ಆರೋಗ್ಯದ ಬಗ್ಗೆ ಕಾಳಜಿ ಮಾನವನ ಸಂಸ್ಕೃತಿ ಆರಂಭಗೊಂಡಾಗಿನಿಂದ ಮಹತ್ವ ಪಡೆದಿದ್ದು, ಇದು ಆರಂಭದ ಹಂತದಲ್ಲಿ ಒಂದು ಯಕ್ಷಿಣಿ ಕಲೆಯಂತಿತ್ತು. ಈ ರೀತಿಯ ಪ್ರವೃತ್ತಿ ನಮ್ಮ ಹಳ್ಳಿ ಪ್ರದೇಶಗಳಲ್ಲಿ ಇಂದೂ ಕಾಣಬಹುದು. ಮನಸ್ಸಿಗೆ ಸ್ಪಂದಿಸಬಲ್ಲ ಕೆಲವೊಂದು ಸಸ್ಯಗಳನ್ನು ಬಳಸಿ ವಿವಿಧ ರೋಗಗಳನ್ನು ನಿವಾರಿಸುವ ಪದ್ಧತಿ ಏಶ್ಯಾ ಖಂಡದಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಇಂದಿಗೂ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಕೆಲವೊಂದು ಸಸ್ಯಗಳನ್ನು ಬಳಸಿ ‘ಮಂತ್ರವಾದ’ ಮಾಡಿ ರೋಗಗಳನ್ನು ವಾಸಿಮಾಡುತ್ತಿರುವುದು ಗ್ರಾಮೀಣ ಜನತೆಗೆ ತಿಳಿದ ವಿಚಾರ. ಕ್ರಮೇಣ ಅನುಭವ ವೈದ್ಯ ಇಲ್ಲವೇ ಅಳಲೆಕಾಯಿ ವೈದ್ಯ ಪದ್ಧತಿಯ ಮೂಲಕ ರೋಗಗಳ ನಿವಾರಣೆಗೆ ಮಹತ್ವ ಬಂತು. ಈ ಪದ್ಧತಿಯಲ್ಲಿ ವಿವಿಧ ರೀತಿಯ ಗಿಡಮೂಲಿಕೆಗಳ ಬಳಕೆ ಆರಂಭಗೊಂಡಿತು.

