಿಗೆ ಸುಣ್ಣ ಬಳಿಯುವುದು ವಾಡಿಕೆ. ಬಯಲು ಸೀಮೆಯಲ್ಲಿ ಕೆಲವು ಜನಾಂಗದವರು ಕೃಷಿ ಆಯುಧಗಳನ್ನಿಟ್ಟು ಪೂಜಿಸುತ್ತಾರೆ. ಹಿರಿಯರ ಸಮಾಧಿಗಳಿಗೆ ಹೋಗಿ ಹಣ್ಣು-ಕಾಯಿ ಮಾಡಿ, ಎಡೆ ಹಾಕಿ ಸಣ ಮಾಡುತ್ತಾರೆ. ಅಂದು ಮನೆಯಲ್ಲಿನ ಹಳೆಯ ಮಣ್ಣಿನ ಮಡಕೆಗಳನ್ನು ಎಸೆದು ಹೊಸ ಮಡಕೆ ತರುತ್ತಾರೆ. ಈ ಭಾಗದಲ್ಲಿ ವಿಶೇಷ ಗಳೆ ಪೂಜೆ ಇರುತ್ತದೆ.

ಮೂರನೇ ದಿನ ಹೊಸತಡುಕು. ಇದಕ್ಕೆ ಕರಿ ಹಬ್ಬ ಎಂಬ ಜನಪ್ರಿಯ ಹೆಸರಿದೆ. ಅಂದು ಮಾಂಸದೂಟದ ಸಂಭ್ರಮ. ಒಂದು ರೀತಿಯಲ್ಲಿ ಮೊದಲ ಎರಡು ದಿನಗಳು ಹೆಂಗಸರ ಸಡಗರವಾದರೆ ಮೂರನೇ ದಿನ ಗಂಡಸರದೇ ದರ್ಬಾರು. ಬೆಳಗಿನ ಜಾವ ಮೊದಲ ಕೋಳಿ ಕೂಗುವಾಗಲೇ ಮಾಂಸ ಬೇಯಿಸುವ ಪಾತ್ರೆಗಳು ಸದ್ದು ಹೊರಡಿಸುತ್ತವೆ. ಸಾಮೂಹಿಕ ಬೇಟೆಯ ಸಂಪ್ರದಾಯವಿದೆ. ಮನೆಗೆ ಒಂದಾಳಿನಂತೆ ಬೇಟೆಯಲ್ಲಿ ಭಾಗವಹಿಸಬೇಕು. ಹೆಚ್ಚಾಗಿ ಕಾಡುಹಂದಿ ಮತ್ತು ಮೊಲದ ಬೇಟೆ ಇರುತ್ತದೆ. ಈಗೀಗ ಬೇಟೆಗೆ ಹೋಗುವುದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. 

