ಪಾತ್ರಗಳು

ಸದಾಶಿವ
ಶೀನೂ
ಶಂಕರ
ಉಷಾ
ಲಕ್ಷ್ಮೀ
ಮತ್ತು
ಟಾಂಗಾವಾಲಾ

—-

[ಕೈ ಬಳೆಗಳ ಉಲುಹು. ಪೆಟ್ಟಿಗೆ ತೆರೆದ – ಮುಚ್ಚಿದ ಸಪ್ಪಳ. ಕುರ್ಚಿ ಆಚೀಚೆ ಸರಿಸಿದ – ಪುಸ್ತಕ ಚೆಲ್ಲಿದ ಸದ್ದು. ತುಂಬ ಗಡಿಬಿಡಿ.]

ಉಷಾ :– ಲಕ್ಷ್ಮೀ…ಏ ಲಕ್ಷ್ಮೀ, ಎಲ್ಲಿ ಹೋದಳೋ ಹಾಳಾದೋಳು… ಏ ಲಕ್ಷ್ಮೀ…

ಲಕ್ಷ್ಮೀ :- (ಒಳಗಿನಿಂದ) ಓ ಬಂದೆ…(ಬಳಿ ಬಂದು) ಏನ್ರೆಮ್ಮಾ…?… ಇದೇನ್ರೀ ಸಾಮಾನೆಲ್ಲ ಚೆಲ್ಲಾಪಿಲ್ಲಿ? ಈಗ ತಾನೇ ಸರಿಯಗಿ ಜೋಡ್ಸಿ ಇಟ್ಟು ಹೋಗಿದ್ದೆ.

ಧ್ವನಿ :– ಕೂಡದು! ಈ ಮನೆಯ ಸಾಮಾನು ಶಿಸ್ತಿನಲ್ಲಿ ಎಂದೂ ಇರಕೂಡದು!

ಉಷಾ :– ನನ್ನನ್ನೇ ಆಕ್ಷೇಪಿಸುತ್ತೀ ಏನೇ ಇರಲಿ. ಈ ಬೀಗದ ಕೈ ಯಾರೇ ಇಲ್ಲಿ ಇಟ್ಟದ್ದು?

ಧ್ವನಿ :– ಅರಸುತಿಹ ಲತೆ ಕಾಲ ತೊಡಕಲು ಹರಿದು ಬಿಸಡುವರುಂಟೆ?

ಲಕ್ಷ್ಮಿ :– ಸಾಹೇಬರೇ ಮರತು ಇಟ್ಟಿರಬೇಕು.

ಉಷಾ :– ಸರಿ. ನೀನು ನಿನ್ನ ಕೆಲಸಕ್ಕೆ ಹೊರಟ್ಹೋಗು.

(ಒಮ್ಮೆಲೆ ಶಾಂತ ವಾತಾವರಣ. ತನಗೆ ತಾನೇ ನುಡಿವವರಂತೆ ಉಷಾ)

ಉಷಾ :– ಬೀಗದ ಕೈ! ಅವರು ಬೇಕೆಂದೇ ಇದನ್ನಿಲ್ಲಿ ಇಟ್ಟಿರಲಾರರಷ್ಟೇ?

(ಮತ್ತೆ ತುಸು ಹೊತ್ತು ನೀರವ.) ಲಕ್ಷ್ಮೀ……ಈ ಸೀರೆ ರವಕೆಗಳನ್ನೆಲ್ಲ ಸರಿಯಾಗಿ ಮಡಚಿ ಬ್ಯಾಗಿಗೆ ಸೇರಿಸು. ವೇಳೆ ಇಲ್ಲ. ಬೇಗ ಮುಗೀಬೇಕು.

ಲಕ್ಷ್ಮಿ :– ಆಗಲ್ರಮ್ಮ. (ಸೀರೆ ಮಡಚಿ ಬ್ಯಾಗಿಗೆ ಸೇರಿಸುವ ಸಪ್ಪಳ.)

ಉಷಾ :– ಲಕ್ಷ್ಮೀ, ಅವರೇನಾದರೂ ಹೋಗುವಾಗ ಹೇಳಿದ್ದಾರೇನು?

ಲಕ್ಷ್ಮಿ :– ಏನೂ ಇಲ್ರಿ. ಅಡ್ಡಾಡಿಕೊಂಡು ಬರ್ತೀನಿಂತ ಶಂಕರನ ಕೈ ಹಿಡಿದುಕೊಂಡು ಹೋದರು.

