. ಇಸಾಬುಗೋಲು

ಮೆಡಿಟರೇನಿಯನ್‌ ಪ್ರದೇಶ ಮತ್ತು ಪಶ್ಚಿಮ ಏಶ್ಯಾದ ಭಾಗಗಳು ಇಸಾಬುಗೋಲಿನ ಮೂಲಸ್ಥಾನ. ಪಂಜಾಬಿನ ಬಯಲು ಪ್ರದೇಶ, ಸಟ್ಲೆಜ್‌ನ ಪಶ್ಚಿಮಕ್ಕಿರುವ ಇಳಿಜಾರು ಪ್ರೆದೇಸ, ಸಿಂಧು ಮತ್ತು ಬಲೂಚಿಸ್ಥಾನಗಳಲ್ಲಿ ಬೆಳೆಯುವ ಈ ಸಸ್ಯ ಇತ್ತೀಚಿನ ವರ್ಷಗಳಲ್ಲಿ ಗುಜರಾತು ಮತ್ತು ರಾಜಸ್ಥಾನಗಳಿಗೆ ಹಬ್ಬಿದೆ. ಅಂದಾಜು ೫೦ ಸಾವಿರ ಹೆಕ್ಟೇರು ಪ್ರದೇಶದಲ್ಲಿ ಅದರ ಕೃಷಿಯಾಗುತ್ತಿದ್ದು, ಸುಮಾರು ೪೮ ಸಾವಿರ ಟನ್‌ಗಳಷ್ಟು ಉತ್ಪಾದನೆಯಾಗುತ್ತಿದೆ.

ಸಸ್ಯ ಪರಿಚಯ

‘ಪ್ಲಾಂಟಗೊ ಒವಾಟ ಪಾರಸ್ಯ’ ಎಂಬ ವೈಜ್ಞಾನಿಕ ಹೆಸರುಳ್ಳ ಇದು ‘ಪ್ಲಾಂಟಜಿನೇಶಿಯಾ’ ಕುಟುಂಬಕ್ಕೆ ಸೇರಿದೆ. ಇದರಲ್ಲಿ ಒಟ್ಟು ೫೦ ಪ್ರಭೇದಗಳಿದ್ದು, ಇದೊಂದು ಭತ್ತದಂತ ವಾರ್ಷಿಕ ಬೆಳೆಯಾಗಿದೆ. ಈ ಸಸ್ಯದ ಉತ್ಪನ್ನವಾದ ಸಿಪ್ಪೆಗೆ ಅಧಿಕ ಪ್ರಮಾಣದ ಆಂತರಿಕ ಮತ್ತು ಬಾಹ್ಯ ಮಾರುಕಟ್ಟೆಯಿದೆ.

ಕೃಷಿ ವಿಧಾನ

ಮಣ್ಣು ಮತ್ತು ಹವಾಗುಣ: ಮೆದು ಮಣ್ಣಿರುವ ನೀರು ಇಂಗಿ ಹೋಗುವ ಪ್ರದೇಶದಲ್ಲಿ ಇದನ್ನು ಬೆಳೆಸಬಹುದು. ಹೆಚ್ಚಿನ ಪ್ರಮಾಣದ ಸಾರಜನಕಲ ಮತ್ತು ಕಡಿಮೆ ತೇವಾಂಶವುಳ್ಳ ಭೂಮಿ ಈ ಸಸ್ಯದ ಬೆಳವಣಿಗೆ ಮತ್ತು ಅಧಿಕ ಇಳುವರಿಗೆ ಸೂಕ್ತ. ಇದರ ನಾಟಿ ಚಳಿಗಾಲದಲ್ಲಿ (ಹೆಚ್ಚಾಗಿ ನವಂಬರಿನ ಆದಿಭಾಗ) ಆಗುವುದು. ಇದರ ಕೃಷಿಗಾಗಿರುವ ಭೂಮಿಯನ್ನು ಉಳುಮೆ ಮಾಡಿ ಮಣ್ಣನ್ನು ಪುಡಿ ಪುಡಿಯಾಗಿಸಬೇಕು. ಈ ಭೂಮಿಗೆ ೧೦ ರಿಂದ ೧೫ ಟನ್‌ (ಹೆಕ್ಟೇರೊಂದರ) ಹಟ್ಟಿ ಗೊಬ್ಬರ ಕೊಟ್ಟು ಮಣ್ಣಿನೊಂದಿಗೆ ಮಿಶ್ರಮಾಡಿ ಬೆರೆಯುವಂತೆ ಮಾಡಬೇಕು.

ಸಸ್ಯಾಭಿವೃದ್ಧಿ: ಇದರ ಸಸ್ಯಾಭಿವೃದ್ಧಿ ಬೀಜಗಳಿಂದ ಆಗಬೇಕು. ಹೆಚ್ಚಿನ ಪ್ರತಿಫಲಕ್ಕೆ ಹೊಚ್ಚ ಹೊಸದಾದ ಬೀಜಗಳು ಅಗತ್ಯ. ಇದರ ಬೀಜಗಳು ಸೂಕ್ಷ್ಮಾವಾಗಿರುವುದರಿಂದ ಇವನ್ನು ಮರಳು ಅಥವಾ ಸಗಣಿಪುಡಿಯೊಂದಿಗೆ ಮಿಶ್ರಮಾಡಿ ಬಿತ್ತುವುದು ಒಳ್ಳೆಯದು. ಈ ರೀತಿಯಾಗಿ ಬಿತ್ತನೆಯಾದ ಬೀಜಗಳು ನಾಲ್ಕು ದಿನಗಳಲ್ಲಿ ಮೊಳಕೆಯೊಡೆದು ಸಸಿಯಾಗುವುದು. ಈ ಸಮಯದಲ್ಲಿ ಇದಕ್ಕೆ ನೀರುಣಿಸಬೇಕು. ಇಸಾಬುಗೋಲಿನಲ್ಲಿ ಹಲವು ತಳಿಗಳಿದ್ದು, ಮುಖ್ಯವಾದವುಗಳೆಂದರೆ RI-89, AMB-2, GI-1, GI-2, MI-4,MIB-121, HI-34, HI-2, HI-1, HI-5, RI-87 ಮತ್ತು HIHARIKA.

ಗೊಬ್ಬರ: ಇದು ಕಡಿಮೆ ಪ್ರಮಾಣದ ಗೊಬ್ಬರವನ್ನು ಬಯಸುವ ಸಸ್ಯ. ರಸಗೊಬ್ಬರದ ಬಳಕೆ ಮಾಡುವುದಿದ್ದಲ್ಲಿ ಶಿಫಾರಸ್ಸಾದ ಪ್ರಮಾಣವೆಂದರೆ ಹೆಕ್ಟೇರೊಂದರ ೫೦ ಕಿ.ಗ್ರಾಂ. ಸಾರಜನಕ ಮತ್ತು ೨೫ ಕಿ.ಗ್ರಾಂ ರಂಜಕ ಮತ್ತು ೩೦ ಕಿ.ಗ್ರಾಂ ಪೊಟ್ಯಾಷ್‌ ಆಗಿದೆ.

