[ತೆರೆ ಏಳುತ್ತಲೂ ಅದೇ ಮನೆ. ವ್ಯವಸ್ಥೆಯೆಲ್ಲಾ ಹಿಂದಿನಂತೆ. ಕುರ್ಚಿಯೊಂದರಲ್ಲಿ ಅಂಬಕ್ಕ ದಿನಪತ್ರಿಕೆಯೊಂದನ್ನೋದುತ್ತ ಕುಳಿತಿದ್ದಾಳೆ. ರಂಗದ ಎದುದು ಬಾಗಿಲಿನಿಂದ ರಮೇಶ, ಅತ್ಯವಸರದಿಂದ ಪರೀಕ್ಷೆಗೆ ತಡವಾಗಿ ಹೊರಟ ವಿದ್ಯಾರ್ಥಿಯಂತೆ ಒಳಬರುತ್ತಾನೆ. ಅಂಬಕ್ಕ ಪತ್ರಿಕೆಯನ್ನು ಇನ್ನೊಂದು ಕುರ್ಚಿಯ ಮೇಲಿಟ್ಟು ಒಗರು ನಗೆ ನಗುತ್ತ,]

ಅಂಬಕ್ಕ :- ಸಾಹೇಬರಿಗೆ ಕಂಗ್ಯ್ರಾಚ್ಯುಲೇಶನ್ಸು.

ರಮೇಶ :- (ಅತ್ತಿತ್ತ ಅಡ್ಡಾಡುತ್ತ) ಇನ್ನೂ ಪರಿಣಾಮ ತಿಳಿದಿಲ್ಲ ಕಣಮ್ಮ. ಆ ನಾಗಯ್ಯ ಯಾವಾಗ ಬರ್ತಾನೋ – ತಿಳಿದುಕೊಂಡು ಬರ್ತೀನಿ ಅಂತ ಹೋಗಿ ಎರಡು ತಾಸಾಯ್ತು.

ಅಂಬಕ್ಕ :- ನಿನ್ನ ಚುನಾವಣೆಯ ಫಲಿತಾಂಶಕ್ಕಾಗಿ ಹೇಳಿದೆನೆ?

ರಮೇಶ :- (ಅನ್ಯ ಭಾಷೆ ತಿಳಿಯದ ದೊಡ್ಡವರಂತೆ) ಮತ್ತೆ ಯಾವುದಕ್ಕಾಗಿ? ಇನ್ನೇನಿದೆ?

ಅಂಬಕ್ಕ :- ಏನೂ ಇಲ್ಲವೆ? ಮದುವೆಯಾದ ಮೇಲೆ ಗಂಡಹೆಂಡಂದಿರಿಗೆ ಕಂಗ್ಯ್ರಾಚುಲೇಶನ್ಸ್‌ ಯಾವಾಗ ಹೇಳ್ತಾರೆ?

ರಮೇಶ :- ನಿನಗೇ ಗೊತ್ತಮ್ಮ.

ಅಂಬಕ್ಕ :- ಅಯ್ಯೋ ಇದೇನೋ ಸಂನ್ಯಾಸಿಯ ಹಾಗೆ ಮಾತನಾಡ್ತಿ? ಹೋಗಲಿ, ನಿನಗೆ ಗೊತ್ತಾಗದಿದ್ರೆ ನಾನೇ ಹೇಳ್ತಿನಿ. ನನಗೇನು ಕೊಡುತ್ತಿ?

ರಮೇಶ :- (ಅಯ್ಯೋ ಶನಿಕಾಟ ಎಂಬಂತೆ) ನೀನು ಕೇಳಿದ್ದು, ಅದೇನು ಹೇಳ್ಬಾರ್ದೆ?

ಅಂಬಕ್ಕ :- ಒಂದು ವೇಳೆ ಅದು ಹೆಣ್ಣಾಗಿ ಹುಟ್ಟಿದ್ರೆ ನನ್ನ ಮಗನಿಗೆ ಕೊಡ್ತೀಯಾ?

ರಮೇಶ :- (ಪರೀಕ್ಷೆಯಲ್ಲಿ ನಾನು ಫೇಲಾದನೆ? – ಎಂಬಂತೆ) ಏನಂದಿ?

ಅಂಬಕ್ಕ :- ಅಯ್ಯೋ ಪೆದ್ದಪ್ಪ. ಇನ್ನು ಆರು ತಿಂಗಳಾದ ಮೇಲೆ ಒಂದು ಮಗುವಿನ ತಂದೆಯಾಗುವವನಿದ್ದೀ… ಅಂಬೋ ಸುದ್ದಿಯೂ ನಿನಗೆ ಗೊತ್ತಿಲ್ವೆ? ಯಾಕೆ – ಲಲಿತ ಹೇಳಿಲ್ಲವೇ?

ರಮೇಶ :- (ನನ್ನನ್ನು ಲಲಿತ ಸಿಕ್ಕಾಪಟ್ಟೆ ಬೈದಳೇ? ಎಂಬಂಥ ಮುಖ) ಏನಂದಿ?

ಅಂಬಕ್ಕ :- ಅಯ್ಯs. ಎನ್ಹಾಗೆ ಮಸಡಿ ಗೀಸಿವ್ರೆ? ಲಲಿತ ಹೇಳಲಿಲ್ಲವೆ ನಿನಗೆ? ಪಾಪ ಎಷ್ಟಾದ್ರೂ ನಾಚ್ಗೆ ಅಲ್ಲವೆ? ಚೊಚ್ಚಿಲು ಬಸಿರು ಬೇರೆ. ಅಯ್ಯೋ ಇನ್ನೂ ಬಾಯ್ತೆಗೆದೀಯಲ್ಲ (ಕಿವುಡರಿಗೆ ಹೇಳುವಂತೆ) ನಿನ್ನ ಹೆಂಡತಿ ಗರ್ಭಿಣೀ – ಅಂತ. ತಿಳೀತು?

ರಮೇಶ :- (ಇರಿವ ಹೋರಿಯಂತೆ ಏರಿ ಬಂದು) ಯಾರಕ್ಕ ನಿನಗೆ ಹ್ಹೇಳಿದ್ದೂ?

ಅಂಬಕ್ಕ :- ಯಾರೋ? ಯಾರು? ಲಲಿತ.

ರಮೇಶ :- (ಮುಸುಗುಡುತ್ತ) ನಿಜವಾಗ್ಲೂ ಅವಳs ಹೇಳಿದ್ಳು?

