ಟ್ವೆಂಟಿ :– ಮತ್ತೇನ ಕೇಳತಾರರಿ? ಬಾಯಿಗಿ ಬಂದಿದ್ದ ಹಿಂದ ತಿರಗಸಾಕ ತಯಾರಿಲ್ಲ ಈ ಹೆಣಮಗಳು. ನಾ ಏನ್ರಿ ಅನ್ನಬಾರದ್ದ ಅಂದೆ? ಹೇಳ್ರಿ; ರಾತ್ರಿ ಹತ್ತ ಹೊಡೀತು. ಪಾರ್ಕಿನಾಗ ಒಂದ ಹುಳಾ ಇಲ್ಲ, ನಮ್ಮನ್ನ ಬಿಟ್ಟರ – ಕಾಲೇಜ ಹುಡುಗಾ ಹುಡುಗಿ ಇಲ್ಲಿ ನಿಂತೀರಿ. ಯಾಕ ನಿಂತೀರಿ ಅಂದರ ಕೇಳಬಾರದ ಮಾತs ಇದು? ನಾಳೆ ಇಲ್ಲಿ ಏನಾದರೂ ಹೆಚ್ಚು ಕಮ್ಮಿ ಆದರ ಯಾರ ಜವಾಬ್ದಾರಿ? ಹಿಂತಾ ಬೇಜವಾಬ್ದಾರೀ ಕೆಲಸ ಆಗಬಾರದಂತs ನಮ್ಮನಿಲ್ಲಿ ಇಟ್ಟಾರರೀ.

ಶೋಭಾ :–  ಹೌಂದ್ಹೌಂದು – ಈ ಜಗತ್ತೆಲ್ಲಾ ಬರೋಬರಿ ನೋಡಿಕೊಳ್ಳಪಾ ಅಂತ ದೇವರs ನಿಮ್ಮನ್ನ ನೇಮಿಸ್ಯಾನ.

ಟ್ವೆಂಟಿ :– ಸ್ವಾರೀ ಮೇಡಂ ದೇವರಲ್ಲ, ಸರ್ಕಾರ ನೇಮಿಸ್ಯಾರ.

ರವಿ :– ಶೋಭಾ, ಮಾತಿಗೆ ಮಾತ ಪೋಣಿಸಿ ಎಲ್ಲಿಗಿ ಮುಟ್ಟಬೇಕಂತಿ? (ಹದಿನೆಂಟರ ಹತ್ತಿರ ಬಂದು)
ಸಾಹೇಬರ ನೀವಾದರೂ ತಿಳಿಸಿ ಹೇಳ್ರಿ; ಉಪ್ಪಲ್ಲ ಹುಳೀ ಅಲ್ಲ ಬರೀ ಬಾಯಿ ಮಾಡಿದರ ಎದಕ್ಕ ಬಂತು? ನೀವು ಕೇಳಿದ್ದ ತಪ್ಪಲ್ಲ. ಕೇಳಿದ್ದಕ್ಕ ಜವಾಬ ಕೊಡಾಕ ನಾ ಇದ್ದೀನಿಲ್ಲೆ. ಮನೆತನಸ್ಥ ಹೆಣಮಗಳು, ಪೋಲೀಸರ ಮಾತ ಕೇಳಿ ಖಾರ ಆಗಿರಬೇಕು. ನೀವು ತಿಳಿದವರು, ಲೋಕಾ ಬಲ್ಲವರು. ನಿಮಗೂ ಗೊತ್ತೈತಿ; ನಾವು ಹಲಕಟ್ಟ ಮಂದಿ ಅಲ್ಲಂತ.

ಹದಿನೆಂಟು :– ಏ ಟ್ವೆಂಟೀ

ಟ್ವೆಂಟಿ :– ನಾನೂ ಅದನ್ನ  ಹೇಳ್ತೇನ್ರಿ ಕುಡಗೋಲ ನುಂಗಬ್ಯಾಡ್ರಂತ.

ಹದಿನೆಂಟು :– ಅಲ್ಲರೀ ಮಿಸ್ಟರ್, ನಾವು ಹೌದಂದರ ಅಲ್ಲಂತೀರಿ. ಅಲ್ಲಂದರ ಹೌದಂತೀರಿ. ಎಲ್ಲಾರೂ ಹೀಂಗ ಇರಾತಾರಂತಲ್ಲ. ಅದರ ದರವೊಂದ ಜಾತಿ ಒಳಗೂ ಹಾದರಕ್ಕ ಹುಟ್ಟಿದವರು ಇದ್ದs ಇರತಾರ. ಅಂಥವರ್ಣ ಹಿಡೀಬೇಕಾದರ ನಾವಿಂಥಾ ಮಾತ ಕೇಳಬೇಕಾಗತೈತಿ. ಖರೆ ಅಂತೀರೋ, ಸುಳ್ಳಂತೀರೊ?

ರವಿ :– ನನ್ನ ಮಾತ ನಂಬರಿ. ನಾವೇನೂ ನಿಮ್ಮ ಕಣ್ಣಾಗ ಮಣ್ಣ ತೂರಿಲ್ಲಾ…..

ಹದಿನೆಂಟು :– ನೀವಿಬ್ಬರು ಗಂಡಾ ಹೇಂತೀ ಏನು?

ರವಿ :– ಅಲ್ಲ.

ಹದಿನೆಂಟು :– ಹಂಗಾದರ ನೀವs ಹೇಳ್ರೆಪಾ : ಮನೆತನಸ್ಥ ಹೆಣಮಗಳಿಗೆ ಪಾರ್ಕಿನಾಗ, ರಾತ್ರಿವ್ಯಾಳ್ಯಾ, ಕಾಲೇಜ ಹುಡುಗನ ಜೋಡಿ, ಯಾರೂ ಇಲ್ಲದಲ್ಲಿ ಏನ ಕೆಲಸ? ಶಕೆ ಆಯ್ತು ಅನ್ನಬ್ಯಾಡ್ರಿ; ಇಡೀ ಊರಾಗ ನಿಮ್ಮಿಬ್ಬರಿಗೇ ಶಕೆ ಆಗಬೇಕ? ಸಪ್ತಾಪುರದಾಗ ಶಕೆ ಇತ್ತು ಅನ್ನಬ್ಯಾಡ್ರಿ; ಅಲ್ಲಿ ಇಲ್ಲೀಗಿಂತ ತಂಪೈತಿ ಅಂತ ಕೇಳೀನಿ. ನಾವಿಬ್ಬರೂ ಅಣ್ಣ ಬಸವಣ್ಣ, ಅಕ್ಕ ಮಹಾದೇವಿ ಅನ್ನಬ್ಯಾಡ್ರಿ : ಆಗಲೇ ನಿಮ್ಮಹೆಸರ ಹೇಳಿಕೊಂಡೀರಿ. ನಿಮ್ಮ ಹೆಸರು ಒಮ್ಮಿ ರಾಜೀವಂತೀರಿ ಇನ್ನೊಮ್ಮಿ ಶಿವರಾಮಂತೀರಿ. ಆ ಹೆಣಮಗಳೊಮ್ಮಿ ಮಿಸ್‌ ರತ್ನಾ ಇನ್ನೊಮ್ಮಿ ಬರೇ ಶೋಭಾ – ಹಿಂಗ್ಯಾಕ ಗಳಿಗ್ಗೊಮ್ಮಿ ಹೆಸರ ಬದಲಾಗತಾವ ಹೇಳ್ರಿ –

ಟ್ವೆಂಟಿ :– ನಾ ಹೇಳ್ತೇನ್ರಿ : ಯಾಕಂದರ ಪಗಡೀ ಆಟದಾಗ ಯಾವ ಕಾಯಿ ಬಿಡತೀರಿ ಅದರ್ಹಾಂಗ ಮಸಡಿ ಮಾಡಿರಬೇಕಂತ ನೇಮ ಐತಿ!

