೨೧. ಶತಾವರಿ

ಶತಾವರಿ ಒಂದು ಬಹುಪಯೋಗಿ ಗಿಡಮೂಲಿಕೆ. ಇದರ ಗಡ್ಡೆಯಲ್ಲಿರುವ ಔಷಧೀಯ ಗುಣಗಳಿಂದಾಗಿ ಇದಕ್ಕಿಂದು ಎಲ್ಲಿಲ್ಲದ ಬೇಡಿಕೆ. ಇದರ ಗಡ್ಡೆಯನ್ನು ಎಣ್ಣೆಯ ತಯಾರಿಕೆಗೆ, ಕಾಮೋತ್ತೇಜಕವಾಗಿ, ಆರೋಗ್ಯವರ್ಧಕವಾಗಿ, ಮೂತ್ರಸಂಬಂಧಿ ರೋಗಗಳ ಶಮನ ಇತ್ಯಾದಿಗಳಲ್ಲಿ ಬಳಸಲಾಗುತ್ತದೆ.

ಹಂಚಿಕೆ: ಏಶ್ಯಾ, ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಖಂಡಗಳಲ್ಲಿ ಕಾಣ ಸಿಗುವ ಈ ಬಳ್ಳಿ ಭಾರತದಾದ್ಯಂತ ಬೆಳೆಯುತ್ತಿದೆ. ಭಾರತದಲ್ಲಿ ಸಮುದ್ರಮಟ್ಟಕ್ಕಿಂತ ಸುಮಾರು ೪೦೦ ಫೀಟುಗಳಷ್ಟು ಎತ್ತರದಲ್ಲಿ ಇದನ್ನು ಕಾಣಬಹುದು. ನಮ್ಮಲ್ಲಿಂದು ಇದನ್ನು ಅರಣ್ಯ ಪ್ರದೇಶದಲ್ಲಿ ಸ್ವಾಭಾವಿಕವಾಗಿ  ಮತ್ತು ದೇಶದ ನಾನಾ ರಾಜ್ಯಗಳಲ್ಲಿ ಕೃಷಿಯ ಮೂಲಕವಾಗಿ ಕಂಡುಕೊಳ್ಳಬಹುದು. ಒಂದು ಅಂದಾಜು ಪ್ರಕಾರ ಭಾರತದಲ್ಲಿ ವಾರ್ಷಿಕವಾಗಿ ಸುಮಾರು ೫೦೦ ಟನ್‌ಗಳಷ್ಟು ಶತಾವರಿ ಗಡ್ಡೆಗೆ ಬೇಡಿಕೆಯಿದೆ. ಆದರೆ ಈ ಸಸ್ಯವಿಂದು ನಾಶದಂಚಿನಲ್ಲಿರುವುದರಿಂದ ಬೇಡಿಕೆಗೆ ಅನುಗುಣವಾದ ಪೂರೈಕೆಯಾಗುತ್ತಿಲ್ಲ.

ಸಸ್ಯ ಪರಿಚಯ

ವೈಜ್ಞಾನಿಕವಾಗಿ ‘ಅಸ್‌ಪರಾಗಸ್‌ ರೇಸಿಮೋಸಸ್‌’ ಎಂದು ಕರೆಯಲ್ಪಡುವ ಶತಾವರಿಯು ಲಿಲ್ಲಿಯೇಸಿಯಾ ಕುಟುಂಬಕ್ಕೆ ಸೇರಿದೆ. ಇದಕ್ಕೆ ಹಿಂದಿಯಲ್ಲಿ ಶತಾವರ್, ಸಂಸ್ಕೃತದಲ್ಲಿ ಶತಮತಿ, ಕನ್ನಡದಲ್ಲಿ ಮಜ್ಜಿಗೆ ಗಡ್ಡೆ, ಹಲವು ಮಕ್ಕಳ ತಾಯಿ ಗಿಡ, ಹುಲಿಉಗುರು ಬಳ್ಳಿ, ಉದ್ರಿಗಿಡ, ಇತ್ಯಾದಿಗಳಾಗಿ ಹೆಸರುಗಳಿವೆ. ಇದೊಂದು ಮುಳ್ಳುಗಳಿರುವ ಮರವೇರುವ ಬಳ್ಳಿ. ಬಿಳಿಯ ಹೂವನ್ನು ಹೊರಸೂಸುವ ಗಡ್ಡೆಯನ್ನು ಹೊಂದಿರುವ ಈ ಬಳ್ಳಿಯ ಎಲೆಗಳು ತ್ರಿಕೋನಾಕಾರದಲ್ಲಿದೆ.

ಕೃಷಿ ವಿಧಾನ

ಮಣ್ಣು ಮತ್ತು ಹವಾಗುಣ ವಿವಿಧ ರೀತಿ ಹವೆಯಲ್ಲಿ ಬೆಳೆಯಬಲ್ಲ ಶತಾವರಿ ಬಳ್ಳಿಯು ಮರಳು ಬೆರಕೆಯಾಗಿರುವ ಫಲವತ್ತಾದ ಮಣ್ಣನ್ನು ಬಯಸುವುದು. ನೀರು ಸರಾಗವಾಗಿ ಇಳಿದು ಹೋಗುವ ನಸು ಕೆಂಪು ಮಣ್ಣು ಇದರ ಕೃಷಿಗೆ ಯೋಗ್ಯ. ನೀರು ನಿಲ್ಲುವಂತಹ ಮಣ್ಣು ಇದಕ್ಕಾಗದು. ಕಲ್ಲುಮಣ್ಣು ಕೂಡ ಇದರ ಕೃಷಿಗೆ ಸೂಕ್ತವಾಗಬಲ್ಲದು.

ಸಸ್ಯಾಭಿವೃದ್ಧಿ: ಶತಾವರಿ ಸಸ್ಯವನ್ನು ಬೇರಿನಿಂದ ಹೊರಟ ಕುಡಿ ಮತ್ತು ಬೀಜಗಳಿಂದ ಪಡೆಯಬಹುದು. ಬೇರಿನಿಂದ ಬಂದ ಕುಡಿಯಾಗಿದ್ದಲ್ಲಿ ಒಂದು ವರ್ಷದ ಬಳ್ಳಿಯಿಂದ ಸುಮಾರು ೬-೧೦ ಕುಡಿಗಳನ್ನು ಗಳಿಸಬಹುದು. ಈ ಕುಡಿಗಳನ್ನು ತುಂಡು ಮಾಡಿ ಪಾಲಿಥಿನ್‌ ಚೀಲಗಳಲ್ಲಿ ನಾಟಿ ಮಾಡಿ ನೆರಳಿನಲ್ಲಿಡಬೇಕು. ಈ ರೀತಿಯಾದ ವಿಧಾನವನ್ನು ಮಳೆಗಾಲ ಆರಂಭವಾಗುವ ಎರಡು ತಿಂಗಳು ಮೊದಲು ಮಾಡಬೇಕು. ಇದಕ್ಕೆ ಆಗಾಗ ನೀರುಣಿಸುತ್ತಿರಬೇಕು.

ಶತವಾರಿ ಬಳ್ಳಿಯು ವಾರ್ಷಿಕವಾಗಿ ಎರಡರಿಂದ ಮೂರು ಬಾರಿ ಹೂವನ್ನು ಬಿಡುವುದು. ಪ್ರತಿ ಸಲ ಇದು ಕೇವಲ ಒಂದು ಆರೋಗ್ಯಕರ ಬೀಜವನ್ನು ಮಾತ್ರ ಕೊಡುವುದರಿಂದ ಇದನ್ನು ಜಾಗರೂಕತೆಯಿಂದ ಸಂರಕ್ಷಿಸಬೇಕು. ಈ ಬೀಜವನ್ನು ದಶಂಬರ-ಜನವರಿಯಲ್ಲಿ ಸಂಗ್ರಹಿಸಿ ಸುಮರು ೪೦ ದಿನಗಳಷ್ಟು ಶೇಖರಿಸಿಟ್ಟು ಬಳಿಕ ಅವನ್ನು ಸಸ್ಯದ ತಯಾರಿಗಾಗಿ ಉಪಯೋಗಿಸಬಹುದು. ಬೀಜದಿಂದ ಸಸ್ಯ ತಯಾರಿಸುವಾಗ ನರ್ಸರಿ ಮಡಿಯನ್ನು ಮೊದಲೇ ಹಟ್ಟಿ ಗೊಬ್ಬರ, ಉತ್ತಮ ಮಣ್ಣು ಹಾಕಿ ಮಿಶ್ರ ಮಾಡಿಟ್ಟು ಹೊಚ್ಚ ಹೊಸದಾದ ಬೀಜವನ್ನು ಬಿತ್ತಬೇಕು. ಈ ಬೀಜವನ್ನು ಮುನ್ನಾದಿನ ನೀರಲ್ಲಿ ಹಾಕಿಟ್ಟು ಬಿತ್ತುವುದು ಒಳ್ಳೆಯದು. ಬೀಜವನ್ನು ಗೋಮೂತ್ರದಲ್ಲಿ ನೆನೆಸಿಟ್ಟು ಬಿತ್ತಿದಲ್ಲಿ ಉತ್ತಮ ಫಲಿತಾಂಶ ದೊರಕಲು ಸಾಧ್ಯ. ನರ್ಸರಿ ಮಡಿಯನ್ನು ಸದಾ ಒದ್ದೆಯಾಗಿಡಬೇಕು. ಬಿತ್ತಿದ ಬೀಜ ೧೦ ರಿಂದ ೧೫ ದಿನಗಳೊಳಗೆ ಮೊಳಕೆಯೊಡೆದು ೪೦ ರಿಂದ ೪೫ ದಿನಗಳಲ್ಲಿ ನಾಟಿಗೆ ಸಿದ್ಧವಾಗುವುದು.

