The purification of politics
is an iridescent dream.

– INGALLS – Epigram. 

ಪಾತ್ರಗಳು

ರಾಮೂ – ಇವನೇ ಮುಂದೆ ರಾಜ
ಬಸವಾನಿ – ಆಗಬೇಕಾಗಿದ್ದ ರಾಜ
ಕಿಟ್ಟೂ – ಸೂತ್ರಧಾರ – ಆಮೇಲೆ ಪ್ರಧಾನಮಂತ್ರಿ
ಮಾರಿಷ
ಮಜನೂ
ಲೈಲಾ
ವೈಶ್ಯಗುಪ್ತ
ವಾಲ್ಮೀಕಿ ಮಹರ್ಷಿಗಳು
ಸೇವಕರುಮಂತ್ರಿಗಳುಪ್ರಜೆಗಳು

—-

[ಕಾಲೇಜು ವಿದ್ಯಾರ್ಥಿಗಳ ವಾರ್ಷಿಕೋತ್ಸವ ಸಮಯಕ್ಕೆ ಏರ್ಪಡುವಂಥ ರಂಗಭೂಮಿ. ಮುಂದೊಂದು ಕರಿಯ ಪರದೆ. ಅದನ್ನು ಹಿಂದಿನಿಂದ ಅತ್ತಿತ್ತ ಸರಿಸಿ, ಒದ್ದು, ದೂಡುವ ಗಡಿಬಿಡಿ. ರಂಗದೊಳಗೆ ತುಂಬಾ ಗದ್ದಲ ಸಾಗಿದೆಯೆಂಬಂತೆ “ನೀ ಸುಮ್ಮನಿರು” “ಬಾಯಿ ಮುಚ್ಚು” “ನನ್ನೊಡನೆ ಮಾತನಾಡಲು ನೀನೆಷ್ಟರವನು?” ಇತ್ಯಾದಿ ಮಾತು ಸ್ಪಷ್ಟವಾಗಿ ಅಥವಾ ಅಸ್ಪಷ್ಟವಾಗಿ ಕೇಳಬೇಕು. “ಅಯ್ಯೋ ಇನ್ನಾದರೂ ಸುಮ್ಮನಿರಬಾರದೇ?” – ಎಂಬ ಗಡುಸು ಧ್ವನಿ ಬರುತ್ತಲೂ ಮೌನ. ತುಸು ಹೊತ್ತು ಮೌನದ ಶಾಸ್ತ್ರವಾದ ಮೇಲೆ ಢಣಾ ಢಣಾ ಗಂಟೆ ಬಾರಿಸುತ್ತದೆ. ತೆರೆ ಸಾವುಕಾಶವಾಗಿ ಸರಿಯುತ್ತದೆ.

