[ತುಸು ಸಮಯದವರೆಗೆ ತೆರೆ ಹಾಗೇ ಬಿದ್ದಿದ್ದು ಗಂಟೆಯೊಂದಿಗೆ ಸರಿಯುತ್ತದೆ. ಆಮೇಲೆ ಒಮ್ಮೆಲೆ ಪರಾಕು ಕೇಳಿಸತೊಡಗುತ್ತದೆ.]

ಭೋ ಪರಾಕ್‌! ಭೋಭೋ ಪರಾಕ್‌!
ರಾಜಕಾರಣಿ ಚಂಡಪ್ರಚಂಡ ಹೆಂಡತಿಗೆ ಗಂssಡ.
ಸರ್ವಗುಣಾನ್ವಿತ – ಲಂಚ ನಿರ್ಮೂಲನ ಮಲ್ಲಾ!
ಭೋ ಪರಾಕ್‌! ಭೋ ಪರಾಕ್‌!

(ಅದು ಪೂರ್ಣ ಮುಗಿಯುವವರೆಗೆ ರಂಗದ ಅತ್ತ ಇತ್ತ ರಾಜನು ಸುಳಿದಾಡಬೇಕು. ಆ ಮೇಲೆ ಪರಾಕು ಮುಗಿಯುತ್ತಲೂ ಅಸನಾರೂಢನಾಗುತ್ತನೆ. ವಂದಿಮಾಗಧರೂ ಕುರ್ಚಿಯಲ್ಲಿ ಕೂಡ್ರುತ್ತಾರೆ. ರಾಜನ ಸಧ್ಯದ ಉಡುಪು ತುಂಬ ವಿಕಾರ. ತಲೆಯ ಮೇಲೆ ಬಸವಾನಿಯಿಂದ ಕಸಿದುಕೊಂಡ ಕಿರೀಟ. ಒಂದು ಊಲನ್‌ ಕೋಟು, ಅದೇ ನಿಲುವಂಗಿ, ಕೆಳಗೆ ನೈಟ್‌ ಸೂಟು. ವಂದಿಮಾಗಧರು ಮಂತ್ರಿಗಳ  ಹಾಗೆ, ಕುರ್ಚಿಗಳು ಖಾಲೀ ಬಿದ್ದಿದ್ದರೆ ಸ್ವಚ್ಛ ಉಡುಪುಳ್ಳ ಪ್ರೇಕ್ಷಕರು ಹೋಗಿ ಕುಳಿತುಕೊಳ್ಳಬಹುದು. ತಮ್ಮನ್ನು ;ಪ್ರದರ್ಶಿಸಿಕೊಳ್ಳಬೇಕೆನ್ನುವ ಜನರು ಪ್ರಜೆಗಳಾಗಿ ರಂಗದ ನೆಲದ ಮೇಲೆ – ಕೂಡ್ರಬೇಕು. ಇಷ್ಟಾದ ಮೇಲೆ ಸೂತ್ರಧಾರನು – ಅವನೇ ಪ್ರಧಾನಮಂತ್ರಿ – ಎದ್ದು ಮೈಕಿನ ಹತ್ತಿರ ನಿಂತುಕೊಳ್ಳುತ್ತಾನೆ.)

ಪ್ರಧಾನ ಮಂತ್ರಿ :– ಮಹಾ ಅಯೋಧ್ಯೆಯ ಮಹಾ ಚಕ್ರವರ್ತಿಗಳಾದ ಮಹಾರಾಜರೇ, ಮತ್ತು ಮಹಾಪ್ರಜೆಗಳೇ, ನಮ್ಮೀ ಪುರವು ಈ ಹೊತ್ತಿನ ದಿವಸದಂಥಾ ಮಹಾದಿನವನ್ನು ಇನ್ನೆಂದಿಗೂ ಕಾಣಲಾರದು. ಅಳಿದ ಮಹಾರಾಜರುಗಳವರು ತಮ್ಮ ಶೌರ್ಯ, ಧೈರ್ಯ, ಸ್ಥೈರ್ಯ, ಉತ್ಸಾಹಗಳಿಂದ ನಮ್ಮ ಮಹಾನಾಡನ್ನು – ಬಹಳ ಚಲೋದಾಗಿ ಮನೋಹರವಾಗಿ – ಸುಂದರವಾಗಿ ಆಳಿದರು. ಅವರ ಆಕಸ್ಮಿಕ ನಿಧನದ ನಂತರ ರಾಜ್ಯಕ್ಕೆ ದಿಕ್ಕಿಲ್ಲದಂತಾಯ್ತು. ರಾಜ್ಯವೆಂಬ ಶಿಶು ಅನಾಥವಾಯ್ತು. ತಬ್ಬಲಿಯಾಯ್ತು. ಅದಕ್ಕೆ ಕಾಲಕಾಲಕ್ಕೆ ಹಾಲುಕುಡಿಸುವವರೂ ಎರೆಯುವವರು ಇಲ್ಲದಾದರು. ಇಂಥಾ ಯಾವ ಪರೀಕ್ಷಾ ಸಮಯದಲ್ಲಿ – ಬಿಕ್ಕಟ್ಟಿನಲ್ಲಿ – ಮಹಾರಾಜರ ಸಂತಾನ ಸಂಬಂಧಿಗಳು ಇಲ್ಲದ್ದರಿಂದ ಚುನಾವಣೆ ನಡೆಯುವುದು ಅನಿವಾರ್ಯವಾಯಿತು. ಅದೂ ಯಶಸ್ವಿಯಾಗಿ ಸಾಗಿ ಇದೀಗ ನಮ್ಮಜ ಶ್ರೀಮಾನ್‌ ರಾಮರಾಜರವರು –

ರಾಜ :– (ಎದ್ದು ಮಂತ್ರಿಯ ಬಳಿ ಹೋಗಿ) ಮಹಾಚಕ್ರವರ್ತಿಗಳಾದ ರಾಮರಾಜರು –

ಪ್ರ. ಮಂತ್ರಿ :– ಹೂಂ – ಇದೀಗ ಶ್ರೀಮಾನ್‌ ಮಹಾಚಕ್ರವರ್ತಿಗಳಾದ ರಾಮರಾಜರವರು ಆರಿಸಿಬಂಧರು. ಅನಾಯಕವಾಗಿದ್ದ ನಾಡಿಗೆ ಮತ್ತೆ ಒಬ್ಬ ಸಮರ್ಥ ಪ್ರಭುಗಳು ದೊರೆತರು. ಇದು ನಮ್ಮ ಪುಣ್ಯವೇ ಅಲ್ಲವೇ?

