೨೬. ಸೋಲನಮ್

ವಿಶ್ವದಾದ್ಯಂತ ಅದರಲ್ಲೂ ಮುಖ್ಯವಾಗಿ ಭಾರತ, ಚೀನಾ, ಮತ್ತಿತರ ರಾಷ್ಟ್ರಗಳಲ್ಲಿ ಏರುತ್ತಿರುವ ಜನಸಂಖ್ಯೆ ಒಂದು ಬಹುದೊಡ್ಡ ಸವಾಲಾಗಿದೆ. ಜನಸಂಖ್ಯೆ ಯ ಹತೋಟಿಗಾಗಿ ಭಾರತ ಸರ್ಕಾರವು ಕುಟುಂಬಯೋಜನೆ ಕಾರ್ಯವನ್ನು ಜ್ಯಾರಿಗೊಳಿಸಿದೆ. ಕುಟುಂಬ ಯೋಜನೆಯ ಕಾರಣಗಳಿಗಾಗಿ ಬಳಸಲಾಗುವ ಔಷಧಗಳಲ್ಲಿ ಸ್ಟೀರಿಯಾಡ್‌ ಅಂಶಗಳಿವೆ. ಈ ನಿಟ್ಟಿನಲ್ಲಿ ಸೋಲನಮ್‌ ಸಸ್ಯವು ಪ್ರಮುಖ ಸ್ಥಾನವನ್ನು ಗಳಿಸಿದೆ . ಇದನ್ನಿಂದು ಪ್ರಮುಖವಾಗಿ ಅಸ್ಸಾಂ, ಮಣಿಪುರದ ಕಾಸಿಯಾ, ಜೈಂಟಿಯಾ ಮತ್ತು ನಾಗಾ ಗುಡ್ಡಗಾಡು ಪ್ರದೇಶ, ಸಿಕ್ಕಿಂ, ಪಶ್ಚಿಮ ಬಂಗಾಳ, ಮಧ್ಯ ಮತ್ತು ದಕ್ಷಿಣ ಭಾರತದ ವಿವಿಧ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದೆ. ಭಾರತದೊಂದಿಗೆ ಚೀನಾ ಮತ್ತು ಬರ್ಮಾ ರಾಷ್ಟ್ರಗಳಲ್ಲೂ ಇದು ಕಾಣ ಸಿಗುತ್ತದೆ . ಇತ್ತೀಚಿನ ವರ್ಷಗಳಲ್ಲಿ ಮಹಾರಾಷ್ಟ್ರದ ಜಲಗಾಂವ್‌ ಪ್ರದೇಶದಲ್ಲಿ ಇದರ ವ್ಯವಸಾಯ ಮಾಡಲಾಗುತ್ತಿದೆ.

ಸಸ್ಯ ಪರಿಚಯ

ಇದನ್ನು ವೈಜ್ಞಾನಿಕವಾಗಿ ‘ಸೋಲನಮ್‌ ವಿಯರಮ್‌ ಡಲ್ಲಿನಾಲ್‌’ ಎಂದು ಕರೆಯುತ್ತಾರೆ.  ಸೋಲನಮ್‌ ದಟ್ಟವಾದ ಎಲೆಗೊಂಚಲನ್ನು ಹೊಂದಿರುವ ಸಸ್ಯ. ಇದು ಸುಮಾರು ೭೫ ರಿಂದ ೧೫೦ ಸೆಂ.ಮೀ. ಎತ್ತರಕ್ಕೆ ಬೆಳೆಯಬಲ್ಲದು. ಇದರ ಎಲೆಗಳು ಅಂಢಾಕಾರದಲ್ಲಿದ್ದು, ಸಸ್ಯ ಬಿಳಿ ಹೂವನ್ನು ಹೊಂದಿದೆ. ಇದು ಹಳದಿ ಬಣ್ಣದ ಹಣ್ಣನ್ನು ಕೊಡುವುದು. ಇದರ ಬೀಜಗಳು ಸಣ್ಣದಾಗಿದೆ. ಇದರ ಹಣ್ಣುಗಳಲ್ಲಿ ‘ಗೈಕೋಲ್‌ಕಾಲ್ಯಾಡ್‌’ ಮತ್ತು ಸೋಲಸೋಡೈನ್‌ಗಳ ಅಂಶಗಳಿರುತ್ತದೆ.

ಕೃಷಿ ವಿಧಾನ

ಮಣ್ಣು ಮತ್ತು ಹವಾಗುಣ: ಇದರ ಕೃಷಿಗೆ ಎಲ್ಲಾ ರೀತಿಯ ಮಣ್ಣುಗಳು ಸೂಕ್ತ. ಆದರೆ ಕೆಂಪು ಮಣ್ಣಿನಲ್ಲಿ ಇದು ಉತ್ತಮ ಪ್ರತಿಫಲ ನೀಡುವುದು. ನೀರು ಇಂಗುವ ಪ್ರದೇಶ ಇದರ ಕೃಷಿಗೆ ಯೋಗ್ಯ. ಸಮಶೀತೋಷ್ಣ ಹವೆ ಇದಕ್ಕೆ ಸೂಕ್ತ.

