ಭಾರತ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ  ಔಷಧೀಯ ಸಸ್ಯಗಳಿಗೆ ಅಗಾಧ ಬೇಡಿಕೆಯಿದೆ. ಆದರೆ ಇಲ್ಲೆಲ್ಲ ಇವುಗಳಿಗಿರುವ ಮಾರುಕಟ್ಟೆ ಅಥವಾ ಮಾರಾಟ ವ್ಯವಸ್ಥೆ ಅಸಂಘಟಿತ ಕ್ಷೇತ್ರದಲ್ಲಿದೆ. ಭಾರತದಲ್ಲಿ ಈ ಮೂಲಿಕೆಗಳ ಮಾರಾಟ ವ್ಯವಸ್ಥೆಯಲ್ಲಿ ಹೆಚ್ಚಾಗಿ ಗ್ರಾಮಮಟ್ಟ, ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಆದಿವಾಸಿಗಳು ಮತ್ತು ಹಿಂದುಳಿದ ವರ್ಗದವರು ಪಾಲುದಾರರಾಗಿದ್ದು, ಇವರಿಂದ ಸಂಗ್ರಹಿಸಲ್ಪಟ್ಟ ಮೂಲಿಕೆಗಳನ್ನು ಮಧ್ಯವರ್ತಿಗಳು, ಸಣ್ಣ ಅಂಗಡಿ ಹೊಂದಿರುವವರು, ಸಂತೆಗಳಲ್ಲಿನ ವ್ಯಾಪಾರಸ್ಥರು ಕೊಂಡು ಕೊಂಡು ಅವನ್ನು ಖಾಸಗಿ ಮೂಲಿಕಾ ವ್ಯಾಪಾರಸ್ಥರಿಗೆ ಮಾರಾಟ ಮಾಡುತ್ತಾರೆ. ಈ ಖಾಸಗಿ ವ್ಯಾಪಾರಸ್ಥರು ಅವನ್ನು ಖಾಸಗಿ ಔಷಧ ತಯಾರಕರಿಗೆ ಪೂರೈಸುತ್ತಾರೆ. ಇದರೊಂದಿಗೆ ದೇಶದ ನಾನಾ ಭಾಗಗಳಲ್ಲಿ ಈ ವ್ಯವಸ್ಥೆಯಲ್ಲಿ ಸಹಕಾರಿ ಸಂಸ್ಥೆಗಳು, ಸರಕಾರದ ಮತ್ತು ಸರಕಾರದ ಹತೋಟಿಯಲ್ಲಿರುವ ಸಂಸ್ಥೆಗಳು ಕಾರ್ಯನಿರ್ವಹಿಸುತ್ತವೆ. ಆದರೆ ಈ ಎರಡೂ ರೀತಿಯ ಮಾರಾಟ ವ್ಯವಸ್ಥೆಯಲ್ಲಿ ಅಸಂಘಟಿತ ವಲಯದ ಪ್ರಾಬಲ್ಯ ಅಧಿಕವಾಗಿದೆ.

ಅಸಂಘಟಿತ ವ್ಯವಸ್ಥೆಯಲ್ಲಿ ಗಿಡಮೂಲಿಕೆಗಳನ್ನು ಗ್ರಾಮೀಣ ಪ್ರದೇಶದ ಬುಡಕಟ್ಟು ಜನಾಂಗದ ಮಹಿಳೆಯರು ಮತ್ತು ಮಕ್ಕಳು ಅರಣ್ಯ ಪ್ರದೇಶಗಳಿಂದ ಸಂಗ್ರಹಿಸುತ್ತಾರೆ. ಇದರೊಂದಿಗೆ ಸ್ಥಳೀಯ ವರ್ತಕರು ಅವರದ್ದೇ ಆದ ಜಾಲವನ್ನು ಹೊಂದಿಕೊಂಡು ಸಂಗ್ರಹವಾದ ಮೂಲಿಕೆಗಳನ್ನು ವಾಋದ ಸಂತೆಗಳು ಇಲ್ಲವೇ ಪಟ್ಟಣ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಾರೆ. ಇಲ್ಲಿ ಸಂಗ್ರಹವಾದ ಉತ್ಪನ್ನಗಳು ಬಳಿಕಕ ಸ್ಥಳೀಯ ಇಲ್ಲವೇ ಪ್ರಾದೇಶಿಕ ಸಗಟು ವ್ಯಾಪಾರಸ್ಥರತ್ತ ಚಲಿಸಿ ಅಲ್ಲಿಂದ ಪಟ್ಟಣಗಳತ್ತ ಹೋಗುತ್ತವೆ. ಈ ರೀತಿಯ ಮಾರಾಟ ಕೊಂಡಿಯಲ್ಲಿ ಅಧಿಕ ಸಂಖ್ಯೆಯ ಸಂಗ್ರಹಕಾರರು, ಸಂಸ್ಕರಣಾಕಾರರು, ವ್ಯಾಪಾರಸ್ಥರು, ದಲ್ಲಾಳಿಗಳು, ಮಧ್ಯವರ್ತಿಗಳು ಮತ್ತು ವ್ಯವಹಾರಸ್ಥರಿರುತ್ತಾರೆ. ಭಾರತದಲ್ಲಿ ಈ ರೀತಿಯ ಮಾರಾಟ ಜಾಲವಿರುವುದರಿಂದ ಗಿಡ ಮೂಲಿಕೆಗಳ ಒಟ್ಟು ಮಾರಾಟ ಎಷ್ಟಾಗುತ್ತಿದೆಯೆಂಬುದನ್ನು ನಿಖರವಾಗಿ ಹೇಳಲು ಅಸಾಧ್ಯ.