ರವಿ :– ನೋಡ್ರಿ ನಾವು ಎರಡೆರಡ ಹೆಸರ ಹೇಳಿದಿವಿ. ತಪ್ಪಾಯ್ತು. ಅದರಿಂದs ನಿಮಗ ತಿಳಿದಿರಬೇಕು : ನಾವು ಅಂಥಾ ದಂಧೇದವರಲ್ಲಂತ.

ಟ್ವೆಂಟಿ :– ಇದೆಲ್ಲಿ ಲೆಕ್ಕಾಚಾರಪಾ! ಇವರು ಸುಳ್ಳ ಸುಳ್ಳ ಹೆಸರ ಹೇಳತಾರಂತ, ನಾವು ಇವರಿಗೆ ಹರಿಶ್ಚಂದ್ರಾs ಅನ್ನಬೇಕಂತ!

ರವಿ :– ಛೇ ಛೇ ಎಲ್ಲೀದೆಲ್ಲಿಗೆ ಒಯ್ತೀರಿ?

ಟ್ವೆಂಟಿ :– ನಿಮ್ಮ ಮಾತ ಬಿಟ್ಟ ಒಂದು ಹೆಜ್ಜೀನಾದರು ಹಿಂದ ಮುಂದ ಹೋಗೇನೇನು?

ರವಿ :– ನಿಮಗ ಹೆಂಗ ತಿಳಿಸಿ ಹೇಳ್ಲಿ?

ಟ್ವೆಂಟಿ :– ಅದನ್ನs ಕೇಳ್ತೀನರಿ :- ತಿಳಸಬಾರದಂಥಾ ಗದ್ದಲ ಏನೈತಿ? ಬಿಚ್ಚರಿ ಗಂಟು.

ರವಿ :– (ತಕ್ಷಣ ಯೋಚನೆಮಾಡಿ ಕಿಸೆಯಂದ ದುಡ್ಡು ತೆಗೆದು)
ಸಾಹೇಬರs ಈ ಹತ್ತ ರೂಪಾಯಿ ತಗೊಂಡ ನಮ್ಮ ಉಸಾಬರಿ ಬಿಟ್ಟುಬಿಡರಿ.
(ಕೊಡ ಹೋಗುವನು )

ಹದಿನೆಂಟು :– ಲಂಚಾ ಕೊಡಾಕ ಬಂದಿರೇನ್ರಿ?

ಟ್ವೆಂಟಿ :– ನಮ್ಮ ಸಾಹೇಬರ ಕಡೆ ಬೆರಳಮಾಡಿ ತೋರಸೋ ಮಗ ಇಡೀ ಜಿಲ್ಲಾದಾಗ ಇನ್ನs ಹುಟ್ಟಿಲ್ಲ. ಅವರಗಿ ಲಂಚಾ ಕೊಡಾಕ ಬಂದಿರೇನ್ರಿ?

ರವಿ :– ಲಂಚ ಅಲ್ಲರಿ ಇದು.

ಟ್ವೆಂಟಿ :– ಅದರಪ್ಪ !

ಹದಿನೆಂಟು :– ಅಲ್ಲರೀ. ಹಲ್ಕಟ್ಟ ದಂಧೇವರಲ್ಲಾ ಅಂತೀರಿ. ಆ ಮಾತ ನಮ್ಮ ಕಿವಿ ಮುಟ್ಟೋದರೊಳಗs ಲಂಚಾ ಕೊಡಾಕ ಬಂದಿರಿ. ನೀವs ಸುದ್ದುಳ್ಳವರಾಗಿದ್ದರ ಲಂಚಾ ಯಾಕ ಕೊಡಬೇಕು? ನಾವೇನಾದರು ಕೇಳಿದಿವ? ಎಕ ಕಾಲಕ್ಕ ಎರಡೆರಡ ಆಟ ಆಡತೀರಲ್ಲರಿ?

ರವಿ :– ಆಯ್ತರೆಪಾ ತಪ್ಪಾಯ್ತು.

ಹದಿನೆಂಟು :– ತಪ್ಪಾ ಒಪ್ಪಾ ಹೇಳಾಕ ನಮ್ಮದೆಷ್ಟರೀ ಕಿಮ್ಮತ್ತು?

ಟ್ವೆಂಟಿ :– ಹತ್ತು ರೂಪಾಯಿ.

ರವಿ :– ನಾವಿಲ್ಲಿ ಬಂದದ್ದs ತಪ್ಪು, ಯಾರಿಗ್ಗೊತ್ತ ಹಿಂಗಾದೀತಂತ.

ಹದಿನೆಂಟು :– ನಾವೇನ ಮಾಡಬಾರದ್ದ ಮಾಡಿದಿವಿರಿ?

ರವಿ :– ನಿಮಗಲ್ಲರಿ ನಮ್ಮ ನಶೀಬ ಬೈಕೋತೀವಿ. ಇಲ್ಲಿ ಬರಬೇಕಂದರೇನು? ನಿಮ್ಮ ಕೈಗಿ ಸಿಗಬೇಕಂದರೇನು?

ಟ್ವೆಂಟಿ :– ನಮ್ಮ ಕೈಯಾಗ ಸಿಕ್ಕು ನಿಮಗೇನ್ರಿ ಆಯ್ತು? ಏನೋ ಕರದಿವಿ; ಕುಡಗೋಲ ನುಂಗಬ್ಯಾಡ್ರೆಪಾ ಅಂತ ಬುದ್ದಿ ಹೇಳಿದಿವಿ. ತಪ್ಪ?

ರವಿ :– ಕುಂಟಿಗಿ ಕೊಡ್ಡಾ ಹಚ್ಚಿಧಾಂಗ ಮಾತಿಗಿ ಮಾತ ಹೇಳತೀರಿ. ಇನ್ನೇನ ಮಾಡಲಿ? ಹೋಗಲಿ, ಏನ ಮಾಡಿದರ ನಮ್ಮನ್ನ ಸುಮ್ಮನ ಬಿಡತೀರಿ?

ಟ್ವೆಂಟಿ :– ಬಿಡಾಕ ನಿಮ್ಮನ್ನ ಇಡಕೊಂಡೀವೇನ್ರಿ? ಯಾಕ ಬಂದಿರಿ – ಅಂತ ಕೇಳಿದರ ಜವಾಬ ಕೊಡೋದ ಬಿಡತೀರಿ, ಹತ್ತ ರೂಪಾಯಿ ತಗೀತೀರಿ. ಸಂಶೆ ಯಾಕ ಬರಬಾರದ ಹೇಳ್ರಿ?

ಶೋಭಾ :– (ರವಿಗೆ ಸಿಡುಕಿನಿಂದ)
ತಗದ ಇನ್ನ ಹೆತ್ತ ಎಸೀಬಾರದ?

