ಕಂಪ್ಯೂಟರ್ (ಕನ್ನಡದಲ್ಲಿ ಗಣಕ ಯಂತ್ರ) ಎಂದರೆ ಒಂದು ವಿದ್ಯುತ್ ಚಾಲಿತ ಯಂತ್ರ. ನಿತ್ಯ ಜೀವನದಲ್ಲಿ ಅನೇಕ ಕ್ಷೇತ್ರಗಳಲ್ಲಿ ಬಳಕೆಯಾಗುವ ಇದೊಂದು ಬಹೋಪಯೋಗಿ ಉಪಕರಣ. ನಾವು ಕಂಪ್ಯೂಟರ್‌ಗೆ ನೀಡುವ ದತ್ತಾಂಶ ಅಥವಾ ಮಾಹಿತಿಯನ್ನು ತನ್ನಲ್ಲಿನ ತಂತ್ರಾಂಶದ ಮೂಲಕ ಮಾರ್ಪಡಿಸಿ ಉತ್ತರ ನೀಡುತ್ತದೆ. ಕಂಪ್ಯೂಟರ್ ಒಳಗೆ ಮೊದಲೇ ಕೆಲವು ನಿರ್ದಿಷ್ಟ ಕಾರ್ಯಗಳನ್ನು ಮಾಡುವಂತೆ ಪ್ರೋಗ್ರಾಂ‌ಗಳನ್ನು ರೂಪಿಸಿರಲಾಗುತ್ತದೆ. ನಾವು ಹೊಸ ದತ್ತಾಂಶ ಅಥವಾ ಮಾಹಿತಿಯನ್ನು ನೀಡಿದಾಗ ಅದು ಆ ಮಾಹಿತಿಯನ್ನು ಸ್ವೀಕರಿಸಿ,  ಪರಿಷ್ಕರಿಸಿ, ಸಂಸ್ಕರಿಸಿ ಕರಾರುವಾಕ್ಕಾದ ಫಲಿತಾಂಶವನ್ನು ತಕ್ಷಣದಲ್ಲಿಯೇ ನೀಡುತ್ತದೆ.

ಕಂಪ್ಯೂಟರ್‌ನಲ್ಲಿ ದ್ವಿಮಾನ ಪದ್ಧತಿಯ (ಬೈನರಿ ಪದ್ಧತಿ) ಯಂತ್ರ ಭಾಷೆಯನ್ನು ಬಳಸಲಾಗಿದ್ದು, ಅದು ನಾವು ನೀಡುವ ಎಲ್ಲ ಮಾಹಿತಿಗಳನ್ನು, ಅಂದರೆ ಅಕ್ಷರಗಳು, ಅಂಕೆಗಳು, ಚಿತ್ರಗಳು, ವಿರಾಮ ಚಿಹ್ನೆಗಳು ಹಾಗೂ ಖಾಲಿ ಸ್ಥಾನ, ದ್ವಿಮಾನ ಪದ್ಧತಿಯಲ್ಲಿ ಸ್ವೀಕರಿಸಿ ಅರ್ಥೈಸಿಕೊಳ್ಳುತ್ತದೆ.

