ಅನಾದಿಕಾಲದಿಂದಲೂ ಭಾರತದ ಸಾಮಾಜಿಕ, ಆರ್ಥಿಕ ಮತ್ತು ಸಂಸ್ಕೃತಿಯಲ್ಲಿ ಔಷಧೀಯ ಸಸ್ಯಗಳು ಮಹತ್ತರವಾದ ಪಾತ್ರವನ್ನು ನಿರ್ವಹಿಸುತ್ತಾ ಬಂದಿದೆ. ಇದಕ್ಕೆ ಮುಖ್ಯ ಕಾರಣ ದೇಶದಲ್ಲಿರುವ ನಮ್ಮ ಗ್ರಾಮಗಳಲ್ಲಿ ಇಂದಿಗೂ ಪರಂಪರಾನುಗತವಾಗಿ ನಡೆಸಿಕಲೊಂಡು ಬರುತ್ತಿರುವ ಗಿಡಮೂಲಿಕೆಯ ಉಪಚಾರ. ಈ ನಿಟ್ಟಿನಲ್ಲಿ ಹಳ್ಳಿಗಳಲ್ಲಿರುವ ಸಾಂಪ್ರದಾಯಿಕ ದಾದಿಯರು, ಮೂಳೆ ತಜ್ಞರು, ತಿರುಗಾಟದ ಜಾನಪದ ವೈದ್ಯರು ಮುಂತಾದವರು ಶ್ರಮಿಸುತ್ತಿದ್ದರು.ಇವರೊಂದಿಗೆ ನಮ್ಮ ಹಳ್ಳಿಗಳಲ್ಲಿ ವಾಸವಾಗಿರುವ ಮಿಲಿಯ ಗಟ್ಟಲೆ ನಾಟಿ ವೈದ್ಯರು,ಹಿರಿಯರು ಮತ್ತು ಹೆಂಗಸರು ತಮ್ಮ ಹಳೆಯ ಅನುಭವಗಳ ಆಧಾರದಿಂದ ಮೂಲಿಕೆಗಳನ್ನು  ಪ್ರಯೋಗ ಮಾಡಿ ಅನಾರೋಗ್ಯವನ್ನು ವಾಸಿ ಮಾಡುತ್ತಿರುವುದನ್ನು ಇಂದಿಗೂ ನಾವು ಕಾಣಬಹುದು. ಆದರೆ ಇನ್ನೊಂದೆಡೆಯಲ್ಲಿ ಆಧುನಿಕ ವೈದ್ಯ ಪದ್ಧತಿಯ ಪ್ರಭಾವದಿಂದ ಮತ್ತು ವಿದೇಶಿ ಸಂಸ್ಕೃತಿಯ ಪ್ರವೇಶದಿಂದ ನಮ್ಮ ಸಾಂಪ್ರದಾಯಿಕ ಔಷಧೀಯ ವ್ಯವಸ್ಥೆಗಳು ನಶಿಸಿಹೋಗುವ ಭೀತಿಯೂ ಕಂಡು ಬರುತ್ತಿದ್ದು, ಇದರೊಂದಿಗೆ ಸಾಂಪ್ರದಾಯಿಕವಾಗಿ ಪ್ರಯೋಗವಾಗುತ್ತಿದ್ದ ಗಿಡಮೂಲಿಕೆಗಳು ನಶಿಸಿಹೋಗುತ್ತಿರುವುದು ಬೆಳಕಿಗೆ ಬರುತ್ತಲಿದೆ.

