೧. ಅಗ್ನಿಶಿಖಾ

ಅಗ್ನಿಶಿಖಾದ ಗಡ್ಡೆಯನ್ನು ಬಾಹ್ಯೋಪಯೋಗಿ ಔಷಧಿಯ ತಯಾರಿಕೆಗಾಗಿ ಉಪಯೋಗಿಸಲಾಗುತ್ತದೆ. ಇದರ ಗಡ್ಡೆ ವಿಷಗುಣವುಳ್ಳದ್ದಾಗಿದೆ. ಮಳೆಗಾಲ ಆರಂಭಗೊಂಡಾಗ ಅರಣ್ಯ ಪ್ರದೇಶ, ಪೊದರು ಪ್ರದೇಶ ಇತ್ಯಾದಿಗಳಲ್ಲಿ ಸಾಮಾನ್ಯವಾಗಿ ಕಂಢು ಬರುವ ಈ ಸಸ್ಯದ ಬೇರು ಯಾ ಗಡ್ಡೆಯನ್ನು ವಿಷಜಂತುಗಳು ಕಡಿದಾಗ ಲೇಪನಕ್ಕಾಗಿ ಬಳಸುವುದು ವಾಡಿಕೆ. ಇದರೊಂದಿಗೆ ಕುಕಷ್ಠ, ಗೊನ್ಹೋರಿಯಾ ಇತ್ಯಾದಿ ರೋಗಗಳ ಶಮನಕ್ಕಾಗಿ ಉಪಯುಕ್ತ.

ಸಸ್ಯ ಪರಿಚಯ

‘ಗ್ಲೋರಿಯೋಸ ಸುಪರ್ಬ್’ ಎಂಬುದು ಇದರ ವೈಜ್ಞಾನಿಕ ಹೆಸರು. ಇದು ಲಿಲಿಯೇಸಿ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ. ಇದನ್ನು ಅಗ್ನಿಶಿಖಾ, ಗೌರಿಹೂ, ಅಕ್ಕತಂಗಿ, ನೆಲಗುಲಿಕ, ಲಾಂಗುಲಿಕ, ಮಲಬಾರ್ ಗ್ಲೊರಿಲಿಲ್ಲಿ, ಕೋಳಿಕಟುಕನ ಗಡ್ಡೆ, ಕಾಲಿಹರಿ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಇದು ನೇರವಾಗಿ ಬೆಳೆಯುವ ಪರ್ಯಾಯವಾಗಿ ಜೋಡಣೆ ಹೊಂದಿರುವ ಎಲೆಗಳಿರುವ ಸಸ್ಯ. ಇದರ ಹೂವು ಕೊಂಬೆಯ ತುದಿಯ ಎಲೆಯ ಕಂಕುಳದಲ್ಲಿದ್ದು ಕೆಂಪು ಮಿಶ್ರಿತ ಹಳದಿ ಬಣ್ಣದ್ದಾಗಿದೆ. ಸಾಮಾನ್ಯವಾಗಿ ಅಗೋಸ್ಟು ತಿಂಗಳಲ್ಲಿ ಹೂ ಬಿಡುವ ಇದು ನೋಡುಗರನ್ನು ಆಕರ್ಷಿಸುತ್ತದೆ. ಇದರ ತಳಭಾಗದಲ್ಲಿರು (ಮಣ್ಣೊನೊಳಗೆ) ಗಡ್ಡೆ ಔಷಧೀಯ ಗುಣಗಳನ್ನು ಹೊಂದಿರುತ್ತದೆ.

ಕೃಷಿ ವಿಧಾನ

ಮಣ್ಣು ಮತ್ತು ಹವಾಗುಣ: ಭಾರತದಾದ್ಯಂತ ಬೆಳೆಯಬಲ್ಲ ಸಸ್ಯವಿದಾಗಿದೆ. ಕೆಂಪು ಮಿಶ್ರಿತ ಮರಳು ಮಣ್ಣು ಇದರ ಕೃಷಿಗೆ ಯೋಗ್ಯ. ನೀರು ಇಳಿದು ಹೋಗುವ ವ್ಯವಸ್ಥೆಯಿರುವಲ್ಲಿ ಇದು ಉತ್ತಮವಾಗಿ ಬೆಳೆಯಬಲ್ಲದು. ಇದರ ಬೆಳವಣಿಗೆಗೆ ಬಿಸಿಲು ಇಲ್ಲವೆ ಉಷ್ಣ ಹವೆ ಅಗತ್ಯ.

ಸಸ್ಯಾಭಿವೃದ್ಧಿ: ಅಗ್ನಿಶಿಖಾದ ಸಸ್ಯಾಭಿವೃದ್ಧಿ ಇದರ ಬೀಜ ಮತ್ತು ಕಾಂಡಗಳಿಂದ ಸಾಧ್ಯ. ಇದರ ಕಾಂಡಗಳನ್ನು ಮಳೆಗಾಲದಲ್ಲಿ ನರ್ಸರಿ ಮಡಿಗಳಲ್ಲಿ ನಾಟಿ ಮಾಡಿ ಸಸ್ಯಗಳನ್ನು ಪಡೆದುಕೊಳ್ಳಬಹುದು.

ನಾಟಿ ವಿಧಾನ: ನರ್ಸರಿ ಮಡಿಗಳಿಂದ ತೆಗೆದ ಸಸ್ಯವನ್ನು ೬೦X ೬೦ ಸೆಂ.ಮೀ. ಅಂತರದ ಮಡಿಗಳಲ್ಲಿ ಮಳೆಗಾಲದಲ್ಲಿ ನಾಟಿಮಾಡಬೇಕು. ಸಸ್ಯವನ್ನು ಆಧಾರಕಂಬಕ್ಕೆ ಕಟ್ಟಬೇಕು. ಒಂದು ಎಕ್ರೆ ಭೂಮಿಗೆ ಸುಮಾರು ೧೭,೦೦೦ ಸಸಿಗಳು ಬೇಕಾಗಬಹುದು. ಕೃಷಿ ಭೂಮಿಯಲ್ಲಿ ಕಂಡು ಬರಬಹುದಾದ ಕಳೆಗಳನ್ನು ಆಗಾಗ ಕೀಳುತ್ತಿದ್ದಲ್ಲಿ ಅಗ್ನಿಶಿಖಾ ಶೀಘ್ರ ಬೆಳವಣಿಗೆಯನ್ನು ತೋರಿಸಬಲ್ಲದು.

ಗೊಬ್ಬರ: ಒಂದು ಎಕ್ರೆ ಕೃಷಿ ಭೂಮಿಗೆ ಸುಮಾರು ೬ ಟನ್‌ಗಳಷ್ಟು ಕಾಂಪೋಸ್ಟು ಅಥವಾ ಹಟ್ಟಿ ಗೊಬ್ಬರ ಕೊಡಬೇಕು. ಇದು ಭೂಮಿಯ ಉಳುಮೆ ಮಾಡುವಾಗ ಕೊಟ್ಟಲ್ಲಿ ಉತ್ತಮ. ನಾಟಿಯಾದ ಬಳಿಕ ರಸಗೊಬ್ಬರ ಕೊಟ್ಟಲ್ಲಿ ಬೆಳವಣಿಗೆ ಅಧಿಕಗೊಳ್ಳಲು ಸಾಧ್ಯ.

ನೀರಾವರಿ: ಮಳೆಗಾಲದ ಬೆಳೆಯಿದಾಗಿದ್ದರೂ ಅಗತ್ಯಕ್ಕನುಗುಣವಾಗಿ ನೀರು ಹಾಯಿಸುವುದು ಅಗತ್ಯ.

ಕೊಯ್ಲು: ನಾಟಿ ಮಾಡಿದ ೬ ತಿಂಗಳುಗಳಲ್ಲಿ ಇದರ ಹಣ್ಣುಗಳ ಕೊಯ್ಲು ಮಾಡಬಹುದು. ಸಂಗ್ರಹಿಸಿದ ಹಣ್ಣುಗಳನ್ನು  ೧೦ ರಿಂದ ೧೫ ದಿನಗಳ ಕಾಲ ನೆರಳಿನಲ್ಲಿ ಒಣಗಿಸಬೇಕು. ಇದರ ಗಡ್ಡೆಗಳನ್ನು ೬ ವರ್ಷಗಳ ನಂತರ ಹೊರತೆಗೆಯಬೇಕು. ಈ ಗಡ್ಡೆಯನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ ನೆರಳಲ್ಲಿ ಒಣಗಿಸಿಡಬೇಕು. ಈ ರೀತಿ ಸರಿಯಾಗಿ ಒಣಗಿಸಿದ ಗಡ್ಡೆಯನ್ನು ೨ ವರ್ಷಗಳ ಕಾಲ ಶೇಖರಿಸಿಡಬಹುದಾಗಿದೆ.

ಇಳುವರಿ: ಒಂದು ಎಕ್ರೆ ಅಗ್ನಿಶಿಖಾ ಕೃಷಿಯಿಂದ ವಾರ್ಷಿಕವಾಗಿ ಸುಮಾರು ೧೨೨ ಕಿ.ಗ್ರಾಂ. ಬೀಜಗಳನ್ನು ಸಂಗ್ರಹಿಸಬಹುದು. ಆರು ವರ್ಷಗಳ ಬಳಿಕ ಅದರಿಂದ ಪಡೆಯಬಹುದಾದ ಗಡ್ಡೆಯ ಪ್ರಮಾಣ ಸುಮಾರು ೧.೨೨ ಟನ್‌ಗಳಷ್ಟಾಗಬಹುದು.