ಚಂದ್ರನ ನೋಡಿ ಮಳೆ-ಬೆಳೆ ನಿರ್ಧಾರ

ಯುಗಾದಿ ಎರಡನೇ ದಿನ ಸಂಜೆ  ಚಂದ್ರನನ್ನು  ನೋಡುವುದು ಹಳ್ಳಿಗಳಲ್ಲಿ ರೂಢಿ. ಅಮಾವಾಸ್ಯೆಯಾಗಿ ಒಂದು ದಿನವಾಗಿರುವುದರಿಂದ ಚಂದ್ರ ಕಂಡೂ ಕಾಣದಂತಿರುತ್ತಾನೆ. ಹಿರಿಯರ ಸಮ್ಮುಖದಲ್ಲಿ ಸೂಕ್ಷ್ಮವಾಗಿ ಗಮನಿಸಿ ಚಂದ್ರನ ಯಾವ ಭಾಗ ಎದ್ದಿರುತ್ತದೆಯೋ ಆ ಭಾಗಕ್ಕೆ ಉತ್ತಮ ಫಸಲು, ಯಾವ ಭಾಗ ಬಿದ್ದಿರುತ್ತದೆಯೋ ಆ ಭಾಗಕ್ಕೆ ಸಾಧಾರಣ ಫಸಲು ಎಂದು ಹೇಳುತ್ತಾರೆ. ಚಂದ್ರನ ತುದಿಗಳನ್ನು ಕೋಡು ಎಂದು ಕರೆಯುತ್ತಾರೆ. ಕೆಲವೆಡೆ ಆ ಕೋಡುಗಳನ್ನು ಅನ್ನದ ಕೋಡು, ಹೊನ್ನಿನ ಕೋಡು ಎಂದು ಹೇಳುತ್ತಾ ಈ ವರ್ಷ ಅನ್ನದ ಬೆಲೆ ಜಾಸ್ತಿಯೋ, ಚಿನ್ನದ ಬೆಲೆ ಜಾಸ್ತಿಯೋ ಎಂದು ಚರ್ಚೆಯಾಗುತ್ತದೆ. ದಾವಣಗೆರೆಯ ಕಡೆ ಚಂದ್ರನ ಎಡ ಭಾಗ ತುಸು  ಮೇಲಕ್ಕೆ ಇದ್ದರೆ ಉತ್ತಮ ಮಳೆ-ಬೆಳೆ, ಬಲ ಭಾಗ ಮೇಲಕ್ಕೆ ಇದ್ದರೆ ಮಳೆ-ಬೆಳೆ ಕಡಿಮೆ ಎಂದು ನಂಬುತ್ತಾರೆ.  ಚಂದ್ರ ದರ್ಶನದ ನಂತರ ಸಣ್ಣ ಮಕ್ಕಳು ದೊಡ್ಡವರ ಕಾಲಿಗೆ ಬೀಳುತ್ತಾರೆ. ಹಾಗೆ ನಮಸ್ಕರಿಸಿದವರಿಗೆ ದುಡ್ಡು ಕೊಡುವುದು ವಾಡಿಕೆ. ತೊಟ್ಟಿರುವ ಹೊಸ ಬಟ್ಟೆಯಲ್ಲಿ ಒಂದು ಎಳೆ ಕಿತ್ತು ಚಂದ್ರನಿಗೆ ಎಸೆಯುತ್ತಾರೆ.

ಪಂಚಾಂಗ ನೋಡಿ ಮಳೆ-ಬೆಳೆ ನಿರ್ಧಾರ

ಹಬ್ಬದ ಮೊದಲ ದಿನ ಊರಿನ ಪೂಜಾರಪ್ಪ, ಜ್ಯೋತಿಷಿ ಅಥವಾ ಹಿರಿಯರ ಸಮ್ಮುಖದಲ್ಲಿ  ಪಂಚಾಂಗ ಓದಿಸುತ್ತಾರೆ. ಈ ವರ್ಷದ ಮಳೆ ಪ್ರಮಾಣ, ಬೆಳೆ ಪ್ರಮಾಣ ಹಾಗೂ ಅವರವರ ಭವಿಷ್ಯದ ಬಗ್ಗೆ ಕೇಳಲಾಗುತ್ತದೆ. ಆದರೆ ಇತ್ತೀಚೆಗೆ ಇದು ಕಂಡು ಬರುತ್ತಿಲ್ಲ.

ಆನೆ ಪರುವು

ಕನಕಪುರದ ಕಾಡುಹಳ್ಳಿಗಳಲ್ಲಿ ಯುಗಾದಿ ಆದ ೨ ದಿನಕ್ಕೆ ಆನೆ ಪರುವು ಎಂಬ ಹೆಸರಿನ ಆಚರಣೆ ಮಾಡುತ್ತಾರೆ. ಅಂದು ಊರವರೆಲ್ಲಾ ಸೇರಿ ಮಣ್ಣಿನ ಆನೆ ಮಾಡಿ ಪೂಜಿಸುತ್ತಾರೆ. ಹೀಗೆ ಮಾಡಿದರೆ ಮುಂದೆ ನಮ್ಮ ಹೊಲಗಳಿಗೆ ಆನೆಗಳ ಕಾಟವಿರುವುದಿಲ್ಲ ಎಂದು ರೈತರ ನಂಬಿಕೆ. ಕೆಲವರು ಪೂಜೆಯ ನಂತರ ಅಲ್ಲಿ ಕನ್ನಡಿಯೊಂದನ್ನು ಇಡುತ್ತಾರೆ. ಹಾಗೆ ಮಾಡುವುದರಿಂದ ಆನೆಗಳು ಆ ಹೊಲದತ್ತ ಸುಳಿಯುವುದಿಲ್ಲವಂತೆ.

