ಮಹಿಳೆಯರು: ಧಾರಿ ಗಟಾರಿ, ಟಿಮ್ಮಾ, ಗಂಗಿ ಬಾಳೋ ಗೋಪಿ, ವೀರಿಯಾಣ, ಸಾಸ್ಸಾ, ಮೇಮಿ, ಹುಡ್ಲಿ, ಜೈಫಾ, ಗುಂಗಣಿ, ಬಿಲೋರಿ, ಯಸ್ತ್ರಿ, ಚೋಲಿ, ಚಿಣ್ಣ ಕಮಲಾ, ದ್ರೌಪದಿ, ಘೋ ಇಂದೋರಿ, ಹೀರಿ, ಬಿಜಲಿ, ಬೈರವಿ, ಚಮೇಲಿ, ಅಂತ್ರೀ, ಕಸ್ಸೊ ರೋಶನಿ, ಲೈಲಾ, ನಿಮಲಾ, ಕಿಶೋರಿ, ರೆಶ್ನಿ, ಪನ್ನು, ನಿಂಗು, ಆರು, ಜಮುನಾ, ದಯಾ,ಮೀನಾ,ಚಾಂದನಿ, ಗುಲಶನ್‌, ಅನಸೂಯ, ದಯಾ,ಮದಲಾಸು, ಸರಿಯಾ, ಕೇಸರ, ಗೋಪಿ, ಛಮ್ಮಾ ಜುಲ್ಟಾ, ಲಕ್ಷ್ಮಿ ಮುಂತಾದ ಈ ಸಮಾಜದ ಮಹಿಳೆಯರಿಗೆ ನಾಮಕರಣ ಮಾಡಲಾಗಿದೆ.

ಕಂಜರಭಾಟರ ಕುಟುಂಬಗಳ ಗಾತ್ರ ದೊಡ್ಡದು. ಒದೊಂದು ಕುಟುಂಬದಲ್ಲಿ ಕನಿಷ್ಟ ೧೫ ರಿಂದ ೨೦ ಜನ ಇರುತ್ತಾರೆ. ಸಾಮಾನ್ಯವಾಗಿ ಇವರಲ್ಲಿ ವಿಭಕ್ತ ಕುಟುಂಬಗಳು ಹೆಚ್ಚಾಗಿರುತ್ತವೆ. ಮದುವೆಯಾದ ತಕ್ಷಣ ಗಂಡು ಮಗನಿಗೆ ಅವರ ಹೆಂಡತಿಯ ಜೊತೆಗೆ ಬೇರೆ ಮಾಡಿ ಬಿಡುತ್ತಾರೆ. ಯಾಕೆಂದರೆ ಅವರ ಕುಟುಂಬದ ಜವಾಬ್ದಾರಿಯನ್ನು ಅವರ ಮೇಲೆಯೇ ಹಾಕಿಬಿಡುತ್ತಾರೆ. ಅವರು ಸ್ವತಂತ್ರ ಜೀವಿಗಳಾಗಿ ಜೀವನ ಸಾಗಿಸುತ್ತಾರೆ. ಇದರಿಂದ ವ್ಯವಹಾರಿಕ ಜ್ಞಾನ ಬೆಳೆಯುತ್ತದೆ. ಕುಟುಂಬದ ಅಭಿವೃದ್ಧಿ ಕಾರ್ಯ ಅವರ ಮೇಲೆ ಬೀಳುತ್ತದೆ. ಕಟುಂಬದಲ್ಲಿ ತಂದೆ ಮುಖ್ಯಸ್ಥ. ಕುಟುಂಬದ ಪ್ರತಿಯೊಂದು ಕಾರ್ಯಗಳನ್ನು ಮಾಡುವ ಜವಾಬ್ದಾರಿ ಇವರದು. ತಂದೆಯ ನಂತರ ಹಿರಿಯ ಮಗ ಮನೆಯ ಯಜಮಾನನಾಗುವನು. ಮನೆತನದ ಆಸ್ತಿಯ ಹಕ್ಕು ಗಂಡು ಮಕ್ಕಳಿಗೆ ಮಾತ್ರ ಇರುತ್ತದೆ. ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಪಾಲು ದೊರೆಯುವುದಿಲ್ಲ.

ಈ ಸಮಾಜದಲ್ಲಿ ಸ್ತ್ರೀಯರಿಗೆ ಸ್ವಾತಂತ್ರ್ಯ ಇಲ್ಲ. ಹೆಣ್ಣು ತಾಯಿಯಾಗಿ, ಅಕ್ಕ-ತಂಗಿಯಾಗಿ, ಮಗಳಾಗಿ, ಹೆಂಡತಿಯಾಗಿ, ಪಾತ್ರ ನಿರ್ವಹಿಸುತ್ತಾಳೆ. ಬೆಳೆದ ಮನಿಗೂ ಕೊಟ್ಟ ಮನಿಗೂ ಹೆಸರು ತರುತ್ತಾಳೆ. ಅವಳ ಲಾಲಿತ್ಯ ಮೃದು ಸ್ವಭಾವ ಸಂಸಾರದ ಉನ್ನತಿಗೆ ಕಾರಣವಾಗುತ್ತದೆ. ಹುಟ್ಟಿದ ಮನಿಯಲ್ಲಿ ಮಗಳಾಗಿ ಕೊಟ್ಟ ಮನಿಯಲ್ಲಿ ಗಂಡನ ಸಹಭಾಗಿಯಾಗಿ ಮಕ್ಕಳಿಗೆ ಮಮತೆಯ ತಾಯಿಯಾಗಿ ಪ್ರೀತಿ ವಾತ್ಸಲ್ಯ ಮಮತೆಯಿಂದ ಮಕ್ಕಳನ್ನು ಸಾಕಿ ಸಲಹಿ ಒಳ್ಳೆ ಸುಸಂಸ್ಕೃತರನ್ನಾಗಿ ಮಾಡುತ್ತಾಳೆ. ಕುಟುಂಬದಲ್ಲಿ ಸ್ತ್ರೀ ಪಾತ್ರ ಮಹತ್ವದಾಗಿರುತ್ತದೆ. ಅತ್ತೆ, ಮಾವ, ಭಾವ, ಮೈದುನ ಮುಂತಾದವರ ಮಧ್ಯದಲ್ಲಿ ಅನ್ಯೂನ್ಯವಾಗಿ ಬಾಳುವ ಮಾಡಬೇಕಾಗುತ್ತದೆ. ನವಗೃಹಿಣಿ ಸತಿ ಶಿರೋಮಣಿಯಾಗಿ ಎಲ್ಲರ ಬೇಕು ಬೇಡಿಕೆಗಳನ್ನು ಪೂರೈಸುತ್ತ ಬಾಳಿದರೆ ಸಮಾಜದಲ್ಲಿ ಗೃಹಣಿಯ ಸ್ಥಾನಮಾನಕ್ಕೆ ಬೆಲೆ ಬರುತ್ತದೆ. ಕಂಜರಭಾಟ ಸಮಾಜದ ಹೆಣ್ಣು ಮಕ್ಕಳು ಸಹ ಈ ಎಲ್ಲ ಕರ್ತವ್ಯಗಳನ್ನು ಅನುಸರಿಸಿ ಬಡತನದ ಹೊರೆಯನ್ನು ಹೊತ್ತು ತಮ್ಮ ಜೀವನ ಸಾಗಿಸುತ್ತ ಬಂದವರು. ಈ ಸಮಾಜದ ಹೆಣ್ಣು ಮಕ್ಕಳು ಸಹ ಈ ಎಲ್ಲ ಕರ್ತವ್ಯಗಳನ್ನು ಅನುಸರಿಸಿ ಬಡತನದ ಹೊರೆಯನ್ನು ಹೊತ್ತು ತಮ್ಮ ಜೀವನ ಸಾಗಿಸುತ್ತ ಬಂದವರು ಈ ಸಮಾಜದಲ್ಲಿ ಮಹಿಳೆಯರಿಗೆ ಸ್ವಾತಂತ್ರ ಇಲ್ಲ. ಹೆಣ್ಣು ಮಕ್ಕಳಿಗೆ ವಿದ್ಯಾವಂತರಾಗಿ ಮಾಡಿಲ್ಲ. ಶಿಕ್ಷಣವೆಂದರೆ ಹೆಣ್ಣು ಮಕ್ಕಳಿಗೆ ಶೂನ್ಯ. ಬೇರೆ ಸಮಾಜದ ಪರಿಸರದೊಂದಿಗೆ ಬೆರೆತು ಬಾಳುತ ತಮ್ಮ ಮನೆಯ ಕೆಲಸಗಳು ಮಾಡುವುದೊಂದೆ ಗೊತ್ತು. ಇಲ್ಲಿಯವರೆಗೆ ಸಮಾಜದಲ್ಲಿ ಒಬ್ಬ ಮಹಿಳೆಯರು ಪಧವೀಧರರಾಗಿಲ್ಲ. ಸ್ತ್ರೀಯರನ್ನು ಉದ್ಯೋಗಕ್ಕೆ ಕಳಿಸುವುದಿಲ್ಲ. ಆದಕಾರಣ ಶಿಕ್ಷಣಕ್ಕೆ ಹೆಚ್ಚು ಮಹತ್ವವನ್ನು ಕೊಟ್ಟಿರುವುದಿಲ್ಲ. ಮನೆಯಲ್ಲಿ ಯಾವುದಾದರು ಮುಖ್ಯ ಕಾರ್ಯ ಬಂದರೆ ಮನೆಯ ಹೆಣ್ಣು ಮಕ್ಕಳ ಜೊತೆಗೆ ಚರ್ಚೆ ಮಾಡುತ್ತಾರೆ. ಅವರು ಯಾವುದಾದರೂ ಸಮಸ್ಯೆ ಒಡ್ಡಿದರೆ ಅವರ ಬೇಡಿಕೆ ಯೋಗ್ಯವಾಗಿದ್ದರೆ ಮನ್ನಣೆ ದೊರೆಯುವುದು. ಇಲ್ಲದಿದ್ದರೆ ಇಲ್ಲ. ಹೆಣ್ಣು ಮಕ್ಕಳಿಗೆ ಶಿಕ್ಷಣ ಇಲ್ಲದ ಕಾರಣ ತಮ್ಮ ವಂಶಾವಳಿಯ ಶಿಕ್ಷಣದ ಬಗೆಗೆ ಚಿಂತನೆ ಮಾಡುವುದಿಲ್ಲ. ಸ್ತ್ರೀಯರಿಗೆ ಈ ಸಮಾಜದಲ್ಲಿ ಹೆಚ್ಚಿನ ಸ್ಥಾನ ಮಾನಗಳನ್ನು ಕೊಟ್ಟಿರುವುದಿಲ್ಲ. ಮದುವೆಯಾದ ಮದುಮಗಳು ಗಂಡನ ಮನೆಗೆ ಬರುತ್ತಾಳೆ. ತಂದೆ-ತಾಯಿಗಳ ಮನೆಯಲ್ಲಿರುವ ಸ್ವತಂತ್ರ ಇಲ್ಲಿ ದೊರೆಯುವುದಿಲ್ಲ. ಎಲ್ಲರ ಜೊತೆ ಪ್ರೀತಿಯಿಂದ ಇದ್ದು ಜೀವನ ಸಾಗಿಸಬೇಕಾಗುತ್ತದೆ. ಸ್ತ್ರೀಯರು ವಿವಾಹದ ನಂತರ ಮನೆಯ ಕಾಯ್ದೆಯ ಕಟಕಟೆಯಲ್ಲಿದ್ದು ಎಲ್ಲರ ಜೊತೆಗೆ ಹೊಂದಿಕೊಂಡು ಹೋಗುತ್ತಾಳೆ.

ಒಂದು ವಂಶದವರು ಪಾಲಿಸುವ ನಿಯಮಾವಳಿಗಳನ್ನು ಎಲ್ಲರೂ ಪಾಲಿಸಬೇಕಾಗುತ್ತದೆ. ವಂಶದ ನಿಯಮಾವಳಿಗಳು ಪ್ರತ್ಯೇಕವಾಗಿರುವುದಿಲ್ಲ. ಸಮಾಜದ ನಿಯಮಗಳನ್ನು ಪಾಲಿಸುತ್ತಾರೆ. ತಮ್ಮ ಕುಲದೇವರನ್ನೂ ಹೆಚ್ಚು ನಂಬುತ್ತಾರೆ. ವಂಶದ ಪ್ರತಿಯೊಬ್ಬರೂ ಕುಲದೇವತೆಯನ್ನು ಪೂಜಿಸಲೇಬೇಕು. ವರ್ಷಕ್ಕೊಮ್ಮೆ ವಿಶೇಷ ಪೂಜೆಯನ್ನು ಮಾಡುತ್ತಾರೆ. ಅಂದು ಕುಟುಂಬದ ಪ್ರತಿಯೊಬ್ಬ ಸದಸ್ಯರು ಸಮಾಜದ ಗುರು ಹಿರಿಯರನ್ನು ಕರೆಯಿಸಿ ಪೂಜಾ ಸಮಾರಂಭ ಮಾಡುವುದು ಈ ಸಮಾಜದಲ್ಲಿ ಒಂದು ವೈಶಿಷ್ಟವಾಗಿದೆ.

