ಭಾರತದಲ್ಲಿಂದು ಸಾಂಪ್ರದಾಯಿಕ ಔಷಧಿ ಪದ್ಧತಿಗೆ ಮಹತ್ವ ಬರಲಾರಂಭಿಸಿದೆ. ಇದೇ ಪ್ರವೃತ್ತಿ ಜಗತ್ತಿನಾದ್ಯಂತ ಕಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಔಷಧೀಯ ಸಸ್ಯಗಳ ವಾಣಿಜ್ಯ ರೀತಿಯ ವ್ಯವಸಾಯ ಮಾಡಲು ನಮ್ಮಲ್ಲಿ ವಿಪುಲ ಅವಕಾಶಗಳೊದಗಿ ಬಂದಿದೆ. ಆದರೆ ಈ ರೀತಿಯ ವ್ಯವಸ್ಥೆ ನಮ್ಮ ಬಹುಪಾಲು ಕೃಷಿಕರಿಗೆ ಹೊಸದು. ಈ ಕೃಷಿಯನ್ನು ದೊಡ್ಡ ಪ್ರಮಾಣದಲ್ಲಿ ಮಾಡಲು ನಮ್ಮ ಕೃಷಿಕರಿಗೆ ಅಸಾಧ್ಯ. ಆದರೆ ಇಲ್ಲೊಂದು ಉತ್ತಮ ಅವಕಾಶ ಒದಗಿ ಬಂದಿದೆ. ಔಷಧೀಯ ಸಸ್ಯಗಳಲ್ಲಿ ಬಹುಪಾಲು ಮಳೆಯಾಧಾರಿತ ಬೆಳೆಗಳು. ಇನ್ನು ಹಲವು ಒಣ ಭೂಮಿ ಬೆಳೆಗಳು. ಹಲವನ್ನು ಅಡಿಕೆ, ತೆಂಗು, ಕಾಫಿ ಮತ್ತಿತರ ಕೃಷಿಗಳೊಂದಿಗೆ ಮಾಡಲು ಸಾಧ್ಯ. ಇನ್ನು ಕೆಲವು ಅಲ್ಪ ಸ್ವಲ್ಪ ನೀರಾವರಿಯನ್ನು ಬಯಸುವವು ಈ ದೃಷ್ಟಿಯಿಂದ ನಮ್ಮಲ್ಲಿರುವ ಪ್ರತಿ ಗ್ರಾಮಗಳಲ್ಲಿ ಪ್ರತಿಯೊಬ್ಬ ಕೃಷಿಕನು ತನಗೆ ಲಭ್ಯವಿರುವ ಭೂಮಿಯಲ್ಲಿ ಒಂದಲ್ಲ ಒಂದು ಔಷಧೀಯ ಸಸ್ಯಗಳನ್ನು ಬೆಳೆಸಿದಲ್ಲಿ ಒಟ್ಟಾಗಿ ಗ್ರಾಮದಲ್ಲಾಗುವ ಉತ್ಪಾದನೆ ಹೆಚ್ಚಿನ ಪ್ರಮಾಣದ್ದಾಗಬಹುದು ಮತ್ತು ಅವರದ್ದೇ ಆದ ಸಹಕಾರಿ ಸಂಘಗಳ ಮೂಲಕ ಈ ಸಸ್ಯಗಳ ಉತ್ಪಾದನೆ ಮತ್ತು ಮಾರಾಟಕ್ಕಾಗಿ ಶ್ರಮಿಸಿ ತಮ್ಮ ಆದಾಯ ಮತ್ತು ಸ್ಥಾನಮಾನವನ್ನು ಹೆಚ್ಚಿಸಿಕೊಳ್ಳಬಹುದು. ಆದರೆ ಈ ಕೃಷಿಯಿನ್ನೂ ಹೊಸತು, ಈ ನೆಲೆಯಲ್ಲಿ ಇಲ್ಲಿ ಬರಬಹುದಾದ ಕೃಷಿ ಮತ್ತು ಮಾರುಕಟ್ಟೆ ಸಂಬಂಧಿ ಸಮಸ್ಯೆಗಳ ಬಗ್ಗೆ ಸೂಕ್ಷ್ಮ ದೃಷ್ಟಿಯನ್ನು ಮುಂದೆ ಬೀರಲಾಗಿದೆ, ಅಲ್ಲದೆ ಅವುಗಳ ಪರಿಹಾರಕ್ಕಾಗಿ ಅಗತ್ಯವಿರುವ ಉಪಾಯಗಳನ್ನು ಸೂಚಿಸಲಾಗಿದೆ.