ಔಷಧೀಯ ಸಸ್ಯಗಳ ಬಗ್ಗೆ ಮತ್ತವುಗಳ ಔಷಧೀಯ ಗುಣಗಳ ಬಗ್ಗೆ ಪ್ರಾಚೀನ ಮತ್ತು ಆಧುನಿಕ ಜಗತ್ತಿನಲ್ಲಿ ಹಲವು ದಾಖಲೆಗಳಾಗಿದ್ದವು. ಈ ರೀತಿಯ ಪ್ರಯತ್ನ ಕ್ರಿ.ಪೂ.ದಲ್ಲಿ ಇರಾಕಿನಲ್ಲಾಗಿತ್ತು. ಈಜಿಪ್ಟ್ನಲ್ಲಿ ಫರಾವ್‌ಗಳು ದೂರದ ಊರು ಮತ್ತು ಕಾಡುಗಳಿಗೆ ಅನ್ವೇಷಕರನ್ನು ಕಳುಹಿಸಿ ಔಷಧೀಯ ಸಸ್ಯಗಳ ಶೋಧನೆ ಮಾಡಿಸುತ್ತಿದ್ದರು. ಅಲೆಗ್ಸಾಂಡರ್ ದ ಗ್ರೇಟ್‌ ಏಶ್ಯಾದ ರಾಷ್ಟ್ರಗಳಿಂದ ಔಷಧೀಯ ಸಸ್ಯಗಳನ್ನು ತನ್ನ ತಾಯ್ನಾಡಿಗೆ ಕಳುಹಿಸಿ ವ್ಯವಸಾಯಕ್ಕೆ ಅವಕಾಶ ಮಾಡಿ ಕೊಟ್ಟಿದ್ದ. ೧೯ನೇ ಶತಮಾನದ ಆದಿ ಭಾಗದಲ್ಲಿ ಐರೋಪ್ಯ ರಾಷ್ಟ್ರಗಳಲ್ಲಿ ಔಷಧೀಯ ಸಸ್ಯಗಳ ಬಗ್ಗೆ ಸಾಕಷ್ಟು ಅಧ್ಯಯನಗಳಾದವು. ಭಾರತದಲ್ಲಿ ಔಷಧೀಯ ಸಸ್ಯಗಳ ಬಗ್ಗೆ ಕ್ರಿ.ಪೂ. ೩೫೦೦ ರಿಂದ ೧೫೦೦ರ ವರೆಗಿನ ಅವಧಿಯ ಋಗ್ವೇದ ಮತ್ತು ಅಥರ್ವ ವೇದಗಳಲ್ಲಿ ವಿವರಿಸಲ್ಪಟ್ಟಿವೆ. ಪುರಾತನ ಗ್ರಂಥಗಳು, ಶುಶ್ರುತನ ಚರಕ ಸಂಹಿತ ಇತ್ಯಾದಿಗಳು ಆಯುರ್ವೇದ ಔಷಧಿ ತಯಾರಿಕಾ ಕ್ರಮದಿಂದ ಹಿಡಿದು ಶಸ್ತ್ರ ಚಿಕಿತ್ಸೆಯವರೆಗೆ ಉಲ್ಲೇಖಿಸಿವೆ. ವೇದ ಕಾಲಕ್ಕಿಂತಲೂ ಮೊದಲಿನ ಸಸ್ಯ ಮೂಲದ ಔಷಧಿಯ ಬಗ್ಗೆ ಯಾವುದೇ ಗ್ರಂಥಗಳಿಲ್ಲದಿದ್ದರೂ ಆ ಕಾಲದ ಶಾಸನಗಳಿಂದ ಇವುಗಳ ಮಹತ್ವವನ್ನು ಅರಿತುಕೊಳ್ಳಬಹುದಾಗಿದೆ. ಪ್ರೊ.ಪಿ.ವಿ. ಶರ್ಮಾರವರ “‘ಆಯುರ್ವೇದ ವೈಜ್ಞಾನಿಕ ಇತಿಹಸಾ’ದಲ್ಲಿ ಹೆಸರಿಸಿದ ಪ್ರಕಾರ ಋಗ್ವೇದದಲ್ಲಿ ೬೭, ಯಜುವೇðದದಲ್ಲಿ ೮೨,  ಅಥರ್ವವೇದದಲ್ಲಿ ೨೮೯, ಬ್ರಾಹ್ಮಣ ಸಾಹಿತ್ಯದಲ್ಲಿ ೧೨೯, ಮತ್ತು ಉಪನಿಷದ್‌ನಲ್ಲಿ ೩೧ ಔಷಧೀಯ ಸಸ್ಯಗಳ ಬಗ್ಗೆ ಉಲ್ಲೇಖವಿದೆ.

ವೇದಕಾಲದ ಬಳಿಕದ ಅವಧಿಯಲ್ಲಿ ಬಂದ ಸಂಹಿತ ಮತ್ತು ನಿಘಂಟುಗಳಿಂದಾಗಿ ಔಷಧೀಯ ಸಸ್ಯಗಳ ಬಗ್ಗೆ ಹೆಚ್ಚಿನ ಒಲವು ಮೂಡಿತ್ತು. ಸಂಹಿತ ಅವಧಿಯಲ್ಲಿ ಚರಕ ಸಂಹಿತ, ಶುಶ್ರೂತ ಸಂಹಿತ, ಅಷ್ಟಾಂಗ ಸಂಹಿತ ಮತ್ತು ಅಷ್ಟಾಂಗ ಹೃದಯಂ ಆಯುರ್ವೇದದ ಬಗ್ಗೆ ಸಾಕಷ್ಟು ಮಾಹಿತಿಗಳೊದಗಿಸಿದವು. ಶುಶ್ರೂತ ಸಂಹಿತದಲ್ಲಿ ಸುಮಾರು ೧೨೭೦ ಗಿಡ ಮೂಲಿಕೆಗಳ ಬಗ್ಗೆ ಹೆಸರಿಸಲಾಗಿತ್ತು. ಅದೇ ರೀತಿ ಚರಕ ಸಂಹಿತದಲ್ಲಿ ೧೧೦೦ ಸಸ್ಯಗಳ ಬಗ್ಗೆ ಮಾಹಿತಿ ಕೊಡಲಾಗಿತ್ತು.