ನೀರಾವರಿ: ನಾಟಿ ಮಾಡಿದ ತಕ್ಷಣ ಸಣ್ಣ ಪ್ರಮಾಣದ ನೀರಾವರಿ ಅಗತ್ಯ. ಬಳಿಕ ಬೀಜ ಬಿಡುವಾಗ, ತೆನೆ ಬಿಡುವಾಗ ಮತ್ತು ಹೂ ಬಿಡುವಾಗ ಒಟ್ಟಾರೆಯಾಗಿ ೩ ರಿಂದ ೬ ಬಾರಿ ನೀರುಣಿಸಬೇಕು.

ಕೀಟ ಮತ್ತು ರೋಗ: ಸೂಕ್ಷ್ಮ ಶಿಲೀಂದ್ರಗಳ ಬಾಧೆಯನ್ನು ತಪ್ಪಿಸಲು ಡೈಥೇನ್‌ m-45 ಅಥವಾ ಡೈಥೇನ್‌ Z-78 ರ ಶೇಕಡಾ ೨ರ ಪ್ರಮಾಣವನ್ನು ಒಂದು ಲೀಟರು ನೀರಿಗೆ ಬೆರೆಸಿ ಸಿಂಪಡಿಸಬೇಕು. ಸೊರಗು ರೋಗಕ್ಕೆ ೨.೫ ಗ್ರಾಂ ಬವಿಸ್ಟಿನ್‌ನ್ನು, ೧ ಕಿ.ಗ್ರಾಂ ಬೀಜದೊಂದಿಗೆ ಬೆರೆಸಿ ಬೀಜಬಿತ್ತಿದಲ್ಲಿ ಹತೋಟಿಯಲ್ಲಿಡಲು ಸಾಧ್ಯ.

ಕೊಯ್ಲು: ಫೆಬ್ರವರಿಯಿಂದ ಏಪ್ರಿಲ್‌ನೊಳಗೆ ಅಂದರೆ ಸಾಮಾನ್ಯವಾಗಿ ನಾಟಿಯಾದ ೧೧೦ ರಿಂದ ೧೩೦ ದಿನಗಳೊಳಗೆ ಇದು ಕೊಯ್ಲಿಗೆ ಸಿದ್ಧಗೊಳ್ಳುವುದು. ಇದರ ಗಿಡದ ಬಣ್ಣಹಳದಿ ಮತ್ತು ತೆನೆಯ ಬಣ್ಣ ಕಂದು ಆದಾಗ ಕೊಯ್ಲಿಗೆ ಸೂಕ್ತ. ಕಟಾವಿನ ಸಮಯದಲ್ಲಿ ಒಣಹವೆ ಮತ್ತು ಗಿಡದಲ್ಲಿ ತೇವಾಂಶವಿರಬೇಕು. ಕೊಯ್ಲಿನ ಸಮಯದಲ್ಲಿ ಬೀಜವೊಡೆದು ಚೂರು ಚೂರು ಆಗುವುದರಿಂದ ಅತ್ಯಂತ ಜಾಗರೂಕತೆ ವಹಿಸಿಕೊಳ್ಳಬೇಕು.

ಕೊಯ್ಲು ಆದ ಎರಡು ದಿನಗಳಲ್ಲಿ ತೆನೆ ಬಡಿಯಬೇಕು. ಬಳಿಕ ಮಿಲ್ಲುಗಳಲ್ಲಿ ಇದರ ಬೀಜದ ಹೊರ ತೊಗಟೆ ತೆಗೆಯಬೇಕು. ಇದರ ಬೀಜ ಮತ್ತು ತೊಗಟೆಯನ್ನು ೨ ವರ್ಷಗಳ ಕಾಲ ಶೇಖರಿಸಿಡಬಹುದು.

ಇಳುವರಿ: ಒಂದು ಹೆಕ್ಟೇರ್ ಇಸಾಬುಗೋಲು ಕೃಷಿಯಿಂದ ಸುಮರು ೯೦೦ ರಿಂದ ೧೫೦೦ ಕಿ.ಗ್ರಾಂ ಬೀಜ ಮತ್ತು ೨೨೫ ರಿಂದ ೩೭೫ ಕಿ.ಗ್ರಾಂ. ತೊಗಟೆಯನ್ನು ಪಡೆಯಬಹುದು.

ವೆಚ್ಚ ಮತ್ತು ಆದಾಯ: ಇಸಾಬುಗೋಲಿನ ಒಂದು ಹೆಕ್ಟೇರು ಕೃಷಿಗೆ ತಗಲಬಹುದಾದ ವೆಚ್ಚ ಸುಮಾರು ರೂಪಾಯಿ ೨೦,೦೦೦ ದೊರಕಬಹುದಾದ ಆದಾಯ ಸುಮರು ೬೩,೦೦೦ ರೂಪಾಯಿಗಳು. ಇಸಾಬುಗೋಲಿಗೆ ಅಧಿಕ ಪ್ರಮಾಣದ ವಿದೇಶಿ ಬೇಡಿಕೆಯಿದೆ. ಭಾರತವು ವಾರ್ಷಿಕವಾಗಿ ಸುಮಾರು ೧೮ ಸಾವಿರ ಟನ್‌ಗಳಷ್ಟು ಬೀಜ ಮತ್ತು ೨೬೦೦ ಟನ್‌ಗಳಷ್ಟು ತೊಗಟೆಯನ್ನು ರಫ್ತು ಮಾಡುತ್ತಿದೆ.

ಉಪಯೋಗ: ಮಲಬದ್ಧತೆ, ಅತಿಸಾರ, ಮೂಲವ್ಯಾದಿ, ವಾತ, ಪಿತ್ತ ಶಮನ, ಮೂತ್ರ ಹೆಚ್ಚಿಸಲು ಇತ್ಯಾದಿಯಾಗಿ ಇದರ ಬಳಕೆಯಾಗುತ್ತಿದೆ.

. ಒಂದೆಲಗ

ಬುದ್ಧಿಶಕ್ತಿ, ಸ್ಮರಣಶಕ್ತಿ, ಹೆಚ್ಚಿಸುವ ಸಾಮರ್ಥ್ಯವುಳ್ಳ ಒಂದೆಲಗಕ್ಕೆ ಆಂತರಿಕ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅಗಾಧ ಬೇಡಿಕೆಯಿದೆ. ಆದ್ದರಿಂದ ಇದರ ಕೃಷಿಯಿಂದು ಎಲ್ಲೆಡೆ ಕಂಡು ಬರುತ್ತಿದೆ. ಭಾರತದಾದ್ಯಂತ ಬೆಳೆಯಲ್ಪಡುವ ಈ ಸಸ್ಯ ಪಾಕಿಸ್ಥಾನ, ಶ್ರೀಲಂಕಾ,ಮಡಗಾಸ್ಕರ್, ಮುಂತಾದ ದೇಶಗಳಲ್ಲೂ ಕಾಣಸಿಗುವುದು. ಇದು ಸಮುದ್ರಮಟ್ಟದಿಂದ ೬೦೦೦ ಅಡಿ ಎತ್ತರದವರೆಗಿನ ಪ್ರದೇಶಗಳಲ್ಲೂ ಬೆಳೆಯಬಲ್ಲುದು.