ಹದಿನೆಂಟು :– ಏ ಟ್ವೆಂಟಿ, ಇದು ಇಲ್ಲಿ ಎತ್ತಿಹಾಕೋ ತಿಪ್ಪಿ ಅಲ್ಲ.
(ರವಿಗೆ)
ಮಿಸ್ಟರ್, ನಡೀರಿ ಪೋಲೀಸ್‌ ಸ್ಟೇಶನ್ನಿಗೆ ಹೋಗೋಣು.

ಟ್ವೆಂಟಿ :– ನಮ್ಮ ಸಾಹೇಬರು ದಯಾಮಾಯಾ ಇದ್ದವರು; ಸುಮ್ಮನ ಇದ್ದದ್ದ ತೋಡಿಕೊಂಡ ಕೈ ಮುಗೀರಿ – ಬಿಡತಾರ.

ರವಿ :– ಸಾಹೇಬರ, ನೀವು ದೊಡ್ಡವರು. ದೊಡ್ಡ ಮನಸ್ಸುಮಾಡಿ ನಮ್ಮನ್ನ ಬಿಡಿರಿ. ಟ್ರೇನ್‌ ಬರೋ ಟೈಮಾಯ್ತು. ನಾವಿನ್ನೂ ಸ್ಟೇಶನ್ನಿಗೆ ಹೋಗಬೇಕು.

ಹದಿನೆಂಟು :– ಟ್ರೇನ ?

ರವಿ :– (ಕಿಸೆಯಿಂದ ೧೦೦ ರೂ ನೋಟು ತೆಗೆದು)
ಈ ಭಕ್ಷೀಸ ತಗೊಳ್ರಿ. ನಮ್ಮನ್ನು ಬಿಡಿರಿ.

ಹದಿನೆಂಟು :– (ಕಾಳಜಿಯಿಂದ)
ಏನೋ ಖರೆ ಬಿಡಸಬೇಕು, ಬಿಡಬೇಕು ಅಂತಿದ್ದೆ. ಈಗ ನೋಡಿದರ ನನ್ನ ತಾಖತ್ತ ಮೀರಿ ಬೆಳೀತಿದು. ನಡೀರಿ ಪೋಲೀಸ ಸ್ಟೇಶನ್ನಿಗೆ ಹೋಗೋಣು. ನಿಮ್ಮ ನಿಮ್ಮ ಹಿರ್ರೇ‍ನ್ನ ಕರಸ್ತೀವಿ; ಅವರs ಬಂದ ನಿಮ್ಮನ್ನ ಬಿಡಿಸಿಕೊಂಡ ಹೋಗತಾರ. ಏ ಟ್ವೆಂಟೀ, ಅಡ್ರೆಸ್ಸ ಕೇಳಿಕೊ, ಜೀಪ ತಗೊಂಡ ಹೋಗಿ ಕರಕೊಂಬಾ.

ಶೋಭಾ :– ಅಂದರ ನಮ್ಮ ಮಾತಿನಾಗ ನಿಮಗ ನಂಬಿಕಿಲ್ಲ.

ಟ್ವೆಂಟಿ :– ನಂಬಿಕಿ ಹುಟ್ಟೋವಂಥಾದ್ದ ಹೇಳವೊಲ್ಲಿರಿ.

ರವಿ :– ಏನ ಹೇಳಿದರ ನಂಬತೀರಿ?

ಹದಿನೆಂಟು :– ಖರೆ ಹೇಳಿದರ.

ಟ್ವೆಂಟಿ :– ಛೇ ಛೇ, ಅಲ್ಲರೆಪಾ, ಇಲ್ಲಿ ಬರ್ರಿ‍ಲ್ಲೆ.
(ದುಡ್ಡಿನ ಆಸೆಯಿಂದ ರವಿಯ ರೆಟ್ಟೆ ಹಿಡಿದು ಬೇರೆ ಕಡೆ ಕರೆದುಕೊಂಡು ಹೊರಡುವನು)

ಹದಿನೆಂಟು :– ಏ ಟ್ವೆಂಟೀ. ಯಾಕೊ ಆ ಕಡೆ ಕರಕೊಂಡ ಹೊಂಟಿ?

ಟ್ವೆಂಟಿ :– ಕುಡಗೋಲ ನುಂಗಬ್ಯಾಡಂತ ಹೇಳ್ತೀನ್ರಿ.

ಹದಿನೆಂಟು :– ನನ್ನ ಮುಂದ ಹೇಳಾಕಾಗಾಣಿಲ್ಲೇನು?

ಟ್ವೆಂಟಿ :– ಎಸ್ಸರ್. ಮಿಸ್ಟರ್, ನಿಮ್ಮ ಖರೇ ಹೆಸರು ರಾಮಚಂದ್ರ ಹೌಂದ?

ರವಿ :– ಅಲ್ಲ; ರವಿ.

ಟ್ವೆಂಟಿ :– ಸುಳ್ಳ ಹೇಳಬ್ಯಾಡ್ರಿ; ಇದು ಕೋರ್ಟಲ್ಲ.

ರವಿ :– ಖರೇ ಹೇಳಿದರ ಸುಳ್ಳಂತೀರಿ.

ಟ್ವೆಂಟಿ :– ಮೊದಲs ಖರೆ ಹೇಳಿದ್ದರ ಇದೆಲ್ಲಾ ಯಾಕಾಗತಿತ್ತು?

ರವಿ :– ತೋರಸ್ತೀನಿ ತಡೀರಿ.

(ಮೆಳೆಯ ಹತ್ತಿರ ಹೋಗುವನು. ಟ್ವೆಂಟಿ ಬೆನ್ನ ಹತ್ತುವನು. ರವಿ ತನ್ನ ಸೂಟಕೇಸು ತರುವನು. ಟ್ವೆಂಟಿ ಇನ್ನೊಂದು ಸೂಟಕೇಸು ಬುಟ್ಟಿ ತರುವನು) ಬೇಕಂದರ ಸೂಟಕೇಸ ಮ್ಯಾಲ ನನ್ನ ಹೆಸರೈತಿ ನೋಡ್ರಿ. ಅದೂ ನಂಬಿಕೆ ಬರದಿದ್ದರ ತೆರೆದ ನೋಡ್ರಿ.

ಟ್ವೆಂಟಿ :– ಈ ಬುಟ್ಯಾಗ ಅಗಾವ ಮಾಲಿ ತಗೊಂಡ ನಡದೀರೇನು?

ಹದಿನೆಂಟು :– ಈ ಖರೆ ಹೇಳ್ತೀರಿ ಅನ್ನೋಣು. ಸೂಟಕೇಸ ತಗೊಂಡ ಎಲ್ಲಿಗೆ ಹೊಂಟಿದ್ದಿರಿ? ಮನ್ಯಾಗ ಹೇಳದs ಕೇಳದs ಓಡಿ ಹೊಂಟೀರಿ ಹೌಂದಲ್ಲ?

ಶೋಭಾ :– ಓಡಿ ಹೊಂಟಿದ್ದ ಖರೆ. ನಾನೂ ರವಿ ಇಬ್ಬರೂ ಪ್ರೀತಿ ಮಾಡತೀವಿ. ಮದಿವಿ ಮಾಡಬೇಕಂದಿವಿ, ರವೀ ಅಪ್ಪ ಒಪ್ಪಲಿಲ್ಲ. ದೂರ ಹೋಗಿ ಮದಿವಿ ಮಾಡಿಕೊಂಡ ಬರತೀವಿ.

