[ನೀರವ ವಾತಾವರಣ. ಅಷ್ಟು ಎತ್ತರವಲ್ಲದ – ಕೆಳಮಟ್ಟದ್ದಲ್ಲದ ಸ್ವರದಲ್ಲಿ ಉಪಾ]

ಉಷಾ :– ಶೀನೂ…ಶೀನೂ… ಇದೇನು ಹೀಗೆ ನಿಂತಿದೀಯೆ? ಟ್ರೇನ್‌ ವೇಳೆ ಸಮೀಪಿಸಿತು. ಎಲ್ಲಿ ನಿನ್ನ ಬ್ಯಾಗು? ಓಹೋ… ಇನ್ನು ಆಗಬೇಕೇನೋ ಎಲ್ಲಾ ಸಿದ್ಧತೆ. ಬೇಗನೇ ಏಳಬಾರದೇ? ಇಷ್ಟರಲ್ಲೇ ನಾನು ಬಂದದ್ದು ಆ ಕುರುಡನಿಗೆ ಗೊತ್ತಾಗಿ ಹೋದರೆ…..?

ಧ್ವನಿ :– ಎಲಾ, ‘ಕುರುಡು’ ಎಂಬ ಶಬ್ದ ಇವಳ ಕೆಂದುಟಿಗಳಿಂದ ಬಂದಾಗ ಎಷ್ಟು ಮಧುರವಾಗಿ ಕೇಳಿಸುತ್ತದೆ!

ಉಷಾ :– ಇದೇನು ಕೈಯಲ್ಲಿ ಪಿಸ್ತೂಲು? … ಓಹೋ ನಮ್ಮ ರಕ್ಷಣೆಗೋ? ಒಳ್ಳೆಯದೆ ಆಯ್ತು. ಇದೇನು ಹೀಗೆ ನಿಂತಿದೀಯೇ ಬೆಪ್ಪು ಬಡಿದವರ ಹಾಗೆ? ಅವಸರ ಮಾಡಬಾರದೆ?

ಶೀನು :– (ಗಂಭೀರ ಸ್ವರದಲ್ಲಿ) ಉಷಾ
ಉಷಾ :– ಉಂ?

ಶೀನು :– ಬರುವಾಗ ನಿನ್ನ ಮನಸ್ಸಿಗೇನಾದರೂ ಕೆಡುಕೆನಿಸಿತೆ?

ಉಷಾ :– ಓ…ಅದೆಲ್ಲಾ ಟ್ರೀನಿನಲ್ಲಿ ಹೇಳುತ್ತೇ.ಎ ಬೇಗನೆ ಏಳಬಾರದೆ?

ಶೀನು :– ಇಲ್ಲ. ನಾನಿಲ್ಲಿಯೇ ಕೆಳಬೇಕಲು. ಟ್ರೇನಿಗಿನ್ನೂ ಸಮಯವಿದೆ. ಏನೂ ಅನ್ನಿಸಲಿಲ್ಲವೆ?

ಉಷಾ :– ಅನ್ನಿಸದೇನು? ತುಂಬ ಪಶ್ಛಾತ್ತಾಪವಾಯಿತು. ಒಂದು ಸಲ ನಮ್ಮ ಪ್ರಯಾಣವನ್ನು ರದ್ದು ಮಾಡಬೇಕೆಂದೂ ಇಚ್ಛಿಸಿದೆ. ಅಷ್ಟರಲ್ಲಿ ಏನಾಯ್ತು ಗೊತ್ತೆ?

ಶೀನು :– (ನಿರುತ್ಸಾಹದಿಂದ) ಏನಾಯ್ತು?

ಉಷಾ :– ನಿನ್ನೆ ರಾತ್ರಿ ನೀನು ಹೇಳಿದ ಮಾತುಗಳನ್ನೆಲ್ಲಾ ನೀನು ಮತ್ತೆ ನನ್ನೆದುರಿಗೆ ಆಡಿದ ಹಾಗಾಯ್ತು. ಧೈರ್ಯ ಬಂತು. ಸುದೈವಕ್ಕೆ ಟಾಂಗಾವಾಲಾ ಬಂದಾಗ ಯಾರೂ ಇರಲಿಲ್ಲ. ಓಡಿ ಬಂದೆ. ಮತ್ತೆ ಏನೇನು ತಂದಿದೇನೆ ಗೊತ್ತೆ?