ಸೋಲಿಗರ ರೊಟ್ಟಿ ಹಬ್ಬ

ಸೋಲಿಗ ಜನಾಂಗದವರು ಈ ಸಂದರ್ಭದಲ್ಲಿ ರೊಟ್ಟಿ ಹಬ್ಬ ಎಂಬ ವಿಶೇಷ ಆಚರಣೆಯನ್ನು ಮಾಡುತ್ತಾರೆ. ಎಲ್ಲರೂ ಒಂದೆಡೆ ಸೇರಿ ದೊಡ್ಡದಾಗಿ ಬೆಂಕಿ ಹಾಕಿ ಕೆಂಡ ಮಾಡಿ, ಒಂದು ನಿರ್ದಿಷ್ಟ ಜಾತಿಯ ಮರದ ಎಲೆಗಳ ಮೇಲೆ ರೊಟ್ಟಿಯನ್ನು ತಟ್ಟಿ ಆ ಕೆಂಡದ ಮೇಲೆ ಹಾಕಿ ಸುಡುತ್ತಾರೆ. ಸುಟ್ಟ ನಂತರ ಅದನ್ನು ಪ್ರಸಾದವೆಂದು ಪರಿಗಣಿಸಿ ಎಲ್ಲರಿಗೂ ಹಂಚುತ್ತಾರೆ.

ಯುಗಾದಿಯ ಸಂದರ್ಭದಲ್ಲಿ ಮಾಡುವ ಇಂತಹ ಎಷ್ಟೋ ಕೃಷಿ ಸಂಭಂಧಿ ಆಚರಣೆಗಳು ಇಂದು ತಮ್ಮ ಸ್ವರೂಪ ಬದಲಿಸಿಕೊಂಡಿವೆ, ಎಷ್ಟೋ ಆಚರಣೆಗಳು ಕಣ್ಮರೆಯಾಗಿವೆ.  ಯುಗಾದಿ ಹಬ್ಬಕ್ಕೂ ಕೃಷಿಗೂ ಇರುವ ಸಂಬಂಧ ಅವಿನಾಭಾವಿಯಾದದ್ದು. ಹಬ್ಬದಂದು ರೈತಾಪಿಗಳ ಪ್ರತಿಯೊಂದು ಕ್ರಿಯೆಗೂ ವಿಭಿನ್ನ ಅರ್ಥಗಳಿರುತ್ತವೆ. ಕಾಲಾನುಕ್ರಮದಲ್ಲಿ ಹಬ್ಬದ ಜಾಡು ತುಸು ಬದಲಾಗಿದೆ ಎನಿಸಿದರೂ ಆರಂಭದಲ್ಲಿ ಹೇಳಿದಂತೆ, ಯುಗಾದಿಯ ಮೂಲ ಸ್ವರೂಪ, ಖುಷಿ, ಮುಗ್ಧತೆಗಳು ಇಂದಿಗೂ ಕೃಷಿಕರಲ್ಲಿ ಉಳಿದಿವೆ.

ಬೆಳದಿಂಗಳಪ್ಪನ ಪೂಜೆ

ತುಮಕೂರು ಸೀಮೆಯಲ್ಲಿ ಆಚರಣೆಯಲ್ಲಿರುವ ಕುತೂಹಲಕರ ಆಚರಣೆ, ಬೇಸಾಯಕ್ಕೆ ನೇರ ಸಂಬಂಧ ಇಲ್ಲದಿದ್ದರೂ ಸಹ ಹಳ್ಳಿ ಹೆಣ್ಣು ಮಕ್ಕಳು ಇದರಲ್ಲಿ ತೊಡಗಿಸಿಕೊಳ್ಳುವುದರಿಂದ ಇದಕ್ಕೊಂದು ವಿಶಿಷ್ಟತೆಯಿದೆ. ಹಾಗೂ ಬೆಳದಿಂಗಳಿಗಾಗಿಯೇ ಒಂದು ನಿರ್ದಿಷ್ಟ ಆಚರಣೆಯಿರುವುದು ಗಮನಿಸಬೇಕದ ಅಂಶ. ಅಲ್ಲದೆ ಈ ಆಚರಣೆ ಬೇಸಿಗೆ ಕಾಲದಲ್ಲಿ, ಅಂದರೆ ಕೃಷಿಕರಿಗೆ ಬಿಡುವಿನ ಕಲದಲ್ಲಿ ಬರುವುದರಿಂದ ಇದನ್ನು ಸುಗ್ಗಿ ವಿಭಾಗದಲ್ಲಿ ಸೇರಿಸಲಾಗಿದೆ.

