ನಮ್ಮದೇಶ ವಿಶಾಲವಾದ ದೇಶ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಹಬ್ಬಿದ ಈ ದೇಶದಲ್ಲಿ ಅನೇಕ ಭಾಷೆಗಳನ್ನಾಡುವ ಜನ ವಾಸವಾಗಿದ್ದಾರೆ. ಅನೇಕ ರೀತಿ, ಆಚಾರ-ವಿಚಾರ, ನಂಬಿಕೆ, ನಡವಳಿಕೆಯ ಜನಾಂಗಗಳು ಬದುಕನ್ನು ಸಾಗಿಸುತ್ತವೆ. ಕೆಲವರು ಗುಡ್ಡಗಾಡುಗಳಲ್ಲಿ, ಕೆಲವರು ಗ್ರಾಮೀಣ ಪ್ರದೇಶಗಳಲ್ಲಿ, ಕೆಲವರು ಪಟ್ಟಣಗಳಲ್ಲಿ ಹಾಗೂ ಕೆಲವರು ಅಲೆಮಾರಿಗಳಾಗಿ ತಮ್ಮ ನಡೆ-ನುಡಿ ವೃತ್ತಿ, ಪ್ರವೃತ್ತಿಗಳಿಂದ ತಮ್ಮ ಸಂಸ್ಕೃತಿಯ ಅನೇಕ ಅಂಶಗಳನ್ನು ಉಳಿಸಿಕೊಂಡು ಬಂದಿದ್ದ ಭಾರತದಲ್ಲಿ ಬುಡಕಟ್ಟುಗಳೇ ಒಂದು ವಿಶಿಷ್ಟ ಸಂಸ್ಕೃತಿ, ಬುಡಕಟ್ಟು ಜನಾಂಗದ ಅರಣ್ಯ ಸಂಸ್ಕೃತಿ. ಇವು ಯಾವ ಪ್ರಭಾವಕ್ಕೆ ಮಣಿಯದೆ ಉಳಿದ ಸಮುದಾಯಗಳಿಂದ ದೂರ ಉಳಿದು ತಮ್ಮ ಸಂಪ್ರದಾಯವನ್ನು ಬಿಟ್ಟುಕೊಡದೇ ಬೇರೆಯವರ ಯಾವುದೇ ಬಗೆಯ ನಡವಳಿಕೆಗಳನ್ನು ಅಳವಡಿಸಿದೇ ತಮ್ಮ ಪದ್ಧತಿಗಳನ್ನು ಉಳಿಸಿಕೊಳ್ಳುತ್ತಾ ಬಂದಿದ್ದಾರೆ.

ಬುಡಕಟ್ಟಿನ ಸಂಸ್ಕೃತಿ

ಬುಡಕಟ್ಟು ಜನಾಂಗ ತಮ್ಮದೇ ಆದ ಭಾಷೆ ಹಾಗೂ ಸಂಸ್ಕೃತಿ ಹೇಳದಿರುವ ಸಮುದಾಯಗಳು, ಅಲೆಮಾರಿಗಳಿಗೆ ಬೇರೆ ಸಮುದಾಯಗಳು ಇವರು ಆದಿವಾಸಿಗಳು ಎಂದು ಗುರುತಿಸಿಕೊಂಡಿದ್ದಾರೆ. ಕರ್ನಾಟಕದಲ್ಲಿ ದೊಂಬಿದಾಸರ ಕೊರವರು, ಸಿಂದೋಳ್ಳಿ, ಹಕ್ಕಿ-ಪಿಕ್ಕಿ, ಸುಡಗಾಡಸಿದ್ಧ, ಸಿಲ್ಮೆಕ್ಯಾತ, ಗೋಸಂಗಿ, ರಾಜಗೊಂಡ, ಗೊಂದಳ ಮುಂತಾದ ಬುಡಕಟ್ಟು ಜನಾಂಗಗಳು ಇದ್ದು ಅವುಗಳಲ್ಲಿ “ಕಂಜರಭಾಟ” ಜನಾಂಗವೂ ಒಂದು.

ಭಾರತದ ವಿವಿಧ ಕಡೆಗೆ ನೆಲೆಸಿರುವ ಕಂಜರಭಾಟ ಜನಾಂಗವು ತನ್ನದೇ ಆದ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿಕೊಂಡು ಬಂದಿದೆ. ಈ ಜನ ಉಳಿದ ಸಮಾಜಗಳೊಂದಿಗೆ ಸಂಪರ್ಕ ಬೆಳೆಸಿಕೊಳ್ಳದೆ ಪ್ರತ್ಯೇಕವಾಗಿ ಉಳಿದುಕೊಂಡಿದೆ. ಕರ್ನಾಟಕದ ಕಂಜರಭಾಟ, ಭಾಟ ಲೋತ್ಯಾರ ಹೆಸರುಗಳಿಂದ ಕರೆಯುತ್ತಾರೆ. ಭಾರತದ ತುಂಬೆಲ್ಲ ಹರಡಿಕೊಂಡಿರುವ ಇವರಿಗೆ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ.

 

ಜಾತಿ ಒಂದೇ ನಾಮಗಳು ಹಲವು

ಕರ್ನಾಟಕ ಕಂಜರಭಾಟ, ಭಾಟ ಲೋತ್ಯಾರ
ಮಹಾರಾಷ್ಟ್ರ ಕಂಜರಭಾಟ ಸಾಂಸಕಂಜರ, ಕಾರವಾನ, ನಾಟ
ದೆಹಲಿ ಸಾಂಸ ಬೇಡಕುಟ, ಕಂಜರ
ರಾಜಸ್ತಾನ ಸಾಂಸಿ ಕಂಜರ, ಬೇಡಿಯಾ, ಕಪಾಡಿಯಾ, ನಾಟ, ಭಾಂತು
ಉತ್ತರ ಪ್ರದೇಶ ಸಾಂಸಿ ಕಂಜರ ಸಾಂಸಿಯಾ, ಭಾಂತು, ಧವಳೆಭಾಂತು ಬೇಡಿಯಾ, ನಾಟಕಪಾಡಿಯಾ
ಪಂಜಾಬ ಸಾಂಸಿ, ಬೇಡ ಕುಟ ನಾಟ
ಬಿಹಾರ ಕಂರಜ ನಾಟ, ಬೇಡಿಯಾ
ಹರಿಯಾಣ ಸಾಂಸಿ ಬೇಡಕುಟ ನಾಟ
ಗುಜರಾತ ಸಾಂಸ ವಾರಾ ಅಡೋಡಿಯಾ
ಪಶ್ಚಿಮ ಬೆಂಗಾಲ ಕಂಜರ ನಾಟ ಬೇಡಿಯ ಭಾಂತು
ಮಧ್ಯ ಪ್ರದೇಶ ಸಾಂಸ ಕಂಜರ ಭಾಂತು ಬೇಡಿಯೆ ನಾಟ
ತ್ರಿಪುರಾ ಸಾಂಸಿ
ಹಿಮಾಚಲ ಪ್ರದೇಶ ಸಾಂಸಿ ಬೇಡಕುಟ ಭಾಟ
ಒರಿಸ್ಸಾ ಸಾಂಸಿ ಬೇಡಿಯಾ ಭಾಟ
ಜಮ್ಮು ಕಾಶ್ಮೀರ ಸಾಂಸಿ ಧವಳೆ ಭಾಂತು
ಆಂಧ್ರ ಪ್ರದೇಶ ಸಾಂಸಿ ನಾಠ
ಅಂಡಮಾನ ನಿಕೋಬಾರ ಸಾಂಸಿ ಭಾಂತು

ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಮಹಾನ್‌ಭಾರತದಲ್ಲಿ ಪರಿಸರಿಸುವ ಇವರು ಒಂದೇ ಜಾತಿಯವರಾಗಿದ್ದರೂ ಅವರು ಮಾಡುವ ಕಸಬುಗಳು, ಬೇರೆ ಬೇರೆ. ಈ ಕಸಬುಗಳ ಹಿನ್ನೆಲೆಯಲ್ಲಿ ಬೇರೆ, ಬೇರೆ ಹೆಸರುಗಳಿವೆ. ಇವರ ಭಾಷೆ, ವೇಷ, ಭೂಷಣ, ಆಚಾರ, ವಿಚಾರ ಪದ್ಧತಿಗಳಿಂದ ಇವರ ಕಂಜರ ಭಾಟರೆಂದು ಗುರುತಿಸಲು ಸಾಧ್ಯ.

ಪೌರಾಣಿಕ ಐತಿಹಾಸಿಕ ಹಾಗೂ ಸಾಮಾಜಿಕ ಹಿನ್ನೆಲೆ

ಪ್ರತಿಯೊಂದು ಸಮಾಜ ತನ್ನ ಮೂಲದ ಬಗೆಗೆ ನಿರ್ದಿಷ್ಟವಾದ ಹಿನ್ನೆಲೆ ಹೊಂದಿರುವುದಿಲ್ಲ. ಕಂಜರಭಾಟ ಜನಾಂಗದ ಬಗೆಗೆ ಇಲ್ಲಿಯವರೆಗೂ ಮೂಲದ ಬಗೆಗೆ ಯಾವ ಪೌರಾಣಿಕ ಹಾಗೂ ಐತಿಹಾಸಿಕ ಅಂಶಗಳನ್ನು ಕಂಡು ಹಿಡಿದಿರುವುದಿಲ್ಲ. ಕೆಲವೊಂದು ಕಂತ ಕಥೆಗಳನ್ನು ಅವಲಂಬಿಸಬೇಕಾಗುತ್ತದೆ.

ಸಮಾಜದ ಪೂರ್ವಜರ ಆಚಾರ, ವಿಚಾರಗಳು ಸಮಾಜದ ಹಳೇ ರೀತಿ ಪದ್ಧತಿ ಆಹಾರ ಉಡುಗೊರೆ, ಭಾಷೆ ಇವುಗಳ ಮೇಲೆ ಆಧರಿಸಿ ಈ ಜಾತಿಯ ಉತ್ಪತ್ತಿ ರಾಜಸ್ತಾನದಲ್ಲಿ ಆಗಿದೆ ಎಂಬುದು ಖಚಿತವಾಗುತ್ತದೆ. ರಾಜಸ್ತಾನದಲ್ಲಿ ಸಾಂಸ ಜನಾಂಗ ಸಾಹಸಿಗಳಾಗಿದ್ದರು. ಅವರು ರಾಜಸ್ತಾನದ ರಜಪೂರ ರಾಜರ ಸೈನಿಕರಾಗಿ ಕಾರ್ಯ ಮಾಡುತ್ತಿದ್ದರು. ಇವರು ಮೊದಲಿನಿಂದಲೂ ಸಾಹಸಿಗಳು, ವೀರಯೋಧರು, ಬಾದ್ದೂರರಾಗಿದ್ದರು. ಇವರ ಆಚಾರ-ವಿಚಾರ ಚಲನ ವಲನ, ಆಹಾರ ಕಳ್ಳತನ ದರೋಡೆ ಇವುಗಳಿಂದ ಸಾಹಸಿಯಿಂದ, ಸಾಂಸಿ ಎಂಬ ನಾಮಕರಣ ಉತ್ಪತ್ತಿಯಾಗಿದೆ ಎಂದು ಹಿರಿಯರು ಹೇಳುತ್ತಾರೆ.