ಹಾರ್ಡ್ವೇರ್ ಮತ್ತು ಸಾಫ್ಟ್ವೇರ್

ಕಂಪ್ಯೂಟರ್‌ ಬಳಸುವ ಮೊದಲು ಅದರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಕಂಪ್ಯೂಟರ್‌ನಲ್ಲಿ ಎರಡು ವಿಭಾಗಗಳಿವೆ. ಅವುಗಳನ್ನು ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಎಂದು ಕರೆಯುತ್ತಾರೆ. ಹಾರ್ಡ್‌ವೇರ್ ಅಂದರೆ ಯಂತ್ರಾಂಶಗಳು ಅಥವಾ ಯಂತ್ರ ಭಾಗಗಳು. ಯಂತ್ರ ಭಾಗಗಳಲ್ಲಿ ಸಿಪಿಯು (ಸೆಂಟ್ರಲ್ ಪ್ರೊಸೆಸಿಂಗ್ ಯುನಿಟ್), ಮಾನಿಟರ್, ಕೀಬೋರ್ಡ್, ಮೌಸ್ ಮುಂತಾದವುಗಳು ಸೇರಿವೆ. ಸಾಫ್ಟ್‌ವೇರ್ ಅಂದರೆ ಕಂಪ್ಯೂಟರ್‌ನ ತಂತ್ರಾಂಶ ಭಾಗ. ಸಾಫ್ಟ್‌ವೇರ್ ಭೌತಿಕವಾಗಿ ಸ್ಪರ್ಶಿಸಲು ಬರುವುದಿಲ್ಲ.

ಸಾಫ್ಟ್‌ವೇರ್‌ಗಳನ್ನು ಪ್ರಮುಖವಾಗಿ ಮೂರು ಭಾಗಗಳಾಗಿ ವಿಂಗಡಿಸುತ್ತಾರೆ. ಅವುಗಳೆಂದರೆ ಸಿಸ್ಟಂ ಸಾಫ್ಟ್‌ವೇರ್, ಪ್ರೊಗ್ರಾಮಿಂಗ್ ಸಾಫ್ಟ್‌ವೇರ್ ಮತ್ತು ಅಪ್ಲಿಕೇಶನ್ ಸಾಫ್ಟ್‌ವೇರ್. ಒಂದು ಕಂಪ್ಯೂಟರ್ ಅನ್ನು ಬಳಸುವಲ್ಲಿನ ಮೂಲ ಕಾರ್ಯಗಳನ್ನು ಈ ಸಿಸ್ಟಮ್ ಸಾಫ್ಟ್‌ವೇರ್ ರೂಪಿಸುತ್ತದೆ ಮತ್ತು ಕಾರ್ಯಗಳಿಗೆ ಚಾಲನೆ ನೀಡುತ್ತದೆ. ಇದು ಡಿವೈಸ್ ಡ್ರೈವರ್‌ಗಳು, ಆಪರೇಟಿಂಗ್ ಸಿಸ್ಟಮ್‌, ಸರ್ವರ್‌ಗಳು, ವಿಂಡೋ ಸಿಸ್ಟಂ ಮುಂತಾದವುಗಳ ಸಂಯೋಜನೆಯನ್ನು ಒಳಗೊಂಡಿರುತ್ತದೆ. ಸಿಸ್ಟಂ ಸಾಫ್ಟ್‌ವೇರ್ ಕಂಪ್ಯೂಟರ್‌ನಲ್ಲಿ ಬಳಸಲಾಗುವ ಬೇರೆ ಬೇರೆ ಹಾರ್ಡ್‌ವೇರ್ ಭಾಗಗಳು ಸಂಯೋಜಿತವಾಗಿ ಕಾರ್ಯ ನಿರ್ವಹಿಸುವಂತೆ ವ್ಯವಸ್ಥಿತಗೊಳಿಸುತ್ತದೆ. ಪ್ರೋಗ್ರಾಮಿಂಗ್ ಸಾಫ್ಟ್‌ವೇರ್ ಕಂಪ್ಯೂಟರ್ ಸಾಫ್ಟ್‌ವೇರ್‌ಗಳನ್ನು ಮತ್ತು ಪ್ರೋಗ್ರಾಮ್‌ಗಳನ್ನು ಬರೆಯಲು ಸಹಾಯ ಮಾಡುತ್ತದೆ. ಅಂತಿಮ ಬಳಕೆದಾರರಾದ ನಮಗೆ ಅಪ್ಲಿಕೇಶನ್ ಸಾಫ್ಟ್‌ವೇರ್‌ಗಳನ್ನು ಬಳಸುವ ಕುರಿತು ತಿಳಿದಿದ್ದರೆ ಸಾಕು.