ಆದಾಯ: ಅಗ್ನಿಶಿಖಾದ ೫ ವರ್ಷಗಳ ಕೃಷಿಗೆ ಸುಮಾರು ೬೦ ಸಾವಿರ ರೂಪಾಯಿಗಳ ಅಗತ್ಯವಿದ್ದು (ಎಕ್ರೆಯೊಂದರ) ಉತ್ತಮ ಇಳುವರಿ ದೊರಕಿದಲ್ಲಿ ಗಳಿಸಬಹುದಾದ ಆದಾಯ ಸುಮಾರು ಒಂದುವರೆ ಲಕ್ಷಕ್ಕಿಂದಲೂ ಅಧಿಕ.

ಅಗ್ನಿಶಿಖಾದ ಉಪಯೋಗ: ಇದನ್ನು ವಿಷಕೀಟ, ಚೇಳು, ಹಾವು ಇತ್ಯಾದಿಗಳು ಕಡಿದಾಗ ಲೇಪನಕ್ಕಾಗಿ ಬಳಸುತ್ತಾರೆ. ಶುದ್ಧಗೊಳಿಸಿದ ನಿಗದಿಪಡಿಸಿದ ಗಡ್ಡೆಯ ಸೇವನೆಯಿಂದ ನಾಗರಹಾವಿನ ವಿಷ ಇಳಿಮುಖವಾಗುವುದು.

೨. ಅತಿಮಧುರ

ಅತಿಮಧುರ ಚೀನಾದ ಪಶ್ಚಿಮ ಪ್ರದೇಶ, ಏಶ್ಯಾದ ಕೆಲವು ಭಾಗಗಳು, ರಶ್ಯಾ, ಅಫಘಾನಿಸ್ಥಾನ, ದಕ್ಷಿಣ ಯುರೋಪು, ಭಾರತದ ಪಂಜಾಬು, ಹಿಮಾಲಯ  ಮುಂತಾದೆಡೆ ಬೆಳೆಯುತ್ತಿದೆ. ಇದರ ವಾಣಿಜ್ಯ ರೀತಿಯ ವ್ಯವಸಾಯವಿಂದು ಹರ್ಯಾನ, ಗುಜರಾತು, ಆಂಧ್ರ ಪ್ರದೇಶಗಳಲ್ಲಿ ಕಾಣಸಿಗುವುದು.

ಸಸ್ಯಪರಿಚಯ

ವೈಜ್ಞಾನಿಕವಾಗಿ ‘ಗ್ಲೈಸೈರಿಜಾ ಗ್ಲಬ್ರಾ’ ವೆಂದು ಕರೆಯಲ್ಪಡುವ ಅತಿಮಧುರ ಫೆಬೇಸಿಯಾ ಕುಟುಂಬಕ್ಕೆ ಸೇರಿದೆ. ಇದು ಸುಮಾರು ೧ ಮೀಟರು ಎತ್ತರಕ್ಕೆ ಬೆಳೆಯುವ ಕುರುಚಲು ಗಿಡ. ಇದರಲ್ಲಿ ಒಂದೇ ಪತ್ರದಲ್ಲಿ ಸಾಲುಸಾಲಾಗಿರುವ ಎಲೆಗಳಿವೆ. ಇದು ೨ ರಿಂದ ಮೂರು ವರ್ಷಗಳಲ್ಲಿ ನಸು ನೀಲಿ ಬಣ್ಣದ ಹೂವನ್ನು ಬಿಡುವುದು. ಇದರ ಹಣ್ನಿನ ಕೋಡು ಸುಮಾರು ೨.೫ ಸೆಂ.ಮೀ. ಉದ್ದವಾಗಿದ್ದುಇ ಇದರೊಳಗೆ ೨ ರಿಂದ ೫ ಬೀಜಗಳಿವೆ.

ಕೃಷಿ ವಿಧಾನ

ಮಣ್ಣು ಮತ್ತು ಹವಾಗುಣ: ಸ್ವಾಭಾವಿಕವಾಗಿ ಇದು ಅರಣ್ಯ ಪ್ರದೇಶದ ಫಲವತ್ತಾದ ಮಣ್ಣಿನಲ್ಲಿ ಕಾಣ ಸಿಗುವುದು. ಇದರ ಕೃಷಿಗೆ ಹಗುರವಾದ ಸಡಿಲ ಮತ್ತು ಲವಣಯುಕ್ತ ಮಣ್ಣು ಸೂಕ್ತ.

ಸಸ್ಯಾಭಿವೃದ್ಧಿ ಮತ್ತು ಕೃಷಿ ಭೂಮಿ ತಯಾರಿ: ಅತಿಮಧುರ ಹೆಚ್ಚು ಕಾಲ ಬಾಳಬಲ್ಲ ಬೆಳೆ. ಈ ದೃಷ್ಟಿಯಿಂದ ಕೃಷಿ ಭೂಮಿಯನ್ನು ನೀರು ನಿಲ್ಲದಂತೆ ಮಾಡಲು ಸರಿಯಾಗಿ ಉಳುಮೆ ಮಾಡಬೇಕು. ಸಸ್ಯಾಭಿವೃದ್ಧಿಗಾಗಿ ೧೦ ರಿಂದ ೧೫ ಸೆಂ.ಮೀ. ಉದ್ದದ ಇದರ ಬೇರಿನ ತುಂಡುಗಳನ್ನು ಬಳಸಬೇಕು. ಈ ತುಂಡುಗಳನ್ನು ೯೦x೪೫ ಸೆಂ.ಮೀ. ಅಂತರದಲ್ಲಿ ನಾಟಿ ಮಾಡಬೇಕಲು. ಈ ತುಂಡುಗಳ ೬ ರಿಂದ ೮ ಸೆಂ.ಮೀ. ಭಾಗ ಮಣ್ಣಿನಡಿಯ್ಲಿ ಹೂತಿಡಬೇಕು. ಒಂದು ಎಕ್ರೆ ಕೃಷಿ ಭೂಮಿಗೆ ಸುಮರು ೧೨೦ ರಿಂದ ೧೨೫ ಕಿ.ಗ್ರಾಂ ನಷ್ಟು ಹಸಿ ಬೇರಿನ ತುಂಡುಗಳು ಬೇಕಾಗಬಹುದು. ನಾಟಿಯಾದ ೧೫ ರಿಂದ ೨೫ ದಿನಗಳಲ್ಲಿ ಇವು ಚಿಗುರಲಾರಂಭಿಸುವುದು. ಫೆಬ್ರವರಿ -ಮಾರ್ಚ್‌ ಅಥವಾ ಜುಲಾಯಿ-ಅಗೋಸ್ಟು ಇದರ ನಾಟಿಗೆ ಸಕಾಲ.

ಗೊಬ್ಬರ: ಭೂಮಿಯ ಉಳುವೆ ಕಾಲದಲ್ಲಿ ಸುಮರು ೮ ಟನ್‌ ಗಳಷ್ಟು ಹಟ್ಟಿಗೊಬ್ಬರ ಕೊಟ್ಟು ಮಿಶ್ರ ಮಾಡಬೇಕು.

ನೀರಾವರಿ: ನಾಟಿಯಾದ ತಕ್ಷಣ ಸಣ್ಣ ಪ್ರಮಾಣದ ನೀರಾವರಿ ಅಗತ್ಯ. ಬೇರು ಚಿಗುರೊಡೆಯುವ ತನಕ ಇದು ಮುಂದುವರಿಯಬೇಕು. ಬೇಸಿಗೆ ಕಾಲದಲ್ಲಿ ಕನಿಷ್ಟ ತಿಂಗಳಿಗೊಮ್ಮೆ ನೀರಾವರಿ ಆಗುತ್ತಿರಬೇಕು. ನೀರಾವರಿಯಾಗುತ್ತಿರುವಾಗ ನೀರು ಬಸಿದು ಹೋಗುವಂತಿರಬೇಕು. ನೀರು ನಿಂತಲ್ಲಿ ರೋಗಗಳು ಕಂಡು ಬರಲು ಸಾಧ್ಯ.

ಕೀಟ ಮತ್ತು ರೋಗ: ಎಲೆ ಕೊರೆಯುವ ಹುಳ, ಬೇರು ಕೊರೆಯುವ ಕೀಟ ಇತ್ಯಾದಿಗಳ ಹತೋಟಿಗಾಗಿ ಅಲ್ಡ್ರನ್‌ ಅಥವಾ ಕ್ಲೋರೋಡೇನ್‌ನ ಶೇಕಡಾ ೫ ರ ಹುಡಿಯನ್ನು ಒಂದು ಎಕ್ರೆಗೆ ಸುಮಾರು ೧೦ ಕಿಲೋದಷ್ಟನ್ನು ಉಪಯೋಗಿಸಬಹುದು.

