೧೬. ಪಾಷಾಣಭೇದ

ಪಾಷಾಣ ಭೇದದ ಔಷಧವನ್ನು ಮೂತ್ರಕಲ್ಲನ್ನು ನೀರಾಗಿಸಲು ಉಪಯೋಗಿಸುವುದರಿಂದ ಇದಕ್ಕೆ ಪಾಷಾಣ ಭೇದಕವೆಂಬ ಹೆಸರನ್ನು ನಿಘಂಟುಕಾರರು ಕೊಟ್ಟಿರುವರು. ಇದನ್ನು ಭಾರತದ ಕರ್ನಾಟಕ , ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಕಾಣಬಹುದು. ಇದರ ಬೇರನ್ನು ಔಷಧೀಯ ತಯಾರಿಯಲ್ಲಿ ಬಳಸಲಾಗುತ್ತದೆ.

ಸಸ್ಯ ಪರಿಚಯ

ಸುಮಾರು ೧-೫ ಮೀಟರು ಎತ್ತರಕ್ಕೆ ನೇರವಾಗಿ ಬೆಳೆಯಬಲ್ಲ ಸಸ್ಯವಿದಾಗಿದೆ. ಲ್ಯಾಮಿಯೇಸಿಯಾ ಕುಟುಂಬಕ್ಕೆ ಸೇರಿದ ಈ ಸಸ್ಯಕ್ಕೆ ವೈಜ್ಞಾನಿಕವಾಗಿ ‘ಕೊಲಿಯಸ್‌ ಬರ್ಬಟಸ್‌’ ಎಂದು ಕರೆಯಲಾಗುತ್ತದೆ. ಇದಕ್ಕಿರುವ ಇನ್ನಿತರ ಹೆಸರುಗಳೆಂದರೆ ಪಾಕನ್‌ಬೇದ್‌, ಜುಂಟಿಯಾನ, ಮಕ್ಕರಿಬೇರು, ಕೋಲಿಯಸ್‌.

ಕೃಷಿ ವಿಧಾನ

ಮಣ್ಣು ಮತ್ತು ಹವಾಗುಣ: ಮರಳು ಮಿಶ್ರಿತ ಕೆಂಪುಮಣ್ಣು ಇದರ ಕೃಷಿಗೆ ಯೋಗ್ಯ. ಕಡಿಮೆ ತೇವಾಂಶವುಳ್ಳ ಮೆದು ಮಣ್ಣು ಇದರ ವಿಪುಲ ಬೆಳವಣಿಗೆಗೆ ಸೂಕ್ತ. ನೀರಾವರಿ ವ್ಯವಸ್ಥೆಯಿದ್ದಲ್ಲಿ ಎಲ್ಲಾ ಹವಾಗುಣದಲ್ಲೂ ಇದರ ಕೃಷಿ ಸಾಧ್ಯ.

ಸಸ್ಯಾಭಿವೃದ್ಧಿ ಮತ್ತು ನಾಟಿ ವಿಧಾನ: ಸಸ್ಯದ ದಂಟು ಮತ್ತು ಬೀಜಗಳಿಂದ ಸಸ್ಯಾಭಿವೃದ್ಧಿ ಸಾಧ್ಯ. ಮೇ-ಜೂನ್‌ ತಿಂಗಳುಗಳಲ್ಲಿ ೧೦ ರಿಂದ ೧೨ ಸೆಂ.ಮೀ ಉದ್ದದ ದಂಟವಗನ್ನು  ಗೊಬ್ಬರಭರಿತವಾದ ನರ್ಸರಿ ಮಡಿಗಳಲ್ಲಿ ನಾಟಿ ಮಾಡಿದಲ್ಲಿ ಸಸ್ಯಾಭಿವೃದ್ಧಿ ಯಾಗುವುದು. ಈ ತುಂಡುಗಳು ಒಂದು ತಿಂಗಳೊಳಗೆ ಬೆಳವಣಿಗೆಯನ್ನು ತೋರಿಸಬಲ್ಲದು. ಈ ಸಸ್ಯಗಳನ್ನು ಜುಲಾಯಿಕ-ಅಗೋಸ್ಟು ಅವಧಿಯಲ್ಲಿ ೨೦ X ೨೦ ಸೆಂ.ಮೀ ಅಂತರದಲಲ್‌ಇ ನಾಟಿ ಮಾಡಬೇಕು. ಒಂದು ಎಕರೆ ಭೂಮಿಗೆ ಸುಮಾರು ೩೪,೦೦೦ ಸಸ್ಯಗಳು ಅಗತ್ಯ.

ಕಳೆ ನಿರ್ವಹಣೆ: ನಿರಂತರವಾದ ಕಳೆ ನಿರ್ವಹಣೆ ಅಗತ್ಯ.

ಗೊಬ್ಬರ: ೪ ಟನ್‌ಗಳಷ್ಟು ಕಾಂಪೋಸ್ಟು ಅಥವಾ ಹಟ್ಟಿಗೊಬ್ಬರ ಒಂದು ಎಕರೆ ಭೂಮಿಗೆ ಬೇಕಾಗುವುದು.

ನೀರಾವರಿ: ನಾಟಿ ಮಾಡಿದ ಬಳಿಕ ಆರಂಭದ ಹಂತದಲ್ಲಿ ಮೂರುದಿನಗಳಿಗೊಮ್ಮೆ ನೀರುಣಿಸಬೇಕು. ಗಿಡ ಬೇರೂರಿದ ನಂತರ ಅಗತ್ಯಕ್ಕನುಗುಣವಾಗಿ ನೀರಾವರಿ ವ್ಯವಸ್ಥೆ ವಾರಕ್ಕೊಮ್ಮೆ ಇಲ್ಲವೆ ಹದಿನೈದು ದಿನಗಳಿಗೊಮ್ಮೆ ಆದರೆ ಸಾಕು.