ಈಗಿನ ಪಂಜಾಬ ರಾಜ್ಯದ ಅಮೃತಸರದ ಸುತ್ತ-ಮುತ್ತ ಸಾಂಸಿ ಜನಾಂಗ ಬಹುಸಂಖ್ಯೆಯಲ್ಲಿ ವಾಸವಾಗಿದ್ದರು. ರಾಜಾ ಸಾಂಸಿ ಶಹರ ಸಾಂಸಿ ಜನಾಂಗದವರದೇ ಊರಾಗಿದ್ದು ಸಾಂಸಿ ಸಮುದಾಯದ ಇಬ್ಬರು ಸಹೋದರರಾದ ರಾಜ ಮತ್ತು ಕಿರತು ರಾಜಾ ಸಾಂಸಿ ಶಹರವನ್ನು ಸ್ಥಾಪನೆ ಮಾಡಿದ್ದರು. ಇಲ್ಲಿ ಸಾಂಸಿ ಜಾತಿಯ ರಾಜಾ ಸೈನ್ಯ ಸಮೇತ ಆಡಳಿತ ಮಾಡಿ ಪ್ರಜೆಗಳ ಪ್ರೀತಿಗೆ ಪಾತ್ರನಾಗಿದ್ದನು. ಅಂತೆಯೇ ಇಲ್ಲಿಯ ವಿಮಾನ ನಿಲ್ದಾಣಕ್ಕೆ “ಸಾಂಸ ವಿಮಾನ ನಿಲ್ದಾಣ” ಎಂದು ನಾಮಕರಣ ಮಾಡಲಾಗಿದೆ.

ಕಂಜರ ಭಾಟ ಅಂದರೆ ಸಾಂಸಿ ಮೂಲತಃ ರಾಜಸ್ತಾನದವರು. ೫-೬ ನೂರು ವರ್ಷ ಹಿಂದಿನ ಇತಿಹಾಸವನ್ನು ನೋಡಿದರೆ, ರಾಜಸ್ತಾನದ ಸಾಂಸ ಜನತೆಯ ಉಡುಗೆ-ತೊಡುಗೆ, ಆಚಾರ-ವಿಚಾರ ಸಂಸ್ಕೃತಿ, ಆಹಾರ ಭಾಷೆ ಮುಂತಾದವುಗಳನ್ನು ಗಮನಿಸಿದರೆ ಕಂಜರಭಾಟರು ರಾಜಸ್ತಾನದಿಂದ ಬಂದ ಜನ ಎಂಬುದು ಹೇಳುವುದರಲ್ಲಿ ಯಾವ ಸಂಶಯವೂ ಇಲ್ಲ. ಮೇವಾಡದ (ಉದಯಪೂರ) ರಜಪೂತ ಅರಸ ಮಹಾರಾಣಾ ಪ್ರತಾಪಸಿಂಹ ಆಡಳಿತ ನಡೆಸುತ್ತಿದ್ದನು. ರಾಜಸ್ತಾನ ಮತ್ತು ದೆಹಲಿಯ ಕೆಲ ಪ್ರದೇಶಗಳು ಮಹಾರಾಣಾ ಪ್ರತಾಪಸಿಂಹ ವಶದಲ್ಲಿದ್ದವು. ತಮ್ಮ ಸಾಮ್ರಾಜ್ಯದ ಪ್ರಜೆಗಳನ್ನು ಸುಖವಾಗಿ ಇಟ್ಟಿದ್ದರು. ಮಹಾರಾಣಾ ಪ್ರತಾಪಸಿಂಹರ ಸೈನ್ಯದಲ್ಲಿ ಸಾಂಸಿ ಜನಾಂಗದವರು ಸೈನಿಕರಾಗಿದ್ದರು. ವೀರ ರಜಪೂರ ಸಿಪಾಯಿಗಳಾಗಿ ಮೆರೆದರು. ಅದೇ ಸಮಯದಲ್ಲಿ ಮೊಗಲರ ಆಡಳಿತ ಪ್ರಾರಂಭವಾಗಿತ್ತು. ಮೊಗಲರ ಅರಸ ಅಕ್ಬರ್ ಬಾದಶಹಾ ೧೫೩೪ರಲ್ಲಿ ಉದಯಪೂರದ ಮೇಲೆ ದಾಳಿ ಮಾಡಿದನು. ಮೊಗಲರ ಬಲಾಢ್ಯ ಸೈನ್ಯದ ಎದುರಿಗೆ ರಾಣಾ ಪ್ರತಾಪಸಿಂಹರ ಸೈನ್ಯ ಸೋತು, ಮಹಾರಾಜ ಪ್ರತಾಪಸಿಂಹರು ಸೈನಿಕರೊಂದಿಗೆ ಹಳದಿ ಘಾಟ ಪರ್ವತಗಳಲ್ಲಿ ತಲೆಮರೆಸಿಕೊಂಡು ಅಡವಿಗಳಲ್ಲಿ ಅಲೆದಾಡತೊಡಗಿದರು. ಅಕಬರ ಬಾದಶಾಹಾ ಪ್ರತಾಪಸಿಂಹರಿಗೆ ಒಂದು ನಿವೇದವನ್ನು ಕೊಟ್ಟು ಕಳಿಸಿದರು. ನೀನು ಶರಣಾದರೆ, ನಿನ್ನ ರಾಜ್ಯವನ್ನು ನಿನಗೆ ಬಿಟ್ಟುಕೊಡುತ್ತೇನೆ ಎಂದು ಹೇಳಿ ಕಳಿಸಿದರು. ವೀರಸ್ವಾಭಿಮಾನಿ, ದೇಶಪ್ರೇಮಿ ರಾಣಾ ಪ್ರತಾಪಸಿಂಹ ಅದಕ್ಕೆ ಒಪ್ಪದೆ ನನ್ನ ಜೀವ ಇರುವವರೆಗೆ ಯುದ್ಧ ಮಾಡಿ ಜಯಸಾಧಿಸಿ ನನ್ನ ಸಾಮ್ರಾಜ್ಯವನ್ನು ಪಡೆದುಕೊಳ್ಳುತ್ತೇನೆ ಎಂದು ಪ್ರತಿಜ್ಞೆ ಮಾಡಿದನು. ರಾಜನ ಜತೆಗೆ ಅನೇಕ ಸೈನಿಕರು ಇದ್ದರು. ಎಷ್ಟೋ ದಿನ ಆಹಾರ, ನೀರು, ಸರಿಯಾಗಿ ದೊರೆಯದೆ ಉಪವಾಸ ಇರುತ್ತಿದ್ದರು. ಅಡವಿಯಲ್ಲಿ ದೊರೆತ ಗಡ್ಡೆ-ಗೆಣಸುಗಳನ್ನು ತಿಂದು ಅಡವಿಯಲ್ಲಿ ಇರತೊಡಗಿದರು. ಬರಬರುತ್ತ ಅಡವಿಯೊಳಗಿನ ಕಾಡು ಪ್ರಾಣಿಗಳನ್ನು ಕೊಂದು ಸುಟ್ಟು ತಿನ್ನ ತೊಡಗಿದರು. ರಾಜನ ಜೊತೆಗೆ ಸೈನಿಕರು ಸಹ ಕಷ್ಟ, ನಷ್ಟಗಳನ್ನು ಅನುಭವಿಸಿದರು. ರಾತ್ರಿ ವೇಳೆಯಲ್ಲಿ ೪-೫ ಜನರು ಗುಂಪು ಕಟ್ಟಿಕೊಂಡು ಸಮೀಪದ ಹಳ್ಳಿಗಳಲ್ಲಿ ಕಳ್ಳತನ ದರೋಡೆ ಮಾಡತೊಡಗಿದರು. ಮೊಗಲರ ಅರಸರು ಅನೇಕ ಪ್ರಕಾರದ ತೊಂದರೆಗಳನ್ನು ಕೊಡತೊಡಗಿದರು. ಕೊನೆಗೂ ರಾಣಾ ಪ್ರತಾಪಸಿಂಹ ತನ್ನ ಸಾಮ್ರಾಜ್ಯವನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ರಜಪೂತ ಸೈನಿಕರು ತೊಂದರೆಗಳನ್ನು ಸಹಿಸಿಕೊಳ್ಳದೆ ಅಡವಿಯನ್ನು ಬಿಟ್ಟು ದೇಶದ ಬೇರೆ ಬೇರೆ ಕಡೆಗೆ ಕತ್ತೆ-ಕುದುರೆಗಳ ಮೇಲೆ ತಮ್ಮಜೀವನೋಪಾಯದ ಸಾಮಗ್ರಿಗಳನ್ನು ಹೇರಿಕೊಂಡು ಸಂಚರಿಸುತ್ತ ಕಳ್ಳತನ, ದರೋಡೆ, ಭಿಕ್ಷಾಟನೆ ಮಾಡತೊಡಗಿದರು. ಅಲ್ಲಿಯ ಪರಿಸರಕ್ಕೆ ಹೊಂದಿಕೊಂಡು ಜೀವನ ಸಾಗಿಸಿದರು. ಅದೇ ಸಮಯಕ್ಕೆ ಈ ಭಾಗದಲ್ಲಿಯೂ ರಾಜಸ್ತಾನದಿಂದ ಬಂದ ಕುಂಜರಭಾಟ ಜನಾಂಗ ಇಲ್ಲಿಯ ಉದ್ಯೋಗಗಳಿಗೆ, ಸಂಸ್ಕೃತಿಗೆ ಹೊಂದಿಕೊಂಡು ಕತ್ತೆ-ಕುದುರೆಗಳ ಮೇಲೆ ತಮ್ಮ ಜೀವನಕ್ಕೆ ಬೇಕಾಗುವ ವಸ್ತುಗಳನ್ನು ಹೇರಿಕೊಂಡು ಹಳ್ಳಿ-ಹಳ್ಳಿ ಸಂಚರಿಸಿ ಭಿಕ್ಷಾಟನೆ ಮಾಡಿ ಜೀವನವನ್ನು ಸಾಗಿಸಿದ್ದಾರೆ. ಇವರ ಜತೆಯಲ್ಲಿ ತಾವೇ ಸ್ವತಃ ಸೆರೆಯನ್ನು ತಯಾರಿಸಿ ಕುಡಿಯುತ್ತಿದ್ದರು. ಮತ್ತು ಮಾರುತ್ತಿದ್ದರು. ಈ ವೃತ್ತಿಯನ್ನು ಹೆಚ್ಚಾಗಿ ಕಂಜರಭಾಟ ಜನಾಂಗದವರೇ ಮಾಡುತ್ತಿದ್ದರು.