ಕೊಯ್ಲು: ಇದರ ಬೇರನ್ನು ತೆಗೆಯಲು ಈ ಗಿಡಕ್ಕೆ ಕನಿಷ್ಠ ೨ ವರ್ಷಗಳಾದರೂ ಆಗಬೇಕು. ಉತ್ತಮ ಗುಣಮಟ್ಟದ ಬೇರಿಗಾಗಿ ಹೂ ಬಿಡುವ ಭಾಗವನ್ನು ಆಗಾಗ ಚಿವುಟಿ ತೆಗೆಯಬೇಕು. ಮಳೆಗಾಲದ ಅಂತ್ಯಕ್ಕಾಗುವಾಗ ಇದರ ಕೊಯ್ಲಿಗೆ ಸೂಕ್ತ ಸಮಯ. ಕೊಯ್ಲು ಮಾಡಿದ ಬೇರನ್ನು ಶುಚಿಗೊಳಿಸಿ ೨೦ ಸೆಂ.ಮೀ. ಉದ್ದದ ತುಂಡುಗಳನ್ನಾಗಿ ಮಾಡಿ ಸೂರ್ಯನ ಶಾಖ ಮತ್ತು ನೆರಳಲ್ಲಿ ದಿನಕ್ಕೊಂದು ಬಾರಿ ಬದಲಿಸುತ್ತಾ ಒಣಗಿಸಬೇಕು. ಇದನ್ನು ಕನಿಷ್ಟ ೩ ದಿನಗಳ ಕಾಲ ಬಿಸಿಲಲ್ಲಿ ಮತ್ತು ೧೫ ದಿನಗಳ ಕಾಲ ನೆರಳಲ್ಲಿ ಒಣಗಿಸಿಟ್ಟು ಬಳಿಕ ಪ್ಲಾಸ್ಟಿಕ್‌ ಚೀಲಗಳಲ್ಲಿ ತುಂಬಿಸಿಡಬೇಕು. ಹೀಗಿಟ್ಟಲ್ಲಿ ಇದನ್ನು ೨ ವರ್ಷಗಳ ಕಾಲ ಶೇಖರಿಸಿಡಲು ಸಾಧ್ಯ ಇದರ ಇಳುವರಿ ಪ್ರದೇಶದಿಂದ ಪ್ರದೇಶಕ್ಕೆ ಬೇರೆ ಬೇರೆಯಾಗಿದ್ದು, ಹರ್ಯಾನದಲ್ಲಿ ಎಕ್ರೆಯೊಂದರ ಸುಮಾರು ೩೦ ಟನ್‌, ಗುಜರಾತಿನಲ್ಲಿ ಇದು ೮ ಟನ್‌ಗಳಷ್ಟಾಗಿರುತ್ತದೆ.

ಪ್ರಕೃತ ಭಾರತ ಇದನ್ನು ಆಮದು ಮಾಡಿಕೊಳ್ಳುತ್ತಿದ್ದು ಈ ದೃಷ್ಟಿಯಿಂದ ಇದರ ವ್ಯವಸಾಯಕ್ಕೆ ನಮ್ಮಲ್ಲಿ ವಿಪುಲ ಅವಕಾಶಗಳಿವೆ. ಈ ಕೃಷಿಯ ಬಗ್ಗೆ ಹರ್ಯಾನ ಕೃಷಿ ವಿಶ್ವವಿದ್ಯಾಲಯದಲ್ಲಿ ಅಗತ್ಯ ಮಾಹಿತಿಗಳು ಲಭ್ಯ.

ಉಪಯೋಗ: ಇದನ್ನು ಶೀತ, ಪಿತ್ತ, ಕ್ಷಯ, ವಿಷ, ವಾಂತಿ, ಕೆಮ್ಮು ಇತ್ಯಾದಿ ರೋಗಗಳ ನಿವಾರಣೆಯಲ್ಲಿ ಬಳಸಲಾಗುತ್ತಿದೆ.

೩. ಅಮೃತಬಳ್ಳಿ

ಅಮೃತಬಳ್ಳಿಯನ್ನು ಚರಕಸಂಹಿತದಲ್ಲಿ ಸಕಲರೋಗ ನಿವಾರಕ, ಆಯುಷ್ಯವೃದ್ಧಿ ಇತ್ಯಾದಿಗುಣಗಳುಳ್ಳ ಒಂದು ಉಪಯುಕ್ತ ಗಿಡಮೂಲಿಕೆ ಎನ್ನಲಾಗಿದೆ. ಭಾವ ಪ್ರಕಾಶದ ಪ್ರಕಾರ ಅಮೃತದಿಂದ ಅಮೃತಬಳ್ಳಿ ಹುಟ್ಟಿತ್ತು. ಅಮೃತಬಳ್ಳಿ, ಎಲೆ ಇವೆಲ್ಲಾ ಔಷಧೀಯ ಗುಣಗಳನ್ನು ಹೊಂದಿವೆ. ಇದರ ರುಚಿ ಕಹಿ ಮತ್ತು ಒಗರು. ಇದರ ಸೇವನೆಯಿಂದ ದೇಹಕ್ಕೆ ವಿಶಿಷ್ಠ ಬಲ ಬರುವುದು. ಭಾರತದಾದ್ಯಂತ ಉಷ್ಣವಲಯದ ಹಸಿರು ಪ್ರದೇಶಗಳಲ್ಲಿ ಕಂಡು ಬರುವ ಬಳ್ಳಿಯಿದು. ನಮ್ಮ ನೆರೆಯ ರಾಷ್ಟ್ರಗಳಾದ ಶ್ರೀಲಂಕಾ, ಮಾಯಿನಮಾರ್ ಗಳಲ್ಲೂ ಇದು ಬೆಳೆಯುತ್ತದೆ.

ಸಸ್ಯ ಪರಿಚಯ: ವೈಜ್ಞಾನಿಕವಾಗಿ ಇದನ್ನು ‘ಟಿನೊಸ್ಪೊರ ಕಾರ್ಡಿಪೋಲಿಯಾ’ ಎಂದು ಹೆಸರಿಸಲಾಗಿದೆ. ಅಮೃತಬಳ್ಳಿ ಮೆನಿಸ್ಟರ್ಮೇಸಿ ಕುಟುಂಬಕ್ಕೆ ಸೇರಿದ್ದು, ಇದನ್ನಿಂದು ಗಡೂಚಿ. ಗುಡಿಚ. ಗಿಲೆಯಿ, ಮಧುಪರ್ಣಿ ಇತ್ಯಾದಿಗಳಾಗಿ ಕರೆಯಲಾಗುತ್ತದೆ. ಅಮೃತಬಳ್ಳಿ ಉದ್ದವಾಗಿ ಮರಕ್ಕೆ ಹಬ್ಬಿಕೊಂಡು ಬೆಳೆಯುವ ಸಸ್ಯ. ಇದರ ಎಲೆಯು ಹೃದಯಾಕಾರದಲ್ಲಿದ್ದು, ತೊಗಟೆ ಬೂದು ಮತ್ತು ಹಳದಿ ಮಿಶ್ರಿತ ಬಿಳಿ ಬಣ್ಣದ್ದಾಗಿದೆ. ಮಳೆಗಾಲದಲ್ಲಿ ಹೂವನ್ನು ಬಿಡುವ ಈ ಬಳ್ಳಿ ಚಳಿಗಾಲಕ್ಕಾಗುವಾಗ ಇದರ ದುಂಡನೆಯ ಕಾಯಿಗಳು ಕೆಂಪು ಹಣ್ಣುಗಳನ್ನು ನೀಡುವುದು.

ಕೃಷಿ ವಿಧಾನ

ಮಣ್ಣು ಮತ್ತು ಹವಾಗುಣ: ಎಲ್ಲಾ ರೀತಿಯ ಹವಾಗುಣ ಮತ್ತು ಮಣ್ಣಿನಲ್ಲಿ ಇದರ ಕೃಷಿ ಸಾಧ್ಯ. ಎಲ್ಲಾ ಋತುಗಳಲ್ಲೂ ಬೆಳೆಸಬಹುದಾದ ಸಸ್ಯವಿದಾಗಿದೆ.

ಸಸ್ಯಾಭಿವೃದ್ಧಿ: ಮಳೆಗಾಲದ ಆರಂಭಕ್ಕೆ ಸ್ವಲ್ಪ ಮುನ್ನ ಅಂದರೆ ಮೇ-ಜೂನ್‌ ತಿಂಗಳುಗಳಲ್ಲಿ  ಸುಮಾರು ೬ ಅಂಗುಲ ಉದ್ದದ ಕಾಂಡ ಯಾ ಬಳ್ಳಿಯನ್ನು ಬೇವು, ಓಟೆ ಹುಳಿ, ಮಾವು ಇತ್ಯಾದಿ ಗಿಡ ಮರಗಳಿಗೆ ಆಧಾರವಾಗಿ ನಾಟಿ ಮಾಡುವುದು ಸೂಕ್ತ. ಆರಂಭದ ಹಂತದಲ್ಲಿ ಇದಕ್ಕೆ ಬರಬಹುದಾದ ಕಳೆಯನ್ನು ಕಿತ್ತು ಹಾಕಬೇಕು. ಸಸ್ಯಾಭಿವೃದ್ಧಿ ಸಮಯದಲ್ಲಿ ನೀರು ಮತ್ತು ಹಟ್ಟಿ ಗೊಬ್ಬರ ಆಗಾಗ ಕೊಡುತ್ತಿರಬೇಕು.

ಗೊಬ್ಬರ: ಕಾಂಪೋಸ್ಟು ಅಥವಾ ಹಟ್ಟಿಗೊಬ್ಬರ ಅಗತ್ಯಕ್ಕನುಗುಣವಾಗಿ ಕೊಡುತ್ತಿರಬೇಕು.