ಮಂತ್ರಿ . :– (ಮೈಕಿನ ಬಳಿ ದಡದಡ ಓಡಿಬಂದು) ಪುಣ್ಯವಲ್ಲದೆ ಇನ್ನೇನು? (ಎನ್ನುತ್ತ ಚಪ್ಪಾಳೆ ತಟ್ಟುವನು. ಎಲ್ಲರು ಚಪ್ಪಾಳೆ ತಟ್ಟುವರು.)

ಪ್ರ. ಮಂತ್ರಿ :– ಇನ್ನು ಮೇಲೆ ನಮ್ಮ ಮಹಾಪ್ರಭುಗಳ ಅಲ್ಪ ಪರಿಚಯ. ಇವರು ಹುಟ್ಟಿದ್ದು – ಕ್ರಿಸ್ತಪೂರ್ವ – ನಾಲ್ಕು –

ರಾಜ – (ಮೈಕಿನ ಬಳಿ ಓಡಿ ಬಂದು) ಅಲ್ಲಲ್ಲ – ನಾನು ಹುಟ್ಟಿದ್ದು ಕ್ರಿ.ಶ.೧೯೩೮ ರಲ್ಲಿ, ಹೆಹೆ…(ಮತ್ತೆ ಸ್ವಸ್ಥಾನ)

ಪ್ರ.ಮಂತ್ರಿ – ಹೂಂ – ೧೯೩೮ರಲ್ಲಿ, ಇದೇ ಊರಲ್ಲಿ. ಈ ಹಿಂದೆ ದೊಡ್ಡ ಹುದ್ದೆಯಲ್ಲಿದ್ದವರೂ ನಿಷ್ಕಪಟ ಮನಸ್ಸಿನಿಂದ, ನಿರ್ಮಲ ಹೃದಯದಿಂದ ಸೇವೆ ಸಲ್ಲಿಸಿದವರೂ ಆಗಿದ್ದಾರೆ. ಅವರು ಜನ – ದನಾನುರಾಗವನ್ನು ಹೊಂದಿದ್ದಾರೆ.ಪಡೆದಿದ್ದಾರೆ! ಅವರು ಬಲಿಷ್ಠರೂ,. ಶೂರರೂ, ಧೀರರೂ, ಕಠಿಣರೂ ಆಗಿರುವರಲ್ಲದೆ –

ರಾಜ :– (ಮೈಕ್‌ ಬಳಿ ಠಣ್ಣನೇ ಹಾರಿ) ಎಲ್‌.ಎಲ್‌.ಬಿ. ಪಾಸಾದವರೂ… ಆಗಿದ್ದಾರೆ. (ಸ್ವಸ್ಥಾನ)

ಪ್ರ.ಮಂತ್ರಿ :– ಇಂಥವರು ನಮ್ಮ ರಾಜ್ಯದಲ್ಲಿ ಹುಡುಕುತ್ತ ಹೋದರೂ ಸಿಗಲಾರರು. ಅದೇಕೆ ಸಿಗುವದೇ ಇಲ್ಲ. ಅಷ್ಟೇಕೆ ಸಿಕ್ಕಿಲ್ಲ. ಇನ್ನು ಮೇಲೆ ನಮ್ಮ ಪ್ರಭುಗಳು ಪ್ರಜೆಗಳನ್ನು ಕುರಿತು ಭಾಷಣ ಮಾಡಲಿದ್ದಾರೆ.

(ಕುಳಿತುಕೊಳ್ಳುವನು. ರಾಜನು ಠೀವಿಯಿಂದೆದ್ದು ಉಡುಪು ಸರಿಪಡಿಸಿ ಒಮ್ಮೆ ಪ್ರೇಕ್ಷಕರನ್ನೂ ಇನ್ನೊಮ್ಮೆ ಮಂತ್ರಿಗಳನ್ನೂ ಈಕ್ಷಿಸಿ “ನೀರು” ಎನ್ನುತ್ತಾನೆ. ಪ್ರ.ಮಂತ್ರಿ ಕೂಡಲೇ ಒಬ್ಬನನ್ನೂ ಓಡಿಸಿ ನೀರು ತರಿಸಿ ಮೇಜಿನ ಮೇಲೆ ಇರಿಸುತ್ತಾನೆ.)

