ಕಂಪ್ಯೂಟರ್ ಬಳಸಿ ವಿಭಿನ್ನ ರೀತಿಯ ಕೆಲಸಗಳನ್ನು ಮಾಡುವುದು ಸಾಧ್ಯ ಎನ್ನುವುದು ನಮಗೆ ಗೊತ್ತು. ಇದಕ್ಕಾಗಿ ಹಲವಾರು ಬಗೆಯ ತಂತ್ರಾಂಶಗಳು ದೊರಕುತ್ತವೆ ಎನ್ನುವುದೂ ಗೊತ್ತು. ಇಂತಹ ತಂತ್ರಾಂಶಗಳನ್ನೆಲ್ಲ ಬಳಸಿ ಬೇಕಾದಷ್ಟು ರೀತಿಯ ಕೆಲಸಗಳನ್ನು ಮಾಡಿಕೊಳ್ಳುತ್ತೇವಲ್ಲ, ಆ ಮಾಹಿತಿಯೆಲ್ಲ ಶೇಖರವಾಗುವುದು ಎಲ್ಲಿ?

ಇದಕ್ಕಾಗಿ ಬಳಕೆಯಾಗುವುದೇ ಮೆಮೊರಿ. ಸರಳ ಭಾಷೆಯಲ್ಲಿ ಹೇಳುವುದಾದರೆ ಇದನ್ನು ಕಂಪ್ಯೂಟರಿನ ಜ್ಞಾಪಕಶಕ್ತಿ ಎಂದು ಕರೆಯಬಹುದು. ಕಂಪ್ಯೂಟರಿನಲ್ಲಿ ಬಳಕೆಯಾಗುವ ದತ್ತಾಂಶ ಹಾಗೂ ಮಾಹಿತಿಯ ಸಕಲವೂ ಶೇಖರವಾಗುವುದು ಈ ಜ್ಞಾಪಕಶಕ್ತಿಯಲ್ಲೇ.

ಕಂಪ್ಯೂಟರ್ ಮೆಮೊರಿಯನ್ನು ಕೊಂಚಮಟ್ಟಿಗೆ ನಮ್ಮ ನೆನಪಿನ ಶಕ್ತಿಗೆ ಹೋಲಿಸಬಹುದು. ಉದಾಹರಣೆಗೆ ನಿಮ್ಮ ಮಿತ್ರರು ನಿಮಗೆ ಅವರ ದೂರವಾಣಿ ಸಂಖ್ಯೆಯನ್ನು ಹೇಳಿದರು ಎಂದುಕೊಳ್ಳೋಣ. ಆ ಸಂಖ್ಯೆಯನ್ನು ಮೊಬೈಲಿನ ಅಡ್ರೆಸ್ ಬುಕ್‌ಗೆ ಸೇರಿಸುವವರೆಗೆ, ಅಥವಾ ಡೈರಿಯಲ್ಲಿ ಬರೆದಿಟ್ಟುಕೊಳ್ಳುವವರೆಗೆ ಮಾತ್ರ ನೀವು ನೆನಪಿಟ್ಟುಕೊಂಡರೆ ಸಾಕು. ಆಮೇಲೆ ನೀವದನ್ನು ಮರೆತರೂ ಚಿಂತೆಯಿಲ್ಲ. ಬೇಕಾದಾಗ ನೋಡಿಕೊಳ್ಳಲು, ಕರೆಮಾಡಲು ಆ ದೂರವಾಣಿ ಸಂಖ್ಯೆ ನಿಮ್ಮ ಅಡ್ರೆಸ್ ಬುಕ್‌ನಲ್ಲಿ ಸಿಗುತ್ತದಲ್ಲ!