ಕೇರಳ ರಾಜ್ಯದಲ್ಲಿ ಔಷಧೀಯ ಸಸ್ಯಗಳ ಮಾರಾಟ ವ್ಯವಸ್ಥೆಯಲ್ಲಿ ಸಹಕಾರಿ ಸಂಸ್ಥೆಯೊಂದು ಕಾರ್ಯನಿರ್ವಹಿಸುತ್ತಿದ್ದು, ಇದೊಂದು ವ್ಯವಸ್ಥಿತ ಮಾರಾಟ ಜಾಲವಾಗಿದೆ. ಕೇರಳ ರಾಜ್ಯ ಸಂಸ್ಥಾನ ಹಿಂದುಳಿದ ಜಾತಿ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ಸಹಕಾರಿ ನಿಯಮಿತವು ತಿರುವನಂತಪುರ, ಅಡಿಮಲಿ, ತ್ರಿಶೂರು ಮತ್ತು ಕಲ್ಲಪೆಟ್ಟ ಜಿಲ್ಲೆಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದ್ದು, ಈ ಶಾಖೆಗಳು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿರುವ ೩೪ ಸಹಕಾರಿ ಸಂಘಗಳಿಂದ ಔಷಧೀಯ ಸಸ್ಯಗಳನ್ನು ಖರೀದಿಸುತ್ತಿದೆ. ಈ ವ್ಯವಸ್ಥೆಯಲ್ಲಿ ವಾರ್ಷಿಕವಾಗಿ ಅರಣ್ಯ ಸಮಿತಿಯು ಬೇರೆ ಬೇರೆ ಅರಣ್ಯ ಪ್ರದೇಶಗಳನ್ನು ಬುಡಕಟ್ಟು ಸಂಸ್ಥೆಗಳಿಗೆ ಅರಣ್ಯಗಳಲ್ಲಿರುವ ಸಸ್ಯಗಳ ಸಂಗ್ರಹಣೆಗೆ ನಿಗದಿಪಡಿಸುತ್ತದೆ. ಸಂಗ್ರಹಕಾರರಿಗೆ ಅನುಕೂಲವನ್ನು ಕಲ್ಪಿಸುವ ಉದ್ದೇಶದಿಂದ ಈ ಸಹಕಾರಿ ಸಂಸ್ಥೆಗಳು ಅರಣ್ಯ ಪ್ರದೇಶಗಳಲ್ಲಿ ಸಂಗ್ರಹಣಾ ಶಾಖೆಗಳನ್ನು ತೆರೆಯುತ್ತವೆ. ಈ ಶಾಖೆಗಳನ್ನು ತೆರೆಯುತ್ತವೆ. ಈ ಶಾಖೆಗಳನ್ನು ಬುಡಕಟ್ಟು ಜನಾಂಗಕ್ಕೆ ಸೇರಿದ ಮುಖ್ಯ ನಿರ್ವಾಹಕರು ನಿರ್ವಹಿಸುತ್ತಾರೆ. ಅಧಿಕ ಪ್ರಮಾಣದ ಸಂಗ್ರಹಣೆಯಾದಾಗ ಈ ಶಾಖೆಗಳು ಸಂಸ್ಥಾನಕ್ಕೆ ಮಾಹಿತಿಯೊದಗಿಸಿ ಹರಾಜು ವ್ಯವಸ್ಥಾಯನ್ನು ಮಾಡುತ್ತದೆ. ಈ ಸಂಸ್ಥಾನವು ಗಿಡಮೂಲಿಕಾ ವ್ಯವಹಾರಸ್ಥರನ್ನು ಆಹ್ವಾನಿಸಿ ವ್ಯವಹಾರವನ್ನು ಕುದುರಿಸಿಕೊಳ್ಳುತ್ತದೆ. ಹೀಗಿದ್ದರೂ ಹಣಕಾಸಿನ ತೊಂದರೆ ಶೇಖರಣಾ ವ್ಯವಸ್ಥೆಯ ಕೊರೆತ ಇತ್ಯಾದಿ ಸಮಸ್ಯೆಗಳಿಂದಾಗಿ ಸಂಸ್ಥಾನಕ್ಕೆ ಕೇವಲ ಶೇಕಡಾ ೩೦ ರಷ್ಟು ಗಿಡಮೂಲಿಕೆಗಳ ಮಾರಾಟ ಸಾಧ್ಯವಾಗುತ್ತಿದೆ, ಉಳಿದ ಶೇಕಡಾ ೭೦ ನ್ನು ಖಾಸಗಿ ವರ್ತಕರು ನಡೆಸುತ್ತಿದ್ದಾರೆ. ಅಧ್ಯಯನಗಳ ಪ್ರಕಾರ ಖಾಸಗಿ ವರ್ತಕರು ಬುಡಕಟ್ಟು ಜನಾಂಗದ ಸಂಗ್ರಹಕಾರರಿಗೆ ಹಣಕಾಸಿನ ನೆರವು, ಆಹಾರ, ಬಟ್ಟೆ ಇತ್ಯಾದಿಗಳನ್ನು ಕೊಟ್ಟು ಅವರನ್ನು ತಮ್ಮೆಡೆಗೆ ಸೆಳೆಯುತ್ತಿದ್ದಾರೆ. ಈ ಬುಡಕಟ್ಟು ಜನಾಂಗದವರು ಖಾಸಗಿ ವರ್ತಕರಿಂದ ಪಡೆದ ಹಣಕಾಸಿನ ಸಾಲದಿಂದಾಗಿ ಶಾಶ್ವತವಾಗಿ ಅವರ ವರ್ತುಲಕ್ಕೆ ಬಿದ್ದು ಬಿಡುತ್ತಾರೆ.

ಈ ಎರಡೂ ರೀತಿಯ ಮಾರಾಟ ವ್ಯವಸ್ಥೆಯೊಂದಿಗೆ ಕೇರಳದ ಕೊಟ್ಟೂರಿನಲ್ಲಿ ಖಾಸಗಿ ಸಂಗ್ರಹಕಾರರು ಗಿಡಮೂಲಿಕೆಗಳನ್ನು ಪ್ರತ ಈ ಬುಧವಾರ ಮತ್ತು ಶನಿವಾರ ಈ ಪ್ರದೇಶಗಳಲ್ಲಾಗುವ ಹರಾಜು ವ್ಯವಸ್ಥೆಯಲ್ಲಿ ಬುಡಕಟ್ಟು ಸಂಗ್ರಹಕಾರರಿಂದ ಪಡೆದುಕೊಳ್ಳುತ್ತಾರೆ. ಈ ಹರಾಜು ಪದ್ಧತಿಯ ಹತೋಟಿ ಅರಣ್ಯ ಇಲಾಖೆಯ ಅಧಿಕಾರಿಗಳಲ್ಲಿರುತ್ತದೆ. ಆದರೆ ಈ ವ್ಯವಸ್ಥೆಗೆ ಸರಕಾರದ ಪರವಾನಗಿ ಇಲ್ಲದಿದ್ದರೂ ಇದು ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ.

ಭಾರತದಲ್ಲಿ ಗಿಡಮೂಲಿಕೆಗಳಿಗಿರುವ ಒಟ್ಟು ಬೇಡಿಕೆಯೆಷ್ಟು ಎಂಬುದನ್ನು ಔಷಧ ತಯಾರಕರ ವ್ಯವಹಾರದಿಂದ ಅರಿತುಕೊಳ್ಳಬಹುದಾಗಿದ್ದರೂ, ಇದರ ಬಗ್ಗೆ ಮಾಹಿತಿ ನೀಡಲು ಇವರು ಹಿಂಜರಿಯುತ್ತಿದ್ದಾರೆ. ಇದರೊಂದಿಗೆ ಔಷಧೀಯ ಸಸ್ಯಗಳ ಮೂಲದ ವಿವಿಧ ಉತ್ಪನ್ನಗಳ ರಫ್ತಿನಿಂದ ದೊರಕಬಲ್ಲ ಆದಾಯದ ಬಗ್ಗೆ ಸರಕಾರದ  ವಿವಿಧ ವಿಭಾಗಗಳಿಂದ ಅಂಕಿ-ಅಂಶಗಳು ದೊರಕುತ್ತಿದ್ದು, ಇವುಗಳ ಪ್ರಕಾರ ಭಾರತವು ವಾರ್ಷಿಕವಾಗಿ ಸುಮಾರು ೫೫೦ ಕೋಟಿ ರೂಪಾಯಿಗಳಷ್ಟು ವಿದೇಶಿ ವಿನಿಮಯವನ್ನು ಗಳಿಸಿಕೊಳ್ಳುತ್ತಿದೆ.

