ಹಿರಿಯರೊಬ್ಬರು ಮನೆಗೆ ಬಂದ ಅತಿಥಿಗಳಿಗೆ ತಮ್ಮ ಮಕ್ಕಳ ಪರಿಚಯ ಮಾಡಿಸುತ್ತಿದ್ದರು. “ಇವರು ಎಲ್‌ಐಸಿ ಡವಲೆಪ್‌ಮೆಂಟ್ ಆಫೀಸರ್, ರಾಯಚೂರಿನಲ್ಲಿರ್ತಾರೆ,  ಇವರು ಹಿರಿಯ ಮಗ  ಸುಮ್ಮನೆ ಕೃಷಿ ಕೆಲಸ ಮಾಡ್ತಾ ಮನೆಯಲ್ಲಿ ಇದ್ದಾರೆ!”  ಎಂದು ಮಾತು ನಿಲ್ಲಿಸಿದರು. ವಾಸ್ತವಿಕವಾಗಿ ಹಿರಿಯ ಮಗ ಕೃಷಿ ಕೆಲಸ ನಿರ್ವಹಿಸುವದರ ಜತೆಗೆ ನಾಲ್ಕಾರು ಹಸು ಸಾಕುತ್ತ ಪುಟ್ಟ ಡೇರಿ ನಡೆಸುತ್ತಿದ್ದರು, ನೆಮ್ಮದಿಯಲ್ಲಿ ಅನ್ನದ ದಾರಿ ಹುಡುಕಿದ್ದರು. ಯಾವ ನೌಕರಿಯಿಲ್ಲದೇ ಮನೆಯಲ್ಲಿ ಕೆಲಸ ಮಾಡುವವರನ್ನು ಸಮಾಜ ಕೆಲಸವಿಲ್ಲದವರೆಂದು ಗುರುತಿಸುತ್ತದೆ.

ಮುಂಜಾನೆ ೪ಕ್ಕೆ ಎದ್ದು ದೊಡ್ಡಿ ಶುಚಿಗೊಳಿಸುವ ಮುಖೇನ ಆರಂಭವಾಗುವ ಹಳ್ಳಿ ಕೆಲಸ ರಾತ್ರಿವರೆಗೂ ನಿರಂತರ ನಡೆಯುತ್ತದೆ. ಅಡಿಕೆ, ಭತ್ತ, ಕಾಫಿ, ಜೋಳ, ರಬ್ಬರ್ ಹೀಗೆ  ಕೃಷಿ ಯಾವುದೇ ಇರಲಿ ವರ್ಷವಿಡೀ ಕೆಲಸ. ನಮ್ಮ ಸರಕಾರಿ ನೌಕರರಿಗೆ ಇರುವಂತೆ  ರಜಾದಿನ, ಭತ್ಯೆ, ಪ್ರಮೋಶನ್‌ಗಳಿಲ್ಲ!. ಒಮ್ಮೊಮ್ಮೆ ಕಾಡು ಪ್ರಾಣಿ, ಕಳ್ಳಕಾಕರ ಹಾವಳಿಯಿದ್ದಾಗ ನಡುರಾತ್ರಿಯೂ ತೋಟ ಅಡ್ಡಾಡುವ ಪ್ರಸಂಗ. ಅಷ್ಟೇಕೆ ವಿದ್ಯುತ್ ಕೊರತೆಯ ದಿನಗಳಲ್ಲಿ ರಾತ್ರಿ ೨ ಗಂಟೆಗೆ ತ್ರೀಫೇಸ್ ವಿದ್ಯುತ್ ಬಂದರೆ  ನೀರಾವರಿ ಪಂಪ್ ಚಾಲೂ ಮಾಡಲು ನಿದ್ದೆಗೆಡಬೇಕು! ಕೃಷಿ ಕೂಲಿ ಅಭಾವದ ಈ ದಿನಗಳಲ್ಲಿ  ಹಳ್ಳಿ ಬದುಕಿನ ಒತ್ತಡ ಹಲವರನ್ನು ಕಂಗಾಲೆಬ್ಬಿಸಿದೆ. ನಿಜವಾಗಿ ಕೃಷಿ ಬಗೆಗೆ ಕಳಕಳಿಯಿರುವವರು ಯಾರೂ ಹಳ್ಳಿಯಲ್ಲಿ ಕೆಲಸವಿಲ್ಲದೇ  ಆರಾಮವಾಗಿರಲು ಸಾಧ್ಯವಿಲ್ಲ.