ಕಂಜರಬಾಟ ಜನ ತೀರ ಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇವರ ಜೀವನದ ಪದ್ಧತಿ ಇತರ ಸಮುದಾಯಗಳಿಗಿಂತ ಭಿನ್ನವಾಗಿದೆ. ಇವರು ತಮ್ಮದೇ ಆದ ರೀತಿಯಲ್ಲಿ ಜೀವನ ಸಾಗಿಸುತ್ತಾರೆ. ಹಳ್ಳಿ-ಹಳ್ಳಿ ಸಂಚರಿಸಿ ಕಾಳು ಕಡಿ ಸಂಗ್ರಹಿಸುತ್ತಾರೆ. ಸಾರಾಯಿಯನ್ನು ಮನೆಯಲ್ಲಿ ತಯಾರಿಸುವವರು ಸ್ವತಃ ತಾವೇ ಹೆಚ್ಚು ಸಾರಾಯಿಯನ್ನು ಮಾಡುತ್ತಾರೆ. ಎಲೆ-ಅಡಿಕೆ ತಂಬಾಕು ಹಾಕಿಕೊಳ್ಳುವ ಚಟ ಮುಖ್ಯವಾಗಿದೆ. ಯಾವಾಗಲೂ ಕೈಯಲ್ಲಿ ಎಲೆ-ಅಡಿಕೆ, ತಂಬಾಕಿನ ಚೀಲ ಇರುತ್ತದೆ. ಅದರಲ್ಲಿ ಅಡಕೋತ ಇರುತ್ತದೆ. ಅಡಕೋತಿಗೆ ಗೆಜ್ಜೆಕಟ್ಟಿರುತ್ತಾರೆ. ಅಡಿಕೆ ಕತ್ತರಿಸುವಾಗ ಝಣ, ಝಣ ಸಪ್ಪಳವಾಗುವುದು. ಇವರ ವೇಷ ಭೂಷಣ ಮಾರವಾಡಿ ಜನರಂತೆ ಧರಿಸುತ್ತಾರೆ. ಈ ಜನ ಮಾತಾಡುವ ಭಾಷೆ ಈ ಎಲ್ಲ ಹಿನ್ನೆಲೆಗಳಿಂದ ಈ ಜನ ಕಂಜರಭಾಟ ಸಮುದಾಯದವರೆಂದು ಗುರುತಿಸಲು ಸಾಧ್ಯ.ಕಂಜರಭಾಟ ಸಮಾಜದ ಅಪರಿಚಿತ ಇಬ್ಬರು ವ್ಯಕ್ತಿಗಳು ಎದುರು ಬದುರು ಆದಾಗ ಅವರಿಗೆ ಅವರ ಪರಿಚಯದ ಬಗೆಗೆ ಅನುಮಾನ ಬಂದಾಗ ನೀನು ಸೈಂಸಮಲ್‌ಭಾಂತು ಏನು ಎಂದು ಕೇಳುತ್ತಾನೆ. ಅವನು ಅದೇ ಸಮುದಾಯದವನಾಗಿದ್ದರೆ ಹೌದು ನಾನು ಸೈಂಸಮಲ್‌ಭಾಂತು ಎಂದು ಹೇಳುತ್ತಾನೆ. ಸೈಂಸಮಲ್‌ಭಾಂತು ಈ ವ್ಯಾಖ್ಯಾನ ಇಡೀ ದೇಶದಲ್ಲಿ ಈ ಸಮುದಾಯದ ಸಂಕೇತವಾಗಿದೆ. ಈ ಜನರ ಭಾಷೆಯ ಮೇಲೆಯೂ ಇವರನ್ನು ಗುರುತಿಸಲು ಸಾಧ್ಯ.

ಕಂಜರಭಾಟರು ರಾಜಸ್ತಾನದಿಂದ ವಲಸೆ ಬಂದವರು. ರಾಜಸ್ತಾನದಲ್ಲಿ ಈ ಜನಕ್ಕೆ ಸಾಂಸಿ ಎಂದು ಕರೆಯುತ್ತಾರೆ. ಇವರು ಸಂಚಾರಿಗಳು. ಗುಡ್ಡಗಾಡು ಪ್ರದೇಶ, ಹಳ್ಳಿ ಹಳ್ಳಿ ಅಲೆಯುತ್ತ ತಮ್ಮ ಜೀವನ ಸಾಗಿಸುವವರು ಒಂದೇ ಕಡೆಗೆ ನೆಲೆಸುವುದು ಸಾಧ್ಯವಾಗಲಿಲ್ಲ. ದೇಶ ಸ್ವತಂತ್ರವಾಗಿ ೬೦ ವರ್ಷಗಳು ಕಳೆದರೂ ಸಹ ಈ ಸಮುದಾಯದವರಿಗೆ ಒಂದು ಸ್ವಂತ ಮನೆ ಪ್ರಾಪ್ತವಾಗಲಿಲ್ಲ. ಇದಕ್ಕೆ ಕಾರಣ ಬಡತನ. ಕರ್ನಾಟಕದ ಹಲವಾರು ಹಳ್ಳಿಗಳಲ್ಲಿ ವಾಸವಾಗಿದ್ದಾರೆ. ಅವರು ಇರುವ ಪರಿಸ್ಥಿತಿ ಮತ್ತು ಜೀವನ ಸಾಗಿಸುವ ರೀತಿಯನ್ನು ನೋಡಿದರೆ ದೇವರೇ ಅವರನ್ನು ಕಾಪಾಡಬೇಕು ಎಂದು ಅನಿಸುತ್ತದೆ. ಇವರು ಸಂಚಾರಿಗಳಾಗಿರುವುದರಿಂದ ಈ ಸಮಾಜದ ಜನಸಂಖ್ಯೆ ಕಂಡುಹಿಡಿಯುವುದು ತೊಂದರೆದಾಯಕವಾಗಿದೆ. ಕರ್ನಾಟಕ ಕಂಜರಭಾಟ ಜನಾಂಗ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರಪ್ರದೇಶಗಳಿಗೆ ವಲಸೆ ಹೋಗಿ ಅಲ್ಲಿ ಸ್ವಲ್ಪ ದಿವಸ ಇದ್ದು, ಮತ್ತೆ ತಿರುಗಿ ಕರ್ನಾಟಕಕ್ಕೆ ಬರುತ್ತಾರೆ. ಈ ರೀತಿ ಹಲವಾರು ಕುಟುಂಬಗಳು ರಾಜ್ಯದಿಂದ ರಾಜ್ಯಕ್ಕೆ ಸಂಚರಿಸುತ್ತಾರೆ.

ಭಾರತ ದೇಶ ವಿಶಾಲವಾದ ದೇಶ. ಹಳ್ಳಿಗಳೇ ಹೆಚ್ಚಾಗಿದ್ದು ಈ ಜನ ಹಳ್ಳಿ ಜೀವನಕ್ಕೆ ಹೊಂದಿಕೊಂಡು ತಮ್ಮ ಸಂಸ್ಕೃತಿ ಪದ್ಧತಿಗಳನ್ನು ಅನುಸರಿಸುತ್ತ ಬಂದಿದ್ದಾರೆ. ಬುಡಕಟ್ಟುಗಳ ವಾಸ ಅರಣ್ಯದಲ್ಲಿ ಹಳ್ಳಿಯ ಯಾವುದಾದರೊಂದು ಮೂಲೆಯ ಬಯಲು ಜಾಗೆಗಳಲ್ಲಿ ವಾಸ್ತವ್ಯವನ್ನು ಹೂಡಿ ಜೀವನ ಸಾಗಿಸುತ್ತಾರೆ. ಶಹರಗಳಲ್ಲಿ ಇದ್ದರೂ ಸಹ ಉಳಿದ ಸಮುದಾಯಗಳಿಂದ ದೂರ ಸ್ಥಾನವನ್ನು ಆಯ್ದು ವಾಸವಾಗಿದ್ದಾರೆ. ಇವರು ಒಂದೇ ಕಡೆಗೆ ವಾಸವಾಗಿರುತ್ತಾರೆ. ಇವರ ಸತಿಗೆ “ಪೇಡಾ” ಎಂದು ಕರೆಯುತ್ತಾರೆ.

ಈ ಜನ ಸಂಚರಿಸುವುದರಿಂದ ಪಟ್ಟಣಗಳ ಸಂಸ್ಕೃತಿಯನ್ನು ಅಳವಡಿಸಲು ಇಚ್ಚೆ ಪಡುವುದಿಲ್ಲ. ಸಂಪೂರ್ಣವಾಗಿ ಆದಿವಾಸಿಗಳಂತೆ ಬದುಕು ಸಾಗಿಸುತ್ತಾರೆ. ಹಿಂದಿನ ರಾಜ ಮಹಾರಾಜರು ಮತ್ತು ಸರಕಾರ ಅಲೆಮಾರಿಗಳಿಗೆ ನಿರ್ಲಕ್ಷಿಸಿರಬೇಕೆಂದು ಕಾಣುತ್ತದೆ. ಯಾಕೆಂದರೆ ಈ ಅಲೆಮಾರಿಗಳು ಹಳ್ಳಿಗಳಾಗಲಿ ಎಲ್ಲಿಯೂ ಮಧ್ಯಭಾಗದಲ್ಲಿ ನೆಲೆಸಿಲ್ಲ. ಬೇರೆ ಸಮುದಾಯಗಳು ಇವರಿಗೆ ಒಳ್ಳೆ ಭಾವನೆಗಳಿಂದ ಕಾಣದೇ ಇರುವುದು ಒಂದು ಕಾರಣ. ಇತ್ತಿತ್ತಲಾಗಿ ಕಂಜರಭಾಟ ಜನಾಂಗ ಹೊರಗಿನ ಪರಿಸರಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದೆ. ಸೂಕ್ಷ್ಮವಾಗಿ ಗಮನಿಸಿ ನೋಡಿದರೆ ಅನೇಕ ಕುಟುಂಬಗಳು ನಾವು ಯಾವ ಉದ್ಯೋಗ ಮಾಡಬೇಕು, ಹೇಗೆ ಸುಧಾರಣೆ ಕಾಣಬೇಕು ಎಂಬುದನ್ನೇ ಚಿಂತನೆ ಮಾಡುತ್ತಿದ್ದಾರೆ.