ಕೊಯ್ಲು: ಸುಮಾರು ೧೫೦ ದಿನಗಳಿಗಾಗುವಾಗ ಇದು ಪ್ರಬುದ್ಧವಾಗುವುದರಿಂದ ಇದನ್ನು ಕೊಯ್ಲು ಮಾಡಬಹುದು. ಸಾಮಾನ್ಯವಾಗಿ ನವಂಬರಿನಿಂದ ದಶಂಬರ ತಿಂಗಳೊಳಗೆ ಇದರ ಕಟಾವು ಸಾಧ್ಯ. ಬೇರನ್ನು ಭೂಮಿಯಿಂದ ಎಬ್ಬಿಸಿದ ಬಳಿಕ ಶುಚಿಗೊಳಿಸಿ, ಸಣ್ಣಸಣ್ಣ ತುಂಡುಗಳನ್ನಾಗಿಸಿ ಒಣಗಿಸಿ ಶೇಖರಿಸಿಡಬೇಕು. ಈ ಒಣ ತುಂಡುಗಳನ್ನು ಪಾಲಿಥಿನ್‌ ಚೀಲಗಳಲ್ಲಿ ೨ ವರ್ಷ ಶೇಖರಿಸಿಡಬಹುದು.

ಇಳುವರಿ: ಒಂದು ಎಕರೆ ಪಾಷಾಣಭೇದ ವ್ಯವಸಾಯದಿಂದ ಸುಮಾರು ೬೦೦ ರಿಂದ ೧೦೦೦ ಕಿ.ಗ್ರಾಂ ಬೇರನ್ನು ಪಡೆಯಲು ಸಾಧ್ಯ.

ಆದಾಯ: ಒಂದು ಎಕರೆ ಪಾಷಾಣ ಭೇದ ಕೃಷಿಯಿಂದ ಸುಮಾರು ೫೦ ರಿಂದ ೭೫ ಸಾವಿರಗಳಷ್ಟು ನಿವ್ವಳ ಆದಾಯ ಗಳಿಸಲು ಸಾಧ್ಯ.

೧೭. ಬಿಲ್ವ

ಬಿಲ್ವ ಮರವನ್ನು ಅರಿಯದವರಾರೂ ನಮ್ಮಲಿಲ್ಲ. ಶಿವನಿಗೆ ಅತ್ಯಂತ ಪ್ರಿಯವಾದ ಬಿಲ್ವಪತ್ರೆ ಹಿಂದೂಗಳ ಮನೆಯಂಗಳದಲ್ಲಿ ಲಭ್ಯ. ಆದರೆ ಇದರ ಔಷಧೀಯ ಮಹತ್ವವನ್ನು ನಮ್ಮಲ್ಲಿ ಬಹುಮಂದಿ ಅರಿತಿರಲಾರರು . ಇದರ ಎಲೆ, ಹಣ್ಣು ಮತ್ತು ಬೇರುಗಳಲ್ಲಿ ಔಷದೀಯ ಗುಣಗಳಿದ್ದು, ಇವಕ್ಕಿಂದು ಆಗಾಧ ಬೇಡಿಕೆಯಿದೆ

ಸಸ್ಯ ಪರಿಚಯ

ಬಿಲ್ವದ ಸಸ್ಯಶಾಸ್ತ್ರೀಯ ಹೆಸರು ‘ಎರ್ಗೀಮಾರ್ಮಿ ಲೋಸ್‌’. ಇದು ರೂಚೇಸಿ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ. ಇದು ಸುಮಾರು ೬ ರಿಂದ ೧೦ ಮೀಟರ್ ಎತ್ತರಕ್ಕೆ ನೇರವಾಗಿ ಬೆಳೆಯುವ ಮರವಾಗಿದ್ದು, ಇದರಲ್ಲಿ ೧ ಅಂಗುಲದಷ್ಟು ಉದ್ದದ ಮುಳ್ಳುಗಳಿರುತ್ತದೆ. ಇದರ ಸಂಯುಕ್ತ ಎಲೆಯಲ್ಲಿ ೩ ಕಿರುಪತ್ರೆಗಳಿರುವುದು. ಬೇಸಿಗೆಯಲ್ಲಿ ಇದರ ಎಲೆಗ ಳು ಉದುರಿ ಹೋಗುವುವು. ಇದು ಹೂ ಬಿಡುವ ಕಾಲ ಮೇ ಯಿಂದ ಜುಲಾಯಿಗಳಲ್ಲಿ. ಇದರ ಹೂ ಬಿಳಿ ಮಿಶ್ರಿತ ಹಸಿರು ಬಣ್ಣದ್ದಾಗಿದೆ. ಗಟ್ಟಿಯಾಗಿರುವ ಅಂಡಾಕಾರದ ಬೂದು ಬಣ್ಣದ ಕಾಯಿ ಇದರದ್ದಾಗಿದೆ. ಇದರೊಳಗಿರುವ ಬೀಜವು ಅಂಟು ದ್ರವದಿಂದ ಕೂಡಿದೆ.

ಮೂಲ ಮತ್ತು ಹಂಚಿಕೆ: ಬಿಲ್ವದ ಬಗ್ಗೆ ೮೦೦ B.C ಗಳಷ್ಟು ಹಿಂದೆ ಉಲ್ಲೇಖವಾಗಿದೆ. ಈ ಮರವು ದಟ್ಟದಾದ ಅರಣ್ಯ ಪ್ರದೇಶಗಳಲ್ಲಿ ಬೆಳೆಯುತ್ತದೆ. ಭಾರತ, ಬರ್ಮಾ, ಪಾಕಿಸ್ಥಾನ, ಮತ್ತು ಬಾಂಗ್ಲಾ ದೇಶಗಳಲ್ಲಿ ಇದು ಕಾಣ ಸಿಗುವುದು. ಭಾರತದಾದ್ಯಂತ ಇದನ್ನು ಒಂದು ಪವಿತ್ರ ಮರವೆಂದು ಬೆಳೆಸುತ್ತಾರೆ. ಈಜಿಪ್ಟ್‌, ಪಾಲಿಫೈನ್ಸ್‌, ಜಾವಾ, ಸುರಿನಾಮ್‌ ಮತ್ತು ಟ್ರಿನಿಡಾಡ್‌ಗಳಲ್ಲೂ ಇದು ಲಭ್ಯ.

ಕೃಷಿ ವಿಧಾನ:

ಮಣ್ಣು ಮತ್ತು ಹವಾಗುಣ: ಉತ್ತಮ ಮರಳು ಮಿಶ್ರಿತ ಮೆತ್ತನೆ ಹಣ್ಣು ಇದರ ಕೃಷಿಗೆ ಸೂಕ್ತ. ಬಿಲ್ವದ ಕೃಷಿಗೆ ಒಣಹವೆ ಅಗತ್ಯ. ಹೆಚ್ಚಿನ ಅವಧಿಯ ಒಣಹವೆಯಿದ್ದಲ್ಲಿ ಮಾತ್ರ ಇದು ಹಣ್ಣು ಬಿಡುವುದು. ಬೇರೆ ಯಾವುದೇ ಹಣ್ಣುಗಳು ಬೆಳೆಯಲಾರದ ಭೂಮಿ ಮತ್ತು ಹವೆಯಲ್ಲಿ ಇದು ಬೆಳೆಯಬಲ್ಲದು.

