…I believe that before all else I am a human being, just as you are – or at least that I should try and become one.

IBSEN.

—- 

ಪಾತ್ರಗಳು

ರಮೇಶ
ನಾಗಯ್ಯ
ಅಂಬಕ್ಕ
ಲಲಿತ
ಶಾರದಾ

[ತೆರೆ ಏಳುತ್ತಲೂ ನಮ್ಮ ಅಥವಾ ನಿಮ್ಮ ಮನೆ. ವ್ಯವಸ್ಥೆಯಲ್ಲಾ ನಮ್ಮ ನಿಮ್ಮಲ್ಲಿನ ಹಾಗೆ. ಎಡಬದಿಗೊಂಡು ಬಾಗಿಲು, ಎದುರಿಗೊಂದು ಬಾಗಿಲು. ಎಡ ಬದಿಯ ಬಾಗಿಲ ಬಳಿ ಕನ್ನಡಿ, ಸ್ನೋ, ಹಣಿಗೆ ಮತ್ತು ವಗೈರೆ ಉಳ್ಳಂಥಾ ಒಂದು ಪುಟ್ಟ ಟೇಬಲ್ಲು. ಅದರ ಬದಿಗೆ ನಿಮಗಿಷ್ಟವುಳ್ಳ ವ್ಯಕ್ತಿಯ ಅರೆದೇಹದ ಶಿಲ್ಪ. ಮಧ್ಯದಲ್ಲೆರಡು ಕುರ್ಚಿ. ಒಂದರಲ್ಲಿ ಇಂದಿನ ದಿನಪತ್ರಿಕೆ. ನೀವು ಚಂದೂಮಾಮಾದ ಚಂದಾದಾರರಿದ್ದರೆ ಅದೂ ಒಂದು. ಎಡಬಾಗಿಲ ತಲೆಯ ಮೇಲೆ ರಾಮಾಯಣಕ್ಕೆ ಸಂಬಂಧಿಸಿದ ಒಂದು ಚಿತ್ರ. ಇಷ್ಟವಿದ್ದರೆ ಗಾಂಧೀಜಿಯವರ ಭಾವಚಿತ್ರವನ್ನೂ ಶಿಲುಬೆಗೇರಿಸಬಹುದು.

ಹಸಿದ ಹೆಣ್ಣುನಾಯಿಯಂಥ ಅಸ್ಪಷ್ಟ ವಟವಟಾ ಮಾತು ಎಡಬಾಗಿಲಿನಿಂದ ಕೇಳಬರಬೇಕು. ತುಸು ಸಮಯ ಹೀಗೇ ಸತ್ತ ಬಳಿಕ ರಮೇಶ ತುಂಬ ಗಡಿಬಿಡಿಯಿಂದ ಹೊರಬರುತ್ತಾನೆ. ಉಡುಪು ತೀರ ಸಾದಾ – ಅಂದರೆ ಒಂದು ಗರ್ವ ಸೋರುವ ಮೂಗು, ಅಹಂಕಾರದ ಎರಡು ತುಟಿ, ಸೊಕ್ಕು ಬಸಿಯುವ ಎರಡು ಕಣ್ಣು, ನಿಮ್ಮ ಕಸಬರಿಗೆಯಂಥ ಒಂದು ತಲೆ; ವಯಸ್ಸು ನಮ್ಮ ನಿಮ್ಮಷ್ಟು. ಬಂದು ಕನ್ನಡಿಯ ಎದುರು ನಿಂತು ಉಡುಪು ಸರಿಪಡಿಸತೊಡಗುತ್ತಾನೆ. ತುಂಬ ಕಾವೇರಿದ್ದಾನೆ.]

ರಮೇಶ :- ಹೆಣ್ಣು ಹೆಂಗಸಾಗಿ ಕೈ ಬೀಸ್ತಾ ನಾಟ್ಕಾ ನೋಡಿದಳಂತ – ನಾಟ್ಕಾ. ಮನೆಯೊಳಗೆ ಯಾರೂ ಹೇಳವರು ಕೇಳವರು ದಿಕ್ಕು – ದೆಸಿ, ಏನೂ ಇಲ್ಲಾ? ಯಾರನ್ನ ಕೇಳಿ ನೀವು ನಾಟ್ಕಾ ನೋಡ್ಲಿಕ್ಹೋಗಿದ್ರೀss ಅಂತ. ಕೊನೀಪಕ್ಷ ಗಂಡ್ಸೂ ಅಂಬೋದೊಂದ ಪ್ರಾಣಿ – ಈ ಮನೇಲಿದೆ, ಅಂಬೋ ಅರಿವಾದ್ರೂ ನಿಮಗ ಬ್ಯಾಡಾ? ನನ್ನ ಸ್ನೇಹಿತರೇನಂದಾರು? ಪರಿಚಿತರೇನಂದಾರು? (ಅಣಕಿಸುತ್ತ) ಆಕಿ ಕರದಳಂತ – ಈಕಿ ಹೋದಳಂತ. ನನಗ ಹೇಳಿಕೇಳಿ ಹೋಗಿದ್ರ ಏನಾಗ್ತಿತ್ತು? (ಎಡಬಾಗಿಲ ಕಡೆಗೆ ಕಿಸಿದ ಕಣ್ಣಿನಿಂದ ನೋಡುತ್ತ) ನಾಲಿಗಿ ಸೀದು ಹೋಯ್ತೇನು? ಏsಯ್‌ ನಿನ್ನನ್ನs ಕೇಳಿದ್ದು. (ಅಶೋಕವನದಲ್ಲಿ ಸೀತಾದೇವಿ ಇಟ್ಟಿರಬಹುದಾದಂತೆ ಹೆಜ್ಜೆ ಇಡುತ್ತ, ಲಲಿತ ಎಡಬಾಗಿಲಿನಿಂದ ಬರುತ್ತಾಳೆ. ಉಡುಪು, ಕೆನ್ನೆಗಳಲ್ಲಿ ತಾತ್ಸಾರ, ತುಟಿಗಳಲ್ಲಿ ಭಯಮಿಶ್ರಿತವಾದ ಅರ್ಧಸೇರು ಸಹನೆ. ಕಣ್ಣುಗಳಲ್ಲಿ ಇನ್ನೂ ಪಕ್ವವಾಗದ ಎರಡು ನಿರ್ಭೀತಿಯ ಫಲ. ಮೇವು ದೊರೆಯದ ಮುದುಕಿ ಆಕಳಿನಂತೆ ಮುಖ ಮಾಡಿ ಕೊಂಡು…)

