ಒಂಬತ್ತು ವರುಷಗಳೀಚೆ ನಿಂತು ನೋಡುವೆ ನಾನು-
ನಿನ್ನ ಆ ಮೇರುಸಮ ಧೀರ ವ್ಯಕ್ತಿತ್ವವನು.
ಮುಗಿಲ ಗೋಡೆಗೆ ಅದಿಗೊ ತೂಗುಬಿಟ್ಟಿದೆ ನೋಡು
ಬರೆದಿಟ್ಟ ಚಿತ್ರಪಟ.
ಮೇರುದಂಡದ ತುದಿಗೆ ಹಾರುತಿದೆ ಬಾವುಟ,
ನೆಲ ಕಡಲು ಜನಪದದ ಬದುಕೆಲ್ಲ
ಜೀವಂತ ಭೂಪಟ.
ಹಿಮಶೈಲ ಶಾಂತಿಯಲಿ ಜ್ವಲಿಸುತಿದೆ ಇದೋ
ಎದೆಯ ದೇಗುಲದಲ್ಲಿ ನಿತ್ಯ ನಂದಾದೀಪ
ನಿನ್ನ ರೂಪ!
*     *     *
ಕಂಡದ್ದು ಮೂರುಸಲ ನಾ ನಿನ್ನ :
ಮೊಟ್ಟ ಮೊದಲದೊ ಅಲ್ಲಿ
ಹರೆಯದರಮನೆಯಲ್ಲಿ,
ತುಮುಲದ ಕಡಲು ನಿನ್ನೊಡಲು ;
ತೆರೆಯ ಮೇಲಾಡಿತ್ತು ಹೊನ್ನ ಹರೆಯದ ಬಿಸಿಲು,
ಅಂತರ್ನಭದಿ ಮೊದಲಾಗಿತ್ತು
ಸದಸತ್ತುಗಳ ಗುಡುಗು,
ಸಂಶಯದ ಕಡಲಿನಲಿ ನೂರು ಪ್ರಶ್ನೆಯ ಹಡಗು !

ರುಗ್ಣಶಯ್ಯೆಯಲಿ ಮಲಗಿರಲು ತಂದೆ
ಹುಡುಗ ನೀ ಬಂದೆ,
ಕೈಯೊಳಗಿತ್ತು ತಪ್ಪೊಪ್ಪಿಗೆಯ ಪತ್ರ –
ತಂದೆಗೊಪ್ಪಿಸಿ ಕುಳಿತೆ
ಹೊಯ್ದಾಡಿತು, ಕಣ್ಣಿನ ಹಣತೆ.
ಕರಗಿತ್ತು ಕರುಣೆಯ ಮೇಘ ;
ಹನಿಹನಿಯಾಗಿ ಜಿನುಗಿತ್ತು ತಂದೆಯೆದೆ –
ಯಿಂದಿಳಿದ ಕಂಬನಿಯ ಹರ್ಷವರ್ಷವಮೋಘ !
ಕಂಡಿತಾ ಕಂಬನಿಯ ಬೆಳಕಿನಲಿ ನಿನ್ನ ಜೀವನ ಮಂತ್ರ.
ಎದೆಯ ಕೊಳೆ ತೊಳೆದು ನೀ ನಿಂತೆ ನಿರ್ಮಲನಾಗಿ
ಯಜ್ಞ ದೀಕ್ಷಿತನಾಗಿ !
*     *     *
ಮತ್ತೆ ಎರಡನೆ ಬಾರಿ, ನಾ ಕಂಡೆ ನಿನ್ನ ನಾ
ಆಫ್ರಿಕದ ಕಗ್ಗತ್ತಲಲ್ಲಿ :
ನಟ್ಟ ನಡುವಿರುಳಲ್ಲಿ ಎಸೆದು ನಡೆಯಿತು ರೈಲು
ಯಾವುದೋ ನಿಲ್ದಾಣದಲ್ಲಿ.
ಹಾಸುಗಂಬಿಯ ಮೇಲೆ ಉರುಳಿಹೋದುವು ರೈಲು
ಆ ಇರುಳೆಲ್ಲ, ಮೈಲು ಮೈಲು.
ಏನು ? ಮುಂದೇನು ?
ಪ್ರಶ್ನೆಗಳ ಹೆಡೆಯನೆತ್ತಿತು ಬಾನು :
“ಗಂಡುಸಾದರೆ ನಿನ್ನ ಬಲಿಗೊಡುವೆಯೇನು ?”
ಮೊಳಗಿತ್ತು ನಿರ್ಧಾರ
ಹುತ್ತ ಬೆಳೆಯಿತು ಪೂರ.
ಛಳಿ ; ಕೊರೆವ ಛಳಿಯಲ್ಲಿ ಕುಳಿತನು ಬುದ್ಧ
ನಡುಗುಚಿಕ್ಕೆಯ ಇರುಳ ಮರದ ಕೆಳಗೆ.
ಆಫ್ರಿಕದ ಕಗ್ಗತ್ತಲೆದೆಯಲ್ಲಿ ಹೊಳೆದಿತ್ತು
ಭಾರತಿಯ ಬಿಡುಗಡೆಯ ಬೋಧಿ !