ನೀರಾವರಿ: ವಾರಕ್ಕೊಮ್ಮೆ ಇಲ್ಲವೆ ಹದಿನೈದು ದಿನಗಳಿಗೊಮ್ಮೆ ನೀರುಣಿಸುತ್ತಿರಬೇಕು.

ಕೊಯ್ಲು: ನಾಟಿ ಮಾಡಿದ ೩ ರಿಂದ ೪ ತಿಂಗಳಾದ ಬಳಿಕ ಸರಿಯಾದ ಬೆಳವಣಿಗೆಯನ್ನು ಸಾಧಿಸಿದ ಎಲೆ ಮತ್ತು ಬೇರನ್ನು ಸಂಗ್ರಹಿಸಿ ಅವನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ ಬಿಸಿಲಿನಲ್ಲಿ ಒಣಗಿಸಿಡಬೇಕು. ಒಣಗಿದ ಬೇರು ಯಾ ಕಾಂಡವನ್ನು ಆರು ತಿಂಗಳುಗಳ ಕಾಲ ಶೇಖರಿಸಿಡಬಹುದಾಗಿದೆ.

ಇಳುವರಿ: ಒಂದು ಎಕ್ರೆ ಅಮೃತಬಳ್ಳಿ ಕೃಷಿಯಿಂದ ಅಂದಾಜು ಸರಾಸರಿ ೪ ಕ್ವಿಂಟಾಲ್‌ ಇಳುವರಿ ಸಾಧ್ಯ. ಒಂದು ಕಿ.ಗ್ರಾಂ ಒಣ ಬೇರಿಗೆ ಮಾರುಕಟ್ಟೆಯಲ್ಲಿ ಸುಮಾರು ರೂಪಾಯಿ ೧೫ ರಿಂದ ೨೦ರ ಬೆಲೆ ದೊರಕಬಹುದು.

ಉಪಯೋಗ: ವಾತ, ಪಿತ್ತ, ಕಫ, ಕಾಮಲೆ, ಅತಿಸಾರ, ಹೃದಯ ದೌರ್ಬಲ್ಯ, ಮಧುಮೇಹ ಜ್ವರ ಇತ್ಯಾದಿರೋಗಗಳ ನಿವಾರಣೆಯಲ್ಲಿ ಇದರ ಔಷಧ ಬಳಕೆಯಾಗುವುದು. ಇದರಿಂದ ತಯಾರಿಸಲ್ಪಟ್ಟ ಔಷಧಗಳಾದ ಅಮೃತಾರಿಷ್ಟ, ಗಡೂಚಿ ಲೇಹ, ಗುಚ್ಯಾದಿ ಚೂರ್ಣ, ಗಡುಚಿ ತೈಲ ಮಾರುಕಟ್ಟೆಯಲ್ಲಿ ಲಭ್ಯ.

೪. ಅಶೋಕ

ಪ್ರಕೃತ ಅಶೋಕ ಮರ ಅತ್ಯಂತ ವಿರಳವಾಗಿ ಕಾಣಸಿಗುವುದು. ಇದರ ತೊಗಟೆ, ಬೀಜ ಮತ್ತು ಹೂಗಳು ಆಯುರ್ವೇದ, ಸಿದ್ಧ, ಯುನಾನಿ ಮತ್ತು ಹೋಮಿಯೋಪತಿ ಔಷಧಿಗಳ ತಯಾರಿಕೆಯಲ್ಲಿ ಬಳಕೆಯಾಗುತ್ತಿದೆ. ಅಶೋಕ ವೃಕ್ಷ ಹಿಂದುಗಳಿಗೆ ಪವಿತ್ರವಾದದ್ದು, ಅಶೋಕವೆಂದರೆ ಶೋಕವನ್ನು ದೂರಮಾಡುವ ಸಾಮರ್ಥ್ಯವುಳ್ಳದ್ದೆಂಬುದಾಗಿದೆ. ಉತ್ತರ ಭಾರತದಲ್ಲಿ ಇದನ್ನು ಪ್ರೇಮದ ಸಂಕೇತವಾಗಿ ಗಣನೆಗೆ ತೆಗೆದುಕೊಳ್ಳುತ್ತಾಋಎ.

ಸಸ್ಯ ಪರಿಚಯ

ಸಸ್ಯ ಶಾಸ್ತ್ರೀಯವಾಗಿ ಇದನ್ನು ‘ಸರಾಕ ಅಶೋಕ’ ವೆಂದು ಕರೆಯಲಾಗುತ್ತದೆ. ಇದು ಫಾಬೇಸಿಯಾ ಕುಟುಂಬಕ್ಕೆ ಸೇರಿದೆ. ಇದೊಂದು ಮಧ್ಯಮ ಗಾತ್ರದ ಸದಾ ಹಸಿರಿನಿಂದ ಕೂಡಿದ ಮರವಾಗಿದೆ. ಇದರ ಮರದಲ್ಲಿ ರೆಂಬೆಗಳಿದ್ದು, ಎಲೆಗಳು ಸುಮಾರು ೧೫ ಸೆಂ.ಮೀ. ಉದ್ದವಾಗಿದೆ. ಸುವಾಸನೆಯುಳ್ಳ ಇದರ ಹೂವುಗಳು ಹಳದಿ ಬಣ್ಣದಿಂದ ಕಿತ್ತಳೆ ಬಣ್ಣಕ್ಕೆ ತಿರುಗಿ ಕೊನೆಗೆ ಕೆಂಬಣ್ಣದ್ದಾಗಿರುತ್ತದೆ. ಅಶೋಕಕ್ಕೆ ಸಂಸ್ಕೃತದಲ್ಲಿ ಅಂಗನಪ್ರಿಯ, ಗಂಧಪುಷ್ಪ ಎಂಬುದಾಗಿ ಹೆಸರುಗಳಿವೆ. ಈ ಮರವು ಸುಮಾರು ೬ ರಿಂದ ೯ ಮೀಟರ್ ಗಳಷ್ಟು ಎತ್ತರಕ್ಕೆ ಬೆಳೆಯುವುದು. ಈ ಮರಗಳನ್ನಿಂದು ಭಾರತದ ಪೂರ್ವ ಹಿಮಾಲಯ, ಕಾಶಿ, ಗಾರೋ ಮತ್ತು ಲುಶಾಯಿ ಪರ್ವತ ಪ್ರದೇಶ, ಪಶ್ಚಿಮ ಬಂಗಾಳ, ಕೇರಳ ಮತ್ತು ಕರ್ನಾಟಕದ ಮಲೆನಾಡು ಪ್ರದೇಶಗಳಲ್ಲಿ ಕಾಣಬಹುದು.

ಕೃಷಿ ವಿಧಾನ

ಮಣ್ಣು ಮತ್ತು ಹವಾಗುಣ: ಉಸುಕು ಮಿಶ್ರಿತ ಮಣ್ಣಿನಿಂದ ಕುಡಿದ ಕಪ್ಪು ಮಣ್ಣು ಮತ್ತು ಸಾರಜನಕದಂಶ ಅಧಿಕವಿರುವ ಮಣ್ಣಿನಲ್ಲಿ ಇದರ ಕೃಷಿ ಸಾಧ್ಯ. ಇದು ನೆರಳು ಮತ್ತು ತೇವಾಂಶವನ್ನು ಹೆಚ್ಚಾಗಿ ಬಯಸುತ್ತದೆ. ಅಧಿಕ ಉಷ್ಣಾಂಶವನ್ನು ತಾಳಿ ಕೊಳ್ಳುವ ಸಾಮರ್ಥ್ಯ ಇದಕ್ಕಿಇಲ್ಲ.

ಸಸ್ಯಾಭಿವೃದ್ಧಿ: ಬೀಜ ಮತ್ತು ಕಾಂಡಗಳ ಕಸಿ ವಿಧಾನಗಳಿಂದ ಸಸ್ಯ ಪಡೆಯಬಹುದು. ಇದರ ಬೀಜಗಳನ್ನು ಸಾವಯವದ ಅಂಶ ಅಧಿಕವಿರುವ ಭೂಮಿಯಲ್ಲಿ ಬಿತ್ತಿ ಸಸ್ಯವನ್ನು ಪಡೆಯಬಹುದು. ಇದರ ಬೀಜಗಳನ್ನು ಗೋಮೂತ್ರ, ಬಿಸಿ ನೀರು, ತಣ್ಣೀರುಗಳಲ್ಲಿ ಸಂಸ್ಕರಣೆಗೊಳಿಸಿದಲ್ಲಿ ಅವು ಮೊಳಕೆಯೊಡೆಯುವುವು. ಇವುಗಳ ಪೈಕಿ ಗೋಮೂತ್ರದಲ್ಲಾದಲ್ಲಿ ಮೊಳಕೆಯೊಡೆಯುವ ಪ್ರಮಾಣಂ ಅಧಿಕ. ನರ್ಸರಿ ವಿಧಾನದಲ್ಲಾದರೆ ಪಾಲಿಥಿನ್‌ ಚೀಲಗಳಿಗೆ ಮಣ್ಣು -ಉಸುಕು-ಕೊಟ್ಟಿಗೆ ಗೊಬ್ಬರ ೧:೧:೧ ಪ್ರಮಾಣದ ಮಿಶ್ರಣವನ್ನು ಹಾಕಿ ಅದರಲ್ಲಿ ಬೀಜ ಬಿತ್ತಬೇಕು. ಇವಕ್ಕೆ ದಿನಾಲು ನೀರುಣಿಸುತ್ತಿರಬೇಕು.