ಸಸ್ಯಾಭಿವೃದ್ಧಿ: ಬೀಜಗಳನ್ನು ನರ್ಸರಿ ಮಡಿಗಳಲ್ಲಿ ಹರಡಿ ಸಸ್ಯವನ್ನು ಪಡೆಯಬಹುದು. ಬಿತ್ತನೆಗೆ ಬಳಸುವ ಬೀಜಗಳನ್ನು ೨೪ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಬಳಿಕ ಸಾಲುಗಳಲ್ಲಿ ೮ ರಿಂದ ೧೦ ಸೆಂ.ಮೀ ಅಂತರದಲ್ಲಿ ಬಿತ್ತನೆ ಮಾಡಬೇಕು. ಒಂದು ಹೆಕ್ಟೇರ್ ಕೃಷಿಗೆ ಸುಮಾರು ೧ ರಿಂದ ೧.೫ ಕಿ.ಗ್ರಾಂ ಬೀಜಗಳಲು ಅಗತ್ಯ.

ನಾಟಿ ವಿಧಾನ: ಜೂನ್‌ ತಿಂಗಳಲ್ಲಿ ನರ್ಸರಿ ಮಡಿಗಳಲ್ಲಿ ಬಿತ್ತನೆಯಾದ ಬೀಜಗಳಿಗೆ ದಿನಾಲು ನೀರನ್ನು ಹಾಯಿಸಬೇಕು. ಇದರಿಂದಾಗಿ ಬೀಜಗಳು ಒಂದು ತಿಂಗಳಲ್ಲಿ ಸಸ್ಯವಾಗುವುದು. ಒಂದು ತಿಂಗಳಲ್ಲಿ ಸಸ್ಯವು ೧೦ ರಿಂದ ೧೨ ಸೆಂ.ಮೀ ಎತ್ತರಕ್ಕೆ ಬೆಳೇದು ನಾಟಿಗೆ ಸಿದ್ದವಾಗುವುದು. ನಾಟಿ ಮಾಡುವಾಗ ಗಿಡದಿಂದ ಗಿಡಕ್ಕೆ ೫೦ ಸೆಂ.ಮೀ ಅಂತರವಿರಬೇಕು. ನಾಟಿಯಾದ ತಕ್ಷಣ ಕೃಷಿ ಭೂಮಿಗೆ ನೀರುಣಿಸಬೇಕು.

ಗೊಬ್ಬರ: ನಾಟಿಗಿಂತ ಮೊದಲು ಎರಡು ಬಾರಿ ಕೃಷಿ ಭೂಮಿಯನ್ನು ಉಳುಮೆ ಮಾಡುವಾಗ ೫ ರಿಂದ ೧೦ ಟನ್‌ಗಳಷ್ಟು ಹಟ್ಟಿಗೊಬ್ಬರ ಹಾಕಬೇಕು.

ನೀರಾವರಿ: ಬೇಸಿಗೆ ಕಾಲದಲ್ಲಿ ೧೫ ರಿಂದ ೨೦ ದಿನಗಳಿಗೊಮ್ಮೆ ನೀರಾವರಿ ವ್ಯವಸ್ಥೆ ಅಗತ್ಯ.

ಕಳೆ ನಿಯಂತ್ರಣ: ನಾಟಿಯಾದ ಒಂದು ತಿಂಗಳಲ್ಲಿ ಮೊದಲನೆ ಸಲ ಕಳೆ ಕೀಳಬೇಕು, ಬಳಿಕ ಕಳೆ ಬಂದಂತೆ ಇದಾಗಬೇಕು.

ಕೀಟ ಮತ್ತು ರೋಗ: ಕಂಬಳಿ ಹುಳು, ರೆಕ್ಕೆ ರಹಿತ ಹಾರುವ ಹುಳು ಎಲೆಗಳನ್ನು ತಿನ್ನುವುದು. ಇವುಗಳ ಹತೋಟಿಗೆ ಒಂದು ಲೀಟರ್ ನೀರಿಗೆ ೩ ಮಿಲಿಮೀಟರು ಎಂಡೋಸಲ್ಫಾನ್‌ ದ್ರಾವಣವನ್ನು ಸಿಂಪಡಿಸಬೇಕು. ಹಣ್ಣು ಮತ್ತು ಬೇರು ತಿನ್ನುವ ಕೀಟಗಳ ಹತೋಟಿಗೆ ೨ ಮಿಲಿಲೀಟರ್ ಎಕಾಲಕ್ಸನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬಹುದು. ಆದರೆ ಈ ಸಸ್ಯಕ್ಕೆ ಭಾದಿಸುವ ಕೀಟ ಮತ್ತು ರೋಗಗಳಿಂದ ಯಾವುದೇ ಹೆಚ್ಚಿನ ಭಾದೆ ಬರುವುದಿಲ್ಲ.

ಕೊಯ್ಲು: ಗಿಡದ ಹಣ್ಣುಗಳ ಬಣ್ಣ ಹಸಿರಿನಿಂದ ಹಳದಿಗೆ ತಲುಪಿದಾಗ ಅದು ಕೊಯ್ಲಿಗೆ ಸೂಚನೆಯನ್ನು ನೀಡುತ್ತದೆ. ಈ ಕ್ರಿಯೆಗೆ ನಾಟಿಯಾದ ನಂತರ ಸುಮಾರು ೬ ತಿಂಗಳುಗಳು ಬೇಕು. ಎಲ್ಲಾ ಸಸಿಗಳು ಒಂದೇ ಸಮಯದಲ್ಲಿ ಹಣ್ಣುಗಳನ್ನು ಕೊಡಲಾರದ್ದರಿಂದ ಕೊಯ್ಲು ೨ ರಿಂದ ೩ ತಿಂಗಳ ತನಕ ನಡೆಯಬಹುದು. ಹಣ್ಣುಗಳ ಕೊಯ್ಲಿನ ಬಳಿಕ ಅವನ್ನು ೪ ರಿಂದ ೫ ದಿನಗಳ ಕಾಲ ಒಣಗಿಸಿ ಶೇಖರಿಸಿಡಬೇಕು.