ರಾಜ :– ನನ್ನ ಪ್ರೀತಿಯ ಪ್ರಜೆಗಳೇ, ಮಂತ್ರಿಗಳೇ, ಪ್ರೇಕ್ಷಕರೇ. ನೀವುಗಳೆಲ್ಲ ಒತ್ತಾಯ ಮಾಡಿ ನನ್ನನ್ನು ಈ ಸ್ಥಾನದ ಮೇಲೆ ಕೂಡ್ರಿಸಿದಿರಿ. ಅದಕ್ಕಾಗಿ ನಿಮಗೆ ನನ್ನ ಧನ್ಯವಾದಗಳು. ಈಗ ಕೆಲವು ದಿವಸಗಳ ಹಿಂದೆ ನನ್ನ ಮಿತ್ರರು ಬಂದು “ನೀವು ರಾಜರಾಗಬೇಕು” ಎಂದು ನನ್ನನ್ನು ಕೇಳಿದಾಗ ನನಗಾದ ಆಶ್ಚರ್ಯ ಆಷ್ಟಿಷ್ಟಲ್ಲ. “ನಾನು ಒಲ್ಲೆ – ಈ ಸ್ಥಾನಕ್ಕೆ ಇನ್ನು ಯಾರನ್ನಾದರೂ ಗುಣವಂತರನ್ನು ಆಯ್ದುಕೊಳ್ಳಿ. ನಾನು ಎಲೆಯಮರೆಯ ಹೂವಿನಂತೆ ಹಿಂದೆ ನಿಂತುಕೊಂಡೇ ಸೇವೆ ಮಾಡುತ್ತೇನೆ” ಎಂದು ಹೇಳಿದೆ. ಅದಕ್ಕವರು “ರಾಜ್ಯದಲ್ಲಿ ನಿಮ್ಮಷ್ಟು ಶೂರರೂ, ಧೀರರೂ, ಜಾಣರೂ, ಬಲಿಷ್ಠರೂ ಯಾರಿದ್ದಾರೆ? ನೀವು ಆಗಲೇಬೇಕು” ಹೀಗೆಂದು ನನ್ನ ಕಾಳು ಹಿಡಿದು ಕೇಳಿಕೊಂಡಾಗ ಪ್ರಜೆಗಳ ಸೇವೆಗಾಗಿ ನಾನು ಒಪ್ಪಬೇಕಾಯಿತು. ಇಲ್ಲದಿದ್ದರೆ ನಾನು ಈ ರಾಜ್ಯ ಪದವಿಯನ್ನು ಸ್ವೀಕರಿಸುತ್ತಿರಲಿಲ್ಲ. (ಮೇಜಿನ ಮೇಲಿನ ನೀರು ಕುಡಿಯುವನು.)

ನನ್ನ ನಾಡಬಾಂಧವರೇ,

ಈಗ ಐಲೀಕಡೆ ಏನು ಸಾಗಿದೆ? ಯಾರ್ಯಾರು ಎಷ್ಟೆಷ್ಟು ಮುಂದುವರಿದಿದ್ದಾರೆ? ಆದರೆ ನಮ್ಮ ದೇಶವು ಹಿಂದೆ ಉಳಿದಿದೆ. ಅದಕ್ಕಾಗಿ ನಮ್ಮ ದೇಶವು ಹೆಜ್ಜೆಗೊಂದು ಮೊಳ ಮುಂದೆ ಬರುವಂತೆ ನಾವು ಯತ್ನಶೀಲರಾಗಬೇಕು. ಅದಕ್ಕಾಗಿ ನಮ್ಮೆಲ್ಲರ ಬೆಮರು ಅಗತ್ಯ. ಬೆಮರು ಬಾರದವರುಸ ಕೊನೆಯ ಪಕ್ಷ ತಮ್ಮ ರಕ್ತವನ್ನಾದರೂ ಕೊಟ್ಟು ನಾಡಿನ ಈ ಮಹಾಕಾರ್ಯಕ್ಕೆ ತಮ್ಮ ಅಳಿಲು ಸೇವೆ ಸಲ್ಲಿಸಬೇಕು. ಅಂದಾಗ ಮಾತ್ರ ನಾವು ನಮ್ಮ ವೈರಿಗಳನ್ನು ಪ್ರತಿಭಟಿಸಲು ಶಕ್ತರಾಧೇವು – ಪ್ರತಿಭಟಿಸಬೇಕಾದರೆ ಶಕ್ತಿಬೇಕು. ಶಕ್ತಿಯಿಂದಲೇ ಯುಕ್ತಿ! ಯುಕ್ತಿಯಿಂದಲೇ ಭುಕ್ತಿ!! (ಮೇಜು ಗುದ್ದವನು. ಚಪ್ಪಾಳೆ)

ಮಂತ್ರಿ ೧ :– ಆಹಾ! ನಮ್ಮ ಅರಸರಲ್ಲಿ ಎಷ್ಟು ಚೋಟಿ ಅಭಿಮಾನವಿದೆ?

ಮಂತ್ರಿ :–  (ಮೈಕಿನೆದುರು ಬಂದು) ಆಹಾ! ನಮ್ಮ ಅರಸನ ಮುತ್ಸದ್ದಿತನವು ಎಷ್ಟು ಇಂಚು ಉದ್ದವಿದೆ?

ಮಂತ್ರಿ :– ಆಹಾ! ನಮ್ಮ ಅರಸರ ತಲೆಯಲ್ಲಿ ಎಷ್ಟು ಬುಟ್ಟಿ ಜ್ಞಾನವಿದೆ?

