ಕ್ಯೂ ನಿಂತು ಚೈತ್ರನಿಗಾಗಿ ಕಾಯುತ್ತಿದ್ದೇವೆ ನಾವೆಲ್ಲ,
ಬಂದನೇ ಹಿಡಿದು ಬಣ್ಣ ಬಣ್ಣಗಳ ಬಕೆಟ್ಟನು ?
ಓ, ಬಂದ. ಗಾಳಿಯ ಕುಂಚವನ್ನದ್ದಿ ಬಣ್ಣದಲಿ
ಆಗಲೇ ಬಳಿದಿದ್ದಾನೆ ಹಲವು ಮರಗಳನು !

ಎಷ್ಟು ತಡ ಏಕೆ ತಡ ? ಇವನೊಬ್ಬ ಮುನಿಸಿಪಲ್ ಕಂಟ್ರಾಕ್ಟರು ;
ತನಿಖೆ ಮಾಡುವರಿಲ್ಲ, ಇವನನ್ನು ಕೇಳುವರಿಲ್ಲ ವರದಿ.
ಅಲ್ಲರ್ಧ ಇಲ್ಲರ್ಧ – ಇವನ ಕೆಲಸವೇ ಹೀಗೆ
ಇನ್ನು ಯಾವಾಗಲೋ ನಮ್ಮ ಸರದಿ !

ಸಾಕಪ್ಪ ಸಾಕು ; ಕೊರೆವ ಕತ್ತರಿಗಾಳಿ ಹತ್ತರಿಹೊಡೆದು,
ಇದ್ದ ತರಗು-ಬರಗನು ತೆಗೆದು ಬತ್ತಲೆಮಾಡಿ,
ಛಳಿಯ ಪಾಲಿಷ್ ಹಾಕಿ, ಹೀಗೆ ಬಿರುಬಿಸಿಲಲ್ಲಿ
ನಿಲಿಸಬಹುದೇ ಇವನು ನಮ್ಮ ಮರ್ಯಾದೆಯನು
ಕಾಸಿಗಿಂತಲು ಕೂಡ ಕಡಮೆ ಮಾಡಿ !

ಹಿಂದೆಲ್ಲ ಹೀಗಿರಲಿಲ್ಲ, ಕವಿಗಳ ಕೇಳಿ.
ಈಗೀಗಂತು ಹೆಚ್ಚಾಗುತಿದೆ ಅವ್ಯವಸ್ಥೆ,
ಅರ್ಜಿ ಸಲ್ಲಿಸಿ ನಾವು ಎಷ್ಟು ದಿವಸಗಳಾಯ್ತು ಏನು ಕತೆ ;
ಹೀಗೆಲ್ಲ ಕೆಡಬಾರದಪ್ಪ ಹೆಸರಾದ ಸಂಸ್ಥೆ.