“ಸ್ವಾಮೀ”

“ಯಾರಮ್ಮ ನೀನು?”

”ನಾನೊಬ್ಬ ಅಬಲೆ !”

” ಈ ಕತ್ತಲೆಯಲ್ಲಿ ಏಕೆ ಬಂದೆ? ಎಲ್ಲಿಂದ ಬಂದೆ ತಾಯಿ ?”

“ಅಯ್ಯ ನನ್ನದೊಂದು ದೊಡ್ಡ ಕಥೆ . ನಿಧಾನವಾಗಿ ಹೇಳುವೆ .ಬಹಳ ಬಾಯಾರಿಕೆಯಾಗಿದೆ .ನೀರಿದಿಯೆ?”

ಆದಿತ್ಯ ಸ್ವಲ್ಪ ತಡವರಿಸಿದ. ಮಧ್ಯರಾತ್ರಿ. ಎಲ್ಲೂ ನೀರಿರಲಲಿಲ್ಲ . ಗುಡಿಊರ ಆಚೆ ಇದೆ. ಆ ವೇಳೆಯಲ್ಲಿ ಹೋಗುವುದೆಲ್ಲಿಗೆ? ಆದಿತ್ಯನಿಗೆ ತಂದೆತಾಯಿ , ಬಂಧು ಬಳಗ ಯಾ ರೊ ಇಲ್ಲ .ಅವನಿಗೆ ಇದ್ದದ್ದು ಒಂದೇ ,ಅದೇ ಆ ಕಾಳಿ ಯ ಗುಡಿ . ಅವನ ಊಟ-ತಿಂಡಿ ಎಲ್ಲ ಗುಡಿಯಲ್ಲೆ. ಗುಡಿಗೆ ಬೀಗ ಹಾಕಿಯಾಗಿತ್ತು . ನೀರಿಗಾಗಿ ಮತ್ತೆ ತೆರೆಯುಉವುದೆ?

“ಸ್ವಾಮಿ, ಬಹಳ ಬಾಯಾರಿಕೆ . ನಿಮ್ಮ ದಮ್ಮಯ್ಯ, ನನ್ನ ಪ್ರಾಣವೇ ಹೋಗುತ್ತಿದೆ .ಹೇಗಾದರೂ ಮಾಡಿ ಕೊಂಚ ನೀರುಕೊಡಿ.”

ಆದಿತ್ಯನ ಮನಸ್ಯು ಕರಗಿತು . ಕೂಡಲೆ ಬಾಗಿಲು ತೆರೆದ. ದೇವರ ತೀರ್ಥವನ್ನೇ ತಂದು ಆಕೆಯ ಬಾಯಲ್ಲಿ ಸುರಿದ. ಆಕೆಗೆ ದಣಿವು ಆರಲಿಲ್ಲಿ . ನೀರು …… ನೀರು…….ಎಂದು ಮತ್ತೆ ಮತ್ತೆ ಕೇಳತೊಡಗಿದಳು . ಆದಿತ್ಯನಿಗೆ ದಿಕ್ಕೇ ತೋಚಲಿಲ್ಲ . ಆತ  ಊರ ಕಡೆಗೆ ಓಡಿದ.

ಆದರೆ ಆ ವೇಳೆಯಲ್ಲಿ ನೀರಲ್ಲಿ ಸಿಗಬೇಕು? ಮನೆ ಮನೆಗೂ ಹೋದ .ಬಾಗಿಲನ್ನು ಎಷ್ಟು ಬಡಿದೆಬ್ಬಿಸಿದರೂ ಏಳದ ಜನ . ಕೊನೆಗೊಂದು ಗುಡಿಸಲಿನಲ್ಲಿ ಮಗು ಅಳುತ್ತಿತ್ತು . ಅಲ್ಲಿಗೆ ಬಂದ ಕೂಗಿ ನೀರು ಕೇಲಿದ . ನೀರು ಸಿಕ್ಕಿತು .

ನೀರು ತರಲು ಬಹಳ ವೇಳೆಯಾಗಿತ್ತು. ಗುಡಿಗೆ ಬಂದು ನೋಡಿದ ಆದಿತ್ಯ. ಆಕೆ ಇರಲಿಲ್ಲಿ .ಅಮ್ಮ! ತಾಯೀ ” ಎಂದು ಕರೆದರೂ ಉತ್ತರವಿಲ್ಲ . ಅತ್ತಿತ್ತ ಹುಡುಕಿದ . ಎಲ್ಲೂ ಕಾಣಲಿಲ್ಲ .

ಬೆಳಗಾಯಿತು . ಜನ ಸುದ್ದಿ ತಂದರು – ಕಂಬದ ಹತ್ತಿರ ಯಾರೋ ಬಿದ್ದಿದ್ದಾರೆ . ಪಕ್ಕದಲ್ಲಿ ಹಸುಗೂಸು ಬೇರೆ! ಸತ್ತಿದೆಯೋ ಬದುಕಿದೆಯೋ ದೇವರಿಗೇ ಗೊತ್ತು.

ಆದಿತ್ಯ ಪೂಜೆ ಬಿಟ್ಟು ಓಡಿಬಂದ . ಆ ಅಬಲೆಯನ್ನು ಕಂಡ . ಕಣ್ಣಲ್ಲಿ ನೀರು ಹರಿಯಿತು. ಆಕೆ ಮಗುವಿಗೆ ಜನ್ಮ  ಕೊಟ್ಟು ತನ್ನ ಕತೆ ಮುಗಿಸಿದ್ದಳು . ಆ ಮಗು  ಯಾರು ಗೋತ್ತೆ? ಅವರೇ ಕಂಬರ್!

ಅದೃಷ್ಟಹೀನ ರಾಜಕುಮಾರ

ಕೆಯಲ್ಲಿ ಕೋಲು ಹಿಡಿದು ಬಂದ ! ತಮಿಳೀನಲ್ಲಿ ಕಂಬು ಅಂದರೆ ಕೋಲು ಎಂದು ಅರ್ಥ. ಅದನ್ನು ಹಿಡಿದವನಿಗೆ ” ಕಂಬನ್ ” ಅಂದರು . “ಹಾಗಲ್ಲ. ಏಕಾಂಬರೇಶ್ವರ ಇವನ ಪ್ರಿಯ ದೇಚರು. ಅದರೆ ಕುರುಹೇ “ಕಂಬರ್ !” ಇನ್ನೊಂದು ಕಾರಣವಿದೆ . “ಕಂಬ ಎಂಬುದು ಒಂದು ಜಾತಿ .ಅದರಲ್ಲಿ ಹುಟ್ಟಿದವ ಕಂಬನಾದ.” ಇದರ ಜೊತೆಗೆ ಕೆಲವರು ಹೀಗೆ ಹೇಳುವರು ,”  ಅವನ ತಾಯಿ ಕಂಬದ ಹತ್ತಿರ ಹಡೆದಳು ಆದ್ದರಿದ ಇವನ  ಹೆಸರು ಕಂಬರ್ ಆಯಿತು .?

ಹೀಗೆಲ್ಲ ಅವನ ಹೆಸರಿನ ಬಗ್ಗೆ ಹೇಳುವುದುಂಟು . ಕಂಬರ್ ಹುಟ್ಟಿದ ಸ್ಥಳ ಚೋಳನಾಡಿನ ಒಂದು ಹಳ್ಳಿ.”ತಿರುವಳಂದೂರು” ಎಂದು ಅದರ ಹೆಸರು .ಸುಮಾರು ಹನ್ನೆರಡನೆ ಶತಮಾನ, ಆಗ ಆ ನಾಡನ್ನು ರಾಜ ವೀರವರ್ಮ ಆಳುತ್ತಿದ್ದ, ಈತನ ಮಡದಿ ಅಂಬಿಕೆ, ಇಬ್ಬರೂ ದೈವಭಕ್ತರು.

ಒಮ್ಮೆ ಶತ್ರುಗಳು ವೀರವರ್ಮನನ್ನು ಮುತ್ತಿದರು. ಘೋರಯುದ್ಧ ನಡೆಯಿತು. ವೀರವರ್ಮ ಮಡಿದ. ಸೈನಿಕರು ಚಿಲ್ಲಾ ಪಿಲ್ಲಿ! ಉಳಿದವರು ದಿಕ್ಕೆಟ್ಟು ಓಡಿದರು. ರಾಣಿ ಅಂಬಿಕೆ ಆಗ ತುಂಬು ಗರ್ಭಿಣಿ. ಈ ಸಮಯದಲ್ಲಿ ಅವಳ ಸಹಾಯಕ್ಕೆ ಯಾರೂ ಬರಲಿಲ್ಲ, ಆಕೆ ಭಯದಿಂದ ತತ್ತರಿಸಿದಳು, ಆದರೂ ಕೊನೆಗೆ ಧೈರ್ಯದಿಂದ ಕೂಸನ್ನಾದರೂ ಉಳಿಸುವ ಆಸೆಯಿಂದ ಏಕಾಂಗಿಯಾಗಿ ಓಡಿದಳು.

ತಿರುವಳಂದೂರ್ (ತೇರಳಂದೂರ್) ಪುಟ್ಟ ಗ್ರಾಮ, ಅಲ್ಲಿ ಒಂದು ಕಾಳೀ ದೇವಾಲಯ, ರಾಣಿಗೆ ಆಯಾಸ, ಜೊತೆಗೆ ಪ್ರಸವ ವೇದನೆ. ಕಷ್ಟಪಟ್ಟು ಗುಡಿ ತಲುಪಿದಳು, ಹೆರಿಗೆಯೂ ಆಯಿತು, ರಾಣಿ ಕಣ್ಣು ಮುಚ್ಚಿದಳು! ಆ ನಿರ್ಭಾಗ್ಯ ಮಗುವೇ ’ಕಂಬರ್!’

’ರಾಮಪ್ರಿಯ ಕಂಬರ್’

ಆದಿತ್ಯ ತಾನೇ ಆ ಮಗುವಿಗೆ ತಂದೆಯಾದ, ಕಂಬ ಎಡೆಬಿಡದೆ ಆದಿತ್ಯನನ್ನು ಆಶ್ರಯಿಸಿತು. ಆದಿತ್ಯ ತಾಯಿಯಾಗಿ ಪೋಷಿಸಿ ತಂದೆಯಾಗಿ ಪಾಲಿಸಿದ. ಮಗು ಆದಿತ್ಯನನ್ನು ತಂದೆ ಎಂದೇ ತಿಳಿಯಿತು.

ತಂದೆ ಪೂಜೆಗೆ ಕೂತರೆ ಮಗ ಗಂಧ ತೇಯುತ್ತಿದ್ದ. ಅವನು ಹೂವು ತಂದರೆ ಇವನು ಮಾಲೆ ಕಟ್ಟುತ್ತಿದ್ದ. ಈತ ದೀಪ ಹಚ್ಚಿದರೆ ಕಂಬ ಧ್ಯಾನನಿರತನಾಗುತ್ತಿದ್ದ.

ತಿರುವಳಂದೂರ್ ನಲ್ಲಿ ಹಬ್ಬ, ಅಂದಮೇಲೆ ಕೇಳಬೇಕೆ? ಜನರ ಸಂಭ್ರಮವೋ ಸಂಭ್ರಮ, ಗುಡಿಯ ಮುಂದೆ ಚಪ್ಪರ, ಅಲ್ಲಿ ರಾಮಾಯಣ ನಾಟಕ. ಬಹಳ ಜನ ಸೇರಿದ್ದಾರೆ, ನಾಟಕ ಆರಂಭವಾಯಿತು, ರಾಮನ ಜನನ ಆಗಿದೆ, ರಾಮ ಹೇಳಿದ, “ಲಕ್ಷ್ಮಣ ಭರತ ಶತ್ರುಘ್ನ! ಬನ್ನಿ ಬನ್ನಿ, ಓಡಿ ಬನ್ನಿ ಎಲ್ಲರೂ ಸೇರಿ ಆಟ ಆಡ್ನೋಣ ಅವನು ಹಾಗೆ ಹೇಳುತ್ತಿದ್ದಂತೆ ನಾಟಕ ನೋಡುತ್ತದ್ದ ಈ ಹುಡುಗ ಆಟವಾಡಲು ಓಡಿಹೋದ.

ಇನ್ನೊಮ್ಮೆ -ರಾವಣ ಸೀತೆಯನ್ನು ಹೊತ್ತುಕೊಂಡು ಹೋಗಿದ್ದಾನೆ. ಆಕೆಗಾಗಿ ರಾಮ ಮರುಗುತ್ತಿದ್ದಾನೆ, ಜೊತೆಗೆ ಕಣ್ಣಲ್ಲಿ ನೀರು ಬೇರೆ, ಹುಡುಗ ಇದನ್ನು ಕಂಡು ಗೊಳೋ ಎಂದು ತಾನೇ ಅತ್ತುಬಿಟ್ಟ!

ಮತ್ತೊಮ್ಮೆ ರಾವಣ ರಾಮನ ರಥವನ್ನು ಮುರಿದ, ಕುದುರೆ ಓಡಿತು, ಸಾರಥಿ ಮುಗ್ಗರಿಸಿದ, ಕೆಳಗೆ ಬಿದ್ದ ರಾಮ! ಕೂಡಲೇ, “ರಾಮ……. ರಾಮ ಇದೋ ಬಂದೇ ತಾಳು” ಎಂದು ಸಹಾಯಕ್ಕಾಗಿ ಓಡಿದ ಹುಡುಗ. ಅವನು ಯಾರು ಗೊತ್ತೆ? ಅವನೇ ಕಂಬ!