ಸಸ್ಯಪರಿಚಯ

ವೈಜ್ಞಾನಿಕವಾಗಿ ‘ಬಕೋಪಾ ಮೋನಿಎರಿ’ ಎಂದು ಕರೆಯಲ್ಪಡುವ ಒಂದೆಲಗ ಸ್ಕೋರೊಪುಲರಿಯೇಸಿಯಾ ಕುಟುಂಬಕ್ಕೆ ಸೇರಿದೆ. ಇದು ಒಂದು ಪುಟ್ಟ ಸಸ್ಯ. ಇದರ ಎತ್ತರ ನಾಲ್ಕರಿಂದ ಐದು ಅಂಗುಲದಷ್ಟು. ನೆಲದಲ್ಲಿಯೇ ಹರಡುವ ಇದು ನೀರು ನಿಲ್ಲುವ ಅಥವಾ ತೇವಾಂಶವಿರುವಲ್ಲೆಲ್ಲಾ ತನ್ನಿಂದ ತಾನಾಗಿ ಬೆಳೆಯುತ್ತದೆ. ಒಂದೊಂದೇ ಹಸಿರು ಎಲೆಯಿರುವ ಇದರ ಆಕಾರ ಸಣ್ಣ ಕಿವಿಯಂತೆ. ಕಪ್ಪೆಯಾಕಾರಾದ ಎಲೆ ಇದಾದ್ದರಿಂದ ಇದನ್ನು ಮಂಡೂಕಪರ್ಣೀ, ಬುದ್ಧಿವರ್ಧಕವಾಗಿರುವುದರಿಂದ ಇದಕ್ಕೆ ಬ್ರಾಹ್ಮೀ, ಸರಸ್ವತಿ ಎಂಬ ಹೆಸರುಗಳೂ ಇವೆ. ಬ್ರಾಹ್ಮೀಯಲ್ಲಿ ಎರಡು ವಿಧದವುಗಳಿವೆ. ಒಂದನೆಯದು ಮಂಡೂಕಪರ್ಣೀ ಮತ್ತು ಎರಡನೆಯದು ಜಲಬ್ರಾಹ್ಮೀ. ಮೊದಲನೆಯದು ನೀರು ಇರುವ ಮತ್ತು ಇಲ್ಲದ ಸ್ಥಳಗಳಲ್ಲಿ ಬೆಳೆಯುತ್ತದೆ ಆದರೆ ಎರಡನೆಯದ್ದಕ್ಕೆ ನೀರಿರಲೇಬೇಕು. ಮೊದಲನೆ ವಿಧ ನೆಲದಲ್ಲಿ ಹರಿದಾಡುವಂತದ್ದಾಗಿದೆ. ಜಲಬ್ರಾಹ್ಮಿಯ ಎಲೆಯಲ್ಲಿ ಚಿಕ್ಕ ಚಿಕ್ಕ ರೋಮಗಳಿರುವುದು. ಬ್ರಾಹ್ಮೀಯ ಹೂಗಳು ಅತೀ ಸೂಕ್ಷ್ಮ ಇದರ ಬಣ್ಣ ನೀಲಿ ಯಾ ಬಿಳಿ. ಇದರ ಹಣ್ಣು ಕೂಡ ಅತೀ ಸಣ್ಣದು, ಇದರಲ್ಲಿರುವ ಬೀಜ ೦.೨ ಮಿ.ಮೀ ನಷ್ಟು ದೊಡ್ಡದು.

ಕೃಷಿ ವಿಧಾನ

ಮಣ್ಣು ಮತ್ತು ಹವಾಗುಣ:  ಬ್ರಾಹ್ಮಿಯನ್ನು ಭಾರತದಾದ್ಯಂತ ಬೇರೆ ಬೇರೆ ರೀತಿಯ ಮಣ್ಣು ಮತ್ತು ಹವಾಗುಣಗಳಲ್ಲಿ ಬೆಳೆಸಬಹುದು. ಹೆಚ್ಚಾಗಿ ನೀರಿನಂಶವಿರುವ ಹೊಲ, ಗದ್ದೆ ಕಾಲುವೆ ಪ್ರದೇಶಗಳಲ್ಲಿ ಇದರ ಕೃಷಿ ಸೂಕ್ತ. ೩೩ ರಿಂದ ೪೦ ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶವುಳ್ಳ ಪ್ರದೇಶಗಳಲ್ಲಿ ಇದರ ಬೆಳವಣಿಗೆ ಅಧಿಕ.

ಸಸ್ಯಾಭಿವೃದ್ಧಿ ಮತ್ತು ನಾಟಿ ವಿಧಾನ: ತಾಯಿ ಸಸ್ಯದ ೪ ರಿಂದ ೫ ಸೆಂ.ಮೀ ಉದ್ದದ ತುಂಡುಗಳನ್ನು ಕತ್ತರಿಸಿ ಸಸ್ಯಾಭಿವೃದ್ಧಿಗೊಳಿಸಬಹುದು. ಈ ತುಂಡುಗಳಲ್ಲಿ ಕೆಲವು ಎಲೆಗಳು ಮತ್ತು ಬೇರುಗಳಿರಬೇಕು. ಈ ಸಸ್ಯವನ್ನು ಮೊದಲೆ ಸಿದ್ಧಗೊಳಿಸಿದ ನೀರುಣಿಸಿಟ್ಟ ಭೂಮಿಯಲ್ಲಿ ೧೦X 10 ಸೆ.ಮೀ ಅಂತರದಲ್ಲಿ ನಾಟಿ ಮಾಡಬೇಕು. ನಾಟಿಯಾದ ತಕ್ಷಣ ನೀರಾವರಿ ವ್ಯವಸ್ಥೆಯಾಗಲೇಬೇಕಲು. ನಾಟಿ ಮಾಡಲು ಸೂಕ್ತ ಸಮಯ ಮಾಚ್‌ನನಿಂದ ಅಗೋಸ್ಟ್‌ನ ಅವಧಿ.

ಗೊಬ್ಬರ: ಒಂದೆಲಗ, ಕೃಷಿ ಭೂಮಿಯನ್ನು ಸಿದ್ಧ ಗೊಳಿಸುವಾಗ ಹೆಕ್ಟೇರೊಂಧರ ೫೦ ಕ್ವಿಂಟಾಲ್‌ ಹುಡಿಯಾದ ಕಾಂಪೋಸ್ಟು ಅಥವಾ ಹಟ್ಟಿಗೊಬ್ಬರವನ್ನು ಮಣ್ಣಿನೊಂದಿಗೆ ಮಿಶ್ರ ಮಾಡಬೇಕು. ಬಳಿಕ ಈ ಭೂಮಿಗೆ ರಸಗೊಬ್ಬರವನ್ನು ಕೊಟ್ಟಲ್ಲಿ ಉತ್ತಮ ಇಳುವರಿ ಪಡೆಯಲು ಸಾಧ್ಯ.

ನೀರಾವರಿ:  ಸಸ್ಯವನ್ನು ನಾಟಿ ಮಾಡಿದ ತಕ್ಷಣ ನೀರುಣಿಸಬೇಕು. ಬಳಿಕ ವಾರಕ್ಕೊಮ್ಮೆ ನೀರುಣಿಸುತ್ತಿರಬೇಕು. ಮಳೆಗಾಲದಲ್ಲಿ ನೀರಾವರಿಯ ಅಗತ್ಯವಿಲ್ಲ.

ಕಳೆ ನಿಯಂತ್ರಣ: ಪ್ರತಿ ಹದಿನೈದು ದಿನಗಳಿಗೊಮ್ಮೆ ಕಳೆ ನಿಯಂತ್ರಣವಾಗಬೇಕು.