ಲಲಿತ :- ಅಂಬಕ್ಕ ನಿಮಗೆಲ್ಲಾ ಹೇಳಿದೀನಿಂತ ಹೇಳಿದರು.

ರಮೇಶ :- ಅವಳಿಗೇನು? ಈ ಹೊತ್ತಿದ್ದು ನಾಳಿ ತನ್ನ ಗಂಡನ ಮನಿಗಿ ಹೋಗ್ವಾಕಿ. ಮಾನ, ಮರ್ಯಾದಿ – ನನ್ನದು ತಾನೇ? ನಿನ್ನ ತವರ ಮನೆಯವರು ಹೀಂಗೆಲ್ಲಾ ಉಂಡ ಓಣ್ಯೋಣಿ ಕೈಬೀಸ್ತಾ ಅಡ್ಡಾಡುದನ್ನs ಕಲಿಸಿದರೇನು?

ಲಲಿತ :- ಅವರನ್ಯಾಕ ಬಯ್ತೀರಿ……ನಾ ಎನ ಮಾಡಿದೀನಿ ಅಂಥಾದ್ದು?

ರಮೇಶ :- (ಕಚ್ಚುವ ನಾಯಿಯಂತೆ) ನಾಟ್ಕಾಕ್ಕಾದ್ರೂ ಹೋಗಿದ್ಯೋ – ಇಲ್ಲೊ? ಅವರನ್ಯಾಕ ಬಯ್ತೀರಿ ಅಂತ. ಎಲ್ಲಿ ನಾಲ್ಕ ಅಕ್ಷರ ಕಲಿತೀದಾಳೋ – ಏನೋ – ಎದರ ವಾದಸ್ತಾಳ – ಇಂಥಾ ಧಿಮಾಕ ದಿಗರ ನನ ಮುಂದ ನಡಿಯೋದಿಲ್ಲಾ – ಅಂದೆ. ನಾನೂ ಬಿ.ಎ. ಪಾಸ ಮಾಡೀನಿ… ಅಂದ್ಹಾಂಗ ಇಲ್ಲೀ ಟೇಬಲ್ಲು ಒಳಗ್ಯಾರಿಟ್ಟರು?

ಲಲಿತ :- ಕೋಣೇ ತೊಳೀಬೇಕಾಗಿತ್ತು, ಹೊರಗಿಟ್ಟಿದ್ದೆ. ಈಗ ಒಳಗ ತರತೀನಿ.

ರಮೇಶ :- (ನೀವು ನೋಡಿದ ಸಿನಿಮಾದ ಖಳನಾಯಕನಂತೆ) ಈ ಕೋಣೆ ಸ್ವಚ್ಛ ಮಾಡೋದು ಈಗೇನ ಅಂಥಾ ಗರ್ಜ ಇತ್ತು?

ಲಲಿತ :- ಹೊಲಸು ಭಾಳ –

ರಮೇಶ :- (ಮೂರಿಂಚು ಮೂಗು ಕಿಸಿದು) ನಮ್ಮ ಕಾಗದ ಪತ್ರೆಲ್ಲಾ ಇಲ್ಲಿ ಮೇಜಿನ ಮ್ಯಾಲ ಬಿದ್ದಿರತಾವ. ಅವು ಕಳದ ಹೋದರ ನಿಮ್ಮಪ್ಪ ಬರ್ತಾನೇನು ಹಾನಿ ತುಂಬಲಾಕ? ನನ್ನ ಕೇಳಿದ್ದರ ನಿನಗೇನಾಗ್ತಿತ್ತು ಧಾಡಿ? (ಹೇಸಿ ವಾಸನೆ ಮೂಸಿದವರಂತೆ) ಕಲ್ತಕ್ಕಿ! ಹ್ಯಂಗ ಕೇಳ್ಬೇಕಂತೀಯಲ್ಲ? (ಕನ್ನಡಿಯಲ್ಲಿನ ತನ್ನ ಕಾಮರೂಪು ಕಂಡು ತುಸು ತಣ್ಣಗಾಗಿ ಆದರೂ ಉಗುರುಬೆಚ್ಚಗಿನ ಕಾವಿನಲ್ಲಿ) ಇಲ್ಲಿ ಹೆಣಿಗಿ ಇತ್ತಲ್ಲ – ಅದನ್ನೆಲ್ಲಿ ಒಗದಿ? ಯಾರಿಗೋ ಮರಿ ಬಂದ್ಹಾಂಗ ಕಾಣಿಸ್ತsದ, ಅಲ್ಲಾ?….. (ಸ್ವಲ್ಪ ಸಮಯ ಹುಡುಕಾಡಿದ ನಂತರ ಅಲ್ಲೇ ಇದ್ದ ಹೆಣಿಗೆಯನ್ನು ತೆಗೆದುಕೊಂಡು ತಲೆ ಬಾಚತೊಡಗುತ್ತಾನೆ.  ತುಸು ಹೊತ್ತು ನೀರವ. ಲಲಿತ ಎಲ್ಲಿ ತನ್ನ ಹೆಜ್ಜೆಯ ಸಪ್ಪಳವಾಗುವುದೋ ಎಂಬಂತೆ ಬೆದರಿ ಮೃದುವಾಗಿ ಒಳಗೆ ಹೋಗುತ್ತಿರುವಂತೆಯೇ ಅದೇ ಬಾಗಿಲಿನಿಂದ ಅಂಬಕ್ಕ ತಾನೊಬ್ಬ ಶ್ರೇಷ್ಠ ಜ್ಞಾನಿಯೋ ಎಂಬಂಥ ಠೀವಿಯಲ್ಲಿ ಒಂದು ಕುರ್ಚಿಯಲ್ಲಿ ಕೊಡ್ರುತ್ತಾಳೆ . ಉಡುಪು – ಕ್ರಿ.ಶ. ೨೦೬೦ ರ ಆರುಂಧತಿ. ತಕ್ಕಡಿ ಸರಿ ಪರಡಿಗೆಯಂಥ ಕಣ್ಣು, ಎರಡೂ ಪರಡಿಗೆಯ ತುಂಬ ವಾತ್ಸಲ್ಯ – ಮಮತೆ. ಪತ್ರಿಕೆಯ ಪುಟ ತಿರುವುತ್ತ ಕೂಡ್ರುತ್ತಾಳೆ.)

