ರಾಷ್ಟ್ರೀಯ ಔಷಧೀಯ ಸಸ್ಯಗಳ ನಿಗಮ

ದೇಶದ ಔಷಧೀಯ ಸಸ್ಯಗಳ ಕ್ಷೇತ್ರ ಇಂದು ಅಸಂಘಟಿತವಾಗಿದ್ದು, ಇದನ್ನೊಂದು ವ್ಯವಸ್ಥಿತ ರೀತಿಗೆ ತರಲು, ಇದಕ್ಕೆ ಸಂಬಂಧಪಟ್ಟ ಇಲಾಖೆ, ಸಂಸ್ಥೆ, ಸರಕಾರೇತರ ಸಂಸ್ಥೆ ಇವನ್ನೆಲ್ಲಾ ಈ ನಿಟ್ಟಿನಲ್ಲಿ ತೊಡಗಿಸಿಕೊಳ್ಳುವ ಅಗತ್ಯವನ್ನರಿತ ಕೇಂದ್ರ ಸರಕಾರವು ನವಂಬರ್ ೨೪, ೨೦೦೦ ರಂದು ರಾಷ್ಟ್ರೀಯ ಔಷಧೀಯ ಸಸ್ಯಗಳ ನಿಗಮವನ್ನು ಹುಟ್ಟುಹಾಕಿತು. ಈ ನಿಗಮದ ಉದ್ದೇಶಗಳೆಂದರೆ: ಔಷಧೀಯ ಸಸ್ಯಗಳಿಗೆ ಸಂಬಂಧಪಟ್ಟ ಎಲ್ಲಾ ವಿಚಾರಗಳ ಜವಾಬ್ದಾರಿಯನ್ನು ಹೊರುವುದು, ನೀತಿಗಳ ತಯಾರಿ, ಸಸ್ಯಗಳ ಸಂರಕ್ಷಣೆಗೆ ಉಪಾಯವನ್ನೂ ಸಿದ್ಧಪಡಿಸುವುದು, ಸರಿಯಾದ ಕೊಯ್ಲು , ಕ್ಷೇತ್ರದ ರಕ್ಷಣೆ, ಬೆಳವಣಿಗೆ, ಕಚ್ಛಾ ವಸ್ತುಗಳ ಮಾರುಕಟ್ಟೆ ನಿರ್ವಹಣೆ ಇತ್ಯಾದಿಗಳು. ಈ ಎಲ್ಲಾ ಕಾರ್ಯಗಳನ್ನು ನಿಗಮದ ಆದೇಶಕ್ಕನುಗುಣವಾಗಿ ಸಂಬಂಧಪಟ್ಟ ವಿಭಾಗಗಳು ಮತ್ತು ಸಂಘಟನೆಗಳು ಕೈಗೊಳ್ಳಬೇಕಾಗುವುದು.

ನಿಗಮದ ಕಾರ್ಯಗಳು

೧) ದೇಶ, ವಿದೇಶಗಳಲ್ಲಿ ಔಷಧೀಯ ಸಸ್ಯಗಳಿಗಿರುವ ಬೇಡಿಕೆ ಮತ್ತು ಪೂರೈಕೆಗಳ ಬಗ್ಗೆ ಲೆಕ್ಕಾಚಾರ ಮಾಡುವುದು.

೨) ಔಷಧೀಯ ಸಸ್ಯಗಳ ಅಭಿವೃದ್ಧಿಗೆ ಅಗತ್ಯವಿರುವ ಕಾರ್ಯಕ್ರಮಗಳ ಬಗ್ಗೆ ನೀತಿಗಳನ್ನು ತಯಾರಿಸಲು ಸರಕಾರಗಳಿಗೆ, ವಿಭಾಗಗಳಿಗೆ, ಸಂಘಟನೆಗಳಿಗೆ ಸಲಹೆ ಸೂಚನೆಗಳನ್ನು ಕೊಡುವುದು.