ಹಿನ್ನೆಲೆಯಲ್ಲಿ ಅರಮನೆಯ ಕಲ್ಪನೆ ಬರುವಂಥ ಪರದೆ. ನಡುವೆ ಒಂದು ಮೇಜು. ಅದರ ಬದಿ ದೊಡ್ಡದೊಂದು ದೊಡ್ಡವರು ಕೂಡ್ರಬೇಕಾದ ಕುರ್ಚಿ. ಆ ಮೇಲೆ ಎಡಬದಿಗೆ – ಬಲ ಬದಿಗೆ ಸಣ್ಣ ಜನರಿಗಾಗಿ ನಾಲ್ಕೆಂಟು ಕುರ್ಚಿಗಳು. ಅರಮನೆಯ ಕಲ್ಪನೆ ಬರುವಮಥ ಪರದೆಯ ಮೇಲೆ ನಾಲ್ಕೈದು ಪ್ರಸಿದ್ಧ ಸಿನೇಮಾ ನಟ ನಟಿಯರ ಚಿತ್ರಗಳಿದ್ದರೂ ಸರಿಯೇ. ಅಷ್ಟರಲ್ಲಿ ಒಬ್ಬ ನಟ ಅರ್ಧ ಬಣ್ಣ ಬಳಿದು – ಅರ್ಧ ಇನ್ನೂ ಬಳಿಯದೇ ಇದ್ದರೂ ರಂಗದ ಎಡಬದಿಯಿಂದ ಬಂದು ‘ತಾನು ಪ್ರೀತಿಸುವ ಆ ಹುಡುಗೆಯೂ ನೋಡಲಿಕ್ಕೆ ಬಂದಿರಬಹುದೆ?’ – ಎಂದು ಪ್ರೇಕ್ಷಕರನ್ನು ಅರಸುವ ಕಣ್ಣುಗಳಿಂದ ನೋಡಿ ಬಲಬದಿಯಿಂದ ಒಳಹೋಗುವನು. ಅಷ್ಟರಲ್ಲಿ ಮತ್ತೊಂದು ಗಂಟೆಯಾಗುತ್ತದೆ. ಸೂತ್ರಧಾರನು ಕೈಮುಗಿದುಕೊಂಡು ಬಂದು ಮೈಕಿನ ಹತ್ತಿರ ನಿಂತು ತನಗೆ ಬಂದ ಬೇರಾಗದಲ್ಲಿ ಹಾಡತೊಡಗುತ್ತಾನೆ.]

ಸೂತ್ರಧಾರ. ನಾಂದಿ – ರಾಗ – ಗಾರ್ದಭ. ತಾಳ – ಬೇತಾಳ.

ತಗಣಿಗಳಿಗೆ ಚಪಲತೆಯನಿತ್ತನ
ನಾರದನ ಪಿತಂ.
ನಾಯಿಗಳಿಗೆ ವಿನಾಕಾರಣ ಬೊಗಳುವ
ಸಾಮರ್ಥ್ಯವನ್ನಿತ್ತ ಶಾರದೆಯ ಗಂಡಂ
ಕನ್ನಡಿಯಲ್ಲಿ ತನ್ನ ರೂಪು ಊರ್ವಶಿಯ
ಹಾಗೇ ಕಾಣುವಂತೆ ಪ್ರತಿಹಣ್ಣಿಗೂ
ದಿವ್ಯದೃಷ್ಟಿಯನ್ನಿತ್ತ ನಾಲ್ಮೊಗಂ
ರಕ್ಷಿಸುಗೆ ನಮ್ಮ ಪ್ರೇಕ್ಷಕ ವೃಂದಂ ||

ಪ್ರೇಕ್ಷಕ ಮಹಾಶಯರಲ್ಲಿ ವಿಜ್ಞಾಪನೆ. ಈ ದಿನ ಕೂಡಿದ ಪ್ರೇಕ್ಷಕ ವೃಂದವನ್ನು ಕಂಡು ನನ್ನ ಹೊಟ್ಟೆಯಲ್ಲಿ ಆನಂದವು ಹಿಡಿಸಲೊಲ್ಲದಾಗಿದೆ. ಆದರೆ ನಿಮ್ಮನ್ನು ನಾನು ಹೇಗೆ ತೃಪ್ತಿಗೊಳಿಸಬಲ್ಲೆ? ಓಹೋ ತಿಳಿಯಿತು. ಮಾರಿಷ, ಮಾರಿಷ.

ನಟ :– (ಪ್ರವೇಶಿ) ಆರ್ಯ ನಾನು ಇಲ್ಲಿಯೇ ಇದ್ದೇನೆ.

ಸೂತ್ರಧಾರ :– ಮಾರಿಷ, ಈ ಹೊತ್ತಿನ ನಮ್ಮ ಪ್ರೇಕ್ಷಕವೃಂದವು ಸಂತೋಷವೆಂಬ ಸಾಗರದಲ್ಲಿ ಮುಳುಗಿ ಸಾಯುವಂಥ ಯಾವ ಚಟುವಟಿಕೆಯನ್ನು ಮಾಡೋಣ?