ಸಮಾಜದ ವಿಚಿತ್ರ ದೃಷ್ಟಿ ದೋಷ ಇದು. ಲಾಗಾಯ್ತಿನಿಂದಲೂ ಮಕ್ಕಳನ್ನು ನಮ್ಮ ಹಳ್ಳಿಮನೆಗಳಲ್ಲಿ ಶಾಲೆಬಿಡಿಸಿ ಕೃಷಿ ಕೆಲಸಕ್ಕೆ ಹಚ್ಚಲು  ಒಂದು ಸೂತ್ರವಿದೆ. ಏಳನೇ ಇಯತ್ತೆಯೋ, ಪ್ರೌಢ ಶಿಕ್ಷಣದಲ್ಲೋ ಒಮ್ಮೆ ಎಡವಟ್ಟಾಗಿ ನಪಾಸಾದರೆ ಅಲ್ಲಿಗೆ ಶಾಲೆಯ ದಾರಿ ಬಂದ್! ಶಾಲಾ ರಜಾ ದಿನಗಳಲ್ಲಿ ಮನೆಯ ಕೃಷಿ ಕೆಲಸದ ಬಗೆಗೆ ಆಸಕ್ತಿ ತೋರಿಸುವವರನ್ನು ಗಮನಿಸಿ ಇವನಿಗೆ ವಿದ್ಯೆ ತಲೆಗೆ ಹತ್ತುವದಿಲ್ಲ ಎಂಬ ನಿರ್ಧಾರ.  ಪಾಸಾಗುವವ, ರ್ಯಾಂಕ್ ಬರುವವರು ಬುದ್ದಿವಂತರು.  ಒಬ್ಬ ತಂದೆಗೆ  ಇಬ್ಬರು ಮಕ್ಕಳಿದ್ದರೆ  ಅವರಲ್ಲಿ ಒಬ್ಬ ದಡ್ಡನಾಗುತ್ತಿದ್ದ ! ಹೀಗೆನ್ನುವದಕ್ಕಿಂತ ಒಬ್ಬನನ್ನು ದಡ್ಡನೆಂದು ಗುರುತಿಸಿ ಶಾಲೆ ಬಿಡಿಸಲಾಗುತ್ತಿತ್ತು  ಎನ್ನುವದೇ ಹೆಚ್ಚು ಸೂಕ್ತ. ಮನೆಪಾಠ, ಹಿರಿಯರ ಮಾರ್ಗದರ್ಶನವಿಲ್ಲದ ಆ ಕಾಲಕ್ಕೆ ಸಹಜವಾಗಿ ಕೆಲವರು ಓದಿನಲ್ಲಿ ಹಿಂದಿರುತ್ತಿದ್ದರು. ಇನ್ನೂ ಕೆಲವು ಪಾಲಕರು ಮೇಷ್ಟ್ರ ದೋಸ್ತಿಮಾಡಿಕೊಂಡು ಮಗನನ್ನು ಫೇಲ್‌ಮಾಡಿಸಿ  ಕೃಷಿ ಕೆಲಸಕ್ಕೆ  ತೊಡಗಿಸಿದ ಉದಾಹರಣೆಗಳಿವೆ. ಶಾಲೆಯ ವಿದ್ಯೆ ಹತ್ತದವರು, ಲೆಕ್ಕಬಾರದವರು, ನೌಕರಿ ಮಾಡಲು ಅಯೋಗ್ಯರಾದವರು, ಶಕ್ತಿಹೀನರನ್ನು ಮನೆಯಲ್ಲಿಯೇ ಕೂಡಿಟ್ಟು ಕೃಷಿ ದುಡಿಮೆ ಆರಂಭಿಸಿದ್ದನ್ನು ಕಳೆದ ೬೦ರ ದಶಕದೀಚೆಗೆ ಗಮನಿಸಿದ್ದೇವೆ. ಈಗ ಯಾರು ಮನೆಯಲ್ಲಿ ಇದ್ದಾರೆ? ವಿಚಾರಿಸಿದರೆ  ಇಂತವರು ಕಾಣುತ್ತಾರೆ.  ಒಂದು ಕಾಲಕ್ಕೆ  ಎಸ್ ಎಸ್ ಎಲ್ ಸಿ  ಫೇಲಾದವರು ಮಾತ್ರ ಊರಲ್ಲಿದ್ದರೆ ಈಗ ಡಿಗ್ರಿ ಓದಿಯೂ ಮುಂದೆ ಗತಿಯಿಲ್ಲದವರು ಇಲ್ಲಿ ಸಿಗುತ್ತಾರೆ. ತೋಟ ನೋಡಲು ಬೇರೆಯಾರೂ  ಇಲ್ಲ ಎಂಬ ಕಾರಣಕ್ಕೆ ಹಿರಿಯರ ಒತ್ತಾಯಕ್ಕೆ  ಊರಲ್ಲಿ ಉಳಿದವರು ಸಿಗುತ್ತಾರೆ. ಒಟ್ಟಿನಲ್ಲಿ ಅವಶ್ಯಕತೆಗಿಂತ ಅನಿವಾರ್ಯತೆಗೆ ಊರಲ್ಲಿ ಬೇರು ಬಿಟ್ಟವರು ಜಾಸ್ತಿ.