ನಾಟಿ ವಿಧಾನ: ಅಶೋಕದ ಸಸ್ಯವನ್ನು ಮಳೆಗಾಲದಲ್ಲಿ ನಾಟಿ ಮಾಡಬೇಕು. ಎರಡು ತಿಂಗಳಾದ ಸಸ್ಯವನ್ನು ಕೃಷಿ ಭೂಮಿಯಲ್ಲಿ ೩ ಮೀಟರು ಉದ್ದ ೩ ಮೀಟರು ಅಗಲ ಅಂತರದಲ್ಲಿ ನಾಟಿ ಮಾಡುವುದು ಸೂಕ್ತ.

ಗೊಬ್ಬರ: ಹಟ್ಟಿ ಗೊಬ್ಬರ, ಕಾಂಪೋಸ್ಟು ಗೊಬ್ಬರಗಳನ್ನು ಹಾಕಿದಲ್ಲಿ ಇದರ ಬೆಳವಣಿಗೆ ಅಧಿಕ.

ನೀರಾವರಿ: ಚಳಿಗಾಲ ಮತ್ತು ಬೇಸಿಗೆ ಕಾಲದಲ್ಲಿ ವಾರಕ್ಕೊಮ್ಮೆ ನೀರುಣಿಸುವುದು ಅಗತ್ಯ.

ಕೊಯ್ಲು: ಮರಕ್ಕೆ ೧೦ ವರ್ಷವಾದಾಗ ಇದರ ತೊಗಟೆಯನ್ನು ತೆಗೆಯಬಹುದು. ಕೊಯ್ಲು ಮಾಡಿದ ತೊಗಟೆಯನ್ನು ಬಿಸಿಲಿನಲ್ಲಿ ಒಣಗಿಸಡಬೇಕು. ಸರಿಯಾಗಿ ಒಣಗಿದ ತೊಗಟೆಯನ್ನು ೨ ವರ್ಷಗಳ ಕಾಲ ಶೇಖರಿಸಿಡಬಹುದು.

ಮಾರುಕಟ್ಟೆ: ಆಂತರಿಕ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಧಿಕ ಬೇಡಿಕೆಯಿದಕ್ಕಿದೆ. ಇದರ ತೊಗಟೆಗೆ ಕಿ.ಗ್ರಾಂ ಒಂದರ ರೂಪಾಯಿ ೧೨೦ರಿಂದ ೧೫೦ರ ತನಕವಿದೆ.

ಉಪಯೋಗ: ಇದನ್ನು ರಕ್ತದೋಷ, ದಣಿವು, ಆಯಾಸ, ರಕ್ತಸ್ರಾವಗಳಂತಹ ಕಾಯಿಲೆಗಳ ವಾಸಿಗಾಗಿ ಬಳಸಲಾಗುತ್ತಿದೆ. ಸೌಂದರ್ಯವರ್ಧಕಗಳ ತಯಾರಿಯಲ್ಲೂ ಇದರ ಬಳಕೆಯಾಗುತ್ತಿದೆ. ಹೆಂಗಸರ ರೋಗಗಳ ಗುಣಪಡಿಸುವಿಕೆಯಲ್ಲಿ ಇದರ ಬಳಕೆ ಅತ್ಯಧಿಕ. ಹೆಂಗಸರನ್ನು ಆರೋಗ್ಯಪೂರ್ಣವಾಗಿ ಮತ್ತು ಆಕರ್ಷಣೀಯವಾಗಿ ಮೂಡಿಸುವಲ್ಲಿ ಅಶೋಕಾದಿಂದ ತಯಾರಾದ ಔಷಧಿಗಳು ಪರಿಣಾಮಕಾರಿಯಾಗಿವೆ. ಇದರ ತಯಾರಿಗಳಾದ ಅಶೋಕಾರಿಷ್ಟ, ಅಶೋಕಘೃತ ಮಾರುಕಟ್ಟೆಯಲ್ಲಿ ಲಭ್ಯ.

೫. ಅಶ್ವಗಂಧ

ಅಶ್ವಗಂಧವನ್ನು ಭಾರತದ ‘ಜಿನ್‌ ಸಿಂಗ್‌’ ಎಂದು ಕರೆಯುತ್ತಾರೆ. ಜಿನ್‌ಸಿಂಗ್‌ ಎಂಬ ಗಿಡಮೂಲಿಕೆಗೆ ಚೀನಾ, ಕೊರಿಯಾ ಮತ್ತು ಟಿಬೇಟುಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆಯಿದೆ. ಈ ಜಿನ್‌ ಸಿಂಗ್‌ ಗೆ ಬದಲಿಯಾಗಿ ಅಷ್ಟೇ ಪರಿಣಾಮಕಾರಿಯಾದ ಗುಣವುಳ್ಳ ಅಶ್ವಗಂಧವನ್ನು ಭಾರತದಲ್ಲಿಂದು ಉಪಯೋಗಿಸಲಾಗುತ್ತಿದೆ. ಅನಾದಿ ಕಾಲದಿಂದಲೂ ನಮ್ಮ ಆಯುರ್ವೇದ, ಯುನಾನಿ ಮತ್ತು ಸಿದ್ಧ ಪದ್ಧತಿಗಳಲ್ಲಿ ಬಳಕೆಯಲ್ಲಿರುವ ಅಶ್ವಗಂಧವನ್ನು ಸುಮಾರು ೧೧೦ ಕ್ಕಿಂತಲೂ ಹೆಚ್ಚಿನ ಔಷಧಿಗಳ ತಯಾರಿಯಲ್ಲಿ ಉಪಯೋಗಿಸಲಾಗುತ್ತಿದೆ.

ಹೆಸರಿಲ್ಲದ ರೋಗಕ್ಕೆ ಅಶ್ವಗಂಧ ಯೋಗ್ಯವೆಂಬ ಪ್ರಚಾರ ನಮ್ಮ ನಾಡಿನಲ್ಲಿದ್ದು, ಈ ಮೂಲಿಕೆಯಿಂದ ದೊರೆಯುವ ವಿಥಾನಿನ್‌ ಮತ್ತು ಸಾಮ್ನಿ ಫೆರಿನ್‌ ಗಳೆಂಬ ಅಲ್ಕಲಾಯ್ಡ್‌ ಅಥವಾ ಕ್ಷಾರಗಳು ಇದರ ಪ್ರಾಮುಖ್ಯತೆಯನ್ನು ಹೆಚ್ಚಿಸಿವೆ. ಈ ಸಸ್ಯದ ಬೇರು, ತೊಗಟೆ, ಕಾಂಡ, ಎಲೆ ಮತ್ತು ಬೀಜಗಳನ್ನು ನಾನಾ ರೀತಿಯ ಔಷಧಗಳ ತಯಾರಿಯಲ್ಲಿ ಬಳಸಲಾಗುತ್ತಿದೆ.

ಹಂಚಿಕೆ: ಅಶ್ವಗಂಧದ ಸಸ್ಯಗಳನ್ನು ಭಾರತದಾದ್ಯಂತ ಕಾಣಬಹುದು. ಹೀಗಿದ್ದರೂ ಈ ಸಸ್ಯಗಳು ಅಧಿಕ ಪ್ರಮಾಣದಲ್ಲಿ ಮಧ್ಯ ಪ್ರದೇಶದ ಮಂಡಸೌರ್ ಮತ್ತು ಬಸ್ತಾರ ಜಿಲ್ಲೆಗಳ ಕಾಡು ಪ್ರದೇಶಗಳಲ್ಲಿ ಕಾಣ ಸಿಗುತ್ತವೆ. ಪಂಜಾಬ್‌, ಹಿಮಾಚಲ ಪ್ರದೇಶ, ಉತ್ತರ ಪ್ರದೇಶದ ಪಶ್ಚಿಮ ಭಾಗ ಈ ಎಲ್ಲಾ ರಾಜ್ಯಗಳ ಬೆಟ್ಟದ ತಪ್ಪಲಲ್ಲಿ ಅಶ್ವಗಂಧ ವಿಪುಲವಾಗಿ ಬೆಳೆಯುತ್ತಿದೆ. ಭಾರತದೊಂದಿಗೆ ಉತ್ತರ ಅಮೇರಿಕಾದ ಮೆಡಿಟರೇನಿಯನ್‌ ಪ್ರದೇಶದಲ್ಲೂ ಈ ಸಸ್ಯ ಸ್ವಾಭಾವಿಕವಾಗಿ ಬೆಳೆಯುತ್ತದೆ.