ಮನೆಯಲ್ಲಿ ಯಾರಾದರೂ ಅಬಾರಿಯಾದರೆ, ಗಾಳಿ, ಶಕೆ (ದೆವ್ವದ) ಕಾಟವಾದರೆ ಮಾಟ-ಮಂತ್ರ ವಗೈರೆ ಮಾಡಿದ್ದರೆ ಮೊದಲು ಮನೆತನದ ದೇವರನ್ನು ಬೇಡಿಕೊಳ್ಳುವರು. ಬಹುಶಃ ನಾವು ಏನಾದರೂ ತಪ್ಪು ಮಾಡಿರಬೇಕು. ಅದಕ್ಕೆ ನಮ್ಮ ದೇವರು ನಮಗೆ ಕಾಡುತ್ತಿದೆ ಎಂದು ಮನೆ ಜನರು ವಿಚಾರಿಸುವವರು. ಸಾಂಪ್ರದಾಯಕವಾಗಿ ಕುಲದೇವರನ್ನು ಪೂಜಿಸಿ ನಮ್ಮಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಬೇಕು. ಆಚಾರಿ ಇದ್ದ ಮನುಷ್ಯನನ್ನು ಬೇಗನೆ ವಾಸಿ ಮಾಡಬೇಕೆಂದು ಬೇಡಿಕೊಳ್ಳುವವರು ಕಂಜರಭಾಟರು ಕುಲದೇವತೆಯ ಮೇಲೆ ಹೆಚ್ಚು ವಿಶ್ವಾಸ ಶ್ರದ್ಧೆಯಿಂದ ಪೂಜಿಸುವರು. ಪ್ರತಿಯೊಂದು ವಂಶಕ್ಕೆ ಬೇರೆ ಬೇರೆ ದೇವರು ಇದ್ದು ಪೂಜಿಸುವ ವಿಧಾನಗಳು ಬೇರೆ ಬೇರೆಯಾಗಿವೆ.

ಜೀವನ ಶೈಲಿ

ಹೆಚ್ಚಾಗಿ ಈ ಬುಡಕಟ್ಟು ಜನಾಂಗಗಳು ತಮ್ಮದೇ ಆದ ಜೀವನ ಶೈಲಿಯನ್ನು ಹೊಂದಿದ್ದಾರೆ. ಕೆಲವರು ಇತರರೊಡನೆ ವಾಸವಾಗಿದ್ದು, ತಮ್ಮ ಸಂಪ್ರದಾಯವನ್ನೇ ಪಾಲಿಸುತ್ತಾರೆ. ಹಲವು ಬುಡಕಟ್ಟಿನವರು ತಮ್ಮದೇ ಕಾಲೋನಿಗಳನ್ನು ಮತ್ತು ಮುಖಂಡರುಗಳನ್ನು ಹೊಂದಿದ್ದಾರೆ. ಈ ಭಾತ್ರುಗಳು ಕಾಲೋನಿಗಳಲ್ಲಿ ಪ್ರತ್ಯೇಕವಾಗಿ ಇರುತ್ತಾರೆ. ಆದ್ದರಿಂದ ಅವರು ತಮ್ಮ ಸ್ವಸಂಪ್ರದಾಯಗಳನ್ನು ಅನುಸರಿಸುತ್ತಾರೆ.

ಗರ್ಭಧಾರಣೆ: ಮಹಿಳೆ ಚೊಚ್ಚಲ ಬಸುರಿಯಾಗಿದ್ದಾಗ ೫ ತಿಂಗಳು ತುಂಬಿದ ನಂತರ ತನ್ನ ತಾಯಿಯ ಮನೆಗೆ ಹೋಗುವ ಸಂಪ್ರದಾಯವಿದೆ. ೭ ತಿಂಗಲು ತುಂಬಿದ ನಂತರ ಅವಳನ್ನು ಗಂಡನ ಮನೆಗೆ ಕಳುಹಿಸಲಾಗುತ್ತದೆ.

ಸಾಮಾನ್ಯವಾಗಿ ಸ್ತ್ರೀಯ ಚೊಚ್ಚಲ ಹೆರಿಗೆ ತಾಯಿಯ ಮನೆಯಲ್ಲಿ ಆಗುವ ಸಂಪ್ರದಾಯವಿದೆ. ಆದರೆ ಭಾತ್ರುಗಳಲ್ಲಿ ಈ ರೀತಿಯಿಲ್ಲ. ಒಂದು ವೇಳೆ ಅವರು ತನ್ನ ತಾಯಿಯ ಮನೆಗೆ ಹೋದಾಗ ಹೆರಿಗೆ ಆದರೆ ಅದನ್ನು ಅಪಶಕುನ ಎಂದು ಪರಿಗಣಿಸಲಾಗುತ್ತದೆ.

ಇತ್ತಿತ್ತಲಾಗಿ ಭಾತ್ರುಗಳು ಇತರರ ಸಂಪ್ರದಾಯಗಳನ್ನು ಆಚರಿಸತೊಡಗಿದ್ದಾರೆ. ಕುಬಸ ಅಥವಾ ವಟ್ಟಿಬರನ್‌/ಹೊಟ್ಟಿ ಸಮಾರಂಭವನ್ನು ಕಾಣಬಹುದು. ಮಹಿಳೆಯರು ವಧುವಿನ ಹಾಗೇ ಹೊಸ ಬಟ್ಟೆ ಮತ್ತು ಬಳೆಗಳನ್ನು ತೊಟ್ಟಿರುತ್ತಾರೆ. ಅಡಿಕೆ, ಅಕ್ಕಿ, ಹಣ್ಣು ಮತ್ತು ಇತರ ವಸ್ತುಗಳನ್ನು ಅವಳ ಉಡಿಯಲ್ಲಿ ಹಾಕುತ್ತಾರೆ. ಈ ಸಮಾರಂಭಕ್ಕೆ ಬಂದವರು ಕಾಣಿಕೆಗಳನ್ನು ನೀಡುತ್ತಾರೆ.

ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ಒಯ್ಯುವ ಸಂಪ್ರದಾಯ ಇರಲಿಲ್ಲ. ಹಿರಿಯ ಮಹಿಳೆಯರು ಸೂಲಗಿತ್ತಿಯಾಗಿರುತ್ತಾರೆ. ಅವರನ್ನು ಜತಿಗೆ/ದಾಧಿ ಎಂದು ಕರೆಯುತ್ತಾರೆ. ಕೇವಲ ಸಂಧಿಗ್ದ ಪರಿಸ್ಥಿತಿಯಲ್ಲಿದ್ದಾಗ ಮಾತ್ರ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು.

ಪ್ರಸೂತಿಯ ನಂತರ ಬಾಣಂತಿಗೆ ಕುಡಿಯಲು ಸಾರಾಯಿಯನ್ನು ನೀಡುತ್ತಾರೆ. ಅವರು ಹೇಳುವಂತೆ ಹೆರಿಗೆಯ ಸಂದರ್ಭದಲ್ಲಿ ದೇಹದ ಉಷ್ಣತೆ ಹೆಚ್ಚಿರುತ್ತದೆ. ಆದ್ದರಿಂದ ದೇಹವನ್ನು ತಣ್ಣಗಾಗಿಸಲು ಅಥವಾ ಉಷ್ಣತೆಯನ್ನು ಕುಗ್ಗಿಸಲು ಸಾರಾಯಿಯನ್ನು ನೀಡುತ್ತಾರೆ. ಇನ್ನು ಕೆಲವರು ಹೇಳುವಂತೆ ನೋವನ್ನು ಕಡಿಮೆ ಮಾಡಲು ಸಾರಾಯಿ ಕುಡಿಸುತ್ತಾರೆ. ಕೆಲವು ದಿನಗಳವರೆಗೆ ಸಜ್ಜಿಕವನ್ನು ತಯಾರಿಸಿ ನೀಡುತ್ತಾರೆ.

ಗಂಡು ಮಗು ಜನಿಸಿದ ಸುದ್ದಿ ತಿಳಿಸಲು “ಜಲಿಗೆ” ಎಂದು ಹಾಕುತ್ತಾರೆ. ಸಾಮಾನ್ಯ ಕರಳ ಬಳ್ಳಿಯನ್ನು ಕತ್ತರಿಸಲು ಕುಡಗೂಲು ಅಥವಾ ಗಾಜಿನ ತುಳಾಕನ್ನು ಬಳಸುತ್ತಿದ್ದರು. ಚಿಕ್ಕೋಡಿಯಲ್ಲಿ “ಸೀಮಾ” ಎಂಬ ಚಿಪ್ಪನ್ನು ಬಳಸುತ್ತಾರೆ. ಮುದ್ದೇಬಿಹಾಳದಲ್ಲಿ ತೊಟ್ಟಿಲಿಗೆ ಹಾಕುವ ಸಮಾರಂಭ ಆಚರಿಸುವ ಮುಂಚೆ ೫ನೇ ದಿನದಂದು ತಾಯಿ ಮತ್ತು ಮಗುವಿನ ಬಟ್ಟೆಗಳನ್ನು ಎಸೆದು ಹೊಸಬಟ್ಟೆಗಳನ್ನು ತರುತ್ತಿದ್ದರು. ಅವರನ್ನು ಸ್ನಾನ ಮಾಡಿಸಿ ಮನೆಯನ್ನು ಸ್ವಚ್ಚಗೊಳಿಸುತ್ತಿದ್ದರು.

ತೊಟ್ಟಿಲು ಸಮಾರಂಭ: ಇದನ್ನು “ಜೂಲಾ” ಎಂದು ಕರೆಯುತ್ತಾರೆ. ೬ನೇ ದಿನದಂದು ತೊಟ್ಟಿಲಿಗೆ ಹಾಕಿ ನಾಮಕರಣ ಮಾಡುತ್ತಾರೆ. ಈ ಸಮಾರಂಭ ಕೇವಲ ಒಂದು ಶಿಷ್ಟಾಚಾರವಾಗಿದೆ. ಜೋಪಡಿಯಲ್ಲಿ ವಾಸಿಸುವ ಇವರಿಗೆ ತೊಟ್ಟಿಲುಗಳಲ್ಲಿ, ಅದನ್ನು ಕಟ್ಟಲು ಸ್ಥಳವಿರುವುದಿಲ್ಲ. ತಾಯಿ ಮಗುವನ್ನು ತನ್ನ ಉಡಿಯಲ್ಲಿಯೇ ಕಟ್ಟಿಕೊಂಡು ಇರುವುದಿಲ್ಲ. ಹುಬ್ಬಳ್ಳಿಯಲ್ಲಿ ಕುಟುಂಬಗಳು ಕಟ್ಟಿಗೆಯ ಅಥವಾ ಕಬ್ಬಿಣದ ತೊಟ್ಟಿಲುಗಳನ್ನು ಹೊಂದಿದ್ದಾರೆ. ಇವರ ಮನೆಯಲ್ಲಿ ತೊಟ್ಟಿಲು ಕಟ್ಟಲು ಅಸಾಧ್ಯವಾದ್ದರಿಂದ ಹಲವಾರು ಜನ ಸಾರಿ-ಸೀರೆಯನ್ನು ಗುಡಿಸಲಿಗೆ ಕಟ್ಟಿಗೆಗೆ ಜೋತು ಬಿಡುತ್ತಾರೆ. ಇದನ್ನು “ಜೋಳಿಗೆ” ಎಂದು ಕರೆಯುತ್ತಾರೆ. ಆ ದಿನದಂದು ಬೆಲ್ಲಾ, ನೀರು ಮತ್ತು ಚಪಾತಿಗಳನ್ನು ತುಪ್ಪದೊಂದಿಗೆ ಮಿಶ್ರಣ ಮಾಡಿ ತಯಾರಿಸುತ್ತಾರೆ. ಈ ಸಮಾರಂಭಕ್ಕೆ ಕಾಲೋನಿಯ ಎಲ್ಲಾ ಮಕ್ಕಳನ್ನು ಕರೆದು ಬೆಲ್ಲ ನೀರು ಚಪಾತಿಗಳನ್ನು ನೀಡುತ್ತಾರೆ.

ನಾಮಕರಣ ಸಮಾರಂಭ: ನಾಮಕರಣವನ್ನು ಕೂಡಾ ಅದೇ ದಿನ ಆಚರಿಸುತ್ತಾರೆ. ಹೆಸರನ್ನು ತಂದೆ/ತಾಯಿ, ಅಜ್ಜ, ಅಜ್ಜಿಗಳು ನೀಡುತ್ತಾರೆ. ಮಹಿಳೆಯರು ಹಾಡುಗಳನ್ನು ಹಾಡುತ್ತಾರೆ. ಕೂಸಿನ ಮಾವನು ಕಸಬರಿಗೆಯನ್ನು ಕೂಸಿನ ಎದೆ ಅಥವಾ ಹೊಟ್ಟೆಯ ಮೇಲೆ ಇಡುತ್ತಾರೆ. ಇದಕ್ಕೆ ಕಾರಣ ಇವರಿಗೂ ಗೊತ್ತಿಲ್ಲ. ಅವರ ಹಿರಿಯರ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಹುಡುಗರಿಗೆ: ಮುಖೇಶ, ಬಿಂದಿಯಾ, ಮುಕ್ತಬಾ, ಸತಾರಾಸಿಂಗ್‌, ಜಯಸಿಂಗ್‌, ಅಮರಸಿಂಗ್‌, ಉದಯಸಿಂಗ್‌, ರೂಪಾಸಿಂಗ್‌, ಕಾರಸಿ, ಡೊರ್ಜಿ ಎಂಬ ಹೆಸರುಗಳನ್ನು ಸಾಮಾನ್ಯವಾಗಿ ನಾಮಕರಣ ಮಾಡಿರುತ್ತಾರೆ.