ಕಂಪ್ಯೂಟರ್ ಕೂಡ ಹಾಗೆಯೇ. ತಕ್ಷಣಕ್ಕೆ ಬೇಕಾದದ್ದೆಲ್ಲ ನೆನಪಿಟ್ಟುಕೊಳ್ಳಲು ನಮ್ಮ ಮೆದುಳು ಇರುವ ಹಾಗೆ ಕಂಪ್ಯೂಟರಿನಲ್ಲಿ ‘ಪ್ರೈಮರಿ ಮೆಮೊರಿ’ ಇರುತ್ತದೆ. ಈ ಕ್ಷಣದಲ್ಲೇ ಬೇಕಾಗದ ವಿಷಯಗಳು ಸೆಕಂಡರಿ ಮೆಮೊರಿಯಲ್ಲಿ ಶೇಖರವಾಗುತ್ತವೆ; ಮೊಬೈಲ್ ಸಂಖ್ಯೆಯನ್ನು ಅಡ್ರೆಸ್ ಬುಕ್‌ನಲ್ಲಿ ಬರೆದಿಟ್ಟುಕೊಂಡಂತೆ!

ಪ್ರೈಮರಿ ಮೆಮೊರಿ: ಕಂಪ್ಯೂಟರಿನ ಕೆಲಸಗಳನ್ನೆಲ್ಲ ಅದರ ಪ್ರಾಸೆಸರ್ ನಿರ್ವಹಿಸುತ್ತದೆ ನಿಜ. ಆದರೆ ಆ ಕೆಲಸಗಳಿಗೆ ಬೇಕಾದ ದತ್ತಾಂಶ ಮತ್ತು ಮಾಹಿತಿ ಎಲ್ಲವನ್ನೂ ಶೇಖರಿಸಿಟ್ಟುಕೊಳ್ಳಲು ಬೇಕಾದ ಜ್ಞಾಪಕ ಶಕ್ತಿ ಅದರಲ್ಲಿರುವುದಿಲ್ಲ.

ಈಗ ನೀವೊಂದು ಪತ್ರವನ್ನು ಟೈಪ್ ಮಾಡುತ್ತಿದ್ದೀರಿ ಎಂದುಕೊಳ್ಳೋಣ. ಹೊಸದೊಂದು ಕಡತ ತೆರೆದು ಟೈಪ್ ಮಾಡಲು ಶುರುಮಾಡಿದ ತಕ್ಷಣ ಅದೇನೂ ನಿಮ್ಮ ಕಂಪ್ಯೂಟರಿನ ಹಾರ್ಡ್‌ಡಿಸ್ಕ್‌ನಲ್ಲಿ ಹೋಗಿ ಕುಳಿತುಕೊಳ್ಳುವುದಿಲ್ಲ. ಉಳಿಸಬೇಕೋ ಬೇಡವೋ ಎಂದು ತೀರ್ಮಾನಿಸಿ, ಕಡತಕ್ಕೊಂದು ಹೆಸರು ಕೊಟ್ಟು, ಇದನ್ನು ಉಳಿಸಿಡು ಎಂದು ಹೇಳುವವರೆಗೂ ನೀವು ಟೈಪ್ ಮಾಡಿದ್ದೆಲ್ಲ ರ್‍ಯಾಮ್ ಅಥವಾ ರ್‍ಯಾಂಡಮ್ ಆಕ್ಸೆಸ್ ಮೆಮೊರಿಯಲ್ಲಿ ಉಳಿದುಕೊಂಡಿರುತ್ತದೆ.

ಕಂಪ್ಯೂಟರಿನ ಪ್ರೈಮರಿ ಮೆಮೊರಿಗೆ ರ್‍ಯಾಮ್ ಒಂದು ಉದಾಹರಣೆ. ತಾನು ಬಳಸುತ್ತಿರುವ ದತ್ತಾಂಶ ಹಾಗೂ ಮಾಹಿತಿಯನ್ನೆಲ್ಲ ಪ್ರಾಸೆಸರ್ ಇದರಲ್ಲಿ ಉಳಿಸಿಡುತ್ತದೆ. ಕಂಪ್ಯೂಟರ್‌ಗೆ ವಿದ್ಯುತ್ ಪೂರೈಕೆ ಇರುವವರೆಗೆ ಮಾತ್ರ ರ್‍ಯಾಮ್‌ನಲ್ಲಿರುವ ಸಂಗತಿಗಳೆಲ್ಲ ಉಳಿದಿರುತ್ತವೆ. ಇದ್ದಕ್ಕಿದ್ದಂತೆ ಕರೆಂಟು ಹೋದಾಗ ನೀವು ಟೈಪ್ ಮಾಡುತ್ತಿದ್ದ ಇನ್ನೂ ಸೇವ್ ಮಾಡದ ಕಡತ ಮಾಯವಾಗಿಬಿಡುತ್ತದಲ್ಲ, ಅದಕ್ಕೆ ಇದೇ ಕಾರಣ!