ಕೃಷಿಗೆ ಸಂಬಂಧಪಟ್ಟಂತೆ ಬರಬಹುದಾದ ಸಮಸ್ಯೆಗಳು

೧) ಔಷಧೀಯ ಸಸ್ಯಗಳ ಪರಿಚಯ, ಮಹತ್ವ ಮತ್ತು ಕೃಷಿ ವಿಧಾನಗಳ ಬಗ್ಗೆ ಮಾಹಿತಿಗಳ ಅಭಾವ.

೨) ಔಷಧೀಯ ಸಸ್ಯಗಳು ಮತ್ತು ಬೀಜಗಳ ಲಭ್ಯತೆ ಮತ್ತು ಪೂರೈಕೆಗಳ ಬಗ್ಗೆ ಮಾಹಿತಿಯ ಕೊರತೆ.

೩) ಔಷಧೀಯ ಸಸ್ಯಗಳ ಕೃಷಿಗೆ ಅಗತ್ಯವಿರುವ ಹಣಕಾಸಿನ ಅಭಾವ. ಈ ಕೃಷಿಗೆ ನಮ್ಮ ಹಣಕಾಸಿನ ಸಂಸ್ಥೆಗಳು ಎಷ್ಟರ ಮಟ್ಟಿಗೆ ಸ್ಪಂಧಿಸಬಲ್ಲವು ಎಂಬುದು ಇಲ್ಲಿನ ಮುಖ್ಯ ಸಮಸ್ಯೆ.

೪) ಗ್ರಾಮೀಣ ಮಟ್ಟದಲ್ಲಿ ಇಲ್ಲವೇ ಸ್ಥಳೀಯವಾಗಿ ಇವುಗಳ ಕೃಷಿ ಬಗ್ಗೆ ಮಾಹಿತಿ ಒದಗಿಸುವ ಸಂಸ್ಥೆಗಳ ಅಭಾವ.

೫) ಲಭ್ಯವಿರುವ ಕೃಷಿ ಇಲ್ಲವೇ  ಪಾಳು ಭೂಮಿಯಲ್ಲಿ ಪ್ರದೇಶಕ್ಕನುಗುಣವಾಗಿ ಬೆಳೆಯಬಲ್ಲ ಸಸ್ಯಗಳ ಬಗ್ಗೆ ಮಾಹಿತಿಯ ಅಭಾವ.

೬) ಕಾನೂನಿನಲ್ಲಿರಬಹುದಾದ ತೊಡಕುಗಳು. ಕೆಲವೊಂದು ಸಸ್ಯಗಳನ್ನು ಅರಣ್ಯ ಉತ್ಪತ್ತಿಗಳೆಂದು ಸರಕಾರಗಳು ಪರಿಗಣಿಸಿದ್ದು, ಅವುಗಳ ಕೊಯ್ಲು ಮತ್ತು ಮಾರಾಟ  ವ್ಯವಸ್ಥೆಯಲ್ಲಿ ಬರಬಹುದಾದ ಅಡ್ಡಿ ಆತಂಕಗಳು.

ಮಾರುಕಟ್ಟೆ ಸಂಬಂಧಿ ಸಮಸ್ಯೆಗಳು

೧) ಸ್ಥಳೀಯವಾಗಿ ವಿವಿಧ ರೀತಿಯ ಔಷಧೀಯ ಸಸ್ಯಗಳಿಗೆ ವ್ಯವಸ್ಥಿತ ಮಾರುಕಟ್ಟೆ ಲಭ್ಯವಿಲ್ಲದಿರುವುದು.

೨) ವಿವಿಧ ರೀತಿಯ ಔಷಧೀಯ ಸಸ್ಯಗಳಿಗಿರುವ ಅಧಿಕೃತ ಬೆಲೆ ಪಟ್ಟಿಯ ಅಭಾವ ಮತ್ತು ಲಭಿಸಬೇಕಿರುವ ಬೆಲೆಯ ಬಗ್ಗೆ ಮಾಹಿತಿಯ ಕೊರತೆ.