ಹುಡುಗಿಯರು: ಕುನ್ನಾಬಾಯಿ, ಕಮಲಾಬಾಯಿ, ಸೋನಿಯಾಬಾಯಿ, ರೇಷ್ಮಬಾಯಿ, ಸಾಬಿಯಾಬಾಯಿ, ಸುಶೀಲಾಬಾಯಿ, ರಂಬಾಬಾಯಿ, ರೀಣಾ, ರಾಜಿ, ನಗೀನಾ ಶಾನೋ ಎಂಬ ಹೆಸರುಗಳನ್ನು ಇಡುತ್ತಾರೆ.

ಇಂದು ಸಿನಿಮಾ ತಾರೆಯರ ಹೆಸರುಗಳನ್ನು ಇಡುತ್ತಿದ್ದಾರೆ. ನಮ್ಮ ಬಾಯಲ್ಲಿ ಬಂದ ಹೆಸರನ್ನು ನಾಮಕರಣ ಮಾಡುತ್ತೇವೆಂದು ಹೇಳುತ್ತಾರೆ. ಕೆಲವೊಂದು ಕಡೆ ೨೫ ದಿನ ಮತ್ತು ಕೆಲವು ಕಡೆ ೪೦ ದಿನಗಳ ಕಾಲ ತಾಯಿ ಮತ್ತು ಮಗುವನ್ನು ಅಗಲಿಸುತ್ತಾರೆ. ಸ್ಥಳೀಯ ವ್ಯಕ್ತಿಗಳು ಹೇಳುವಂತೆ ತಾಯಿ ಮತ್ತು ಮಗು ಪರಿಶುದ್ಧವಾಗಿ ಉಳಿಯುತ್ತಾರೆ. ಈ ಅವಧಿಯಲ್ಲಿ ಒಂದು ವೇಳೆ ಅವಳು ಅಡುಗೆ ಮಾಡಿದರೆ ಅದನ್ನು ಯಾರೂ ತಿನ್ನುವುದಿಲ್ಲ. ಈ ಅವಧಿಯನ್ನು ಮಡಿ, ಮೈಲಿಗೆ ಎನ್ನುತ್ತಾರೆ. ಆಗ ಅವರನ್ನು ಯಾರು ಮುಟ್ಟುವುದಿಲ್ಲ. ನಂತರ ಹಳೆಯ ಬಟ್ಟೆಗಳನ್ನು ತೆಗೆದುಹಾಕಿ ತಾಯಿ ಮಗುವಿಗೆ ಸ್ನಾನ ಮಾಡಿಸುತ್ತಾರೆ. ನಂತರ ಹೊಸಬಟ್ಟೆಗಳನ್ನು ತಂದು ತಮ್ಮ ಸಮುದಾಯಕ್ಕೆ ಕರೆದುಕೊಂಡು ಬರುತ್ತಾರೆ.

ಪ್ರತಿಯೊಂದು ಕಡೆಯ ಸ್ಥಳೀಯ ವ್ಯಕ್ತಿಗಳು ಹೇಳುವುದೇನೆಂದರೆ ಶಿಶು/ಎಳೆಕೂಸು ಸಣ್ಣದಿದ್ದಾಗ ಎಂದು ಸಾಯುವುದಿಲ್ಲ. ಹಾಗೂ ತಾಯಿ ಅನಾರೋಗ್ಯ ಪೀಡಿತ/ಸರಿವನ್ನು ಅಪ್ಪುದಿಲ್ಲ. ಒಂದು ತಿಂಗ ಕಾಲ ಮಗುವಿಗೆ ಕತ್ತಿಯ ಹಾಲನ್ನು ನೀಡಲಾಗುತ್ತದೆ. ಮಾಸ್ಟರ್ ಬಾಬಡೆರವರ ಪ್ರಕಾರ ಕತ್ತಿಯ ಹಾಲು ಅತ್ಯಂತ ಆರೋಗ್ಯದಾಯಕವಾಗಿದೆ.

ಮೈನೆರುವಿಕೆ: ಇದನ್ನು ಅವರ ಭಾಷೆಯಲ್ಲಿ ಬಡಿಸಿಂತೆ ಎನ್ನುತ್ತಾರೆ. ಹಿಂದಿನ ಕಾಲದಲ್ಲಿ ಕನ್ಯೆ ಮೈನೆರೆದಾಗ ಮತ್ತು ನಂತರ ಪ್ರತಿ ತಿಂಗಳು ೯ ದಿನಗಳ ಕಾಲ ಹೊರಗೆ ಇರಬೇಕಾಗುತ್ತಿತ್ತು. ಆದರೆ ಆ ದಿನಗಳಲ್ಲಿ ೫ ದಿನಗಳ ಕಾಲ ಮಾತ್ರ ಹೊರಗೆ ಉಳಿಯುತ್ತಾರೆ. ಅವರ ದೇಹಕ್ಕೆ ಅರಿಶಿಣವನ್ನು ಹಚ್ಚುತ್ತಾರೆ. ಇದರಲ್ಲಿ ಪಾಲ್ಗೊಂಡ ಎಲ್ಲರಿಗೂ ಚಹಾವನ್ನು ನೀಡಲಾಗುತ್ತದೆ.

ಒಂಭತ್ತು ದಿನಗಳ ನಂತರ ಹೊಸ ಬಟ್ಟೆಗಳನ್ನು ನೀಡಿ ಹಾಗೂ ಹಸಿರು ಬಳೆಗಳನ್ನು ತೊಡಿಸಿ ಕರೆದುಕೊಂಡು ಬರಲಾಗುತ್ತದೆ. ಚಿಕ್ಕೋಡಿಯಲ್ಲಿ ಹೊಸ ಸೀರೆಯನ್ನು ಹೂಗಳನ್ನು ಮುಡಿಸಿರುತ್ತಾರೆ. ಮತ್ತು ಇತರರು ಹಾಡುತ್ತಿರುತ್ತಾರೆ. ಅವಳ ದೇಹಕ್ಕೆ ಅರಿಶಿಣವನ್ನು ಹಚ್ಚಿ ಕೂಡ್ರಿಸಿ ಅಡಿಕೆ, ಎಲೆ, ಟೆಂಗಿನಕಾಯಿ ಮತ್ತು ಹೊಸ ಹೊಸ ಬಟ್ಟೆಗಳನ್ನು ಇಡಲಾಗುತ್ತದೆ. ಬಂದ ಎಲ್ಲ ಅತಿಥಿಗಳು ತಮ್ಮ ಆಯರ್ (ಕಾಣಿಕೆ)ಗಳನ್ನು ಅವಳ ಉಡಿಯಲ್ಲಿ ಹಾಕುತ್ತಾರೆ.

ಮದುವೆಯ ವಯಸ್ಸು: ಹಿಂದಿನ ಕಾಲದಲ್ಲಿ ಬಾಲ್ಯ ವಿವಾಹವಿತ್ತು. ಆದರೆ ಇಂದು ೧೮ ವಯಸ್ಸು ದಾಟಿದ ಬಳಿಕ ಮದುವೆಯನ್ನು ಮಾಡುತ್ತಾರೆ.

ನಿಶ್ಚಿತಾರ್ಥ: ಈ ನಿಶ್ಚಿತಾರ್ಥವನ್ನು ಮಾಂಗನಿ, ಮಂಗ ಅಥವಾ ಬಿಹು ಎಂದು ಕರೆಯುತ್ತಾರೆ. ಹುಬ್ಬಳ್ಳಿಯಲ್ಲಿ ಇದನ್ನು “ಇಳೆ” ಮತ್ತು “ಸಕರ್ ಕೊಡ” ಎನ್ನುತ್ತಾರೆ. ಹುಡುಗನ ಕಡೆಯ ಹಿರಿಯರು ಹುಡಗಿಯ ಮನೆಗೆ ಹೋಗುತ್ತಾರೆ. ಅವರನ್ನು (ದೈವದವರು ದೇವರ ಪ್ರತಿನಿಧಿಗಳು) ಎನ್ನುತ್ತಾರೆ. ಅಂದು ಹುಡಗಿಯು ಹುಡುಗನನ್ನು ನೋಡಬಹುದು. ಒಂದು ವೇಳೆ ಇಬ್ಬರೂ ಒಪ್ಪಿಕೊಂಡರೆ ನಿಶ್ಚಿತಾರ್ಥವನ್ನು ಮಾಡಲಾಗುತ್ತದೆ.

ಹುಡುಗನ ಕಡೆಯವರು ಒಂದು ಜಂಪರ್ ಪೀಸ್‌, ಅರಿಸಿಣ, ಅಡಿಕೆ, ಸೀರೆ, ಅಕ್ಕಿ, ವಿಳ್ಯದೆಲೆ ಮತ್ತು ಲಡ್ಡುಗಳನ್ನು ಹುಡಗಿಯ ಉಡಿಯಲ್ಲಿ ಹಾಕುತ್ತಾರೆ. ಹುಡುಗನ ತಂದೆ ಮತ್ತು ಹುಡುಗಿಯ ತಂದೆ ತಲ ೨೦೦ ರೂಪಾಯಿಗಳನ್ನು ಇಡುತ್ತಾರೆ. ಅವರು ಹುಡುಗಿಯ ಹಣೆಗೆ ಕುಂಕುಮ ಹಚ್ಚಿ ತಲೆಗೆ ಹೂವಿನ ದಂಡಿಯನ್ನು ಕಟ್ಟುತ್ತಾರೆ. ನಂತರ ಹಿರಿಯರು ನವ ವಧು-ವರರನ್ನು ಎದುರ ಬದುರವಾಗಿ ಕೂಡ್ರಿಸಿ ಮದುವೆಯ ದಿನವನ್ನು ನಿಶ್ಚಯಿಸುತ್ತಾರೆ. ನಿಶ್ಚಿತಾರ್ಥ ಸಮಾರಂಭದ ಕೊನೆಯಲ್ಲಿ ಇಂದು ನಮ್ಮ ಹುಡುಗ ಮತ್ತು ನಿಮ್ಮ ಹುಡುಗಿ ಮದುವೆಯಾಗಲು ನಿರ್ಧರಿಸಿದ್ದಾರೆ. ಇತರರೆಲ್ಲರೂ ಇದಕ್ಕೆ ಒಪ್ಪಿಗೆ ನೀಡಬೇಕು ಇವತ್ತು ಎಲ್ಲವನ್ನು ನಿಶ್ಚಯಿಸಲಾಗಿದೆ. ಒಂದು ವೇಳೆ ನೀವು ಇದನ್ನು ಮುರಿದರೆ ದಂಡವನ್ನು ನೀಡಬೇಕಾಗುತ್ತದೆ ಎಂದು ಹೇಳುತ್ತಾರೆ.

ಇವರ ಸಮುದಾಯದಲ್ಲಿ ಪ್ರೇಮ ವಿವಾಹಕ್ಕೆ ಅವಕಾಶವಿಲ್ಲ. ಪ್ರತಿಯೊಂದು ಮದುವೆಯು ಹಿರಿಯರಿಂದ ನಡೆಯುತ್ತದೆ. ಎರಡು ಕಡೆಯಿಂದ ಪಂಚರು ೨೦೦ ರೂ.ಗಳನ್ನು ತೆಗೆದುಕೊಳ್ಳುತ್ತಾರೆ. ಹುಡುಗನ ಕಡೆಯವರು ಹಣವನ್ನು ಹುಡುಗಿಯ ಬಳೆಗಳನ್ನು ಮತ್ತು ಅರಿವೆಗಳನ್ನು ತರಲು ಬಳಸಲಾಗುತ್ತದೆ. ೫೨೫ ರೂಪಾಯಿಗಳನ್ನು ತೆರವು ಎಂದು (ಕನ್ಯಾ ಶುಲ್ಕ) ಹುಡುಗನ ಕಡೆಯವರು ನೀಡುತ್ತಾರೆ. ಇತರೆ ಸಮುದಾಯಗಳ ಪ್ರಭಾವದಿಂದಾಗಿ ಇವರಲ್ಲಿ ವರದಕ್ಷಿಣೆ ಪದ್ಧತಿ ಪ್ರಾರಂಭವಾಗಿದೆ.

ಈ ಭ್ರಾತೃಗಳಲ್ಲಿ ೧೮ ಗೋತ್ರಗಳಿವೆ. ಸಗೋತ್ರರರ ಜನರನ್ನು ಸಹೋದರ, ಸಹೋದರಿಯವರೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಒಂದೇ ಗೋತ್ರಕ್ಕೆ ಸೇರಿದವರನ್ನು ಮದುವೆ ಮಾಡುವುದಿಲ್ಲ. ನಿಶ್ಚಿತಾರ್ಥಕ್ಕಿಂತ ಮುಂದೆ ಸಗೋತ್ರರಾಗಿರದೆ ಬೇರೆ ಗೋತ್ರಕ್ಕೆ ಸೇರಿದವರು ಎಂಬುದರ ಬಗ್ಗೆ ಮನನ ಮಾಡಿಕೊಳ್ಳಲಾಗುತ್ತದೆ. ಒಂದು ವೇಳೆ ಒಂದೇ ಗೋತ್ರಕ್ಕೆ ಸೇರಿದವರು ಮದುವೆಯಾದರೆ ದಂಡವನ್ನು ವಿಧಿಸಲಾಗುತ್ತದೆ.