ಈ ಭೂಮಿಯಲ್ಲಿರುವ ಪ್ರತಿಯೊಂದು ಸಸ್ಯದಲ್ಲೂ ಔಷಧೀಯ ಗುಣಗಳಿವೆಯೆಂಬುದಾಗಿ ಸಾವಿರಾರು ವರ್ಷಗಳ ಹಿಂದೆಯೇ ‘ಅಷ್ಟಾಂಗ ಹೃದಯ’ದಲ್ಲಿ ಹೆಸರಿಸಲಾಗಿತ್ತು. ಔಷಧೀಯ ಸಸ್ಯಗಳನ್ನು ಮಾನವನ, ಪ್ರಾಣಿಗಳ ಮತ್ತು ಸಸ್ಯಗಳ ಆರೋಗ್ಯಕ್ಕಾಗಿ ಯಾವ್ಯಾವ ರೀತಿಯಲ್ಲಿ ಬಳಸಬಹುದೆಂಬ ಬಗ್ಗೆ ಹಲವರು ಗ್ರಂಥಗಳಲ್ಲಿ ನಮ್ಮ ಪೂರ್ವಜರು ಉಲ್ಲೇಖಿಸಿದ್ದರು, ಮತ್ತು ಅವುಗಳಿಂದ ಪ್ರಯೋಜನವನ್ನು ಪಡೆದಿದ್ದರು. ಆ ಕಾಲದಲ್ಲಿ ಔಷಧೀಯ ಸಸ್ಯಗಳನ್ನು ಅಗತ್ಯಕ್ಕನುಗುಣವಾಗಿ ಬಳಸಿ ಅವುಗಳ ಆರೋಗ್ಯವನ್ನು ಕಾಪಾಡುತ್ತಿದ್ದರು. ಆದರೆ ಕಾಲ ಉರುಳಿದಂತೆ, ಜನಸಂಖ್ಯೆ ವೃದ್ಧಿಸಿದಂತೆ, ವ್ಯಾಪಾರ ವಹಿವಾಟುಗಳು ಹೆಚ್ಚಾದಂತೆ ಈ ಔಷಧೀಯ ಸಸ್ಯಗಳನ್ನು ಕೇವಲ ಆರ್ಥಿಕ ದೃಷ್ಟಿಯಿಂದ ಅಥವಾ ಲಾಭದ ದೃಷ್ಟಿಯಿಂದ ನೋಡಿ ಇವಿಂದು ಅವಸಾನದ ಅಂಚಿಗೆ ತಲುಪುವಂತಾಗಿದೆ.

ಇತ್ತೀಚೆಗೆ ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಇಲಾಖೆಯ ಮಂತ್ರಾಲಯ ಕೈಗೊಂಡ ಸಂಶೋಧನಾ ಸಮೀಕ್ಷೆ ಯ ಪ್ರಕಾರ ಭಾರತದಲ್ಲಿಂದು ಸುಮಾರು ೮೦೦೦ ಔಷಧೀಯ ಸಸ್ಯಗಳು ಲಭ್ಯ. ಸ್ಥಳೀಯ ಆರೋಗ್ಯ ಸಂಸ್ಕೃತಿಯ ಪುನರುತ್ಥಾನದ ಪೀಠ (FRLHT) ವು ೭೧೯೧ ಔಷಧೀಯ ಗುಣಗಳುಳ್ಳ ಪ್ರಮುಖ ಸಸ್ಯಗಳನ್ನು ಹೆಸರಿಸಿದ್ದು, ಇವನ್ನಿಂದು ಆಯುರ್ವೇದ, ಜಾನಪದ, ಹೋಮಿಯೋಪತಿ, ಸಿದ್ಧ, ಟಿಬೇಟಿಯನ್‌, ಯುನಾನಿ ಮತ್ತು ಆಧುನಿಕ ಚಿಕಿತ್ಸಾ ಪದ್ಧತಿಗಳಲ್ಲಿ ಬಳಸಲಾಗುತ್ತಿದೆ. ಈ ಮಾಹಿತಿ ಪ್ರಕಾರ ಆಯುರ್ವೇದದಲ್ಲಿ ೧೭೬೯, ಜಾನಪದದಲ್ಲಿ ೭೩೧, ಹೋಮಿಯೋಪತಿಯಲ್ಲಿ ೧೬೪, ಸಿದ್ಧದಲ್ಲಿ ೭೪೩, ಟಿಬೇಟಿಯನ್‌ನಲ್ಲಿ ೨೭೧, ಯುನಾನಿಯಲ್ಲಿ ೬೫೩ ಮತ್ತು ಆಧುನಿಕ ಪದ್ಧತಿಯಲ್ಲಿ ೫೫ ಗಿಡ ಮೂಲಿಕೆಗಳನ್ನು ಉಪಯೋಗಿಸಲಾಗುತ್ತಿದೆ. ಇಲ್ಲಿ ಕೆಲವೊಂದು ಔಷಧೀಯ ಸಸ್ಯಗಳು ಎಲ್ಲಾ ಪದ್ಧತಿಗಳಲ್ಲೂ ಬಳಕೆಯಲ್ಲಿರುವುದಾಗಿ ಕಂಡು ಬಂದಿದೆ.