ಸಸ್ಯಾಭಿವೃದ್ಧಿ: ಬಿಲ್ವದ ಸಸ್ಯಾಭಿವೃದ್ಧಿ ಇದರ ಬೀಜ, ಬೇರು ಗಳಿಂದ ಸಾಧ್ಯ. ಬೀಜಗಳನ್ನು ಜೂನ್‌ನಿಂದ ಜುಲಾಯಿ ತಿಂಗಳುಗಳಲ್ಲಿ ಬಿತ್ತಬೇಕು. ಬಿತ್ತಿದ ಬೀಜಗಳು ಮೊಳಕೆಯೊಡೆದು ನಾಟಿ ಮಾಡಲು ಕನಿಷ್ಠ ಒಂದು ವರ್ಷವಾದರೂ ಬೇಕು.

ನಾಟಿ ವಿಧಾನ: ಬಿಲ್ವದ ಸಸಿಯನ್ನು ಮಳೆಗಾಲದಲ್ಲಿ ನಾಟಿ ಮಾಡಬೇಕು. ನಾಟಿ ಮಾಡುವಾಗ ೧೦ ರಿಂದ ೧೨ ಮೀಟರ್ ಅಂತರವನ್ನಿಟ್ಟುಕೊಳ್ಳಬೇಕು. ಕಸಿ ವಿಧಾನದ ಗಿಡಗಳಾಗಿದ್ದಲ್ಲಿ ೫ ವರ್ಷಗಳಲ್ಲಿ ಹಣ್ಣನ್ನು ನೀಡುವ ಬಿಲ್ವ, ಬೀಜದ ಮೂಲಕದ ಗಿಡವಾಗಿದ್ದಲ್ಲಿ ಇದಕ್ಕೆ ೮ ವರ್ಷಗಳು ಬೇಕಾಗುವುದು.

ಗೊಬ್ಬರ: ಆರಂಭದ ಹಂತದಲ್ಲಿ ಅಲ್ಪ ಪ್ರಮಾಣದ ಹಟ್ಟಿ ಗೊಬ್ಬರ ಕೊಡಬೇಕು. ಇದರೊಂದಿಗೆ ಫಲವತ್ತಾದ ಮಣ್ಣನ್ನು ಕೂಡಿ ಹಾಕಬೇಕಲು. ಗಿಡಕ್ಕೆ ೮ ವರ್ಷ ಪ್ರಾಯವಾದಾಗ ವರ್ಷಕ್ಕೆ ಗಿಡವೊಂದರ ೮೦ ಕಿ.ಗ್ರಾಂ ಹಟ್ಟಿಗೊಬ್ಬರ, ೪೮೦ ಗ್ರಾಂ ಸಾರಜನಕ, ೩೨೦ ಗ್ರಾಂ ರಂಜಕ ಮತ್ತು ೪೮೦ ಗ್ರಾಂ ಪೊಟ್ಯಾಷ್‌ ಕೊಡಬೇಕು. ಇದರೊಂದಿಗೆ ಕಳೆಯಿದ್ದಲ್ಲಿ ಅದನ್ನು ನಿರ್ಮೂಲನೆ ಮಾಡಬೇಕು.

ನೀರಾವರಿ: ಗಿಡದ ಆರಂಭದ ಹಂತದ ಬೆಳವಣಿಗೆಗೆ ಆಗಾಗ ನೀರುಣಿಸಬೇಕು. ಇದು ವಾರಕ್ಕೊಮ್ಮೆ ಆದಲ್ಲಿ ಉತ್ತಮ. ಗಿಡ ಬಲಿತ ಬಳಿಕ ಅಲ್ಪ ಪ್ರಮಾಣದ ನೀರಾವರಿ ಗೊಬ್ಬರ ಕೊಟ್ಟ ಬಳಿಕ ಆಗಬೇಕು.

ಕೀಟ ಮತ್ತು ರೋಗ: ಬಿಲ್ವಕ್ಕೆ ಸುಮಾರು ಒಂದು ಡಜನ್‌ಗಿಂತ ಹೆಚ್ಚು ಕೀಟಗಳ ಭಾದೆ ಕಂಡು ಬಂದಿದೆ. ಇವನ್ನು ಕೀಟನಾಶಕಗಳ ಬಳಕೆಯಿಂದ ಹತೋಟಿಗೆ ತರಲು ಸಾಧ್ಯ.

ಕೊಯ್ಲು: ಬಲಿತ ಗಿಡದಿಂದ ಎಲೆಗಳನ್ನು ಮಾರಾಟಕ್ಕಾಗಿ ಅಗೋಸ್ಟು ತಿಂಗಳಲ್ಲಿ ಕೊಯ್ಲು ಮಾಡಬಹುದು. ಇದರ ಕಾಯಿಗಳು ಹಣ್ಣಾಗಲು ಸುಮಾರು ಹನ್ನೊಂದು ತಿಂಗಳುಗಳು ಬೇಕು. ಈ ಕಾಯಿಗಳು ಹಳದಿ ಮಿಶ್ರಿತ ಹಸಿರು ಬಣ್ಣಕ್ಕೆ ತಿರುಗಿದಾಗ ಅವನ್ನು ಕೊಯ್ಯಬೇಕು. ಕೊಯ್ಲು ಮಾಡಿದ ಹಣ್ಣುಗಳನ್ನು ಗೋಣಿ ಚೀಲ, ಮರದ ಪೆಟ್ಟಿಗೆ ಇತ್ಯಾದಿಗಳಲ್ಲಿ ಪೇಪರಲ್ಲಿ ಸುತ್ತಿ ಶೇಖರಿಸಿಡಬೇಕು.

ಇಳುವರಿ: ಒಂದು ಬಿಲ್ವ ಮರದಿಂದ ವಾರ್ಷಿಕವಾಗಿ ಸುಮಾರು ೩೦೦ ರಿಂದ ೪೦೦ ಹಣ್ಣುಗಳನ್ನು ಪಡೆಯಬಹುದು. ಇದಕ್ಕೆ ಮಾರುಕಟ್ಟೆಯಲ್ಲಿ ಕಿ.ಗ್ರಾಂ ಒಂದರ ರೂಪಾಯಿ ೪೦ ರಿಂದ ೪೫ರ ತನಕ ಬೆಲೆಯಿದೆ. ಹಣ್ಣನ್ನು ಒಂದೂವರೆ ವರ್ಷ ಶೇಖರಿಸಿಡಬಹುದು.