೩) ಸಂಸ್ಕರಣೆಯ ಬಗ್ಗೆ ತರಬೇತಿನ ಅಭಾವ.

೪) ವಿವಿಧ ರೀತಿಯ ಸಸ್ಯಗಳಿಗಿರುವ ಬೇಡಿಕೆಯೆಷ್ಟು, ಯಾವ ಗುಣಮಟ್ಟದಲ್ಲಿ ಯಾವಾಗ ಎಲ್ಲಿಗೆ ಪೂರೈಸಬೇಕು ಎಂಬಿತ್ಯಾದಿ ಮಾಹಿತಿಯಿಲ್ಲದಿರುವುದು.

೫) ಭವಿಷ್ಯದ ಮಾರುಕಟ್ಟೆಯ ಬಗ್ಗೆ ವ್ಯವಸ್ಥಿತ ಸಂಸ್ಥೆಗಳಿಂದ ಮತ್ತು ಸರಕಾರಗಳಿಂದ ಮಾಹಿತಿ ಕೊರತೆ.

೬) ಅಂತರಾಷ್ಟ್ರೀಯ ಮಾರುಕಟ್ಟೆ, ರಫ್ತಿಗಿರುವ ಅವಕಾಶ, ರಫ್ತು ಮಾಡಲು ಅಗತ್ಯವಿರುವ ವ್ಯವಸ್ಥೆ ಇತ್ಯಾದಿಗಳ ಬಗ್ಗೆ ಯಾವುದೇ ಕಲ್ಪನೆಯಿಲ್ಲದಿರುವುದು.

ಪರಿಹಾರೋಪಾಯಗಳು

೧) ಔಷಧೀಯ ಸಸ್ಯಗಳ ಪರಿಚಯ ಮತ್ತು ಮಹತ್ವವನ್ನು ಗ್ರಾಮೀಣ ಜನತೆಗೆ ಅದರಲ್ಲೂ ಮುಖ್ಯವಾಗಿ ಕೃಷಿಕರಿಗೆ ತಿಳಿಸಲು ಸ್ಥಳೀಯ ಸಹಕಾರಿ ಸಂಘಗಳು, ಗ್ರಾಮ ಪಂಚಾಯತುಗಳು, ಆರೋಗ್ಯ ಕೇಂದ್ರಗಳು, ಅರಣ್ಯ ಇಲಾಖೆಯವರು, ಶೈಕ್ಷಣಿಕ ಸಂಸ್ಥೆಗಳು ಮತ್ತು ಸರಕಾರೇತರ ಸಂಘಟನೆಗಳು ಶ್ರಮಿಸಬೇಕಲು. ಇದನ್ನು ಆದ್ಯತಾ ನೆಲೆಯಲ್ಲಿ ತಕ್ಷಣ ಜ್ಯಾರಿಗೊಳಿಸಬೇಕು. ಈ ಎಲ್ಲಾ ಸಂಸ್ಥೆಗಳು ಸಸ್ಯ ಪರಿಚಯ, ಮಹತ್ವ ಮಕತ್ತು ಕೃಷಿ ವಿಧಾನಗಳ ಬಗ್ಗೆ ತಜ್ಞರ ಸಹಾಯದಿಂದ ಕೃಷಿಕರಿಗೆ ಮತ್ತು ಗ್ರಾಮೀಣ ಜನರಿಗೆ ಮಾಹಿತಿ ಒದಗಿಸಬೇಕು. ಈ ನಿಟ್ಟಿನಲ್ಲಿ ಮಾಹಿತಿ ಕೈಪಿಡಿ ಪೂರೈಕೆ, ಚಿತ್ರ ಪ್ರದರ್ಶನ. ತರಬೇತು, ಗ್ರಾಮ ಸಭೆಗಳಲ್ಲಿ ಪ್ರಚಾರ ಇತ್ಯಾದಿಗಳನ್ನು ಹಮ್ಮಿಕೊಳ್ಳಬೇಕು.