ಶೀನು :– (ನಿರುತ್ಸಾಹ) ಏನೇನು?

ಉಷಾ :– ನೀನು ಹೇಳಿದ್ದನ್ನೆಲಾ! ಆಭರಣ! ದುಡ್ಡು! ನಮ್ಮ ಸುದೈವ ಶೀನೂ.. ಎಂದೂ ಬೀಗದ ಕೈ ಇಡದ ಕುರುಡ, ಇಂದು ಮೇಜಿನ ಮೇಲೆ ಅದನ್ನು ಇಟ್ಟು ಹೋಗಿತ್ತು. ತಿಜೋರಿ ನನ್ನ ಕೈಗೆ! ಓಹ್‌… ಇನ್ನು ನಮ್ಮಿಬ್ಬರನ್ನಲು ಅಗಲಿಸೋದು ಯಾರಿಂದಲೂ ಸಾಧ್ಯವಿಲ್ಲ ಶೀನೂ, ನಮ್ಮಿಬ್ಬರನ್ನು ಅಗಲಿಸೋದು ಯಾರಿಂದಲೂ ಸಾಧ್ಯವಿಲ್ಲ.

ಶೀನೂ :– ಸಾವಿಗೂ…?

ಉಷಾ :– ಓಹೋ.. ಸಾವು ಎಂದೊಡನೆ ನನಗೆ ಭಯವಾಗುತ್ತೇಂತ ಗೋತ್ತಿದ್ದೂ ನನ್ನನ್ನು ನೀನು ಕೆಣಕುತ್ತಿದ್ದಿಯೇ.

ಶೀನು :– (ಗಂಭೀರ ಸ್ವರ) ಉಷಾ.

ಉಷಾ :– ಉಂ?

ಶೀನು :– ನಾವು ಮೊದಲ ರಾತ್ರಿ ಸಂಧಿಸಿದ ನಂತರ ಏನೆನ್ನಿಸಿತ್ತು ನಿನಗೆ?

ಉಷಾ :– ಈಗ ಅದನ್ನೆಲ್ಲ ಹೇಳಲು ಸಮಯವಿದೆಯೆ? ನಾನು ಬಂದದ್ದು ಆತನಿಗೆ ಗೊತ್ತಾಗಿ ಹೋದರೆ… ಬೇಗ ಏಳೂಂದ್ರೆ.

ಶೀನು :– ಆತ ಇಲ್ಲಿಗೆ ಎಂದೂ ಬರಲಾರ – ಅದರ ಬಗೆಗೆ ನಿಶ್ಚಿಂತಳಿರು. ಟ್ರೇನಿಗಿನ್ನೂ ಸಾಕಷ್ಟು ಸಮಯವಿದೆ. ಹೇಳು, ಏನು ಅನ್ನಿಸಿತ್ತು ನಿನಗೆ?

ಉಷಾ :– ನನಗೆ? ನಿನಗೆನ್ನಿಸಿದ ಹಾಗೆ. ರಾತ್ರಿ ಹನ್ನೆರಡು ಗಂಟೆಗೆ ನೀನೆದ್ದು ಹೋಗುತ್ತಲೂ ನನಗೆ ತುಂಬ ಪಶ್ಚಾತ್ತಾಪವಾಯಿತು. ಸುತ್ತಲೆಲ್ಲಾ ಕತ್ತಲೆ. ಬೆಳಗಿನ ವರೆಗೂ ಅತ್ತು ಅತ್ತು ಎದೆ ಹಗರು ಮಾಡಿಕೊಂಡೆ. ಎಂದೂ ನಿನ್ನ ಮುಖ ನೋಡಬಾರದೆಂದೂ ಪ್ರತಿಜ್ಞೆ ಮಾಡಿದೆ. ಬೆಳಿಗ್ಗೆ ಅವರ ಮುಖ ನೋಡುತ್ತಲೂ ಮತ್ತೆ ಅಳು ಬಂತು. ಮತ್ತೊಮ್ಮೆ ಪ್ರತಿಜ್ಞೆ ಮಾಡಿದೆ.  ಏನೋ ಸಮಾಧಾನವಾಯ್ತು (ಸುಯದ್ದು) ರಾತ್ರಿ ನೀನು ಮತ್ತೆ ಬಂದಾಗ ನನ್ನ ನಿರ್ಬಲತೆಯ ಅರಿವಾಯ್ತು.