ಅಂಬಕ್ಕ :- ಸಾಹೇಬರು ಸಿಟ್ಟಾಧ್ಹಾಂಗ ಕಾಣಿಸ್ತದss.

ರಮೇಶ :- (ಪ್ರಸಿದ್ಧ ನಟರಂತೆ ತಿರುಗಿ ನಿಂತು) ಹೂಂ – ನೀನು ಬಂದೆಯಾ ಇನ್ನು? ನೀನೇ ನಾಟ್ಕಾಕ್ಕೆ ಕರೆದುಕೊಂಡು ಹೋದದ್ದು ನಿಜಾ ಏನಮ್ಮ?

ಅಂಬಕ್ಕ :- ಹೌದು. ಅದರಲ್ಲಿ ತಪ್ಪೇನು ಬಂತು?

ರಮೇಶ :- ಏನೂ ತಪ್ಪಿಲ್ಲ.  (ದುರುಗ ಮುರಗಿಯಂತೆ ಧ್ವನಿ ತೆಗೆದು) ಮಾಡಿಕೊಂಡ ಗಂಡನಿಗೆ ಪತ್ತೇ ಇಲ್ದೆ ಬೇಕಾದಲ್ಲಿ ತಿರುಗಡಿ ಬಂದರೂ ತಪ್ಪಿಲ್ಲs. ಬೇಕಾದ್ದನ್ನೆಲ್ಲ ಬೇಕಾದವರ ಮುಂದ ಬೇಕುಬೇಕಾದ್ಹಾಂಗ ಹರಟಿ ಹೊಡದ್ರೂ ತಪ್ಪಿಲ್ಲs. ಗಂಡ ಅಂಬೋನೊಬ್ಬ ಇದ್ದಾನಂಬೋದ್ದನ್ನೂ ಮರೆತು ಮನಿ ಒಯ್ದು ಮಠಾ ಮಾಡಿದ್ರೂ ತಪ್ಪಿಲ್ಲs.  ಇದs ಹೌದಲ್ಲೋ ನೀ ಹೇಳೋದು?

ಅಂಬಕ್ಕ :- (ಗಾಂಧೀಜಿಯ ತಾಳ್ಮೆಯನ್ನನುಕರಿಸಿ) ನಾಟ್ಕಾಕ್ಕ ಹೋದದ್ದು, ಕೋಣೆ ಸ್ವಚ್ಛ ಮಾಡಿದ್ದು, ಇಷ್ಟಕ್ಕs ಅಲ್ಲೇನಪಾ ನೀನಿಷ್ಟು ನೆಗೆದುಬಿದ್ದು ಮಾತನಾಡೋದು? ಕೋಣೆ ಹೊಲಸಾದರ ಮಾರಾಜರ ಮಹದಾಜ್ಞಾ ಇದ್ದರನs ಸ್ವಚ್ಛ ಮಾಡಬೇಕು, ಇಲ್ಲದಿದ್ದರ ಹೊಲಸು ನೋಡ್ತಾ ಹಾಗೇ ಇರಬೇಕು – ಅಲ್ಲಾ? ಯಾಕೋ – ಹೆಂಗಸರು ನಾಟ್ಕಾ ನೋಡ್ಬಾರ್ದ? ನಿಮ್ಮಂಥಾ ಗಂಡಸರಿಗಷ್ಟs ಬರದಕೊಟ್ಟದೇನು? (ಪಾಪಿಗಳನ್ನು ಅಣಕಿಸುವ ಪುಣ್ಯವಂತರಂತೆ) ಅಯ್ಯೋ ನಮ್ಮಪ್ಪಾ ಹ್ಯಾಂಗಾದ್ರೂ ಬಿ. ಎ. ಪಾಸಾ ಮಾಡಿದೆಯೋ? ಅದೂ ಬಿ.ಎ. With Sociology ಅಂತ Sociology.

