೧೧. ತುಳಸಿ

ತುಳಸಿಯ ಪರಿಚಯ ಇಲ್ಲದಿರುವವರು ಯಾರೂ ಇರಲಾರರು. ಇದನ್ನು ಭಾರತದಲ್ಲಿ ಅತ್ಯಂತ ಪವಿತ್ರ ಸಸ್ಯ ಎಂದು ಪರಿಗಣಿಸಲಾಗುತ್ತಿದೆ. ತುಳಸಿಗೆ ಅನಾದಿಕಾಲದಿಂದಲೂ ಸಾಮಾಜಿಕ ಮತ್ತು ಆರ್ಥಿಕ ಮೌಲ್ಯವಿದೆ.

‘ಓಸಿಯಂ’ ಉಪವರ್ಗದ ಲ್ಯಾಮಿಯೇಸಿ ಕುಟುಂಬಕ್ಕೆ ಸೇರಿದ ತುಳಸಿ ಸಸ್ಯದಲ್ಲಿ ಸುಮಾರು ೧೫೦ ಪ್ರಭೇದಗಳಿವೆ. ಓಸಿಯಂನ ಹೆಚ್ಚಿನ ಪ್ರಭೇದಗಳು ಆಫ್ರಿಕಾದ ಶೀತವಲಯದ ಮಳೆ ಬೀಳುವ ಅರಣ್ಯ ಪ್ರದೇಶದಿಂದ ಬಂದಿದ್ದು, ಇವು ಸಮುದ್ರಮಟ್ಟದಿಂದ ಸುಮಾರು ೧೮೦೦ ಮೀ ಎತ್ತರದವರೆಗಿನ ಪ್ರದೇಶಗಳಲ್ಲಿ ಕಾಣಸಿಗುತ್ತವೆ. ತುಳಸಿಯನ್ನು ಇಂದು ವಿಶ್ವದಾದ್ಯಂತ ಕಾಣಬಹುದಾಗಿದ್ದರೂ, ಉಷ್ಣವಲಯದಲ್ಲಿ ಇದು ಅಧಿಕ ಪ್ರಮಾಣದಲ್ಲಿ ಬೆಳೆಯುತ್ತದೆ. ಸಮಶೀತೋಷ್ಣ ಪ್ರದೇಶದಲ್ಲಿ ಸಾಮಾನ್ಯವಾಗಿ ಮತ್ತು ಶೀತವಲಯದಲ್ಲಿ ಕಡಿಮೆ ಪ್ರಮಾಣದಲ್ಲಿ ಬೆಳೆಯುತ್ತದೆ.

ತುಳಸಿಯಲ್ಲಿ ಶ್ರೀ ತುಳಸಿ, ಕೃಷ್ಣ ತುಳಸಿ, ಸುಗಂಧ ತುಳಸಿ, ಕಾಮಕಸ್ತೂರಿ , ಕರ್ಪೂರತುಳಸಿ, ರಾಮ ತುಳಸಿ, ರಕ್ತತುಳಸಿ, ಕ್ಷುದ್ರಪತ್ರ ತುಳಸಿ ಇತ್ಯಾದಿಗಳಿದ್ದರೂ, ಇವುಗಳ ಪೈಕಿ ಕಾಮಕಸ್ತೂರಿ ಮತ್ತು ಕರ್ಪೂರ ತುಳಸಿಗಳಿಗೆ ವಾಣಿಜ್ಯ ದೃಷ್ಟಿಯಿಂದ ಪ್ರಾಮುಖ್ಯತೆಯಿದೆ.

೧೨. ಕಾಮಕಸ್ತೂರಿ

ಕಾಮಕಸ್ತೂರಿಯನ್ನು ‘ಪ್ರೆಂಚ್‌ ಬೆಸಿಲ್‌’ ಅಥವಾ’ ರೋಮನ್‌ ಬೆಸಿಲ್‌’ ಎಂದು ಕರೆಯುತ್ತಾರೆ. ಇದರ ಗಿಡಗಳಿಂದ ಸಂಗ್ರಹಿಸುವ ತೈಲವನ್ನು ‘ಸ್ಟೀಟ್‌ ಬೆಸಿಲ್‌ ಓಯಿಲ್‌’ ಎಂದು ಕರೆಯಲಾಗುತ್ತದೆ. ಈ ಎಣ್ಣೆಯನ್ನು ಬ್ರೆಡ್‌, ಬಿಸ್ಕತ್ತು, ಕೇಕ್‌ಗಳ ತಯಾರಿಯಲ್ಲಿ, ಮಾಂಸಭಕ್ಷ್ಯ, ಉಪ್ಪಿನಕಾಯಿ ಮತ್ತು ಪಾನೀಯಗಳಿಗೆ ಸುವಾಸನೆ ಕೊಡಲು, ದಂತ ಮತ್ತು ಬಾಯಿ ಶುದ್ಧೀಕರಣ ಔಷಧಿಗಳ ಮತ್ತು ಪರಿಮಳ ದ್ರವ್ಯಗಳ ತಯಾರಿಯಲ್ಲಿ ಬಳಸಲಾಗುತ್ತದೆ. ಈ ಎಣ್ಣೆಯು ಕ್ರಿಮಿಕೀಟಗಳನ್ನು ನಾಶ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಕಾಮ ಕಸ್ತುರಿ ಸಸ್ಯ ಭೂಮಿಯಲ್ಲಿ ತನ್ನಿಂದ ತಾನಾಗಿ ಬೆಳೆಯುವುದು. ಇದು ಸುಮಾರು ೩೦ ರಿಂದ ೬೦ ಸೆಂ.ಮೀ. ಎತ್ತರಕ್ಕೆ ನೆಟ್ಟಗಾಗಿ ಬೆಳೆಯಬಲ್ಲ ಸಸ್ಯ. ಇದರ ಸಸ್ಯಭಾಗದಲ್ಲೆಲ್ಲಾ ತೈಲ ಗ್ರಂಥಿಗಳಿದ್ದು ಇವು ವಿಶಿಷ್ಟ ಸುವಾಸನೆಯನ್ನು ಹೊರಹೊಮ್ಮುತ್ತದೆ. ಇದರ ಎಲೆ ಸುಮಾರು ೩.೭೫ ರಿಂದ ೫ ಸೆಂ.ಮೀ ಉದ್ದವಿರುತ್ತದೆ. ಕಾಮಕಸ್ತೂರಿಯ ಎಲೆಯಲ್ಲಿ ಪ್ರೋಟಿನ್‌, ಕಾರ್ಬೋಹೈಡ್ರೇಟ್‌, ಎಣ್ಣೆ, ಲವಣ ಮತ್ತು ವಿಟಾಮಿನ್‌ಗಳಿದ್ದು, ಅಮೇರಿಕಾದ ಸಂಬಾರ ಪದಾರ್ಥಗಳ ವ್ಯಾಪಾರ ಸಂಘಟನೆಯ ವರದಿಯಂತೆ ಇದರಲ್ಲಿ ಶೆಕಡಾ ೬.೧ ರಷ್ಟು ತೇವಾಂಶ, ಶೇಕಡಾ ೧೧.೯ ರಷ್ಟು ಪ್ರೋಟಿನ್‌, ಶೇಕಡಾ ೩.೬ ರಷ್ಟು ಕೊಬ್ಬು, ಶೇಕಡಾ ೨೦.೫ ರಷ್ಟು ನಾರು, ಶೇಕಡಾ ೪೧.೨ ರಷ್ಟು ಕಾರ್ಬೋಹೈಡ್ರೇಟ್‌, ಶೇಕಡಾ ೧೬.೭ ರಷ್ಟು ಬೂದಿ ಇತ್ಯಾದಿಗಳಿವೆ. ೧೦೦ ಗ್ರಾಂ ಒಣ ಎಲೆಯಲ್ಲಿ ೩೨೫ ಒಣ ಎಲೆಯಲ್ಲಿ ೩೨೫ ಕ್ಯಾಲೋರಿಗಳು ಲಭ್ಯವಿದೆ ಎನ್ನಲಾಗಿದೆ.