೩) ಔಷಧೀಯ ಸಸ್ಯಗಳ ಕೃಷಿ ಬಗ್ಗೆ, ಮಾರುಕಟ್ಟೆ ವಿಚಾರಗಳ ಬಗ್ಗೆ ಸಮೀಕ್ಷೆ ಮಾರ್ಗದರ್ಶನ ನೀಡುವುದು.

೪) ಸಸ್ಯಗಳ ಗುರುತಿಸುವಿಕೆ ಮತ್ತು ಲೆಕ್ಕಾಚಾರ.

೫) ಸಸ್ಯಗಳ ಸಂರಕ್ಷಣೆ ಮತ್ತು ವಿಸ್ತರಣೆ.
೬) ಉತ್ಪಾದಕ ಮತ್ತು ಸಂಗ್ರಹಕಾರರ ನಡುವೆ ಸಹಕಾರವೇರ್ಪಡಿಸುವುದು. ಉತ್ಪನ್ನಗಳ ಸಾಗಣೆ ಮತ್ತು ಮಾರಾಟಕ್ಕೆ ಸಹಾಯ ಒದಗಿಸುವುದು.

೭) ಉತ್ಪಾದಕರಿಗೆ, ಸರಕಾರೇತರ ಸಂಘಗಳಿಗೆ, ತರಬೇತು ,ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆ ಬಗ್ಗೆ ಅರಿವು ಮಾಡಿಸುವುದು.

೮) ಕಚ್ಛಾ ಔಷಧಿಗಳ ರಫ್ತಿಗಾಗಿ ಅಧಿಕೃತ ಪರವಾನಗಿ ಒದಗಿಸುವುದು.

೯) ಪ್ರತಿ ರಾಜ್ಯಗಳಲ್ಲೂ ಔಷಧೀಯ ಸಸ್ಯ ಮಂಡಳಿ ಸ್ಥಾಪನೆ.

೧೦) ನಿಗಮವು ಹೆಸರಿಸಿದ ೩೨ ಸಸ್ಯಗಳ ಸಂರಕ್ಷಣೆ ಮತ್ತು ಅಭಿವೃದ್ಧಿ.

೧೧) ಸಂಶೋಧನೆ, ಅಭಿವೃದ್ಧಿ ಅಧ್ಯಯನಗಳನ್ನು ಮಾಡುವುದು.

೧೨) ಸಸ್ಯಮೂಲದ ಉತ್ಪನ್ನಗಳ ಗುಣಮಟ್ಟ ಹೆಚ್ಚಿಸಲು, ವಿದೇಶಿ ಮಾರುಕಟ್ಟೆಯಲ್ಲಿ ಮಾನ್ಯತೆಗಳಿಸಲು ಅಗತ್ಯವಿರುವ ಕ್ರಮಕೈಗೊಳ್ಳುವುದು.

೧೩) ವೈಜ್ಞಾನಿಕ, ತಾಂತ್ರಿಕ ಸಂಶೋಧನೆ ಮತ್ತು ವೆಚ್ಚ ನಿಯಂತ್ರಣ ಅಧ್ಯಯನಕ್ಕಾಗಿ ಪ್ರೇರಣೆ ನೀಡುವುದು.

೧೪) ವ್ಯವಸಾಯದ ಗುಣಮಟ್ಟದ ನಿಯಂತ್ರಣಕ್ಕಾಗಿ ಕರಡು ಪ್ರತಿ.

೧೫) ಹಕ್ಕು ಸ್ವಾಮ್ಯತೆಯನ್ನು ಸಾಧಿಸಲು ಪ್ರೇರಣೆ ನೀಡುವುದು.