ಅಂಬಕ್ಕ :- (ಮತ್ತೇನು ಮೂಸಿ ನೋಡಿದ್ರ ತಿಳೀತದನಾ ಅದು)? ಅಯ್ಯs ನನ್ನ ಸರದಾರಾ, – ಕನ್ನಡಿ ಒಳಗ ಸ್ವಲ್ಪ ನಿನ್ನ ಮಸಡಿ ನೋಡ್ಕೊಳ್ಳೊ. ಹೀಗೇನಾ ಗಂಡಸರು ಸಂತೋಷ ವ್ಯಕ್ತಪಡಿಸೋದು?

ರಮೇಶ :- (ಮೂಗಿನ ಟಪಾರಿಗೆ ಹಾರುವಂತೆ ಕಿಸಿದು) ಈಗ ಅವಳೆಲ್ಲಿ ಎಲ್ಲಿ ಇದ್ದಾಳವಳೂss ಅಂದೆ.

ಅಂಬಕ್ಕ :- ಮನೇಲಿ. ಮತ್ತೆಲ್ಲಿರ್ತಾಳೆ?

ರಮೇಶ :- ಅಯ್ಯೊss ಮನೆಗೆ ಬಿತ್ತು! – ಎಂಬಂಥ ಧ್ವನಿ – ಮುಖ) ಲಲಿಥಾ! ಏ ಲಲಿಥಾ… ಎಲ್ಲಿದ್ದೀಯೇ… (ಹುಚ್ಚರಂತೆ ಒಳನುಗ್ಗುವನು. ಪ್ರಭುವು, ಕಲ್ಲೆಸೆದ ಒಡ್ಡರನ್ನು ಕಂಡು ನಕ್ಕಿರಬಹುದಾದಂತೆ ನಗುತ್ತ – ಮತ್ತೆ ಅಂಬಕ್ಕ, ಪತ್ರಿಕೆ ಕೈಗೆತ್ತಿ ಪುಟ ತಿರುವುತ್ತಿರುವಾಗಲೇ “ಬರ್ಥೀಯೋ – ಏನಂಥಿ?” ಎಂದು ಒದರುತ್ತ ರಮೇಶ ಲಲಿತಳನ್ನು ದರ ದರ ದರ ಎಳೆದುಕೊಂಡು ಹೊರಬರುವನು.)

– ಅಂಬಕ್ಕ ಹೇಳಿದ್ದು ಕೇಳಿಸಿತೆ?

ಲಲಿತ :- ಏನು?
ರಮೇಶ :- ಅಕ್ಕಾ ಇನ್ನೊಮ್ಮೆ ಹೇಳು.

ಅಂಬಕ್ಕ :- ಇನ್ನೊಮ್ಮೆ ಹೇಳೋದೇನು – ಕೇಳೋದೇನು? ಅವಳು ಗರ್ಭಿಣಿ ಇದ್ದದ್ದು ಸುಳ್ಳೆ? ಏನ್ಹಾಗೆ ಹುಚ್ಚುಚ್ಚು ಆಡಿರೆ?

ರಮೇಶ :- (ತುಳಿಸಿಕೊಂಡ ನಾಯಿ ಕಡಸಕ್‌ ಎಂದು ಒಮ್ಮೆಲ ಏರಿ ಬರುವಂತೆ) ಕೇಳಿದೆಯಾ?

ಲಲಿತ :- ಕೇಳ್ದೆ. ಆಯ್ತೇನು?

ರಮೇಶ :- (ಮೂಗಿನಲ್ಲಿ ಸಿಟ್ಟಿಗೆದ್ದು ಕಣ್ಣಿನಲ್ಲಿ ಕ್ರೋಧಗೊಂಡು ತುಟಿಗಳಲ್ಲಿ ರೇಗಿ) ಆ – ಯ್ತೇನು? ಏನೂ ಆಗಿಲ್ಲ| ಏನೇನೂ ಆಗಲಿಲ್ಲ. ಅಲ್ಲಾ!

ಅಂಬಕ್ಕ :- (ನಡುವೆ ಬಂದು ಲಲಿತಳ ಕೈ ಬಿಡಿಸಿಕೊಂಡು) ಅವಳನ್ನೇನು ಹೊಡೆದು ಬಡೆದೂ ಕೊಲ್ಬೇಕಂತಿಯೇನೋ?

ರಮೇಶ :- ಬಡೆಯೋದು ಹೊಡೆಯೋದು? ಇನ್ನ ಅವಳ ಹೇಸಿ ಮೈ ಮುಟ್ಟಿ ನಾ ಯಾವ ನರಕಕ್ಕ ಹೋಗ್ಲಿ? ನಾನಿವಳನ್ನ ಬಡಿಯೋದೂ ಬ್ಯಾಡ; ಇವಳ ನೆರಳು ಈ ಮನೇಲಿನ್ನೊಮ್ಮೆ ಬೀಳೋದು ಬ್ಯಾಡ.

ಅಂಬಕ್ಕ :- ಅದೇನೋ ಹಾಂಗೆಲ್ಲಾ ಕುಡಿದರ್ವಹಾಂಗ ಒದರ್ಯಾಡಿದ್ರ? ಮಾತೇನು – ಕತಿಯೇನು? ಬಿಡ್ಸಿ ಹೇಳ್ಬಾರ್ದ?

ರಮೇಶ :- (ಕತ ಕತ ಕತ ಕುದಿದು) ಅಯ್ಯೋ ಹ್ಯಾಂಗ ಹೇಳ್ಬೇಕಕ್ಕಾ – ಈ ಬಸಿರು ಯಾರದೂಂತ ಕೇಳು.

ಅಂಬಕ್ಕ :- ಯಾರದುಂತ ಕೇಳು? ನಿಂದು ಏನೋ ಹೀಂಗೆಲ್ಲಾ ಮನೆತನಸ್ಥ ಹೆಣ್ಮಕ್ಕಳಿಗೆ ಆಡಿದ್ರ?

ರಮೇಶ :- (ಹಲ್ಲು ಗಟಿಮೀರಿ) ಅಯ್ಯೋ – ನಿನಗ ಹ್ಯಾಂಗಾರೆ ತಿಳಿಸಿ ಹೇಳ್ಬೆಕಕ್ಕಾ – ನೋಡಿದ್ರ ಆಕಳಂಥಾಕಿ, ಒಳಗ ಇಂಥಾ ಹೊಲಗೇರಿ ಇದ್ದದ್ದು ಯಾರಿಗೆ ಗೊತ್ತಿದ್ದಿತಕ್ಕಾ?

ಅಂಬಕ್ಕ :- ಹುಚ್ಚು ಹತ್ತಿತೇನು? ಏನು ಹೇಳ್ಬಾರ್ದೆ?