ಉಪಯೋಗ: ಬಿಲ್ವದ ಪತ್ರೆ, ಹಣ್ಣು ಮತ್ತು ತೊಗಟೆಗಳನ್ನು ಔಷಧೀಯ ತಯಾರಿಗಾಗಿ ನಮ್ಮಲ್ಲಿಂದು ಬಳಸಲಾಗುತ್ತಿದೆ. ಇದನ್ನು ಮಧುಮೇಹ, ಸನ್ನಪಾತಜ್ವರ, ರಕ್ತಭೇದಿ ಇತ್ಯಾದಿಗಳ ಶಮನಕ್ಕಾಗಿ ಉಪಯೋಗಿಸಲಾಗುತ್ತಿದೆ. ಇದರಿಂದ ತಯಾರಾಗುವ ಔಷಧಗಳೆಂದರೆ ಬಿಲ್ವಪಂಚಕ, ಬಿಲ್ವಾಂಡಿ ಚೂರ್ಣ, ದಶಮೂಲಾರಿಷ್ಠ, ಬಿಲ್ವಾದಿ ಲೇಹ ಇತ್ಯಾದಿಗಳು.

೧೮. ಮಧುನಾಶಿನಿ

ಮಧುನಾಶಿನಿಯ ಎಲೆ ಮತ್ತು ಬೇರುಗಳನ್ನು ಮಧುಮೇಹ, ಲಿವರ್ ನ ತೊಂದರೆ, ಅಸ್ತಮಾ, ಕೆಮ್ಮು ಇತ್ಯಾದಿ ರೋಗಗಳ ಶಮನಕ್ಕಾಗಿರುವ ಔಷಧಿಗಳ ತಯಾರಿಯಲ್ಲಿ ಬಳಸಲಾಗುತ್ತದೆ. ಇದನ್ನು ಪಶ್ಚಿಮ ಘಟ್ಟ ಪ್ರದೇಶ, ಕೊಂಕಣ ಪ್ರದೇಶ, ತಮಿಳುನಾಡು, ಕರ್ನಾಟಕ, ಉತ್ತರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಪಂಜಾಬ್‌,ಹರ್ಯಾಣ, ಆಂಧ್ರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಕಾಣಬಹುದು.

ಸಸ್ಯ ಪರಿಚಯ

ಮಧುನಾಶಿನಿಗೆ ಸಸ್ಯಶಾಸ್ತ್ರದಲ್ಲಿ ‘ಜೈಮ್‌ನೇಮಾ ಸಿಲ್ವೆಸ್ಟ್ರಿ’ ಎಂದು ಕರೆಯುತ್ತಾರೆ. ಇದು ಅಸ್ಕ್ಲೆಪಿಯೆಡೇಸಿಯಾ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ. ಇದಕ್ಕೆ ಮೆಠಸಿಂಗೆ, ಗುಡುಮಾರ್ ಬುತಿ ಮುಂತಾದ ಹೆಸರುಗಳಿವೆ. ಮಧುನಾಶಿನಿ ಮರಕ್ಕೇರುವ ಸಸ್ಯವಾಗಿದ್ದು ಇದು ಸಣ್ಣದಾದ ಹಳದಿ ಹೂಗಳನ್ನು ಬಿಡುತ್ತದೆ. ಅರಣ್ಯ ಪ್ರದೇಶಗಳಲ್ಲಿ ಇದು ಸರ್ವೇ ಸಾಮಾನ್ಯವಾಗಿ ಕಾಣ ಸಿಗುವುದು.

ಕೃಷಿ ವಿಧಾನ:

ಮಣ್ಣು ಮತ್ತು ಹವಾಗುಣ: ಸಮುದ್ರ ಮಟ್ಟದಿಂದ ೬೦೦ ಮೀ ಎತ್ತರದ ತನಕ ಬೆಳೆಯಬಲ್ಲ ಮಧುನಾಶಿನಿ ಎಲ್ಲಾ ವಿಧದ ಮಣ್ಣು ಮತ್ತು ಹವೆಗೆ ಒಗ್ಗಬಲ್ಲದು.

ಸಸ್ಯಾಭಿವೃದ್ಧಿ: ಒಕ್ಟೋಬರ್-ದಶಂಬರದೊಳಗೆ ಬಲಿತ ಬೀಜಗಳನ್ನು ಸಂಗ್ರಹಿಸಿ ಪಾಲಿಥಿನ್‌ ಚೀಲಗಳಲ್ಲಿ ಇಲ್ಲವೆ ನರ್ಸರಿಗಳಲ್ಲಿ ನಾಟಿ ಮಾಡಬೇಕು. ಬಳ್ಳಿಯ ತುಂಡುಗಳನ್ನು ಪಾಲಿಥಿನ್‌ ಚೀಲಗಳಲ್ಲಿ ನಾಟಿ ಮಾಡಿಯೂ ಸಸ್ಯಾಭಿವೃದ್ಧಿಗೊಳಿಸಬಹುದು.

ನಾಟಿವಿಧಾನ: ಮೊದಲೇ ತಯಾರಿಸಿದ ಸಸ್ಯಗಳನ್ನು ನೀರಾವರಿ ಕೃಷಿಯಾಗಿದ್ದಲ್ಲಿ ಫೆಬ್ರವರಿ-ಮಾರ್ಚ್ ತಿಂಗಳುಗಳಲ್ಲಿ ನಾಟಿ ಮಾಡಬೇಕು. ಮಳೆಯಾದಾರಿತ ಕೃಷಿಯಾಗಿದ್ದಲ್ಲಿ ಮಳೆಗಾಲದ ಆರಂಭದಲ್ಲಿ ತುಂಡುಗಳನ್ನು ನಾಟಿ ಮಾಡಬಹುದು.

ಕಳೆ ನಿರ್ವಹಣೆ: ಮಳೆಗಾಲ ಮತ್ತು ಮಳೆಗಾಲದ ಬಳಿಕ ಆಗಾಗ್ಗೆ ಕಳೆ ನಿಯಂತ್ರಣ ಅತ್ಯಗತ್ಯ.