ಇಳುವರಿ: ಉತ್ತಮ ರೀತಿಯ ಕೃಷಿಯಿಂದ ಹೆಕ್ಟೇರೊಂದರ ಸುಮಾರು ೭೫ ರಿಂದ ೧೦೦ ಕ್ವಿಂಟಾಲ್‌ಗಳಷ್ಟು ಒಣ ಹಣ್ಣುಗಳನ್ನು ಪಡೆಯಬಹುದು. ಒಂದು ಅಂದಾಜಿನಂತೆ ಈ ಕೃಷಿಯಲ್ಲಿ ಹೆಕ್ಟೇರೊಂದರ ಸುಮಾರು ೨೫,೦೦೦ ಲಾಭಾಂಶ ಗಳಿಸಬಹುದು.

೨೭. ಶ್ರೀಗಂಧ

ಸುಗಂಧವನ್ನು ಹೊಂದಿರುವ ವೃಕ್ಷ ಗಂಧದ ಮರ, ಇದನ್ನು ಚಂದನದ ಮರವೆಂದೂ ಕರೆಯುತ್ತಾರೆ. ಈ ಮರವು ದಕ್ಷಿಣ ಭಾರತ ಮತ್ತು ಮಲಯ, ಶ್ರೀಲಂಕಾ, ಇಂಡೋನೇಶಿಯಾ, ಮತ್ತು ಕೆಲವು ಪ್ರದೇಶಗಳಲ್ಲಿ ತನ್ನಿಂದ ತಾನಾಗಿ ಬೆಳೆಯುತ್ತದೆ. ಶ್ರೀಗಂಧದಿಂದ ವಿಷ ನಿವಾರಣೇ, ಕಫ, ಪಿತ್ತ, ರಕ್ತದೋಷ, ಕಜ್ಜಿ, ಗಜಕರ್ಣ, ಇತ್ಯಾದಿಗಳ ಶಮನಗೊಳಿಸಲು ಸಾಧ್ಯ.

ಸಸ್ಯ ಪರಿಚಯ

ಇದರ ಶಾಸ್ತ್ರೀಯ ಹೆಸರು ‘ಸ್ಯಾಂ ಟಾಲಮ್‌ ಆಲ್ಬಮ್‌’ ಶ್ರೀಗಂಧವು ಸ್ಯಾಂಟಲೇಸಿ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ. ಯಾವತ್ತೂ ಹಚ್ಚ ಹಸಿರಾಗಿರುವ ಈ ಮರ ಸುಮಾರು ೧೮ ಮೀಟರ್ ಎತ್ತರಕ್ಕೆ ಬೆಳೆಯುವುದು.

ಕೃಷಿ ವಿಧಾನ

ಮಣ್ಣು ಮತ್ತು ಹವಾಗುಣ: ಈ ಸಸ್ಯವು ಕಬ್ಬಿಣದ ಅಂಶ ಹೆಚ್ಚಾಗಿರುವ ಗೋಡು ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಮುಖ್ಯವಾಗಿ ನೆಲದಲ್ಲಿ ನೀರು ಇಂಗಿ ಹೋಗುವಂತಿರುವ ಭೂಮಿ ಇದಕ್ಕೆ ಸೂಕ್ತ. ಚೆನ್ನಾಗಿ ಬಿಸಿಲು ಬೀಳುವ ಬೆಟ್ಟಗಳ ಇಳಿಜಾರು ಪ್ರದೇಶಗಳಲ್ಲಿ ಇದು ಬೆಳೆಯುತ್ತದೆ. ಸಮುದ್ರ ಮಟ್ಟದಿಂದ ಸುಮಾರು ೧೨೦೦ ಮೀಟರ್ ಎತ್ತರದವರೆಗಿನ ಬೆಟ್ಟಗುಡ್ಡಗಳಲ್ಲಿ ಇದು ಬೆಳೆಯುವುದು. ಇದೊಂದು ಅರೆ ಪರಾವಲಂಬಗಿ ಸಸ್ಯ. ಇದು ತನ್ನ ಬೇರುಗಳನ್ನು ಬೇರೆ ಗಿಡಗಳ ಬೇರುಗಳೊಂದಿಗೆ ಬೆಳೆಯಲು ಬಿಟ್ಟು ತನಗೆ ಬೇಕಾದ ಖನಿಜಾಂಶಗಳನ್ನು ಹೀರಿಕೊಳ್ಳುತ್ತದೆ.

ಸಸ್ಯಾಭಿವೃದ್ಧಿ: ಗಂಧದ ಗಿಡವನ್ನು ಅದರ ಬೀಜಗಳಿಂದ ಗಳಿಸಬಹುದು. ಕೆಂಪು ಮಣ್ಣು ಮತ್ತು ಮರಳು ಮಿಶ್ರಿತ ನರ್ಸರಿ ಮಡಿಗೆ (೧೦ಮೀ x ೧ಮಕೀ) ೫೦೦ ಗ್ರಾಂ ನಷ್ಟು ಎಕಾಲ್ಸ್ ಅಥವಾ ಥಿಮೆಟ್‌ನ್ನು  ಮಿಶ್ರ ಮಾಡಿ ೨.೫ ಕಿ.ಗ್ರಾಂ ನಷ್ಟು ಬೀಜವನ್ನು ಸಮನಾಗಿ ಬಿತ್ತಬೇಕು. ಇದಕ್ಕೆ ಫಂಗಸ್‌ ರೋಗ ಬರುವ ಸಾಧ್ಯತೆ ಹೆಚ್ಚಿಸುವುದರಿಂದ ಈ ಮಡಿಗೆ ಡೈಥೇನ್‌ Z-78ರ ಶೇಕಡಾ ೦.೨೫ರ ದ್ರಾವಣವನ್ನು ೧೫ ದಿನಗಳಿಗೊಮ್ಮೆ ಸಿಂಪಡಿಸಬೇಕು. ಇದರೊಂದಿಗೆ ಶೇಕಡಾ ೦.೦೨ರ ಎಕಾಲಕ್ಸ್‌ ದ್ರಾವಣವನ್ನು ತಿಂಗಳಿಗೊಮ್ಮೆ ಸಿಂಪಡಿಸಬೇಕು.