ಹಾಗೆಂದಮಾತ್ರಕ್ಕೆ ಪ್ರೈಮರಿ ಮೆಮೊರಿಯ ಹಣೆಬರಹವೇ ಇಷ್ಟು ಅಂತೇನೂ ಇಲ್ಲ. ಪ್ರೈಮರಿ ಮೆಮೊರಿಗೆ ಇನ್ನೊಂದು ಉದಾಹರಣೆಯಾದ ರೀಡ್ ಓನ್ಲಿ ಮೆಮೊರಿ ಅಥವಾ ರಾಮ್‌ನ ಕತೆಯೇ ಬೇರೆ. ಇದರ ನೆನಪಿನಲ್ಲಿರುವ ಸಂಗತಿಗಳೆಲ್ಲ ಕರೆಂಟಿದ್ದರೂ ಇಲ್ಲದಿದ್ದರೂ ಹಾಗೆಯೇ ಉಳಿದಿರುತ್ತವೆ. ಆದರೆ ರಾಮ್‌ನಲ್ಲಿರುವುದನ್ನು ಓದುವುದು ಮಾತ್ರ ಸಾಧ್ಯ; ಬದಲಾಯಿಸುವಂತಿಲ್ಲ. ಕಂಪ್ಯೂಟರ್‌ನ ಕೆಲಸ ಪ್ರಾರಂಭವಾಗಲು ಬೇಕಾದ ಕೆಲ ನಿರ್ದೇಶನಗಳು ಇಲ್ಲಿ ಶೇಖರವಾಗಿರುತ್ತವೆ.

ಸೆಕೆಂಡರಿ ಮೆಮೊರಿ: ಕಂಪ್ಯೂಟರಿನಲ್ಲಿ ರಾಶಿಗಟ್ಟಲೆ ಮಾಹಿತಿ ಶೇಖರವಾಗಿದ್ದರೂ ಅದರಲ್ಲಿ ಎಲ್ಲವೂ ಎಲ್ಲ ಸಮಯದಲ್ಲೂ ಬೇಕಾಗುವುದಿಲ್ಲ. ಹಾಗಾಗಿ ಅದನ್ನೆಲ್ಲ ನಮಗೆ ಬೇಕಾದಾಗ ಪಡೆದುಕೊಳ್ಳಲು ಆಗುವಂತೆ ಬೇರೊಂದು ಕಡೆ ಉಳಿಸಿಡಬೇಕಾಗುತ್ತದೆ. ಹೀಗೆ ಉಳಿಸಿಡಲು ಸೆಕೆಂಡರಿ ಮೆಮೊರಿ ಬಳಕೆಯಾಗುತ್ತದೆ.

ಕಂಪ್ಯೂಟರ್‌ನಲ್ಲಿರುವ ಎಲ್ಲ ಕಡತಗಳು ಹಾಗೂ ತಂತ್ರಾಂಶಗಳು ಸೆಕೆಂಡರಿ ಮೆಮೊರಿಯಲ್ಲೇ ಶೇಖರವಾಗಿರುತ್ತವೆ. ಅಗತ್ಯಬಿದ್ದಾಗ ಅಗತ್ಯವಾದಷ್ಟೆ ವಿಷಯಗಳು ಅಲ್ಲಿಂದ ಪ್ರೈಮರಿ ಮೆಮೊರಿಗೆ ವರ್ಗಾವಣೆಯಾಗುತ್ತವೆ. ಬದಲಾದದ್ದನ್ನು ಅಥವಾ ಹೊಸದಾಗಿ ಸೇರಿದ್ದನ್ನು ‘ಸೇವ್’ ಮಾಡಿದಾಗ ಅದು ಮತ್ತೆ ಸೆಕೆಂಡರಿ ಮೆಮೊರಿಗೇ ಹೋಗಿ ಉಳಿದುಕೊಳ್ಳುತ್ತದೆ.