ಆದರೆ ಔಷಧೀಯ ಸಸ್ಯಗಳ ಸಂಖ್ಯೆಯ ದಾಖಲಾತಿಯು ಸಮಯ ಕಳೆದಂಥೆ ಹೆಚ್ಚಾಗುತ್ತಿದ್ದು, ಕೆಲವೊಂದು ಸಸ್ಯಗಳು ಒಂದೇ ವಿಧದವುಗಳಾಗಿದ್ದು, ಈ ನಿಟ್ಟಿನಲ್ಲಿ ಸಸ್ಯಗಳ ಒಟ್ಟು ಸಂಖ್ಯೆಯ ಬಗ್ಗೆ ಇನ್ನೂ ಖಚಿತಾಭಿಪ್ರಾಯಗಳಿಲ್ಲ. ಇದಕ್ಕೆ ಮುಖ್ಯ ಕಾರಣ ನಮ್ಮಲ್ಲಿನ್ನೂ ಈ ಬಗ್ಗೆ ಸರಿಯಾದ ಸಮೀಕ್ಷೆ ಮತ್ತು ಅಧ್ಯಯನಗಳಾಗದೇ ಇರುವುದು.

ಭಾರತದ ಔಷಧೀಯ ಸಸ್ಯಗಳ ಸಸ್ಯಶಾಸ್ತ್ರೀಯ ವಿಶ್ಲೇಷಣೆ

FRLHT ಕೈಗೊಂಡ ೭೧೨೬ ಔಷಧೀಯ ಸಸ್ಯಗಳ ಅಧ್ಯಯನದ ಪ್ರಕಾರ ಇವು ೩೮೬ ಕುಟುಂಬ ಮತ್ತು ೨೨೨೦ ಜಾತಿಯದ್ದಾಗಿದೆ. ಇವುಗಳಲ್ಲಿ ಅಸ್ಥರೇಸಿಯಾ ವರ್ಗದವುಗಳ ಸಂಖ್ಯೆ ೪೧೯, ಯುಪೋರಬಿಯೇಸಿಯಾ ೨೧೪, ಲ್ಯಾಮಿಯೇಸಿಯಾ ೨೧೪, ಫಾಬೇಸಿಯಾ ೨೧೪, ರುಬಯೇಸಿಯಾ ೨೦೮, ಪೋಯೆಸಿಯಾ ೧೬೮, ಪಾಪಿಲಿಯೋನೆಸಿಯಾ ೧೬೬, ಅಸಂತೇಸಿಯಾ ೧೪೧, ರೋಸೇಸಿಯಾ ೧೨೯ ಮತ್ತು ಎಪಿಯೇಸಿಯಾ ೧೧೮ ಆಗಿರುತ್ತದೆ. ಈ ವಿಶ್ಲೇಷಣೆಯ ಪ್ರಕಾರ ಇದರಲ್ಲಿ ಮರಗಳು, ಪೊದೆಗಳು ಮತ್ತು ಬೇರುಗಳು ಸೇರಿವೆ.