ಕರ್ನಾಟಕದಲ್ಲಿ ಕಂಜರಭಾಟರು ಎಲ್ಲ ಕಡೆಗೆ ಸಂಚರಿಸುತ್ತಾರೆ. ಈ ಜನ ಕತ್ತೆ-ಕುದುರೆಗಳ ಮೇಲೆ ಜೀವನೋಪಾಯದ ಸಾಮಾನುಗಳನ್ನು ಹೇರಿಕೊಂಡು ಕಲ್ಲು-ಮುಳ್ಳು, ತಗ್ಗು-ದಿನ್ನಿ, ಮಳೆ, ಗಾಳಿ, ಬಿಸಿಲು, ಇದು ಯಾವುದನ್ನು ಲೆಕ್ಕಿಸದೇ ಬರಿಗಾಲಿನಿಂದ ಹೆಂಡತಿ, ಮಕ್ಕಳು, ಕುರಿ, ನಾಯಿಗಳೊಂದಿಗೆ ಸಂಚರಿಸುತ್ತಾರೆ. ಈ ಜನಾಂಗದ ಇತಿಹಾಸದ ಬಗೆಗೆ ಇಲ್ಲಿಯವರೆಗೆ ಕಾವ್ಯಗಳಾಗಲಿ, ಕಥೆಗಳಾಗಲಿ, ಸಂಗ್ರಹ ಮಾಡಿಲ್ಲ. ಭಾರತ ದೇಶದ ಉತ್ತರ ಭಾಗದಲ್ಲಿ ಈ ಜನ ಹೆಚ್ಚಾಗಿದ್ದಾರೆ. ಉತ್ತರ ಪ್ರದೇಶ, ಹರಿಯಾಣ, ಪಂಜಾಬ್‌, ಕಾಶ್ಮೀರ, ಬಿಹಾರ, ಮಧ್ಯಪ್ರದೇಶ, ರಾಜಸ್ತಾನ, ಗುಜರಾತ, ಆಸಾಮ್‌, ಪ.ಬೆಂಗಾಲ, ಒರಿಸ್ಸಾ, ಅಂಡಮಾನ ನಿಕೋಬಾರ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಪ್ರದೇಶಗಳಲ್ಲಿ ವಾಸವಾಗಿದ್ದಾರೆ.

ಕಂಜರಭಾಟ ಜನ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗಿ ವಾಸವಾಗಿದ್ದಾರೆ. ಅವರ ಅಂಕಿ, ಸಂಖ್ಯೆ ಸರಿಯಾಗಿ ದೊರೆಯುವುದು ಕಷ್ಟದಾಯಕವಾಗಿದೆ. ನಗರ ಪ್ರದೇಶಗಳಲ್ಲಿಯೂ ವಾಸವಾಗಿದ್ದ ಜನಸಂಖ್ಯೆಯ ವಿವರಣೆ ದೊರೆತಿದೆ. ಕರ್ನಾಟಕದಲ್ಲಿ ವಾಸವಾಗಿರುವ ಕಂಜರಭಾಟರ ಜನಸಂಖ್ಯೆ ಕಂಡು ಹಿಡಿಯಲಾಗಿದೆ. ಕರ್ನಾಟಕದಲ್ಲಿ ಎರಡು-ಮೂರು ಸಾವಿರ ಜನಸಂಖ್ಯೆ ಇದೆ. ನಾವು ಮಾಡಿದ ಗಣತಿಯ ಪ್ರಕಾರ ಎರಡು ಸಾವಿರ ಮಿಕ್ಕಿ ಜನಸಂಖ್ಯೆ ಇದೆ. ಕೆಲ ಕುಟುಂಬಗಳು ತಮ್ಮ ನೆಲೆಯನ್ನು ಬಿಟ್ಟು ಹೊಟ್ಟೆಪಾಡಿಗಾಗಿ ಹಳ್ಳಿ-ಹಳ್ಳಿ ಸಂಚಾರ ಕೈಗೊಂಡಿದ್ದಾರೆ.

ಕರ್ನಾಟಕದಲ್ಲಿ ವಾಸವಾಗಿರುವ ಕಂಜರಭಾಟರ ಜಿಲ್ಲಾ ವಾರು ಕುಟುಂಬಗಳ ಅಂಕಿ, ಸಂಖ್ಯೆಗಳು ಈ ಕೆಳಗಿನಂತಿವೆ.

ಬೆಳಗಾಂವ ಜಿಲ್ಲೆ

ರಾಯಭಾಗ, ನಿಪ್ನಳ, ಹುಕ್ಕೇರಿ, ಚಿಕ್ಕೋಡಿ, ಅಜ್ಜನಕಟ್ಟಿ, ಬೆಲ್ಲದ ಬಾಗೇವಾಡಿ

ಬಿಜಾಪೂರ ಜಿಲ್ಲೆ

ಬಿಜಾಪೂರ ನಗರ, ಮುದ್ದೇಬಿಹಾಳ, ಇಂಡಿ, ಜಮಖಂಡಿ, ಕಲಾದಗಿ,

ಕಾರವಾರ ಜಿಲ್ಲೆ

ದಾಂಡೇಲಿ

ಧಾರವಾಡ ಜಿಲ್ಲೆ

ಧಾರವಾಡ ಶಹರ, ಹುಬ್ಬಳ್ಳಿ ಶಹರ.

ಗದಗ ಜಿಲ್ಲೆ

ಗದಗ ನಗರ, ನರಗುಂದ, ಗಜೇಂದ್ರಗಡ, ರೋಣ

ಬಾಗಲಕೋಟ ಜಿಲ್ಲೆ

ಮುಧೋಳ, ಗದ್ದನಕೇರಿ, ಬಾಗಲಕೋಟ ನಗರ

ದಾವಣಗೆರೆ ಜಿಲ್ಲೆ

ಹರಿಹರ

ಮೈಸೂರು ಜಿಲ್ಲೆ

ಮೈಸೂರು ನಗರ

ಬೆಂಗಳೂರು ಜಿಲ್ಲೆ

ಬೆಂಗಳೂರು ನಗರ

ಕೋಲಾರ ಜಿಲ್ಲೆ

ಕೋಲಾರ

ಹಾವೇರಿ ಜಿಲ್ಲೆ

ಬಂಕಾಪುರ, ಮುತ್ತಳ್ಳಿ, ರಾಮನಕೊಪ್ಪ, ಶಿಗ್ಗಾಂವಿ.

ಇನ್ನೂ ಹಲವಾರು ಸ್ಥಳಗಳಲ್ಲಿ ವಾಸವಾಗಿದ್ದ ಜನರು ಭೇಟಿಯಾಗದೆ ಉಳಿದುಕೊಂಡಿದ್ದಾರೆ. ಶಿರಹಟ್ಟಿ, ಲಕ್ಷ್ಮೇಶ್ವರ, ಇಂಡಿ, ನವಲಗುಂದ ಕೊಣ್ಣೂರ, ಕಲಘಟಿಗೆ ಮುಂತಾದ ಕಡೆಯ ಈ ಜನರು ತಮ್ಮ ಸ್ಥಳವನ್ನು ಬಿಟ್ಟು ಬೇರೆ ಕಡೆಗೆ ಹೋಗಿದ್ದಾರೆ ಎಂಬುದು ತಿಳಿದುಬಂದಿದೆ. ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ವಾಸವಾಗಿರುವ ಕಂಜರಭಾಟ ಜನಾಂಗದ ಜನಸಂಖ್ಯೆ ದಾಖಲೆಗಳನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಕರ್ನಾಟಕದಲ್ಲಿ ಕನಿಷ್ಟ ೨೫೦೦ ಜನರು ವಾಸವಾಗಿದ್ದಾರೆ.

