ಗಿಡಮೂಲಿಕೆಯನ್ನಾಧರಿಸಿದ ಔಷಧೀಯ ಪದ್ಧತಿಗೆ ನಮ್ಮಲ್ಲಿ ಅನಾದಿಕಾಲದಿಂದಲೂ ಪ್ರಮುಖ ಪಾತ್ರವಿದೆ. ಆರೋಗ್ಯವಿಲ್ಲದೆ  ದೇಶದ ಅಭಿವೃದ್ಧಿ ಅಸಾಧ್ಯ. ಆರೋಗ್ಯದ ರಕ್ಷಣೆಗೆ ಅಲ್ಪ ವೆಚ್ಚದಲ್ಲಿ ಔಷಧಿಗಳು ಲಭ್ಯವಾಗಿರಬೇಕಾಗಿರುವುದು ಇಂದಿನ ಅಗತ್ಯಗಳಲ್ಲೊಂದು. ಜಗತ್ತಿನಾದ್ಯಂತ ವಿವಿಧ ರೀತಿಯ ಆಧುನಿಕ ರೋಗಗಳು ಕಂಡು ಬರುತ್ತಿದ್ದು, ಇದರೊಂದಿಗೆ ಸಾಂಪ್ರದಾಯಿಕ  ರೋಗಗಳೂ ಉಲ್ಬಣಗೊಳ್ಳುತ್ತಿವೆ. ಈ ರೋಗಗಳ ಶಮನಕ್ಕಾಗಿ ವಿವಿಧ ರೀತಿಯ ಪ್ರಯತ್ನಗಳು ಸಾಗುತ್ತಿವೆ. ಇನ್ನೊಂದೆಡೆಯಲ್ಲಿ ಆಧುನಿಕ ಚಿಕಿತ್ಸಾ ವಿಧಾನದಲ್ಲಿ ದೊರಕುವ ಪರಿಹಾರಗಳು ಒಂದಲ್ಲ ಒಂದು ರೀತಿಯ ಉಪರೋಗಗಳಿಗೆ ದಾರಿ ಮಾಡಿಕೊಡುತ್ತಿದ್ದು, ಇದರಿಂದಾಗಿ ವಿಶ್ವದಾದ್ಯಂತ ಜನರು ಎಚ್ಚೆತ್ತುಕೊಳ್ಳುತ್ತಿದ್ದಾರೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಈಗಾಗಲೇ ಪ್ರಾಚೀನ ಕಾಲದ ವೈದ್ಯಪದ್ಧತಿಗೆ ಪ್ರಾಶಸ್ತ್ಯ ದೊರಕಲಾರಂಭಿಸಿದ್ದು, ಇದೇ ಪ್ರವೃತ್ತಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲೂ ಕಂಡು ಬರುತ್ತಿದೆ.  ಈ ಎಲ್ಲಾ ದೃಷ್ಟಿಯಿಂದ ಔಷಧೀಯ ಸಸ್ಯಗಳ ಕೃಷಿಗೆ ನಮ್ಮಲ್ಲಿ ಉತ್ತಮ ಅವಕಾಶವಿದೆಯೆನ್ನಬಹುದು. ಇದರೊಂದಿಗೆ ಕೆಳ ಕಾಣಿಸಿದ ವಿಚಾರಗಳಿಂದ ಇವುಗಳಿಗೆ ಇರುವ ಭವಿಷ್ಯವನ್ನು ಅರಿತುಕೊಳ್ಳಬಹುದು.

೧) ಸಸ್ಯಮೂಲದ ಉತ್ಪನ್ನಗಳಿಗೆ ಆಂತರಿಕ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುತ್ತಿರುವ ಬೇಡಿಕೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಬೇಡಿಕೆಯು ವಾರ್ಷಿಕವಾಗಿ ಶೇಕಡಾ ೧೦ ರಿಂದ ೧೫ ರಷ್ಟು ಹೆಚ್ಚುತ್ತಿರುವುದು ಇದಕ್ಕೆ ಸಾಕ್ಷಿ.