ಭಾರತದಲ್ಲಿ ಔಷಧೀಯ ಸಸ್ಯಗಳ ಹಂಚಿಕೆ

ಭಾರತದಲ್ಲಿರುವ ಔಷಧೀಯ ಸಸ್ಯಗಳು ಬೇರೆ ಬೇರೆ ಪ್ರದೇಶ ಮತ್ತು ಭೌಗೋಳಿಕ ಪರಿಸರಕ್ಕನುಗುಣವಾಗಿ ಹಂಚಿಕೆಗೊಂಡಿವೆ. ಇವುಗಳಲ್ಲಿ ಶೇಕಡಾ ೭೦ ರಷ್ಟು ಉಷ್ಣವಲಯದ ಪಶ್ಚಿಮ ಮತ್ತು ಪೂರ್ವ ಘಟ್ಟಗಳ ಅರಣ್ಯ ಪ್ರದೇಶ, ವಿಂಧ್ಯಾ ಪರ್ವತ, ಚೋಟಾ ನಾಗಪುರ ಪ್ರಸ್ಥಭೂಮಿ, ಅರಾವಲಿಸ್‌, ಹಿಮಾಲಯ ಮತ್ತು ಪೂರ್ವೋತ್ತರದ ಟ್ರಾಯ ಪ್ರದೇಶದ ತಪ್ಪಲು ಭಾಗಗಳಲ್ಲಿ ಕಂಡು ಬರುತ್ತಿವೆ. ಉಳಿದ ಶೇಕಡಾ ೩೦ ರಷ್ಟು ಸಸ್ಯಗಳು ಸಮಶೀತೋಷ್ಣ ಮತ್ತು ಚಳಿ ಪ್ರದೇಶಗಳಲ್ಲಿವೆ. ಹೀಗಿದ್ದರೂ ನಮ್ಮಲ್ಲಿ ಈ ಸಸ್ಯಗಳು ಎಲ್ಲೆಲ್ಲಿ ಹಂಚಿ ಹೋಗಿವೆ ಎಂಬ ಬಗ್ಗೆ ಖಚಿತ ಅಂಕಿ-ಅಂಶಗಳು ಇನ್ನೂ ತಯಾರಾಗಿಲ್ಲದ ಕಾರಣ ಅವುಗಳರಕ್ಷಣೇದೊಡ್ಡ ಸಮಸ್ಯೆಯಾಗಿದೆ. ಈ ದೃಷ್ಟಿಯಿಂದ ಇತ್ತೀಚಿನ ವರ್ಷಗಳಲ್ಲಿ ಔಷಧೀಯ ಸಸ್ಯಗಳಲ್ಲಿ ಗಿಡಗಳ ಪ್ರಮಾಣ ಶೇಕಡಾ ೩೩, ಪೊದೆಗಳ ಪ್ರಮಾಣ ಶೇಕಡಾ ೨೦, ವನಸ್ಪತಿ ಶೇಕಡಾ ೩೨ ಅಡರು ಬಳ್ಳಿ ಶೇಕಡಾ ೧೨ ಮತ್ತುಳಿದ ಶೇ.೩ ಇನ್ನಿತರೇ ವರ್ಗಕ್ಕೆ ಸೇರಿವೆ.

ಭಾರತದಲ್ಲಿಂದು ಬಳಕೆಯಾಗುತ್ತಿರುವ ಔಷಧೀಯ ಸಸ್ಯಗಳ ಒಟ್ಟು ಪ್ರಮಾಣದಲ್ಲಿ ಇಡಿಯ ಸಸ್ಯದ ಪ್ರಮಾಣ ಶೇಕಡಾ ೧೬, ಬೇರು ಕಾಂಡ ಶೆಕಡಾ ೪, ಬೇರು ಶೇಕಡಾ ೨೯, ಎಲೆಗಳು ಶೇ.೬, ಹೂವುಗಳು ಶೇ.೫, ಹಣ್ಣುಗಳು, ಶೇ.೧೦, ಬೀಜಗಳು ಶೇ.೭, ಕಾಂಡ ಶೇ.೬, ತುಂಡು ಕಟ್ಟಿಗೆ ಶೇ.೩, ಮತ್ತು ತೊಗಟೆ ಶೇಕಡಾ ೧೪ ಆಗಿರುತ್ತದೆ.