ಹೀಗೆ ಕಂಬ ರಾಮನ ಪ್ರಿಯನಾದ. ಇದನ್ನು ತಿಳಿದ ಆದಿತ್ಯ ಇಡೀ ರಾಮಾಯಣವನ್ನೇ ಅವನಿಗೆ ಹೇಳಿಕೊಟ್ಟರು.

ಮತ್ತೆ ತಬ್ಬಲಿ – ಆಶ್ರಯ

ಈಗ ಕಂಬನಿಗೆ ಏಳು ವರ್ಷ, ಇನ್ನೂ ಅರಿಯದ ಬಾಲಕ, ಕ್ರೂರವಿಧಿ ಆದಿತ್ಯನನ್ನು ಸೆಳೆದುಕೊಂಡಿತು! ಮೊದಲೆ ತಂದೆತಾಯಿಯನ್ನು ಕಳೆದುಕೊಂಡ ಕಂಬ ಈಗ ಸಾಕುತಂದೆಯನ್ನೂ ಕಳೆದುಕೊಂಡು ತಬ್ಬಲಿಯಾದ.

ತಿರುವೆಣ್ಣೈನಲ್ಲೂರು ಒಂದು ಗ್ರಾಮ, ಅಲ್ಲಿಯ ಶೆಡೆಯಪ್ಪ ಸಾಹುಕಾರ, ಕಾಳೀ ದೇವತೆಯಲ್ಲಿ ತುಂಬ ಭಕ್ತಿ. ಅನೇಕ ಸಾರಿ ಗುಡಿಗೆ ಬಂದಿದ್ದ. ಆದಿತ್ಯನನ್ನು ಕಂಡರೆ ಬಹಳ ಗೌರವ. ಅವನಿಗೂ ಈ ಸುದ್ದಿ ತಿಳಿಯಿತು. ಓಡಿಬಂದ ಶೆಡೆಯಪ್ಪ.

“ಮಗು ಭಯಪಡಬೇಡ, ನಾನಿದ್ದೇನೆ, ಆದಿತ್ಯ ಸ್ವಾಮಿ ಎಲ್ಲ ನನಗೆ ಹೇಳಿದ್ದಾರೆ, ನಿನ್ನ ವಿದ್ಯಾಭ್ಯಾಸಕ್ಕೆ ರಾಮಾಯಣವನ್ನೂ ಕೊಟ್ಟಿದ್ದಾರೆ. ದೊಡ್ಡ ವಿದ್ವಾಂಸ ಆಗುವೆಯಂತೆ. ಕೀರ್ತಿ ದೇಶದಲ್ಲೆಲ್ಲಾ ಬೆಳಗುವುದು. ಬಾ ಮನೆಗೆ ಹೋಗೋಣ” ಎಂದು ಪ್ರೀತಿಯಿಂದ ಕರೆದ.

ಕಂಬ ಶೆಡೆಯಪ್ಪನ ಮನೆಗೆ ಬಂದ, ತುಂಬಿದ ಮನೆ, ಮಕ್ಕಳು ಮೊಮ್ಮಕ್ಕಳು, ಜೊತೆಗೆ ಕಂಬನಂತಹ ದಿಕ್ಕಿಲ್ಲದವರಿಗೂ ಆಶ್ರಯ! ಶೆಡೆಯಪ್ಪನ ಮನೆ ನಂದ ಗೋಕುಲದಂತೆ ಇತ್ತು.

ಸಾಹುಕಾರ ಶೆಡೆಯಪ್ಪ ಎಂದರೆ ಆ ಪ್ರಾಂತದ ಜೀವಾಳ. ಇವನ ದಾನ ಧರ್ಮ ಲೋಕಪ್ರಸಿದ್ಧಿ. ಈತ ಗಳಿಸುವುದುಕ್ಕಿಂತ ಕೊಡುವುದರಲ್ಲಿ ಮುಂದು. ದೇವಾಲಯಗಳ ಧರ್ಮದರ್ಶಿ, ಮಠದಲ್ಲಿ ಯಜಮಾನ, ದೀನರ ಬಂಧು, ದಲಿತರ ದೈವ.

ಒಂದು ದಿನ ಹೀಗೆ ನಡೆಯಿತು. ಸ್ನಾನಕ್ಕೆ ಹೊರಟ ಶೆಡೆಯಪ್ಪ, ಕಂಬ ಹಿಂಬಾಲಿಸಿದ.

“ಅಯ್ಯಾ, ನದಿ ಆಳವಿದೆ, ಸುಳಿಗಳಿವೆ, ಅಪಾಯ ಜಾಸ್ತಿ, ಇಂದು ನೀನು ಬೇಡ, ಇನ್ನೊಮ್ಮೆ ಬರುವೆಯಂತೆ.”

ಹುಡುಗ ಶೆಡೆಯಪ್ಪನ ಮಾತು ಕೇಳಲಿಲ್ಲ, ಹಟ ಹಿಡಿದು ಬಂದ. ಇಬ್ಬರೂ ನೀರಿಗಿಳಿದರು, ಸಾಹುಕಾರ ಮುಳುಗಿ ಎದ್ದ, ಕಂಬ ಅಲೆಯ ಹೊಡೆತಕ್ಕೆ ಸಿಕ್ಕಿದ, ಕೊಂಚ ದೂರದಲ್ಲೇ ’ಸುಳಿ’ ಹುಡುಗನನ್ನು ಸೆಳೆಯುತ್ತಿದೆ. ಆಗ ಹೇಳಿದ, “ತಮ್ಮಾ, ತಮ್ಮಾ, ಹೆದರಬೇಡ, ಇದೋ ನಾ ಬರುವೆ….”

ಈ ಕೂಗು ಆಸುಪಾಸಿನವರಿಗೆ ಕೇಳಿಸಿತು. ಹತ್ತಾರು ಜನ ಓಡಿಬಂದರು. ಸುಳಿ ಕಂಬನನ್ನು ಸೆಳೆಯುತ್ತಿದೆ, ಅಯ್ಯೋ, ಮುಂದೇನು? ಮುಂದೇನು? ಎಂದು ಚಿಂತಿಸಿದರು, ಆದರೆ ನೀರಿನಲ್ಲಿ ಇಳಿಯಲು ಒಬ್ಬರಿಗೂ ಧೈರ್ಯವಿಲ್ಲ! ಶೆಡೆಯಪ್ಪನೇ ಧೈರ್ಯವಾಗಿ ಮುನ್ನುಗ್ಗಿದ್ದ, ಸುಳಿ ಅವನನ್ನು ಸೆಳೆಯತೊಡಗಿತು. ಆದರೆ ಮೀನಿನಂತೆ ನುಸುಳಿ ಚಕ್ಕನೆ ಕಂಬನನ್ನು ದಡಕ್ಕೆ ಎಳೆತಂದ.

ಇನ್ನೊಂದು ದಿನ ಮರನೊಂದು ಕಂಬನ ಮೇಲೆ ಬೀಳುವುದರಲ್ಲಿತ್ತು, ಶೆಡೆಯಪ್ಪನೇ ಓಡಿ ಹೋಗಿ ಅನಾಹುತ ತಪ್ಪಿಸಿದ.

ಹೀಗೆ ಕಂಬನ ಬಾಳಿಗೆ ಶೆಡೆಯಪ್ಪ ಊರುಗೋಲಾಗಿ ನಿಂತ. ಆಟಕ್ಕೆ ಗೆಳೆಯ, ಊಟಕ್ಕೆ ಅನ್ನದಾತ, ಪಾಠಕ್ಕೆ ಗುರು, ತತ್ವಕ್ಕೆ ಋಷಿ, ದುಃಖಕ್ಕೆ ತಾಯಿ, ಕಷ್ಟಕ್ಕೆ ತಂದೆ, ಕಾಮಧೇನು ಕಲ್ಪವೃಕ್ಷವಿದ್ದಂತೆ ಶೆಡೆಯಪ್ಪ ಕಂಬನಿಗೆ, ವಳ್ಳುವರ್ ಕೊರಳ್, ಅವ್ವಯ್ಯಾರ ನುಡಿ, ಆಳ್ವಾರರ ಪಾಶುರಗಳು ಎಲ್ಲ ಕವಿತೆಗಳನ್ನು ಚೆನ್ನಾಗಿ ಅಭ್ಯಾಸಮಾಡಿದ. ಅವುಗಳ ಪ್ರಭಾವ ಅವನ ಮೇಲೂ ಆಯಿತು. ಇದರ ಅನುಭವ ಕಂಬನೂ ಕವಿತೆ ಕಟ್ಟಿದ್ದು! ಶೆಡೆಯಪ್ಪನಿಗೆ ಇವೆಲ್ಲಾ ಕಂಡು ಆನಂದವೋ ಆನಂದ.

“ಕಂಬ, ನೀನು ದೊಡ್ಡ ಕವಿ ಆಗುವೆ. ನನಗೆ ಆದಿತ್ಯರು ಹೇಳಿದ್ದರು. ಅದು ಸತ್ಯ! ನೀನು ಅರಸನ ಆಸ್ಥಾನಕ್ಕೆ ಹೋಗು. ನಿನ್ನ ಪ್ರತಿಭೆ ಪ್ರದರ್ಶಿಸು, ಖಂಡಿತ ಪುರಸ್ಕಾರ ದೊರೆಯುವುದು. ಕೀರ್ತಿಯೂ ಬರುವುದು” ಎಂದ.

ತಮಿಳಿನಲ್ಲಿ ರಾಮಾಯಣ ಬರೆಯಿರಿ

ಹೂವು ಆರಳಿತು, ಘಮಘಮ ವಾಸನೆ! ಜನರಿಗೆ ಆನಂದ! ಕಂಬ ಈಗ ಕವಿಯಾಗಿದ್ದಾನೆ. ಹತ್ತಾರು ಜನ ಇವನ ಕವಿತೆಗೆ ತಲೆತೂಗಿದರು. ಇದರ ಫಲ ಆತ ಮುಂದೆ ರಾಮಾಯಣವನ್ನೆ ಬರೆದದ್ದು.

ಕುಲೋತ್ತುಂಗ ಚೋಳ ಕಂಬನಾಡ ಅರಸ, ಸಾಹಿತ್ಯ ಹಾಗು ಸಂಗೀತ ಪ್ರೇಮಿ, ಕವಿಗಳ ಆಶ್ರಯದಾತ, ತನ್ನ ನಾಡ ತಮಿಳು ಕವಿಗಳಿಗೆ ವಿಶೇಷ ಪ್ರೋತ್ಸಾಹ! ಆತನ ಆಸ್ಥಾನ ಕವಿಗಳಿಂದ ತುಂಬಿತ್ತು. ಅದರಲ್ಲಿ ವಟ್ಟಕೂತರ್ ಎಂಬುವರು ಬಹುದೊಡ್ಡ ಕವಿ. ತಮಿಳಿನಲ್ಲಿ ಅಸಾಧಾರಣ ಪಾಂಡಿತ್ಯ.

ಕಂಬ ಒಮ್ಮೆ ಈ ಆಸ್ಥಾನಕ್ಕೆ ಬಂದ, ಅರಸನ ಮುಂದೆ ಹತ್ತಾರು ಪದ್ಯಗಳನ್ನು ಬರೆಯದೆಯೇ ಹಾಡಿದ! ಅರಸನಿಗೆ ಇವನೊಬ್ಬ ಸಮರ್ಥ ಕವಿ ಎನಿಸಿತು. ವಟ್ಟಕೂತರ್ ರನ್ನು ಕೇಳಿದ. “ತಾವು ಕಂಬರ್ ಕವಿತೆಯ ಬಗ್ಗೆ ಏನನ್ನುವಿರಿ?”

ಕಂಬ ನೀನು ದೊಡ್ಡ ಕವಿ ಆಗುವೆ

ವಟ್ಟಕೂತರ್, “ಇವನೊಬ್ಬ ಸಮರ್ಥ ಪ್ರತಿಸ್ಪರ್ಧಿ ನನಗೆ.” ಇಷ್ಟೇ ಹೇಳಿ ಕುಳಿತುಬಿಟ್ಟರು, ಅರಸನೂ ಅವರ ಮಾತಿಗೆ ತಲೆದೂಗಿದ.