ವಿವಾಹ: ಸಾಮಾನ್ಯವಾಗಿ ಮದುವೆ ಹುಡುಗಿಯ ಮನೆಯಲ್ಲಿ ನಡೆಯುತ್ತದೆ. ಮದುವೆ ಮುಂಚೆ ದಿನದಿಂದಲೂ ಪೆಂಡಾಲನ್ನು ಹಾಗೂ ಕೈಗಳಿಗೆ ಮೆಹಂದಿಯನ್ನು ಹಚ್ಚಿಕೊಳ್ಳುತ್ತಾರೆ. ನಂತರ ಪ್ರಾರ್ಥನೆ ಮತ್ತು ಹಾಡುಗಳು ನಡೆಯುತ್ತವೆ. ಇಲ್ಲಿ ೫ ದಿನಗಳ ಕಾಲ ಮದರಂಗಿ ಸಮಾರಂಭವನ್ನು ನಡೆಸುತ್ತಾರೆ. ಮತ್ತು ಅರಿಶಿಣವನ್ನು ಬಳಸುತ್ತಾರೆ. ಮೊದಲಿನ ಕಾಲದಲ್ಲಿ ಮದುವೆಗಳು ೭ ದಿನಗಳ ಕಾಲ ನಡೆಯುತ್ತಿತ್ತು. ಮಧುವಿನ ಅಲಂಕಾರಕ್ಕಾಗಿ ಈ ಕೆಳಗಿನ ಆಭರಣಗಳನ್ನು ಬಳಸುತ್ತಿದ್ದರು.

೧) ಮಾಲಾಮಣಿ (ಕಾಲು ಚೈನು) ೨) ಕರಿಮಣಿ (ನೆಕಲಸ್‌) ೩) ಅಂಗುಟಿ (ಉಂಗರ) ೪) ಕಾಲುಂಗರ ೫) ಏತನ ೬) ಮೂಗಿನತ್ತು ೭) ಚೂಡಿಯಾ (ಬಳೆಗಳು) ೮) ಫೆಜನ ೯) ಕರನಪುಲ ೧೦) ಓಲೆ ಕೈಯಲ್ಲಿ ಅರಸಿಣ ಮತ್ತು ವಿಳ್ಯೆದೆಲೆಗಳನ್ನು ನೀಡುತ್ತಾರೆ. ನಂತರ ಹುಡುಗ ಹುಡುಗಿಯ ಮನೆಗೆ ಬರುತ್ತಾರೆ. ಹುಡುಗನ ಸಹೋದರಿ ಆರು ಸಲ ಆರತಿ ಎತ್ತುತ್ತಾಳೆ.

ನಂತರ ಪಂಚರು- “ಪ್ರತಿದಿನ ಎಮ್ಮೆಗೆ ಆಹಾರ ಬೇಕಾಗುವಂತೆ ಇವಳಿಗೂ ಆಹಾರ ಬೇಕು. ಆದ್ದರಿಂದ ಪ್ರತಿದಿನ ನೀನು ಹಣ ತಂದು ಅವಳಿಗೆ ನೀಡಬೇಕು” ಎಂದು ಹೇಳುತ್ತಾರೆ. ನಂತರ ಹುಡುಗಿಯ ತಾಯಿ ಹುಡುಗನಿಗೆ ಕೊಬ್ಬರಿಯ ಹಾರ ಹಾಕುತ್ತಾಳೆ. ಮತ್ತೆ ಆರತಿ ಎತ್ತಿ, ಹುಡುಗಿಯ ಕೊರಳಿಗೆ ತಾಳಿಯನ್ನು ಹಾಕುತ್ತಾರೆ.

ನಂತರ ಹುಡುಗನು ಖರ್ಚು ಮಾಡುತ್ತಾರೆ. ಆಗ ಹುಡುಗಿಯನ್ನು ಹುಡುಗ ತನ್ನ ಮನೆಗೆ ಕರೆತರುತ್ತಾನೆ. ನಂತರ ಪ್ರಥಮ ರಾತ್ರಿಯನ್ನು ಮಾಡುತ್ತಾರೆ. ಆಗ ಪಂಚರು ಹುಡುಗಿ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಹುಡುಗಿಯ ಸಂಬಂಧಿಗಳು ಮತ್ತು ಸ್ನೇಹಿತರು ಅವಳಿಗೆ ಅರಿಸಿಣ ಹಚ್ಚಿ ಸ್ನಾನ ಮಾಡಿಸುತ್ತಾರೆ. ಹುಡುಗಿಗೆ ಸೀರೆ, ಹುಡುಗನಿಗೆ ಪಂಚೆ ಮತ್ತು ಅಂಗಿ (ಶರ್ಟ್‌)ಯನ್ನು ತೊಟ್ಟು ಅವರ ಎಡಗೈಗೆ ವೀಳ್ಯೆದೆಲೆ ಮತ್ತು ಅರಿಸಿನ ಬೇರನ್ನು ಕಟ್ಟಿರುತ್ತಾರೆ. ಹುಡುಗಿಗೆ ಹೂವಿನ ದಂಡಿ ಹುಡುಗನಿಗೆ ಹೂವಿನ ಹಾರ ಹಾಕಿರುತ್ತಾರೆ. ಹುಡುಗ ಅವಳ ಕುತ್ತಿಗೆಗೆ ಕರಿಮಣೆಯನ್ನು ಕಟ್ಟುತ್ತಾನೆ. ಜನರು ದಂಪತಿಗಳಿಗೆ ಅಕ್ಷತೆ ಹಾಕುತ್ತಾರೆ. ಹುಡುಗನ ೫೩೫ ರೂಪಾಯಿಗಳನ್ನು ಹುಡುಗಿಗೆ ತೆರುವನ್ನು ನೀಡುತ್ತಾನೆ. ನಂತರ ಆರತಿ ಮಾಡಲಾಗುತ್ತದೆ.

ಹುಡುಗಿಯ ಕಡೆಯವರು ವಧುವಿಗೆ ಕಾಲು ಚೈನ ಮತ್ತು ಕಿವಿ ಓಲೆಗಳನ್ನು ಹಾಕುತ್ತಾರೆ. ಹುಡುಗನಿಗೆ ಮತ್ತು ಹುಡುಗಿಗೆ ಅವರವರ ಕಡೆಯವರು ವಸ್ತ್ರಗಳನ್ನು ನೀಡುತ್ತಾರೆ. ಇವರ ಮದುವೆ ಸಮಾರಂಭ ಸಂಜೆ ೭ ಗಂಟೆಯಿಂದ ರಾತ್ರಿಯವರೆಗೆ ನಡೆಯುತ್ತದೆ. ಇವರಲ್ಲಿ ಕೆಲವರು ನಮ್ಮ ಮದುವೆ ಮುಸ್ಲಿಂಮರ ಹಾಗೇ ಎನ್ನುತ್ತಾರೆ. ಎರಡು ಕಡೆಯವರು ಖರ್ಚನ್ನು ಹಂಚಿಕೊಳ್ಳುತ್ತಾರೆ. ಅತಿಥಿಗಳು ಕಾಣಿಕೆಗಳನ್ನು ನೀಡುತ್ತಾರೆ. ನಂತರ ಊಟ ಮುಗಿಸಿಕೊಂಡು ಮಾರನೆಯ ದಿನ ಗಂಡಿನವರು ತಮ್ಮ ಮೆನೆಗೆ ಮರಳುತ್ತಾರೆ. ಹುಡುಗಿಯ ಕಡೆಯವರು ನೀಡಿದ ಹಣ, ಅಡಿಕೆ, ಅಕ್ಕಿ, ಎಲೆಗಳನ್ನು ಸ್ವೀಕರಿಸಿ ಹುಡುಗಿಯ ಸಹೋದರಿಯವರಿಗೆ ಗಂಡಿನ ಕಡೆಯವರು ೯ ಸೀರೆಗಳನ್ನು ಮತ್ತು ೫೦೦ ರೂಪಾಯಿಗಳನ್ನು ನೀಡುತ್ತಾರೆ. ಹೆಣ್ಣಿನವರು ಮಂಗಳ ಸೂತ್ರವನ್ನು ನೀಡುತ್ತಾರೆ.

ಮದುವೆಯ ಕೊನೆಯ ಸಮಾರಂಭದಲ್ಲಿ ಕಾಲೋನಿಯ ಪಂಚರು ಇಲ್ಲಿಯವರೆಗೆ ನಿನ್ನ ಮನಸ್ಸಿಗೆ ಬಂದಂತೆ ಜೀವಿಸಿರುವೆ. ಇನ್ನು ನಿನ್ನ ಸಂಗಾತಿ ಬಂದಿದ್ದಾಳೆ. ನಿನ್ನ ಸುಖ, ದುಃಖಗಳನ್ನು ಪರಸ್ಪರ ಹಂಚಿಕೊ, ನೀನು ತಂದ ವಸ್ತುಗಳನ್ನು ಇಬ್ಬರಲ್ಲಿ ಹಂಚಿಕೋ, ನಿನ್ನ ಮನೆಯಲ್ಲಿರುವ ಆಕಳನ್ನು ಸಂರಕ್ಷಿಸುವಂತೆ ಈ ಸಂಗಾತಿಗೆ ಮರಾದೆಯನ್ನು ನೀಡು, ಅವಳನ್ನು ಸಂತೋಷಗೊಳಿಸು ಎಂದು ಹುಡುಗನಿಗೆ ಹೇಳುತ್ತಾರೆ. ಮದುವೆ ಮೂರನೆಯ ದಿನ ಇವರು ಪ್ರಥಮ ರಾತ್ರಿಯ ಸಮ್ಮಿಲನಗೊಳ್ಳುತ್ತಾರೆ. ಮಾರನೆಯ ದಿನ ಅವರ ಹಾಸಿಗೆಯಲ್ಲಿ ರಕ್ತವನ್ನು ನೋಡುತ್ತಾರೆ. ಅದು ಇದ್ದರೆ ಅವಳನ್ನು ಪವಿತ್ರವೆಂದು ಗೌರವಿಸುತ್ತಾರೆ. ಅದೇ ಕನ್ಯಾಪೊರೆ ಹರಿಯುತ್ತದೆ ಎಂದು ತಿಳಿದಿದ್ದಾರೆ. ಮೊದಲು ಯಾವುದೇ ಕಾರಣದಿಂದ ಅದು ಹರಿಯದಿದ್ದರೆ ಅದಕ್ಕೆ ಮಹತ್ವ ನೀಡುತ್ತಾರೆ.

ವಿಚ್ಚೇದನ: ಇವರ ಸಮುದಾಯದಲ್ಲಿ ವಿಚ್ಚೇದನಕ್ಕೆ ಅನುಮತಿ ಇದೆ. ನ್ಯಾಯಾಲಯ ಬದಲಾಗಿ ಅವರ ಸರಪಂಚರಿಂದ ಆಗುತ್ತದೆ. ಈ ಕಾರ್ಯ ಅದನ್ನು “ತಲಾಕ” ಎನ್ನುತ್ತಾರೆ.

ಗದಗದ ಮಾಸ್ಟರ್ ಬಾಗಡೆ ಹೇಳುವಂತೆ ವಿಚ್ಚೇದನ ಬಯಸುವವರು ಮುಖಂಡರ ಬಳಿ ಬರುತ್ತಾರೆ. ಆಗ ಮುಖಂಡ ಬಂದು ವರ್ತುಲ ಮಾಡಿ ಅದರ ನಡುವೆ ಒಂದು ಬಡಿಗೆಯನ್ನು ಇಡುತ್ತಾರೆ. ಅದನ್ನು ಮುಖಂಡ ಎರಡು ಭಾಗಗಳಾಗಿ ಮರಿದರೆ ನಂತರ ಅವರು ವಿಚ್ಚೇದನ ಪಡೆದು ದೂರ ಹೋಗಬಹುದು. ಒಂದು ವೇಳೆ ಈ ದಂಪತಿಗಳು ಒಂದಾಗಬೇಕೆಂದು ಬಯಸಿದರೆ ಮತ್ತು ಒಂದು ವರ್ತುಲ ಮಡಿಕಟ್ಟಿಗೆಯ ತುಂಡುಗಳನ್ನು ಕೂಡಿಸಿ ಇಡುತ್ತಾರೆ. ಮಧ್ಯದಲ್ಲಿ ಬೆಲ್ಲವನ್ನು ಇಡುತ್ತಾರೆ. ನಂತರ ಇಬ್ಬರೂ ದಂಪತಿಗಳು ಕೂಡ ಇರಬಹುದು.