೨) ಕೃಷಿಗಾಗಿ ಅಗತ್ಯವಿರುವ ಬೀಜಗಳನ್ನು ಮತ್ತು ಸಸ್ಯಗಳನ್ನು ನಾಟಿ ಕಾಲಕ್ಕಾಗುವಾಗ ಗ್ರಾಮ ಮಟ್ಟದಲ್ಲಿ ಪೂರೈಸುವ ವ್ಯವಸ್ಥೆಗಳಾಗಬೇಕು. ಈ ನಿಟ್ಟಿನಲ್ಲಿ ಆರಂಬಿಕ ಹಂತದಲ್ಲಿ ಸಸ್ಯಗಳ ಉಚಿತ ಪೂರೈಕೆಯಾಗಬೇಕಕು. ಪ್ರತೀ ಗ್ರಾಮಕ್ಕೆ ಅಗತ್ಯವಿರುವ ಸಸ್ಯಗಳ ಪ್ರಮಾಣವನ್ನು ನಾಟಿ ಸಮಯಕ್ಕಿಂತ ಮೊದಲೇ ಅಂದಾಜಿಸಿ ನಾಟಿ ಕಾಲಕ್ಕಾಗುವಾಗ ಪೂರೈಸುವ ವ್ಯವಸ್ಥೆಯನ್ನು ಕೃಷಿ ವಿಭಾಗ ಇಲ್ಲವೇ ಅರಣ್ಯ ಇಲಾಖೆಗಳು ಕೈಗೊಳ್ಳಬೇಕು. ಇದರೊಂದಿಗೆ ಗ್ರಾಮ ಮಟ್ಟದಲ್ಲಿರುವ ಸಹಕಾರಿ ಸಂಘಗಳು ಇಲ್ಲವೇ ಸರಕಾರೇತರಸಂಘಟನೆಗಳಿಗೆ ಈ ಸಸ್ಯಗಳ ಉತ್ಪಾದನೆಗೆ ಪ್ರೋತ್ಸಾಹ ಮತ್ತು ಪ್ರೇರಣೆಗಳನ್ನು ನೀಡಬೇಕುಕ. ಆಸಕ್ತ ಕೃಷಿಕರಿಗೆ ಸ್ವತಃ ಸಸ್ಯಗಳ ಉತ್ಪಾದನೆ ಪ್ರೇರೇಪಿಸಲು ಹಣಕಾಸಿನ ನೆರವು ಒದಗಿಸಬೇಕು.

೩) ಸರಕಾರಗಳು ಔಷಧೀಯ ಸಸ್ಯಗಳ ಕೃಷಿಯನ್ನು ಆದ್ಯತಾ ನೆಲೆಯಲ್ಲಿ ಕೈಗೊಂಡು, ಇದಕ್ಕಾಗಿ ಕೃಷಿಕರನ್ನು ಆಕರ್ಷಿಸುವ ತಂತ್ರ ಜ್ಞಾನವನ್ನು ಹಾಕಿಕೊಳ್ಳಬೇಕು. ಸರಕಾರದ ಅಂಗ ಇಲಾಖೆಗಳಾದ ತೋಟಗಾರಿಕೆ, ಅರಣ್ಯ, ಆರೋಗ್ಯ, ಬಡತನ ನಿರ್ಮೂಲನಾ ವಿಭಾಗ, ಕುಟುಂಬ ಕಲ್ಯಾಣ ಇಲಾಖೆ ಇವೆಲ್ಲಾ ಕೃಷಿಕರಿಗೆ ಯೋಗ್ಯ ರೀತಿಯ ಪ್ರೇರಣೆ, ಪ್ರೋತ್ಸಾಹಗಳನ್ನು ನೀಡಬೇಕು.

೪) ಔಷಧೀಯ ಸಸ್ಯಗಳ ಕೃಷಿಯನ್ನು ಕೈಗೊಳ್ಳುವ ರೈತರಿಗೆ ಹಣಕಾಸಿನ ಸಂಸ್ಥೆಗಳು, ತೋಟಗಾರಿಕಾ ಇಲಾಖೆಯವರು, ಗ್ರಾಮ ಪಂಚಾಯತುಗಳು, ಅರಣ್ಯ ಇಲಾಖೆಯವರು ಅಗತ್ಯ ಹಣಕಾಸಿನ ಪ್ರದೇಶಕ್ಕನುಗುಣವಾದ ಯೋಜನೆಗಳನ್ನು ಸಿದ್ಧಪಡಿಸಿ ಅವನ್ನು ಕಾರ್ಯರೂಪಕ್ಕೆ ತರಬೇಕು. ಇದರೊಂದಿಗೆ ಕೇಂದ್ರ ಸರಕಾರವು ಹಣಕಾಸಿನ ಸಂಸ್ಥೆಗಳಿಗೆ ಔಷಧೀಯ ಸಸ್ಯಗಳ ಕೃಷಿಯನ್ನು ಆದ್ಯತಾ ವಲಯವೆಂದು ಪರಿಗಣಿಸಿ ಅಗತ್ಯವಿರುವ ಹಣಕಾಸಿನ ಪೂರೈಕೆಗೆ ಒತ್ತು ಕೊಡಬೇಕು.