ಚೀನಾದಲ್ಲಿ ಕ್ರಿ.ಪೂವದಲ್ಲಿಯೆ ಔಷಧೀಯ ಸಸ್ಯಗಳ ಸಂಸ್ಕೃತಿ ಬಗ್ಗೆ ಬರಹ ಮೂಲಕದ ಮಾಹಿತಿಯಿತ್ತು. ಒಟ್ಟಾರೆಯಾಗಿ ಸಾಂಪ್ರದಾಯಿಕ ಔಷಧೀಯ ಪದ್ಧತಿಗಳಿಗೆ ಹೆಸರಾದ ಭಾರತ, ಚೀನಾ, ಆಫ್ರಿಕಾ ಮತ್ತು ದಕ್ಷಿಣ ಅಮೇರಿಕಾಗಳು ಆಧುನಿಕ ವೈದ್ಯ ಪದ್ಧತಿಗೆ ಹಲವು ರೀತಿಯ ಹೊಸ ಔಷಧಿಗಳನ್ನು ಒದಗಿಸಿದವು. ಐತಿಹಸಿಕ ದಾಖಲೆಗಳ ಪ್ರಕಾರ ೧೯೩೦ರ ತನಕ ವಿಶ್ವದಲ್ಲಿ ಬಳಕೆಯಾಗುತ್ತಿದ್ದ ಅಧಿಕೃತ ಔಷಧಿಗಳಲ್ಲಿ ಶೇಕಡಾ ೯೦ ರಷ್ಟು ಸಸ್ಯಮೂಲದ್ದಾಗಿತ್ತು. ಎರಡನೇ ಮಹಾ ಯುದ್ಧದ ಬಳಿಕ ಆಧುನಿಕ ಔಷಧಗಿಳ ಪ್ರವೇಶ ವಿಶ್ವಕ್ಕಾಯಿತು. ಇದೇ ಸಮಯದಲ್ಲಿ ನೋವು ನಿವಾರಕಗಳ ಪ್ರವೇಶಗಳೂ ಆಯಿತು. ೧೯೬೦ ರ ನಂತರ ವಿಶ್ವದಾದ್ಯಂತ ಆಧುನಿಕ ಔಷಧಗಳು ಸಂಯೋಗ ಮೂಲದಿಂದ ಬರಲಾರಂಭಿಸಿದವು. ಇದರಿಂದಾಗಿ ಔಷಧೀಯ ಸಸ್ಯಗಳ ಮಹತ್ವ ಕ್ಷೀಣಿಸಿತು. ಆದರೆ ಇದೇ ಸಮಯದಲ್ಲಿ ಹಲವು ರಾಷ್ಟ್ರಗಳು ಎಚ್ಚೆತ್ತು ಸಾಂಪ್ರದಾಯಿಕ ಪದ್ಧತಿಯತ್ತ ಒಲವನ್ನು  ತೋರಿದವು. ಈ ನಿಟ್ಟಿನಲ್ಲಿ ಯು.ಎಸ್‌.ಎಸ್‌.ಆರ್ (ರಶ್ಯಾ) ಮೊದಲ ಹೆಜ್ಜೆಯಿಟ್ಟಿತು.

೧೯೬೨ ರಲ್ಲಿ ರಶ್ಯಾದ ಅಲ್ಮ-ಆಟಾದಲ್ಲಿ ಜರುಗಿದ ಸಭೆಯಲ್ಲಿ ಸ್ವದೇಶಿ ಮತ್ತು ಸಾಂಪ್ರದಾಯಿಕ ಔಷಧಿ ಪದ್ಧತಿ ಬಗ್ಗೆ ಒಲವು ಮೂಡಿಬಂತು. ಇದರ ಪರಿಣಾಮವಾಗಿ ಕೊಲಂಬೋದಲ್ಲಿ ಮೆಡಿಸಿನಾ ಅಲ್‌ಟರ್ನೇಟಿವ್‌ ಇನ್‌ಸ್ಟಿಟ್ಯೂಟ್‌ ಆರಂಭಗೊಂಡಿತು.