ಈ ನಿಟ್ಟಿನಲ್ಲಿ CAMP (Conservation Asessment and Management Plan) ನ ವಿಧಾನಕ್ಕನುಗುಣವಾಗಿ ದಕ್ಷಿಣ ಮತ್ತು ಉತ್ತರ ಭಾರತದಲ್ಲಿ ವೇಗವಾಗಿ ನಶಿಸುತ್ತಿರುವ ಅಥವಾ ಬೀತಿಯನ್ನೆದುರಿಸುತ್ತಿರುವ ಸಸ್ಯಗಳ ಬಗ್ಗೆ ಅಂದಾಜು ಮಾಡಲಾಗಿತ್ತು. ಈ ಸಸ್ಯಗಳನ್ನು ಕೆಂಪು ಪಟ್ಟಿಯ ವಿಭಾಗದಲ್ಲಿ ಹೆಸರಿಸಲಾಗಿತ್ತು. ಈ ಅಂದಾಜು ಪ್ರಕಾರ ದಕ್ಷಿಣ ಭಾರತದಲ್ಲಿ ೧೧೨ ಔಷಧೀಯ ಸಸ್ಯಗಳು ಬೇರೆ ಬೇರೆ ಪಂಕ್ತಿಯ ಭೀತಿಯನ್ನು ಕಾಣುತ್ತಿವೆ. ಈ ಭೀತಿ ಯು ಅವಸಾನದ ಸಮೀಪದಿಂದ ಹಿಡಿದು ಅರಣ್ಯದಿಂದ ಮಾಯವಾದ ಪರಿಸ್ಥಿತಿಯದ್ದಾಗಿದೆ. ಇದೇ ರೀತಿ ಹಿಮಾಲಯ, ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶಗಳಲ್ಲಿ ೪೨ ಸಸ್ಯಗಳು ಭೀತಿಯನ್ನೆದುರಿಸುತ್ತಿವೆ.

ಮಾನವನ, ಪ್ರಾಣಿಗಳ ಮತ್ತು ಗಿಡಮರಗಳ ಜೀವವನ್ನು ರಕ್ಷಿಸುತ್ತಿದ್ದ ಬಹುಪಾಲು ಔಷಧೀಯ ಸಸ್ಯಗಳಿಂದು ನಮ್ಮ ಅರಣ್ಯ ಪ್ರದೇಶಗಳಿಂದ ಕಾಣೆಯಾಗುತ್ತಿದ್ದು,ಲ ಈ ಪರಿಸ್ಥಿತಿ ಮುಂದುವರಿದಲ್ಲಿ ಮುಂದಿನ ದಿನಗಳು ದೇಶದ ಅಭಿವೃದ್ಧಿ ಬೆಳವಣಿಗೆ ಮತ್ತು ಪ್ರಗತಿಯ ದೃಷ್ಟಿಯಿಂದ ಕಠಿಣವಾಗಬಹುದು. ಈ ದೃಷ್ಟಿಯಿಂದ ಕೇಂದ್ರ ಸರಕಾರವು  ರಾಷ್ಟ್ರೀಯ ಔಷಧೀಯ ಸಸ್ಯಗಳ ನಿಗಮವೊಂದನ್ನು ನವಂಬರ ೨೪,೨೦೦೦ ದಲ್ಲಿ ಸ್ಥಾಪಿಸಿದ್ದು, ಇದಿಂದು ಔಷಧೀಯ ಸಸ್ಯಗಳ ಕ್ಷೇತ್ರಕ್ಕೆ ನೀತಿ, ಸಸ್ಯಗಳ ಕಾಪಾಡುವಿಕೆಗೆ ಕ್ರಮ, ಬೆಳೆಯಲು ಪ್ರೋತ್ಸಾಹ, ಸಂಶೋಧನೆ ಮತ್ತು ಅಭಿವೃದ್ಧಿ ಇತ್ಯಾದಿಗಳಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ನಿಗಮವು ಇದೀಗ ಸುಮಾರು ೩೨ ಔಷಧೀಯ ಸಸ್ಯಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಆದ್ಯತೆಯಿಂದ ಕಾಪಾಡುವ ಮತ್ತು ಅಭಿವೃದ್ಧಿ ಪಡಿಸುವ ಉದ್ದೇಶವನ್ನಿಟ್ಟುಕೊಂಡಿದೆ.