ಕುಲೋತ್ತುಂಗನಿಗೆ ಒಂದು ಆಸೆ. ರಾಮಾಯಣವನ್ನು ತಮಿಳಿನಲ್ಲಿ ಬರೆಸಬೇಕು, ಅದು ಸಂಸ್ಕೃತದ ತರ್ಜುಮೆ ಆಗಬಾರದು. ಕಾಲಕ್ಕೆ ತಕ್ಕಂತೆ ಸುಧಾರಿಸಲೂಬೇಕು, ಛಂದಸ್ಸು ವೃತ್ತಗಳು ವಿವಿಧವಾಗಿರಬೇಕು, ಹೀಗೆ ಬರೆಯುವವರಾರು? ಅದಕ್ಕೆ ಕಂಬನೇ ಸಮರ್ಥ ಎಂದು ಭಾವಿಸಿದ. ತನ್ನ ಮಡದಿಗೂ ವಿಚಾರ ತಿಳಿಸಿದ. ಆಕೆ ಹೇಳಿದಳು, “ಅಯ್ಯೋ! ನಿಮಗೊಂದು ಹುಚ್ಚು! ರಾಮಾಯಣವೆಂದರೆ ಸಾಮಾನ್ಯವೆ? ಋಷಿ ಆದವನು ಕವಿ ಆಗಬಲ್ಲ, ಕವಿ ಕಾವ್ಯವನ್ನು ಬರೆಯಬಲ್ಲ. ತಿರುವಳ್ಳುವರ್ ದೊಡ್ಡ ಕವಿ. ಅವರು ತಿರುಕ್ಕುರಳ್ ಬರೆದರು…… ಇದು ನಿಮ್ಮ ಕಂಬನಿಗೆ ಸಾಧ್ಯವೆ? ಒಂದು ವೇಳೆ ಹಾಗೆ ಬರೆದಲ್ಲಿ ನಮ್ಮ ವಟ್ಟಕೂತರ್ ಬರೆಯಬಲ್ಲರು”

ವಟ್ಟಕೂತರ್ ರಾಣಿಯ ಸಂಬಂಧಿ, ರಾಜನಿಗೆ ಮಡದಿಯ ವ್ಯಾಮೋಹ ಗೊತ್ತು. ಜೊತೆಗೆ ತನ್ನ ಕಲ್ಪನೆಯ ರಾಮಾಯಣ ವಟ್ಟಕೂತರ್ ಬರೆಯಲಾರರು ಎಂಬುದೂ ತಿಳಿದಿತ್ತು. ಇದಕ್ಕಾಗಿ ಆತ ಒಂದು ಉಪಾಯ ಹೂಡಿದ, ಮಂತ್ರಿಯನ್ನು ಕರೆದು, “ನಾಳೆ ಆಸ್ಥಾನದಲ್ಲಿ ಒಂದು ಕವಿಗೋಷ್ಠಿಯನ್ನು ಏರ್ಪಡಿಸು. ಇದರಲ್ಲಿ ಯಾರು ಬೇಕಾದರೂ ಭಾಗವಹಿಸಲಿ. ಕವಿಗಳಿಗೆ ಯೋಗ್ಯವಾದ ಪುರಸ್ಕಾರ ಉಂಟು. ಡಂಗೂರದ ಮೂಲಕ ಎಲ್ಲೆಡೆ ಇದನ್ನು ಸಾರಿಸು.” ಮಂತ್ರಿ ಹಾಗೇ ಮಾಡಿದ.

ಇಂದು ಕವಿಗೋಷ್ಠಿ. ಕುಲೋತ್ತುಂಗ ಚೋಳ ಸಿಂಹಾಸನದ ಮೇಲೆ ಮಂಡಿಸಿದ್ದಾನೆ. ಅನೇಕ ಕವಿಗಳು ಬಂದಿದ್ದಾರೆ. ಅಭಿಮಾನಿಗಳ ಲೆಕ್ಕವಿಲ್ಲ, ಕವಿಗಳು ಕವಿತೆ ಕಟ್ಟಿ ಹಾಡಿದರು, ಜನರು ಕೇಳಿ ಸಂತೋಷಿಸಿದರು. ಬಿಸಿಬಿಸಿ ಚರ್ಚೆ, ವಾದ ವಿವಾದ ನಡೆಯಿತು. ಅರಸ ಕೊನೆಯಲ್ಲಿ ಹೇಳಿದ “ಜನರನ್ನು ಸೃಷ್ಟಿಸುವ ಬ್ರಹ್ಮ ಕಾವ್ಯವನ್ನು ಸೃಷ್ಟಿಸುವ ಕವಿ! ಜನಕ್ಕೆ ಅಳಿವುಂಟು. ಅಳಿವಿಲ್ಲದ್ದು ಕಾವ್ಯ. ಕಾವ್ಯ ಅಮರ. ಅದ್ದರಿಂದ ನಿಮ್ಮಲ್ಲಿ ಯಾರಾದರೂ ಸರಿಯೆ, ತಮಿಳಿನಲ್ಲಿ ರಾಮಾಯಣ ಬರೆಯಬೇಕು. ಪಂಡಿತರು ತಲೆದೂಗಬೇಕು. ಪಾಮರರಿಗೆ ಆನಂದ ಆಗಬೇಕು. ಇದೇ ನನ್ನ ಆಸೆ! ಇದೋ, ರಚಿಸುವ ನಿಮಗೆ ಆರು ತಿಂಗಳ ಕಾಲಾವಕಾಶ ಇತ್ತಿದ್ದೇನೆ. ಯಾರು ಈ ಆಸೆಯನ್ನು ಈಡೇರಿಸುವರೋ ಅವರೇ ನನ್ನ ಆಸ್ಥಾನ ಕವಿ!”

ಕಾಳಿಯ ಅನುಗ್ರಹ

ದಿನಗಳ ಮೇಲೆ ದಿನ ಉರುಳಿದವು. ಅರಸ ಕೇಳುತ್ತಲೇ ಇದ್ದಃ “ರಾಮಾಯಣ ಎಲ್ಲಿಗೆ ಬಂತು?” ಉತ್ತರ ಯಾರಿಂದಲೂ ಇಲ್ಲ. ಅರಸನಿಗೆ ನಿರಾಸೆ ಕವಿಯಿತು. ಕೊನೆಗೊಂದು ದಿನ ವಟ್ಟಕೂತರನ್ನೇ ಕೇಳಿದಃ “ಸ್ವಾಮಿ ತಮ್ಮ ಕಥೆ ಎಲ್ಲಿಗೆ ಬಂತು?” ವಟ್ಟಕೂತರ್ ಸಡಗರದಿಂದ ಎದ್ದರು. ಕೈಯಲ್ಲಿ ತಾಳೇಗರಿ ಕಡತ! ಅದನ್ನು ಬಿಚ್ಚಿ ತಿಂಗಳಿಗೆ ಒಂದರಂತೆ ಆರು ಕಾಂಡಗಳನ್ನು ಬರೆದಿದ್ದೇನೆ” ಎಂದು ಹೇಳಿ ಒಂದು ಪದ್ಯ ಓದಿದರು.

ಎಲ್ಲರಿಗೂ ಆಶ್ಚರ್ಯ! ರಾಜ ತಲೆದೂಗಿದ, ಆನಂತರ ಕಂಬನ ಕಡೆಗೆ ತಿರುಗಿದ. ” ನಿಮ್ಮ ರಾಮಾಯಣ ಎಲ್ಲಿಯವರೆಗೆ ಬಂದಿದೆ?”

ಕಂಬ ಕಕ್ಕಾಬಿಕ್ಕಿಯಾದ, ಇನ್ನೂ ಕಾವ್ಯ ಆರಂಬಿಸಿಯೇ ಇರಲಿಲ್ಲ, ಕೂಡಲೇ ತನ್ನ ಕಾಳಿಯನ್ನೇ ಧ್ಯಾನಿಸಿದ. ಆಕೆ ಕಣ್ಣಿದಿರು ಬಂದು, “ಕಂಬ, ಹೆದರಬೇಡ, ನಿನಗೆ ನನ್ನ ಅನುಗ್ರಹವಿದೆ, ನೀನು ’ಸೇತುಬಂಧನದವರೆಗೆ ಬರೆದಿದ್ದೇನೆ’ ಎಂದು ಹೇಳು, ನಾನು ನಿನ್ನ ಸಹಾಯಕ್ಕೆ ಸರಸ್ವತಿಯನ್ನೇ ಕಳುಹಿಸುವೆ” ಎಂದಂತೆ ಭಾಸವಾಯಿತು.

ಕಂಬ ಹೇಳಿದಃ “ಮಹಾರಾಜ, ಶ್ರೀರಾಮನು ಸಮುದ್ರದ ದಂಡೆಯ ಮೇಲೆ ಇದ್ದಾನೆ. ವಾನರ ಸಮೂಹ ಹೇಳತೀರದು! ತಲೆಯ ಮೇಲೆ ಹೊತ್ತ ಕಲ್ಲಿನ ರಾಶಿ ನೋಡಿದರೆ ಬೆಟ್ಟಗಳೇ ನಡೆದುಬರುವಂತಿತ್ತು. ಆ ಹೊತ್ತು ತಂದ ಕಲ್ಲನ್ನು ಸಮುದ್ರಕ್ಕೆ ಹಾಕಿದವು. ಆ ರಭಸಕ್ಕೆ ಸಮುದ್ರದ ನೀರು ’ಜಿಲ್’ ಎಂದು ಗಗನವನ್ನೇ ಮುಟ್ಟಿತು. ಇದೋ ಆ ಪದ್ಯವನ್ನು ಕೇಳು” ಎಂದು ಸೊಗಸಾಗಿ ಹಾಡಿದ.

ಕಂಬನ ಕವಿತೆಗೆ ಅರಸ ತಲೆದೂಗಿದ. ಸಭೆ ಚಪ್ಪಾಳೆ ತಟ್ಟಿ ಅಭಿನಂದಿಸಿತು. ಆದರೆ ವಟ್ಟಕೂತರ್ ಮಾತ್ರ ನಿರ್ಲಿಪ್ತರು. ಅರಸ ಅವರನ್ನು ಕೇಳಿದ, “ಕವಿಗಳೆ, ನೀವು ಏನು ಹೇಳುತ್ತೀರಿ?”

ವಟ್ಟಕೂತರ್, “ಮಹಾಪ್ರಭು, ಪದ್ಯದಲ್ಲಿ ದೋಷ ಇದೆ. ಈ ಸಾಲಿನಲ್ಲಿ ’ತುಮಿ’ ಎಂದು ಬಂದಿದೆಃ ಇದಕ್ಕೆ ಅರ್ಥವೇನು? ತಮಿಳಿನ ಶಬ್ದಭಂಡಾರದಲ್ಲಿ ಈ ಪದವೇ ಇಲ್ಲ, ಇದು ತಪ್ಪು ” ಎಂದು ಖಂಡತುಂಡವಾಗಿ ಹೇಳಿಟ್ಟರ. ಇದು ಕಂಬನ ಅಭಿಮಾನವನ್ನೇ ಕೆಣಕಿದಂತೆ ಆಯಿತು.”ನನ್ನ ಕವಿತೆಯಲ್ಲಿ ದೋಷ ಬರಲು ಸಾಧ್ಯವೇ ಇಲ್ಲ. ’ತುಮಿ’ ತಮಿಳಿನ ಪದವೇ” ಎಂದ. ಕವಿಗಳಲ್ಲೇ ಜಿಜ್ಞಾಸೆಗೆ ಆರಂಭ. ಸಭೆ ಗದ್ದಲದಲ್ಲಿ ಬಿತ್ತು. ವಾದಗಳು ಎದ್ದವು. ರಾಜ ಇದನ್ನು ಗಮನಿಸಿದ. ಸಭೆ ಮುಂದೂಡಿ, ” ಇದರ ನಿಷ್ಕರ್ಷೆ ನಾಳೆಯಾಗಲಿ ಎಂದ.”

ಕಂಬರ್ ಗೆದ್ದರು

ತುಮಿ…. ತುಮಿ…. ತುಮಿ…. ತುಮಿ.

ಇದು ಕಂಬನ ತಲೆಯನ್ನು ಕೊರೆಯತೊಡಗಿತು. ಊಟವಿಲ್ಲ, ನೀರು ಬೇಕಿಲ್ಲ, ಅವನು ಕುಳಿತಲ್ಲಿಂದ ಕದಲಲಿಲ್ಲ. ಎಲ್ಲ ಕವಿಗಳ ಪುಸ್ತಕಗಳನ್ನು ಹರಡಿಕೊಂಡ, ನೋಡಿದ, ಪರೀಕ್ಷಿಸಿದ, ವಟ್ಟಕೂತರ್ ಹೇಳಿದ್ದರಲ್ಲಿ ಸತ್ಯವಿತ್ತು. ಯಾವ ಕವಿಯೂ ’ತುಮಿ’ ಪದವನ್ನು ಉಪಯೋಗಿಸಿರಲಿಲ್ಲ, “ನಾನಂತೂ ನಿರಪರಾಧಿ, ಕವಿತೆ ನಾ ಕಟ್ಟಲಿಲ್ಲ, ಆ ದೇವಿಯೇ ನನ್ನ ನಾಲಿಗೆಯಲ್ಲಿ ನಲಿದಳು, ಹಾಗಾದರೆ ಈ ತಪ್ಪು ಯಾರದು?’

ಶೆಡೆಯಪ್ಪ ಹೇಳಿದಃ “ಕಂಬ ನೀನು ಚಿಂತಿಸಬೇಡ. ಇದೊಂದು ದೇವಿಯ ಶೋಧನೆ, ಮಾನ-ಅಪಮಾನಗಳನ್ನು ಅವಳಿಗೇ ಅರ್ಪಿಸು ಅವಳೇ ನಿನ್ನನ್ನು ರಕ್ಷಿಸುವಳು. ನೀನು ಎಡೆಬಿಡದೆ ಅವಳನ್ನೇ ಧ್ಯಾನಿಸು.”