ಕದಿರೆ ಹುಣ್ಣಿಮೆ (ಯುಗಾದಿ ಹಿಂದೆ-ಮುಂದೆ) ಸಮಯದಲ್ಲಿ ಸತತ ಒಂದು ವಾರ ಕಾಲ ಬೆಳದಿಂಗಳಪ್ಪನ ಪೂಜೆ ನಡೆಯುತ್ತದೆ. ಇದನ್ನು ಚಂದ್ರಮ್ಮನನ್ನು ಹಾಕುವುದು ಎಂದೂ ಕರೆಯುತ್ತಾರೆ. ಹುಣ್ಣಿಮೆಗೆ ಒಂದು ವಾರ ಮುಂಚೆ ಪ್ರಾರಂಭವಾಗಿ ಹುಣ್ಣಿಮೆಯನ್ನು ಚಂದ್ರಮ್ಮನನ್ನು ಸಾಗಹಾಕುತ್ತಾರೆ. ಹದಿ-ಹರಯದ ಹೆಣ್ಣು ಮಕ್ಕಳು ಖುಷಿಗಾಗಿ ಮಾಡುವ, ಆ ಮೂಲಕ ತಮಗೆ ಹಾಲಿನಂತಹ ಬೆತ್ತಿಂಗಳನ್ನು ಚೆಲ್ಲುವ ಚಂದ್ರನಿಗೆ ನಮಿಸುವ ಆಚರಣೆ.

ಒಂದು ವಾರ ಪ್ರತಿ ದಿನ ಸಂಜೆ ಎಲ್ಲರ ಮನೆ ಮುಂದೆ ಹಾಗೂ ಬೀದಿಗಳಲ್ಲಿ ಸಾರಿಸಿ ರಂಗೋಲಿ ಬಿಡಲಾಗುತ್ತದೆ. ಈ ರಂಗೋಲಿಗಳು ಹೆಚ್ಚು ವಿಸ್ತಾರವಾಗಿರುತ್ತವೆ. ರಾತ್ರಿ ಊಟದ ನಂತರ ಎಲ್ಲ ಹೆಣ್ಣು ಮಕ್ಕಳು ಒಂದೆಡೆ ಕಲೆತು ಹಾಡು ಹೇಳುತ್ತಾ, ನಗಸಾರ ಮಾಡುತ್ತಾ ಕಾಲ ಕಳೆಯುತ್ತಾರೆ. ಸರಿ ಹೊತ್ತಿನವರೆಗೂ ಇದು ಸಾಗುತ್ತದೆ. ಕೊನೆಯ ದಿನ -ಹುಣ್ಣಿಮೆಯ ದಿನ ಇಬ್ಬರು ಹುಡುಗರನ್ನು ಗಂಡು-ಹೆಣ್ಣಿನಂತೆ ಸಿಂಗರಿಸಿ ಮದುವೆ ಶಾಸ್ತ್ರ ಮಾಡಲಾಗುತ್ತದೆ. ನಂತರ ಅವರನ್ನು ಊರ ಹೊರಗೆ ಮೆರವಣಿಗೆ ಮಾಡುತ್ತಾ, ಹಾಡು ಹೇಳುತ್ತಾ ಸಾಗುತ್ತಾರೆ. ಒಂದು ನಿರ್ದಿಷ್ಟ ಸ್ಥಳಕ್ಕೆ ಸಾಗಿ ಪೂಜೆ ಮಾಡಿ ವಾಪಸಾಗುತ್ತಾರೆ.

ಅಡಿಕೆ ಸುಗ್ಗಿ

ಹಿಂದಿನ ಕಾಲದಲ್ಲಿ ಮಲೆನಾಡಿನಲ್ಲಿ ಘಟ್ಟದ ಕೆಳಗಿನವರು(ಕನ್ನಡ ಜಿಲ್ಲೆಯವರು) ಘಟ್ಟದ ಮೇಲೆ (ತೀರ್ಥಹಳ್ಳಿ ಇತ್ಯಾದಿ) ಹೋಗಿ ಅಡಿಕೆ ಸಂಭಾವನೆ ಪಡೆದು ಬರುವ ರೂಢಿ ಇತ್ತು. ಪ್ರತಿಯೊಂದು ವರ್ಗದವರೂ ಈ ಕೆಲಸಕ್ಕೆಂದು ಹೋಗುತಿದ್ದರು. ಬೆಳೆಗಾರರು ದಾನ-ಧರ್ಮ ಮಾಡಬೇಕೆಂಬ ಮನೋಭಾವದಿಂದ ತಾವು ಬೆಳೆದದ್ದರಲ್ಲಿ ಸ್ವಲ್ಪ ಭಾಗವನ್ನು ಈ ಸಂಭಾವನೆಗಾಗಿ ಮೀಸಲಿಟ್ಟಿರುತ್ತಿದ್ದರು. ಸಂಭಾವನೆಗೆ ಬಂದವರಿಗೆ ಬಂದವರ ಯೋಗ್ಯತೆಯಾನುಸಾರ ದಾನ ನೀಡುತಿದ್ದರು.