ವಿಶ್ವ ಆರೋಗ್ಯ ಸಂಸ್ಥೆಯ ಪ್ರವೇಶ

೧೯೭೭ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯಾ ಸಂಘಟನೆಯ ೩೦ನೇ ಸಮ್ಮೇಳನದಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸದಸ್ಯ ರಾಷ್ಟ್ರಗಳೊಳಗೆ ಒಂದು ಒಪ್ಪಂದವಾಯಿತು. ಈ ಒಪ್ಪಂದದ ಪ್ರಕಾರ ಪ್ರತೀ ಸದಸ್ಯ ರಾಷ್ಟ್ರವು ಸಾಂಪ್ರದಾಯಿಕ ಔಷಧಿ ಪದ್ಧತಿಯ ಬಗ್ಗೆ ಒಲವು ಹೊಂದಿ ಇದರ ಪರಿಪೂರ್ಣ ಬಳಕೆ ಮಾಡಬೇಕು. ಅಲ್ಲದೆ ಈ ನಿಟ್ಟಿನಲ್ಲಿ ರಾಷ್ಟ್ರೀಯ ಆರೋಗ್ಯಕ್ಕೆ ಸಂಬಂಧಸಿದಂತೆ ಅಗತ್ಯ ನಿಯಮಗಳನ್ನು ಹೊಂದಬೇಕು. ಈ ಸಮಾವೇಶದ ಬಳಿಕ ವಿಶ್ವದಾದ್ಯಂತ ಸಾಂಪ್ರದಾಯಿಕ ಔಷಧಿ ಪದ್ಧತಿ ಬಗ್ಗೆ ಆಸಕ್ತಿ ಬಂದು ಈ ನಿಟ್ಟಿನಲ್ಲಿ ಹಲವು ರೀತಿಯ ವ್ಯವಸ್ಥೆಗಳ ಆರಂಭವಾಯಿತು.

ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಹೆಚ್ಚಿನ ಒಲವು ಕಂಡು ಬರುತ್ತಿದೆ. ಐರೋಪ್ಯ ಸಮುದಾಯದ ಸದಸ್ಯ ರಾಷ್ಟ್ರಗಳಲ್ಲಿ ಕೈಗೊಂಡ ಅಧ್ಯಯನ ಪ್ರಕಾರ ಅಲ್ಲಿ ಸುಮಾರು ೧೪೦೦ ಗಿಡ ಮೂಲಿಕೆಗಳಿಂದ ತಯಾರಾದ ಔಷಧಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿದ್ದಾರೆ. ಇದೇ ರೀತಿಯ ಪ್ರತಿಕ್ರಿಯೆ ಬೆಲ್ಜಿಯಂ, ಫ್ರಾನ್ಸ್‌, ಜರ್ಮನಿ ಮತ್ತು ನೆದರ್ ಲ್ಯಾಂಡ್‌ಗಳಲ್ಲೂ ಕಂಡು ಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಏಡ್ಸ್‌ ನಂತ ಮಾರಕ ರೋಗದ ನಿವಾರಣೆಗೆ ಗಿಡ ಮೂಲಿಕೆಗಳಿಂದ ಔಷಧಿಯನ್ನು ಪಡೆಯುವ ಪ್ರಯತ್ನ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಆಗುತ್ತಿದೆ. ಉದಾಹರಣೆ ಸೌತೆ ಕಾಯಿಯ ಬಳಕೆ.

ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಔಷಧೀಯ ಸಸ್ಯಗಳು ಮತ್ತು ಮೂಲಿಕೆಗಳ ಔಷಧಿ ಪದ್ಧತಿಗೆ ಒಲವು ಬರಲು ಕೆಲವು ಕಾರಣಗಳಿದ್ದು ಅವುಗಳೆಂದರೆ:

೧) ಆಧುನಿಕ ಚಿಕಿತ್ಸೆ, ಚಿಕಿತ್ಸಾ ವಿಧಾನ, ಔಷಧಿಗಳಿಗೆ ಮತ್ತು ಚಿಕಿತ್ಸಾ ಕೇಂದ್ರಗಳಿಗೆ ವಿನಿಯೋಗಿಸಬೇಕಾದ ವೆಚ್ಚ ಅಧಿಕವಾಗುತ್ತಿರುವುದು;

೨) ಸರಕಾರ, ಸಮೂಹ, ಸಂಘಟನೆ ಮತ್ತು ವೈಯಕ್ತಿಕ ನೆಲೆಯಲ್ಲಿ ಆರೋಗ್ಯದಲ್ಲಿ ಸ್ವಾವಲಂಬನೆ ಕಂಡು ಕೊಳ್ಳುವ ಉದ್ದೇಶ;

೩) ಸಂಘಟನೆ ಮತ್ತು ಸರಕಾರಗಳಿಗೆ ಸ್ಥಳೀಯ ಮತ್ತು ರಾಷ್ಟ್ರೀಯ ಸಾವಯವ ಮೂಲದ ಸಣ್ಣ ಮತ್ತು ದೊಡ್ಡ ಕೈಗಾರಿಕೆಗಳ ಅಭಿವೃದ್ಧಿ ಬಗ್ಗೆ ಮೂಡಿರುವ ಆಸಕ್ತಿ;