ರಮೇಶ :- (ನಾಲ್ಕು ಜನರಲ್ಲಿ ಕೈತೋರಿಸಿ ಅವಲಕ್ಷಣವೆನ್ನಿಸಿಕೊಂಡವರಂತೆ ಸಿಡಿದು) ಹೂಂ, ಹ್ಹೌದು. ನಾವು ಬಿ.ಎ. ಪಾಸ ಮಾಡಿರಲಿ, ಇನ್ನೇನಾದರೂ ಆಗಿರಲಿ; ಈ ಮನೆ ನನ್ನದು, ಇದರಲ್ಲಿ ನಡೆಯಬೇಕಾದ್ದು ನನ್ನ ಅಧಿಕಾರ . ಅಂಥಿಂಥಾ ಕಾಗ ಈ ಕಾರಭಾರ ನನ್ನ ಮುಂದೆ ನಡ್ಯಾಕಿಲ್ಲ. (ಮುಖ್ಯ ಮಂತ್ರಿಗಳ ಹಾಗೆ ಮೇಜು ಹಿಡಿದು ಲಲಿತಳನ್ನೇ ನೋಡುತ್ತ) ನೋಡು, ಇರೋ ಎರಡೂ ಕಿವಿಗಳನ್ನು ತೆರೆದು ಕೇಳು; ಈ ಮನೆಯ ಪ್ರತಿಯೊಂದು ಕಾರ್ಯಕ್ರಮ ನನ್ನ ಅಧ್ಯಕ್ಷತೆಯಲ್ಲಿ ಸಾಗಬೇಕು. ತೆಗೆದುಕೊಂಡ ಪ್ರತಿಯೊಂದು ನಿರ್ಣಯಕ್ಕೆ ನನ್ನ ಒಪ್ಪಿಗೆ ಬೇಕು. ಆಗಬೇಕಾದ ಪ್ರತಿ ಬದಲಾವಣೆ – ನನಗೆ ತಿಳಿದಿರಬೇಕು, ತಿಳೀತೋ ಇಲ್ಲೊ? ತಿಳೀದಿದ್ರ ಇನ್ನೊಮ್ಮೆ ಹೇಳ್ತೀನಿ ಕೇಳು, ಈ ಮನೆಯ……….

ಅಂಬಕ್ಕ :- ತಿಳೀತು, ತಿಳೀತು, ಇಂಥಾ ಧ್ವನಿಗೆ ಲೌಡಸ್ಪೀಕರ್ ಯಾಕೆ? (ಅವಳನ್ನು ನುಂಗುವಂತೆ ಅಥವಾ ಹರಿದು ತಿನ್ನುವಂತೊಮ್ಮೆ ನೋಡಿ,  ತುಟಿ ಬಿಗಿದು ಬೈಗಳ ವೇಗದಲ್ಲಿ ಹೊರಗೆ ಹೋಗುತ್ತಾನೆ . ತುಸು ಹೊತ್ತು ತನ್ನ ಹಣೆಬರಹದ ಮರೆತ ವಾಕ್ಯವನ್ನು ನೆನಪಿಸಿಕೊಳ್ಳುವಂತೆ ನಿಂತಿದ್ದು, ಲಲಿತ ಸಾವುಕಾಶವಾಗಿ ಒಳಗೆ ಹೋಗುತ್ತಿರುವಂತೆ ಅಂಬಕ್ಕ ಅನಾಥ ಶಿಶುವನ್ನು ಕಂಡ ಮಕ್ಕಳಿರದ ತಾಯಿಯಂತೆ.)

ಲಲಿತಾ… ಇಲ್ಲಿ ಬಾ… ಕೂತ್ಕೊ… ಈಗ ಹೊರಗೆ ಹೋದನಲ್ಲಾ ಒಬ್ಬ ಗಂಡಸು, ಅವನು ನಿನಗೇನಾಗಬೇಕು?

ಲಲಿತ :- (ಅಧ್ಯಾಪಿಕೆಯ ಎದುರಿನ ಬೇಬಿಯಂತೆ) ಇದೇನಕ್ಕಾ ಹೀಗೆ ಕೇಳ್ತೀರಿ?

ಅಂಬಕ್ಕ :- ಹೂಂ. ಅಂತೂ ನಿನಗೂ ಕನ್ನಡ ಮಾತನಾಡ್ಲಿಕ್ಕೆ ಬರ್ತsದ ಅಂಬೋದು ಸಿದ್ಧವಾಯ್ತು. ಅಂದ್ಹಾಗೆ ಅವನು ಏನಾಗಬೇಕು ನಿನಗೆ? ಏನೂ ಅಲ್ಲಾ? (ಲಲಿತ ಸಿಕ್ಕ ಕಳ್ಳನ ಹಾಗೆ ಮುಖ ಬಗ್ಗಿಸುವಳು) ಮದುವೆಯಾಗಿ ಒಂದೂವರೆ ವರ್ಷ ಆಯ್ತು. ಹೆಂಡತ ಇ ಎರೆಗಿ – ಗಂಡ ಕೆರೆಗಿ… ಅಂದ್ಹಾಗ ನೀನು ಕಲಿತದ್ದೆಷ್ಟು?

ಲಲಿತ : :- (ನಿಮಗೆ ಗೊತ್ತಿಲ್ಲವೆ? – ಎಂಬಂಥ ಆಶ್ಚರ್ಯದ ಮುಖ) ಎಸ್ಸೆಲ್ಸಿ.

ಅಂಬಕ್ಕ :- ಇನ್ನು ಎಷ್ಟು ಕಲಿತಿದ್ದರೆ ನಿನಗೆ ಚೆನ್ನಾಗಿ ಮಾತನಾಡ್ಹಿಕ್ಕೆ ಬರಬಹುದಿತ್ತು …. ಹೌದಾ ಮತ್ತೆ ಬಾಯಿ ಬಂದಾಯ್ತು. (ಅಕ್ಕರೆಯಿಂದ ನಿಮ್ಮ ತಾಯಿ ನಿಮ್ಮೊಡನೆ ಮಾತನಾಡುವಂತೆ) ನೋಡಮ್ಮಾ ಲಲಿತ, ನನಗೂ ಒಂದು ಚಮಚ ಬುದ್ಧಿ ಇದೆ ಅಂಬೋ ಮಾತಿನಲ್ಲಿ ನಿನಗೆ ವಿಶ್ವಾಸವಿದೆಯೇ? (ಲಲಿತ, ಬೆದರಿದ ಆದರೂ ಆಶ್ಚರ್ಯಕಂಡ ಬೇಬಿಯಂತೆ ಕೂಡ್ರುವಳು) ನಾನೂ ಒಂದು ಗೇಣು ಚೋಟಿ ಓದಿದ್ದೇನೆ – ಅಂಬೋದು ನಿನಗೆ ಗೊತ್ತೆ? ಹೋಗಲಿ, ನನಗೂ ನಿನ್ನ ಓರಗೆಯ ಒಬ್ಬ ಮಗಳು ಇದ್ದಳೂ – ಅಂಬೋದಾದರೂ ಗೊತ್ತಾ?

