ಮುಕ್ತ ಮಾರುಕಟ್ಟೆ ಸೂತ್ರ ಎಷ್ಟು ಸರಿ?

ರೇಬಿಸ್ ರೋಗ ನಮ್ಮ ದೇಶದಲ್ಲಿ ವರ್ಷಕ್ಕೆ ಸುಮಾರು ೩೦,೦೦೦ ಜನರನ್ನು ಬಲಿ ತೆಗೆದುಕೊಳ್ಳುತ್ತದೆ. ಲೂಯಿ ಪಾಶ್ಚರ್ ಸಂಶೋಧಿಸಿದ ಲಸಿಕೆಯಿಂದ ಪ್ರಪಂಚದಾದ್ಯಂತ ಈ ರೋಗ ನಿಯಂತ್ರಣಕ್ಕೆ ಬಂತು. ಆದರೆ ಈ ಲಸಿಕೆಯನ್ನು ನಾಯಿ ಕಚ್ಚಿಸಿಕೊಂಡವರು ಹೊಕ್ಕಳಿನ ಸುತ್ತ ೧೪ ಬಾರಿ ತೆಗೆದುಕೊಳ್ಳಬೇಕಿತ್ತು. ಈಗ ಲಭ್ಯವಿರುವ ಸೊಂಟ ಅಥವಾ ತೋಳಿಗೆ ತೆಗೆದುಕೊಳ್ಳುವ ಸೆಲ್‌ಕಲ್ಚರ್‌ನ ಲಸಿಕೆಗಳನ್ನು ಕಡಿತದ ಜಾಗವನ್ನವಲಂಬಿಸಿ ಮತ್ತು ನಾಯಿಗೆ ರೇಬಿಸ್ ನಿರೋಧಕ ಲಸಿಕೆ ಹಾಕಿಸಿದೆಯೇ ಇಲ್ಲವೇ ಎನ್ನುವುದನ್ನು ಅವಲಂಬಿಸಿ, ಹೆಚ್ಚೆಂದರೆ ಆರು ಬಾರಿ ತೆಗೆದುಕೊಳ್ಳಬೇಕಾಗುತ್ತದೆ. ಫಲಿತಾಂಶ ಉತ್ತಮ ಎನ್ನುವುದು ವಿಷವೈದ್ಯ ಡಾ| ಎನ್.ಬಿ. ಶ್ರೀಧರ್ ಅಭಿಪ್ರಾಯ.

ಆದರೆ ಬೆಲೆ? ಮುಂಡಿಗೇಸರದ ವೆಂಕಟೇಶನಿಗೆ ಸಾಕಿದ ನಾಯಿ ಕಚ್ಚಿತು. ವೈದ್ಯರು ಸೂಚಿಸಿದಂತೆ ಆತ ರೇಬಿಪರ್‌ನ ಒಂದು ಡೋಸ್ ಲಸಿಕೆ ತೆಗೆದುಕೊಂಡಿದ್ದಾರೆ. ಅದಕ್ಕೆ ಒಂದೊಂದು ಅಂಗಡಿಯಲ್ಲಿ ಒಂದೊಂದು ಬೆಲೆ-ರೂ.೨೮೦, ರೂ.೩೦೦ ಹಾಗೂ ರೂ.೩೨೦.

ಇದರಲ್ಲಿ ನಿಜವಾದ ಬೆಲೆ ಯಾವುದು? ಚೌಕಾಸಿ ಮಾಡಬಹುದಿತ್ತೆ? ಒಮ್ಮೆಲೇ ೬ ಡೋಸ್ ತೆಗೆದುಕೊಳ್ಳುವುದಾದರೆ ಎಷ್ಟು ಕಡಿಮೆ ಮಾಡುತ್ತಿದ್ದ? ಬೆಂಗಳೂರಿನಲ್ಲಿ ಇದರ ಬೆಲೆ ಕಡಿಮೆಯೋ? ಹೆಚ್ಚೋ? ದೇಶಾದ್ಯಂತ ಅತ್ಯವಶ್ಯ ಔಷಧಗಳಿಗೂ ಬೆಲೆ ನಿಯಂತ್ರಣವಿಲ್ಲವೆಂದರೆ ಹೇಗೆ?

ಕೆಲವು ವರ್ಷಗಳ ಹಿಂದೆ ಔಷಧಿ ಉದ್ಯಮ ಕುರಿತಂತೆ ಸರಕಾರ ಎರಡು ಸಮಿತಿಗಳನ್ನು ನೇಮಿಸಿತು. ಅವು ಬೆಲೆ ನಿಯಂತ್ರಣ ಸಮಿತಿ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಸಮಿತಿ.