೪) ಮೂಲಿಕಾ ವಿಧಾನದ ಚಿಕಿತ್ಸೆಯ ದಕ್ಷತೆ ಮತ್ತು ಸುರಕ್ಷತೆ ಬಗ್ಗೆ ಅಸಕ್ತಿ ಮತ್ತು ಗಳಿಸಿಕೊಂಡ ಯಶಸ್ಸು;

೫) ಗಿಡಮೂಲಿಕೆಗಳಾಧರಿತ ಉದ್ದಿಮೆಗಳ ಬಗ್ಗೆ ಇರುವ ಕಾನೂನುಗಳಲ್ಲಿನ ಬದಲಾವಣೆ ಮತ್ತು ತೋರಿಸುತ್ತಿರುವ ಮಹತ್ವ;

೬) ವಿವಿಧ ರೀತಿಯ ಔಷಧಿಯ ತಯಾರಕ ಸಂಸ್ಥೆಗಳು ಸಸ್ಯ ಮೂಲದ ಔಷಧಿಯನ್ನು ಉತ್ಪಾದಿಸಲು ಆಸಕ್ತಿ ತೋರಿಸುತ್ತಿರುವುದು;

೭) ವಿವಿಧ ರೀತಿಯ ಸಸ್ಯಮೂಲದ ಹೊಸ ಔಷಧಿಗಳನ್ನು ತೀವ್ರತರನಾದ ಅನಾರೋಗ್ಯಗಳ ನಿವರಣೆಗಾಗಿ ತಯಾರಿಸಲು ಸಂಶೋಧನೆಗಳಾಗುತ್ತಿರುವುದು;ಮತ್ತು

೮) ಔಷದ ತಯಾರಿಕಾ ಸಂಸ್ಥೆಗಳು ಗಿಡಮೂಲಿಕೆಗಳ ಮಾರಾಟಕ್ಕಾಗಿ ಅಳವಡಿಸಿಕೊಳ್ಳುತ್ತಿರುವ ತಂತ್ರಜ್ಞಾನ.

ಈ ಎಲ್ಲಾ ಉದ್ದೇಶಗಳಿಂದ ಔಷಧೀಯ ಸಸ್ಯಗಳಿಗಿಂದು ವಿಶ್ವದಾದ್ಯಂತ ಮಹತ್ವ ಬರಲಾರಂಭಿಸಿದೆ. ವಿಶ್ವ ಆರೋಗ್ಯ ಸಂಘಟನೆಯು ನೀಡುವ ಮಾಹಿತಿ ಪ್ರಕಾರ ಅಭಿವೃದ್ಧಿ ಹೊಂದುತ್ತಿರುವ  ರಾಷ್ಟ್ರಗಳಲ್ಲಿರುವ ಜನಸಂಖ್ಯೆಯ ಶೇಕಡ ೮೦ ಪಾಲು ಇಂದಿಗೂ ಗಿಡ ಮೂಲಿಕೆಗಳನ್ನಾಧರಿಸಿರುವ ಸಾಂಪ್ರದಾಯಿಕ ಔಷಧಿಯನ್ನು ಬಳಸುತ್ತಿದ್ದು, ಇದರೊಂದಿಗೆ ಆಧುನಿಕ ಪದ್ಧತಿಯ ಔಷಧಿಗಳಲ್ಲಿ ಶೇಕಡಾ ೨೫ ರಷ್ಟು ಗಿಡಮೂಲಿಕೆಗಳನ್ನು ಹೊಂದಿವೆ. ಒಟ್ಟಾರೆಯಾಗಿ ಅಭಿವೃದ್ಧಿ ಹೊಂದಿದ ಮತ್ತು ಹೊಂದುತ್ತಿರುವ ರಾಷ್ಟ್ರಗಳಲ್ಲೀಗ ಔಷಧೀಯ ಸಸ್ಯಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದ್ದು, ಇದಕ್ಕಿರುವ ಕಾರಣಗಳೆಂದರೆ ಇವು ಸ್ವಾಭಾವಿಕ ಉತ್ಪನ್ನಗಳು, ಅಮಲುರಹಿತರ ಗುಣವನ್ನು ಹೊಂದಿರುವವು, ಸೇವನೆಯಿಂದ ಯಾವುದೇ ಅಡ್ಡ ತೊಂದರೆಗಳಿಲ್ಲದಿರುವುದು, ಸುಲಭವಾಗಿ ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗುವಂತವುಗಳು ಮತ್ತು ಬಡವರ ಆರೋಗ್ಯದ ದೃಷ್ಟಿಯಿಂದ ಲಭ್ಯವಿರುವ ಸುಲಭ ಸಂಪನ್ಮೂಲ ಇದಾಗಿರುವುದು.