ಕಾಮಕಸ್ತೂರಿ ಕೃಷಿ ವಿಧಾನ

ಮಣ್ಣು ಮತ್ತು ಹವಾಗುಣ: ಇದರ ಕೃಷಿಗೆ ಸಾಮಾನ್ಯ ಫಲವತ್ತತೆಯ ಚೆನ್ನಾಗಿ ನೀರು ಇಂಗಿ ಹೋಗುವ ಮಣ್ಣು ಸಾಕು. ಅಧಿಕ ಹಿಮ, ಒಂದೇ ಸಮನೆ ಮಳೆ, ನೀರು ನಿಲ್ಲುವ ಪ್ರದೇಶದಲ್ಲಿ ಇದರ ಕೃಷಿ ಮಾಡಿದಲ್ಲಿ ಬೆಳವಣಿಗೆ ನಿಧಾನಗತಿಯಲ್ಲಾಗುತ್ತದೆ.

ಕೃಷಿ ಭೂಮಿ: ಕೃಷಿಗಾಗಿ ಆಯ್ಕೆ ಮಾಡಿದ ಜಾಗದಲ್ಲಿ ಕಳೆಕಸಗಳನ್ನು ತೆಗೆದು ಭೂಮಿಯನ್ನು ಒಂದೆರಡು ಬಾರಿ ಉಳುಮೆ ಮಾಡಿ ಮಣ್ಣಿನ ಹೆಂಟೆಗಳನ್ನು ಪುಡಿ ಮಾಡಿಕೊಳ್ಳಬೇಕು. ಬಳಿಕ ಹೆಕ್ಟೇರಿಗೆ ೧೦ ರಿಂದ ೧೨ ಟನ್‌ ಹಟ್ಟಿಗೊಬ್ಬರವನ್ನು ಈ ಭೂಮಿಗೆ ಕೊಡಬೇಕು.

ಸಸಿಗಳ ತಯಾರಿ: ಕಾಮಕಸ್ತೂರಿ ಗಿಡಗಳನ್ನು ಬೀಜಗಳಿಂದ ಪಡೆಯಲು ಒಂದು ನಿಗದಿ ಪಡಿಸಿದ ಜಾಗದಲ್ಲಿ ಭೂಮಿಯನ್ನು ಉಳುಮೆ ಮಾಡಿ ಅಲ್ಲಿಗೆ ಹಟ್ಟಿಗೊಬ್ಬರ ಮತ್ತು ಎಲೆಗೊಬ್ಬರವನ್ನು ಮೊತ್ತಮೊದಲು ಕೊಡಬೇಕು. ಬಳಿಕ ಆ ಜಾಗದಲ್ಲಿ ೪ ಮೀಟರ್ ಉದ್ದ ಮತ್ತು ೧ ಮೀಟರ್ ಅಗಲದ ಮಡಿಗಳನ್ನು ಮಾಡಿ ಬೀಜ ಬಿತ್ತಬೇಕು. ಬೀಜಗಳು ಅತ್ಯಂತ ಸಣ್ಣಗಾತ್ರದ್ದಾಗಿರುವುದರಿಂದ ಅವುಗಳ ಸಮನಾದ ಹಂಚಿಕೆಯಾಗಲು ಪುಡಿಗೊಬ್ಬರ ಇಲ್ಲವೇ ಮರಳಿನೊಂದಿಗೆ ಮಿಶ್ರ ಮಾಡಿ ಬಿತ್ತನೆ ಮಾಡಬೇಕು. ಬಿತ್ತನೆಯಾದ ಬಳಿಕ ಹದವಾಗಿ ನೀರು ಹಾಯಿಸಬೇಕು. ಬೀಜ ಬಿತ್ತಿದ ಹತ್ತು ದಿನಗಳೊಳಗೆ ಅವು ಮೊಳೆಯುತ್ತವೆ . ಎಳೆಯ ಸಸಿಗಳು ೬ ರಿಂದ ೧೦ ಸೆಂ.ಮೀ ಎತ್ತರಕ್ಕೆ ಬೆಳೆದಾಗ ಅವುಗಳನ್ನು ನಾಟಿ ಮಾಡಬೇಕು.

ನಾಟಿ: ಕಾಮಕಸ್ತೂರಿ ಗಿಡಗಳನ್ನು ಸಂಜೆ ವೇಳೆ ಯಾ ಬಿಸಿಲಿನ ಪ್ರಮಾಣ ಕಡಿಮೆಯಿದ್ದಾಗ ನಾಟಿ ಮಾಡುವುದು ಉತ್ತಮ. ಸಸಿಗಳ ನಡುವೆ ಸಾಲಿನಲ್ಲಿ ಕನಿಷ್ಠ ೪೦ ಸೆಂ.ಮೀ ಅಂತರವಿರುವಂತೆ  ಸಾಲಿನಿಂದ ಸಾಲಿಗೆ ೬೦ ಸೆಂ.ಮೀ ಅಂತರವಿರುವ ರೀತಿಯಲ್ಲಿ ನಾಟಿ ಮಾಡಬೇಕು. ನಾಟಿ ಸಮಯದಲ್ಲಿ ತುಂತುರು ಮಳೆ ಇದ್ದಲ್ಲಿ ಯೋಗ್ಯ.

ಗೊಬ್ಬರ: ಇದರ ಕೃಷಿಯಲ್ಲಿ ಉತ್ತಮ ಇಳುವರಿ ಪಡೆಯಲು ಮೂಲ ಗೊಬ್ಬರವಾಗಿ ಹೆಕ್ಟೇರಿಗೆ ೨೦ ಕಿ.ಗ್ರಾಂ. ಸಾರಜನಕ, ೪ ಕಿ.ಗ್ರಾಂ ರಂಜಕ ಮತ್ತು ೨೦ ಕಿ.ಗ್ರಾಂ ಪೊಟ್ಯಾಷ್‌ ಕೊಡಬೇಕು. ಇದರಲ್ಲಿ ಸಾರಜನಕವನ್ನು ಎರಡು ಕಂತುಗಳಲ್ಲಿ ಕೊಡಬೇಕು. ನಾಟಿಯಾದ ಬಳಿಕ ಅಧಿಕ ಬೆಳವಣಿಗೆಗಾಗಿ ಶಿಫಾರಸು ಮಾಡಿದ ಗೊಬ್ಬರ ಪ್ರಮಾಣ ಪ್ರತೀ ಹೆಕ್ಟೇರುಇಗೆ ೧೨೦:೧೦೦:೧೦೦ ಕಿ.ಗ್ರಾಂ ನಷ್ಟು ಕ್ರಮವಾಗಿ ಸಾರಜನಕ, ರಂಜಕ ಮತ್ತು ಪೊಟ್ಯಾಷ್‌ಗಳಾಗಿರುತ್ತದೆ.

ನೀರಾವರಿ: ನೀರಾವರಿ ವ್ಯವಸ್ಥೆಯು ಸಸಿಯ ತಳಭಾಗದ ತೇವಾಂಶ ವನ್ನಾದರಿಸಿಕೊಂಡಿರುತ್ತದೆ. ಹೀಗಿದ್ದರೂ ಬೇಸಿಗೆ ಕಾಲದಲ್ಲಿ ತಿಂಗಳಿಗೆ ಎರಡು ಯಾ ಮೂರು ಬಾರಿ ನೀರುಣಿಸುವುದು ಒಳ್ಳೆಯದು. ಒಟ್ಟಾರೆಯಾಗಿ ವರ್ಷದಲ್ಲಿ ಸುಮಾರು ೧೨ ರಿಂದ ೧೫ ಬಾರಿ ನೀರಾವರಿ ವ್ಯವಸ್ಥೆ ಮಾಡಿದಲ್ಲಿ ಇದರ ಬೆಳವಣಿಗೆ ನಿರೀಕ್ಷಿತ ಮಟ್ಟದಲ್ಲಿ ಕಂಡು ಬರುವುದು.