ಕೀಟ ಹತೋಟಿ: ಈ ಬೆಳೆಗೆ ತಗಲಬಹುದಾದ ಕೀಟಗಳ ಭಾದೆಯನ್ನು ಹತೋಟಿಯಲ್ಲಿಡಲು ಶೇಕಡಾ ೦.೧ ರ ಡೈಮೆರಕ್ರಾನ್‌ ಅಥವಾ ನ್ಯೂವಾನ್‌ ದ್ರಾವಣವನ್ನು ಸಿಂಪಡಿಸಬೇಕು.

ಕೊಯ್ಲು: ಒಂದೆಗಲದ ಕೊಯ್ಲುಗೆ ಒಕ್ಟೋಬರಿನಿಂದ ನವೆಂಬರ್ ಅವಧಿ ಸೂಕ್ತ ಸಮಯ. ಸಸ್ಯದ ಮೇಲು ಭಾಗದ ೪ ರಿಂದ ೫ ಸೆಂ.ಮೀ ನಷ್ಟು ಕೊಯ್ಲು ಮಾಡಿ ತಳಭಾಗವನ್ನು ಹಾಗೇ ಬಿಡಬೇಕು.

ಇಳುವರಿ: ಒಂದು ಹೆಕ್ಟೇರ್ ಒಂದೆಲಗ ಕೃಷಿಯಲ್ಲಿ ವಾರ್ಷಿಕವಾಗಿ ಒಂದು ಕೊಯ್ಲಿಗೆ ಸರಾಸರಿ ೩೦೦ ಕ್ವಿಂಟಾಲ್‌ ಹಸಿ ಎಲೆ ಮತ್ತು ೬೦ ಕ್ವಿಂಟಾಲ್‌ಗಳಷ್ಟು ಒಣಮೂಲಿಕೆಯನ್ನು ಪಡೆಯಬಹುದು. ಮುಂದಿನ ಕೊಯ್ಲಿನಲ್ಲಿ ೪೦ ಕ್ವಿಂಟಾಲ್‌ಗಳಷ್ಟು ಒಣ ಎಲೆಗಳನ್ನು ಗಳಿಸಬಹುದು.

ಸಂಸ್ಕರಣೆ: ಸಾಮಾನ್ಯವಾಗಿ ಕೊಯ್ಲು ಮಾಡಿದ ಹಸಿಎಲೆಯನ್ನು ಕೊಠಡಿಯಲ್ಲಿರುವ ನೆರಳಲ್ಲಿ ಹರಡಿ ಒಣಗಿಸುವ ಪದ್ಧತಿ ನಮ್ಮಲ್ಲಿದೆ. ಒಣಗಿಸುವಾಗ ಎಲೆಗಳನ್ನು ನಿರಂತರವಾಗಿ ಅಡಿಮೇಲು ಮಾಡುತ್ತಿರಬೇಕು. ಒಣಗಿದ ಎಲೆಗಳನ್ನು ತಂಪಾಗಿರುವ ಕೊಠಡಿಯಲ್ಲಿ ನೀರು ಮತ್ತು ಗಾಳಿಯಾಡದ ಚೀಲಗಳಲ್ಲಿ ಶೇಖರಿಸಿಡಬೇಕಲು. ಈ ಹಂತದಲ್ಲಿ ಫಂಗಸ್‌ ಮತ್ತು ಕೀಟಗಳ ಹಾವಳಿ ಬರದಂಥೆ ಅಗತ್ಯ ಕ್ರಮ ಕೈಗೊಳ್ಳಬೇಕು.

ವೆಚ್ಚ ಮತ್ತು ಆದಾಯ: ಒಂದು ಹೆಕ್ಟೇರ್ ಕೃಷಿಗೆ ಸುಮಾರು ರೂಪಾಯಿ ೩೫ ಸಾವಿರಗಳ ಅಗತ್ಯವಿದ್ದು, ವಾರ್ಷಿಕವಾಗಿ ಗಳಿಸಬಹುದಾದ ಆದಾಯ ಸುಮರು ಎರಡು ಲಕ್ಷ ರೂಪಾಯಿಗಳಾಗಿವೆ.

ಉಪಯೋಗ: ಒಂದೆಲಗದ ಎಲ್ಲಾ ಭಾಗಗಳೂ ಉಪಯುಕ್ತ. ಇದನ್ನು ಜ್ಞಾಪಕ ಶಕ್ತಿ ವೃದ್ಧಿಸುವ ಔಷಧಿಗಳ ತಯಾರಿಯಲ್ಲಿ ಬಳಸಲಾಗುತ್ತಿದೆ. ಕುಷ್ಠ, ಅತಿಸಾರ, ಅಪಸ್ಮಾರ, ನರದೌರ್ಬಲ್ಯ, ಊತ,ಜ್ವರ, ಕೆಮ್ಮು ರಕ್ತಹೀನತೆ ಇತ್ಯಾದಿ ರೋಗಗಳ ಶಮನಕ್ಕಾಗಿ ಇದನ್ನು ಉಪಯೋಗಿಸಲಾಗುತ್ತಿದೆ. ಬ್ರಾಹ್ಮೀಯುಕ್ತ ತಲೆಕೂದಲೆಣ್ಣೆ, ಚೂರ್ಣ,ಮಾತ್ರೆ, ಘೃತ, ಅರಿಷ್ಟ ಇತ್ಯಾದಿಗಳು ನಮ್ಮ ಮಾರುಕಟ್ಟೆಯಲ್ಲಿ ಲಭ್ಯ.

. ಕರಿಕಾಚ್ಚಿಗಿಡ

ಮಕಾಯಿ ಅಥವಾ ಕರಿಕಾಚ್ಚಿ ಗಿಡದ ಇಡೀ ಸಸ್ಯ ಮತ್ತು ಹಣ್ಣು ಔಷಧೀಯ ಗುಣಗಳಿಂದ ಕೂಡಿದೆ. ಇದನ್ನು ಭಾರತದಾದ್ಯಂತ ಒಣ ಪ್ರದೇಶಗಳಲ್ಲಿ ಕಾಣಬಹುದು. ಇದರ ಔಷಧವನ್ನು ಅತಿಭೇದಿ, ಮೂಲವ್ಯಾಧಿ, ಕೆಮ್ಮು, ಇತ್ಯಾದಿಗಳ ಶಮನಕ್ಕಾಗಿ ಬಳಸಲಾಗುತ್ತಿದೆ.

