ಇತ್ತೀಚಿನ ವರ್ಷಗಳಲ್ಲಿ ಔಷಧೀಯ ಸಸ್ಯಗಳ ಬಗ್ಗೆ ಜಗತ್ತಿನಾದ್ಯಂತ ಆಸಕ್ತಿ ಮೂಡುತ್ತಿದೆ. ವಿಶ್ವದಾದ್ಯಂತ ಇಂದು ಸ್ವಾಭಾವಿಕ ಉತ್ಪನ್ನಗಳಿಗೆ ಬೇಡಿಕೆ ಏರುತ್ತಿದ್ದು, ಇದು ಗಿಡಮೂಲಿಕೆಗಳ ಮೂಲದ ಉತ್ಪನ್ನಗಳಿಗೂ ಅನ್ವಯವಾಗುತ್ತಿದೆ. ವಿಶ್ವ ಆರೋಗ್ಯ ಸಂಘಟನೆ (W.H.O.) ಯು ೧೯೭೮ ರಲ್ಲಿ ವಿಶ್ವದ ೯೦ ರಾಷ್ಟ್ರಗಳ ಐತಿಹಾಸಿಕ ಮತ್ತು ಗ್ರಾಮ್ಯ ದಾಖಲೆಗಳ ಆಧಾರದಲ್ಲಿ ಕೈಗೊಂಡ ಅಧ್ಯಯನದಲ್ಲಿ ೨೧,೦೦೦ ಔಷಧೀಯ ಸಸ್ಯಗಳನ್ನು ಗುರುತಿಸಿದ್ದು, ಇವುಗಳ ಪೈಕಿ ೨೫೦ ಸಸ್ಯಗಳ ಬಳಕೆ ವಿಶ್ವದಾದ್ಯಂತ ಪಸರಿಸಿದೆ. ಔಷಧೀಯ ಸಸ್ಯಗಳ ಮಹತ್ವದ ಬಗ್ಗೆ ದಕ್ಷಿಣ ಅಮೇರಿಕಾ, ಆಫ್ರಿಕಾ, ಭಾರತ, ಚೀನಾ, ಬರ್ಮಾ, ಶ್ರೀಲಂಕಾ, ಫಿಲಿಫೈನ್ಸ್‌, ಇಂಡೋನೇಶಿಯಾ, ನೈಜೀರಿಯಾ, ಮೆಕ್ಸಿಕೊ ಮುಂತಾದ ರಾಷ್ಟ್ರಗಳು ಅಗಾಧ ಜ್ಞಾನವನ್ನು ಹೊಂದಿದ್ದು , ಇವುಗಳಲ್ಲಿ ಭಾರತ ಮತ್ತು ಚೀನಾ ರಾಷ್ಟ್ರಗಳು ಮಾತ್ರ ಈ ಬಗ್ಗೆ ದಾಖಲೆಗಳನ್ನು ಹೊಂದಿವೆ. ಈ ದಾಖಲೆಗಳು ಕೆಲವೇ ಕೆಲ ಸಸ್ಯಗಳ ಔಷಧೀಯ ಗುಣಗಳನ್ನು ಮಾತ್ರ ಹೆಸರಿಸುತ್ತಿವೆ.