ಲಲಿತ :- (ನೀವು ನನ್ನನ್ನು ಗೇಲಿ ಮಾಡುತ್ತಿದ್ದೀರಿ – ಎಂಬಂತೆ ಮುಖ) ಹೂ.

ಅಂಬಕ್ಕ :- ಅವಳು ಸತ್ತಳು. ಭಾಳ ಪುಣ್ಯವಂತಿ. ಇಲ್ಲದಿದ್ದರೆ ಅವಳೀಗ ನಿನ್ನ ಸ್ಥಾನದೊಳಗಿದ್ದು ನಾನು ಕೇಳಿದ ಪ್ರಶ್ನೆಗಳಿಗೆಲ್ಲಾ ನೀನ್ಹಾಗೇ – ‘ಹಾಂ ಹೂಂ’ತ ಸಣ್ಣಾಗಿ ಉತ್ತರಾ ಕೊಡ್ತಾ ಕೂತಿರ್ದಳ್ಳು. ನೋಡಮ್ಮ, ಎಷ್ಟಾದರೂ ನೀನು ನನ್ನ ತಮ್ಮನ ಕೈಹಿಡಿದಾಕೆ. ನನ್ನ ಮಗಳೇ. ಮಗಳು ತಾಯಿಯ ಎದುರು ಸುಳ್ಳು ಮಾತನಾಡಬಾರ್ದು – ಅಲ್ಲಾ?

ಲಲಿತ :- (ಹೌದೂಂತ ಎನ್ನಿಸುತ್ತೆ ಎಂಬಂತೆ) ಹೂಂ.

ಅಂಬಕ್ಕ :- (ಲಲಿತನ ಮುಖವನ್ನೋದುತ್ತ) ರಮೇಶ ಮದುವೆಯಾದಾಗಿನಿಂದ ಎಷ್ಟು ಸಲ ಮನೆಯಲ್ಲಿ ಮಲಗಿದ್ದಾನೆ? ಮುಚ್ಚೆಟ್ಕೋ ಬಾರ್ದು. ಅಷ್ಟಾಗಿಯೂ ನಾನು ಹೊರಗಿನವಳೇನೂ ಅಲ್ವಲ್ಲ. ನನಗೆ ತುಂಬಾ ಕನಿಕರ ಬಂದು ಕೇಳ್ತಾ ಇದೀನಷ್ಟೆ. ಇಲ್ಲದಿದ್ರೆ ನಾನು ಹೇಳೋಲ್ಲಾಂತ ಹೇಳಿ ಬಿಡು. ಸುಳ್ಳು ಮಾತ್ರ ಹೇಳಬೇಡ. ನೀನು ಹೇಳದಿದ್ರೂ ನನಗೆಲ್ಲಾ ಈಗಾಗ್ಲೇ ಗೊತ್ತಾಗ್ಯsದ, ಅಂಬೋದನ್ನ ಮರೀಬ್ಯಾಡ. ಎಷ್ಟು ಸಲ ಆತ ಮನೆಯಲ್ಲಿ ಮಲಗಿದ್ದ?

ಲಲಿತ :- (ತುಡುಗು ಸಿಕ್ಕ – ಚಿಕ್ಕ ಬೇಬಿಯಂತೆ) ಒಂದುs ದಿನ.

ಅಂಬಕ್ಕ :- ಮತ್ತೆ – ನಾನು ಎರಡು ತಿಂಗಳ ಹಿಂದೆ ಬಂದಾಗ ಸರಿಯಾಗಿದಾರೇಂತ ಹೇಳಿದ್ದೆಯಲ್ಲ?

ಲಲಿತ :- ಹಾಗ್ಹೇಳೂಂತ ಅವರು ಬೆದರಿಸಿದ್ರು.

ಅಂಬಕ್ಕ :- ಹಾಗಂತ ನೀನೂ ಹೇಳದ್ದೆ. ಅಲ್ಲವೆ? ರಾತ್ರಿಯೆಲ್ಲಾ ಎಲ್ಲೆಲ್ಲೋ ಹೋಗಿ ಬೆಳಿಗ್ಗೆ ಬಂದು ಮತ್ತೆ ರೂಮಿನಲ್ಲಿ ಮಲಗಿ ಬೆಳಿಗ್ಗೆ – ಇಲ್ಲೆ ಇದ್ದವರಂತೆ ನನಗೆ ಮುಖಾ ತೋರಿಸ್ತಿದ್ದ – ಅಲ್ಲವೆ?

ಲಲಿತ :- (ನಿಮಗಿದೆಲ್ಲಾ ಹ್ಯಾಗೆ ಗೊತ್ತಾಯ್ತು – ಎಂಬಂತೆ ಮುಖ) ಹೂಂ.

ಅಂಬಕ್ಕ :- ಈಗ ನಾನು ಬಂದ ಎರಡು ದಿನಗಳಿಂದಲೂ ಇದೇ ನಾಟ್ಕಾ ಸಾಗಿದೆ – ಅಲ್ಲವೆ?

ಲಲಿತ :- (ಅಯ್ಯೋ – ಇದೂ ಗೊತ್ತಾಯ್ತೆ? – ಎಂಬಂತೆ ಮುಖ) ಹೂಂ.