ಒಂದು ವೇಳೆ ಹುಡುಗಿ ಗಂಡನೊಂದಿಗೆ ಇರಲು ಬಯಸಿದ್ದರೆ ಪಂಚಾಯಿತಿಯವರಲ್ಲಿಗೆ ಹೋಗಿ ಹುಡುಗನಿಗೆ ಮದುವೆಯ ಖರ್ಚನ್ನು (ಸುಮಾರು ೮೦.೦೦೦ ರೂ.ಗಳನ್ನು) ನೀಡಿ ವಿಚ್ಚೇದನೆ ಪಡೆಯಬಹುದೆಂದು ಇತರರು ಹೇಳುತ್ತಾರೆ. ಒಂದು ವೇಳೆ ಹುಡುಗ ಇರಲು ಬಯಸಿದ್ದರೂ ಹೆಣ್ಣಿನ ಕಡೆಯವರು ಗಂಡಿನ ಹಣ ನೀಡಬೇಕು ಸುಮಾರು (೮೦,೦೦೦ ರೂ.ಗಳು)

ಕೆಲವು ಕಡೆಗಳಲ್ಲಿ ವ್ಯಕ್ತಿಗಳು ಹೇಳುವಂತೆ ಹುಡುಗಿ ಮತ್ತೊಂದು ಮದುವೆ ಆಗಬಹುದು. ಗಂಡು ೩ ಅಥವಾ ೪ ಸಲ ಮದುವೆ ಆಗಬಹುದು. ಮದುವೆಯ ಯಾವುದೇ ಸಮಸ್ಯೆಗಳಿದ್ದರೆ ಎಲ್ಲವನ್ನು ಅವರ ಪಂಚಾಯಿತಿಯೇ ಬಗೆಹರಿಸುತ್ತದೆ.

ಹುಡುಗಿಯನ್ನು ಮದುವೆಯಾದ ನಂತರ ೫ ಬಾರಿ ಅವರ ತವರು ಮನೆಗೆ ಕರೆದುಕೊಂಡು ಬರಲಾಗುತ್ತದೆ. ನಂತರ ಹಬ್ಬದ ದಿನದಂದು ಕರೆದುಕೊಂಡು ಬರುವ ಸಂಪ್ರದಾಯವಿದೆ.

ವಿಧವಾ ವಿವಾಹ: ಮಹಿಳೆ ಎರಡನೆಯ ಬಾರಿಗೆ ಸಂಪ್ರದಾಯಬದ್ಧ ವಿವಾಹವಾಗಲು ಬರುವುದಿಲ್ಲ. ಆ ಮದುವೆಯನ್ನು ಉಡಿಕಿ ಎಂದು ಕರೆಯುತ್ತಾರೆ. ಯಾರು ಇವರ ಮುಖ ನೋಡುವ ಹಾಗಿಲ್ಲ. ಮತ್ತು ಯಾರು ಈ ಮದುವೆಗೆ ಬರುವುದಿಲ್ಲ. ಯಾವುದೋ ದೇವಸ್ಥಾನದಲ್ಲಿ ಪರಸ್ಪರರು ಹಾರ ಬದಲಾಯಿಸಿಕೊಳ್ಳುತ್ತಾರೆ.

ಬಡಿರ ಮಾನದಲ್ಲಿನ ಜಯರಾಜ ಹೇಳುವಂತೆ ಯಾರಾದರೂ ಹೆಂಡತಿ ಬಿಟ್ಟು ಬಂದು ಎರಡನೆಯ ಮದುವೆಯಾಗುತ್ತಿದ್ದರೆ ಮೊದಲು ತಮ್ಮ ಎಲ್ಲ ಭಾತ್ರುಗಳಲ್ಲಿ ವಿಚಾರಣೆ ನಡೆಸುತ್ತಾರೆ. ಮೊದಲು ಮದುವೆಯಾಗಿದ್ದಾನೆಂದು ತಿಳಿದು ಬಂದರೆ ಎರಡನೆಯ ಮದುವೆಗೆ ಅನುಮತಿ ನೀಡುವುದಿಲ್ಲ.

ಬೆಲ್ಲದ ಬಾಗೇವಾಡಿಯ ವಕ್ತಾರ ಹೇಳುವಂತೆ ಹುಡುಗ ಗುಟ್ಟಾಗಿ ಎರಡನೆಯ ಮದುವೆ ಮಾಡಿಕೊಂಡಿದ್ದು ತಿಳಿದುಬಂದರೆ ೧೨,೦೦೦ ದಿಂದ ೫೦,೦೦೦ ರೂ.ಗಳವರೆಗೆ ದಂಡ ಹಾಕಲಾಗುತ್ತದೆ.

ಅಂತರ್ ಜಾತಿ ವಿವಾಹ: ಒಂದು ವೇಳೆ ಬೇರೆ ಜಾತಿಯ ಹುಡುಗಿಯನ್ನು ವಿವಾಹವಾಗುತ್ತಿದ್ದರೆ, ೧೦.೦೦೦ ರೂ.ಗಳು ದಂಡ ನೀಡಬೇಕಾಗುತ್ತದೆ. ಮುದ್ದೇಬಿಹಾಳದಲ್ಲಿ ಇಂತಹ ಘಟನೆಗಳು ಕಂಡುಬಂದದ್ದರಿಂದ ಅವರ ಕುಟುಂಬವನ್ನು ಬಹಿಷ್ಕಾರ ಹಾಕಿ, ಸಮುದಾಯದಿಂದ ಹೊರಗಿಡಲಾಗಿ, ೫ ವರ್ಷಗಳ ನಂತರ ಆತ ೫,೦೦೦ ರೂ.ಗಳ ದಂಡ ನೀಡಿ ಸಮುದಾಯವನ್ನು ಪುನಃ ಸೇರಿಕೊಳ್ಳಬಹುದು. ಬಡಿಕಾಮನದಲ್ಲಿ ದಂಡ ೧೧೭೫ ರೂ. ಇದೆ. ಒಂದು ವೇಳೆ ಮಹಿಳೆ ಬೇರೆ ಗಂಡಸಿನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರೆ ಅವಳು ದಂಡ ನೀಡಬೇಕಾಗುತ್ತದೆ. ಇವರು ಮದುವೆ ಸಮಾರಂಭದಲ್ಲಿ ಸಂಗೀತ ವಾದ್ಯಗಳನ್ನು ನೀಡಬೇಕಾಗುತ್ತದೆ. ಇವರು ಮದುವೆ ಸಮಾರಂಭದಲ್ಲಿ ಸಂಗೀತ ವಾದ್ಯಗಳನ್ನು ನುಡಿಸುವುದಿಲ್ಲ. ಮತ್ತು ಡೊಳ್ಳ ಬಡಿಯುವುದಿಲ್ಲ.

ಬಹುಪಾಲು ಜನರ ಅಭಿಪ್ರಾಯದಂತೆ, ಇವರಲ್ಲಿ ಬಹು ಪತ್ನಿತ್ವ ಮತ್ತು ಬಹು ಪತಿತ್ವ ಪದ್ಧತಿ ಇಲ್ಲ. ಬಜನಸಿಂಗ್‌ಹೇಳುವಂತೆ ಹುಡುಗ ಬೇರೆ ಗೋತ್ರದ ಹುಡುಗಿಯನ್ನು ಮದುವೆಯಾಗಬಹುದು. ಇಂದು ಬೇರೆಯವರ ಸಂಪ್ರದಾಯ ಅನುಸರಿಸುತ್ತಿದ್ದಾರೆ. ಚಿಕ್ಕಪ್ಪ ತನ್ನ ಅಣ್ಣನ ಮಗಳನ್ನು ಮದುವೆಯಾಗಬಹುದು.

ಮರಣ: ಪ್ರಾಚೀನ ಕಾಲದಲ್ಲಿ ಶವವನ್ನು ಪ್ರಾಣಿಗಳಿಗೆ ಎಸೆಯಲಾಗುತ್ತಿತ್ತು. ನಂತರದಲ್ಲಿ ಹಿಂದೂ ಧರ್ಮದ ಪ್ರಭಾವದಿಂದ ಶವವನ್ನು ಹೂಳುವ ಮತ್ತು ಸುಡುವ ಪದ್ಧತಿಯನ್ನು ಪ್ರಾರಂಭಿಸಿದ್ದಾರೆ.

ಮರಣವನ್ನು ಮಶೀನ ಎನ್ನಲಾಗುತ್ತದೆ. ಇತರರಂತೆ ಇವರು ಕೂಡಾ ಸಾಯುವಾಗ ಬಾಯಲ್ಲಿ ನೀರು ಹಾಕುತ್ತಾರೆ. ಒಂದು ವೇಳೆ ನೆಂಟರಿಷ್ಟರು ಇರದಿದರೆ ಉಳಿದವರು ನೀರು ಬಿಡುತ್ತಾರೆ.

ಸಾಮಾನ್ಯವಾಗಿ ಶವವನ್ನು ಸುಡಲಾಗುತ್ತದೆ. ಬಿಜಾಪುರದಲ್ಲಿ ದಗಾಣದ ಭಾತ್ರುಗಳು ತಮ್ಮದೇ ಆದ ಸ್ಮಶಾನ ಭೂಮಿಯನ್ನು ಹೊಂದಿದ್ದಾರೆ. ಸಾಯುವವನ ಬಾಯಲ್ಲಿ ನೀರು ಬಿಡಲು ಗಂಗಾನದಿ ನೀರನ್ನು ಅಥವಾ ಬೇರೆ ಯಾವುದೇ ನದಿ ನೀರನ್ನು ಮನೆಯಲ್ಲಿ ಇಟ್ಟಿರುತ್ತಾರೆ.

ಶವವನ್ನು ತೊಳೆದು ಪುರುಷರಿದ್ದರೆ ಬಿಳಿಬಟ್ಟೆ, ಮಹಿಳೆ ಇದ್ದರೆ ಕೆಂಪು ಬಟ್ಟೆಯನ್ನು ಬಳಸುತ್ತಾರೆ. ತಲೆ, ಕಾಲುಗಳ ಕಡೆಗೆ ಅಗರಬತ್ತಿಗಳನ್ನು ಹಚ್ಚುತ್ತಾರೆ. ತಲೆಯ ಹತ್ತಿರ ಕೂಡಗೋಲನ್ನು ಇಡುತ್ತಾರೆ. ತಲೆಯ ಹತ್ತಿರ ಕುಡುಗೋಲು ಅಥವಾ ಚಾಕು ಇಡುವ ಉದ್ದೇಶ ಹುಬ್ಬಳ್ಳಿಯ ವಯೋವೃದ್ಧ ಹೇಳುವಂತೆ ಸತ್ತ ವ್ಯಕ್ತಿ ಪಿಶಾಚಿಯಾಗಿ ಬಂದು ಇತರರಿಗೆ ತೊಂದರೆ ನೀಡಬಾರದು ಎಂಬುದಾಗಿದೆ.

ಜೊತೆಗೆ ಸತ್ತ ವ್ಯಕ್ತಿಯ ಬಾಯಲ್ಲಿ ನಾಣ್ಯವನ್ನು ಇಡುವ ಸಂಪ್ರದಾಯವಿದೆ. ಕೈಯಲ್ಲಿ ಮತ್ತು ಎದೆಯ ಮೇಲೆಯೂ ನಾಣ್ಯ ಇಡುತ್ತಾರೆ. ಸುಟ್ಟ ಶವದ ಬೂದಿ ಮತ್ತು ನಾಣ್ಯವನ್ನು ಹೂಳುತ್ತಾರೆ. ಹುಬ್ಬಳ್ಳಿಯವರು ಹೇಳುವಂತೆ ಹಣಕ್ಕಾಗಿ ಆಸೆ ಹೊಂದಿ ನಂತರ ದೆವ್ವವಾಗಿ ಬಂದು ಇತರರನ್ನು ಹಣ ನೀಡುವಂತೆ ತೊಂದರೆ ನೀಡಬಾರದು. ಅದಕ್ಕಾಗಿ ಶವದ ಬಾಯಿಯಲ್ಲಿ ನಾಣ್ಯ ಇಡುತ್ತಾರೆ.

ದಾಂಡೇಲಿಯ ವಕ್ತಾರರು ಹೇಳುವಂತೆ ಮಗು ಗರ್ಭದಲ್ಲಿಯೇ ಸತ್ತರೆ ಆ ತಾಯಿಯನ್ನು ಸ್ಮಶಾನಕ್ಕೆ ಕರೆದುಕೊಂಡು ಹೋಗಿ (ಗರ್ಭವನ್ನು ತೆಗೆದು) ಮಗುವನ್ನು ಹೊರಗೆ ತೆಗೆಯಲಾಗುತ್ತದೆ. ನಂತರ ಮಗವನ್ನು ಪ್ರತ್ಯೇಕವಾಗಿ ಸಂಸ್ಕಾರ ಮಾಡಲಾಗುತ್ತದೆ. ಆ ತಾಯಿಯ ಕೈಯಲ್ಲಿ ಕಟ್ಟಿಗೆ ನೀಡಿ ಮಗು ಕೈಯಲ್ಲಿದೆ ಎಂದು ನಂಬುವಂತೆ ಹೇಳುತ್ತಾರೆ. ಹಾಗೆ ಕಟ್ಟಿಗೆ ನೀಡದಿದ್ದರೆ ಆ ತಾಯಿಯ ಆತ್ಮ “ನನ್ನ ಮಗು ಎಲ್ಲಿ” ಎಂದು ಇತರರಿಗೆ ಪೀಡಿಸುತ್ತಾಳೆ ಎಂಬ ನಂಬಿಕೆ ಇದೆ.