ಹದಿನೆಂಟು :– ಪರೀಕ್ಷೇಕ್ಕೂರಲಿಲ್ಲ.

ಶೋಭಾ :– ಇಲ್ಲ.

ಹದಿನೆಂಟು :– ಪರೀಕ್ಷೆ ಆದಮ್ಯಾಲ ಹೋಗಬೇಕಿತ್ತು.

ಶೋಭಾ :– ಈಗ ಹೋದರೇನ ತಪ್ಪು?

ಹದಿನೆಂಟು :– ತಪ್ಪಿಲ್ಲವಾ, ಆಮ್ಯಾಲ ಹೋಗಿದ್ದರೇನ ತಪ್ಪಾಗತಿತ್ತು?

ರವಿ :– ನಮ್ಮಪ್ಪ ಒತ್ತಾಯ ಮಾಡಿ ಬ್ಯಾರೇ ಮದಿವಿ ಮಾಡಬೇಕಂತಾನ.

ಹದಿನೆಂಟು :– ಪರೀಕ್ಷೆ ಆಗೋದರೊಳಗs?

ಶೋಭಾ :– ಆದರ ನಮ್ಮಪ್ಪ ಈಗs ಮದಿವಿ ಮಾಡಬೇಕಂತಾನ.

ಹದಿನೆಂಟು :– ಅಂದರ ಈ ಪ್ಲಾನ ನಿಂದs ಅಂಧಾಂಗಾಯ್ತು.

ಶೋಭಾ :– ನಂದs ಇರಭೌದು ತಪ್ಪೇನು?

ಹದಿನೆಂಟು :– ತಪ್ಪಿಲ್ಲ; ಆದರ ಹುಡಿಗೀನs ಹುಡುಗನ್ನ ಓಡಿಸಿಕೊಂಡ ಹೊಗತಾಳಂದರ ಅದರಾಗೇನೋ ತಪ್ಪಿದ್ಧಾಂಗ ಆಗಲಿಲ್ಲಾ?

ಶೋಭಾ :– ಅಂದರ ನಾ ಏನೋ ಕಾರಭಾರ ಮಾಡಿಕೊಂಡೀನಂತ, ಹೌಂದಲ್ಲ?

ಹದಿನೆಂಟು :– ಅದನ್ನ ನೀವs ಹೇಳಬೇಕು.

ಶೋಭಾ :– ಬಾಯ್ಬಿಟ್ಟು ಹೇಳ್ರಿ – ನಾ ಹಾದರಗಿತ್ತೆಂತ

ಹದಿನೆಂಟು :– ನೋಡವಾ ಹೆಣಮಗಳ, ನನಗಾಗಲೇ ರಾಷ್ಟ್ರಪತಿ ಆಗೋವಷ್ಟ ವಯಸ್ಸಾಯ್ತ. ನಿನ್ನ ಎರಡ ಪಟ್ಟ ಕಂಡೇನಿ, ಉಂಡೇನಿ. ನಿಮ್ಮಂಥಾ ಎಳಕರ ಜೀವಾ ಪಣಕಿಟ್ಟ ನಾ ಎಂದು ಇಸ್ಪೀಟ ಆಡಿದವನಲ್ಲ. ಅಷ್ಟs ಅಲ್ಲ, ಇಲ್ಲೀತನಕ ಒಂದಕ್ಕೂ ತಕರಾರ ತಗದವನಲ್ಲ. ನನ್ನ ಹರೇದಾಗ ಈಗಿರೋದಕ್ಕಿಂತ ಕಡಿಮೆ ಹೂ ಇದ್ದುವು. ಈಗ ನೋಡು – ಈಟ ಬಳ್ಳಿಗಿ ಸಾವಿರ ಹೂ ಸುರೀತಾವ. ಬಹುಶಃ ನಿನಗ ನನಗಿಂತ ಹೆಚ್ಚ ತಿಳಿವಳಿಕೆ ಐತ್ಯೋ ಏನೊ ಅಥವಾ ನೀ ದೊಡ್ಡ ತಪ್ಪ ಮಾಡಿರಭೌದು.

ಶೋಭಾ :– ನಿಮ್ಮ ಮಾತ ತಿಳೀವೊಲ್ದು ಏನ ಹೇಳಿದಿರಿ?

ಹದಿನೆಂಟು :– ಇದು; ಪರೀಕ್ಷೆ ಆದಮ್ಯಾಲ ಓಡಿ ಹೋಗಿದ್ದರ ಮುಗಲ ಹರದ ಬೀಳತಿತ್ತs ಹೆಂಗ?

ಶೋಭಾ :– ಹೌಂದು ಹರದ ಬೀಳತಿತ್ತು.

ಹದಿನೆಂಟು :– ಅದ್ಹೆಂಗs

ಶೋಭಾ :– ಅದನೆಲ್ಲಾ ನಿಮ್ಮ ಮುಂದೆ ಹೇಳಾಕ ಬೇಕೇನ್ರಿ?

ಟ್ವೆಂಟಿ :– ಬಂದ ಹುದಲಾ ಬಿದ್ದೀರಂದಮ್ಯಾಲ ಹೇಳಬೇಕು.

ಶೋಭಾ :– ಹೇಳದಿದ್ದರ?

ಹದಿನೆಂಟು :– ನಡೀರಿ ಪೋಲೀಸ ಸ್ಟೇಷನ್ನಿಗೆ ಹೋಗೋಣು.

ಶೋಭಾ :– ಬರೋದಿಲ್ಲ. ರವಿ, ಸೂಟಕೇಸ ತಗೊ. ಅದೇನ ಮಾಡತಾರ ಮಾಡಲಿ. ನಡೀ ಹೋಗೋಣು.

ಹದಿನೆಂಟು :– ನಾ ನಿನ್ನ ವೈರಿ ಅಲ್ಲವಾ. ಕೇಳ್ರಿಲ್ಲೆ : ಹುಚ್ಚ ಹರೇದಾಗ ಬೇಕಾದ್ದ ಬ್ಯಾಡಾದ್ದೆಲ್ಲಾ ಅರಗಿಸಿಕೊಳ್ತೀವಂತ ಕುಡಗೋಲ ನುಂಗಾಕ ಹೋಗಬಾರದು, ಹೆಣಮಗಳs, ಸೂಟಕೇಸ ಕೆಳಗಿಡು.

ರವಿ :– ಶೋಭಾ, ಕೆಳಗಿಡು ನಾ ಮಾತಾಡತೀನಿ.

(ಹದಿನೆಂಟನ ಬಳಿ ಹೋಗಿ)

ಸಾಹೇಬರs, ನೀವs ನಮ್ಮ ಹಿರೇರಂತ ತಿಳೀರಿ. ನಾವೇನೂ ಸಣ್ಣವರಲ್ಲ, ನಮ್ಮ ಜವಾಬ್ದಾರಿ ನಮಗ ತಿಳದೈತಿ. ನಾವಿಬ್ಬರೂ ಪ್ರೀತಿ ಮಾಡಿದಿವಿ. ಮದಿವಿ ಮಾಡಿಕೊಬೇಕಂದಿವಿ. ನಮ್ಮ ಹಿರೇರ ಒಪ್ಪಲಿಲ್ಲ. ಅವರನ್ನ ಬಿಟ್ಟ ದೂರ ಹೋಗಬೇಕಂತ ಹೊಂಟೀವಿ. ನಾವೇನೂ ಸಾಯೋಕ್ಕ ಹೊಂಟಿಲ್ಲ. ನೀವು ನಮಗ ಆಶೀರ್ವಾದ ಮಾಡಿ ಕಳಿಸಿರಿ.