ಅಪ್ಲಿಕೇಶನ್ ಸಾಫ್ಟ್ವೇರ್

ಕಂಪ್ಯೂಟರ್‌ ಎಂದರೆ ಬಹೂಪಯೋಗಿ ಯಂತ್ರ ಎಂಬುದು ಈ ಅಪ್ಲಿಕೇಶನ್ ಸಾಫ್ಟ್‌ವೇರ್ ಕುರಿತು ತಿಳಿದಾಗ ನಮಗೆ ಅರಿವಾಗುತ್ತದೆ. ವಿಭಿನ್ನ ಕಾರ್ಯಗಳಲ್ಲಿ ಸಹಾಯಕವಾಗುವಂತೆ ಈ ಅಪ್ಲಿಕೇಶನ್ ಅಥವಾ ಬಳಕೆಯ ಸಾಫ್ಟ್‌ವೇರ್‌ಗಳನ್ನು ರೂಪಿಸಿರಲಾಗುತ್ತದೆ. ಇದರಲ್ಲಿ ಅನೇಕ ಪ್ರಕಾರದ ಸಾಫ್ಟ್‌ವೇರ್‌ ಅಪ್ಲಿಕೇಶನ್‌ಗಳಿದ್ದು, ಇಂಟರ್ನೆಟ್ ಬಳಸಲು ಬೇಕಾದ ಬ್ರೌಸರ್ ಕೂಡಾ ಇದರಲ್ಲಿ ಬರುತ್ತದೆ.

ಬರವಣಿಗೆ ಮಾಡಲು, ಕಂಪ್ಯೂಟರ್ ಆಧಾರಿತ ಚಿತ್ರ ರಚಿಸಲು, ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಎಡಿಟ್ ಮಾಡಲು, ದತ್ತಾಂಶ ಸಂಗ್ರಹಣೆಮಾಡಲು, ಗಣನ ಕಾರ್ಯಗಳಿಗೆ ಬಳಸಲು ಮತ್ತು ವೀಡಿಯೋ ಗೇಮ್‌ಗಳಿಗಾಗಿ ವಿಭಿನ್ನ ಸಾಫ್ಟ್‌ವೇರ್ ಅಪ್ಲಿಕೇಶನ್‌ಗಳು ಇರುತ್ತವೆ. ಸಾಮಾನ್ಯವಾಗಿ ವಿಂಡೋಸ್ ಆಪರೇಟಿಂಗ್ ಸಿಸ್ಟಂ ಇರುವ ಕಂಪ್ಯೂಟರ್‌ನಲ್ಲಿ ಈ ಕೆಳಗಿನ ಅಪ್ಲಿಕೇಶನ್‌ಗಳು ಇರುತ್ತವೆ: ಬರವಣಿಗೆ ಹಾಗೂ ದತ್ತಾಂಶ ಸಂಗ್ರಹಣೆಗಾಗಿ ವರ್ಡ್‌ಪ್ಯಾಡ್, ನೋಟ್‌ಪ್ಯಾಡ್, ಎಂಎಸ್ ವರ್ಡ್, ಎಂಎಸ್ ಎಕ್ಸೆಲ್ ಮುಂತಾದ ಸಾಫ್ಟ್‌ವೇರ್‌ಗಳು, ಚಿತ್ರ ಬಿಡಿಸಲು ಪೇಂಟ್, ಗೇಮ್‌ಗಳು, ಇಂಟರ್ನೆಟ್ ಬ್ರೌಸರ್ ಮುಂತಾದವುಗಳು ಇರುತ್ತವೆ. ಇವಲ್ಲದೇ ಅಗತ್ಯಕ್ಕೆ ತಕ್ಕಂತೆ ನಾವು ಹೊಸ ಸಾಫ್ಟ್‌ವೇರ್ ಅಪ್ಲಿಕೇಶನ್‌ಗಳನ್ನು ಕೂಡಾ ಸ್ಥಾಪನೆ (ಇನ್‌ಸ್ಟಾಲ್) ಮಾಡಿಕೊಳ್ಳಬಹುದು. ಉದಾಹರಣೆಗೆ ಡೆಸ್ಕ್‌ಟಾಪ್ ಡಿಕ್ಷನರಿಗಳು, ಮ್ಯಾಪ್‌ಗಳು, ಫೋಟೋ ಎಡಿಟ್ ಮಾಡುವ ಅಡೋಬ್ ಫೋಟೋಶಾಪ್, ಪುಟವಿನ್ಯಾಸ ಮಾಡುವ ಇನ್‌ಡಿಸೈನ್ ಅಥವಾ ಕ್ವಾರ್ಕ್ ಎಕ್ಸ್‌ಪ್ರೆಸ್, ಡಿಜಿಟಲ್ ಚಿತ್ರಗಳನ್ನು ಹಾಗೂ ಎನಿಮೇಶನ್ ಚಿತ್ರಗಳನ್ನು ಮಾಡುವ ಇಲ್ಲಸ್ಟ್ರೇಟರ್ ಮುಂತಾದವುಗಳು.