ನಾಟಿ ವಿಧಾನ: ಬೀಜವು ಮೊಳಕೆಯೊಡೆದು ೪ ರಿಂದ ೬ ಎಲೆಗಳು ಬಂದಾಗ ಅದನ್ನು ಪಾಲಿಥಿನ್‌ ಚೀಲಕ್ಕೆ ವರ್ಗಾಯಿಸುವಾಗ ‘ಟರ್ ದಾಲ್‌’ ಬೀಜವನ್ನು ಒಟ್ಟಿಗೆ ಹಾಕಬೇಕು. ಇದರಿಂದ ಗಂಧದ ಗಿಡದ ಬೆಳವಣಿಗೆ ಶೀಘ್ರವಾಗುವುದು. ಬಳಿಕ ಇದಕ್ಕೆ ನೆರಳನ್ನು ಒದಗಿಸಬೇಕು. ಮಡಿಯಿಂದ ಸಸಿಗಳನ್ನು ತೆಗೆಯುವಾಗ ಬೇರಿಗೆ ಪೆಟ್ಟಾಗದಂತೆ ನೋಡಿಕೊಳ್ಳಬೇಕು. ಈ ಪಾಲಿಥಿನ್‌ ಚೀಲದಲ್ಲಿ ಮರಳು, ಕೆಂಪುಮಣ್ಣು ಮತ್ತು ಹಟ್ಟಿಗೊಬ್ಬರ ತುಂಬಿಸಿಟ್ಟಿರಬೇಕು. ಸುಮಾರು ೬ ರಿಂದ ೮ ತಿಂಗಳಿಗಾಗುವಾಗ ೩೦ ಸೆಂ.ಮೀ ಎತ್ತರದ ಗಿಡ ಬಂದಾಗ ಅದನ್ನು ನಾಟಿ ಮಾಡಬಹುದು.

ಗೊಬ್ಬರ: ಒಂದು ಹೆಕ್ಟೇರ್ ಶ್ರೀಗಂಧದ ಕೃಷಿಗೆ ಸುಮಾರು ೨೦ ಟನ್‌ ಹಟ್ಟಿಗೊಬ್ಬರ ಅಗತ್ಯ. ಇದಕ್ಕೆ ಯಾವುದೇ ನೀರಾವರಿ ವ್ಯವಸ್ಥೆ ಅಗತ್ಯವಿಲ್ಲ. ಆದರೆ ಬೇಸಿಗೆ ಕಾಲದಲ್ಲಿ ಸಣ್ಣ ಗಿಡಗಳಿಗೆ ೨೦ ದಿನಗಳಿಗೊಮ್ಮೆ ನೀರುಣಿಸುವುದು ಉತ್ತಮ.

ರೋಗ: ‘ಸ್ಟ್ರೆಕ್‌’ ರೋಗವು ಈ ಗಿಡಕ್ಕೆ ಬರುವ ಅತ್ಯಂತ ವಿನಾಶಕಾರಿ ರೋಗ. ಇದೊಂದು ಸಾಂಕ್ರಾಮಿಕ ರೋಗ. ಇದು ಕೀಟಗಳ ಮೂಲಕ ಹರಡುವ ಸಾಧ್ಯತೆ ಹೆಚ್ಚು. ಈ ರೋಗ ಬಂದಾಗ ಗಿಡದ ಎಲೆಗಳು ಬೂದುಬಣ್ಣಕ್ಕೆ ತಿರುಗಿ, ಚಿಕ್ಕದಾಗುತ್ತಾ ಬಂದು ನಂತರ ಮುದುರಿಕೊಳ್ಳುತ್ತದೆ. ಕ್ರಮೇಣ ಮರ ಒಣಗುತ್ತದೆ. ರೋಗ ಬಂದ ಮರವನ್ನು ನಾಶಪಡಿಸುವುದರಿಂದ ಇದನ್ನು ಹತೋಟಿಗೆ ತರಬಹುದು.

ಕೊಯ್ಲು: ಗಂಧದ ಮರವನ್ನು ೩೦ ರಿಂದ ೬೦ ವರ್ಷಗಳೊಳಗೆ ಕೊಯ್ಲು ಮಾಡಬಹುದು. ಗಂಧದ ಮರದಲ್ಲಿ ಸುಗಂಧ ತೈಲವು ಚೇಗಿನಲ್ಲಿ ಮತ್ತು ಬೇರಿನಲ್ಲಿರುತ್ತದೆ. ಚೇಗು ಕಾಂಢದ ಮಧ್ಯಭಾಗದಲ್ಲಿರುತ್ತದೆ. ಚೇಗಿನ ಸುತ್ತಲಿರುವ ಭಾಗವು ಮೃದುವಾಗಿರುತ್ತದೆ. ಚೇಗು ಕಂದು ಬಣ್ಣದ್ದಾಗಿದೆ, ಮೃದು ಭಾಗ ಬಿಳಿಯ ಬಣ್ಣದ್ದಾಗಿದೆ. ಗಟ್ಟಿಯುಳ್ಳ ಚೇಗು ಭಾಗವನ್ನು ಮೃದುಭಾಗದಿಂದ ಬೇರ್ಪಡಿಸಿ ಅದನ್ನು ತುಂಡುಗಳನ್ನಾಗಿಸಬೇಕು, ಬಳಿಕ ಹುಡಿಮಾಡಿ ಭಟ್ಟಿ ಇಳಿಸಿದಾಗ ಎಣ್ಣೆ ದೊರಕುವುದು.