ರಮೇಶ :- (ವೊವ್‌ ಎಂಬಂತೆ) ಅಕ್ಕಾ ಬಾಯ್ಬಿಚ್ಚಿ ಹೇಳ್ತೀನಿ ಕೇಳು, (ಸಾವುಕಾಶವಾಗಿ) ಇದು ನಂದಲ್ಲಾ – ಅಂತ.

ಅಂಬಕ್ಕ :- ಅಂದರ?…
ರಮೇಶ :- (ಚಿಕ್ಕಮಕ್ಕಳಿಗೆ ಅದ್ಭುತ ಕತೆ ಹೇಳುವ ಹೆಡ್‌ ಮಾಸ್ತರನಂತೆ) ಅಂದ್ರs… ಹೊರಗ ಹೊರಗೆ ಮಳ್ಳೀ ಹಾಂಗ ಕಾಣಸ್ತಾಳಾದ್ರೂ ಒಳಗೆಲ್ಲಾ ವ್ಯಭಿಚಾರ ತುಂಬೇದs ಅಂತ.

ಅಂಬಕ್ಕ :- ನೀನಿದ್ದೂ ಅದ್ಹೆಂಗ ಸಾಧ್ಯ ಅದ?

ರಮೇಶ :- (ಎಷ್ಟು ಧಡ್ಡಳಿರುವಿ? ಎಂಬಂತೆ) ಅದ್ಹೆಂಗಂದರs – ನಾನು ಮನ್ಯಾಗಂತೂ ಒಂದು ದಿನಾನೂ ಮಲಗಿಲ್ಲ.

ಅಂಬಕ್ಕ :- ಮಲಗಿಲ್ಲ?

ರಮೇಶ :- ಇಲ್ಲ.

ಅಂಬಕ್ಕ :- ಯಾಕ ಸುಳ್ಳು ಅಪವಾದ ಹೊರಸ್ತೀಯೋ ಆ ಹುಡುಗಿ ಮ್ಯಾಲಿ? ನಾನು ಬಂದಾಗೆಲ್ಲಾ ಮನ್ಯಾಗಿರ್ತಿದ್ದಿ. ಅವಳಲು ಸರಿಯಾಗಿದಾರೇಂತ ಹೇಳ್ತಾ ಇದ್ಳು –

ರಮೇಶ :- ಅಯ್ಯೋ ಅಕ್ಕಾ – ನಿನಗ್ಹೆಂಗಾರೆ ತಿಳಿಸಿ ಹೇಳ್ಲಿ? ನಾನು ಆಫೀಸಿನೊಳಗ ಮಲಗೂ ಸುದ್ದಿ ಕೇಳಿ, ನೀ ಸಿಟ್ಟಿಗೆದ್ದಿಗಿದ್ದೀ ಅಂತ ನಾನು ಬೆಳಿಗ್ಗೆ ಬಂದು ಮನೇಲಿ ಮಲಗಿರ್ತಿದ್ದೆ. ಅವಳಿಗೂ ನಿನ್ಮುಂದೆ ಹಾಗ್ಹೇಳೂಂತ ಹೇಳಿದ್ದೆ.

ಅಂಬಕ್ಕ :- ಮದುವೆಯಾದಾಗಿನಿಂದ್ಲೂ ಹೀಗೇ…..?

ರಮೇಶ :- (ಗೋಣು ಹಾಕುತ್ತ) ಹೂ.

ಅಂಬಕ್ಕ :- ಹೌದೇನೇ ಲಲಿತ?

ಲಲಿತ :- (ಯಾರದೋ ಸುದ್ದಿ – ಏನೋ ಮಾತು, ಪಿಸ್‌ – ನನ್ನನ್ನೇಕೆ ಕೇಳುತ್ತೀರಿ? ಎಂಬಂತೆ) ನಿಜಾಂತ ಕಾಣಸ್ತದ.

ಅಂಬಕ್ಕ :- ಅಯ್ಯೋ ನನ್ತಮ್ಮ, ಈ ಗಯ್ಯಾಳಿ ನಮ್ಮಿಬ್ಬರಿಗೂ ಕೈ ಕೊಟ್ಳಲ್ಲೊ! ಎಂಥಾ ಸಂಭಾವಿತ ಹುಡುಗೀಂತ ತಿಳಿದಿದ್ದೆನಲ್ಲೊ!

ರಮೇಶ :- (ಹಲ್ಲು ಗಟ್ಟಿಮೀರಿ) ನನಗೆ ಗೊತ್ತಿತ್ತಕ್ಕಾs – ಇವಳು ಕಲ್ತವಳೂಂತ ತಿಳಿದಾಗ್ಲೇ – ನಡೀಲಿಕ್ಕೆ ಹೊಸದಾಗಿ ಮನೆಗೆ ಬಂದಾಗ್ಲೆ ನಾನನ್ಕೊಂಡಿದ್ದೆ – ಈ ಹೆಣ್ಣಿನ ಸುಳಿ ಇಂಥಾದs ಅದ ಅಂತ – (ಅಣಕದಿಂದ) ಪಾಪ! ಇವರನ್ನು ಮೋಸ ಮಾಡೋದು ಅದೆಷ್ಟರ ಮಾತೂಂತ ತಿಳದಿದ್ಳೋ ಏನೋ… ನೀನಿದೀಗ ಹೇಳ್ತಾ ಇದ್ದೆಯಲ್ಲ – ಮನೆತನಸ್ಥಳೂ – ಅಂತ. ಪಾಪ, ಅವರ ತಾಯಿ ತಂದೆ ಆದ್ರೂ ಏನು ಮಾಡಿಯಾರು? ತಮ್ಮ ಹತ್ರ ಏನಿತ್ತೋ ಅದನ್ನು ಕಲಿಸಿದ್ರು.

ಲಲಿತ :- ಇಂಥ ದೀಡಿ ದಿಕ್ಕಟ್ಟು ಮಾತನಾಡಿದ್ರೆ ನಾನೂ ಬಿಸಿಯಾಗಬೇಕಾದೀತು.

ರಮೇಶ :- (ಒದೆಯಿಸಿಕೊಂಡ ಹುಚ್ಚು ನಾಯಿಯಂತೆ) ನ್ಹೋಡಿದೆಯಾ ವಾದಿಸ್ತಾಳೆ? ಹುಚ್ಚುಚ್ಚಾರ ಏನೇನೋ ಮಾಡಿ – ಮತ್ತ ನನಗsದೀಡಿ ದಿಕ್ಕಟ್ಟಂತೀಯಾ? ಯಾರ ಮಾರಗಿ ಮಸಿ ಬಳೀ ಬೇಕಂತ ಮಾಡೀಯೆ ಪತಿವರತಿ?  ಯಾವೋನೇ ಅವನು? ಹೇಳ್ತಿಯೋ – ಅಥವಾ ನಾಲ್ಗೆ ಸೀಳ್ಲೊ? (ಲಲಿತಳ ರಟ್ಟೆಗಳನ್ನು ಕೀಳಲೆತ್ನಿಸುತ್ತ) ಹೂಂ ಹೇಳ್ತಿಯೋ – ಅಥವಾ…

ಅಂಬಕ್ಕ :- ಏನೋ ಇದೆಲ್ಲ?