ಶೀನು :– ನನಗೂ ಹಾಗೇ ಆಯ್ತು. ಸಂಜೆಯ ವರೆಗೆ ಪಶ್ಚಾತ್ತಾಪಗೊಂಡು ಕುದಿದೆ. ಮತ್ತೆ ರಾತ್ರಿಯಾಗುತ್ತಲೂ ನನ್ನ ನಿರ್ಬಲತೆಯ ಅರಿವಾಯ್ತು. ದೇವರು ನಮ್ಮಿಬ್ಬರಲ್ಲಿ ಆಸೆಯೊಂದನ್ನು ಹಾಕಿ ದೊಡ್ಡ ಅನ್ಯಾಯ ಮಾಡಿದ ಉಷಾ – ದೊಡ್ಡ ಅನ್ಯಾಯ ಮಾಡಿದ?

ಉಷಾ :– ಹಳೇ ಕತೆಯಿಂದೇನು ಪ್ರಯೋಜನ? ಟಿಕೇಟುಕೊಂಡೆಯಾ? ಯಾವ ಸ್ಟೇಷನ್ನಿನಲ್ಲಿ ಇಳಿಯೋದು?

ಶೀನು :– ನರಕದಲ್ಲಿ!

ಉಷಾ :– ನೀನು ಮತ್ತೆ ಮತ್ತೆ ನನ್ನನ್ನು ನೋಯಿಸುತ್ತಿದ್ದೀಯೆ. ನರಕಕ್ಕಂತೂ ನಮ್ಮಿಬ್ಬರ ಸ್ನೇಹವಾದಾಗಲೇ ಇಳಿದುದಾಗಿದೆ. ಇನ್ನು ಹೋಗುವದೆಲ್ಲಿ?

ಶೀನು :– ನಿನಗೆ ಈ ನರಕದಿಂದ ಹೊರಬರಲು ಆಸೆಯಾಗುವದಿಲ್ಲವೇ ಉಷಾ?

ಉಷಾ :– ನಿನ್ನ ಜೊತೆಗಿದ್ದ ನರಕ ನನಗೆ ಸ್ವರ್ಗವಾಗುತ್ತದೆ ಶಿನೂ! ಇದು ನರಕವಲ್ಲ! ಖಂಡಿತ ನರಕವಲ್ಲ! ನರಕವೆಂದವರಾರು? ಇದು ನರಕವೇ ಎನ್ನುವುದಾದರೆ ಇಂಥ ನರಕ ನನಗೆ ಸಾವಿರ – ಸಾವಿರ ಸಲ ಬರಲಿ! ಓ… ಈ ನರಕದಲ್ಲಿ ಎಂಥ ಸೊಗಸ್ಸಿದೆ! ಈ ಪ್ರೇಮ ಜೀವಿಗಳೆರಡೂ ಈ ನರಕದ ದೇವತೆಗಳು!!

ಧ್ವನಿ :– ನರಕದಲ್ಲಿ ದೇವತೆಗಳೆಂದೂ ಇರಲಾರರು! (ಪ್ರತಿಧ್ವನಿಯಂತೆ)

ಉಷಾ :– (ಕೇಳಿದವರಂತೆ) ಯಾರದು? ಯಾರು ಹಾಗೆ ಅಂದವರು? ಶೀನೂ ನನ್ನನ್ನು ಉಪೇಕ್ಷಿಸುತ್ತಿದ್ದೀಯೆ. ನಾಚಿಕೆಯಾಗುವುದಿಲ್ಲವೇ ನಿನಗೆ – ಹಾಗೆನ್ನಲ್ಲಿಕ್ಕೆ?