ಟ್ವೆಂಟಿ :– ಯಾವುದೋ ಕಾದಂಬರ್ಯಾಗ ಒಬ್ಬಾವ ಹಿಂಗs ಮಾತಾಡೋದಿಲ್ಲರೆ?

ರವಿ :– ಇದಕ್ಕೂ ನಿಮ್ಮ ಕರಳ ಕರಗದಿದ್ದರ ನಮ್ಮ ನಶೀಬs ಖೊಟ್ಟಿ ಇರಬೇಕು. ಏನಂತೀರ ಸಾಹೇಬರ? ನೀವು ಅಪ್ಪಣೆ ಕೊಟ್ಟರೆ ಓಡಿಹೋಗಿ ಟ್ರೇನ್‌ ಹಿಡೀತೀವಿ, ಇಲ್ಲದಿದ್ದರ ಹಿರೇರ ಕೈಗಿ ಸಿಗತೀವಿ; ಮುಂದಿಂದ ನಿಮಗ ಗೊತ್ತs ಐತಿ.

ಹದಿನೆಂಟು :– ನಾನ ನಿಮ್ಮ ಹಿರ್ಯಾ ಅಂದ್ರೆಲ್ಲ – ಅದಕ್ಕ ಹೇಳ್ತೀನಿ : ನಿಮ್ಮ ಮದಿವೀ ಮಾಡಸೋದು ನನ್ನ ಜವಾಬ್ದಾರಿ – ನನ್ನ ಮ್ಯಾಲ ನಿಮಗಷ್ಟ ಭರೋಸ ಇದ್ದರ. ಪರೀಕ್ಷೆ ಮುಗಸರಿ. ಆಮ್ಯಾಲ ನಿಮ್ಮ ಹಿರೇರ ನನ್ನ ಮಾತ ಕೇಳಿದರು – ಬರೋಬರಿ. ಇಲ್ಲದಿದ್ದರ ನಾನs ಸ್ವಥಾ ನಿಮ್ಮನ್ನ ಪಾರ ಮಾಡತೀನಿ. ಇದ್ಹೆಂಗ?

ಶೋಭಾ :– ಹೆಂಗಂದರ; ನನ್ನ ಹುಚ್ಚತನ ನೀ ತಗೊ . ನಿಂದ ನನಗ ಕೊಡು ಅಂಧಾಂಗ.

ಟ್ವೆಂಟಿ :– ಈ ಹೆಣಮಗಳಿಗೆ ಅಷ್ಟೇನ ತರಾತುರೀನೊ?

ಶೋಆ :- ಮನಶೇರಾಗಿದ್ದರ ತಿಳೀತಿತ್ತು, ನಿಮ್ಮ ಮಗಳಿಗಿ ಹಿಂಗಾಗಿದ್ದರ ಏನ ಮಾಡತಿದ್ದಿರಿ?

ಹದಿನೆಂಟು :– ನನ್ನ ಮಗಳಾಗಿದ್ದರ ನನ್ನ ಮಾತ ಕೇಳತಿದ್ದಳು.

ಶೋಭಾ :– ನಾನೂ ಕೇಳತಿದ್ದೆ. ಆದರ ನಾ ನಿಮ್ಮ ಮಗಳಲ್ಲ.

ಹದಿನೆಂಟು :– ಹರೇಕ ಹಾದಿ ಕಾಣ್ಸಾಣಿಲ್ಲವಾ, ಕರುಳಂದ್ರೆಲ್ಲ ಅದಕ್ಕ ಇಷ್ಟೆಲ್ಲ ಹೇಳಿದೆ. ಬಹುಶಃ ಈ ಜಾಗಾದಾಗ ನಿಮ್ಮಪ್ಪ ಇದ್ದಿದ್ದರ ಅವನೂ ಹಿಂಗ ಹೇಳತಿದ್ದ. ಆಗಲಿ, ಮುಂದ ಯಾವಾಗಾದರೂ ತಿಳದಾವು. ಇದನ್ನ ಮೀರಿ ನೀನುಂಟು, ನಿನ್ನ ನಶೀಬುಂಟು.

ಶೋಭಾ :– ರವಿ, ನಡಿ ಹೋಗೋಣು.

ರವಿ :– ಸಾಹೇಬರ ಹೋಗಿಬರ್ತೀವರಿ.

ಟ್ವೆಂಠಿ :- ಛೇ ಛೇ…

ಹದಿನೆಂಟು :– ಟ್ವೆಂಟೀ, ಹೋಗಲಿ ಬಿಡು.

(ರವಿ, ಶೋಭಾ ಇಬ್ಬರೂ ಸೂಟ್‌ಕೇಸ್‌ ತಗೊಂಡು ಹೊರಡುವರು)

ಟ್ವೆಂಟಿ :– ಹಂಗೆಲ್ಲಾ ಪೋಲೀಸರಿಗೆ ಲಂಚಾ ಕೊಡಬಾರದ್ರೆಪಾ. ಇಲ್ಲಿ ಬರ್ರಿ‍ಲ್ಲೆ……

ಹದಿನೆಂಟು :– ಟ್ವೆಂಟೀ.

ಟ್ವೆಂಟಿ :– ಎಸ್ಸರ್.

ಹದಿನೆಂಟು :– ಆ ಬುಟ್ಟಿ ಕೊಡು.

ಟ್ವೆಂಟಿ :– ನಿಮ್ಮ ಬುಟ್ಟಿ ಒಯ್ಯಿರಿ.
(ಎಂದು ಓಡಿ ಹೋಗಿ ಬುಟ್ಟಿ ಎಳೆಯುವನು. ಅಷ್ಟರಲ್ಲಿ ಅದರಲ್ಲಿಂದ ಒಂದು ಕೂಸು ಕೆಳಗೆ ಬಿದ್ದು ಕಿಟ್ಟನೆ ಕಿರುಚುವುದು. ಎಲ್ಲರೂ ಕಕ್ಕಾಬಿಕ್ಕಿಯಾಗುವರು. ಕೂಸು ಅಳುತ್ತಲೆ ಇರುವುದು.)

ಶೋಭಾ :– ಈ ಬುಟ್ಟಿ ನಮ್ಮದಲ್ಲ.
(ಎಲ್ಲರೂ ಸುಮ್ಮನಿರುವರು)

ಹಂಗ್ಯಾಕ ನನ್ನ ನೋಡತೀರಿ? ಈ ಬುಟ್ಟಿ ನಂದಲ್ಲ ಅಂದೆ
(ಈಗಲೂ ಎಲ್ಲರೂ ಸುಮ್ಮನಿರುವರು)
ರವಿ ಹೋಗೋನ್ನಡಿ –
(ಹೊರಡುವಳು)

ಹದಿನೆಂಟು :– ಮಿಸ್‌ ಶೋಭಾ, ತಗೊಂಡ ಹೋಗ್ರಿ ಅದನ್ನ.

ಶೋಭಾ :– (ಗಾಬರಿಯಾಗಿ)
ಏನ್ರಿ ನೀವು ಹೇಳೋದು?