ಅಂಬಕ್ಕ :- ಇದಕ್ಕೇ ಅನ್ತಾರೆಯೇ ಮದುವೆ – ಅಂತ? ನಿಮ್ಮಿಬ್ಬರ ದಿನಚರಿ ನೋಡಿದಾಗ, ಇದು ಅದರ ಗಂಡ, ಅದು ಇದರ ಹೆಂಡತೀ ಅಂತ ಅನ್ನಿಸುತ್ತೆಯೆ? ‘ಮದುವೆ’ ಅಂದರೆ ಒಂದೇ ಮನೆಯಲ್ಲಿ ಕೂಡಿ ಇರೋದು – ಅಂತ ಇಷ್ಟೇ ಏನಮ್ಮ ಅದರ ಅರ್ಥ? ಅಡಿಗೆ ಮಾಡೋದಕ್ಕೆ ಹೆಂಡತಿ – ಉಣ್ಣೋದಕ್ಕೆ ಗಂಡ – ಇಷ್ಟೇನಾ ನಿಮ್ಮ ಸಂಬಂಧದ ಉದ್ದ – ಅಗಲಾ? ನೋಡು ಲಲಿತ, ನನ್ನ ಮಗಳು ಸತ್ತಾಗ ಎಷ್ಟು ಸಂಕಟ ಆಗಿತ್ತೋ – ಅಷ್ಟೇ ಸಂಕಟ ನಿನ್ನನ್ನು ನೋಡಿದಾಗ ಆಗ್ತಾ ಇದೆ. ನಿನ್ನ ಶರೀರ ಇಪ್ಪತ್ತನೇ ಶತಮಾನದ್ದಾದ್ರೂ ಬುದ್ಧಿ ದ್ವಾಪರದ್ದೆ. ಇಷ್ಟು ಕಲಿತೂ ಇಂಥವನೊಬ್ಬನನ್ನು ಹಿಡಿತದಲ್ಲಿಟ್ಟುಕೊಳ್ಳೋಕೆ ಸಾಧ್ಯವಾಗಿಲ್ಲವೆ? ಕೊನೆಯ ಪಕ್ಷ ಮೊದಲಿನಿಂದ ಅವನೊಡನೆ ಧೈರ್ಯವಾಗಿ ಮಾತನಾಡೋದಕ್ಕೂ ಅಷ್ಟೊಂದು ಹೆದರಿಕೆಯೇ? ಮಾತಿಲ್ಲ – ಕತೆಯಿಲ್ಲ. ಲೋಕದಲ್ಲಿ ಇಂಥವಕ್ಕೆ ಗಂಡ, ಹೆಂಡತಿ ಅಂತ ಕರೀತಾರೆಯೇ? ಹೋಗಲಿ, ನಿನ್ನ ಗಂಡನ ಬಗೆಗೆ ನಿನಗೇನೇನು ಗೊತ್ತು? ಅಂದರೆ ಅವನ ಚಟ, ಪ್ರಿಯವಸ್ತು ಅಭಿರುಚಿ – ಇತ್ಯಾದಿ – ವಗೈರೆ……

ಲಲಿತ :- ಅವರು ಬ್ಯಾರೆ ಕಡೆಗೆ….. (ಅಷ್ಟರಲ್ಲಿ ನಾಗಯ್ಯ ಹೊರಬಾಗಿಲಿನಿಂದ ಅತ್ಯವಸರದಿಂದ ಒಳ ಬಂದು ಇಬ್ಬರನ್ನೂ ಕಂಡು ಗತಿಕುಂಠಿಸಿ)

ನಾಗಯ್ಯ :- ಊಟ ಆಯ್ತ್ರೀ ಅಕ್ಕಾವರ?

ಅಂಬಕ್ಕ :- ಇನ್ನೂ ಇಲ್ಲ.

ನಾಗಯ್ಯ :- ಸಾಹೇಬರು ಟೇಬಲ್ಲಿನ ಮ್ಯಾಲ ಫೈಲ ಮರತ ಹೋಗ್ಯಾರಂತ. ತಗೊಂಬರ್ಲಿಕ್ಕೆ ಹೇಳಿದ್ರು. ಒಳಗ ಅದ ಏನ್ರಿ?

ಅಂಬಕ್ಕ :- ಹೂಂ, ಲಲಿತ; ಸ್ವಲ್ಪ ಒಳಗೆ ಹೋಗಿ ತಗೊಂಬಾಮ್ಮ. (ಲಲಿತ ಎದ್ದು ಹೋಗುವಳು,) ಮತ್ತೇನು – ಎಲ್ಲಾ ಸರಿಯಾಗ್ಯsದ ಅಲ್ಲಾ?

ನಾಗಯ್ಯ :- (ಸಂಕೋಚ, ವಿನಯದಿಂದ) ಹೂಂನ್ರಿ.

ಅಂಬಕ್ಕ :- ನೋಡು – ನಾಗಯ್ಯ, ನಿನಗೀಹೊತ್ತು ಒಂದು ಪ್ರಶ್ನೆ ಕೇಳ್ತೀನಿ – ಸುಳ್ಳುಸುಳ್ಳೇ ಏನಾದರೂ ಉತ್ತರಾ ಹೇಳ್ಬಾರ್ದು – ಏನಂತಿ?

ನಾಗಯ್ಯ :- ಇದೇನ್ರೀ ಅಕ್ಕಾವರ ಹೊಸಬರ್ಹಂಗ ಮಾತನಾಡ್ತೀರಿ . ಅದೇನ ಕೇಳ್ರೆಲ್ಲ.

ಅಂಬಕ್ಕ :- ಏನೂ ಸಂಕೋಚ ಪಟ್ಕೋಬೇಡ. ರಮೇಶ ಹೊರಗೆಲ್ಲಿ ಸಂಬಂಧ ಮಾಡಿದಾನೆ ಗೊತ್ತಾ? ಹೆದರಬೇಡ – ನಾನು ಯಾರ ಮುಂದೂ ಹೇಳೋಲ್ಲ. ನೀನು ಈ ಮನೆಯನ್ನು ಚೆನ್ನಾಗಿ ಬಲ್ಲವನಂತ ಕೇಳ್ತಾ ಇದೀನಿ. ನಿನಗೇನ ಗೊತ್ತೋ ಅದನ್ನೆಲ್ಲಾ ಹೇಳು.