ಶೀನು :– ನಿನ್ನ ಹುಚ್ಚುತನವೇ ನಿನ್ನಿಂದ ಹಾಗೆ ಅನ್ನಿಸುತ್ತಿದೆ.. ಕೇಳು ಉಷಾ, ನನ್ನ ಪಾಲಿನ ಕೊನೆಯ ಹವೆಯನ್ನು ನಾನೀಗ ಉಸಿರಾಡಿಸುತ್ತಿದ್ದೇನೆ. ನನ್ನ ನಾಲಗೆಯ ಕೊನೆಯ ಚಪಲವನ್ನು ನಾನೀಗ ತೀರಿಸುತ್ತಿದ್ದೇನೆ.

ಉಷಾ :– ನಿನ್ನ ಮಾತು ನನಗೆ ಅರ್ಥವಾಗುತ್ತಿಲ್ಲಾಂದ್ರೆ.

ಶೀನು :– ಅರ್ಥವಾಗುವ ಹಾಗೆ ಹೇಳುತ್ತೇನೆ ಕೇಳು. ನನ್ನ ನಿನ್ನ ನಡುವಿನ ಸಂಬಂಧ ಪ್ರೇಮವಲ್ಲ. ನಿನ್ನತ್ತ ನನ್ನನ್ನೆಳೆದುದು ನಿನ್ನ ಪ್ರೇಮವಲ್ಲ – ಈ ನಿನ್ನ ರೂಪರಾಶಿ!

ಧ್ವನಿ – ನರಕದಲ್ಲಿ ಪ್ರೇಮವೆಂದಿಗೂ ಇರದು!

ಶೀನು :– ನೀನೀಗ ಓಡಿಬಂದುದೂ ಪ್ರೇಮಕ್ಕಾಗಿ ಅಲ್ಲ….ಸಾವಿತ್ರಿ ಸತ್ಯವಾನರೋ ಸೀತಾರಾಮರೋ ನುಡಿದ ಸಂಸ್ಕೃತ ಶಬ್ದ “ಪ್ರೇಮ.”ನಮ್ಮ ನಡತೆಯ ಹೇಸಿಕೆಯನ್ನು ಮುಚ್ಚಲು ಅದನ್ನು ಅಪಭ್ರಂಶಿಸಿ ಪೈಶಾಚಿಕ ಭಾಷೆಯಲ್ಲಿ ಕರೆದವರು ನಾವು!

ಉಷಾ :– (ಕಪಾಳಕ್ಕೆ ಬಿಗಿದು) ಪಾಪಿ! ಚಾಂಡಾಲ!

ಧ್ವನಿ :– ಎಲಾ! ಇವಳು ಈ ಶಬ್ದಗಳನ್ನು ಎರಡನೆಯವರಿಗೂ ಬಳಸಬಲ್ಲಳು!

