ಬೆಂಗಳೂರಿನ ಪ್ರಖ್ಯಾತ ಕ್ಯಾನ್ಸರ್ ಆಸ್ಪತ್ರೆಯ ವೈದ್ಯರೊಬ್ಬರು ಮೊನ್ನೆ ನಡೆದ ವಿಚಾರಸಂಕಿರಣವೊಂದರಲ್ಲಿ ಮಾತನಾಡುತ್ತ, ನಾನು ಕ್ಯಾನ್ಸರ್‌ಗೆ ಬಳಸುವ ಔಷಧಗಳು ೨೦ರಿಂದ ೨೨.  ಆದರೆ ಮಾರುಕಟ್ಟೆಯಲ್ಲಿ ೨೦೦ಕ್ಕೂ ಹೆಚ್ಚು ಔಷಧಿಗಳಿವೆ.  ಪ್ರತಿದಿನ ಔಷಧ ಕಂಪೆನಿಯ ಪ್ರತಿನಿಧಿಗಳು ಭೇಟಿಯಿತ್ತು ತಮ್ಮ ಕಂಪೆನಿಯ ಔಷಧವನ್ನೇ ರೋಗಿಗಳಿಗೆ ಸೂಚಿಸಲು ಹೇಳುತ್ತಾರೆ.  ಅದಕ್ಕಾಗಿ ಆಮಿಷಗಳನ್ನು ಒಡ್ಡುತ್ತಾರೆ.  ಇದಕ್ಕೆ ಬಲಿಯಾಗಿ ಅವಶ್ಯವಿದ್ದೋ, ಇಲ್ಲದೆಯೋ ಅವರು ನೀಡುವುದನ್ನೆಲ್ಲಾ ರೋಗಿಗಳಿಗೆ ನೀಡುವ ವೈದ್ಯರೂ ನಮ್ಮಲ್ಲಿದ್ದಾರೆ.  ಅವುಗಳ ಬೆಲೆ ಕುರಿತು ಹೇಳಹೊರಟರೆ ಅದೇ ಒಂದು ವಿಚಾರಸಂಕಿರಣವಾದೀತು ಎಂದರು.

ನೀವು ನಂಬುತ್ತೀರೋ ಇಲ್ಲವೋ, ನಮ್ಮ ದೇಶದಲ್ಲಿರುವ ಎಲ್ಲಾ ರೋಗಗಳನ್ನು ಪಟ್ಟಿ ಮಾಡಿದರೆ ಸಿಗುವುದು ೪೦ ರೋಗಗಳು ಮಾತ್ರ.  ಉಳಿದದ್ದೆಲ್ಲಾ ರೋಗಲಕ್ಷಣಗಳು, ಉಪಯೋಗಗಳು.  ಅವುಗಳಿಗೆ ಬೇಕಾಗುವ ಔಷಧಿಗಳು ಕೂಡಾ ಹೆಚ್ಚೆಂದರೆ ೨೫೦.  ಆದರೆ ವಾಸ್ತವ ಬೇರೆ.  ನಮ್ಮಲ್ಲಿ ೮ ಸಾವಿರ ಹೆಸರಿನ ಔಷಧಿಗಳಿವೆ.  ಅವು ಒಂದಕ್ಕಿಂತ ಒಂದು ಹೆಚ್ಚಿನ ಬೆಲೆಯವು, ಒಂದಿಷ್ಟು ಔಷಧಿಗಳು ಅಸ್ತಿತ್ವವೇ ಇಲ್ಲದ ಕಂಪೆನಿಗಳದ್ದಾದರೆ, ಹೆಸರಾಂತ ಕಂಪೆನಿಗಳು ಅತ್ಯಂತ ಕಡಿಮೆ ಬೆಲೆಯ ಔಷಧಿಗಳನ್ನು ೧೦೦ರಿಂದ ೮೦೦ ಪಟ್ಟು ಜಾಸ್ತಿ ಬೆಲೆಗೆ ಮಾರಾಟ ಮಾಡುತ್ತಿವೆ.

೧೯೭೫ರವರೆಗೆ ಇದನ್ನೆಲ್ಲ ಪರಿಶೀಲಿಸಲು ಯಾವುದೇ ಕಾನೂನು, ಸೂತ್ರಗಳು ಇರಲಿಲ್ಲ.  ಆಗ ಹಾಥಿ ಕಮಿಟಿಯ ರಚನೆಯಾಯಿತು.  ಬೇಡದ ಹಾಗೂ ಅವೈಜ್ಞಾನಿಕ ಔಷಧಿಗಳ ವಿರುದ್ಧ ಗ್ರಾಹಕರಿಂದ ದೂರು ಬಂದರೂ ದೂರಿಗೆ ನೀಡಬೇಕಾಗಿದ್ದ ಮಾನ್ಯತೆ ನೀಡಲಿಲ್ಲ.