ಕಂಬರ್ ಇಡೀ ರಾತ್ರಿ ಹಾಡಿದ ಹಾಡು ನೂರಾದರೂ ಆಕೆ ಮಾತ್ರ ಒಲಿಯಲಿಲ್ಲ. ಬಿಕ್ಕಿ ಬಿಕ್ಕಿ ಅತ್ತ. ದುಗುಡದಲ್ಲೇ ಜೊಂಪುಹತ್ತಿತು ಕಂಬನಿಗೆ.

ಗೌಡರ ಮನೆಗೆ ಸರಸ್ವತಿ ಬಂದಿದ್ದಾಳೆ! ಮನೆಯ ಮುಂದೆ ಹತ್ತಾರು ಕರೆವ ಹಸುಗಳು, ಹೆಪ್ಪು ಹಾಕಿದ ಮಡಿಕೆಗಳನ್ನು ಉದ್ದಕ್ಕೂ ಇಟ್ಟಿದ್ದಾರೆ. ಮೊಸರು ಕಡೆಯುತ್ತಿದ್ದಂತೆ ಎಲ್ಲದ್ದರೋ ಮಕ್ಕಳು ಓಡಿಬಂದು ’ಅಮ್ಮ ಬೆಣ್ಣೆ….ಬೆಣ್ಣೆ….ಅಮ್ಮ ಬೆಣ್ಣೆ…. ಎಂದು ಕಾಡತೊಡಗಿದವು. ಕಂಬ ಈ ದೃಶ್ಯವನ್ನು ಸರಸ್ವತಿ ಜತೆಗೂಡಿ ಎವೆಯಿಕ್ಕದೆ ನೋಡುತ್ತಿದ್ದ. ಅವನಿಗೆ ನವನೀತ ಕೃಷ್ಣನ ನೆನಪು ಬಂತು!

ಸರಸ್ವತಿ ಬೊಟ್ಟು ಮಾಡಿ ಹೇಳಿದಳು, “ಅದೋ ನೋಡು ಆ ಕಿಶೋರನನ್ನು! ತಾಯಿಯ ಸೆರಗಿಗೆ ಜೋತು ಬಿದ್ದಿದ್ದಾನೆ. ’ಅಮ್ಮ ವೆಣ್ಣೆ ಕುಡೇ…(ಅಮ್ಮ ಬೆಣ್ಣೆ ಕೊಡೇ) ಎಂಗೆ ವಳಿವಿಡು. ಮೋರು ತುಮಿ ತೆರಿಕ್ಕಿರದು……. (ಮಜ್ಜಿಗೆ ಚಿಮ್ಮುತ್ತದೆ)”

ಕಂಬ ಕನವರಿಸಿದ, ಮೋರು ತುಮಿಕ್ಕಿರದು…… ಮೋರು ತುಮಿಕ್ಕಿರದು, ಶೆಡೆಯಪ್ಪ ಬಡಿದೆಬ್ಬಿಸಿದ. “ಕಂಬ ಏನಿದು ಕೂಗು! ಏನಾದರೂ ಕನಸು ಕಂಡೆಯಾ?” ” ಹೌದು ಅದ್ಭುತವಾದ ಕನಸನ್ನು ಕುಂಡೆ….” ಎಂದವನೆ ಕಂಡದ್ದನ್ನು ಹೇಳಿದ ಶೆಡೆಯಪ್ಪನಿಗೆ.

ಕಂಬ ಗೆದ್ದ. ವಟ್ಟಕೂತರ್ ಸೋತರು, ರಾಜನಿಗೂ ಸಂತೋಷವಾಗಿತ್ತು. ಆದರೂ ಕಂಬನಿಗೆ ಚಿಂತೆ ಮಾತ್ರ ತಪ್ಪಲಿಲ್ಲ. ಕಾರಣ ರಾಮಾಯಣವನ್ನು ಬರೆಯಲು ನಿಜಕ್ಕೂ ಇನ್ನೂ ಆರಂಭಿಸಿಯೇ ಇರಲಿಲ್ಲ.

ಉಡುಗೊರೆ ಕೊಡು

ಇಂದು ಶೆಡೆಯಪ್ಪನ ಹುಟ್ಟಿದ ಹಬ್ಬ! ಜನ ಅವನ ಮನೆ ತುಂಬಿದ್ದರು. ಉಡುಗೊರೆಗಳಿಗೆ ಲೆಕ್ಕವೇ ಇಲ್ಲ. ಸಂಜೆಯವರೆಗೂ ಸಡಗರವೋ ಸಡಗರ. ಶೆಡೆಯಪ್ಪ ಕಂಬರ್ ನನ್ನು ಕರೆದ, “ನನ್ನ ಹುಟ್ಟುಹಬ್ಬಕ್ಕೆ ಎಲ್ಲಿ ನಿನ್ನ ಉಡುಗೊರೆ?” ಎಂದ. ಕಂಬರ್ ಕಕ್ಕಾಬಿಕ್ಕಿಯಾದ! ಶೆಡೆಯಪ್ಪ ಮುಂದುವರೆಸಿದ, ” ನಿನ್ನಲ್ಲಿ ಅಮೂಲ್ಯ ರತ್ನವಿದೆ. ಅದನ್ನು ನನಗೆ ಕೊಟ್ಟುಬಿಡು.”

ಕಂಬ ಅಸಹಾಯಕನಾಗಿ, “ದಯವಿಟ್ಟು ಬಾಯಿ ಬಿಟ್ಟು ಕೇಳಿಬಿಡಿ. ನನಗೆ ತಿಳಿದಂತೆ ಏನೂ ಇಲ್ಲ. ಇದ್ದ ವಸ್ತು ನಿಮ್ಮದೆ” ಎಂದ.

“ಹಾಗಾದರೆ ಕೊಡುವೆನೆಂದು ಪ್ರಮಾಣಮಾಡು”

ರಾಮಾಯಣದ ಕಥೆಯನ್ನು ತಮಿಳಿನಲ್ಲಿ ಹೇಳಿದ ಮಹಾಕವಿ

“ನನ್ನಾಣೆ ಇದೋ ಕೊಟ್ಟುಬಿಟ್ಟೆ!”

ಕೈಮೇಲೆ ಕೈ ಇಟ್ಟರು. ಕೂಡಲೆ ಶೆಡೆಯಪ್ಪ ಹೇಳಿದ, “ನೋಡು, ನಿನ್ನ ಹೃದಯಲ್ಲಿ ರಾಮನಿದ್ದಾನೆ. ಅವನ ಚರಿತ್ರೆಯನ್ನೇ ನನಗೆ ಕೊಡು. ಇದೇ ನನ್ನ ಆಸೆ! ನಾನು ಇನ್ನು ಹೆಚ್ಚು ದಿನ ಬದುಕಲಾರೆ. ಸಾವು ಬರುವುದರೊಳಗೆ ನಿನ್ನ ರಾಮಾಯಣ ಕೇಳಬೇಕು. ಇದನ್ನು ಈಡೇರಿಸುವೆಯಾ?”

ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಶೆಡೆಯಪ್ಪ ಕಣ್ಣುಮುಚ್ಚಿಕೊಂಡ. ಕಂಬನು ರಾಮಾಯಣ ಬರೆದ. ಶೆಡೆಯಪ್ಪ ಸಾವನ್ನಪ್ಪಿದ್ದು ಅನಿರೀಕ್ಷಿತ. ಅಷ್ಟೇ ಅನಿರೀಕ್ಷಿತ ಕಂಬ ರಾಮಾಯಣ ಬರೆದದ್ದು. ದಿನಕ್ಕೆ ಏಳುನೂರು ಶ್ಲೋಕದಂತೆ ಕೇವಲ ಎರಡು ವಾರಗಳಲ್ಲಿ ಕೃತಿ ಮುಗಿಸಿದ. ಅದಕ್ಕೆ ’ರಾಮಾವತಾರ’ ಎಂದು ಹೆಸರಿಟ್ಟ.

ಆದರೆ ಜನ “ಕಂಬ ರಾಮಾಯಣ” ಎಂದೇ ಕರೆದರು. ಆದರೇನು? ಕಂಬರ ರಾಮಾಯಣ. ಶೆಡೆಯಪ್ಪ ಕೇಳಿದನೆ? ಆತ ಜಿವಿಸಿದ್ದಾಗಲೇ ಕೃತಿ ಮುಗಿಯಿತೆ? ತಿಳಿಯದು.

ಅಂತೂ ಕಂಬ ತನ್ನ ಕೃತಿಯಲ್ಲಿ ಶೆಡೆಯಪ್ಪ ಮೊದಲಿಯಾರ್ ಅವರ ಸ್ಮರಣೆ ಅನೇಕ ಕಡೆ ಮಾಡಿದ್ದಾನೆ. ಕೆಲವರು ಅದನ್ನು ಗೇಲಿ ಮಾಡಿದ್ದೂ ಉಂಟು. ಏನೇ ಇರಲಿ. ಶೆಡೆಯಪ್ಪನವರ ಬಗ್ಗೆ ಕಂಬನಿಗಿದ್ದ ಗೌರವ ಪ್ರೀತಿ ಯಾರೂ ಪ್ರಶ್ನಿಸುವಂತಿಲ್ಲ. ಆದ್ದರಿಂದಲೇ ರಾಮಾಯಣ ಬರೆದದ್ದು ತಿರುವಣ್ಣೆನಲ್ಲೂರ್ ನಲ್ಲಿ. ಅದು ಶೆಡೆಯಪ್ಪನವರ ಜನ್ಮ ಭೂಮಿ.

ವಟ್ಟಕೂತರ ಗುರುದಕ್ಷಿಣೆ

ಕಂಬನಿಗೊಂದು ಆಸೆ! ತನ್ನ ಕೃತಿಯನ್ನು ವಟ್ಟಕೂತರ್ ಅವರಿಗೆ ತೋರಿಸಬೇಕು. ಅವರ ಅಭಿಪ್ರಾಯ ಪಡೆಯಬೇಕು. ಅವರು ಉತ್ತಮ ವಿದ್ವಾಂಸರು. ಅವರು ತನ್ನ ಕೃತಿ ಮೆಚ್ಚಬೇಕು.

ಇಂದು ವಟ್ಟಕೂತರ್ ಅವರ ಮನೆಗೆ ಕಂಬ ಬಂದಿದ್ದಾನೆ. ಪ್ರವಚನಕ್ಕೆ ಆರಂಭಿಸಿದ. ಪ್ರವಚನ ಅನೇಕ ದಿನಗಳು ನಡೆದಿವೆ. ಅವನ ಕೃತಿಯಲ್ಲಿ ಹೊಸಹೊಸ ವಿಚಾರ ಚಿಮ್ಮಿಬಂದಿತ್ತು.

ಮಂಥರೆಗೆ ರಾಮನಮೇಲೆ ಕೋಪ ಏಕೆ? ರಾಮ ಚಿಕ್ಕಂದಿನಲ್ಲಿ ಮಂಥರೆಯ ಸೊಂಟಕ್ಕೆ ಹೆಂಟೆಯಿಂದ ಹೊಡೆದಿದ್ದ!

ಸೀತಾರಾಮರ ಕಲ್ಯಾಣ ಆಯಿತು. ವಿಶ್ವಾಮಿತ್ರ ಆಶೀರ್ವಾದ ಮಾಡಿ ಹಿಮಾಲಯಕ್ಕೆ ಹೊರಟುಬಿಟ್ಟರು.

ದಶರಥ ಸಾಯುವಾಗ ಭರತನಿಂದ ನನ್ನ ಉತ್ರರಕ್ರಿಯೆ ಮಾಡಿಸಬೇಡಿ ಅಂದ. ಆದ್ದರಿಂದ ವಸಿಷ್ಠರು ಶತೃಘ್ನನಿಂದ ಮಾಡಿಸಿದರು!

ಲಕ್ಷ್ಮಣ ಶೂರ್ಪನಿಖಿ ಕಿವಿ ಮೂಗು ಕತ್ತರಿಸಿದ್ದು ಏಕೆ? ಅವಳು ಸೀತೆಯನ್ನು ತಿಂದುಬಿಡಲು ’ಆ ಎಂದು ಹೋದಳು, ಆದ್ದರಿಂದ.

ರಾವಣ ಪರ್ಣಕುಟಿ ಸಹಿತ ಸೀತೆಯನ್ನು ಎತ್ತಿಕೊಂಡು ಹೋದ. ಕಾರಣ ಸೀತೆಯನ್ನು ಮುಟ್ಟಲು ಅವನಿಗೆ ಸಾಮರ್ಥ್ಯವಿಲ್ಲ! ಪತಿವ್ರತೆ ಆ ತಾಯಿ.

ವಾಲಿಯ ವಧೆ ಆಯಿತು.! ತಾರೆ ವಿಧವೆ ಆದಳು. ಸುಗ್ರೀವ ಅತ್ತಿಗೆಯನ್ನು ತಾಯಿಯಂತೆ ನೋಡಿಕೊಂಡ.

ರಾವಣ ಮಡಿದ. ಆ ಶೋಕದಲ್ಲಿ ಮಂಡೋದರಿಯು ಮಡಿದಳು, ಆ ಎರಡೂ ಶವಗಳನ್ನು ಒಟ್ಟಿಗೆ ಚಿತೆಗೇರಿಸಿದರು.