ಆಧುನಿಕತೆಯ ಸೋಗಿನಲ್ಲಿ, ಬಹುರಾಷ್ಟ್ರೀಯ ಸಂಸ್ಥೆಗಳು ತೋರಿಸುತ್ತಿರುವ ಸೋರಿನಲ್ಲಿ ಮತ್ತು ವಿಶ್ವ ವ್ಯಾಪಾರ ಸಂಘಟನೆಯ ನೀತಿಗಳ ಅಡಿಯಲ್ಲಿ ಜೀವನ ನಡೆಸುತ್ತಿರುವ ನಾವೆಲ್ಲ ಇಂದು ಸಾಂಪ್ರದಾಯಿಕ ವ್ಯವಸ್ಥೆ, ನಮ್ಮ ಸಂಸ್ಕೃತಿ ಇತ್ಯಾದಿಗಳಿಗೆ ತಿಲಾಂಜಲಿಯಿಡುತ್ತಿರುವುದು ಒಂದೆಡೆಯಾದರೆ, ಸ್ವಾಭಾವಿಕ, ಪರಿಸರ ಪ್ರೇಮಿ ಆರೋಗ್ಯವಧಕ ಉತ್ಪನ್ನಗಳತ್ತ ಪಾಶ್ಚಿಮಾತ್ಯ ರಾಷ್ಟ್ರಗಳು ಒಲವನ್ನು ತೋರಿಸುತ್ತಿರುವ ದೃಶ್ಯ ಮತ್ತವುಗಳ ಆಸಕ್ತಿ ಇನ್ನೊಂದೆಡೆಯಲ್ಲಿ ಕಾಣಸಿಗುತ್ತಿದೆ. ನಮ್ಮ ದೇಶದ, ನಮ್ಮ ಮೂಲಕದ ಹಲವು ಸಸ್ಯಗಳ ಮತ್ತವುಗಳ ಔಷಧೀಯ ಮಹತ್ವವನ್ನರಿತ ವಿದೇಶಿಯರು ಇಂದು ಅವುಗಳ ಮೇಲೆ ಹಕ್ಕು ಸ್ಥಾಪಿಸಲು ಹೊರಟಿದ್ದು, ಉದಾಹರಣೆಗೆ ಅಶ್ವಗಂಧ, ಹಾಗಲಕಾಯಿ ಇತ್ಯಾದಿಗಳು, ಇವಿನ್ನು ನಮ್ಮ ದೇಶದ ಭವಿಷ್ಯದ ಮೇಲೆ ಕರಾಳ ಛಾಯೆಯನ್ನು ಬೀರಲು ಅವಕಾಶಗಳಿವೆ. ಈ ದೃಷ್ಟಿಯಿಂದ ನಮ್ಮದಾದ, ನಮ್ಮ ಆರೋಗ್ಯವನ್ನು ಕಾಪಾಡಬಲ್ಲ, ಅಳಿವಿನಂಚಿಗೆ ಸಾಗುತ್ತಿರುವ ಆರೋಗ್ಯವರ್ಧಕ, ದೇಶದ ಅಭಿವೃದ್ಧಿಗೆ ಅಗಾಧ ಪ್ರಮಾಣದ ವಿದೇಶಿ ವಿನಿಮಯವನ್ನು ಗಳಿಸಿಕೊಡಬಲ್ಲ ಔಷಧೀಯ ಸಸ್ಯಗಳ ಬಗ್ಗೆ ನಾವಿನ್ನಾದರೂ ಗಮನಹರಿಸಲೇಬೇಕು.

ಕಾಡುಗಳ ನಾಶ ಮತ್ತು ಪರಿಸರ ವಿರೋಧಿ ಚಟುವಟಿಕೆಗಳಿಂದಾಗಿ ಕಾಡುಗಳಲ್ಲಿ ಲಭ್ಯವಾಗುತ್ತಿದ್ದ ಔಷಧೀಯ ಸಸ್ಯ ಸಂಪತ್ತು ಇದೀಗ ನಾಶವಾಗುತ್ತಿವೆ. ಔಷಧೀಯ ಸಸ್ಯಗಳ ಕೃಷಿ ಎಂಬುದು ನಮ್ಮಲ್ಲಿನ್ನೂ ಆರಂಭಗೊಂಡಿಲ್ಲ. ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಕಂಡುಕೊಳ್ಳುವಲ್ಲಿ ಆರೋಗ್ಯದ ಪಾತ್ರ ನಮಗಿನ್ನೂ ಅರಿವಿಗೆ ಬಂದಿಲ್ಲ. ದೇಶದಲ್ಲಿ ಕೃಷಿ ಕ್ರಾಂತಿ -ಯಾ- ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ, ನೀಲ ಕ್ರಾಂತಿ, ಬಂಗಾರದ ಕ್ರಾಂತಿ ಇತ್ಯಾದಿಗಳು ಆಗಿವೆ ಮತ್ತು ಆಗುತ್ತಲಿವೆ. ಆದರೆ ಸ್ವಾಭಾವಿಕವಾಗಿ ಆರೋಗ್ಯ ಕ್ರಾಂತಿಯನ್ನು ಮಾಡುವ ಪ್ರಯತ್ನ ನಮಲ್ಲಿನ್ನೂ ಆಗಿಲ್ಲ. ನಮ್ಮ ದೇಶದ ಗಿಡಮೂಲಿಕೆ ಮೂಲದ ಔಷಧೀಯ ಪದ್ಧತಿಗೆ ವಿಶ್ವದಾದ್ಯಂತ ಹೆಸರಿದ್ದರೂ ನಾವದರ ಸದ್ಭಳಕೆ ಬಗ್ಗೆ ಇನ್ನೂ ಆಸಕ್ತಿಯನ್ನು ತೋರಿಸಿಲ್ಲ. ಔಷಧೀಯ  ಸಸ್ಯಗಳನ್ನು ಕೃಷಿಯಾಗಿ ಕೈಗೊಂಡು ಆರ್ಥಿಕವಾಗಿ ಸಬಲರಾಗಲು ಸಾಧ್ಯವೆಂಬ ಬಗ್ಗೆ ನಮ್ಮ ಕೃಷಿಕರಿಗೆ ಮಾಹಿತಿಯಿನ್ನು ದೊರಕಿದಂತಿಲ್ಲ. ಈ ಎಲ್ಲಾ ವಿಚಾರಗಳನ್ನು ಅರಿತ ಭಾರತ ಸರಕಾರದ ಆರೋಗ್ಯ ಮತ್ತು ಅರಣ್ಯ ಇಲಾಖೆಯ ಮಂತ್ರಾಲಯವು ಎಚ್ಚೆತ್ತುಗೊಂಡು, ಇದೀಗ ನಾಶದಂಚಿಗೆ ತಲುಪಿರುವ ೩೨ ಔಷಧೀಯ ಸಸ್ಯಗಳ ವಾಣಿಜ್ಯ ರೀತಿಯ ವ್ಯವಸಾಯಕ್ಕೆ ಒತ್ತು ಕೊಡಲಾರಂಭಿಸಿದೆ.

ಈ ೩೨ ಗಿಡಮೂಲಿಕೆಗಳಲ್ಲಿ ಬಹುಪಾಲು ಸಸ್ಯಗಳು ನಮ್ಮ ಸುತ್ತಮುತ್ತ ನಮಗರಿವಿಲ್ಲದೆ ಬೆಳೆದು ನಿಂತಿವೆ. ಇವುಗಳ ಬಗ್ಗೆ ನಮ್ಮಲ್ಲಿನ್ನೂ ಆಸಕ್ತಿ ಮೂಡಿಬಂದಿಲ್ಲ. ಆದರೆ ಎಚ್ಚರಿಕೆಯ ಗಂಟೆ ಈಗಾಗಲೆ ಹೊಡೆದಿದೆ. ಈ ದೃಷ್ಟಿಯಿಂದ ನಾವಿನ್ನಾದರೂ ಇವುಗಳ ಕೃಷಿ ಬಗ್ಗೆ ಕಾರ್ಯಪ್ರವೃತ್ತರಾಗಬೇಕು. ಈ ಸಸ್ಯಗಳ ಕೃಷಿಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರ ಸರಕಾರದ ರಾಷ್ಟ್ರೀಯ ಗಿಡ ಮೂಲಿಕಾ ಸಸ್ಯಗಳ ನಿಗಮವು ಹಲವು ಯೋಜನೆಗಳನ್ನು ತಯಾರಿಸಿದ್ದು, ಇದರ ಪ್ರಕಾರ ಇವುಗಳ ಕೃಷಿಗೆ ಅಗತ್ಯವಿರುವ ನೆರವು ದೊರಕಬಹುದಾಗಿದ್ದು, ಇದರ ಸದ್ಭಳಕೆ ನಮ್ಮಲ್ಲಿಂದಾಗಬೇಕು. ಆದರೆ ಈ ಸಸ್ಯಗಳ ಕೃಷಿವಿಧಾನ ಮತ್ತು ಮಾರುಕಟ್ಟೆ ಬಗ್ಗೆ ಈ ತನಕ ಯಾವುದೇ ಕನ್ನಡ ಭಾಷೆಯ ಪುಸ್ತಕಗಳು ಹೊರಬಾರದೆ ಇರುವುದರಿಂದ ಈ ಸಸ್ಯಗಳ ಆರ್ಥಿಕ ಮೌಲ್ಯ ನಮಗಿಂದು ಅರಿತಿಲ್ಲ. ಈ ದೃಷ್ಟಿಯಿಂದ ನಾನಿಂದು ತಮ್ಮ ಮುಂದೆ ಈ ಪುಸ್ತಕವನ್ನಿಡುತ್ತಿದ್ದೇನೆ.