ಪ್ರಕೃತ ಭಾರತದಲ್ಲಿ ಅಶ್ವಗಂಧದ ಕೃಷಿಯನ್ನು ಸುಮಾರು ೫೦೦೦ ಹೆಕ್ಟೇರ್ ಪ್ರದೇಶದಲ್ಲಿ ಕೈಗೊಳ್ಳಲಾಗುತ್ತಿದೆ. ಅಶ್ವಗಂಧದ ವಾಣಿಜ್ಯ ರೀತಿಯ ವ್ಯವಸಾಯವನ್ನಿಂದು ಮಧ್ಯಪ್ರದೇಶದ ಒಣ  ಪ್ರದೇಶಗಳಾದ ಮಾನಸ, ನೀಮಚ್‌, ಜವದ್‌ ಮತ್ತು ಮಂಡಸೂರ್ ಗಳಲ್ಲಿ, ರಾಜಸ್ಥಾನದ ನಾಗೋರಿ, ಪಂಜಾಬ್‌ ಮತ್ತು ಸಿಂಧ್‌, ಹರ್ಯಾನ, ಗುಜರಾತ್‌, ಮಹಾರಾಷ್ಟ್ರ, ರಾಜಸ್ಥಾನ ಮತ್ತು ದಕ್ಷಿಣ ಭಾರತದಲ್ಲಿ ಕೈಗೊಳ್ಳಲಾಗುತ್ತಿದೆ. ಕರ್ನಾಟಕದ ಮೈಸೂರು ಜಿಲ್ಲೆಯಲ್ಲಿ ಇದರ ಕೃಷಿ ಅಧಿಕ ಪ್ರಮಾಣದಲ್ಲಿದೆ.

ಸಸ್ಯ ಪರಿಚಯ

‘ವಿಥಾನಿ ಸೊಮ್ನಿ ಪೆರಾಡೂನಾಲ್‌’ ಎಂಬ ಸಸ್ಯನಾಮವುಳ್ಳ ಅಶ್ವಗಂಧವು ‘ಸೋಲನೇಸಿಯಾ’ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ. ಆಂಗ್ಲ ಭಾಷೆಯಲ್ಲಿ ಇದನ್ನು ‘ವಿಂಟರ್ ಚೆರ್ರಿ‍’ಎಂತಲೂ ಕರೆಯುತ್ತಾರೆ. ಕನ್ನಡದಲ್ಲಿ ಇದಕ್ಕೆ ಹಿರೇಮದ್ದಿನ ಗಿಡ ಎಂಬ ಹೆಸರಿದೆ. ಅಶ್ವಗಂಧ ಹರಡಿಕೊಂಡು ಪೊದೆಯಂತೆ ಬೆಳೆಯುವ ಸಸ್ಯ. ನೇರವಾಗಿ ಬೆಳೆಯುವ ಈ ಮೂಲಿಕೆಯು ಸುಮಾರು ೩೦ ರಿಂದ ೧೫೦ ಸೆಂ.ಮೀ.ಗಳಷ್ಟು ಎತ್ತರಕ್ಕೆ ಬೆಳೆಯುತ್ತದೆ. ಇದರ ಮೈಯೆಲ್ಲಾ ರೋಮಗಳಿಂದ ಕೂಡಿದ್ದು, ಇದರ ಬಣ್ಣ ತಿಳಿ ಹಸಿರು. ಸಣ್ಣ ಸಣ್ಣ ಗುಚ್ಛಗಳುಳ್ಳ ಹೂವನ್ನು ಬಿಡುವ ಈ ಸಸ್ಯವು ಹೊರಹೊಮ್ಮುವ ಹೂವಿನ ಬಣ್ಣ ತಿಳಿ ಹಸಿರು, ಹಳದಿ ಮಿಶ್ರಿತವಾಗಿದೆ. ಇದರ ಎಲೆ ಮತ್ತು ಬೇರು ಹಸಿಯಾಗಿರುವಾಗ ಕುದುರೆ ಮೂತ್ರದ ವಾಸನೆ ಹೊಂದಿರುವ ಕಾರಣ ಇದಕ್ಕೆ ಅಶ್ವಗಮಧ, ವಾಜಿಗಂಧ ಎಂಬುದಾಗಿ ಸಂಸ್ಕೃತದಲ್ಲಿ ಕರೆಯುತ್ತಾರೆ. ಇದರ ಹಣ್ಣುಗಳು ಬೆರ್ರಿ‍ ಜಾತಿಗೆ ಸೇರಿರುವುದರಿಂದ ಆಂಗ್ಲ ಭಾಷೆಯಲ್ಲಿ ಇವನ್ನು ವಿಂಟರ್ ಬೆರ್ರಿ‍ ಯೆನ್ನುತ್ತಾರೆ.

ಕೃಷಿ ವಿಧಾನ

ಮಣ್ಣು ಮತ್ತು ಹವಾಗುಣ: ಅಶ್ವಗಂಧ ಕೃಷಿಯನ್ನು ಮರಳು ಮಿಶ್ರಿತ ಫಲವತ್ತಾದ ಮಣ್ಣು, ಕಲ್ಲುಭೂಮಿ ಹಾಗೂ ಕೆಂಪು ಮಣ್ಣಿನ ಪ್ರದೇಶಗಳಲ್ಲಿ ಕೈಗೊಳ್ಳಬಹುದು. ಈ ಭೂಮಿಯಲ್ಲಿ ಸಾಕಷ್ಟು ಸಾವಯವ ಗುಣಗಳಿರಬೇಕು, ಅಲ್ಲದೆ ನೀರು ಹರಿದು ಹೋಗುವ ವ್ಯವಸ್ಥೆಯಿರಬೇಕು. ಈ ಸಸ್ಯವು ಸಮಶೀತೋಷ್ಣ ಮತ್ತು ಉಷ್ಣ ಹವೆಯನ್ನು ಯಾವತ್ತೂ ಬಯಸುತ್ತದೆ. ಇದರ ಬೆಳವಣಿಗೆಗೆ ಒಣಹವೆ ಅತ್ಯಗತ್ಯ. ಈ ಸಸ್ಯದ ಕೃಷಿಯನ್ನು ೬೬೦-೭೫೦ ಮಿ.ಮಿ. ಮಳೆ ಬೀಳುವ ಪ್ರದೇಶಗಳಲ್ಲೂ ಕೈಗೊಳ್ಳಬಹುದಾಗಿದೆ.

ಸಸ್ಯಾಭಿವೃದ್ಧಿ: ಅಶ್ವಗಂಧ ಸಸ್ಯವನ್ನು ಬೀಜಗಳಿಂದ ಪಡೆದು ಬೆಳೆಸಬಹುದು. ಮಳೆಗಾಲದ ಕೃಷಿಯಾದಲ್ಲಿ ಕೃಷಿಭೂಮಿಯಲ್ಲಿ ಬೀಜಗಳನ್ನು ಬಿತ್ತಿ, ನೀರಾವರಿ ಮೂಲಕವಾಗಿದ್ದಲ್ಲಿ ಸಸಿ ಮಡಿಗಳಲ್ಲಿ ಬೀಜಗಳ ಬಿತ್ತನೆ ಮಾಡಿ ಸಸಿಗಳನ್ನು ಪಡೆಯಬಹುದು. ಹಣ್ಣಾದ ಕಾಯಿಗಳಲ್ಲಲಿ ತೊಗರಿಕಾಳಿನ ಗಾತ್ರದ ಬೀಜಗಳಿರುತ್ತದೆ. ಈ ಹಣ್ಣುಗಳನ್ನು ಒಣಗಿಸಿ ಮರಳು ಮಿಶ್ರಿತ ಮಣ್ಣಿನಲ್ಲಿ ಹಟ್ಟಿ ಗೊಬ್ಬರ ಮಿಶ್ರಮಾಡಿ ಸಸಿ ಮಡಿಗಳಲ್ಲಿ ಬೀಜಗಳ ಬಿತ್ತನೆ ಮಾಡಬೇಕು. ಮಳೆ ಆರಿತ ಬೆಳೆಗಾಗಿದ್ದಲ್ಲಿ ಒಂದು ಹೆಕ್ಟೇರ್ ಪ್ರದೇಶಕ್ಕೆ ಸುಮಾರು ೧೨ ಕಿ.ಗ್ರಾಂ ನೀರಾಶ್ರಿತ ಬೆಳೆಯಾಗಿದ್ದಲ್ಲಿ ಸುಮರು ೫ ಕಿ.ಗ್ರಾಂ ಬೀಜಗಳ ಅಗತ್ಯವಿದೆ. ನೀರಾವರಿ ಮೂಲದ ಕೃಷಿಗಾಗಿ ತಯಾರು ಮಾಡುವ ಸಸ್ಯಗಳಿಗಾಗಿರುವ ಸಸಿ ಮಡಿಗಳಲ್ಲಿ ೮ ರಿಂದ ೧೦ ಸೆಂ.ಮೀ ಸಾಲಲ್ಲಿ ಬೀಜವನ್ನು ಜೂನ್‌ ಅಥವಾ ಜುಲೈಯ ಮೊದಲ ಭಾಗದಲ್ಲಿ ಬಿತ್ತಿ ನಿರಂತರವಾಗಿ ನೀರುಣಿಸಬೇಕು. ಈ ರೀತಿಯ ವ್ಯವಸಾಯದಲ್ಲಿ ಬೀಜವು ೧೦ ರಿಂದ ೧೫ ದಿನಗಳಲ್ಲಿ ಮೊಳಕೆಯೊಡೆಯುವುದು. ಸಸಿ ಮಡಿಗಳಲ್ಲಿ ಈ ಗಿಡವು ಕನಿಷ್ಠ ಎರಡು ತಿಂಗಳು ಬೆಳೆಯಬೇಕು. ಈ ಸಮಯದಲ್ಲಿ ಬರಬಹುದಾದ ರೋಗವನ್ನು ತಡೆಗಟ್ಟಲು ಒಂದು ಕಿಲೋಗ್ರಾಂ ಬೀಜಕ್ಕೆ ೩ಗ್ರಾಂ ಡಯಾಥೇನ್‌ಯಂ-೪೫ ರ ದ್ರಾವಣವನ್ನು ಮಿಶ್ರ ಮಾಡಿ ಬಿತ್ತಬೇಕು.