ಇವೆರಡು ಸಮಿತಿಗಳು ಅನೇಕ ವಿಷಯಗಳ ಕುರಿತು ಅಧ್ಯಯನ ನಡೆಸಿದವು. ಸಮಿತಿಯ ಸದಸ್ಯರು ಯುಎಸ್‌ಎ, ಮೆಕ್ಸಿಕೋ, ಕೆನಡಾ, ಫ್ರಾನ್ಸ್, ಈಜಿಪ್ಟ್, ಇಂಗ್ಲೆಂಡ್, ಇಟಲಿ, ಜರ್ಮನಿ, ಜಪಾನ್, ಸ್ಪೇನ್, ನೆದರ್‌ಲ್ಯಾಂಡ್, ಸ್ವಿಟ್ಜರ್‌ಲ್ಯಾಂಡ್, ಇಂಡೋನೇಷಿಯಾ, ಕೊಲಂಬಿಯಾಗಳಿಗೆ ಭೇಟಿಯಿತ್ತರು. ಔಷಧಿಗಳು ಅಲ್ಲಿ ಹೇಗೆ ಮಾರಾಟವಾಗುತ್ತಿವೆ, ಅಲ್ಲಿನ ಬೆಲೆ ನೀತಿ ಹೇಗಿದೆ ಎಂದು ತಿಳಿದುಕೊಳ್ಳುವುದು ಪ್ರವಾಸದ ಉದ್ದೇಶ. ಅವರಿಗೆ ತಿಳಿದುಬಂದ ಅಂಶವೆಂದರೆ ಮುಕ್ತಮಾರುಕಟ್ಟೆ ಇರುವ ಹಾಗೂ ಅತ್ಯಂತ ಕಡಿಮೆ ದರದಲ್ಲಿ ಔಷಧಿ ಕೊಡುತ್ತಿದ್ದೇವೆಂದು ಹೇಳಿಕೊಳ್ಳುವ ದೇಶಗಳಲ್ಲೂ ಸಹ ನಿಜಸ್ಥಿತಿ ಆ ರೀತಿ ಇರಲಿಲ್ಲ. ಮಾರಾಟ ಒಪ್ಪಂದಕ್ಕೊಳಪಟ್ಟ ವಿದೇಶಿ ಔಷಧ ಹಾಗೂ ಸ್ವಂತ ತಯಾರಿಸಿದ ಔಷಧಗಳನ್ನು ಸರಕಾರದಲ್ಲಿ ರಿಜಿಸ್ಟರ್ ಮಾಡಿಸಬೇಕಾದ್ದು ಮೂಲಭೂತ ಕರ್ತವ್ಯವಾಗಿತ್ತು. ಹಣ ಹಿಂದಿರುಗಿಸುವ ಬೆಲೆಸೂಚಿ, ಅನ್ವಯಿಕ ಬೆಲೆಸೂಚಿ, ಪೇಟೆಂಟ್ ಬೆಲೆಸೂಚಿಗಳನ್ನು ತೋರಿಸಿ ಔಷಧಿ ಕಂಪೆನಿಗಳು ಬೆಲೆ ಕಟ್ಟಬೇಕು ಎನ್ನುವ ಕಾನೂನಿತ್ತು. ಕೆಲವು ದೇಶಗಳಲ್ಲಿ ಅಂಗಡಿಯವರಿಗೆ ಮತ್ತು ಸಗಟು ಮಾರಾಟಗಾರರಿಗೆ ಸಿಗುವ ಲಾಭವನ್ನು ಮುಚ್ಚಿಡಲಾಗಿತ್ತು. ಮಾರಾಟ ಪ್ರಮಾಣವನ್ನು ಅನುಸರಿಸಿ ಬೆಲೆ ನಿಗದಿಗೊಳಿಸುವ ಪದ್ಧತಿಯಿದ್ದಿತ್ತು. ಸಾಮಾನ್ಯರಿಗೆ ಆರೋಗ್ಯ ಮತ್ತು ವಿಮಾ ಸೌಲಭ್ಯದಡಿಯಲ್ಲಿ ಖಾಸಗಿ ಕಂಪೆನಿಗಳ ಅಥವಾ ಜನತೆಯ ಹಣಕಾಸಿನಿಂದ ಒಂದು ಹಂತರದವರೆಗಿನ ಆರೋಗ್ಯಕ್ಕೆ ನೆರವಿನ ಸೌಕರ್‍ಯ ನೀಡಲಾಗಿತ್ತು.