ಜೀವನ ವಿಧಾನ ಮತ್ತು ಸಾಮಾಜಿಕ ವ್ಯವಸ್ಥೆ

ವಸತಿ ವ್ಯವಸ್ಥೆ: ಕಂಜರಭಾಟರು ರಾಜಸ್ತಾನದಿಂದ ವಲಸೆ ಬಂದ ಜನಾಂಗ. ಇವರಿಗೆ ಇರಲು ಮನೆ ವಗೈರೆ ಇರಲಿಲ್ಲ. ಉಳಲು ಹೊಲ ಇರಲಿಲ್ಲ. ಇವರು ಸಂಚಾರಿಗಳು. ಗುಡ್ಡ ಗಾಡು ಪ್ರದೇಶಗಳಲ್ಲಿ ನೀರಿನ ವ್ಯವಸ್ಥೆಯನ್ನು ನೋಡಿ ವಾಸ ಮಾಡುತ್ತಿದ್ದರು. ಇವರು ಸಂಚರಿಸುವ ನಾಲ್ಕು, ಐದು ಕುಟುಂಬಗಳು ಒಂದೇ ಕಡೆಗೆ ವಾಸ ಇದ್ದು ತಾವು ತಂದಂತಹ ಡೇರೆ (ತುಂಬು) ಮೂರು ಕಟ್ಟಿಗೆಯ ಕೋಲುಗಳನ್ನು ತೆಗೆದುಕೊಂಡು ಎರಡು ಕೋಲುಗಳನ್ನು ಎದುರು ಬದುರಾಗಿ ಹುಗಿಯುತ್ತಿದ್ದರು. ಒಂದು ಕೋಲನ್ನು ಹುಗಿದ ಕೋಲುಗಳಿಗೆ ಕಟ್ಟಿ ಮೇಲೆ ಗುಡಾರ ಅಥವಾ ಡೇರೆಯನ್ನು ಹಾಕಿ ಎಡಬಲಕ್ಕೆ ಗೂಟಗಳನ್ನು ಬಡಿದು ತ್ರಿಕೋಣಾಕಾರದ ಗುಡಿಸಲು ಕಟ್ಟಿಕೊಳ್ಳುತ್ತಾರೆ. ಇಂಥ ಗುಡಿಸಲಿಗೆ ತುಂಬು ಅಥವಾ ಝಂಪಾಡಾ ಎಂದು ಕರೆಯುತ್ತಾರೆ. ನಂತರ ಮೂರು ನಾಲ್ಕು ದಿನಗಳ ನಂತರ ಅದನ್ನು ಕಿತ್ತು ಮುಂದಿನ ಊರಿಗೆ ಪ್ರವಾಸ ಕೈಗೊಳ್ಳುವರು. ಈ ರೀತಿ ಜನ ವಾಸಕ್ಕಾಗಿ ಮನೆಯನ್ನು ರಚಿಸಿ ತಮ್ಮ ಉಪಜೀವನದ ವಸ್ತುಗಳನ್ನು ಅದರಲ್ಲಿ ಇಡುತ್ತಿದ್ದರು. ಅದೇ ಗುಡಿಸಲಿನ ಹೊರಗೆ ಮೂರು ಕಲ್ಲುಗಳನ್ನು ಇಟ್ಟು ಒಲೆ ತಯಾರಿಸಿ ಅಡುಗೆ ಮಾಡಿಕೊಳ್ಳುತ್ತಿದ್ದರು. ಮತ್ತು ಸಾಕಿದ ನಾಯಿ, ಆಡು, ಕುರಿ, ಕೋಳಿ, ಕತ್ತೆ, ಕುದುರೆಗಳ ಸಲುವಾಗಿ ಗುಡಿಸಲು ಹೊರಗೆ ಜಾಗೆಯನ್ನು ಮೀಸಲಾಗಿರುತ್ತಿತ್ತು. ಉಳಿದ ಜಾಗೆಯಲ್ಲಿ ಕುಟುಂಬದ ಸದಸ್ಯರು ವಾಸವಾಗಿರುತ್ತಿದ್ದರು. ಇವರು ಒಂದು ಹಳ್ಳಿಯಿಂದ ಮತ್ತೊಂದು ಹಳ್ಳಿಗೆ ಭಿಕ್ಷಾಟನೆಗೆ ಹೋಗುವಾಗ ಅದೇ ಗುಡಿಸಲುಗಳನ್ನು ಚಿಕ್ಕಮಕ್ಕಳಿಗೆ, ಗರ್ಭಿಣಿಯರಿಗೆ, ವಯಸ್ಸಾದ ವೃದ್ಧರಿಗೆ ಬಿಟ್ಟು ಹೋಗುತ್ತಿದ್ದರು. ಸುಗ್ಗಿ ಕಾಲಕ್ಕೆ ಭಿಕ್ಷಾಟನೆಗೆ ಹಳ್ಳಿ ಹಳ್ಳಿಗೆ ಅಲೆಯುತ್ತಾರೆ. ಕಾಳು ಕಡಿಗಳನ್ನು ಸಂಗ್ರಹಿಸಿ ವರ್ಷಕ್ಕೆ ಬೇಕಾಗುವಷ್ಟು ಕಾಳು ಕಡಿಗಳನ್ನು ತೆಗೆದಿಟ್ಟು ಉಳಿದ ಕಾಳು ಕಡಿಗಳನ್ನು ಮಾರಿ ಇನ್ನಿತರ ಕಾರ್ಯಗಳಿಗೆ ಹಣ ಉಪಯೋಗಿಸುವರು. ಹುಲ್ಲಿನಿಂದ ತಯಾರಿಸಿದ ಜೋಪಡಿ (ಗುಡಿಸಲು)ಗಳಲ್ಲಿ ವಾಸವಾಗುತ್ತಾರೆ. ಕೆಲಕಡೆಗೆ ಸಣ್ಣ, ಸಣ್ಣ ಗೋಡೆಗಳನ್ನು ಕಟ್ಟಿಕೊಂಡು ಮೇಲೆ ಹುಲ್ಲಿನ ಚಪ್ಪರ ಹಾಕಿ ಆಶ್ರಯ ಮಾಡಿಕೊಳ್ಳುವರು. ಕಲ್ಲು ಮಣ್ಣಿನಿಂದ ಕಟ್ಟಿದ ಇವರ ಕಚ್ಚಾ ಮನೆಗಳಿಗೆ ಕಿಡಿಕಿಗಳಿರುವುದಿಲ್ಲ. ಸಣ್ಣ ಬಾಗಿಲು ಇದ್ದು ಒಳಗೆ ಹೋಗಬೇಕಾದರೆ ಬಾಗಿ ಹೋಗಬೇಕಾಗುತ್ತದೆ. ಕಂಜರಭಾಟರು ವಾಸವಾಗಿರುವ ಸ್ಥಳಗಳಲ್ಲಿ ಬೇರೆ ಸಮುದಾಯದವರು ವಾಸವಾಗಿರುವುದಿಲ್ಲ. ಈ ಜನ ಪ್ರತ್ಯೇಕ ವಸತಿಯ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಇದಕ್ಕೆ “ಪೇಡಾ” ಎಂದು ಕರೆಯುತ್ತಾರೆ. ಇವರ ಮನೆಗಳು ಹಳೇ ಪದ್ಧತಿಯ ಮನೆಗಳು. ಗಾಳಿ, ಬೆಳಕು ದೊರೆಯದ ಮನೆಗಳು. ನವೀನವಾದ ಮನೆಗಳನ್ನು ಕಟ್ಟಿಕೊಳ್ಳುವ ಸಾಮರ್ಥ್ಯ ಇವರಲ್ಲಿ ಇಲ್ಲ. ಸ್ವಂತ ಜಾಗೆ ಇಲ್ಲ. ಆರ್ಥಿಕ ಪರಿಸ್ಥಿತಿ ಗಂಭೀರವಾಗಿರುವುದರಿಂದ ಒಳ್ಳೆ ಸುಸಜ್ಜಿತ ಮನೆಗಳನ್ನು ಹೊಂದಿರುವುದಿಲ್ಲ. ಇವರಲ್ಲಿ ಕೆಲವರು ಇನ್ನೂ ಕಾಡು ಜನಾಂಗದಂತೆ ಜೀವನವನ್ನು ಸಾಗಿಸುತ್ತಾರೆ.

ಈ ಜನಾಂಗದ ನೆರೆ ಹೊರೆಯ ಸಮುದಾಯಗಳೊಂದಿಗೆ ಹೊಂದುಕೊಂಡು ಇರುವುದಿಲ್ಲ. ಬೇರೆ ಸಮಾಜದವರು ಇವರನ್ನು ನೋಡಿದರೆ ಒಳ್ಳೇ ಭಾವನೆಯಿಂದ ನೋಡುವುದಿಲ್ಲ. ಸಂಕಷ್ಟದ ರೀತಿಯಲ್ಲಿ ಕಾಣುತ್ತಾರೆ. ಬಡತನ ಇವರ ಆಚಾರ-ವಿಚಾರ ವೀಕ್ಷಿಸಿ ಜನರು ಹೊಂದಿಕೊಳ್ಳುವ ಇಚ್ಚೆಪಡುವುದಿಲ್ಲ. ಹೀಗಾಗಿ ಹೊರಗಿನ ಪರಿಸರಕ್ಕೆ ಹೊಂದಿಕೊಂಡಿಲ್ಲ.

ಹಳ್ಳಿಗಳಲ್ಲಿ, ನಗರಗಳಲ್ಲಿ ವಾಸವಾಗಿರುವ ಈ ಜನರ ಆರ್ಥಿಕ ಪರಿಸ್ಥಿತಿ ಗಂಭೀರವಾಗಿರುವುದರಿಂದ ಗುಡಿಸಲುಗಳಲ್ಲಿ ಮಣ್ಣಿನಿಂದ ಕಟ್ಟಿದ ಸಣ್ಣ ವೃತ್ತಗಳಲ್ಲಿ ತಗಡಿನ ಮನೆ, ಹಂಚಿನ ಮನೆಗಳಲ್ಲಿ ವಾಸವಾಗಿದ್ದಾರೆ. ಮನೆಗಳಿಗೆ ಸರಿಯಾದ ಕಿಡಕಿ ಬಾಗಿಲುಗಳು ಇಲ್ಲದ ಮನೆಗಳು ಇವರಿಗೆ ಸ್ವಂತ ಜಾಗ ಇಲ್ಲ. ಸರಕಾರಿ ಜಾಗೆಗಳಲ್ಲಿ ಗುಡಿಸಲು ಚಪ್ಪರವನ್ನು ಹಾಕಿ ಜೀವನ ಸಾಗಿಸುತ್ತಾರೆ. ಸರಕಾರ ಇಂಥ ಜನರಿಗೆ ಮನೆ ಕಟ್ಟಿಸಿಕೊಡುವ ಮನಸ್ಸು ಸಹ ಮಾಡಿಲ್ಲ. ಬಡತನದಲ್ಲಿ ಹುಟ್ಟಿ ಬಡತನದಲ್ಲಿಯೇ ಸಾಯುವವರು ಕರ್ನಾಟಕದಲ್ಲಿ ಮೂರು, ನಾಲ್ಕು ಜನ ಆರ್ ಸಿಸಿ ಮನೆಯಲ್ಲಿ ವಾಸವಾಗಿದ್ದಾರೆ.

ಆಹಾರ: ಕಂಜರಭಾಟ ಜನರು ಮೂಲತಃ ಮಾಂಸಾಹಾರಿಗಳು. ಇವರು ಹಳ್ಳಿ ಹಳ್ಳಿ ಅಲೆಯುವ ಜನಾಂಗ ಅರಣ್ಯ ಪ್ರದೇಶದಲ್ಲಿ ದೊರೆಯುವ ಹಣ್ಣು ಹಂಪಲು, ಗೆಡ್ಡೆ, ಗೆಣಸು, ಪಶು, ಪಕ್ಷಿ, ಜಲಚಾರ ಪ್ರಾಣಿಗಳನ್ನು ಆಹಾರಕ್ಕಾಗಿ ಉಪಯೋಗಿಸುವರು. ಮಾಂಸಾಹಾರಿಯಾಗಿರುವುದರಿಂದ ಎಲ್ಲ ಪ್ರಾಣಿಗಳ ಮಾಂಸವನ್ನು ತಿನ್ನುವುದಿಲ್ಲ. ಅವುಗಳಲ್ಲಿ ಕೆಲ ಪ್ರಾಣಿಗಳಾದ ದನ, ಕುರಿ, ಆಡು, ಚಿಗರೆ, ಮೊಲ, ಹಂದಿ, ಕೋಳಿ, ಮೀನು ಮುಂತಾದ ಪ್ರಾಣಿಗಳ ಮಾಂಸವನ್ನು ತಿನ್ನುತ್ತಾರೆ.