ಶೀನು :– ಪಾಪಿ! ಚಾಂಡಾಲ! ಹೌದು. ಪಾಪಿಯೂ ಹೌದು, ಚಾಂಡಾಲನೂ ಹೌದು – ನಾನು ಮೊದಲಿನಿಂದಲೂ ಸುಶೀಲನಿದ್ದು ಆಗ ಶಬ್ದಗಳು ನನ್ನ ಕಿವಿಯ ಮೇಲೆ ಬಿದ್ದಿದ್ದರೆ., ಅಲ್ಲಮ ಪ್ರಭು ಮಾಯೆಯನ್ನು ಕಂಡು ನಕ್ಕ ಹಾಗೆ ನಾನೂ ಗಹಗಹಿಸಿ ನಗುತ್ತಿದ್ದೆ. ದುರ್ದೈವ. ನಾನೀಗ ಆ ಶಬ್ದಗಳಿಗೆ ಯೋಗ್ಯನಾಗಿದ್ದೇನೆ. ತನ್ನ ಪ್ರಾಣಕ್ಕಿಂತ ಪ್ರಿಯವಾಗಿ ಪ್ರೀತಿಸಿದ ಗೆಳೆಯನ ಧರ್ಮಪತ್ನಿ ಎಂಬುದನ್ನೂ ಮರೆತು ನಿನ್ನ ಜೊತೆ ಸೇರಿದೆ. ನೀನೂ ಹಸಿದಿದ್ದೆ. ನೀನಾಗ ನಿರಾಕರಿಸಿದ್ದರೆ ಸರಿಯಾದ ದಾರಿ ತುಳಿಯಬಹುದಿತ್ತು. ಆಗಲಿಲ್ಲ. ಸದಾಶಿವನ ಬಗೆಗೆ ಕೀಳುದೃಷ್ಟಿ ಇಬ್ಬರಲ್ಲೂ ಬೆಳೆಯುತ್ತ ಬಂತು. ಅವನಿಗೆ ನಾವು ಕೊಟ್ಟುದು ತಿರಸ್ಕಾರವನ್ನು, ಆತ ಮಾತ್ರ ಸ್ನೇಹವನ್ನೇ ಕೊಟ್ಟ. ಸದಾಕಾಲ ಈ ಪೀಡೆ ತೊಲಗದೆಂದ ಕಣ್ಣು ಬೇನೆಯಾದ ಸಂಧಿ ಸಾಧಿಸಿ ಔಷಧದ ಬದಲು ಅಂಜನವಿಕ್ಕಲು ಹೇಳಿದೆ. ನೀನದನ್ನು ಕಾರ್ಯರೂಪಕ್ಕಿಳಿಸಿದೆ. ಅಂಜನವಿಕ್ಕಿಸಿಕೊಂಡಾತ ಆತನಾದರೂ ಕಣ್ಣು ಕಳೆದುಕೊಂಡವರು ನಾವು ಉಷಾ! ಅವನ ಎರಡು ಕಣ್ಣಿಗೆ ಪ್ರತಿಯಾಗಿ ನಮ್ಮ ನಾಲ್ಕು ಕಣ್ಣು ಕುರುಡಾದವು! (ಉಷಾ ಅಳುವ ಧ್ವನಿ.) ಆಸ್ಪತ್ರೆಗೆ ಹೋದ. ಕಣ್ಣು ಸರಿಯಾದರೂ ನಮ್ಮನ್ನು ಪರೀಕ್ಷಿಸಬೇಕೆಂದು ಮತ್ತೆ ಕುರುಡರಂತೆಯೇ ನಟಿಸುತ್ತ ಮನೆ ಸೇರಿದ!

ಉಷಾ :– ಆಂ? ಏನಂದಿ?

ಶೀನು :– ಕಣ್ಣು ಸರಿಯಾದರೂ ನಮ್ಮನ್ನು ಪರೀಕ್ಷಿಸಬೇಕೆಂದು ಮತ್ತೆ ಕುರುಡರಂತೆಯೇ ನಟಿಸುತ್ತ ಮನೆ ಸೇರಿದ. ಆ ದಿನ ನೆನಪಿದೆಯೆ? ಆತ ಹಾಸ್ಪಿಟಲ್‌ದಿಂದ ಬಮದ ದಿನ – ನೆನಪಿದೆಯೆ?.. ಆ ದಿನ?

ಉಷಾ :– ಉಂ?

ಶೀನು :– ನೆನಪಿದೆಯೆ?

(ಒಂದು ಬಗೆಯ ಸಂಗೀತ. ಪುಸ್ತಕದ ಪುಟ ತಿರುವಿದ ಸಪ್ಪಳ. ನಂತರ ಸ್ತಬ್ಧ. ಪಿಸುಧ್ವನಿ ಅಸ್ಪಷ್ಟವಾಗಿ ಬರಬರುತ್ತ ಸ್ಪಷ್ಟವಾಗುತ್ತದೆ.)

ಉಷಾ :– ಶೀನೂ.

ಶೀನು :– ಉಂ?

ಉಷಾ :– ಕುರುಡ ಬರುತ್ತಿದೆಯಲ್ಲ.

ಶೀನು :– ಕಣ್ಣು ಕೊನೆಗೂ ಸರಿಯಾಗಲಿಲ್ಲವಂತಲ್ಲ?