ನಮ್ಮ ತಜ್ಞರಿಗೆ ಈ ಪ್ರವಾಸದಿಂದ ವಿಶೇಷವಾದ ಅಥವಾ ನಮ್ಮಲ್ಲಿ ಸುಲಭವಾಗಿ ಅಳವಡಿಸಬಹುದಾದ ಸೂತ್ರಗಳಾವುವೂ ದಕ್ಕಲಿಲ್ಲ. ತಜ್ಞರು ನೀಡಿದ ಸಲಹೆಗಳೆಂದರೆ,

ಕೆಲವು ದೇಶಗಳಲ್ಲಿ ಜನತೆಯ ಆದಾಯ ಹಾಗೂ ಅವಶ್ಯಕತೆ ಅನುಸರಿಸಿ ಔಷಧಿಗಳ ಬೆಲೆ ನಿಯಂತ್ರಿಸಲಾಗಿದೆ.

ವಿಮಾ ಯೋಜನೆ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಇಟ್ಟಿರುವ ಹಣದಲ್ಲಿ ರೋಗಿಗಳಿಗೆ ಚಿಕಿತ್ಸೆ ಮತ್ತು ಔಷಧಿ ದೊರೆಯುತ್ತಿದೆ.

ಸಾರ್ವಜನಿಕ ಆರೋಗ್ಯ ಯೋಜನೆ ಮತ್ತು ಆರೋಗ್ಯ ವಿಮಾ ಯೋಜನೆಯಡಿಯಲ್ಲಿ ಒಂದಿಷ್ಟು ಪ್ರದೇಶದ ಜನರಿಗೆ ಆರೋಗ್ಯಕ್ಕೆ ಸಂಬಂಧಿಸಿದ ಸೌಲಭ್ಯಗಳು ದೊರೆಯುತ್ತಿವೆ.

ಇವೆಲ್ಲಾ ಬಹುಪಾಲು ಜನರ ಆಯವ್ಯಯ ಅನುಸರಿಸಿ ಇದ್ದುದರಿಂದ ಔಷಧಿಗಳ ಬೆಲೆ ಏರಿಕೆ ಮತ್ತು ಇತರ ಸೇವೆಗಳ ವೆಚ್ಚದ ಬಿಸಿ ಜನರಿಗೆ ನೇರವಾಗಿ ತಟ್ಟುತ್ತಿರಲಿಲ್ಲ. ಆದರೆ ಕಂತಿನಲ್ಲಿ ಕಟ್ಟಬೇಕಾದ ಇನ್ಸೂರೆನ್ಸ್ ಪ್ರೀಮಿಯಂ ಮಾತ್ರ ಹೆಚ್ಚಾಗಿತ್ತು.

ಭಾರತದಲ್ಲಿ ಹೆಚ್ಚು ಪ್ರಮಾಣದ ಜನರು ಮಾರುಕಟ್ಟೆ ನೀತಿಗೆ ಸಿಕ್ಕಿಬೀಳುವವರೇ. ಇಲ್ಲಿ ಔಷಧ ಕೊಳ್ಳಲು ಚೀಲದಲ್ಲಿ ಹಣ ಒಯ್ಯಬೇಕಾದ ಪರಿಸ್ಥಿತಿ ಇದೆ, ಸಾಮಾನ್ಯ ಜನರ ಆರೋಗ್ಯಕ್ಕೆ ಯಾವ ಬೆಂಬಲ ಯೋಜನೆಗಳೂ ಇಲ್ಲ. ಮೆಡಿಕಲ್ ಇನ್ಸೂರೆನ್ಸ್-ಗ್ರಾಹಕ ಜಾಗೃತಿ ಮುಂತಾದ ಪದ ಗೊತ್ತಿರುವವರು ಬಹಳ ಕಡಿಮೆ. ಎಲ್ಲಿಯವರೆಗೆ ಸಾಮಾನ್ಯ ಜನ ಆರೋಗ್ಯಕ್ಕೋಸ್ಕರ ಒಂದಿಷ್ಟು ಹಣ ಮೀಸಲಿಡಲು ಸಮರ್ಥರಾಗುವರೋ, ಅಲ್ಲಿಯವರೆಗೆ ಔಷಧಗಳ ಬೆಲೆ ನಿಯಂತ್ರಣ ಕಾಯ್ದೆ ಕಡ್ಡಾಯವಾಗಿ ಇರಬೇಕು. ಜೊತೆಗೆ ಬದಲಿ ನೀತಿಗಳನ್ನೂ ಅಭಿವೃದ್ಧಿಪಡಿಸಬೇಕು ಎಂದು ತಜ್ಞರ ಸಮಿತಿ ಹೇಳಿತು.