ವಿಶ್ವದಲ್ಲಿ ಬಳಕೆಯಾಗುತ್ತಿರುವ ಔಷಧೀಯ ಸಸ್ಯಗಳು:

ವಿಶ್ವದಲ್ಲಿಂದು ಬಳಕೆಯಾಗುತ್ತಿರುವ ಔಷಧೀಯ ಸಸ್ಯಗಳ ಸಂಖ್ಯೆ ಎಷ್ಟೆಂಬುದನ್ನು ಖಚಿತವಾಗಿ ಹೇಳಲು ಅಸಾಧ್ಯ. ಇಲ್ಲಿ ಈ ಸಂಖ್ಯೆ ಏನಿದ್ದರು ಅಂದಾಜು ಆಧಾರಿತವಾಗಿದೆ. ವಿಶ್ವ ಆರೋಗ್ಯ ಸಂಘಟನೆಯು ೧೯೭೦ರ ದಶಕದಲ್ಲಿ ಗಣತಿ ಮಾಡಿದ ಪಟ್ಟಿಯಲ್ಲಿ ಸುಮಾರು ೨೧,೦೦೦ ಔಷಧೀಯ ಜಾತಿಗಳಿವೆ. ಆದರೆ ಚೀನಾದಲ್ಲಿರುವ ಒಟ್ಟು ಸಸ್ಯ ಜಾತಿಯ ಸಂಖ್ಯೆ ೨೬,೦೯೨ ಮತ್ತು ಇದರಲ್ಲಿ ೪,೯೪೧ ಔಷಧೀಯ ಸಸ್ಯಗಳು ಈ  ಲೆಕ್ಕಾಚಾರದಂತೆ ವಿಶ್ವದಲ್ಲಿರುವ ಒಟ್ಟು ಸಸ್ಯ ಜಾತಿಯ ಸಂಖ್ಯೆಯಾದ ೪,೨೨,೦೦೦ ವನ್ನು ಗಣನೆಗೆ ತೆಗೆದುಕೊಂಡಲ್ಲಿ ಔಷಧೀಯ ದೃಷ್ಟಿಯಿಂದ ಉಪಯೋಗಿಸಲ್ಪಡುವ ಸಸ್ಯಗಳ ಸಂಖ್ಯೆ ೫೦,೦೦೦ ಕ್ಕಿಂತಲೂ ಹೆಚ್ಚಾಗಬಹುದು. (ಪಟ್ಟಿ)

ಪಟ್ಟಿ : ವಿಶ್ವದಲ್ಲಿ ಔಷಧೀಯ ದೃಷ್ಟಿಯಿಂದ ಉಪಯೋಗವಾಗುವ ಸಸ್ಯಗಳು

ದೇಶ

ಸಸ್ಯ ಜಾತಿಗಳ ಸಂಖ್ಯೆ

ಔಷಧೀಯ ಸಸ್ಯಗಳ ಜಾತಿ (ಸಂಖ್ಯೆ)

ಶೇಕಡಾವಾರು

ಚೀನಾ ೨೬,೦೯೨ ೪,೯೪೧ ೧೮.೯
ಭಾರತ ೧೫,೦೦೦ ೩,೦೦೦ ೨೦.೦
ಇಂಡೋನೇಶಿಯಾ ೨೨,೫೦೦ ೧,೦೦೦ ೪.೪
ಮಲೇಶಿಯಾ ೧೫,೫೦೦ ೧,೨೦೦ ೭.೭
ನೇಪಾಳ ೬,೯೭೩ ೭೦೦ ೧೦.೦
ಪಾಕಿಸ್ಥಾನ ೪,೯೫೦ ೩೦೦ ೬.೧
ಪಿಲಿಫೈನ್ಸ್‌ ೮,೯೩೧ ೮೫೦ ೯.೫
ಶ್ರೀಲಂಕಾ ೩,೩೧೪ ೫೬೦ ೧೬.೬
ಥೈಲ್ಯಾಂಡ್‌ ೧೧,೬೨೫ ೧,೮೦೦ ೧೫.೫
ಅಮೇರಿಕಾ ೨೧,೬೪೧ ೨,೫೬೪ ೧೧.೮
ವಿಯೆಟ್ನಾಂ ೧೦,೫೦೦ ೧,೮೦೦ ೧೭.೧
ಸರಾಸರಿ ೧,೩೬೬ ೧,೭೦೦ ೧೨.೫
ವಿಶ್ವದ ಒಟ್ಟು ೪,೨೨,೦೦೦ ೫೨,೮೮೫  

