ಇದುವರೆಗು ನೀನಿದ್ದೆ ; ಈಗಲೋ ನಿನಗೆ
ಮುಗಿಯದ ನಿದ್ದೆ. ನನಗೆ ಎಚ್ಚರ ಈಗ
ನಿನ್ನ ಊರಿನ ಪತ್ರ ನನ್ನ ಕಣ್ಣನು ಕುಕ್ಕಿ
ಈಗ ನೀನಿಲ್ಲ ಎಂಬ ಸುದ್ದಿ ಬೆಂಕಿಯನಿಕ್ಕಿ
ನನ್ನ ಸುತ್ತಲು ಬರಿಯ ಹೊಗೆಯ ಹಬ್ಬಿಸಿದಾಗ,
ಮತ್ತೆ ನೀನೆಲ್ಲಿ ನನಗೆ? ಸುತ್ತ ಬರೀ ಧಗೆ.

ಅಂದೊಮ್ಮೆ ಉತ್ತ ಹೊಲ ಗದ್ದೆಗಳ ಮೆತ್ತೆ
ಮಣ್ಣಿನ ಮೇಲೆ ನಿನ್ನೊಡನೆ ಸುತ್ತಾಡಿದೆ.
ಕಿರುಹಳ್ಳದೆಡೆ ನಿನ್ನ ಕೈಹಿಡಿದು ದಾಟಿಸಿದೆ.
ಈಗ ನೀನೇ ದಾಟಿ ಹೋಗಿರುವೆ ನಾ ಮತ್ತೆ
ಕೈಹಿಡಿದು ದಾಟಿಸಿ ತಾರದಿರುವಂಥ ಕಡೆ.
ಈಗ ನನಗೂ ನಿನಗು ನಡುವೆ ಕತ್ತಲ ಗೋಡೆ.
ಇದರ ಮೇಲಿಡುತ್ತೇನೆ ನಿನ್ನ ನೆನಪಿನ ಹಣತೆ
ನನ್ನ ಸಮಾಧಾನಕ್ಕೊಂದು ಸಣ್ಣ ಕಂಬನಿ ಕವಿತೆ.