ಗೊಬ್ಬರ: ಕಾಂಪೋಸ್ಟು, ವರ್ಮಿಕಾಂಪೋಸ್ಟ್‌ ಇದರ ಕೃಷಿಗೆ ಸೂಕ್ತ. ಅಗತ್ಯವಿದ್ದಲ್ಲಿ ರಸಗೊಬ್ಬರದ ಬಳಕೆ ಮಾಡಬಹುದು.

ನೀರಾವರಿ: ವಾರಕ್ಕೊಮ್ಮೆ ಇಲ್ಲವೇ ಹದಿನೈದು ದಿನಗಳಿಗೊಮ್ಮೆಯಾದರೂ ನೀರುಣಿಸುತ್ತಿರಬೇಕು.

ಕೊಯ್ಲು: ಸಸ್ಯದ ನಾಟಿಯಾಗಿ ಒಂದು ವರ್ಷದಲ್ಲಿ ಎಲೆಗಳ ಕೊಯ್ಲು ಸಾಧ್ಯ. ಈ ಎಲೆಗಳನ್ನು ಸಾಮಾನ್ಯವಾಗಿ ಸಪ್ಟೆಂಬರ್ ನಿಂದ ಫೆಬ್ರವರಿಯೊಳಗೆ ಕೊಯ್ಲು ಮಾಡಬಹುದು. ಕೊಯ್ಲುನ ನಂತರ ಇವನ್ನು ಶುಚಿಗೊಳಿಸಿ ನೆರಳಿನಲ್ಲಿ ಒಣಗಿಸಬೇಕು. ಇದರ ಬೇರನ್ನು ಬೇಸಿಗೆಯಲ್ಲಿ ಸಂಗ್ರಹಿಸಿ ನೀರಿನಲ್ಲಿ ತೊಳದು ಶುಚಿಗೊಳಿಸಿ, ತುಂಡುಗಳಾಗಿಸಿ ಒಣಗಿಸಬೇಕು. ಮಾರುಕಟ್ಟೆಯಲ್ಲಿ ಇದರ ಬೆಲೆ ಕಲಿ.ಗ್ರಾಂ ಒಂದರ ರೂಪಾಯಿ ೧೨ ರಿಂದ ೧೫ರ ತನಕವಿದೆ. ಒಣ ಎಲೆಯನ್ನು ೧೧/೨ ವರ್ಷ ಶೇಖರಿಸಿಡಬಹುದು.

ಉಪಯೋಗ: ಡಯಾಬಿಟಿಸ್‌, ಹೃದಯ ಸಂಬಂಧಿ ಕಾಯಿಲೆ, ಅಸ್ತಮಾ ಮುಂತಾದವುಗಳನ್ನು ಹೋಗಲಾಡಿಸಲು ತಯಾರಾಗುವ ಔಷಧಿಗಳಲ್ಲಿ ಬಳಕೆ. ಇದರಿಂದ ತಯಾರಾಗುವ ಔಷಧಗಳೆಂದರೆ ಸರಿವದ್ಯಾಸವ, ಸರಿವದ್ಯಾವಲೇಹ,ಸರಿವದಿವಟಿ ಇತ್ಯಾದಿಗಳು.

೧೯. ಮುರುಗಲು

ಮುರುಗಲು ಅಥವಾ ಕೋಕಂ ಒಂದು ಬಹೂಪಯೋಗಿ ಸಸ್ಯ. ಇದರ ಎಲೆ,ಹಣ್ಣಿನ ಸಿಪ್ಪೆ, ಹಾಗೂ ಬೀಜಗಳನ್ನು ಆಯುರ್ವೇದ ಔಷಧಿಗಳ ತಯಾರಿಯಲ್ಲಿ ಬಳಸಲಾಗುತ್ತದೆ. ಈ ಸಸ್ಯದ ತವರೂರು ಭಾರತದ ಪಶ್ಚಿಮಘಟ್ಟ ಪ್ರದೇಶವಾಗಿದೆ. ಇದನ್ನು ಆಹಾರವಾಗಿಯೂ ನಮ್ಮಲ್ಲಿ ಉಪಯೋಗಿಸಲಾಗುತ್ತಿದೆ. ಆದರೆ ಇದರ ವಾಣಿಜ್ಯ ಮಹತ್ವದ ಬಗ್ಗೆ ಅರಿವು ನಮ್ಮಲ್ಲಿಯೂ ಮೂಡದೆ ಇರುವುದರಿಂದ ಇದಕ್ಕೀಗ ಮಹತ್ವ ಕೊಡಬೇಕಾಗಿದೆ.

ಸಸ್ಯ ಪರಿಚಯ

‘ಗಾರ್ಸಿನೀಯಾ ಇಂಡಿಕಾ’ ಎಂಬ ಸಸ್ಯನಾಮವುಳ್ಳ ಮುರುಗಲು ಕ್ಲೂಸಿಯೇಸಿಯಾ ಕುಟುಂಬಕ್ಕೆ ಸೇರಿದೆ. ಯಾವತ್ತೂ ಹಸಿರಾಗಿರುವ ನೇರವಾಗಿ ಬೆಳೆಯಬಲ್ಲ ಹಲವು ಕೊಂಬೆಗಳಿಂದ ಕೂಡಿದ ಸಸ್ಯ ಮುರುಗಲು. ನಿಂಬೆಗಾತ್ರದ ಕಡುಗೆಂಪು ಬಣ್ಣದ ಹಣ್ಣುಗಳನ್ನು ಕೊಡುವ ಈ ಸಸ್ಯ ಮುರುಗಲು. ನಿಂಬೆಗಾತ್ರದ ಕಡುಗೆಂಪು ಬಣ್ಣದ ಹಣ್ಣುಗಳನ್ನು ಕೊಡುವ ಈ ಸಸ್ಯ ೧೦ ರಿಂದ ೧೫ ಮೀಟರ್ ಎತ್ತರಕ್ಕೆ ಬೆಳೆಯಬಲ್ಲದು. ಸಂಸ್ಕೃತದಲ್ಲಿ ಇದನ್ನು ಸಾರಾಮ್ಲ, ಕೊಂಕಣಿಯ ಬೀರುಂಡ, ಮಲೆಯಾಳದಲ್ಲಿ ಪುನಂಪುಳಿ ಇತ್ಯಾದಿಯಾಗಿ ಕರೆಯುತ್ತಾರೆ. ಮುರುಗಲು ಗಿಡಗಳನ್ನು ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ಕಾಣಬಹುದು. ವಾಣಿಜ್ಯ ರೀತಿಯಲ್ಲಿ ಇದರ ಕೃಷಿಯನ್ನು ಮಹಾರಾಷ್ಟ್ರದ ರತ್ನಗಿರಿ, ಗೋವಾ, ಕರ್ನಾಟಕ, ಕೇರಳ, ದಕ್ಷಿಣ ಗುಜರಾತು, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಕೈಗೊಳ್ಳಲಾಗುತ್ತಿದೆ. ದೇಶದಲ್ಲಿಂದು ಸುಮಾರು ೧೨೦೦ ಹೆಕ್ಟೇರ್ ಪ್ರದೇಶದಲ್ಲಿ ಇದರ ಕೃಷಿ ಸಾಗುತ್ತಿದ್ದು ಹಣ್ಣಿನ ಉತ್ಪಾದನೆ ಸುಮಾರು ೧೧ ಸಾವಿರ ಟನ್‌ಗಳಾಗಿವೆ. ಇದರ ಬೆಣ್ಣೆಗೆ ನೆದರ್ ಲ್ಯಾಂಡ್‌, ಇಟಲಿ,ಜಪಾನ್‌,ಸಿಂಗಾಪುರ, ಇಂಗ್ಲೆಂಡ್‌, ಮಲಯಾ ಮುಂತಾದ ರಾಷ್ಟ್ರಗಳಲ್ಲಿ ಅಧಿಕ ಬೇಡಿಕೆಯಿದೆ.