ಸಸ್ಯ ಪರಿಚಯ

‘ಸೊಲಾನಮ್‌ ನೈಗ್ರಮ್‌’ ಎಂಬ ಸಸ್ಯ ನಾಮವುಳ್ಳ ಮಕಾಯಿ ಸೊಲನೇಶಿಯಾ ಕುಟುಂಬಕ್ಕೆ ಸೇರಿದೆ. ಸುಮಾರು ೩೦ ರಿಂದ ೬೦ ಸೆಂ.ಮೀ ಎತ್ತರಕ್ಕೆ ಬೆಳೆಯಬಲ್ಲ ಲಂಬಾಕೃತಿಯ ಈ ಸಸ್ಯ ಸಣ್ಣದಾದ ಬಿಳಿಯ ಹೂವನ್ನು ಹೊರಸೂಸುತ್ತದೆ. ಇದರ ಕಾಯಿಗಳು ಹಸಿರು ಬಣ್ಣದಿಂದ ಕೆಂಪು ಅಥವಾ ಕಪ್ಪು ಬಣ್ಣವನ್ನು ಹಣ್ಣಾದಾಗ ತೋರಿಸುತ್ತದೆ. ಇದು ಹೂ ಮತ್ತು ಹಣ್ಣನ್ನು ಬಿಡುವ ಸಮಯ ಅಗೋಸ್ಟ್‌ನಿಂದ ಒಕ್ಟೋಬರ್ ತಿಂಗಳುಗಳಲ್ಲಿ. ಭಾರತದಾದ್ಯಂತ ಒಣಪ್ರದೇಶದಲ್ಲಿ ಇದೊಂದು ಕಳೆಯ ರೂಪದಲ್ಲಿ ಬೆಳೆಯುತ್ತದೆ. ಇದಕ್ಕೆ ಕಾಕಮಕಿ, ಗಣಿಕೆ, ಮಾಕೋ, ಗುರ್ ಕಾಮಯಿ ಮುಂತಾದ ಹೆಸರುಗಳಿವೆ.

ಕೃಷಿ ವಿಧಾನ

ಮಣ್ಣು ಮತ್ತು ಹವಾಗುಣ: ಈ ಸಸ್ಯವು ಒಣ, ಕಲ್ಲಿನಿಂದ ಕೂಡಿದ, ಆಳವಾದ ಮಣ್ಣಿನಲ್ಲಿ ಬೆಳೆಯಬಹುದು. ಸಾಮಾನ್ಯವಾಗಿ ಇದು ಪಾಳುಭೂಮಿಯ ತೇವಾಂಶವದಲ್ಲಿ ಕಂಡು ಬರುತ್ತದೆ. ಇದನ್ನು ಯಾವುದೇ ಹವಾಗುಣವಿರುವ ಪ್ರದೇಶದಲ್ಲಿ ಬೆಳೆಸಬಹುದಾಗಿದೆ.

ಸಸ್ಯಾಭಿವೃದ್ಧಿ ಮತ್ತು ನಾಟಿ ವಿಧಾನ: ಇದರ ಬೀಜಗಳನ್ನು ಎಪ್ರಿಲ್‌ಮೇ ತಿಂಗಳುಗಳಲ್ಲಿ ಗೊಬ್ಬರದಿಂದ ಕೂಡಿದ ನರ್ಸರಿ ಮಡಿಗಳಲ್ಲಿ ಬಿತ್ತಿ ಸಸ್ಯವನ್ನು ಪಡೆಯಬಹುದು. ಇದು ಬೆಳೆಯಲು ೧೫ ರಿಂದ ೩೦ ದಿನಗಳು ಬೇಕು. ಬೀಜ ಬಿತ್ತಿದ ಒಂದು ತಿಂಗಳಲ್ಲಿ ಸಸ್ಯವನ್ನು 60 x ೬೦ ಸೆಂ.ಮೀ ಸಾಲುಗಳಲ್ಲಿ ನಾಟಿ ಮಾಡಬಹುದು.

ಕಳೆ ನಿರ್ವಹಣೆ: ನಿರಂತರವಾಗಿ ಕಳೇ ನಿರ್ಮೂಲನೆ ನರ್ಸರಿ ಮತ್ತು ಕೃಷಿ ಭೂಮಿಯಲ್ಲಾಗಬೇಕು.

ನೀರಾವರಿ: ವಾರಕ್ಕೊಮ್ಮೆ ಇಲ್ಲವೆ ಹದಿನೈದು ದಿನಗಳಿಗೊಮ್ಮೆ ಅಗತ್ಯಕ್ಕನುಗುಣವಾಗಿ ನೀರುಣಿಸಬೇಕು. ಹೂ ಬಿಡುವ ತನಕ ನೀರಾವರಿಯ ಅಗತ್ಯವಿದೆ.

ಕೊಯ್ಲು: ನಾಟಿ ಮಾಡಿದ ನಾಲ್ಕರಿಂದ ಆರು ತಿಂಗಳುಗಳಲ್ಲಿ ಬೆಳೆಯನ್ನು ಕೊಯ್ಲು ಮಾಡಬಹುದು. ಕೊಯ್ಲು ಮಾಡಿದ ಗಿಡವನ್ನು ನೆರಳಲ್ಲಿ ಒಣಗಿಸಿಡಬೇಕು.

ಆದಾಯ: ಒಂದು ಕಿ.ಗ್ರಾಂ ಒಣಗಿಡಕ್ಕೆ ಮಾರುಕಟ್ಟೆಯಲ್ಲಿರುವ ಬೆಲೆ ೨೦ ರಿಂದ ೨೫ ರೂಪಾಯಿಗಳು. ಇದರ ಹಣ್ಣಿಗೆ ರೂಪಾಯಿ ೪೫ ರಿಂದ ೫೦ ರ ತನಕ ಬೆಲೆಯಿದೆ.

ಉಪಯೋಗ: ಹೃದಯ ಸಂಬಂಧಿ ಕಾಯಿಲೆ, ಕಣ್ಣಿನ ಕಾಯಿಲೆ, ಅತಿಭೇದಿ, ಎನಿಮಿಯಾ,ಕೆಮ್ಮು, ವಾತ, ಕಫ ಇತ್ಯಾದಿಗಳ ನಿವಾರಣೆಯಲ್ಲಿ ಇದು ಉಪಯುಕ್ತವಾಗಿದೆ. ಇದನ್ನು ಆಹಾರ ರೂಪದಲ್ಲೂ ಬಳಸಲಾಗುತ್ತಿದೆ.

೯. ಕಿರಾತಕಡ್ಡಿ

ನಮ್ಮೆಲ್ಲರ ಮನೆಯ ಮುಂದೆ ಅಲಂಕಾರಿಕ ಗಿಡವಾಗಿ ಕಂಗೊಳಿಸುತ್ತಿರುವ ಹುಲುಸಾಗಿ ಬೆಳೆಯಬಲ್ಲ ಪುಟ್ಟಗಿಡವೆ ಕಿರಾತಕಡ್ಡಿಯಾ ನೆಲಬೇವು. ಇದೊಂದು ಔಷಧೀಯ ಮೂಲಿಕೆ. ಹಲವು ರೋಗಗಳ ನಿವಾರಣೆಯಲ್ಲಿ ಇದರ ಪಾತ್ರ ಹಿರಿದು. ಮಲೇರಿಯಾದಂತ ಭೀಕರ ರೋಗ ನಿರ್ಮೂಲನೆಯಲ್ಲಿ ಇದು ಮಹತ್ವದ ಪಾತ್ರ ನಿರ್ವಹಿಸುತ್ತದೆ. ಇದರ ಎಲೆ, ಹೂ, ಬೇರು, ಬೀಜ ಇವೆಲ್ಲಾ ಉಪಯುಕ್ತ. ಆದರೆ ನಮ್ಮೆದುರಿಗೆ ಇರುವ ಈ ಸಸ್ಯಕ್ಕೆ ಇರುವ ಆರ್ಥಿಕ ಮೌಲ್ಯ ನಮಗಿನ್ನೂ ಅರಿವಿಗೆ ಬಂದಿಲ್ಲ. ಚೀನಾ, ಶ್ರೀಲಂಕಾ, ಬಾಂಗ್ಲಾ ಮತ್ತು ಥೈಲಾಂಡುಗಳಲ್ಲಿ ಇದು ಕಂಡು ಬರುತ್ತದೆ. ಉಷ್ಣವಲಯದ ತೇವಾಂಶ ಭರಿತ ಅರಣ್ಯ ಪ್ರದೇಶಗಳಲ್ಲಿ ಬೆಳೆಯುವ ನೆಲಬೇವು ಭಾರತದಾದ್ಯಂತ ಬೆಳೆಯಬಲ್ಲ ಸಸ್ಯ. ಇದರ ಕೃಷಿಯನ್ನು ವಾಣಿಜ್ಯ ರೀತಿಯಲ್ಲಿ ಉತ್ತರ ಪ್ರದೇಶ, ಅಸ್ಸಾಂ, ಮಧ್ಯಪ್ರದೇಶ, ತಮಿಳುನಾಡು ಮತ್ತು ಕೇರಳಗಳಲ್ಲಿ ಕೈಗೊಳ್ಳಲಾಗುತ್ತಿದೆ.