ನಮಗೀಗ ಎಲ್ಲವೂ ಜಾಗತಿಕ ಮಟ್ಟದಲ್ಲೇ ಆಗಬೇಕಿದೆ.  ನಮ್ಮ ಚಿಂತನೆ, ಆಹಾರ, ವಸತಿ ಹಾಗೂ ಆರೋಗ್ಯ ಕೂಡ.  ಅದರಂತೆ ಎಲ್ಲೆಡೆ ಸಾಮಾನ್ಯ ಬೆಲೆಯಲ್ಲಿ ಸಿಗುತ್ತಿದ್ದ ಔಷಧಿಗಳೆಲ್ಲಾ ಹೋದಬಾರಿಯ ಬಜೆಟ್ ಅನ್ವಯ ತೆರಿಗೆ ಸೂತ್ರದಡಿ ಸಿಲುಕಿದವು.  ಇದರಿಂದ ಲಾಭ ಹೊಂದಿದ್ದು ಹೆಸರಾಂತ ಕಂಪೆನಿಗಳು.  ಅವು ಶೇ.೫೦೦ರಿಂದ ಶೇ.೧೦೦೦ದಷ್ಟು ಬೆಲೆ ಹೆಚ್ಚಿಸಿ, ತಮ್ಮ ಜೇಬನ್ನು ತುಂಬಿಸಿಕೊಂಡವು.  ಸರಕಾರ ಸಹ ಬಡವರ ಅಗತ್ಯ ಪೂರೈಸುತ್ತಿದ್ದ ಹಾಗೂ ಅತ್ಯುತ್ತಮ ಗುಣಮಟ್ಟದ ಔಷಧಿಗಳನ್ನು ನೀಡುತ್ತಿದ್ದ ಸಣ್ಣ ಕಂಪೆನಿಗಳನ್ನೆಲ್ಲಾ ಧೂಳೀಪಟಗೊಳಿಸಿಬಿಟ್ಟಿತು.  (ಇನ್ಸಿಡಾಲ್ ಕೇವಲ ೪೦ ಪೈಸೆ ಇತ್ತು.  ಅದೀಗ ಇನ್ಸಿಡೇಲ್ ಎಂಬ ಹೆಸರಿನಲ್ಲಿ ರೂ.೨.೫೦ಕ್ಕೆ ಮಾರಾಟವಾಗುತ್ತಿದೆ)

ಔಷಧಿಗಳ ಬೆಲೆಯನ್ನು ನಿಯಂತ್ರಣಗೊಳಿಸುವ ಮಾತನ್ನು ವಿತ್ತ ಮಂತ್ರಿಗಳು ಪ್ರತಿಬಾರಿಯೂ ಜಪಿಸುತ್ತಾರೆ.  ಭಾರತೀಯರ ಆರೋಗ್ಯ-ಸಮಗ್ರ ಜನತೆಯ ಆರೋಗ್ಯಾಭಿವೃದ್ಧಿ ವಿಚಾರವನ್ನು ಸಾದ್ಯಂತವಾಗಿ ವಿವರಿಸುವ ಅವರು ಔಷಧಿಗಳ ಕಸ್ಟಮ್ಸ್, ಎಕ್ಸೈಜ್ ಡ್ಯೂಟಿ ಹಾಗೂ ಮಾರಾಟ ತೆರಿಗೆಯನ್ನು ಹೆಚ್ಚಿಸುತ್ತಲೇ ಇದ್ದಾರೆ.

ಉದಾ: ರಿಫಾಂಪಿಸಿನ್ ಔಷಧಿ ಅತ್ಯಂತ ಹೆಚ್ಚಿನ ಬೆಲೆಯ ಆದರೆ ಹೆಚ್ಚು ಪ್ರಯೋಜಕವೆಂದು ಹೆಸರಾದ ಟಿ.ಬಿ. ಔಷಧಿ.  ಇದರ ಮೇಲೆ ಶೇ.೧೬ರಷ್ಟು ಎಕ್ಸೈಜ್ ಡ್ಯೂಟಿ ಬಿದ್ದಿದೆ.  ಇದರಂತೆ ಇನ್ನೂ ೨೧ ಔಷಧಿಗಳಿಗೆ ಡ್ಯೂಟಿ ವಿಧಿಸಲಾಗಿದೆ.  ಇಲ್ಲೊಂದು ಚೋದ್ಯದ ವಿಷಯವೆಂದರೆ ಟಿ.ಬಿ.ಗೆ ಕಾರಣವಾಗುವ ಬೀಡಿ, ಗುಟ್ಕಾ, ಸಿಗರೇಟ್ ಮುಂತಾದ ತಂಬಾಕಿನ ಪದಾರ್ಥಗಳು ಇಂತಹ ತೆರಿಗೆ ಬಾಣಕ್ಕೆ ಸಿಗುವುದಿಲ್ಲ.  ಅಲ್ಲದೆ ತೆರಿಗೆ ಹೊಡೆತಕ್ಕೆ ಸಿಕ್ಕ ೨೧ ಔಷಧಿಗಳು ಹೆಚ್ಚಾಗಿ ಉಸಿರಾಟ ಸಮಸ್ಯೆ ಮತ್ತು ಬಲಹೀನತೆಗೆ ಸಂಬಂಧಪಟ್ಟ ಕಾಯಿಲೆಗಳಿಗೆ ನೀಡುವ ಔಷಧಗಳು.  ಉಸಿರಾಟ ಮತ್ತು ಬಲಹೀನತೆಗೆ ಸಂಬಂಧಪಟ್ಟ ರೋಗಗಳು ಬರುವುದು ಏರ್‌ಕಂಡಿಷನ್ಡ್ ಮನೆಯೊಳಗೆ ಕುಳಿತವರಿಗೋ ಅಥವಾ ಬಡವರಿಗೋ?