ಪಟ್ಟಾಭಿಷೇಕದ ಕಿರೀಟ! ಅದನ್ನು ತಯಾರು ಮಾಡಿದ್ದು ಯಾರು? ತಿರುವಣ್ಣೈನಲ್ಲೂರ್ ಶೆಡೆಯಪ್ಪ ಮೊದಲಿಯಾರ್! ಅದನ್ನು ವಸಿಷ್ಠರು ರಾಮನ ತಲೆಯ ಮೇಲೆ ಇಟ್ಟರು!

ಮಾರುತಿ ಸಂಜೀವಿನಿ ಮೂಲಿಕೆ ತಂದ ಎಲ್ಲಿಂದ? ನೀಲಗಿರಿ ಬೆಟ್ಟದಿಂದ.

ವಟ್ಟಕೂತರ್ ಅಚ್ಚರಿಯಿಂದ ಕೇಳುತ್ತಿದ್ದಾರೆ. ಒಂದೊಂದೂ ಅಚ್ಚ ಹೊಸ ವಿಚಾರ. ಗುರುವಾದ ವಾಲ್ಮೀಕಿಗೇ ಭಿನ್ನವಾದ ನಿರೂಪಣೆ. ಇದು ಅವರನ್ನು ದಂಗುಬಡಿಸಿತು.

’ಬೆಂಕೆಗೆ ಸಿಕ್ಕಿದ ಮೇಣ ಕರಗುವಂತೆ ಎಲ್ಲರ ಹೃದಯ ಕರಗಿಹೋಯಿತು.

’ವಿಷ್ಣು ಲಕ್ಷ್ಮಿಯೊಡನೆ ಸೇರಿದಂತೆ, ರಾಮ ಸೀತೆಯನ್ನು ಸೇರಿದ!’

ರಾಕ್ಷಸರ ಪಾಪದ ಫಲ ಮಂಥರೆ ಮಾತು ಕೈಕೆಗೆ ಪಥ್ಯವಾಯಿತು..’

’ತಾವರೆಯಲ್ಲಿ ಕುಳಿತ ಮಹಾಲಕ್ಷ್ಮಿಯಂತೆ ಮಿಥಿಲಾಪಟ್ಟಣವಿತ್ತು.’

’…….ರಾಜ್ಯಕ್ಕೆ ಆಶಿಸುವುದು ಎಂಜಲು ತಿಂದಂತೆ’

’ಸಿಡಿಲಿಗೆ ಸಿಕ್ಕಿದ ಮರದಂತೆ ಭರತ ಕೆಳಕ್ಕೆ ಉರಳಿದ.’

ಹೀಗೆ ಹತ್ತುಸಾವಿರದ ಐನೂರ ಅರವನ್ನೊಂಬತ್ತು ಪದ್ಯ ಹಾಡಿದ ಕಂಬ. ಅದೂ ನಾಲ್ಕು ಸಾಲುಗಳು. ವಿವಿಧ ವೃತ್ತಗಳು. ವಿಭಿನ್ನ ಛಂದಸ್ಸು. ರಾಮನನ್ನು ದೇವರೆಂದೇ ಭಾವಿಸಿದ್ದ. ಈತನ ಕಾವ್ಯ ಭಕ್ತಿಕಾವ್ಯ. ನೀತಿ ನುಡಿಕಟ್ಟು ವರ್ಣನೆಗಳೂ ಇತ್ತು. ಒಟ್ಟಿನಲ್ಲಿ ಅದ್ಭುತವಾದ ಕೃತಿ.

ವಟ್ಟಕೂತರ್ ಎಲ್ಲ ಕೇಳಿ ಮನದಲ್ಲೇ ಹೋಲಿಸಿದರು. ನದಿಯ ಮುಂದೆ ಎಲ್ಲಿಯ ಬಾವಿ, ಕಂಬರ್ ಹಿಮಾಲಯ ನಾನು ಸಣ್ಣ ಬೆಟ್ಟ ಅನ್ನಿಸಿತು. ಕೂಡಲೇ ಹೇಳಿದರು. “ಕಂಬ, ನಿನ್ನ ಕೃತಿ ಕೇಳಿದೆ. ನಾಳೆ ಬಾ ಗುರುದಕ್ಷಿಣೆ ನೀಡುವೆ.”

ಮಾರನೇ ದಿನ ಕಂಬ ಬಂದ. ಮನೆ ತುಂಬ ಹೊಗೆ. ಇವನಿಗೆ ಆಶ್ಚರ್ಯ. ವಟ್ಟಕೂತರ್ ಹೋಮ ಮಾಡುತ್ತಿದ್ದಾರೆ! ತುಪ್ಪದಿಂದಲ್ಲ, ಒಂದೊಂದೇ ಓಲೆ ಗರಿಗಳಿಂದ! ಕಂಬ ಕಕ್ಕಾಬಿಕ್ಕಿಯಾದ! ದಿಢೀರನೆ ಹೋಮ ಮಾಡುತ್ತಿದ್ದ ಕೈಯನ್ನು ತಡೆದ. ಉಳಿದಿದ್ದು ಉತ್ತರ ಕಾಂಡ ಮಾತ್ರ. ಅದಕ್ಕೆ ಮುಂಚೆ ತಾವು ಬರೆದ ರಾಮಾಯಣವನ್ನು ವಟ್ಟಕೂತರ್ ಅಗ್ನಿಗೆ ಅರ್ಪಿಸಿದ್ದರು. ’ಕಂಬ ಇದೇ ನಿನಗೆ ನನ್ನ ಗುರುದಕ್ಷಿಣೆ’ ಅಂದರು.

“ಸ್ವಾಮೀ! ಹೀಗೆ ಮಾಡಬಾರದಿತ್ತು. ತಮ್ಮ ಕೃತಿ ಸಾಮಾನ್ಯವಲ್ಲ; ಇದೋ ನಾನು ಉಳಿದ ನಿಮ್ಮ ಕೃತಿಯನ್ನೇ ನನ್ನ ಕೃತಿಗೆ ಸೇರಿಸುವೆ” ಎಂದು ವಟ್ಟಕೂತರ್ ಬರೆದ ಕೃತಿಯನ್ನು ಕಂಬ ಸೇರಿಸಿಕೊಂಡ. ಈಗಲೂ ಅದನ್ನು ಸೇರಿಸಿಯೇ ’ಕಂಬ ರಾಮಾಯಣ’ ಎಂದು ಕರೆಯುವರು.

ಚಿದಂಬರದಲ್ಲಿ

ಚಿದಂಬರ! ದೊಡ್ಡಕ್ಷೇತ್ರ. ಇಂದೂ ಅಷ್ಟೆ. ಹಿಂದೆಯೂ ಅಷ್ಟೆ. ಕಂಬ ಇಲ್ಲಿಗೆ ಬಂದಿದ್ದಾನೆ. ಕಾರಣ? ವಟ್ಟಕೂತರ್ ಹೇಳಿದರು; “ನಿನ್ನ ಕೃತಿ ಅದ್ಭುತವಾದುದು! ಆದರೆ ಇದನ್ನು ಪುರಸ್ಕರಿಸಲು ಚಿದಂಬರಕ್ಕೆ ಹೋಗು, ಅಲ್ಲಿ ಆರು ಸಾವಿರ ವಿದ್ವಾಂಸರಿದ್ದಾರೆ. ಅವರೆಲ್ಲ ಅಪ್ರತಿಮ ಪಂಡಿತರು. ಅವರು ನಿನ್ನ ಕೃತಿಯನ್ನು ಕೇಳಿ ಒಪ್ಪಬೇಕು. ಆಗ ಇದೊಂದು ಮೇರುಕೃತಿಯ ಸಾಲಿಗೆ ಸೇರುವುದು. ತಡಮಾಡಬೇಡ. ನನಗೆ ಪೂರ್ಣ ನಂಬಿಕೆ ಇದೆ. ಖಂಡಿತಾ ಹೋಗಿ ಬಾ.”

ಕಂಬ ಚಿದಂಬರಕ್ಕೆ ಬಂದ. ಅನೇಕ ವಿದ್ವಾಂಸರನ್ನು ಕಂಡ. ಬಂದ ವಿಚಾರ ತಿಳಿಸಿದ. ಆದರೆ ಎಲ್ಲರನ್ನೂ ಕಲೆಹಾಕುವುದು ಹೇಗೆ? ಕಪ್ಪೆಗಳನ್ನು ತಕ್ಕಡಿಗೆ ಹಾಕಿದಂತೆ ಬಹಳ ಕಷ್ಟ. ಇವ ಬಂದರೆ ಅವ ಹೊರಟ. ಅವ ಬಂದರೆ ಇವನಿಲ್ಲ. ತಿಂಗಳಾದರೂ ತನ್ನ ಕೆಲಸ ಕೈಗೂಡಲಿಲ್ಲ, “ಈ ಆರು ಸಾವಿರ ಜನ ಸೇರುವುದು ಹೇಗೆ? ಇವರೆಲ್ಲ ಕೇಳುವುದೆಂತು? ಇದು ಸಾಧ್ಯವೆ? ಇವರ ಒಪ್ಪಿಗೆ ಮುದ್ರೆ ಬೀಳದೆ ಕೃತಿಗೆ ಬೆಲೆಯಿಲ್ಲ. ಹಾಗಾದರೆ ನನ್ನ ಶ್ರಮ ವ್ಯರ್ಥವೇ? “ರಾಮ… ರಾಮಾ…” ಎನ್ನುತ್ತ ಹಾಗೇ ಮಲಗಿದ.

ಕರುಳು ಕತ್ತರಿಸುವ ರೋದನ. ಗೊಳೋ ಎಂದು ಅಳುತ್ತಿದ್ದಾರೆ. ಒಬ್ಬೊಬ್ಬರೆ ಜನ ಬರಹತ್ತಿದರು. ಒಬ್ಬ ಯುವಕ ಹಾವುಕಡಿದು ಸತ್ತಿದ್ದಾನೆ! ತಂದೆತಾಯಿಯ ರೋದನ ಹೇಳತೀರದು. ಬಂದ ಜನ ಮುಂದಿನ ಕಾರ್ಯಕ್ಕೆ ವ್ಯವಸ್ಥೆ ಮಾಡತ್ತಿದ್ದಾರೆ.

ಗದ್ದಲಕ್ಕೆ ಕಂಬ ಎದ್ದು ಬಂದ. ಜನರನ್ನು ಕಂಡ. ಅಲ್ಲಿ ಆರು ಸಾವಿರ ಜನರೂ ಸೇರಿದ್ದಾರೆ. ಕಂಬ ಅಡ್ಡ ಬಿದ್ದು ಹೇಳಿದ; “ಸ್ವಾಮೀ! ನಾನು ರಾಮಾಯಣ ಬರೆದಿದ್ದೇನೆ. ಇದೋ ನೋಡಿ? ಲಕ್ಷ್ಮಣ ನಾಗಪಾಶದಲ್ಲಿ ಕಟ್ಟುಬಿದ್ದಿದ್ದಾನೆ. ನನಗೆ ನೋಡಿ ಬಹಳ ವ್ಯಥೆ ಆಯಿತು. ನಾನು ಆಗ ಗರುಡಸ್ತುತಿ ಮಾಡಿದೆ. ಗರುಡ ಓಡಿ ಬಂದ. ಲಕ್ಷ್ಮಣನ ಮೇಲೆ ಅವನ ನೆರಳು ಬಿತ್ತು ಅಷ್ಟೇ. ಸರ್ಪಗಳು ಚೆಲ್ಲಾಪಿಲ್ಲಿಯಾಗಿ ಓಡಿದವು. ಲಕ್ಷ್ಮಣ ಎಚ್ಚತ್ತ. ಗರುಡಸ್ತುತಿ ಫಲವಿದು ಸರ್ಪಬಾಧೆಗೆ ಇದೊಂದೇ ದಿವ್ಯಮಾರ್ಗ ಇದು ಸತ್ಯ!”

ಕಂಬ ಭಾವಾವೇಶದಿಂದ ಹೇಳಿದ. ಇವನ ಮಾತು ಕೆಲವರಿಗೆ ಒಪ್ಪಿಗೆಯಾಯಿತು. ಇನ್ನು ಕೆಲವರು ಅಪಹಾಸ್ಯ ಮಾಡಿದ್ದೂ ಉಂಟು. ಅವರಲ್ಲಿ ವೃದ್ಧನೊಬ್ಬ ಹೇಳಿದ. “ತಮ್ಮಾ ನಿನ್ನ ಪರೀಕ್ಷೆ ನಡದೇಹೋಗಲಿ. ಆ ಗರುಡಸ್ತುತಿ ಓದು ನೋಡೋಣ.” ಕಂಬ ಒಪ್ಪಿದ. ತವಕದಿಂದ ಓದಿದ. ಗರುಡಾಗಮನ ಹದಿನೇಳು ಪದ್ಯಗಳು, ಹನ್ನೆರಡು ಪದ್ಯಗಳು ಗರುಡಸ್ತುತಿ ಓದುತ್ತಿದ್ದಂತೆ ಎಲ್ಲರೂ ದಂಗುಬಡಿದರು! ಕಾರಣ? ಎಲ್ಲಿಂದಲೋ ಬಂತು ಗರುಡಪಕ್ಷಿ. ಯುವಕನನ್ನು ಕಚ್ಚಿ ವಿಷಹೀರಿತು. ಯುವಕ ಬದುಕಿದ! ಆ ವೇಳೆಗೆ ಕಂಬ ನಾಗಪಾಶ ನಿವೃತ್ತಿಯ ಮೂರು ಪದ್ಯಗಳನ್ನು ಓದಿಮುಗಿಸಿದ್ದ. ಚಿದಂಬರದಲ್ಲಿ ಕಂಬ ರಾಮಾಯಣವನ್ನು ಜನ ಕೇಳಿದ್ದು ಹೀಗೆ, ಎಂದು ಜನ ನೂರಾರು ವರ್ಷಗಳಿಂದ ಹೇಳುತ್ತ ಬಂದಿದ್ದಾರೆ.