ಶವ ಸಂಸ್ಕಾರವನ್ನು ಸಾಮಾನ್ಯವಾಗಿ ಬೇಗ ಮಾಡುತ್ತಾರೆ. ಕೆಲವು ವೇಳೆ ಸಂಬಂಧಿಗಳ ಬರುವಿಕೆಗಾಗಿ ೨೪ ತಾಸುಗಳವರೆಗೆ ಕಾಯುತ್ತಾರೆ. ಶವವನ್ನು ಒಯ್ಯುವಾಗ ಸತ್ತವನ ಮಗ ಅಥವಾ ಹತ್ತಿರದ ಸಂಬಂಧಿಗಳು ಗಡಿಗೆ ಅಥವಾ ಮಡಿಕೆಯನ್ನು ತೆಗೆದುಕೊಂಡು ಮುಂದು ಹೋಗುತ್ತಾರೆ. ಶವಯಾತ್ರೆಯಲ್ಲಿ ಹಾಡುತ್ತಾರೆ. ಇಲ್ಲವೆ ರಾಮನಾಮ ಸತ್ಯ ಹೈ, ಸತ್ಯ ಬೋಲೋ ಗಟಿಯ ಹೈದ (ದೇವರ ಹೆಸರು ಸತ್ಯ ನೀನು ಸತ್ಯವನ್ನು ನುಡಿದರೆ ಜಯರಾಮರವಾಗಿರುವೆ) ಸ್ಮಶಾನದಲ್ಲಿ ಕೂಡಿಸಿದ ಕಟ್ಟಿಗೆ ಮೇಲೆ ಶವವನ್ನು ಇಟ್ಟು ಬೆಂಕಿ ಹಚ್ಚುತ್ತಾರೆ. ನಂತರ ಮನೆಗೆ ಬಂದು ಸ್ನಾನ ಮಾಡಿ ಮನೆಯನ್ನು ಸ್ವಚ್ಚಗೊಳಿಸುತ್ತಾರೆ. ಸತ್ತ ವ್ಯಕ್ತಿಯ ಬಟ್ಟೆಗಳನ್ನು ಎಸೆಯಲಾಗುತ್ತದೆ. ಇವರಿಗೆ ಲಡ್ಡು (ಉಂಡಿ)ಗಳನ್ನು ಕೊಟ್ಟು ಕೆಲವು ಲಡ್ಡುಗಳನ್ನು ಪ್ಲೇಟ್‌ನಲ್ಲಿ ಹಾಕಿ ಪ್ಲೇಟನ್ನು ಸತ್ತ ವ್ಯಕ್ತಿಯ ಸ್ಥಳದಲ್ಲಿ ಇಡುತ್ತಾರೆ.

ವ್ಯಕ್ತಿ ಸತ್ತ ಅವಧಿಯಿಂದ ೮ ದಿನ ಕಾಲ, ಮೈಲಿಗೆ ಅಥವಾ ಮಟ್ಟ ಎಂದು ಕರೆಯಲಾಗುತ್ತದೆ. ಮನೆಯನ್ನು ಸ್ವಚ್ಚಗೊಳಿಸಿದ ನಂತರ ಇದು ಮುಗಿಯುತ್ತದೆ. ಮೊದಲು ದೇಹದ ಮೇಲೆ ತಾಮ್ರದ ನಾಣ್ಯವನ್ನು ಇಡುತ್ತಿದ್ದರು. ಈಗ ತಾಮ್ರದ ನಾಣ್ಯ ಸಿಗದಿರುವುದರಿಂದ ಬೆಳ್ಳಿಯ ನಾಣ್ಯ ಇಡುತ್ತಾರೆ.

ಎರಡನೆಯ ದಿನದಂದು ಸ್ಮಶಾನಕ್ಕೆ ಹೋಗಿ “ಪಿಂಡ” ಸಮಾರಾಧನೆ ಮಾಡುತ್ತಾರೆ. ನೀರನ್ನು ಹಾಕಿ ಬೂದಿಯನ್ನು ಗುಂಪಿ ಮಾಡುತ್ತಾರೆ. ಬೆಲ್ಲದ ನೀರು ಚಪಾತಿ ಮತ್ತು ತುಪ್ಪವನ್ನು ಮಿಶ್ರಣದ ದೆಂಡನ್ನು ಮಾಡಿ ಅದರ ಮೇಲೆ ಇಡುತ್ತಾರೆ. ಅದನ್ನು ಶವ ಹೊತ್ತ ನಾಲ್ಕು ಜನ ತಿನ್ನುತ್ತಾರೆ. ನಂತರ ಇತರರು ತಿನ್ನುತ್ತಾರೆ.

ಮೂರನೆಯ ದಿವನ್ನು “ದಿನ” ಅಥವಾ “ಕುಂಡ” ಎನ್ನುತ್ತಾರೆ. ಅಂದು ಮಣ್ಣಿನ ಮಡಿಕೆಯಲ್ಲಿ ಅಕ್ಕಿ, ಸಕ್ಕರೆ, ತುಪ್ಪ, ಕಾಳುಗಳನ್ನು ಅಗರಬತ್ತಿ ಮತ್ತು ಮೂಲಂಗಿಯನ್ನು ತುಂಬುತ್ತಾರೆ. ಇದನ್ನು ಶವವನ್ನು ಸುಟ್ಟ ಸ್ಥಳದಲ್ಲಿ ಇಡುತ್ತಾರೆ. ಅವರು ಬಂದನಂತರ ಸಾರಾಯಿಯನ್ನು ಹಂಚಲಾಗುತ್ತದೆ. ಒಬ್ಬರು ಬಾವಿಯಿಂದ ತಂದ ನೀರನ್ನು ಎಲ್ಲರೂ ಕುಡಿಯುತ್ತಾರೆ. ಹೀಗೆ ಮಾಡಿದಾಗ ಅವರು ಸ್ವಚ್ಚಗೊಂಡರು ಎಂದರ್ಥ. ಈ ನೀರನ್ನು ಅಚುತಪಾನಿ ಎನ್ನುತ್ತಾರೆ.

ವೇಷಭೂಷಣ ಮತ್ತು ಆಭರಣಗಳು: ಹಿಂದಿನ ಕಾಲದಲ್ಲಿ ಮಹಿಳೆಯರು ಉದ್ದವಾದ ತೋಳಿನ ಜಂಪರ ಮತ್ತು ಲಂಗವನ್ನು ಧರಿಸುತ್ತಿದ್ದರು. ವಿಶೇಷ ಪ್ರಕಾರದ ಆಭರಣಗಳನ್ನು ತೊಡುತ್ತಿದ್ದರು. ಇದನ್ನು ಅವರು ಮಾರವಾಡಿ ಶೈಲಿ ಎನ್ನುತ್ತಾರೆ. ೮೫ ವರ್ಷ ವೃದ್ಧೆ ಗೋಪಿಬಾಯಿ ಇಂದಿಗೂ ಈ ವಿಶಿಷ್ಟ ಶೈಲಿಯ ಬಟ್ಟೆಗಳನ್ನು ಹಾಕಿಕೊಳ್ಳುವುದನ್ನು ಕಾಣಬಹುದು.

ಮದುವೆಯಾದವರು ತಾಲಿ ವಸ್ತ್ರವನ್ನು ಧರಿಸುತ್ತಾರೆ. ಜೊತೆಗೆ ಮಾರವಾಡಿ (ಗಣ್ಣಿರ) ಇವು ಇವರ ವಿಶೇಷವಾದ ಆಭರಣಗಳು ಕಣ್ಣಿಗೆ ಬಳಿಗೆ ಸೊರಮ್ಮ ಎಂಬ ವಿಶಿಷ್ಟ ಪ್ರಕಾರ ತೈಲವನ್ನು ಹಚ್ಚುತ್ತಾರೆ. ಇತರರು ಇದನ್ನು ಹಾಡಿಗೆ ಎನ್ನುತ್ತಾರೆ. ಇದನ್ನು ತಯಾರಿಸಲು ಲವಂಗ, ಯಾಲಕ್ಕಿ ಮತ್ತು ಮೆಣಸುಗಳನ್ನು ಬಳಸುತ್ತಾರೆ. ಇದನ್ನು ಹಚ್ಚುವುದರಿಂದ ಬಿದ್ದ ಹೊಲಸು ಕಣ್ಣುಗಳು ಸ್ವಚ್ಚಗೊಳ್ಳುತ್ತವೆ. ಬೆಲ್ಲದ ಬಾಗೇವಾಡಿಯಲ್ಲಿ ಈ ಕಾಡಿಗೆಯನ್ನು ಮೆಣಸು ಶುಂಠಿ ಲವಂಗ ಮತ್ತು ಸುರುಮಾ ಕಲಿನಿಂದ ತಯಾರಿಸುತ್ತಾರೆ. ಇವರು ಕೈಯಲ್ಲಿ ಉಂಗುರ ಕುತ್ತಿಗೆಗೆ ಚೈನ್‌ಕಿವಿಗೆ ಬೆಂಡಿವಾಲಗಳನ್ನು ಧರಿಸುತ್ತಾರೆ.

ಹಿಂದಿನ ಕಾಲದ ಹೆಣ್ಣು ಮಕ್ಕಳು ತಮ್ಮ ಸೀರೆಯಿಂದ ಪೂರ್ಣ ತಲೆಯನ್ನು ಮುಚ್ಚಿಕೊಂಡಿರುತ್ತಿದ್ದರು. ಇಲ್ಲದಿದ್ದರೆ ಅವರನ್ನು ಬಡಿಗೆಯಿಂದ ಹೊಡಿಯುತ್ತಿದ್ದರು.

ಆಹಾರ: ಸಸ್ಯಹಾರಿಗಳಾದ ಇವರು ಮೀನು, ಕೋಳಿ (ಚಿಕನ್‌) ಮಟನ್‌ಮತ್ತು ಮುಳ್ಳು ಹಂದಿಗಳನ್ನು ಸೇವಿಸುತ್ತಾರೆ. ಬಿಜಾಪುರ ಗೆಜಿಟಿಯರ್ ಪ್ರಕಾರ ಇವರು ಮೀನು, ತತ್ತಿ (ಮೊಟ್ಟೆ), ಮಾಂಸ (ಮುಳ್ಳಂದಿಯ ಮಾಂಸ ಬಿಟ್ಟು) ಮತ್ತು ಸಾರಾಯಿಯನ್ನು ಉಪಯೋಗಿಸುತ್ತಾರೆ.

ಧರ್ಮ: ಮಾನವನು ಸ್ವಭಾವತಃ ಧರ್ಮ ಜೀವಿ. ಮಾನವನು ಮೊದಲಿನಿಂದಲೂ ಸೃಷ್ಟಿಕರ್ತನ ಕಡೆಗೆ ತಮ್ಮ ಮನಸ್ಸನ್ನು ಕೇಂದ್ರೀಕರಿಸಿದ್ದಾರೆ. ಸೂರ್ಯ ತನ್ನ ಬೆಳಕನ್ನು ಮಾನವ ಮತ್ತು ಬೆಳೆಗಳಿಗೆ ನೀಡುತ್ತಾನೆ. ಮೋಡಗಳು ಮಳೆಯನ್ನು ತರುತ್ತವೆ. ಇದರಿಂದ ಬೀಜಗಳು ಮೊಳಕೆ ಒಡೆದು ಸಸಿಗಳಾಗುತ್ತವೆ. ಈ ಕಾರ್ಯಗಳಿಗೆ ಹಿಂದೆ ಒಂದು ದೈವಿಶಕ್ತಿ ಇದೆ ಎಂದು ಈ ಆದಿವಾಸಿಗಳು ನಂಬಿದ್ದಾರೆ.

ಆ ದೈವಿ ಶಕ್ತಿಯನ್ನೇ ಮಾನವ ದೇವರೆಂದು ಕರೆದಿದ್ದಾನೆ. ಮಾನವನ ಪ್ರಕಾರಗಳ ಹಕ್ಕಿಗಳ ಮತ್ತು ಮನುಷ್ಯ ಮೂರ್ತಿಗಳನ್ನು ಮಣ್ಣು ಅಥವಾ ಕಲ್ಲು ಬಳಸಿ ತಯಾರಿಸ ತೊಡಗಿದನು.

ಸೂರ್ಯ, ಚಂದ್ರ, ಗುಡುಗು, ಮಿಂಚು, ನಕ್ಷತ್ರಗಳು, ಮೋಡಗಳ ವನಗಳ ಬೆಳವಣಿಗೆ ಮತ್ತು ಭೂಕಂಪನಗಳು ಮಾನವನ ಮೇಲೆ ಪ್ರಭಾವ ಬೀರಿದೆ. ಇದು ದೈವ ಶಕ್ತಿಯಿಂದ ಆಗುತ್ತದೆ. ಈ ಎಲ್ಲ ವಿಚಾರಗಳ ಬೆಳವಣಿಗೆ ಧರ್ಮವಾಗಿ ರೂಪಾಂತರವಾಯಿತು. ಸತ್ತ ದೇಹವನ್ನು ಮೊದಲು ಪ್ರಾಣಿ-ವ್ಯಕ್ತಿಗಳಿಗೆ ಎಸೆಯುತ್ತಿದ್ದರು. ದೇಹ ಪವಿತ್ರವಾದುದು ಎಂಬ ಅರಿವು ಬಂದ ನಂತರ ಶವವನ್ನು ಸುಡತೊಡಗಿದರು.