ನಟ :– ಆರ್ಯ, ಅದಕ್ಕೇನಂತೆ? ಜನ ಮನೋರಂಜನವಾಗುವಂಥ ಒಂದು ಶ್ರೇಷ್ಠ ನಾಟಕವನ್ನು ಪ್ರದರ್ಶಿಸಬೇಕು.

ಸುತ್ರಧಾರ – ಹೌದು. ಹೌದು. ಆದರೆ ಅಂಥ ಶ್ರೇಷ್ಠ ನಾಟಕಗಳನ್ನು ಬರೆಯುವ ಕವಿಗಳೆಲ್ಲಿ ಇದ್ದಾರೆ?

ನಟ :– ಅದೇಕೆ ಆರ್ಯಾ ಹಾಗೆನ್ನುತ್ತೀರಿ? ಹನುಮನುದಿಸಿದ ಈ ನಾಡಿನಲ್ಲಿ ಕವಿಗಳಿಗೆ ಕೊರತೆಯೇ? ಶ್ರೀ ವಾಲ್ಮೀಕಿ ಎಂಬೊಬ್ಬ ಕವಿ ಬರೆದ ‘ರಾಮರಾಜ್ಯ’ವೆಂಬ ನಾಟಕವನ್ನು ಆಡಬಹುದು.

ಸೂತ್ರಧಾರ :– ಆದರೆ ನಮ್ಮ ನಟರು ಸಿದ್ಧವಾಗಿದ್ದಾರೆಯೋ? – ಸರಿ. ಆರ್ಯಮಹಾಶಯರಲ್ಲಿ ವಿಜ್ಞಾಪನೆ. (ತೆರೆಯಲ್ಲಿ ಧುಂಬಡಿ) ನಾನು ವಿಜ್ಞಾಪಿಸುವುದರಲ್ಲೇ ತೆರೆಯಲ್ಲಿ ಗದ್ದಲವಾಗುವಂತೆ ತೋರುತ್ತದಲ್ಲ. ಓಹೋ ತಿಳಿಯಿತು, ತಿಳಿಯಿತು. ಅಯೋಧ್ಯೆಯ ಜನರು ತಾವು ಚುನಾಯಿಸಿದ ಹೊಸ ರಾಜನನ್ನು ಜೈ ಜೈಕಾರದೊಂದಿಗೆ ಆನೆಯ ಅಂಬಾರಿಯಲ್ಲಿ – ಅರಮನೆಗೆ ಕರೆದು ತರುತ್ತಿದ್ದಾಳೆ. ಆನೆಯನ್ನೇರಿದ ಆ ಅರಸನನಾದರೋ ಕರಿಮೋಡವನ್ನೇರಿದ ಮಧ್ಯಾಹ್ನದ ಸೂರ್ಯನಂತೆಯೂ, ಹಸಿಕಟ್ಟಿಗೆಯ ಮೂಲಕ ಹೊಗೆ ಹಿಡಿದ ಒಲೆಯಂತೆಯೂ, ಜನರ ಚಪ್ಪಾಳೆಗಳೆಂಬ ತೆರೆಯಲ್ಲಿ ನಗುವೆಂಬ ಸಾಗರದಲ್ಲಿ ಮಿರುಗುವ ಕಮಲದಂತೆಯೂ ಶೋಭಾಯ ಮಾನನಾಗಿರುವನು. ಮಾರಿಷ, ಅದೇನು ನೋಡಿ ಬಾ.

(ತೆರೆಯಲ್ಲಿ – “ನಾಲ್ಗಿ ಬಿಗಿಹಿಡಿದ ಮಾತಾಡಲೇ, ಎಲುವಿಲ್ಲದ ನಾಲ್ಗೆಂತ ಬೇಕಾ ಬೇಕಾದ್ಹಾಂಗ ಉದ್ದ ಬಿಟ್ರ ಸೀಳಿ ಒಗದೇನ.”