ಕೃಷಿ ಭೂಮಿಯ ತಯಾರಿ:  ಶತಾವರಿ ಕೃಷಿಗೆ ನಿಗದಿ ಪಡಿಸಿದ ಭೂಮಿಯನ್ನು ೨೦ ಸೆಂ.ಮೀ. ಆಳಕ್ಕೆ ಎರಡರಿಂದ ಮೂರು ಬಾರಿ ಉಳುಮೆ ಮಾಡಬೇಕು. ಭೂಮಿಯಲ್ಲಿರುವ ಕಳೆ ನಿರ್ಮೂಲನೆ ಮಾಡಿ ೨೫ ರಿಂದ ೩೦ ಟನ್‌ ಹುಡಿಯಾದ ಹಟ್ಟಿಗೊಬ್ಬರವನ್ನು ಒಂದು ಹೆಕ್ಟೇರ್ ಪ್ರದೇಶಕ್ಕೆ ಕೊಡಬೇಕು. ಕೃಷಿ ಭೂಮಿಯನ್ನು ಐದು ಮೀಟರು ಉದ್ದ ೩ ಮೀ ಅಗಲದ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ ಅದರಲ್ಲಿ ೧೫ ಸೆಂ.ಮೀ ಎತ್ತರದ ದಿಣ್ಣೆಯನ್ನು ೪೫ ಸೆಂ.ಮೀ. ಅಂತರದಲ್ಲಿ ತಯಾರುಗೊಳಿಸಬೇಕು.

ನಾಟಿ ವಿಧಾನ: ಮೇಲೆ ತಿಳಿಸಿದಂತೆ ತಯಾರಾದ ದಿಣ್ಣೆಗಳಲ್ಲಿ ೩೦ ರಿಂದ ೬೦ ಸೆಂ.ಮೀ ಅಂತರವನ್ನಿಟ್ಟುಕೊಂಡು ಸಸ್ಯವನ್ನು ನಾಟಿ ಮಾಡಬೇಕಲು. ಒಂದು ಹೆಕ್ಟೇರ್ ಭೂಮಿಗೆ ಸುಮಾರು ೨೮,೦೦೦ ದಿಂದ ೪೦ ಸಾವಿರದ ತನಕ ಸಸ್ಯವನ್ನು ನಾಟಿ ಮಾಡಬಹುದು. ಬಳಿಕ ಹದವರಿತ ನೀರಾವರಿ ವ್ಯವಸ್ಥೆ ಇಲ್ಲಿಗಾಗಬೇಕು.

ಗೊಬ್ಬರ: ದೇಶದ ನಾನಾ ಭಾಗಗಳಲ್ಲಿ ವಾಣಿಜ್ಯ ರೀತಿಯಲ್ಲಿ ಈ ಕೃಷಿಯನ್ನು ಮಾಡುವ ರೈತರು ಇದರ ಕೃಷಿಗೆ ಹೆಚ್ಚಾಗಿ ಮಣ್ಣಿನ ಮೇಲ್ಪದರ ಮತ್ತು ಹಟ್ಟಿ ಗೊಬ್ಬರವನ್ನು ಕೊಡುತ್ತಾರೆ. ಹೆಚ್ಚಿನ ಫಲಿತಾಂಶಕ್ಕಾಗಿ ಹೆಕ್ಟೇರೊಂದರ ಸುಮರು ೨೦೦ ಕಿ.ಗ್ರಾಂ ಸಾರಜನಕ, ೧೦೦ ಕಿ.ಗ್ರಾಂ ರಂಜಕ, ಮತ್ತು ೧೦೦ ಕಿ.ಗ್ರಾಂ ಪೊಟ್ಯಾಷ್‌ನ್ನು ಕೊಡಬಹುದಾಗಿದೆ. ಸಾರಜನಕ ಮತ್ತು ಪೊಟ್ಯಾಷ್‌ನ್ನು ೨ ತಿಂಗಳ ಅಂತರದಲ್ಲಿ ಮೂರು ಸಾರಿ ಕೊಡಬೇಕು.

ಕಳೆ ನಿಯಂತ್ರಣ: ಶತಾವರಿಯು ಮೇಲಕ್ಕೇರುವ ಬಳ್ಳಿಯಾದ್ದರಿಂದ ಇದರ ಬೆಂಬಲಕ್ಕೆ ಕಂಬದ ಅಗತ್ಯವಿದೆ. ಇದರೊಂದಿಗೆ ಆರಂಭದ ಹಂತದಲ್ಲಿ ೨ರಿಂದ ೩ ಬಾರಿ ಕಳೆ ಕೀಳಬೇಕಾಗುವುದು.

ನೀರಾವರಿ: ಸಾಮಾನ್ಯವಾಗಿ ಈ ಬಳ್ಳಿಗೆ ಬೇಸಿಗೆ ಕಾಲದಲ್ಲಿ ೧೦ ರಿಂದ ೧೫ ದಿನಗಳಿಗೊಮ್ಮೆ ಮತ್ತು ಚಳಿಗಾಲದಲ್ಲಿ ೨೦ ರಿಂದ ೨೫ ದಿನಗಳಿಗೊಮ್ಮೆ ನೀರುಣಿಸಬೇಕು. ಈ ಬಳ್ಳಿಗೆ ಯಾವುದೇ ವಿಶಿಷ್ಟ ಕೀಟ ಮತ್ತು ರೋಗಗಳ ಭಾದೆ ಈ ತನಕ ಕಂಡು ಬಂದಿಲ್ಲ.

ಕೊಯ್ಲು: ಈ ಬಳ್ಳಿಯು ಫೆಬ್ರವರಿ-ಮಾರ್ಚ್ ತಿಂಗಳುಗಳಲ್ಲಿ ಹೂವುಗಳನ್ನು ಬಿಡುವುದು. ಏಪ್ರಿಲ್‌ನಲ್ಲಿ ಕೆಂಪು ಹಣ್ಣುಗಳನ್ನು ಕಾಣಬಹುದು. ಪ್ರತಿಯೊಮದು ಬಳ್ಳಿಯು ೧೬ ರಿಂದ ೨೦ ಉದ್ದದ ತಿರುಳುಳ್ಳ ನಳಿಕೆಗಳು ಇದರಲ್ಲಿ ಉತ್ಪಾದನೆಯಾಗುವುದು. ಈ ನಳಿಕೆಗಳು ಹನ್ನೆರಡರಿಂದ ಹದಿನಾಲ್ಕು ತಿಂಗಳುಗಳಲ್ಲಿ ಕೊಯ್ಲಿಗೆ ಬರುವುದು. ಒಟ್ಟಾರೆಯಾಗಿ ನಾಟಿಯಾಗಿ ೪೦ ತಿಂಗಳುಗಳ ಬಳಿಕ ಇದರ ಬೇರನ್ನು ಅಗೆದು ತೆಗೆದು ಶುಚಿಗೊಳಿಸಬಹುದು. ಗಡ್ಡೆಯ ಹೊರಕವಚವನ್ನು ತೆಗೆಯಲು ಅದನ್ನು ಹತ್ತು ನಿಮಿಷಗಳ ಕಾಲ ಕುದಿಯುವ ನೀರಲ್ಲಿ ಹಾಕಬೇಕು. ಬಳಿಕ ಅದನ್ನು ತಣ್ಣೀರಲ್ಲಿ ಹಾಕಬೇಕು. ಆ ಬಳಿಕ ಅದನ್ನು ಸಣ್ಣ ಸಣ್ಣ ತುಂಡುಗಳಾಗಿಸಿ ನೆರಳಲ್ಲಿ ಒಣಗಿಸಬೇಕು. ಒಣಗಿದ ತುಂಡುಗಳನ್ನು ಒಂದೂವರೆ ವರ್ಷ ಶೇಖರಿಸಿಡಬಹುದು.

ಇಳುವರಿ: ಒಂದು ಬಳ್ಳಿಯಿಂದ ಸುಮಾರು ೫೦೦-೬೦೦ ಗ್ರಾಂ. ಗಳಷ್ಟು ಗಡ್ಡೆ ಯಾ ಬೇರನ್ನು ಗಳಿಸಲು ಸಾಧ್ಯ. ಒಟ್ಟಾಗಿ ಒಂದು ಹೆಕ್ಟೇರ್ ಗೆ ಸುಮಾರು ೧೨ ರಿಂದ ೧೪ ಟನ್‌ಗಳಷ್ಟು ಹಸಿಗಡ್ಡೆ ಮತ್ತದು ಒಣಗಿದಾಗ ಅದು ೧೦ ರಿಂದ ೧೨ ಕ್ವಿಂಟಾಳ್‌ಗಳಷ್ಟಾಗಬಹುದು.