ರಾಜ :– ನನ್ನ ಪ್ರಜೆಗಳು ಹೀಗೆ ಕೇಳಬಹುದು. ಶಕ್ತಿ ಬೇಕಾದರೆ ಹಾಲು ಕುಡಿಯಬೇಕಲು. ಹಾಲಿನಲ್ಲಿ ಗೌಳಿಯು ನೀರು ಕೂಡಿಸಿ ಕೊಡುತ್ತಾನಲ್ಲ, ಹೇಗೆ ಮಾಡೋಣ? – ಎಂದು. ಆದರೆ ನನ್ನ ಪ್ರಜೆಗಳೇ, ಈ ಚಿಂತೆ ನಿಮ್ಮ ಅರಸನಿಗೆ ಇಲ್ಲವೆಂದು ತಿಳಿಯಬೇಡಿ. ನನ್ನನ್ನೂ ಇದೇ ಚಿಂತೆ ಈ ಊರಿಗೆ ನಾನು ಕಲಿಯುವುದಕ್ಕೆ ಬಂದಾಗಿನಿಂದ ಕಾಡುತ್ತಿದೆ.  ಗೌಳಿಯನ್ನು “ನೀರಿನಲ್ಲೇಕೆ ಹಾಲು ಕೂಡಿಸಿ ಕೊಡುತ್ತೀ?” ಎಂದು ಕೇಳಿದರೆ “ಇಲ್ಲ, ಎಮ್ಮೆಯೇ ಈ ಹೊತ್ತು ನೀರು ಹೆಚ್ಚು ಕುಡಿಯಿತು” ಎಂದು ಹೇಳುತ್ತಾನೆ. ಇನ್ನು ಮೇಲೆ ಎಮ್ಮೆ ಆಕಳುಗಳಿಗೆ ಯಾರೂ ನೀರು ಕುಡಿಸಬಾರದೆಂದು ನಿಮ್ಮ ಪ್ರಭುಗಳು ಆಜ್ಞೆ ಹೊರಡಿಸುತ್ತಾರೆ.  ಅಂದರೆ ಉತ್ತಮ  ಹಾಲು ಎಲ್ಲರಿಗೂ ದೊರೆಯುತ್ತದೆ.

(ಚಪ್ಪಾಳೆಯ ಹುಚ್ಚು ಹೊಡೆತ. ಮಂತ್ರಿಗಳು ಕುಣಿಕುಣಿದು ಚಪ್ಪಾಳೆ ತಟ್ಟಬೇಕು. ಅಷ್ಟರಲ್ಲಿ ಇಬ್ಬರು ಸೇವಕರು ಬಸವಾನಿಯನ್ನು ಬಂಧಿಸಿ ಹಿಡಿದು ತರುವರು.)

ಸೇವಕರು :– ಪ್ರಭೋ ಕಾಪಾಡಬೇಕು! ಕಾಪಾಡಬೇಕು!

ರಾಜ :– (ಓಡಿ ಹೋಗಿ ‘ಸಿಂಹಾಸನ’ವನ್ನೇರಿ) ಇವನು ಯಾರು? ಇವನು ಮಾಡಿದ ತಪ್ಪೇನು?

ಬಸವಾನಿ :– (ಕೊಸರಿಕೊಳ್ಳಲು ಕ್ಷಣಕ್ಷಣವೂ ಯತ್ನಿಸುವನಾದರೂ ಸೇವಕರು ಬಿಡಲೊಲ್ಲರು.) ನಿನಗ ಈಗ ಹ್ಯಾಂಗ ಗುರುತ ಸಿಕ್ಕೀತಲೇ? ಯಾಕ ಮರವಾಗ್ಲಾಕ ಹತ್ತೇತೇನ? ನಿನ್ನ ತಲೀಮ್ಯಾಲಿನ ಕಿರೀಟ ಯಾರದದ ಅಂಬೋದರೆ ಗೊತ್ತದsದನೋ ಇಲ್ಲೊ?

ಪ್ರ. ಮಂತ್ರಿ :– (ಓಡಿ ಬಳಿ ಬಂದು) ಬಸವಾನಿ, ನೀನಾದರೂ ಸುಮ್‌ಕಿರೋ ಮಾರಾಯಾ!

ಬಸವಾನಿ :– ನೀ ಯಾವನ್ಲೇ ನಡಕ?

ರಾಜ :– (ಸಿಂಹಾಸನದಿಂದ ಠಣ್ಣನೇ ಹಾರಿ ಬಂದು ನಾಟಕೀಯವಾಗಿ ಬಸವಾನಿಯನ್ನು ನೋಡುತ್ತ) ಮಂತ್ರೀ…..

ಪ್ರ. ಮಂತ್ರಿ :– ಮಹಾಪ್ರಭೂ!

ರಾಜ :– ನಮ್ಮ ಹಿಂದಿನ ರಾಜರಿಗೆ ಇನ್ನೂ ರಾಜ್ಯವಾಳುವ ಆಸೆಯಿದ್ದಿತಷ್ಟೆ? (ಪ್ರ. ಮಂತ್ರಿ ಪ್ರತಿ ಮಾತಿಗೂ ಬಾಗಿ ಹೂಂಗುಟ್ಟುವನು)… ಅವರು ಇಂಥಾ ನಿಲುವಂಗಿಯನ್ನೇ ಧರಿಸುತ್ತಿದ್ದರಷ್ಟೇ? ಅವರ ಮೂಗು ಚೋಟಿ ಉದ್ದವಾಗಿದ್ದಿತಷ್ಟೆ?… ಪ್ರಧಾನರೇ ತಿಳೀತು! ತಿಳೀತು!

ಪ್ರ. ಮಂತ್ರಿ :– ಪ್ರಭುಗಳು ಆಜ್ಞೆ ಮಾಡಬೇಕು.

ರಾಜ :– ಈತ ಹಿಂದಿನ ರಾಜನು ಎಂಬುದರಲ್ಲಿ ಸಂಶಯವಿಲ್ಲ. ಗೋರಿಯಿಂದ ಎದ್ದು ಭೂತವಾಗಿ ಇನ್ನೂ ರಾಜ್ಯವಾಳುವ ಆಸೆಯಿಂದ ಓಡಿ ಬಂದಿದ್ದಾನೆ.

ಬಸವಾನಿ :– ನಾ ಎಲ್ಲಿ ಸತ್ತೀದೇನಲೇ? ಕಣ್ಣೋ ಪರಟಿ ತೂತೊ? (ಪ್ರಧಾನ ಮಂತ್ರಿಯ ಕಡೆಗೆ ಮುಖ ಮಾಡಿ) ಯಾಕೋ ಕಿಟ್ಯಾ – ನಾ ಸತ್ತೀದೇನೇನಲೇ?