ಆಹಾರ ಧಾನ್ಯಗಳಲ್ಲಿ ದೊರೆಯುವ ಜೋಳ, ಗೋಧಿ, ಅಕ್ಕಿ, ಸಜ್ಜೆ, ಬೇಳೆ, ಕಾಳು, ಕಾಯಿಪಲ್ಲೆಗಳನ್ನು ಹೆಚ್ಚಾಗಿ ಉಪಯೋಗಿಸುವರು. ಈ ಜನ ರೊಟ್ಟಿ ಅನ್ನ ಹೆಚ್ಚಾಗಿ ತಿನ್ನುತ್ತಾರೆ. ಇದರ ಜೊತೆಗೆ ಮಾಂಸ ಎಂದರೆ ಬಲು ಪ್ರೀತಿ. ಗೋಧಿ ರೊಟ್ಟಿಯನ್ನು ಯಾವಾಗಾದರೊಮ್ಮೆ ಉಪಯೋಗಿಸುವರು. ವಾರಕ್ಕೊಮ್ಮೆಯಾದರು. ಗೋಧಿ, ರೊಟ್ಟಿ ಹಾಗೂ ಬೆಲ್ಲದ ಪಾಯಸದಲ್ಲಿ ಬೇಯಿಸಿ ತಿನ್ನುತ್ತಾರೆ. ಇದಕ್ಕೆ “ಖೋದ್ದಾ” ಎನ್ನುತ್ತಾರೆ. ಇದಲ್ಲದೆ ಮಾಂಸ ಮತ್ತು ರವಾ ಬೆರಸಿ ಅದರಲ್ಲಿ ಮಸಾಲೆ ಸಾಮಾನುಗಳನ್ನು ಹಾಕಿ ಪಾಯಸ ತಯಾರಿಸಿ ತಿನ್ನುತ್ತಾರೆ. ಇದಕ್ಕೆ ಈ ಜನ “ದಳಿಯಾ” ಎನ್ನುತ್ತಾರೆ. ಗೋಧಿ ಹಿಟ್ಟನ್ನು ತುಪ್ಪ ಇಲ್ಲವೇ ಒಳ್ಳೆ ಎಣ್ಣೆಯಲ್ಲಿ ಹುರಿದು ಅದರಲ್ಲಿ ಬೆಲ್ಲ ಇಲ್ಲವೆ ಸಕ್ಕರೆ, ಯಾಲಕ್ಕಿ, ಲವಂಗ ಮುಂತಾದ ವಸ್ತುಗಳನ್ನು ಸೇರಿಸಿ ವಿಶಿಷ್ಟವಾದ ರುಚಿಯನ್ನು ಹೊಂದಿರುವ ಪೌಷ್ಠಿಕ ಆಹಾರ ತಯಾರಿಸಿ ತಿನ್ನುತ್ತಾರೆ.ಇದಕ್ಕೆ ಇವರು “ಸಾಂದಾ” ಎಂದು ಕರೆಯುತ್ತಾರೆ. ಗೋಧಿ ಹಿಟ್ಟನ್ನು ಸ್ವಲ್ಪ ದಪ್ಪ ಬಿಸಿ ಅದರಲ್ಲಿ ಬೆಲ್ಲ, ಯಾಲಕ್ಕಿ, ಒಣ ಕೊಬ್ಬರಿ, ಕಸ ಕಸ ಈ ಪದಾರ್ಥಗಳನ್ನು ಸೇರಿಸಿ ಕರದಂಟು ತಯಾರಿಸುತ್ತಾರೆ. ಇದನ್ನು ಒಂದು ತಿಂಗಳವರೆಗೆ ಇಟ್ಟರೂ ಕೆಡುವುದಿಲ್ಲ. ಇದಕ್ಕೆ ಈ ಜನ “ಹುಕಡಿ” ಎನ್ನುತ್ತಾರೆ. ಅಲೆಮಾರಿಗಳು ಈ ಪದಾರ್ಥಗಳನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ. ಗೋಧಿ ಹಿಟ್ಟು ಹಾಗೂ ಬೆಲ್ಲದ ಸಿಹಿ ಪಾಯಸ ಮಾಡಿ ಗಂಜಿ ಮಾಡಿ ತಿನ್ನುತ್ತಾರೆ.

ಸಂಚಾರಿ ಜನಾಂಗವಾಗಿರುವುದರಿಂದ ಮಾಂಸ ಸಿಗುವುದು ವಿರಳ. ಆದಕಾರಣ ಅವರು ಹಸಿ ಮಾಂಸದ ತುಂಡುಗಳನ್ನು ಮಾಡಿ ಇದಕ್ಕೆ ಉಪ್ಪು, ಖಾರ ಹಚ್ಚಿ ಬಿಸಿಲಿನಲ್ಲಿ ಒಣಗಿಸಿ ಈ ಮಾಂಸದ ತುಂಡುಗಳನ್ನು ಕನಿಷ್ಟ ೧೫ ದಿನಗಳವರೆಗೆ ಉಪಯೋಗಿಸುತ್ತಾರೆ. ಈ ತುಂಡುಗಳನ್ನು ಸಾರಿನೊಂದಿಗೆ ಬೇಯಿಸಿ ತಿನ್ನುತ್ತಾರೆ. ಒಳ್ಳಿನಲ್ಲಿ ಕುಟ್ಟಿ, ಚಟ್ನಿ ರೂಪದಲ್ಲಿ ಉಪಯೋಗಿಸುವರು. ಇದಲ್ಲದೆ ಬೆಂಕಿಯಲ್ಲಿ ಸುಟ್ಟು ತಿನ್ನುತ್ತಾರೆ. ಇಂಥ ಪದಾರ್ಥಗಳನ್ನು ಸೇರ, ಸಿಂಧಿ ಸೇವಿಸುವಾಗ ಹೆಚ್ಚಾಗಿ ಉಪಯೋಗಿಸುವರು. ಈ ಜನಾಂಗ ಮಾಂಸ ಹಾಗೂ ಖಾರ ವಸ್ತುಗಳನ್ನು ಹೆಚ್ಚು ಉಪಯೋಗಿಸುತ್ತಾರೆ. ತುಪ್ಪ, ಹಾಲು ಇವುಗಳ ಬಳಕೆ ಕಡಿಮೆ. ಹಸಿ ಮೆಣಸಿನಕಾಯಿ ಹಾಗೂ ಸೆಂಗಾ ಚೆಟ್ನಿಯನ್ನು ಹೆಚ್ಚಾಗಿ ಆಹಾರದಲ್ಲಿ ಉಪಯೋಗಿಸುತ್ತಾರೆ. ಮಾಂಸದ ಅಡಿಗೆ ಮಾಡುವುದರಲ್ಲಿ ಈ ಜನಾಂಗದ ಮಹಿಳೆಯರು ನಿಪುಣರಾಗಿದ್ದಾರೆ.

ಪಾನೀಯಗಳು: ಕಂಜರಭಾಟ ಅಡವಿ, ಅಡವಿ ಸಂಚರಿಸಿ ಧಣಿದು ಮನಿಗೆ ಬರುತ್ತಾರೆ. ಎಲ್ಲರೂ ಸೇರಿ ಹಾಗೂ ವೈಯಕ್ತಿವಾಗಿ ಮಾದಕ ಪೇಯಗಳನ್ನು ಉಪಯೋಗಿಸುವರು. ಮೊದಲಿನಿಂದಲೂ ರೂಡಿ ಇಲ್ಲದೆ ಇವರು ಮನೆಯಲ್ಲಿಯೇ ಸೆರೆಯನ್ನು ತಯಾರಿಸುತ್ತಾರೆ. ಸಭೆ, ಸಮಾರಂಭ, ಹಬ್ಬ ಹರಿದಿನಗಳಲ್ಲಿ ಎಲ್ಲರೂ ಉಪಯೋಗಿಸಿದರೆ ಮನೆಯಲ್ಲಿ ಸಾಮಾನ್ಯವಾಗಿ ಒಬ್ಬರೇ ಸೇವಿಸುತ್ತಾರೆ. ಮದ್ಯವನ್ನು ಸೇವಿಸುವಾಗ ಮಾಂಸಹಾರಿ ಪದಾರ್ಥಗಳನ್ನು ಉಪಯೋಗಿಸುತ್ತಾರೆ. ಇವರು ಒಂದೇ ತರಹದ ಮಾದಕ ಪಾನೀಯಗಳನ್ನು ಉಪಯೋಗಿಸುವುದಿಲ್ಲ. ನಾನಾ ತರಹದ ಪಾನೀಯಗಳನ್ನು ಸೇವಿಸುತ್ತಾರೆ. ಮಾದಕ ಪಾನೀಯಗಳನ್ನು ಗಂಡಸರು-ಹೆಂಗಸರು ಮಕ್ಕಳು ಎಲ್ಲರೂ ತೆಗೆದುಕೊಳ್ಳುತ್ತಾರೆ.

ಬೆಲ್ಲ ನವಸಾಗರ ಗಿಡದ ತೊಗಡೆಯನ್ನು ಗಡಿಗೆ ಅಥವಾ ಬ್ಯಾರಲ್ಗಳಲ್ಲಿ ಹಾಕಿ ಅದರ ತುಂಬ ನೀರು ಹಾಕಿ ರಸಾಯನ ಮಾಡುತ್ತಾರೆ. ಎರಡು ದಿನಗಳ ನಂತರ ಆ ಕಚ್ಚಾ ರಾಸಾಯನವನ್ನು ಒಂದು ಟಾಕಿಯಲ್ಲಿ ಹಾಕಿ ಅದರ ಮೇಲೆ ಕಟ್ಟಿಗೆಯ ದುಂಡಾಕಿ ಖಾರದ ಪಾತ್ರೆಯನ್ನು ಇಟ್ಟು ಕಬ್ಬಿಣದ ಕೊಳವೆಯನ್ನು ಹಾಕಿ ಅದರ ಮೇಲೆ ನೀರು ತುಂಬಿದ ಬೋಗುಣಿಯನ್ನು ಇಡುತ್ತಾರೆ. ನಂತರ ಟಾಕಿಯ ಕೆಳಗೆ ಬೆಂಕಿಯನ್ನು ಹಚ್ಚಿ ರಸಾಯನ ಕಾಯಿಸುತ್ತಾರೆ. ಹೊಗೆಯಿಂದ ಹನಿಗಳಾಗಿ ಕೊಳವೆಯ ಮುಖಾಂತರ ಸೇರೆ ಉತ್ಪತ್ತಿಯಾಗುತ್ತದೆ. ತಾವೇ ತಯಾರಿಸಿದ ಸೆರೆಯನ್ನು ಸೇವಿಸುತ್ತಾರೆ.

ಅಫೀಮು ಮತ್ತು ಕಸಕಸಯಿಂದ ಇದನ್ನು ತಯಾರಿಸಿ ಹೋಳಿ ಹಬ್ಬದಲ್ಲಿ ಕುಡಿಯುತ್ತಾರೆ. ಬಾಂಗ್‌ಕುಡಿದ ಮತ್ತಿನಲ್ಲಿ ಹಾಡು, ಪದ, ಕುಣಿಯುವುದು ನಾನಾ ರೀತಿಯ ಮನರಂಜನೆ ಕಾರ್ಯಗಳನ್ನು ಮಾಡುತ್ತಾರೆ.

ಈಚಲ ಮರದಿಂದ ಸಿಂಧಿಯನ್ನು ತೆಗೆಯುತ್ತಾರೆ. ಇದು ಮುಂಜಾವಿನಲ್ಲಿ ಸಿಹಿ ಇರುತ್ತದೆ. ಇದಕ್ಕೆ ನೀರಾ ಎನ್ನುತ್ತಾರೆ. ಬಿಸಿಲು ಏರಿದಂತೆ ಇದರಲ್ಲಿ ಹುಳಿ ಹೆಚ್ಚಾಗಿ ಸಿಂಧಿ ತಯಾರಾಗುತ್ತದೆ. ಸಿಂಧಿಯನ್ನು ಸಹ ಈ ಜನರು ದಿನಾಲು ಕುಡಿಯಲು ಉಪಯೋಗಿಸುವರು.

ಇತ್ತಿತ್ತಲಾಗಿ ದೇಶ ಹಾಗೂ ವಿದೇಶ ಮಧ್ಯಗಳಾದ ಬ್ರಾಂಡಿ, ಬೀರ್, ವಿಸ್ಕೀ ಮುಂತಾದ ಮದ್ಯ ಸೇವನೆಗಳನ್ನು ಸೇವಿಸುತ್ತಾರೆ. ಇದೊಂದು ಫ್ಯಾಶನ್‌ಆಗಿಬಿಟ್ಟಿದೆ. ಈ ಪಾನೀಯಗಳನ್ನು ಹಣವಂತರು ಹೆಚ್ಚಾಗಿ ಬಳಸುತ್ತಾರೆ. ಬಡವರಿಗೆ ದಿನಾಲು ಕುಡಿಯಲು ಈ ಪಾನೀಯಗಳು ದೊರೆಯುವುದಿಲ್ಲ. ಇದಲ್ಲದೆ ಹಾಲು, ಮೊಸರು, ಮಜ್ಜಿಗೆ, ಶರಬತ್‌, ಚಹಾ ಮುಂತಾದ ಪಾನೀಯಗಳನ್ನು ಸೇವಿಸುತ್ತಾರೆ.