“ಏಯ್‌, ರಾಜಾನ ರೋಲ ನನಗ ಕೊಟ್ಟರ ಈ ನಾಟಕಾದೊಳಗ ಬರ್ತೀನಿ. ಇಲ್ಲಂದ್ರ ಈಗ ಹೊರಬಿದ್ದ ಹೋಗತೇನ ನೋಡು”

“ಅಯ್ಯೋ ಹೀಂಗೆಲ್ಲಾ ಮಾಡಬ್ಯಾಡ್ರೋ ನಿಮ್ಮ ಕಾಲ್ಬೀಳ್ತೀನಿ!”)

ಮರಿಷ :– (ಪ್ರವೇಶಿಸಿ) ಆರ್ಯ! ಆರ್ಯ! ಅನಾಹುತವಾಯ್ತು.

ಸೂತ್ರಧಾರ :– ಯಾರು ಸತ್ತರು?

ಮಾರಿಷ :– ಯಾರು ಇಲ್ಲ. ರಾಮೂ ತನಗೆ ರಾಜನ ಪಾತ್ರ ಕೊಟ್ರೆ ಸೈ, ಇಲ್ಲದಿದ್ದರ ನಾಟ್ಕದೊಳಗ ಬಾ ಬರಾಂಗಿಲ್ಲಂತ ಹಟಾ ಹಿಡಿದ ಬಿಟ್ಟಿದಾನ.

ಸೂತ್ರಧಾರ :– ಮೂರು – ಖಾ! ಇಂಥಾ ಮಾತನ್ನೂ ಪ್ರೇಕ್ಷಕರೆದುರಿಗೇ ಹೇಳಬೇಕೆ? ಎಲ್ಲಿ ಆ ರಾಮು? (ಎಡಬಾಗಿಲಿನಿಂದ ಒಳಕ್ಕೆ ಹೋಗಬೇಕೆನ್ನುವಾಗಲೇ ರಾಮೂ. ಸಾಲಕೊಟ್ಟ ಸಾಹುಕಾರನಂತೆ ಅವನ ಅಂಗಿಯನ್ನು ಹಿಡಿದು ರಂಗದ ಮಧ್ಯಕ್ಕೆ ಬರುತ್ತಾನೆ.)

ರಾಮು :– ನೋಡು ಕಿಟ್ಟು, ಈ ನಾಟ್ಕಾದೊಳಗ ರಾಜನ ರೋಲ ನನಗ ಕೊಟ್ರ ಸೈ, ಇಲ್ಲದಿದ್ದರೆ ಈ ನಾಟ್ಕಾದೊಳಗ ನಾಯೇನ ಬರಾಂಗಿಲ್ಲ ನೋಡು.

ಸೂತ್ರಧಾರ :– ಅಯ್ಯೋ ಏನೋ ಇದು ಪ್ರೇಕ್ಷಕರೆದುರಿಗೆ? ಬಸವಾನಿ ಅದನ್ನ ಕಂಠಪಾಠ ಮಾಡ್ಯಾನಲ್ಲೊ!

ರಾಮೂ :– ಕಂಠಪಾಠ ಮಾಡಿದ್ರೇನು ಬಿಟ್ರೇನು? ನನಗೂ ಅದು ಕಂಠಪಾಠ ಆಗ್ಯsದ. ಒಬ್ಬ ರಾಜಾನ ಅಭಿನಯ ನನಗ ಬರೋಲ್ಲಂದ್ರ ಮಂದಿ ನಕ್ಕಾರು. ಈಗ ಕೊಡತೀನೋ? ಇಲ್ಲಂದ್ರ ನಾ ಮನಿಗಿ ಹೊಕ್ಕಿನಿ ನೋಡು. (ಹೋಗುವವರಂತೆ ಎಡಬಾಗಿಲ ಕಡೆಗೆ ಹೋಗುವಾಗ ಬಸವಾನಿ ಅರಸನ ಉಡುಪಿನಲ್ಲಿ ಹೊರಬರುವನು ಮತ್ತೆ ಇಬ್ಬರೂ ಸೂತ್ರಧಾರನ ಕಡೆಗೆ ಬಂದು)