ಆಂತರಿಕ ಮಾರುಕಟ್ಟೆಯಲ್ಲಿ ಗಿಡಮೂಲಿಕೆಗಳಿಗಿರುವ ಬೆಲೆ

ವಿವಿಧ ರೀತಿಯ ಔಷಧೀಯ ಪದ್ಧತಿಗಳಲ್ಲಿ ಉಪಯೋಗವಾಗುತ್ತಿರುವ ಮೂಲಿಕೆಗಳಿಗಿರುವ ಬೆಲೆ ಪ್ರದೇಶದಿಂದ ಪ್ರದೇಶಕ್ಕೆ, ಸಮಯದಿಂದ ಸಮಯಕ್ಕೆ ಅದಲು ಬದಲಾಗುತ್ತಿದೆ. ಗ್ರಾಮೀಣ ಮಟ್ಟದಲ್ಲಿ ಇವುಗಳ ಸಂಗ್ರಹಕಾರರಿಗೆ ದೊರಕುತ್ತಿರುವ ಬೆಲೆ ಅತ್ಯಲ್ಪ. ಔಷಧೀಯ ಸಸ್ಯಗಳಿಗಿರುವ ಬೇಡಿಕೆಯೆಷ್ಟು ಎಂಬುದರ ಬಗ್ಗೆ ಖಚಿತ ಮಾಹಿತಿ ಉತ್ಪಾದಕರಿಗೆ ಮತ್ತು ಸಂಗ್ರಹಕಾರರಿಗೆ ಗ್ರಾಮ ಮಟ್ಟದಲ್ಲಿ ದೊರಕದೇ ಇರುವುದರಿಂದ ಮತ್ತು  ಈ ಗಿಡಮೂಲಕೆಗಳಿಗೆ ನಿಗದಿಪಡಿಸಿದ ಬೆಲೆ ಪದ್ಧತಿ ಇಲ್ಲದಿರುವುದರಿಂದ, ಅಲ್ಲದೇ ಮೂಲಿಕೆಗಳ ಮೌಲ್ಯಕ್ಕನುಗುಣವಾಗಿ ಬೆಲೆ ನಿರ್ಧಾರವಾಗದಿರುವುದರಿಂದ ಇವುಗಳ ಬೆಲೆಯನ್ನು ನಿಖರವಾಗಿ ಹೇಳಲು ಕಷ್ಟ ಸಾಧ್ಯ.

ವಿವಿಧ ರೀತಿಯ ಗಿಡಮೂಲಿಕೆಗಳ ಬೆಲೆಯು ಉತ್ಪಾದನಾ ಪ್ರದೇಶದಿಂದ ಹಿಡಿದು ಅಂತಿಮ ಗ್ರಾಹಕನಲ್ಲಿಗೆ ಚಲಿಸಿದಾಗ ಬೇರೆ ಬೇರೆಯಾಗಿರುತ್ತದೆ. ಉದಾಹರಣೆಗೆ ನೆಲ್ಲಿಕಾಯಿಗೆ ಸ್ಥಳೀಯವಾಗಿ ದೊರಕಬಹುದಾದ ಬೆಲೆ ಕಿ.ಗ್ರಾಂ. ಒಂದರ ರೂಪಾಯಿ ೨೦ ರಿಂದ ೪೦, ಆದರೆ ಮಧ್ಯಪ್ರದೇಶದಲ್ಲಿ ಇದಕ್ಕೆ ಕಿ.ಗ್ರಾಂ. ಒಂದರ ರೂಪಾಯಿ ೮೦೦ ಜಬ್ಬಲ್ಪುರದಲ್ಲಿ ೧೪೦, ದೆಹಲಿಯಲ್ಲಿ ೬೦೦ ವರೆಗೆ ಇರುವುದು ಕಂಡು ಬಂದಿದೆ. ಇದೇ ರೀತಿ ಬಿಲ್ವಕ್ಕೆ ಸ್ಥಳೀಯವಾಗಿ ಕಿ.ಗ್ರಾಂ ಒಂದರ ರೂಪಾಯಿ ೧೦ ರಿಂದ ೨೦ ಇದ್ದು, ದೆಹಲಿಯಲ್ಲಿ ಇದು ರೂಪಾಯಿ ೫೦೦ ಆಗಿರುತ್ತದೆ. ಗರುಡ ಪಾತಾಳ ಯಾ ಸರ್ಪಗಂಧದ ಬೇರಿಗೆ ನಮ್ಮಲ್ಲಿ ದೊರಕುವ ಬೆಲೆ ರೂಪಾಯಿ ೮೦ ರಿಂದ ೧೦೦ (೧ ಕಿ.ಗ್ರಾಂ ಗೆ) ಆದರೆ ಜಬ್ಬಲಪುರದಲ್ಲಿ ಇದು ರೂಪಾಯಿ ೨೫೦೦ ಮತ್ತು ದೆಹಲಿಲಯಲ್ಲಿ ರೂಪಾಯಿ ೬೦೦೦ ಆಗಿದೆ .