ಉಡುಗೆ-ತೊಡುಗೆ: ಸಂಸ್ಕೃತಿಯಲ್ಲಿ ವೇಷ ಭೂಷಣಗಳಿಗೆ ತಮ್ಮದೇ ಆದ ಮಹತ್ವ ಇದೆ. ಈ ವೇಷ ಭೂಷಣಗಳಿಂದ ಜನರನ್ನು ಗುರುತಿಸುವುದು ಸುಲಭವಾಗುತ್ತದೆ. ಕಂಜರಭಾಟ ಜನಾಂಗದವರನ್ನು ಅವರ ವೇಷ-ಭೂಷಣಗಳಿಂದ ಗುರುತಿಸಲ್ಪಡುತ್ತಾರೆ. ಕಂಜರಭಾಟರು ರಸಿಕರು. ಅವರ ಉಡುಗೆ-ತೊಡುಗೆಗಳು ಇದಕ್ಕೆ ಸಾಕ್ಷಿಯಾಗಿವೆ. ಅವರ ಮೈಬಣ್ಣ ಸಾಮಾನ್ಯವಾಗಿ ಕೆಂಪು, ನಸುಕೆಂಪು ಹಾಗೂ ಕಪ್ಪು-ಉದ್ದ ಶರೀರ. ತಲೆಯ ಮೇಲೆ ಕಪ್ಪು ಕೂದಲು, ಹೆಣ್ಣು ಮಕ್ಕಳ ಕೂದಲು ಉದ್ದವಾಗಿರುತ್ತವೆ. ಕೆಲ ಹೆಣ್ಣು ಮಕ್ಕಳಿಗೆ ಕೆಂಪು ಕೂದಲುಗಳುಂಟು. ಕಪ್ಪು ಕಣ್ಣು ಗುಡ್ಡಿಗಳಿರುತ್ತವೆ. ದೃಷ್ಟಿದೋಷ ಇರುವುದು ಬಹಳ ಕಡಿಮೆ. ಒಳ್ಳೆ ಮೈಕಟ್ಟಿನವರು ಇರುತ್ತಾರೆ. ಅನ್ಯ ಸಮುದಾಯದವರೊಂದಿಗೆ ಶರೀರದ ಹೋಲಿಕೆ ಹೊಂದಿಸಿದರೆ ಇವರು ಒಳ್ಳೆ ಶಾರೀರಕ ಲಕ್ಷಣವುಳ್ಳ ಜನ.

ಕಂಜರಭಾಟ ಮಹಿಳೆಯರು ಧರಿಸುವ ವೇಷ-ಭೂಷಣಗಳು ರಾಜಸ್ತಾನದ ಮಹಿಳೆಯರನ್ನು ಮರೆಸುತ್ತಾರೆ. ಅವರು ಧರಿಸುವ ಬಣ್ಣ-ಬಣ್ಣದ ಬಟ್ಟೆಗಳು ಹಾಗೂ ಆಭರಣಗಳು ಸಹಜವಾದ ಸೌಂದರ್ಯಕ್ಕೆ ಮೆರಗು ತರುತ್ತದೆ. ಈ ಜನಾಂಗದ ಮಹಿಳೆಯರು ಬಣ್ಣ-ಬಣ್ಣದ ಬಟ್ಟಗಳಿಗೆ ಹೆಚ್ಚು ಮಹತ್ವವನ್ನು ಕೊಡುತ್ತಾರೆ. ಕೆಂಪು, ನೀಲಿ, ಹಳದಿ ಮುಂತಾದ ಬಣ್ಣದ ಉಡುಗೆಗಳನ್ನು ಧರಿಸುತ್ತಾರೆ. ಸ್ತ್ರೀಯರು ೫-೬ ಮೀಟರ್ ಅರಿವೆಯ ಲಂಗ, ಉದ್ದ ತೋಳಿನ ಕುಪ್ಪಸ ಹಾಗೂ ಓಡಣೆಯನ್ನು ಧರಿಸುತ್ತಾರೆ.

ಸ್ತ್ರೀ ಸೌಂದರ್ಯ ಉಪಾಸಕಳು, ಅವಳಿಗೆ ಪ್ರೀತಿಯ ವಸ್ತು ಬಟ್ಟೆಗಳ ಜೊತೆಗೆ ಆಭರಣಗಳು, ಆಭರಣಗಳಿಂದ ಅವರ ರೂಪಕ್ಕೆ ಸೌಂದರ್ಯ ಒದಗುತ್ತದೆ. ಮೈತುಂಬೆಲ್ಲ ಆಭರಣಗಳು ಕಾಣಿಸಿಕೊಳ್ಳುತ್ತವೆ. ಬಂಗಾರ, ಬೆಳ್ಳಿ, ಲೋಹಗಳಿಂದ ತಯಾರಿಸಿದ ಆಭರಣಗಳನ್ನು ಧರಿಸುತ್ತಾರೆ. ಆಭರಣಗಳು ಭಾರವಾಗಿದ್ದರೂ ಅವುಗಳನ್ನು ಧರಿಸಿಕೊಳ್ಳಲು ಹಿಂಜರಿಯುವುದಿಲ್ಲ. ಕೈಯಲ್ಲಿ ಉಂಗುರ, ಬಳಿ, ಕಂಕಣ, ಮೂಗಿನಲ್ಲಿ ನತ್ತು ಕಿವಿಯಲ್ಲಿ ಝಮಕ, ಹೂಬುಗಡಿ, ಕಾಲಿನಲ್ಲಿ ಬೆಳ್ಳಿ ಚೈನ ತೊಡೆ ಕಾಲಕಡ್ಗ ಹೊರಳಲ್ಲಿ ಬಂಗಾರದ ಟೀಕಿ, ಬೋರಮೊಳ ಬೆಳ್ಳಿ ನಾಣ್ಯಗಳಿಂದ ತಯಾರಿಸಿದ ಸರ (ಝಲರಾ) ಸೊಂಟಕ್ಕೆ ಬೆಳ್ಳಿಯ ಪಟ್ಟಿ (ಕಮರ್ ಪಟ್ಟಾ) ಧರಿಸುತ್ತಾರೆ.

ಈ ಜನಾಂಗದ ಪುರುಷರು ಸಾಮಾನ್ಯವಾಗಿ ವೇಷಭೂಷಣಗಳನ್ನು ಧರಿಸುತ್ತಾರೆ. ಧೋತರ ಅಂಗಿ, ತಲಿಯ ಮೇಲೆ ಬಣ್ಣ ಬಣ್ಣದ ಪಗಡಿ ಧರಿಸುತ್ತಾರೆ. ಕೆಲವರು ಜಾಕೆಟ್‌ಹಾಕಿಕೊಳ್ಳುವರು. ಕಿವಿಯಲ್ಲಿ ಬಂಗಾರದ ಮುರುವು, ಕೈಯಲ್ಲಿ ಕಡಗ, ಸೊಂಟಕ್ಕೆ ಬೆಳ್ಳಿಯ ಉಡದಾರ ಹಾಕಿಕೊಳ್ಳುವುದು.

ಕಸುಬು: ಕಂಜರಭಾಟರು ಶ್ರಮ ಜೀವಿಗಳು. ಇವರು ಅಲೆಮಾರಿಗಳು. ಗುಡ್ಡ-ಗಾಡುಗಳಲ್ಲಿ ಊರಿನಿಂದ ಊರಿಗೆ ಅಲೆಯುತ್ತಾ ಇರುತ್ತಾರೆ. ಇವರು ಕೂಲಿ ವಗೈರೆ ಮಾಡುತ್ತಾ ಇರಲಿಲ್ಲ. ಮನೆ, ಮನೆಗೆ ಹೋಗಿ ಕಾಳು ಕಡಿಗಳನ್ನು ಸಂಗ್ರಹಿಸುತ್ತಾರೆ. ಸುಗ್ಗಿಯಲ್ಲಿ ಕಣಕ್ಕೆ ಹೋಗಿ ಕಾಳು, ಕಡಿ ಸಂಗ್ರಹಿಸಿ ತಮ್ಮ ಜೀವನ ಸಾಗಿಸುತ್ತಾರೆ. ಭಿಕ್ಷಾಟನೆ ಮುಖ್ಯ ಉದ್ಯೋಗವಾಗಿತ್ತು. ಇದಲ್ಲದೆ ಮನೆಯಲ್ಲಿ ಸ್ವತಃ ಸೆರೆ ತಯಾರಿಸಿ ಮಾರಾಟ ಮಾಡುತ್ತಿದ್ದರು. ಇವರು ವೀರ ಸಿಪಾಯಿಗಳಾಗಿದ್ದರು. ರಜಪೂತ ರಾಜರ ಸೈನ್ಯದಲ್ಲಿ ಸೈನಿಕರಾಗಿದ್ದರು. ಈ ಉದ್ಯೋಗದಿಂದ ಇವರು  ವಂಚಿತರಾಗಿದ್ದಾರೆ. ಇವರು ಕೂಲಿ ಕೆಲಸ ಮಾಡುವುದು ಕಡಿಮೆ. ಕೃಷಿಯನ್ನು ಅವಲಂಬಿಸಿದರು. ಇವರಿಗೆ ಒಬ್ಬರಿಗೂ ಭೂಮಿ (ಹೊಲ) ಇರುವುದಿಲ್ಲ. ವ್ಯಾಪಾರ ಒಕ್ಕಲುತನದಲ್ಲಿ ಅತೀ ಹಿಂದುಳಿದವರು ಇತ್ತಿತ್ತಲಾಗಿ ಈ ಜನ ಕೂಲಿ-ನಾಲಿಗಳನ್ನು ಮಾಡುತ್ತಿದ್ದಾರೆ.

ಇಂದಿನ ಪರಿಸ್ಥಿತಿಯನ್ನು ಗಮನಿಸಿದರೆ ಶಹರ ಭಾಗಗಳಲ್ಲಿ ಕೆಲ ಜನರು ಉದ್ಯೋಗಗಳನ್ನು ಮಾಡುತ್ತಿದ್ದಾರೆ. ಕೆಲವರು ಕೂಲಿ, ರಿಕ್ಷಾ ಚಾಲಕರಾಗಿ ಭಿಕ್ಷಾಟನೆ ಮಾಡಿ ಉಪಜೀವನ ಸಾಗಿಸುತ್ತಾರೆ.