ವೆಚ್ಚ ಮತ್ತು ಆದಾಯ: ಒಂದು ಹೆಕ್ಟೇರ್ ಶತವಾರಿ ಕೃಷಿಗೆ ತಗಲುವ ಅಂದಾಜು ವೆಚ್ಚ ಸುಮಾರು ೧೧,೦೦೦ ರೂಪಾಯಿಗಳು ಮತ್ತು ಲಭಿಸಬಹುದಾದ ಆದಾಯ ೪೦,೦೦೦ ರೂಪಾಯಿಗಳು. ಒಟ್ಟಾರೆಯಾಗಿ ಸುಮಾರು ೨೯,೦೦೦ ರೂಪಾಯಿಗಳ ಲಾಭಾಂಶ ಗಳಿಸಲು ಸಾಧ್ಯ. ಮಾರುಕಟ್ಟೆಯಲ್ಲಿ ಒಣಬೇರಿಗೆ ಕಿ.ಗ್ರಾಂ ಒಂದರ ರೂಪಾಯಿ ೪೦ ರಿಂದ ೫೦ರ ತನಕ ಬೆಲೆಯಿದೆ.

ಉಪಯೋಗ: ಇದರ ಬೇರಿನಿಂದ ತಯಾರಿಸಲ್ಪಟ್ಟ ಔಷಧಿಯನ್ನು ಮುತ್ರ ಸಂಬಂಧಿ ರೋಗ, ನರಗಳ ರೋಗ, ಹೈಪರ್ ಆಸಿಡಿಟಿ, ಕಣ್ಣಿನ ರೋಗ, ಇತ್ಯಾದಿಗಳನ್ನು ನಿವಾರಿಸಲು ಉಪಯೋಗಿಸಲಾಗುತ್ತಿದೆ.

೨೨. ಸದಾಪುಷ್ಪ

ನೀಲಿ, ಬಿಳಿ, ಗುಲಾಬಿ ಮತ್ತಿತರ ಬಣ್ಣಗಳಿಂದ ಕೂಡಿದ ಹೂವನ್ನು ಬಿಡುವ ಈ ಸಸ್ಯ ನಮ್ಮೆಲ್ಲರ ಅಂಗಳದ ಮುಂದಿದೆ. ಬಹುಕಾಳ ಬಾಳುವ ವರ್ಷದ ಎಲ್ಲಾ ಋತುಗಳಲ್ಲೂ ಹೂ ಬಿಡುವ ಸಸ್ಯವಿದಾದ್ದರಿಂದ ಇದಕ್ಕೆ ಸದಾಪುಷ್ಪ, ನಿತ್ಯಪುಷ್ಪ ಎಂಬುದಾಗಿ ಕರೆಯುತ್ತಾರೆ.

ಸಸ್ಯ ಪರಿಚಯ

ವೈಜ್ಞಾನಿಕವಾಗಿ ಇದಕ್ಕೆ ‘ಕ್ಯಾಥರನ್‌ಥಸ್‌ ರೋಸೆಸ್‌’ ಎಂದು ಹೆಸರು. ಇದಕ್ಕೆ ಕಾಪಿನ ಕಣಗಿಲೆ, ಪೆರಿವ್ವಿಕಲ್‌ ಮುಂತಾದ ಹೆಸರುಗಳಿವೆ. ಇದು ಬಹುವಾರ್ಷಿಕ ಸಸ್ಯ.

ಕೃಷಿ ವಿಧಾನ

ಮಣ್ಣು ಮತ್ತು ಹವಾಗುಣ: ನಾನಾ ವಿಧದ ಮಣ್ಣಿನಲ್ಲಿ ಇದರ ಬೇಸಾಯ ಸಾಧ್ಯ. ಮರಳು ಮಿಶ್ರಿತ ಮೆತ್ತನೆ ಮಣ್ಣು, ನೀರಿನ ಅಭಾವವಿರುವ ಪ್ರದೇಶ ಇತ್ಯಾದಿಗಳಲ್ಲಿ ಇದು ಬೆಳೆಯುವುದು. ಮಳೆಗಾಲದಲ್ಲಿ ಇದನ್ನು ಸುಲಭವಾಗಿ ಬೆಳೆಯಬಹುದು.

ಸಸ್ಯಾಭಿವೃದ್ಧಿ ಮತ್ತು ನಾಟಿ ವಿಧಾನ: ಸಸ್ಯವನ್ನು ಬೇರು ಮತ್ತು ಕಾಂಡಗಳ ತುಂಡುಗಳಿಂದ ಪಡೆಯಬಹುದು. ಇದರ ಬೀಜಗಳನ್ನು ನೇರವಾಗಿ ಬಿತ್ತಿಯೂ ಸಸ್ಯವನ್ನು ಗಳಿಸಬಹುದು. ಕೃಷಿ ಭೂಮಿಯನ್ನು ಉಳುಮೆ ಮಾಡಿ ಅದಕ್ಕೆ ಹೆಕ್ಟೇರೊಂದರ ೧೦ ರಿಂದ ೧೫ ಟನ್‌ ಹಟ್ಟಿಗೊಬ್ಬರ ಹಾಕಬೇಕು. ಬೀಜವನ್ನು ಮಳೆಗಾಲಕ್ಕಿಂತ ಮೊದಲು ಬಿತ್ತನೆ ಮಾಡಬೇಕು. ಈ ಗಿಡವನ್ನು ಇಡೀ ವರ್ಷದಲ್ಲಿ ನಾಟಿ ಮಾಡಬಹುದಾಗಿದೆ. ಬೀಜಗಳ ಮೂಲಕ ಸಸ್ಯಾಭಿವೃದ್ಧಿ ಮಾಡುವುದಿದ್ದಲ್ಲಿಇ ಹೆಕ್ಟೇರೊಂದರ ೨.೫ ಕಿ.ಗ್ರಾಂ ಬೀಜಗಳು ಬೇಕು. ಬೇರುಗಳ ತುಂಡುಗಳ ಮೂಲಕವಾಗಿದ್ದಲ್ಲಿ ೩ ರಿಂದ ೪ ಕ್ವಿಂಟಾಲ್‌ಗಳಷ್ಟು ಸಾಕು.

ನೀರಾವರಿ: ವಾರ್ಷಿಕವಾಗಿ ೪ ರಿಂದ ೫ ಬಾರಿ ನೀರಾವರಿ ವ್ಯವಸ್ಥೆಯಾಗಬೇಕಲು. ನೀರು ಇಂಗಿಹೋಗುವ ವ್ಯವಸ್ಥೆಯಿಲ್ಲಿರಬೇಕು.

ಕಳೆ ನಿಯಂತ್ರಣ: ಮೊದಲನೆ ಹಂತದ ಕಳೆ ನಿಯಂತ್ರಣ ನಾಟಿಯಾದ ೨೫ ದಿನಗಳೊಳಗೆ ಆಗಬೇಕು.

ಕೊಯ್ಲು: ಸದಾಪುಷ್ಪ ಗಿಡದ ಎಲೆಗಳ ಮೊದಲ ಕೊಯ್ಲು ನಾಟಿ ಮಾಡಿದ ೬ ತಿಂಗಳಲ್ಲಿ ಸಾಧ್ಯ. ಆ ನಂತರ ಮೂರು ತಿಂಗಳಿಗೊಮ್ಮೆ ಕೊಯ್ಲು ಮಾಡಬಹುದು. ಇದರ ಗಡ್ಡೆಗಳನ್ನು ಗಿಡಕ್ಕೆ ಒಂದು ವರ್ಷವಾದ ನಂತರ ಮಾಡಬಹುದು. ಕೊಯ್ಲು ಮಾಡಿದ ಗಡ್ಡೆಗಳನ್ನು ಶುಚಿಗೊಳಿಸಿ ನೆರಳಲ್ಲಿ ಒಣಗಿಸಿಡಬೇಕು. ಈ ಗಡ್ಡೆಗಳನ್ನು ಸಂಸ್ಕರಣೆಗಾಗಿ ಯಂತ್ರಾಗಾರಕ್ಕೆ ಕಳುಹಿಸಿ ಅದರಿಂದ ಕ್ಷಾರವನ್ನು ಪಡೆಯಬಹುದಾಗಿದೆ.

ಇಳುವರಿ: ಮಳೆಯಾಧಾರಿತ ಬೆಳೆಯಾಗಿದ್ದಲ್ಲಿ ಹೆಕ್ಟೇರೊಂದರ ಸುಮಾರು ೨೦೦೦ ಕಿ.ಗ್ರಾಂ ಎಲೆ ಮತ್ತು ೬೦೦ ಕಿ.ಗ್ರಾಂ ಬೇರನ್ನು ಗಳಿಸಬಹುದು. ನೀರಾವರಿ ಅವಲಂಬಿತ ಬೆಳೆಯಾದಲ್ಲಿ ೩೦೦೦ ರಿಂದ ೩೫೦೦ ಕಿ.ಗ್ರಾಂ ಎಲೆ ಮತ್ತು ೮೦೦ ರಿಂದ ೧೦೦೦ ಕಿ.ಗ್ರಾಂ ಬೇರನ್ನು ಗಳಿಸಬಹುದು. ಮಳೆಯಾಧಾರಿತ ಕೃಷಿಯಿಂದ ಲಭಿಸಬಹುದಾದ ವಾರ್ಷಿಕ ಲಾಭಾಂಶ ಹೆಕ್ಟೇರೊಂದರ ಸುಮಾರು ರೂಪಾಯಿ ೧೨,೦೦೦ ಆಗಿದ್ದಲ್ಲಿ ನೀರಾಶ್ರಿತ ಬೆಳೆಯಿಂದ ರೂಪಾಯಿ ೨೫,೦೦೦ ದೊರಕಲು ಸಾಧ್ಯ.