ಈ ಪುಸ್ತಕವು ಕೆಲವು ಪ್ರಮುಖ ಔಷಧೀಯ (ನಾಶದಂಚಿನಲ್ಲಿರುವ ಮತ್ತು ನಮ್ಮಲ್ಲಿ ಲಭ್ಯವಿರುವ) ಸಸ್ಯಗಳ ಕೃಷಿ ವಿಧಾನ ಮತ್ತು ಮಾರುಕಟ್ಟೆ ವಿಚಾರಗಳ ಬಗ್ಗೆ ಲಭ್ಯವಿರುವ ಮಾಹಿತಿಗಳ ಆಧಾರದಲ್ಲಿ ರಚಿತವಾಗಿದೆ. ವಾಣಿಜ್ಯ ಬೆಳೆಗಳ ಉತ್ಪಾದನೆಯ ಕುಸಿತ, ಇವುಗಳ ಧಾರಣೆಯ ಏರಿಳಿತ, ನೀರಿನ ಅಭಾವ, ಬರ ಮುಂತಾದ ಸಮಸ್ಯೆಗಳಿಂದ ಕಂಗೆಟ್ಟಿರುವ ರೈತರಿಗೆ ಈ ಸಸ್ಯಗಳ ಕೃಷಿಯಿಂದ ಪೂರಕ ಆದಾಯ ದೊರಕಲು ಅವಕಾಶವಿದ್ದು ಈ ನಿಟ್ಟಿನಲ್ಲಿ ಈ ಪುಸ್ತಕದಲ್ಲಿ ಬರುವ ವಿಚಾರಗಳು ಉಪಯುಕ್ತವಾಗಬಹುದಾಗಿದೆ.

ಮುಂದಿನ ಅಧ್ಯಾಯಗಳಲ್ಲಿ ಔಷಧೀಯ ಸಸ್ಯುಗಳಿಗಿರುವ ಮಹತ್ವ, ವಿವಿಧ ರೀತಿಯ ಸಸ್ಯಗಳ ಕೃಷಿ ಮತ್ತು ಮಾರುಕಟ್ಟೆ, ಉಪಯೋಗ ಇತ್ಯಾದಿ ವಿಚಾರಗಳ ಬಗ್ಗೆ ಗಮನಹರಿಸಲಾಗಿದೆ. ಇದರೊಂದಿಗೆ ಇವುಗಳಿಗೆ ಇರುವ ಆಂತರಿಕ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆ ಬಗ್ಗೆ ಮಾಹಿತಿ ಒದಗಿಸಲಾಗಿದೆ, ಅಲ್ಲದೆ ಇಲ್ಲಿರುವ, ಬರಬಹುದಾದ ಸಮಸ್ಯೆಗಳು ಮತ್ತವುಗಳಿಗೆ ಆಗಬೇಕಾದ ಪರಿಹಾರಗಳ ಬಗ್ಗೆ ಸೂಕ್ಷ್ಮ ದೃಷ್ಟಿಹರಿಸಲಾಗಿದೆ. ಔಷಧೀಯ ಸಸ್ಯಗಳ ಕೃಷಿಗಿಳಿಯುವ ಮುನ್ನ ಅವುಗಳಿಗಿರುವ ಭವಿಷ್ಯದ ಬಗ್ಗೆ ಚಿಂತನೆಗಳು ಬರುವುದು ಸ್ವಾಭಾವಿಕ, ಈ ನಿಟ್ಟಿನಲ್ಲಿ ಚಿಂತನೆಗಳನ್ನಿಲ್ಲಿ ಮಾಡಲಾಗಿದೆ. ಇವೆಲ್ಲದರೊಂದಿಗೆ ರಾಷ್ಟ್ರೀಯ ಗಿಡಮೂಲಿಕಾ ಸಸ್ಯಗಳ ನಿಗಮ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆ ವ್ಯವಸ್ಥೆಗಳ ಬಗ್ಗೆ ಪರಿಚಯವನ್ನು ಕೊಡಲಾಗಿದೆ. ಈ ಎಲ್ಲಾ ವಿಚಾರಗಳು ನಮ್ಮೆಲ್ಲಾ ಕೃಷಿಕ ಬಂಧುಗಳಿಗೆ, ಸಹಕಾರಿಗಳಿಗೆ, ಸಂಶೋಧಕರಿಗೆ, ಸರಕಾರೇತರ ಸಂಘ ಸಂಸ್ಥೆಗಳಿಗೆ, ಆಡಳಿತಗಾರರಿಗೆ ಮತ್ತು ಮುಂದಿನ ಪೀಳಿಗೆಗೆ ಉಪಯುಕ್ತವಾಗಬಹುದೆಂಬ ಅನಿಸಿಕೆ ನನ್ನದು.