ಔಷಧೀಯ ಸಸ್ಯಗಳ ಕೃಷಿ ಮತ್ತು ವಾಣಿಜ್ಯ ವ್ಯವಹಾರಗಳಲ್ಲಿ ಆಸಕ್ತಿಯಿರುವವರು ನಿಗಮದಲ್ಲಿ ಲಭ್ಯವಿರುವ ಅಭಿವೃದ್ಧಿಯೋಜನೆಗಳು, ವಾಣಿಜ್ಯ ಯೋಜನೆಗಳು, ಸಂಶೋಧನೆ, ಅಭಿವೃದ್ಧಿ, ಮೌಲ್ಯವರ್ಧನೆ, ಗಿಡಮೂಲಿಕಾ ತೋಟ ನಿರ್ಮಾಣ, ಸಸ್ಯಾಭಿವೃದ್ಧಿ ಇತ್ಯಾದಿಗಳಿಗೆ ನಿಗಮವು ನಿಗದಿಪಡಿಸಿದ ಅರ್ಜಿಗಳ ಮೂಲಕ ಪ್ರಸ್ಥಾಪನೆಯನ್ನು ಸಲ್ಲಿಸಬಹುದು. ಮಂಜೂರಾದ ಪ್ರಸ್ಥಾಪನೆಗಳಿಗೆ ಒಪ್ಪಂದಕ್ಕನುಗುಣವಾಗಿ ಹಣಕಾಸಿನ ನೆರಲು ದೊರಕುವುದು. ಈ ಸಾಲಿನಲ್ಲಿ ನಿಗಮವು ಒಪ್ಪಂದದ ಕೃಷಿಗೆ (ಬೆಳೆ ಬೆಳೆದು ವಾಪಾಸು ಕೊಡುವ ಒಪ್ಪಂದ) ಒತ್ತು ನೀಡುತ್ತಿದೆ. ಈ ಯೋಜನೆಯಲ್ಲಿ ಶೇಕಡಾ ೩೦ರ ವರೆಗೆ ಅಂದರೆ ರೂಪಾಯಿ ೯  ಲಕ್ಷದವರೆಗೆ  ಸಹಾಯಧನ ಲಭ್ಯ.

. ಅಭಿವೃದ್ಧಿ ಯೋಜನೆಗಳು

೧) ಔಷಧೀಯ ಸಸ್ಯಗಳ ಹುಡುಕಾಟ ಮತ್ತು ಸಮೀಕ್ಷೆ.

೨) ಸಂರಕ್ಷಣೆ ಮತ್ತು ವ್ಯವಸಾಯ. ಈ ನಿಟ್ಟಿನಲ್ಲಿ ನಿಗಮವು ಹೆಸರಿಸಿದ ಕೆಂಪು ಪಟ್ಟಿಯಲ್ಲಿರುವ ಸಸ್ಯಗಳ ತೋಟಗಳ ನಿರ್ಮಾಣಕ್ಕೆ ಆದ್ಯತೆ .

೩) ಉತ್ತಮ ಗುಣಮಟ್ಟದ ಸಸ್ಯಾಭಿವೃದ್ಧಿ.

೪) ವಿಸ್ತರಣಾ ಕಾರ್ಯಗಳಾದ ಮಾಹಿತಿ, ಶಿಕ್ಷಣ ಮತ್ತು ಸಮಾಚಾರಗಳನ್ನೊದಗಿಸಲು.

೫) ಬೇಡಿಕೆ ಮತ್ತು ಪೂರೈಕೆ ಅಲ್ಲದೆ ಮಾರುಕಟ್ಟೆ ಬಗ್ಗೆ ಅಧ್ಯಯನ.

೬) ಸಂಶೋಧನೆ ಮತ್ತು ಅಧ್ಯಯನ.

೭) ಉತ್ಪಾತಕ ಮತ್ತು ಸಂಗ್ರಹಕಾರರೊಳಗೆ ಸಹಕಾರ.

೮) ಮೌಲ್ಯವರ್ಧನೆ.

೯) ತಾಂತ್ರಿಕ, ವೈಜ್ಞಾನಿಕ ಮತ್ತು ಆರ್ಥಿಕ ಸಂಶೋಧನೆಗಳಿಗೆ ಪ್ರೋತ್ಸಾಹ.