ಭೂಮಿಯ ತಯಾರಿ: ಅಶ್ವಗಂಧ ಕೃಷಿಗೆ ನಿಗದಿ ಪಡಿಸಿದ ಭೂಮಿಯನ್ನು ಎರಡರಿಂದ ಮೂರು ಬಾರಿ ಉಳುಮೆ ಮಾಡಿ ಬಳಿಕ ಸುಮಾರು ೫ ರಿಂದ ೧೦ ಟನ್‌ಗಳಷ್ಟು ಹಟ್ಟಿ ಗೊಬ್ಬರ ಹಾಕಿ ಉಳುಮೆ ಮಾಡಬೇಕು. ಇದರೊಂದಿಗೆ ಶಿಫಾರಸ್ಸು ಮಾಡಲ್ಪಟ್ಟ ೨೫೦ ಕಿ.ಗ್ರಾಂ ಸೂಪರ್ ಫಾಸ್‌ಪೇಟ್‌, ೫೦ ಕಿ.ಗ್ರಾಂ ಪೊಟ್ಯಾಷ್‌ ಮತ್ತು ೨೫ ರಿಂದ ೫೦ ಕಿ.ಗ್ರಾಂ ಸತುವಿನ ಸಲ್ಫೇಟ್‌ ಹಾಕಬೇಕು. ಒಟ್ಟಾರೆಯಾಗಿ ಇದರ ಕೃಷಿಗೆ ನಮ್ಮಲ್ಲಿರುವ ಹಾಳು ಭೂಮಿ ಸಾಕು. ಸಮತಟ್ಟು ಭೂಮಿಯಾದಲ್ಲಿ ಇಳುವರಿದ ಅಧಿಕಗೊಳ್ಳಲು ಸಾಧ್ಯ.

ನಾಟಿ ವಿಧಾನ: ಮಳೆಯಾಧಾರಿತ ಕೃಷಿಯಾಗಿದ್ದಲ್ಲಿ ಮಳೆಗಾಲ ಆರಂಭಗೊಂಡು ಒಂದೆರಡು ಮಳೆಯಾದಾಗ ಗಿಡದಿಂದ ಗಿಡಕ್ಕೆ ೬೦ ಸೆಂ.ಮೀ ಅಂತರವಿರುವಂತೆ ಬೀಜವನ್ನು ಬಿತ್ತಿದಲ್ಲಿ ಉತ್ತಮ. ನೀರಾವರಿ ಆಶ್ರಿತ ಕೃಷಿಯಾದಲ್ಲಿ ಸಸಿಮಡಿಗಳಲ್ಲಿ ಎರಡು ತಿಂಗಳ ತನಕ ಬೆಳೆದ ಸಸಿಗಳನ್ನು ಗಿಡದಿಂದ ಗಿಡಕ್ಕೆ ೬೦ ಸೆಂ.ಮೀ. ಅಂತರದಲ್ಲಿ ನಾಟಿ ಮಾಡಬೇಕು. ಗಿಡಕ್ಕೆ ಜೀವ ಬರುವ ತನಕ ನೀರಾವರಿ ವ್ಯವಸ್ಥೆ ಆಗಿಂದಾಗ ಆಗಬೇಕು. ಬಳಿಕ ೧೫ ರಿಂದ ೨೦ ದಿನಗಳಿಗೊಮ್ಮೆ ನೀರುಣಿಸಬೇಕು. ಈ ಸಸ್ಯವು ಒಣಹವೆಯನ್ನು ತಾಳಿಕೊಳ್ಳುವ ಸಾಮರ್ಥ್ಯ ಹೊಂದಿರುವುದರಿಂದ ನೀರಿನ ವಿಶೇಷ ಅವಶ್ಯಕತೆಯಿಲ್ಲ. ಈ ರೀತಿಯ ವಿಧಾನವಿದ್ದಲ್ಲಿ ಗಿಡವು ಒಂದು ವರ್ಷದಲ್ಲಿ ಸುಮಾರು ೩ ಅಡಿಗಳೆತ್ತರಕ್ಕೆ ಬೆಳೆಯಬಲ್ಲದು ಮತ್ತು ಕೊಯ್ಲು ಮಾಡಲು ಸಾಧ್ಯ. ಕೊಯ್ಲುಗಿಂತ ಮೊದಲು ಚೆನ್ನಾಗಿ ನೀರುಣಿಸುವುದು ಅವಶ್ಯ.

ನೀರಾವರಿ: ಈ ಬೆಳೆಗೆ ಹೆಚ್ಚು ನೀರು ಬೇಕಾಗಿಲ್ಲ. ಆದರೆ ನೀರಾವರಿ ಆಶ್ರಿತ ಕೃಷಿಯಲ್ಲಿ ಆಗಾಗ ನೀರುಣಿಸುತ್ತಿದ್ದರೆ (ಕನಿಷ್ಠ ೧೫ ರಿಂದ ೨೦ ದಿನಗಳ ಅಂತರದಲ್ಲಿ) ಹೆಚ್ಚಿನ ಇಳುವರಿ ಸಾಧ್ಯ. ಅಶ್ವಗಂಧದ ಕೃಷಿಯಲ್ಲಿ ಬೀಜಗಳನ್ನು ಬಿತ್ತುವಾಗ ತೇವಾಂಶವಿರುವಂತೆ ನೋಡಿಕೊಳ್ಳುವುದು ಅಗತ್ಯ, ಅಲ್ಲದೆ ಇದರ ಕೃಷಿಭೂಮಿಯಲ್ಲಿ ನೀರು ನಿಲ್ಲಬಾರದು. ನೀರು ಹರಿದು ಹೋಗುವ ವ್ಯವಸ್ಥೆ ಇಲ್ಲಿನ ಅಗತ್ಯದಲ್ಲೊಂದಾಗಿದೆ.

ಗೊಬ್ಬರ: ಇದರ ಕೃಷಿಗೆ ಗೊಬ್ಬರದ ಅವಶ್ಯಕತೆಯಿಲ್ಲ. ಮೇಲೆ ತಿಳಿಸಿದ ಪ್ರಮಾಣದ ಗೊಬ್ಬರವನ್ನು ಉಪಯೋಗಿಸಬಹುದು. ಮಧ್ಯಪ್ರದೇಶದಲ್ಲಿ ಇದರ ವಾಣಿಜ್ಯ ರೀತಿಯ ವ್ಯವಸಾಯವಾಗುತ್ತಿದ್ದು, ಇಲ್ಲಿ ಯಾವುದೇ ಗೊಬ್ಬರದ ಬಳಕೆಯಾಗುತ್ತಿಲ್ಲ. ಇಂದೋರಿನ ಸಂಶೋಧನಾ ಕೇಂಧ್ರದ ಅಧ್ಯಯನ ಪ್ರಕಾರ ರಸಗೊಬ್ಬರದ ಬಳಕೆಯಿಂದ ಇದರ ಬೇರಿನ ಇಳುವರಿಯಲ್ಲಿ ಯಾವುದೇ ಪ್ರಗತಿ ಕಂಡು ಬಂದಿಲ್ಲ. ಹೀಗಿದ್ದರೂ ಸುಮಾರು ೮೫ ರಿಂದ ೧೩೦ ಕಿ.ಗ್ರಾಂ. ಯೂರಿಒಯಾವನ್ನು ನಾಟಿ ಮಾಡುವ ಮತ್ತು ಇತರ ಎರಡು ಸಮಭಾಗದಲ್ಲಿ ಹಾಕಬಹುದು.

ಕಳೆ ನಿಯಂತ್ರಣ: ನಾಟಿ ಮಾಡಿದ ನಾಲ್ಕು ವಾರಗಳ ಬಳಿಕ ಎರಡರಿಂದ ಮೂರು ಬಾರಿ ಕಳೆ ನಿಯಂತ್ರಿಸಿದಲ್ಲಿ ಉತ್ತಮ ಇಳುವರಿ ಗಳಿಸಬಹುದು. ಇದರೊಂದಿಗೆ ಮೈಕ್ರೊನ್ಯೂಟ್ರಿಯಟ್ಸ್‌ ಮತ್ತು ಬೆಳವಣಿಗೆ ಹತೋಟಿಗಾಗಿರುವ ದ್ರಾವಣಗಳನ್ನು ಸಿಂಪಡಿಸಿದಲ್ಲಿ ಯೋಗ್ಯ ಇಳುವರಿ ಪಡಕೊಳ್ಳಲು ಸಾಧ್ಯ.