ಉಷಾ :- ಸರಿ, ಸರಿ. ಈ ಸೀರೆ ನನಗೆ ಹ್ಯಾಗೆ ಒಪ್ಪುತ್ತೆ ನೋಡು?…

ಲಕ್ಷ್ಮಿ :– ಏನ್ಹೇಳ್ಬೇಕ್ರೆಮ್ಮಾ? ಲಕ್ಷ್ಮಿ! – ಸಾಕ್ಷಾತ್‌ ಲಕ್ಷ್ಮಿ ಇಳಿದು ಬಂದ್ಹಾಂಗ ಕಾಣ್ತೀರಿ.

ಉಷಾ :– ಶೀನೂ ಕೂಡ ಹಾಗೇ ಹೇಳ್ತಿದ್ದ ಕಣೇ – ಸ್ವರ್ಗದಿಂದ ಊರ್ವಶಿ ಇಳಿದು ಬಂದ ಹಾಗೆ ಕಾಣ್ತೀರಿ – ಅಂತ – ಅಲ್ವೇನೆ?

ಲಕ್ಷ್ಮಿ :– – ಅದ್ಸರಿ, ಇದೇನ್ರೆಮ್ಮಾ ಈ ಹೊತ್ತಿನಲ್ಲಿ ಸೀರೀನೆಲ್ಲಾ ಗಂಟು ಕಟ್ತಾ ಇದೀರಿ?

ಉಷಾ :– (ಪೆಚ್ಚಾಗಿ) ಓ…ಹ್‌… ನಾನು ಇನ್ನೆರಡು ದಿನಗಳಲ್ಲಿ ತೌರಿಗೆ ಹೋಗೋಳಿಲ್ಲವೆ? ಈಗಿನಿಂದಲೇ ಸಿದ್ಧತೆ ಮಾಡಿಟ್ಟುಕೋ ಬೇಕೂಂತ. ಹೊರಟ ದಿನವೇ ಅತಿ ಅವಸರ ಮಾಡಿದರೆ ತುಂಬ ಕಷ್ಟವಾಗುತ್ತಲ್ಲವೆ?

ಲಕ್ಷ್ಮಿ :– – ಹೌದ್ರಿ……ಆಂ. ಒಂದು ಸುದ್ದಿ ಕೇಳಿದಿರಾ ತಾಯಿ?

ಉಷಾ :– – ಏನು?

ಲಕ್ಷ್ಮಿ :– ನಮ್ಮ ಸಾಹೇಬರಿರೋ ಸ್ಕೂಲಿನ ಹತ್ತಿರ ರತ್ನಮ್ಮಾಂತ ಒಂದು ಹುಡುಗಿ ಇತ್ತು ಗೊತ್ತಾ?

ಉಷಾ :– ಆ ಶಿವರಾಮರಾಯರ ಹಿರಿಯ ಮಗಳು?

ಲಕ್ಷ್ಮಿ – ಹೂಂ. ಅವಳೇ. ತನ್ನ ಗಂಡನ್ನ ಬಿಟ್ಟು ಗೌಡರ ಮಗನ್ನ ಕೂಡಿಕೊಂಡು ಓಡಿ ಹೋದಳಂತೆ!

ಉಷಾ :– (ಉದ್ವೇಗದಿಂದ) ಲಕ್ಷ್ಮೀ (ಬಿರುಸಾಗಿ ತೇಗುತ್ತ) ಯಾರು ಹೇಳಿದರು ನಿನಗೀ ಸುದ್ದೀನ್ನ?

ಲಕ್ಷ್ಮಿ :– ಅದ್ಯಾಕ್ರಮ್ಮಾ? ಊರ ತುಂಬ ಹಬ್ಬೇತೆಲ್ಲ – ಡಣಾಡಂಗರದ್ಹಂಗ! ನೀವ್ಯಾಕಿಷ್ಟು ಮನಸ್ಸಿಗೆ ಹಚ್ಚಿಕೊಳ್ಳಬೇಕು ಬಿಡೀಂದ್ರೆ. ಯಾರದೋ ಸುದ್ದಿ – ಯಾರದೋ ಮಾತು. ನಮಗೇನು? ಸಧ್ಯ ನಮಗೆ ಸಂಬಂಧಿಸಿದ್ದೇನೂ ಅಲ್ವಲ್ಲ. ಪಾಪ… ಗಂಡ ಭಾಳ ಸಭ್ಯ ಪ್ರಾಣಿ! ಅವನಿಗೂ ಕೈ ಕೊಟ್ಗಟಳು ಚಾಂಡಾಲಿನಿ.