ಸರಕಾರ ಟಿ.ಬಿ, ಮಲೇರಿಯಾ, ಕುಷ್ಠರೋಗ ಕುರಿತು ಒಂದಿಲ್ಲೊಂದು ಯೋಜನೆ ರೂಪಿಸುತ್ತದೆ.  ಆದರೆ ವಾಯುಮಾಲಿನ್ಯ, ಆಹಾರದ ಕಲಬೆರಕೆ ಮುಂತಾದವುಗಳ ಪರಿಣಾಮ ಬಡತನ ರೇಖೆಯ ಕೆಳಗಿನವರೆಗೆ ಮಾತ್ರ ಆಗುತ್ತದೆ.  ಇದರಿಂದ ಅವರ ಬಲಹೀನತೆ ಮತ್ತು ಉಸಿರಾಟದ ರೋಗಗಳು ಹೆಚ್ಚುತ್ತಿವೆ.  ಆದರೂ ಅವರಿಗೆ ಅವಶ್ಯವಿರುವ ಔಷಧಿಗಳ ಮೇಲೆ ಈ ದೌರ್ಜನ್ಯವೇಕೆ?

ತಜ್ಞರ ಪ್ರಕಾರ ೨೦೦೧-೦೨ರ ಬಜೆಟ್ ಅತ್ಯಂತ ತಜ್ಞ ಹಾಗೂ ಸುಸ್ಥಿರ ಕೈಗಾರಿಕಾ ನೀತಿ ಹೊಂದಿದೆ.  ಹಣಕಾಸು ಮಂತ್ರಿಗಳು ಔಷಧ ಬೆಲೆ ನಿಯಂತ್ರಣ ಕಾಯಿದೆಯಡಿ ಹೆಚ್ಚುತ್ತಿರುವ ಔಷಧಿಗಳ ಸಂಖ್ಯೆಯನ್ನು ಕಡಿಮೆಗೊಳಿಸುತ್ತೇವೆಂದರು.  ವರ್ತಮಾನದಲ್ಲಿ ೭೪ ಬಗೆಯ ಔಷಧಿಗಳು ಮತ್ತು ಅದರ ತಯಾರಿಕಾ ರೀತಿ ಔಷಧ ನಿಯಂತ್ರಣ  ಕಾಯಿದೆಯ ಅಂಕೆಯಲ್ಲಿದೆ.  ಇದು ಎಲ್ಲಾ ಔಷಧಿ ಕಂಪೆನಿಗಳ ಶೇ.೩೫ರಷ್ಟು ಮಾರಾಟವಾಗುತ್ತಿರುವ ಔಷಧಿಗಳನ್ನೊಳಗೊಂಡಿದೆ.  ಆದರೆ ಇದು ಶೇ.೨೫ರಷ್ಟು ಆಗಲಿ ಎಂದು ವರ್ತಕರು ಒತ್ತಾಯಿಸಿದ್ದಾರೆ.  ಇದರಲ್ಲಿ ವರ್ತಕರು ಗೆಲ್ಲುವ ಸಾಧ್ಯತೆಯೇ ಹೆಚ್ಚು.

ಇನ್ನೊಂದು ದಿಕ್ಕಿನಲ್ಲಿ ನ್ಯಾಷನಲ್ ಫಾರ್ಮಾಪ್ರೈಸಿಂಗ್ ಅಥಾರಿಟಿ ಎನ್ನುವ ಸರಕಾರಿ ಸಂಸ್ಥೆ ಇತ್ತೀಚೆಗೆ ರಾನಿಟಿಡಿನ್ ಹಾಗೂ ಪೆನ್ಸಿಲಿನ್‌ಗಳ ಬೆಲೆ ಇಳಿಸಿತು.  ಸಂಸೆಗೆ ಫಾರ್ಮಾ ಉದ್ಯಮದ ಮೇಲೆ ಸ್ವಲ್ಪಮಟ್ಟಿನ ನಿಯಂತ್ರಣವಿದೆ.  ಈ ಎಲ್ಲಾ ವಾಸ್ತವ ನೋಡಿದರೆ ಬಜೆಟ್ ಹಾಗೂ ಸರಕಾರದ ಬಗ್ಗೆ ನಂಬಿಕೆ ಮೂಡುತ್ತದೆ.  ಆದರೆ ಇವು ಅಧಿಕಾರಶಾಹಿಗಳ ಕೈಯಲ್ಲಿ ಹೇಗೆ ತಿರುಚಲ್ಪಡುತ್ತವೆ ಎನ್ನುವ ವಿಚಾರದ ಮೇಲೆ ಎಲ್ಲವೂ ನಿಂತಿದೆ.