ನಮ್ಮ  ಮಲೆನಾಡಿನ   ಗ್ರಾಮೀಣ ಶಾಲೆಗಳಲ್ಲಿ  ಮಳೆಗಾಲದಲ್ಲಿ  ಒಂದು ಚರ್ಚಾಕೂಟ  ಪ್ರತಿ ವರ್ಷ ಕಾಯಂ ನಡೆಯುತ್ತಿತ್ತು. “ಕಂಬಳಿ ಮೇಲೋ ? ಕೊಡೆ ಮೇಲೋ ?” ಎಂಬುದು ಚರ್ಚೆಯ ಪ್ರಮುಖ ವಿಷಯ. ವಿಷಯದ ಪರ ವಿರೋಧ ಮಾತಾಡುವವರು ಮುಂಚಿತವಾಗಿ ಮುಖ್ಯಾಧ್ಯಾಪಕರಲ್ಲಿ ಹೆಸರು ನೋಂದಾಯಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದರು. ಮಳೆಗಾಲಕ್ಕೆ ಬೆಚ್ಚನೆಯ ಕಂಬಳಿ ಕೊಪ್ಪೆ ಹಾಕುವದು  ಈ ಪ್ರದೇಶದ ಪರಂಪರೆ, ಮನೆಯಲ್ಲಿ ಒಂದೋ ಎರಡೋ ಕೊಡೆ (ಛತ್ರಿ) ಇರುತ್ತಿದ್ದವು. ಪೇಟೆ ಪಟ್ಟಣಕ್ಕೆ ಹೋಗುವವರು, ದೂರದ ತಿರುಗಾಟಕ್ಕೆ ಹೋಗುವವರು ಮಾತ್ರ ಕೊಡೆ ಒಯ್ಯುತ್ತಿದ್ದರು. ಆಗ ಇದ್ದದ್ದು ಮರದ ದಂಟಿನ ಕೊಡೆ, ಕಬ್ಬಿಣ ದಂಟಿನ ಕೊಡೆ ಎಂಬ ಎರಡು ಪ್ರಕಾರದವು. ಒಂದು ಛತ್ರಿ ಬಿಡಿಸಿದರೆ ಬರೋಬ್ಬರಿ ಅಬ್ಬರದ ಮಳೆಯಲ್ಲೂ ೨-೩ಜನ ಹೋಗಬಹುದಾದಷ್ಟು ವಿಶಾಲಕ್ಕೆ ತೆರೆದುಕೊಳ್ಳುತ್ತಿತ್ತು.  ಕಪ್ಪು ಬಣ್ಣ, ದಪ್ಪನೆಯ ಕಾಟನ್ ಬಟ್ಟೆಯ ಅವು ಮಳೆಯಲ್ಲಿ ಒದ್ದೆಯಾದಾಗ ಇನ್ನಷ್ಟು ಭಾರವಾಗುತ್ತಿದ್ದವು. ಬಿರುಗಾಳಿ ಪ್ರಹಾರಕ್ಕೆ  ಛತ್ರಿ “ಹಿಡಿದು ನಡೆಯುವದು ಅನುಭವವಿದ್ದವರಿಗೆ ಮಾತ್ರ ಸಾಧ್ಯ ಎಂದು ಜನ ಮಾತಾಡುತ್ತಿದ್ದರು. ಅದು ಗಾಳಿ ಪ್ರಹಾರಕ್ಕೆ ಮಡಚಿ ಹಾರಿದಾಗ ನಮಗೆಲ್ಲ ಕಂಬಳಿಯೇ ಯೋಗ್ಯ ಎಂದು  ಗುಣಗಾನ ಮಾಡುತ್ತಿದ್ದರು. ಅತ್ಯಂತ ಶ್ರೀಮಂತರಾದವರು  ಕಂಬಳಿಕೊಪ್ಪೆ ಹೊದ್ದು , ಮೇಲೆ ಮತ್ತೆ ಛತ್ರಿ ಹಿಡಿದು ಪೇಟೆ ತಿರುಗಾಟಕ್ಕೆ ಹೋಗುತ್ತಿದ್ದರು!. ಮಳೆ ನೀರು ಮೈಮೇಲೆ ಸುರಿಯದಂತೆ ಛತ್ರಿ ಸಹಾಯ, ಮಳೆಗಾಲದ ಚಳಿ ತಡೆಯಲು ಕಂಬಳಿ ಬಳಸುವ ಜಾಣತನ ಇವರದು. ಇಸ್ತ್ರಿ ಬಟ್ಟೆ ತೊಟ್ಟು ಗರಿಗರಿಯಾಗಿ ಹೋಗುವ ಕಾಲ ಅದಲ್ಲ. ಪಂಚೆ, ಅಂಗಿ, ರುಮಾಲು ಸುತ್ತುವದು ಹಳೆ ಜನರ ಉಡುಗೆ. ಒಂದು ಕೈಯಲ್ಲಿ ಛತ್ರಿ ಹಿಡಿದು ನಡೆಯುವ ಸಂದರ್ಭವಾದ್ದರಿಂದ ಭಾರದ ಕೈಚೀಲ ಹಿಡಿದು ಹೋಗಲು ಅಸಾಧ್ಯ. ಕಂಬಳಿ ಕೊಪ್ಪೆ ತಲೆಗೆ ಸಿಕ್ಕಿಸಿದರೆ ಸಲೀಸಾಗಿ ಭಾರ ಹಿಡಿದು  ನಡೆಯಬಹುದೆಂದು ಕಂಬಳಿ ಬಹುಮತದ ಆಯ್ಕೆಯಾಗಿತ್ತು.

ಶಾಲೆಗಳಲ್ಲಿ ಮಕ್ಕಳಿಗೆ ಪ್ಲಾಸ್ಟಿಕ್ ಕೊಪ್ಪೆ, ಕಂಬಳಿ ಮಳೆ ಉಡುಗೆ ! ಕಂಬಳಿ ಹೊದ್ದ ಪುಟಾಣಿ ಮಕ್ಕಳನ್ನು  ನೋಡಿದರೆ ಇವರು ಕೆಲಸಕ್ಕೆ ಹೊರಟವರೋ? ಶಾಲೆಗೆ ಬಂದವರೋ ಅನುಮಾನ ಪಡುವಂತಿತ್ತು.  ಅಪುರೂಪಕ್ಕೆ ಒಬ್ಬಿಬ್ಬರು ಛತ್ರಿ ತರುತ್ತಿದ್ದರು. ಹೊಸ ಛತ್ರಿ ತಂದವರು ಮೇಷ್ರ ಎದುರು ಅವನ್ನು ಬಿಡಿಸಿ ತೋರಿಸುತ್ತಿದ್ದರು. ಕಂಬಳಿ ತರುವ ಮಕ್ಕಳು ಬಹುತೇಕ ಜನರಿದ್ದರೂ ಛತ್ರಿ ತಂದವರು ಅವರೆದುರು ಡೌಲು ಮಾಡುತ್ತಿದ್ದರು. ಇಂತಹ ಸಂದರ್ಭದಲ್ಲಿ  ಶಾಲೆಗಳಲ್ಲಿ ಕಂಬಳಿ ಮೇಲೋ ? ಕೊಡೆ ಮೇಲೋ ? ಚರ್ಚಾಕೂಟ ನಡೆಯುತ್ತಿತ್ತು. ಕಂಬಳಿಪರ ಮಾತಾಡುವವರಿಗೆ ಲಾಗಾಯ್ತಿನ ಬಳಕೆ ಅನುಭವದಿಂದ ಬಹಳಷ್ಟು ಪಾಯಿಂಟ್‌ಗಳಿದ್ದವು. ಮಳೆಗಾಳಿಯಿಂದ ರಕ್ಷಿಸಿಕೊಳ್ಳಲು ಅನುಕೂಲ, ಮನೆಯಲ್ಲಿ  ಮಲಗಲೂ ಬಳಸಬಹುದು, ಚಳಿಗಾಲದಲ್ಲಿ ಬಚಾವಾಗಲು ಇದೇ ಕಂಬಳಿ ಬೇಕು ಹೀಗೆ ಕಂಬಳಿಯ ಬಹುಬಳಕೆಯನ್ನು ಕೊಂಡಾಡುತ್ತಿದ್ದರು. ಛತ್ರಿಯಪರ  ಮಾತಾಡುವವರು ಒಯ್ಯಲು ಅನುಕೂಲ, ಯಾರಾದರೂ ಜಗಳಕ್ಕೆ ಬಂದರೆ ಛತ್ರಿಯ ಮೊನೆಯಿಂದ ತಿವಿದು ರಕ್ಷಿಸಿಕೊಳ್ಳಬಹುದೆಂದು  ತುಂಟ ಹುಡುಗಿಯರು ತಮ್ಮದೇ  ವಾದ ಮಂಡಿಸುತ್ತಿದ್ದರು. ಕಾಡುಗುಡ್ಡದಲ್ಲಿ ಮಳೆಗಾಲದಲ್ಲಿ ದೊರೆಯುವ ಗಿಳ್ಳಾಗಡ್ಡೆ ಎಂಬ ರುಚಿಕರ ಕಾಡುಗಡ್ಡೆಯನ್ನು ನೆಲದಿಂದ ಅಗೆದು ತೆಗೆಯಲು ಛತ್ರಿ ಮೊನೆ ಸಹಾಯವಾಗುತ್ತದೆಂದು ಪುಟಾಣಿಗಳು ಹೊಸ ಹೊಸ ಸಂಗತಿ ಎದುರಿಟ್ಟು ವಾದಿಸುತ್ತಿದ್ದರು. ಸತತ ಎರಡು ತಾಸಿಗೂ ಹೆಚ್ಚು ಕಾಲ ಕಂಬಳಿ, ಕೊಡೆ ಚರ್ಚೆ ಶಾಲೆಯಲ್ಲಿ ನಡೆಯುತ್ತಿತ್ತು.

 

ಮಕ್ಕಳ ಮಾತುಗಳನ್ನು  ಆಲಿಸಿದ ಶಿಕ್ಷಕರು ಕಟ್ಟಕಡೆಗೆ ತೀರ್ಪು ನೀಡುತ್ತಿದ್ದರು, ಚರ್ಚಾಕೂಟದ ವಿಜಯಿಗಳನ್ನು  ಘೋಷಿಸುತ್ತಿದ್ದರು.  ಎಷ್ಟೇ ಚರ್ಚೆ ನಡೆಯಲಿ, ಯಾರು ಎಷ್ಟೇ ವಾದಿಸಿದರೂ ಕಟ್ಟಕಡೆಗೆ  ಕಂಬಳಿಪರ ಮಾತಾಡಿದವರೇ ಗೆಲ್ಲುತ್ತಿದ್ದರು. ವಿಚಿತ್ರವೆಂದರೆ ಕಂಬಳಿಪರ ತೀರ್ಪು ನೀಡುತ್ತಿದ್ದ  ನಮ್ಮ ಮಾಸ್ತರ್ರು  ಯಾವತ್ತೂ ಛತ್ರಿ ಹಿಡಿದು ನಡೆಯುವವರಾಗಿದ್ದರು ! ಯಾರಾದರೂ ತಮಾಷೆಗೆ ಕೇಳಿದರೆ  ನಮ್ಮ ಕೃಷಿಕರ ಹಿನ್ನಲೆಯಲ್ಲಿ  ಕೊಟ್ಟ ತೀರ್ಪು ಅದು ಎನ್ನುತ್ತಿದ್ದರು. ಕೃಷಿಕರಿಗೆ ಕಂಬಳಿ ತುಂಬ ಉಪಯುಕ್ತ  ಎಂದು  ವಿವರಿಸುತ್ತಿದ್ದರು.

 

ಈಗ ನಮ್ಮ ಹಳ್ಳಿ ಶಾಲೆಗಳನ್ನು ನೋಡಿ, ಕಂಬಳಿ ಹೊದ್ದು ಬರುವ ಮಕ್ಕಳು ಇಲ್ಲವೇ ಇಲ್ಲ. ಮೈ ಒದ್ದೆಯಾಗದ  ವಿಶಾಲ ಛತ್ರಿಗಳೂ ಇಲ್ಲ. ಬಿರುಗಾಳಿ ಪ್ರಹಾರಕ್ಕೆ ಕಡ್ಡಿ ಮುರಿದು ತೇಟ್ ನೇತು ಬಿದ್ದ  ಬಾವಲಿಯಂತೆ ಕಾಣುವ ಬಣ್ಣ ಬಣ್ಣದ  ಬಟನ್ ಛತ್ರಿಗಳು, ಮೂರು ನಾಲ್ಕು ಸಾರಿ ಮಡಿಸಿ ಇಡಬಲ್ಲ  ಛತ್ರಿಗಳು ತುಂಬಿವೆ. ನೀರನ್ನು ಒಳ ಸೆಳೆದು  ಮೈ ಒದ್ದೆಯಾಗಿಸುವ  ರೈನ್ ಕೋಟ್‌ಗಳಿವೆ !. ಮಳೆಯಿಂದ ರಕ್ಷಿಸಲು  ಅನುಕೂಲವಾಗಬೇಕು ಎಂಬುದಕ್ಕಿಂತ ಮಳೆ ನಂತರ ಆಫೀಸು, ಪೇಟೆ, ಬಸ್ಸು, ಶಾಲೆಗಳಲ್ಲಿ  ಹಿಡಿದು  ಓಡಾಡಲು ಸುಲಭವಾಗಬೇಕು ಎಂಬುದು ಛತ್ರಿ ತಯಾರಕರ ಸೂತ್ರವಾಗಿದೆ. ಹೀಗಾಗಿ ಯಾವುದೇ ಛತ್ರಿ ಹಿಡಿದರೂ ಮಳೆಸ್ನಾನ ಬೋನಸ್ !  ಇಸ್ತ್ರಿ, ಯೂನಿಫಾರ್ಮ್ ಶಿಸ್ತು ಬಂದ ಬಳಿಕ ಕಂಬಳಿ ಕಣ್ಮರೆಯಾಗಿದೆ. ಕರಾವಳಿ, ಮಲೆನಾಡಿನ ಮಳೆಗಾಲದ ಈ ಮೇಲುಡುಪನ್ನು  ಶಾಲಾ ಮಕ್ಕಳು ಮರೆತದ್ದು ವಿಶೇಷವಲ್ಲ, ಈಗ ಸ್ವತಃ ಕೃಷಿಕರು ಬಳಕೆ ಕಡಿಮೆ ಮಾಡಿದ್ದಾರೆ. ರಪರಪ ಮಳೆಯಲ್ಲಿ ಕಂಬಳಿ ಕೊಪ್ಪೆ ಸೂಡಿ ಕೃಷಿ ಕೆಲಸಕ್ಕೆ ಇಳಿಯುತ್ತಿದ್ದ ಆನೆ ಬಲದ ವೀರರು ಕೃಷಿರಂಗದಲ್ಲಿ ನಾಪತ್ತೆಯಾಗಿದ್ದಾರೆ. ಛತ್ರಿ ಹಿಡಿದು  ಬಿಳಿ ಲುಂಗಿ ಸುತ್ತಿ ಕೃಷಿ ನೆಲದ ಮೇಲುಸ್ತುವಾರಿ ನಡೆಸುವವರನ್ನೇ  ಕೃಷಿಕರೆಂದು ಕರೆಯುವ ಹಂತ ತಲುಪಿದ್ದೇವೆ. ಗ್ರಾಮೀಣ ಜನರ ಬಹುಬಳಕೆಯ ಕಂಬಳಿಯತ್ತ  ಎಳೆ ಪೀಳಿಗೆಯ ಗಮನ ಸೆಳೆಯಲು ನಮ್ಮೊಳಗೆ ಚೆಂದದ ಚರ್ಚೆ ನಡೆಸುತ್ತಿದ್ದ  ಕೃಷಿಕಪರ ಮೇಷ್ಟ್ರುಗಳು ಕಣ್ಮರೆಯಾಗಿದ್ದಾರೆ.