ಶ್ರೀರಂಗದಲ್ಲಿ

ಶ್ರೀರಂಗ ದೊಡ್ಡ ಕ್ಷೇತ್ರ. ಏಳು ಪ್ರಾಕಾರಗಳೂ ಈ ಕೋಟೆಯೊಳಗೇ ಮನೆಗಳು, ಅಂಗಡಿಗಳು, ವ್ಯಾಪಾರ ವ್ಯವಹಾರ. ಎಲ್ಲ ಪ್ರಾಕಾರದ ಒಳಗೆ! ಗುಡಿಯ ಒಳಗೆ ಶ್ರೀರಂಗನಾಥ ಸ್ವಾಮಿ ಮಲಗಿದ್ದಾನೆ. ಸ್ವಲ್ಪ ದೂರದಲ್ಲಿ ಅಮ್ಮನವರ ಗುಡಿ ಇದೆ. ಅವರ ದರ್ಶನವನ್ನೂ ಮಾಡಿದ. ಅದು ಸರಿ, ಕಂಬ ಇಲ್ಲಿಗೇಕೆ ಬಂದ!? ಅದಕ್ಕೆ ಚಿದಂಬರ ಪಂಡಿತರೇ ಕಾರಣ.

“ಕಂಬರ್ ರಾಮಾವತಾರ” ಅತ್ಯುತ್ತಮ ಕೃತಿ! ಇವನ ಹಿಂದೆ ಬಂದ ಕವಿಗಳು ಅನಂತ. ಅವರ ಕೃತಿಗಳಿಗೂ ಲೆಕ್ಕವಿಲ್ಲ, ಅವುಗಳಲ್ಲಿ ಅಲ್ಲೊಂದು ಇಲ್ಲೊಂದು ತಪ್ಪುಗಳು ಬಂದಿರಬಹುದು. ಅವೆಲ್ಲವನ್ನೂ ಈ ಕಂಬ ತನ್ನ ಕಾವ್ಯವನ್ನು ಬರೆದು ಹೋಗಲಾಡಿಸಿದ್ದಾನೆ” ಎಂದು ಚಿದಂಬರದ ಆರು ಸಾವಿರ ಪಂಡಿತರು ಹೊಗಳಿದರು. ಅವರ ಸೂಚನೆಯಂತೆ ಕಂಬ ಇಲ್ಲಿಗೆ ಬಂದದ್ದು ತನ್ನ ಕಾವ್ಯವನ್ನು ರಂಗನಾಥನಿಗೆ ಒಪ್ಪಿಸಬೇಕು. ಕೃತಿಯನ್ನು ಮಹಾ ಪಂಡಿತರು ಕೇಳಿ ಆನಂದಿಸಬೇಕು. ಇದು ಆ ಕಾಲದ ಒಂದು ಕಟ್ಟುನಿಟ್ಟು ಆಗಿತ್ತು. ಕಾರಣ? ಶ್ರೀರಂಗ ವಿದ್ವಾಂಸರ ಬೀಡು, ಜ್ಞಾನಿಗಳ ನೆಲೆ. ಕವಿಗಳ ಕಣಜ. ಭಕ್ತರ ಆಗರ. ಆದ್ದರಿಂದ ಇಲ್ಲಿ ಹಾಡುತ್ತಿದ್ದರು.

ಕಂಬ ರಂಗನ ಮುಂದೆ ನಿಂತು ಕೃತಿ ಸ್ವೀಕರಿಸುವಂತೆ ಪ್ರಾರ್ಥಿಸಿಕೊಂಡ. ಆಗ ಹಿರಿಯರೊಬ್ಬರು ಕೇಳಿದರು. “ಅಯ್ಯಾ! ನೀನು ನಮ್ಮ ನಾಥಮುನಿಯನ್ನು ಕುರಿತು ಹಾಡಿರುವೆಯಾ? ರಂಗನಾಥ ಮುನಿಯ ಅಧೀನ. ಆ ಭಕ್ತನನ್ನು ಕುರಿತು ಹಾಡದ ಗ್ರಂಥವನ್ನು ನಮ್ಮ ರಂಗ ಸ್ವೀಕರಿಸಲಾರ. ಮೊದಲು ಅದನ್ನು ತಿಳಿಸು. ಅನಂತರ ನಿನ್ನ ರಾಮಾಯಣ ಹಾಡುವೆಯಂತೆ!”

ಕಂಬ ನಾಥಮುನಿಯ ಬಗ್ಗೆ ಕೇಳಿದ್ದ. ಶ್ರೀರಂಗನಾಥನ ಮಹಾ ಭಕ್ತನಾತ. ಆತ ಹೇಳಿದ ಹಾಗೆ ಶ್ರೀರಂಗ ಕೇಳುತ್ತಿದ್ದನಂತೆ! ಶ್ರೀವೈಷ್ಣವ ಆಚಾರ್ಯರಲ್ಲಿ ನಾಥಮುನಿ ದೊಡ್ಡ ಗುರು. ಇದನ್ನು ಬಲ್ಲ ಕಂಬ ಕೂಡಲೇ ಹೇಳಿದ: ಸ್ವಾಮಿ, ನಾನು ಈವರೆಗೂ ಅವರ ಬಗ್ಗೆ ಹಾಡಿಲ್ಲ, ತಮ್ಮ ಅಪ್ಪಣೆಯಾದರೆ ಇದೋ ಈಗಲೇ ಸಿದ್ಧ!” ಎಂದು ಆ ಕೂಡಲೇ ಹಾಡಿದ ನೂರು ಶ್ಲೋಕಗಳನ್ನು! ನಾಥಮುನಿಯನ್ನೇ ಕಣ್ಣಾರೆ ಕಂಡಂತಾಯಿತು ಅವರಿಗೆ, ಅದೇ ’ಷಡಗೋಪ ಅಂದಾದಿ’ ಎಂದು ಪ್ರಸಿದ್ಧವಾಯಿತು.

ಹಿರಿಯರಿಗೆ ಇದು ಒಪ್ಪಿಗೆ ಆಯಿತು. “ಈಗ ಸಭೆ ಸೇರಬಹುದು” ಎಂದರು. ಜನರ ಪ್ರವಾಹ ಕಾವೇರಿಯ ಪ್ರವಾಹದಂತೆ ಬಂತು. ಎಲ್ಲರ ದೃಷ್ಟಿ ಕಂಬನ ಮೇಲೆ. ಮಂಟಪದ ಮಧ್ಯ ಕಂಬ ನಿಂತ. ಸುತ್ತಲೂ ಅಭಿಮಾನಿಗಳ ತಂಡ. ಸ್ಫೂರ್ತಿ ತಾನೇ ತಾನಾಗಿ ಹರಿದು ಬಂತು. ಸಭೆಗೆ ಕೈ ಮುಗಿದು ತನ್ನ ಕೃತಿ ಹಾಡಲು ಆರಂಭಿಸಿದ.

ಮಧ್ಯದಲ್ಲೆ ಗದ್ದಲ! ಒಬ್ಬ ನಿಂತು, ” ಇಲ್ಲಿ ನೋಡಿ! ರಾಮನನ್ನು ಕುರಿತು ವಾಲ್ಮೀಕಿ ಹೀಗೆ ಹೇಳಿದ್ದಾರೆ. ’ವಾಗ್ವಿದಾಂ ವರಷ್ಠ: (ಶ್ರೇಷ್ಠ ಮಾತುಗಾರ)” ಕಂಬ ಹೇಳಿದ, ಹೌದು! ಬಲ್ಲೆ. ಅದನ್ನೇ ನಾನು ಕರೆದೆ, “ಶೊಲ್ಲಿನ್ ಶೆಲ್ವನ್.” ಮತ್ತೊಬ್ಬನ ಪ್ರಶ್ನೆ, “ಅಹಿರೇವ ವಿಜಾನಾತಿ ಅಹೇಃ ಪಾದಂ” (ಹಾವಿನ ನಡೆ ಹಾವೇ ಬಲ್ಲದು) ಇದನ್ನು ನಿನ್ನ ತಮಿಳಿನಲ್ಲಿ ಭಾಷಾಂತರಿಸಲು ಸಾಧ್ಯವೆ?”

“ಏಕೆ ಸಾಧ್ಯವಿಲ್ಲ? ಇದೋ ಕೇಳೆ ’ಪಾಂಬಿನ್ ಕಾಲ್ ಪಾಂಬರಿಯಂ” ಇಂತಹ – ನೂರಾರು ಪ್ರಶ್ನೆಗಳು! ಕಂಬನ ಉತ್ತರ ಎಲ್ಲಕ್ಕೂ ಸಮಂಜಸ. ಈಗ ಬಿಲ್ಲುಗಾರರ ಬತ್ತಳಿಕೆಯೇ ಬರಿದು. ಇದರ ಫಲ ರಾಮಾಯಣಕ್ಕೆ ಪುರಸ್ಕಾರ! ಕಂಬನಿಗೆ ಸತ್ಕಾರ!

ಹೀಗೆ ಸತ್ಕಾರ ಪಡೆದ ಮಂಟಪವೇ ಕಂಬ ಮಂಟಪ.

ಕಂಬನ ಮಂಟಪ! ಶ್ರೀರಂಗದಲ್ಲಿ ಅಮ್ಮನವರ ಸನ್ನಿಧಿಯ ಮುಂದೆ ಇದೆ. ಪುಟ್ಟ ಮಂಟಪ. ನಾಲ್ಕೇ ಕಂಬಗಳು, ಉಪ ಕಂಬಗಳು ನಾಲ್ಕು, ಗಾತ್ರದಲ್ಲಿ ಬಹಳ ಚಿಕ್ಕದು, ಐತಿಹಾಸಿಕವಾಗಿ ಅಷ್ಟೇ ದೊಡ್ಡದು.

ಈ ಮಂಟಪದ ದಕ್ಷಿಣಕ್ಕೆ ದಿಣ್ಣೆಯ ಗುಡಿ, ಅದೇ ಮೇಟ್ಟು ಅಳಸಿಂಗರ್ ಸನ್ನಿಧಿ! ಕನ್ನಡದಲ್ಲಿ ’ದಿಣ್ಣೆ ನರಸಿಂಹ’ ಎನ್ನುವರು. ಇದು ಮಣ್ಣಿನ ವಿಗ್ರಹ. ಸುಮಾರು ಐದು ಅಡಿಗೂ ಹೆಚ್ಚು ಎತ್ತರ. ಗರ್ಭಗುಡಿಯ ಮೇಲೆ ಇದೆ. ತಲೆ ಎತ್ತಿ ನೋಡಬೇಕು. ಗುಡಿ ಒಳಗೆ ಉತ್ಸವಮೂರ್ತಿ ಪಂಚಲೋಹದ್ದು. ನರಸಿಂಹನ ತೊಡೆಯ ಮೇಲೆ ಹಿರಣ್ಯಾಕ್ಷ. ತನ್ ಬೆರಳುಗಳ ನಖದಿಂದ ಸೀಳುತ್ತಿದ್ದಾನೆ. ಪಾದದ ಹತ್ತಿರ ಪ್ರಹ್ಲಾದ. ಇದೊಂದು ಅಪರೂಪದ ದೃಶ್ಯ.

ಅಲ್ಲಿಯ ಜನ ಹೇಳುತ್ತಾರೆ. ಕಂಬ ರಾಮಾಯಣಕ್ಕೆ ವಾಲ್ಮೀಕಿ ರಾಮಾಯಣವೇ ತಳಹದಿ. ಆದರೆ ಕಟ್ಟಡಮಾತ್ರ ಕಂಬನದೇ! ವಾಲ್ಮೀಕಿ ರಾಮನಿಂದ ಹೇಳಿಸಿದ-“ಅಂಗುಲ್ಯಾಗ್ರೇಣ ತಾನ್ ಹನ್ಯನ್ ಮಿಚ್ಚನ್ ಹರಿಗಳೇಶ್ವರ” “ಸುಗ್ರೀವ! ಬೆರಳ ತುದಿಯಿಂದಲೇ ಸಂಹರಿಸಬಲ್ಲೆ ಇವರನ್ನು.” ಇದನ್ನು ಸ್ಮರಿಸಿದ ಕಂಬನಿಗೆ ನರಸಿಂಹನೇ ಬಂದಂತೆ ಆಯಿತು. ಕೂಡಲೆ ಇಡೀ ನರಸಿಂಹನ ಕಥೆಯನ್ನೇ ವಿಸ್ತಾರವಾಗಿ ಹಾಡಿಬಿಟ್ಟ.