ಕೀಟ ಮತ್ತು ರೋಗಗಳು: ಕಾಮಕಸ್ತೂರಿ ಕೃಷಿಯಲ್ಲಿ ಕಂಡು ಬರುವ ಮುಖ್ಯ ಕೀಟ ಎಲೆ ಸುರುಳಿ ಹುಳ. ಇದರ ಹತೋಟಿಗೆ ಥೈಓಡಾನ್‌ ಅಥವಾ ಮ್ಯಾಲಾಧಿಯಾನ್‌ನ ಶೇಕಡಾ ೦.೨ರ ದ್ರಾವಣವನ್ನು ಸಿಂಪಡಿಸಬೇಕು. ಇದಕ್ಕೆ ಬರು ಎಲೆ ಚುಕ್ಕೆ ರೋಗವನ್ನು ಶೇಕಡಾ ೦.೨ರ ಡೈಥೇನ್‌ಬಿ ಝಡ್‌೭೮ ಇಲ್ಲವೇ ಡೈಥೇನ್‌ ಎಮ್‌೪೫ ನ್ನು ಎರಡರಿಂದ ಮೂರು ಬಾರ ಸಿಂಪಡಿಸಿ ಹತೋಟಿಗೆ ತರಲು ಸಾಧ್ಯ. ಇದಕ್ಕೆ ಬರುವ ಇನ್ನೊಂದು ರೋಗವೆಂದರೆ ಕಜ್ಜಿರೋಗ ಯಾ ಸರೊಗುರೋಗ ಇದರ ಹತೋಟಿಗೆ ಡೈಥೇನ್‌ ಎ-೪೫ರ ಶೇಕಡಾ ೦,೩ರ ದ್ರಾವಣದ ಸಿಂಪಡನೆ ಮಾಡಬೇಕು. ಇದರೊಂದಿಗೆ ಗಿಡ ಒಣಗುವುದನ್ನು ತಡೆಗಟ್ಟಲು ಅವನ್ನು ಕಿತ್ತು ಸುಡಬೇಕು. ಮುಂಜಾಗರೂಕತಾ ಕ್ರಮವಾಗಿ ನಾಟಿ ಸಮಯದಲ್ಲಿ ಸಸಿಗಳ ತಳಭಾಗವನ್ನು ಟಿಫಸಾನ್‌ ಅಥವಾ ಸೆರಸಾನ್‌ ದ್ರಾವಣದಲ್ಲಿ ಮುಳುಗಿಸಿ ನಾಟಿ ಮಾಡಿದಲ್ಲಿ ಉತ್ತಮ.

ಕೊಯ್ಲು: ಗಿಡದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೂ ಬಿಟ್ಟಾಗ ಕೊಯ್ಲು ಮಾಡಬೇಕು. ಇದೇ ಸಮಯದಲ್ಲಿ ಗಿಡದ ತಳಭಾಗದ ಎಲೆಗಳು ಹಳದಿ ಬಣ್ಣದಿಂದ ಕೂಡಿರುತ್ತದೆ. ನಾಟಿ ಮಾಡಿದ ೮ ರಿಂದ ೧೨ ವಾರಗಳ ನಂತರ ಕೊಯ್ಲಿಗೆ ಸೂಕ್ತ ಸಮಯ. ಸ್ಥಳೀಯವಾಗಿ ಬಟ್ಟಿ ಇಳಿಸುವ ವ್ಯವಸ್ಥೆಯಿರುವಲ್ಲಿ ಹೂವನ್ನು ಮಾತ್ರ ಕೊಯ್ಲು ಮಾಡುತ್ತಾರೆ. ಈ ರೀತಿಯ ವ್ಯವಸ್ಥೆಯಿದ್ದಲ್ಲಿ ಹೆಚ್ಚು ಹೂವುಗಳು ಅರಳಿರುವಾಗ ಪೂರ್ತಿಯಾಗಿ ಬೆಳೆದ ಹೂವಿನ ತೆನೆಗಳನ್ನು ಮಾತ್ರ ಕೊಯ್ಲು ಮಾಡಬೇಕು. ತಕ್ಷಣವೇ, ಈ ತೆನೆಗಳನ್ನು ಬಟ್ಟಿ ಇಳಿಸುವ ಪಾತ್ರೆಗೆ ತುಂಬಿ, ಆವಿಯ ಸಹಾಯದಿಂದ ಬಟ್ಟಿ ಇಳಿಸಬೇಕು. ಹೂಗಳ ಕೊಯ್ಲು ಆದ ಸುಮಾರು ಹತ್ತು ದಿವನಸಗಳಿಗೆ ಮತ್ತೆ ಗಿಡಗಳು ಹೂವನ್ನು ಕೊಡುತ್ತವೆ. ಈ ರೀತಿಯಾಗಿ ವಾರ್ಷಿಕವಾಗಿ ಮೂರು ಸಲ ಹೂವನ್ನು ಪಡೆಯಬಹುದು. ಇಲ್ಲಿ ಮೊದಲ ಮತ್ತು ಎರಡನೇ ಕೊಯ್ಲುಗಳ ನಂತರ ಪ್ರತಿಸಲ ಹೆಕ್ಟೇರಿಗೆ ಸುಮಾರು ೭೦ ಕಿಲೋ ಗ್ರಾಂ ಯೂರಿಯ ಕೊಟ್ಟಲ್ಲಿ ಉತ್ತಮ. ಕೇವಲ ಹೂಗಳ ಕೊಯ್ಲು ಮಾತ್ರ ಮಾಡುವುದಿದ್ದಲ್ಲಿ ಹೆಕ್ಟೇರಿಗೆ ಸರಾಸರಿ ೩ ರಿಂದ ೬ ಟನ್‌ಗಳ ಇಳುವರಿ ಪಡೆಯಲು ಸಾಧ್ಯ. ಇಡೀ ಗಿಡಗಳ ಕೊಯ್ಲು ಮಾಡಿದಲ್ಲಿ ಹೆಕ್ಟೇರಿಗೆ ೧೩ ರಿಂದ ೧೫ ಟನ್‌ಗಳಷ್ಟು ಇಳುವರಿ ಗಳಿಸಬಹುದು.

ಬಟ್ಟಿ ಇಳಿಸುವಿಕೆ: ಕಾಮಕಸ್ತೂರಿ ಹೂ ಮತ್ತು ಎಲೆಗಳಿಂದ ಎಣ್ಣೆಯನ್ನು ಪಡೆಯಲು ಭಟ್ಟಿ ಇಳಿಸುವಿಕೆ ಎರಡು ವಿಧದಲ್ಲಿ ಮಾಡಬಹುದು. ೧) ನೀರಲ್ಲಿ ಕುದಿಸಿ ಮತ್ತು ೨) ಬಿಸಿ ಆವಿಯಲ್ಲಿ ಭಟ್ಟಿ ಇಳಿಸುವುದು.

ಇವುಗಳ ಪೈಕಿ ಎರಡನೇ ವಿಧಾನದಲ್ಲಿ ಭಟ್ಟಿ ಇಳಿಸುವುದು ಉತ್ತಮ. ಒಂದು ಸಲ ಭಟ್ಟಿ ಇಳಿಸಲು ಉತ್ತಮ. ಒಂದು ಸಲ ಭಟ್ಟಿ ಇಳಿಸಲು ತಗಲುವ ಸಮಯದ ಸುಮಾರು ಒಂದೂವರೆಯಿಂದ ಎರಡು ಗಂಟೆಗಳು. ಹೆಕ್ಟೇರೊಂದರ ಹೂವಿನ ಇಳುವರಿಯಿಂದ ಸುಮಾರು ೩೦ ರಿಂದ ೩೫ ಕಿ.ಗ್ರಾಂ ನಷ್ಟು ತೈಲ ದೊರಕಬಹುದಾಗಿದ್ದು, ಇದು ಇಡೀ ಸಸ್ಯದಿಂದಾದಲ್ಲಿ ಸುಮಾರು ೧೮ ರಿಂದ ೨೨ ಕಿ.ಗ್ರಾಂ ನಷ್ಟು ನಷ್ಟವಾಗಿರುತ್ತದೆ. ಒಟ್ಟಾರೆಯಾಗಿ ಈ ಕೃಷಿಗೆ ತಗಲುವ ವೆಚ್ಚ ಮತ್ತು ಆದಾಯವನ್ನು ಹೋಲಿಸಿದಾಗ ಸಿಗಬಹುದಾದಂತ ಲಾಭಾಂಶ ಸುಮಾರು ಶೇಕಡಾ ೭೫ ರಷ್ಟಾಗಿದೆ.