ಬಸವಾನಿ :– ನಾ ರಾಜಾನ ರೋಲ ಬಿಡಾಂಗಿಲ್ಲಂದ್ರ ಬಿಡಾಂಗಿಲ್ಲ. ಇಷ್ಟ ದಿನ ಅಭ್ಯಾಸೆಲ್ಲ ಬಿಟ್ಟು ಬಾಯಿಪಾಠ ಮಾಡಿದ್ದೇನ ಆಟಂತ ತಿಳಿದಿದ್ದೀರೇನ?

ರಾಮು :– ನೀ ರಗಡs ಬಾಯಿಪಾಠ ಮಾಡತಿ. ಯಾರು ಕೇಳ್ಬೇಕು. ಏ ಕಿಟ್ಯಾ – ನನಗ ಕಿರೀಟ, ಈ ಅಂಗಿ ಇಸಿದು ಕೊಡತೀಯೋ ಇಲ್ಲೊ?

ಬಸವಾನಿ :– (ಕಿರೀಟನ್ನು ತೆಗೆದು ಮುಚ್ಚಿಕೊಳ್ಳುತ್ತ) ಏಯ್‌ನೀ ಯಾವನ್ಲೇ ನನ್ನ ಕಿರೀಟ ಬೇಡಾಕ? ರಾಜಾನ ರೋಲ ಬಿಟ್ಟೇನ ಆದ್ರೂ ಈ ಕಿರೀಟ ಬಿಡಾಕಿಲ್ಲ. ನಾ ಅಂದರ ಏನಂತ ತಿಳಿದೀಯಲೇ?

ಸೂತ್ರಧಾರ :– (ಹಣೆ ಟಪ್‌ ಟಪ್‌ ಎಂದು ಗಿಟ್ಟಿಸಿಕೊಂಡು) ನಿಮ್ಮಿಬ್ಬರದೂ ಕಾಲ ಬೀಳ್ತೇನ್ರೋ ನನ್ನ ಮಾನ ಕಳೀಬ್ಯಾಡ್ರಿ! ಒಳಗsರೆ ನಡೀರಿ.

ರಾಮು :– ಒಳಗಿಲ್ಲ, ಹೊರಗಿಲ್ಲ. ನಿನಗೆ ದಿನಾಲೂ ಚಹಾ ಕುಡಿಸ್ತಾನಂತ ಅವನ ಕಡೆ ಆಗಿ ಮಾತಾಡ್ತೀ ಅಲ್ಲಾ? ನಾ ಅದನೆಲ್ಲಾ ಕೇಳಾಂಗಿಲ್ಲ.

(ಸೂತ್ರಧಾರನು ತಲೆ ಚಿಟ್ಟುಹಿಡಿದು ಕರಿಯಪರದೆ ಸರಿಸಬರಲು ರಾಮೂ ಆತನನ್ನು ಹಿಂದಕ್ಕೆಳೆದು ನೂಕಿ) ನೋಡಿ ಪ್ರೇಕ್ಷಕರೇ ನೀವಾದರೂ ನೋಡಿ, ಇಂಥಾ ಆಧುನಿಕ ಕಾಲದೊಳಗ ದ್ವಾಪರದ ಕೋಡಗನ್ಹಂಗ ಅಂಗಿ ಸಿಗಿಸಿಕೊಂಡ ನಿಂತಾನ. ಇದು ಇಪ್ಪತ್ತನೇ ಶತಮಾನ ಅದs ಅಂಬೋದು ಗೊತ್ತದನೋ ಇಲ್ಲೊ?