BOX MATTER

ಅವರೆಕಾಳು ಭೂಮಿಗೆ ಹೇಗೆ ಬಂತು?

ಪಾಂಡವರನ್ನು ಕೊಲ್ಲುವ ಸಲುವಾಗಿ ಕೌರವರು ಅನೇಕ ಉಪಾಯ ಮಾಡುತ್ತಾರೆ. ಅದರಲ್ಲಿ ಅರಗಿನ ಮನೆಯಲ್ಲಿ ಉಪಾಯದಿಂದ ಕೂಡಿ ಹಾಕಿ ಬೆಂಕಿ ಹಚ್ಚುವ ಪ್ರಸಂಗ ಎಲ್ಲರಿಗೂ ತಿಳಿದಿದೆ. ಈ ರೀತಿ ಬೆಂಕಿ ಹಚ್ಚಿದಾಗ ಅದರಿಂದ ಪಾಂಡವರು ತಪ್ಪಿಸಿಕೊಂಡು ಬದುಕುಳಿಯುತ್ತಾರೆ. ಹಾಗೆ ಬದುಕಿ ಬಂದವರು ತಾವು ಇನ್ನೂ ಬದುಕಿದ್ದೇವೆ ಎಂಬುದನ್ನು ಸಾರಲು ಅವರೆಕಾಳನ್ನು ಸೃಷ್ಟಿ ಮಾಡಿ ಪಾಂಡವರು ಇನ್ನೂ ಅವ್ರೆ ಎಂದು ಕೂಗುತ್ತಾ ಜಗತ್ತಿಗೆಲ್ಲಾ ಎರಚಿದರಂತೆ. ಇದನ್ನು ನೋಡಿದ ಕೌರವರು ಕಡು ರೋಷದಿಂದ ನೀವು ಸೃಷ್ಟಿಸಿದ ಅವರೆಗೆ ನಾವು ಹುಳುಗಳಾಗಿ ಕಾಡಿ ನಾಶ ಮಾಡುತ್ತೇವೆ ಎಂದು ಶಪಥ ಮಾಡಿದರಂತೆ.

ಹೀಗೆ ಜಗತ್ತಿಗೆ ಅವರೆಕಾಯಿ ಮತ್ತು ಅದಕ್ಕೆ ಬೀಳುವ ಹುಳುಗಳ ಸಂತತಿ ಬಂದಿತಂತೆ.

(ಕನಕಪುರ ತಾಲ್ಲೂಕು ಹೇರಿಂದ್ಯಾಪನ ಹಳ್ಳಿಯಲ್ಲಿ ಸಿಂಗೇಗೌಡರ ರಾಗಿ ಕಣದ ರಾಶಿ ಪೂಜೆಗೆ ಹೋಗಿದ್ದಾಗ ಅಲ್ಲಿಗೆ ಬಂದಿದ್ದ ಗೌಡರ ನೆಂಟರಾದ ಹಲಗೂರು ಚಿಕ್ಕಣ್ಣ ಹೇಳಿದ ಕಥೆ )

ಅವರೆ ಕಾಳಿಗೆ ಗೆರೆ ಯಾಕಿರುತ್ತದೆ?