ಬೆಲೆಯಲ್ಲಿ ಈ ರೀತಿಯ ತಾರತಮ್ಯಕ್ಕೆ ಮುಖ್ಯ ಕಾರಣ ಗಿಡಮೂಲಿಕೆಗಳ ಮಾರಾಟ ವ್ಯವಸ್ಥೆ ಅಸಂಘಟಿತ ವಲಯದ ಹತೋಟಿಯಲ್ಲಿರುವುದು. ಇದರೊಂದಿಗೆ ಗ್ರಾಮೀಣ ಪ್ರದೇಶದ ಸಂಗ್ರಹಕಾರರು ಮತ್ತು ಉತ್ಪಾದಕರಿಗೆ ಕ್ಷೇತ್ರ ಮತ್ತು ವ್ಯವಸ್ಥೆಗಳ ಬಗ್ಗೆ ಅರಿವಿಲ್ಲದಿರುವುದು. ಇದರೊಂದಿಗೆ ಔಷಧೀಯ ಸಸ್ಯಗಳ ನಿಜಮೌಲ್ಯ, ಅವುಗಳ ಬಳಕೆ ಇತ್ಯಾದಿಗಳ ಬಗ್ಗೆ ಮಾಹಿತಿಗಳ ಅಭಾವ, ಪೂರೈಕೆ, ಬೇಡಿಕೆಗಳ ಬಗ್ಗೆ ಕಲ್ಪನೆಯಿಲ್ಲದಿರುವುದು ಕಾರಣವಾಗಿದೆ. ಇವೆಲ್ಲದರೊಂದಿಗೆ ಗಿಡಮೂಲಿಕೆಗಳನ್ನು ಬಳಸಿ ಔಷಧ ತಯಾರಿಸುವ ಸಂಸ್ಥೆಗಳಿಗೆ ಇವುಗಳ ಪೂರೈಕೆ ಅಧಿಕ ಪ್ರಮಾಣದಲ್ಲಿ (ಟನ್‌ಗಳಲ್ಲಿ) ಆಗಬೇಕಾಗಿರುವುದರಿಂದ ಸಂಗ್ರಹಕಾರರಿಗೆ ಇಲ್ಲವೇ ಈ ಕೊಂಡಿಯಲ್ಲಿರುವ ದಲ್ಲಾಳಿ, ವರ್ತಕರು ಇವರೆಲ್ಲರಿಗೆ ಅಲ್ಪ ಪ್ರಮಾಣದ ಸಂಗ್ರಹಣೆಗೆ ತಗಲುವ ವೆಚ್ಚ, ಅವರುಗಳಿಗೆ ಲಭಿಸಬೇಕಾಗಿರುವ ಲಾಭಾಂಶ, ಸಾಗಣೆ ವೆಚ್ಚ ಇವೆಲ್ಲಾ ಸೇರಿ ಉತ್ಪಾದಕ ಇಲ್ಲವೆ ಸಂಗ್ರಹಕಾರರಿಗೆ ಗ್ರಾಮಮಟ್ಟದಲ್ಲಿ ದೊರಕುವ ಬೆಲೆಯು ಅಂತಿಮ ಹಂತದ ಗ್ರಾಹಕನು ಕೊಡುವ ಬೆಲೆಗಿಂತ ಕಡಿಮೆಯಾಗಿರುತ್ತದೆ. ಗ್ರಾಮ ಮಟ್ಟದಲ್ಲಿ ಕೆಲವೊಂದು ಔಷಧೀಯ ಸಸ್ಯಗಳಿಗೆ ದೊರಕಬಹುದಾದ ಬೆಲೆಯನ್ನು ಪಟ್ಟಿ-೧ ರಲ್ಲಿ ಕೊಡಲಾಗಿದೆ.

ಪಟ್ಟಿ೧ : ಔಷಧೀಯ ಸಸ್ಯಗಳಿಗೆ ಸ್ಥಳೀಯವಾಗಿ ದೊರಕಬಹುದಾದ ಬೆಲೆ

ಸಸ್ಯದ ಹೆಸರು

ಮಾರಾಟಕ್ಕಿರುವ ಉತ್ಪನ್ನ

ಕಿ.ಗ್ರಾಂ ಬೆಲೆ.

ಅಶೋಕ ಹಸಿ ತೊಗಟೆ ೧೦ ರಿಂದ ೨೦
ಅಮೃತಬಳ್ಳಿ ಹಸಿ ಬಳ್ಳಿ ೨೫ ರಿಂದ ೩೦
ಎಕ್ಕ ಹಸಿ ಎಲೆ ೩ ರಿಂದ ೫
ಉತ್ತರಣೆ ಹಸಿ/ಒಣದಂಟು ೧೦ ರಿಂದ ೧೫
ಶತಾವರಿ ಹಸಿ/ಒಣಗಡ್ಡೆ ೧೦ ರಿಂದ ೨೦
ಗರುಡಪಾತಾಳ ಒಣಬೇರು ೬೦ ರಿಂದ ೮೦
ತುಳಸಿ ಎಲೆ ೫ ರಿಂದ ೧೦
ನೇರಳೆ ಹಸಿತೊಗಟೆ ೫ ರಿಂದ ೧೦
ಗರ್ಗ ಹಸಿ ಬಳ್ಳಿ ೧೦ ರಿಂದ ೧೫
ಬಜೆ ಒಣಗಡ್ಡೆ ೫೦ ರಿಂದ ೬೦
ಕಟುಕರೋಹಿಣಿ ಹಸಿಬೇರು ೫ ರಿಂದ ೧೦
ಒಂದೆಲಗ ಹಸಿ ಎಲೆ/ಗಡ್ಡೆ ೧೦ ರಿಂದ ೨೦
ಬಿಲ್ವ ಹಸಿ ಎಲೆ/ಕಾಯಿ ೧೦ ರಿಂದ ೧೫
ಕಿರಾತಕಡ್ಡಿ ಹಸಿ/ಒಣಗಿಡ ೫ ರಿಂದ ೨೫
ಶಾಂತಿ ಹಸಿಕಾಯಿ ೫ ರಿಂದ ೮
ಆಡುಸೋಗೆ ಹಸಿ ಎಲೆ/ಬೇರು ೫ ರಿಂದ ೧೫
ಹಿಪ್ಪಲಿ ಒಣಹಣ್ಣು ೫೦ ರಿಂದ ೧೦೦
ಮದರಂಗಿ ಒಣ ಎಲೆ ೧೦ ರಿಂದ ೨೦
ಈಶ್ವರಬಳ್ಳಿ ಹಸಿಬೇರು ೫ ರಿಂದ ೧೦
ಗರಿಕೆ ಹಸಿಬಳ್ಳಿ ೫ ರಿಂದ ೮