ರಮೇಶ :- (ಕೈಬಿಟ್ಟು ದೂರ ನೂಕುತ್ತ) ಬ್ಯಾಡ. ಅವಳು ಹೇಳೋದೂ ಬ್ಯಾಡ, ಈ ಮನೇಲಿ ಇರೋದೂ ಬ್ಯಾಡ. ಈಗಿಂದೀಗ ಇಲ್ಲಿಂದ ಹೊರಟ ಹೋಗಾಕ ಬೇsಕಂದ್ರ – ಬೇಕು. ಸ್ವಲ್ಪs ತಡ ಆದರ ಸಾಯೂತನಕಾ ಬಡೆದು ಆ ಮ್ಯಾಲ ಯಾಕ ಸತ್ತೀ – ಅಂತ ಬಡದೇನು. ಏಳ್ತೋಯೋ – ಏನಂತಿ?….ನಿಮ್ಮವ್ವಾ – ಅಪ್ಪಾ – ಇಂಥಾದನ್ನs ಮಾಡಂತ ಕಲಿಸಿದರಲ್ಲಾ? ಆಹಾಹಾ! ಏನ ಸಂಸ್ಕೃತಿ – ಏನ ನಡತಿ – ರೀತಿ! ಮ್ಯಾಲ ನೋಡಿದರ ಪತಿವರತಿ – ಒಳಗ ಮೂಬೆರಕಿ. (ಲಲಿತಳ ಬಳಿ ಹೋಗಿ) ಎದ್ದು ಹೋಗ್ತೀಯೋಚಂಡಿನ ಮ್ಯಾಲ ಕೈಕೊಟ್ಟು ಹೊರಗ ಹಾಕಂತೀಯೋ? ಏಯ್‌! ನಾ ಇಲ್ಲಿ ಒದರಾಂವ ಮನಶ್ಯಾನೋ ದನಾನೊ? (ರಟ್ಟೆಯಲ್ಲಿ ಕೈ ಹಾಕಿ ಹೊರಕ್ಕೆಳೆಯತೊಡಗುವನು.)

ಅಂಬಕ್ಕ :- ಇನ್ನೂ ಸ್ವಲ್ಪ ವಿಚಾರ ಮಾಡೋಣ ತಡಿಯೋ.

ರಮೇಶ :- ಏನ ವಿಛಾರಿಲ್ಲ – ಗಿಛಾರಿಲ್ಲ, ಈಗ ಸಧ್ಯ ಇವಳು ಹೊರಬೀಳಾಕ ಬೇಕಂದ್ರ ಬೇಕು. ಹೂಂ, ಏಳಂದ್ರ. ಕೇಳಸ್ತದನೋ ಇಲ್ಲೊ?

ಅಂಬಕ್ಕ :- (೯೯ ಅಂಶ ಜ್ವರ ಏರಿ) ಏ – ತಡಿಯೋ..

ರಮೇಶ :- (೧೦೦ ಅಂಶ ಜ್ವರ ಏರಿ) ನೀ ಸುಮ್ಕಿರಂದ್ರ – ನಡವs ಓಡ್ಯೋಡಿ ಬರ್ತೀಯಲ್ಲ. ಈ ಮನಿಗಿ ಮಾಲಕ ನಾನು. ಹಿರೇರ ಮಾನಮರ್ಯಾದಿ ಕಾಯೋದು ನನ್ನ ಧರ್ಮ. ಇದು ಮನತನಸ್ಥರಿರೋ ಮನೀ.

ಅಂಬಕ್ಕ :- (ಹೇಸಿ – ಇಷ್ಟೇನಾ ನಿನ್ನ ನಾಲಗೆಯ ಹೊಲಸು – ಎಂಬಂತೆ ನೋಡುತ್ತಾ) ಬಾಯಿ ತುಸು ತೊಳೆದುಕೊಂಡು ಮಾತನಾಡು – ನಿನಗ ವೋಟು ಹಾಕಿದವರ್ಯಾರಾದರೂ ಕೇಳ್ಯಾರು. ಅಂಥಾಕಿಗಿ ಇಂಥ ಹೊಲಸು ಶಬ್ದಾ ಆಡಿದ್ರ…..

ರಮೇಶ :- (೧೦೨ ಡಿಗ್ರಿ ಜ್ವರವೇರಿ) ಒಮ್ಮೇ ಅಲ್ಲ ಹತ್ತು ಬಾರಿ ಅಂತೀನಿ.

ಅಂಬಕ್ಕ :- (೧೦೨ ಏರಿ ಧ್ವನಿ ಎತ್ತರಿಸಿ) ಸಾರಾಸಾರ ವಿಚಾರ ಮಾಡೋಣಂದ್ರ ಆಗಲಿಲ್ಲೇನು?

ರಮೇಶ :- (೧೦೪ ಡಿಗ್ರಿ) ಇನ್ನೇನು ವಿಚಾರ ಮಾಡ್ತಿ ನಿನ್ನತಲಿ? ಇವಳು ನನ್ನ ಮಾನ ಕಳೆಯೋದಂದ್ರ ನಿನಗೂ ಭಾಳ ಖುಪಿ ಅಲ್ಲಾ?

ಅಂಬಕ್ಕ :- (ಹಿಡಿತದಲ್ಲಿನ್ನು ಬಾರನೆಂದು ಕಂಡುಕೊಂಡು) ಈ ಮತು ನನಗ್ಯಾರಾದ್ರೂ ಅಂದಿದ್ರ ಇಷ್ಟು ಹೊತ್ತಿಗೆ ನಿನ್ನ ಸ್ನೇಹಿತರು ನಿನ್ನ ಆತ್ಮಕ್ಕ ಶಾಂತಿ ಕೋರ್ತ ಇದ್ರೂ – ಅಂದೆ.