ಎದ್ದೆ-
ಮೈತುಂಬಿ ಎದ್ದೆ, ವಿದ್ಯುತ್ ತರಂಗವಾಗಿ ಬೀಸಿದೆ ನೀನು
ಹಿಮಾಲಯದಿಂದ ಕನ್ಯಾ-
ಕುಮಾರಿಯ ತನಕ ಪ್ರಚಂಡವಾಗಿ !
ಏರಿದುವು, ಹಾರಿದುವು, ಬಣಗು ತೃಣಕಣವೆಲ್ಲ
ಬ್ರಹ್ಮಾಸ್ತ್ರವಾಗಿ.
ಮಣ್ಣ ಕಣಕಣವೆಲ್ಲ ಮೈದುಂಬಿ ಕೂಗಿತೊಕ್ಕೊರಲಲ್ಲಿ ;
“ಕ್ವಿಟ್ ಇಂಡಿಯಾ…”
ಹೂವಿನೊತ್ತಾಯಕ್ಕೆ ಕಬ್ಬಿಣವೆಲ್ಲ ಕರಗಿ ನೀರಾಯ್ತು !
ಕೆಂಪು ಬಾವುಟವಿಳಿದು, ತಂಪು ಬಾವುಟವೇರಿ
ಬಾನು ಬೆಳಗಾಯ್ತು,
ಕಡಲ ನೀಲಿಯನೀಸಿ ಸಾಗಿಹೋದವು ನೂರು
ಕೊಕ್ಕರೆಯ ಹಡಗು.
ಜೇಡಬಲೆ ಮೋಡಗಳ ಗುಡಿಸಿ ಕಳೆಯಿತು ಗಾಳಿ :
ಪಾಚಿಗಳೆದಾ ಕೊಳದಿ ಹೊಳೆವ ಮೀನಿನ ಕೇಳಿ ;
ಗುಡಿ ಗುಡಿಯ ಘಂಟೆಯಲಿ ಹೊಮ್ಮಿತ್ತು ಜಯಘೋಷ,
ಇರುಳ ಹೊಂಗನಸೆಲ್ಲ ನನಸಾಗಿ
ಜನತೆಯ ತೇರು ಸಿಂಗರವಾಗಿ
ಮೊದಲಾಯ್ತು ಹೊಸ ಯುಗದ ಜಾತ್ರೆ.
ಜಾತ್ರೆಯುತ್ಸಾಹದಲಿ ನಿನ್ನ ನಾ ಮರೆತೆ !
*     *     *
ಮತ್ತೆ ಮೂರನೆ ಬಾರಿ, ನಾ ಕಂಡೆ
ಸ್ವತಂತ್ರ ಭಾರತದ ಜನಸಮುದ್ರದ ತಡಿಯ
ಪ್ರಾರ್ಥನಾ ಶೈಲದಲಿ.
ಮೂರು ಸಿಡಿಗುಂಡುಗಳ ಪೂಜೆ ಸಂದಿತು ಎದೆಗೆ,
ಪಂಜರ ಬಿರಿದು, ರಾಮ ರಾಮಾ ಎಂದು
ಹಕ್ಕಿ ಹಾರಿತು ಹೊರಗೆ
ತನ್ನ ಮನೆಗೆ,
ಶಿಲುಬೆಯಲಿ ಕ್ರ್ರಿಸ್ತನಿನ್ನೂ ನಿಂತು ಹೇಳುವ ಮಾತು
ಕೇಳಿತು ಕಿವಿಗೆ : ‘ಕ್ಷಮಿಸು ತಂದೇ ಕ್ಷಮಿಸು
ಇವರ ಕನಿಕರಿಸು.’

ನೊಂದು ನುಡಿದಿತ್ತು ಕವಿವಾಣಿ :
‘ಮತ್ತೆ ಇದೇನು !
ಎಂದೆಂದಿಗು ನಿನಗಿದೆ ಗತಿಯೇನು ?’
ನಾನೆಂದೆ : ‘ಎಂದೆಂದಿಗು ನಮಗಿದೆ ಗತಿಯೇನು ?’
*     *     *
ಒಂಬತ್ತು ವರುಷಗಳೀಚೆ ನಿಂತು ನೋಡುವೆ ನಾನು.
ನೀ ತಂದ ಬೆಳಕಿನಲಿ ಖಿನ್ನನಾಗಿ.
ಮತ್ತೆ ಬಿದ್ದಿವೆ ಇದೋ, ಅಂದೆದ್ದ ತರಗೆಲೆ ಕಡ್ಡಿ
ದಿಕ್ಕುಪಾಲಾಗಿ.
ಅಲ್ಲೊಂದು ಇಲ್ಲೊಂದು ನಿಂತಿಹವು ದೀಪಸ್ತಂಭ
ನಿನ್ನ ಬೆಳಕನೆ ಹೊತ್ತು ಮುಡಿಯ ತುಂಬ !
ನಂಬಿರುವೆ : ಮೂಡಿಯೇ ಮೂಡುವುದು ಶಾಂತಿ ಸರ್ವೋದಯದ
ಚಂದ್ರಬಿಂಬ !