ಆದಾಯ: ಸರಕಾರದ ಮಳಿಗೆಗಳಲ್ಲಿ ಒಂದು ಕಿ.ಗ್ರಾಂ ಗಂಧದ ಕೊರಡಿಗೆ ರೂಪಾಯಿ ೩೫೦ರ ಬೆಲೆಯಿದೆ. ಗಂಧದ ಎಣ್ಣೆಗೆ ವಿದೇಶಿ ಮಾರುಕಟ್ಟೆ ಅತ್ಯಧಿಕವಾಗಿದೆ. ಗಂಧದ ಕೊರಡುಗಳನ್ನು ೫ ವರ್ಷಗಳ ಕಾಲ ಶೇಖರಿಸಿಡಬಹುದು.

೨೮. ಹಿಪ್ಪಲಿ

ಹಿಪ್ಪಲಿ ಎಲ್ಲೆಂದರಲ್ಲಿ ಬೆಳೆಸಬಹುದಾದ ಒಂದು ಗಿಡಮೂಲಿಕಾ ಸಸ್ಯ. ಹಿಪ್ಪಲಿಗೆ ಮಾಗಧೀ, ವೈದೇಹಿ, ಪಿಪ್ಪಲಿ, ಉಷಣಾ ಇತ್ಯಾದಿ ಹೆಸರುಗಳೂ ಇವೆ. ‘ಪೈಪರ್ ಲಾಂಗಮ್‌ಎಂಬ ಸಸ್ಯನಾಮವುಳ್ಳ ಇದು ಪೈಪರೇಸಿ ಸಸ್ಯ ಕುಟುಂಬಕ್ಕೆ ಸೇರಿದೆ. ಆಂಗ್ಲ ಭಾಷೆಯಲ್ಲಿ ಇದನ್ನು ‘ಲಾಂಗ್‌ಪೆಪ್ಪರ್’ ಎಂದು ಕರೆಯಲಾಗುತ್ತದೆ.  ಹಿಪ್ಪಲಿಯನ್ನು ಪ್ರಮುಖ ವಾಣಿಜ್ಯ ಬೆಳೆ ಇಲ್ಲವೆ ಮಿಶ್ರ ಬೆಳೆಯಾಗಿಯೂ ಬೆಳೆಸಬಹುದು. ಹಿಪ್ಪಲಿಯು ಕಾಯಿಗೊನೆಯುಳ್ಳ ನೀಳವಾದ ಬಹುವಾರ್ಷಿಕ ಬಳ್ಳಿಯಾಗಿದೆ.

ಮೂಲ: ಹಿಪ್ಪಲಿಯ ಮೂಲ ಭಾರತ-ಮಲೇಶಿಯಾ ಪ್ರದೇಶವಾಗಿದೆ. ಇದು ಕಾಡುಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಭಾರತ, ನೇಪಾಳ, ಇಂಡೋನೇಶೀಯಾ, ಮಲೇಶಿಯಾ, ಶ್ರೀಲಂಕಾ, ತೈಮೂರ್, ಫಿಲಿಫೈನ್ಸ್‌ಮುಂತಾದ ರಾಷ್ಟ್ರಗಳ ಕಾಡುಗಳಲ್ಲಿ ಇದು ಕಾಣ ಸಿಗುತ್ತದೆ. ಭಾರತದಲ್ಲಿ ಇದು ಕಾಡುಗಳಿಂದ ಬಂದು ಇದೀಗ ಕಾಶಿ ಬೆಟ್ಟದ ತಪ್ಪಲು, ಕೇರಳ, ಕರ್ನಾಟಕ, ತಮಿಳುನಾಡು, ಪಶ್ಚಿ ಕಮ ಬಂಗಾಳ, ಉತ್ತರ ಪ್ರದೇಶದ ಪೂರ್ವಭಾಗ ಮಧ್ಯ ಪ್ರದೇಶ, ಆಂಧ್ರ ಪ್ರದೇಶ, ಅಂಡಮಾನ್‌ನಿಕೋಬಾರ್ ದ್ವೀಪ ಸಮೂಹಗಳಲ್ಲಿ ಬೆಳೆಸಲಾಗುತ್ತಿದೆ.

ಸಸ್ಯ ಪರಿಚಯ

ಇದೊಂದು ಪೊದರುಬಳ್ಳಿ. ಇದರ ಎಲೆಗಳು ದುಂಡಾಗಿ ಇಲ್ಲವೇ ಹೃದಯಾಕಾರದಲ್ಲಿದ್ದು, ಇದರ ಉದ್ದ ೫ ರಿಂದ ೯ ಸೆಂ.ಮೀ ಮತ್ತು ಅಗಲ ಸುಮಾರು ೫ ಸೆಂ.ಮೀ ನಷ್ಟಾಗಿದೆ. ಇದು ಬಿಡುವ ಹಣ್ಣು ಸುಮಾರು ೩ ಸೆಂ.ಮೀ ನಷ್ಟು ಉದ್ದವಿದ್ದು ಅವು ಹಳದಿ ಮಿಶ್ರಿತ ಕಿತ್ತಳೆ ಬಣ್ಣದ್ದಾಗಿದೆ.