ಸಸ್ಯ ಪರಿಚಯ

ಇದರ ವೈಜ್ಞಾನಿಕ ಹೆಸರು ‘ಗ್ರಾಫಿಸ್‌ ಪನಿಕ್ಯುಲಾಟಾ’ ಇದು ಅಸಂತೇಷಿಯಾ ಕುಟುಂಬಕ್ಕೆ ಸೇರಿದ ಸಸ್ಯ. ಇದನ್ನು ಕನ್ನಡದಲ್ಲಿ ನೆಲಬೇವು,ಕಿರಾತಕಡ್ಡಿ, ಸಂಸ್ಕೃತದಲ್ಲಿ ಭೂನಿಂಬ, ಹಿಂದಿಯಲ್ಲಿ ಚಿರಾಯಿತ, ಕಾಲಮೇಘ ಇತ್ಯಾದಿಯಾಗಿ ಕರೆಯುತ್ತಾರೆ. ಈ ಸಸ್ಯವು ಸುಮಾರು ೫೦ ಸೆಂ.ಮೀ ನಿಂದ ೧ ಮೀಟರ್ ತನಕ ಬೆಳೆಯಬಲ್ಲದು. ಇದರ ಎಲೆಯಲ್ಲಿರುವ ಗ್ರಾಪೊಲ್ಯಾಡ್‌ನ ಪ್ರಮಾಣ ಶೇಕಡಾ ೦.೮ ರಿಂದ ೨ ರಷ್ಟಾಗಿದೆ. ಇದು ಅತ್ಯಂತ ಕಹಿಯಾಗಿದೆ.

ಕೃಷಿ ವಿಧಾನ

ಮಣ್ಣು ಮತ್ತು ಹವಾಗುಣ: ಕಿರಾತಕಡ್ಡಿ ಸಸ್ಯವನ್ನು ಕೃಷಿಗೆ ಯೋಗ್ಯವಲ್ಲದ ಯಾವುದೇ ಭೂಮಿಯಲ್ಲಿ ಕೈಗೊಳ್ಳಬಹುದು. ಇದಕ್ಕೆ ಯಾವುದೇ ಮಣ್ಣು ಆಗಬಹುದು. ಇದು ಉಷ್ಣ ವಾತಾವರಣವನ್ನು ಬಯಸುವ ಸಸ್ಯ. ಇದರ ಬೆಳವಣಿಗೆಗೆ ಸೂರ್ಯನ ಶಾಖ ಅತ್ಯಗತ್ಯ. ಸೂರ್ಯನ ಉದಯವಾದ ತಕ್ಷಣ ಬೆಳವಣಿಗೆಯನ್ನು ವಿಪುಲವಾಗಿ ತೋರಿಸಬಲ್ಲ ಸಸ್ಯವಿದಾಗಿದೆ. ಸಾಮಾನ್ಯವಾಗಿ ಸೆಪ್ಟೆಂಬರ್ ನಲ್ಲಿ ಹೂಬಿಡುವ ಇದು ದಶಂಬರದೊಳಗೆ ಹಣ್ಣನ್ನು ಬಿಡುತ್ತದೆ.

ಸಸ್ಯಾಭಿವೃದ್ಧಿ: ಇದರ ಸಸ್ಯವನ್ನು ಬೀಜ ಮತ್ತು ಗಿಡದ ರೆಂಬೆಗಳ ತುಂಡುಗಳಿಂದ ಪಡಕೊಳ್ಳಬಹುದು. ಬೀಜವನ್ನು ಉಪಯೋಗಿಸಿ ನರ್ಸರಿಗಳಲ್ಲಿ ಗಿಡ ಮಾಡುವುದಿದ್ದಲ್ಲಿ ಜುಲೈ ಕೊನೆ ವಾರದಲ್ಲಿ ಇದಕ್ಕೆ ಸೂಕ್ತ ಸಮಯ.

ನಾಟಿ ವಿಧಾನ: ನಾಟಿ ಮಾಡುವ ಭೂಮಿಗೆ ಹೆಕ್ಟೇರೊಂದರ ಸುಮಾರು ೧೦ ಟನ್‌ಗಳಷ್ಟು ಹಟ್ಟಿಗೊಬ್ಬರವನ್ನು ಹಾಕಿ ಮಣ್ಣಿನಲ್ಲಿ ಮಿಶ್ರ ಮಾಡಬೇಕು. ಸಸಿಗಳನ್ನು ನಾಟಿ ಮಾಡುವಾಗ ೪೫ ರಿಂದ ೬೦ ಸೆಂ.ಮೀ ಅಂತರವಿಟ್ಟುಕೊಳ್ಳಬೇಕು. ನಾಟಿಯಾದ ತಕ್ಷಣ ನೀರುಣಿಸಬೇಕು.

ನೀರಾವರಿ: ನಾಟಿಯಾದ ಬಳಿಕ ಮಳೆಯಾಗದಿದ್ದಲ್ಲಿ ಕೊಯ್ಲಿಗಿಂತ ಮೊದಲು ಒಟ್ಟಾಗಿ ೯ ಬಾರಿ ನೀರುಣಿಸಬೇಕು.

ಗೊಬ್ಬರ: ಉತ್ತಮ ಇಳುವರಿಗಾಗಿ ಹೆಕ್ಟೇರೊಂದರ ಸುಮಾರು ೨ ಟನ್‌ಗಳಷ್ಟು ಹರಳು ಹಿಂಡಿ ಕೊಡುವುದು ಉಚಿತ. ಇದರೊಂದಿಗೆ ರಸಗೊಬ್ಬರವನ್ನು ಕೊಡಬಹುದು.

ಕಳೆ ನಿಯಂತ್ರಣ: ನಾಟಿ ಮಾಡಿದ ಬಳಿಕ ಆರಂಭದ ಬೆಳವಣಿಗೆ ಹಂತದಲ್ಲಿ ಕಳೆಯನ್ನು ಕಿತ್ತು ಹಾಕಬೇಕು. ಬಳಿಕ ಗಿಡ ಹೆಚ್ಚಿನ ಬೆಳವಣಿಗೆಯನ್ನು ತೋರುವುದು.