ಕಥೆ ಕೇಳಿದ ವಿದ್ವಾಂಸರು ರೊಚ್ಚಿಗೆದ್ದರು. ಇದು ಅವಿವೇಕ ನಿರೂಪಣೆ. ವಾಲ್ಮೀಕಿ ಗುರುವಿಗೆ ಮಾಡಿದ ಅಪಚಾರ. ಆಳಿಗೊಂದು ಕಲ್ಲು ಎನ್ನುವಂತೆ ಆಕ್ಷೇಪಿಸಿದರು. ಪಂಡಿತರ ಸಮೂಹವೇ ಕಂಬನನ್ನು ಗೇರಾಯಿಸಿಬಿಟ್ಟಿತು. ಆ ವೇಳೆಯಲ್ಲೇ ಬರಸಿಡಿಲೊಂದು ಭಡಾರನೆ ಬಡಿಯಿತು. ಜನ ಕಕ್ಕಾಬಿಕ್ಕಿಯಾದರ. ಕಂಬನ ಎದಿರು ಒಂದು ಗೋಪುರ! ಅದು ಫಳಾರನೆ ಸೀಳಿತು. ಗೋಪುರದಲ್ಲಿ ಕಂಡರು ಒಮ್ಮೆ ರಾಮನಂತೆ! ಇನ್ನೊಮ್ಮೆ ನರಸಿಂಹನಂತೆ!

ಆಗ ಎಲ್ಲರೂ ಕಂಬನ ಕಾಲಿಗೆ ಬಿದ್ದರು. ನಮ್ಮದು ತಪ್ಪಾಯಿತು! ನಿನ್ನ ಕಲ್ಪನೆ ಸತ್ಯವಾದುದು. ನೀನು ಸಾಮಾನ್ಯ ಕವಿಯಲ್ಲ, ಕವಿ ಚಕ್ರವರ್ತಿ! ಎಂದು ಸಾರಿದರು.

ಇದೇ ಕಂಬ ಮಂಟಪ! ಇದನ್ನು ಅಲ್ಲಿಯ ಜನ, ’ಕಂಬರಾಮಾಯಣಂ ಅರಂಗೇಟ್ರ ಮಂಟಪಂ’ ಅನ್ನುತ್ತಾರೆ. ಇದನ್ನು ಕನ್ನಡದಲ್ಲಿ ’ಕಂಬ ರಾಮಾಯಣವನ್ನು ಉದ್ಘಾಟಿಸಿದ ಮಂಟಪ’ ಅನ್ನುವರು.

ಜನರ ಬಾಯಿಯಲ್ಲಿ ಉಳಿದು ಬಂದ ಈ ಕಥೆಗಳ ಸಾರ ಇದು – ವಿದ್ವಾಂಸರ ಒಣ ಪಾಂಡಿತ್ಯಕ್ಕಿಂತ ಕಂಬನ ನಿರ್ಮಲ ಭಕ್ತಿ ದೊಡ್ಡದು.

ಕಂಬ ಸಂಭ್ರಮದಿಂದ ಹಾಡಿದ

ರಾಜ ಮಾಡಿದ ಅನ್ಯಾಯ

 

ಶ್ರೀರಂಗದ ಕಥೆ ನಾಡಪೂರ ಹರಡಿತು! ನರಸಿಂಹ ದೇವರು ನಾನೇ ರಾಮನೆಂದು ಸಾರಿದ್ದು ದಂಗುಬಡಿಸಿತು .ಅಲ್ಲಲ್ಲೆ ಜನ ಕಂಬನನ್ನು ಕರೆಸಿ ಹೊರಲಾರದಷ್ಟು ಹೂಮಾಲೆ . ತುಂಬಲರದಷ್ಟು ಉಡುಗೊರೆ ಅರ್ಪಿಸಿದರು. ಜೇನು ಮಧುವಿಗೆ ಮುತ್ತುವಂತೆ ಜನ ಕಾವ್ಯವನ್ನು ಆದರಿಸಿದರು .”ತಮಿಳಿನ ಮಹಾಕಾವ್ಯ ತಿರುಕ್ಕುರಳ್ , ಅನಂತರ ರಾಮಾಯಣಕ್ಕೆ  ಮೊದಲು ಸ್ಥಾ ನ. ” ಜನ ಮೆಚ್ಚಿ ನುಡಿದರು .ಕನ್ನಡದ ಜ್ಯೆಮಿನಿ ಭಾರತದಂತೆ ತಮಿಳಿನ ಕಂಬರ ರಾಮಾಯಣ ಪಂಡಿತ ಪಾಮರರಿಗೂ ರುಚಿಸಿತು .

ಕಂಬ ಮದುವೆ ಆಗಿದ್ದ . ಆರರೆ ಆತನ ಮಡದಿ ಯಾರು ? ಎಲ್ಲಿಯವಳು ? ಆಕೆಯ ಹೆಸರೇನು? ಯಾರಿಗೂ ತಿಳಿಯದು .

ಸಂಸಾರ ನಾಟಕದಲ್ಲಿ ಇವನದೇ ಏಕಪಾತ್ರ ! ರಾಮಾಯಣದಲ್ಲಿ ಊರ್ಮಿಳೆ ಇದ್ದಂತೆ ಕಂಬನ ಮಡದಿ . ತೆರೆಯ ಮರೆಯಲ್ಲೇ ಅವಳ ಕಷ್ಟ ಸುಖಗಳು. ಮತ್ತೆ ಸುದ್ದಿಯೇ ಇಲ್ಲ. ಆದರೆ ಅಂಬಿಕಾಪತಿ ಹಾಗಲ್ಲ! ಅಂಬಿಕಾ ಪತಿ ಕಂಬನ ಮಗ. ಈತ ರೂಪದಲ್ಲಿ ಮದನ , ಗಾನದಲ್ಲಿ ಗಂಧರ್ವ !

ತಂದೆಯ ಜತೆ ಮಗನೂ ಸಭೆಗಳಿಗೆ ಬರುತ್ತಿದ್ದ. ರಾಜಸಭೆಯಲ್ಲಿ ಅವನಿಗೂ ಒಂದು ಸ್ಥಾನ: ರಾಜನಿಗೂ, ಚಿಕ್ಕವರಿಂದ ದೊಡ್ಡವರವರೆಗೂ ಎಲ್ಲರಿಗೂ ಅಂಬಿಕಾಪತಿ ಬೇಕಾದವನು.

ನಿಜಕ್ಕೂ ಹೆಚ್ಚು ಒಲವು ತೋರಿದ್ದು ರಾಜಕುಮಾರಿ, ಈಕೆ ಇವನಲ್ಲಿ ಅನುರಕ್ತಳಾದಳು. ಅಂಬಿಕಾಪತಿಯೂ ಅಷ್ಟೆ. ಆದರೆ ಅರಸ ಇವರ ಪ್ರೇಮಕ್ಕೆ ಅಡ್ಡ ಬಂದ .ಆದರೆ ಕಂಬ ನ್ಯಾಯಕ್ಕಾಗಿ ಅರಸನ ಮೊರೆ ಹೋಗಲು ಅಡ್ಡ ಬಂದ . ಆದರೆ ಕಂಬ ನ್ಯಾಯಕ್ಕಗಿ ಅರಸನ ಮೊರೆ ಹೋಗಲು ರಾಜ ತಿರಸ್ಕರಿಸಿದ . ಇದರಿದ ಕಂಬನಿಗೆ ಆದ ನೋವು ಅಷ್ಟಿಷ್ಟಲ್ಲ . ಅರಸನೇ ದೇವರು ಎಂದು ತಿಳಿದಿದ್ದ ಕಂಬ . ಆದರೆ ರಾಜ ನಿರ್ದಯಿಯಾಗಿ ಅಂಬಿಕಾಪತಿಯ ಪ್ರಾಣವನ್ನೇ ತೆಗೆದ . ನ್ಯಾಯ ವಿಚಾರ ಮಾಡದೇ ಹೋಗಿದ್ದು ಕಂಬನಿಗೆ ಆಘಾತವನ್ನೇ ತಂದೊಡ್ಡಿತು .ಈ ಅನ್ಯಾಯ ಪ್ರತಿಭಟಿಸಿ ರಾಜನ ಆಸ್ತಾನ ತೊರೆದು ಹೊರಟ ಕಂಬ!

ಕಂಬರು ರಾಮನ ಪಾದ ಸೇರಿದರು

ಈಗ ಕಂಬನ ಜೇವಿತದ ಇನ್ನೊಂದು ಮುಖ! ಅರಸನ ಅನ್ಯಾಯದಿಂದ ಕಂಗಾಲಾಗಿದ್ದಾನೆ . ರಾಜನನ್ನೂ ತೊರೆದು ರಾಜ್ಯವನ್ನೂ ಬಿಟ್ಟ. ಮನೆ ಮಠ ಬಂದಿದ್ದ ಉಡುಗೊರೆ ಎಲ್ಲ ದಾನಮಾಡಿ ಕ್ಯೆತೊಳೆದುಕೊಂಡ .ಈಗ ಅವನಲ್ಲಿರುವುದು ಒಂದೇ ಆಸ್ತಿ. ಅದೇ ರಾಮಾಯಣ ಗ್ರಂಥ.

ಕಂಬ ಈಗ ಭ್ಯೆರಾಗಿ, ಅವನ ಉಡುಗೆ ತೊಡಿಗೆ ಎಲ್ಲ ಭಿನ್ನ; ಜೊತೆಗೆ ಗಡ್ಡ ಮೀಸೆ ಬೆಳೆದು ನಿಂತಿದೆ .ಯಾತರ ಅರಿವೂ ಅವನಿಗೆ ಬೇಡ . ಅನ್ನ ಆಹಾರಗಳೂ ಇಲ್ಲ. ಒಂದೆಡೆಯೂ ನಿಲ್ಲಲಾರ . ಸುತ್ತಿದ್ದೇ ಸುತ್ತಿದ್ದು .ಇಡೀ ನಾಡನ್ನೇ ಬುಗುರಿಯಂತೆ ಸುತ್ತಿದ .ಹೋದ ಗುಡಿಗಳೆಷ್ಟೋ, ಮಿಂದ ನದಿಗಳೆಷ್ಟೊ . ಎಷ್ಟು ಕ್ಷೇತ್ರ ಸುತ್ತಿದರೇನು? ಅವನಿಗೆ ಶಾಂತಿ ದೊರಕಲಿಲ್ಲ. ಸುತ್ತಿ ಸುತ್ತಿ ಕೊನೆಗೆ ಸೇರಿದ್ದು ಕಾರೈಕುಡಿ ಕೊಂಚ ನೆಮ್ಮದಿ ಕೊಟ್ಟಿತು. ಆದರೆ ಅಲ್ಲಿಯೂ ಹೆಚ್ಚು ದಿನ ಉಳಿಯಲು ಆಗಲಿಲ್ಲ , ಕಾರಣ ಜನಜಂಗುಳಿ ಹೆಚ್ಚಿತು .

ನಾಟ್ಟರಸನ್ ಕೋಟೆ ಒಂದು ಗ್ರಾಮ, ಅಲ್ಲಿಯ ಶಕ್ತಿ ದೇವತೆ ತುಂಬ ಪ್ರಸಿದ್ಧಿ . ಅಂಧರಿಗೆ ವರದೇವತೆ, ಎಷ್ಟೋ ಜನ ಹರಕೆ ಸಲ್ಲಿಸಿ ಕಣ್ಣು ಪಡೆದಿದ್ದಾರೆ. ಅದ್ದರಿಂದ ಆ ದೇವತೆಗೆ ಕನ್ನತ್ತಮ್ಮನೆಂದೇ ಹೆಸರಾಯಿತು .( ಕಣ್ಣು ಕೊಟ್ಟ ಅಮ್ಮ -ಕನ್ನತ್ತಮ್ಮ)

ಇಂದು ಅಮ್ಮನ ಜಾತ್ರೆ . ಜನರ ಜಂಗುಳಿ ಹೇಳತೀರದು . ಎಲ್ಲೆಲ್ಲಿಂದಲೋ ಬಂದವರು . ಇವರಲ್ಲಿ ಕಂಬನೂ ಒಬ್ಬ. ನಾಟ್ಟರಸನ್ ಕೋಟೆ ಕಂಬನನ್ನು ಆಕರ್ಷಿಸಿತು.

ಕಂಬ ಬಹಳ ದಿನ ಇಲ್ಲೇ ನಿಂತ . ಅವನ ರಾಮಾಯಣವನ್ನು ಮಕ್ಕಳು ಕಲಿತರು . ಹೆಂಗಸರು ಹಾಡಿದರು . ಎಲ್ಲರಿಗೂ ಅದು ಪರಮಪ್ರಿಯ ಆಯಿತು . ಒಂದು ದಿನವೂ ಪ್ರವಚನ ತಪ್ಪಲಿಲ್ಲ . ಆದರೆ ಅದೇಕೋ ಕಂಬನಿಗೆ ಬಹಳ ದಣಿವು ಇಂದು . ರಾಮಾಯಣ ಪ್ರವಚನದ ಪಟ್ಟಾಭಿಷೇಕ ಬೇರೆ. ಜನರ ಸಂಭ್ರಮ ಹೇಳತೀರದು . ಬಾಳೆ – ಮಾವುಗಳಿಂದ ಚಪ್ಪರ. ಬಣ್ಣ ಬಣ್ಣದ ಹೂವಿನಿಂದ ಅಲಂಕಾರ. ಪಟ್ಟಾಭಿಷೇಕದ ಅಂಗವಾಗಿ ರಮದೆವರ ಚಿತ್ರವನ್ನು ಇಟ್ಟಿದ್ದಾರೆ. ದೀಪ ಉರಿಯಿತ್ತಿದೆ ಧೂಪ ಹಾಕಿದ್ದಾರೆ, ದಣಿವಿನಲ್ಲೇ ಕಂಬ ಹಾಡಿದ .ಸಂಭ್ರಮ ತುಂಬಿಕೊಂಡು ಲವಲವಿಕೆ ಹೆಚ್ಚಿಸಿಕೊಂಡು ಹಾಡಿದ ! ಅನವ ಮುಖದಲ್ಲಿ ಅಪೂರ್ವ ತೇಜಸ್ಸು ಚಿಮ್ಮಿತ್ತು. ಎತ್ತರ ಧ್ವನಿಯಿಂದ ಹಾಡುತ್ತಿದ್ದಾನೆ.