೧೩. ಕರ್ಪೂರತುಳಸಿ

ಕರ್ಪೂರ ತುಳಸಿಯ ಮೂಲ ಕೆನ್ಯಾ ದೇಶ. ಇದನ್ನು ಆಂಗ್ಲ ಭಾಷೆಯಲ್ಲಿ ‘ಕ್ಯಾಂಪರ್ ಬೆಸಿಲ್‌’ ಎನ್ನುತ್ತಾರೆ. ಸಸ್ಯಶಾಸ್ತ್ರದಲ್ಲಿ ಇದನ್ನು ಆಸಿಮಮ್‌ ಕಿಲಿಮಂಜಾರಿಕಮ್‌ ಎನ್ನಲಾಗುತ್ತದೆ. ಈ ಗಿಡದ ಎಲೆಗಳನ್ನು ನೆರಳಿನಲ್ಲಿ ಒಣಗಿಸಿ, ಬಟ್ಟಿ ಇಳಿಸಿದಾಗ ಸುವಾನಸೆಯುಳ್ಳ ತೈಲ ದೊರಕುತ್ತದೆ. ಇದರ ಬಹುಪಾಲು ಗಟ್ಟಿಯಾಗಿದ್ದು, ಇದನ್ನೆ ಕರ್ಪೂರವೆನ್ನುವುದು. ಇದರ ಬೇರ್ಪಡಿಸುವಿಕೆಯಿಂದಾಗಿ ದೊರಕುವ ಎಣ್ಣೆಯನ್ನು ‘ಕ್ಯಾಂಫರ್ ಓಯಿಲ್‌’ ಎನ್ನುತ್ತಾರೆ. ಈ ಎಣ್ಣೆಯನ್ನು ಸಾಬೂನುಗಳ ತಯಾರಿಗೆ, ಕೀಟನಾಶಕವಾಗಿ, ಸೊಳ್ಳೆಗಳ ತಡೆಗಟ್ಟುವಿಕೆಗೆ ಉಪಯೋಗಿಸುತ್ತಾರೆ.

ಕೃಷಿ ವಿಧಾನ: ಸಮುದ್ರ ಮಟ್ಟದಿಂದ ಸುಮಾರು ೯೦೦ ಮೀಟರ್ ಗಳಷ್ಟು ಎತ್ತರ ಪ್ರದೇಶಗಳಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ. ಸಾಮಾನ್ಯ ಮಳೆ ಬೀಳುವ ಪ್ರದೇಶಗಳಲ್ಲೂ ಇದನ್ನು ಬೆಳೆಸಬಹುದು.

ಸಸಿ ತಯಾರಿ:  ಕರ್ಪೂರ ತುಳಸಿಯ ಸಸಿಗಳನ್ನು ಬೀಜಗಳಿಂದ ತಯಾರಿಸಬಹುದು. ಬೀಜವು ಹಳತಾದಷ್ಟು; ಮೊಳಕೆಯೊಡೆವುದು ಕಡಿಮೆಯಾದ್ದರಿಂದ ಹೊಸಬೀಜಗಳೇ ಸಸಿ ತಯಾರಿಸಲು ಯೋಗ್ಯ. ಹೆಕ್ಟೇರೊಂದರ ಸುಮಾರು ೧೫೦ ಗ್ರಾಂ ಗಳಷ್ಟು ಬೀಜ ಸಾಕು. ಬೀಜವನ್ನು ಪಾತಿಗಳಲ್ಲಿ ಬಿತ್ತನೆ ಮಾಡಿ ಸಸಿ ತಯಾರಿಸುವುದು ಸರಿಯಾದ ಕ್ರಮ

ನಾಟಿ: ಬೀಜ ಬಿತ್ತಿ ಒಂದು ತಿಂಗಳಲ್ಲಿ ಗಿಡವನ್ನು ನಾಟಿ ಮಾಡಬಹುದು. ಗಿಡವನ್ನು ೬೦ ಸೆಂ.ಟಿ ಮೀಟರ್ ಅಂತರದ ಸಾಲುಗಳಲ್ಲಿ ಗಿಡದಿಂದ ಗಿಡಕ್ಕೆ ೩೦ ಸೆಂ.ಮೀ. ಅಂತರದಲ್ಲಿ ನಾಟಿ ಮಾಡಬೇಕು. ಮಳೆಗಾಲದ ಆರಂಭಕ್ಕೆ ಸ್ವಲ್ಪ ಮೊದಲು ನಾಟಿ ಮಾಡಿದಲ್ಲಿ ಇವಕ್ಕೆ ನೀರಿನ ಅವಶ್ಯಕತೆಯಿರುವುದಿಲ್ಲ.

ಗೊಬ್ಬರ: ಅವಶ್ಯಕತೆಗನುಗುಣವಾಗಿ ಹಟ್ಟಿ ಗೊಬ್ಬರ, ಮತ್ತು ರಾಸಾಯನಿಕ ಗೊಬ್ಬರಗಳನ್ನು ಕೊಟ್ಟಲ್ಲಿ ಗಿಡವು ಪುಷ್ಟಿಯಾಗಿ ಬರುವುದು.

ಕೊಯ್ಲು: ಗಿಡಗಳನ್ನು ನಾಟಿ ಮಾಡಿದ ನಾಲ್ಕರಿಂದ ಐದು ತಿಂಗಳೊಳಗೆ ಇವು ಕೊಯ್ಲಿಗೆ ಸಿದ್ಧವಾಗುತ್ತದೆ. ಗಿಡಗಳಲ್ಲಿ ಹೂ ಬರಲಾರಂಭಿಸಿದಾಗ ಅವನ್ನು ತಳಮಟ್ಟದಿಂದ ಸುಮಾರು ೩೦ ಸೆಂ.ಮೀ ಎತ್ತರಕ್ಕೆ ಕೊಯ್ಲು ಮಾಡಬೇಕು. ಈ ಕೊಯ್ಲಿನ ನಂತರ ಗಿಡವು ಪುನಃ ಚಿಗುರುವುದು. ಎರಡನೆ ಮತ್ತು ನಂತರದ ಕೊಯ್ಲನ್ನು ಇನ್ನಷ್ಟು ಎತ್ತರಕ್ಕೆ ಮಾಡಬಹುದು. ಒಟ್ಟಾರೆ ವಾರ್ಷಿಕವಾಗಿ ಮೂರು ಕೊಯ್ಲು ಸಾಧ್ಯ. ಈ ಗಿಡವನ್ನು ನಾಲ್ಕು ವರ್ಷಗಳ ಬಳಿಕ ಕಿತ್ತು ಹೊಸ ಗಿಡವನ್ನು ನಾಟಿ ಮಾಡಬೇಕಲು.

ಕೊಯ್ಲುನ ನಂತರ ನೆರಳಿನಲ್ಲಿ ಇವನ್ನು ಒಣಗಿಸಬೇಕು. ಹೆಕ್ಟೇರೊಂದರ ಸರಾಸರಿ ವಾರ್ಷಿಕವಾಗಿ ಸುಮಾರು ಮೂರು ಟನ್‌ಗಳಷ್ಟು ಒಣ ಎಲೆಗಳನ್ನು ಪಡೆಯಲು ಸಾಧ್ಯ. ನೀರಾವರಿ ವ್ಯವಸ್ಥೆಯಿಂದ ಇಳುವರಿಯನ್ನು ದ್ವಿಗುಣಗೊಳಿಸಬಹುದು.

ಬಟ್ಟೆ ಇಳಿಸುವಿಕೆ: ಎಲೆಗಳನ್ನು ದೊಡ್ಡದಾದ ಪಾತ್ರೆಗಳಲ್ಲಿ ತುಂಬಿ ಅದಕ್ಕೆ ನೀರನ್ನು ಹಾಕಿ ಕಾಯಿಸಬೇಕು. ಈ ಪಾತ್ರೆಯ ಮೇಲ್ಭಾಗಕ್ಕೆ ಇನ್ನೊಂದು ಪಾತ್ರೆಯನ್ನಿಟ್ಟು ಮುಚ್ಚಿ ಇವೆರಡರ ನಡುವೆ ಅಂತರವಿರದಂತೆ ಮಾಡಲು ಮಣ್ಣಿನಿಂದ ಮುಚ್ಚಬೇಕು. ಮೇಲಿನ ಪಾತ್ರೆಗೆ ಒದ್ದೆ ಬಟ್ಟೆ ಹಾಕಿ ತಂಪಾಗಿಸುತ್ತಿರಬೇಕು. ನೀರು ಕುದಿಯುತ್ತಿದ್ದಂತೆ ಬೆಂಕಿಯನ್ನು ಆರಿಸಬೇಕು. ನೀರಿನಿಂದ ಹೊರಟ ಆವಿಯೊಡನೆ ಕರ್ಪೂರ ಮತ್ತು ಕರ್ಪೂರ ತೈಲ ಮೇಲಿನ ಪಾತ್ರೆಗೆ ಬಂದು ಕರ್ಪೂರ ಅದರಲ್ಲಿ ಗಟ್ಟಿಯಾಗಿ ನಿಲ್ಲುವುದು. ಆದರೆ ಈ ವಿಧಾನದಲ್ಲಿ ಎಣ್ಣೆ ಬರದು, ಇದಕ್ಕಾಗಿ ಸಂಶೋಧನಾ ಸಂಸ್ಥೆಗಳು ಬಟ್ಟಿ ಇಳಿಸುವ ಯಂತ್ರಗಳನ್ನು ಅವಿಷ್ಕರಿಸಿವೆ. ಇದರಿಂದ ಕರ್ಪೂರ ಮತ್ತು ಕರ್ಪೂರದ ಎಣ್ಣೆ ಗಳಿಸಲು ಸಾಧ್ಯ.