ಈ ಯೋಜನೆಗಳಿಗೆ ಅರ್ಹಫಲಾನುಭವಿಗಳೆಂದರೆ ಸರಕಾರಿ ಸಂಘಟನೆಗಳು ಮತ್ತು ಸರಕಾರೇತರ ಸಂಘಟನೆಗಳು.

II) ವಾಣಿಜ್ಯ ಯೋಜನೆಗಳು

೧) ಹೆಚ್ಚಿನ ಪ್ರಮಾಣದಲ್ಲಿ ಸಸ್ಯಗಳನ್ನು ಉತ್ಪಾದಿಸಿ ಪೂರೈಸಲು.

೨) ನಿಗದಿ ಪಡಿಸಿದ ಸಸ್ಯಗಳ ವಿಸ್ತರಣೆ.

೩) ಸರಿಯಾದ ಕೊಯ್ಲಿನ ತಾಂತ್ರಿಕತೆ, ಸಂಸ್ಕರಣೆ ಇತ್ಯಾದಿಗಳ ಮೌಲ್ಯವರ್ಧನೆಗಳಿಗೆ,

೪) ಆಧುನಿಕ ಮಾರುಕಟ್ಟೆ ತಂತ್ರಜ್ಞಾನದ ಅಭಿವೃದ್ಧಿಗೆ.

ಈ ಯೋಜನೆಗಳಿಗೆ ಅರ್ಹ ಫಲಕಾನುಭವಿಗಳೆಂದರೆ ಸರಕಾರದ ಸಂಘಟನೆಗಳು, ದಾಖಲಾತಿ ಹೊಂದಿದ ರೈತರು ಬೆಳೆಗಾರರ ಸಂಘಗಳಲು, ವ್ಯಾಪಾರಸ್ಥರು, ಉತ್ಪಾದಕರು, ಸಹಕಾರಿ ಸಂಘಗಳು, ಔಷಧ ತಯಾರಕರು, ಸರಕಾರೇತರ ಮತ್ತು ಗುರುತಿಸಲ್ಪಟ್ಟ ಖಾಸಗಿ ಸಂಶೋಧನಾ ಸಂಸ್ಥೆ ಅಥವಾ ಯಾವುದೇ ಒಂದು ಗುಂಪು. (ಔಷಧೀಯ ಸಸ್ಯ ಕ್ಷೇತ್ರದಲ್ಲಿ ೩ ವರ್ಷಗಳ ಅನುಭವ ಹೊಂದಿದ್ದಲ್ಲಿ)

ರೈತರಿಗೆ ದೊರಕುವ ಹಣಕಾಸಿನ ನೆರವು

೧) ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ( ೨ ಹೆಕ್ಟೇರು ಭೂಮಿಗಿಂತ ಕಡಿಮೆ) ಶೇಕಡಾ ೫೦ರ ಸಹಾಯಧನ.

೨) ಮಧ್ಯಮ ವರ್ಗದ ರೈತರಿಗೆ ಶೇಕಡಾ ೪೦ (೨-೧೦ ಹೆಕ್ಟೇರು)

೩) ದೊಡ್ಡ ರೈತರಿಗೆ ಶೇಕಡಾ ೩೦ (೧೦ ಹೆಕ್ಟೇರಿಗಿಂತ ಮೇಲೆ)

ಇನ್ನುಳಿದ ಎಲ್ಲಾ ಸಂಘ ಸಂಸ್ಥೆಗಳಿಗೆ ಶೇಕಡಾ ೩೦ರ ನೆರವು ದೊರಕುವುದು.

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ವಿಳಾಸ.

1) Chief Executive Officer
National Medicinal Plants Board
Ministry of Health and Family Welfare
Government of India
36, Chandralok Building
Janapath,
New Delhi 110001.

2) Executive Officier
Karnataka State Medicinal Plants Authority
Forest Campus, Arekere MICO Layour
Bannerghatta Road
Bangalore-560076.

3) Managing Director
Chief Executive Officer
State Medicinal Plants Board
Thrissur, Oushadi-680001,