ಉಷಾ :– ನಮ್ಮ ಸುದೈವ ಶೀನೂ, ಅದಿನ್ನು ಕೊನೆಯ ವರೆಗೂ ಕೈಯಾಡಿಸಿಯೇ ಸಾಯಬೇಕು! ಎಲ್ಲಿ ಹೊರಟೆ? – ಈಗಲೇ ಮನೆಗೆ ಹೋಗಬೇಕೇನೊ. ಬಿಡೋಲ್ಲಾಂದ್ರೆ – ಬಿಡೋಲ್ಲ. ಹ್ಯಾಗೆ ಬರ್ತಾ ಇದೆ ತುಸು ಮೋಜು ನೋಡಬಾರದೆ?

(ಕುಲು ಕುಲು ಕುಲು ನಗುವಳು.  ಸ್ವಲ್ಪ ಸಮಯದ ನಂತರ  ಬೂಟು ಮತ್ತು ಕೋಲಿನ ಸಪ್ಪಳ ಮೊದಮೊದಲು ದೂರಿನಿಂದ ಅಸ್ಪಷ್ಟವಾಗಿ ಬರಬರುತ್ತ ಸ್ಪಷ್ಟವಾಗಿ ಕೇಳಿ ಬರುತ್ತದೆ.)

ಸದಾಶಿವ :– ಉಷಾ…

ಉಷಾ :– ಬಂದೆ. (ಪಿಸುಧ್ವನಿ) – ಹಾಳು ಸಹವಾಸ – (ಸ್ಪಷ್ಟವಾಗಿ) ಅಲ್ಲೆ – ಅಲ್ಲೆ ಕುರ್ಚಿ ಇದೆ ಕೂತ್ಕೊಳ್ಳಿ… ಶಂಕರ ಅಲ್ಲೇ ಕುರ್ಚಿಯಲ್ಲಿ ಕೂಡ್ರಿಸು. ಹೂಂ… ಸರಿ ನೀನು ಹೊರಟ್ಹೋಗು. (ಶಂಕರ ಹೋಗುತ್ತಾನೆ.)

ಸದಾಶಿವ :– ಶೀನೂ ಬಂದಿದ್ನೆ?

ಉಷಾ :– ಇಲ್ಲ. ಇನ್ನೂ ಬಂದಿಲ್ಲ. ಸಂಜೆಗೆ ಬರುತ್ತಾರೇನೋ… ಕಾಫಿ ತರಲೇ?

ಸದಾಶಿವ :– ಕಾಫೀ ತರುತ್ತೀ? ತಗೊಂಬಾ…

ಶೀನು :– (ಪಿಸು ಧ್ವನಿ) ಉಷಾ…!! ಸದಾಶಿವನ ಮುಖ ಈ ಹೊತ್ತು ಎಷ್ಟು ಸುಂದರವಾಗಿ ತೋರುತ್ತಿದೆ ನೋಡು! ಏನೋ ಭವ್ಯವಾದ ಗುಡಿಯಲ್ಲಿ ಹೊಕ್ಕ ಹಾಗೆ –

ಉಷಾ :– ಇದೇನು ಮತ್ತೆ ಹಗಲು ವೈರಾಗ್ಯ?

ಶೀನೂ :– (ಪಿಸು ಧ್ವನಿ) ಉಷಾ… ಸದಾಶಿವನ ಆ ಮಂದಹಸ ನೋಡು! ಆ ಮುಗ್ಧ ಮುಖ ನೋಡು! ನಮ್ಮ ಸಂಬಂಧವಿನ್ನು ಸಾಕು ಉಷಾ! ತೀರ ಸುಖಿಗಳೆಂದುಕೊಂಡ ನಮಗೆ ಅಂಥದೊಂದು ಮುಗುಳು ನಗೆ ನಗಲು ಬರುತ್ತದೆಯೆ? ಆ ಮಂದಹಾಸಕ್ಕೆ ಯೊಆವ ಬೆಲೆ ತೆತ್ತರೆ ನಮ್ಮದಾದೀತು! ನಾನವನ ಕಾಲು ಹಿಡಿದು ಕ್ಷಮೆ ಕೇಳಿಕೊಳ್ಳುತ್ತೇನೆ… ನಾನಿನ್ನು ಹಾಗೇ ಇರಲಾರೆ…ಉಷಾ…

ಉಷಾ :– (ಗಡುಸು ಧ್ವನಿ) ಏನ್ಹಾಗೆ ಹುಚ್ಚುಚ್ಚು ಆಡಿದರೆ?