ಮೂಲ: ವಿವಿಧ ಮೂಲಗಳಿಂದ

ವಿಶ್ವದಲ್ಲಿ ವಿನಾಶದಂಚಿನಲ್ಲಿರುವ ಔಷಧೀಯ ಸಸ್ಯಗಳು

ಆಂತರಿಕ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಔಷಧೀಯ ಸಸ್ಯಗಳಿಗಿರುವ ಹೆಚ್ಚಿನ ಬೇಡಿಕೆಯಿಂದಾಗಿ ಇವುಗಳ ಕೊಯ್ಲು ಅಧಿಕಗೊಂಡು ಇವುಗಳಲ್ಲಿ ಹಲವಿಂದು ವಿನಾಶದಂಚಿನಲ್ಲಿವೆ. ಈ ಔಷಧೀಯ ಸಸ್ಯಗಳ ಪೂರೈಕೆಯ ಬಹುಪಾಲು ಅರಣ್ಯ ಪ್ರದೇಶಗಳಿಂದಾಗುತ್ತಿದ್ದು, ಅರಣ್ಯಗಳ ನಾಶ, ವಾಣಿಜ್ಯ ಬೆಳೆಗಳ ವಿಸ್ತೀರ್ಣದ ಹೆಚ್ಚಳ ಇತ್ಯಾದಿಗಳಿಂದಾಗಿ ಇವಿಂದು ನಶಿಸಿಹೋಗುತ್ತಿವೆ, ಇಲ್ಲವೇ ನಾಶದ ಅಂಚಿಗೆ ತಲುಪಿವೆ. ವಿಶ್ವದ ಔಷಧೀಯ ಸಸ್ಯಗಳ ತಜ್ಞರ ಪ್ರಕಾರ ವಿಶ್ವದಲ್ಲಿ ಸುಮಾರು ೩೪,೦೦೦ ಸಸ್ಯಗಳಿಂದು ಭೀತಿಯನ್ನೆದುರಿಸತ್ತಿವೆ. ನಾಶದಂಚಿನಲ್ಲಿರುವ ಔಷಧೀಯ ಸಸ್ಯಗಳ ಪ್ರಮಾಣ ಶೇಕಡಾ ೮ ರಷ್ಟಾಗಿದೆ. ವಿಶ್ವದಲ್ಲಿಂದು ಔಷಧೀಯ ಸಸ್ಯಗಳಾಗಿ ಉಪಯೋಗಿಸುತ್ತಿರುವ ೫೨,೦೦೦ ಸಸ್ಯಜಾತಿಯವುಗಳನ್ನು ಈ ದೃಷ್ಟಿಯಿಂದ ಗಣನೆಗೆ ತೆಗೆದುಕೊಂಡರೆ ಶೇಕಡಾ ೮ ಅಂದರೆ ಈ ಸಂಖ್ಯೆ ೪,೧೬೦ ಆಗುವುದು.