ಹದಿನೆಂಟು :– ತಗೊಂಡು ಹೋಗವಾ ಅದನ್ನ.

ಶೋಭಾ :– ರವಿ, ನಮ್ಮದಲ್ಲಂತ ಯಾಕ ಹೇಳವೊಲ್ಲಿ?

ಹದಿನೆಂಟು :– ವಾದ ಮಾಡಿದಷ್ಟೂ ಜೇಲಿಗೆ ಸಮೀಪ ಆಗತೀರಿ.

ಟ್ವೆಂಟಿ :– ಈಕಿ ತರಾತುರಿ ನನಗೀಗ ತಿಳೀತ ನೋಡ್ರಿ.

ಶೋಭಾ :– (ಒದರುತ್ತ)
ನಂದಲ್ಲಾ ಅಂದೆ.

ಟ್ವೆಂಟಿ :– ಇನ್ಯಾರದು ನಂದ?

ಶೋಭಾ :– ನನಗೇನು ಗೊತ್ತು?

ಟ್ವೆಂಟಿ :– ಹೆಣಮಗಳ, ದೇವರಾಣಿ ಗಂಡಸರು ಹೆಡೆಯೋದಿಲ್ಲವಾ. ಮತ್ತ ಹಳೇ ಆಟಹೂಡಿ ನಮ್ಮ ಸಾಹೇಬರ ತಲಿ ಕೆಡಸಬ್ಯಾಡ.
(ಈಗ ಮಗು ಸುಮ್ಮನಿದೆ. ಶೋಭಾ ಅಳತೊಡಗುವಳು)

ಶೋಭಾ :– ಇದು ನಂದಲ್ಲಾ ಅಂತ ಹೆಂಗ ಹೇಳಲಿ? ಯಾಕಾದರೂ ಇಲ್ಲಿಗಿ ಬಂದಿನೋ?
(ಶಿವರಾಯಪ್ಪ, ವಯಸ್ಸು ೫೦ರ ಮೇಲೆ ಇಬ್ಬರು ಹುಡುಗರೊಂದಿಗೆ ಓಡಿ ಬರುವನು. ರವಿಯನ್ನು ನೋಡಿ ವೀರಾವೇಶ ಹೊಂದುವನು)

ಶಿವರಾಯಪ್ಪ :– ಇಲ್ಲಿದ್ದೀಯೇನೋ ಮಗನ? ಏ ರಾಮ್ಯಾ, ಇವರಣ್ಣ ಸ್ಟೇಷನ್ನಿಗಿ ಹೋಗ್ಯಾನ. ರವಿ ಇಲ್ಲಿ ಸಿಕ್ಕಾನಂತ ಹೇಳಿ ಕರತಾ ಹೋಘು.
(ಒಬ್ಬ ಹುಡುಗ ಓಡುವನು)
ಭಾಳ ಉಪಕಾರಾಯ್ತಿರೀ ಸಾಹೇಬರs

ಟ್ವೆಂಟೀ :– ಇವರು ತಮ್ಮ ಮಗ ಏನ್ರಿ?

ಶಿವರಾಯಪ್ಪ :- ಮಗ ಅಲ್ಲ, ವೈರಿ ಸೂಳೇಮಗ.

ಟ್ವೆಂಟಿ :– ಹೇಳಿಕಳಿಸಿಧಾಂಗ ಒಳೇಯಾಳೇಕ ಬಂದ್ರಿ. ಹೆಂಗ ಗೊತ್ತಾಯ್ತರಿ?

ಶಿವರಾಯಪ್ಪ :– ಈಕಿ ಪತ್ರಾ ಬರದಿದ್ದಳಲ್ಲ – ಪ್ರಿಯಕರಾs ಅಂತ. ಈ ಕರಾ ಇಲ್ಲೇs ಇರಬೇಕಂತ ಬಂದರ ಸಾಕ್ಷಾತ್ಕಾರ ಆದ್ನಲ್ಲಾ ರಂಭಾ ಸಮೇತ. ನಮ್ಮ ಜಾತೀದಲ್ಲ, ಆ ಹುಡುಗಿ ಗೆಳೆತನ ಬಿಡೊ ಅಂದೆ. ಬಿಟ್ಟೆ ಅಂದ. ಥೇಟ್‌ ಹಾದಿಗಿ ಬಂದವರ್ಹಾಂಗ ನಾಟಕ ಮಾಡಿದ. ಮರತ ಅಂತ ನಾವು ಮೈಮರತರ ಮತ್ತ ಓಡಿಹೊಂಟಾನಲ್ಲ – ರೊಕ್ಕಾ ಬಳಕೊಂಡು. ಏನ ಹುಟ್ಟಬಾರದ ಹುಟ್ಟಿದ್ಯೊ ಮಗನs ನನ್ನ ಹೊಟ್ಯಾಗ!

ಹದಿನೆಂಟು :– ಯಜಮಾನರ, ತಿಳೀದs ಏನೇನೊ ಮಾತಾಡಬ್ಯಾಡ್ರಿ. ಅಷ್ಟ ಸರಳ ವ್ಯವಹಾರ ಅಲ್ಲಿದು. ಹುಡುಗೋರಿಗಿ ತಿಳಿಸಿ ಹೇಳೋಣು.

ಶಿವರಾಯಪ್ಪ :– ಹೆಂಗ ತಿಳಿಸಿ ಹೇಳಲಿ?

ಹದಿನೆಂಟು :– ನೀವ ಹಿಂಗ ಕುದರಿ ಹತ್ತಿ ನಿಂತರ ನಾ ಏನೂ ಹೇಳಾಣಿಲ್ಲ. ನೀವುಂಟು , ನಿಮ್ಮ ಕೂಸುಂಟು.

ಶಿವರಾಯಪ್ಪ :– ಕೂಸ?
(ಬುಟ್ಟಿಯ ಬಳಿಯ ಕೂಸನ್ನು ಸುತ್ತುವರಿದು ನೋಡಿಬರುವನು)

ಶೋಭಾ :– ರವಿ……

ಶಿವರಾಯಪ್ಪ :– ತಿಳೀತು.

ಹದಿನೆಂಟು :– ನಿಮಗ ತಿಳಿದಲ್ಲಾ…..

ಶಿವರಾಯಪ್ಪ :– ತಿಳೀದೇನ್ರಿ? ಇದ ನನ್ನ ಮೊಮ್ಮಗನೋ ಮೊಮ್ಮಗಳೊ. ಹೌಂದಲ್ಲ?
(ಕೋಪದಿಂದ ಬುಸುಗುಡುತ್ತಿದ್ದಾನೆ)

ರವಿ,

ಶೋಭಾ :– (ಓಡಿ ಹೋಗಿ ಹದಿನೆಂಟನ ಕಾಲು ಹಿಡಿದು)
ಈ ಕೂಸ ಖರೇನ ನಂದಲ್ಲರೋ ಎಪ್ಪಾ.

ರವಿ :– ಅಪ್ಪಾ ಶೋಭಾ ಹೇಳೋದ ಖರೇ ಐತಿ.