೧೪. ನೆಲನೆಲ್ಲಿ

ನೆಲ್ಲಿಕಾಯಿ ಕುಲಕ್ಕೆ ಸೇರಿದ ನೆಲನೆಲ್ಲಿ ಒಂದು ಚಿಕ್ಕ ಸಸ್ಯ. ಉಷ್ಣ ಪ್ರದೇಶದಲ್ಲಿ ಬೆಳೆಯಬಲ್ಲ ಈ ಸಸ್ಯ ಮಳೆ ಮತ್ತು ಚಳಿಗಾಲದಲ್ಲಿ ಚಿಗುರಿಕೊಂಡಿರುವುದು. ಇದನ್ನು ಕಾಮಾಲೆ, ಮೂತ್ರಾಂಗಗಳ ತೊಂದರೆ, ಅಜೀರ್ಣ, ಜ್ವರ, ಹೊಟ್ಟೆನೋವು, ಅತಿಸಾರ ಮುಂತಾದ ರೋಗಗಳ ಗುಣಪಡಿಸುವಿಕೆಗಾಗಿ ಉಪಯೋಗಿಸಲಾಗುವುದು.

ನೆಲನೆಲ್ಲಿಯು ಭಾರತದಾದ್ಯಂತ ಮಳೆಗಾಲದಲ್ಲಿ ಕಾಣಬಹುದು. ಈ ಸಸ್ಯವನ್ನಿಂದು ಭಾರತದ ಹರ್ಯಾಣ, ಪಂಜಾಬ್‌, ಉತ್ತರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಕರ್ನಾಟಕ, ಬಂಗಾಳ, ಒರಿಸ್ಯಾ, ಬಿಹಾರಗಳಲ್ಲಿ ಕಂಡುಕೊಳ್ಳಬಹುದು.

ಸಸ್ಯ ಪರಿಚಯ

‘ಪೈಲಂಥಸ್‌ ಅಮರಸ್‌’ ಎಂಬ ಸಸ್ಯನಾಮವುಳ್ಳ ನೆಲನೆಲ್ಲಿ ಯುಪೋರೆಬೇಸಿಯಾ ಕುಟುಂಬಕ್ಕೆ ಸೇರಿದೆ. ಇದನ್ನು ಸಂಸ್ಕೃತದಲ್ಲಿ ಭೂಮ್ಯಾಮಲಕ, ಹಿಂದಿಯಲ್ಲಿ ಭೂ ಆಮ್ಲ ಎಂದು ಕರೆಯುತ್ತಾರೆ. ಸಣ್ಣದಾದ, ೧೦ ರಿಂದ ೬೦ ಸೆಂ.ಮೀ ಎತ್ತರಕ್ಕೆ ಬೆಳೆಯುವ ನೆಲನೆಲ್ಲಿ ತೇವಾಂಶವಿರುವಲ್ಲಿ ಮೊಳೆತು ಮೇಲಕ್ಕೇರುತ್ತದೆ. ನೆಲ್ಲಿಕಾಯಿಯ ಎಲೆಯಂತಿರುವ ಸಣ್ಣ ಸಣ್ಣ ಎಲೆಗಳು ಇದರಲ್ಲಿವೆ. ಸಾಸಿವೆ ಗಾತ್ರದ ಕಾಯಿಯು ಇದರಲ್ಲಿದ್ದು ಇವು ಕಾಣಲು ನೆಲ್ಲಿಕಾಯಿಯಂತಿದೆ.

ಕೃಷಿ ವಿಧಾನ

ಮಣ್ಣು ಮತ್ತು ಹವಾಗುಣ: ಸಾಮಾನ್ಯವಾಗಿ ಎಲ್ಲಾ ವಿಧದ ಮಣ್ಣಿನಲ್ಲಿ ಇದು ಬೆಳೆಯಬಲ್ಲದು. ಇದಕ್ಕೆ ಎಲ್ಲಾ ಹವೆಯು ಒಗ್ಗುವುದು. ಆದರೆ ಒಣ ಮತ್ತು ಅತ್ಯಂತ ಕಡಿಮೆ ತಾಪಮಾನವಿರುವ ಪ್ರದೇಶ ಇದರ ಬೆಳವಣಿಗೆಗೆ ಆಗದು.

ಸಸ್ಯಾಭಿವೃದ್ಧಿ: ನೆಲನೆಲ್ಲಿ ಗಿಡವನ್ನು ಬೀಜಗಳ ಮೂಲಕ ಪಡೆಯಬಹುದು. ಒಂದು ಹೆಕ್ಟೇರ್ ನೆಲನೆಲ್ಲಿ ಕೃಷಿಗೆ ಸುಮಾರು ಒಂದು ಕಿ.ಗ್ರಾಂ ಬೀಜಗಳು ಸಾಕು. ಸಸ್ಯವನ್ನು ಪಡೆಯಲು ನರ್ಸರಿ ಮಡಿಯಲ್ಲಿ ಹಟ್ಟಿಗೊಬ್ಬರವನ್ನು ಮಿಶ್ರ ಮಾಡಿದ ಮಣ್ಣನ್ನು ಹಾಕಿ ಬೀಜವನ್ನು ಬಿತ್ತಬೇಕು. ಇದರ ಬೀಜಗಳಲು ಸೂಕ್ಷ್ಮವಾಗಿರುವುದರಿಂದ ಇದನ್ನು ಮರಳು ಮಿಶ್ರಿತ ಒಣಮಣ್ಣಿನಲ್ಲಿ ಮಿಶ್ರ ಮಾಡಿ ಬಿತ್ತನೆ ಮಾಡಬೇಕು. ಬಳಿಕ ತೆಳುವಾದ ಮಣ್ಣಿನ ಮುಚ್ಚುವಿಕೆ ಇದರ ಮೇಲಾಗಬೇಕಕು. ಬೀಜಗಳು ಮೊಳಕೆಯೊಡೆಯುವ ತನಕ ಅಗತ್ಯವಿರುವ ತೇವಾಂಶವನ್ನು ಹೊಂದಿರುವಂತೆ ನೋಡಿಕೊಳ್ಳಬೇಕು. ಹೆಚ್ಚಿನ ಸಸ್ಯಾಭಿವೃದ್ಧಿಗೆ ಏಪ್ರಿಲ್‌ ಮೇ ತಿಂಗಳಲ್ಲಿ ಬೀಜದ ಬಿತ್ತನೆ ಉತ್ತಮ.

ನಾಟಿ ವಿಧಾನ: ೧೫ ರಿಂದ ೩೦ ದಿನಗಳ ಬೆಳವಣಿಗೆ ಸಾಧಿಸಿದ ಸುಮಾರು ೧೦ ಸೆಂ.ಮೀ ಎತ್ತರದ ಗಿಡಗಳನ್ನು ೧೫ ಸೆಂ.ಮೀ ಅಂತರದಲ್ಲಿ ನಾಟಿ ಮಾಡಬೇಕು. ನಾಟಿ ಮಾಡಿದ ಸಮಯದಲ್ಲಿ ಅಗತ್ಯ ಪ್ರಮಾಣದ ನೀರುಣಿಸುವಿಕೆ ಆದಲ್ಲಿ ಉತ್ತಮ.

ಕಳೆ ಕೀಳುವಿಕೆ: ಕೈಯ ಮೂಲಕ ಕಳೇ ಕೀಳುವುದನ್ನು ತಿಂಗಳಿಗೊಮ್ಮೆ ಮಾಡುತ್ತಲಿರಬೇಕು. ಇದಕ್ಕೆ ಯಾವುದೇ ಸಿಂಪಡಿಸುವಿಕೆ ಮಾಡಬಾರದು. ಸಿಂಪಡಿಸುವಿಕೆ ಆದಲ್ಲಿ ಗಿಡ ಸಾಯಬಹುದು ಮತ್ತು ಔಷಧೀಯ ತಯಾರಿಗೆ ಇದು ಯೋಗ್ಯವಲ್ಲ.