ಔಷಧ ಉದ್ಯಮ ಉನ್ನತ ತಂತ್ರಜ್ಞಾನ, ಹೆಚ್ಚು ಬಂಡವಾಳ ಹಾಗೂ ವಿಜ್ಞಾನಿಗಳ ಸಂಶೋಧನೆಗಳನ್ನು ನೆಚ್ಚಿಕೊಂಡಿರುವ ಕೈಗಾರಿಕೆ. ಇದು ಬೆಲೆ ನಿಯಂತ್ರಣಕ್ಕೊಳಪಟ್ಟಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕೊರತೆ ಆಯವ್ಯಯದಿಂದಾಗಿ ಇದಕ್ಕೆ ಸಿಗಬೇಕಾದ ಹಣಕಾಸು ಸೌಲಭ್ಯ ಸಿಗುತ್ತಿಲ್ಲ. ಇದರಿಂದಾಗಿ ಜನರ ಹಕ್ಕೊತ್ತಾಯಗಳೆಲ್ಲ ಈಡೇರದಂತಾಗಿದೆ.

ಈಗಿರುವ ಬೆಲೆ ನಿಯಂತ್ರಣ ಪದ್ಧತಿ ನಿಯಂತ್ರಣ ಕಳೆದುಕೊಂಡಿದೆ. ಭಾರತೀಯರ ಆರ್ಥಿಕ ಸ್ಥಿತಿಗೆ ಒದಗುವ ಔಷಧ ಬೆಲೆ ನಿಯಂತ್ರಣ ಪದ್ಧತಿ ರೂಪಿಸಬೇಕಿದೆ. ಇದಕ್ಕಾಗಿ ನಿಯಂತ್ರಣ ಮತ್ತು ಬೆಲೆ ನಿಗದಿಗೆ ಒಳಪಡಬೇಕಾದ ಔಷಧಿಗಳನ್ನು ಗುರುತಿಸಬೇಕು. ಗುರುತಿಸುವಾಗ ಇಲ್ಲಿ ಅವು ವೈದ್ಯಕೀಯವಾಗಿ ಎಷ್ಟು ಉಪಯುಕ್ತ ಎನ್ನುವುದನ್ನು ಗಣಿಸಬೇಕು.

ನಿರ್ಧರಿಸುವಾಗ ಹೆಚ್ಚು ಬಳಕೆಯಾಗುತ್ತಿರುವ ಔಷಧಗಳು, ಯುಕ್ತ ಸ್ಪರ್ಧೆ ಇಲ್ಲದಿರುವ ಅಥವಾ ಅತ್ಯವಶ್ಯವಾಗಿದ್ದು ಮಾರುಕಟ್ಟೆಯಲ್ಲಿ ಪೈಪೋಟಿ ಇಲ್ಲದಿರುವ ಔಷಧಿಗಳು ಯಾವುವು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕಾದ್ದು ಮುಖ್ಯ. ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಿಗೆ ಅವಶ್ಯವಿರುವ ಔಷಧಿಗಳು ಇದರಲ್ಲಿ ಸೇರಿರಬೇಕು. ಇವುಗಳನ್ನೆಲ್ಲಾ ಬೆಲೆ ನಿಯಂತ್ರಣದಲ್ಲಿಡಲೇಬೇಕು ಎಂದು ಸಮಿತಿ ಸೂಚಿಸಿತು.

ಇದನ್ನೆಲ್ಲ ಅವಲೋಕಿಸಿದರೆ, ಇಲ್ಲಿಂದ ಬೆಲೆ ನಿಯಂತ್ರಣ ಪದ್ಧತಿಯನ್ನು ಹೊರಗಟ್ಟುವ ವಿಚಾರ ಸೂಕ್ತವಲ್ಲ. ಹಾಗಾದರೆ ಬೆಲೆ ನಿಯಂತ್ರಣದಡಿಯಲ್ಲಿರುವ ಔಷಧಿಗಳಿಗೆ ಮುಕ್ತ ಮಾರುಕಟ್ಟೆ ಒದಗಿಸುವ ಸರಕಾರದ ನೀತಿಯ ಹಿಂದಿರುವ ಉದ್ದೇಶವೇನು? ಭಾರತದ ಬಡ ಗ್ರಾಹಕ ಇನ್ನಷ್ಟು ಭಾರ ಹೊರಬಲ್ಲ ಎಂಬ ವಿಶಾಲ ಮನೋಭಾವವೇ?

– ಈ ಲೇಖನ ವಿವಿಧ ಪತ್ರಿಕೆಗಳ ವರದಿಯನ್ನು ಆಧರಿಸಿದೆ. ಹೆಚ್ಚುವರಿ ಮಾಹಿತಿಗಾಗಿ ತಜ್ಞ ವೈದ್ಯರನ್ನು ಸಹ ಸಂಪರ್ಕಿಸಲಾಗಿದೆ.