ಔಷಧೀಯ ಸಸ್ಯಗಳಿಗಿರುವ ವಿಶ್ವ ಮಾರುಕಟ್ಟೆ

ವಿಶ್ವ ಮಾರುಕಟ್ಟೆಗೆ ಪೂರೈಕೆಯಾಗುತ್ತಿರುವ ಗಿಡಮೂಲಿಕೆಗಳ ಉತ್ಪನ್ನಗಳ ಬಹುಪಾಲು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಂದಾಗುತ್ತಿದೆ. ಇವುಗಳಿಗೆ ಮುಖ್ಯ ಗ್ರಾಹಕರು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾಗಿವೆ. ಅಂತರಾಷ್ಟ್ರೀಯ ಮಾರುಕಟ್ಟೆಗೆ ಔಷಧೀಯ ಸಸ್ಯ ಮತ್ತು ಅವುಗಳ ಮೂಲದ ಉತ್ಪನ್ನಗಳನ್ನು ರಫ್ತು ಮಾಡುವ ರಾಷ್ಟ್ರಗಳಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದರೆ, ಭಾರತ ಎರಡನೆ ಸ್ಥಾನದಲ್ಲಿದೆ. ಆಮದಿನ ದೃಷ್ಟಿಯಿಂದ ಹಾಂಕಾಂಗ್‌ಮೊದಲ ಸ್ಥಾನದಲ್ಲಿದ್ದು, ನಂತರದ ಸ್ಥಾನಗಳನ್ನು ಜಪಾನು, ಜರ್ಮನಿ ಮತ್ತು ಅಮೇರಿಕಾಗಳು ಹೊಂದಿರುತ್ತವೆ. ವಿದೇಶಿ ಮಾರುಕಟ್ಟೆಗೆ ಪ್ರವೇಶವಾಗುವ ಉತ್ಪನ್ನಗಳಲ್ಲಿ ಸಸ್ಯಗಳು , ಗಡ್ಡೆ, ಕಾಂಡ, ಬೇರು, ಮರದ ತುಂಡಿನ ಭಾಗ, ತೊಗಟೆ, ಎಲೆ, ಹೂವು, ಹಣ್ಣು, ಬೀಜ ಮತ್ತಿತರ ಸಸ್ಯ ಮೂಲದ ಉತ್ಪನ್ನಗಳು ಸೇರಿವೆ. ಒಟ್ಟಾರೆಯಾಗಿ ಈ ವ್ಯವಹಾರವಿಂದು ಸುಮಾರು ೬೨ ಬಿಲಿಯ ಅಮೇರಿಕಾದ ಡಾಲರುಗಳಷ್ಟಾಗಿವೆ. ಇತ್ತೀಚಿನ ವರ್ಷಗಳಲ್ಲಿ ಈ ಉತ್ಪನ್ನಗಳಿಗೆ ಐರೋಪ್ಯ ಸಮುದಾಯ ಮತ್ತು ಉತ್ತರ ಅಮೇರಿಕಾಗಳಲ್ಲಿ ಅಧಿಕ ಬೇಡಿಕೆ ಕಂಡು ಬರುತ್ತಿದ್ದು, ಇದರ ಒಟ್ಟು ಮೌಲ್ಯ ೧೬.೭ ಬಿಲಿಯ ಅಮೇರಿಕಾದ ಡಾಲರುಗಳಾಗಿವೆ. ಈ ಎರಡೂ ಸಮುದಾಯಗಳು ವಿಶ್ವದ ಒಟ್ಟು ಗಿಡಮೂಲಿಕೆಗಳ ಮಾರುಕಟ್ಟೆಯ ಶೇಕಡಾ ೬೪ ರಷ್ಟು ಪಾಲನ್ನು ಹೊಂದಿವೆ. ಇದರಲ್ಲಿ ಐರೋಪ್ಯ ಸಮುದಾಯದ ಪಾಲು ಶೇಕಡಾ ೪೬ ರಷ್ಟಾಗಿದೆ. ಐರೋಪ್ಯ ಸಮುದಾಯದಲ್ಲಿ ಜರ್ಮನಿಯ ಪಾಲು ಶೇಕಡಾ ೨೨, ಫ್ರಾನ್ಸ್‌ನ ಪಾಲು ಶೇಕಡಾ ೧೧, ಇಟಲಿಯ ಪಾಲು ಶೇಕಡಾ ೫ ಆಗಿರುತ್ತದೆ. ಜಾಗತಿಕ ಮಟ್ಟದಲ್ಲಿ ಔಷಧೀಯ ಮತ್ತು ಸುಗಂಧ ಸಸ್ಯಗಳ ಮತ್ತವುಗಳ ಉತ್ಪನ್ನಗಳ ಒಟ್ಟು ವ್ಯವಹಾರಗಳ ಬಗ್ಗೆ UNCTAD ಕೊಡುವ ಅಂಕಿ-ಅಂಶಗಳನ್ನು ಪಟ್ಟಿ -೨ ಮತ್ತು ಪಟ್ಟಿ -೩ ರಲ್ಲಿ ಕೊಡಲಾಗಿದೆ. ಇವುಗಳ ಆಧಾರದಿಂದ ಇವುಗಳ ರಫ್ತು ಮತ್ತು ಆಮದುಗಳ ಬಗ್ಗೆ ನಾವು ಅರಿತುಕೊಳ್ಳಬಹುದು.

ಪಟ್ಟಿ : ಪ್ರಮುಖ ರಾಷ್ಟ್ರಗಳಿಂದ ರಫ್ತಾಗುತ್ತಿರುವ ಔಷಧೀಯ ಮತ್ತು ಸುಗಂಧ ಸಸ್ಯಗಳ ಉತ್ಪನ್ನಗಳು ೧೯೯೧೯೮

ರಾಷ್ಟ್ರ

ಪ್ರಮಾಣ (ಟನ್ಗಳಲ್ಲಿ)

ಮೌಲ್ಯ (೦೦೦ಡಾಲರುಗಳಲ್ಲಿ)

ಚೀನಾ ೧,೩೯,೭೫೦ ೨,೯೮,೬೫೦
ಭಾರತ ೩೬,೭೫೦ ೫೭,೪೦೦
ಜರ್ಮನಿ ‘೧೫,೦೫೦ ೭೨,೪೦೦
ಅಮೇರಿಕಾ ೧೧,೯೫೦ ೧,೧೪,೪೫೦
ಚಿಲಿ ೧೧,೮೫೦ ೨೯,೧೦೦
ಈಜಿಪ್ಟ್‌ ೧೧,೩೫೦ ೨೯,೧೦೦
ಸಿಂಗಾಪುರ ೧೧,೨೫೦ ೫೯,೮೫೦
ಮೆಕ್ಸಿಕೊ ೧೦,೬೦೦ ೧೦,೦೫೦
ಬಲ್ಗೇರಿಯಾ ೧೦,೧೫೦ ೧೪,೮೫೦
ಪಾಕಿಸ್ಥಾನ ೮,೧೦೦ ೫,೩೦೦
ಅಲ್ಬೀನಿಯಾ ೭,೩೫೦ ೧೪,೦೫೦
ಮೊರಾಕ್ಕೊ ೭,೨೫೦ ೧೩,೨೦೦
ಒಟ್ಟು ೨,೮೧,೬೫೦ ೬,೪೩,೨೦೦

ಪಟ್ಟಿ : ಪ್ರಮುಖ ರಾಷ್ಟ್ರಗಳಿಗೆ ಆಮದಾಗುವ ಔಷಧೀಯ ಮತ್ತು ಸುಗಂಧ ಸಸ್ಯಗಳ ಉತ್ಪನ್ನಗಳು೧೯೯೧೧೯೯೮

ರಾಷ್ಟ್ರ

ಪ್ರಮಾಣ (ಟನ್ಗಳಲ್ಲಿ)

ಮೌಲ್ಯ(೦೦೦ ಡಾಲರ್ ಗಳಲ್ಲಿ)

ಹಾಂಕಾಂಗ್‌ ೭೩,೬೫೦ ೩,೧೪,೦೦೦
ಜಪಾನು ೫೬,೭೫೦ ೧,೪೬,೬೫೦
ಅಮೇರಿಕಾ ೫೬,೦೦೦ ೧,೩೩,೩೫೦
ಜರ್ಮನಿ ೪೫,೮೫೦ ೧,೧೩,೯೦೦
ಕೊರಿಯಾ ರಿಪಬ್ಲಿಕ್‌ ೩೧,೪೦೦ ೫೨,೫೫೦
ಫ್ರಾನ್ಸ್‌ ೨೦,೮೦೦ ೫೦,೪೦೦
ಚೀನಾ ೧೨,೪೦೦ ೪೧,೭೫೦
ಇಟಲಿ ೧೧,೪೫೦ ೪೨,೨೫೦
ಪಾಕಿಸ್ಥಾನ ೧೧,೩೫೦ ೧೧,೮೫೦
ಸ್ಪೈನ್‌ ೮,೬೦೦ ೨೭,೪೫೦
ಇಂಗ್ಲಂಡ್‌ ೬,೫೫೦ ೨೫,೫೫೦
ಸಿಂಗಾಪುರ ೬,೫೫೦ ೫೫,೫೦೦
ಒಟ್ಟು ೩,೪೨,೫೫೦ ೧೦,೧೫,೨೦೦

ಮೂಲ: UNCTAD 2002

ಅಮೇರಿಕಾದಲ್ಲಿ ಔಷಧೀಯ ಸಸ್ಯಗಳಾದ ನೆಲನೆಲ್ಲಿ, ಅಶ್ವಗಂಧ, ಬ್ರಾಹ್ಮಿ, ಗುಗ್ಗುಲ, ಹರಿತಾಕಿ,ಶತಾವರಿ, ಯಷ್ಟಿಮಧುರ ಇತ್ಯಾದಿಗಳಿಗೆ ಅತ್ಯಧಿಕ ಬೇಡಿಕೆ ಇತ್ತೀಚಿನ ವರ್ಷಗಳಲ್ಲಿ ಕಂಡು ಬರುತ್ತಿದ್ದು, ಇದು ಸಾಂಪ್ರದಾಯಿಕ ಔಷಧೀಯ ಪದ್ಧತಿಗೆ ಅಲ್ಲಿರುವ ಮಹತ್ವವನ್ನು ತೋರಿಸುತ್ತದೆ. ಐರೋಪ್ಯ ರಾಷ್ಟ್ರಗಳಿಗೆ ಗಿಡಮೂಲಿಕೆಗಳು ಮತ್ತು ಉತ್ಪನ್ನಗಳನ್ನು ಪೂರೈಸುವವರಲ್ಲಿ ಅಮೇರಿಕಾ ಮೊದಲ ಸ್ಥಾನದಲ್ಲಿದೆ. ಆ ಬಳಿಕದ ಸ್ಥಾನಗಳನ್ನು ಕ್ರಮವಾಗಿ ಚೀನಾ, ಜರ್ಮನಿ, ಫ್ರಾನ್ಸ್‌, ಭಾರತಗಳು ಹೊಂದಿವೆ. ಭಾರತವುಇ ೧೯೯೯-೨೦೦೦ದಲ್ಲಿ ಐರೋಪ್ಯ ಸಮುದಾಯಕ್ಕೆ ರಫ್ತು ಮಾಡಿದ ಔಷಧೀಯ ಸಸ್ಯಗಳ ಮೌಲ್ಯ ಸುಮಾರು ೧೪ ಮಿಲಿಯ ಡಾಲರುಗಳಷ್ಟಾಗಿದೆ. ಐರೋಪ್ಯ ಸಮುದಾಯದಲ್ಲಿ ಶಕ್ತಿ ಯಾ ಬಲವರ್ಧನೆಗೆ ಪೂರಕವಾಗಬಲ್ಲ ಔಷಧೀಯ ಸಸ್ಯಗಳ ಉತ್ಪನ್ನಕ್ಕೆ ಬೇಡಿಕೆ ಏರುತ್ತಿರುವುದು ಇತ್ತೀಚಿನ ವರ್ಷಗಳ ಮಾರುಕಟ್ಟೆ ಸಮೀಕ್ಷೆಗಳಿಂದ ಕಂಡು ಬಂದಿದೆ.

ವಿಶ್ವದಲ್ಲಿ ಸಸ್ಯಾಧಾರಿತ ಔಷಧಿಗಳ ಮಾರುಕಟ್ಟೆಯ ಬೆಳವಣಿಗೆ

ಔಷಧೀಯ ಸಸ್ಯ ಮೂಲದ ಉತ್ಪನ್ನಗಳಿಗೆ ವಿಶ್ವದಾದ್ಯಂತ ದಿನದಿಂದ ದಿನಕ್ಕೆ ಬೇಡಿಕೆ ಏರುತ್ತಿದ್ದು, ಈ ಬೆಳವಣಿಗೆಯು ವಾರ್ಷಿಕವಾಗಿ ಸರಾಸರಿ ಶೇಕಡಾ ೧೦ ರಿಂದ ೧೫ ರಷ್ಟಾಗಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿಂದು ಎಲ್ಲವೂ ಸ್ವಾಭಾವಿಕವೆಂಬ ಮೂಲ ಮಂತ್ರ ಹೊರಹೊಮ್ಮಿದ್ದು, ಸಸ್ಯಮೂಲ ಔಷಧಿಗಳಲ್ಲಿ ಆಧುನಿಕ ಔಷಧಿಗಳಿಂದಾಗಬಲ್ಲ ಯಾವುದೇ ಇತರ ತೊಂದರೆಗಳು ಬಾರದಿರುವುದರಿಂದ ಅಲ್ಲದೆ ಈ ಮೂಲಿಕಾ ಔಷಧಗಳಿಗೆ ರೋಗಗಳನ್ನು ತಡೆಗಟ್ಟುವ ಮತ್ತು ನಿವಾರಣೆ ಮಾಡುವ ಸಾಮರ್ಥ್ಯವಿರುವುದರಿಂದ ಇವಕ್ಕಿಂದು ಬೇಡಿಕೆ ಹೆಚ್ಚುತ್ತಿದೆ. ಇದರೊಂದಿಗೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಏರುತ್ತಿರುವ ಜನಸಂಖ್ಯೆ, ಬಡತನ ಮತ್ತು ಕುಸಿಯುತ್ತಿರುವ ಆರ್ಥಿಕ ಸ್ಥಿತಿ ಇತ್ಯಾದಿಗಳು ಗಿಡಮೂಲಿಕೆಗಳ ಮೂಲದ ಔಷಧಿ ಪದ್ಧತಿಗೆ ಬೇಡಿಕೆಯನ್ನೇರಿಸುತ್ತಿವೆ. ಒಟ್ಟಾರೆಯಾಗಿ ಇವಕ್ಕಿರುವ ಬೇಡಿಕೆ ಅಧಿಕ ಮಟ್ಟದಲ್ಲಿ ಐರೋಪ್ಯ ಸಮುದಾಯದಲ್ಲಿ ಕಂಡು ಬರುತ್ತಿದೆ (ಪಟ್ಟಿ-೪)

ಪಟ್ಟಿ : ಪ್ರದೇಶಗಳಿಗನುಗುಣವಾಗಿ ಸಸ್ಯಮೂಲದ ಔಷಧಗಳ ಮಾರುಕಟ್ಟೆ ಬೆಳವಣಿಗೆ (೧೯೯೧೧೯೯೮)

ಪ್ರದೇಶ

೧೯೯೧೯೨ (ಶೇಕಡಾ)

೧೯೯೩೧೯೯೮ (ಶೇಕಡಾ)

ಯುರೋಪು
ಯುರೋಪಿನ ಉಳಿದ ಭಾಗ ೧೨
ದಕ್ಷಿಣ ಪೂರ್ವ ಏಶ್ಯಾ ೧೨ ೧೨
ಜಪಾನು ೧೫ ೧೫
ದಕ್ಷಿಣ ಏಷ್ಯಾ ೧೫ ೧೫