ಆದ್ಯತೆಯ ಆಧಾರದಲ್ಲಿ ಗುರುತಿಸಲ್ಪಟ್ಟ ಔಷಧೀಯ ಸಸ್ಯಗಳು

ಕೇಂದ್ರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಅಡಿಯಲ್ಲಿ ಬರುವ ರಾಷ್ಟ್ರೀಯ ಔಷಧೀಯ ಸಸ್ಯಗಳ ನಿಗಮದ ಆದ್ಯತೆಯಲ್ಲಿ ಬರುವ ೩೨ ಔಷಧೀಯ ಸಸ್ಯಗಳೆಂದರೆ, ನೆಲ್ಲಿ, ಅಶೋಕ, ಅಶ್ವಗಂಧ, ಅತಿವಿಷ, ಬಿಲ್ವ, ನೆಲನೆಕ್ಕಿ ಒಂದೆಲಗ, ಗಂಧ, ಚಿರಾತ, ಅಮೃತಬಳ್ಳಿ, ಮಧುನಾಶಿನಿ, ಗುಗ್ಗುಲ, ಇಸಾಬುಗೋಲು, ಜಟಮಾಂಶಿ, ಅಗ್ನಿಶಿಖಾ, ಕಿರಾತಕಡ್ಡಿ, ಮುರುಗಲು, ಕೋಷ್ಟ, ಕಡುಗರೋಹಿಣಿ, ಗಣಿಕೆ, ಮುಲೇತಿ, ಸಪೇದ್‌ ಮಸ್ಲಿ, ಸಾಂಬ್ರಾಣಿ, ಹಿಪ್ಪಲಿ, ಮರದರಸಿನ, ಕೇಸರಿ, ಗರುಡಪಾತಾಳ, ನೆಲವರಿಕೆ, ಶತಾವರಿ, ತುಳಸಿ, ವಾಯುವಿಳಂಗ ಮತ್ತು ವತ್ಸನಾಭಗಳಾಗಿವೆ. ಇವುಗಳಲ್ಲಿ ಹೆಚ್ಚಿನವು ನಮ್ಮ ಸುತ್ತ ಮುತ್ತ ಕಂಡು ಬರುತ್ತಿವೆ. ಇನ್ನು ಕೆಲವು ಈ ಮೊದಲು ನಮ್ಮಲ್ಲಿ ಬೆಳಯುತ್ತಿದ್ದು ಇದೀಗ ನಶಿಸಿಹೋಗಿವೆ. ನಮ್ಮಲ್ಲಿ ವಾಣಿಜ್ಯ ರೀತಿಯ ಕೃಷಿ ಬಂದಾಗಿನಿಂದ ಈ ಔಷಧೀಯ ಸಸ್ಯಗಳ ಮಹತ್ವ ನಮ್ಮ ಮನಸ್ಸಿಂದ ದೂರವಾಗಿದೆ. ಆದರೆ ಇದೀಗ ಈ ಸಸ್ಯಗಳತ್ತ ನಾವು ಗಮನಹರಿಸಲೇಬೇಕಲು. ಇವುಗಳನ್ನು ಕೂಡಾ ವಾಣಿಜ್ಯ ರೀತಿಯಲ್ಲಿ ಬೆಳೆಸಲಾಗುವುದರಿಂದ ಮತ್ತು ಇವಕ್ಕೆ ಆಂತರಿಕ ಮತ್ತು ಬಾಹ್ಯ ಮಾರುಕಟ್ಟೆಯಿರುವುದರಿಂದ ಈ ಬಗ್ಗೆ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಇತ್ತೀಚಿನ ವರ್ಷಗಳಲ್ಲಿ ಕೃಷಿಯುತ್ಪನ್ನಗಳ ಬೆಲೆ ಕುಸಿದು ನಮ್ಮ ಕೃಷಿಕರು ಕಂಗಾಲಾಗಿದ್ದಾರೆ. ಇದರೊಂದಿಗೆನೀರಿನ ಅಭಾವ,ಲ ಬರ ಪರಿಸ್ಥಿತಿಗಳು ನಮ್ಮ ನ್ನು ಕಂಗೆಡುವಂತೆ ಮಾಡಿವೆ. ಈ ಎಲ್ಲಾ ದೃಷ್ಟಿಯಿಂದ ಮತ್ತು ನಮ್ಮ ಆರೋಗ್ಯವನ್ನು ಕಡಿಮೆ ವೆಚ್ಚದಲ್ಲಿ ಕಾಪಾಡುವ ಉದ್ದೇಶದಿಂದ ನಾವಿಂದು ಔಷಧೀಯ ಸಸ್ಯಗಳ ಕೃಷಿಗಿಳಿಯಬೇಕಾಗಿದೆ. ಇವುಗಳ ಕೃಷಿಯಿಂದ ನಮ್ಮ ಬಡತನ, ನಿರುದ್ಯೋಗ ಸಮಸ್ಯೆಗಳು ದೂರವಾಗಿ ಆರ್ಥಿಕವಾಗಿ ಸಬಲಗೊಳ್ಳಲು ವಿಪುಲ ಅವಕಾಶಗಳಿವೆ. ಈ ಎಲ್ಲಾ ಉದ್ದೇಶಗಳನ್ನಿಟ್ಟುಕೊಂಡು ಮೇಲೆ ಹೆಸರಿಸಿದ ನಮ್ಮಲ್ಲಿ ಬೆಳೆಯಬಲ್ಲ ಹಲವು ಔಷಧೀಯ ಸಸ್ಯಗಳ ಕೃಷಿಯ ಬಗ್ಗೆ ಮುಂದಿನ ಭಾಗದಲ್ಲಿ ಲಭ್ಯವಿರುವ ಮಾಹಿತಿಗಳನ್ನೆಲ್ಲಾ ಕೊಡಲಾಗಿದೆ.

ಕೃಷಿ ಮತ್ತು ಅಭಿವೃದ್ಧಿಗಾಗಿ ಗುರುತಿಸಲ್ಪಟ್ಟ ಔಷಧೀಯ ಸಸ್ಯಗಳು

ಹೆಸರು ಕುಟುಂಬ ಸಸ್ಯಶಾಸ್ತ್ರೀಯ ಹೆಸರು
. ವಾರ್ಷಿಕಗಳು
ಅ. ಇಸಾಬುಗೋಲು ಪ್ಲಾಂಟಗಿನೇಶಿಯಾ ಪ್ಲಾಟಗೊ ಓವಾಟ
ಆ. ಅಶ್ವಗಂಧ ಸೋಲನೇಶಿಯಾ ವಿದಾನಿಯ ಸೊಮ್ನಿಫೆರಾ
ಇ. ಕಿರಾತಕಡ್ಡಿ ಅಸಂಥೇಸಿಯಾ ಅನ್‌ಡ್ರೊಗ್ರಾಫಿಸೇ ಪನಿಕ್ಯುಲಾಟ
ಈ. ನೆಲನೆಲ್ಲಿ ಯುಫೋರ್ಬಿಯಾಸಿಯಾ ಪೈಲಂಥಸ್‌ ನಿರುರಿಹುಕ್‌
ಉ. ಸಪೇದ್‌ ಮಸ್ಲಿ ಲಿಲ್ಲಿ ಯೇಸಿಯಾ ಕ್ಲೋರೋಪೈಥಮ್‌ ಅರುಡಿನೇಸಿಯಂ
ಊ. ಸೋನಾಮುಖಿ ಕೆಯಿಸಲ್ಪಿನಿಯೇಸಿಯಾ ಕ್ಯಾಸಿಯಾ ಅಂಗುಸ್ಟಿಪೋಲಿಯಾ
ಎ. ಹಿಪ್ಪಲಿ ಪೈಪರೇಸಿಯಾ ಪೈಪರ್ ಲೋಂಗಮ್‌