ರಮೇಶ :- (ಅದೇ ಧ್ವನಿಯಲ್ಲಿ, ೧೦೫ ಡಿಗ್ರಿ ಜ್ವರ) ನಿನ್ನ ಸ್ಥಾನದೊಳಗ ಅವಳು ಏನಾದ್ರೂ ನಿಂತು ಆ ಮಾತು ಆಡಿದ್ರ, ಇಷ್ಟ ಹೊತ್ತಿಗೆ ಕುತ್ತಿಗಿ ಹಿಸುಕಿ ತೀರಿಸಿ ಬಿಡ್ತಿದ್ದೇ – ಅಂದೆ.

ಅಂಬಕ್ಕ :- (ನೂರಕ್ಕಿಳಿದು) ನೋಡು, ನಿಜವಾದ ಸಂಗತಿ ಏನದ ಅಂಬೋದು ನನಗೆಲ್ಲಾ ಗೊತ್ತು –

ರಮೇಶ :- ನಿನಗೆಷ್ಟು ಗೊತ್ತದs ಅಂಬೋದು ನನಗೂ ಗೊತ್ತು. ಈಗ ಸಧ್ಯ ಇವಳನ್ನ ಹೊರಗ ಹಾಕಿ ಜಳಕಾ ಮಾಡಿದಾಗs ನನಗೆ ಸಮಾಧಾನ. (ಲಲಿತಳ ಚಂಡಿನ ಮೇಲೆ ಕೈ ಹಾಕಿ ನೂಕುತ್ತ) ಕಿವ್ಯಾಗಿನ ಅರಳಿ ತೆಗೆದು ಕೇಳು, – ಈ ಮನೇಲಿ ಇವಳಿಗಿನ್ನು ಮ್ಯಾಲೆ ಸ್ಥಾನವಿಲ್ಲಾ – ಅಂತ.

ಅಂಬಕ್ಕ :- ಇರೋ ಹಕೀಕತ್ತೆಲ್ಲಾ ನನಗ ಗೊತ್ತು. ನನ್ನ ಮಾತು ಸ್ವಲ್ಪ ಕೇಳು – ಬಾಳೇವಂದ್ರ –

ರಮೇಶ :- (ನೂರಾಆರಕ್ಕೇರಿ) ನಂಗೊತ್ತು, ಒದರಿ ಹೇಳ್ತೀನಿ ಕೇಳು, – ಈ ಕಲ್ಲಿನ ಮೂರ್ತಿ ಮಾತನಾಡೋಲ್ಲ ಅಂಬೋದು ಎಷ್ಟು ಸತ್ಯವೋ – ಅಷ್ಟೇ ಸತ್ಯ, ನಾನಿನ್ನು ಅವಳ ಜೊತೆ ಬಾಳ್ವೆ ಮಾಡಲಾರೆ ಅಂಬೋದು. ಇಂದಿನಿಂದ ಇವಳ್ಯಾರೋ – ನಾ ಯಾರೋ! ನಾನಿವಳ ಗಂಡನಲ್ಲಾ, ಇವಳು ನನ್ನ ಹೆಂಡತಿ ಅಲ್ಲಾ. ಅಪರಿಚಿತರು – ನಂಗೂ ಇವಳಿಗೂ ಏನೂ ಸಂಬಂಧಿಲ್ಲಾಂದ್ರ ಇಲ್ಲ. ಹೂಂ. ಹೊರಬೀಳು. (ಲಲಿತಳನ್ನು ಜಗ್ಗುತ್ತಿರುವಾಗ ಅಂಬಕ್ಕ ಅವನ ತೀರ ಹತ್ತಿರ ಹೋಗಿ ಎಷ್ಟು ಪಾಪಯಿದ್ದೀಯೇ – ಎಂಬಂತೆ ಮುಗುಳುನಕ್ಕು ಲಲಿತಮ್ಮನನ್ನು ಬಿಡಿಸಿಕೊಂಡು ಹಿಂದೆ ಸರಿಸುತ್ತಿರುವಂತೆ ಇದೇ ಈಗ ಹಡೆದು ಆಹಾರ ದೊರೆಯದ ನಾಯಿಯಂತೆ ಅಂಬಕ್ಕನ ಮೇಲೇರಿ ಹೋಗಿ)

ರಮೇಶ :- (ಪಿತ್ತ ನೆತ್ತಿಗೇರಿ) ಈಗ ಬಿಡಿಸಿಕೊಳ್ಲಾಕ ನೀನೇನಾದ್ರೂ ಬಂದರ, ಯಾ ಅಕ್ಕ ಅನ್ನಾಕಿಲ್ಲ, – ತಂಗಿ ಅನ್ನಾಕಿಲ್ಲ – ನಿನ್ನ ಚಂಡಿನ ಮ್ಯಾಲ ಕೈ ಕೊಟ್ಟು ದೂಡಿಬಿಡ್ತೀನಿ.