ಕೃಷಿ ವಿಧಾನ

ಮಣ್ಣು ಮತ್ತು ಹವಾಗುಣ: ಬೇರೆ ಬೇರೆ ರೀತಿಯ ಮಣ್ಣು ಮತ್ತು ಹವಾಗುಣದಲ್ಲಿ ಇದರ ವ್ಯವಸಾಯ ಸಾಧ್ಯ.

ಸಸ್ಯಾಭಿವೃದ್ಧಿ: ಗಿಡಕ್ಕೆ ಕಸಿಕಟ್ಟುವುದರಿಂದ ಸಸ್ಯಾಭಿವೃದ್ಧಿ ಮಾಡಬಹುದು. ಬೀಜದಿಂದ ಸಸಿ ತಯಾರಿಕೆ ಕಷ್ಟ ಸಾಧ್ಯ. ಕಸಿಕಟ್ಟಿದ ಗಿಡವನ್ನು ಜುಲಾಯಿನಿಂದ ಅಗೋಸ್ಟು ತಿಂಗಳುಗಳೊಳಗೆ ನಾಟಿ ಮಾಡಬೇಕು.

ಗೊಬ್ಬರ: ಉತ್ತಮ ಇಳುವರಿಗಾಗಿ ಗಿಡವೊಂದರ ೨೦ ಕಿ.ಗ್ರಾಂ ಹಟ್ಟಿಗೊಬ್ಬರ ಅಗತ್ಯ. ರಸಗೊಬ್ಬರದ ಬಳಕೆಯಿಂದ ಅಧಿಕ ಇಳುವರಿ ಸಾಧ್ಯ.

ನೀರಾವರಿ: ಮಳೆಯಾಧಾರಿತ ಕೃಷಿ ಇದಾದ್ದರಿಂದ ನೀರಿನ ಅವಶ್ಯಕತೆಯಿಲ್ಲ.

ಕೊಯ್ಲು:  ಮಾರ್ಚ್‌‌ನಿಂದ ಮೇ ತಿಂಗಳೊಳಗೆ ಹಣ್ಣುಗಳನ್ನು ಕೊಯ್ಲು ಮಾಡಬಹುದು. ಬಳಿಕ ಇದನ್ನು ಒಣಗಿಸಬೇಕು. ಒಂದು ಹೆಕ್ಟೇರ್ ಕೃಷಿಯಿಂದ ಸುಮಾರು ೮.೫ ಟನ್‌ಗಳಷ್ಟು ಹಣ್ಣನ್ನು ಗಳಿಸಬಹುದು.

ವೆಚ್ಚ ಮತ್ತು ಆದಾಯ: ಒಂದು ಹೆಕ್ಟೇರ್ ಕೋಕಂ ಕೃಷಿಗೆ ತಗಲಬಹುದಾದ ವೆಚ್ಚ ಸುಮರು ೧೩,೦೦೦ ರೂಪಾಯಿಗಳು ಮತ್ತು ಲಭಿಸಬಹುದಾದ ಆದಾಯ ಸುಮಾರು ೪೭,೦೦೦ ರೂಪಾಯಿಗಳಷ್ಟು.

ಉಪಯೋಗ: ಇದನ್ನು ಪಿತ್ತದೋಷ, ರಕ್ತದೋಷ, ತಲೆತಿರುಗುವಿಕೆ ಇತ್ಯಾದಿಗಳ ನಿವಾರಣೆಗೆ ಉಪಯೋಗಿಸಬಹುದು. ಮೂಲವ್ಯಾಧಿ, ಅತಿಸಾರ ಮತ್ತು ಹೃದಯ ಸಂಬಂಧಿ ರೋಗಗಳಲ್ಲೂ ಇದರ ಬಳಿಕೆಯಾಗುತ್ತದೆ., ಇದರ ಹಣ್ಣನ್ನು ಲಘುಪಾನೀಯದ ತಯಾರಿಕೆಗಾಗಿ ಬಳಸಲಾಗುತ್ತಿದ್ದು, ಇದಕ್ಕೆ ಇತ್ತೀಚಿನ ವರ್ಷಗಳಲ್ಲಿ ಬೇಡಿಕೆಯೇರುತ್ತಿದೆ.

೨೦. ಲೋಳೆಸರ

ಅತ್ಯಮೂಲ್ಯ ಔಷಧೀಯ ಗುಣಗಳುಳ್ಳ ಸಸ್ಯ ಲೋಳೆಸರ.ಯಾವುದೇ ವಾತಾವರಣದಲ್ಲಿಯೂ ಬೆಳೆಯುವ ಇದಿಂದು ನಮ್ಮ ಹಳ್ಳಿ ಪ್ರದೇಶಗಳಲ್ಲಿ ಕಾಣಸಿಗುವುದು ಅಪರೂಪವಾಗಿದೆ. ಲೋಳೆಸರಕ್ಕೆ ಆಯುರ್ವೇದ ಔಷಧಿ ಪದ್ಧತಿ ಮತ್ತು ಆಧುನಿಕ ಸೌಂದರ್ಯವರ್ಧಕ ಕ್ರೀಮ್‌ಗಳ ತಯಾರಿಕೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಆದ್ದರಿಂದ ಇದನ್ನೊಂದು ಏಕ ಬೆಳೆ ಇಲ್ಲವೇ ಉಪಬೆಳೆಯಾಗಿ ಬೆಳೆಯಲು ಸಾಧ್ಯ. ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇದರ ಕೃಷಿ ಆರಂಭಗೊಂಡಿದೆ.