ಪ್ರಪಂಚದಾದ್ಯಂತ ಎಲ್ಲ ಮಾನವರು ಈ ಲೌಕಿಕ ಶಕ್ತಿಯ ಬಗ್ಗೆ ಗೌರವ ಮತ್ತು ಪ್ರೀತಿಯನ್ನು ಹೊಂದಿದ್ದಾರೆ. ಇವುಗಳ ಕರುಣೆಯಿಂದಲೇ ನಾವು ಬದುಕುತ್ತಿದ್ದೇವೆ. ಆದ್ದರಿಂದ ಈ ಶಕ್ತಿಯನ್ನು ಹೊಗಳುತ್ತಾರೆ. ಇವುಗಳನ್ನೇ ತಮ್ಮ ಆರಾಧ್ಯ ದೈವವನ್ನಾಗಿಸಿಕೊಂಡಿದ್ದರು. ಹಿಂದೂ ಧರ್ಮದ ಸಂಪರ್ಕಕ್ಕೆ ಬಂದ ನಂತರ ಈ ಆದಿವಾಸಿಗಳ ಹಿಂದೂ ದೇವತೆಗಳನ್ನು ಪೂಜಿಸತೊಡಗಿದರು.

ಪ್ರತಿಯೊಬ್ಬರ ಮನೆಯಲ್ಲಿ ದೇವತೆಗಳ ಚಿತ್ರ ಅಥವಾ ಮೂರ್ತಿಗಳನ್ನು ಪ್ರತಿದಿನ ಪೂಜಿಸುತ್ತಾರೆ. ಮಹಿಳೆಯರು ಸಹ ಪೂಜೆಗಳನ್ನು ಮಾಡುತ್ತಾರೆ. ದೇವತೆಗಳಿಗೆ ಹಣ್ಣು-ಹೂಗಳನ್ನು ಅರ್ಪಿಸುತ್ತಾರೆ.

ವಿವಿಧ ಸ್ಥಳಗಳಲ್ಲಿರುವ ಭಾತ್ರು ವಿವಿಧ ದೇವತೆಗಳ ಹೆಸರುಗಳನ್ನು ಹೇಳುತ್ತಾರೆ. ಅವುಗಳೆಂದರೆ ೧) ಹಜರಂಗಲ ೨) ಶಂಕರ ಬಾಯಿ ೩) ಬಾಲರಾಜ ೪) ಅಂಬ ೫) ರಾಣಿ ಬಾಯಿ (ಶಿರೈದಲ್ಲಿನ ರೇಣುಕಾದೇವಿ) ೬) ಕಾಳಿಕಾದೇವಿ ೭) ಜೀಣನಾಥ ೮) ವೈಷ್ಣವ ೯) ಬಾಲಾಜಿ ೧೦) ಪಟ್ಟದಕಾಳೆ ೧೧) ಮೌಲಾವಿ ೧೨) ದುರ್ಗಾದೇವಿ ೧೩) ಕೃಷ್ಣ ೧೪) ಹನಮಪ್ಪ ೧೫) ಮಹಾಕಾಳಿ ೧೬) ಶೈರಿಸಿ ೧೭) ಯಮನಪ್ಪ ೧೮) ಮಾರಮ್ಮ ೧೯) ವಿಠ್ಠಲಾಲಿ ೨೦) ರಾಮಪೀರ ೨೧) ನಾಣಿಯಾ ೨೨) ರಾಮದೇವಿ ೨೩) ರಾಮದೇವಾಜಿ ವಈರ ೨೪) ಶರತ್ತೀಸ್ವಾಮಿ ೨೫) ಕಾಳಾದೇವಿ.

೭ ಮಕ್ಕಳ ತಾಯಿ: ಇದನ್ನು ಬಿಜಾಪುರದಲ್ಲಿನ ಬಡಿಕಮಾನದಲ್ಲಿ ಕಾಣುತ್ತೇವೆ. ಇವುಗಳ ಬಗ್ಗೆ ವಿಸ್ತೃತವಾದ ಮಾಹಿತಿ ಸಿಗುವುದಿಲ್ಲ. ಗದಗದಲ್ಲಿ ಒಂದು ಗಿಡದ ಕೆಳಗೆ ೭ ಅಲಂಕರಿಸಿದ ಕಲ್ಲುಗಳನ್ನು ಇಡಲಾಗಿದೆ. ಇವುಗಳು ೭ ಮಕ್ಕಳು ಕಲ್ಲಾಗಿವೆ. ೭ ಮಕ್ಕಳ ತಾಯಿ ಶಿವ ಹೆಂಡ್ತಿಯಾಗಿದ್ದಾಳೆ. ಮತ್ತು ಆ ೭ ಮಕ್ಕಳೆಂದರೆ ಮರಮ್ಮಾ, ದುರ್ಗವ್ವಾ, ಯಲ್ಲವ್ವಾ, ಕರಿಯವ್ವ, ತುಳಬಾ ಭಾವಾನಿ, ಮಹಾಕಾಳಿ ಮತ್ತು ದ್ಯಾಮವ್ವಾ ಇವು ಪಾರ್ವತಿಯ ಅವತಾರಗಳಾಗಿವೆ. ಪಾರ್ವತಿಯಿಂದಾಗಿ ಈ ೭ ಮಕ್ಕಳು ಪ್ರಪಂಚಕ್ಕೆ ಬಂದು ನೆಲೆಸಿದರು.

ಪ್ರತಿಯೊಂದು ಕುಟುಂಬವು ತಮ್ಮ ದೇವತೆಗಳನ್ನು ಹೊಂದಿವೆ ಮತ್ತು ಪ್ರತಿಯೊಂದು ಗೋತ್ರದವರಿಗೆ ಕುಲದೇವತೆಗಳಿವೆ. ಉದಾಹರಣೆಗೆ ಭತುಂಗ ಗೋತ್ರದವರಿಗೆ ಹಣಮಂತಪ್ಪರಾಣಿಭಾಯಿ ಮತ್ತು ದುರ್ಗಾದೇವರುಗಳು ಬಾಗಡೆ ಗೋತ್ರದವರಿಗೆ ರಮಾದೇವಿ ದೇವತೆ ಇದ್ದಾಳೆ. ಆದರೆ ಪ್ರತಿಯೊಂದು ಗೋತ್ರದವರಿಗೆ ಕುಲದೇವತೆಗಳನ್ನು ನೀಡುವಲ್ಲಿ ಅಸಮರ್ಥರಾಗಿದ್ದಾರೆ. ಬಡಿಕಮಾನದಲ್ಲಿನ ಜನರು ರಾಮಾದೇವಿ ಗೀವೀರ ತಮ್ಮ ಕುಲದೇವತೆಯೆಂದು ಕರೆಯುತ್ತಾರೆ. ಮುದ್ದೇಬಿಹಾಳದವರಿಗೆ ಹನಮಂತ ಬೇಡಿ ಮತ್ತು ಮಾಲವ್ವಾದೇವಿ ಕುಲದೇವತೆಗಳಾಗಿದ್ದಾರೆ. ತಮ್ಮ ಕುಲದೇವತೆಗಳನ್ನು ತೋರಿಸುವುದಕ್ಕಾಗಿ ಅವರು ವಿಶೇಷವಾದ ಬಳೆಗಳನ್ನು ತೊಡುತ್ತಾರೆ. ಬಡಿತ ಮಾನವ ಜನರು ೭ ಮಕ್ಕಳ ತಾಯಿಯ ಬಗ್ಗೆ ವಿಶೇಷ ಭಕ್ತಿ ಹೊಂದಿದ್ದಾರೆ. ಇದನ್ನು ಮರಗಮ್ಮಾ ದೇವತಿಗೆ ಸಂಪರ್ಕ ಕಲ್ಪಿಸಿದ್ದರಿಂದಾಗಿ ಇವರು ಮಾರಮ್ಮ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಹುಬ್ಬಳ್ಳಿಯಲ್ಲಿ ವಾಸಿಸುವ ಜನರು ಪೂಜಾರಿಗಳನ್ನು ಹೊಂದಿದ್ದಾರೆ. ಇವರು ಪೂಜೆ ಮತ್ತು ಧಾರ್ಮಿಕ ಸಮಾರಂಭಗಳನ್ನು ನಡೆಸುತ್ತಿದ್ದರು.

ಇವರ ಪೂಜೆಯನ್ನು ಮಂಡ್ವಾ ಎಂದು ಕರೆಯುತ್ತಾರೆ. ಪೂಜೆಗೆ ಹಾಲು, ಗೋಮೂತ್ರ ಹೂಮಾಲೆ ಮತ್ತು ಸುಣ್ಣವನ್ನು ಬಳಸುತ್ತಾರೆ. ನೆಲಕ್ಕೆ ಸಗಣಿಯನ್ನು ಸಾರಿಸಿ ೭ ಟೆಂಗಿನಕಾಯಿಗಳನ್ನು ಇಡುತ್ತಾರೆ.

ಒಂದು ಕುರಿಯನ್ನು ತಂದು ಅದರ ದೇಹಕ್ಕೆ ಸಾರಾಯಿಯನ್ನು ಹಚ್ಚುತ್ತಾರೆ. ಇದನ್ನು ಅಲಂಕರಿಸಿ ನಂತರ ಬಲಿಕೊಡಲಾಗುತ್ತದೆ. ಇದರ ತಲೆಯನ್ನು ಅಲ್ಲಿಯೇ ಇಟ್ಟು ಉಳಿದ ಭಾಗಗಳನ್ನು ಸಂಬಂಧಿಕರಿಗೆ ಮತ್ತು ಸ್ನೇಹಿತರಿಗೆ ನೀಡುತ್ತಾರೆ. ಈ ದೇವರ ಬಲಿಯ ಪ್ರಾಣಿಯನ್ನು ತಿಂದ ನಂತರ ತಾವು ದೈವಿ ಭಕ್ತಿಯಿಂದ ತುಂಬಿದವರೆಂದು ನಂಬುತ್ತಾರೆ. ಎಲ್ಲ ಭಾತ್ರುಗಳು ಹೇಳುವಂತೆ ರಾಜಸ್ತಾನದಿಂದ ಬಂದವರಾಗಿದ್ದು, ಅಲ್ಲಿನ ರಾಮದೇವ, ರಾಮರಾಜ ದೇವತೆಗೆ ಮಹತ್ವವನ್ನು ನೀಡಿದ್ದಾರೆ. ಹಲವಾರು ಕಡೆಗಳಲ್ಲಿ ಇವರು ಪೂಜಾರಿಗಳನ್ನು ಹೊಂದಿಲ್ಲ. ಆದರೆ ಕೆಲವು ಕಡೆಗಳಲ್ಲಿ ಪೂಜಾರಿಗಳಿದ್ದು ಅವರನ್ನು ಬಟ್ಟ, ಜಿ ಎಂದು ಕರೆಯುತ್ತಾರೆ.

ರಾಯಭಾಗದ ಭಾತ್ರುಗಳು ತಮ್ಮಕಾಲನಿಯಲ್ಲಿ ಗುಡಿಯನ್ನು ಹೊಂದಿಲ್ಲ. ಆದರೆ ಬೇರೆ ಪೂಜಿಸಲು ಬೇರೆ ಕಡೆಗೆ ಹೋಗುತ್ತಾರೆ. ಚಿಕ್ಕೋಡಿಯಲ್ಲಿನ ಭಾತ್ರುಗಳು ರಾಮನವಮಿಯಂದು ಕೊಲ್ಹಾಪುರಕ್ಕೆ ಹೋಗಿ ಕುರಿ ಮತ್ತು ಕೋಳಿಗಳನ್ನು ಬಲಿಕೊಡುತ್ತಾರೆ. ಕರಳಿಕರು ಕುರಿಯನ್ನು ಮತ್ತು ನಿನೇಕರು ಕೋಳಿಗಳನ್ನು ನೀಡುತ್ತಾರೆ. ಇವರಲ್ಲಿ ಮೂಢನಂಬಿಕೆಗಳಿಲ್ಲ. ಆದರೆ ಕೆಲವರು ಹೇಳುವಂತೆ ಹುಣ್ಣಿಮೆಯ ಮೊದಲ ದಿನ ವಿಶೇಷವಾದ ಧ್ವನಿ ಕೇಳಿಬರುತ್ತದೆ. ಆದರೆ ಇದರ ಬಗ್ಗೆ ವಿವರಣೆ ಇವರಲ್ಲಿ ಇಲ್ಲ.

ಒಂದು ವೇಳೆ ಕಾಗೆ ಬಂದು ಇವರ ಗುಡಿಸಲ ಮೇಲೆ ಕುಳಿತರೆ ಅವರ ಸಂಬಂಧಿಗಳಲ್ಲಿ ಯಾರಾದರೂ ಸಾಯುತ್ತಾರೆ ಎಂಬ ನಂಬಿಕೆ ಇದೆ. ಒಂದು ವೇಳೆ ಬೆಳವು ಪಕ್ಷಿಯ ಮನೆಬಳಿಗೆ ಬಂದರೆ ಅದು ಅನಿಷ್ಟವೆಂಉ ಮನೆಯನ್ನೇ ಬಿಡುತ್ತಾರೆ. ಗೂಗೆ ಅತ್ತರೆ, ಬೆಕ್ಕು ರಸ್ತೆಯಲ್ಲಿ ಅಡ್ಡದಾಟಿದರೆ, ಅಪಶಕುನ ಎಂದು ತಮ್ಮ ಕಾರ್ಯ ಆಗುವುದಿಲ್ಲವೆಂದು ಮರಳಿ ಬರುತ್ತಾರೆ. ಹಲವು ಆದಿವಾಸಿಗಳ ಗುಂಪಿನ ವ್ಯಕ್ತಿಗಳ ಮೈಯಲ್ಲಿ ದೇವರು ಬರುತ್ತಾನೆ. ಸಾಮಾನ್ಯವಾಗಿ ಪೂಜಾರಿಯ ಮೈಯಲ್ಲಿ ಈ ದೇವರು ಬರುತ್ತದೆ.