ಶಿವರಾಯಪ್ಪ :– ಖರೆ? ಖರೆ ಹೇಳಿದ್ದರ ನಿನಗ ಪೆದ್ದ ಅಂತಿದ್ಲು.ಅಂದಳೇನು? ಅಂದಿಲ್ಲ. ಹಾಂಗಿದ್ದರ ಆಕೆಂಥಾ ಖರೆ ಹೇಳ್ಯಾಳೊ! ನಡೀ ಮೊದಲು. ಬಾಯಿ ಬಿಟ್ಟರ ಹಲ್ಲ ಮುರೀತೇನೀಗ.

ರವಿ :– ಆದರ ಶೋಭಾ……

ಶಿವರಾಯಪ್ಪ :– ಊರ ಹಂದೆಲ್ಲಾ ಆ ಕೆರ್ಯಾಗ ಹೊಳ್ಯಾಡ್ಯಾವ, ಮತ್ತ ಅದs ಬೇಕಂತಿಯೇನೋ?

ಟ್ವೆಂಟಿ :– ನೋಡ್ರಿ ಯಜಮಾನರ. ಒಬ್ಬನ ತಲ್ಯಾಗ ಹೇನಾಗಿದ್ದರ ಸಾಬನ ಹಚ್ಚಿ ತೊಳೀಬೌದು , ಅದರ ಹೇನ ತಗಧಾಂಗ ಅವನ ತಲ್ಯಾಗಿನ ಕೆಟ್ಟ ವಿಚಾರ ತಗ್ಯಾಕ ಆಗಾಣಿಲ್ಲರಿ.

ಶಿವರಾಯಪ್ಪ :– ನೀವು ಬಾಯ್ಮುಚ್ಚತೀರಿ?

ಹದಿನೆಂಟು :– ಏ ಟ್ವೆಂಟೀ.

ಶಿವರಾಯಪ್ಪ :– ರವಿ, ನಡಿ ಹೋಗೋಣು.

ಹದಿನೆಂಟು :– ಕೇಳ್ರಿಲ್ಲೆ…..

ಶಿವರಾಯಪ್ಪ :– ಬಾಯ್ಮುಚ್ಚರಿ.

ಹದಿನೆಂಟು :– ಯಾಕ? ಜೇಲಿಗಿ ಹೋಗಬೇಕಂತೀರೇನ? ಏನೋ ಕಿಮ್ಮತ್ತು ಕೊಟ್ಟ ಮಾತಾಡಿಸಿದರ ಬಾಯ್ಮುಚ್ಚಂತೀರೇನ್ರಿ? ಸೊಸೀನ್ನ, ಮೊಮ್ಮಗನ ಕರಕೊಂಡ ಮನೀಗ ಹೋಗ್ರಿ. ಇಲ್ಲದಿದ್ದರ ಪೋಲೀಸ್ಟೇಶನ್ನಿಗಿ ನಡೀರಿ.

ಶಿವರಾಯಪ್ಪ :– (ರವಿಯನ್ನು ಒದೆದು)
ಬದ್ಮಾಸ್‌ ಸೂಳೇಮಗನ, ಏನೋ ನಿನ್ನ ವ್ಯವಹಾರ? ಬೊಗಳೊ ನಿಂದೇನೊ ಆ ಕೂಸು?

ರವಿ :– ನಂದಲ್ಲ ಆದರ…?

ಶಿವರಾಯಪ್ಪ :– (ಮತ್ತೆ ಒದ್ದು)
ಮತ್ತೇನ ಆದರ……?

ರವಿ :– ಶೋಭಾಂದೂ ಅಲ್ಲ.

ಶಿವರಾಯಪ್ಪ :– ಅದನ್ಯಾರ ಕೇಳಿದರು ನಿನ್ನ? ಕೇಳದs ಯಾಕ ಬಾಯಿ ಬಿಟ್ಟಿ?

ಹದಿನೆಂಟು :– ಶೋಭಾ, ಯಾರದದು? ನೀ ಹೇಳಬೇಕಲು.

ಶಿವರಾಯಪ್ಪ :– ರವೀದೇನು?

ಶೋಭಾ :– ನಮ್ಮಿಬ್ಬರದೂ ಅಲ್ಲ.

ಶಿವರಾಯಪ್ಪ :– ರವೀದಲ್ಲಂಧಾಗಾಯ್ತು. ಸಾಹೇಬರ ಇನ್ನ ಹೋಗೋಣ್ರೆ ನಾವು?

ಹದಿನೆಂಟು :– ಹೋಗೀರೆಂತ ತಡೀರಿ. ಹೆಣಮಗಳ ಜವಾಬ ಬರಲಿ, ಏನವಾ?

ಶೋಭಾ :– (ಅಳುತ್ತ)
ಹೆಂಗ ಹೇಳಲಿ? ಹೆಣಕ್ಕ ಹುಳಾ ಮುತ್ತಿಧಾಂಗ ಎಲ್ಲಾರು ನನ್ನ ನೋಡತೀರಿ. ಖರೋಖರ ಹೇಳತೀನಿ – ಇದು ನಂದಲ್ಲ. ನಾ ಹೆಂಗಸ ಖರೆ. ಹಾಂಗಂದರ ನಾ ಇದರ ತಾಯಿ ಹೆಂಗಾದೇನು?

ಹದಿನೆಂಟು :– ಮಿಸ್‌ ಶೋಭಾ, ಇದ್ದದ್ದ ಇದ್ಧಾಂಗ ಹೇಳಿದರ ನಿನಗೇನೂ ಧೋಕ ಆಗಧಾಂಗ ನೋಡಿಕೊಳ್ತೀನಿ. ಇವರು ಶ್ರೀಮಂತರಾಗಿರಬಹುದು. ಆದರೂ ನಾ ಇರೋತನಕ ಹೆದರಬ್ಯಾಡ. ಈ ಕೂಸ ರವೀದಂತ ನೀ ಒಮ್ಮಿ ಹೇಳಿದರ ಸಾಕು. ನಿಮ್ಮಿಬ್ಬರ ಮದಿವಿ ಮಾಡಸೋ ಜವಾಬ್ದಾರಿ ನಂದು, ಕಾರಭಾರ ಬಡವ ಮಾಡಲಿ; ಶ್ರೀಮಂತ ಮಾಡಲಿ, ಕಾರಭಾರನs

ರವಿ :– ಅಲ್ಲರೀ ಸಾಹೇಬರs

ಶಿವರಾಯಪ್ಪ :- ಒದೀತೀನಿಗ.

ಹದಿನೆಂಟು :– ನನಗ ಹುಡುಗನ ಮಾತ ಬೇಕಿಲ್ಲ. ಶೋಭಾ, ನೀ ಹೇಳು. ನಿನಗಿಷ್ಟ ತಿಳದಿರಲಿ. ರವೀನ ಉಳಿಸಾಕಂತ ನೀ ಸುಳ್ಳ ಹೇಳಿದರ ಮುಂದಿಂದಕೆಲ್ಲಾ ನೀನs ಜವಾಬ್ದಾರಿ; ನಾವಲ್ಲ. ಆರಿಸಿಕೊ.

ಶೋಭಾ :– ಇದು ರವೀದೂ ಅಲ್ಲ.

ಶಿವರಾಯಪ್ಪ :– (ಬೆವರೂರಿಸಿಕೊಳ್ಳುತ್ತ)
ಬದುಕಿಸಿದೆ ಹಡದವ್ವಾ. ಸಾಹೇಬರ ನಾವು ಹೋಗೋಣೇನ್ರಿ?