ಸಸ್ಯ ಪರಿಚಯ

‘ಲಿಲ್ಲಿಯೇಸಿಯಾ’ ಕುಟುಂಬಕ್ಕೆ ಸೇರಿದ ಲೋಳೆಸರದಲ್ಲಿ ಸುಮಾರು ೨೭೫ ಜಾತಿಗಳಿದ್ದರೂ ಕೇವಲ ಮೂರು ಮಾತ್ರ ವಾಣಿಜ್ಯ ರೀತಿಯ ಮಹತ್ವವನ್ನು ಹೊಂದಿವೆ. ಇದಕ್ಕೆ ಆಂಗ್ಲ ಭಾಷೆಯಲ್ಲಿ ಅಲೋಯಿ ಎನ್ನುತ್ತಾರೆ. ಲೋಳೆಸರ ಸುಮಾರು ೩೦ ರಿಂದ ೬೦ ಸೆಂ.ಮೀ. ಎತ್ತರಕ್ಕೆ ಬೆಳೆಯಬಲ್ಲ ಅಗಲ ಎಲೆಯುಳ್ಳ ಸಸ್ಯ. ಎಲೆಯ ಎರಡೂ ಬದಿಗಳಲ್ಲಿ ಮುಳ್ಳುಗಳಿದ್ದು, ಇದರ ಎಲೆ ಚೂಪಾಗಿದೆ. ನಮ್ಮಲ್ಲಿ ಕಂಡು ಬರುವ ಲೋಳೆಸರದಲ್ಲಿ ಮುಖ್ಯವಾಗಿ ೨ ವಿಧಗಳಿವೆ. ಮೊದಲನೆ ಗಿಡ ಹಚ್ಚಹಸಿರಿನದ್ದಾದರೆ ಎರಡನೆಯದ್ದು ಗಿಳಿಯ ಬಣ್ಣದ್ದಾಗಿ ಎಲೆಯಲ್ಲಿ ಸಣ್ನ ಚುಕ್ಕೆಗಳಿರುತ್ತದೆ. ಇದರ ಎಲೆಯನ್ನು ತುಂಡರಿಸಿದಾಗ ಒಂದು ದಪ್ಪನಾದರಸ ಹೊರಬರುವದು. ಈ ರಸವನ್ನು ಸಂಸ್ಕರಿಸಿ ಔಷಧಿಯಾಗಿ ಬಳಸಲಾಗುವುದು.

ಲೋಳೆಸರದ ಮೂಲ ದಕ್ಷಿಣ ಮತ್ತು ಪೂರ್ವ ಆಫ್ರಿಕಾ ಎನ್ನಲಾಗಿದೆ. ಬಳಿಕ ಇದು ವೆಸ್ಟ್‌ ಇಂಡಿಸ್‌, ಭಾರತ ಮತ್ತು ಚೀನಾಗಳಿಗೆ ಪಸರಿಸಿತು. ಪ್ರಕೃತ ಇದನ್ನು ವೆಸ್ಟ್‌ಇಂಡೀಸ್‌, ದಕ್ಷಿಣ ಅಮೇರಿಕಾದ ಉತ್ತರದ ಕರಾವಳಿ ಪ್ರದೇಶ ಮತ್ತು ಭಾರತದ ನಾನಾ ಭಾಗಗಳಲ್ಲಿ ವಾಣಿಜ್ಯ ರೀತಿಯಲ್ಲಿ ವ್ಯವಸಾಯ ಮಾಡಲಾಗುತ್ತಿದೆ.

ಕೃಷಿ ವಿಧಾನ

ಮಣ್ಣು ಮತ್ತು ಹವಾಗುಣ: ಭಾರತದಾದ್ಯಂತ ಬೆಳೆಯಬಲ್ಲ ಈ ಸಸ್ಯ ಒಣ ಪ್ರದೇಶ ಯಾ ಉಷ್ಣವಿರುವಲ್ಲಿ ಅಧಿಕವಾಗಿ ಬೆಳೆಯಬಲ್ಲದು. ಈ ಸಸ್ಯದ ಬೆಳವಣಿಗೆಗೆ ಯಾವುದೇ ರೀತಿಯ ಮಣ್ಣು ಆಗಬಹುದು. ಆದರೆ ನೀರು ಇಂಗಿ ಹೋಗುವಂತಿರಬೇಕು.

ಸಸ್ಯಾಭಿವೃದ್ಧಿ: ಈ ಸಸ್ಯವನ್ನು ಬಲಿತ ಸಸ್ಯದ ಬೇರುಗಳಿರುವ ತುಂಡುಗಳಿಂದ ಅಭಿವೃದ್ಧಿಪಡಿಸಬಹುದಾಗಿದೆ. ಇದರ ಕೃಷಿಯನ್ನು  ಮಾಡುವ ಭೂಮಿಯನ್ನು ಕನಿಷ್ಠ ೨ ಬಾರಿ ಉಳುಮೆಯಾಗಿ ಮಾಡಿ ಅಲ್ಲಿರುವ ಕಳೆಯನ್ನು ತೆಗೆದು ಹಾಕಬೇಕು. ಈ ಭೂಮಿಯಲ್ಲಿ ನೀರಿಂಗಿಸಲು ಸಣ್ಣದಾದ ಕಾಲುವೆಗಳನ್ನು ತೋಡಬೇಕು. ಈ ಭೂಮಿಗೆ ಸುಮಾರು ೨೫ ಟನ್‌ / ಹೆಕ್ಟೇರೊಂದರ ಹಟ್ಟಿಗೊಬ್ಬರ ಕೊಟ್ಟು ಹದಗೊಳಿಸಬೇಕು.