ರಾಜ :– ಹಹ್ಹಾ! ಇವನ ನಿಸ್ಸಂಶಯವಾಗಿ ಸತ್ತ ಮಹಾರಾಜ!

ಬಸವಾನಿ :– ಏಯ್‌, ನನಗ ಅಂಥಿಂ ಥಾ ಮಾತಾಡಬ್ಯಾಡಲೇ, ಮಂದ್ಯಾಗ ಬಾಯಿಗಿ ಬಂದ ಹೋಗತದ ಮತ್ತ. ನಂದೇನ ಖಮ್ಮಾನ ಬಾಯಿ!

ರಾಜ :– ನೀನು ಜೀವಂತನಾಗಿರುತ್ತೀ ಎಂಬೋದಕ್ಕೇನು ಸಾಕ್ಷಿ? ಯಾರು ಹೇಳುತ್ತಾರೆ? ಹಿಹ್ಹಿ! ಇವನನ್ನು ಕೂಡಲೇ ಭದ್ರವಾದ ಸಮಾಧಿಯಲ್ಲಿ ಮುಚ್ಚಿಗಿಡಿ. ಹೂಂ ಬೇಗ! (ಬಸವಾನಿ ತುಂಬ ಕೊಸರಿಕೊಳ್ಳಲೆತ್ನಿಸಿದರೂ ಬಿಡದೆ ಸೇವಕರು ಅವನನ್ನು ಹೊರೆಗೆ ಎಳೆದುಕೊಂಡು ಹೋಗುವರು. ಬಸವಾನಿ ಆ ಪ್ರಸಂಗದಲ್ಲಿ ತನ್ನ ಬಾಯಿಗೆ ಬಂದ ಬೈಗುಳಗಳನ್ನು ಒದರುತ್ತ ಹೋಗುವನು. ಪ್ರೇಕ್ಷಕರಲ್ಲಿ ಚಪ್ಪಾಳೆ. ಕುಳಿತ ಪ್ರಜೆಗಳು “ರಾಮರಾಜ ಮಹಾರಾಜಕಿ ಜೈ” – ಎಂದು ಉದ್ಘೋಷಿಸುವರು)

ರಾಜ :– ಮಹಾಮಂತ್ರೀ……

ಪ್ರ.ಮಂತ್ರಿ :– (ಎದ್ದು ನಿಂತು ಬಾಗಿ) ಪ್ರಭುಗಳೇ,

ರಾಜ :– ಈ ಹೊತ್ತಿನ ದರಬಾರನ್ನು ಇನ್ನು ಮೇಲೆ ಯಥಾಸಾಂಗವಾಗಿ ಪ್ರಾರಂಭಿಸಬಹುದೆಂದು ಮಹಾಪ್ರಭುಗಳು ಅಪ್ಪಣೆ ಕೊಡತ್ತೇವೆ.

ಪ್ರ.ಮಂತ್ರಿ :– (ಮತ್ತೆ ಬಾಗಿ) ಅಪ್ಪಣೆ ಪ್ರಭೂ. (ಚಪ್ಪಾಳೆ ತಟ್ಟಿ) ಯಾರಲ್ಲಿ?

ಸೇವಕ :– (ಪ್ರವೇಶಿಸಿ) ಏನಪ್ಪಣೆ ಪ್ರಭೂ?

ಪ್ರ.ಮಂತ್ರಿ :– ಬಹುಜನ ಪ್ರಜೆಗಳಿಂದ ಆಪಾದಿತನಾದ ಆ ವ್ಯಾಪಾರಿಯನ್ನು ಕೂಡಲೇ ಹಿಡಿದು ತನ್ನಿ.

ಸೇವಕ :– ಅಪ್ಪಣೆ. (ಬಾಗಿ ನಿಷ್ಕ್ರಮಣ, ಕೂಡಲೇ ಇಬ್ಬರು ಸೇವಕರು ವೈಶ್ಯಗ ಪ್ತನನ್ನು ಹಿಡಿದುಕೊಂಡು ಬಂದು ಸಭಾ ಮಧ್ಯದಲ್ಲಿ ನಿಲ್ಲಿಸಿ ಮತ್ತೆ ಬಾಗಿ ನಿಷ್ಕ್ರಮಿಸುತ್ತಾರೆ.)

ರಾಜ :– ಎಲಾ ಮಂತ್ರೀ ಈತನು ನೋಡುವುದಕ್ಕೆ ತುಂಬಾ ಸಂಭಾವಿತನಂತೆ ಕಾಣುತ್ತಾನೆ. ಈತನ ಮೇಲೆ ಯಾವ ದೋಷವನ್ನು ಹೊರಿಸಲಾಗಿದೆ?

ಪ್ರ.ಮಂತ್ರಿ :– (ಬಾಗಿ) ಚಿತ್ತೈಸಬೇಕು. ಈತನ ಹೆಸರು ವೈಶ್ಯ  ಗುಪ್ತ. ಈತನು ನಮ್ಮ ರಾಜ್ಯದ ಶ್ರೇಷ್ಠ ವ್ಯಾಪಾರಿಯಿದ್ದು ಮೋಸ ಮಾಡಿ ಸರಕುಗಳ ಬೆಲೆಯನ್ನು ಬೇಕುಬೇಕಾದಂತೆ ಏರಿಸಿ ನಮ್ಮ ಪ್ರಜೆಗಳನ್ನು ಹಿಂಡುತ್ತಿದ್ದಾನೆ. ಸುಲಿಯುತ್ತಿದ್ದಾನೆ. ಹೀಗಾಗಿ ದುಡ್ಡಿನ ಮದದಿಂದ ಸೊಕ್ಕಿಗೆ ಬಂದಿದ್ದಾನೆ. ಇವನನ್ನು ನೋಡಿ ಪ್ರತಿಯೊಬ್ಬ ಪ್ರಜೆಯೂ ಗುರುಗುಟ್ಟುತ್ತಾನೆ. ಇವನನ್ನು ಪ್ರಭುಗಳ ಚಿತ್ತ ವಿಚಾರಿಸಿ ಪ್ರಜೆಗಳಿಗೆ ನ್ಯಾಯದಾನ ಮಾಡಬೇಕು.