ಸದಾಶಿವ :– ಯಾರದು ಉಷಾ?

ಉಷಾ :– (ಸಾವರಿಸಿಕೊಂಡು) ಯಾರಿಲ್ಲ… ಒಳಗೆ ಶಂಕರ ಏನೇನೋ ಅಂದುಕೊಂಡು ನಗ್ತಿದಾನೆ… ಅವನಿಗಂದೆ ಅಷ್ಟೆ. (ಪಿಸು ಧ್ವನಿಯಲ್ಲಿ) ಶೀನೂ ತುಸು ಹೊರಗೆ ನಡೆ…(ಹೋಗುವರು.)

ಶಂಕರ :– ಸರ್ ಸರ್… (ಪ್ರವೇಶಿಸಿ) ಸರ್……

ಸದಾಶಿವ :– ಏನದು ಶಂಕರ?

ಶಂಕರ :– ಬೆಕ್ಕೇನಾದ್ರೂ ಇಲ್ಲಿ ಬಂದಿತ್ತೆ ಸಾರ್?

ಸದಾಶಿವ :– ಎಂಥ ಬೆಕ್ಕೊ?

ಶಂಕರ :– (ಗಹಗಹಿಸಿ ನಗುತ್ತ) ಕಣ್ಮುಚ್ಚಿಕೊಂಡು ಹಾಲ್ಕುಡೀತಾ ಇತ್ತು ಸಾರ್… ಹಿಂದಿನಿಂದ ಏಟು ಹಾಕಬೇಕೆನ್ನೋದರಲ್ಲೇ ಸಪ್ಪಳವಾಗಿ ಗಡಬಡಿಸಿತು. ಮುಂದೆ ಏನಾಯ್ತು ಗೊತ್ತೇ ಸಾರ್? ಪಾತ್ರೆ ಅದರ ಮೊಗಕ್ಕೆ ಹಾಗೇ ಸಿಕ್ಬಿಟ್ತು! ಏಟು ಹಾಕಬೇಕೆಂದರೆ ಇತ್ತ ಕಡೆಗೇ ಓಡಿ ಬಂತು!… ತುಂಬ ತಮಾಷೆ ಸಾರ್! ಪಾತ್ರೆ ಅದರ ಮುಖ್ಕೆ ಹಾಗೇ ಇದೆ! (ಮತ್ತೆ ನಗು…) ಅಲ್ನೋಡಿ! ಅಲ್ನೋಡಿ ಸಾರ್!…

(ನಗು ಅಸ್ಪಷ್ಟವಾಗುತ್ತದೆ. ಒಂದು ಬಗೆಯ ಸಂಗೀತ. ಪುಸ್ತಕ  ಮುಚ್ಚಿದ ಸಪ್ಪಳ)…

ಶೀನು :– ನೆನಪಿದೆಯೆ? (ನೀರವ) ನಿಜವಾಗಿಯೂ ಕುರುಡರಂತೆಯೇ ನಟಿಸುತ್ತ ಮನೆ ಸೇರಿದ! ಆತ ನಮ್ಮಿಬ್ಬರನ್ನು ನೆಮ್ಮದಿಯಿಂದ ಇರಿಸಬೇಕೆಂದು ತಾನೇ ಮನೆ ಬಿಟ್ಟು ಎಲ್ಲಿಯಾದರೂ ಹೋಗಬೇಕೆಂದಾಗ ನಾವೇ ಓಡಿಹೋಗುವದು ಅವನಿಗೆ ಗೊತ್ತಾಯ್ತು. ಬ್ಯಾಂಕಿನಿಂದ ತಾನೇ ದುಡ್ಡು ತರಿಸಿ ಪೆಟ್ಟಿಗೆಯಲ್ಲಿಟ್ಟು ಬೀಗದ ಕೈ ಬೇಕೆಂದೇ ಮೇಜಿನ ಮೇಲಿಟ್ಟ. ನೀನು ದುಡ್ಡು ತೆಗೆದುಕೊಂಡು ಬಂದೆ!