ಗೊಬ್ಬರ: ಸಾವಯವ ಗೊಬ್ಬರವನ್ನು ಮಾತ್ರ ಬಳಸಬೇಕು. ಗಿಡ ೩೦ ಸೆಂ.ಮೀ ಎತ್ತರಕ್ಕೆ ಬೆಳೆದಾಗ ಹಟ್ಟಿಗೊಬ್ಬರ ಕೊಟ್ಟಲ್ಲಿ ಹೆಚ್ಚಿನ ಔಷಧೀಯ ಗುಣಗಳು ಇದರಲ್ಲಿ ದೊರಕಬಹುದು.

ನೀರಾವರಿ: ದಕ್ಷಿಣ ಭಾರತದಲ್ಲಿ ಈ ಸಸ್ಯಕ್ಕೆ ನೀರಾವರಿಯ ಅಗತ್ಯವಿಲ್ಲ, ಆದರೆ ಉತ್ತರ ಭಾರತದಲ್ಲಿ ೧೫ ದಿನಗಳಿಗೊಮ್ಮೆ ನೀರುಣಿಸಬೇಕು.

ಕೊಯ್ಲು: ಮಳೆಗಾಲ ಮುಗಿದ ತಕ್ಷಣ ಗಿಡವನ್ನು ಕೊಯ್ಲು ಮಾಡಬಹುದು. ಸಪ್ಟೆಂಬರ್ ತಿಂಗಳಿಗಾಗುವಾಗ ಇದರ ಎಲೆಯಲ್ಲಿ ಅಧಿಕ ಪ್ರಮಾಣದ ಔಷಧೀಯ ಗುಣವಿರುವುದರಿಂದ ಆಗ ಕಟಾವು ಮಾಡುವುದು ಉತ್ತಮ. ಕೊಯ್ಲು ಮಾಡಿದ ಎಲೆಯನ್ನು ಒಣಗಿಸಿ ಒಂದು ವರ್ಷ ಶೇಖರಿಸಿಡಬಹುದು.

ವೆಚ್ಚ ಮತ್ತು ಆದಾಯ ಒಂದು ಹೆಕ್ಟೇರ್ ನೆಲನೆಲ್ಲಿ ಕೃಷಿಗೆ ತಗಲಬಹುದಾದ ವೆಚ್ಚ ಸುಮಾರು ಐದು ಸಾವಿರ ರೂಪಾಯಿಗಳು. ಇದರಿಂದ ಲಭಿಸಬಹುದಾದ ಆದಾಯ ಸುಮಾರು ಇಪ್ಪತ್ತು ಸಾವಿರ ರೂಪಾಯಿಗಳು. ಇದರಿಂದ ಲಭಿಸಬಹುದಾದ ಆದಾಯ ಸುಮರು ಇಪ್ಪತ್ತು ಸಾವಿರ ರೂಪಾಯಿಗಳು. ಒಂದು ಕಿ.ಗ್ರಾಂ ನೆಲ ನೆಲ್ಲಿಯೊ ಮಾರುಕಟ್ಟೆ ಬೆಲೆ ರೂಪಾಯಿ ೩೫ ರಿಂದ ೪೦ ಆಗಿದ್ದು, ಒಟ್ಟಾಗಿ ಲಭಿಸಬಹುದಾದ ಲಾಭಾಂಶ ೧೫,೦೦೦ ರೂಪಾಯಿಗಳಾಗುವುದು.

ಉಪಯೋಗ: ಅರಸಿನಮಂಡಿ, ಮಧುಮೇಹ, ಜಲೋದರ, ಉರಿ, ರಕ್ತಮಲ, ಮೂತ್ರಾಂಗಗಳ ತೊಂದರೆ ಇತ್ಯಾದಿ ರೋಗಗಳ ಗುಣಪಡಿಸುವಿಕೆಗೆ ನೆಲನೆಲ್ಲಿ ಉಪಯೋಗವಾಗುವುದು.

೧೫. ನೆಲ್ಲಿ

ನೆಲ್ಲಿಯ ತವರೂರು ಆಗ್ನೇಯ ಏಷ್ಯಾದ ಉಷ್ಣ ಪ್ರದೇಶಗಳು. ನಮ್ಮ ದೇಶದ ಕಾಡುಗಳಲ್ಲಿ ಮತ್ತು ಬೆಟ್ಟಗುಡ್ಡಗಳಲ್ಲಿ ಧಾರಾಳವಾಗಿ ಕಂಡು ಬರುವ ನೆಲ್ಲಿಯಲ್ಲಿ ಅನೇಕ ಔಷಧೀಯ ಗುಣಗಳಿವೆ. ಇದರ ಕಾಯಿಯನ್ನು ಔಷಧದ ತಯಾರಿಯಲ್ಲಿ ಹೇರಳವಾಗಿ ಬಳಸಲಾಗುತ್ತದೆ. ನಮ್ಮ ಪರಾಚೀನ ವೈದ್ಯ ಗ್ರಂಥಗಳಾದ ‘ಚರಕ ಸಂಹಿತ’ ಮತ್ತು ‘ಸುಶ್ರುತ ಸಂಹಿತ’ಗಳಲ್ಲಿ ಇದರ ಬಳಕೆಯ ಬಗ್ಗೆ ಸಂಪೂರ್ಣ ವಿವರಣೇಯಿದೆ.

ಸಸ್ಯ ಪರಿಚಯ:

ವೈಜ್ಞಾನಿಕವಾಗಿ ಇದನ್ನು ‘ಎಂಬ್ಲಿಕ ಅಫಿಷಿನ್ಯಾಲಿಸ್‌ ಗಾರ್ಟನ್‌’ ಎನ್ನಲಾಗುತ್ತಿದ್ದು, ಇದು ಯೂಪೊರ್ಬಿಯೇಸಿ ಕುಟುಂಬಕ್ಕೆ ಸೇರಿದೆ. ಇದನ್ನು ಬೆಟ್ಟದ ನೆಲ್ಲಿ, ನೆಲ್ಲಿ ದೊಡ್ಡನೆಲ್ಲಿ, ಅಮೃತ, ಅಮೃತಫಲ, ಅಮಲಕ, ಧನ್ಯ, ಆಮಲಕಿ, ಅನೋಲ, ಇಂಡಿಯನ್‌ ಗೂಸ್‌ಬೆರ್ರಿ‍ ಎಂಬಿತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಇದೊಂದು ಮಧ್ಯಮ ಗಾತ್ರದ ಮರ. ಈ ಮರ ೮ ರಿಂದ ೧೮ ಮೀಟರು ಎತ್ತರಕ್ಕೆ ಬೆಳೆಯಬಹುದು. ಚಳಿಗಾಲದಲ್ಲಿ ಇದರ ಎಲೆಗಳು ಉದುರುವುದು. ತಳಮಟ್ಟದಲ್ಲಿಯೇ ಕವಲೊಡೆಯುವ ಈ ಮರದಲ್ಲಿ ಡೊಂಕು ಡೊಂಕಾದ ರೆಂಬೆಗಳಿರುವುದು. ಇದರ ಸಣ್ಣ ಹೂ ಹಸಿರಿನಿಂದ ಕೂಡಿದ ಹಳದಿ ಬಣ್ಣದ್ದಾಗಿದೆ. ಇದರ ಹಣ್ಣು ಗುಂಡಗಿರುವುದು. ಸ್ವಾಭಾವಿಕವಾಗಿ ಬೆಳೆಯುವ ನೆಲ್ಲಿಯ ಹಣ್ಣುಗಳ ತೂಕ ೨೦-೨೫ ಗ್ರಾಂ ಇದ್ದರೆ, ಆಧುನಿಕ ತಳಿಗಳಲ್ಲಿ ಸಿಗುವ ಹಣ್ಣಿನ ತೂಕ ೬೦ ರಿಂದ ೭೦ ಗ್ರಾಂಗಳಾಗಿವೆ. ನೆಲ್ಲಿ ಮರ ಪ್ರಬುದ್ಧವಾದಾಗ ಹಣ್ಣನ್ನು ಬಿಡುವುದು ವಾಡಿಕೆ. ಸರಿಯಾಗಿ ಬೆಳೆ ದೊರಕಬೇಕಿದ್ದಲ್ಲಿ ಸುಮಾರು ೧೦ ವರ್ಷಗಳ ಬೆಳವಣಿಗೆ ಅಗತ್ಯ.