ಕೃಷಿ ವಿಧಾನ

ಮಣ್ಣು ಮತ್ತು ಹವಾಗುಣ: ಹಿಪ್ಪಲಿ ಕೃಷಿಯನ್ನು ನೀರು ಇಂಗಿ ಹೋಗುವ ಫಲವತ್ತಾದ ಮಣ್ಣಿನಲ್ಲಿ ಕೈಗೊಳ್ಳಬಹುದು. ಇದರ ಕೃಷಿಗೆ ಕಡಿಮೆ ಉಷ್ಣತೆಯುಳ್ಳ ತೇವಭರಿತ ಹವಾಗುಣ ಸೂಕ್ತ. ಸಮುದ್ರಮಟ್ಟದಿಂದ ಸುಮಾರು ೩೦೦ ರಿಂದ ೧೦೦೦ ಮೀ ಎತ್ತರದವರೆಗಿನ ಪ್ರದೇಶಗಳಲ್ಲಿ ಇದರ ಕೃಷಿ ಕೈಗೊಳ್ಳಬಹುದು. ಹೆಚ್ಚು ಮಳೆಯಾಗುವ ಶೇಕಡಾ ೨೫ರ ನೆರಳು ಒದುಗವ ಪ್ರದೇಶಗಳಲ್ಲಿ ಇದು ಯಶಸ್ವಿಯಾಗಬಲ್ಲದು.

ತಳಿಗಳು: ಭಾರತದಲ್ಲಿಂದು ಲಭ್ಯವಿರುವ ತಳಿಗಳು ಮಲೇಶಿಯಾ ಮತ್ತು ಇಂಡೋನೇಶಿಯಾದಿಂದ ಬಂದವುಗಳು. ನಮ್ಮಲ್ಲಿರುವ ವಿವಿಧ ಹವಾವಲಯಗಳಲ್ಲಿ ವಿವಿಧ ಸಂತತಿಗಳು ಕಾಣ ಸಿಗುತ್ತವೆ. ಇವುಗಳಲ್ಲಿ ಅಸ್ಯಾಂ, ಪಶ್ಚಿಮಬಂಗಾಳ, ಮತ್ತು ನೇಪಾಳದ ಸಂತತಿಗಳು ಪ್ರಸಿದ್ಧವಾದವುಗಳಾಗಿವೆ.

ಸಸ್ಯಾಭಿವೃದ್ಧಿ: ಹಿಪ್ಪಲಿ ಬಳ್ಳಿಯನ್ನು ಮಳೆಗಾಲದ ಆರಂಭದಲ್ಲಿ ಬೀಜ, ಬೇರು ಬಿಟ್ಟ ಬಳ್ಳಿಯ ತುಂಡುಗಳಿಂದ ಗಳಿಸಬಹುದು. ಸುಮಾರು ಮೂರರಿಂದ ಐದು ಗಂಟುಗಳಿರುವ ಬೇರು ಬಿಟ್ಟ ಕಾಂಡಗಳನ್ನು ಸಸ್ಯಾಭಿವೃದ್ಧಿಗೆ ಬಳಸುವುದು ಸೂಕ್ತ. ಪಾಲಿಥೀನ್‌ ಚೀಲದಲ್ಲಿ ನಾಟಿ ಮಾಡಿದಲ್ಲಿ ಸೂಕ್ತ ರೀತಿಯಲ್ಲಿ ಬೇರು ಬಿಡುವುದು. ಈ ಬಳ್ಳಿಗೆ ಹದವಾದ ನೀರುಣಿಸುವಿಕೆ ಆಗಬೇಕು.

ನಾಟಿ ಮಾಡಲು ಭೂಮಿಯ ತಯಾರಿ: ನಿಗದಿ ಪಡಿಸಿದ ಭೂಮಿಯನ್ನು ಎರಡರಿಂದ ಮೂರು ಬಾರಿ ಉಳುಮೆ ಮಾಡಿ ಬಳಿಕ ೩ಮೀ x ೨.೫ ಮೀ ಅಳತೆಯ ದಿಣ್ಣೆಯನ್ನು ತಯಾರಿ ಮಾಡಬೇಕು. ಈ ದಿಣ್ಣೆಗಳಲ್ಲಿ ೬೦ ಸೆಂ.ಮೀ. ಅಂತರದಲ್ಲಿ ಗುಣಿಗಳನ್ನು ತೆಗೆದು ಆ ಹೊಂಡಕ್ಕೆ ೧೦೦ ಗ್ರಾಂನಷ್ಟು ಹಟ್ಟಿಗೊಬ್ಬರ ಅಥವಾ ಕಾಂಪೋಸ್ಟನ್ನು ಹಾಕಿ ಮುಚ್ಚಬೇಕು. ಇಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.

ನಾಟಿ: ಮಳೆಗಾಲ ಆರಂಭವಾದಾಗ ಪ್ರತೀ ಹೊಂಡಕ್ಕೆ ಯಾ ಗುಣಿಗೆ ಎರಡು ಬೇರು ಬಿಟ್ಟ ಬಳ್ಳಿಯ ತುಂಡುಗಳನ್ನು ನಾಟಿ ಮಾಡಬೇಕು.