೫) ಪ್ರತಿ ರಾಜ್ಯ, ಜಿಲ್ಲೆ, ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ಲಭ್ಯವಿರುವ ಔಷಧೀಯ ಸಸ್ಯಗಳ ಬಗ್ಗೆ ಗಣತಿ ಕಾರ್ಯ ಆಗಬೇಕು. ಈ ನಿಟ್ಟಿನಲ್ಲಿ ಸರಕಾರವುಇ ಗ್ರಾಮ ಪಂಚಾಯತುಗಳಿಗೆ ಅಗತ್ಯ ನೆರವನ್ನೊದಗಿಸಬೇಕು. ಈ ಪಂಚಾಯತುಗಳು ಸರಕಾರೇತರ ಸಂಸ್ಥೆಗಳ, ತಜ್ಞರ ಮತ್ತು ವಿವಿಧ ಇಲಾಖೆಗಳ ನೆರವಿನಿಂದ ಈ ಕಾರ್ಯವನ್ನು ಮಾಡಬೇಕು.

೬) ವೈಯಕ್ತಿಕವಾಗಿ ಯಾವನೇ ಒಬ್ಬ ಕೃಷಿಕ ಔಷಧೀಯ ಸಸ್ಯಗಳ ಕೃಷಿಯನ್ನು ದೊಡ್ಡ ವಿಸ್ತೀರ್ಣದಲ್ಲಿ ಕೈಗೊಳ್ಳಲಾರ. ಈ ದೃಷ್ಟಿಯಿಂದ ಪ್ರತಿ ಗ್ರಾಮ ಮಟ್ಟದಲ್ಲಿ ಔಷಧೀಯ ಸಸ್ಯಗಳ ಬೆಳೆಗಾರರ ಸಹಕಾರಿ ಸಂಘಗಳ ಸ್ಥಾಪನೆಗೆ ಒತ್ತು ನೀಡಬೇಕು, ಇಲ್ಲವೇ ಈಗಿರುವ ಸಹಕಾರಿ ಸಂಘಗಳು ಇದನ್ನು ತನ್ನ ಕಾರ್ಯವ್ಯಾಪ್ತಿಗೊಳಪಡಿಸಬೇಕು. ಈ ರೀತಿಯ ವ್ಯವಸ್ಥೆಗೆ ಪೂರಕ ವಾತಾವರಣವನ್ನು ಸರಕಾರಗಳು ನಿರ್ಮಿಸಬೇಕು.

೭) ಸ್ಥಳೀಯವಾಗಿ ಮಾರುಕಟ್ಟೆ ವ್ಯವಸ್ಥೆ  ಕಲ್ಪಿಸಲು ಕೃಷಿ ಉದ್ದೇಶಗಳಿಗಿಗಾಗಿ ರಚಿಸಲ್ಪಟ್ಟ ಸಹಕಾರಿ ಸಂಘ ಆಸಕ್ತಿವಹಿಸಬೇಕು. ಈ ಸಂಸ್ಥೆಗೆ ಸರಕಾರವು ಹಣಕಾಸಿನ ನೆರವು ಮತ್ತು ಮಾರುಕಟ್ಟೆ ಮಾಹಿತಿಗಳನ್ನು ಪೂರೈಸಬೇಕು.