ಉಷಾ :– (ಎತ್ತರದ ಧ್ವನಿ) ಚಾಂಡಾಲಿನಿ? ಯಾರಿಗೆ ನೀನಂದದ್ದು ಹಾಗೆ? ಲಕ್ಷ್ಮೀ… ಯಾರು ಚಾಂಡಾಲಿನಿ? ಯಾರಿಗೆ ನೀನಂದದ್ದು?

ಲಕ್ಷ್ಮಿ :– ಇದೇನ್ರಿ ಈ ಹೊತ್ತು ಹೀಗೆಲ್ಲಾ ಆಡ್ತಾ ಇದ್ದೀರಿ? ಅವಳಿಗೆ – ಆ ಹುಡಿಗೆಗೆ ನಾನಂದದ್ದು? ಅಲ್ವೇನ್ರೀ ಮತ್ತೆ? ಆಕಳಂಥಾ ಗಂಡ. ಅಂಥವನಿಗೂ ಕೈ ಕೊಡೋದಂದ್ರೆ – ಎಂಥ ಚಾಂಡಾಲಿನಿ ಇದ್ದಿರಬೇಕು. ನೀವಾ‌ ಏನೇ ಹೇಳ್ರಿ ಅಮ್ರಾವ್ರ – ಈಗಿನ ಕಾಲದ ಹುಡಿಗೀಋಏ ಹೀಗೆ… ಇದೇನ್ರೀ, ನಿಮ್ಮ ಮುಕದ ಮ್ಯಾಲಿ ಬೆವರು?

ಉಷಾ :– (ಚೇತರಿಸಿಕೊಂಡು) ಓಹ್‌……ಏ…ನಿಲ್ಲ… ತುಂಬ’ ಶಕೆ ಆಗ್ತಾ ಇದೆ ಅಲ್ಲವೆ? ಈ ಬೇಸಿಗೆ ಬೇರೆ ಎಂದು ಹಾಳಾಗಿ ಹೊಗುತ್ತೋ?

ಲಕ್ಷ್ಮಿ :– (ಕುಲುಕುಲು ನಕ್ಕು) ಬಿಡ್ರಿ… ನಮ್ಮಂಥಾ ದಡ್ಡರು ಮಾತನಾಡೋ ಹಾಂಗ ಮಾತನಾಡ್ತೀರಿ… ಮಳೆಗಾಲ ಇದ್ದದ್ದನ್ನ ಬ್ಯಾಸ್ಗಿ ಅಂದ ಬಿಟ್ರಿ.

ಧ್ವನಿ :– ಹೊರಗೆ ಮಳೆಗಾಲವಿದ್ದರೂ ಅವಳು ಮಾತ್ರ ಇನ್ನೂ ಸುಡುವ ಬೇಸಗೆಯಲ್ಲೇ ಇದ್ದಾಳೆ.

ಉಷಾ :– ಓಹ್‌…ಮರೆತುಹೋಗಿತ್ತು. ಸೀರೆ ಇಟ್ಟಾಯ್ತೇನು? ಸರಿ.ಸರಿ. ನೀನಿನ್ನು ಒಳಗೆ ಹೊರಟ್ಹೋಗು.

ಲಕ್ಷ್ಮಿ :– …ಹೂಂನ್ರಿ (ಹೋಗುವಳು)

(ತುಸು ಸಮಯ ನೀಋವ. ಆ ಮೇಲೆ ಬೀಗದ ಕೈ ಸದ್ದು, ಪೆಟ್ಟಿಗೆ ತೆರೆದು ಆಭರಣ, ದುಡ್ಡು ತೆಗೆದುಕೊಂಡ ಸಪ್ಪಳ.)

ಲಕ್ಷ್ಮಿ :– (ಒಳಗಿನಿಂದ) ಅಮ್ರಾವ್ರs… ಬಿಳೀ ರವಕೆ ಒಳಗೇ ಇದೆ. ಅದನ್ನು ತರಲೇನು? (ಗಡಬಡಿಸಿ ಒಮ್ಮೆಲೆ ಪೆಟ್ಟಿಗೆ ಮುಚ್ಚಿದ ಸಪ್ಪಳ. ಕೆಲಹೊತ್ತು ನೀರವ.)