ಗೊಬ್ಬರ: ಹಿಪ್ಪಲಿಯ ಬೆಳವಣಿಗೆಗೆ ಅಧಿಕ ಗೊಬ್ಬರ ಅಗತ್ಯ. ನಾಟಿ ಮಾಡಿದ ಎರಡು ಮತ್ತು ಆ ಬಳಿಕದ ವರ್ಷಗಳಲ್ಲಿ ಹೆಕ್ಟೇರೊಂದರ ಸುಮಾರು ೨೦ ಟನ್‌ಗಳಷ್ಟು ಹಟ್ಟಿಗೊಬ್ಬರ ದಿಣ್ಣೆಗಳ ಮೇಲೆ ಹಾಕಿ ಮಿಶ್ರ ಮಾಡಬೇಕು. ಇದರೊಂದಿಗೆ ಪ್ರತೀ ಹೆಕ್ಟೇರಿಗೆ ೫೦ ಕಿ.ಗ್ರಾಂ ಸಾರೆಜನಕ, ೨೦ ಕಿ.ಗ್ರಾಂ ರಂಜಕ, ಮತ್ತು ೭೦ ಕಿ.ಗ್ರಾಂ ಪೊಟ್ಯಾಷ್‌ನ್ನು ಶಿಫಾರಸ್ಸು ಮಾಡಲಾಗಿದೆ.

ನೀರಾವರಿ: ಹಿಪ್ಪಲಿಯನ್ನು ಏಕಬೆಳೆಯಾಗಿ ಬೆಳೆಯುವುದಿದ್ದಲ್ಲಿ ವಾರಕ್ಕೊಂದು ಬಾರಿ ನೀರುಣಿಸಬೇಕು. ಅಂತರ ಬೆಳೆಯಾಗಿದ್ದಲ್ಲಿ ಇತರ ಬೆಳೆಗೆ ಹಾಯಿಸುವ ನೀರು ಸಾಕು. ಇಲ್ಲಿ ತುಂತುರು ನೀರಾವರಿ ಪದ್ಧತಿ ಉತ್ತಮ.  ಬೇಸಿಗೆಯಲ್ಲಿ ನೀರುಣಿಸಿದಲ್ಲಿ ನಿರಂತರವಾಗಿ ಕಾಯಿಗೊನೆ ಮೂಡುವುದು. ಇದರ ತಳ ಭಾಗಕ್ಕೆ ತರಗೆಲೆಗಳನ್ನು ಹರಡಿದಲ್ಲಿ ತೇವಾಂಶ ಉಳಿಯುವುದು. ನೀರುಣಿಸಿದಾಗ ಬರಬಹುದಾದ  ಕಳೆಗಳನ್ನು ಆಗಾಗ ತೆಗೆಯುತ್ತಿರಬೇಕು.

ಕೀಟ ಮತ್ತು ರೋಗಗಳು: ಈ ಬಳ್ಳಿಗೆ ಹಿಟ್ಟು ತಿಗಣೆ, ಹೆಲೋಪೆಲ್ವಿಸ್‌ಧಿವೋರ್ ಕೀಟಗಳ ಭಾದೆಯಿದೆ. ಹಿಟ್ಟು ತಿಗಣೆಯ ಹತೋಟಿಗೆ ಶೇಕಡಾ ೦.೧೫ ರೋಗಾರ್ ದ್ರಾವಣದ ಸಿಂಪಡನೆ ಅಗತ್ಯ. ಈ ಕೀಟದ ಭಾದೆಯಿದ್ದಲ್ಲಿ ಬಳ್ಳಿಯ ಬೆಳವಣಿಗೆ ಕುಂಠಿತಗೊಳ್ಳುವುದು. ಹೆಲೋಪೆಲ್ವಿಸ್ ಥಿವೋರ್ ನಿಂದ ಎಳತಾದ ಎಲೆಗಳಲ್ಲಿ ರಂಧ್ರಗಳು ಉಂಟಾಗುವುದು ಇದರ ಹತೋಟಿಗೆ ಶೇಕಡಾ ೦.೦೨ ರ ಬೇವಿನ ಹಿಂಡಿಯ ಕಷಾಯದ ಸಿಂಪಡನೆ ಆಗಬೇಕು. ಇದರೊಂದಿಗೆ ಶಿಲೀಂದ್ರದಿಂದಾಗಿ ಕೊಳೆಯುವಿಕೆ ಕಂಡು ಬಂದಲ್ಲಿ ಶೇಕಡಾ ೧ ರ ಬೋರ್ಡೋ ದ್ರಾವಣವನ್ನು ೨ ರಿಂದ ೩ ಬಾರಿ ಸಿಂಪಡಿಸಬೇಕು.

ಕೊಯ್ಲು: ಹಿಪ್ಪಲಿ ಬಳ್ಳಿಯ ನಾಟಿಯೊಆಗಿ ೧೮೦ ದಿವಸಗಳಲ್ಲಿ ಪಕ್ವಗೊಂಡ ಕಾಯಿಗೊನೆಗಳು ಕೊಯ್ಲು ಮಾಡಲು ಸಿಗುವುದು. ಕಾಯಿಗಳು ಕಪ್ಪು ಮಿಶ್ರಿತ ಹಸಿರು ಬಣ್ಣವನ್ನು ತೋರುವಾಗ ಕೊಯ್ಲು ಆಗಬೇಕು. ವಾರ್ಷಿಕವಾಗಿ ಮೂರರಿಂದ ಐದು ಕೊಯ್ಲು ಮಾಡಲು ಸಾಧ್ಯ.