ಇವಲ್ಲದೇ ಬೇರೆ ಬೇರೆ ವಿಜ್ಞಾನ, ವೈದ್ಯಕೀಯ, ಬೇರೇ ಬೇರೆ ವ್ಯವಹಾರಗಳಲ್ಲಿರುವವರು ತಮ್ಮ ಅಗತ್ಯಕ್ಕೆ ತಕ್ಕಂತೆ ಬೇರೆ ಬೇರೆ ಸಾಫ್ಟ್‌ವೇರ್‌ಗಳನ್ನು ಸ್ಥಾಪಿಸಿಕೊಂಡು ಬಳಸುತ್ತಾರೆ. ಈ ಸಾಫ್ಟ್‌ವೇರ್‌ಗಳ ಬಳಕೆಯಿಂದ ಅವರ ದೈನಂದಿನ ಕಾರ್ಯಗಳು ಅತ್ಯಂತ ಸುಲಭವಾಗುತ್ತವೆ. ಸಾಫ್ಟ್‌ವೇರ್ ಇಂಜಿನಿಯರುಗಳು ಇಂತಹ ವಿಭಿನ್ನ ಕ್ಷೇತ್ರಗಳ ಅಗತ್ಯಗಳಿಗೆ ತಕ್ಕಂತೆ ಅಪ್ಲಿಕೇಶನ್ ಸಾಫ್ಟ್‌ವೇರ್‌ಗಳನ್ನು ರೂಪಿಸುತ್ತಾರೆ.

ಈ ಎಲ್ಲ ಅಪ್ಲಿಕೇಶನ್‌ ಸಾಫ್ಟ್‌ವೇರ್‌ಗಳನ್ನು ಸ್ಥಾಪಿಸಲು ಮತ್ತು ಬಳಸಿಕೊಳ್ಳಲು ಒಂದು ವೇದಿಕೆಯಿದ್ದು, ಅದನ್ನು ಆಪರೇಟಿಂಗ್ ಸಿಸ್ಟಮ್ ಎಂದು ಕರೆಯುತ್ತಾರೆ. ಆಪರೇಟಿಂಗ್ ಸಿಸ್ಟಮ್‌ ಸಹಾ ಒಂದು ಅತ್ಯಂತ ಮುಖ್ಯ ಸಾಫ್ಟ್‌ವೇರ್ ಆಗಿದೆ. ಇದು ಕಂಪ್ಯೂಟರ್‌ನಲ್ಲಿರುವ ಮೆಮರಿ, ಸಂಗ್ರಹ, ಪ್ರಕ್ರಿಯೆಗಳು, ಎಲ್ಲ ಸಾಫ್ಟ್‌ವೇರ್ ಹಾಗೂ ಹಾರ್ಡ್‌ವೇರ್‌ಗಳನ್ನು ನಿರ್ವಹಿಸುತ್ತದೆ. ಡಾಸ್, ವಿಂಡೋಸ್, ಲಿನಕ್ಸ್ ಮುಂತಾದವುಗಳು ಈ ಆಪರೇಟಿಂಗ್ ಸಿಸ್ಟಮ್‌ಗೆ ಉದಾಹರಣೆಯಾಗಿವೆ.