ಉಷಾ :– ನಿನಗಿದೆಲ್ಲಾ ಹೇಗೆ ಗೊತ್ತಾಯ್ತು?

ಶೀನು :– ಗೊತ್ತಾಯ್ತು. ಆದರೂ ಸುಳ್ಳಲ್ಲ. ಹೇಳು… ಈಗಲೂ ನಿನಗೆ ಓಡಿಹೋಗಲು ಮನಸ್ಸಾಗುತ್ತಿದೆಯೆ?

ಉಷಾ :– (ಅಳುತ್ತ) ನಾನು ಪಾಪಿ ಶೀನೂ… ನಾನು ಪಾಪಿ! ಇನ್ನು ಯಾವ ಮುಖ ಹೊತ್ತು ಅವರೆದುರು ಹೋಗಲಿ? ನಾನಲ್ಲಿ ಹೋಗಬಾರದು………. ಎಲ್ಲಿಯಾದರೂ ಹೋಗೋಣ. ನನ್ನ ಕೈ ಬಿಡಬೇಡ ಶೀನೂ.

ಶೀನು :– ಸಾಯಲಿಕ್ಕೆ ಮನಸ್ಸಿದೆಯೆ?

ಉಷಾ :– (ಆರ್ತಳಾಗಿ) ಸಾಯುವುದಕ್ಕೆ ನನಗೆ ಭಯವಾಗುತ್ತದೆ! ನಾನು ಸಾಯಲಾರೆ… ಎಲ್ಲಿಯಾದರೂ ಓಡಿ ಹೋಗೋಣ!

ಶೀನು :– ಇನ್ನೂ ಪಾಪ ಮಾಡುವ ಮನಸ್ಸು ನನಗಿಲ್ಲ ಉಷಾ. ನಿನ್ನ ಗಂಡನ ಬಳಿಗೆ ಹೋಗಿ ಅವನ ಸೇವೆ ಮಾಡಿ ಪಾಪ ಕಳೆದುಕೊ. ನಾನು ಮಾತ್ರ ಅವನ ಮುಖ ನೋಡಲಾರೆ. ನನ್ನ ಪಾಪಗಳಿಗೊಂದು ಕ್ಷಮೆ ಸಿಗಬಾರದು. .ಅವಕ್ಕ ಪರಿಹಾರ ದೊರೆ ಯಬಾರದು. ನಾನು ಬಹಳ ಬಳಲಬೇಕು… ನರಕದಲ್ಲಿಯೂ ನನಗೆ ಸ್ಥಾನ ಸಿಗಬಾರದು. ಅಂತೆಯೇ ಇದೀಗ ಸಾವನ್ನಪ್ಪುತ್ತಿದ್ದೇನೆ.

ಉಷಾ :– ನನ್ನ ಕೈ ಬಿಡಬೇಡ  (ಅಳುತ್ತ) ಅವರು ಮತ್ತೆ ನನ್ನನ್ನು ಸ್ವೀಕರಿಸಲಾರರು…ಸ್ವೀಕರಿಸಲಾರರು.

ಶೀನೂ :– ಗಂಗೆ ಹರಿಯುವದು ಪಾಪಿಗಳಿಗಾಗಿ ಉಷಾ, ಹೋಗು. ಆತ ಖಂಡಿತ ಸ್ವೀಕರಿಸುತ್ತಾನೆ. ಹಾಗೇ ನಾನೂ ಕ್ಷಮೆ ಕೇಳಿದ್ದೇನೆಂದು ಹೇಳು.

ಉಷಾ :– (ಅಳುತ್ತ) ನಿಲ್ಲು ಶೀನೂ… ನನ್ನನ್ನೂ ಕೊಲ್ಲು……. ಸಾಯಲು ನಾನೂ ಸಿದ್ಧಳಿದ್ದೇನೆ…ಶೀನೂ…! ಶೀನೂ…….!!!

(ಗುಂಡು ಹಾರಿದ ಸಪ್ಪಳ)