೮) ವಿವಿಧ ರೀತಿಯ ಸಸ್ಯಗಳಿಗೆ ಅವುಗಳ ಉತ್ಪಾದನಾ ವೆಚ್ಚ, ಅವುಗಳ ಲಭ್ಯತೆ, ಔಷಧೀಯವಾಗಿ ಅವುಗಳ ಮೌಲ್ಯ, ಆಂತರಿಕ ಮತ್ತು ಅಂತರಾಷ್ಟ್ರೀಯ ಬೇಡಿಕೆಗನುಗುಣವಾಗಿ ಬೆಲೆಯನ್ನು ನಿರ್ಧರಿಸಿ ನಿಗದಿಪಡಿಸುವ ವ್ಯವಸ್ಥೆಯಿರಬೇಕು. ಈ ಬೆಲೆಯ ಬಗ್ಗೆ ಮಾಹಿತಿಯನ್ನು ಪೂರೈಸುವ ವ್ಯವಸ್ಥೆಯನ್ನು ಒದಗಿಸುವಲ್ಲಿ ಇಂಟರ್ ನೆಟ್‌ಮತ್ತು ಪತ್ರಿಕೆಗಳನ್ನು ಪ್ರೇರೇಪಿಸಬೇಕು.

೯) ಕೊಯ್ಲು ಮತ್ತು ಕೋಯ್ಲೋತ್ತರ ತಂತ್ರಜ್ಞಾನದ ಬಗ್ಗೆ ತರಬೇತು ಮತ್ತು ಮಾಹಿತಿಗಳು ಒದಗಿಸುವಿಕೆ.

೧೦) ಉತ್ಪಾದನಾ ವಲಯ, ರಫ್ತು  ವಲಯಗಳ ನಿರ್ಮಾಣ ಮತ್ತು ಈ ಪ್ರದೇಶಗಳಲ್ಲಿ ಸಂಸ್ಕರಣೆ ಮತ್ತು ವಿವಿಧ ಉತ್ಪನ್ನಗಳ ತಯಾರಿಗೆ ಉದ್ದಿಮೆಗಳ ಸ್ಥಾಪನೆಗೆ ಅಗತ್ಯವಿರುವ ವ್ಯವಸ್ಥೆಗಳನ್ನು ಕಲ್ಪಿಸಬೇಕು.

೧೧) ಔಷಧೀಯ ಸಸ್ಯಗಳು ಮತ್ತವುಗಳ ಉತ್ಪನ್ನಗಳಿಗೆ ಭವಿಷ್ಯದಲ್ಲಿ ಬರಬಹುದಾದ ಬೇಡಿಕೆ, ಮಾರುಕಟ್ಟೆ ಬೆಲೆ, ಪೂರೈಕೆಯಾಗಬೇಕಾದ ಪ್ರಮಾಣ ಇತ್ಯಾದಿಗಳ ಬಗ್ಗೆ ಉತ್ಪಾದನಾ ವರ್ಷದ ಆರಂಭದಲ್ಲೇ ನಿಖರ ಮಾಹಿತಿಗೆ ಒದಗಿಸಬೇಕು.

೧೨) ಕಾನೂನುಗಳಲ್ಲಿರುವ ತೊಡಕುಗಳನ್ನು ನಿವಾರಿಸಬೇಕು.

೧೩) ವಿರಳವಾಗಿರುವ ಗಿಡಮೂಲಿಕೆಗಳ ಅಂಗಾಂಶ ಕೃಷಿಗೆ ಒತ್ತು ನೀಡಬೇಕು.

೧೪) ಗಿಡಮೂಲಿಕೆಗಳ ಖರೀದಿಗಾಗಿ ಔಷಧಿ ತಯಾರಕರು ಮತ್ತು ಕೃಷಿಕರು ಒಪ್ಪಂದ ಮಾಡಿಕೊಳ್ಳುವಂತಾಗಲು ಹರಾಜು ವ್ಯವಸ್ಥೆ ಇಲ್ಲವೇ ಮಾರುಕಟ್ಟೆಯನ್ನು ರೂಪಿಸಬೇಕು.

೧೫) ಉತ್ಪಾದನಾ ವಲಯಗಳಲ್ಲಿ ಗಿಡಮೂಲಿಕಯಾಧಾರಿತ ಔಷಧಿಗಳ ತಯಾರಿಕಾ ಘಟಕಗಳ ಸ್ಥಾಪನೆಗೆ ಸಹಕಾರಿ ಇಲ್ವೆ ಖಾಸಗಿ ವಲಯಗಳಿಗೆ ಪ್ರೇರಣೆ ಮತ್ತು ಪ್ರೋತ್ಸಾಹ ನೀಡಬೇಕು.