ಕೊಯ್ಲು: ಮೇ-ಜೂನ್‌ ತಿಂಗಳುಗಳಲ್ಲಿ ನಾಟಿ ಮಾಡಿದ್ದಲ್ಲಿ ಇದು ಸಪ್ಟೆಂಬರಿಗಾಗುವಾಗ ಕೊಯ್ಲಿಗೆ ಸಿದ್ಧವಾಗುವುದು. ಇದರಲ್ಲಿ ಹೂ ಬಂದಾಗ ಗಿಡದ ನಾನಾ ಭಾಗಗಳಲ್ಲಿರುವ ಔಷಧೀಯ ಗುಣ ಅತ್ಯಧಿಕ. ಸಾಮಾನ್ಯವಾಗಿ ೯೦ ರಿಂದ ೧೦೦ ದಿನಗಳಲ್ಲಿ ಕಿರಾತಕಡ್ಡಿ ಗಿಡ ಕಟಾವಿಗೆ ತಯಾರಾಗುವುದು. ಕೊಯ್ಲಿನ ಬಳಿಕ ಈ ಗಿಡವನ್ನು ನೆರಳಿನಲ್ಲಿ ಒಣಗಿಸಿ ಹುಡಿ ಮಾಡಿ ಮಾರಾಟ ಮಾಡಬಹುದು. ಈ ಒಣಗಿಸುವಿಕೆಯು ಸುಮರು ಒಂದು ವಾರ ಕಾಲ ನಡೆಯಬೇಕು. ಒಣಗಿದ ಗಿಡವನ್ನು ೧ ವರ್ಷ ಶೇಖರಿಸಿಡಬಹುದು. ಉತ್ತಮ ರೀತಿಯ ಕೃಷಿಯಲ್ಲಿ ಒಂದು ಹೆಕ್ಟೇರ್ ಪ್ರದೇಶದಲ್ಲಿ ಸರಾಸರಿ ೩.೫ ರಿಂದ ೪ ಟನ್‌ಗಳಷ್ಟು ಒಣ ಎಲೆ ಗಳಿಸಲು ಸಾಧ್ಯ.

ವೆಚ್ಚ ಮತ್ತು ಆದಾಯ: ಒಂದು ಹೆಕ್ಟೇರ್ ಕಿರಾತಕಡ್ಡಿ ವ್ಯವಸಾಯಕ್ಕೆ ತಗಲಬಹುದಾದ ವೆಚ್ಚ ಸುಮಾರು ರೂಪಾಯಿ ಹತ್ತು ಸಾವಿರ. ಗಳಿಸಬಹುದಾದ ಆದಾಯ ಸುಮಾರು ರೂಪಾಯಿ ೪೩,೦೦೦ ಒಟ್ಟಾರೆಯಾಗಿ ದೊರಕಬಹುದಾದ ಲಾಭಾಂಶ ೩೩,೦೦೦ ಗಳಾಗಿದೆ.

ಉಪಯೋಗ: ಕಿರಾತಕಡ್ಡಿಯು ಹಲವಾರು ಕಾಯಿಲೆಗಳನ್ನು ವಾಸಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಮಲೇರಿಯಾ ಜ್ವರದ ನಿರ್ಮೂಲನೆಗೆ ಇದರ ಕಷಾಯ ಉಪಯುಕ್ತ. ಕಫ, ಕೆಮ್ಮು, ಕಜ್ಜಿ, ಇಸಬು ಮುಂತಾದ ಚರ್ಮರೋಗ, ಅಜೀರ್ಣ, ಹೊಟ್ಟೆನೋವು ಇತ್ಯಾದಿಗಳ ಹತೋಟಿಗಾಗಿ ಇದನ್ನು ಔಷಧಿಯಾಗಿ ಬಳಸಲಾಗುತ್ತದೆ. ಇದು ಆಯುರ್ವೇದ ಮತ್ತು ಹೋಮಿಯೋಪತಿ ಔಷಧಗಳ ತಯಾರಿಯಲ್ಲಿ ಒಂದು ಉಪಯುಕ್ತ ಮೂಲಿಕೆಯಾಗಿದೆ.

೧೦. ಗುಗ್ಗುಲ

ಭಾಂಡ ಎಂಬ ಸಣ್ಣ ಗಿಡದಿಂದ ಸಂಗ್ರಹಿಸಲಾಗುವ ಅಂಟನ್ನು ಗುಗ್ಗುಲ ಎನ್ನುತ್ತಾರೆ. ಇದನ್ನು ಆಯುರ್ವೇದದ ಔಷಧಿಗಳಲ್ಲಿ ಒಂದು ವಿಶೇಷ ವಸ್ತುವಾಗಿ ಬಳಸಲಾಗುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಬೇಡಿಕೆಗನುಗುಣವಾದ ಪೂರೈಕೆ ಆಗದೆ ಇರುವುದರಿಂದ ಇದರ ಮಹತ್ವ ಇನ್ನಷ್ಟು ಹೆಚ್ಚುತ್ತಿದೆ.

ಹಂಚಿಕೆ: ಈ ಸಣ್ಣ ಮರವು ಭಾರತದ ರಾಜಸ್ಥಾನ, ಗುಜರಾತು, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿ ಕಾಣ ಸಿಗುವುದು. ಇದು ಹೆಚ್ಚಾಗಿ ಮರುಭೂಮಿ ಪ್ರದೇಶಗಳಲ್ಲಿ ವ್ಯಾಪಕವಾಗಿ ಹರಡಿದೆ.

ಸಸ್ಯ ಪರಿಚಯ

‘ಕಾಮಿಪೊರಾ ವಿಗ್‌ಟೀ’ ಎಂಬ ಸಸ್ಯನಾಮವುಳ್ಳ ಈ ಗಿಡವು ಬರ್ ಸರೇಸಿಯಾ ಕುಟುಂಬಕ್ಕೆ ಸೇರಿದೆ. ಸಂಸ್ಕೃತದಲ್ಲಿ ಇದನ್ನು ಗುಗ್ಗುಳು ಎಂದು ಕರೆಯುತ್ತಾರೆ. ಈ ಸಣ್ಣ ಗಿಡವು ಸುಮಾರು ೩ ರಿಂದ ೮ ಮೀಟರ್ ಎತ್ತರಕ್ಕೆ ಬೆಳೆಯುವುದು. ಒಂದು ದಂಟಿನಲ್ಲಿ ಒಂದರಿಂದ ಮೂರು ಎಲೆಗಳುಳ್ಳ ಎರಡು ಪ್ರತ್ಯೇಕ ರೂಪದ ಹೂವುಗಳಿದ್ದು, ಅವಲ್ಲಿ ಒಂದು ಹೆಣ್ಣು ಮತ್ತಿನ್ನೊಂದು ಗಂಡು ಹೂವಾಗಿದೆ. ಇದರ ಹಣ್ಣು ಅಂಡಾಕಾರದಲ್ಲಿದೆ.

ಕೃಷಿ ವಿಧಾನ

ಮಣ್ಣು ಮತ್ತು ಹವಾಗುಣ: ಈ ಸಸ್ಯವನ್ನು ಮರಳು ಮಿಶ್ರಿತ ಮತ್ತು ಕಲ್ಲಿನಿಂದ ಕೂಡಿದ ಮಣ್ಣಿನಲ್ಲಿ ಬೆಳೆಸಬಹುದಾಗಿದೆ. ಇದು ವಿಶಿಷ್ಟ ಹವಾಮಾನ ಮತ್ತು ಭೂಗುಣವುಳ್ಳ ಪ್ರದೇಶದಲ್ಲಿ ಬೆಳೆಯಬಲ್ಲಂತಹ ಸಸ್ಯವಾಗಿದ್ದರೂ, ಇದನ್ನು ಇತರ ಪ್ರದೇಶಗಳಲ್ಲೂ ಬೆಳೆಸಬಹುದು. ಈ ಸಸ್ಯದ ಬೆಳವಣಿಗೆಗೆ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಮಣ್ಣು ಅತ್ಯುತ್ತಮ.