ವಿಶ್ವದಲ್ಲಿ ಕೃಷಿಯಾಗಿ ಔಷಧೀಯ ಸಸ್ಯಗಳು

ವಿಶ್ವದಲ್ಲಿಂದು ಗಿಡಮೂಲಿಕೆಗಳನ್ನು ಹೆಚ್ಚಾಗಿ ಮನೆಯಂಗಳದಲ್ಲಿ ಬೆಳೆಸಲಾಗುತ್ತಿದೆ. ಕೆಲವೊಂದನ್ನು ವ್ಯವಸಾಯ ರೂಪದಲ್ಲಿ ಇಲ್ಲವೇ ಮಿಶ್ರಬೆಳೆ ಯಾಏಕಬೆಳೆಯಾಗಿ ಕೈಗೊಳ್ಳಲಾಗುತ್ತಿದೆ. ಜರ್ಮನಿಯಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಅಲ್ಲಿ ವ್ಯಾಪಾರವಾಗುತ್ತಿರುವ ೧೫೪೩ ಗಿಡಮೂಲಿಕೆಗಳಲ್ಲಿ ಕೇವಲ ೫೦ ರಿಂದ ೧೦೦ ಜಾತಿಯವುಗಳು ಮಾತ್ರ ವ್ಯವಸಾಯದಿಂದ ಬರುತ್ತಿವೆ. ಭಾರತದಲ್ಲಿಂದು ಔಷಧಿಗಳ ತಯಾರಿಯಲ್ಲಿ ಉಪಯೋಗವಾಗುತ್ತಿರುವ ಸುಮಾರು ೪೦೦ ಸಸ್ಯ ಜಾತಿಯವುಗಳಲ್ಲಿ ಕೇವಲ ೨೦ ಮಾತ್ರ ದೇಶದ ನಾನಾ ಭಾಗಗಳಲ್ಲಿ ಕೃಷಿ ರೂಪದಿಂದ ಬರತ್ತಿದೆ. ಚೀನಾದಲ್ಲಿಂದು ಔಷಧಿಯಾಗಿ ಉಪಯೋಗವಾಗುತ್ತಿರುವ ೧೦೦೦ ಸಸ್ಯಗಳಲ್ಲಿ ಕೇವಲ ೧೦೦ ರಿಂದ ೨೫೦ ಸಸ್ಯಗಳು ಬೇಸಾಯದ ಮೂಲಕ ದೊರಕುತ್ತಿದೆ. ಹಂಗರಿಯಲ್ಲಿ ೪೦ ಮತ್ತು ಯುರೋಪಿನಲ್ಲಿ ಕೇವಲ ೧೩೦-೧೪೦ ಔಷಧೀಯ ಸಸ್ಯಗಳು ವಾಣಿಜ್ಯ ರೀತಿಯ ವ್ಯವಸಾಯದಿಂದ ಒದಗುತ್ತಿದೆ.

ಔಷಧೀಯ ಸಸ್ಯ ಮೂಲದ ಉತ್ಪನ್ನಗಳಿಗಿರುವ ವಿಶ್ವ ಮಾರುಕಟ್ಟೆ

ಔಷಧೀಯ ಸಸ್ಯ ಮೂಲದ ಉತ್ಪನ್ನಗಳಿಗಿರುವ ಬೇಡಿಕೆಯ ಬೆಳವಣಿಗೆ ವಾರ್ಷಿಕವಾಗಿ ಶೇಕಡಾ ೧೦ ರಿಂದ ೧೫ರಷ್ಟು ಆಗಿದ್ದು, ಇದು ಮುಂದಿನ ವರ್ಷಗಳಲ್ಲಿ ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿವೆ. ಔಷಧೀಯ ಸಸ್ಯ ಮೂಲದ ಉತ್ಪನ್ನಗಳಾದ ಔಷಧಿಗಳು, ಆರೋಗ್ಯ ಸಾಧನಗಳು, ಶೃಂಗಾರ ಸಾಧನಗಳು,ಪ್ರಸಾಧನಗಳು,ದ್ರವ್ಯಗಳು ಇತ್ಯಾದಿಗಳಿಗಿಂದು ಇರುವ ವಿಶ್ವ ಮಾರುಕಟ್ಟೆ ಸುಮಾರು ೬೨ ಬಿಲಿಯ ಅಮೇರಿಕಾದ ಡಾಲರುಗಳಷ್ಟಾಗಿದೆ. ಇವುಗಳ ಪೈಕಿ ಔಷಧಿಗಳ ಮೌಲ್ಯ ಸುಮಾರೂ ೫ ಬಿಲಿಯ ಅಮೇಲಿಕಾದ ಡಾಲರುಗಳಾಗಿದೆ ಮತ್ತು ೨೦೦೫ ಕ್ಕಾಗುವಾಗ ಇದು ಸುಮಾರು ೧೬ ಬಿಲಿಯ ಅಮೇರಿಕಾದ ಡಾಳರುಗಳಿಗೇರಬಹುದಾಗಿದೆ ಎಂದು ಅಂದಾಜಿಸಲಾಗಿದೆ.

ಮೇಲೆ ತಿಳಿಸಿರುವ ವಿವಿಧ ಅಂಶಗಳ ಆಧಾರದಲ್ಲಿ ವಿಶ್ವದಲ್ಲಿ ಇದೀಗ ಔಷಧೀಯ ಸಸ್ಯಗಳಿಗೆ ಹಿಂದೆಂದಿಗಿಂತ ಹೆಚ್ಚಿನ ಮಹತ್ವ ಕಂಡು ಬರುತ್ತಿದೆ. ಆದ್ದರಿಂದ ಸಾಂಪ್ರದಾಯಿಕ ಔಷಧೀಯ ಪರಂಪರೆಯನ್ನು ಹೊಂದಿರುವ ಭಾರತ ಈ ದಿಶೆಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಹೀಗಾದಲ್ಲಿ ದೇಶದ ಅಭಿವೃದ್ಧಿ ಸಾಧ್ಯ.