ಪ್ರಕೃತ ನಾಶದಂಚಿನಲ್ಲಿರುವ ವಿವಿಧ ಔಷಧೀಯ ಸಸ್ಯಗಳ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ವಿಶ್ವದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಸಸ್ಯಗಳ ಪೈಕಿ ಹಲವು ನಮ್ಮ ಸುತ್ತ ಮುತ್ತ ನಮಗರಿವಿಲ್ಲದೆ ಎದ್ದು ನಿಂತಿವೆ. ಇವುಗಳ ರಕ್ಷಣೆಯ ಜವಾಬ್ದಾರಿ ನಮ್ಮದಾಗಿದೆ. ಇದರೊಂದಿಗೆ ಮಳೆಯಾಧಾರಿತ ಸಸ್ಯಗಳಾದ ಇವುಗಳನ್ನು ಕೃಷಿಯಾಗಿ ಮಾರ್ಪಡಿಸಲು ಅವಕಾಶಗಳಿವೆ. ಈ ದೃಷ್ಟಿಯಿಂದ ಹಲವು ಪ್ರಮುಖ ಔಷಧೀಯ ಸಸ್ಯಗಳ ಕೃಷಿ ವಿಧಾನ ಮತ್ತು ಮಾರುಕಟ್ಟೆ ಬಗ್ಗೆ ವಿವಿಧ ಮೂಲಗಳಿಂದ ಸಂಗ್ರಹಿಸಲಾದ ವಿಚಾರಗಳನ್ನು ತಮ್ಮ ಮುಂದಿಡುತ್ತಿದ್ದೇನೆ. ಮಾಹಿತಿಗಳನ್ನೊದಗಿಸಿದ ಈ ಎಲ್ಲಾ ಮೂಲಗಳಿಗೆ ನಾನು ಋಣಿಯಾಗಿದ್ದೇನೆ.

ಕೃಷಿಯುತ್ಪನ್ನಗಳ ಬಗ್ಗೆ ಮಾಹಿತಿಯನ್ನೊದಗಿಸುವ ಪುಸ್ತಕಗಳ ರಚನೆ ಮತ್ತು ಮಾರಾಟ ಇಂದಿನ ಬಹುದೊಡ್ಡ ಸಮಸ್ಯೆ. ಹೀಗಿದ್ದರೂ ನಮ್ಮೆಲ್ಲಾ ಕೃಷಿಕರು, ಸಹಕಾರಿಗಳು ಮತ್ತಿತರರು ನನ್ನ ಈ ಮೊದಲಿನ ಪುಸ್ತಕಗಳಿಗೆ ತೋರಿಸಿದ ಬೆಂಬಲದಿಂದಾಗಿ ಈ ಕೃತಿಯನ್ನು ತಮ್ಮೆಲ್ಲರ ಮುಂದಿಡುತ್ತಿದ್ದೇನೆ.

ಈ ಕೃತಿಯ ಪ್ರಕಟಣೆಗಾಗಿ ದ.ಕ. ಮತ್ತು ಉಡುಪಿ ಜಿಲ್ಲೆ ಪ್ರಮುಖ ಸಹಕಾರಿ ಸಂಸ್ಥೆಗಳಲ್ಲಿ ನೆರವನ್ನು ಯಾಚಿಸಿದ್ದೆ. ಈ ನಿಟ್ಟಿನಲ್ಲಿ ನನ್ನ ಕೋರಿಕೆಗೆ ತಕ್ಷಣ ಸ್ಪಂದಿಸಿದವರು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ರಾಜೇಂಧ್ರ ಕುಮಾರರವರು. ಸಹಾಯವನ್ನೊದಗಿಸಿದ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕಿನ ಅಧ್ಯಕರು, ನಿರ್ದೇಶಕರುಗಳು ಮತ್ತು ವ್ಯವಸ್ಥಾಪಕ ನಿರ್ದೇಶಕರಿಗೆ ನನ್ನ ನಮನಗಳು.

ಪುಸ್ತಕದ ಪ್ರಕಟಣೆಗೆ ಪ್ರೋತ್ಸಾಹವನ್ನು ನೀಡಿದ ಮಾಸ್‌ ಸಂಸ್ಥೆಯ ಅಧ್ಯಕ್ಷರಾದ ಶ್ರೀ ರಾಜಾರಾಮ ಭಟ್‌ ಮತ್ತು ನಿರ್ದೇಶಕರುಗಳಿಗೆ ನಾನು ಋಣಿಯಾಗಿದ್ದೇನೆ.

ನನ್ನ ಶೈಕ್ಷಣಿಕ ಚಟುವಟಿಕೆಗಳಿಗೆ ಸಹಕಾರ ಮತ್ತು ಬೆಂಬಲವನ್ನು ನೀಡುತ್ತಿರುವ ಮಂಗಳೂರು ವಿ.ವಿ. ವಿವೇಕಾನಂದ ಕಾಲೇಜು ಪುತ್ತೂರು ಇದರ ಆಡಳಿತ ಮಂಡಳಿ, ಪ್ರಾಂಶುಪಾಲರು, ವಿಭಾಗ ಮುಖ್ಯಸ್ಥರಾದ ಡಾ.ಪಿ.ಕೆ. ಬಾಲಕೃಷ್ಣ ಮತ್ತು ಸ್ನೇಹಿತ ಡಾ.ಪಿ.ಡಬ್ಲ್ಯೂ. ಪ್ರಭಾಕರವರಿಗೆ ನಾನು ಋಣಿ.

ನನ್ನೆಲ್ಲಾ ಚಟುವಟಿಕೆಗಳಿಗೆ ಬೆಂಬಲವಾಗಿ ನಿಂತಿರುವ ಕುಟುಂಬದ ಎಲ್ಲಾ ಸದಸ್ಯರುಗಳನ್ನಿಲ್ಲಿ ನೆನೆಸುತ್ತಿದ್ದೇನೆ.

ಈ ಪುಸ್ತಕದ ಟೈಪಿಂಗ್‌ ಕಾರ್ಯವನ್ನು ಮಾಡಿಕೊಟ್ಟ ಶ್ರೀ ವಿ. ಲಕ್ಷ್ಮೀಕಾಂತ್‌ ಶೆಣ್ಯೆ ಮತ್ತು ಅಂದವಾಗಿ ಮುದ್ರಿಸಿಕೊಟ್ಟ ಶ್ರೀನಿಧಿ ಆಫ್‌ಸೆಟ್‌ ಪ್ರಿಂಟರ್ಸ್ ಇವರಿಗೆ ನನ್ನ ಕೃತಜ್ಞತೆಗಳು.

ಡಾ. ವಿಘ್ನೇಶ್ವರ ವರ್ಮುಡಿ.
ವರ್ಮುಡಿ ಗುಂಪೆ