ಬಸವಾನಿ :– ಏ – ಕವಿ ಹ್ಯಾಂಗ ಬರದ್ದಾನೋ ಹಾಂಗ ನಾ ಆಗೀನಿ. ನಡಕ ನೀ ಯಾರೋ ಕೇಳ್ಲಿಕ್ಕೆ?

ಸೂತ್ರಧಾರ :– ಅಯ್ಯೋ ಸುಮ್ಮನಿರ‍್ಯ್ಯೋ?……

ರಾಮು :– (ಆತನನ್ನು ಹೊಡೆಯಲು ಕೈ ಎತ್ತುತ್ತಲೂ ಸೂತ್ರಧಾರ ಒಳಗೆ ಓಡಿ ಹೋಗುವನು? ಪ್ರೇಕ್ಷಕ ಬಂಧುಗಳೇ, ಇದು ಇಪ್ಪತ್ತನೇ ಶತಮಾನ ಅಂಬೋದು ನಿಮಗೂ ಗೊತ್ತಿರಬೇಕು. ಅದರಲ್ಲೂ ನಮ್ಮ ಸರಕಾರ ರಾಜರನ್ನೆಲ್ಲಾ ಕಿತ್ತಿ ಹಾಕಿದ ಇಂಥಾ ಸಂಧರ್ಭದಲ್ಲಿ ಈ ಬಗೆಯ ಣಾಟಖವು ಯೋಘ್ಯವಾದುಧೇ? ನೋಡಿ ಹಳೆಯ ಕಾಲದ ದುರ್ಯೋಧನ ಬಂದ ನಿಂತ್ಹಾಂಗ ನಿಂತಾನ. ಇದು ಚುನಾವಣೆಯ ಯುಗ. ಪ್ರಜೆಗಳೇ ತಮ್ಮ ಅರಸನನ್ನಾರಿಸಬೇಕಲ್ಲದೆ ಇನ್ಯಾರು ನೇಮಿಸಿದ್ರೂ ನಡ್ಯಾಂಗಿಲ್ಲ. ತಿಳೀತೂ? ನನ್ನ ಬಾಂಧವರೇ, ನೀವೇ ಹೇಳಿ, ನಿಮಗ ಯಾರು ರಾಜರಾಗಬೇಕು? ಎಲ್‌.ಎಲ್‌.ಬಿ. ಪಾಸಾಗಿ ಅನೇಕ ಸಂಘ ಸಂಸ್ಥೆಗಳ  ಕಾರ್ಯದರ್ಶಿಯಾದಂಥಾ ನಾನು ರಾಜನಾಗಬೇಕೋ? ಅಥವಾ ಇನ್ನೂ ಬಿ.ಎ. ಪಾಸಾಗದ ಈ ಧಡ್ಡ ಬಾಲಕ ರಾಜನಾಗಬೇಕೋ? ರಾಜನೆಂದರ ಅನೇಕ ಸಮಸ್ಯೆಗಳನ್ನು ಎದುರಿಸಿ ಪರಾಗಬೇಕಾಗುತ್ತದೆ. ರಾಜ್ಯದ ಸಮಸ್ಯೆ ಸಂಕಟಗಳೆಂದರೆ ಅದೇನು ನೆನೆದ ದಾಡಿಯೇ – ಬೋಳಿಸಿದೊಡನೆ ಸರಸರ ಕಿತ್ತು ಬರಲಿಕ್ಕೆ?