ಉಪಯೋಗ: ಇದನ್ನು ವಿವಿಧ ರೀತಿಯ ಔಷಧಿಯ ತಯಾರಿಕೆಗೆ ಬಳಸಲಾಗುತ್ತಿದೆ. ಇದರಲ್ಲಿ ಸುಮಾರು ೬೬ ಕ್ಷಾರ ಪದಾರ್ಥಗಳಿದ್ದು, ಈ ಕ್ಷಾರ ಪದಾರ್ಥಗಳನ್ನು ವಿಶ್ವದಾದ್ಯಂತ ವಿವಿಧ ರೋಗಗಳ ನಿವಾರಣೆಗಾಗಿರುವ ಔಷಧಗಳಲ್ಲಿ ಬಳಸಲಾಗುತ್ತಿದೆ. ಇವುಗಳಲ್ಲಿ ಪ್ರಮುಖವಾದವುಗಳೆಂದರೆ ಕ್ಯಾನ್ಸರ್, ರಕ್ತದ ಒತ್ತಡ, ಮಧುಮೂತ್ರ ವ್ಯಾಧಿ, ರಜಸ್ರಾವ ಇತ್ಯಾದಿ. ಎಲೆಗಳಲ್ಲಿ ದೊರಕುವ ವಿನ್‌ಕ್ರಿಸ್ಟಿನ್‌ ಮತ್ತು ವಿನ್‌ಬ್ಲಾಸ್ಟಿನ್‌ ರಕ್ತದ ಕ್ಯಾನ್ಸರ್ ರೋಗದ ನಿವಾರಣೆಗೆ ಉಪಯುಕ್ತವಾಗಿದೆ.

೨೩. ಸರ್ಪಗಂಧಾ

ಸರ್ಪಗಂಧಾ ಅಥವಾ ಗರುಡ ಪಾತಾಳದ ಬೇರು ಮತ್ತು ಅದರಿಂದ ತಯಾರಿಸಲ್ಪಡುವ ಔಷಧಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಬೇಡಿಕೆಯಿದೆ. ವಿಷಜಂತು ಕಡಿತಕ್ಕೊಳಗಾದವರನ್ನು ರಕ್ಷಿಸುವಲ್ಲಿ ಇದು ಮಹತ್ವದ ಪಾತ್ರ ನಿರ್ವಹಿಸುತ್ತದೆ. ಈ ಸಸ್ಯವು ಹಿಮಾಲಯ ಪರ್ವತದ ತಪ್ಪಲು ಪ್ರದೇಶ, ಹಿಮಾಚಲ ಪ್ರದೇಶ, ಜಮ್ಮು, ಕಾಶ್ಮೀರಗಳಲ್ಲಿ ಅಧಿಕ ಪ್ರಮಾಣದಲ್ಲಿ ಬೆಳೆಯುತ್ತದೆ. ಗರುಡಪಾತಾಳ ಭಾರತದಾದ್ಯಂತ ಬೆಳೆಯುವು ಸಸ್ಯವಾಗಿದೆ. ಇದರ ಬಳಕೆ ನಮ್ಮ ಹಳ್ಳಿಗರಿಗೆ ಚೆನ್ನಾಗಿ ಗೊತ್ತು.

ಸಸ್ಯ ಪರಿಚಯ

ಹಚ್ಚ ಹಸಿರಾಗಿರುವ ೭೫ ಸೆ.ಮೀ ೧ ಮೀಟರು ಎತ್ತರಕ್ಕೆ ಬೆಳೆಯುವ ಸರ್ಪಗಂಧಕ್ಕೆ ಸಸ್ಯ ಶಾಸ್ತ್ರೀಯವಾಗಿ ರಾವಲ್ಫಿಯಾ ಸರ್ಪೆಂಟಿನಾ ಎನ್ನುತ್ತಾರೆ. ಇದು ಅಪೋಸೈನೇಶಿಯಾ ಕುಟುಂಬಕ್ಕೆ ಸೇರಿದೆ. ನಮ್ಮಲ್ಲಿ ಇದನ್ನು ಗರುಡಪಾತಾಳ, ಪಾತಾಳಗರುಡ, ಸುತ್ರನಾಭಿ, ಚಂದ್ರಕ, ಅಸ್ಟೋಲ್‌, ಚೋಟಾಚಂದ್‌ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಈ ಸಸ್ಯದ ಬೇರನ್ನು ಔಷಧಿಯ ತಯಾರಿಕೆಗೆ ಉಪಯೋಗಿಸಲಾಗುತ್ತದೆ. ಇದರ ಬೇರು ಭೂಮಿಯೊಳಗೆ ಸುಮಾರು ೪೦ ರಿಂದ ೬೦ ಸೆಂ.ಮೀ ತನಕ ಇಳಿದಿರುತ್ತದೆ.

ಕೃಷಿ ವಿಧಾನ

ಮಣ್ಣು ಮತ್ತು ಹವಾಗುಣ: ಸರ್ಪಗಂಧದ ಕೃಷಿಗೆ ಸ್ವಲ್ಪ ಪ್ರಮಾಣದ ಆಮ್ಲಿಯ ಗುಣವುಳ್ಳ ಆಳವಾಗಿ ಫಲವತ್ತತೆಯನ್ನು ಹೊಂದಿರುವ ಮಣ್ಣು ಸೂಕ್ತ. ನೈಸರ್ಗಿಕವಾಗಿ ಸಾವಯವವನ್ನು ಅಧಿಕ ಮಟ್ಟದಲ್ಲಿ ಹೊಂದಿರುವ ಮಣ್ಣು ಇದರ ವಾಣಿಜ್ಯ ವ್ಯವಸಾಯಕ್ಕೆ ಯೋಗ್ಯ. ಈ ಬೆಳೆಯನ್ನು ನೀರಾವರಿ ವ್ಯವಸ್ಥೆಯಿದ್ದಲ್ಲಿ ಮಂಜು ಬೀಳದ ಯಾವುದೇ ಹವಾಗುಣದಲ್ಲೂ ಕೈಗೊಳ್ಳಬಹುದು.

ಸಸ್ಯಾಭಿವೃದ್ಧಿ ಮತ್ತು ನಾಟಿ ವಿಧಾನ: ಇದರ ಸಸ್ಯವನ್ನು ಬೀಜ,ಕಾಂಡ ಮತ್ತು ಬೇರುಗಳ ತುಂಡುಗಳಿಂದ ಪಡೆಯಬಹುದು. ೫ ಸೆಂ.ಮೀ ಉದ್ದದ ಬೇರನ್ನು ಹಟ್ಟಿಗೊಬ್ಬರ ಮರಳು ಮತ್ತು ಧೂಳಿನಿಂದ ಕೂಡಿದ ನರ್ಸರಿ ಮಡಿಗಳಲ್ಲಿ ನೆಟ್ಟು ಅದಕ್ಕೆ ನೀರುಣಿಸಿ, ಸಸ್ಯಾಭಿವೃದ್ಧಿ ಸಾಧ್ಯ. ಈ ಗಿಡಗಳನ್ನು ಮಳೆಗಾಲದಲ್ಲಿ ಸಾಲಿನಿಂದ ಸಾಲಿಗೆ ೪೫ ಸೆಂ.ಮೀ ಅಂತರವಿಟ್ಟು, ಗಿಡದಿಂದ ಗಿಡಕ್ಕೆ ೩೦ ಸೆಂ.ಮೀ ಅಂತರದಲ್ಲಿ ನಾಟಿ ಮಾಡಬಹುದು. ಬೀಜಗಳಿಂದ ಸಸ್ಯಾಭಿವೃದ್ಧಿ ಮಾಡುವುದಾದಲ್ಲಿ ದೃಢವಾದ ಬೀಜಗಳನ್ನು ಆರಿಸಿಕೊಂಡು ಬಿತ್ತನೆ ಮಾಡಬೇಕು. ತೇವಾಂಶವುಳ್ಳ ನರ್ಸರಿ ಮಡಿಗಳಲ್ಲಿ ಬಿತ್ತನೆಯಾಗಿ ಸುಮಾರು ೧೫ ರಿಂದ ೪೦ ದಿನಗಳೊಳಗೆ ಸಸ್ಯ ಹೊರಹೊಮ್ಮುವುದು. ಏಪ್ರಿಲ್‌ನಲ್ಲಿ ಬಿತ್ತನೆ ಮಾಡಿದ್ದಲ್ಲಿ, ಜುಲಾಯಿ ತಿಂಗಳಿಗಾಗುವಾಗ ಗಿಡವು ನಾಟಿಗೆ ಸಿದ್ಧವಾಗುವುದು. ನಿಧಾನವಾಗಿ ಬೆಳವಣಿಗೆಯನ್ನು ಸಾಧಿಸುವ ಈ ಸಸ್ಯಕ್ಕೆ ಮಳೆಯಾಗದಿದ್ದಲ್ಲಿ ನೀರುಣಿಸುವುದು ಅಗತ್ಯ.

