ಅಂಗೀಯ ಮ್ಯಾಲಂಗಿ ಛೆಂದೇನೊ ನನರಾಯ |
ರಂಬಿ ಮ್ಯಾಲ ಪ್ರತಿರಂಬಿ ಬಂದರ |
ಛೆಂದೇನೊ ರಾಯ ಮನಿಯಾಗ || 
– ಜಾನಪದ ಸಾಹಿತ್ಯ 

ಪಾತ್ರಗಳು

ನರಸಣ್ಣ
ಬುದ್ಧಣ
ಚಂಬಣ್ಣ
ಶಾಂತ
ಕಾಶಮ್ಮ

—-

[ತೆರೆ ಏಳುತ್ತಲೂ ವಿಶಾಲವಾದೊಂದು ಕೋಣೆಯ ಕಲ್ಪನೆ ಬರುವಂಥ ವ್ಯವಸ್ಥೆ. ಎಡಬದಿಗೆ ಒಂದು, – ಬಲಬದಿಗೊಂದು, – ಹೀಗೆ ಎರಡು ಬಾಗಿಲುಗಳು. ಎಡಗಡೆಯ ಬಾಗಿಲಿಗೆ ಎದುರಾಗಿ – ಮುಖ ಎತ್ತಬೇಕಾದತ್ತ ಮಾಡಿದ ಇನ್ನೆರಡು ಕುರ್ಚಿಗಳು. ಬಲಬದಿಯ ಕುರ್ಚಿಯ ಹಿಂಬದಿಗೆ – ಪುಸ್ತಕದ ಒಂದು ಅಲಮಾರು. ಅದರ ಮೇಲೆ ಅಂಥಿಂಥ ಬಟ್ಟೆಗಳ ಅಸ್ತವ್ಯಸ್ತ ಕಟ್ಟಿ. ಅದರಿಂದೀಚೆಗೆ ಮಾರು ಅಂತೆರದಲ್ಲಿ ಒಂದು ಸ್ಟೂಲು, ಅದರ ಮೇಲೆ ತೆರೆದ ಫೋನೋ ಪೆಟ್ಟಿಗೆ. ಹಾಡೊಂದರ ಕುತ್ತಿಗೆಯನ್ನು ತರನನದಿಂದ ಹಿಸುಕುತ್ತ ನರಸಣ್ಣ ಎಡಬಾಗಿಲಿನಿಂದ ಬರುತ್ತಾನೆ. ಕೈಯಲ್ಲಿ ಅಂದಿನ ಪತ್ರಿಕೆ. ಉಡುಪು – ನೈಟ್‌ಸೂಟು – ಅದೇ ಬಣ್ಣದ ಸಡಿಲಾದ ಅಂಗಿ. ತಲೆಗೆ ಎಣ್ಣೆ ಇಲ್ಲ. ಎಡಬಾಗಿಲ ಬಳಿಯ ಕುರ್ಚಿಯಲ್ಲಿ ಕುಳಿತು ಕೊಳ್ಳಹೋಗಿ – ಪತ್ರಿಕೆಯಿಂದ ಚೆನ್ನಾಗಿ ಜಾಡಿಸಿ ಕುಳಿತುಕೊಂಡು ಪತ್ರಿಕೆ ಓದತೊಡಗುತ್ತಾನೆ. ತುಸು ಸಮಯ ಸತ್ತಬಳಿಕ – ಬುದ್ದಣ್ಣ ಬಲಬಾಗಿಲಿನಿಂದ ಪ್ರವೇಶಿಸಿ ಕೋಣೆಯೆಲ್ಲವನ್ನೂ ನಾಟಕೀಯವಾಗಿ ಈಕ್ಷಿಸುತ್ತ – ]

ಬುದ್ದಣ್ಣ :– (ನಾಟಕದ ಧಾಟಿಯಲ್ಲಿ) ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೋ?

ಹೊಸ್ತಿಲಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ,
ಮನೆಯೊಳಗೆ ಮನೆಯೊಡಯನಿದ್ದಾನೊ ಇಲ್ಲವೋ?
ತನುವಿನೊಳಗೆ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿ,
ಮನೆಯೊಳಗೆ ಮನೆಯೊಡೆಯನಿಲ್ಲಾ –
ಕೂಡಲ ಸಂಗಮದೇವ|……..
ಯಾರಿರುವಿರೊಳಗೆ? – ಇದ್ದೀರೇನು?
ಇದ್ದರೂ ಇರಬಹುದು ದಿಕ್ಕಿರದ ಹಾಳು ಮನೆ.
ಅಯ್ಯಾ ರಾಯರೆ, – ಇದ್ದೀರೇನು ಒಳಗೆ?

(ನರಸಣ್ಣ ಆತನ ಈ ನಾಟಕವೆಲ್ಲವನ್ನೂ ಮುಗುಳು ನಗುತ್ತ ನಿರುಕಿಸುತ್ತಿದ್ದಾನೆ. ಬುದ್ದಣ್ಣ ಮಾತು ಮುಗಿಸುತ್ತಲೂ ಪತ್ರಿಕೆಯನ್ನು ಇನ್ನೊಂದು ಕುರ್ಚಿಯ ಮೇಲೆ ಒಗೆದು ಮುಗುಳು ನಗುತ್ತ ಕೈಮುಗಿಯುತ್ತಾನೆ.)

ನರಸಣ್ಣ :– ದಯಮಾಡಿಸಬೇಕು. ಪಾದಬೆಳಿಸಬೇಕು. ಕವಿಗಳಿಗೆ ಸುಸ್ವಾಗತ! ಬರಬೇಕು…ಹೂಂ…ಅಲ್ಲೇ ಕುರ್ಚಿ ಇದೆ, ಕೂತ್ಕೊಳ್ಳಬೇಕು.

ಬುದ್ದಣ್ಣ :– (ನಾಟಕದ ಗುಂಗಿನಲ್ಲಿಯೇ ಕುಳಿತುಕೊಳ್ಳುತ್ತ) ಇರಲಿ! ಇರಲಿ! ಭಕ್ತಶಿರೋಮಣಿಗಳ ಒತ್ತಾಯವನ್ನು ಅಲ್ಲಗಳೆಯಲಿಕ್ಕಾದೀತೆ?

ನರಸಣ್ಣ :– ಸಾಕು ಬಿಡೋ ನಾಟ್ಕಾ. ಟೀ ಗೀ ಏನಾದರೂ ಮಾಡಬೇಕೋ…ಅಥವಾ……

ಬುದ್ದಣ್ಣ :– ಛೀ! ಛೀ! ಗಂಡಸರ ಕೈಯಿಂದಾದ ಚಹಾ! ಅದೂ ನಾನು ಸ್ವೀಕರಿಸೋದು! ಸಾಧ್ಯವಿಲ್ಲ! ಸಾಧ್ಯವಿಲ್ಲ!
ನರಸಣ್ಣ :– ಮತ್ತೆ ಬಂದೆಯಲ್ಲಾ ನಿನ್ನ ಹಳೇ ಹಾಡಿಗೇ.

ಬುದ್ದಣ್ಣ :– (ಗಂಭೀರನಾಗಿ) ಹಳೇದೋ ಹೊಸದೋ ನಿನಗೇ ಗೊತ್ತು. ಹೋಗಲಿ ಬಿಡು, ಆ ಹಾಳು ವಿಷಯ ಮತ್ತೇಕೆ?
(ಆಲಮಾರಿನಲ್ಲಿ ಪುಸ್ತಕವೊಂದನ್ನು ಹಿರಿದು ಧೂಳು ಜಾಡಿಸಿ ಮೊದಲ ಪುಟ ತಿರುವಿ ಬಾಯಿ ಮಾಡಿ ಓದತೊಡುಗತ್ತಾನೆ.)

(Narasu’s Home Library – ಬುಕ್‌ ನಂಬರ್ ೩೬! ಶಹಬ್ಬಾಶ್‌! ಈ ಪುಸ್ತಕದ ನಂಬರ ಕೂಡ ಎಷ್ಟು ಅರ್ಥಗರ್ಭಿತವಾಗಿದೆಯಲ್ಲೋ! ಮೂರು ಈ ಮನೆಯಲ್ಲಿ – ಆರು ತೌರು ಮನೆಯಲ್ಲಿ.

ನರಸಣ್ಣ :– (ಬೇಸರದಿಂದ) ಎಷ್ಟು ಎತ್ತರದ ಧ್ವನಿಯಲ್ಲಿ – ಎಷ್ಟು ನೂರು ಸಲ ಹೇಳಿದರೆ ಆ ವಿಷಯವನ್ನು ನೀನು ಮರೆಯುತ್ತೀಯೋ ನನಗೆ ಅರ್ಥವಾಗುತ್ತಿಲ್ಲ. ಹೋಗಲಿ ಬಿಡು, ಅಂದ ಹಾಗೇ ನಾನು ಹೇಳಿದ್ದೇನಾಯ್ತು ಕವಿ?

ಬುದ್ದಣ್ಣ :– ಸಧ್ಯ ಇನ್ನರ್ಧಾ ತಾಸಿನಲ್ಲಿ ಇಲ್ಲೇ ಬರ್ತಾಳೆ. ಏನು ಕೇಳುತ್ತಿಯೋ ಕೇಳು… ಈ ಫೋನೋಗ್ರಾಮ್‌ ಏನಾದರೂ ಹಾಡುತ್ತೆಯೇ?

ನರಸಣ್ಣ :– ಅದು ಕೆಟ್ಟು ಹಳೇ ಮಾತಾಗಿ ಹೋಯ್ತು. ಅವಳು ಇಲ್ಲಿಗೇ ಬರ್ತಾಳಾ?

ಬುದ್ದಣ್ಣ :– ಹೂಂ ಯಾಕೆ ಬರ್ಬಾರ್ರ‍ದಾಗಿತ್ತೇನು?

ನರಸಣ್ಣ :– ಹಾಗೇನಿಲ್ಲ, ನಾನಿದ್ದಾಗ ನಿನ್ನೆದುರು ಉತ್ತರಾ ಕೊಡ್ತಾಳೋ ಇಲ್ಲೋ – ಅಂತ.

ಬುದ್ದಣ್ಣ :– ನಡುವೆ ನಾನು ಯಾಕೆ?…ಈ ಫೋನೋಗ್ರಾಂ ನಿಜವಾಗ್ಲೂ ಹಾಡೋಲ್ಲ?

ನರಸಣ್ಣ :– ಕೆಟ್ಟಿದೆ. ದುರಸ್ತಿ ಮಾಡಿಸಬೇಕು.

ಬುದ್ದಣ್ಣ :– ಹೌದ್ಹೌದು, ಅತ್ತಿಗೆ ತೌರಿಗೆ ಹೋದಂದೇ ಈ ಫೋನೊ ಗ್ರಾಂದ ಹಾಡೂ ನಿಂತಿರಬೇಕು – ಅಲ್ಲವೇ?

ನರಸಣ್ಣ :– ಹೌದಾ? ಮತ್ತೆ ಅದೇ ವಿಷಯ – ಅದೇ ಮಾತು – ಅದೇ ಕಥೆ ಅಪ್ಪಾ, ಎಷ್ಟು ಸಲ – ಎಷ್ಟು ಪರಿಯಾಗಿ ಹೇಳಿದರೂ ಮತ್ತೆ ಅದನ್ನೇ ಹಾಡುತ್ತೀಯಲ್ಲೋ ದಾಸ?

ಬುದ್ದಣ್ಣ :– ನೀನು ಮೇಲಿಂದ ಮೇಲೆ ಹಾಗೆ ಹೇಳಿದರೂ ಮತ್ತೆ ಮತ್ತೆ ನಾನೂ ಅದನ್ನೇ ಹಾಡುತ್ತೇನಲ್ಲಾ – ನನಗೂ ಅದೇ ಆಶ್ಚರ್ಯ! ಇಷ್ಟಾಗಿಯೂ ನನಗೆ ಗೊತ್ತಿಲ್ಲವೇ – ಆಗೋ ಪ್ರಯೋಜನ ಅಷ್ಟರಲ್ಲೇ ಇದೆ – ಅಂತ. ಧಡ್ಡ ದೇವರು ನನಗೆ ನಾಚಿಕೆಯನ್ನೇಕೆ ಹಾಕಿಲ್ಲ. ನಾನೇನು ಮಾಡಲಿ?

ನರಸಣ್ಣ :– ನೋಡು ಕವಿ, ನನ್ನ ಮಾತನ್ನು ದಯಮಾಡಿ ಮನಸ್ಸಿಗೆ ಹಚ್ಚಿಕೋಬೇಡ. ಹಿಡಿದ ಹಟ ನಾನೆಂದೂ ಬಿಡೋನಲ್ಲ. ಇದು ನಿನಗೆ ಗೊತ್ತಿಲ್ಲದ ಮಾತೇನೂ ಅಲ್ಲ.

ಬುದ್ದಣ್ಣ :– (ಬೇಸರದಿಂದ ನಿಟ್ಟುಸಿರೆಳೆದು) ಹೂ. ಮಹಾ ಮಹಾ ಕಾರ್ಯಕ್ಕಾಗಿ – ಧ್ಯೇಯ ಗುರಿಗಳಿಗಾಗಿ ಹಟ ತೊಡುವವರನ್ನು ಕಂಡಿದ್ದೆ. ಒಬ್ಬಳನ್ನು ಬಿಟ್ಟು ಇನ್ನೊಬ್ಬಳನ್ನು ಲಗ್ನವಾಗುವುದಕ್ಕೂ ಹಟ ತೊಡ್ತಾರೇಂತ ನನಗೆ ಈ ವರೆಗೂ ತಿಳಿದಿರಲಿಲ್ಲ. ಅಂತೂ ನೀನೊಂದು ಒಳ್ಳೇ ಉದಾಹರಣೆ ದೊರೆತ ಹಾಗಯ್ತು.

ನರಸಣ್ಣ :– (ಕಾವೇರಿ, ಲಘುವಾಗಿ) ನಾವೆಲ್ಲಾ ಕ್ಷುಲ್ಲಕ ಜನ. ನಮ್ಮಂಥವರಿಗೆ ನಿಮ್ಮಂಥಾ ಧ್ಯೇಯ – ಗುರಿ – ಎಲ್ಲಿಂದ ಬರಬೇಕು?

ಬುದ್ದಣ್ಣ :– (ಆದರೂ ಶಾಂತನಾಗಿ) ನೀನೆಷ್ಟು ರೇಗಿದರೂ ನನ್ನ ಮೇಲೇನೂ ಪರಿಣಾಮವಾಗುವುದಿಲ್ಲ – ಇದನ್ನು ಚೆನ್ನಾಗಿ ತಿಳಿದುಕೋ. ನೋಡು ನರಸೂ. (ತಿಳಿಸಿ ಹೇಳುವಂತೆ) ನಿನ್ನ ತಾಯಿಯ ನನ್ನ ಮೇಲಿನ ವಾತ್ಸಲ್ಯಕ್ಕೆ ಕೃತಜ್ಞನಾಗಿ ಇನ್ನೊಮ್ಮೆ ಹೇಳುತ್ತೇನೆ – ಹೆಣ್ಣಿನ ಮರುಕ ಯಾರಿಗೂ ಒಳ್ಳೇದಲ್ಲ. ನೀನು ಶಾಂತಳನ್ನು ಲಗ್ನವಾಗುವ ಮೊದಲೇ ಯೋಚಿಸಿ ಮದುವೆಯಾಗಬೇಕಿತ್ತು. ಅವಳ ರೂಪ – ಬಣ್ಣ – ಇವನ್ನೆಲ್ಲಾ ನೀನು ಮದುವೆಯಾಗುವ ಮುನ್ನವೂ ಕಂಡುದುಂಟು. ಇಷ್ಟಾಗಿಯೂ ಮದುವೆಗೊಪ್ಪಿದೆಯಲ್ಲಾ –

ನರಸಣ್ಣ :– (ಅದೇ ಧಾಟಿಯಲ್ಲಿ) ನಮ್ಮಿಬ್ಬರ ಗೆಳೆತನಕ್ಕೆ ಕೃತಜ್ಞನಾಗಿ ನಾನು ಇನ್ನೊಮ್ಮೆ ಹೇಳುತ್ತೇನೆ ಕೇಳು – ಸಾಯಲಿರುವ ತಾಯಿಯ ಸಮಧಾನಕ್ಕಾಗಿ ಅವಳನ್ನು ಮದುವೆಯಾದದ್ದು, ನನ್ನ ತಪ್ಪೆ? ಇಷ್ಟಕ್ಕೇ ಜೀವನದಲ್ಲಿ ಖೂನಿ ಮಾಡಿದ ಅಪರಾಧಿಯಂಥೆ ನನ್ನನ್ನು ನೀನು ಕಾಣಬೇಕೇ?

ಬುದ್ದಣ್ಣ :– ಎಷ್ಟು ಹಗುರಾಗಿ ಮಾತಾಡ್ತೀಯಲ್ಲೋ ಆಸಾಮಿ ಒಮ್ಮೆಲೇ ಯಾರನ್ನಾದರೂ ಕೊಂದರೆ ಅದು ಅಂಥ ದೊಡ್ಡ ಅಪರಾದ ಖಂಡಿತ ಅಲ್ಲ. ಆದರೆ ದಿನಾಲೂ – ಕ್ಷಣ ಕ್ಷಣಕ್ಕೂ ಶಾಂತಳನ್ನು ಜೀವಂತ ಖೂನಿ ಮಾಡ್ತಾ ಇದ್ದೀಯಲ್ಲಾ – ಇದು ಮಹಾಪರಾಧ! ಹೇಳು ಅವಳು ಏನು ತಪ್ಪು ಮಾಡಿದಾಳೇಂತ ಅವಳಿಗೀ ಶಿಕ್ಷೆ! (ಅಣಕದಿಂದ) ತಾಯಿ ಹೇಳಿದಳು – ಈತ ಮದುವೆಯಾದ; ನಿನ್ನ ತಾಯಿಯ ಮನಸ್ಸಿನಲ್ಲಿ ಮದುವೆಯ ಶಾಸ್ತ್ರ ಮುಗೀಲಿ ಅಂಬೋದು ಅಷ್ಟೇ ಇದ್ದಿತೋ – ಅಥವಾ ಎಲ್ಲರ ಹಾಗೆ ಇವರೂ ಸಂಸಾರ ಮಾಡಲಿ – ಅಂತ ಆಸೆ ಕೂಡ ಇದ್ದಿತೋ? ನೀನು ಮೊದಲೇ ಇಷ್ಟು ಬುದ್ಧಿಯನ್ನು ಉಪಯೋಗಿಸಿದ್ದರೆ ನೀನಲ್ಲ – ನಿನ್ನಂಥ ಇನ್ನೊಬ್ಬ ಚೆಲುವ ಅವಳಿಗೆ ಸಿಕ್ಕೇ ಸಿಗುತ್ತಿದ್ದ. ಇದರಲ್ಲೇನಾದರೂ ಸಂಶಯವಿದೆಯೇ?

ನರಸಣ್ಣ :– (ಕವಿ ಬಿರುಸಾದುದನ್ನು ಗಮನಿಸಿ ನಗುತ್ತ) ಎಂಥಾ ಸುರಸುಂದರಿಯ ಪಕ್ಷ ಕಟ್ಟಿ ಮಾತಾಡ್ತಾ ಇದ್ದೀಯೋ – ಮಹಾಕವಿ! ಏನು ದಿವ್ಯವೋ ನಿನ್ನ ಸೌಂದರ್ಯ ದೃಷ್ಟಿ! ಆಹಾಹಾ! ಏನು ರೂಪ! ಏನು ಬಣ್ಣ! ಕವಿರಾಜಾsಅವಳು ಹೆಣ್ಣೂಂತ ಕರೆಯಿಸಿಕೊಳ್ಳೋದಕ್ಕೆ ಒಂದು ಮಸಡಿಯಾದರೂ ಬೇಡವೇ? ಒಂದು ಧ್ವನಿ?… ಒಂದು ಬಣ್ಣ? ಅದೂ ಹೋಗಲಿ, ಅವಳ ತಂದೆ ಕನ್ನಡದ ನಾಲ್ವತ್ತೇಳು ಅಕ್ಷರಗಳ ಪೈಕಿ ಮೊದಲಿನ ಹದಿನಾಲ್ಕನ್ನಾದರೂ ಕಲಿಸಿರಬಾರದೇ?… ಹೂಂ… ಅಂತೂ ಆ ಎರೇಮಣ್ಣು ನಿನ್ನ ಮೇಲೆ ಇಷ್ಟೊಂದು ಬೆಳಕು ಬೀರಿದೆಯಲ್ಲಾ… ಏನೇ ಆದರೂ ನೀನು ದಿವ್ಯದೃಷ್ಟಿಯುಳ್ಳವನೆನ್ನೋದರಲ್ಲಿ ಸಂಶಯವೇ ಇಲ್ಲ.

ಬುದ್ದಣ್ಣ :– ನಾನು ಕೇಳಿದ ಪ್ರಶ್ನೆಗೆ ನೇರ ಉತ್ತರ ಸಿಗಲಿಲ್ಲ. ಪರವಾ ಇಲ್ಲ. ಕೇಳು ನರಸೂ, ಹೆಣ್ಣೊಂದರ ಬೆಲೆ ಕೇವಲ ಅವಳ ರೂಪದ ಮೇಲೆ ಕಟ್ಟಬಾರದು. ನೋಡಬೇಕಾದ್ದು ಮೈಕಟ್ಟನ್ನಲ್ಲ… ಅವಳು ಕಟ್ಟಿದ ಮನೆಯನ್ನು ಮೈಬಣ್ಣಾ ಅಲ್ಲ – ಗುಣ ಉಜ್ಜಬೇಕು.

ನರಸಣ್ಣ :– ಲೆಕ್ಚರ್ ಆಯ್ತೇ?

ಬುದ್ದಣ್ಣ – ಆಯ್ತು. ಇನ್ನು ಮೇಲೆ ನಿನ್ನಿಷ್ಟ. ಈಗಲೂ ನಾನು ಹೇಳೋದು – ಶಾಂತಳನ್ನು ಕರೆದುಕೊಂಡು ಬಾ – ಎಂದೇ.

ನರಸಣ್ಣ :– ಲೆಕ್ಚರ್ ಮುಗಿಯಿತೆಂದು ನೀನೇ ಹೇಳಿದ್ದು ಈಗ ಮತ್ತೆ –

ಬುದ್ದಣ್ಣ :– (ಅಸಹನೆಯಿಂದ) ಪಂಡಿತರೆದುರು ಲೆಕ್ಚರ್ ಕೊಡುವನೂ ಧಡ್ಡನೇ? ನಮಸ್ಕಾರ್.

(ಬುದ್ದಣ್ಣ ಏಳುತ್ತಿರುವಾಗಲೇ ಆತನನ್ನು ನರಸಣ್ಣ, ಕುರ್ಚಿಯಲ್ಲೇ ಹತ್ತಿಕ್ಕಿ)

ನರಸಣ್ಣ :– ಹೌದ? ಸಿಟ್ಟು ಬಂತು. ಕವಿ, ನಾನೆಂದಾದರೂ ಈ ವಿಷಯವೊಂದನ್ನು ಬಿಟ್ಟು ನಿನಗೆ ಎದುರಾಡಿದ್ದುಂಟೆ? ನೀನು ಹಾಕಿದ ಗೆರೆದಾಟಿದ್ದುಂಟೇ? ಈ ಹಾಳು ವಿಷಯವನ್ನೇ ಮತ್ತೆ ಮತ್ತೆ ಕೆದರಿ ಗಾಯವನ್ನೇಕೆ ಹೆಚ್ಚಿಸಿಕೊಳ್ಳಬೇಕು? ಗಾಳಿ ಸುದ್ದಿ ಕೈ ನೋಯಿಸಿಕೊಳ್ಳುವ ಈ ಎಬಡತನ ಇನ್ನಾದರೂ ಬಿಡಬಾರದೆ? ನೀನು ಕೂಡ ಅವಳ ವಕಾಲತ್ತು ವಹಿಸುವುದು ನಿಜವಾಗಿಯೂ ದುಃಖದ ಸಂಗತಿ. (ಆಕ್ಷೇಪಿಸುತ್ತ) ನೀನೇ ನೋಡುತ್ತೀಯಲ್ಲ – ಇಬ್ಬರ ಮನಸ್ಸಿಗೂ ಒಂದು ನೆಮ್ಮದಿಯಿಲ್ಲ – ಒಂದು ಶಾಂತಿಯಿಲ್ಲ.

ಬುದ್ದಣ್ಣ  :– ತಾನಾಗಿ ಮನೆಗೆ ಬಂದ ಶಾಂತಿಯನ್ನು ತೌರಿಗೋಡಿಸಿದರೆ – ಇನ್ನೆಲ್ಲಿಯದಯ್ಯಾ ಶಾಂತಿ? ಮನೆಯ ನೆಮ್ಮದಿಯನ್ನೋಡಿಸಿ ಈ ಹಾಳು ಧೂಳನ್ನೆಲ್ಲ ಒಳಗೆ ಕರೆದುಕೊಂಡು ಬಿಟ್ಟಿ.

ನರಸಣ್ಣ :– ನೋಡು ಬುದ್ದಣ್ಣ, – ನೀನು ಹೀಗೆಲ್ಲಾ ಮಾತಾಡಿದರೆ ನಾನೂ ಸ್ವಲ್ಪ ನಾಲಿಗೆ ಉದ್ದ ಬಿಡಬೇಕಾದೀತು. “ಮನೆ ನಂದು – ಮನನಂದು, ತಿಳಿದ ಹಾಗೆ ಮಾಡುತ್ತೇನೆ. ಇಷ್ಟಾಗಿಯೂ ನಡುವೆ ಇಣಿಕಿ ಹಾಕೋದಕ್ಕೆ ನೀನು ಯಾರು?” – ಎಂದೂ ಕೇಳಬೇಕಾದೀತು.

ಬುದ್ದಣ್ಣ :– ಕೇಳಬೇಕಾದೀತು ಯಾಕೆ – ಕೇಳಿಯೇ ಬಿಟ್ಟೆಯಲ್ಲ ಸ್ವಾಮಿ, ತಾವು ದೊಡ್ಡವರು. ಈ ವರೆಗೆ ಈ ದಡ್ಡ ಒಂದೆರಡು ಬಿಸಿ ಮಾತು ಆಡಿದ್ದರೆ ಅದೆಲ್ಲ ನಿಮ್ಮ ತಾಯಿಯ ಮೇಲಿನ ಪ್ರೇಮದಿಂದ ಎಂದಾದರೂ ಅನ್ನಿ, ಗೆಳೆತನ ಎಂದಾದರೂ ಹೆಸರಿಡಿ –

ನರಸಣ್ಣ :– (ನಡುವೆ ತಡೆದು) ನೋಡಿದೆಯಾ ಇಷ್ಟಕ್ಕೇ ಸಿಟ್ಟು.

ಬುದ್ದಣ್ಣ :– ಸಿಟ್ಟೆಲ್ಲಿಂದ ಬಂತು? (ಮುಗುಳು ನಗುತ್ತ) ಅಥವಾ ಸಿಟ್ಟೂಂತ ಇದಕ್ಕೇ ಅನ್ನೋದಾದರೆ ಅದನ್ನು ಬರುವ ಹಾಗೆ ಮಾತಾಡಿದವನು ನೀನೇ ತಾನೇ? ಅಂತೂ ನಿನ್ನ ಸಹವಾಸದಲ್ಲಿರಬಯಸುವವರು ಎರಡನ್ನು ಬಿಡಬೇಕು. ಒಂದು ನಾಚಿಕೆ, ಇನ್ನೊಂದ ಉ ಸಿಟ್ಟು. ಶಾಂತ ಬರೋ ಹೊತ್ತಾಯ್ತು. ಏನು ಕೇಳುತ್ತೀಯೋ ಕೇಳು, ನಾನು ಹೋಗಬೇಕು. (ಎದ್ದು ಹೊರಡತೊಡಗುತ್ತಲೂ ನರಸಣ್ಣ ಅಡ್ಡಬಂದು)

ನರಸಣ್ಣ :– ಹೀಗೆ ನಡುದಾರಿಯಲ್ಲೇ ಕೈ ಬಿಡೋದು ನಿನಗೆ ಸೇರುತ್ತಲ್ಲವೇ ಕವಿ?

ಬುದ್ದಣ್ಣ :– ಮತ್ತೆ ನನಗೇನು ಮಾಡಂತೀಯಾ? ಕರೆದುಕೊಂಡು ಬಾಂತ ನೀನು ಹೇಳಿದೆ – ನಾನು ಕರೆದು ಬಂದೆ. ಇನ್ನೇನಾಗಬೇಕು?

ನರಸಣ್ಣ :– ನಿನ್ನೊಡನೆ ಮಾತನಾಡಿದ ಹಾಗೆ ಸಲಿಗೆಯಿಂದ ನನ್ನೊಡನೆ ಅವಳು ಎಂದಾದರೂ ಮಾತನಾಡಿದ್ದುಂಟೆ ಬುದ್ದಣ್ಣ?

ಬುದ್ದಣ್ಣ :– ನೀನು ಅವಳನ್ನು ಮಾತನಾಡಿಸಿದ್ದರೆ ತಾನೆ ಅವಳು ಮಾತಾಡಬೇಕು? ಹೋಗಲಿ ಸುತ್ತು ಬಳಸಿ ಪೀಠಿಕೆ ಹಾಕಬೇಡ , ಏನು ಮಾಡಲಿ ಹೇಳು?

ನರಸಣ್ಣ :– (ಕೈ ಹಿಡಿದು ಬುದ್ದಣ್ಣನನ್ನು ಕುರ್ಚಿಯಲ್ಲಿ ಕುಳ್ಳಿರಿಸಿ ತಾನೂ ಒಂದರಲ್ಲಿ ಕುಳಿತು ತಿಳಿಸಿ ಹೇಳುವವರಂತೆ)

ನೋಡು ಬುದ್ದಣ್ಣ, ಇದರಲ್ಲಿ ನಿನಗೆ ಗೊತ್ತಿಲ್ಲದ್ದು ಏನೂ ಇಲ್ಲ. ನಾನು ಇನ್ನೊಂದು ಮದುವೆ ಮಾಡಿಕೊಳ್ಳಬೇಕಂಬೋದು –

ಬುದ್ದಣ್ಣ :– ಅದಂತೂ ನಿನ್ನ ದಿನನಿತ್ಯದ ಪಲ್ಲವಿ. ಅದು ಅವಳಿಗೂ ಗೊತ್ತು. ಇಷ್ಟಕ್ಕೆ ಅವಳನ್ನೇಕೆ ಇಲ್ಲಿಗೆ ಕರೆಸಬೇಕಲು?

ನರಸಣ್ಣ :– (ಇನ್ನೂ ತಿಳಿಸಿ ಹೇಳುತ್ತ) ಯಾಕೆಂದರೆ ಇನ್ನೊಂದು ಮದುವೆ ಮಾಡಿಕೊಳ್ಳಬೇಕಾದರೆ ಘಟಸ್ಫೋಟವಾಗಬೇಕು – ಅಂದರೆ ಸೋಡ ಪತ್ರ – ಅಂತ. ಇಲ್ಲಾ – ಅವಳು ಇನ್ನೊಂದು ಮದುವೆಗೆ ತಾನಾಗಿ ಒಪ್ಪಿಗೆ ಕೊಡಬೇಕು. ಅದಕ್ಕಾಗಿ…..

(ಬುದ್ದಣ್ಣ ಗಂಭೀರನಾಗಿ ಅಧೋಮುಖಿಯಾಗುತ್ತಲೂ ನರಸಣ್ಣ ಅಷ್ಟಕ್ಕೇ ತನ್ನ ಮಾತು ನಿಲ್ಲಿಸುತ್ತಾನೆ.)

ಬುದ್ದಣ್ಣ :– ಇದರಲ್ಲಿ ನಿನಗೆ ಯಾವುದು ಇಷ್ಟ?

ನರಸಣ್ಣ :– ಎರಡಕ್ಕೂ ಸಿದ್ಧ

ಬುದ್ದಣ್ಣ :– ಮದುವೆಗೆ ಒಪ್ಪಿಗೆ ಕೊಟ್ಟ ಮೇಲೆ ಅವಳ ಗತಿ?

ನರಸಣ್ಣ :– ನನ್ನ ಮನೆ ಇದ್ದೇ ಇದೆ. ಬಂದು ಹಾಯಾಗಿರಲಿ –

ಬುದ್ದಣ್ಣ :– ಆಳಾಗಿ! ಅಲ್ಲವೆ? ನರಸೂ, ನೀನಿದ್ದೀ – ಅವಳಿದ್ದಾಳೆ; ಅಂತೂ ಕೇಳು, ಹ್ಯಾಗೆ ಒಪ್ಪಿದರೆ ಹಾಗೆ, ನಡುವೆ ನಾನ್ಯಾರು?

ನರಸಣ್ಣ :– ಹೀಗೆ ನಡುವೇ ಕೈಬಿಟ್ಟರೆ ಮುಂದಿನ ಹೊಣೆ ನನ್ನಿಂದ ಹೊರಲು ಸಾಧ್ಯವೇ ಬುದ್ಧ? ಅವಳು ಮದುವೆಗೆ ಒಪ್ಪಿದರೆ ಮುಂದಿನದನ್ನೆಲ್ಲ ನೀನು ಹೇಳಿದ ಹಾಗೆ ಚಾಚೂ ತಪ್ಪದೆ ಕೇಳೋದು – ನನ್ನ ಜವಾಬ್ದಾರಿ. ಇನ್ನುಳಿದದ್ದು ನಿನ್ನದು.

ಬುದ್ದಣ್ಣ :– ಇನ್ನುಳಿದದ್ದೆಂದರೆ?

ನರಸಣ್ಣ :– ಅವಳನ್ನು ಒಪ್ಪಿಸುವದು. ಒಂದು ದೃಷ್ಟಿಯಿಂದ ಘಟಸ್ಫೋಟವಾಗುವುದು ಒಳ್ಳೆಯದು. ಅವಳೂ ಇನ್ನೊಬ್ಬನನ್ನು ಮದುವೆಯಾಗಿ ಸುಖದಿಂದಿರಬಹುದು. ಅಷಟಾಗಿ ಮದುವೆ ಅನಿವಾರ್ಯವೆನ್ನುವುದಂತೂ ನನ್ನ ಗುಣ ಬಲ್ಲ ನಿನಗೆ ಗೊತ್ತಿರಬೇಕು.

ಬುದ್ದಣ್ಣ :– ಅಂದರೆ ಅವಳನ್ನು ನಾನೇ ಕೇಳಬೇಕಂತೀಯೇನು?

ನರಸಣ್ಣ :– ನನಗಿನ್ನು ಯಾರಿದ್ದಾರೆ?

ಬುದ್ದಣ್ಣ :– (ತುಸು ಹೊತ್ತು ನೀರವನಾಗಿ ಕುಳಿತು) ನಿನ್ನ ಇಷ್ಟವನ್ನು ನೀನಿದೀಗ ತಿಳಿಸಿದಂತೆ ಅವಳಿಗೆ ರಿಪೋರ್ಟು ಮಾಡುತ್ತೇನೆ. ಮುಂದಿನದು ದೈವದಿಚ್ಛೆ. (ಹೊರಗೆ ನೋಡುತ್ತ) ಬರ್ತಾ ಇದಾಳೇಂತ ಕಾಣಶ್ತದ. ನೀನು ಒಳಗೆ ಕೂತಿರು. ಬದಿಯ ಕೋಣೆಯಲ್ಲೇ ಇರು. ನಮ್ಮ ಸಂಭಾಷಣೆ ನೀನು ಕೇಳಬೇಕೆಂದು ನನ್ನಿಷ್ಟ. (ನರಸಣ್ಣ ಬಲಬಾಗಿಲ ಕಡೆಗೊಮ್ಮೆ ನೋಡಿ ಎಡಬಾಗಿಲಿನಿಂದ ಒಳಗೆ ಹೋಗುತ್ತಾನೆ. ಬುದ್ದಣ್ಣ ಗಂಭೀರನಾಗಿ ಪ್ರೇಕ್ಷಕರತ್ತ ಬೆನ್ನು ತಿರುಗಿಸಿ ವಿಚಾರಮಗ್ನನಾಗುತ್ತಾನೆ. ಬಲಬಾಗಿಲಿನಿಂದ ಶಾಂತ ತೀರ ಸಣ್ಣ ಧ್ವನಿಯಲ್ಲಿ ‘ಅಣ್ಣಾ ಎಂದು ಕರೆಯುತ್ತಾಳೆ. ಬುದ್ದಣ್ಣ ತಿರುಗಿ ನಿಂತು ಒತ್ತಾಯದಿಂದ ನಗೆ ತರಲೆತ್ನಿಸಿ ಸೋಲುತ್ತ)

ಬುದ್ದಣ್ಣ :– ಬಾ ಶಾಂತ. ಒಳಗೆ ಬಾ… ಮನೆ ನಿಂದೇ ಅಲ್ಲವೇ? ಬಾ, ಕೂತುಕೊ.

(ಶಾಂತ ಸಾವಕಾಶವಾಗಿ ಒಳಬಂದು ಬಾಗಿಲ ಬಳಿಯಲ್ಲಿಯ ಮೂಲೆಯಲ್ಲಿ ನಿಂತುಕೊಳ್ಳುತ್ತಾಳೆ. ಬಣ್ಣ ಕಪ್ಪಾದರೂ ಲಕ್ಷಣವಂತೆ. ಒಳಗೆ ತನ್ನವರು ಇದ್ದಾರೇನೋ ಎಂದು ಅಧೈರ್ಯದಿಂದ ಎಡಬಾಗಿಲ ಕಡೆಗೆ ನೋಡುತ್ತಿರುವಾಗ)

ಬುದ್ದಣ್ಣ :– ಒಳಗೆ ಯಾರೂ ಇಲ್ಲ. ನಿಶ್ಚಿಂತಳಾಗಿ ಕೂತ್ಕೊಬಾರ್ದೆ?

ಶಾಂತ :– (ನಿಂತುಕೊಂಡೇ) ಯಾಕಣ್ಣಾ ಕರೆಸಿದಿರಿ?

ಬುದ್ದಣ್ಣ :– ಇದ್ದೇ ಇದೆ ಹಳೇ ಹಾಡುಇ. ನಿಮ್ಮ ತಂದೆ ಎಲ್ಲಿ – ಯಾಕೇ ಅಂತ ಏನಾದರೂ ಕೇಳಿದರೇ?

ಶಾಂತ :– ನಿಮ್ಮ ಮನೆಗೆ ಹೋಗುತ್ತೇನಂತ ಹೇಳುತ್ಲೂ ಸುಮ್ಮನಾದರು.

ಬುದ್ದಣ್ಣ :– ಅಂದಹಾಗೇ ಅವರೇನಾದರೂ – ನರಸಣ್ಣನ ವಿಷಯ ಯೋಚ್ನೆ ಮಾಡಿದರೇನು?

ಶಾಂತ :– ಏನೂ ಇಲ್ಲ. ನಿಮಗೊಮ್ಮೆ ಭೇಟಿಯಾಗ್ಲಿಕ್ಕೆ ಹೇಳೂಂತ ಹೇಳಿದ್ರು.

ಬುದ್ದಣ್ಣ :– (ಹೇಳಲೋ ಬೇಡವೋ ಎಂಬಂತೆ ಅನುಮಾನಿಸುತ್ತ) ಸರಿ.

ಶಾಂತ :– ಯಾಕಣ್ಣ ಕರೆಸಿದ್ರಿ?

ಬುದ್ದಣ್ಣ :– (ಅನಿವಾರ್ಯವಾಗಿ ಹೇಳಲೇಬೇಕಾದುದರಿಂದ ವಿಷಾದಿಸಿ) ನೋಡು ಶಾಂತ, ಎರಡನೆ ಮದುವೆ ಬೇಕೂಂತ ಹಾರಾಡ್ತಾ ಇರೋ ನರಸಣ್ಣನ ವಿಷಯ ನಿನಗೂ ಗೊತ್ತಿರಬೇಕು…..

ಶಾಂತ :– ಹೂಂ…..

ಬುದ್ದಣ್ಣ :– ನಿಜವಾಗಿಯೂ ಇಂಥ ಪ್ರಶ್ನೆ ಕೇಳಲಿಕ್ಕೆ ನನಗೆ ತುಂಬಾ ನಾಚಿಕೆ ಆಗ್ತಾ ಇದೆ. ಆದರೂ ನೀವಿಬ್ಬರೂ ಹೀಗೆ ದೂರ ದೂರಾಗಿರೋದು ಅಷ್ಟು ಒಳ್ಳೇದಲ್ಲ. ಎಷ್ಟು ದಿನಾಂತ ಇರೋದು? ನರಸಣ್ಣನ ಮನಸ್ಸೇನಾದರೂ ಪರಿವರ್ತನೆ ಹೊಂದಬಹುದು – ಅಂತ ?ಈಗ ಎರಡು ವರ್ಷ ನೋಡಿದ್ದಾಯ್ತು. ಇನ್ನೂ ನೋಡ್ತಾ ಕುಳಿತುಕೊಳ್ಳೋದು ಇಬ್ಬರಿಗೂ ಯೋಗ್ಯವಲ್ಲ. ಯಾವುದಾದರೊಂದು ನಿರ್ಣಯಕ್ಕೆ ನೀವಿಬ್ಬರೂ ಆದಷ್ಟು ಬೇಗ