೨) ಭಾರತದಲ್ಲಿರುವ ವಿವಿಧ ರೀತಿಯ ಹವಾಗುಣ ಮತ್ತು ಮಣ್ಣು ಗಿಡ ಮೂಲಿಕೆಗಳ ಕೃಷಿಗೆ ಸೂಕ್ತವಾಗಿರುವುದರಿಂದ ಅಧಿಕ ಇಳುವರಿ ಪಡೆಯಲು ಸಾಧ್ಯ.

೩) ಪ್ರಕೃತ ವಿಶ್ವದಲ್ಲಿ ಬಳಕೆದಾರರ ರುಚಿಗನುಗುಣವಾಗಿ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವ ಹಿಂದೂಸ್ಥಾನ್‌ಲಿವರ್, ಔಷಧಗಳ ತಯಾರಿಯಲ್ಲಿ ಮುಂಚೂಣಿಯಲ್ಲಿರುವ ಸಿಪ್ಲ ಸಂಸ್ಥೆ, ಇವುಗಳಿಂದು ಸಸ್ಯಗಳನ್ನಾಧರಿಸಿದ ಔಷಧಗಳ ತಯಾರಿಗೆ ಹೊರಟಿದ್ದು, ಇವುಗಳಿಗಿರುವ ಅಂತರಾಷ್ಟ್ರೀಯ ಮಾನ್ಯತೆ ಗಿಡಮೂಲಿಕೆಗಳಿಗೆ ಹೆಚ್ಚಿನ ಬೇಡಿಕೆಯನ್ನು ತರಿಸಬಹುದು.

೪) ವಿಶ್ವ ಆರೋಗ್ಯ ಸಂಘಟನೆ ಸಾಂಪ್ರದಾಯಿಕ ಔಷಧ ಪದ್ಧತಿಗೆ ಕಳೆದ ೨೫ ವರ್ಷಗಳಿಂದ ಒತ್ತು ನೀಡುತ್ತಿದ್ದು, ಇದಕ್ಕನುಗುಣವಾಗಿ ಪ್ರೋತ್ಸಾಹವನ್ನೀಡುತ್ತಿರುವುದರಿಂದ ಇಲ್ಲಿ ಉತ್ತಮ ಭವಿಷ್ಯವಿದೆಯೆನ್ನಬಹುದು.

೫) ಸ್ವಾಭಾವಿಕ, ಪರಿಸರ ಪ್ರೇಮಿ, ಸಸ್ಯಮೂಲಗಳ ಉತ್ಪನ್ನಗಳಿಗೆ ವಿದೇಶಗಳಲ್ಲಿ ಹೆಚ್ಚುತ್ತಿರುವ ಬೇಡಿಕೆ.

೬) ಬಹುಬೇಡಿಕೆಯುಳ್ಳ ಔಷಧೀಯ ಸಸ್ಯಗಳು ನಾಶವಾಗುತ್ತಿರುವುದು.

೭) ಆಧುನಿಕ ವೈದ್ಯ ಪದ್ಧತಿಯಲ್ಲಿ ಉತ್ಪಾದನೆಯಾಗುತ್ತಿರುವ ಔಷಧಗಳಲ್ಲಿ ಗಿಡಮೂಲಿಕೆಗಳ ಸಾರ ಅಧಿಕಗೊಳ್ಳುತ್ತಿರುವುದು.

೮) ಸೌಂಧರ್ಯವರ್ಧಕ, ಪ್ರಸಾದನ ಮುಂತಾದ ಉತ್ಪನ್ನಗಳ ತಯಾರಿಯಲ್ಲಿ ಗಿಡಮೂಲಿಕೆಗಳ ಪ್ರಮಾಣ ಹೆಚ್ಚುತ್ತಿರುವುದು, ಅಲ್ಲದೆ  ಈ ಬಗ್ಗೆ ಬಹುರಾಷ್ಟ್ರೀಯ ಸಂಸ್ಥೆಗಳು ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದು.