ಉಷಾ :– ಅಡಿಗಡಿಗೂ ನನ್ನನ್ನು ಈ ಮನೆ ತಡೆಯುತ್ತಿದೆ. ಇಂಥ ಕಟುಕರಿಂದ ದೂರ – ಅತಿ – ದೂರ – ನನ್ನ ಸುಖಕ್ಕ ಯಾರಿಂದಲೂ ಬಾಧೆ ಬಾರದಷ್ಟು ದೂರ – ಓಡಿಹೋಗಬೇಕೆಂದರೆ ನನ್ನ ಮಟ್ಟಿಗೆ ನನ್ನನ್ನು ಈ ಜಗತ್ತು ಬಿಡುತ್ತಿಲ್ಲ! ಓಹ್‌… ನಾನು ಇರಲಾರೆ… ಖಂಡಿತ ಇರಲಾರೆ……ನನ್ನಂಥವರು ಈ ಮನೆಯಲ್ಲಿ ಖಂಢಿತ ಇರಬಾರದು !

ಧ್ವನಿ :– ಖಂಡಿತ ಇರಬಾರದು. ಸುರೆ ಇದ್ದೂ ಹಾಲಿನ ಭ್ರಾಂತಿ ಹುಟ್ಟಿಸುವ ಜನ , ಈ ಮನೆಯಲ್ಲಿ ಖಂಡಿತ ಇರಬಾರದು.

ಉಷಾ :– (ಕೇಳಿದವರಂತೆ) ಯಾರು? ಯಾರದು ಹಾಗೆ ಮಾತನಾಡಿದವರು? ಲಕ್ಷ್ಮೀ…ಏ ಲಕ್ಷ್ಮೀ…..

ಲಕ್ಷ್ಮಿ :– (ಓಡಿಬಂದ ಸದ್ದು) ಏನ್ರೆಮ್ಮ?

ಉಷಾ :– ಅವರು ಬಂದಿದ್ದಾರೆಯೆ?

ಧ್ವನಿ :– ಅವರು ಎಂದಾದರೂ ನಿನ್ನ ದಾರಿಗೆ ಅಡ್ಡ ಬಂದುದುಂಟೇ?

ಉಷಾ :– (ಉದ್ರಿಕ್ತಳಾಗಿ) ಲಕ್ಷ್ಮೀ! ಲಕ್ಷ್ಮೀ! ಕೇಳಿದೆಯಾ? ಯಾರೋ ಹೀಗೆ ಹಿಂದೆ ನಿಂತು ನನ್ನನ್ನು ಅಣಕಿಸಿ ಮಾತನಾಡುತ್ತಿದ್ದಾರೆ! ಕೇಳಲಿಲ್ಲವೆ ನಿನಗೆ?

ಲಕ್ಷ್ಮಿ :– ಇದೇನ್ರೆಮ್ಮಾ ಹೀಗೆ ಹುಚ್ಚುಚ್ಚಾರ ಆಡ್ತಾ ಇದೀರಿ?

ಧ್ವನಿ :– ಅಹುದು… ನಿಜವಾಗಿಯೂ ಹುಚ್ಚು!

ಉಷಾ :– ಕೇಳಿದೆಯಾ? ನೀನು ಹುಚ್ಚಳೆಂದರೆ ಅದೂ ಹುಚ್ಚಳೆನ್ನುತ್ತಿದೆ. ನೀವಿಬ್ಬರೂ ಮಾತನಾಡಿಕೊಂಡಂತೆ ಆಡುತ್ತಿದದೀರಿ! ಹಿಂದೆ ನೀನು ಯಾರನ್ನೋ ಬಚ್ಚಿಟ್ಟು ಬಂದಿರಬೇಕು! ಲಕ್ಷ್ಮೀ… ಯಾರವನು? ಯಾರನ್ನು ನೀನು ಬಚ್ಚಿಟ್ಟು ಬಂದದ್ದು?

ಧ್ವನಿ :– ಯಾರನ್ನು ನೀನು ಬಹುದಿನಗಳಿಂದ ಮರೆತಿರುವೆಯೋ ಅವನು!

ಉಷಾ :– ಕೇಳಿದೆಯಾ? ಏನಂತಾನೆ ಈ ಪಾಪಿ? (ಬಿಕ್ಕುತ್ತ) ಹೋಗು… ಹೊರಟ್ಹೋಗು… ನಿನ್ನ ಮನೆಗೆ ಹೊರಟ್ಹೋಗು… ಹೊರಟ್ಹೋಗು……(ಬಿಕ್ಕು… ಅಸ್ಪಷ್ಟವಾಗುತ್ತಿರುವಾಗ)

ಲಕ್ಷ್ಮೀ :– ಅಮ್ರಾವ್ರ ನಾಳಿನ ದಿನ ಸ್ವಲ್ಪ ತಡಮಾಡಿ ಬರ್ತೀನ್ರಿ – (ನಿಷ್ಕ್ರಮಣ , ಕೆಲಹೊತ್ತು ನೀರವ.)