ಅಂಬಕ್ಕ :- ಅದೂ ಆಗಿ ಹೋಗ್ಲಿ. ಬಾ ನೋಡೋಣ. (ಲಲಿತಳನ್ನು ತನ್ನ ಹಿಂಬದಿಗೆ ಸರಿಸುತ್ತಿರುವಂತೇ ರಮೇಶ ಅವಳನ್ನು ಹಿಂದೆ ನೂಕಿ ಲಲಿತಳ ಕೈಹಿಡಿದೆಳೆಯುವನು. ನೂಕಿದ್ದಕ್ಕೆ ಕುರ್ಚಿಯ ಮೇಲೆ ಬಿದ್ದ ಅಂಬಕ್ಕನ ತುಟಿಯಿಂದೆರಡು ಹನಿ ರಕ್ತ ಬೀಳುತ್ತಿರುವುದನ್ನು ನೋಡಿ ತೆಪ್ಪಗಾಗುವನು. ಅಂಬಕ್ಕ ದಿಟ್ಟೆಯಾಗಿ ನೆತ್ತರನ್ನೂ ಒರೆಸಿಕೊಳ್ಳದೆ ಕೈಕಟ್ಟಿಕೊಂಡು ೪೨ ರ ಚಳುವಳಿಯ ಅನ್ಯಾಯವನ್ನು ಸಹಿಸಿದ ದೇಶಭಕ್ತರಂತೆ ಅಸಹನೆಯಲ್ಲೂ ಮುಗುಳು ನಗೆ ನಗುತ್ತ ಇಣಕದಿಂದ) ಆಯ್ತು? ಇಷ್ಟಕ್ಕ? ನೋಡು, ನಾನೇನೋ ಈಗ ಹೊರಟ್ಹೋಗ್ತೀನಿ. ಹೋಗೋ ಮುನ್ನಾದ್ರೂ ನನ್ನ ಮಾತು ಸ್ವಲ್ಪಕೇಳು, – ನಿಜವಾದ ಸಂಗತಿ ನಿನ್ನೆದುರಿಗೆ ಹೇಳಲೇಬೇಕೂಂದ್ರೆ – ಲಲಿತ ಗರ್ಭಿಣಿ ಇದ್ದದ್ದೂ ಸುಳ್ಳೂ – ಎಲ್ಲಾ ಸುಳ್ಳು. ಈ ಕಲ್ಲಿನ ಮೂರ್ತಿ ಮಾತನಾಡೋಲ್ಲ – ಅಂಬೋದು ಎಷ್ಟು ಸತ್ಯವೋ – ಅಷ್ಟೇ ಸತ್ಯ. ಲಲಿತ ಗರ್ಭಿಣಿ ಇಲ್ಲಾ – ಅಂಬೋದು. ನಿನ್ನ ನಡತೆಯ ಬಗೆಗೆ ಅವರಿವರ ಬಾಯಿಂದ ಕೇಳಿ ಹೇಸಿಕೆಯಾಗಿ ಬುದ್ಧಿ ಬರ್ತsದೇನೋ, ನೋಡ್ಬೇಕುಂತ ಈ ನಾಟ್ಕಾ ನಾನೇ ಹೂಡಿದೆ, ಆದರೆ ಬಿ.ಎ. ಪಾಸಾದವರೂ, ಚುನಾವಣೆಗೆ ನಿಂತವರೂ ಆದಂಥಾ ತಮ್ಮ ಬಾಯಿಂದ ಇಷ್ಟು ಅಗ್ಗದ ಮಾತು ಬರಬಾರದಿತ್ತು. (ರಮೇಶ ಆಶ್ಚರ್ಯ ಪಶ್ಚಾತ್ತಾಪಗಳಿಂದ ಏನಂದಿ? – ಎಂಬಂತೆ ಮುಖ ಮಾಡಿ ಏನೋ ಕೇಳಬೇಕೆನ್ನುವಾಗ) ಇದೀಗ ನೀನೇ ಹೇಳ್ದೆ – ಇಂದಿನಿಂದ ನಾನವಳ ಗಂಡನಲ್ಲಾ – ಅಂತ. ಎಂದೋ ನೀನವಳಿಗೆ ಗಂಡನಾದದ್ದು? (ರಮೇಶ ತೊಯ್ದ ಕಾಗೆಯಂತೆ ಮುದುಡಿಯಾಗಿ ಕುರ್ಚಿಯಲ್ಲಿ ಕುಕ್ಕರಿಸುವನು) ಮನೆಯಲ್ಲಿ ಹೆಂಡತಿ ಅಂಬೋ ಜೀವಂತ ಪ್ರಾಣಿಯೊಂದಿದೆ ಅಂಬೋದು, ಒಂದು ದಿನವಾದ್ರೂ ನಿನ್ನ ಮನಸ್ಸಿನಲ್ಲಿ ಮೂಡಿದೆಯೋ? ನಿನ್ಹಾಗೇ ಅವಳಿಗೂ ಬಯಕೆ, ಆಸೆ ಇದೆ ಅಂಬೋ ಜ್ಞಾನ, ಮನುಷ್ಯನೆಂದು ತಿಳಿದುಕೊಂಡ ನಿಮಗೆ ತುಸುವಾದ್ರೂ ಇದೆಯೇ? ಅವಳ ಸಂಸ್ಕೃತಿಯನ್ನು ಒದರಿ ಆಡಿದೆ. ಮದುವೆಯಾಗಿ ಒಂದೂವರೆ ವರ್ಷ ಆದರೂ ಹೆಂಡತೀನ್ನ ಮರೆತು ಯಾರ ಯಾರದೋ ಪತಿ‌ವ್ರತೆಯರ ಸಂಗಡ ಹೊಲಗೇರಿ ಮಾಡಿದೆಯಲ್ಲಾ – ಇದs ಏನಪಾ ನಿಮ್ಮ ತಂದೆ ತಾಯಿ ನಿನಗೆ ಕಲಿಸಿದ್ದು? ಇದs ಏನಪಾ ದಿವ್ಯ ಸಂಸ್ಕೃತಿ? ಯಾಕೋ ನಮ್ಮ ಜನನಾಯಕಾ – ಬಾಯಿ ಸುಮ್ಮನಾಯ್ತು?

ರಮೇಶ :- (ಉಗುಳಿಸಿಕೊಂಡವರಂತೆ ಮುಖ ಮಾಡಿ ಉಗುರು ಕಚ್ಚುತ್ತ) ಹಾಗಂತ ನಿನಗ್ಯಾರು ಹೇಳಿದ್ದು?……….ಅದೇನ ಹಾಂಗ ನೋಡ್ತಿಯಕ್ಕಾ?

ಅಂಬಕ್ಕ :- (ಇನ್ನೂ ಹೇಸಿ) ನಿಮ್ಮ ಸುಂದರವಾದ ಮುಖದಲ್ಲಿನ ಸಂಸ್ಕೃತಿಯ ತಪ್ಪುಗಳನ್ನು ಓದತಾ ಇದ್ದೀನಿ. ನಿಮ್ಮ ಶ್ರೇಷ್ಠ ನಾಗರಿಕತೆಯ ಕಲಂಕಗಳನ್ನ ಎಣಿಸ್ತ ಇದೀನಿ…

ರಮೇಶ :- (ಉಗುರು ಕಚ್ಚಿ ಉಗುಳಿ ಒಗರಿನಿಂದ) ಅಂದರ?

ಅಂಬಕ್ಕ :- ತಪ್ಪು ಮಾಡಿಯೂ ಇನ್ನೂ ಒಪ್ಪಿಕೊಳ್ಳದೆ ದಿಗರಿನ್ಯಾಗ ಜಾರಿಕೊಳ್ಳಲಿಕ್ಕೆ ಯತ್ನಿಸ್ತಾ ಇದ್ದೀಯಲ್ಲಾ – ಇಂಥಾ ನಿಮ್ಮ ಮನಸ್ಸಿನ ಶ್ರೀಮಂತಿಕೆ ನೋಡ್ತಾ ಇದೀನಿ. ಮಾತನಾಡ್ರಿ – ಮಹಾತ್ಮರ, ನಿಮ್ಮಂಥವರ ಮಾತು ಕೇಳ್ಲಾಕ ಸಿಕ್ಕಾವೋ ಸಿಗಾಕಿಲ್ಲೋ ಅನ್ನಬೇಕು ನಾವು. ಏನಂತೀರಿ…? ನೀವು ಏನಾದ್ರೂ ಅನ್ನಲಿಕ್ಕೆ ಬಯಸುತ್ತಿರಬೇಕಾದರೂ ನಿಮ್ಮ ಶ್ರೇಷ್ಠ ಸಂಸ್ಕೃತಿ ಅದಕ್ಕ ಸಮ್ಮತಿಸಬೇಕಲ್ಲ…