ಗೊಬ್ಬರ: ಭೂಮಿಯ ತಯಾರಿ ಸಮಯದಲ್ಲಿ ೨೦ ರಿಂದ ೨೫ ಕ್ವಿಂಟಾಲ್‌ ಹಟ್ಟಿಗೊಬ್ಬರವನ್ನು ಒಂದು ಹೆಕ್ಟೇರ್ ಗೆ ಕೊಡಬೇಕು. ರಸಗೊಬ್ಬರದ ಬಳಕೆಯಿಂಧಾಗಿ (NPK) ಇದರ ಬೆಳವಣಿಗೆ ಅಧಿಕವಾಗುವುದು.

ನೀರಾವರಿ: ಉಷ್ಣಾಂಶ ಅಧಿಕವಿರುವ ಪ್ರದೇಶಗಳಲ್ಲಿ ಸತತ ನೀರಾವರಿ ವ್ಯವಸ್ಥೆ ಆಗಬೇಕು. ಬೇಸಿಗೆಯಲ್ಲಿ ಕನಿಷ್ಠ ೨೦ ದಿನಗಳಿಗೊಮ್ಮೆ, ಚಳಿಗಾಲದಲ್ಲಿ ೩೦ ದಿನಗಳಿಗೊಮ್ಮೆ ನೀರಾವರಿ ಅಗತ್ಯ.

ಕಳೆ ನಿಯಂತ್ರಣ: ಸಸ್ಯದ ಆರಂಭಿಕ ಬೆಳವಣಿಗೆಯ ಹಂತದಲ್ಲಿ ಕಳೆ ನಿಯಂತ್ರಣ ಮತ್ತು ಅಗೆತ ಕಾರ್ಯಗಳು ಅತ್ಯಗತ್ಯ.

ಕೊಯ್ಲು: ಪ್ರದೇಶಗಳಿಗನುಗುಣವಾಗಿ ಬೇರಿನ ಬೆಳವಣಿಗೆ ಅದಲು ಬದಲಾಗುತ್ತದೆ. ಆದರೆ ಸಾಮಾನ್ಯವಾಗಿ ನಾಟಿ ಮಾಡಿದ ೧೮ ತಿಂಗಳುಗಳಲ್ಲಿ ಇದರ ಬೇರು ಯಾ ಕಾಂಡದ ಬೆಳವಣಿಗೆ ಅಂತಿಮ ಹಂತದಲ್ಲಿರುವುದು. ಇದರ ಬೇರು ಆಳದಲ್ಲಿರುವುದರಿಂದ ಕೊಯ್ಲು ಮಾಡುವಾಗ ಜಾಗ್ರತೆ ವಹಿಸಬೇಕು. ಮೇಲಕ್ಕೆಬ್ಬಿಸಿದ ಕಾಂಡವನ್ನು ಶುಚಿಗೊಳಿಸಿ ೧೨ ರಿಂದ ೧೫ ಸೆಂ.ಮೀ ತುಂಡುಗಳನ್ನಾಗಿಸಿ ಒಣಗಿಸಿ ಶೇಖರಸಿಡಬೇಕು. ಈ ಶೇಖರಣೆಯ ಪಾಲಿಥಿನ್‌ ಚೀಲಗಳಲ್ಲಿ ಆಗಬೇಕು. ಈ ಚೀಲವನ್ನು ತಂಪಾದ ಸ್ಥಳದಲ್ಲಿಡಬೇಕು. ಹೀಗಿಟ್ಟಲ್ಲಿ ೨ ವರ್ಷಗಳ ತನಕ ಉಳಿಯಬಹುದು.

ಇಳುವರಿ: ಒಂದು ಹೆಕ್ಟೇರ್ ಸರ್ಪಗಂಧ ಕೃಷಿಯಿಂದ ಸುಮಾರು ೧೫ ರಿಂದ ೨೫ ಕ್ವಿಂಟಾಲ್‌ ಬೇರಿನ ಇಳುವರಿ ಪಡೆಯಬಹುದಾಗಿದೆ.

ವೆಚ್ಚ ಮತ್ತು ಆದಾಯ: ಒಂದು ಹೆಕ್ಟೇರ್ ಕೃಷಿಗೆ ತಗಲುವ ಒಟ್ಟು ವೆಚ್ಚ ಸುಮಾರು ೧೯ ಸಾವಿರ ರೂಪಾಯಿಗಳು ಮತ್ತು ಗಳಿಸಬಹುದಾದ ಆದಾಯ ಸುಮಾರು ೬೦ ಸಾವಿರ ರೂಪಾಯಿಗಳು.

ಉಪಯೋಗ: ವಿಷಜಂತು ಕಡಿತ, ರಕ್ತದ ಒತ್ತಡ, ವಾಂತಿಭೇದ ಹುಚ್ಚು ನಿವಾರಣೆ ಇತ್ಯಾದಿಗಳ ಚಿಕಿತ್ಸೆಯಲ್ಲಿ ಇದು ಉಪಯೋಗವಾಗವುದು.

೨೪. ಸಫೇದ್ಮಸ್ಲಿ

ಇತ್ತೀಚಿನ ದಿನಗಳಲ್ಲಿ ಅಧಿಕ ಪ್ರಚಾರದಿಂದ ಚಲಾವಣೆಗೆ ಬರುತ್ತಿರುವ ಬೆಳೆ. ಕಾಡುಗಳಲ್ಲಿ ತನ್ನಿಂದ ತಾನಾಗಿ ಬೆಳೆಯುವ ಈ ಸಸ್ಯದ ಬೇರು ಸಕ್ಕರೆ ಕಾಯಿಲೆ, ನಪುಂಸಕತ್ವ ನಿಶ್ಯಕ್ತಿ, ಮುಂತಾದ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲದು. ಈ ಸಸ್ಯವು ಮಧ್ಯಪ್ರದೇಶ, ಗುಜರಾತು, ಮಹಾರಾಷ್ಟ್ರ, ಮತ್ತು ಉತ್ತರ ಪ್ರದೇಶದ ಕಾಡುಗಳಲ್ಲಿ ಅಧಿಕ ಪ್ರಮಾಣದಲ್ಲಿ ಬೆಳೆಯುತ್ತಿದೆ. ಇಲ್ಲೆಲ್ಲಾ ಇದನ್ನಿಂದು ವಾಣಿಜ್ಯ ರೀತಿಯಲ್ಲಿ ಬೆಳೆಸಲಾಗುತ್ತಿದ್ದು ಇದು ಇತ್ತೀಚಿನ ದಿನಗಳಲ್ಲಿ ಆಂಧ್ರ ಪ್ರದೇಶ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗೂ ಹಬ್ಬುತ್ತಿದೆ. ಇದರ ಗಡ್ಡೆಗೆ ಆಂತರಿಕ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ನಿರಂತರವಾಗಿದ ಬೇಡಿಕೆ ಏರುತ್ತಿದ್ದು, ಈಗಿನ ಉತ್ಪಾದನೆ ಬೇಡಿಕೆಗೆ ಅನುಗುಣವಾಗಿಲ್ಲ.

ಸಸ್ಯ ಪರಿಚಯ

ವೈಜ್ಞಾನಿಕವಾಗಿ ‘ಕ್ಲೋರೋಪೈಟಂ ಬೊರಿವಿಲಿಯಾನಂ’ ಎಂದು ಕರೆಯಲ್ಪಡುವ ಸಫೇದ್‌ ಮಸ್ಲಿ ‘ಲಿಲಿಯೆಸಿಯಾ’ ಕುಟುಂಬಕ್ಕೆ ಸೇರಿದೆ. ಉದ್ದವಾದ ಎಲೆಯುಳ್ಳ ಈ ಸಸ್ಯ ಮಳೆ ಬಂದಾಗ ಮೇಲಕ್ಕೆ ಕಾಣಿಸಿಕೊಳ್ಳುವುದು. ಬಿಳಿ ಹೂವನ್ನು ಇದು ಹೊಂದಿರುವುದು. ಈ ಸಸ್ಯವು ಸುಮಾರು ೩೦ ರಿಂದ ೫೦ ಸೆಂ.ಮೀ ನಷ್ಟು ಎತ್ತರಕ್ಕೆ ಬೆಳೆದು ನಿಲ್ಲುವುದು. ಇದರ ಜೀವಿತಾವಧಿ ೩ ರಿಂದ ೮ ತಿಂಗಳುಗಳು. ಇದರ ಹೂಗಳು ಜುಲಾಯಿ ತಿಂಗಳಲ್ಲಿ ಕಂಡು ಬರುವುದು. ಇದರ ಕಾಯಿಗಳು ಸಣ್ಣದು. ಕಾಯಿಯ ಒಂದು ಭಾಗದಲ್ಲಿ ಸುಮಾರು ೧೦ ರಿಂದ ೧೨ ಸಣ್ಣದಾದ ಕಪ್ಪಾದ ಕಡಿಮೆ ತೂಕದ ಬೀಜಗಳಿರುವುದು. ಒಂದು ಸಸ್ಯದಲ್ಲಿ ಸುಮಾರು ೫ ರಿಂದ ೩೦ ನಳಿಕೆಗಳು ಇದರಲ್ಲಿದ್ದು ಇದರ ಬಣ್ಣ ಬಿಳಿಯಾದ್ದರಿಂದ ಇದಕ್ಕೆ ಸಫೇದ್‌ ಮಸ್ಲಿ ಎಂದು ಹೆಸರು.