ಶಂಕರ :– (ಪ್ರವೇಶಿಸಿ) ಕಳ್ಳನ ಜೀವ ಹುಳ್ಳುಳ್ಳಗಂತ…

ಉಷಾ :– (ಚೀರಿ) ಯಾರವನು?

ಶಂಕರ :– ನಾನು ಶಂಕರ ಅಕ್ಕಾವರ, ನೋಡಿ ಮತ್ತೆ… ಆ ಶಾರಿ ಸ್ಕೂಲಿನಲ್ಲಿ ಈ ಹೊತ್ತು ನನ್ನ ಪುಸ್ತಕ ಕದ್ದುಕೊಂಡು ಇಲ್ಲಾಂತ ಹೇಳ್ತಾ ಇದ್ಳು. ನಾನು ಗುರುಗಳ ಹತ್ರ ಹೋಗಿ ಹೇಳಿದ ಕೂಡಲೇ ಅಳಲಿಕ್ಕೆ…

ಉಷಾ :– (ನಡುವೇ ತಡೆದು) ಸತ್ತು ಹೋಗಲಿ ನಿನ್ನ ಶಾರಿ……ಶಂಕರ… ನೀನೇನಾದರೂ ಇದೀಗ ಹಿಂದೆ ನಿಂತು ಮಾತನಾಡಿದೆಯಾ?

ಶಂಕರ :– ನಾನು? ಇಲ್ಲಾಂದ್ರೆ. ಈಗ ತಾನೇ ಸಾಹೇಬರನ್ನು ಕ್ಲಬ್ಬಿನಲ್ಲಿ ಬಿಟ್ಟು ಬಂದೆ. ತಿರುಗಾಡಿಕೊಂಡು ಇನ್ನೊಂದು ತಾಸಿನ ಮೇಲೆ ಬಾಂತ ಹೇಳಿದರು. ಬಂದೆ……ಯಾಕ್ರೀ ಅಕ್ಕಾವರ ಹೀಗಿದ್ದೀರಿ?

ಉಷಾ :– …ಅ…ಹ್‌…ಯಾಕಿಲ್ಲ. ಚೆನ್ನಾಗೇ ಇದೀನಲ್ಲ. ಚೆನ್ನಾಗೇ ಇದೀನಲ್ಲ…ಅದೇನೋ ಕೈಯಲ್ಲಿ?

ಶಂಕರ :– ಈ ಫೋಟೋ ಕೆಳಗೆ ಬಿದ್ದಿತ್ತು. ಕುರ್ಚಿಯ ಮೇಲೆ ಇಡ್ತಾ ಇದೀನಿ.

ಉಷಾ :– ಯಾರದದು?… (ಚಿಟ್ಟನೇ ಚೀರಿ) ಹೊರಟ್ಹೋಗು ಶಂಕರಾ ಹೊರಟ್ಹೋಗು!… ಓ ನಾನು ಹೋಗಲಾರೆ… ಹೋಗಲಾರೆ… ನಾನು ಎಲ್ಲಿಯೂ ಹೋಗಲಾರೆ.!……ಎಲ್ಲಿಯೂ ಹೋಗಲಾರೆ (ಬಿಕ್ಕುತ್ತ) ಇನ್ನೂ ನಿಂತಿರುವಿಯಲ್ಲ ಹಾಗೇ, ಅವರ ಹತ್ತಿರ ಹೊರಟ್ಹೋಗು (ಶಂಕರ ಹೋಗುತ್ತಾನೆ.)