ನೋಡಿ, ನೀವಿನ್ನು ಏನು ಹೇಳೋದೂ ಬ್ಯಾಡ, ಕೇಳೋದೂ ಬ್ಯಾಡ. ಸಧ್ಯ ನಾನಂತೂ ಹೊರಟ್ಹೋಗ್ತೀನಿ. ನಮ್ಮಂಥವರನ್ನ ಮುಟ್ಟಿ ಹೊರದೂಡಿದರೆ ನಿಮಗೆಲ್ಲಿಯಾದ್ರೂ ಪಾಪ ತಗಲೀತು. (ಎದ್ದು ಹೋಗತೊಡಗುತ್ತಲೂ ರಮೇಶ ಎದ್ದು ಕೈಮುಗಿದು ಕ್ಷಮೆ ಕೇಳಲೇ – ಬೇಡವೇ – ಎಂಬಂತೆ ತೂಗುತ್ತ ಇನ್ನೇನು ತಡೆಗಟ್ಟಿಯಾನು ಎನ್ನುವಂತೆ ಒಂದು ಅಡಿ ಮುಂದಿಡುವನು.)

ಅಂಬಕ್ಕ :- ನೋಡಿ, ನನ್ನ ಬ್ಯಾಗಿನಲ್ಲಿ ಸೀರೆ, ತುಸು ಆಭರಣ ಇದೇಂತ ಕಾಣ್ಸುತ್ತೆ. ಅವನ್ನೆಲ್ಲಾ ನಮ್ಮಿಬ್ಬರ ಸಂಬಂಧದ ಹೆಸರಿನಲ್ಲಿ ನಿಮ್ಮ ಪ್ರೇಯಸಿಗೆ ಕೊಟ್ಟುಬಿಡಿ – ಲಲಿತನಿಗಲ್ಲ. ಲಲಿತಾ, ನೀನುಂಟು, ನಿನ್ನ ದೈವವುಂಟು. ಇಬ್ಬರಿಗೂ ನಮಸ್ಕರ,

ಲಲಿತ :- (ನನಗೆ ಈಸು ಚೆನ್ನಾಗಿ ಬರದು. ನಡುನೀರಿನಲ್ಲಿ ಕೈಬಿಟ್ಟರೆ ಹೇಗೆ – ಎಂಬಂತೆ ಅಳುಮುಖ ಮಾಡಿ) ಅಕ್ಕಾ… ಈ ನಾಟಕ…

ಅಂಬಕ್ಕ :- ಮುಗೀತು – ಮುಗೀತು! ಸಧ್ಯ ಆರಂಭವಾಗಿರೋದು ಜೀವನ. ಇದರೊಳಗ ನಿಮ್‌ ನಿಮಗ ಹ್ಯಾಂಗ್ಹ್ಯಾಂಗ ಒಗ್ಗ ಉತ್ತೊ ಹಾಂಗ್ಹಾಂಗ ಅಭಿನಯಿಸಿಕೊಳ್ಳಿ. ಬರ್ತೀನಿ. (ರಮೇಶ ದವಡೆ ಒಡೆದ ಬಡವನಂತೆ ಆದರು ಹಿಂದಿನ ಸಾಹುಕಾರಿಕೆಯ ಘಮಂಡಿ ಬಿಡದೆ ‘ಅಕ್ಕಾ’  ಎಂದು ಅವಳಿಗೆ ಅಡ್ಡವಾಗಿ ನಿಲ್ಲುತ್ತಿರುವಾಗಲೇ ಶಾರದಾ , ತುಂಬ ಉತ್ಸಾಹದಿಂದ ಟುಣು ಟುಣು ಹಾರುತ್ತ ಒಳಬರುತ್ತಾಳೆ. ಉಡುಪು ಮಾಡಿದ್ದನ್ನೆಲ್ಲ ಮುಚ್ಚುವಂಥ ಬಣ್ಣ. ಅಂಥದೇ ಒಂದು ಮಸಡಿ . ಹಿಂದಿನ ಜನ್ಮದಲ್ಲಿ ಪ್ಯಾರಿಸಿನಲ್ಲಿ ಹುಟ್ಟಿದ್ದಳೆಂಬುದಕ್ಕೆ ಅನೇಕ ಆಧಾರಗಳಿರುವ ಉಡುಪು – ಚಲನೆ – ನಟನೆ.

ಶಾರದಾ :– ರಮೇಶ! ರಮೇಶ್‌….. ಕಂಗ್ರಾಚುಲೇಶನ್ಸು!! ರಮೇಶ್‌…(ಅಂಬಕ್ಕನನ್ನು ಕಂಡು ಆಕುಂಚನವಾಗಿ) ಓಹ್‌… ಅಂಬಕ್ಕ. ಯಾವಾಗ ಬಂದಿದ್ರಿ?

ಅಂಬಕ್ಕ :- ಬನ್ನಿ ಕೂತ್ಕೊಳ್ಳಿ. ಮತ್ತೇನು ತುಂಬಾ ಖುಶಿಯಾಗಿದ್ದೀರಂತೆ. ನಿಮ್ಹೆಸರು ಶಾರದಾದೇವಿ – ಅಲ್ಲಾ?

ಶಾರದಾ :– ಹೂಂನ್ರಿ . ನೀವಿದ್ದಾಗ ಹಿಂದೊಮ್ಮೆ ಬಂದಿದ್ದೆನಲ್ರಿ. (ಲಲಿತ ರಮೇಶರನ್ನು ಈಕ್ಷಿಸಿ) ನಾನು ಬರಬಾರದಾಗಿತ್ತೇನೋ…

ಅಂಬಕ್ಕ :- ಹಾಗೇನಿಲ್ಲ.  (ಅವಳನ್ನೂ ಕೂಡ್ರಿಸಿ ತಾನೂ ಕೂಡ್ರುತ್ತ) ರಮೇಶ ಆರಿಸಿ ಬಂದಿರಬೇಕು. ಅಲ್ಲಾ?

ಶಾರದಾ :– ಹೌದು! ಕಂಗ್ಯ್ದಾಚುಲೇಶನ್ಸು ಹೇಳ್ಬೇಕೂಂತ ಬಂದಿದ್ದೆ. ಅವರು ತುಂಬಾ ಗಂಭೀರವಾಗಿ…

(ರಮೇಶ ಸುದ್ದಿ ಕೇಳಿ “ನಿಜವಾಗಿಯೂ?” ಎಂಬಂತೆ ಮುಖ ಮಾಡಿ ಅವಳನ್ನು ನೋಡುತ್ತಿರುವಾಗಲೇ ಅಂಬಕ್ಕನನ್ನು ನೋಡಿ ಮತ್ತೆ ತಣ್ಣಗಾಗುವನು.)