ಕಂಪ್ಯೂಟರ್ ಹೇಗೆ ಕಾರ್ಯ ನಿರ್ವಹಿಸುತ್ತದೆ?

ಕಂಪ್ಯೂಟರ್‌ಗೆ ನಾವು ಸೂಚನೆ ಅಥವಾ ಮಾಹಿತಿಯನ್ನು ನೀಡಲು ಬಳಸುವ ಸಾಧನಗಳನ್ನು ಇನ್‌ಪುಟ್ ಡಿವೈಸ್ ಎಂದು ಕರೆಯುತ್ತಾರೆ. ಇನ್‌ಪುಟ್ ಡಿವೈಸ್‌ಗಳಿಗೆ ಉದಾಹರಣೆಗಳೆಂದರೆ ಕೀಬೋರ್ಡ್, ಮೌಸ್, ಕಾಂಪ್ಯಾಕ್ಟ್ ಡಿಸ್ಕ್‌ಗಳು (ಸಿಡಿ), ಡಿಜಿಟಲ್ ವರ್ಸಟೈಲ್ ಡಿಸ್ಕ್ (ಡಿವಿಡಿ), ಡಿಜಿಟಲ್ ಕ್ಯಾಮೆರಾ, ಸ್ಕ್ಯಾನರ್ ಮುಂತಾದವುಗಳು. ನಾವು ಈ ಸಾಧನಗಳ ಮೂಲಕ ಮಾಹಿತಿ ಅಥವಾ ದತ್ತಾಂಶವನ್ನು ಕಂಪ್ಯೂಟರ್‌ಗೆ ನೀಡಿದಾಗ ಅದು ಆ ಮಾಹಿತಿಗಳನ್ನು ಪರಿಷ್ಕರಿಸಿ, ಸಂಸ್ಕರಿಸಿ ಕರಾರುವಾಕ್ಕಾದ ಫಲಿತಾಂಶವನ್ನು ನೀಡುತ್ತದೆ. ಈ ಫಲಿತಾಂಶಗಳು ಔಟ್‌ಪುಟ್‌ ಡಿವೈಸ್‌ಗಳಾದ ಮಾನಿಟರ್, ಪ್ರಿಂಟರ್, ಸ್ಪೀಕರ್, ಹೆಡ್‌ಫೋನ್‌ ಮುಂತಾದವುಗಳ ಮೂಲಕ ನಮಗೆ ದೊರೆಯುತ್ತವೆ. ಸೆಂಟ್ರಲ್ ಪ್ರೊಸೆಸಿಂಗ್ ಯುನಿಟ್ (ಸಿಪಿಯು) ಈ ಇನ್‌ಪುಟ್ ಮತ್ತು ಔಟ್‌ಪುಟ್ ಸಾಧನಗಳ ಕಾರ್ಯಗಳನ್ನು ನಿರ್ದೇಶಿಸುತ್ತದೆ.