ಕೃಷಿ ವಿಧಾನ

ಮಣ್ಣು ಮತ್ತು ಹವಾಗುಣ: ಮಸ್ಲಿಯ ಕೃಷಿಗೆ ಮೆದುವಾದ ಸಾವಯವಗಳಿಂದ ಕೂಡಿದ ಮರಳು ಮಿಶ್ರಿತ ಜೇಡಿಮಣ್ಣು ಉತ್ತಮ. ಬೆಳವಣಿಗೆಯ ಹಂತದಲ್ಲಿ ತೇವಾಂಶವನ್ನು ಹೊಂದಿರುವ ಬಿಸಿಲು ಬೀಳಬಲ್ಲ ಹವೆ ಇದಕ್ಕೆ ಸೂಕ್ತ. ನೀರು ಇಂಗಿ ಹೋಗುವ ಮಣ್ಣು ಇದರ ಕೃಷಿಗೆ ದೊರಕಿದಲ್ಲಿ ಬೆಳವಣಿಗೆ ನಿರೀಕ್ಷಿತ ಮಟ್ಟದಲ್ಲಿರುವುದು.

ಕೃಷಿ ಭೂಮಿಯ ತಯಾರಿ: ಕೃಷಿಗಾಗಿರುವ ಭೂಮಿಯನ್ನು ಉಳುಮೆ ಮಾಡಿ ಮಣ್ಣಿನ ಹೆಂಟೆಗಳನ್ನು ಹುಡಿ ಮಾಡಬೇಕು. ಈ ಭೂಮಿಗೆ ಹೆಕ್ಟೇರೊಂದರ ಸುಮಾರು ೧೫ ರಿಂದ ೨೦ ಟನ್‌ಗಳಷ್ಟು ಹುಡಿಯಾದ ಹಟ್ಟಿಗೊಬ್ಬರ ಮಿಶ್ರ ಮಾಡಬೇಕು. ಬಳಿಕ ಭೂಮಿಯಲ್ಲಿ ಒಂದು ಅಡಿ ಎತ್ತರ ಮೂರುವರೆ ಅಡಿ ಅಗಲದ ಮಡಿಗಳನ್ನು ಸಿದ್ಧ ಗೊಳಿಸಬೇಕು. ಪ್ರತೀ ಮಡಿಗಳ ನಡುವೆ ನೀರು ಚೆನ್ನಾಗಿ ಬಸಿದುಹೋಗುವಂತೆ ಮಾಡಲು ಕಾಲುವೆಗಳನ್ನು ರಚಿಸಬೇಕು.

ಸಸ್ಯಾಭಿವೃದ್ಧಿ: ಸಸ್ಯವನ್ನು ಬೀಜ ಮತ್ತು ಕಾಂಡಗಳಿಂದ ಪಡೆಯಬಹುದು. ಬೀಜಗಳಿಂದ ಸಸ್ಯ ಮೊಳಕೆಯೊಡೆಯಲು ಅಧಿಕ ಸಮಯ ತೆಗೆದುಕೊಳ್ಳುವುದರಿಂದ ಕಾಂಡದಿಂದ ಸಸ್ಯ ತಯಾರಿಸುವುದು ಒಳ್ಳೆಯದು. ಸಸ್ಯಾಭಿವೃದ್ಧಿಗೆ ಬಳಸುವ ಕಾಂಡವನ್ನು ಮೊದಲಿನ ವರ್ಷದ ಗಿಡದಿಂದ ಮೇ ತಿಂಗಳಲ್ಲಿ ಮಣ್ಣಿನಿಂದ ಬೇರ್ಪಡಿಸಬೇಕು. ನಾಟಿಗೆ ಆರಿಸಿಕೊಳ್ಳುವ ಕಾಂಡವನ್ನು ನಾಟಿ ಮಾಡುವ ಮೊದಲು ೧:೧೦ರ ಗೋಮೂತ್ರ ಮತ್ತು ನೀರಿನ ಮಿಶ್ರಣದಲ್ಲಿ ಎರಡು ಗಂಟೆಗಳ ಕಾಲ ಮುಳುಗಿಸಿಡಬೇಕು ಅಥವಾ ೫೦ಗ್ರಾಂ ಬಾವಿಸ್ಟಿನ್‌ ಮತ್ತು ೫ ಗ್ರಾಂ ಸ್ಟ್ರಪ್ಟೋಮೈಸಿನ್‌ಗಳ ಮಿಶ್ರಣವನ್ನು ೧೫ ಲೀಟರ್ ನೀರಿನಲ್ಲಿ ಕರಗಿಸಿ ಉಪಚಾರ ಮಾಡಿದಲ್ಲಿ ಬ್ಯಾಕ್ಟೀರಿಯಾ ಮತ್ತು ಶಿಲೀಂದ್ರ ರೋಗಗಳನ್ನು ತಡೆಗಟ್ಟಬಹುದು.

ನಾಟಿ ವಿಧಾನ: ಸಸ್ಯವನ್ನು ಮಳೆಗಾಲ ಆರಂಭಗೊಂಡ ತಕ್ಷಣ ಸಸ್ಯದಿಂದ ಸಸ್ಯಕ್ಕೆ ೩೦X ೧೫ ಸೆಂ.ಮೀ ಅಂತರದಲ್ಲಿ ನಾಟಿ ಮಾಡಬೇಕು.

ಗೊಬ್ಬರ: ಹೆಕ್ಟೇರೊಂದರ ೨೦ ಟನ್‌ ಹಟ್ಟಿಗೊಬ್ಬರ ಮತ್ತು ೮೦ ಕಿ.ಗ್ರಾಂ ಸಾರಜನಕ, ೧೦೦ ಕಿ.ಗ್ರಾಂ ರಂಜಕ, ಮತ್ತು ೬೦ ಕಿ.ಗ್ರಾಂ ಪೊಟ್ಯಾಷ್‌ ಹಾಕಿದಲ್ಲಿ ಉತ್ತಮ ಇಳುವರಿ ಲಭ್ಯ. ಇದರೊಂದಿಗೆ ಇಲ್ಲಿ ಬರುವ ಕಳೆಯನ್ನು ಆಗಾಗ ಕೀಳುತ್ತಲಿರಬೇಕು.

ನೀರಾವರಿ: ಅಗತ್ಯಕ್ಕನುಗುಣವಾಗಿ ನೀರಾವರಿ ವ್ಯವಸ್ಥೆಯಾಗಬೇಕಲು. ನಾಟಿಯಾದ ಸಮಯದಲ್ಲಿ ಮಳೆಯಿಲ್ಲದಿದ್ದಲ್ಲಿ ನೀರು ಹಾಯಿಸಬೇಕು. ಬಳಿಕ ಮಣ್ಣಿನಲ್ಲಿ ತೇವಾಂಶ ಕಡಿಮೆಯಾದಾಗ ೧೦ ರಿಂದ ೧೫ ದಿನಗಳ ಅಂತರದಲ್ಲಿ ನೀರುಣಿಸಬೇಕು.

ಕೊಯ್ಲು: ಸಾಮಾನ್ಯವಾಗಿ ನಾಟಿ ಮಾಡಿದ ೩ ರಿಂದ ೪ ತಿಂಗಳಲ್ಲಿ ಗಿಡದ ಮೇಲ್ಭಾಗ ಹಳದಿ ಬಣ್ಣಕ್ಕೆ ತಿರುಗುವುದು. ಆ ಬಳಿಕ ಇದರ ಗಡ್ಡೆಯ ಬೆಳವಣಿಗೆ ಶೀಘ್ರವಾಗುತ್ತಲಿರುವುದು. ಇದರ ಕೊಯ್ಲನ್ನು ಗಿಡಕ್ಕೆ ೭ ರಿಂದ ೮ ತಿಂಗಳಾಗುವಾಗ ಮಾಡಬಹುದು. ಈ ಸಮಯದಲ್ಲಿ ಇದರ ಬೇರುಗಳ ತೊಗಟೆ ಬಲಿತು ಕಂದು ಬಣ್ಣಕ್ಕೆ ತಿರುಗುವುದು. ಇದು ಕೊಯ್ಲಿಗೆ ಸೂಚನೆಯನ್ನು ಕೊಡುತ್ತದೆ. ಈ ಗಡ್ಡೆಯನ್ನು ಘಾಸಿಯಾಗದ ರೀತಿಯಲ್ಲಿ ಮಣ್ಣಿನಿಂದ ಹೊರತೆಗೆಯಬೇಕು. ಬಳಿಕ ನೀರಿನಲ್ಲಿ ಶುಚಿಗೊಳಿಸಿ ಅದರ ಚಿಕ್ಕ ಚಿಕ್ಕ ಗಡ್ಡೆಗಳನ್ನು ಬೇರ್ಪಡಿಸಬೇಕು. ಈ ಗಡ್ಡೆಗಳಲ್ಲಿ ೮ ರಿಂದ ೨೧ ಗ್ರಾಂ ತೂಕವುಳ್ಳವುಗಳನ್ನು ಮುಂದಿನ ಸಾಲಿನ ಬಿತ್ತನೆಗಾಗಿ ಶೇಖರಿಸಿಡಬಹುದು.

