ಯಾವುದಿದು ಹಠಾತ್ತನೆ ಹೀಗೆ ಜಗ್ಗುತ್ತಲಿದೆ
ನನ್ನನ್ನು, ದುಂಬಿಯನ್ನೆಳೆವಂತೆ ಒಂದು
ದೂರದ ಕಂಪು ? ಈ ಕಂಪಿನಲಿ ಕರಗಿ
ಹೋಗುತ್ತಲಿದೆ ಇಡೀ ಪರ್ವತಾರಣ್ಯ
ಘನ ವಿಸ್ತಾರ. ಅಹಾ ಯಾವುದಿದು ಹೀಗೆ
ಕಾಡುತ್ತಲಿದೆ ಒಂದೇ ಸಮನೆ ನನ್ನನ್ನು
ನಿದ್ದೆ ಎಚ್ಚರಗಳಲಿ ಜನ್ಮಾಂತರದ ಸಂಸ್ಮ-
ರಣೆಯಂತೆ ? ಏರಿಳಿವ ಈ ಗಿರಿಶಿಖರ
ಮಂಡಲಗಳಾಚೆ, ಎಲ್ಲಿ ಯಾವ ಗಿಡದಲ್ಲಿ
ಅಥವಾ ಮರದಲ್ಲಿ ಬಿರಿದರಳಿ ಅಶರೀರ
ಸೂತ್ರವನ್ನೆಸೆದು ಸೆಳೆಯುತ್ತಲಿದೆ ಕನಸಿನ
ಹಾಗೆ, ಅಥವಾ ಎಂದೋ ಬಯಸಿ ಕೈಗೂಡ-
ದಾಸೆಯ ಹಾಗೆ, ಯಾವತ್ತೋ ಕೇಳಿ ಮರುಳಾಗಿ
ಮರೆತ ರಾಗದ ಮೋಡಿ ಹೆಡೆಯೆತ್ತಿ ತೂಗುವ
ಹಾಗೆ, ಕವಿತೆಯೊಂದರ ಪಂಕ್ತಿ ಮತ್ತೊಂದ
ಹುಡುಕುತ್ತ ಕವಿಯ ಕಾಡುವ ಹಾಗೆ, ನಟ್ಟ
ನಡುರಾತ್ರಿ ಒಳಗಿಂದಲೇ ಪುಟಿವ ರಾಧೇಯ-
ನಾಕೃತಿಯ ಹಾಗೆ, ಯಾವುದಿದು ಹೀಗೆ ಎದೆಗೆ
ಬೆದೆಯೇರಿಸುತ ಕರೆವ ದೂರದ ಕಂಪು ?

ಇಲ್ಲ ; ಪರಿಚಿತವಾದದ್ದಲ್ಲ ಇದು ನನಗೆ ;
ಅಭೂತಪೂರ್ವ. ಖಂಡಿತಾ ಇದು ಈ ನೆಲದ
ಮಣ್ಣಿನದಲ್ಲ. ಅಹಾ ಹೇಗೆ ತಬ್ಬುತ್ತಲಿದೆ
ಈ ಭೂಮಿ ಆಕಾಶಗಳನ್ನೆಲ್ಲ, ಸದ್ದಿರದಿಳಿವ
ಮಂಜಿನ ಹಾಗೆ, ಮೋಡದ ಹಾಗೆ, ಭೋ-
ರೆಂದಿಳಿವ ಮಳೆಯಂತೆ, ಧುಮ್ಮಿಕ್ಕಿ ಹರಿವ
ನದೀ ಜಲದಂತೆ, ಎದೆಯ ಕಣಿವೆಗಳಲ್ಲಿ
ಭೋರ್ಗರೆಯುತಿದೆ ಹಗಲೂ ಇರುಳು.

ಬಾರಯ್ಯ ಬಾ ನನ್ನ ಬಲಭೀಮ ; ವಾಯುಸುತ-
ನಾದ ನೀನೇ ತಕ್ಕವನು. ತಂದುಕೊಡು ನನಗೆ
ಈ ಕಾಡಿ ಪೀಡಿಸುವ ಕಂಪಿನ ನಿಧಿಯ. ಎಲ್ಲಿ-
ದ್ದರೂ ಸರಿಯೆ, ಹುಡುಕಿ ತಂದುಕೊಡು ನನಗೆ.
ಇರಲಿ ಬಿಡು ಆ ಹಳೆಯ ಪರಿಭವದ ಪಗಡೆ
ದಾಳದ ನೆನಪು ; ತೂಗುತ್ತಿರಲಿ ಈ ನನ್ನ
ಬಿಚ್ಚಿರುವ ಜಡೆಗೂದಲು ; ಬಲಿಯುತ್ತಿರಲಿ
ಆ ಕೌರವನ ತೊಡೆಗಳು ; ಕಾಯುತ್ತಿರಲಿ
ನಿಯತಿಯೊಳಗಡಗಿರುವ ಘಟನೆಗಳ ಕಿಡಿಗಳು.