ಬಸವಾನಿ :– (ಮೇಜಿನ ಬಳಿ ಹೋಗಿ) ನೋಡಿ, ಬಾಂಧವರೇ, ಈತನ ಮಾತಿಗೆ ಮರುಳಾಗಬೇಡಿ. ಇದು ಒಬ್ಬ ಪ್ರಾಮಾಣಿಕ ಕವಿ ಬರೆದ ನಾಟಕವಾದುದರಿಂದ ನಾವು ಹೀಗೆಲ್ಲಾ ಉಡುಪು ಧರಿಸಬೇಕಾಗಿದೆ. ಈತ ಮಾತನಾಡುವುದರಲ್ಲಿ ಅರ್ಥವಿಲ್ಲ, ಒಂದು ಹುರುಳಿಲ್ಲ. ಕೇವಲ ಎಲ್‌.ಎಲ್‌.ಬಿ. ಓಡಿದರೆ ಜಗತ್ತಿನ ಜ್ಞಾನ ಬಂದಂತಾಗಲಿಲ್ಲ. ಇಷ್ಟಾಗಿಯೂ ಸ್ವಜ್ಞಾನ ತೋರುವ ಪ್ರಶ್ನೆಯೇ ಇಲ್ಲ. ಇದು ಒಬ್ಬ ಕವಿ ಬರೆದುದು ಎಂಬುದನ್ನು ಮರೆಯಬಾರದು. ದಯಮಾಡಿ ಶಾಂತರಾಗಬೇಕು.

(ಪ್ರೇಕ್ಷಕರಲ್ಲಿ ನಗು, ಚಪ್ಪಾಳೆ, ಗದ್ದಲ, ದುಂಬಡಿ)

ರಾಮು :– (ಮೈಕಿನೆದುರಿಗೆ ಬಂದು) ಬಂಧುಗಳೇ, ರಾಜನ ಪಾತ್ರವನ್ನು ಸಮರ್ಥವಾಗಿ ಅಭಿನಯಿಸುವುದಕ್ಕೂ ಅನುಭವಬೇಕು – ಅನುಭವ. ಕ್ಲಾಸಿನಲ್ಲಿ ಒಂದು ಹುಡುಗಿಯ ಪರಿಚಯದ ಅನುಭವವೂ ಇಲ್ಲದ ಈತ ರಾಜನ ಪಾತ್ರವನ್ನು ವಹಿಸಬಹುದೇ? – ತಿಳಿದವರಾದ ತಾವೇ ವಿಚಾರ ಮಾಡಿ. ಒಂದು ಸಂಸ್ಥೆ ಅಂದರೇನು? ಸಂಘ ಅಂದರೇನು? – ಅಂಬೋದು ಗೊತ್ತಿಲ್ಲದ ಈ ಬಾಲಕ ಅನೇಕ ಸಂಘ ಸಂಸ್ಥೆಗಳನ್ನು ಕಟ್ಟಿ ಮುರಿದ ನನ್ನೊಡನೆ ಸ್ಪರ್ಧಿಸುವುದು ನಾಚಿಕೆಗೇಡಲ್ಲವೇ? ಏನಂತೀರಿ? ಈಗ ನೀವಾದರೂ ಸೂತ್ರದಾರನಿಗೆ ಹೇಳುತ್ತೀರೋ ಅಥವಾ ನಾನೇ ಹೋಗಲೋ?…..

ಸೂತ್ರಧಾರ :– (ಒಳಗಿನಿಂದ ಓಡಿಬಂದು) ನೀನs ರಾಜನಾದೀಯಂತೆ ಬಾರೋ……

ಬಸವಾನಿ :– ಯಾರಿಗಿ ಬೇಕ ಇಂಥಾ ನಾಟ್ಕ? ಮಾಡ್ಕೊಳ್ರಿ ಬೇಕಾದ್ರ! (ಎಂದು ಸಿಟ್ಟಿನಿಂದ ಒಳಗೆ ಹೋಗುತ್ತಿರುವಾಗ ರಾಮು ಆತನ ಕಿರೀಟು ಕಸಿದುಕೊಂಡು ಬೇರೆ ಬಾಗಿಲಿನಿಂದ ಒಳಗೆ ಒಡುವನು. ಬಸವಾನಿಯೂ ಆತನ ಬೆನ್ನು ಹತ್ತುವನು. ಸೂತ್ರಧಾರ ಅವಸರದಿಂದ ಕರಿಯ ಪರದೆ ಎಳೆಯುವನು.)

(ವಿಷ್ಕಂಭಕ ಮುಗಿದುದು)