ಹಾರ್ಡ್‌ಡಿಸ್ಕ್, ಸೀಡಿ/ಡೀವೀಡಿ, ಪೆನ್‌ಡ್ರೈವ್, ಮೆಮೊರಿ ಕಾರ್ಡ್ ಇತ್ಯಾದಿಗಳೆಲ್ಲ ಸೆಕೆಂಡರಿ ಮೆಮೊರಿಗೆ ಉದಾಹರಣೆಗಳು. ಕಂಪ್ಯೂಟರಿನ ಮಟ್ಟಿಗೆ ಹೇಳುವುದಾದರೆ ಇದರಲ್ಲಿ ಅತ್ಯಂತ ಮುಖ್ಯವಾದದ್ದು ಹಾರ್ಡ್‌ಡಿಸ್ಕ್. ಕಾರ್ಯಾಚರಣ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಂ) ಸೇರಿದಂತೆ ಎಲ್ಲ ತಂತ್ರಾಂಶಗಳೂ ಇನ್‌ಸ್ಟಾಲ್ ಆಗಿರುವುದು ಹಾರ್ಡ್‌ಡಿಸ್ಕ್‌ನಲ್ಲೇ. ಕಂಪ್ಯೂಟರ್‌ನ ಹೊರಗಿರುವ ಎಕ್ಸ್‌ಟರ್ನಲ್ ಹಾರ್ಡ್‌ಡಿಸ್ಕ್‌ಗಳೂ ಸಿಗುತ್ತವಾದರೂ ಪ್ರತಿ ಕಂಪ್ಯೂಟರಿನಲ್ಲಿ ಸಾಮಾನ್ಯವಾಗಿ ಒಂದಾದರೂ ಹಾರ್ಡ್ ಡಿಸ್ಕ್ ಇರುತ್ತದೆ. ಅಂದಹಾಗೆ ಕೆಲ ಕಂಪ್ಯೂಟರ್‌ಗಳಲ್ಲಿ ಹಾರ್ಡ್‌ಡಿಸ್ಕ್ ಬದಲಿಗೆ ಸಾಲಿಡ್ ಸ್ಟೇಟ್ ಡ್ರೈವ್ ಎಂಬ ಹೊಸ ಬಗೆಯ ಮೆಮೊರಿಯೂ ಬಳಕೆಯಾಗುತ್ತದೆ.

ಸೀಡಿ, ಡೀವೀಡಿ, ಬ್ಲೂ ರೇ ಡಿಸ್ಕ್, ಪೆನ್ ಡ್ರೈವ್, ಮೆಮೊರಿ ಕಾರ್ಡ್, ಎಕ್ಸ್‌ಟರ್ನಲ್ ಹಾರ್ಡ್‌ಡಿಸ್ಕ್ ಇತ್ಯಾದಿಗಳನ್ನೆಲ್ಲ ಬೇರೆಬೇರೆ ಕಂಪ್ಯೂಟರುಗಳಲ್ಲಿ ಬಳಸಬಹುದು. ಮಾಹಿತಿಯನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸುಲಭವಾಗಿ ಕೊಂಡೊಯ್ಯಲು ಸಹಾಯಮಾಡುವ ಇವನ್ನು ರಿಮೂವಬಲ್ (ತೆಗೆದು-ಹಾಕಬಹುದಾದ) ಮೀಡಿಯಾ ಎಂದೂ ಕರೆಯುತ್ತಾರೆ.

(ಮಾರ್ಚ್ ೬, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ)