[ನರಸಪ್ಪನ ಮನೆ, ಹಿಂದೆ ಕಂಡ ಕೋಣೆಯೇ ಈಗಲೂ ಕಾಣುತ್ತಿದೆಯಾದರೂ ತುಂಬ ಬದಲಾವಣೆಯಾಗಿದೆ. ಸ್ವಚ್ಚವಾದ ಪರದೆ ಎಡಬಾಗಿಲಿಗೆ ತೂಗುತ್ತಿದೆ. ನಡುವೆ ಒಂದು ಪುಟ್ಟ ಟೇಬಲ್ಲು ಹೊಸದಾಗಿ ಬಂದಿದೆ. ಅದರ ಸುತ್ತಲೂ ನಾಲ್ಕು ಕುರ್ಚಿಗಳು. ಮೇಜಿನ ಮೇಲೊಂದು ಹೂವಿನ ಹೂಜಿ ಕೂಡ! ಪುಸ್ತಕದ ಅಲಮಾರು ವ್ಯವಸ್ಥೆಯಲ್ಲಿದ್ದು ಬದಿಯ ಸ್ಟೂಲಿನ ಮೇಲೆ ಫೋನೋ ತೆರೆದೇ ಇದೆ. ಅದರ ಬದಿಗೊಂದು ಊದಿನ ಕಡ್ಡಿಯುಳ್ಳ ಪಾತ್ರೆ. ಬುದ್ದಣ್ಣ ಎಡಬಾಗಿಲಿನಿಂದ ಅವಸರವಾಗಿ ಹೊರಬಂದು ಮತ್ತೆ ಆ ಬಾಗಿಲ ಕಡೆಗೆ ಮುಖ ಮಾಡಿ…]

ಬುದ್ದಣ್ಣ :– ನಾನು ಹೇಳಿದ್ದನ್ನು ಮಾತ್ರ ಮರೆಯಬೇಡ – ಹೂಂ… ಅದು ಹಾಗೇ ಇರಲಿ. ಈ ಅರಿವೆಗಳನ್ನೆಲ್ಲಾ ಆ ಪೆಟ್ಟಿಗೆಯಲ್ಲಿ ಹಾಕಿಡು. ಆ ಒಳಗಿನ ಕೋಣೆ ಕಸಗುಡಿಸಿದೆಯೋ ಇಲ್ಲವೋ ನೋಡು, (ಫೋನೋಗ್ರಾಂದ ಕಡೆಗೆ ಬರುತ್ತ – ) ಇದು ಹಾಡುತ್ತೋ ಇಲ್ಲವೋ (ಬಲ ಬಾಗಿಲಿನಿಂದ ಹೊರಗೊಮ್ಮೆ ಇಣಿಕಿ) Good………!

(ಫೋನೋ ತಿರುಗುವುದಕ್ಕೂ ನರಸಣ್ಣ ಅತ್ಯವಸರದಿಂದ ಒಳಬರುವುದಕ್ಕೂ ಸರಿಹೋಗುತ್ತದೆ. ನರಸಣ್ಣ ಆಶ್ಚರ್ಯದಿಂದ ಮನೆಯನ್ನು ನೋಡತೊಡಗುತ್ತಾನೆ.)

ನರಸಣ್ಣ :– ವ್ಹಾ! ಇದೇನೋ ಕವಿ ಮಾಯಾಬಾಝಾರ! ಎಲಾ! ಎಲಾ! ಏನಿದು! ನೀನು ಮನೆಯನ್ನು ಈ ರೀತಿ ಪರಿವರ್ತಿಸಬಲ್ಲೆ – ಅಂಬೋದು ನನಗೂ ಗೊತ್ತಿರಲಿಲ್ಲ ಬಿಡು! ಎಲಾ……

ಬುದ್ದಣ್ಣ :– ಇದೆಲ್ಲಾ ನನ್ನದಲ್ಲಯ್ಯಾ. ಆ ಭಾಂಡೆ ಬೆಳಗೋ ಬಾಯೀ ಕೆಲಸ. ಮುಂಜಾನೆಯಿಂದ ಈ ಮನೆಗೊಂದು ಆಕಾರ ಕೊಡೋದಕ್ಕೆ ಪ್ರಯತ್ನ ಮಾಡ್ತಾ ಇದ್ದಾಳೆ ಪಾಪ. ನಿನಗೆ ತುಂಬಾ ಸೇರುತ್ತಲ್ಲವೆ ಮನೆ? (ರೆಕಾರ್ಡು ಹಚ್ಚುವುದಕ್ಕೆ ತೊಡಗುತ್ತಾನೆ.)

ನರಸಣ್ಣ :– ಸೇರದೇನು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ನರಸಣ್ಣ! ಆ ಕೆಟ್ಟಫೋನೋ ತೀರುವೋದರಲ್ಲಿ ಏನರ್ಥವಿದೆ – ಬಿಡಬಾರದೆ?

ಬುದ್ದಣ್ಣ :– ಅಯ್ಯಾ ಎರಡು ತಾಸು ತಲೆ ಕುಟ್ಟಿಕೊಂಡು ದುರಸ್ತಿ ಮಾಡೀನಿ. ನೀನೇ ನೋಡೀಯಂತೆ ನಿಲ್ಲು. (ರಿಕಾರ್ಡು ಸುಯ್‌ಗುಡ ತೊಡಗುವುದು.)

ನರಸಣ್ಣ :– (ನಗುತ್ತ) ಅಂತೂ ಈ ಮನೆಯ ಹಾಡು ಈ ಹೊತ್ತು ತಿರುಗಿ ಬರುತ್ತದೆ – ಅನ್ನಲು.

(ಫೋನೋಗಾಂ ಹಾಡತೊಡುಗ್ತದೆ – )
ಸೌಂದರ್ಯವೆಂಬುದು ಕಣ್ಣೀನ ತುತ್ತಲ್ಲ
ಕಣ್ಣಿಗು ಕಣ್ಣಾಗಿ ಒಳಗಿಹುದು.
ರೂಪ ಲಾವಣ್ಯಕ್ಕೆ ಅಳೆಯಲು ಬಾರದು
ಅವುಗಳೆ ಇದರೊಂದು ಕಣವಿಹವು.

(ಪದ್ಯ ಮುಗಿದು ಇನ್ನೊಮ್ಮೆ ಅದೇ ಪಲ್ಲವಿ ಪ್ರಾರಂಭವಾಗುತ್ತಿರುವಾಗಲೇ ನರಸಣ್ಣ ಅದನ್ನು ಅಷ್ಟಕ್ಕೇ ನಿಲ್ಲಿಸುತ್ತಾನೆ. ಬುದ್ದಣ್ಣ ಸುಮ್ಮನಾಗುತ್ತಾನೆ. ಅಷ್ಟರಲ್ಲಿ ಹೊರಗೆ – ಮನೆಯ ಮುಂದೆ ಕಾರು ನಿಂತ ಸಪ್ಪಳವಾಗುತ್ತದೆ. ಇಬ್ಬರೂ ಗಡಬಡಿಸಿ ಹೊರಗೆ ಓಡಿ ಹೋಗುತ್ತಾರೆ. ಸ್ವಲ್ಪ ಸಮಯವಾಗುತ್ತಲೂ ನರಸಣ್ಣ ಮುಂದಾಗಿ ಬಂದು ……)

ನರಸಣ್ಣ :– ಬನ್ನಿ ಬನ್ನಿ… ಒಳಗೆ ಬನ್ನಿ. ಬಸ್ಸಿನಿಂದ ಬರ್ತೀರೇನೋ ಅಂತ ತಿಳಿದಿದ್ದೆ. ಬನ್ನಿ ಬನ್ನಿ…..

(ಮೊದಲು ಚಂಬಣ್ಣ ಆ ಮೇಲೆ ಕಾಶಮ್ಮ ಅವರ ಹಿಂದೆ ಹಿಂದೆ ಬುದ್ದಣ್ಣ ಬರುತ್ತಾರೆ. ಚಂಬಣ್ಣ ಹತ್ತು ಹಡೆದವರಂಥ ವಯಸ್ಸು, ಮುಖ. ಉಡುಪು ಸಾದಾ – ಆದರೂ ಸ್ವಚ್ಛವಾದುದು. ಕಾಶಮ್ಮ ಹೇಳಿ ಕೇಳಿ ಅವನ ಹೆಂಡತಿ – ಇವಳೇ ಹತ್ತು ಹಡೆದಾಕೆ.)

ನರಸಣ್ಣ :– (ಕುರ್ಚಿ ತೋರಿಸುತ್ತ) ಕೂತ್ಕೊಳ್ಳಿ ಕೂತ್ಕೊಳ್ಳಿ (ಅತಿಥಿಗಳು ಕುಳಿತುಕೊಂಡಾದ ಮೇಲೆ ಬುದ್ದಣ್ಣನೂ ಕುಳಿತುಕೊಳ್ಳುತ್ತಾನೆ. ನರಸಣ್ಣ ನಿಂತುಕೊಂಡೇ) ಇವರು ಬುದ್ದಣ್ಣ – ನನ್ನ ಸ್ನೇಹಿತರು. ಕವಿಗಳು ,ನಮ್ಮೂರ ಹೈಸ್ಕೂಲಿನಲ್ಲಿ ಟೀಚರಾಗಿದ್ದಾರೆ. (ಪರಸ್ಪರ ನಮಸ್ಕಾರ ವಿನಿಮಯ.)

ಚಂಬಣ್ಣ :– ತುಂಬ ಸಂತೋಷ. ನಿಮ್ಮ ಕವಿತೆಗಳನ್ನು ನಾನು ದಿನ ಪತ್ರಿಕೆಯಲ್ಲಿ ಓದಿದ ಹಾಗಿವೆ. ಅಲ್ಲವೇ? ಮತ್ತೇನು ಮನೆ ತುಂಬ ಸೊಗಸಾಗಿದೆ. ಸ್ವಂತ ಮನೆ ತಾನೇ?

ನರಸಣ್ಣ :– ಹೌದು.

ಚಂಬಣ್ಣ :– ತುಂಬ ಸೊಗಸಾಗಿದೆ. ಮನೆಯಲ್ಲಿ ಅಕ್ಕ ತಂಗಿ – ಯಾರಾದರೂ…..?

ನರಸಣ್ಣ :– ಯಾರೂ ಇಲ್ಲ. ಸಧ್ಯಕ್ಕೆ ನಾನೊಬ್ಬನೇ.

ಬುದ್ದಣ್ಣ :– ನೀವು ಮನಸ್ಸು ಮಾಡಿದರೆ ಮೂವರಾಗುತ್ತಾರೆ ಮನೆಯಲ್ಲಿ.

ನರಸಣ್ಣ :– … ಅಂದರೆ ಕವಿಗಳನ್ನು ಕೂಡಿಸಿಕೊಂಡೂ ಅಂತ.

ಚಂಬಣ್ಣ :– Good! ನೀವು ಒಬ್ಬರೇ ಇದ್ದೂ ಮನೆ ಹೀಗಿಟ್ಟಿದ್ದೀರಾ?

ಬುದ್ದಣ್ಣ :– ಇಲ್ಲ. ಕೆಲಸದಾಕೆ ಒಬ್ಬಳಿದ್ದಾಳೆ. ಅವಳಿಂದ ಇದೆಲ್ಲಾ ಬಿಟ್ಟಿ.

ಚಂಬಣ್ಣ :– ಎಷ್ಟು ಕೋಣೆ ಮನೆಗೆ?

ನರಸಣ್ಣ :– ಇನ್ನೂ ಮೂರುಂಟು. ಬನ್ನಿರಲ್ಲ ನೋಡೋಣ.

(ಎಲ್ಲರೂ ಕೂಡಿ ಒಳಗೆ ಹೋಗುವರು. ಸ್ವಲ್ಪ ಸಮಯದ ನಂತರ ಭಾಂಡೆ ಬೆಳಗುವ ಬಾಯಿ, ಮುಖದ ತುಂಬ ಸೆರಗು ಹೊತ್ತುಕೊಂಡು ಚಹದ ವಗೈರೆಗಳೊಂದಿಗೆ ಬಂದು ಟೇಬಲ್ಲಿನ ಮೇಲೆ ಕಪ್ಪು ಬಸಿಗಳನ್ನು ಓರಣವಾಗಿ ಇಡತೊಡಗುವಳು. ಕಾಶಮ್ಮ ಸಾವಕಾಶವಾಗಿ ಹೊರಬಂದು ಮತ್ತೆ ಸ್ವಸ್ಥಾನದಲ್ಲಿ ಕುಳಿತುಕೊಳ್ಳುತ್ತ…)

ಕಾಶಮ್ಮ :– ಇದೇ ಊರಿನವಳೇನಮ್ಮಾ ನೀನು?

ಬಾಯಿ :– ಹೂಂ…..

ಕಾಶಮ್ಮ :– ದಿನಾಲೂ ಎಷ್ಟು ತಾಸು ದುಡೀಬೇಕುಇ?

ಬಾಯಿ :– ಬೆಳಿಗ್ಗೆ ಒಂದು ತಾಸು ದುಡಿದರೆ ಆಯ್ತು.

ಕಾಶಮ್ಮ :– ಹಾಗಾದರೆ ನರಸಣ್ಣನವರ ಮೊದಲಿನ ಹೆಂಡತಿಯ ಗುರುತು ನಿನಗೆ ಚೆನ್ನಾಗಿ ಇದ್ದಿರಬೇಕಲು.

ಬಾಯಿ :– ಹೂಂನ್ರಿ… (ಅವಳಿಗೆ ಕಾಣದಂತೆ ಕಂಬನಿ ಮಿಡಿದು)
ಕಾಶಮ್ಮ :– ಹ್ಯಾಗಮ್ಮಾ ಅವಳ ಸ್ವಭಾವ?
ಬಾಯಿ :– ಯಜಮಾನ್ರೇs ಹೇಳುತ್ತಿದ್ದರು – ಅವಳು ಭಾಳ ಅಸಹ್ಯದಾಳಂತ.

ಕಾಶಮ್ಮ :– ಈಗ ಇವರು ಎರಡನೆ ಮದುವೆ ಮಾಡಿಕೊಇಳ್ಳಬೇಕೂಂತ ಇದಾರಲ್ಲಾ – ಅದಕ್ಕ ಅವಳೇನೂ ತಕರಾರು ತಗೀಲಿಲ್ಲಾ?

ಬಾಯಿ :– ಏನೂ ಇಲ್ರಿ. ಭಾಂಡೇ ಎಲ್ಲಾ ಬೆಳಗಲಾಕ ನನ್ನ ಒಬ್ಬ ಆಳಿನ ಹಾಂಗಾದರೂ ಇಟ್ಟಗೊಂಡರೆ ಸಾಕಂತ ಹೇಳಿದಳ್ರಿ.

ಕಾಶಮ್ಮ :– ಹೌದಾ? ಈಗೆಲ್ಲಿ ಅವಳು?

ಬಾಯಿ :– ತೌರಮನ್ಯಾಗದಾಳ್ರಿ. (ಚಂಬಣ್ಣ – ಬುದ್ದರ್ಣಣನವರ ಮಾತುಗಳಲು ಕೇಳಬರುತ್ತವೆ.)

ಕಾಶಮ್ಮ :– ತೌರಮನೆ – ಇದೇ ಊರು ಅಂತ ಕಾಣಸ್ತದ.

ಬಾಯಿ :– ಹೂನ್ರಿ….. (ಒಳಗೆ ಹೋಗುವಳು. ಅದೇ ಬಾಗಿಲಿನಿಂದ ಮೊದಲು ಚಂಬಣ್ಣ ಬುದ್ದಣ್ಣ – ಆ ಮೇಲೆ ನರಸಣ್ಣ ಬಂದು ಕುರ್ಚಿಗಳಲ್ಲಿ ಕುಳಿತುಕೊಳ್ಳುತ್ತಾರೆ.)

ಚಂಬಣ್ಣ :– ಎಲಾ! ಟೀ ಯಾರಿಗೆ ಬೇಕಿತ್ತು ಈವಾಗ? ಸುಮ್ಮನೇ ನಿಮಗೆಲ್ಲ ತೊಂದರೆ.

ಬುದ್ದಣ್ಣ :– ತೊಂದರೆ ಏನು ಬಂತು ತಕ್ಕೊಳ್ಳಿ.

ಚಂಬಣ್ಣ :– ನೋಡಿ ಬುದ್ದಪ್ಪನವರೇ, ನನಗುಳಿದಿರೋದು ಇನ್ನೊಂದೇ ಸಂಶಯ. ಅದಷ್ಟು ಪರಿಹಾರವಾದರೆ ಆಯ್ತು.

ಬುದ್ದಣ್ಣ :– ಅದೇನು ಹೇಳಿರಲ್ಲ. ಆದಷ್ಟು ಬಿಚ್ಚಿ ಮಾತನಾಡೋದು ಒಳ್ಳೇದು.

ಚಂಬಣ್ಣ :– ನೋಡಿ. ದಯಮಾಡಿ ಮನಸ್ಸಿಗೆ ಹಚ್ಚಿಕೋ ಬೇಡಿ. ಒಬ್ಬ ಮಗಳಿಗೆ ನಾನು ತಂದೆಯಾದ್ದರಿಂದ ಇದನ್ನೆಲ್ಲಾ ಯೋಚಿಸಬೇಕಾಗಿದೆ.

ಬುದ್ದಣ್ಣ :– ಅದಕ್ಕೇನಂತೆ ಕೇಳಬಹುದಲ್ಲ.

ಚಂಬಣ್ಣ :– ನರಸಪ್ಪನವರ ಮೊದಲೇ ಸಂಬಂಧದ ವಿಷಯ ನನಗೇನೂ ಗೊತ್ತಾಗಲಿಲ್ಲ. ಈಗಾಗಲೇ Divorce ಏನಾದರೂ ಆಗಿದೆಯೆ – ಅಥವಾ ಅವರೇ ಸ್ವತಃ ಒಪ್ಪಿಗೆ ಕೊಟ್ಟರೇ? – ಇದನ್ನೆಲ್ಲಾ ನಾನು ಯಾಕೆ ವಿಚಾರಿಸ್ತ ಇದೀನಂತಂದ್ರೆ – ಎಷ್ಟಾದರೂ ಕಾನೂನಂದ್ರೆ ಕಾನೂನೇ ಅಲ್ವೆ? ಆ ಮೇಲೆ ನಾವು ನೀವು ಇರುಳು ಕಂಡ ಬಾವಿಗೆ ಹಗಲು ಹೊತ್ತಿನಲ್ಲೇ ಬಿದ್ದ ಹಾಗಾದೀತು – ಅಲ್ಲ – ಮಾತು ಹೇಳ್ತೀನಿ.

ಕಾಶಮ್ಮ :– ಸ್ವಂತ ಅವಳೇ ಒಪ್ಪಿಗೆ ಕೊಟ್ಟಿದಾಳೇಂತ ಬಿಡೀಂದ್ರೆ.

ಚಂಬಣ್ಣ :– Good! ನಿನಗ್ಯಾರೇ ಹೇಳಿದ್ದು?

ಕಾಶಮ್ಮ :– ಯಾರೇನು? ಇವರ ಮನೆಗೆ ಭಾಂಡೇ ಬೆಳಗಲಿಕ್ಕೆ ಬರ್ತಾಳಲ್ಲ – ಹೆಂಗಸು – ಅವಳು, (ನರಸಣ್ಣ ಆಶ್ಚರ್ಯದಿಂದ ಕಣ್ಣರಳಿಸಿ ನೋಡತೊಡಗುತ್ತಾನೆ.) ಒಬ್ಬ ಮನೆಯ ಆಳಿನ ಹಾಗೆ ನಡೆಸಿಕೊಂಡ್ರೂ ಸಾಕಂತ ಹೇಳಿದಳಂತೆ. ಸೋಡಪತ್ರ ಇಸಿದುಕೊಂಡರೆ ಇನ್ನೊಬ್ಬ ಗಂಡನಾದರೂ ಸಿಗಬೇಡವೇ ಹೆಸರು ಹೇಳಿಕೊಳ್ಲಿಕ್ಕೆ?

ಬುದ್ದಣ್ಣ :– ಹೂಂ – ಅದೂ ಸರಿ ಅನ್ನಿ – ಈಗಿನ ಹೆಣ್ಣು ಹೆಚ್ಚಾದ ಕಾಲದಲ್ಲಿ!

ಚಂಬಣ್ಣ :– (ಚಹಾ ಗುಟುಕರಿಸುತ್ತ) ಚಹಾ ಅವಳೇ ಮಾಡಿದ್ದಾ? Good! ನೋಡಿ, ಬುದ್ದಪ್ಪನವರೇ, ನಾನು ಇಂದಿನ ಕಾಲದ ಮನುಷ್ಯ. ಸಂಪ್ರದಾಯ – ಗಿಂಪ್ರದಾಯ ನನ್ನ ಮಟ್ಟಿಗೆ ಎಲ್ಲಾ ಗೊಡ್ಡು ಹರಟೆ. ಮುಚ್ಚುಮರೆ – ನನಗೆ ಬೇಕಿಲ್ಲ . ಬಾಯಿಬಿಟ್ಟು ಹೇಳಲೇಬೇಕೆಂದರೆ ನನಗೆ ನಿಮ್ಮಸಂಬಂಧ ತುಂಬ ಇಷ್ಟ. ಇನ್ನು ನೀವು ಬಂದು ಕನ್ಯಾ ನೋಡುವುದೊಂದೆ ಬಾಕಿ. ಏನಂತೀರಿ?