ವೈದ್ಯ, ಇಂಜಿನಿಯರ್, ಕಂಪ್ಯೂಟರ್ ತಂತ್ರಜ್ಞ  ಇವರನ್ನು  ಇಡೀ ಸಮಾಜ  ವಿಶೇಷವಾಗಿ ಪರಿಗಣಿಸುತ್ತಿದೆ. ಹಳ್ಳಿಬಿಟ್ಟು ನಗರಗಳ ಬ್ಯಾಂಕು, ಸಂಸ್ಥೆ, ಸರಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುವವರನ್ನು ದುಡಿಯುವವರೆಂದು ಕರೆಯುತ್ತದೆ. ಹಳ್ಳಿ ಮೂಲೆಯಲ್ಲಿ ಕೃಷಿ ನೋಡಿಕೊಂಡು  ಮರ್ಯಾದೆಯಿಂದ ಬದುಕಿದವರು ಯಾವುದಕ್ಕೂ ನಾಲಾಯಕ್!  ಹೆಚ್ಚು ಹೆಚ್ಚು ಹಣ ಸಂಪಾದನೆಯ ವೃತ್ತಿಗಳೆದುರು ಮಣ್ಣಿಗೆ ಬೆವರು ಸುರಿಸಿದವರು ಕಸದ ಲೆಕ್ಕ.  ಆದರೆ ಇಂತವರೇ ಇವತ್ತು  ಎಲ್ಲರಿಗೂ ಅನ್ನ ಕೊಡುವವರು, ಆರೋಗ್ಯ ಹಂಚುವವರು ಎಂಬ ಸತ್ಯ ಮರೆತಿದ್ದೇವೆ. ಇವರ ಬೆವರಿನ ಅನ್ನ ಕಸಿದುಕೊಳ್ಳುವ ತಂತ್ರ ಅನುಸರಿಸುವ ನಗರ ಸೇರಿದ ಬುದ್ದಿವಂತರು ಹಳ್ಳಿಯ ನೆಮ್ಮದಿಯ ಬದುಕಿಗೆ ಏನು ಮಾಡಬಹುದು ಎಂದು ಯೋಚಿಸಲು ಮರೆತಿದ್ದಾರೆ.

ಗೆಳೆಯರೊಬ್ಬರು ಇತ್ತೀಚೆಗೆ  ಒಂದು ಹಳ್ಳಿ ಮಾರಾಟದ ಸುಳಿವು ನೀಡಿದ್ದಾರೆ. ಮಲೆನಾಡಿನ ಗುಡ್ಡದ ತುತ್ತ ತುದಿಯಲ್ಲಿ  ಕೃಷಿ ಜೀವನ ನಡೆಸಿದ  ೧೨ ಕುಟುಂಬಗಳು  ತಮ್ಮ ಭೂಮಿಯನ್ನು ಸಾರಾಸಗಟಾಗಿ ೩೨ ಲಕ್ಷಕ್ಕೆ ಮಾರುವ ಸಿದ್ದತೆಯಲ್ಲಿದ್ದಾರೆ.  ಇನ್ನೇನು ವ್ಯವಹಾರ ಮಾತುಕತೆ ಮುಗಿದು ನೋಂದಣಿ ನಡೆಯುತ್ತದೆಂಬ ಸುದ್ದಿಯಿದೆ. ಮುಂದೆ ಹಳ್ಳಿಗರು  ಏಲ್ಲಿಗೆ ಹೋಗುತ್ತಾರೆ? ವಿಚಾರಿಸಿದೆ. ಖರೀದಿಸಿದಾತ  ಔಷಧ ಸಸ್ಯ ಕೃಷಿ ಮಾಡುತ್ತಾರಂತೆ, ಇವರಿಗೆ ದಿನಕ್ಕೆ ೧೫೦ರೂಪಾು ಸಂಬಳದಂತೆ ಕೂಲಿ ಕೆಲಸ ನೀಡುವ ಒಳ ಒಪ್ಪಂದವಿದೆ ಎಂಬ ಮಾಹಿತಿಯಿದೆ. ಹಿಂದೆ ಹಳ್ಳಿಗಳಲ್ಲಿ ಎಂತಹ ಕಷ್ಟವಿದ್ದರೂ ಜಮೀನು ಮಾರುತ್ತಿರಲಿಲ್ಲ,  ಈಗ ಹಳ್ಳಿಗೆ ಹಳ್ಳಿಯೇ ಮಾರಾಟವಾಗುವ ವಾರ್ತೆ ಭವಿಷ್ಯದ ದಿಕ್ಸೂಚಿ.  ಹಿಂದಿನಗಳಲ್ಲಿ ಗಣಿಗಾರಿಕೆ ಹಣ ರಿಯಲ್ ಎಸ್ಟೇಟ್ ರಂಗಕ್ಕೆ ಹೋಗುತ್ತಿತ್ತು. ಆದು ಬೆಂಗಳೂರು, ಮೈಸೂರಿನಂತಹ ಮಹಾನಗರಗಳ ಸುತ್ತ ನಡೆಯುತ್ತಿತ್ತು. ಈಗ ಮಲೆನಾಡಿನ ಸಣ್ಣಪುಟ್ಟ ತಾಲೂಕುಗಳಲ್ಲಿಯೂ  ಕೃಷಿ ನೆಲ ಖರೀದಿಯ ಏಜೆಂಟರಿದ್ದಾರೆ. ಒಮ್ಮೆಗೆ ೫೦೦-೧೦೦೦ ಎಕರೆ ಸಿಕ್ಕರೂ ಖರೀದಿಗೆ ಸಿದ್ದವಿರುವವರಿದ್ದಾರೆ. ಭೂಮಿ ಖರೀದಿಸಿದವರು ಕೃಷಿ ಮಾಡುತ್ತಾರೋ, ರೆಸಾರ್ಟ ಮಾಡುತ್ತಾರೋ ಗೊತ್ತಿಲ್ಲ. ಅಂತೂ ಹಲವರ ಭೂಮಿ ಕೆಲವರಿಗೆ ತುರ್ತಾಗಿ ಬೇಕಾಗಿದೆ.

ಹಳ್ಳಿ ಮೂಲೆಯಲ್ಲಿ “ಸುಮ್ಮನೆ ಉಳಿದವರು’ ಈಗ ಯೋಚಿಸತೊಡಗಿದ್ದಾರೆ. ಹಣವೇ ಸಮಾಜದ ಮುಖ್ಯ ಅಂಶವಾದರೆ ಭೂಮಿಯನ್ನು ಹಣಕ್ಕೆ ಮಾರುವುದೇ  ಜಾಣತನ ಎಂಬ ತರ್ಕ ಮೂಡಿದೆ. ಬೇಸಾಯದ ಬವಣೆಗಿಂತ ಇದ್ದಷ್ಟು ದಿನ ಆರಾಮವಾಗಿ ಬದುಕಬಹುದು  ಎಂಬ ತತ್ವ ಮಾನ್ಯತೆಗಳಿಸುತ್ತಿದೆ. ಮುಂದಿನ ತಲೆಮಾರಿನವರು ಕೃಷಿಯಲ್ಲಿ  ಎಷ್ಟು ಜನ ನಿಲ್ಲುತ್ತಾರೆ ಎಂಬ ಚರ್ಚೆ ಹಳ್ಳಿಹಳ್ಳಿಯ ಮನೆ ಮನೆಗಳಲ್ಲಿ ನಡೆಯುತ್ತಿದೆ.  ಈಗ ೧೦ ವರ್ಷದ ಹಿಂದೆ ಹಿರಿಯಜ್ಜ, ತಂದೆ, ಮಕ್ಕಳ ನಡುವೆ ಭೂಮಿ ಮಾರಾಟದ ವಿಚಾರಗಳಲ್ಲಿ  ಸಂಘರ್ಷ ನಡೆಯುತ್ತಿತ್ತು. ಭಾವನಾತ್ಮಕವಾಗಿ ಊರು ನಂಬಿ, ನೆಲ ನಂಬಿ ಬದುಕಿದ ಜನ ಭೂಮಿ ವ್ಯವಹಾರವನ್ನು ವಿರೋಧಿಸುತ್ತಿದ್ದರು. ಈಗ ಎಲ್ಲರಿಗೂ ಜ್ಞಾನೋದಯವಾಗುತ್ತಿದೆ, ಕೃಷಿ ಕೂಲಿಕಾರರಿಗೆ ಕೆಲಸ ನೀಡುವ ನಷ್ಟದ ರಂಗವೆಂದು ಢಾಳಾಗಿ ಕಾಣುತ್ತಿದೆ. ಕೃಷಿಯಲ್ಲಿ ಹೇಗೆ ಗೆಲ್ಲಬೇಕೆಂದು ಯೋಚಿಸುವವರಿಗಿಂತ  ಮಗ, ಮೊಮ್ಮಗನ ಜತೆ ಯಾವ ನಗರದಲ್ಲಿರಬೇಕು ಎಂಬ ಆಯ್ಕೆಗಳಲ್ಲಿ ಹಿರಿಯ ತಲೆಮಾರು ತೊಳಲಾಡುತ್ತಿದೆ.  