ಅಂಬಕ್ಕ :- ಅದೇನಿಲ್ಲ. ಒಂದು ನಾಟ್ಕಾ ರಿಹರ್ಸಲ್‌ ಆರಂಭಿಸೀವಿ.  ಅವನೇ ಅದರಲ್ಲಿ ನಾಯಕ. ಇನ್ನೊಂದು ಪಾತ್ರದ ಅವಶ್ಯಕತೆ ರೋದಕ್ಕೂ ನೀವು ಬರೋದಕ್ಕೂ ಸರಿಹೋಯ್ತು.

ರಮೇಶ :- (ಇನ್ನೆಲ್ಲಿ ತನ್ನ ಮಾನ ಕಳೆಯುತ್ತಾಳೋ ಎಂಬಂತೆ ಅವಳನ್ನು ನೋಡುತ್ತ,) ನೋಡಕ್ಕಾ…

ಅಂಬಕ್ಕ :- ಏನಂತೀರಿ ಶಾರದಾದೇವಿ, ತುಂಬಾ ಸೊಗಸಾದ ನಾಟ್ಕಾ! ನೀವು ಬರಲೇಬೇಕು.

ಶಾರದಾ :– ನಾನು? (ಕುಲು ಕುಲು ಕುಲು ನಗುತ್ತ) ಎಂಥಾ ನಾಟ್ಕಾ – ಏನು ಮಾತು?

ಅಂಬಕ್ಕ :- ನೋಡಿ, ಇದರ ಹೀರೋ – ಹೆಂಡತೀನ್ನ ಬಿಟ್ಟು ಇನ್ಯಾವಳೋ ಜೊತೆ…

ರಮೇಶ :- ಹೊರಟು ನಿಂತವಳು ಸುಮ್ಮನೆ ಹೋಗ್ಬಾರ್ದೆ?

(ಥೂ ಪಾಪಿ – ಎಂಬಂಥ ತಾತ್ಸಾರ ದೃಷ್ಟಿಯಿಂದ ರಮೇಶನನ್ನು ನೋಡಿ ಹೊರಡುವಳು).

ಶಾರದಾ – (ಖುಲು ಖುಲು ಖುಲು ನಗುತ್ತ) ಇದೆಲ್ಲಾ ನಾಟ್ಕಾ ಬಿಟ್ಟು ನಮ್ಮ ಮನೆಗಾದ್ರೂ ಬನ್ನಿಂದ್ರೇ.

ಅಂಬಕ್ಕ :- (ಮೂರ್ಖನೆದುರಿನ ಮಹಾತ್ಮನಂತೆ) ನನ್ನ ತಮ್ಮ ದಿನಾಲೂ ಬರ್ತಾನಲ್ಲ… (ಮನಸ್ಸಿನ ವೇಗದಿಂದ ಹೊರಹೋಗುತ್ತಾಳೆ. ಲಲಿತ, ಏನು ಮಾಡಹೋಗಿ ಏನಾಯಿತಿದು – ಎಂಬಂತೆ ಅಳುವ ಮುಖ ಮಾಡಿ ಹೊಸ್ತಿಲ ವರೆಗೆ ಹೋಗಿ ಹೊರಗೆ ಹೋಗಬೇಕೆಂದು ಕಾಲಿಡುವಷ್ಟರಲ್ಲಿ ರಮೇಶ ಅವಳ ಕೈ ಹಿಡಿಯುತ್ತಾನೆ. ಲಲಿತ ಥಟ್ಟನೇ ತಿರುಗಿ ಅವನ ಮುಖವನ್ನೋದಿ ಬಾಯಿಪಾಠ ಮಾಡುವವರಂತೆ ನೋಡುತ್ತ ಕೈಬಿಡಿಸಿಕೊಂಡು ತುಸು ಸೆಕಂಡು ಹಾಗೇ ನೋಡಿ ತಾಳಿಯನ್ನು ರಭಸದಿಂದ ಹರಿದು ನೋಡು ನೋಡುತ್ತಿರುವಂತೆ ಅವನ ಮೇಲೆ ಎಸೆಯುತ್ತಾಳೆ.)

ಶಾರದಾ :– (ಆಶ್ಚರ್ಯದಿಂದ) ಇದೇನ್ರೀ ಲಲಿತಕ್ಕ?

ಲಲಿತ :- ಇದರ ಅರ್ಥ ಸರಿಯಾಗಿ ಆಗದಿದ್ದಲ್ಲಿ ಕೋರ್ಟಿಗೆ ಬನ್ನಿ.
ಶಾರದಾ :– ರಮೇಶರವರು!!…

ಲಲಿತ :- ಅಪರಿಚಿತರು! ಅಪರಿಚಿತರು!! ಅಪರಿಚಿತರು!!

(ಸ‌ರ್ರನೇ ಹೊರಟು ಹೋಗುವಳು. ಹೆಂಡತಿಯಿಂದ ಹತ್ತುಜನರಲ್ಲಿ ಒದೆಯಿಸಿಕೊಂಡ ಅಭಿಮಾನೀ ಗಂಡನಂತೆ ರಮೇಶ ನಿಂತಿದ್ದಾನೆ. ಶಾರದಾ ಅವನ ಬಳಿ ಸಾರಿ ಆಶ್ಚರ್ಯ – ಭಯಗಳನ್ನು ಮುಖದಲ್ಲಿ ಪ್ರದರ್ಶಿಸುತ್ತ ಅವನ ಬೆನ್ನ ಮೇಲೆ ಕೈಯೂರುತ್ತಲೂ ಬೆಂಕಿ ಮುಟ್ಟಿದವರಂತೆ ಕೊಡಹಿ ಪ್ರೇಕ್ಷಕರತ್ತ ಬೆನ್ನು ತಿರುಗಿಸಿ ನಿಲ್ಲುವನು. ಶಾರದಾ ಏನೂ ತಿಳಿಯದೆ ತಾನೂ ಹೋಗುತ್ತಲೂ – ರಮೇಶ ಲೈಟು ಕಳೆದು ತಲೆ ಹಿಡಿದುಕೊಂಡು ಕುರ್ಚಿಯಲ್ಲಿ ಕುಕ್ಕರಿಸುತ್ತಿರುವಾಗ ತೆರೆ.)