 

ಬಯಲುಸೀಮೆಯ ಜಾಲಿಯ ಕಂಟಿ ಮೇಯುತ್ತ , ಹೊಲಗಳಲ್ಲಿ ತರುಬಿ ನಿಂತ ಕುರಿ ಮಂದೆಗಳಿಗೂ ಕಾಡಿನೂರಿನ ಕೃಷಿಕ ಮಕ್ಕಳಿಗೂ ವಿಶೇಷ ಸಂಬಂಧ”ದೆ.  ಕಪ್ಪತಗುಡ್ಡದ ತಪ್ಪಲಂಚಿನಿಂದ ಮೇಯುತ್ತ ಬರುವ  ಕುರಿಗಳೇ  ಮಲೆನಾಡಿನ ಮಕ್ಕಳ ಮೈಗೆ ಮಳೆ ಹನಿ ತಾಗದಂತೆ ಉಣ್ಣೆ ಕಂಬಳಿಯಾತ್ತಿದ್ದವು. ಚಳ್ಳಕೆರೆಯ ಮಗ್ಗದಲ್ಲಿ ದಾರ ನೇಯ್ದು ತರತರಹದ ಕಂಬಳಿಗಳಿಗಳಾಗಿ ಮಲೆನಾಡಿಗೆ ಅವು ಹೊರಡುತ್ತವೆ. ಹುಣಸೆಬೀಜದ ಗಂಜಿಯಲ್ಲಿ ನೆನೆದು ಕಡಪ್ ಆದವುಗಳನ್ನು  ಬಳಕೆಗೆ ತಕ್ಕಂತೆ ಹದಗೊಳಿಸುವ ಹಿಕ್ಮತ್ತು  ನಮ್ಮ ಕೃಷಿಕರಿಗಿದೆ.  ಮಲೆನಾಡಿನ ಮನೆ ಮನೆಗೆ ಸಾಗಿ ಅವು ಅಬ್ಬರದ ಮಳೆಯ ತಡೆಯಾಗುತ್ತಿದ್ದವು. ಮಳೆ ಪ್ರಹಾರಕ್ಕೆ ಒದ್ದೆಯಾದವುಗಳನ್ನು  ಜಗುಲಿ, ಬಚ್ಚಲ ಮೂಲೆಯ ಹೊಡತಲ( ಕಟ್ಟಿಗೆಯ ಬೆಂಕಿ) ಅಟ್ಟಣಿಗೆಯಲ್ಲಿ ರಾತ್ರಿ ಒಣಗಿಸಬೇಕಿತ್ತು. ಅಲ್ಲಿ ಬೆಂಕಿ ಕಾಯಿಸುತ್ತ ಕೂತ ಅಜ್ಜ ಅಜ್ಜಿಯರು ಕಾಡಿನ ಕತೆ ಹೇಳುತ್ತಿದ್ದರು. ಕಂಬಳಿ ಒಣಗಿಸುವ ಕಾಯಕದಲ್ಲಿ  ಹಲಸಿನ ಬೇಳೆ (ಬೀಜ), ಗೇರು ಬೀಜ ಸುಡುತ್ತ ವಿಶಿಷ್ಠ ರುಚಿ ರಹಸ್ಯ ಪುಟಾಣಿಗಳಿಗೆ ಅರಿವಾಗುತ್ತಿತ್ತು. ಶಾಲೆಯ ಪಾಠದ ಜತೆಗೆ ಹೊಡತಲ ಬೆಳಕಲ್ಲಿ ಕೃಷಿ ಪಾಠ ಸಾಗುತ್ತಿತ್ತು. ಹೊಗೆ ರಹಿತ ಒಲೆ, ಹೊಗೆ ರಹಿತ ಮನೆಗಳು ಬಂದಿವೆ. ಕಂಬಳಿಗಳ ಬದಲು ಪುಟ್ಟ ಛತ್ರಿಗಳು ಮೆರೆದಿವೆ.

 

ಮಲೆನಾಡಿನ ಪ್ರತಿ ಮಳೆಗಾಲಕ್ಕೆ ಮಳೆಯ ಹಾಗೇ ಮೇಷ್ಟ್ರು ನೆನಪಾಗುತ್ತಾರೆ,  ಈಗ ಕಾಲವೂ ಬದಲಾಗಿ ಕೊಡೆಗೆ ತಕ್ಕಂತೆ ಮಳೆ ಎನ್ನುವಂತಾಗಿದೆ!. ಮಲೆನಾಡನ್ನೇ  ಮಳೆ ಮರೆತಿದೆ,  ಮುನಿಸಿ ಕೂತಿದೆ.