ಎಂತು ಮುಕ್ತನಾಗಬೇಕಣ್ಣ |
ಇಂಥಾದ ಮೇಲಾನೆಂತು ಮುಕ್ತನಾಗಬೇಕಣ್ಣ |
ಕುಂತೆ ಬೊಂತೆಗೆ ಚಿಂತೆ | ರೋಗದ |
ಚಿಂತೆ | ಮುಪ್ಪಿನ ಚಿಂತೆ | ಬಡತನ
ಚಿಂತೆ ಸತ್ತರೆ | ಚಿಂತೆ ಈ ಪರಿ ಚಿಂತೆ ಎಂಬ
ಸಂತೆಯೊಳ್ತಾ || ಎಂತು ||

ಚಿಕ್ಕಪುಟ್ಟವರಿಲ್ಲದಿರು ಚಿಂತೆ ನೆರೆಹೊರೆಯ
ಮನೆಯೊಳು ಒಕ್ಕಲಿರುವರ ಮಾತುಗಳ ಚಿಂತೆ
ಮಕ್ಕಳಾಗದ ಚಿಂತೆ ಬಳಿಕ ಮಕ್ಕಳಿಗೆ ದಿಕ್ಕೆಂಬ
ಚಿಂತೆಯು | ಮಕ್ಕಳೆಲ್ಲಾ ಒಕ್ಕಲೋಗಲು
ಬಿಕ್ಕಿ ಬಿಕ್ಕಿ ಅಳುವ ಚಿಂತೆಯಾಳ್ತಾನಂತು ಮುಕ್ತ || ಎಂತು ||

ಹೋಮ ನೇಮ ಸ್ನಾನಗಳ ಚಿಂತೆ ಮನದೊಳಗೆ
ಪುಟ್ಟುವ ಕಾಮಿತಾರ್ಥಗಳಿಲ್ಲದಿಹ ಚಿಂತೆ
ಭಾಮೆಯಿಲ್ಲದ ಚಿಂತೆ, ಭಾಮೆಗೆ ಪ್ರೇಮವಿಲ್ಲದ
ಚಿಂತೆ ಪ್ರೇಮಕ್ಕೆ ಹೇಮವಿಲ್ಲದ ಚಿಂತೆ
ಹೇಮಕ್ಕೆ ಭೂಮಿಯಿಲ್ಲದ ಚಿಂತೆಯೊಳ್ತಾನೆಂತು || ಎಂತು ||

ದಿಕ್ಕು ತೋರದೆ ದುಃಖಿಸುವ ಚಿಂತೆ | ಗುರು
ಶಂಕರನನ ಸಿಕ್ಕು ತಿಳಿಯದೆ ಲೆಕ್ಕಿಸುವ ಚಿಂತೆ
ಅಕ್ಕಿಯಿಲ್ಲದ ಚಿಂತೆ | ಅಕ್ಕಿಗೆ ರೊಕ್ಕವಿಲ್ಲದ
ಚಿಂತೆ | ಸಿಕ್ಕಲು ಮುಕ್ತ ತಾನಾಗಿರುವ
ಚಿಂತೆಯೊಳಿಂತು || ಮುಕ್ತ ||  || ಎಂತು ||