೯) ಆಧುನಿಕ ಜಗತ್ತಿನಲ್ಲಿ ವಿವಿಧ ರೀತಿಯ ಮೂಲಿಕಾ ಪ್ರಸಾದನಗಳಿಗೆ ಹೆಚ್ಚುತ್ತಿರುವ ಬೇಡಿಕೆ.

೧೦) ವಿಶ್ವದಲ್ಲಿ ಆಯುರ್ವೇದ ಮತ್ತು ಸಿದ್ಧ ಪದ್ಧತಿಯ ಔಷಧಗಳಿಗೆ ಏರುತ್ತಿರುವ ಬೇಡಿಕೆ.

೧೧) ಇತ್ತೀಚಿನ ವರ್ಷಗಳಲ್ಲಿ ಕೋಟಕ್ಕಲ್‌ ಆರ್ಯ ವೈದ್ಯಶಾಲಾ, ನಾಗರ್ಜುನ ಆಯುರ್ವೇದ ಸಮೂಹಗಳು ಅರಬ್ಬ್‌ರಾಷ್ಟ್ರಗಳು, ಹಂಗೇರಿ ಮುಂತಾದೆಡೆಗಳಲ್ಲಿ ಗಿಡಮೂಲಿಕೆ ಆಧಾರಿತ ಔಷಧಗಳ ಮಾರಾಟಕ್ಕಿಳಿದಿದ್ದು, ಇದೇ ರೀತಿಯ  ವ್ಯವಸ್ಥೆಗೆ ದೇಶದ ನಾನಾ ರಾಜ್ಯಗಳ ಸಂಸ್ಥೆಗಳೂ ಹೊರಟಿದ್ದು, ಇವು ಭಾರತದ ರಫ್ತಿನ ಪ್ರಮಾಣವನ್ನೇರಿಸಬಲ್ಲವು.

ಈ ಎಲ್ಲಾ ಅಂಶಗಳ ಆಧಾರದಲ್ಲಿ ಔಷಧೀಯ ಸಸ್ಯಗಳ ವಾಣಿಜ್ಯ ರೀತಿಯ ವ್ಯವಸಾಯಕ್ಕೆ ನಮ್ಮಲ್ಲಿ ಯೋಗ್ಯ ಪರಿಸರ ನಿರ್ಮಾಣವಾಗಿದೆಯೆನ್ನಬಹುದು. ಇದರ ಪರಿಪೂರ್ಣ ಪ್ರಯೋಜನವನ್ನು ಪಡೆಯಲು ನಮ್ಮ ಸರಕಾರಗಳು , ಸರಕಾರದ ಅಂಗ ಸಂಸ್ಥೆಗಳು, ಸರಕಾರೇತರ ಸಂಸ್ಥೆಗಳು, ಸಹಕಾರಿಗಳು,  ಶಿಕ್ಷಣ ಮತ್ತು ಸಂಶೋಧನಾ ಕೇಂದ್ರಗಳು, ಕೃಷಿಕರು ಮತ್ತು ವ್ಯಾಪಾರಸ್ಥರು ಶ್ರಮಿಸಬೇಕು. ಪ್ರಕೃತ ಇಲ್ಲಿರುವ ಕುಂದು ಕೊರತೆಗಳನ್ನು ಮತ್ತು ಸಮಸ್ಯೆಗಳನ್ನು ನೀಗಿಸಲು ಸರಕಾರಗಳು ಶ್ರಮಿಸಿ, ಕೃಷಿಕರಿಗೆ ಪ್ರೋತ್ಸಾಹವನ್ನೀಯಬೇಕು. ಹೀಗಾದಲ್ಲಿ ದೇಶದ ಪ್ರಜೆಗಳ ಬಡತನ, ನಿರುದ್ಯೋಗ ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆತು ದೇಶ ಅಭಿವೃದ್ಧಿಯನ್ನು ಸಾಧಿಸಬಹುದು. ಇದರೊಂದಿಗೆ ನೆಮ್ಮದಿಯ ಜೀವನಕ್ಕೆ ಅಗತ್ಯವಿರುವ ಆರೋಗ್ಯ ಎಲ್ಲಾ ಜೀವಿಗಳಿಗೆ ದೊರಕಬಹುದು.