ಹದಿನೆಂಟು :– ತಡೀರಿ. ಮಿಸ್‌ ಶೋಭಾ, ಏನ ಮಾತಾಡತೋದಿ ಗೊತ್ತೇನು?

ಟ್ವೆಂಟಿ :– ಬಂಗಾರದ ತತ್ತೀ ಹಾಕೋ ಕೋಳಿ ಕಳಕೊಳ್ತೀಯವಾ.

ಹದಿನೆಂಟು :– ಹೇಳು, ಯಾರದ್ದಿದು?

ಶೋಭಾ :– (ಅಳುತ್ತ)
ನಮ್ಮದಲ್ಲ.

ಹದಿನೆಂಟು :– ಇದು ಇಲ್ಲಿಗಿ ಹೆಂಗ ಬಂತು?

ಟ್ವೆಂಟಿ :– ಆಕಾಶದಿಂದ ಉದರಿತ?

ಶೋಭಾ :– ನನಗೇನ ಗೊತ್ತು?

ಹದಿನೆಂಟು :– ಮಿಸ್ಟರ್ ರವಿ…

ರವಿ :– ನನಗೂ ಗೊತ್ತಿಲ್ಲರಿ.

ಹದಿನೆಂಟು :– ಈ ಹೆಣಮಗಳು, ಇಲ್ಲಿಗೆ ನಿನಗಿಂತ ಮೊದಲು ಬಂದಳು ಹೌಂದ?

ರವಿ :– ಹೌಂದು.
ಹದಿನೆಂಟು :– ಮಿಸ್‌ ಶೋಭಾ ಹೌಂದೇನ್ರಿ?

ಶೋಭಾ :– (ಹೌದೆಂದ ಕತ್ತು ಹಾಕುವಳು)

ಹದಿನೆಂಟು :– ಮಿಸ್‌ ಶೋಭಾ, ತಗೊಂಡಹೋಗ್ರಿ ಅದನ್ನ.

ಶಿವರಾಯಪ್ಪ :– ನಮಸ್ಕಾರ ಬರತೀವಿ ಸಾಹೇಬರ.

ಹದಿನೆಂಟು :– ಏ ಟ್ವೆಂಟೀ, ಅವರ ಅಡ್ರೆಸ್‌ ಬರಕೊ.
(ಟ್ವೆಂಟಿ ಕೂಡಲೆ ವಿಳಾಸ ಬರೆದುಕೊಳ್ಳಲು ಸಿದ್ಧನಾಗುವನು)

ಶಿವರಾಯಪ್ಪ :- ಶಿವರಾಯಪ್ಪ ಅಂಡ್‌ ಸನ್ಸ್‌, ಅಡತಿ ಅಂಗಡಿ, ಸ್ಟೇಷನ್‌ ರೋಡ್‌ ಹುಬ್ಬಳ್ಳಿ, ನಡಿಯೊ.

ರವಿ :– ಅಪ್ಪಾ.

(ಶಿವರಾಯಪ್ಪ ಚಪ್ಪನೆ ಮಗನ ಕೆನ್ನೆಗೊಂದು ಬಾರಿಸಿ ಎಳೆದುಕೊಂಡು ಹೋಗುವನು. ಹುಡುಗ ಅವನ ಸೂಟಕೇಸಿನೊಂದಿಗೆ ಬೆನ್ನ ಹತ್ತುವನು)

ಹದಿನೆಂಟು :– ಟ್ವೆಂಠಿ. ಆ ಹೆಣಮಗಳ್ನ ಸ್ಟೇಷನ್ನಿಗಿ ಕರಕೊಂಡ ನಡಿ ಅಥವಾ ಬ್ಯಾಡ ಹೋಗಿ ಮನೀಗ ಮುಟ್ಟಿಸಿ ಬಾ. ಸಪ್ತಾಪುರದಾಗೈತಿ ಅಂದಳಲ್ಲ ಹೋಗು.

(ಶೋಭಾ ಒಡಿಬಂದು ಮತ್ತೆ ಕಾಲು ಹಿಡಿದುಕೊಂಡು ಅಳುವಳು)

ದಿನಬೆಳಗಾದರ ಇಂಥಾ ಕೇಸಿನಾಗ ಮುಳಿಗೇಳತೀವಿ. ನಮಗೆಲ್ಲಾ ತಿಳೀತೈತಿ. ತಮ್ಮ ಖರೆ ಒಪ್ಪಿಕೊಳ್ಳಾಕ ಈ ಮಂದಿಗಿ ಎಂದ ಧೈರೆ ಬರತೈತೊ!

ಶೋಭಾ :– ಯಾವ ಮುಖ ಹೊತ್ತ ಮನೀಗಿ ಹೋಗ್ಲಿ?

ಹದಿನೆಂಟು :– ಮಂದೀ ಮುಖ ಯಾಕ , ನಿಂದ ನೀನs ಹೊರಬೇಕು.

(ಶೋಭಾ ನಿಧಾನವಾಗಿ ಕಾಲು ಬಿಡುವಳು, ಕೂಸಿನ ಕಡೆಗೆ ಹೋಗುವಳು. ಮುಂದಿನ ಮಾತು ಮುಗಿಯುವ ಹೊತ್ತಿಗೆ ಕೂಸನ್ನು ಮೆಲ್ಲನೆತ್ತಿ ಹೊರಡುವಳು. ಟ್ವೆಂಟಿ ಸೂಟಕೇಸನ್ನೆತ್ತಿ ಬೆನ್ನಹತ್ತುವನು)

ನಮ್ಮ ಮುಖಾ ನಾವs ಹೊತ್ತಾಗ ಹೆಂಗ ಇರತೈತೊ! ಬರೀ ಮಂದೀದs ಹೊತ್ತ ಹೊತ್ತ ಲೋಕಾ ಅಣಗಿಸೋದಕ್ಕಿಂತ ನಮ್ಮದ ನಾವs ಹೊತ್ತ ನಮಗ ಅಣಕಿಸಿಕೊಳ್ಳೋದ ಚಲೋ ಅಲ್ಲ? ಕನಸಿನಾಗ ಒಮ್ಮಿ ತಿರುಪತಿ ತಿಮ್ಮಪ್ಪ ಹೇಳ್ತಿದ್ದ : ಮಗನs ಮನಿಶ್ಯಾನ ಖರೆ ನೋಡಬೇಕಾದರ ಕಣ್ಣಾಗ ಕಣ್ಣಿಟ್ಟು ನೋಡಬಾರದು. ನಿನ್ನ ಮೂಗಿನ ತುದಿ ನೋಡಕೋಬೇಕು ಅಂತ. ಹಾಂಗ ನೋಡಿದರ ಎದುರಿಗಿದ್ದಾವ ಡಬಲ್‌ ಕಾಣಿಸ್ತನ. ಬಹುಶಃ ಅದs ಖರೇನೋ ಏನೊ! ಅದಕ್ಕ ಮನಿಶ್ಯಾ ಏಕಕಾಲಕ್ಕ ಎರಡೆರಡ ಹಾದ್ಯಾಗ ಕಾಲಿಟ್ಟ ನಡೀತಾನ. ಕುಡಗೋಲ ನುಂಗುವನೂ ಅವನ, ನುಂಗಸುವನೂ ಅವನ! ಇದನ್ನs ಹೇಳತೀನಿ; ನನ್ನ ಮಾತ ಯಾರೂ ನಂಬಾಣಿಲ್ಲ.

ತೆರೆ