ಸಸ್ಯಾಭಿವೃದ್ಧಿ: ಹಳೆಯದಾದ ಮರದ ಕಾಂಡದಿಂದ ಇದರ ಸಸ್ಯಾಭಿವೃದ್ಧಿ ಸಾಧ್ಯ. ೧೦ ಮಿ.ಮಿ. ದಪ್ಪದ ಒಂದು ಮೀಟರ್ ಉದ್ದದ ತುಂಡನ್ನು ನರ್ಸರಿ ಗಿಡದ ತಯಾರಿಗಾಗಿ ಬಳಸಬಹುದು. ನರ್ಸರಿ ಮಡಿಯಲ್ಲಿರುವ ಪ್ರತಿ ಗಿಡಕ್ಕೆ ೫ ಕಿ.ಗ್ರಾಂ ಹಟ್ಟಿಗೊಬ್ಚರ ಮತ್ತು ೨೫ ರಿಂದ ೫೦ ಗ್ರಾಂದಷ್ಟು ಯೂರಿಯಾವನ್ನು ವಾರ್ಷಿಕವಾಗಿ ಕೊಡಬೇಕು. ನರ್ಸರಿ ಗಿಡವನ್ನು ಜೂನ್‌-ಜುಲಾಯಿ ತಿಂಗಳುಗಳಲ್ಲಿ ಮಾಡಿ ಅಲ್ಪ ಪ್ರಮಾಣದ ನೀರನ್ನು ಒದಗಿಸಬೇಕು. ೧೦ ರಿಂದ ೧೫ ದಿನಗಳಲ್ಲಿ ಜೀವ ಮೂಡಲಾರಂಭಿಸುವ ಗಿಡ ಮುಂದಿನ ೧೦ ದಿನಗಳಲ್ಲಿ ಹಸಿರಾಗುತ್ತದೆ. ಈ ಗಿಡವನ್ನು ಒಂದು ವರ್ಷದ ಬಳಿಕ ನಾಟಿ ಮಾಡಬೇಕು.

ನೀರಾವರಿ: ಸ್ವಲ್ಪ ಪ್ರಮಾಣದ ನೀರಾವರಿಯನ್ನು ಬೇಡುವ ಈ ಸಸ್ಯಕ್ಕೆ ಬೇಸಿಗೆ ಕಾಲದಲ್ಲೂ ಹದವರಿತ ನೀರಾವರಿ ಬೆಳವಣಿಗೆಗೆ ಸಾಕಾಗುವುದು.

ಕೀಟ: ಈ ಸಸ್ಯಕ್ಕೆ ಬಿಳಿ ಇರುವೆಗಳ ಕಾಟ ಜಾಸ್ತಿ. ಇದರೊಂದಿಗೆ ಎಲೆ ಕೊರೆಯುವ ಹುಳಗಳ ಭಾದೆಯೂ ಇದೆ. ಇದರ ಹತೋಟಿಗಾಗಿ ಸಸ್ಯದ ತಳಭಾಗವನ್ನು ಹಟ್ಟಿಗೊಬ್ಬರದಿಂದ ಮುಚ್ಚಬೇಕು.

ಕೊಯ್ಲು: ನಿರೀಕ್ಷಿತ ಮಟ್ಟದ ಎತ್ತರವನ್ನು ಎಂಟರಿಂದ ಹತ್ತು ವರ್ಷದಲ್ಲಿ ತಲುಪಿದಾಗ ಇದರಿಂದ ಅಂಟನ್ನು ತೊಗಟೆಯಿಂದ ತೆಗೆಯಬಹುದು. ಈ ಕೊಯ್ಲು ದಶಂಬರದಿಂದ ಮಾರ್ಚ್‌‌ನ ತನಕ ಮಾಡಬಹುದು. ಅಂಟನ್ನು ೫ ವರ್ಷಗಳ ಕಾಲ ಶೇಖರಿಸಿಡಬಹುದು.

ಇಳುವರಿ: ಒಂದು ಮರದಲ್ಲಿ ವಾರ್ಷಿಕವಾಗಿ ಸರಾಸರಿ ೫೦೦ ರಿಂದ ೮೦೦ ಗ್ರಾಂ ನಷ್ಟು ಅಂಟನ್ನು ಸಂಗ್ರಹಿಸಬಹುದು.

ವೆಚ್ಚ: ಒಂದು ಹೆಕ್ಟೇರ್ ಭಾಂಡ ಕೃಷಿಗೆ ತಗಲುವ ಒಟ್ಟು ವೆಚ್ಚ ಸುಮಾರು ಎರಡೂವರೆ ಲಕ್ಷ ರೂಪಾಯಿಗಳು. ಒಂದು ಕಿಲೋಗ್ರಾಂ ಗುಗ್ಗುಲಕ್ಕೆ ಮಾರುಕಟ್ಟೆಯಲ್ಲಿ ಲಭಿಸಬಹುದಾದ ಬೆಲೆ ರೂಪಾಯಿ ೬೫ ರಿಂದ ೮೫ ಆಗಿದೆ.

ಮಾರುಕಟ್ಟೆ: ಭಾರತದಲ್ಲಿ ಗುಗ್ಗುಲಕ್ಕೆ ಹೆಚ್ಚಿನ ಬೇಡಿಕೆಯಿದ್ದು ಆಂತರಿಕ ಉತ್ಪಾದನೆ ಬೇಡಿಕೆಗೆ ಅನುಗುಣವಾಗಿಲ್ಲದ ಕಾರಣ ದೇಶವಿಂದು ಪಾಕಿಸ್ಥಾನ ಮತ್ತಿತರ ಏಶ್ಯಾದ ರಾಷ್ಟ್ರಗಳಿಂದ ಇದನ್ನು ಆಮದು ಮಾಡಿಕೊಳ್ಳುತ್ತಿದೆ.

ಉಪಯೋಗ: ಇದನ್ನು ಕೊಲೆಸ್ಟರಲ್‌ ಮತ್ತು ಊತನಿವಾರಕವಾಗಿ ಔಷಧಿಗಳಲ್ಲಿ ಉಇಪಯೋಗಿಸಲಾಗುತ್ತಿದೆ. ಇದು ಹೃದಯ ಸಂಬಂಧಿ ರೋಗಗಳ ನಿವಾರಣೆಗೆ ಒಂದು ಅತ್ಯಮೂಲ್ಯ ಮೂಲದ್ರವ್ಯವಾಗಿದೆ. ಆಂತರಿಕ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೃದ್ರೋಗಿಗಳ ಪ್ರಮಾಣ ಹೆಚ್ಚುತ್ತಿರುವ ಈ ಕಾಲದಲ್ಲಿ ಗುಗ್ಗುಲಕ್ಕೆ ಮುಂದಿನ ದಿನಗಳಲ್ಲಿ ಹೆಚ್ಚಿನ ಬೇಡಿಕೆ ಬರಬಹುದಾಗಿದೆ.