ಮಾರುಕಟ್ಟೆಗಾಗಿರುವ ಗಡ್ಡೆ: ಮಣ್ಣಿನಿಂದ ಹೊರ ತೆಗೆದ ಗಡ್ಡೆಯನ್ನು ನೀರಲ್ಲಿ ಸ್ವಚ್ಛಗೊಳಿಸಿ ಬಳಿಕ ಅದನ್ನು ೨ ದಿನಗಳ ಕಾಲ ನೆರಳಲ್ಲಿ ಒಣಗಿಸಬೇಕು. ಆ ನಂತರ ಗಡ್ಡೆಯ ತೊಗಟೆಯನ್ನು ಎರಡು ಬೆರಳುಗಳ ನಡುವೆ ಇರಿಸಿ ತೆಗೆಯಬೇಕು. ಈ ರೀತಿಯಾಗಿ ತೊಗಟೆ ತೆಗೆದ ಗಡ್ಡೆಯನ್ನು ಪುನಃ ನೀರಲ್ಲಿ ತೆಗೆದ ಗಡ್ಡೆಯನ್ನು ಪುನಃ ನೀರಲ್ಲಿ ತೊಳೆದು ನೆರಳಲ್ಲಿ ಸರಿಯಾಗಿ ಒಣಗಿಸಬೇಕು. ಒಣಗಿದ ಗಡ್ಡೆಯನ್ನು ಪಾಲಿಥಿನ್‌ ಚೀಲಗಳಲ್ಲಿ ೨ ವರ್ಷಗಳ ಕಾಲ ಶೇಖರಿಸಿಡಬಹುದು.

ಇಳುವರಿ ಮತ್ತು ಆದಾಯ: ಹೆಕ್ಟೇರೊಂದರ ೧ ರಿಂದ ೧.೫ ಟನ್‌ ಹಸಿಗಡ್ಡೆ ಮತ್ತದು ಒಣಗಿದಾಗ ೨೦೦ ರಿಂದ ೩೦೦ ಕಿ.ಗ್ರಾಂ. ನಷ್ಟು ಗಡ್ಡೆ ದೊರಕಬಹುದಾಗಿದೆ. ಉತ್ತಮ ಬಿಳಿ ಬಣ್ಣದ ಉತ್ತಮ ಗುಣಮಟ್ಟದ ಒಣ ಗಡ್ಡೆಗೆ ಮಾರುಕಟ್ಟೆಯಲ್ಲಿ ಕಿ.ಗ್ರಾಂ. ಒಂದರ ಸರಾಸರಿ ರೂಪಾಯಿ ೧೦೦೦ ಬೆಲೆಯಿದೆ.

ಉಪಯೋಗ: ಇದರ ಗಡ್ಡೆಗಳಲ್ಲಿ ಹಲವು ಔಷಧೀಯ ಗುಣಗಳಿವೆ. ಇದರಲ್ಲಿ ಉದ್ದೀಪನಾಂಶ, ಪ್ರೋಟೀನ್‌ ಮತ್ತು ಕ್ಯಾಲ್ಸಿಯಂ ಸತ್ವಗಳಿವೆ. ಇದನ್ನು ವಾತ, ಪಿತ್ತ ರಕ್ತಶುದ್ಧೀಕರಣ, ಮುಂತಾದ ರೋಗ ನಿವಾರಣೆಗೆ ಉಪಯೋಗಿಸಲಾಗುವುದು.

೨೫. ಸೋನಾಮುಖಿ

ಸೆನ್ನಾ ಅಥವಾ ಸೋನಾಮುಖಿ ಬಹುಕಾಳ ಬಾಳಬಲ್ಲ ಒಂದು ಕುರುಚಲಗಿಡ. ಇದರ ಎಲೆ ಮತ್ತು ಕಾಳುಗಳನ್ನು ಔಷಧೀಯ ಬಳಕೆಗಾಗಿ ಉಪಯೋಗಿಸಲಾಗುತ್ತದೆ. ಇದನ್ನು ಮುಖ್ಯವಾಗಿ ಒಂದು ವಿರೇಚಕವಾಗಿ ಬಳಸಲಾಗುತ್ತದೆ. ಇದರ ಉತ್ಪಾದನೆಯನ್ನು ಭಾರತ ಮತ್ತು ಸೂಡಾನ್‌ಗಳಲ್ಲಿ ಕೈಗೊಳ್ಳಲಗಾಗುತ್ತಿದೆ. ಸೋನಾಮುಖಿ ಹೆಚ್ಚಾಗಿ ಗುಜರಾತಿನ ಕರಾವಳಿ ತೀರದ ಕಾಡುಗಳಲ್ಲಿ ಬೆಳೆಯುತ್ತಿದೆ. ಗುಜರಾತಿನ ಬುಚ್‌ ಪ್ರಾಂತ್ಯದಲ್ಲಿ ಇದು ಹೆಚ್ಚಾಗಿ ಕಾಣ ಸಿಗುವುದು. ಸೋನಾಮುಖಿಯ ವ್ಯವಸಾಯವನ್ನಿಂದು ತಮಿಳು ನಾಡಿನ ತಿರುನೆಲ್‌ವೆಲ್ಲಿ ಮತ್ತು ರಾಮನಾಥಪುರಂ, ಆಂಧ್ರಪ್ರದೇಶದ ಗುಂಟೂರುಗಳಲ್ಲಿ ಕೈಗೊಳ್ಳಲಾಗುತ್ತಿದೆ. ಭಾರತವು ವಾರ್ಷಿಕವಾಗಿ ಸರಾಸರಿ ೫೦ ಕೋಟಿ ರೂಪಾಯಿ ಮೌಲ್ಯದ ಸೋನಾಮುಖಿ ಎಲೆಯನ್ನು ರಫ್ತು ಮಾಡುತ್ತಿದೆ.

ಸಸ್ಯ ಪರಿಚಯ

ವೈಜ್ಞಾನಿಕವಾಗಿ ಸೆನ್ನಾವನ್ನು ‘ಕಾಸಿಯ ಅಂಗುಷ್ಠಿ ಪೋಲಿಯಾ’ ಎನ್ನಲಾಗುತ್ತದೆ.  ಇದು ‘ಕೇಸಲ್‌ಪಿನ್‌ಶಿಯಾ’ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ. ಸೆನ್ನಾ ಸುಮಾರು ೬೦ ರಿಂದ ೧೨೦ ಸೆಂ.ಮೀ ಎತ್ತರಕ್ಕೆ ಬೆಳೆಯಬಲ್ಲ ಬಹುವಾರ್ಷಿಕ ಸಸ್ಯ. ಇದಕ್ಕೆ ಸನ್ಯೆ, ಮಾರಕನಡಿ, ಸಾನಾ ಮುಂತಾದ ಹೆಸರುಗಳಿವೆ.

ಕೃಷಿ ವಿಧಾನ

ಮಣ್ಣು ಮತ್ತು ಹವಾಗುಣ: ಈ ಬೆಳೆಯನ್ನು ವಿವಿಧ ರೀತಿಯ ಮಣ್ಣಿನಲ್ಲಿ ಬೆಳೆಯಬಹುದು. ಹೆಚ್ಚಿನ ಬೆಳೆಗಾಗಿ ಕೆಂಪು ಮತ್ತು ಮೆಕ್ಕಲು ಮಣ್ಣು ಹಿತಕರ. ನೀರು ಇಂಗಿ ಹೋಗುವ ಪ್ರದೇಶ ಮತ್ತು ಮಣ್ಣು ಇದಕ್ಕೆ ಸೂಕ್ತ. ಇದು ಬಿಸಿಲನ್ನು ಬಯಸುವ ಸಸ್ಯ. ಇದನ್ನು ಬೇಸಿಗೆಯ ಆರಂಭಕಾಲದಲ್ಲಿ (ಫೆಬ್ರವರಿ-ಮಾರ್ಚ್ ಅಥವಾ ಒಕ್ಟೋಬರಿನಿಂದ ನವೆಂಬರಿನೊಳಗೆ ಬೆಳೆಸಬಹುದು. ಇದರ ಬೆಳವಣಿಗೆಯ ಹಂತದಲ್ಲಿ ಅಧಿಕ ಮಳೆ ಮತ್ತು ಮೋಡದ ವಾತಾವರಣ ಹಾನಿಕಾರಕವಾಗಿದೆ.

ಕೃಷಿ ಭೂಮಿಯ ತಯಾರಿ: ಈ ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ ಅದರಲ್ಲಿರುವ ಕಳೆಯು ಸರಿಯಾಗಿ ಒಣಗಿ ಹೋಗುವಂತೆ ಮಾಡಬೇಕು. ಬಳಿಕ ಇನ್ನೊಂದು ಉಳುಮೆ ಮಾಡಿ ಸಮತಟ್ಟು ಮಾಡಿಕೊಳ್ಳಬೇಕು. ಈ ಸಮಯದಲ್ಲಿ ಸುಮಾರು ೫ ರಿಂದ ೧೦ ಟನ್‌ಗಳಷ್ಟು ಹಟ್ಟಿಗೊಬ್ಬರ ಇದರೊಂದಿಗೆ ಮಿಶ್ರ ಮಾಡಬೇಕು.