ನಾಗಯ್ಯ :- ಡಾಕ್ಟರರ ಕುಟುಂಬ ಶಾರದಮ್ಮನ ಜೊತೆ ಸಂಬಂಧದs, ಅಂತ ಒಬ್ಬಿಬ್ರು ಆಡ್ತಾ ಇದ್ರು.

ಅಂಬಕ್ಕ :- ಈಗ ಇವನು ಚುನಾವಣೆಗೆ ನಿಂತಿದ್ದು ಅವರ ಪ್ರೇರಣಾ ಅಂತ ಕಾಣಸತsದ – ಅಲ್ಲಾ?

ನಾಗಯ್ಯ :- ಇದ್ದಿರಬೇಕ್ರಿ.

ಅಂಬಕ್ಕ :- ಅವಳು ನೋಡ್ಲಿಕ್ಕೆ ಹ್ಯಾಗಿದಾಳೆ?

ನಾಗಯ್ಯ :- ಇದ್ದಾಳೆ, ಹೆಣ್ಣೂಂತ ಕರೆಯಿಸಿಕೊಳ್ಳೋ ಮಟ್ಟಿಗೆ. ನೀವೂ ನೋಡಿರಬೇಕಲ್ಲ.

ಅಂಬಕ್ಕ :- ಸರಿಯಾಗಿ ನೆನಪಾಗ್ತಾ ಇಲ್ಲ. ಅಂತೂ ಅವಳು ಯಾರ ಮಧ್ಯಸ್ತಿಕೆಯಿಂದಲೂ ಇವನನ್ನು ಬಿಡೋಲ್ಲಾಂತ ಕಾಣಿಸ್ತದs.

ನಾಗಯ್ಯ :- ಆ ಮಾತು ಸಾಧ್ಯವಾಗೋಹಂಗ ನನಗೇನೂ ಭರೋಸ ಇಲ್ರಿ. ಒಂದು ವೇಳೆ ಅವರು ಬಿಡಬಹುದಾದರೂ ನಮ್ಮ ಸಾಹೇಬರು ಬಿಡೋ ಸ್ಥಿತಿಯೊಳಗಿಲ್ಲ. ಏನಾದ್ರೂ ಮಾಡಿ ಇವರ ಮನಸ್ಸನ್ನೇ ಪರಿವರ್ತನಗೊಳಿಸಿದರೆ ಸಾಧ್ಯವಾದೀತು. (ತುಸು ಹೊತ್ತು ನಿರವ.)

ಅಂಬಕ್ಕ :- ಅಂದ್ಹಾಂಗ ನಿನ್ನ ಹೆಂಡತಿ ಯಾರಾದರೂ ತನ್ನ ಬಂಧು ಬಳಗದವರ ಜೊತೆ ನಾಟ್ಕಾ ನೋಡ್ಲಿಕ್ಹೋದರ ನಿನಗೂ ಸಿಟ್ಟು ಬರ್ತsದೇನೋ?

ನಾಗಯ್ಯ :- ನೀವು ಕೇಳೋದು ನನಗೂ ಅರ್ಥ ಆಗ್ತದ. ಆದರ ನೀವೂ – ಚಿಕ್ಕ ಅಮ್ಮಾವ್ರು ನಾಟ್ಕಾ ನೋಡ್ಲಿಕ್ಕೆ ಬಂದ ದಿವಸs ಸಾಹೇಬರು – ಶಾರದಮ್ಮನವರು ನಾಟ್ಕಾ ನೋಡ್ಲಿಕ್ಕೆ ಬಂದಿದ್ರು.

ಅಂಬಕ್ಕ :- ಹೌದಾ? ನಮ್ಮನ್ನವರು ನೋಡಿರಬೇಕು.

ನಾಗಯ್ಯ :- ನೋಡಿದರಷ್ಟs ಯಾಕ್ರಿ? ಲಲಿತಮ್ಮನವರನ್ನು ಕಂಡ ಕೂಡಲೇ ಶಾರದಮ್ಮನವರು ಸಿಕ್ಕಾಪಟ್ಟೆ ಸಾಹೇಬರೆದುರಿಗೆ ಗೇಲಿಮಾಡಿ ಹುಚ್ಚುಚ್ಚಾರ ನಕ್ಕರು.

ಅಂಬಕ್ಕ :- (ತನ್ನ ಪಕ್ಷಕ್ಕೆ ಅನಿರೀಕ್ಷಿತವಾಗಿ ಬೆಂಬಲ ದೊರೆತ ವಕೀಲನಂತೆ) ಹೂಂ – ಆದ್ದರಿಂದಲೇ ನಮ್ಮ ಕೋಡಗ ಈವೊತ್ತು ಇಷ್ಟು ಹಲ್‌ ಕಿಸೀತಿತ್ತೂ ಅಂತ ಕಾಣಸ್ತsದ. ಚುನಾವಣೆಯಲ್ಲೇನಾದ್ರೂ ಅವನು ಆರಿಸಿ ಬರೋ ಸಂಭವ ಇದೆಯೇನು?

ನಾಗಯ್ಯ :- ನಿಶ್ಚಿತವಾಗಿ ಹೇಳಬರದು, ನೋಡಬೇಕು. ನಾಳೆಯಂತೂ ತಿಳಿದೇ ತಿಳಿಯುತ್ತಲ್ಲ. (ಅಷ್ಟರಲ್ಲಿ ಲಲಿತ ಫೈಲು ತಂದು ಕೊಟ್ಟು ಕೂಡ್ರುತ್ತಾಳೆ. ಗಡಿಯಾರ ಢಣ್‌ ಎಂದು ಈಗ ಅದಷ್ಟು ವೇಳೆಯನ್ನು ಸೂಚಿಸುತ್ತದೆ.) ನಾನಿನ್ನು ಮನೆಗೆ ಹೋಗಬೇಕು. ಕಾಯ್ತಿರ್ತಾರೆ.