ನಾಟಿ ವಿಧಾನ: ೬೦X ೩೦ ಸೆಂ.ಮೀ. ಅಂತರದಲ್ಲಿ ಸಸ್ಯವನ್ನು ನಾಟಿ ಮಾಡಬಹುದು. ನಾಟಿ ಮಾಡುವಾಗ ಸುಮಾರು ೧೫ ರಿಂದ ೧೮ ಸೆಂ.ಮೀ. ಉದ್ದದ ಬೇರಿನ ಮುಕ್ಕಾಲು ಭಾಗ ಭೂಮಿಯೊಳಗೆ ಇರುವಂತೆ ನೋಡಬೇಕು. ಮಾರ್ಚಿನಿಂದ ಜೂನ್‌ ನಾಟಿಗೆ ಸೂಕ್ತ ಕಾಲ.

ನೀರಾವರಿ: ನಾಟಿಯಾದ ತಕ್ಷಣ ಕೃಷಿ ಭೂಮಿಗೆ ಹದವರಿತ ನೀರಾವರಿ ಅಗತ್ಯ. ಬಳಿಕ ಭೂಮಿಯಲ್ಲಿರುವ ತೇವಾಂಶಕ್ಕನುಗುಣವಾಗಿ ನೀರುಣಿಸಬೇಕು. ಸಾಮಾನ್ಯವಾಗಿ ಈ ಕೃಷಿಗೆ ಕೊಯ್ಲಿಗಿಂತ ಮೊದಲು ನಾಲ್ಕರಿಂದ ಐದು ಬಾರಿ ನೀರುಣಿಸಿದರೆ ಸಾಲಕು. ನೀರುಣಿಸುವಾಗ ಗಿಡದ ತಳಭಾಗದಲ್ಲಿ ನೀರು ನಿಲ್ಲದಂತೆ ಜಾಗರೂಕರಾಗಿರಬೇಕಕು.

ಕಳೆ ನಿರ್ವಹಣೆ: ಉತ್ತಮ ಬೆಳವಣಿಗೆಗಾಗಿ ಕೃಷಿ ಭೂಮಿಯಲ್ಲಿರುವ ಕಳೆಯನ್ನು ವರ್ಷದಲ್ಲಿ ೨ ಬಾರಿಯಾದರೂ ತೆಗೆಯಬೇಕು.

ಕೊಯ್ಲು ಮತ್ತು ಇಳುವರಿ: ನಾಟಿಯಾಗಿ ೮ ತಿಂಗಳಲ್ಲಿ ಕೊಯ್ಲು ಸಾಧ್ಯ. ಕೊಯ್ಲಿನ ಸಮಯದಲ್ಲಿ ಗಿಡವನ್ನು ತೆಗೆಯಬೇಕು. ತುಂಡಾದ ಸಸ್ಯಗಳು ಅಲ್ಲೇ ಹೊಸ ಬೇರನ್ನು ಬಿಡುವುದರಿಂದ ಅವನ್ನು ಮುಂದಿನ ನಾಟಿಗಾಗಿ ಬಳಸಬಹುದು. ಸಾಮಾನ್ಯವಾಗಿ ಈ ಸಸ್ಯಗಳು ೨ನೇ ವರ್ಷದಿಂದ ಉತ್ತಮ ಇಳುವರಿ ಕೊಡಬಹುದಾಗಿದ್ದು, ಇದು ೫ ವರ್ಷಗಳ ತನಕ ಮುಂದುವರಿಯಬಲ್ಲದು. ಒಂದು ಹೆಕ್ಟೇರು ಲೋಳೆಸರ ಕೃಷಿಯಿಂದ ಸುಮಾರು ೧೦ ಸಾವಿರದಿಂದ ೧೨ ಸಾವಿರ ಕಿ.ಗ್ರಾಂಗಳಷ್ಟು ಎಲೆಯ ಇಳುವರಿ ಪಡೆಯಲು ಸಾಧ್ಯ. ಒಂದು ಕಿಲೋ ಎಲೆಗೆ ಕನಿಷ್ಠ ರೂಪಾಯಿ ೨ ಆಗಿದ್ದಲ್ಲಿ ಒಟ್ಟಾಗಿ ಮೂರು ಕೊಯ್ಲು ಮಾಡಿದಾಗ ಸುಮಾರು ೬೦ ರಿಂದ ೭೫ ಸಾವಿರಗಳಷ್ಟು ಆದಾಯ ದೊರಕಲು ಸಾಧ್ಯ.

ಸಂಸ್ಕರಣೆ: ಲೋಳೆಸರದ ಎಲೆಗಳನ್ನು ಸಣ್ಣ ತುಂಡುಗಳನ್ನಾಗಿ ಮಾಡಿ ಬಾಣಲೆಯಲ್ಲಿ ಸಣ್ಣದಾದ ಬೆಂಕಿ ಉರಿಯಲ್ಲಿ ಕಾಯಿಸಿದಾಗ ಬರುವ ರಸವನ್ನು ಬಟ್ಟೆಯ ಮೂಲಕ ಸೋಸಿ ತೆಗೆಯಬೇಕು. ಈ ರಸ ಔಷಧಿಗೆ ಉಪಯೋಗಿಸಬಹುದು. ಲೋಳೆಸರಕ್ಕೆ ಹೆಚ್ಚಿನ ಬೇಡಿಕೆ ಮುಂಬೈನಲ್ಲಿಕರುವ ಔಷಧೀಯ ಸಸ್ಯಗಳ ವ್ಯಾಪಾರಸ್ಥರಿಂದಾಗಿದ್ದು, ಸ್ಥಳೀಯವಾಗಿ ಔಷಧೀಯ ತಯಾರಕರು ಇದನ್ನು ಖರೀದಿಸುತ್ತಾರೆ.

ಉಪಯೋಗ: ಲೋಳೆಸರದ ರಸವನ್ನು ಮೂಲವ್ಯಾದಿ, ಮುಟ್ಟುದೋಷ, ಗಾಯಗಳ ಗುಣಪಡಿಸುವಿಕೆ, ಕ್ಯಾನ್ಸರ್, ಕಣ್ಣು ನೋವು, ಇತ್ಯಾದಿಗಳಲ್ಲಿ ಬಳಸುತ್ತಾರೆ. ಇತ್ತೀಚೆಗೆ ಇದರ ರಸವನ್ನು ಏಡ್ಸ್‌ ರೋಗಿಗಳಿಗೂ ಕೊಟ್ಟು ಪ್ರಯೋಗ ನಡೆಸುತ್ತಿದ್ದಾರೆ. ಇದರಿಂದ ತಯಾರಾಗುವ ಕುಮಾರಿ ಆಸವ ಮಾರುಕಟ್ಟೆಯಲ್ಲಿ ಲಭ್ಯ.