ಬುದ್ದಣ್ಣ :– ಹೌದು ಯಾಕಲ್ಲ?
ಚಂಬಣ್ಣ :– ಗೋಣು ಹಾಕಿದರೆ ನಿಮ್ಮ ಕರ್ತವ್ಯವೆಲ್ಲಾ ಮುಗಿದಂತಾಗಲಿಲ್ಲ. ಎಲ್ಲಾ ಭಾರ ನೀವೇ ಹೊರಬೇಕು. ಅದೀಗ ನಿಜವಾದ ಗೆಳೆತನ.

ನರಸಣ್ಣ :– (ನಗುತ್ತ) ಅವನು ಹೊರೋಲ್ಲಾಂದರೂ ನಾವು ಕೇಳಬೇಕಲ್ಲ.

ಚಂಬಣ್ಣ :– ಸರಿ ಸರಿ. ಹಾಗಾದರೆ ನಾವು ಬರುತ್ತೇವೆ. ನೀವು ಈ ಹೊತ್ತೇ ಯಾಕೆ ನಮ್ಮೂರಿಗೆ ಬರಬಾರದೂ – ಅಂತ? ನೋಡಿ – ಇಂಥಾ ಕೆಲಸ ಎಷ್ಟು ಸಾಧ್ಯವೋ ಅಷ್ಟು ಬೇಗ ಮುಗಿಸಬೇಕು. ಶುಭಸ್ಯ ಶೀಘ್ರಂ, ಏನಂತೀರಿ ಬುದ್ದಣ್ಣಾ…?

ಬುದ್ದಣ್ಣ :– ಅದು ಸರಿ. ಆದರೆ –
ಚಂಬಣ್ಣ :– ನೋಡಿ, ಆದರೆ ಗೀದರೆ – ಇಂಥಾ ಸಂದರ್ಭದಲ್ಲಿ ಉಚ್ಚರಿಸಬಾರದು. ಹೇಗೂ ನಮ್ಮ ಕಾರಿದೆ. ನೋಡಿ ಬರೋದಕ್ಕೇನು? ನಿಮಗೆ ಸೇರಿತು – ಇಲ್ಲಾ – ಅದೆಲ್ಲಾ  ಆ ಮೇಲೆ. ನನ್ನ ಸ್ನೇಹಿತನೊಬ್ಬನಿದ್ದಾನೆ. ಅವನ ಮನೆಗಿಷ್ಟು ಹೋಗಿ ಬರ್ತೀವಿ. ಬರೋದರಲ್ಲೇ ನೀವು ಇಬ್ಬರೂ ಸಿದ್ಧರಾಗಿರಬೇಕು. ಆತ ಮನೆಯಲ್ಲಿ ಇಲ್ಲದಿದ್ದರೆ ಐದಾರು ನಿಮಿಷಗಳಲ್ಲೇ ತಿರುಗಿ ಬರಬಹುದು… ಸಿದ್ಧವಾಗಿರಬೇಕು. ಹಂ?

(ಎದ್ದು ಹೊರಡುವರು. ಕಾಶಮ್ಮನೂ ಬೆಂಬತ್ತುವಳು. ಬಾಗಿಲವರೆಗೆ ಹೋಗಿ ಮತ್ತೆ ತಿರುಗಿ ನಿಂತು – “ಸಿದ್ಧವಾಗಿರಬೇಕು ಹೂಂ?” – ಎಂದು ಹೋಗುತ್ತಾರೆ. ಹೊರೆಗೆ ಕಾರು ಹೊರಟ ಸಪ್ಪಳವಾಗಿ ನರಸಣ್ಣ ತುಂಬ ಉತ್ಸಾಹದಿಂದ ಬಾಗಿಲ ವರೆಗೆ ಹೋಗಿ ಅದು ದೂರ ಹೋದುದು ಖಾತ್ರಿಯಾಗುತ್ತಲೂ ಓಡಿ ಬಂದು ಬುದ್ದಣ್ಣನ ಭುಜಗಳನ್ನು ಅಲುಗಿಸುತ್ತ)

ನರಸಣ್ಣ :– ಕವಿ, ನಿನ್ನ ಉಪಕಾರವನ್ನು ಹೇಗೆ ಸ್ಮರಿಸಬೇಕೋ ನನಗೆ ತಿಳೀತಾ ಇಲ್ಲ. ಅಂದ ಹಾಗೇ – ಈ ಬಾಯಿನ್ನ ಎಲ್ಲಿಂದ ಹಿಡಿದು ತಂದೆಯೋ ಖೋಡೀ?

ಬುದ್ದಣ್ಣ – ನನ್ನ ಉಪಕಾರ ಸ್ಮರಿಸೋ ಮೊದಲು ಅವಳ ಉಪಕಾರ