ಅಂತರ ದುಂಧುಭಿ ಧೂಂ ಧೂಮೆನೆ
ಮರ್ದ್ದಳ ತಾಳಂಗಳ್ ಧೀನ್ ಧಿನ್ ಧೀಮೆನ
ಝಂಝರಿ ಝಲ್ಲರಿ ತೋಂ ತೋಂ ತೋಮೆನೆ
ಶಂಖಹಳ್ ಕೊಂಬಹಳ್ ಭಂ……..ಭಂ…….ಭಂಮ್ಮನ
-ನಡೆಯಿತು . ಪಟ್ಟಾಭಿಷೇಕ ! ಇಡೀ ರಾತ್ರಿ  ಜಾಗರಣೆ . ಗೀತ ನರ್ತನ ಭಜನೆಗಳು ಸಾಗಿತು . ಆದರೆ ಬೆಳಿಗ್ಗೆ?

ದೀಪ ಆರಿತ್ತು .ಜನ ಗೋಳಿಟ್ಟರು . ಮರಳಿಬಾರದೆಡೆಗೆ ನಡೆದಿದ್ದ ಕಂಬ ! ಅವನದು ಅರವತ್ತು ವರ್ಷಗಳ ಸಾರ್ಥಕ ಬಾಳು.

ಮಹಾಕವಿ

ಕಂಬ ರಾಮಯಣಕ್ಕೆ ವಾಲ್ಮೀಕಿ ರಾಮಾಯಣವೇ ಆಧಾರ. ಆದರೆ ಕಂಬರು ಅನೇಕ ಬದಲಾವಣೆಗಳನ್ನು ಮಾಡಿದ್ದಾರೆ. ಉದಾಹರಣೆಗೆ, ವಾಲ್ಮೀಕಿ ರಾಮಾಯಣದಲ್ಲಿ ಶ್ರೀರಾಮನು ಧನುಸ್ಸನ್ನು ಮುರಿಯಲು ಆಸ್ಥಾನ ಪ್ರವೇಶಿಸಿದಾಗಲೆ ಸೀತೆ ಅವನನ್ನು ಕಾಣುತ್ತಾಳೆ . ಅವನು ಧನಸ್ಸನ್ನು ಮುರಿದನಂತರ ಮದುವೆಯಾಗುತ್ತದೆ.ಕಂಬ ರಾಮಾಯಣದಲ್ಲಿ ಬಿಲ್ಲನ್ನು ಮುರಿಯುವ ಮೊದಲೇ ಶ್ರೀರಾಮ -ಸೀತೆಯರು ಒಬ್ಬರನ್ನೊಬ್ಬರು ನೋಡುತ್ತಾರೆ, ಪ್ರೀತಿಸುತ್ತಾರೆ. ರಾವಣ ಸೀತೆಯನ್ನು ಮುಟ್ಟಲಾರದೆ ಪರ್ಣಕುಟಿಯನ್ನೇ ಎತ್ತಿಕೊಂಡು ಹೋದ ಎಂದು ಕಂಬರು ವಣಿಸಿದ್ದನ್ನು ಹಿಂದೆಯೇ ಹೇಳಿದೆ .. ಕಂಬ ರಾಮಾಯಣದಲ್ಲಿ ಯಾವ ಸನ್ನಿವೇಶವೇ ಆಗಲಿ ,ಕಣ್ಣಿಗೆ ಕಟ್ಟುತ್ತದೆ . ಪಾತ್ರಗಳು ನಮ್ಮ ಮುಂದೆಯೇ ಇದ್ದಾರೆ ,ನಮ್ಮ ಮುಂದೆಯೇ ಮಾತನಾಡುತ್ತಿದ್ದಾರೆ. ಓಡಾಡುತ್ತಿದ್ದಾರೆ ಎನ್ನಿಸುತ್ತದೆ . ರಾಮನ ಘನತೆ, ಸೀತೆಯ ಪತಿಭಕ್ತಿ , ಲಕ್ಷ್ಮಣನಿಗೆ ಅಣ್ಣನಲ್ಲಿ ಪ್ರೇಮ – ಎಲ್ಲ ಓದುಗರ ಹೃದಯವನ್ನು ಮುಟ್ಟತ್ತದೆ, ಗಟ್ಟಿಯಾಗಿ ಓದಿದರೆ ಕಾವ್ಯ ಕಿವಿಗೆ ತುಂಬಾ ಇಂಪಾಗಿದೆ .

ರಾಮನ ಹಿರಿಮೆಯನ್ನು ಹಾಡಿದ ಕಂಬರು ಸಾಮಾನ್ಯ ಬೇಸಾಯಗಾರನ ಹಿರಿಮೆಯನ್ನೂ ಹಾಡಿದ್ದಾರೆ . ಉಳುವವರ ಹಿರಿಮೆಯನ್ನು ಏರ್ ಎಳುವದು ಎಂಬ ಹಾಡುಗಳಲ್ಲಿ ಮತ್ತು ” ತಿರಕವಳಕ್ಕು ” ಎಂಬ ಗ್ರಂಥದಲ್ಲಿ  ಕೃಷಿ ಮಾಡುವವನು ಸಮಾಜದ ಬೆನ್ನುಮೂಳೆ ಎಂಬುದನ್ನು ತೋರಿಸಿದ್ದಾರೆ.

ಇಂದು ನಾಟ್ಟರಸನ್ ಕೋಟೆ ಪ್ರಸಿದ್ಧಿ ಪಡೆದಿದೆ . ರಾಮನಾಡು ಜಿಲ್ಲೆಗೆ ಸೇರಿದ್ದು ಶಿವಗಂಗೆಯ ಪಕ್ಕದಲ್ಲಿದೆ . ಕಾರೈಕುಡಿಯಿಂದ ಹೋಗಬಹುದು . ಜನಸಂಖ್ಯೆ ಸುಮಾರು ಐದು ಸಾವಿರಕ್ಕೆ ಮೀರಿಲ್ಲ . ಊರ  ಹೊರಗೆ ಒಂದು ಕಿಲೋಮೀಟರ್ ದೂರದಲ್ಲೇ ಕಂಬನ ಸಮಾಧಿ. ಇದು  ಗ್ರಾಮದ ಪೂರ್ವಕ್ಕಿದ್ದು ನಡದೇ ಹೊಗಬೇಕು . ಊರಿನ ಹುಡುಗನನ್ನು ಕೇಳಿದರೂ ಸಾಕು , ಕಂಬರ ಸಮಾಧಿ ತೋರಿಸುತ್ತಾನೆ .

ಸುಮಾರು ಎರಡು ಎಕರೆ ಭೂಮಿ . ಅಲ್ಲಿ ಪುಟ್ಟ ತೋಟ, ಅದರ ಮಧ್ಯೆ ಕಂಬನ ಸಮಾಧಿ . ಚಿಕ್ಕ ಕಟ್ಟಡ ಒಂದನ್ನು ಮೊನ್ನೆ ಮೊನ್ನೆ ಕಟ್ಟಿದ್ದಾರೆ . ಕಟ್ಟಡದ ಒಳಗೆ ಒಂದು ಮೂಲೆಯಲ್ಲಿ ಕಂಬನ ವಿಗ್ರಹ , ಸುಮಾರು ಎರಡು ಅಡಿ .ತಲೆಗೆ ಪೇಟ . ಎಡ ಕೈಯಲ್ಲಿ ಪುಸ್ತಕ .ಪದ್ಮಾಸನ ಹಾಕಿ ಕುಳಿತಿದ್ದಾನೆ .ದಿನವೂ ಸಮಾಧಿಗೆ ಪೂಜೆಯ ವ್ಯವಸ್ಥೆ ಇದೆ .ಇದು ಖಾಸಗಿಯವರಗೆ ಸೇರಿದ ಸ್ಥಳ . ಅವರಿಗೆ ಕಂಬನ ಬಗ್ಗೆ ಅತೀವ ಕಳಕಳಿ. ಆ ಕುರುಹೇ “ಕಂಬರ್ ವಿಳಾ ! ಪಂಗುನಿ ಮಾಸದಲ್ಲಿ ( ಚೈತ್ರ)

ಸುಮಾರು ನಾಲ್ಕು ಸಾವಿರ ಜನ ಸೇರಿ ಕಂಬನ ಸ್ಮರಣೆ ಮಾಡುತ್ತಾರೆ ವಿಳಾ (ಹಬ್ಬ) ಜಾತ್ರೆಯಂತೆ ನಡೆಯುತ್ತದೆ.

ಆದರೂ ಕಂಬನ ಸ್ಮಾರಕ ಕಾರೈಕುಡಿಯಲ್ಲಿ ನೋಡಬೇಕು .ಇದರ ಹೆಸರು ” ಕಂಬರ್ ಮಣಿ ಮಂಟಪಂ” ಒಳ್ಳೆಯ ಪ್ರಶಾಂತ ಸ್ಥಳ ವಿಶಾಲವಾದ ಜಾಗ. ಊರಿಂದ ಕೊಂಚ ದೂರ.

ಮದರಾಸಿನಲ್ಲಿ ’ವಳ್ಳಲಿವರ್ ಕೂಟಂ’ ಇದೆ .ಇದೊಂದು ಅದ್ಭುತ ಮನೋಹರ ಕಟ್ಟಡ . ಇಲ್ಲಿಯ ಕಂಬರ್ ಮಣಿಮಂಟಪಂ ಅಷ್ಟೇ ಸುಂದರವಾದುದು. ಕಂಬನಿಗೆ ಗುಡಿ  ನಾಟಕಕ್ಕೆ ರಂಗಸ್ಥಳ, ಮಕ್ಕಳಿಗೆ ಶಾಲೆ ಇವು ಈ ಮಂಟಪದ ವೈಶಿಷ್ಟ್ಯ. ಎಲ್ಲವೂ ಒಂದೇ ಪ್ರಾಕಾರದಲ್ಲಿ . ಇಲ್ಲಿಯೂ ಕಂಬನ ವಿಳಾ ಅದ್ದೂರಿಯಿಂದ ಆಚರಿಸುವರು . ಒಟ್ಟಿನಲ್ಲಿ ” ಕಂಬರ್ ಮಣಿ ಮಂಟಪಂ ’ ಅವಶ್ಯ ನೋಡಬೇಕಾದ ಸ್ಥಳ .

ಕಂಬ ಹುಟ್ಟಿದ್ದು ತಿರುವಳಂದೂರ್ .ಬಳೆದದ್ದು ತಿರುವಣ್ಣೆಯನಲ್ಲೂರ್ .ಕಾವ್ಯ ಪುರಸ್ಕಾರ ಚಿದಂಬರದಲ್ಲಿ .ಈತನ ಕಂಬ ಮಂಟಪ ಶ್ರೀರಂಗದಲ್ಲಿ . ಸಮಾಧಿ ನಾಟ್ಟರಸನ್ ಕೋಟೆ . ಸ್ಮಾರಕ ಕಾರೈಕುಡಿಯಲ್ಲಿ . ಆದರೆ ಕೀರ್ತಿ ಭಾರತ ದೇಶದಲ್ಲೇ ಹಬ್ಬಿತು . ಇದ್ದಕ್ಕೆ ಕಾರಣ? ಅವನ ಅಮರ ಕೃತಿ ರಾಮಯಣ ಹಾಗೂ ಅದರ ಸಂದೇಶ .

ನನ್ಮೆಯುಂ ಶೆಲ್ವಮುಂ ನಾಳು ನಲ್ಗುಮೇ
ತಿನ್ಮ್ಯುಯುಂ ಪಾವಮುಂ ಶಿದೈಂದು ತೇಯುಮೇ!
ಜೆನ್ಮಮುಂ ಮರಣಮುಂ ಇನ್ರಿತ್ತೀರುಮೇ
ಇಮ್ಮೆಯೇ ” ರಾಮ ” ವೆನ್ರಿರಂಡೆಷುತ್ತಿನಾಲ್ ”

ಇಲ್ಲಿ  ಸುಖವೂ ಸಂಪತ್ತೂ ಸದಾ ಉಂಟು . ಪ್ರಾರಬ್ಧ ಕರ್ಮ , ಪಾಪ ನಾಶ ಆಗುವುದು , ಜನನ – ಮರಣಗಳ ನೋವು ಬಹುದೂರ. ಇವೂಗಳೆಲ್ಲ “ರಾಮ” ಎಂಬ ಅಕ್ಷರಗಳಿಂದಲೇ ಸಾಧ್ಯ!