ಕಂಪ್ಯೂಟರ್ ಪ್ರಕಾರಗಳು

ಕಂಪ್ಯೂಟರ್‌ಗಳು ಗಾತ್ರ ಮತ್ತು ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ ಅನೇಕ ಶ್ರೇಣಿಯ. ಉನ್ನತ ಮಟ್ಟದ ವೈಜ್ಞಾನಿಕ ಮತ್ತು ಇಂಜಿನಿಯರಿಂಗ್ ಸಂಶೋಧನೆ ಮತ್ತು ರಚನೆಗಳಲ್ಲಿ ಬಳಕೆಯಾಗುವ ಸೂಪರ್‌ಕಂಪ್ಯೂಟರ್‌ಗಳಿಂದ ಹಿಡಿದು ಕ್ಯಾಲ್ಕುಲೇಟರ್, ಸ್ಟೀರಿಯೋ ಸಿಸ್ಟಂ ಮುಂತಾದವುಗಳಲ್ಲಿ ಬಳಕೆಯಾಗುವಂತೆ ಬೇರೆ ಬೇರೆ ಶ್ರೇಣಿಯ ಕಂಪ್ಯೂಟರ್‌ಗಳಿವೆ.

ಪರ್ಸನಲ್ ಕಂಪ್ಯೂಟರ್‌ಗಳು ಒಂದು ಬಾರಿ ಒಬ್ಬ ವ್ಯಕ್ತಿ ಬಳಸುವುದಕ್ಕೆ ಸಾಧ್ಯವಾಗುವಂತೆ ರೂಪಿಸಲ್ಪಟ್ಟಿರುತ್ತವೆ. ಡೆಸ್ಕ್‌‍ಟಾಪ್ ಕಂಪ್ಯೂಟರ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಪಿಸಿ ಮುಂತಾದವುಗಳು ಪರ್ಸನಲ್ ಕಂಪ್ಯೂಟರ್‌ಗೆ ಉದಾಹರಣೆಗಳು.

ಕಂಪ್ಯೂಟರ್ ಉಪಯೋಗಗಳು

ಕಂಪ್ಯೂಟರ್‌ನಿಂದ ಸಾಮಾನ್ಯ ಬಳಕೆದಾರನಿಗೆ ಅನೇಕ ಉಪಯೋಗಗಳಿವೆ. ಅವುಗಳು ಯಾವುವೆಂದು ಇಲ್ಲಿ ನೋಡೋಣ:

  • ಕಂಪ್ಯೂಟರ್‌ನಲ್ಲಿ ದಾಖಲೆಗಳನ್ನು, ಮಾಹಿತಿಗಳನ್ನು, ಚಿತ್ರಗಳನ್ನು, ಇ-ಬುಕ್‌ಗಳನ್ನು, ಹಾಡುಗಳನ್ನು, ಚಲನಚಿತ್ರಗಳನ್ನು ಶೇಖರಿಸಿ ಇಡಬಹುದು.
    ವಿದ್ಯಾರ್ಥಿಗಳು, ಸಂಶೋಧಕರು ಪ್ರೊಜೆಕ್ಟ್ ಸಿದ್ಧಗೊಳಿಸಲು, ಅಧ್ಯಯನ ಮಾಡಲು ಕಂಪ್ಯೂಟರ್‌ ಅಪ್ಲಿಕೇಶನ್‍ಗಳನ್ನು ಬಳಸಿಕೊಳ್ಳಬಹುದು. ಎಂಎಸ್ ವರ್ಡ್‌ನಂತಹ ಅಪ್ಲಿಕೇಶನ್‌ಗಳಲ್ಲಿ ಬರೆಯುವುದು, ತಿದ್ದುವುದು, ಹೊಂದಿಸುವುದು ಅತ್ಯಂತ ಸುಲಭವಾಗಿದ್ದು, ಕೈಬರಹಕ್ಕಿಂತ ಇದು ಅದು ಅತ್ಯಂತ ಸುಲಭ ಮತ್ತು ವೇಗದ್ದಾಗಿರುತ್ತದೆ.
  • ಕಠಿಣವಾದ ಲೆಕ್ಕಗಳನ್ನು ಕಂಪ್ಯೂಟರ್ ಬಳಸಿ ಮಾಡುವುದು ಅತ್ಯಂತ ಸುಲಭವಾಗುತ್ತದೆ. ಕಲಿಕೆಯ ದೃಷ್ಟಿಯಿಂದ ಕಂಪ್ಯೂಟರ್ ಬಳಕೆ ಅತ್ಯಂತ ಪ್ರಯೋಜನಕಾರಿ.
  • ಕಂಪ್ಯೂಟರ್‌ನಲ್ಲಿ ವೀಡಿಯೋ ಗೇಮ್ ಆಡುವುದು ಅತ್ಯಂತ ಮನರಂಜನೀಯವಾಗಿರುತ್ತದೆ. ಹೊಸ ಹೊಸ ಆಟಗಳನ್ನು ಕಂಪ್ಯೂಟರ್‌ನಲ್ಲಿ ಸ್ಥಾಪಿಸಿಕೊಂಡು ಆಡಬಹುದು.
  • ಅಂತರಜಾಲವನ್ನು ಬಳಸಿ ಅಗತ್ಯ ಮಾಹಿತಿಗಳನ್ನು ಹುಡುಕಬಹುದು ಮತ್ತು ಅಂತರಜಾಲದಿಂದ ಪಡೆದ ಮಾಹಿತಿಗಳನ್ನು ಕಂಪ್ಯೂಟರ್ ಹಾರ್ಡ್ ಡ್ರೈವ್‌ಗಳಲ್ಲಿ ಶೇಖರಿಸಿ ಇಡಬಹುದು. ಇಮೇಲ್ ಮಾಡಲು, ಸಾಮಾಜಿಕ ಸಂವಹನ ನಡೆಸಲು ಬಳಸಬಹುದಾಗಿದೆ.
  • ಕಂಪ್ಯೂಟರ್‌ನಲ್ಲಿ ಬರೆದದ್ದನ್ನು, ಇಂಟರ್ನೆಟ್‌ನಿಂದ ಡೌನ್‌‍ಲೋಡ್ ಮಾಡಿದ್ದನ್ನು ಬಾಹ್ಯ ಹಾರ್ಡ್‌ಡಿಸ್ಕ್‌ಗಳಾದ ಸಿಡಿ, ಡಿವಿಡಿ, ಪೆನ್‌ಡ್ರೈವ್ ಮುಂತಾದವುಗಳ ಮುಖಾಂತರ ಇತರರೊಂದಿಗೆ ಹಂಚಿಕೊಳ್ಳುವುದು ಅಥವಾ ಬೇರೊಂದು ಕಂಪ್ಯೂಟರ್‌ಗೆ ವರ್ಗಾಯಿಸುವುದು ಎಲ್ಲವೂ ಸುಲಭ.

ಒಮ್ಮೆ ಕಂಪ್ಯೂಟರ್ ಮತ್ತು ಅಂತರಜಾಲದ ಬಳಕೆಯ ಜಗತ್ತಿಗೆ ತೆರೆದುಕೊಂಡರೆ, ಅದು ಅಸಂಖ್ಯ ಸಾಧ್ಯತೆಗಳನ್ನು ಒದಗಿಸುತ್ತದೆ, ಮತ್ತು ಕಲಿಕೆ ಅತ್ಯಂತ ಆಸಕ್ತಿದಾಯಕ ಮತ್ತು ಆನಂದದಾಯಕವಾದದ್ದಾಗಿರುತ್ತದೆ. ಕಂಪ್ಯೂಟರ್ ಬಳಕೆಯನ್ನು ಕನಿಷ್ಟ ಶಿಕ್ಷಣವಿರುವವರಿಗೂ ಕಲಿಯಲು ಸುಲಭವಾಗುವಂತೆ ರೂಪಿಸುವಲ್ಲಿ ನೂರಾರು ಇಂಜಿನಿಯರುಗಳ ಪಾತ್ರ ದೊಡ್ಡದಿದೆ. ಆಸಕ್ತಿಯಿಂದ ಕಲಿಯುವವರಿಗೆ ಕಂಪ್ಯೂಟರ್ ಬಳಕೆ ನಿಜಕ್ಕೂ ಅತ್ಯಂತ ಸುಲಭವಿದೆ.