ರಾಜ :– ಎಲೈ ಪ್ರಜೆಯೇ, ಮಂತ್ರಿಗಳೂ ಜನರೂ ನಿನ್ನ ಬಗೆಗೆ ಆಪಾದಿಸಿದ್ದು ನಿಜವೇ?

ವೈಶ್ಯಗುಪ್ತ :– (ಬಾಗಿ) ಮಹಾಪ್ರಭುಗಳವರು ನನ್ನ ಮಾತುಗಳನ್ನು ದಯಮಾಡಿ ಕೇಳುವ ಕೃಪೆ ಮಾಡಬೇಕು. ನಾನು ಜೀವನದಲ್ಲಿ ಎಂದೂ ಸುಳ್ಳು ಮಾತನಾಡಿದವನಲ್ಲ!

ಪ್ರ. ಮಂತ್ರಿ :– ಪ್ರಭುಗಳ ಎದುರಿನಲ್ಲಿ ಸುಳ್ಳು ಹೇಳುತ್ತೀಯಾ ಮೂಢಾ!

ರಾಜ :– ಹಾಗಾದರೆ ಇವರೆಲ್ಲರ ಆಪಾದನೆ ಸುಳ್ಳೇ? ನೀನು ಪ್ರಾಮಾಣಿಕನೆಂಬುದನ್ನು ಪ್ರಭುಗಳು ಹೇಗೆ ನಂಬಬೇಕು? ನಿನ್ನ ಪರವಾಗಿ ಸಾಕ್ಷಿ ಹೇಳಲು ಯಾರಿದ್ದಾರೆ?

ವೈಶ್ಯಗುಪ್ತ :– ನನ್ನ ಆರಾಧ್ಯ ದೇವತೆಯಾದ ಲಕ್ಷ್ಮೀದೇವಿ ಪ್ರಭೂ.

ರಾಜ :– (ವಿಚಿತ್ರ ಆಟಿಗೆಯನ್ನು ಕಂಡ ಮೂಕ ಮಗುವಿನಂತೆ ನಗುತ್ತ) ಹಹ್ಹ! ಏನಂದಿ? ಲಕ್ಷ್ಮೀದೇವಿ! ಹಿ ಹ್ಹಿ! ಓಹೋ ಹಾಗಾದರೆ ಅವಳಿಂದ ಸಾಕ್ಷಿ ಹೇಳಿಸುವೆಯಾ? ಆಗಲಿ. ಅವಳು ಬಂದು ಹೇಳಿದರೆ ನಾವು ನಂಬುತ್ತೇವೆ. ಎಲ್ಲಿ? ಅವಳನ್ನು ಕರೆ. ಅವಳ ದರ್ಶನದಿಂದ ನಾವೂ ಪುನೀತರಾಗೋಣ.

ವೈಶ್ಯಗುಪ್ತ :– ಪ್ರಭೋ, ಧರ್ಮಜ್ಞರಾದ ತಮ್ಮ ಸಂನಿಧಾನದಲ್ಲಿ ಹೇಗೆ ಬಿನ್ನೈಸಿಕೊಳ್ಳಬೇಕೆಂಬುದೇ ತಿಳಿಯದಾಗಿದೆ. ಪ್ರಭೂ ನಿಮ್ಮ ಮೇಲೆ ನನ್ನ ದೇವತೆಗೆ ತುಂಬ ಅಭಿಮಾನ, ಪ್ರೀತಿ, ವಾತ್ಸಲ್ಯ. ನೀವು ಅರಸರಾಗಿ ಆರಿಸಿ ಬಂದಂದಿನಿಂದ “ನನ್ನ ಪ್ರೀತಿಯ ಪುತ್ರನಾದ ಅರಸನಿಗೆ ನನ್ನ ಪ್ರಸಾದವನ್ನು ಕೊಡು. ಕ್ಕೊಡು, ಖೊಡೂ” ಎಂದು ದಿನಾಲೂ ಪೀಡಿಸುತ್ತಿದ್ದಾಳೆ.

ರಾಜ :– ಹಿಹ್ಹಿ!ಹ್ಹಿ! ಹ್ಹಿ ಹ್ಹಿ! ನಿಜವಾಗಿಯೂ? ಈಗ ಕೂಡಲೇ ಅವಳನ್ನು ಕರೆ. ತಡಬೇಡ.

ವೈಶ್ಯಗುಪ್ತ :– ಪ್ರಭೊ, ಹೆಣ್ಣು ಹೆಂಗಸಾದ ಅವಳು ಅನ್ಯರ ಎದುರಿಗೆ ಬರಲಿಕ್ಕೆ ಹೆದರುವಳು. ನಿಮಗೆ ನಾನು ಸಂಜೆಗೆ ತಮ್ಮ ಅರಮನೆಗೇ ಕರೆದು ತಂದು ಸಾಖ್ಷಿ ಹೇಳಿಸುವೆನು. ಪ್ರಭುಗಳು ನನ್ನನ್ನು ನಂಬಿ ನಾಡಿನ ಪ್ರಾಮಾಣಿಕತೆಯನ್ನು ಕಾಪಾಡಬೇಕು.