ದೇವರು ಬಂದಾಗ ಆ ವ್ಯಕ್ತಿಯ ಮೈನಡುಗುತ್ತದೆ. ಮತ್ತು ಜನರು ಪ್ರಶ್ನೆಗಳನ್ನು ಕೇಳಲು ಆರಂಭಿಸುತ್ತಾರೆ. ಮನೆಯಲ್ಲಿ ತಮ್ಮ ಮಕ್ಕಳ ಅನಾರೋಗ್ಯಕ್ಕೆ ಕಾರಣಗಳನ್ನು ಕೇಳುತ್ತಾರೆ. ಜೊತೆಗೆ ತಮ್ಮ ಮನೆಯಲ್ಲಿನ ಅಶಾಂತಿ ಕಲಹಗಳಿಗೆ ಪರಿಹಾರವನ್ನು ಯಾಚಿಸುತ್ತಾರೆ.

ಬನಶಂಕರಿಯಲ್ಲಿನ ಗೋಪಿಬಾಯಿ ಹೇಳುವುದೇನೆಂದರೆ ಸತ್ತವರ ಆತ್ಮ ಬಂದು ಕೆಲವು ವ್ಯಕ್ತಿಗಳಲ್ಲಿ ಸೇರಿಕೊಳ್ಳುತ್ತದೆ. ಗದಗ ಮಾಸ್ಟರ್ ಬಾಗಡೆ ಹೇಳುವಂತೆ ಅಂತಹವರನ್ನು ಮಂತ್ರಿವಾದಿಗಳ ಕಡೆಗೆ ಕರೆದೊಯ್ಯಲಾಗುತ್ತದೆ.

ತೀರದಾಳದಲ್ಲಿ ಇಂತಹ ವ್ಯಕ್ತಿಗಳನ್ನು ದೇವಾಲಯಗಳಿಗೆ ತೆಗೆದುಕೊಂಡು ಹೋಗಿ ಅವರ ದೆವ್ವ ಬಿಡಿಸುತ್ತಾರೆ. ರಾಯಭಾಗದಲ್ಲಿ ಈ ದೆವ್ವ ಬಿಡಿಸಲು ದೇವರನ್ನು ಸಂತುಷ್ಟಗೊಳಿಸಲು ದೇವರಿಗೆ ಹಣ್ಣು, ಆಹಾರವನ್ನು ನೀಡುತ್ತಾರೆ.

ದಾಂಡೇಲಿಯಲ್ಲಿ ಇಂತಹ ವ್ಯಕ್ತಿಗಳು ಬಹಳ ಇದ್ದಾರೆ. ಸುಭಾಸನಗರ ಬಳಿ ಮಾಳವಿಯಂಬುವವನು ದೆವ್ವ ಬಿಡಿಸುತ್ತಾನೆ. ದಾಂಡೇಲಿ ನಗರದಲ್ಲಿ ದೆವ್ವ ಬಿಡಿಸಲು ಒಬ್ಬ ಬಾಬ ಇದ್ದಾನೆ.

ಇತ್ತಿತ್ತಲಾಗಿ ಕಾಲೋನಿಯಲ್ಲಿ ಒಬ್ಬ ವ್ಯಕ್ತಿಯ ಕೊಲೆಯಾಗಿದೆ. ಆತನ ಪೋತ ಪ್ರತಿ ಹುಣ್ಣಿಮೆಯಂದು ಒಬ್ಬಿಬ್ಬರ ಮೈಯಲ್ಲಿ ಬರುತ್ತದೆ. ದಾಂಡೇಲಿಯಲ್ಲಿನ ಭಾತ್ರುಗಳು ಮೈಯಲ್ಲಿ ದೇವರು ಬರುವುದನ್ನು ಅಲ್ಲಗಳೆಯುತ್ತಾರೆ.

ಬಟ್ಟೆಗಳನ್ನು ಆರಲು ಹಾಕಿದಾಗ ಎಮ್ಮೆ ಬಂದು ಬಟ್ಟೆಗಳನ್ನು ಮುಟ್ಟಿದರೆ ಅವರು ಆ ಎಮ್ಮೆಗೆ ಮತ್ತು ನೆರೆಹೊರೆಯವರಿಗೆ ಬೆಲ್ಲವನ್ನು ಹಂಚುತ್ತಾರೆ. ಹುಬ್ಬಳ್ಳಿಯ ನಿವಾಸಿ ಸಜನಸಿಂಗ್‌ನ್ನು ಸತ್ತವರ ಪ್ರೇತ ಬಂದು ಇತರರಿಗೆ ತೊಂದರೆ ನೀಡುತ್ತಾರೆ. ಎಂಬುದನ್ನು ನಂಬುವುದಿಲ್ಲ. ಆದರೆ ಒಳ್ಳೆಯ ವ್ಯಕ್ತಿ ಇದ್ದರೆ ಪ್ರತಿದಿನ ಪೂಜೆ ಮಾಡುತ್ತಿದ್ದರೆ ಅಂತವರ ಮೈಯಲ್ಲಿ ದೇವರು ಬಂದು ಒಂದು ತಾಸಿನವರೆಗೆ ಇರುತ್ತದೆ. ಇತರರು ಬಂದು ಪ್ರಶ್ನೆಗಳನ್ನು ಕೇಳುತ್ತಾರೆ. ಮೈಯಲ್ಲಿ ದೇವರು ಬಂದಾಗ ಇವರು ಕುರಿಯ ರಕ್ತವನ್ನು ಕುಡಿಯುತ್ತಾರೆ.

ಚಿಕ್ಕೋಡಿಯ ಸದನ ಕಂರಾ ಭಾತ್ರುವಿನ ತಾಯಿಯು ದೆವ್ವ ಬಿಡಿಸುತ್ತಾಳೆ. ದೆವ್ವ ಬರುವುದು ನಿಜವೆಂದು ಹೇಳುತ್ತಾರೆ. ಸತ್ತ ವ್ಯಕ್ತಿಯು ಜೀವನ ಆಸೆ ಹೊಂದಿದ್ದರೆ ಮಕ್ಕಳ ಮೇಲೆ ಅತಿಯಾದ ಪ್ರೀತಿಯನ್ನು ಇಟ್ಟುಕೊಂಡಿದ್ದರೆ, ಆತನ ಪ್ರೇತ ಇತರರ ಮೈಯಲ್ಲಿ ಬರುತ್ತದೆ. ಆಗ ಪ್ರೇತ ದೆವ್ವ ತಾನು ಬಂದ ಕಾರಣವನ್ನು ಹೇಳುತ್ತದೆ.

ಕೆಲವು ಭಾತ್ರುಗಳು ಈ ದೆವ್ವ ಬಿಡಿಸಲು ತಮ್ಮದೇ ಆದ ರೀತಿಯನ್ನು ಹೊಂದಿದ್ದಾರೆ. ಲಿಂಬಿಹಣ್ಣನ್ನು ಸಂಪೂರ್ಣ ದೇಹದ ಮೇಲೆ ಒಯ್ಯಲಾಗುತ್ತದೆ. ನಂತರ ಸತ್ತ ವ್ಯಕ್ತಿಯ ಇಷ್ಟವಾದ ಆಹಾರವನ್ನು ತಂದು ಕೊಡಲಾಗುತ್ತದೆ. ಒಂದು ವೇಳೆ ಈ ಆಹಾರವನ್ನು ಸ್ಮಶಾನದಲ್ಲಿ ಇಟ್ಟಿದ್ದರೆ, ಈ ಆಸೆ ಮಾಯವಾಗುತ್ತದೆ.

ಚಿಕ್ಕೋಡಿ ಜನರು, ದೈವಿಶಕ್ತಿ ಮೈಯಲ್ಲಿ ಬರುವುದು ಒಳ್ಳೆಯದೆಂದು ಭಾವಿಸುತ್ತಾರೆ. ಸದನನ ತಾಯಿಯ ಮೈಯಲ್ಲಿ ದೇವರು ಮಂಗಳವಾರ ಮತ್ತು ಶುಕ್ರವಾರ ಬರುತ್ತದೆ. ಭಾತ್ರುಗಳು ಆತ್ಮದಲ್ಲಿ ನಂಬಿಕೆಯನ್ನು ಹೊಂದಿದ್ದು, ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಸತ್ಕರ್ಮಗಳನ್ನು ಮಾಡಿದರೆ ಸತ್ತ ನಂತರ ಆತ ಸ್ವರ್ಗಕ್ಕೆ ಹೋಗುತ್ತಾನೆ. ಆತ್ಮಹತ್ಯೆಯನ್ನು ಘೋರ ಅಪರಾಧ ಎಂದು ಪರಿಗಣಿಸಿದ್ದಾರೆ. ಆತನ ಆತ್ಮವು ಎಂದು ಉಳಿಯಲಾರದು.

ಪುನರ್ಜನ್ಮದ ಬಗ್ಗೆ ಮುಧೋಳದವರನ್ನು ಕೇಳಿದಾಗ ಅವರು ತಮ್ಮ ಅಜ್ಜಿ ೧೧೫ ವರ್ಷಗಳು ಬದುಕಿ ಸಾವನ್ನಪ್ಪಿದಳು. ಕೆಲವು ಕಾಲದ ನಂತರ ಅವಳು ಮತ್ತೇ ಜೀವಂತವಾಗಿ ಮತ್ತೇ ಮೂರು ವರ್ಷಗಳವರೆಗೆ ಬಾಳಿದಳು. ಅದನ್ನೇ ಅವರು ಪುನರ್ಜನ್ಮ ಎನ್ನುತ್ತಾರೆ. ನರಕಕ್ಕೆ ಹೋದವರಿಗೆ ಪುನರ್ಜನ್ಮವಿಲ್ಲ. ಚಿಕ್ಕೋಡಿಯವರು ಸಹ ಪುನರ್ಜನ್ಮದಲ್ಲಿ ನಂಬಿಕೆ ಹೊಂದಿದ್ದು ಸತ್ತ ವ್ಯಕ್ತಿ ಮಗುವಾಗಿ ಮತ್ತೆ ಹುಟ್ಟಿ ಬರುತ್ತಾನೆ ಎನ್ನುತ್ತಾರೆ.

ಇವರು ತಮ್ಮ ಕಾಲೋನಿಗಳಲ್ಲಿ ಹೋಳಿ, ದೀಪಾವಳಿ, ದಸರಾ, ಗೋಕುಲಾಷ್ಟಮಿಯನ್ನು ಆಚರಿಸುತ್ತಾರೆ. ಬನಶಂಕರಿಯಲ್ಲಿರುವ ಜನರು ಕಾಮದಹನ ಮಾಡುತ್ತಾರೆ. ಆದರೆ ಬಿಜಾಪುರದಲ್ಲಿನ ದರ್ಗಾಕ್ಕೆ ಹೋಗುತ್ತಾರೆ. ಮುಧೋಳದವರು ಹುಬ್ಬಳ್ಳಿಯ ಯಾತ್ರೆಗೆ ಹೋಗುತ್ತಾರೆ.

ಭಾತ್ರುಗಳು ಪಾಪ ಮತ್ತು ಪ್ರಾಯಶ್ಚಿತ್ತ ಸಿದ್ಧಾಂತದಲ್ಲಿ ನಂಬಿಕೆಯನ್ನು ಹೊಂದಿದ್ದಾರೆ. ಅವರ ತೀರ್ಥಯಾತ್ರೆಯ ಕೇಂದ್ರಗಳಂದರೆ ಕೊಲ್ಹಾಪುರ, ಸೋಲ್ಲಾಪುರ, ದೆಹಲಿ, ಪುಣೆ, ಔರಂಗಬಾದ ಮತ್ತು ರಾಜಸ್ತಾನ.

ದಸರಾ ಮತ್ತು ದೀಪಾವಳಿಯಂತೆ ದೊಡ್ಡ ಹಬ್ಬಗಳಲ್ಲಿ ಕುರಿಬಲಿ ನೀಡುತ್ತಾರೆ. ನಂತರ ಅದನ್ನು ತಮ್ಮ ಆರಾಧ್ಯ ದೇವರ ಮುಂದೆ ಸುಮಾರು ೪ ಗಂಟೆಗಳ ಕಾಲ ಇಟ್ಟು ಮನೆಗೆ ಒಯ್ಯುತ್ತಾರೆ. ಹಬ್ಬದ ಸಂದರ್ಭದಲ್ಲಿ ಪೂಜೆ ಮಾಡಲು ಕೆಲವರು ಬ್ರಾಹ್ಮಣರನ್ನು ಆಹ್ವಾನಿಸುತ್ತಾರೆ.