ಶೀನೂ ಧ್ವನಿ :– ಏನು ಮಾಡಲಿ ಉಷಾ? ನಿನ್ನನ್ನು ಬಿಟ್ಟು ಒಂದು ಕ್ಷಣ ಕೂಡ ಬಾಳಲಾರೆ. ಕ್ಷಣಕ್ಷಣವೂ ನಿನ್ನ ಈ ಮೋಹಭರಿತ ಮುಖವನ್ನು ನೋಡುತ್ತಿರಬೇಕಲು.. ಸ್ಪರ್ಶಿಸುತ್ತಿರಬೇಕು! ಬಾರಿಬಾರಿಗೂ ಈ ಕುರುಳುಗಳನ್ನು ನೇವರಿಸುತ್ತಿರಬೇಕು! ದಿನದ ಇಪ್ಪತ್ತುನಾಲ್ಕು ತಾಸುಗಳೆಲ್ಲಾ ನಿನ್ನ ಸೆರಗಿನ ಮರೆಯಲ್ಲಿರಬೇಕು – ನಿನ್ನ ಧ್ವನಿ ಕೇಳುತ್ತಿರಬೇಕು – ನಿನ್ನ ಓರೆ ನೋಟಕ್ಕೆ ಪಕ್ಕಾಗಬೇಕು… ಓಹ್‌ ನಿನ್ನ ತೋಳಿನಲ್ಲಿ ತೃಪ್ತಿ ಎಂಬುದು ಭ್ರಾಂತಿ ಉಷಾ, ತೃಪ್ತಿ ಎಂಬುದು ಭ್ರಾಂತಿ!…..

…ಉ…ಷಾ! ನಿನ್ನನ್ನು ಬಿಟ್ಟು ನಾನು ಖಂಡಿತಬಾಳಲಾರೆ! ಎಲ್ಲಿಯಾದರೂ ದೂರ ಹೋಗೋಣ. ಈ ಜನ – ಈ ಸಮಾಜ ಎಲ್ಲವನ್ನೂ ಬಿಟ್ಟು ದೂರ – ಅತೀದೂರ ಹೋಗೋಣ. ಇಂದು ರಾತ್ರಿ ಟಿಕೆಟ್ಟುಲಕೊಂಡು ಇಟ್ಟಿರುತ್ತೇನೆ. ಅವಶ್ಯವಾಗಿ ಬರಬೇಕಲು. ಬರುತ್ತೀಯಾ? ನಮ್ಮಿಬ್ಬರದು ನಿಜವಾದ ಪ್ರೇಮವೇ ಆಗಿದ್ದರೆ ಖಂಡಿತ ಬರುತ್ತಿ. ಖಂಡಿತ ಬರಬೇಕು. ಹಾಂ……ಹೋಗುವಾಗೊಂದು ಟಾಂಗಾ ಹೇಳಿ ಹೋಗು… ಸಿಕ್ಕಷ್ಟು ದುಡ್ಡು, ಆಭರಣ ತರಲು ಮಾತ್ರ ಮರೆಯಬೇಡ. ನಾನೂ ತರುತ್ತೇನೆ. ಬರುತ್ತೀಯಾ ಉಷಾ?

ಉಷಾ :– (ಬಿಕ್ಕುತ್ತ) ನನಗೆ ಭಯವಾಗುತ್ತಿದೆ. ನಾವು ಮಾಡುತ್ತಿರುವದು ಅನ್ಯಾಯವೆನಿಸುತ್ತಿದೆ. ನಾನು ಬರಲಾರೆ… ಬರಲಾರೆ –

(ಮನೆಯ ಮುಂದೆ ಟಾಂಗಾ ನಿಂತ ಸಪ್ಪಳ)

ಉಷಾ :– (ಅಳುತ್ತ) ನಾನು ಬರಲಾರೆ… ಬರಲಾರೆ…

ಟಾಂಗಾವಾಲಾ :– (ಪ್ರವೇಶಿಸಿ) ಮೇಮ್‌ಸಾಬ್‌ ಟಾಂಗಾ ತಯಾರ ಹೈ.

ಶೀನೂ ಧ್ವನಿ :– ನಿನ್ನ ತೋಳಿನಲ್ಲಿ ತೃಪ್ತಿ ಎಂಬುದು ಭ್ರಾಂತಿ ಉಷಾ – ತೃಪ್ತಿ ಎಂಬುದು ಭ್ರಾಂತಿ!

ಉಷಾ :– ಹೊರಗೆ ಯಾರೂ ಇಲ್ಲವೇ?

ಟಾಂಗಾವಾಲಾ :– ನಹೀಂ
ಉಷಾ :– ಈ ಬ್ಯಾಗು ತೆಗೆದುಕೊ…
(ಬಿಕ್ಕು…ತೇಗು…ಬರಬರುತ್ತ ಅಸ್ಪಷ್ಟವಾಗುತ್ತಲೂ ಟಾಮಗಾ ಹೊರಟ ಸಪ್ಪಳ…)