ರಾಜ :– (ತೃಪ್ತನಾಗಿ ಮುಗುಳು ನಗುತ್ತ) ಓಹೋ – ನೀನು ನನಗೆ ತುಂಬಾ ಪ್ರಾಮಾಣಿಕನಾಗಿ ಕಾಣುತ್ತೀಯೆ. ನಿನ್ನನ್ನು ಅವಮಾನಿಸುವದು ನ್ಯಾಯ ದೇವತೆಯನ್ನು ಅವಮಾನಿಸಿದಂತೆಯೇ ಸರಿ. ಈ ಹೊತ್ತು ಸಂಜೆಗೆ ನಿನ್ನ ಇಷ್ಟದೇವತೆಯ ದರ್ಶನ ಮಾಡಿಸು. ಮಹಾಪ್ರಧಾನರೇ ಇವನನ್ನು ಸ್ವತಂತ್ರಗೊಳಿಸಬೇಕು.

ಪ್ರ. ಮಂತ್ರಿ :– (ಆಶ್ಚರ್ಯದಿಂದ) ಪ್ರಭೋ ಏನಿದು ಅನ್ಯಾಯ? (ಸಾವುಕಾಶವಾಗಿ) – ಏ ರಾಮ್ಯಾ ಈ ಮಾತು ಇವನಿಗೆ ಅನ್ನೋದಲ್ಲೊ?

ರಾಜ :– (ಖೆಕ್ಕರಿಸಿ ಮಂತ್ರಿಯನ್ನು ನೋಡುತ್ತ) ರಾಜನ ಮೇಲೆ ಮಂತ್ರಿಯ ಅಧಿಕಾರವೇ? ಹೂಂ. ಸೇವಕರೇ ಏನು ನೋಡುತ್ತೀರಿ? ಅವನನ್ನು ಸ್ವತಂತ್ರಗೊಳಿಸಿರಿ. (ವೈಶ್ಯಗುಪ್ತನು “ರಾಮರಾಜ ಮಹಾರಾಜಕಿ ಜೈ” – ಎಂದು ಹೇಳುತ್ತಿರುವಂತೆ ‘ಜೈ’ ಎನ್ನುವುದಕ್ಕೆ ಉಳಿದ ಮಂತ್ರಿಗಳೂ ಧ್ವನಿಗೂಡಿಸುವರು. ನಂತರ ವೈಶ್ಯಗುಪ್ತ ರಾಜನಿಗೆ ಶಿರಸಾಷ್ಟಾಂಗ ನಮಸ್ಕಾರ ಮಾಡಿ ಹೋಗುವನು. ಅಷ್ಟರಲ್ಲಿ ಲೈಲಾ ಮಜನೂ ಬಂದು ರಾಜನಿಗೆ ಕುರ್ಣಿಸಾತ ಮಾಡಿ ಅಪರಾಧಿಗಳಂತೆ ನಿಂತುಕೊಳ್ಳುತ್ತಾರೆ.)

ರಾಜ :– ಇವರು ಯಾರು? ಯಾವ ಲೋಕದವರು? ಮಾನವರೇ, ನಿಮಗೇನು ಕೊರತೆ? ಏನುಬೇಕು?

ಮಜನು :– (ಕೈ ಮುಗಿದು) ಮಹಾಪ್ರಭೂ, ನಾನು ಮಜನೂ. ಇವಳು ನನ್ನ ಪ್ರೇಯಸಿ ಲೈಲಾ. ಉಪವಾಸ ಸಾಯುತ್ತಿರುವ ನಮ್ಮನ್ನು ಕಾಪಾಡಬೇಕು.

ರಾಜ :– (ಅವನ ಮಾತಿನ ಕಡೆಗೆ ಗಮನವೀಯದೇ ಲೈಲಾಳನ್ನು ನೋಡುತ್ತ) ಸ್ವಗತ, ಇವಳು ಅದೆಷ್ಟು ಸುಂದರಿಯಾಗುವಳು! ಇಷ್ಟು ಸುಂದರವಾದ ಹೆಣ್ಣು ಪ್ರಾಣಿಯನ್ನು ನಾನು ಇದುವರೆಗೂ ನೋಡಲಿಲ್ಲ – ಪ್ರಕಾಶ ಮಜನೂ ಮಜನೂ, ನೀನೀಗ ಏನು ದಂಧೆ ಮಾಡುತ್ತಿ!

ಮಜನು :– (ತನ್ನ ಎಡ ಎದೆ ಎಲ್ಲ ಹರಿದು ಸೋರುತ್ತದೋ ಎಂಬಂತೆ ಎರಡೂ ಕೈಯಿಂದ ಹಿಡಿದು) – ಮೊಹಬ್ಬತ್‌ ಕರನಾ ಮೇರಾ ದಂಧಾ ಹೈ…!!

ರಾಜ :– (ಖೊಕ್‌ ಖೊಕ್‌ ಖೊಕ್‌ ಎಂದು ನಗುತ್ತ) ಮೋಹೋ ಬತ್ತು? ಆಹಾ! ಇದು ಮುಂಗಾರಿ ಬೆಳೆಯೋ! ಹಿಂಗಾರಿ ಬೆಳೆಯೋ? ಇದು ಯಾವ ಪ್ರದೇಶದಲ್ಲಿ ಬರುವ ಬೆಳೆ?

ಮಜನು :– (ತನ್ನ ದಿಲ್‌ ಇನ್ನೂ ಬಿಗಿಯಾಗಿ ಹಿಡಿದುಕೊಂಡು) ಹೃದಯದಲ್ಲಿ!! ದಿಲ್‌ದಲ್ಲಿ!!…..

ರಾಜ :– ಇದರಿಂದ ವರ್ಷಕ್ಕೆ ಎಷ್ಟು ಟನ್ನು ಧಾನ್ಯ ಬೆಳೆಯುತ್ತಿ?

ಮಜನು :– ನೂರು… ಸಾವಿರ…ಲಕ್ಷ…ಕೋಟಿ ಟನ್ನುಗಳು!!