ರಬ್ಬರ್ ನೆಟ್ಟರೆ ೧೨ ವರ್ಷಕ್ಕೆ ಆದಾಯ, ಅಡಿಕೆಯಿಂದ ೧೦ ವರ್ಷಕ್ಕೆ ಫಸಲು, ತೆಂಗು ನೆಟ್ಟರೆ ಅನುಕೂಲ ಎಂಬ ಲೆಕ್ಕಾಚಾರಗಳು ಹಿಂದೆ ಸರಿದಿವೆ. ನೆಟ್ಟ ಒಂದೆರಡು ವರ್ಷಕ್ಕೆ ದಿಢೀರ್ ದುಡ್ಡು ನೀಡುವ ಗಿಡ  ಬೇಕಾಗಿದೆ. ಕೃಷಿಯನ್ನು ಹೈಟೆಕ್ ಮಾಡಿ ಗೆಲ್ಲಿಸಿ ಲಾಭ ನೀಡುವ ಉದ್ಯಮ ತಂತ್ರಗಳಿವೆ. ಓದಿದ ಜಾಣ ಹುಡುಗರು ಹೇಗೋ  ಇಲ್ಲಿಯೂ ಗೆಲ್ಲುವ ಆಟ ಆಡುತ್ತಾರೆ. ಇಷ್ಟುಕಾಲ ನಾಟಿ ಭತ್ತ ಉಳಿಸಿದವರು, ವಿವಿಧ ತಳಿಗಳ ಹಣ್ಣು  ಬೆಳೆಸಿದವರು, ಬೇಸಾಯದ ಸೂಕ್ಷ್ಮಬಲ್ಲವರೆಲ್ಲ ಈ ಕೃಷಿ ಅರ್ಥವಾಗದೆ ಅನುಮಾನದಿಂದ ನೋಡಿದ್ದಾರೆ. ಸೋಲುವ ಯುದ್ದಕ್ಕಿಂತ ಭೂಮಿ  ಮಾರಿ ಗೆಲ್ಲುವದೇ  ಲಾಯಕ್ಕೆಂದು   ಯೋಚಿಸಿದ್ದಾರೆ.

ಇಂತಹ ವಾಸ್ತವದ ಮಧ್ಯೆ ಒಂದು ಮಾತು ನೆನಪಿರಬೇಕು, ನಮಗೆ ಬದುಕಲು ಅನ್ನ ಬೇಕೇ ಬೇಕು. ಇನ್ನೇನು ೪-೫ ವರ್ಷಗಳಲ್ಲಿ ಕಿಲೋ ಅಕ್ಕಿಯ ಬೆಲೆ ೫೦ರೂಪಾಯಿ ದಾಟಿದರೂ  ಅಚ್ಚರಿಯಿಲ್ಲ. ಅಂತಹ ಕಾಲಕ್ಕೆ  ಮೊಬೈಲ್ ಕರಿ, ಸೀಡಿ ಸಲಾಡ್, ಟಿ.ವಿ. ಪ್ರೈ, ಕಂಪ್ಯೂಟರ್ ರಾಯತ, ಕಾರ್ ಬೋಂಡ, ಬೈಕ್ ಬೇಳೆ ಬಾತ್, ಐಪಾಡ್ ತಂಬುಳಿ  ಊಟ ಮಾಡಲಾಗುತ್ತದೆಯೇ? ಯೋಚಿಸಬೇಕು. ಹಳ್ಳಿ, ಕೃಷಿ ಉಳಿಸುವ ಕೆಲಸ ಕೇವಲ ಸರಕಾರದ ಜವಾಬ್ದಾರಿಯಲ್ಲ, ಸಬ್ಸಿಡಿಗಳ ಗುತ್ತಿಗೆಯಲ್ಲ, ಹೈಟೆಕ್ ನಗರ ಸೇರಿದವರ ಪ್ರಥಮ ಕರ್ತವ್ಯವೂ ಹೌದೆಂಬ ಎಚ್ಚರ ಬೇಕು.