ಕೃಷಿ ವಿಧಾನ

ಮಣ್ಣು ಮತ್ತು ಹವಾಗುಣ: ಮರಳು ಮಣ್ಣೊಂದನ್ನು ಬಿಟ್ಟು ಉಳಿದೆಲ್ಲಾ ಮಣ್ಣಿನಲ್ಲಿ ನೆಲ್ಲಿ ಬೆಳೆ ಸಾಧ್ಯ. ನೀರು ಬಸಿಯುವ ತೇವ ಹಿಡಿದಿಡುವ ಮರಳುಗೋಡು ಮಣ್ಣು ಇದಕ್ಕೆ ಉತ್ತಮ. ಫಲವತ್ತಾದ ಕೆಂಪು ಮಣ್ಣು ಅತ್ಯುತ್ತಮ. ನೆಲ್ಲಿ ಉಷ್ಣ ಮತ್ತು ಸಮಶೀತೋಷ್ಣವಲಯಗಳ ಬೆಳೆ. ಇದನ್ನು ಸಮುದ್ರ ಮಟ್ಟದಿಂದ ೧೫೦೦ ಮೀಟರು ಎತ್ತರದವರೆಗೆ ಬೆಳೆಯಬಹುದು. ಇದು ಅನಾವೃಷ್ಟಿಯನ್ನು ತಡೆದುಕೊಳ್ಳಲಾರದು.

ಸಸ್ಯಾಭಿವೃದ್ಧಿ: ನೆಲ್ಲಿ ಸಸ್ಯವನ್ನು ಬೀಜಗಳಿಂದ ಇಲ್ಲವೆ ಕಸಿವಿಧಾನದಿಂದ ಮಾಡಬಹುದು. ಬೀಜಗಳ ಮೂಲಕ ಸಸ್ಯಾಭಿವೃದ್ಧಿ ಮಾಡುವುದಾದಲ್ಲಿ ಬೀಜಗಳನ್ನು ೩ ರಿಂದ ೪ ದಿನ ನೀರಲ್ಲಿ ನೆನೆಸಿ ಬಳಿಕ ಬಿತ್ತಬೇಕು. ಇವನ್ನು ಪಾಲಿಥಿನ್‌ ಚೀಲಗಳಲ್ಲಿ ಬಿತ್ತಿ ಹದವರಿತ ನೀರು ಕೊಡಬೇಕು. ೩ ರಿಂದ ೪ ವಾರಗಳಲ್ಲಿ ಇವು ಮೊಳಕೆಯೊಡೆಯುವುವು. ಬೀಜ ಬಿತ್ತಲು ಜೂನ್‌ನಿಂದ ಜುಲಾಯಿ ಸಕಾಲ.

ತಳಿಗಳು: ಬನಾರಸಿ , ಚಾಕೈಯ, ಪ್ರಾನ್ಸಿಸ್‌, ಕಾಂಚನ, ಕೃಷ್ಣ, ಬಲವಂತ, ಎನ್‌ಎ-೬, ಎನ್‌.ಎ-೭, ಎನ್‌ಎ-೯, ಆನಂದ-೨, ಬಿಎಸ್‌೧, ಬನ್ಸಿರೆಡ್‌ ಇತ್ಯಾದಿ.

ಕೃಷಿ ಭೂಮಿ: ನೆಲ್ಲಿಯ ಬೇಸಾಯಕ್ಕೆ ನಿಗದಿಪಡಿಸಿದ ಭೂಮಿಯನ್ನು ಒಂದೆರಡು ಬಾರಿ ಆಳವಾದ ಉಳುಮೆ ಮಾಡಿ ಸಮತಟ್ಟು ಮಾಡಬೇಕು. ಬಳಿಕ ೧ ಮೀಟರು ಉದ್ದ, ೧ ಮೀ ಅಗಲ ಮತ್ತುಸದ ೧ ಮೀ ಎತ್ತರದ ಗುಂಡಿಗಳನ್ನು ೪.೫ ಮೀಟರುಗಳ ಅಂತರದಲ್ಲಿ ತೆಗೆಯಬೇಕು. ಈ ಕಾರ್ಯ ಮೇ ತಿಂಗಳಿನಿಂದ ಜೂನ್‌ ತಿಂಗಳೊಳಗೆ ಆಗಬೇಕು. ತೆಗೆದ ಗುಂಡಿಗಳನ್ನು ೨೦ ದಿನಗಳ ಕಾಲ ಬಿಸಿಲಿಗೆ ಒಡ್ಡಬೇಕು. ಪ್ರತಿ ಗುಂಡಿಗೆ ಮೇಲ್ಮಣ್ಣು, ೧೫ ಕಿ.ಗ್ರಾಂ ಹಟ್ಟಿಗೊಬ್ಬರ ಮತ್ತು ಒಂದು ಕಿ.ಗ್ರಾಂ ಸೂಪರ್ ಪಾಸ್ಪೆಟ್‌ ಹಾಕಿಡಬೇಕು. ಮತ್ತಿದಕ್ಕೆ ನೀರು ಹಾಯಿಸಬೇಕು.

ನಾಟಿ ವಿಧಾನ: ಮೊಳೆತ ನೆಲ್ಲಿ ಸಸ್ಯಗಳು ೨೫ ರಿಂದ ೩೦ ಸೆಂ.ಮೀ ಎತ್ತರಕ್ಕೆ ಬೆಳೆದಾಗ ಅವುಗಳನ್ನು ನಾಟಿ ಮಾಡಬೇಕು. ನಾಟಿ ಮಾಡಲು ಜೂನ್‌ನಿಂದ ಜುಲಾಯಿ ತಿಂಗಳುಗಳು ಸೂಕ್ತ ಕಾಲ.

ಗೊಬ್ಬರ: ಸಪ್ಟೆಂಬರಿನಿಂದ ಅಕ್ಟೋಬರಿನೊಳಗೆ ಎಳೆಯ ಗಿಡಗಳಿಗೆ ೧೫ ರಿಂದ ೨೦ ಕಿ.ಗ್ರಾಂ, ಬಲಿತ ಗಿಡಗಳಿಗೆ ೩೦ ರಿಂದ ೪೦ ಕಿ.ಗ್ರಾಂ ಪುಡಿಯಾದ ಯಾ ಕೊಳೆತ ಹಟ್ಟಿ ಗೊಬ್ಬರ ಕೊಡಬೇಕು. ಇದರೊಂದಿಗೆ ಗಿಡವೊಂದರ ೩೦ಗ್ರಾಂನಷ್ಟು ಸಾರಜನಕ ಇದೇ ಸಮಯದಲ್ಲಿ ಕೊಡುವುದು ಸೂಕ್ತ. ಗಿಡದ ಬೆಳವಣಿಗೆಯ ಹಂತದಲ್ಲಿ ವಾರ್ಷಿಕವಾಗಿ ಸಪ್ಟೆಂಬರ್ ಮತ್ತು ಎಪ್ರಿಲ್‌ನಲ್ಲಿ ೧ ಕಿ.ಗ್ರಾಂ ಯೂರಿಯಾ, ೧ ಕಿ.ಗ್ರಾಂ ಸೂಪರ್ ಪಾಸ್ಪೆಟ್‌ ಮತ್ತು ೧.೫ ಕಿ.ಗ್ರಾಂ ಮ್ಯೂರಿಯೆಟ್‌ ಆಫ್‌ ಪೊಟ್ಯಾಷ್‌ ನೀಡಬೇಕು.

ನೀರಾವರಿ: ಗೊಬ್ಬರಗಳನ್ನು  ನೀಡಿದ ತಕ್ಷಣ ನೀರು ಹಾಯಿಸಲೇ ಬೇಕು. ಸಣ್ಣ ಗಿಡಗಳಿಗೆ ಬೇಸಿಗೆ ಕಾಲದಲ್ಲಿ ೧೫ ದಿನಗಳಿಗೊಮ್ಮೆ ನೀರುಣಿಸುತ್ತಿರಬೇಕು. ಬೆಳೆದ ಮರಗಳಿಗೆ ಬೇಸಿಗೆಕಾಲದಲ್ಲಿ ವಾರಕ್ಕೊಮ್ಮೆ ನೀರುಣಿಸಿದಲ್ಲಿ ಹಣ್ಣುಗಳ ಸಂಖ್ಯೆ ವೃದ್ಧಿಸುವದಲ್ಲದೆ ಇದು ಬೀಳುವ ಪ್ರಮಾಣವೂ ತಗ್ಗುವುದು.