ರಾಜ :– (ಚಪ್ಪಾಳೆ ತಟ್ಟಿ ನೆಗೆದಾಡಿ) ಎಲಾ, ಯಾರಲ್ಲಿ?

ಸೇವಕ :– ಏನಪ್ಪಣೆ ಪ್ರಭೊ?

ರಾಜ :– ಮಜನೂನನ್ನು ಕೊಂದು ಹಾಕಿ ಇವನ ಹೃದಯದೊಳಗಿನ ಧಾನ್ಯವನ್ನೆಲ್ಲಾ ಬರಪೀಡಿತ ಪ್ರಜೆಗಳಿಗೆ ಹಂಚಿಬಿಡಿ. ಹೂಂ ಬೇಗ!

ಮಜನು :– (ನಿದ್ದೆಯಿಂದ ಎಚ್ಚತ್ತು.) ಇದೇನು ಪ್ರಭೂ?

ರಾಜ :– ಎಲಾ ನೋಡುತ್ತೀರೇನು? ಬೇಗ. ನನ್ನ ಪ್ರಜೆಗಳು ಅನ್ನಾನ್ನಗತಿಕರಾಗಿ ಸಾಯುವುದನ್ನು ನೋಡಲಾರೆ. ಬೇಗನೇ ಒಯ್ಯಬಾರದೇ? (ಸೇವಕರು ಒದರುವ ಮಜನೂನನ್ನು ಎಳೆದೊಯ್ಯುವರು.)

ಲೈಲಾ :– ಪ್ರಭೋ ನನಗಾರು ದಿಕ್ಕು?

ರಾಜ :– (ಮೀಸೆ ತಿರುವುತ್ತ) ಎಲಾ ಹೆಣ್ಣೆ – ಚೌರ್ಯಾಂಸಿ ಲಕ್ಷ ಜೀವ ಕೋಟಿಗೆಲ್ಲ ಅನ್ನ ಹಾಕುವ ನನಗೆ, ಓರ್ವ ಹೆಣ್ಣು ಹೆಂಗಸಿಗೆ ಆಶ್ರಯಕೊಡಲು ಕಷ್ಟವಾಗುತ್ತದೆಯೇ? ಮಹಾಮಂತ್ರೀ, ಇವಳನ್ನು ಈ ಕೂಡಲೇ ನೇರವಾಗಿ ನಮ್ಮ ಅರಮನೆಗೆ ಕಳಿಸುವ ವ್ಯವಸ್ಥೆ ಮಾಡು. (ಲೈಲಾ ಪ್ರಭೂ ಪ್ರಭೂ ಎಂದು ಬೊಗಳುತ್ತಿರುವಾಗಲೇ ಸೇವಕರು ಎಳೆದೊಯ್ಯುವರು.) ಮಂತ್ರಿಗಳೇ ಸಮಯ ಬಹಳವಾದುದರಿಂದ ಈ ಹೊತ್ತಿನ ದರಬಾರವನ್ನು ಇಷ್ಟಕ್ಕೇ ಮುಗಿಸಿ ಬಿಡಿ. (ರಾಜನು ಏಳುತ್ತಲೂ ಎಲ್ಲರೂ ಜೈಜೈಕಾರ ಮಾಡುವರು. ಇನ್ನು ಹೋಗಬೇಕೆನ್ನುವಷ್ಟರಲ್ಲಿ “ಅಯ್ಯೋs ಕಾಪಾಡಿ! ಕಾಪಾಡಿ! ಪ್ರೇಕ್ಷಕರೇ ನೀವಾದರೂ ಕಾಪಾಡಿ!” – ಎನ್ನುತ್ತ ವಾಲ್ಮೀಕಿ ಮಹರ್ಷಿಗಳು ಓಡಿ ಬರುತ್ತಾರೆ. ಅವರನ್ನು ಕಂಡಕೂಡಲೇ ಪ್ರಧಾನಮಂತ್ರಿ ತೆರೆ ಎಳೆಯ ತೊಡಗುತ್ತಾನೆ.)

ವಾಲ್ಮೀಕಿ :– ಪ್ರೇಕ್ಷಕರೇ ನೀವಾದರೂ ಕಾಪಾಡಿ! ಇದು ನಾನು ಬರೆದ ನಾಟಕವಲ್ಲ. ಅದನ್ನು ಅಣಕಿಸಿ ಇವರು ಮಾಡಿದರು! ಶ್ರೀರಾಮ ನಾಣೆಯಾಗಿಯೂ ನಾನಿದನ್ನು ಬರೆದಿಲ್ಲ. ಬರೆದುದನ್ನು ತಪ್ಪು ತಪ್ಪಾಗಿ ಆಡಿ ನನ್ನ ಹೆಸರಿಗೂ ಆದರ್ಶಕ್ಕೂ ಕಲಂಕ ತಂದಿದ್ದಾರೆ! ಎಲ್ಲಿ? ಅಲ್ಲಿ ಆ ನಟರು? ನಾನೀಗಲೇ ಶಾಪ ಕೊಟ್ಟು ಬಿಡುತ್ತೇನೆ.

ರಾಜ :– (ಮಹರ್ಷಿಗಳನ್ನು ನೋಡಿ ಖಿಖಿಕ್‌ ಎಂದು ನಗುತ್ತ) ಮಹಾಮಂತ್ರಿ, ಈ ಪ್ರಾಣಿಯನ್ನು ಈ ಕೂಡಲೇ ನಮ್ಮ ಹುಚ್ಚರಾಸ್ಪತ್ರೆಗೆ ಸೇರಿಸು. (ಮಹಾಮಂತ್ರಿ ಸರ‍್ರನೆ ತೆರೆ ಎಳೆಯುತ್ತಾನೆ.)