ಬಹಳ ಹಿಂದೆ ಅವರೆಕಾಳು, ರೋಜನ್ ಕಡ್ಡಿ ಮತ್ತು ಬೆಂಕಿ ಕೆಂಡ ಮೂವರೂ ಸ್ನೇಹಿತರಂತೆ. ಅವು ಒಂದು ದಿನ ಅವರ ಊರಿನಿಂದ ಇನ್ನ್ನೊಂದು ಊರಿಗೆ ಹೋಗಬೇಕಾಗಿರುತ್ತದೆ. ಅದಕ್ಕೆ ನದಿಯೊಂದನ್ನು ದಾಟಬೇಕಾಗಿರುತ್ತದೆ. ನದಿ ದಡದಲ್ಲಿ ನಿಂತು ಹೇಗೆ ದಾಟುವುದೆಂದು ಮೂವರೂ ಯೋಚಿಸುತ್ತಾರೆ. ಅವರೆಕಾಳು ತಾನು ನೀರೊಳಗೆ ಬಿದ್ದರೆ ಮುಳುಗಿಬಿಡುತ್ತೇನೆ ಎಂದರೆ, ಬೆಂಕಿ ಕೆಂಡವು ನಾನು ನೀರಿಗೆ ಬಿದ್ದರೆ ಇದ್ದಿಲಾಗಿಬಿಡುತ್ತೇನೆ ಎಂದು ಭಯ ಪಟ್ಟಿತಂತೆ. ಆಗ ರೋಜನ್‌ಕಡ್ಡಿಯು ನಿಮಗ್ಯಾಕೆ ಭಯ ನಾನು ನಿಮ್ಮನ್ನು ಜೋಪಾನವಾಗಿ ಕರೆದುಕೊಂದು ಹೋಗುತ್ತೇನೆ ಎನ್ನುತ್ತದೆ. ಆಗ ಅವರೆಕಾಳು ಹೇಗೆ ಕರೆದೊಯ್ಯುತ್ತೀಯಾ ಎಂದು ಕೇಳಿದಾಗ  ಕಡ್ಡಿಯು ನಾನು ಎಂತಹ ಪ್ರವಾಹ ಇದ್ದರೂ ತೇಲುತ್ತೇನೆ ನನ್ನ ಮೇಲೆ ಕುಳಿತುಕೊಳ್ಳಿ ಹೋಗೋಣ ಎಂದಿತಂತೆ.

ಆದರೆ ಅವರೆಕಾಳಿಗೆ ಇದರ ಜೊತೆ ಹೋದರೆ ಅಪಾಯ ಎಂದು ತಿಳಿದಿರುತ್ತದೆ. ಹಾಗಾಗಿ ನಾನು ಬರುವುದಿಲ್ಲ ಎಂದು ದಡದಲ್ಲೇ ಉಳಿಯುತ್ತದೆ. ಆಗ ರೋಜನ್‌ಕಡ್ಡಿಯು ಬೆಂಕಿ ಕೆಂಡವನ್ನು ಬೆನ್ನ ಮೇಲೆ ಕೂರಿಸಿಕೊಂಡು ಹೋಗುತ್ತದೆ. ಸ್ವಲ್ಪ ದೂರ ಹೋಗುವ ಹೊತ್ತಿಗೆ ರೋಜನ್‌ಕಡ್ಡಿಯು ಬೆಂಕಿ ಕೆಂಡದ  ಕಾವಿಗೆ ಸೀದು ಹೋಗುತ್ತದೆ. ಕೆಂಡವು ಮುಣುಗಿ ಇದ್ದಿಲಾಗುತ್ತದೆ. ಅದನ್ನು ದಡದಲ್ಲಿ ನಿಮ್ತು ನೋಡುತ್ತಿದ್ದ  ಅವರೆಕಾಳಿಗೆ ಹೊಟ್ಟೆ ಬಿರಿಯುವಂತೆ ಸಿಕ್ಕಾಪಟ್ಟೆ ನಗು ಬರುತ್ತದೆ. ಹೀಗೆ ಅದು ಜೋರಾಗಿ ನಗುತ್ತಿರುವಾಗ ಅದರ ಹೊಟ್ಟೆ ಒಡೆದುಹೋಗುತ್ತದೆ. ಆಗ ದೇವರು ಬಂದು ಅವರೆಕಾಳಿನ ಹೊಟ್ಟೆಗೆ ಹೊಲಿಗೆ ಹಾಕುತ್ತದೆ. ಆ ಹೊಲಿಗೆಯೇ ಈಗಲೂ ಅವರೆ ಕಾಳಿನ ಮೇಲಿರುವ ಬಿಳಿ ಪಟ್ಟೆ.

(ತುಮಕೂರು ಜಿಲ್ಲೆ ಶಿರಾ ತಾಲ್ಲೂಕು ಕಳ್ಳಂಬೆಳ್ಳದ ನರಸಿಂಹಜ್ಜಿಕಟ್ಟೆ ರಂಗಜ್ಜಿ ಹೇಳಿದ್ದು)