ಕೀಟ ಮತ್ತು ರೋಗ: ಕಾಂಡ ಕೊರೆಯುವ ಹುಳು, ಕಂಬಳಿ ಹುಳ, ತಿಗಣೆ. ರೋಗಗಳಲ್ಲಿ ಎಲೆಗಳ ತುಕ್ಕರೋಗ ಮತ್ತು ನೀಲಿ ಬೂಸ್ಟು ಕಂಡು ಬರುವುದು. ಕೀಟಗಳ ಹತೋಟಿಗಾಗಿ ಶೇ. ೦.೨ರ ಲೆಬೇಸಿಡ್‌ ದ್ರಾವಣದ ಸಿಂಪಡನೆ ರೋಗಗಳ ಹತೋಟಿಗೆ ಬೋರಾಕ್ಸ್‌ನಕ ಉಪಚಾರ ಅಗತ್ಯ.

ಕೊಯ್ಲು: ಗಿಡವನ್ನು ನಾಟಿ ಮಾಡಿ ಹಣ್ಣನ್ನು ಪಡೆಯಲು ಕನಿಷ್ಠ ೮ ವರ್ಷಗಳಾದರೂ ಬೇಕು. ಕಸಿ ವಿಧಾನದ ಗಿಡವಾಗಿ ದ್ದಲ್ಲಿ ೫ ವರ್ಷಗಳಿಗೆ ಬೆಳೆ ದೊರಕಬಹುದು. ನೆಲ್ಲಿಕಾಯಿಯು ಕೊಯ್ಲು ಸಾಮಾನ್ಯವಾಗಿ ಫೆಬ್ರವರಿಯಿಂದ ಮಾರ್ಚ್ ತಿಂಗಳಲ್ಲಿ ಆಗಬೇಕು.

ಇಳುವರಿ: ಸರಿಯಾದ ಆರೈಕೆಯಾಗಿದ್ದಲ್ಲಿ ಕಸಿಮರ ಮತ್ತು ಆಧುನಿಕ ತಳಿಗಳಿಂದ ಮರವೊಂಧರ ವಾರ್ಷಿಕವಾಗಿ ೧೦೦ ರಿಂದ ೨೦೦ ಕಿ.ಗ್ರಾಂ ಹಣ್ಣು ಸಿಗಬಹುದು. ಒಂದು ಮರ ಸಾಮಾನ್ಯವಾಗಿ ೭೦ ವರ್ಷಗಳ ತನಕ ಬಾಳಬಲ್ಲದು. ಇಳುವರಿಯು ೫೦ ವರ್ಷಗಳ ತನಕ ವಾರ್ಷಿಕವಾಗಿ ಹೆಚ್ಚುತ್ತಾ ಹೋಗುವುದು. ಒಂದು ಹೆಕ್ಟೇರಿಗೆ ೧೦ ರಿಂದ ೨೦ ಟನ್‌ಗಳಷ್ಟು; ಇಳುವರಿ ದೊರಕಲು ಸಾಧ್ಯ.

ವೆಚ್ಚ ಮತ್ತು ಆದಾಯ: ಒಂದು ಹೆಕ್ಟೇರ್ ನಲ್ಲಿ ಕೃಷಿಗೆ ತಗಲಬಹುದಾದ ವೆಚ್ಚ ಸುಮಾರು ೩೪,೦೦೦ ರೂಪಾಯಿಗಳು. ಮಾರುಕಟ್ಟೆ ಯಲ್ಲಿ ೧ ಕಿ.ಗ್ರಾಂ ನೆಲ್ಲಿಕಾಯಿಗೆ ಸರಾಸರಿ ೨೦ ರಿಂದ ೪೫ ರೂಪಾಯಿಗಳ ತನಕ ಬೆಲೆಯಿದೆ.

ಶೇಖರಣೆ: ನೆಲ್ಲಿಕಾಯಿಯನ್ನು ೧೦ ರಿಂದ ೧೫ ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶದಲ್ಲಿ ೧೫ ರಿಂದ ೨೦ ದಿನಗಳವರೆಗೆ ಶೇಖರಿಸಿಡಬಹುದು. ಇದರಲ್ಲಿ ಚಾಕೈಯ ತಳಿಯ ಕಾಯಿಗಳನ್ನು ೪೫ ರಿಂದ ೭೫ ದಿನಗಳ ತನಕ ಶೇಖರಿಸಿಡಬಹುದಾಗಿದೆ. ಈ ರೀತಿ ಶೇಖರಿಸಿಡಲು ಕಾಯಿಗಳನ್ನು ಶೇ ೧೦ ರಿಂದ ೧೫ ರ ಉಪ್ಪಿನ ದ್ರಾವಣದಲ್ಲಿ ಹಾಕಿಡಬೇಕು.

ಉಪಯೋಗ: ನೆಲ್ಲಿಕಾಯಿ ವಿಟಾಮಿನ್‌ ‘ಸಿ’ಯ ಆಗರವಾಗಿದೆ. ಇದು ಮುಪ್ಪಿಗೆ ಔಷಧಿಯಾಗಿದೆ. ಇದರ ಸೇವನೆಯಿಂದ ಪಾಂಡುರೋಗ, ಕಾಮಾಲೆ, ಅಗ್ನಿಮಾಂದ್ಯ, ಪಿತ್ತವಿಕಾರ ಶಮನವಾಗುವುದು. ಇದು ರಕ್ತವನ್ನು ಶುದ್ಧಗೊಳಿಸುವುದು. ನೆಲ್ಲಿಯಿಂದ ತಯಾರಾಗುವ ಔಷಧಗಳಾದ ಚ್ಯವನಪ್ರಾಶ, ಧಾತ್ರಿಲೇಹ, ಆಮ್ಲಕಿ ರಸಾಯನ, ಮಾರುಕಟ್ಟೆಗಳಲ್ಲಿ ಲಭ್ಯ. ನೆಲ್ಲಿಕಾಯಿಗಿರುವ ಮಹತ್ವವನ್ನು ಭಾರತದಲ್ಲಿಂದು ಇದರ ಕೃಷಿಯಲ್ಲಾಗುತ್ತಿರುವ ಬೆಳವಣಿಗೆಯಿಂದ ಸುಲಭವಾಗಿ ಅರಿತುಕೊಳ್ಳಬಹುದು. ೧೯೮೦ರ ದಶಕದಲ್ಲಿ ಭಾರತದಲ್ಲಿ ನೆಲ್ಲಿ ಕೃಷಿಯ ವಿಸ್ತೀರ್ಣ ೩,೦೦೦ ಹೆಕ್ಟೇರ್ ಗಳಾಗಿದ್ದರೆ ಇದೀಗ ೫೦,೦೦೦ ಹೆಕ್ಟೇರ್ ವಿಸ್ತೀರ್ಣಕ್ಕೆ ತಲುಪಿದೆ. ಈಗಿನ ಬೆಳವಣಿಗೆಯ ರೀತಿ ನೋಡಿದಾಗ ೨೦೦೫ ಕ್ಕಾಗುವಾಗ ಈ ವಿಸ್ತೀರ್ಣವು ೧ ಲಕ್ಷ ಹೆಕ್ಟೇರಿಗೆ ತಲುಪಲು ಸಾಧ್ಯ. ಪ್ರಕೃತ ಭಾರತದಲ್ಲಿ ನೆಲ್ಲಿಯ ಉತ್ಪಾದನೆಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದು ಬಳಿಕ ಗುಜರಾತು, ತಮಿಳು ನಾಡುಗಳು ಬರುತ್ತವೆ. ನೆಲ್ಲಿ ಕಾಯಿಯ ಕೃಷಿಯನ್ನಿಂದು ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ ಮತ್ತು ಕರ್ನಾಟಕಗಳಲ್ಲೂ ಹೆಚ್ಚಿನ ಆಸಕ್ತಿಯಿಂದ ಕೈಗೊಳ್ಳಲಾಗುತ್ತಿದೆ. ಇದರ ಉಪಯೋಗ ಇತ್ತೀಚಿನ ವರ್ಷಗಳಲ್ಲಿ ಅಧಿಕಗೊಳ್ಳುತ್ತಿರುವುದರಿಂದ ೧೦ ನೇ ಪಂಚವಾರ್ಷಿಕ ಯೋಜನೆಯ ಅಂತ್ಯಕ್ಕಾಗುವಾಗ ಇದಕ್ಕೆ ಬರಬಹುದಾದ ಬೇಡಿಕೆ ಸುಮಾರು ೨ ಲಕ್ಷ ಟನ್‌ಗಳಾಗಬಹುದೆಂದು ಅಂದಾಜಿಸಲಾಗಿದೆ.