ಸರಕಾರಿ ಗಂ.ಹೆಣ್ಣು ಒಟ್ಟು
ಕೇಂದ್ರ ಸರಕಾರ ೫೦+೧ ೩೧
ರಾಜ್ಯ ಸರಕಾರ ೯+೦
ಖಾಸಗಿ ೧೦+೧೦ ೧೦
  ೧೪+೧ ೫೦

ವಿದ್ಯಾವಂತ ಯುವಕರು ಕ್ರೀಡಾಪಟು ಯುವಕ-ಯುವತಿಯರು ಉದ್ಯೋಗ ಇಲ್ಲದ ಕಾರಣ ಕೂಲಿ ಕೆಲಸ ಮಾಡುತ್ತಿದ್ದಾರೆ. ಕನಿಷ್ಠ ೪-೫ ನೂರು ಯುವಕರು ಯುವತಿಯರು ನಿರುದ್ಯೋಗಿಗಳಾಗಿದ್ದಾರೆ.

ಕುಲಗೋತ್ರಗಳು: ಅಲೆಮಾರಿ ಜನಾಂಗದವರು ತಮ್ಮದೇ ಆದ ಸಾಮಾಜಿಕ ವ್ಯವಸ್ಥೆ ಮತ್ತು ಸಮಾಜದ ಆಡಳಿತ ವ್ಯವಸ್ಥೆಯನ್ನು ತಮ್ಮದೇ ಆದ ರೀತಿಯಲ್ಲಿ ಮಾಡಿಕೊಂಡಿದ್ದಾರೆ. ಅದೇ ರೀತಿ ಕಂಜರಭಾಟರು ಸಹ ಇಂಥ ವ್ಯವಸ್ಥೆಯನ್ನು ಮಾಡಿ ತಮ್ಮ ಸಮಾಜದ ಆಗು-ಹೋಗುಗಳ ಬಗೆಗೆ ಚಿಂತನೆ ಮಾಡುತ್ತಾರೆ.

ಕಂಜರಭಾಟ ಸಮಾಜದಲ್ಲಿ ವೈವಾಹಿಕ ಸಂಬಂಧ ಬೆಳೆಸುವಾಗ ಬೆಡಗು ಮತ್ತು ಗೋತ್ರಗಳ ಬಗೆಗೆ ವಿಚಾರಿಸಲಾಗುವುದು. ಇವರಲ್ಲಿ ಎರಡು ಬೆಡಗುಗಳು “ಮಾಲ್ಹಾ” ಮತ್ತು “ಬಿಡ್ಡು” ಪಂಗಡಗಳು. ಈ ಎರಡು ಪಂಗಡಗಳನ್ನು ಸೊಲಿಸ “ಸೈಸಮಾಲ್‌” ಎಂದು ಕರೆಯುತ್ತಾರೆ. ಮಾಲ್ಹಾದಲ್ಲಿ ಒಂಬತ್ತು ಜಾತಿಗಳಿದ್ದು, ಇವರೆಲ್ಲರು ಅಣ್ಣ ತಮ್ಮಂದಿರು. ಇವರಲ್ಲಿ ವೈವಾಹಿಕ ಸಂಬಂಧ ಬೆಳೆಸಲು ಬರುವುದಿಲ್ಲ. ಒಂದು ವೇಳೆ ಅವರು ತಮ್ಮ ತಮ್ಮೊಳಗೆ ಸಂಬಂಧ ಬೆಳೆಸಿಕೊಂಡರೆ ಅದಕ್ಕೆ ಸಮಾಜದಲ್ಲಿ ಮಾನ್ಯತೆ ದೊರೆಯುವುದಿಲ್ಲ. ಅಂಥ ಸಂಬಂಧಕ್ಕೆ ಪಾಪವೆಂದು ಪರಿಗಣಿಸಲಾಗುವುದು. ಅದೇ ರೀತಿ “ಬಿಡ್ಡು” ದಲ್ಲಿಯೂ ಒಂಬತ್ತು ಜಾತಿಗಳುಂಟು. ಇವರೆಲ್ಲರು ಅಣ್ಣ-ತಮ್ಮಂದಿರು. ಇವರಲ್ಲಿ ವೈವಾಹಿಕ ಸಂಬಂಧ ಮಾಡಲು ಬರುವುದಿಲ್ಲ. ಒಂದು ವೇಳೆ ಇವರಲ್ಲಿ ಅನೈತಿಕ ಸಂಬಂಧವಾಗಲಿ ವೈವಾಹಿಕ ಸಂಬಂಧವಾದರೆ, ಸಮಾಜದಲ್ಲಿ ಅದಕ್ಕೆ ಅನುಮತಿ ಇಲ್ಲ. ಇಂಥ ಸಂಬಂಧ ಪಾಪ ಎಂದು ಎಣಿಸಲಾಗುವುದು. ಮಾಲ್ಹಾದವರು ಬಿಡ್ಡು ಜೊತೆಗೆ ಬಿಡ್ಡುದವರು ಮಾಲ್ಹಾ ಜೊತೆಗೆ ವೈವಾಹಿಕ ಸಂಬಂಧವನ್ನು ಬೆಳೆಸಿ ವಂಶಾವಳಿ ಬೆಳವಣಿಗೆ ಮಾಡಿಕೊಳ್ಳುತ್ತಾರೆ. ಈ ಪದ್ಧತಿಯನ್ನು ಈ ಸಮಾಜದ ಹಿರಿಯರೇ ಮಾಡಿದ್ದಾರೆ. ಇವರಲ್ಲಿ ರಕ್ತ ಸಂಬಂಧ ಇರುವವರ ಜೊತೆಗೆ ಸಂಬಂಧ ಬೆಳೆಸಿಕೊಳ್ಳುವುದಿಲ್ಲ. ರಕ್ತ ಸಂಬಂಧ ಇಲ್ಲದವರ ಜೊತೆಗೆ ಹೊಸ ಸಂಬಂಧವನ್ನು ಮಾಡಿಕೊಳ್ಳುವ ಪದ್ಧತಿ ಉಂಟು.

ಕಂಜರಭಾಟ ಸಮಾಜದಲ್ಲಿ ಎರಡು ಬೆಡಗುಗಳು ೧) ಮಾಲ್ಹಾ, ೨) ಬಿಡ್ಡು ಹೀಗೆ ಎರಡು ಬೆಡಗುಗಳು ಅವುಗಳಲ್ಲಿರುವ ಉಪಜಾತಿಗಳು.

ಮಾಲ್ಹಾ        ಬಿಡ್ಡು

೧. ತಮಾಯಚಿ ೧. ಗಾಗಡ
೨. ಮೀಣಾ ೨. ಬಾಟ್ಟು
೩. ಅಬುವಾ ೩. ಕರಾಳು
೪. ಗುಮಾನೆ ೪. ರವಳೆ
೫. ಕಾಂಬಳೆ ೫. ಟೆಡ್ಡೂ
೬. ಮಲಕಿಯಾ ೬. ಇಂದರಾ
೭. ಭಜರಂಗ ೭. ಮ್ಯಾಫರ
೮. ಗಾರಿಯ ೮. ನೆಥಲೆ
೯. ಡುಂಗರ ೯. ಘಮಂಡಿ

ಇವು ಕಂಜರಭಾಟ ಜನಾಂಗದ ಮುಖ್ಯ ಪಂಗಡಗಳು. ಈ ಹದಿನೆಂಟು ಪಂಗಡಗಳಲ್ಲಿ ಇವರ ವಂಶೋತ್ಪತ್ತಿಯಾಗಿ ಭಾರತದ ತುಂಬ ಹಬ್ಬಿಕೊಂಡಿದೆ. ಭಾರತದ ಬೇರೆ, ಬೇರೆ ಹೆಸರುಗಳು ಇದ್ದು ಬೆಡಗುಗಳು ಮಾತ್ರ ಎಲ್ಲಾ ಕಡೆಗೂ ಎರಡಾಗಿವೆ. ಆದರೆ ರೀತಿ, ಪದ್ಧತಿ, ಆಚಾರ, ವಿಚಾರಗಳು ಮಾತ್ರ ಒಂದೇ.

ಈ ಜನಾಂಗದ ಪುರುಷರು ಮತ್ತು ಮಹಿಳೆಯರ ಹೆಸರುಗಳು ಬೇರೆ ಸಮುದಾಯಗಳಿಗಿಂತ ಭಿನ್ನವಾಗಿದೆ.

ಪುರುಷರು: ಮಾನಸಿಂಗ, ತಾನಸಿಂಗ, ಬಬಿಸಿಂಗ, ರೂಪಸಿಂಗ, ಸಾಗರಸಿಂಗ, ಪ್ರತಾಪಸಿಂಗ್‌, ವೀರಸಿಂಗ, ಅಭಿಯಸಿಂಗ, ದೌಲತಸಿಂಗ, ರಾಮಸಿಂಗ, ಜಿಲೇಸಿಂಗ, ವಿಜಯಸಿಂಗ್‌, ದಿಲಾರರ, ಬನಿಯಾ, ಧೀರಿಯಾ, ಭೋವರು, ಮೇಥಿಯಾ, ಅಮರಸಿಂಗ, ದರ್ಶನಸಿಂಗ, ಗ್ಯಾನಸಿಂಗ್‌, ಬಲಬೀರಿಸಂಗ, ರಾಜೇಂದ್ರ ಸಿಂಗ, ದೇವಸಿಂಗ, ಜಯಸಿಂಗ್‌, ಬಬನಸಿಂಗ, ಗಡಿಯಾಸಿಂಗ, ನರಸಿಂಗ, ಶ್ಯಾಮಸಿಂಗ, ಇಂದ್ರಜೀತ, ರಾಮಸಿಂಗ, ಧಾನಸಿಂಗ, ಮೋರಚಂದ, ಕವಿಚಂದ, ತಾರಾಚಂದ, ಹರಿಚಂದ, ರಾಜೇಶ, ರಮೇಶ, ಸುಭಾಸ, ದೀಪಕ, ಸುರೇಶ, ಅಕ್ಕು, ಅನಾಕ, ಮೋಹನ, ಸುಮನ, ಕದಮ, ಟೇಬು, ಆಸಿಯಾ, ನಜೀರ, ಬಾಟಸಿಂಗ, ಟೇಬು, ಆಸಿಯಾ, ನಜೀರ, ಬಾಟಸಿಂಗ, ಕಪ್ಪು, ಸಮಸಿಯಾ, ಲಾಲಸಿಂಗ, ಲೈನ್ಯಾ, ಮಿಸರಿಯಾ, ತಾತ್ಯ, ಮಲಯಾ, ಭಾಡರ, ಮಾಬು, ಬನಾರಸಿಂಗ್‌, ಸಿಲ್ಯಾ, ಬಕೀಲ, ಮನ್ನು, ಹಿಂಗು, ಅಪ್ಸರ, ದಿರಾವ, ಸನ್ಯಾ, ಗೋಪಿ, ಬಾದಲ, ರಾಮದಾಸ, ಮುಕೇಶ, ರವೀಂದ್ರ, ಕೈಲಾಸ, ಸೋಹನ, ಚಂದನ ಮುಂತಾದ ಹೆಸರುಗಳಿಂದ ಕರೆಯುತ್ತಾರೆ.