ಮೂಲ: UNCTAD 2002

ಒಟ್ಟಾರೆಯಾಗಿ ಸಾಂಪ್ರದಾಯಿಕ ಔಷಧಿಗಳಿಗೆ ಇತ್ತೀಚಿನ ವರ್ಷಗಳಲ್ಲಿ ವಿಶ್ವದಾದ್ಯಂತ ಬೇಡಿಕೆ ಹೆಚ್ಚುತ್ತಿದ್ದು, ಇದು ಔಷಧೀಯ ಸಸ್ಯಗಳಿಗೆ ಮುಂದೆ ಬರಬಹುದಾದ ಬೇಡಿಕೆಯನ್ನು ಎತ್ತಿ ತೋರಿಸುತ್ತಿದೆ. ವಿಶ್ವ ಆರೋಗ್ಯ ಸಂಘಟನೆ (W.H.O.) ಕಂಡುಕೊಂಡ ಪ್ರಕಾರ ಸಾಂಪ್ರದಾಯಿಕ ಔಷಧಿಗಳನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಬಳಸಿಕೊಳ್ಳುವ ಜನರ ಪ್ರಮಾಣ ಇಥಿಯೋಪಿಯಾದಲ್ಲಿ ಶೇಕಡಾ ೯೦, ರಾವ್ಡಾದಲ್ಲಿ ಶೇಕಡಾ ೭೦, ಭಾರತದಲ್ಲಿ ಶೇಕಡಾ ೭೦ ಬೆನಿನಲ್ಲಿ ಶೇಕಡಾ ೭೦, ಉಗಾಂಡದಲ್ಲಿ ಶೇಕಡಾ ೬೦ ಮತ್ತು ಟಾಂಜಾನಿಯಾದಲ್ಲಿ ಶೇಕಡಾ ೬೦ ರಷ್ಟಿದೆ. ಇದರೊಂದಿಗೆ W.H.O. ದ ಸಮೀಕ್ಷೆಯ ಪ್ರಕಾರ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಒಮ್ಮೆಯಾದರೂ ಈ ಪದ್ಧತಿಗೆ ಒಳಪಟ್ಟ ಜನಸಂಖ್ಯೆಯ ಪ್ರಮಾಣ ಕೆನಡಾದಲ್ಲಿ ಶೇಕಡಾ ೭೦, ಫ್ರಾನ್ಸ್‌ನಲ್ಲಿ ಶೇಕಡಾ ೪೨ ಮತ್ತು ಬೆಲ್ಜಿಯಂನಲ್ಲಿ ಶೇಕಡಾ ೩೧ ರಷ್ಟಾಗಿದೆ. ಸಾಂಪ್ರದಾಯಿಕ ಔಷಧಿಗೆ ಮಲೇಶಿಯಾದಲ್ಲಿ ವಾರ್ಷಿಕವಾಗಿ ೫೦೦ ಮಿಲಿಯ ಅಮೇರಿಕಾ ಡಾಲರುಗಳು ವ್ಯಯಿಸಲಾಗುತ್ತಿದ್ದು, ಇದು ಅಮೇರಿಕಾದಲ್ಲಿ ೩೦೦ ಮಿಲಿಯ, ಆಸ್ಟ್ರೇಲಿಯಾದಲ್ಲಿ ೮೦ ಮಿಲಿಯಗಳಾಗಿವೆ. ಜಪಾನಿನಲ್ಲಿ ಬಳಕೆಯಾಗುತ್ತಿರುವ ಗಿಡಮೂಲಿಕೆ ಆಧಾರಿತ ಔಷಧಿಗಳ ತಲಾವಾರು ಬಳಕೆಯು ವಿಶ್ವದಲ್ಲೇ ಅತ್ಯಧಿಕ ಪ್ರಮಾಣದ್ದಾಗಿದೆ.

ಭಾರತದಿಂದ ಔಷಧೀಯ ಸಸ್ಯಗಳು ಮತ್ತವುಗಳ ಉತ್ಪನ್ನಗಳ ರಫ್ತು

ಭಾರತದಿಂದ ಗಿಡಮೂಲಿಕೆಗಳು ಮತ್ತವುಗಳ ಉತ್ಪನ್ನಗಳನ್ನು ಮುಖ್ಯವಾಗಿ ಐರೋಪ್ಯ ಸಮುದಾಯ, ಅಮೇರಿಕಾ, ಜಪಾನು, ಸ್ವಿಟ್ಸರ್ ಲಾಂಡ್‌, ಏಶಿಯಾನ ರಾಷ್ಟ್ರಗಳು ಇತ್ಯಾದಿಗಳಿಗಾಗುತ್ತಿದೆ. ಈ ಉತ್ಪನ್ನಗಳ ಒಟ್ಟು ರಫ್ತಿನ ಶೇಕಡಾ ೪೫ ಐರೋಪ್ಯ ಸಮುದಾಯಕ್ಕೆ, ಏಶಿಯಾನ ರಾಷ್ಟ್ರಗಳಿಗೆ ಶೇಕಡಾ ೧೭, ಜಪಾನಿಗೆ ಶೇಕಡಾ ೧೬, ಉತ್ತರ ಅಮೇರಿಕಾಕ್ಕೆ ಶೇಕಡಾ ೧೧ ಆಗುತ್ತಿದೆ. ಒಟ್ಟು ರಫ್ತಿನ ಪ್ರಮಾಣದಲ್ಲಿ ಆಯುರ್ವೇದದ ಉತ್ಪನ್ನಗಳ ಪಾಲು ಶೇಕಡಾ ೯೮ ರಷ್ಟಾಗಿದೆ. ಭಾರತದಿಂದ ಔಷಧೀಯ ಸಸ್ಯಗಳು, ಸಸ್ಯಗಳ ಹೂ ಮತ್ತು ಹಣ್ಣು, ಔಷಧಿಗಳ ಮಿಶ್ರಣ, ಔಷಧಿಗಳು ರಫ್ತಾಗುತ್ತಿವೆ. ಭಾರತದಿಂದ ೨೦೦೧. ೨೦೦೨ರಲ್ಲಿ ರಫ್ತು ಆದ ಸಸ್ಯಗಳು ಮತ್ತು ಸಸ್ಯದ ಭಾಗಗಳ ಒಟ್ಟು ಮೌಲ್ಯ ೭೮.೦೫ ಮಿಲಿಯ ಅಮೇರಿಕಾದ ಡಾಲರ್ ಗಳಾಗಿದ್ದು, ಔಷಧೀಯ ಮಿಶ್ರಣದ ಮೌಲ್ಯ ೧೯.೪೧ ಮಿಲಿಯವಾಗಿದ್ದರೆ, ಚಿಲ್ಲರೆ ಮಾರಾಟಕ್ಕಾಗಿ ರಫ್ತಾನ ಆಯುರ್ವೇದ ಮತ್ತು ಯುನಾನಿ ಔಷಧಿಯ ಮೌಲ್ಯ ೩೧.೦೪ ಮಿಲಿಯ ಡಾಲರುಗಳಾಗಿದೆ. ಒಟ್ಟಾಗಿ ೨೦೦೧-೨೦೦೨ ೧೨೮.೫೦ ಮಿಲಿಯ ಡಾಲರು ಮೌಲ್ಯದ ಈ ಮೂರು ಉತ್ಪನ್ನಕಗಳ ರಫ್ತು ನಮಲ್ಲಿಂದಾಗಿದೆ.

