ಮುಗಿದಿಹುದು ಹಿರಿದೊಂದು ಔತಣ
ಸುತ್ತಲೂ ಬಿರು ಬಿಸಿಲು ರಣರಣ !
ಮೂಕ ಸಾಕ್ಷೀಭೂತ ಮುದಿಯ ಹುಣಿಸೆಯ ಮರದ
ಮರುಕ ಸುಯ್ಯಿತು ಗಾಳಿಯೊಲು ಮಂದ ಮಂದ,
ದೂರದ ಗುಡ್ಡ ಮೌನ ನಿಷ್ಪಂದ
ಎಷ್ಟೊಂದು ಅತಿಥಿ ಅಭ್ಯಾಗತರ ಸಂತೆ ನೆರೆಯಿತು ಇಲ್ಲಿ
ಏನು ಬಿಸವಂದ !
ಹಸಿರು ಚಪ್ಪರವಿಲ್ಲ, ಓಲಗದ ದನಿಯಿಲ್ಲ,
ಆದರೂ ಊಟ ಪುಷ್ಕಳ !
ಮೊಳೆವ ಹಸುರಿನ ಹಸೆಯ ಬಯಲು ಮಂಟಪದಲ್ಲಿ
ನೂರು ಭೋಜನ ಪ್ರಿಯರ ಕೋಲಾಹಲ !
*     *     *
ಔತಣಕೆ ಕರೆ ಬೇಕೆ ?
ಅಡಿಗೆಯ ಕಂಪು ಮುಗಿಲೆತ್ತರಕೆ ಕುಣಿಕೆಯನೆಸೆದು
ಸೆಳೆದಿರುವಾಗ, ಆಹ್ವಾನಪತ್ರಗಳ ಹಂಚಬೇಕೇ ?
ಇಳಿದು ಬಂದವು ನೂರು ರೆಕ್ಕೆ ಕೊಕ್ಕಿನ ಬಳಗ
ಶ್ವಾನವಾದನ ಗೀತ ಸ್ವಾಗತಿಸಲು,
ಸಾಗಿತೌತಣ ಇಲ್ಲಿ ಮೂರು ಹಗಲು !

ಉಕ್ಕಿನ ಕೊಕ್ಕು ಕೆಂಗಣ್ಣ ಬೆಳಕನು ಬಿಟ್ಟು
ಬಗಿಯತೊಡಗಿದುವಿಲ್ಲಿ ಕರುಳ ತೊಡಕ,
ನರನರವ ಕಕಣವನಗಿದು ಚಪ್ಪರಿಸಿದುವು
ಕಡೆಗಾಣುವನಕ.

ಹದ್ದು ನಾಯಿಯ ವಿಜ್ಞಾನ ಬುದ್ಧಿಯ ಹಲ್ಲು
ಬಿಚ್ಚಿ ನೋಡಿದುವಿಲ್ಲೆ ಪ್ರಯೋಗಶಾಲೆ
ಕಡೆಗೆ ಉಳಿದಿಹುದಿಷ್ಟೆ – ಕಂಕಾಲಮಾಲೆ !

ಯಾರವನು ಯಾತ್ರಿಕ ?
ಇಲ್ಲಿ ನಿಲ್ದಾಣದಲಿ ತನ್ನ ಕಂತೆಯನಿಂತು
ಒಗೆದು ನಡೆದಿಹನೆತ್ತ ? ಯಾವ ಲೋಕ ?
ನನಗೆ ನನಗೆನ್ನುತಿವೆ ಗೃಧ್ರಶುನಕ !
ಕಡಗೆ ಉಳಿದಿಹುದೇನು ? ದೊಡ್ಡ ಎಲುಬಿನ ಗೂಡು :
ಮನೆಮುರಿದು, ಗೋಡೆಗಳುದುರಿ, ಹೆಂಚೆಲ್ಲ ಹಾರಿ,
ನಿಂತಿಹುದು ತೊಲೆ ಕಂಬ ಗಳು ಬಿಗಿದ ಮಾಡು !
*     *     *
ಕರೆಯುತಿದೆ ಹಸಿರು ಚಪ್ಪರವದಿಗೋ
ಲಲಿತ ನಾಗಸ್ವರದ ಮೋಡಿಯಲ್ಲಿ.
ಆ, ಅದೋ ಮದುವೆ ಮನೆ, ಅಡಿಗೆ ಆಗಿರಬಹುದು
ಜನರು ಕೂತಿರಬಹುದು ಪಂಕ್ತಿಯಲ್ಲಿ
ಥೂ, ಏನಿದೇನಿದು ಇಲ್ಲಿ, ಈ ಹೊಲದ ಮಣ್ಣಿನಲಿ
ಮುದಿ ಎತ್ತು ಸತ್ತಿಹುದು ದುರ್ವಾಸನೆ,
ರಣಹದ್ದುಗಳ ಊಟ ಪೂರೈಸಿದೆ
*     *     *
ತಾನೆ ಉತ್ತುದು ಹೊಲವು
ತಿಂಗಳೊಂದರ ಹಿಂದೆ ಈ ಇದೇ ಹೆಗಲಿನಲಿ
ಇತ್ತು ನೊಗವು,
ಹರಿದು ಚೆಲ್ಲಾಪಿಲ್ಲಿಯಾಗಿ ಬಿದ್ದಿಹ ದೇಹ
ಈ ಮಣ್ಣ ಕಣಕಣವ ಉತ್ತುದುಂಟು.
ಯಾರು ಬಿಟ್ಟರು ಕಡೆಗೆ ಮಣ್ಣು ಕೈಬಿಟ್ಟೀತೆ ?
ಅದಕು ನಮಗೂ ನಿತ್ಯ ತಾಯಿನಂಟು.

ಬಂದ ಮಳೆಯನು ಕುಡಿದು
ಕವಚವನ್ನೊಡೆದು
ಮುಗಿಲು ನೋಡಲು ಬಂದ ಹಸಿರ ಪಯಿರು,
ಬಿದ್ದ ಬಾಳಿನ ಸುತ್ತ ಶಾಸನವ ಬರೆದಿಹುದು
ಚೆಲುವಿನುಸಿರು !