ಕಾಯಿಗೊನೆಗಳ ಕೊಯ್ಲು ಮಾಡಿದ ಬಳಿಕ ನಾಲ್ಕರಿಂದ ಐದು ದಿನಗಳ ಕಾಲ ಬಿಸಿಲಿನಲ್ಲಿ ಇವನ್ನು ಒಣಗಿಸಬೇಕು. ಒಣಗಿದ ಕಾಯಿಗಳನ್ನು ತೇವಾಂಶವಿಲ್ಲದ ಡಬ್ಬಿಗಳಲ್ಲಿ ಶೇಖರಿಸಿಡಬೇಕು. ಇದನ್ನು ೨ ವರ್ಷಗಳ ಕಾಲ ಶೇಖರಿಸಿಡಬಹುದು.

ಹಿಪ್ಪಲಿಯ ಕಾಂಡ ಮತ್ತು ಬೇರುಗಳಲ್ಲಿ ಔಷಧೀಯ ಗುಣಗಳಿರುವುದರಿಂದ ಬಳ್ಳಿಯನ್ನು ನಾಟಿ ಮಾಡಿದ ೧೮ ತಿಂಗಳುಗಳ ಬಳಿಕ ಕೊಯ್ಲು ಮಾಡಲು ಸಾಧ್ಯ. ಈ ಕೊಯ್ಲು ಮಾಡುವಾಗ ಬಳ್ಳಿಯ ಕಾಂಡವನ್ನು ತಳಭಾಗ ಸಮವಾಗಿ ಕತ್ತರಿಸಿಕೊಳ್ಳಬೇಕು, ಬಳಿಕ ಬೇರುಗಳನ್ನು ಅಗೆದು ತೆಗೆಯಬೇಕು. ಅಗೆದು ತೆಗೆದ ಬೇರನ್ನು ಶುಭ್ರಗೊಳಿಸಿ ೨೪ ಗಂಟೆಗಳ ಕಾಲ ನೆರಳಿನಲ್ಲಿ ಒಣಗಿಸಿ ಬಳಿಕ ಅವನ್ನು ೨ ರಿಂದ ೫ ಸೆಂ.ಮೀ ತುಂಡುಗಳನ್ನಾಗಿ ಮಾಡಬೇಕು. ಹೆಕ್ಟೇರೊಂದರ ಸುಮಾರು ಸರಾಸರಿ ೧೦೦೦ ಕಿ.ಗ್ರಾಂನಷ್ಟು ಕಾಯಿ ಮತ್ತು ಸರಾಸರಿ ೫೦೦ ಕಿ.ಗ್ರಾಂ ಗಳಷ್ಟು ಬೇರುಗಳ ಇಳುವರಿ ಮೇಲೆ ತಿಳಿಸಿದ ಕೃಷಿ ವಿಧಾನಗಳಿಂದ ಗಳಿಸಿಕೊಳ್ಳಬಹುದಾಗಿದೆ. ಬೇರು ಮತ್ತು ಕಾಂಡಗಳ ದಪ್ಪಕ್ಕನುಗುಣವಾಗಿ ಮಾರುಕಟ್ಟೆಯಲ್ಲಿ ಇದರ ಬೆಲೆ ನಿರ್ಧಾರವಾಗುವುದು.

ಆದಾಯ: ಒಂದು ಹೆಕ್ಟೇರ್ ಹಿಪ್ಪಲಿ ಕೃಷಿಯಿಂದ ವಾರ್ಷಿಕವಾಗಿ ಸುಮಾರು ೧ ರಿಂದ ೧.೫ ಲಕ್ಷ ಆದಾಯ ಗಳಿಸಬಹುದಾಗಿದೆ.

ಹಿಪ್ಪಲಿಯ ಔಷಧೀಯ ಬಳಕೆ: ಹಿಪ್ಪಲಿಯ ಕಾಯಿ, ಬೇರು ಮತ್ತು ಕಾಂಡಗಳನ್ನು ಔಷಧಿಯಲ್ಲಿ ಬಳಸಲಾಗುತ್ತದೆ. ವೇದ ಕಾಲದಿಂದಲೇ ಇದರ ಔಷಧೀಯ ಮಹತ್ವದ ಅರಿವಿತ್ತು. ಆಯುರ್ವೇದದ ಗ್ರಂಥಗಳಾದ ಚರಕ-ಸುಶ್ರುತ ಸಂಹಿತೆಗಳಲ್ಲಿ ಕೆಮ್ಮು, ದಲಮ್ಮು ವಾತಗಳಿಗೆ ಭಾವಪ್ರಕಾಶದಲ್ಲಿ ಹಳೆಯ ಕಾಲುನೋವಿಗೆ ಇದನ್ನು ಬಳಸಬಹುದೆಂದು ಉಲ್ಲೇಖಿಸಲಾಗಿದೆ. ಭಾರತದ ಔಷಧೀಯ ಸಂಶೋಧನಾ ಕೇಂದ್ರವು ನಡೆಸಿದ ಪ್ರಯೋಗದ ಪ್ರಕಾರ ಹಿಪ್ಪಲಿಯು ಕ್ಷಯರೋಗದ ಕೀಟಾಣುಗಳನ್ನು ಕೊಲ್ಲಬಹುದೆಂಬುದಾಗಿ ಹೆಸರಿಸಿದೆ. ವಿವಿಧ ರೀತಿಯ ಜ್ವರಗಳ ನಿವಾರಣೆಯಲ್ಲೂ ಇದು ಪ್ರಮುಖ ಪಾತ್ರ ವಹಿಸುತ್ತದೆ.