ಏ. ಲಿಕ್ವೋರೈಸ್‌ ಪೆಬೇಸಿಯಾ ಗ್ಲೈಸೈರಿಹಿಜ್ಜಾ ಗ್ಲಾಬ್ರಾ
II ಬಹುಕಾಲ ಬಾಳುವವು
ಅ. ಅಶೋಕ ಸೆಯಿಸಲ್ಪಿನೇಸಿಯಾ ಸರಾಕ ಅಸೋಕ
ಆ. ಗುಗ್ಗುಲ ಬರ್ ಸರೇಸಿಯಾ ಕಾಮಿಪೋರರಿಟ್ಟಿ
ಇ. ನೆಲ್ಲಿ ಯುಪೋಬಿಯೇಸಿಯಾ ಎಂಬ್ಲಿಕಾ ಒಫಿಸಿನಾಲಿಸ್‌
ಈ. ಮುರುಗಲು ಗುಟ್ಟಿಪೆರ್ಯೆ ಗಾರ್ಸಿನಿಯಾಇಂಡಿಕಾ
ಉ. ಬಿಲ್ವ ರುಟ್ಟೇಸಿಯಾ ಎಗಲ್‌ಮರ್ಮಿಲೋಸ್‌
ಊ. ಗಂಧ ಸಾಂಟಲೇಸಿಯಾ ಸಾಂಟಲಮ್‌ ಆಲ್ಬಮ್‌
III ಹಬ್ಬುವ ಬಳ್ಳಿಗಳು
ಅ. ಅಮೃತಬಳ್ಳಿ ಮೆನಿಸ್ಪಜರ್ಮೇಸಿಯಾ ಟಿನೋಸ್ಪೋರ ಕಾರ್ಡಿಫ ಓಲಿಲಯಾ
ಆ. ಮಧುನಾಶಿನಿ ಅಸಕ್ಲೆಪಿಯಾಡೇಸಿಯಾ ಗೈಮ್‌ನೇಮ ಸಿಲವೈಸ್ಟ್ರಿ
ಇ. ಶತಾವರಿ ಲಿಲ್ಲಿಯೇಸಿಯಾ ಅಸ್ಪರಾಗಸ್‌ ರೆಸಿಮೋಸಸ್‌
ಈ. ಗ್ಲೋರಿ ಲಿಲ್ಲಿ ಲಿಲ್ಲಿಯೇಸಿಯಾ ಗ್ಲೋರಿಬಿಸಾಸುರ್ಪಬ
IV. ಎತ್ತರದ ಪ್ರದೇಶದ ಸಸ್ಯಗಳು
ಅ. ಅತಿಸ್‌ ರಾಮನ್‌ಕ್ಯುಲೇಸಿಯಾ ಅಕೋನಿಟಮಂ ಹೆಟ್ರೋಪೈಲಮ್‌
ಆ. ಚಿರಾಕ ಗೆಂಟಿಯಾನೇಸಿಯಾ ಸ್ಪೆರ್ಟಿಯಾ ಚಿರಾಯಿಕ
ಇ. ಜಟಮಾಂಸಿ ಪೊಲಿಯನೇಸಿಯಾ ನಾರ್ ಡೋಸ್ಟಾಚಿಸ್‌ ಜಟಮಾಂಸಿ
ಈ. ಕಡುಗರೋಹಿಣಿ ಸ್ಕೋರೋಪುಲರೇಸಿಯಾ ಪೈಕ್ರೊಹಿಜ್‌ ಕುರಾವೊ
ಉ. ಕೋಷ್ಠ ಅಸ್ಥರೇಸಿಯಾ ಸೌಸುರೇ ಲಾಪ್ಪಾ
ಊ. ಇಂಡಿಯನ್‌ಬಾರ್ ಬರಿ ಬರ್ ಬರಿಡೇಸಿಯಾ ಬರ್ ಬರಿಸ್‌ ಅರಿಸ್ಟಾಟ
V . ಗಮನ ಕೊಡಬೇಕಾದ ಸಸ್ಯಗಳು
ಅ. ತುಳಸಿ ಲ್ಯಾಮಿಯೇಸಿಯಾ ಓಸಿಮಮ್‌ ಸಾಂಕ್ಟಮ್‌
ಆ. ಸರ್ಪಗಂಧಾ ಅಪೊಸ್ಯೆನೇಸಿಯಾ ರಾವಲ್ಫಿಯಾ ಸರ್ಪೆಂಟೈನಾ