ಸಸ್ಯಾಭಿವೃದ್ಧಿ ಮತ್ತು ನಾಟಿ ವಿಧಾನ: ಇದರ ಬೀಜಗಳಿಂದ ಸಸ್ಯ ಪಡೆದು ಕೊಳ್ಳಬಹುದು. ಇದರ ಕಾಯಿಗಳೊಳಗಿರುವ ಬೀಜಗಳು ಗಟ್ಟಿಯಾಗಿರುವ ಹೊರಕವಚ ಹೊಂದಿರುವುದರಿಂದ ಇವನ್ನು ನೀರಲ್ಲಿ ೧೦ ರಿಂದ ೧೨ ಗಂಟೆಗಳ ಕಾಲ ನೆನೆಸಿಡಬೇಕು. ಒಂದು ಹೆಕ್ಟೇರ್ ಕೃಷಿ ಭೂಮಿಗೆ ಸುಮಾರು ೨೦ ಕಿ.ಗ್ರಾಂ ನಷ್ಟು ಬೀಜಗಳ ಅಗತ್ಯ ಇಲ್ಲಿ ಇದೆ. ಬೀಜಗಳನ್ನು ಬಿತ್ತುವಾಗ ಸಸ್ಯದಿಂದ ಸಸ್ಯಕ್ಕೆ ೩೦ ಸೆಂ.ಮೀ.ನ ಅಂತರವಿರಬೇಕು. ಬಿತ್ತನೆ ಕಾರ್ಯವನ್ನು ಜುಲಾಯಿಯಿಂದ ಸೆಪ್ಟೆಂಬರ್ದೊಳಗೆ ಮಾಡಬಹುದು. ನಾಟಿಯಾದ ೬ ವಾರಗಳೊಳಗೆ ಕಳೆ ನಿಯಂತ್ರಣವಾಗಬೇಕು. ಈ ಕ್ರಿಯೆ ಕೊಯ್ಲಿನ ತನಕ ಮುಂದುವರಿಯಬೇಕು.

ಗೊಬ್ಬರ: ಈ ಬೆಳೆಗೆ ರಾಸಾಯನಿಕ ಗೊಬ್ಬರದ ಅವಶ್ಯಕತೆಯಿಲ್ಲದಿದ್ದರೂ ಒಂದು ಹೆಕ್ಟೇರ್ ಭೂಮಿಗೆ ನಾಟಿಯಾದ ಒಂದು ತಿಂಗಳೊಳಗೆ ೯೦ ಕಿ.ಗ್ರಾಂ ಯೂರಿಯಾ ಮತ್ತು ಮೊದಲನೆ ಮತ್ತು ಎರಡನೆ ಕೊಯ್ಲಿನ ಬಳಿಕ ೪೫ ಕಿ.ಗ್ರಾಂ ಯೂರಿಯಾ ಕೊಟ್ಟಲ್ಲಿ ಇದು ಹೆಚ್ಚಿನ ಬೆಳವಣಿಗೆ ಸಾಧಿಸಬಲ್ಲದು. ಹೆಚ್ಚಿನ ವೇಳೆಗೆ ಮೈಕ್ರೋನ್ಯೂಟ್ರಿಯಟ್ಸ್‌ ಮತ್ತು ಬೆಳವಣಿಗೆ ಹತೋಟಿಕಾರಕಗಳನ್ನು ಬಳಸಬಹುದು.

ನೀರಾವರಿ: ಸೋನಾಮುಖಿಯನ್ನು ಮಳೆಗಾಲದಲ್ಲಿ ಬೆಳೆಸಬಹುದು. ಬರಪರಸ್ಥಿತಿಯಿದ್ದಲ್ಲಿ ಮಾತ್ರ ನೀರಾವರಿ ವ್ಯವಸ್ಥೆ ಬೇಕು. ಅಲ್ಪ ಪ್ರಮಾ?ಣದ ೪ ರಿಂದ ೮ ಬಾರಿ ನೀರುಣಿಸುವಿಕೆ ಆದಲ್ಲಿ ಉತ್ತಮ ಬೆಳೆ ದೊರಕಲು ಸಾಧ್ಯ.

ಕೀಟ ಮತ್ತು ರೋಗ: ಎಲೆ ಚುಕ್ಕೆ ಮಕತ್ತು ಎಲೆಕೊರೆತಗಳಿಂದಾಗಿ ಎಲೆಯುದುರುವುದು. ಇದರ ಹತೋಟಿಗಾಗಿ ಕಾರ್ಬನ್‌ಡಜಿಮ್‌ ನ ಶೇಕಡಾ ೦.೦೩ ದ್ರಾವಣವನ್ನು ಹದಿನೈದು ದಿನಗಳ ಅಂತರದಲ್ಲಿ ೩ ಬಾರಿ ಸಿಂಪಡಿಸಬೇಕು. ಬೀಜವನ್ನು ಬಿತ್ತುವಾಗ ೧ ಕಿ.ಗ್ರಾಂ ಬೀಜಕ್ಕೆ ೨.,೫ ಗ್ರಾಂ ನಷ್ಟು ಥಿರಮ್‌ನ  ಉಪಚಾರವಾದಲ್ಲಿ ರೋಗ ತಡೆಗಟ್ಟಬಹುದು.

ಕೊಯ್ಲು: ನಾಟಿಯಾದ ಎರಡು ತಿಂಗಳಲ್ಲಿ ಈ ಸಸ್ಯ ಹೂ ಬಿಡುವುದು. ಇದನ್ನು ಚಿವುಟುವುದರಿಂದ ರೆಂಬೆಗಳು ಹುಟ್ಟುತ್ತವೆ. ಇದರ ಮೊದಲ ಕೊಯ್ಲು ೯೦ ರಿಂದ ೧೨೦ ದಿನಗಳೊಳಗೆ ಮಾಡಬಹುದು. ಬಳಿಕ ಎರಡನೆ ಮತ್ತು ಮೂರನೆ ಕೊಯ್ಲನ್ನು ೩೦ ರಿಂದ ೪೦ ದಿನಗಳಿಗೊಮ್ಮೆ ಮಾಡಲು ಸಾಧ್ಯ. ಇದರ ಕೋಡುಗಳನ್ನು ಎರಡನೆ ಮತ್ತು ಮೂರನೆ ಎಲೆಯ ಕೊಯ್ಲಿಗಾಗುವಾಗ ಮಾಡಬಹುದು.

ಕೊಯ್ಲು ಮಾಡಿದ ಎಲೆ ಮತ್ತು ಕೋಡುಗಳನ್ನು ನೆರಳಲ್ಲಿ ೫ ರಿಂದ ೧೦ ದಿನಗಳ ಕಾಲ ಒಣಗಿಸಬೇಕು. ಸರಿಯಾದ ಬೆಳಕಿನ ಅವಕಾಶವಿರುವ ಕೋಣೆಗಳಲ್ಲಿ ಇದು ಒಣಗಬೇಕಿದ್ದಲ್ಲಿ ಹೆಚ್ಚು ಕಡಿಮೆ ೧೨ ದಿನಗಳು ಬೇಕಾಗುವುದು. ಸರಿಯಿಆಗಿ ಒಣಗಿದ ಎಲೆ ಮತ್ತು ಕೋಡಿನ ಬಣ್ಣ ನಸು ಹಸಿರಿನಿಂದ ಹಳದಿಯಿಂದ ಕೂಡಿದ ಹಸುರು ಬಣ್ಣದಾಗಿರುವುದು. ಒಣಗಿದ ಉತ್ಪನ್ನಗಳನ್ನು ಗಾಳಿಯಾಡದ ಚೀಲಗಳಲ್ಲಿ ತುಂಬಿಸಿಡಬೇಕು. ಹೀಗೆ ಒಂದೂವರೆ ವರ್ಷಗಳ ಕಾಲ ಶೇಖರಿಸಿಡಬಹುದು.

ಇಳುವರಿ: ಒಂದು ಹೆಕ್ಟೇರ್ ಸೋನಾಮುಖಿ ಕೃಷಿಯಿಂದ ಸರಾಸರಿ ಹದಿನೈದು ಕ್ವಿಂಟಾಲ್‌ ಒಣ ಎಲೆ ಮತ್ತು ಏಳು ಕ್ವಿಂಟಾಲ್‌ಗಳಷ್ಟು ಒಣಕೋಡುಗಳನ್ನು ಗಳಿಸಬಹುದು.

ವೆಚ್ಚ ಮತ್ತು ಆದಾಯ: ಸೋನಾಮುಖಿಯನ್ನು ಒಂದು ಹೆಕ್ಟೇರಿನಲ್ಲಿ ಬೆಳೆಸಲು ತಗಲಬಹುದಾದ ವೆಚ್ಚ ಸುಮಾರು ೭೦೦೦ ರೂಪಾಯಿಗಳು, ಉತ್ಪನ್ನಗಳ ಮಾರಾಟದಿಂದ ಗಳಿಸಬಹುದಾದ ಆದಾಯ ಸುಮಾರು ೩೭,೫೦೦ ರೂಪಾಯಿಗಳಾಗಿವೆ.