ಪ್ರದೇಶಗಳಿಗನುಗುಣವಾಗಿ ರಫ್ತುನ್ನು ಗಣನೆಗೆ ತೆಗೆದುಕೊಂಡಾಗ ಅಮೇರಿಕಾ ಪ್ರಾಂತ್ಯಕ್ಕೆ ರಫ್ತಾದ ಉತ್ಪನ್ನಗಳ ಮೌಲ್ಯ ೨೦೦೧-೨೦೦೨ ರಲ್ಲಿ ೪೮.೯೦ ಮಿಲಿಯ ಡಾಲರು, ಏಶ್ಯಾಕ್ಕೆ ೩೦.೬೭೪ ಮಿಲಿಯ ಡಾಲರು, ಐರೋಪ್ಯ ಸಮುದಾಯಕ್ಕೆ ೨೧.೦೯ ಮಿಲಿಯ ಡಾಲರು, ಯುರೋಪಿನ ಇತರ ರಾಷ್ಟ್ರಗಳಿಗೆ ೧೦.೩೮ ಮಿಲಿಯ ಡಾಲರು, ಆಫ್ರಿಕಾಕ್ಕೆ ೮.೭೬ ಮಿಲಿಯ ಡಾಲರು, ಮಧ್ಯಪೂರ್ವ ರಾಷ್ಟ್ರಗಳಿಗೆ ೭.೧೮ ಮಿಲಿಯ ಡಾಳರು, ಒಶಿಯಾನಕ್ಕೆ ೧.೫೧ ಮಿಲಿಯ ಡಾಲರುಗಳಷ್ಟಾಗಿದೆ. ಭಾರತದಿಂದ ರಫ್ತಾಗುವ ಸಸ್ಯಗಳಲ್ಲಿ ಸದಾಪುಷ್ಪ, ಕಾಶಿಕಣಗಿಲೆ ಬೇರು, ಸೋನಾಮುಖಿ, ಇಸಬುಗೋಲು, ಅಫೀಮು, ನೋಳಿಸರ, ಗಸಗಸೆ, ಶ್ರೀಗಂಧ, ಹಿಪ್ಪಲಿ, ಸರ್ಪಗಂಧ ಇತ್ಯಾದಿಗಳು ಸೇರಿವೆ.

ರಫ್ತುದಾರರು ಎದುರಿಸುತ್ತಿರುವ ಸಮಸ್ಯೆಗಳು

ಭಾರತದ ಔಷಧೀಯ ಸಸ್ಯಗಳು ಮತ್ತು ಅವುಗಳ ವಿವಿಧ ಉತ್ಪನ್ನಗಳಿಗೆ ವಿದೇಶಿ ಮಾರುಕಟ್ಟೆಯಲ್ಲಿ ಅಗಾಧ ಬೇಡಿಕೆಯಿದ್ದರೂ ಇವುಗಳ ರಫ್ತು ನಿರೀಕ್ಷಿತ ಮಟ್ಟದಲ್ಲಾಗುತ್ತಿಲ್ಲ. ಈ ರೀತಿಯ ಪರಿಸ್ಥಿತಿಗೆ ಕಾರಣಗಳು ಹಲವು. ಭಾರತದ ಆಮದು ಮತ್ತು ರಫ್ತು ಬ್ಯಾಂಕ್‌ (EXIM Bank) ಇತ್ತೀಚಿಗೆ ನಡೆಸಿದ ಸಮೀಕ್ಷೆಯ ಪ್ರಕಾರ ಇಲ್ಲಿರುವ ತೊಡಕುಗಳೆಂದರೆ :

೧) ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಂಪ್ರದಾಯಿಕ ಔಷಧಿಗಳ ಉಪಯುಕ್ತತೆಯ ಬಗ್ಗೆ ತಿಳುವಳಿಕೆ ಮೂಡದಿರುವುದು.

೨) ಸರಕಾರದಿಂದ ಪ್ರೋತ್ಸಾಹದ ಅಭಾವ.

೩) ಹಣಕಾಸಿನ ತೊಂದರೆಗಳು.

೪) ವಿದೇಶಿ ಮಾರುಕಟ್ಟೆಯಲ್ಲಿ ಆಗಬೇಕಾಗಿರುವ ಪ್ರಮಾಣಪತ್ರ ಮತ್ತು ದಾಖಲಾತಿ ಪದ್ಧತಿ.

೫) ವಿದೇಶಿ ಮಾರುಕಟ್ಟೆಗಳಲ್ಲಿ ಪಾಲುದಾರರ ಯಾ ಅಂಗಸಂಸ್ಥೆಗಳಿಲ್ಲದಿರುವುದು.

೬) ಮಾರುಕಟ್ಟೆ ಬಗ್ಗೆ ಮಾಹಿತಿಯ ಅಭಾವ.

೭) ನಿರಂತರವಾಗಿ ಕಚ್ಚಾ ಉತ್ಪನ್ನಗಳ ಪೂರೈಕೆಯ ಅಭಾವ.

೮) ಕೆಲವೊಂದು ಸಸ್ಯಗಳ ರಫ್ತಿಗಿರುವ ಅಡ್ಡಿ ಆತಂಕಗಳು.

೯) ಕಾನೂನಿನ ಬಗ್ಗೆ ಮಾಹಿತಿಗಳ ಅಭಾವ.

೧೦) ಗ್ರಾಹಕರ ಬಗ್ಗೆ ಮಾಹಿತಿಯ ಕೊರತೆ.

೧೧) ಅರಣ್ಯ ಇಲಾಖೆಯಿಂದ NOC ಪರವಾನಗಿ ಪಡೆಯ ಬೇಕಾಗಿರುವುದು.

ಈ ಎಲ್ಲಾ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಬಂದಲ್ಲಿ ಭಾರತವು ವಿಶ್ವ ಮಾರುಕಟ್ಟೆಯಲ್ಲಿ ತನ್ನ ಪಾಲನ್ನು ಹೆಚ್ಚಿಸಬಹುದು. ಇದರಿಂದಾಗಿ ಆಂತರಿಕವಾಗಿ ಔಷಧೀಯ ಸಸ್ಯಗಳ ವಾಣಿಜ್ಯ ರೀತಿಯ ವ್ಯವಸಾಯಕ್ಕೆ ಪ್ರೇರಣೆ ದೊರಕಲು ಸಾಧ್ಯ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳು ಮತ್ತು ಸರಕಾರಗಳು ಆಸಕ್ತಿಯಿಂದೊಡಗೂಡಿದ ಯೋಜನೆಗಳನ್ನು ತಯಾರಿಸಿ ಅವನ್ನು ಕಾರ್ಯರೂಪಕ್ಕೆ ತರಬೇಕು.