ಅಂಬಕ್ಕ :- ಯಾರು ಹೆಂಡತೀನಾ?

ನಾಗಯ್ಯ :- (ದಯಮಾಡಿ ಅವಳ ವಿಷಯವನ್ನು ಮತ್ತೆ ಮತ್ತೆ ಕೇಳಿ – ಎಂಬಂತೆ) ಹೂಂ. ಊಟಕ್ಕೆ ಬರೋಲ್ಲಾಂತ ಹೇಳಿಹೋಗ್ಬೇಕು.

ಅಂಬಕ್ಕ :- (ಮುಗುಳು ನಗುತ್ತ) ಹಾಗೇ ಅವಳ ಮುಖ ಸ್ವಲ್ಪ ನೋಡಿ ಹೋಗ್ಬೇಕು. ಅಲ್ಲಾ?

ನಾಗಯ್ಯ :- (ನೀವು ಎಷ್ಟು ಸಂತೋಷ ಬರುವ ಪ್ರಶ್ನೆ ಕೇಳುತ್ತೀರಿ – ಎಂಬಂತೆ ನಗುತ್ತ ಹೋಗುತ್ತಾನೆ. ಲಲಿತ ಕನಸಿನಲ್ಲಿ ತಾನು ರಾಜನಾಗಿದ್ದಂತೆ ಕಂಡ ತಿರುಕನಂತೆ)

ಲಲಿತ :- ಇವರು ಯಾರಕ್ಕ?
ಅಂಬಕ್ಕ :- (ಮಗುವಿಗೆ ಎರಡರ ಮಗ್ಗಿ ಕಲಿಸುವ ತಂದೆಯಂತೆ) ಒಬ್ಬ ಹೆಂಡತಿಯ ಗಂಡ – ಅಂತ ಇವನ ಹೆಸರು. ಯಾವುದೋ ಒಂದು ವಿಷಯ ತೆಗೆದ ಕೂಡಲೇ ನಾಚ್ಗೆ, ಸಂತೋಷಸೂಚಕವಾದೊಂದು ಕ್ರಿಯೆ ಅವನ ಮುಖದಲ್ಲಿ ಮೂಡಿತ್ತಲ್ಲಾ – ಅದಕ್ಕೇ ‘ನಗೆ’ ಅಂತ ಹೇಳ್ತಾರೆ.  ಯಾವುದರ ವಿಷಯ ತೆಗೆದೊಡನೆ ಆತನ ಮುಖ ಕೆಂಪೇರಿತ್ತೋ – ಮುಖದಲ್ಲೊಂದು ಪ್ರೇಮದ ಗೀತ ಮೂಡಿತ್ತೊ – ಆ ವಸ್ತುವಿಗೇ ‘ಹೆಂಡತಿ’ ಎಂದು ಹೆಸರು. ನಿನಗೀನ್ನೇನಾದರೂ ತಿಳೀದಿದ್ರೆ ಕುಳಿತುಕೊಂಡೇ ಕೇಳಬಹುದು.

ಲಲಿತ :- ನನಗೀಗ ಏನ್ಮಾಡಂತೀರಕ್ಕ?

ಅಂಬಕ್ಕ :- Good. ಇದೀಗ ಸರಿಯಾದ ಮಾತು. ನಾನು ಹೇಳಿದ ಹಾಗೆ ಕೇಳ್ತಿಯಾ? ಹೆದರ್ಕೊಬಾರ್ದು. ನೀನೂ ಕಲಿತವಳು. ಅದಿದನ್ನು ಓದಿದವಳು – ವಿಚಾರ ಮಾಡೋದಕ್ಕೊಂದು ಬುದ್ಧಿಯಿದ್ದವಳು. ಸುಖಬೇಕೂಂದ್ರೆ ಇಷ್ಟೆಲ್ಲಾ ಮಾಡಬೇಕು. ಏನಂತಿ?

ಲಲಿತ :- (ಇಂಟರ್ ವ್ಯೂಗೆ ಹೋದ ಅರ್ಜಿದಾರನಂತೆ) ಹೂಂ.

ಅಂಬಕ್ಕ :- ಹೈಸ್ಕೂಲಿನಲ್ಲಿದ್ದಾಗ ನಾಟ್ಕಾಗೀಟ್ಕಾದಲ್ಲೇನಾದರೂ ಭಾಗ ವಹಿಸಿದ್ದೆಯೇನು?

ಲಲಿತ :- ಇಲ್ಲ.

ಅಂಬಕ್ಕ :- ಪರವಾ ಇಲ್ಲ. ಸಧ್ಯ ನಾನೊಂದು Comedy ಬರೆದಿದೀನಿ. ಅದರ ನಾಯಿಕೆಯ ಪಾತ್ರ ನಿನಗೆ.

ಲಲಿತ :- (ನನ್ನನ್ನು ಕಲ್ಲು ಹೇರಿ ಕೊಲ್ಲುತ್ತೀರಿ? – ಎಂಬಂತೆ) ನನಗ?

ಅಂಬಕ್ಕ :- ಮತ್ತೆ ಹೆದರುತ್ತೀಯಲ್ಲ. ದಿಗ್ದರ್ಶನ ನನ್ನದು. ಈಗಿನಿಂದಲೇ ರಿಹರ್ಸಲ್‌ ಪ್ರಾರಂಭ, ಏಳು. (ಅವಳನ್ನು ಎಳೆದುಕೊಂಡು ಒಳಗೆ ಹೋಗುವಳು.

 – ತೆರೆ –