ಕೀಟ ಮತ್ತು ರೋಗಗಳು: ಅಶ್ವಗಂಧಕ್ಕೆ ಯಾವುದೇ ರೀತಿಯ ಕೀಟಗಳ ಭಾದೆಯಿರುವುದಿಲ್ಲ. ಇದಕ್ಕೆ ಬರುವ ರೋಗಗಳೆಂದರೆ ಬೇರು ಕೊಳೆಯುವುದು, ಹೇನುಗಳ ಭಾದೆ ಇತ್ಯಾದಿಗಳು. ಇವುಗಳಿಂದಾಗಿ ಸಸ್ಯಗಳು ನಾಶವಾಗಬಹುದು ಮತ್ತು ಇಳುವರಿ ಕುಂಠಿತಗೊಳ್ಳಬಹುದು. ಇವುಗಳ ಹತೋಟಿಗಾಗಿ ೩ ಗ್ರಾಂ ಡಯಥೇನ್‌ ಯಂ-೪೫ನ್ನು ಒಂದು ಲೀಟರ್ ನೀರಿಗೆ ಬೆರೆಸಿ ಒಂದು ತಿಂಗಳಾದ ಗಿಡಕ್ಕೆ ಸಿಂಪಡಿಸಬೇಕು. ರೋಗ ಹತೋಟಿಗೆ ಬಾರದಿದ್ದಲ್ಲಿ ೭ ರಿಂದ ೧೦ ದಿನಗಳಿಗೊಮ್ಮೆ ಇದನ್ನು ಪುನಃ ಸಿಂಪಡಿಸಬೇಕು.

ಕೊಯ್ಲು: ಅಶ್ವಗಂಧ ಸಸ್ಯದ ಎಲೆ ಮತ್ತು ಕಾಯಿಗಳು ಕೆಂಪು ಬಣ್ಣಕ್ಕೆ ತಿರುಗಿದಾಗ ಅದು ಕೊಯ್ಲಿಗೆ ಸೂಕ್ತ ಸಮಯ. ಸಾಮಾನ್ಯವಾಗಿ ಇದರ ಕೊಯ್ಲು ಜನವರಿಯಿಂದ ಆರಂಭಗೊಂಡು ಮಾರ್ಚ್ ತನಕವಿರುತ್ತದೆ. ಗಿಡದ ನಾಟಿಯಾಗಿ ೧೫೦ ರಿಂದ ೧೭೦ ದಿನಗಳಲ್ಲಿ ಇದು ಕೊಯ್ಲಿಗೆ ಸಿದ್ಧವಾಗುವುದು ವಾಡಿಕೆ. ಕೊಯ್ಲು ಮಾಡುವ ಮುನ್ನ ಚೆನ್ನಾಗಿ ನೀರು ಹಾಯಿಸಿ ಭೂಮಿಯನ್ನು ನೆನೆಸಬೇಕು. ಬಳಿಕ ಆ ತೇವಾಂಶದ ಸಹಾಯದಿಂದ ಗಿಡಗಳನ್ನು ಬೇರು ಸಹಿತ ಕಿತ್ತು, ಬೇರು, ಕಾಂಡ, ಎಲೆ ಮತ್ತು ಬೀಜಗಳನ್ನು ಬೇರ್ಪಡಿಸಿ ನೆರಳಿನಲ್ಲಿ ಒಣಗಿಸಬೇಕು.

ವರ್ಗೀಕರಣ: ಒಣಗಿಸಿದ ಬೇರನ್ನು ಸರಿಯಾಗಿ ವರ್ಗೀಕರಿಸಬೇಕು. ಈ ಬೇರನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಬಹುದು. ಈ ವರ್ಗೀಕರಣವು ನಾಲ್ಕು ವಿಧದಲ್ಲಿರುತ್ತದೆ.

ಗ್ರೇಡ್‌: ಈ ವರ್ಗದಲ್ಲಿ ೭ ಸೆಂ.ಮೀ ಉದ್ದದ ೧ ರಿಂದ ೧.೫ ಸೆಂ.ಮೀ ಸುತ್ತಳತೆಯುಳ್ಳ ಬಿದುರತೆಯ ಒಳಭಾಗದಲ್ಲಿ ಬಿಳಿಬಣ್ಣವುಳ್ಳ ಬೇರುಗಳಿರುತ್ತದೆ

ಬಿಗ್ರೇಡ್‌: ೫ ಸೆಂ.ಮೀ ಉದ್ದದ ೧ ಸೆಂ.ಮೀ ಒಳಗಿನ ಸುತ್ತಳತೆಯ ಒಳಭಾಗ ಬಿಳಿಯುಳ್ಳ ಬೇರು.

ಸಿಗ್ರೇಡ್‌: ೩ ರಿಂದ ೪ ಸೆಂ.ಮೀ ಉದ್ದದ ೧ ಸೆಂ.ಮೀ ಗಿಂತ ಕೆಳಗಿನ ಸುತ್ತಳತೆ ಗಟ್ಟಿಯಾದ ಬೇರಿನ ಕೊಂಬೆ.

ಕೀಳಮಟ್ಟದ ಗ್ರೇಡ್‌: ಒಳಭಾಗದಲ್ಲಿ ಹಳದಿ ಬಣ್ಣವುಳ್ಳ ಸಣ್ಣದಾದ ಬೇರಿನ ತುಂಡುಗಳು.

ಇಳುವರಿ: ಒಂದು ಹೆಕ್ಟೇರ್ ಕೃಷಿಯಲ್ಲಿ ಸರಾಸರಿ ೩ ರಿಂದ ೫ ಕ್ವಿಂಟಾಲ್‌ಗಳಷ್ಟು ಒಣಬೇರು ಮತ್ತು ೫೦ ರಿಂದ ೭೫ ಕಿ.ಗ್ರಾಂ ಗಳಷ್ಟು ಬೀಜ ದೊರಕಲು ಸಾಧ್ಯ. ಒಣಗಿದ ಬೇರನ್ನು ಸುಮಾರು ಒಂದೂವರೆ ವರ್ಷ ಶೇಖರಿಸಿಡಬಹುದು.

ವೆಚ್ಚ ಮತ್ತು ಆದಾಯ: ಅಶ್ವಗಂಧದ ಕೃಷಿಗೆ ಹೆಕ್ಟೇರೊಂದರ ತಗಲಬಹುದಾದ ವೆಚ್ಚ ಸುಮಾರು ೫ ರಿಂದ ೬ ಸಾವಿರ ರೂಪಾಯಿಗಳು ಮತ್ತು ದೊರಕಬಹುದಾದ ಆದಾಯ ಸುಮಾರು ರೂಪಾಯಿ ೩೦ ಸಾವಿರಗಳಷ್ಟು. ಒಟ್ಟಾರೆಯಾಗಿ ಹೆಕ್ಟೇರೊಂದರ ಸುಮಾರು ೨೪ ಸಾವಿರ ರೂಪಾಯಿಗಳಷ್ಟು ಲಾಭಾಂಶ ಈ ಕೃಷಿಯಲ್ಲಿ ದೊರಕಲು ಸಾಧ್ಯ.

ಉಪಯೋಗ: ಅಶ್ವಗಂಧದದ ನಾನಾ ಭಾಗಗಳಿಗೆ ವಿಶ್ವದಾದ್ಯಂತ ವಿಪುಲ ಬೇಡಿಕೆಯಿದೆ. ಇದನ್ನು ಶಕ್ತಿವರ್ಧಕ ಔಷಧಗಳ ತಯಾರಿಕೆಯಲ್ಲಿ ಬಳಸಲಾಗುತ್ತಿದೆ. ಇದರ ಬೇರು, ಕಾಂಡ, ಮತ್ತು ಎಲೆಗಳು ಅನೇಕ ರೋಗಗಳಿಗೆ ಯೋಗ್ಯ ಔಷಧಿಯಾಗಿದೆ. ಪ್ರಕೃತ ಬೇಡಿಕೆಗನುಗುಣವಾದ ಪೂರೈಕೆ ನಮ್ಮಲ್ಲಾಗುತ್ತಿಲ್ಲವೆಂಬ ಕೊರಗು ಔಷಧಿ ತಯಾರಕರದ್ದಾಗಿದೆ. ಈ ಮೂಲಿಕೆಯನ್ನು ನಮ್ಮಲ್ಲಿ ರೋಗ ನಿರೋಧಕ ಶಕ್ತಿಗಾಗಿ, ಬಂಜೆತನ ಮತ್ತು ನಪುಂಸಕತೆಯ ನಿವಾರಣೆಗೆ, ಕ್ಷಯರೋಗದ ಹತೋಟಿಗೆ, ಮಾನಸಿಕ ಒತ್ತಡವನ್ನು ದೂರೀಕರಿಸಲು, ಶಕ್ತಿವರ್ಧನೆಗೆ ಚಿರಯೌವ್ವನಕ್ಕಾಗಿ, ವೀರ್ಯವರ್ಧಕ ಮತ್ತು ಕಾಮೋತ್ತೇಜಕವಾಗಿ, ನರಸಂಬಂಧಿ ಕಾಯಿಲೆಗಳ ನಿವಾರಣೆಗೆ, ಸಂಧಿವಾತ ಇತ್ಯಾದಿಗಳ ನಿವಾರಣೆಗಾಗಿ ತಯಾರಾಗುವ ಔಷಧಿಗಳಲ್ಲಿ ಬಳಸಲಾಗುತ್ತಿದೆ. ಇದರಿಂದ ತಯಾರಿಸಿದ ಅಶ್ವಗಂಧಾದಿ, ಅಶ್ವಗಂಧಾವಲೇಹ, ಅಶ್ವಗಂಧಾರಿಷ್ಟ ಇತ್ಯಾದಿಗಳು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದೆ. ಅಶ್ವಗಂಧಕ್ಕೆ ಅಮೇರಿಕಾದಲ್ಲಿ ಅಧಿಕ ಬೇಡಿಕೆಯಿದೆ.